ದೇವರು ಮಗು

ಹಗಲಿನ
ನೋವುಗಳ ಇರುಳು ನುಂಗು
ವಂತಿದ್ದರೆ
ಹೊಟ್ಟೆಯ ಹಸಿವನು
ಹುಣ್ಣಿಮೆ ಇಂಗಿಸುವಂತಿದ್ದರೆ
ಮನೆ ಮನೆಗಳಲ್ಲಿ ದೇವರ ಪಟವಾದರೂ
ಯಾಕಿರಬೇಕಿತ್ತು?
ಗುಂಡಿ ಗುಂಡಾರಗಳ ಮೇಲೆ ಧರ್ಮದ ಬಾವುಟವಾದರೂ
ಯಾಕಿರಬೇಕಿತ್ತು?

ನಿಮ್ಮ ಧರ್ಮದ ಬಾವುಟವ
ಬೆತ್ತಲೆ ಮೈಗೆ ಸುತ್ತಿ ನಿನ್ನ ದರುಶನಕೆ
ಬೆಟ್ಟ ಏರುತ್ತಿರುವ ಮಕ್ಕಳು
ಪಾಪದ ಕೊಳಗಳಲಿ ಮಿಂದು
ರಕ್ತದ ಮಡುವುಗಳಲಿ ಮುಳುಗಿ
ಮಡಿ ಮೈಯಿಂದ ನಿನ್ನ ಪಾದ ಮುಟ್ಟಿ
ಉಧೋ ಎನ್ನುವಾಗ
ನರಳಿದ ಬೆಟ್ಟಗಳು ದಿಕ್ಕು ತಪ್ಪಿದ ನದಿಗಳು ಇವರ ಬಳಿಯೇ
ಮರಳಿ ಸಾರಿ ಕೇಳುತಿವೆ ಈಗ

ಅಲ್ಲೆಲ್ಲೊ ಸರ ಹದ್ದಿನಾಚೆ
ಬರೇ ರಣ -ಹದ್ದುಗಳ ಸದ್ದಂತೆ
ಕಣ್ಣು ತೆರೆಯುವ ಮನ್ನವೇ
ಕಣ್ಣು ಕಳೆದುಕೊಂಡ ಕಂದಮ್ಮಗಳು
ಬಂದೂಕಿನ ಸದ್ದಿಗೇ ಕಿವುಡಾದ ಕೂಸುಗಳ
ಎತ್ತಿ ಮುದ್ದಾಡಲು ಕೈ ಎತ್ತೋಣವೆಂದರೆ
ಎತ್ತಲು ಕೈಗಳೇ ಇಲ್ಲದ ಕಾಯಗಳು
ಎತ್ತ ನೋಡಿದರತ್ತ ಕತ್ತಲು ಕಣಿವೆ
ನೋವ ನುಂಗುವ ಸೂರ್ಯ
ಹಸಿವು ಇಂಗಿಸುವ ಚಂದ್ರ
ನ ಚಿತ್ರ
ಪಾಳು ಬಿದ್ದ ಶಾಲೆಯ ಕಪ್ಪು ಹಲಗೆಯ ಮೇಲೆ

ಶಾಲೆ ಶುರುವಾಯಿತು ಮತ್ತೆ
ಇಲ್ಲಿ
ಉರಿವ ಭೂಪಟಗಳು ವೃಥಾ
ಬೆನ್ನ ಮೇಲೆ ಯಾಕಿರಬೇಕೆಂದು ನಕಾಶೆ ಮಾರುವ ಬಾಲಕನೊಬ್ಬ
ಉರಿವ ದೇಶದ ಬಾವುಟಗಳ‌
ಸುರಿವ ಮಳೆಯ ನೀರಿಗೆ ಕಿತ್ತೆಸೆದು

ಶಾಲೆಯ ಪ್ರಾರ್ಥನೆ ತಪ್ಪೀತೆಂಬ
ಬೆತ್ತಲು ಮೈಯ್ಯಲ್ಲೇ ಓಡುತ್ತಿದ್ದಾನೆ ಒಂದೇ ಸಮ