ಒಂದು ಪ್ರವಾಸ ಕಥನ ಹೇಗಿರಬೇಕು ಅನ್ನೋದಕ್ಕೆ ಬೆಂಚ್‌ಮಾರ್ಕ್ ಆಗಿ ನಿಲ್ಲುತ್ತದೆ ಈ ಪುಸ್ತಕ. ಆದರೆ ಇದನ್ನು ಪ್ರವಾಸ ಕಥನವೆನ್ನಲು ಸಾಧ್ಯವೇ ಅಥವಾ ಬೇರೆ ಏನಾದರೂ ಹೆಸರು ಕೊಡಬೇಕೆ ಎನ್ನುವುದು. ಯಾಕೆಂದರೆ ಮೀನಿನ ಖಾದ್ಯಗಳ ಸವಿಯುವ ನೆಪದಲ್ಲಿ ಭಾರತದ ಪ್ರತಿ ರಾಜ್ಯಗಳ ಕರಾವಳಿ ಪ್ರದೇಶಗಳಿಗೂ ಭೇಟಿಕೊಟ್ಟು, ಆಯಾ ರಾಜ್ಯಗಳಲ್ಲಿ ಮೀನು ಅಲ್ಲಿನ ಸಂಸ್ಕೃತಿಯಲ್ಲಿ ವಹಿಸಿದ ಪಾತ್ರದ ಬಗ್ಗೆ ಲೇಖಕರು ಬಹಳ ಆಳವಾಗಿ ವಿಶ್ಲೇಷಣೆ ಮಾಡುತ್ತಾ ಸಾಗುತ್ತಾರೆ. ಏನೇ ಇರಲಿ ತಮ್ಮ ಅಭಿಪ್ರಾಯವನ್ನು ಹೇಳಬೇಕಾದರೆ ಎಲ್ಲೂ ಪೂರ್ವಗ್ರಹಕ್ಕೆ ಒಳಗಾಗದೇ ಹೇಳುವ ರೀತಿ ಬಹಳ ಇಷ್ಟವಾಯಿತು.
‘ಓದುವ ಸುಖ’ ಅಂಕಣದಲ್ಲಿ ಫಾಲೋಯಿಂಗ್ ಫಿಶ್ ಪುಸ್ತಕದ ಕುರಿತು ಬರೆದಿದ್ದಾರೆ ಗಿರಿಧರ್ ಗುಂಜಗೋಡು
ಸಸ್ಯಾಹಾರ ಆಹಾರ ಪದ್ಧತಿ ಅನುಸರಿಸುವ ಕುಟುಂಬದಲ್ಲಿ ಹುಟ್ಟಿ ಬೆಳೆದ ನಾನು ಈಗಲೂ ಸಸ್ಯಾಹಾರಿಯೇ. ನಾನು ಬೆಳೆದ ಸಾಮಾಜಿಕ ಪರಿಸರದಲ್ಲಿ ಮಾಂಸಾಹಾರ ಸೇವಿಸುವವರೇ ಬಹುಸಂಖ್ಯಾತರಾದರೂ ಅವರ ಅಡುಗೆ ಪದ್ಧತಿಗಳ ಬಗ್ಗೆ ಪರಿಚಯವಾಗಿದ್ದು ಕಮ್ಮಿಯೇ. ಆ ಸಮಯದಲ್ಲಿ ನನಗೆ ಮಾಂಸಾಹಾರದ ಬಗ್ಗೆ ಮಡಿವಂತಿಕೆ ಇದ್ದದ್ದು ಕೂಡಾ ನಿಜ. ನಿಧಾನಕ್ಕೆ ತೇಜಸ್ವಿಯವರ ಪುಸ್ತಕಗಳ ಓದಲು ಶುರುಮಾಡಿದ ಮೇಲೆ ಮೀನುಗಳ ಬಗ್ಗೆ ಕುತೂಹಲ ಮೂಡಲು ಶುರುವಾಯಿತು. ಅವರು ತಮ್ಮ ಪ್ರವಾಸ ಕಥನ ‘ಅಲೆಮಾರಿಯ ಅಂಡಮಾನ್’ನಲ್ಲಿ ಮಾಡಿದ ವಿವಿಧ ಪ್ರಕಾರಗಳನ ಮೀನುಗಳ ವರ್ಣನೆ ಓದಿದ ಮೇಲಂತೂ ಆ ಕುತೂಹಲ ಮತ್ತೂ ಜಾಸ್ತಿಯಾಯಿತು.
ನನ್ನ ಸೀಮಿತ ಜ್ಞಾನದಲ್ಲಿ, ಗೆಳೆಯರಿಂದ ಕೇಳಿದ ಮಾತುಗಳಿಂದ ತಿಳಿದಿದ್ದೇನೆಂದರೆ ಇತರ ಮಾಂಸದಡುಗೆಗಳಿಗೆ ಹೋಲಿಸಿದರೆ ಮೀನಿನ ಅಡುಗೆ ಕಷ್ಟಕರ. ಚೆನ್ನೈಲಿರಬೇಕಾದರೆ ನನ್ನ ರೂಂಮೇಟ್ ಬಂಗಾಳದ ಶುಭೋ ಮೀನಿನ ಅಡುಗೆ ಮಾಡುತ್ತಾ ಹೇಳುತ್ತಿದ್ದ “ನಮಗೆ ಬೇಕಾದ ಮೀನನ್ನು ಆಯ್ಕೆ ಮಾಡುವುದರಿಂದ ಹಿಡಿದು ಅದನ್ನು ಕತ್ತರಿಸಿ ಬೇಡದಂಶಗಳ ತೆಗೆದು, ಪ್ರತೀ ಜಾತಿಯ ಮೀನಿಗೂ ಬೇರೆ ಬೇರೆ ತರಹದ ಮಸಾಲೆ ಅರೆದು, ನಾಜೂಕಿನಿಂದ ಮಾಡಿದರೆ ಮಾತ್ರ ನಿಜವಾದ ಮೀನಿನ ರುಚಿ ಬರುವುದು. ಒಟ್ರಾಸಿ ಮಾಡಿದರೆ ಅದು ಆ ಮೀನಿಗೆ ಮಾಡುವ ಅವಮಾನ. ಚಿಕನ್ ಅಂದರೆ ಆಲುಗಡ್ಡೆ ತರ, ನೀನು ಹೇಗೇ ಮಸಾಲೆ ಅರಿ, ಏನು ಬೇಕಾದರೂ ಮಾಡು ಒಂದು ಮಟ್ಟದ ರುಚಿ ಬಂದೇ ಬರುತ್ತದೆ. ಆದರೆ ಮೀನಿನಡುಗೆ ಹಾಗಲ್ಲ” ಎಂದು ಒತ್ತಿ ಒತ್ತಿ ಹೇಳುತ್ತಿದ್ದ. ಅತ್ಯಂತ ರೋಚಕವಾಗಿ ಮೀನಿನ ಅಡುಗೆಯ ಕತೆಗಳನ್ನು, ಅನೇಕ ಜಾತಿಯ ಸಾಗರದ ಮತ್ತು ಸಿಹಿನೀರ ಮೀನುಗಳ ಬಗ್ಗೆಯೂ ವಿವರವಾಗಿ ಹೇಳುತ್ತಿದ್ದ ಕಾರಣ ಮೀನಿನ ಗಾಢ ವಾಸನೆ ಸ್ವಲ್ಪ ಕಸಿವಿಸಿ ತರಿಸಿದರೂ ಬಹಳ ಕುತೂಹಲದಿಂದ ಅಡುಗೆಮನೆಯ ಕಟ್ಟೆಯ ಮೇಲೆ ಕೂತುಕೊಂಡು ಕೇಳುತ್ತಿದ್ದೆ.
ಮೀನಿನ ವಿಷಯಕ್ಕೆ ಬಂದರೆ ಬಂಗಾಳಿಗಳು ಒಂದು ಕೈ ಮೇಲಾದರೂ ಒಟ್ಟಾರೆಯಾಗಿ ನಮ್ಮ ದೇಶದ ಸಂಸ್ಕೃತಿಯಲ್ಲಿ ಮೀನಿನ ಪಾತ್ರ ಅನನ್ಯವಾದುದು. ಅದರಲ್ಲೂ ಕರಾವಳಿ ರಾಜ್ಯಗಳಲ್ಲಿ ಮೀನೆನ್ನುವುದು ಅವರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಮೀನುಗಾರಿಕೆ ಮಾಡುವ ಸಮುದಾಯಗಳ ಜನರು ಕಡಲಿನಲ್ಲಿ ಮೀನುಗಳ ಹಿಡಿಯುವುದರಿಂದ ಹಿಡಿದು, ಅವುಗಳ ವರ್ಗೀಕರಣ, ಸಾಗಾಣಿಕೆ, ಮೀನುಗಾರಿಕೆಗೆ ಬೇಕಾದ ಉಪಕರಣಗಳ ತಯಾರಿಕೆ, ಮೀನಿನ ವಿವಿಧ ಅಡುಗೆ ಮಾಡುವ ಉಪಾಹಾರಗೃಹಗಳು ಹೀಗೆ ಮೀನೆನ್ನುವುದು ದೇಶದ ಕೋಟ್ಯಂತರ ಜನರನ್ನು ಬೆಸೆಯುತ್ತಿದೆ.
ಹೀಗಿರಬೇಕಾದರೆ ಒಂದು ದಿನ ಸಮಂತ ಸುಬ್ರಮಣ್ಯಂ ಅವರು ಬರೆದ, ಸಹನಾ ಹೆಗಡೆಯವರು ಕನ್ನಡಕ್ಕೆ ಅನುವಾದಿಸಿದ Following Fish ಅನ್ನುವ ಅದ್ಭುತ ಪುಸ್ತಕವನ್ನು ತರಿಸಿದೆ. ಸಸ್ಯಾಹಾರಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಸಮಂತ ಸುಬ್ರಮಣ್ಯಂ ಅವರು ಆಮೇಲೆ ಮೀನಿನ ರುಚಿಯನ್ನು ಹತ್ತಿಸಿಕೊಂಡವರು. ಹೆಸರೇ ಹೇಳುವಂತೆ ಇಲ್ಲಿ ಸಮಂತ ಸುಬ್ರಮಣ್ಯಂ ಅವರು ಮೀನನ್ನು ಹಿಂಬಾಲಿಸಿ ದೇಶವಿಡೀ ಅಲೆದಿದ್ದಾರೆ.
ಅತ್ಯಂತ ರೋಚಕವಾಗಿ ಮೀನಿನ ಅಡುಗೆಯ ಕತೆಗಳನ್ನು, ಅನೇಕ ಜಾತಿಯ ಸಾಗರದ ಮತ್ತು ಸಿಹಿನೀರ ಮೀನುಗಳ ಬಗ್ಗೆಯೂ ವಿವರವಾಗಿ ಹೇಳುತ್ತಿದ್ದ ಕಾರಣ ಮೀನಿನ ಘಾಡ ವಾಸನೆ ಸ್ವಲ್ಪ ಕಸಿವಿಸಿ ತರಿಸಿದರೂ ಬಹಳ ಕುತೂಹಲದಿಂದ ಅಡುಗೆಮನೆಯ ಕಟ್ಟೆಯ ಮೇಲೆ ಕೂತುಕೊಂಡು ಕೇಳುತ್ತಿದ್ದೆ.
ಒಂದು ಪ್ರವಾಸ ಕಥನ ಹೇಗಿರಬೇಕು ಅನ್ನೋದಕ್ಕೆ ಬೆಂಚ್‌ಮಾರ್ಕ್ ಆಗಿ ನಿಲ್ಲುತ್ತದೆ ಈ ಪುಸ್ತಕ. ಆದರೆ ಇದನ್ನು ಪ್ರವಾಸ ಕಥನವೆನ್ನಲು ಸಾಧ್ಯವೇ ಅಥವಾ ಬೇರೆ ಏನಾದರೂ ಹೆಸರು ಕೊಡಬೇಕೆ ಅನ್ನುವುದು ನನಗೆ ತಿಳಿದಿಲ್ಲ. ಯಾಕೆಂದರೆ ಮೀನಿನ ಖಾದ್ಯಗಳ ಸವಿಯುವ ನೆಪದಲ್ಲಿ ಭಾರತದ ಪ್ರತಿ ರಾಜ್ಯಗಳ ಕರಾವಳಿ ಪ್ರದೇಶಗಳಿಗೂ ಭೇಟಿಕೊಟ್ಟು, ಆಯಾ ರಾಜ್ಯಗಳಲ್ಲಿ ಮೀನು ಅಲ್ಲಿನ ಸಂಸ್ಕೃತಿಯಲ್ಲಿ ವಹಿಸಿದ ಪಾತ್ರದ ಬಗ್ಗೆ ಲೇಖಕರು ಬಹಳ ಆಳವಾಗಿ ವಿಶ್ಲೇಷಣೆ ಮಾಡುತ್ತಾ ಸಾಗುತ್ತಾರೆ. ಏನೇ ಇರಲಿ ತಮ್ಮ ಅಭಿಪ್ರಾಯವನ್ನು ಹೇಳಬೇಕಾದರೆ ಎಲ್ಲೂ ಪೂರ್ವಗ್ರಹಕ್ಕೆ ಒಳಗಾಗದೇ ಹೇಳುವ ರೀತಿ ಬಹಳ ಇಷ್ಟವಾಯಿತು.
ಇದು ಒಂದೇ ಬಾರಿ ಪ್ರಯಾಣಿಸಿ ಬರೆದಿದ್ದಲ್ಲ. ಬೇರೆ ಬೇರೆ ಸಮಯದಲ್ಲಿ ಕರಾವಳಿಯ ಪ್ರತಿ ರಾಜ್ಯಗಳಲ್ಲೂ ಪ್ರಯಾಣಿಸಿ ಮೀನಿನ ಜೊತೆ ಬೆಸೆದುಕೊಂಡಿರುವ ಜನಜೀವನದ ಬಗ್ಗೆ ಅವರ ಅನುಭವಗಳ ಹೇಳುತ್ತಾ ಹೋಗುತ್ತಾರೆ. ಒಂದೊಂದು ಅಧ್ಯಾಯಗಳೂ ಅದರದೇ ಆದ ವೈಶಿಷ್ಟ್ಯವನ್ನು ಹೊಂದಿವೆ.
ಬಂಗಾಳದಲ್ಲಿ ಅವರು ಹಿಲ್ಸಾ ಮೀನುಗಳನ್ನು ತಿನ್ನಲು ಭೇಟಿಕೊಟ್ಟ ನೆಪದಲ್ಲಿ ಅವರು ಅದು ಹೇಗೆ ಬಂಗಾಳಿ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಅನ್ನುವ ವಿಷಯ, ಅದರ ಅಡುಗೆ ಮಾಡುವ ವಿಧಾನ, ಅದನ್ನು ಸೇವಿಸುವಾಗ ಮುಳ್ಳುಗಳನ್ನು ನಾಲಿಗೆಯಲ್ಲೇ ಬೇರ್ಪಡಿಸಿ ಬಾಯ ಒಂದು ತುದಿಯಲ್ಲಿ ಶೇಖರಿಸಿ ಮಾಂಸ ಮಾತ್ರ ತಿನ್ನುವ ರೀತಿ, ಅತಿ ಮೀನುಗಾರಿಕೆಯಿಂದ ನಾಶವಾಗುತ್ತಿರುವ ಹಿಲ್ಸಾ ಮೀನುಗಳ ಸಂತತಿ, ಪೂರ್ವ ಮತ್ತು ಪಶ್ಚಿಮ ಬಂಗಾಳದ ವಿವಿಧ ತಳಿಗಳಿಗಿರುವ ವ್ಯತ್ಯಾಸ ಇತ್ಯಾದಿಗಳ ಬಗ್ಗೆ ಅತ್ಯಂತ ವಿವರವಾಗಿ ಹೇಳಿದ್ದಾರೆ.
ಅದೇ ಆಂಧ್ರಕ್ಕೆ (ಅವಿಭಜಿತ) ಬಂದಾಗ ಹೈದರಾಬಾದಿನ ಒಬ್ಬರು ನಾಟಿ ವೈದ್ಯರು ಅಸ್ತಮಾ ಕಾಯಿಲೆಗೆ ಕೊಡುವ ಜೀವಂತ ಮೀನಿನ ಔಷಧಿಯ ಬಗ್ಗೆ ಅವರನ್ನು ಮಾತಾಡಿಸಿ ಅದರ ಬಗ್ಗೆ ವಿವರಿಸಿದ್ದಾರೆ. ಹಾಗೆಯೇ ತಮಿಳುನಾಡಿನಲ್ಲಿ ಪ್ರಧಾನವಾಗಿ ಕ್ಯಾಥೋಲಿಕ್ ಪರವಾ ಮತ್ತು ಸ್ವಲ್ಪ ಮಟ್ಟಿಗೆ ಹಿಂದೂ ಪರವಾ ಸಮುದಾಯಗಳ ಬಗ್ಗೆ ಅವರ ಸಂಸ್ಕೃತಿಯ ಬಗ್ಗೆ ಮಹತ್ವಪೂರ್ಣವಾದ ಮಾಹಿತಿಗಳನ್ನು ಕೊಟ್ಟಿದ್ದಾರೆ. ಗುಜರಾತಿನಲ್ಲಿ ಅವರು ದೋಣಿ ಕಟ್ಟುವ ಪುರಾತನವಾದ ವಿಧಾನದ ಬಗ್ಗೆ ಬರೆಯುತ್ತಾರೆ. ಕೇರಳಕ್ಕೆ ಬಂದಾಗ ಅಲ್ಲಿನ ಗಡಂಗು ಅಥವಾ ತೆಂಗಿನ ಮರದಿಂದ ತೆಗೆದ ಮದ್ಯ ಮಾರಾಟ ಮಾಡುವ ಅಂಗಡಿಯಲ್ಲಿ ಸಿಗುವ ರುಚಿ ರುಚಿಯಾದ ಮೀನಿನ ಅಡಿಗೆಯ ಬಗ್ಗೆ ಹೇಳುತ್ತಾರೆ. ಗೋವಾದಲ್ಲಿ ಮೀನುಗಾರಿಕೆ ಹೇಗೆ ಮಾಡುತ್ತಾರೆಂದು ಸ್ವತಃ ಅವರೊಟ್ಟಿಗೆ ಪ್ರಯಾಣಿಸಿ ತಿಳಿದುಕೊಳ್ಳುತ್ತಾರೆ. ಅಲ್ಲದೇ ಅತಿಯಾದ ಪ್ರವಾಸೋದ್ಯಮ ಮೀನುಗಾರರನ್ನು ಅವರ ವೃತ್ತಿಯಿಂದ ನಿಧಾನಕ್ಕೆ ದೂರ ಮಾಡುತ್ತಿರುವುದರ ಬಗ್ಗೆ ಕೂಡಾ ತಮ್ಮ ಕಳವಳ ವ್ಯಕ್ತಪಡಿಸುತ್ತಾರೆ. ಮಹಾರಾಷ್ಟ್ರದ ಮುಂಬೈ ಮೂಲನಿವಾಸಿಗಳ ಶೈಲಿಯ ಅಪೂರ್ವವಾದ ಊಟದ ಬಗ್ಗೆ ಬರೆಯುತ್ತಾರೆ, ಕರ್ನಾಟಕದಲ್ಲಿ ಅವರು ಇಲ್ಲಿನ ಶೈಲಿಯ ಬಂಗುಡೆ ಮೀನಿನ ಅಡುಗೆಗಳ ಸವಿಯುತ್ತಾರೆ. ಅಂದರೆ ಭಾರತದ ಒಂಬತ್ತು ಕರಾವಳಿ ರಾಜ್ಯಗಳ ಮೀನಿನ ಕಥೆಯ ಬಗ್ಗೆ ಒಂಭತ್ತು ಅಧ್ಯಾಯಗಳು. ಒಂಭತ್ತೂ ಅಧ್ಯಾಯಗಳು ಅತ್ಯಂತ ವಿಭಿನ್ನವಾದ ಹಿನ್ನೆಲೆಗಳನ್ನು ಹೊಂದಿದ್ದರೂ ಇಡೀ ಪುಸ್ತಕದಲ್ಲಿ ಅವರು ಹಿಂಬಾಲಿಸುವುದು ಮೀನನ್ನು ಮಾತ್ರ. ಅವರು ಲಕ್ಷದ್ವೀಪಕ್ಕೆ ಭೇಟಿಕೊಟ್ಟು ಅಲ್ಲಿನ ಮೀನುಗಾರರ ಬಗ್ಗೆ, ಟ್ಯೂನಾ ಮೀನುಗಳ ಬಗ್ಗೆ, ಮೀನನ್ನು ವಿಶೇಷ ರೀತಿಯಲ್ಲಿ ಒಣಗಿಸುವುದರ ಬಗ್ಗೆ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಭೇಟಿ ಕೊಟ್ಟು ಅಲ್ಲಿನ ಲೋಬ್‌ಸ್ಟರ್‌ಗಳ ಬಗ್ಗೆ ಇನ್ನೆರಡು ಅಧ್ಯಾಯಗಳನ್ನು ಸೇರಿಸಿದರೆ ಬಹುಶಃ ಪುಸ್ತಕ ಪರಿಪೂರ್ಣವಾಗುತ್ತಿತ್ತೇನೋ.
ಆದರೆ ಅವರ ಹೊತ್ತಿಗೆಯ ವ್ಯಾಪ್ತಿ ಇಲ್ಲಿಗೇ ನಿಲ್ಲುವುದಿಲ್ಲ. ಆಧುನಿಕ ಜನಜೀವನ ಹೇಗೆ ಮೀನುಗಾರ ಸಮುದಾಯದ ಮೇಲೂ ಪರಿಣಾಮವನ್ನುಂಟುಮಾಡಿದೆ, ಆಧುನಿಕತೆಯಿಂದ ಮೀನುಗಾರರ ಜೀವನದಲ್ಲಾದ ತಲ್ಲಣಗಳು, ಅತಿ ಮೀನುಗಾರಿಕೆಯಿಂದ ಇಡೀ ಮೀನುಗಳ ಸಮೂಹಕ್ಕೇ ಕಾದಿರುವ ಅಪಾಯ, ಪರಿಸರ ಮಾಲಿನ್ಯದಿಂದ ಮೀನುಗಾರಿಕೆ ಮೇಲಾಗುವ ಪರಿಣಾಮಗಳು ಇತ್ಯಾದಿ ವಿಷಯಗಳ ಬಗ್ಗೆಯೂ ಸೂಕ್ಷ್ಮವಾಗಿ ಬರೆಯುತ್ತಾರೆ.
ಇದು ಸಮಂತ ಸುಬ್ರಮಣ್ಯಂ ಅವರ ಮೊದಲ ಪುಸ್ತಕವಾದರೂ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತದಲ್ಲಿ ಮೀನು ಮತ್ತು ಅದರೊಡನೆ ಜನರ ಅನುಬಂಧದ ಕುರಿತು ತಿಳಿಕೊಳ್ಳಬೇಕಾದರೆ ಓದಲೇ ಬೇಕಾದ ಪುಸ್ತಕಗಳಲ್ಲಿ ಒಂದು. ನೀವು ಮೀನಿನ ಅಭಿಮಾನಿಯಾಗಿದ್ದರೂ ಅಥವಾ ಆಗಿರದಿದ್ದರೂ ಪುಸ್ತಕಪ್ರಿಯರಾಗಿದ್ದಲ್ಲಿ ಓದಲೇಬೇಕಾದ ಪುಸ್ತಕ. ಮೂಲ ಇಂಗ್ಲಿಷಿನಲ್ಲಿರುವ ಈ ಕೃತಿಯನ್ನ ಸಹನಾ ಹೆಗಡೆಯವರು ಬಹಳ ಚಂದಕ್ಕೆ ಕನ್ನಡೀಕರಿಸಿದ್ದಾರೆ.
ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗುಂಜಗೋಡು. ಸದ್ಯ ಮೈಸೂರಿನಲ್ಲಿ ವಾಸ. ಓದು, ತಿರುಗಾಟ, ಚದುರಂಗ ಇತ್ಯಾದಿ ಇಷ್ಟದ ಆಸಕ್ತಿಗಳು. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.