ಕನಸಿನಲ್ಲಿ ಬುದ್ಧನ ಬದುಕಿನಲ್ಲಿ ನಡೆದ ಘಟನೆ ತೆರೆದುಕೊಂಡಿತು. ಸಿದ್ಧಾರ್ಥನು ಶಾಕ್ಯರ ಸಂಘದಲ್ಲಿ ಎಂಟು ವರ್ಷಗಳ ಕಾಲ ನಿಷ್ಠಾವಂತ ಸದಸ್ಯನಾಗಿದ್ದನು. ಸಂಘದಲ್ಲಿ ಇದ್ದಷ್ಟು ಕಾಲ ಬದ್ಧತೆಯುಳ್ಳ ಹಾಗೂ ಪ್ರಾಮಾಣಿಕ ಸದಸ್ಯನಾಗಿದ್ದ. ತನ್ನ ವೈಯಕ್ತಿಕ ವಿಷಯಗಳಿಗೆ ತೋರಿಸುತ್ತಿದ್ದಷ್ಟೆ ಆಸಕ್ತಿಯನ್ನು ಅವನು ಸಂಘದ ವಿಷಯಗಳಲ್ಲೂ ತೋರಿಸುತ್ತಿದ್ದ. ಸಂಘದ ಸದಸ್ಯನಾಗಿ ಅವನ ನಡೆವಳಿಕೆಗಳು ಉಳಿದ ಸದಸ್ಯರಿಗೆ ಮಾದರಿಯಾಗಿ, ಸಂಘದ ಎಲ್ಲಾ ಸದಸ್ಯರ ಪ್ರೀತಿ ಮತ್ತು ಗೌರವಕ್ಕೆ ಪಾತ್ರನಾಗಿದ್ದನು. ಅವನು ಸದಸ್ಯತ್ವ ಪಡೆದ ಎಂಟನೆಯ ವರ್ಷದಲ್ಲಿ ಅನಿರೀಕ್ಷಿತವಾಗಿ ನಡೆದ ಘಟನೆಯೊಂದು ಶುದ್ಧೋಧನನ ಕುಟುಂಬದ ಪಾಲಿಗೆ ದುರಂತವಾಗಿ ಪರಿಣಮಿಸಿತು.
ಪ್ರೊ.ಎಚ್.ಟಿ. ಪೋತೆಯವರ “ಮಹಾಬಿಂದು” ಕಾದಂಬರಿಯ ಕೆಲವು ಪುಟಗಳು
ಜಾಗತಿಕ ನೆಲೆಯಲ್ಲಿ ಸುದ್ದಿ ಮಾಡಿದ ಕೊರೊನಾ ಅನೇಕ ಸಾವು-ನೋವುಗಳಿಗೆ ಕಾರಣವಾದ್ದರಿಂದ ಆಳುವವರು, ಸಾರ್ವಜನಿಕರು, ಗಂಟೆ ಜಾಗಟೆ ಬಾರಿಸಿ, ದೀಪ ಬೆಳಗಿಸಿದರೂ ಅದು ತನ್ನ ಹಟದಿಂದ ಹಿಂದೆ ಸರಿದಿರಲಿಲ್ಲ. ಮದ್ದು ಸಿದ್ಧಗೊಂಡ ನಂತರವೇ ಕೊಂಚ ತಗ್ಗಿದಂಗಾಗಿತ್ತು. ಮದ್ದು ಸಿದ್ಧಪಡಿಸುವಲ್ಲಿ ವಿಳಂಬ, ಸಿದ್ಧಪಡಿಸಿದ ಮದ್ದು ಪಡೆಯುವಲ್ಲಿ ಆದ ನಿಧಾನದಿಂದಾಗಿ ಎರಡನೆಯ ಅಲೆ ಏಕಾಏಕಿ ಅಬ್ಬರಿಸಿತು. ‘ಸಾವಿಲ್ಲದ ಮನೆಯ ಸಾಸಿವೆ ಕಾಳು ತರುವ ಘಟನೆ ನೆನಪಿಸಿತಲ್ಲ!’ ಎಂದು ಯೋಚಿಸುತ್ತ ಪ್ರೊಫೆಸರ್ ರಾವ್ ಎಂದಿನಂತೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ತರಗತಿಗೆ ಹಾಜರಾಗಿದ್ದರು. ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ ಇದ್ದುದರಿಂದ ಅರೆಮನಸ್ಸಿನಿಂದ ಪಾಠ ಮಾಡಿ ಎರಡನೆ ಅವಧಿಯ ವ್ಯಾಕ್ಸಿನ್ ಪಡೆಯಲು ಆಸ್ಪತ್ರೆಗೆ ಪ್ರಯಾಣ ಬೆಳೆಸಿದರು. ಚುಚ್ಚುಮದ್ದು ಬೇಗ ಹಾಕಿದ್ದರಿಂದ ಆಸ್ಪತ್ರೆಯಿಂದ ಹೊರಬಂದು ಇನ್ನೇನು ಕಛೇರಿ ಕಡೆಗೆ ಹೊರಡಬೇಕು ಅನ್ನುವಷ್ಟರಲ್ಲಿ ಆತ್ಮೀಯರೊಬ್ಬರು ಎದುರುಗೊಂಡರು. ಅವರ ಮುಖದಲ್ಲಿ ಒಂದಿಷ್ಟೂ ಉಲ್ಲಾಸ ಇರಲಿಲ್ಲ! ವೇದನೆ ಎದ್ದು ಕಾಣುತ್ತಿತ್ತು. “ಏನಾಗಿದೆ, ಹೀಗೇಕೆ ಮುಖ ಬಾಡಿದೆ ಆರೋಗ್ಯ, ಸರಿ ಇಲ್ಲವೆ?” ಎಂದು ರಾವ್ ಗಾಬರಿಯಾಗಿ ಕೇಳಿದರು.
“ಇಲ್ಲ ಸರ್, ನನಗೇನು ಆಗಿಲ್ಲ, ‘ಸರ್ರ್’ ಅವರಿಗೆ ಕೊರೊನಾ ಆಗಿದೆ, ಅದು ತುಂಬ ಸೀರಿಯಸ್ ಅಂದಿದ್ದಾರೆ. ನೀವಾದರೂ ಒಂದಿಷ್ಟು ಆಸ್ಪತ್ರೆಯ ಮೇಲಾಧಿಕಾರಿ ಗಳಿಗೆ ಹೇಳಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು” ಎಂದು ಅಗಂತುಕ ಹೇಳಿದಾಗ ರಾವ್ ಮನಸ್ಸು ಮಮ್ಮಲ ಮರುಗಿತು.
ಏನೂ ಹೇಳದೆ ಮೌನದಿಂದಲೇ ಕಾರು ಹತ್ತಿದರು. ಕಾರಿನಲ್ಲಿ ಪ್ರಯಾಣಿಸುತ್ತಲೇ ಬೇಕುಬೇಕಾದವರಿಗೆಲ್ಲ ಸಂಚಾರಿವಾಣಿ ಮೂಲಕ ಮಾತಾಡಿ ಸಹಾಯ ಮಾಡಲು ಹೇಳುತ್ತಿರುವುದನ್ನು ಚಾಲಕ ಕಿವಿಗೊಟ್ಟು ಕೇಳುತ್ತಿದ್ದ. ‘ಕೊರೊನಾ ಬಂದು ಆಸ್ಪತ್ರೆಯಲ್ಲಿರು ವವರು, ನಮ್ಮ ಸಾಹೇಬ್ರು ಒಂದು ಕಾಲದಲ್ಲಿ ಜೀವಕ್ಕೆ ಜೀವದಂತಿದ್ದರು. ನಡುವಿನವರು ಹಚ್ಚಿದ ಬೆಂಕಿಯಿಂದ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಬಂದು ಕಳೆದ ನಾಲ್ಕಾರು ವರ್ಷಗಳಿಂದ ಇಬ್ಬರೂ ದೂರ, ದೂರ. ಆದರೂ ಇವರಿಗೆ ಅವರ ಬಗ್ಗೆ ಎಷ್ಟು ಕಾಳಜಿ ಇದೆ’ ಎಂದು ಒಳಗೊಳಗೆ ಅಭಿಮಾನಪಟ್ಟುಕೊಂಡ. ಹಾಗೆ ನೋಡಿದರೆ ನಮ್ಮ ಸಾಹೇಬರಿಗೆ ಬೈದಿದ್ದಾರೆ, ವಿರೋಧಿಸಿದ್ದಾರೆ ಆದರೂ ಚಿಕಿತ್ಸೆ ಕೊಡಿಸಲು ಅವರಿಗಾಗಿ ಬೇರೆಯವರತ್ತ ಅಂಗಲಾಚುತ್ತಿದ್ದಾರೆ, ಇದೇ ಇರಬೇಕು ಸ್ನೇಹ, ಮಾನವೀಯತೆ’ ಎಂದು ಅಂದುಕೊಂಡ ಚಾಲಕ ‘ಇದ್ದರೆ ಹೀಗಿರಬೇಕು’ ಎಂದು ಆಲೋಚಿಸುತ್ತ ಗಾಡಿ ಓಡಿಸುತ್ತಿದ್ದ.
ರಾವ್ ಜೊತೆ ಫೋನಿನಲ್ಲಿ ಮಾತನಾಡುತ್ತಿರುವವರು “ಏನ್ರಿ ನಿಮಗೂ ಅವರಿಗೂ ಈ ಮೊದಲಿನಿಂದಲೂ ಆಗೋದಿಲ್ಲವಲ್ಲ, ಆದರೂ ನೀವು…” ಎಂದು ಕೇಳಿದ್ದಕ್ಕೆ,
“ಜಗಳ, ವಿರೋಧ ಶಾಶ್ವತವೇನ್ರಿ? ಅದು ಕೇವಲ ಭಿನ್ನಾಭಿಪ್ರಾಯ, ಇರಲಿ. ಆ ಮೇಲೆ ಮಾತಾಡೋಣ, ಅದು ಈಗ ಬೇಡ. ನಿಮಗೆ ಆಸ್ಪತ್ರೆಯಲ್ಲಿ ಯಾರಾದರೂ ಗೊತ್ತಿದ್ದರೆ ಸ್ವಲ್ಪ ಹೇಳಿ” ಎಂದು ಫೋನ್ ಬಂದ್ ಮಾಡಿ ಮಮ್ಮಲ ಮರುಗಿದರು. ‘ಛೇ! ಹೀಗಾಗಬಾರದಾಗಿತ್ತು, ಬೇಗ ಗುಣಮುಖರಾದರೆ ಒಳ್ಳೆಯದು’ ಎಂದು ಅಂದು ಕೊಳ್ಳುತ್ತ ಕಾರಿನಿಂದಿಳಿದು ಮತ್ತೆ ತರಗತಿಯತ್ತ ನಡೆದರು.
ಪ್ರೊಫೆಸರ್ ರಾವ್ ಅವರ ಚಾಲಕನಿಗೆ ಎದುರುಗೊಂಡ ಇನ್ನೊಬ್ಬ ಚಾಲಕ “ರಾವ್ ಸರ್ ಯಾಕೆ ಬೇಸರಗೊಂಡಿದ್ದಾರೆ? ಯಾಕೊ ಗಡಿಬಿಡಿಯಲ್ಲಿದ್ದಾರೆ, ಅವಸರ ಅವಸರದಿಂದ ಹೋದರಲ್ಲ” ಎಂದು ಕೇಳಿದಾಗ,
“ಇನ್ನೊಬ್ಬ ಪ್ರೊಫೆಸರ್ ಸಾಹೇಬರಿಗೆ ಕೊರೋನಾ ಆಗಿದೆ, ತುಂಬಾ ಸೀರಿಯಸ್ ಅಂತ ಅಲ್ಲಿ ಯಾರೋ ಹೇಳಿದರು, ಅದಕ್ಕೆ ಆವಾಗಿಂದ ನಮ್ಮ ಸಾಹೇಬರು ವಿಚಲಿತರಾಗಿದ್ದಾರೆ”.
“ಅದಕ್ಕಪಾ! ನಾವು ಇವರನ್ನು ಬುದ್ಧನ ಉಪಾಸಕ ಅನ್ನೋದು. ತನಗೆ ಕೆಟ್ಟದು ಬಯಸಿದವರಿಗೂ ಕೈಲಾದಷ್ಟು ಸಹಾಯ ಮಾಡಲು ಮುಂದಾಗುತ್ತಾರೆ. ಈಗ ಯಾರಿಗೆ ಆರಾಮವಿಲ್ಲ ಅನ್ನುವುದು ನನಗೆ ಮೊದಲೆ ಗೊತ್ತು. ಕಳೆದ ಐದಾರು ದಿನಗಳಿಂದ ಮನೆಯಲ್ಲಿಯೇ ಟ್ರೀಟ್‍ಮೆಂಟ್ ಪಡೆಯುತ್ತಿದ್ದಾರೆ. ಎಷ್ಟು ಹೇಳಿದರು ಕೇಳದೆ, ನನಗೇನಾಗುತ್ತದೆ ಎಂದು ಆಸ್ಪತ್ರೆ ಕಡೆಗೆ ಮುಖ ಮಾಡದೆ ಅಲಕ್ಷ ್ಯ ಮಾಡಿದರು. ಈಗ ಹೋಗಿ ಆಸ್ಪತ್ರೆ ಸೇರಿದ್ದಾರೆ. ಅವರು ಇವರಿಗೆ ವಿರೋಧಿಸಿದ್ದು ನೋಡಿದ್ದೇವೆ, ಬೈದದ್ದು ನಾವೇ ಕೇಳಿಸಿಕೊಂಡಿದ್ದೇವೆ” ಎಂದು ಚಾಲಕ ಹೇಳಿದ.
“ಕಾರನ್ಯಾಗ ಬರ್ತಾ ಎಲ್ಲ ಅಧಿಕಾರಿಗಳಿಗೆ ಮಾತಾಡಿ, ನೋಡ್ರಿ ಆಸ್ಪತ್ರೆಗೆ ಭೇಟಿ ಕೊಡ್ರಿ, ಅವರ ಆರೋಗ್ಯ ವಿಚಾರಿಸಿ ಎಂದೆಲ್ಲ ಹೇಳಿದರಪಾ!” ಎಂದು ಇಬ್ಬರು ಚಾಲಕರು ಮಾತಾನಾಡಿಕೊಳ್ಳುತ್ತ ತಮ್ಮ ಕೆಲಸದಲ್ಲಿ ನಿರತರಾದರು.
ಸಂಜೆ ಎಂದಿನಂತೆ ತಡವಾಗಿ ಮನೆ ಕಡೆಗೆ ಹೊರಡಬೇಕು ಅಂದುಕೊಂಡು ಕಾರು ಹತ್ತಿ ಇನ್ನೂ ಮನೆ ಸೇರಿರಲಿಲ್ಲ, ಅವರು ಬದುಕಿ ಉಳಿಯಲಿಲ್ಲವೆಂಬ ಸುದ್ದಿ ಪ್ರೊಫೆಸರ್ ರಾವ್ ಅವರಿಗೆ ತಲುಪಿತು. ಈ ಸುದ್ದಿ ಖರೆನೋ ಸುಳ್ಳೋ? ಈ ಸುದ್ದಿ ಸುಳ್ಳಾಗಿರಲಿ ಎಂದು ತಿಳಿಯಲು ಎಲ್ಲರಿಗೂ ಫೋನಾಯಿಸಿ ಕೇಳಿದರು. ಸುದ್ದಿ ಸುಳ್ಳಾಗಲಿಲ್ಲ, ಅಂತಿಮ ಕ್ರಿಯೆಗೂ ಹೋಗಲು ಕೋವಿಡ್ ನಿಯಮಗಳು ಅನುಮತಿಸಲಿಲ್ಲ. ಅದೇ ನೋವಿನಲ್ಲಿ ರಾವ್ ಮತ್ತವರ ಮನೆಯವರೆಲ್ಲರೂ ಹಳಹಳಿಸಿದರು.
ರಾವ್ ಅವರ ಮನಸ್ಸು ಬೇಸರಗೊಂಡು ಗೊಂದಲದ ಗೂಡಾಗಿತ್ತು. ತಳಮಳ ವಂತೂ ಹೇಳತೀರದಾಗಿತ್ತು. ಟಿವಿ ಆನ್ ಮಾಡಿದರೂ ಮತ್ತದೇ ಸುದ್ದಿ ಮೇಲಿಂದ ಮೇಲೆ ಹಿಂದಿನ ನೆನಪುಗಳ ಸುರುಳಿ ಬಿಚ್ಚುವುದಕ್ಕೆ ಕಾರಣವಾಗಿ ನೋವು ಅನುಭವಿಸುತ್ತಲೆ ಇದ್ದರು. ಮನೆಯವರ ಒತ್ತಾಯಕ್ಕಾಗಿ ಊಟಕ್ಕೆ ಕೂತರೂ ಊಟ ರುಚಿ ಹತ್ತಲಿಲ್ಲ.
ಕೈತೊಳೆದುಕೊಂಡು ಮನಸ್ಸಿಗೆ ಶಾಂತಿ ಕೊಡುವ ಯಾವುದಾದರೂ ಪುಸ್ತಕ ಓದಿದ ರಾಯಿತೆಂದು ಓದುವ ಕೋಣೆ ಸೇರಿದ ರಾವ್ ಅವರ ಕಣ್ಣಿಗೆ ಬ್ರಹ್ಮಯಾನ, ಎದೆಗೆ ಬಿದ್ದ ಅಕ್ಷರ, ಬುದ್ಧಚರಿತೆ ಕೃತಿಗಳ ನಡುವೆ ‘ಬುದ್ಧ ಮತ್ತು ಆತನ ಧಮ್ಮ’ ಕೃತಿ ಕಂಡಿತು. ಹೌದಲ್ಲ ಈ ಕೃತಿ ಓದಿ ಅರ್ಧಕ್ಕೆ ನಿಲ್ಲಿಸಿದ್ದೇನಲ್ಲ ಅಂದುಕೊಂಡು ಯೋಚಿಸುತ್ತಿರಬೇಕಾದರೆ ‘ಇದನ್ನು ಪೂರ್ತಿ ಓದಿ ಬಿಡು’ ಎಂದು ಮನಸ್ಸು ಹೇಳಿತು. ಆಗಲಿ ಎಂದು ‘ಬುದ್ಧ ಮತ್ತು ಆತನ ಧಮ್ಮ’ ತಡರಾತ್ರಿವರೆಗೂ ಓದುತ್ತ ಕುಳಿತಿದ್ದರು. ಇದನ್ನು ನೋಡಿದ ಅವರ ಮಗಳು ಪೂರ್ಣಿಮಾ “ಅಪಾ! ರಾತ್ರಿ ಹನ್ನೆರಡು ಗಂಟೆ, ಮಲಗಬಾರದಾ” ಎಂದು ಎಚ್ಚರಿಸಿದಳು.
“ಆಗಲಿ ಮಗಳೇ!” ಎಂದು ಮತ್ತೆ ಓದಲು ಕುಳಿತರು.
ಮಗಳು ಹೇಳಿ ಹೋದರೂ ಇವರು ಓದುವುದು ನಿಲ್ಲಿಸಿಲ್ಲವಲ್ಲ ಎಂದು ರಾವ್ ಅವರ ಪತ್ನಿ “ಏನ್ರಿ! ಮಗಳು ಹೇಳಿ ಹೋದವಳು ಮಲಗಿ ಎಷ್ಟೊತ್ತಾಯಿತು,
ನಾವೂ ನಿದ್ದೆ ಮಾಡಬೇಕು ನಿಮಗೆ ನಿದ್ದೆ ಬರಲ್ಲ ಅಂದ್ರ ನಮಗೂ ನಿದ್ದೆ ಬರಲ್ಲೇನ್ರಿ!” ಎನ್ನುತ್ತಿದ್ದಂತೆ,
“ಆಯಿತು’’ ಎನ್ನುತ್ತ ನಾಳೆ ಓದಿದರಾಯಿತು ಎಂದು ರಾವ್ ಒಳಗೊಳಗೆ ಅಂದುಕೊಂಡು ಕೈಯಲ್ಲಿದ್ದ ಧಮ್ಮ ಕೃತಿ ಮೇಜಿನ ಮೇಲಿಟ್ಟು ಮಲಗುವ ಕೋಣೆ ಸೇರಿದರು. ನಿದ್ದೆಹತ್ತಲಿಲ್ಲ. ಇದ್ದುದೆಲ್ಲವನ್ನೂ ಬಿಟ್ಟು ಬುದ್ಧ ಕಾಡಿಗೆ ಹೋದದ್ದು, ನದಿ ನೀರಿನ ಸಮಸ್ಯೆ ಹೀಗೆ ಯೋಚಿಸುತ್ತ ಇರಬೇಕಾದರೆ ನಿದ್ದೆ ಹತ್ತಿದ್ದೇ ಗೊತ್ತಾಗಲಿಲ್ಲ.
* * *
ಕನಸಿನಲ್ಲಿ ಬುದ್ಧನ ಬದುಕಿನಲ್ಲಿ ನಡೆದ ಘಟನೆ ತೆರೆದುಕೊಂಡಿತು. ಸಿದ್ಧಾರ್ಥನು ಶಾಕ್ಯರ ಸಂಘದಲ್ಲಿ ಎಂಟು ವರ್ಷಗಳ ಕಾಲ ನಿಷ್ಠಾವಂತ ಸದಸ್ಯನಾಗಿದ್ದನು. ಸಂಘದಲ್ಲಿ ಇದ್ದಷ್ಟು ಕಾಲ ಬದ್ಧತೆಯುಳ್ಳ ಹಾಗೂ ಪ್ರಾಮಾಣಿಕ ಸದಸ್ಯನಾಗಿದ್ದ. ತನ್ನ ವೈಯಕ್ತಿಕ ವಿಷಯಗಳಿಗೆ ತೋರಿಸುತ್ತಿದ್ದಷ್ಟೆ ಆಸಕ್ತಿಯನ್ನು ಅವನು ಸಂಘದ ವಿಷಯಗಳಲ್ಲೂ ತೋರಿಸುತ್ತಿದ್ದ. ಸಂಘದ ಸದಸ್ಯನಾಗಿ ಅವನ ನಡೆವಳಿಕೆಗಳು ಉಳಿದ ಸದಸ್ಯರಿಗೆ ಮಾದರಿಯಾಗಿ, ಸಂಘದ ಎಲ್ಲಾ ಸದಸ್ಯರ ಪ್ರೀತಿ ಮತ್ತು ಗೌರವಕ್ಕೆ ಪಾತ್ರನಾಗಿದ್ದನು. ಅವನು ಸದಸ್ಯತ್ವ ಪಡೆದ ಎಂಟನೆಯ ವರ್ಷದಲ್ಲಿ ಅನಿರೀಕ್ಷಿತವಾಗಿ ನಡೆದ ಘಟನೆಯೊಂದು ಶುದ್ಧೋಧನನ ಕುಟುಂಬದ ಪಾಲಿಗೆ ದುರಂತವಾಗಿ ಪರಿಣಮಿಸಿತು. ಜೊತೆಗೆ ಈ ಘಟನೆಯು ಸಿದ್ಧಾರ್ಥನ ವೈಯಕ್ತಿಕ ಬದುಕಿನಲ್ಲಿ ಹಲವು ಸಂಕಷ್ಟಗಳು ಮತ್ತು ಬಿಕ್ಕಟ್ಟಿಗೆ ಕಾರಣವೂ ಆಯಿತು.
ಶಾಕ್ಯರ ರಾಜ್ಯದ ಪಕ್ಕದಲ್ಲಿ ಕೋಲಿಯರ ರಾಜ್ಯವೂ ಇತ್ತು. ನಡುವೆ ಹರಿಯುತ್ತಿದ್ದ ರೋಹಿಣಿ ನದಿಯು ಈ ಎರಡೂ ರಾಜ್ಯಗಳನ್ನು ಬೇರ್ಪಡಿಸಿತ್ತು. ರೋಹಿಣಿ ನದಿಯ ನೀರನ್ನು ಶಾಕ್ಯರು ಮತ್ತು ಕೋಲಿಯರು ಸಮನಾಗಿ ಹಂಚಿಕೊಂಡು ಬೇಸಾಯಕ್ಕೆ ಬಳಸಿಕೊಳ್ಳುತ್ತಿದ್ದರು. ಪ್ರತೀ ವರ್ಷ ಬೇಸಿಗೆ ಕಾಲದಲ್ಲಿ ಈ ನದಿಯ ನೀರನ್ನು ಯಾರು ಮೊದಲು ಉಪಯೋಗಿಸಬೇಕು, ಎಷ್ಟು ನೀರನ್ನು ಬಳಕೆ ಮಾಡಿಕೊಳ್ಳಬೇಕು ಎಂಬ ವಿಷಯವಾಗಿ ಎರಡೂ ರಾಜ್ಯಗಳ ನಡುವೆ ವಿವಾದ ಉಂಟಾಗುತ್ತಿತ್ತು. ಈ ನೀರಿನ ವಿವಾದದಿಂದಾಗಿ ಆಗಾಗ್ಗೆ ಇಬ್ಬರ ನಡುವೆಯೂ ಸಂಘರ್ಷ ಉಂಟಾಗಿ, ಅದು ಕೆಲವೊಮ್ಮೆ ವಿಕೋಪಕ್ಕೆ ಹೋಗುತ್ತಿತ್ತು. ಸಿದ್ಧಾರ್ಥನಿಗೆ ಇಪ್ಪತ್ತೆಂಟು ವರ್ಷ ತುಂಬಿದಾಗ ನದಿ ನೀರಿನ ಸಂಬಂಧ ಶಾಕ್ಯರ ಸೇವಕರು (ಸದಸ್ಯರು) ಮತ್ತು ಕೋಲಿಯರ ಸೇವಕರ(ಸದಸ್ಯರು) ನಡುವೆ ದೊಡ್ಡ ಘರ್ಷಣೆ ನಡೆಯಿತು. ಇದರಿಂದಾಗಿ ಉಭಯ ಬಣಗಳಲ್ಲಿ ಹಲವರು ಗಾಯಗೊಂಡರು. ರಕ್ತಪಾತವಾಗಿ ಸಾವುನೋವುಗಳು ಸಂಭವಿಸಿ ಅಶಾಂತಿಗೆ ಕಾರಣವಾಯಿತು.
ನದಿ ನೀರಿನ ಹಂಚಿಕೆ ಸಮಸ್ಯೆಯ ಪರಿಹಾರಕ್ಕೆ ಯುದ್ಧವೊಂದೇ ಅಂತಿಮ ಪರಿಹಾರ ಎಂದು ಶಾಕ್ಯರು ಮತ್ತು ಕೋಲಿಯರು ನಿರ್ಧರಿಸಿದರು. ಇದರಿಂದ ವಿಚಲಿತನಾದ ಶಾಕ್ಯರ ಸೇನಾಪತಿಯು ಸಂಘದ ಸರ್ವ ಸದಸ್ಯರ ಸಭೆಯನ್ನು ಕರೆದು ಕೋಲಿಯರ ಮೇಲೆ ಯುದ್ಧ ಮಾಡುವ ಪ್ರಸ್ತಾಪವನ್ನು ಸಭೆಯ ಮುಂದಿಟ್ಟನು. ಸಂಘದ ಸದಸ್ಯರನ್ನು ಕುರಿತು ಮಾತನಾಡಿದ ಸೇನಾಪತಿಯು:
“ನಮ್ಮ ಜನರು ಕೋಲಿಯರಿಂದ ಮೇಲಿಂದ ಮೇಲೆ ಆಕ್ರಮಣಕ್ಕೆ ತುತ್ತಾಗುತ್ತಿದ್ದಾರೆ. ನಾವು ಅವರನ್ನು ಕೂಡಲೇ ಹಿಮ್ಮೆಟ್ಟಿಸಬೇಕಾಗಿದೆ. ಕೋಲಿಯರಿಂದ ಹಲವು ಬಾರಿ ನಮ್ಮ ಮೇಲೆ ಇಂತಹ ದಾಳಿಗಳು ನಡೆದಿವೆ. ನಾವು ಈವರೆಗೆ ಸಂಯಮದಿಂದ ವರ್ತಿಸಿದ್ದೇವೆ. ಆದರೆ, ಇನ್ನು ಮುಂದೆ ಸುಮ್ಮನಿರಲು ಸಾಧ್ಯವಿಲ್ಲ. ಅವರ ಆಕ್ರಮಣವನ್ನು ನಿಲ್ಲಿಸಲು ನಮಗುಳಿದಿರುವ ಏಕೈಕ ಮಾರ್ಗವೆಂದರೆ ಕೋಲಿಯರೊಂದಿಗೆ ಯುದ್ಧ ಮಾಡುವುದು. ಆದ್ದರಿಂದ ಕೋಲಿಯರ ಮೇಲೆ ಯುದ್ಧವನ್ನು ಘೋಷಿಸಬೇಕೆಂದು ಸಂಘಕ್ಕೆ ಸೂಚಿಸುತ್ತೇನೆ. ಇದನ್ನು ವಿರೋಧಿಸುವವರು ಯಾರಾದರೂ ಇದ್ದರೆ ಮಾತನಾಡ ಬಹುದು” ಎಂದು ನುಡಿದನು.
ಸಿದ್ಧಾರ್ಥ ಗೌತಮನು ತನ್ನ ಆಸನದಿಂದ ಎದ್ದು ನಿಂತು ಮಾತನಾಡಲು ಆರಂಭಿಸಿದನು. “ನಾನು ಈ ಪ್ರಸ್ತಾಪವನ್ನು ವಿರೋಧಿಸುತ್ತೇನೆ. ಯುದ್ಧವು ಯಾವ ಸಮಸ್ಯೆಯನ್ನೂ ಪರಿಹರಿಸುವುದಿಲ್ಲ. ಯುದ್ಧ ಮಾಡುವುದರಿಂದ ನಮ್ಮ ಉದ್ದೇಶವು ಈಡೇರುವುದಿಲ್ಲ. ಜೊತೆಗೆ ಅದು ಮತ್ತೊಂದು ಯುದ್ಧಕ್ಕೆ ಬೀಜವನ್ನು ಬಿತ್ತುತ್ತದೆ. ಹತ್ಯೆಗೈದವನನ್ನು ಸಂಹಾರ ಮಾಡಲು ಮತ್ತೊಬ್ಬನು ಹುಟ್ಟಿಕೊಳ್ಳುತ್ತಾನೆ. ಆಕ್ರಮಣಕಾರನನ್ನು ಆಕ್ರಮಿಸಲು ಮತ್ತೊಬ್ಬನು ಬರುವುದು ಖಚಿತ. ದರೋಡೆಕೋರನನ್ನು ಲೂಟಿ ಮಾಡಲು ಮತ್ತೊಬ್ಬನು ಸದಾ ಸಿದ್ಧನಿರುತ್ತಾನೆ”. ಸಿದ್ಧಾರ್ಥ ಗೌತಮನು ತನ್ನ ಮಾತುಗಳನ್ನು ಮುಂದುವರಿಸುತ್ತಾ, “ಸಂಘವು ಕೋಲಿಯರ ಮೇಲೆ ಯುದ್ಧ ಮಾಡಲು ಅವಸರ ಪಡಬಾರದು ಎಂಬುದು ನನ್ನ ಭಾವನೆ. ಕೂಲಂಕಷವಾದ ತನಿಖೆಯಿಂದ ಇದರಲ್ಲಿ ತಪ್ಪು ಯಾರದು ಎಂಬುದನ್ನು ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳಬೇಕು. ನಮ್ಮವರೂ ಆಕ್ರಮಣಶೀಲ ಪ್ರವೃತ್ತಿಯವರೆಂದು ಕೇಳಿ ತಿಳಿದಿದ್ದೇನೆ. ಈ ಮಾತು ನಿಜವಾಗಿದ್ದಲ್ಲಿ, ನಾವು ಆರೋಪಗಳಿಂದ ಮುಕ್ತರಾಗುವುದಿಲ್ಲ” ಎಂದು ತಿಳಿಸಿದನು.
“ಹೌದು, ನಮ್ಮ ಜನರೂ ಆಕ್ರಮಣಶೀಲ ಪ್ರವೃತ್ತಿಯವರೇ. ಆದರೆ ನದಿಯ ನೀರನ್ನು ಮೊದಲು ಬಳಸಬೇಕಾದವರು ನಾವು ಎಂಬುದನ್ನು ಮರೆಯಬಾರದು” ಎಂದನು ಸೇನಾಪತಿ.
ಇದಕ್ಕೆ ಪ್ರತಿಯಾಗಿ ಸಿದ್ಧಾರ್ಥ ಗೌತಮನು “ಇದರಿಂದ ನಾವು ಸಂಪೂರ್ಣವಾಗಿ ನಿರ್ದೋಷಿಗಳಲ್ಲ ಎಂಬುದು ತಿಳಿಯುತ್ತದೆ. ಅದಕ್ಕಾಗಿ ನನ್ನ ಸಲಹೆ ಏನೆಂದರೆ, ನಾವು ನಮ್ಮ ಪರವಾಗಿ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡೋಣ, ಕೋಲಿಯರು ಸಹ ಇಬ್ಬರನ್ನು ಆಯ್ಕೆ ಮಾಡಲಿ. ಈ ನಾಲ್ವರು ಸೇರಿ ಐದನೆಯ ವ್ಯಕ್ತಿಯೊಬ್ಬನನ್ನು ಆಯ್ಕೆ ಮಾಡಿಕೊಳ್ಳಲಿ. ಆನಂತರ ಈ ಐದು ಮಂದಿ ಒಟ್ಟಾಗಿ ಕುಳಿತು ಸಮಸ್ಯೆಗೆ ಪರಿಹಾರ ಸೂಚಿಸಲಿ” ಎಂದನು.
ಸಿದ್ಧಾರ್ಥ ಗೌತಮನ ಈ ತಿದ್ದುಪಡಿಯ ಸೂಚನೆಗೆ ಸಭೆಯಲ್ಲಿ ಅನುಮೋದನೆ ದೊರೆಯಿತು. ಆದರೆ ಸೇನಾಪತಿಯು ಸಿದ್ಧಾರ್ಥನ ಸಲಹೆಯನ್ನು ವಿರೋಧಿಸುತ್ತಾ, “ಕೋಲಿಯರನ್ನು ಸರಿಯಾದ ರೀತಿಯಲ್ಲಿ ಶಿಕ್ಷಿಸದ ಹೊರತು ಅವರ ಕಿರುಕುಳ ನಿಲ್ಲುವುದಿಲ್ಲ” ಎಂದು ಖಾರವಾಗಿ ನುಡಿದನು.
ಸಭೆಯಲ್ಲಿ ಮೂಲನಿರ್ಣಯ ಮತ್ತು ತಿದ್ದುಪಡಿ ಎರಡನ್ನೂ ಮತಕ್ಕೆ ಹಾಕ ಲಾಯಿತು. ಮೊದಲಿಗೆ ಸಿದ್ಧಾರ್ಥನು ಸೂಚಿಸಿದ್ದ ತಿದ್ದುಪಡಿಯನ್ನು ಮತಕ್ಕೆ ಹಾಕಲಾಯಿತು. ಅದು ಬಹುಮತದಿಂದ ತಿರಸ್ಕೃತವಾಯಿತೆಂದು ಪ್ರಕಟಿಸಲಾಯಿತು. ಸೇನಾಪತಿಯು ತಾನು ಮಂಡಿಸಿದ್ದ ಮೂಲನಿರ್ಣಯವನ್ನು ಮತಕ್ಕೆ ಹಾಕಿದನು. ಸಿದ್ಧಾರ್ಥ ಗೌತಮನು ಅದನ್ನು ವಿರೋಧಿಸುವ ಸಲುವಾಗಿ ಎದ್ದು ನಿಂತು;
“ಈ ಮೂಲ ನಿರ್ಣಯವನ್ನು ಒಪ್ಪಬಾರದೆಂದು ನಾನು ಸಂಘದ ಸದಸ್ಯರನ್ನು ಪ್ರಾರ್ಥಿಸುತ್ತೇನೆ. ಶಾಕ್ಯರು ಮತ್ತು ಕೋಲಿಯರು ಪರಸ್ಪರ ಹತ್ತಿರದ ಬಂಧುಗಳು. ಅವರು ಪರಸ್ಪರ ಒಬ್ಬರನ್ನೊಬ್ಬರು ನಾಶಪಡಿಸಿಕೊಳ್ಳುವುದು ಅವಿವೇಕದ ಕ್ರಮವಾಗುತ್ತದೆ” ಎಂದು ನುಡಿದನು.
ಸಿದ್ಧಾರ್ಥನ ಈ ಮನವಿಯನ್ನು ಸೇನಾಪತಿಯು ಮತ್ತೆ ವಿರೋಧಿಸಿದನು.
“ಕ್ಷತ್ರಿಯರಾದವರು ಯುದ್ಧದಲ್ಲಿ ಬಂಧುಗಳು ಮತ್ತು ಪರಕೀಯರು ಎಂದು ಭೇದ ಮಾಡಬಾರದು. ತಮ್ಮ ರಾಜ್ಯದ ಹಿತಕ್ಕಾಗಿ ತಮ್ಮ ಸಹೋದರರೊಂದಿಗೆ ಹೋರಾಡಬೇಕು” ಎಂದು ಕರೆ ನೀಡುತ್ತ “ಬ್ರಾಹ್ಮಣರು ಯಜ್ಞಯಾಗಾದಿಗಳನ್ನು ಮಾಡುವುದು ಅವರ ಕರ್ತವ್ಯ. ಹೋರಾಡುವುದು ಕ್ಷತ್ರಿಯರ ಕರ್ತವ್ಯ. ವ್ಯಾಪಾರ ಮಾಡುವುದು ವೈಶ್ಯರ ಕರ್ತವ್ಯ ಮತ್ತು ಸೇವೆಯನ್ನು ಮಾಡುವುದು ಶೂದ್ರರ ಕರ್ತವ್ಯ. ಪ್ರತಿಯೊಂದು ವರ್ಗವೂ ತನ್ನ ಸ್ಥಾನಕ್ಕೆ ಅನುಗುಣವಾಗಿ ಕರ್ತವ್ಯಗಳಲ್ಲಿ ತೊಡಗಿಕೊಳ್ಳ ಬೇಕು. ಇದು ಧರ್ಮಶಾಸ್ತ್ರಗಳು ವಿಧಿಸಿರುವ ನಿಯಮ” ಎಂದು ಸಭೆಗೆ ತಿಳಿಸಿದನು.
ಸಿದ್ಧಾರ್ಥನು ಇದಕ್ಕೆ ಉತ್ತರಿಸುತ್ತ “ನಾನು ಗ್ರಹಿಸಿರುವಂತೆ ಧರ್ಮವು ದ್ವೇಷವನ್ನು ದ್ವೇಷದಿಂದ ಪರಿಹರಿಸಬಹುದು ಎಂದು ಹೇಳುವುದಿಲ್ಲ. ಪ್ರೀತಿ ಮತ್ತು ಮೈತ್ರಿಯಿಂದ ಮಾತ್ರ ವೈರತ್ವವನ್ನು ಗೆಲ್ಲಬಹುದು” ಎಂದು ಹೇಳಿದನು.
ಕೋಪಗೊಂಡ ಸೇನಾಪತಿಯು ತನ್ನ ತಾಳ್ಮೆಯನ್ನು ಕಳೆದುಕೊಂಡು “ಈ ರೀತಿ ತಾತ್ವಿಕ ಚಿಂತನೆಯಲ್ಲಿ ತೊಡಗುವುದು ಅನಾವಶ್ಯಕ. ಮುಖ್ಯ ಸಂಗತಿಯೆಂದರೆ, ಸಿದ್ಧಾರ್ಥನು ನನ್ನ ನಿಲುವಳಿಯನ್ನು ವಿರೋಧಿಸುತ್ತಿದ್ದಾನೆ. ಈ ವಿಚಾರದಲ್ಲಿ ಸಂಘದ ಸದಸ್ಯರ ಅಭಿಪ್ರಾಯವನ್ನು ಮತ ಚಲಾವಣೆಯಿಂದ ನಿರ್ಣಯಿಸೋಣ” ಎಂದನು. ಅದರಂತೆ ಸೇನಾಪತಿಯು ತನ್ನ ನಿಲುವಳಿಯನ್ನು ಮತಕ್ಕೆ ಹಾಕಿದನು. ಶಾಕ್ಯರ ಸಭೆಯಲ್ಲಿ ಆ ನಿಲುವಳಿಯು ಬಹುಮತದಿಂದ ಅಂಗೀಕಾರವಾಯಿತು. ಸಿದ್ಧಾರ್ಥನ ವಾದಕ್ಕೆ ಸೋಲುಂಟಾಯಿತು.
* * *
ಮರುದಿನ ಸೇನಾಪತಿಯು ಯುದ್ಧಕ್ಕೆ ತಾನು ರೂಪಿಸಿರುವ ಯೋಜನೆಯನ್ನು ವಿವರಿಸುವ ಉದ್ದೇಶದಿಂದ ಶಾಕ್ಯರ ಸಂಘದ ಮತ್ತೊಂದು ಸಭೆಯನ್ನು ಕರೆದನು. ಸಂಘದ ಸಭೆಯು ಆರಂಭವಾದಾಗ, ಕೋಲಿಯರ ಮೇಲೆ ನಾವು ಯುದ್ಧ ಮಾಡಲು ಶಾಕ್ಯರಲ್ಲಿರುವ ಇಪ್ಪತ್ತರಿಂದ ಐವತ್ತರ ನಡುವಿನ ವಯಸ್ಸಿನ ಪುರುಷರೆಲ್ಲರೂ ಶಸ್ತ್ರಸನ್ನದ್ಧ ರಾಗಬೇಕು ಎಂದು ಘೋಷಿಸಲು ತನಗೆ ಅನುಮತಿ ನೀಡಬೇಕೆಂದು ಅವನು ನಿಲುವಳಿ ಯನ್ನು ಸಭೆಯಲ್ಲಿ ಮಂಡಿಸಿದನು. ಆ ಸಭೆಯಲ್ಲಿ ಕೋಲಿಯರ ವಿರುದ್ಧ ಯುದ್ಧ ಮಾಡಬೇಕೆಂಬ ನಿಲುವಳಿಯ ಪರವಾಗಿದ್ದವರು ಮತ್ತು ಅದರ ವಿರುದ್ಧವಾಗಿದ್ದ ಎಲ್ಲಾ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಸೇನಾಪತಿಯು ನಿಲುವಳಿಯ ಪರವಾಗಿ ಈ ಹಿಂದೆ ಮತ ಚಲಾಯಿಸಿದ್ದವರಿಗೆ ಈ ಸೂಚನೆಯನ್ನು ಅಂಗೀಕರಿಸಲು ಯಾವುದೇ ತೊಂದರೆಯಾಗಲಿಲ್ಲ. ಏಕೆಂದರೆ, ತಮ್ಮ ಹಿಂದಿನ ನಿಲುವಳಿಗೆ ಅದು ಪೂರಕವಾಗಿತ್ತು. ಆದರೆ, ಆ ನಿಲುವಳಿಯನ್ನು ವಿರೋಧಿಸಿ ಸಿದ್ಧಾರ್ಥನ ತಿದ್ದುಪಡಿಗೆ ಬೆಂಬಲ ಸೂಚಿಸಿದ್ದ ಅಲ್ಪಮತದ ಸದಸ್ಯರಿಗೆ ಈ ಹೊಸ ನಿರ್ಣಯವನ್ನು ಒಪ್ಪಬೇಕೆ? ಬೇಡವೇ ಎಂಬ ಸಂದಿಗ್ಧತೆಯು ತಲೆದೋರಿತು. ಅಲ್ಪಸಂಖ್ಯಾತ ಸದಸ್ಯರು ಬಹುಸಂಖ್ಯಾತರ ನಿರ್ಣಯಕ್ಕೆ ಮಣಿಯಬಾರದೆಂದು ನಿರ್ಣಯಿಸಿದ್ದರು. ಈ ಕಾರಣಕ್ಕಾಗಿ ಅವರು ಸಭೆಯಲ್ಲಿ ಹಾಜರಿದ್ದರು. ಆದರೆ, ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ನೇರವಾಗಿ ಹೇಳುವ ಧೈರ್ಯ ಯಾರಿಗೂ ಇರಲಿಲ್ಲ. ಬಹುಮತದ ನಿರ್ಣಯವನ್ನು ವಿರೋಧಿಸುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಅವರಿಗೆ ಅರಿವಿತ್ತು.
ತನ್ನ ಬೆಂಬಲಿಗರೆಲ್ಲರೂ ಮೌನವಾಗಿ ಕುಳಿತಿರುವುದನ್ನು ನೋಡಿದ ಸಿದ್ಧಾರ್ಥನು ಎದ್ದುನಿಂತು ಸಂಘವನ್ನು ಉದ್ದೇಶಿಸಿ. “ಸ್ನೇಹಿತರೇ! ನಿಮಗೆ ಇಷ್ಟವಾದುದನ್ನು ನೀವು ಮಾಡಬಹುದು. ಯುದ್ಧ ಕುರಿತ ನಿರ್ಣಯದ ಬಗ್ಗೆ ಬಹುಮತ ನಿಮ್ಮ ಪರವಾಗಿರುವುದು ನಿಜ. ಆದರೆ, ಯುದ್ಧಕ್ಕೆ ಸಿದ್ಧನಾಗಬೇಕೆಂಬ ನಿಮ್ಮ ಸೂಚನೆಯನ್ನು ನಾನು ವಿರೋಧಿಸು ತ್ತಿರುವುದಕ್ಕೆ ನಿಮ್ಮ ಕ್ಷಮೆಯಿರಲಿ. ನಾನು ನಿಮ್ಮ ಸೈನ್ಯವನ್ನು ಸೇರುವುದಿಲ್ಲ, ಯುದ್ಧದಲ್ಲಿ ಭಾಗಿಯಾಗುವುದಿಲ್ಲ” ಎಂದು ತಿಳಿಸಿದನು.
ಸೇನಾಪತಿಯು ಸಿದ್ಧಾರ್ಥ ಗೌತಮನಿಗೆ “ನೀನು ಸಂಘಕ್ಕೆ ಸದಸ್ಯನಾಗಿ ಸೇರಿದಾಗ ಮಾಡಿರುವ ಪ್ರತಿಜ್ಞೆಗಳನ್ನು ಜ್ಞಾಪಿಸಿಕೊ. ನೀನು ಸಂಘದಿಂದ ದೂರವಾದರೆ, ಸಮಾಜದ ಅವಹೇಳನಕ್ಕೆ ಗುರಿಯಾಗುತ್ತೀಯೆ” ಎಂದು ಎಚ್ಚರಿಸಿದನು.
“ಹೌದು, ಸಂಘಕ್ಕಾಗಿ ನಾನು ನನ್ನ ತನು ಮನ ಧನಗಳ ಮೂಲಕ ಶಾಕ್ಯರ ಹಿತರಕ್ಷಣೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೆ. ಆದರೆ, ಯುದ್ಧದಿಂದ ಶಾಕ್ಯರ ಹಿತರಕ್ಷಣೆಯಾಗುವುದೆಂದು ನನಗೆ ಅನ್ನಿಸುತ್ತಿಲ್ಲ. ಶಾಕ್ಯರ ಹಿತರಕ್ಷಣೆಯ ಮುಂದೆ ನನಗಾಗುವ ಅವಮಾನ ಎಂದರೆ ಏನು?” ಎನ್ನುತ್ತಾ “ಸಂಘವನ್ನು ಕೋಲಿಯರ ಜೊತೆಗಿನ ಕಲಹದಿಂದಾಗಿ ಶಾಕ್ಯರು ಕೋಸಲ ದೇಶದ ದೊರೆಗೆ ಹೇಗೆ ಅಧೀನರಾಗಿದ್ದಾರೆ” ಎಂಬುದನ್ನು ನೆನಪಿಸಿದನು. “ಈಗಿನ ಯುದ್ಧವು ಶಾಕ್ಯರ ಸ್ವಾತಂತ್ರ್ಯವನ್ನು ಮತ್ತಷ್ಟು ಮೊಟಕುಗೊಳಿಸಿ ಕೋಸಲ ರಾಜನಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ಒದಗಿಸುತ್ತದೆ ಎಂದು ಊಹಿಸುವುದು ಕಷ್ಟವೇನಲ್ಲ” ಎಂಬ ಮಾತುಗಳ ಮೂಲಕ ಮತ್ತೊಮ್ಮೆ ಎಚ್ಚರಿಸಿದನು.
ಇದರಿಂದ ಆಕ್ರೋಶಗೊಂಡ ಸೇನಾಪತಿಯು ಸಿದ್ಧಾರ್ಥನನ್ನು ಉದ್ದೇಶಿಸಿ “ಈ ನಿನ್ನ ವಾಕ್ ಚಾತುರ್ಯದಿಂದ ನಿನಗೆ ಏನೂ ಪ್ರಯೋಜನವಿಲ್ಲ. ಸಂಘದ ಬಹುಮತದ ನಿರ್ಣಯಕ್ಕೆ ನೀನು ಬದ್ಧನಾಗಬೇಕು. ನಿನಗೆ ಈ ಸಂಗತಿಗಳೆಲ್ಲಾ ಗೊತ್ತಿರುವಂತಿದೆ. ಶಾಕ್ಯರ ಸಂಘವು ಕೋಸಲ ರಾಜನ ಅಪ್ಪಣೆಯಿಲ್ಲದೆ ಯಾವುದೇ ತಪ್ಪಿತಸ್ಥನನ್ನು ಗಲ್ಲಿಗೇರಿಸುವುದಕ್ಕಾಗಲಿ, ಗಡಿಪಾರು ಮಾಡುವುದಕ್ಕಾಗಲಿ ಅಧಿಕಾರ ಪಡೆದಿಲ್ಲವಾದ್ದರಿಂದ ಒಂದು ವೇಳೆ ಅಂತಹ ಯಾವುದೇ ಶಿಕ್ಷೆಯನ್ನು ಈ ಸಂಘವು ನಿನಗೆ ವಿಧಿಸಿದರೆ, ಕೋಸಲ ದೇಶದ ದೊರೆಯು ಅದಕ್ಕೆ ಅನುಮತಿ ನೀಡಲಾರ ಎಂದು ನೀನು ಭಾವಿಸಿರು ವಂತಿದೆ” ಎಂದು ನುಡಿದನಲ್ಲದೆ, “ಆದರೆ ನೆನಪಿರಲಿ, ಈ ಸಂಘವು ನಿನ್ನನ್ನು ಬೇರೆ ಮಾರ್ಗದ ಮೂಲಕವೂ ಶಿಕ್ಷಿಸಬಲ್ಲದು. ಸಂಘವು ನಿನ್ನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರವನ್ನು ಹಾಕಬಹುದು, ನಿಮ್ಮ ಕುಟುಂಬದ ಆಸ್ತಿಯನ್ನೆಲ್ಲಾ ಮುಟ್ಟುಗೋಲು ಹಾಕಿಕೊಳ್ಳಬಹುದು. ಇವುಗಳಿಗೆ ಸಂಘವು ಕೋಸಲ ದೇಶದ ದೊರೆಯ ಒಪ್ಪಿಗೆಯನ್ನು ಪಡೆಯಬೇಕಾಗಿಲ್ಲ” ಎಂದನು.
ಕೋಲಿಯರ ಮೇಲೆ ಯುದ್ಧ ಮಾಡಬೇಕೆಂಬ ಸಂಘದ ನಿರ್ಣಯವನ್ನು ವಿರೋಧಿಸುವುದರಿಂದ ಆಗಬಹುದಾದ ಪರಿಣಾಮಗಳನ್ನು ಸಿದ್ಧಾರ್ಥನು ಮನಗಂಡನು. ಆತನ ಮುಂದೆ ಮೂರು ಪರ್ಯಾಯ ಸಾಧ್ಯತೆಗಳಿದ್ದವು. ಒಂದು, ಸೈನ್ಯವನ್ನು ಸೇರಿ ಯುದ್ಧದಲ್ಲಿ ಭಾಗವಹಿಸುವುದು; ಎರಡನೆಯದು, ಮರಣದಂಡನೆ ಅಥವಾ ಗಡಿಪಾರು ಶಿಕ್ಷೆಯನ್ನು ಮತ್ತು ಮೂರನೆಯದು ತನ್ನ ಕುಟುಂಬದ ಸದಸ್ಯರನ್ನು ಸಾಮಾಜಿಕ ಬಹಿಷ್ಕಾರಕ್ಕೆ ಈಡುಮಾಡಿ ಅವರ ಆಸ್ತಿಯ ಮುಟ್ಟುಗೋಲಿಗೆ ಅವಕಾಶ ಮಾಡಿ ಕೊಡುವುದು. ಮೊದಲನೆಯ ಸಾಧ್ಯತೆಯನ್ನು ಅವನು ದೃಢವಾಗಿ ನಿರಾಕರಿಸಿದನು. ಮೂರನೆಯ ಸಾಧ್ಯತೆಯು ಸಾಧುವಲ್ಲ ಎಂದು ಅವನಿಗೆ ಅನಿಸಿತು. ಈ ಸ್ಥಿತಿಯಲ್ಲಿ ಎರಡನೆಯ ಸಾಧ್ಯತೆಯೇ ಸೂಕ್ತವಾದದ್ದು ಎಂದು ಅವನು ನಿರ್ಧರಿಸಿಕೊಂಡನು. ತನ್ನ ಅಂತಿಮ ನಿರ್ಧಾರವನ್ನು ತಿಳಿಸಿದ ಸಿದ್ಧಾರ್ಥನು ಸಂಘಕ್ಕೆ ಮನವಿ ಮಾಡಿಕೊಳ್ಳುತ್ತಾ,
“ದಯವಿಟ್ಟು ನನ್ನ ಕುಟುಂಬದವರನ್ನು ಶಿಕ್ಷಿಸಬೇಡಿ. ಅವರನ್ನು ಸಾಮಾಜಿಕ ಬಹಿಷ್ಕಾರಕ್ಕೆ ಈಡುಮಾಡಿ ಅವರನ್ನು ಸಂಕಟಕ್ಕೆ ತಳ್ಳಬೇಡಿ. ಅವರ ಜೀವನೋಪಾಯಕ್ಕೆ ಏಕೈಕ ಸಾಧನವಾಗಿರುವ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರನ್ನು ನಿರಾಧಾರಿಗಳಾಗಿ ಮಾಡಬೇಡಿ. ಅವರೆಲ್ಲರೂ ಅಮಾಯಕರು. ತಪ್ಪು ಮಾಡಿರುವವನು ನಾನು. ಆ ತಪ್ಪಿಗೆ ನಾನು ಶಿಕ್ಷೆಯನ್ನು ಅನುಭವಿಸಬೇಕು. ನನ್ನನ್ನು ಗಲ್ಲಿಗೇರಿಸಿ, ಇಲ್ಲವೇ ಗಡಿಪಾರು ಮಾಡಿ. ನಾನು ನನ್ನ ರಕ್ಷಣೆಗಾಗಿ ಕೋಸಲ ದೇಶದ ರಾಜನಿಗೆ ಯಾವುದೇ ಮನವಿಯನ್ನು ಸಲ್ಲಿಸುವುದಿಲ್ಲ ಎಂದು ನಾನು ವಚನ ನೀಡುತ್ತೇನೆ” ಎಂದು ಹೇಳಿದನು.
ಸಂಜೆ ಎಂದಿನಂತೆ ತಡವಾಗಿ ಮನೆ ಕಡೆಗೆ ಹೊರಡಬೇಕು ಅಂದುಕೊಂಡು ಕಾರು ಹತ್ತಿ ಇನ್ನೂ ಮನೆ ಸೇರಿರಲಿಲ್ಲ, ಅವರು ಬದುಕಿ ಉಳಿಯಲಿಲ್ಲವೆಂಬ ಸುದ್ದಿ ಪ್ರೊಫೆಸರ್ ರಾವ್ ಅವರಿಗೆ ತಲುಪಿತು. ಈ ಸುದ್ದಿ ಖರೆನೋ ಸುಳ್ಳೋ? ಈ ಸುದ್ದಿ ಸುಳ್ಳಾಗಿರಲಿ ಎಂದು ತಿಳಿಯಲು ಎಲ್ಲರಿಗೂ ಫೋನಾಯಿಸಿ ಕೇಳಿದರು.
ಈ ಸಂದರ್ಭದಲ್ಲಿ ಸೇನಾಪತಿಯು “ನಿನ್ನ ಈ ಸಲಹೆಯನ್ನು ನಾವು ಒಪ್ಪುವುದು ಕಷ್ಟ. ಏಕೆಂದರೆ, ನೀನು ಸ್ವ-ಇಚ್ಛೆಯಿಂದ ಮರಣದಂಡನೆಗೆ ಒಳಗಾದರೆ ಅಥವಾ ಗಡಿಪಾರು ಶಿಕ್ಷೆಗೆ ಒಳಗಾದ ವಿಚಾರವು ಕೋಸಲ ದೇಶದ ರಾಜನಿಗೆ ತಲುಪುವುದು ಖಚಿತ. ಅನಂತರ ಸಿದ್ಧಾರ್ಥನಿಗೆ ಸಂಘವು ಈ ಶಿಕ್ಷೆಯನ್ನು ವಿಧಿಸಿದೆ ಎಂದು ಭಾವಿಸುವ ರಾಜನು ಸಂಘದ ಮೇಲೆ ಸೂಕ್ತಕ್ರಮ ತೆಗೆದುಕೊಳ್ಳಬಹುದು” ಎಂದನು.
“ಈ ತೀರ್ಮಾನದಿಂದ ನಿಮಗೆ ಕಷ್ಟವಾಗುವುದಾದರೆ ಅದಕ್ಕೆ ನಾನು ಸುಲಭವಾದ ಸಲಹೆಯನ್ನು ಸೂಚಿಸುತ್ತೇನೆ. ನಾನು ಪರಿವ್ರಾಜಕ ವ್ರತವನ್ನು ಸ್ವೀಕರಿಸಿ ಈ ರಾಜ್ಯವನ್ನು ತ್ಯಜಿಸಿ ಹೊರಹೋಗುತ್ತೇನೆ. ಇದು ಒಂದು ರೀತಿಯಲ್ಲಿ ನನ್ನ ಪಾಲಿಗೆ ಗಡಿಪಾರು ಶಿಕ್ಷೆ” ಎಂದು ಸಿದ್ಧಾರ್ಥ ನುಡಿದನು.
ಸೇನಾಪತಿಗೆ ಇದು ಒಳ್ಳೆಯ ಸಲಹೆ ಎನಿಸಿತು. ಆದರೆ, ಸಿದ್ದಾರ್ಥನು ಆ ರೀತಿ ನಡೆದುಕೊಳ್ಳುವ ಬಗ್ಗೆ ಅವನಿಗೆ ಸಂಶಯ ಕಾಡತೊಡಗಿತು. ಆದ್ದರಿಂದ ಅವನು ಸಿದ್ಧಾರ್ಥನನ್ನು; “ನೀನು ನಿನ್ನ ತಂದೆ, ತಾಯಿ ಮತ್ತು ಪತ್ನಿಯ ಅನುಮತಿಯಿಲ್ಲದೆ ಹೇಗೆ ಪರಿವ್ರಾಜಕನಾಗಲು ಸಾಧ್ಯ?” ಎಂದು ಕೇಳಿದನು.
ನನ್ನ ತಂದೆ-ತಾಯಿಗಳ ಅನುಮತಿಯನ್ನು ಪಡೆಯಲು ಎಲ್ಲಾ ವಿಧದಲ್ಲಿ ಪ್ರಯತ್ನಿಸುವುದಾಗಿ ಸೇನಾಪತಿಗೆ ಸಿದ್ಧಾರ್ಥನು ಭರವಸೆಯಿತ್ತನು. “ಅವರ ಒಪ್ಪಿಗೆ ದೊರೆಯಲಿ, ಬಿಡಲಿ; ನಾನು ಈ ತಕ್ಷಣವೇ ರಾಜ್ಯವನ್ನು ತ್ಯಜಿಸಿ ಹೊರಡುತ್ತೇನೆ ಎಂದು ಪ್ರಮಾಣ ಮಾಡಿ ಹೇಳುತ್ತೇನೆ’’ ಎಂದನು.
ಸಿದ್ಧಾರ್ಥನು ಕೊಟ್ಟ ಸಲಹೆಯು ಸೂಕ್ತವಾದ ಪರಿಹಾರ ಎಂಬುದನ್ನು ಮನಗಂಡ ಸಂಘದ ಸದಸ್ಯರು ಅದಕ್ಕೆ ತಮ್ಮ ಸಮ್ಮತಿಯನ್ನು ಸೂಚಿಸಿದರು. ಸಭೆಯ ಅಂದಿನ ಕಾರ್ಯಕಲಾಪಗಳು ಮುಗಿದು ಸದಸ್ಯರು ಎದ್ದು ಹೊರಡುವಾಗ, ಶಾಕ್ಯ ಯುವಕ ನೊಬ್ಬನು ತನ್ನ ಸ್ಥಳದಿಂದ ಮೇಲೆದ್ದು, “ನಾನು ಬಹುಮುಖ್ಯವಾದ ಸಂಗತಿಯೊಂದನ್ನು ಇಲ್ಲಿ ಹೇಳಲಿಚ್ಛಿಸುತ್ತೇನೆ, ದಯವಿಟ್ಟು ಆಲಿಸಿ” ಎಂದನು.
ಅವನಿಗೆ ಮಾತನಾಡಲು ಅನುಮತಿ ದೊರಕಿದ ನಂತರ ಅವನು “ಸಿದ್ಧಾರ್ಥ ಗೌತಮನು ತನ್ನ ವಚನದಂತೆ ಈ ಕೂಡಲೇ ದೇಶವನ್ನು ತೊರೆದು ಹೋಗುತ್ತಾನೆಂಬುದರಲ್ಲಿ ನನಗೆ ಯಾವ ಸಂದೇಹವೂ ಇಲ್ಲ. ಆದರೆ, ಈ ವಿಷಯ ನನಗೆ ಸಂತೋಷ ತರುವ ಸಂಗತಿ ಎಂದು ಅನಿಸುವುದಿಲ್ಲ. ಸದ್ಯದಲ್ಲಿ ಸಿದ್ಧಾರ್ಥನು ನಮ್ಮಿಂದ ಕಣ್ಮರೆಯಾಗುತ್ತಾನೆ. ಸಂಘವು ನಿರ್ಧರಿಸಿರುವ ಹಾಗೆ ನೀವು ಕೋಲಿಯರ ಮೇಲೆ ಕೂಡಲೇ ಯುದ್ಧವನ್ನು ಘೋಷಿಸಬಲ್ಲಿರಾ?” ಎಂದು ಕೇಳಿದನಲ್ಲದೆ, “ಈ ಪ್ರಶ್ನೆಗಳನ್ನು ಕುರಿತು ಸಂಘವು ಮತ್ತಷ್ಟು ವಿವರವಾಗಿ ಯೋಚಿಸುವುದು ಒಳಿತೆಂದು ನನಗೆ ತೋರುತ್ತದೆ. ಸಿದ್ದಾರ್ಥ ಗೌತಮನು ದೇಶವನ್ನು ತೊರೆದ ವಿಚಾರವು ಕೋಸಲ ದೇಶದ ರಾಜನಿಗೆ ತಲುಪುತ್ತದೆ. ಒಂದು ವೇಳೆ ತಕ್ಷಣವೇ ನಾವು ಕೋಲಿಯರ ಮೇಲೆ ಯುದ್ಧ ಮಾಡಿದರೆ, ಸಿದ್ಧಾರ್ಥನು ಕೋಲಿಯರ ವಿರುದ್ಧದ ಯುದ್ಧವನ್ನು ವಿರೋಧಿಸಿ ದೇಶವನ್ನು ತೊರೆದುಹೋಗಿದ್ದಾನೆ ಎಂದು ಕೋಸಲ ದೇಶದ ರಾಜನು ಸುಲಭವಾಗಿ ಗ್ರಹಿಸುತ್ತಾನೆ. ಇದರಿಂದ ನಮಗೆ ಒಳಿತಾಗುವುದಿಲ್ಲ. ಆದ್ದರಿಂದ ಸಿದ್ಧಾರ್ಥನು ರಾಜ್ಯವನ್ನು ತೊರೆದು ಹೋಗಿ ಸ್ವಲ್ಪ ದಿನಗಳು ಕಳೆದ ನಂತರ ನಾವು ಕೋಲಿಯರ ಜೊತೆ ಯುದ್ಧವನ್ನು ಆರಂಭಿಸಿದರೆ, ಕೋಸಲ ರಾಜನು ಈ ಎರಡು ಘಟನೆಗಳ ನಡುವೆ ಯಾವ ಸಂಬಂಧವನ್ನೂ ಕಲ್ಪಿಸಲಾರ” ಎಂದು ಸಲಹೆ ನೀಡಿದನು.
ಇದು ಮಹತ್ತ್ವದ ಸಲಹೆ ಎಂದು ಸಂಘಕ್ಕೆ ಮನದಟ್ಟಾಯಿತು. ಇದು ಮುಖ್ಯವಾದ ಸಲಹೆಯಾದ ಕಾರಣದಿಂದ ಸಂಘವು ಹೆಚ್ಚಿನ ಚರ್ಚೆಯಿಲ್ಲದೆ ಅದನ್ನು ಅಂಗೀಕರಿಸಿತು. ಈ ರೀತಿಯಲ್ಲಿ ಶಾಕ್ಯರ ಸಂಘದ ಅಧಿವೇಶನವು ದುರಂತದಲ್ಲಿ ಅಂತ್ಯಗೊಂಡಿತು. ಯುದ್ಧವನ್ನು ಅಂತರಂಗದಲ್ಲಿ ವಿರೋಧಿಸುತ್ತಿದ್ದರೂ ಅದನ್ನು ಹೇಳುವ ಧೈರ್ಯವಿಲ್ಲದೆ ಇದ್ದ ಸದಸ್ಯರು, ಯಾವುದೇ ರೀತಿಯ ಅನಾಹುತಕ್ಕೆ ಕಾರಣವಾಗದೆ ಅಧಿವೇಶನವು ಕೊನೆಗೊಂಡಿತಲ್ಲ ಎಂದು ನೆಮ್ಮದಿಯ ನಿಟ್ಟುಸಿರುಬಿಟ್ಟರು.
* * *
ಶಾಕ್ಯರ ಸಂಘದ ಸಭೆಯಲ್ಲಿ ನಡೆದ ಕಲಾಪದ ವಿವರಗಳು ಸಿದ್ಧಾರ್ಥ ಗೌತಮನು ಅರಮನೆಯನ್ನು ತಲುಪುವುದಕ್ಕೆ ಮೊದಲೇ ಆತನ ಕುಟುಂಬಕ್ಕೆ ಮುಟ್ಟಿದ್ದವು. ರಾಜಕುಮಾರನು ಅರಮನೆಯನ್ನು ತಲುಪಿದಾಗ ಆತನ ತಂದೆ-ತಾಯಿ ತೀವ್ರ ದುಃಖದಿಂದ ಕಣ್ಣೀರಿಡುತ್ತಿರುವುದನ್ನು ಗಮನಿಸಿದನು. ಶುದ್ಧೋಧನನು ತನ್ನ ಪುತ್ರ ಸಿದ್ಧಾರ್ಥನನ್ನು ಉದ್ದೇಶಿಸಿ, “ನಾವು ಯುದ್ಧದಿಂದಾಗುವ ದುಷ್ಪರಿಣಾಮಗಳನ್ನು ಕುರಿತು ಮಾತನಾಡು ತ್ತಿದ್ದೆವು. ಆದರೆ ನೀನು ಇಷ್ಟು ದೂರ ಹೋಗುತ್ತೀಯ ಎಂದು ನಾವು ಯೋಚಿಸಿರಲಿಲ್ಲ” ಎಂದು ನುಡಿದನು.
ಸಿದ್ಧಾರ್ಥನು ತಂದೆಯೊಂದಿಗೆ ಹೀಗೆಂದನು; “ನಾನೂ ವಿಷಯಗಳು ಈ ರೀತಿಯಲ್ಲಿ ಅನಿರೀಕ್ಷಿತ ತಿರುವು ತೆಗೆದುಕೊಳ್ಳುತ್ತವೆ ಎಂದು ಯೋಚಿಸಿರಲಿಲ್ಲ. ಶಾಂತಿ ಯನ್ನು ಕುರಿತಂತೆ ನಾನು ಮಾಡಿದ ವಾದದಿಂದ ಶಾಕ್ಯರನ್ನು ಒಲಿಸಿಕೊಳ್ಳುತ್ತೇನೆ ಎಂದು ಆಶಿಸಿದ್ದೆ. ನನ್ನ ದುರದೃಷ್ಟವೆಂಬಂತೆ ನಮ್ಮ ಸೇನಾಧಿಕಾರಿಗಳು ನನ್ನ ವಾದವು ಜನರ ಮೇಲೆ ಯಾವುದೇ ಪರಿಣಾಮ ಬೀರದಂತೆ ತಮ್ಮ ಶಕ್ತಿ ಮೀರಿ ಪ್ರಯತ್ನಪಟ್ಟರು. ಆದ್ದರಿಂದ ನನ್ನ ಮಾತುಗಳೂ ಸಂಘದ ಸದಸ್ಯರ ಮೇಲೆ ಯಾವ ಪ್ರಭಾವವೂ ಬೀರಲಿಲ್ಲ. ಆದರೆ, ಅಂದಿನ ಸನ್ನಿವೇಶವು ಮತ್ತಷ್ಟು ಹದಗೆಡದಂತೆ ನಾನು ಎಷ್ಟೊಂದು ಪ್ರಯತ್ನಿಸಿದೆ ಎಂಬುದು ತಮಗೆ ತಿಳಿದಿದೆ ಎಂದು ಭಾವಿಸಿದ್ದೀನಿ. ಸತ್ಯ ಮತ್ತು ನ್ಯಾಯ ಕುರಿತಾದ ನನ್ನ ಪ್ರತಿಪಾದನೆಯನ್ನು ನಾನು ಬಿಟ್ಟುಕೊಡಲಿಲ್ಲ. ಅದರ ಪರಿಣಾಮವಾಗಿ ನನಗೆ ದಕ್ಕಿದ ಶಿಕ್ಷೆಯನ್ನು ನಾನೊಬ್ಬನೇ ಅನುಭವಿಸಬೇಕು ಎಂಬ ನನ್ನ ನಿಲುವನ್ನು ಸಮರ್ಥವಾಗಿ ಎದುರಿಸಿ ಯಶಸ್ವಿಯಾಗಿದ್ದೀನಿ” ಎಂದು ಹೇಳಿದನು.
ಆದರೆ ತನ್ನ ಪುತ್ರ ಸಿದ್ಧಾರ್ಥನ ಮಾತುಗಳಿಂದ ಶುದ್ಧೋಧನನ ಮನಸ್ಸಿಗೆ ತೃಪ್ತಿಯಾಗಲಿಲ್ಲ. “ಇದರಿಂದಾಗಿ ನಮ್ಮ ಮೇಲೆ ಬೀರಬಹುದಾದ ಪರಿಣಾಮವನ್ನು ನೀನು ಯೋಚಿಸಲಿಲ್ಲ” ಎಂದು ತನ್ನ ಅಸಮಾಧಾನ ವ್ಯಕ್ತಪಡಿಸಿದನು.
“ಶಾಕ್ಯರು ನಿಮ್ಮ ಭೂಮಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಂಡಿದ್ದರೆ, ಅದರ ಪರಿಣಾಮ ಏನಾಗುತ್ತಿದ್ದಿತೆಂಬುದನ್ನು ಸ್ವಲ್ಪ ಯೋಚಿಸಿ” ಎಂದು ಹೇಳಿ ಸಿದ್ಧಾರ್ಥ ಹೆತ್ತವರ ಮುಖ ನೋಡಿದ.
“ನೀನೇ ಇಲ್ಲದಿರುವಾಗ ನಮಗೆ ಈ ಭೂಮಿಯಿಂದ ಪ್ರಯೋಜನವಾದರೂ ಏನು? ಇಡೀ ನಮ್ಮ ಕುಟುಂಬ ಶಾಕ್ಯರ ರಾಜ್ಯವನ್ನು ತೊರೆದು ನಿನ್ನೊಂದಿಗೆ ದೇಶತ್ಯಾಗ ಮಾಡಬಾರದೇಕೆ?” ಎಂದು ಮಗನನ್ನು ನೋಡುತ್ತ ಶುದ್ಧೋಧನ ಹೇಳಿದ.
ಶೋಕಿಸುತ್ತಿದ್ದ ಪ್ರಜಾಪತಿ ಗೋತಮಿಯು ಸಹ ಶುದ್ಧೋಧನನ ಮಾತಿಗೆ ಧ್ವನಿಗೂಡಿಸುತ್ತ “ನಾನು ಸಹ ಅವರ ಮಾತನ್ನು ಒಪ್ಪುತ್ತೇನೆ. ನಮ್ಮನ್ನೆಲ್ಲ ತೊರೆದು ನೀನು ಏಕಾಂಗಿಯಾಗಿ ಹೇಗೆ ಹೋಗಬಲ್ಲೆ?” ಎಂದು ಮಗನನ್ನು ಪ್ರಶ್ನಿಸಿದಳು.
ಸಿದ್ಧಾರ್ಥನು ತನ್ನ ತಾಯಿಯನ್ನು ಸಂತೈಸುತ್ತಾ, “ಅಮ್ಮಾ! ನೀನು ಕ್ಷತ್ರಿಯನ ತಾಯಿಯೆಂದು ಹೆಮ್ಮೆಯಿಂದ ಯಾವಾಗಲೂ ಹೇಳಿಕೊಳ್ಳುತ್ತಿರಲಿಲ್ಲವೇ? ಆದ್ದರಿಂದ ನೀನು ಈಗ ಒಬ್ಬ ಧೀರ ತಾಯಿಯಂತೆ ವರ್ತಿಸಬೇಕು. ಈ ರೀತಿ ದುಃಖಿಸುವುದು ನಿನ್ನಂತಹವಳಿಗೆ ಶೋಭೆ ತರುವುದಿಲ್ಲ. ನಾನು ಯುದ್ಧರಂಗಕ್ಕೆ ಹೋಗಿ ಮರಣ ಹೊಂದಿದ್ದರೆ ಏನು ಮಾಡುತ್ತಿದ್ದೆ? ಆಗಲೂ ನೀನು ಈ ರೀತಿ ದುಃಖಿಸುತ್ತಿದ್ದೆಯಾ?” ಎಂದು ಹೇಳಿದ.
“ಇಲ್ಲ, ಯುದ್ಧರಂಗದಲ್ಲಿ ಅಂತಹ ಸಾವು ಕ್ಷತ್ರಿಯನಿಗೆ ಶೋಭೆ ತರುವಂತಹದ್ದು. ಆದರೆ, ನೀನು ನಿರ್ಜನ ಅರಣ್ಯಕ್ಕೆ ತೆರಳಿ ಜನಸಮೂಹದಿಂದ ದೂರವಿದ್ದು ಬದುಕಲು ಹೊರಟಿದ್ದೀಯ. ನಾವು ಇಲ್ಲಿ ನೆಮ್ಮದಿಯಿಂದಿರಲು ಹೇಗೆ ಸಾಧ್ಯ? ನಮ್ಮನ್ನೂ ನಿನ್ನ ಜೊತೆ ಕರೆದುಕೊಂಡು ಹೋಗು ಎಂದು ಹೇಳುತ್ತಿದ್ದೇನೆ” ಎಂದಳು.
“ಅಮ್ಮಾ! ನಿಮ್ಮನ್ನೆಲ್ಲ ನನ್ನ ಜೊತೆ ಹೇಗೆ ಕರೆದುಕೊಂಡು ಹೋಗಲು ಸಾಧ್ಯ? ನಿನ್ನ ಪುತ್ರನಾದ ನಂದನನು ಇನ್ನೂ ಕಿರಿಯ ಬಾಲಕ. ನನ್ನ ಪುತ್ರ ರಾಹುಲ ಈಗ ತಾನೇ ಜನಿಸಿದ್ದಾನೆ. ಅವರನ್ನೆಲ್ಲ ತೊರೆದು ನೀನು ನನ್ನೊಂದಿಗೆ ಬರಲು ಸಾಧ್ಯವೆ?” ಎಂದು ಸಿದ್ಧಾರ್ಥನು ಪ್ರಶ್ನಿಸಿದನು.
ಪ್ರಜಾಪತಿ ಗೋತಮಿಗೆ ತನ್ನ ಪುತ್ರ ಸಿದ್ಧಾರ್ಥನ ಮಾತಿನಿಂದ ತೃಪ್ತಿಯಾಗಲಿಲ್ಲ. ಅವಳು ಅವನನ್ನು “ನಾವೆಲ್ಲರೂ ಶಾಕ್ಯರ ರಾಜ್ಯವನ್ನು ತ್ಯಜಿಸಿ ರಕ್ಷಣೆಗಾಗಿ ಕೋಸಲರಾಜನ ಆ ರಾಜ್ಯಕ್ಕೆ ಹೋಗೋಣ” ಎಂದು ಒತ್ತಾಯಿಸಿದಳು.
“ಅಮ್ಮಾ! ಕೋಸಲ ರಾಜ್ಯಕ್ಕೆ ನಾವೆಲ್ಲರೂ ಹೋಗಬಹುದು. ಆದರೆ, ಶಾಕ್ಯರು ಏನೆಂದುಕೊಂಡಾರು? ಇದು ರಾಜದ್ರೋಹ ಎಂದು ಅವರು ಪರಿಗಣಿಸುವುದಿಲ್ಲವೆ? ನಾವು ನಮ್ಮ ಜನ, ಜಲ, ನೆಲದ ಸಂಸ್ಕ ೃತಿಯ ವಿರುದ್ಧ ನಡೆಯಬಾರದು. ಜೊತೆಗೆ, ನನ್ನ ಪರಿವ್ರಾಜಕ ಬದುಕಿಗೆ ಕಾರಣವಾದ ಸಂಗತಿಯನ್ನು ನನ್ನ ಯಾವುದೇ ಮಾತು ಅಥವಾ ನಡೆಯ ಮೂಲಕ ಕೋಸಲದ ರಾಜನಿಗೆ ತಿಳಿಸುವುದಿಲ್ಲ ಎಂದು ಸಂಘದ ಸದಸ್ಯರಿಗೆ ವಚನ ನೀಡಿ ಬಂದಿದ್ದೇನೆ. ಇದು ನಿಜವಾದ ವಾಸ್ತವ ಸಂಗತಿ. ಹಾಗಾಗಿ, ನಾನು ಏಕಾಂಗಿಯಾಗಿ ಅರಣ್ಯದಲ್ಲಿ ವಾಸಿಸುವುದು ಅನಿವಾರ್ಯ. ಅಮ್ಮಾ! ಒಮ್ಮೆ ಯೋಚಿಸಿ ನೋಡು; ಅರಣ್ಯದಲ್ಲಿ ನಾನು ಒಂಟಿಯಾಗಿರುವುದು ಉತ್ತಮವೊ? ಅಥವಾ ಯುದ್ಧದಲ್ಲಿ ಪಾಲ್ಗೊಂಡು ಕೋಲಿಯರ ಹತ್ಯೆಗೆ ಕಾರಣವಾಗುವುದು ಉತ್ತಮವೋ?” ಎಂದು ಸಿದ್ಧಾರ್ಥ ಗೌತಮ ಕೇಳಿದನು.
ಆ ಸಂದರ್ಭದಲ್ಲಿ ಶುದ್ಧೋಧನನು ಸಿದ್ಧಾರ್ಥನನ್ನು ಉದ್ದೇಶಿಸಿ, “ಶಾಕ್ಯರ ಸಂಘವು ಯುದ್ಧದ ದಿನವನ್ನು ಸ್ವಲ್ಪ ದಿನಗಳ ಕಾಲ ಮುಂದೂಡಲು ನಿರ್ಧರಿಸಿರುವಾಗ ನೀನೇಕೆ ಈ ರೀತಿ ಅವಸರಪಡುತ್ತಿದ್ದೀಯ? ಶಾಕ್ಯರು ಮತ್ತು ಕೋಲಿಯರ ನಡುವೆ ಯುದ್ಧ ನಡೆಯದೆ ಇರುವ ಸಾಧ್ಯತೆಯೂ ಇದೆ. ಆದ್ದರಿಂದ ನೀನು ಈ ಪರಿವ್ರಾಜಕ ಬದುಕನ್ನು ಏಕೆ ಮುಂದೂಡಬಾರದು? ಮುಂದಿನ ದಿನಗಳಲ್ಲಿ ನೀನು ಶಾಕ್ಯರ ನಡುವೆ ಉಳಿಯಲು ಸಂಘದ ಒಪ್ಪಿಗೆಯನ್ನು ಪಡೆಯಬಹುದು” ಎಂದು ಸಲಹೆ ನೀಡಿದನು. ಆದರೆ, ಈ ಸಲಹೆ ಸಿದ್ಧಾರ್ಥನಿಗೆ ಸಮ್ಮತವೆನಿಸಲಿಲ್ಲ.
“ನಾನು ಪರಿವ್ರಾಜಕನಾಗುತ್ತೇನೆ ಎಂದು ಸಂಘಕ್ಕೆ ಮಾತು ಕೊಟ್ಟ ಪರಿಣಾಮ ದಿಂದಾಗಿ ಕೋಲಿಯರೊಂದಿಗಿನ ತಮ್ಮ ಹೋರಾಟವನ್ನು ಮುಂದೂಡಲು ಶಾಕ್ಯರ ಸಂಘವು ನಿರ್ಧರಿಸಿದೆ ಎಂಬ ಅಂಶವನ್ನು ನಾವು ಮರೆಯಬಾರದು. ನಾನು ಪರಿವ್ರಾಜಕತ್ವ ವನ್ನು ಸ್ವೀಕರಿಸಿದ ಮೇಲೆ ಈಗಾಗಲೇ ತೀರ್ಮಾನಿಸಿರುವ ಯುದ್ಧದ ನಿರ್ಣಯವನ್ನು ಬದಲಾಯಿಸುವಂತೆ ಸಂಘವನ್ನು ಹಲವರು ಒತ್ತಾಯಿಸಬಹುದು. ಆದರೆ, ಇದೆಲ್ಲವೂ ನಾನು ಮೊದಲು ಪರಿವ್ರಾಜಕನಾಗುವುದರ ಮೇಲೆ ಅವಲಂಬಿಸಿದೆ. ನಾನು ಸಂಘಕ್ಕೆ ಪರಿವ್ರಾಜಕತ್ವ ಸ್ವೀಕರಿಸುತ್ತೇನೆ ಎಂದು ವಚನವಿತ್ತಿದ್ದೇನೆ. ಅದನ್ನು ನಾನು ಈಡೇರಿಸಲೇಬೇಕು. ನಾನು ವಚನಭ್ರಷ್ಟನಾದರೆ ಅದರ ಪರಿಣಾಮವು ನಮ್ಮ ಮೇಲೆ ಮಾತ್ರವಲ್ಲದೆ, ಶಾಂತಿ ಸ್ಥಾಪನೆಯ ನಮ್ಮ ಉದ್ದೇಶದ ಮೇಲೆಯೂ ಬೀರುತ್ತದೆ” ಎಂದು ನುಡಿದು
ಪ್ರಜಾಪತಿ ಗೋತಮಿಯತ್ತ ತಿರುಗಿ “ಅಮ್ಮಾ! ನೀನು ದಯವಿಟ್ಟು ನನ್ನ ದಾರಿಗೆ ಅಡ್ಡ ಬರಬೇಡ. ನನಗೆ ಅನುಮತಿಯಿತ್ತು, ಆಶೀರ್ವದಿಸು. ಈಗ ನಡೆಯುತ್ತಿರುವುದೆಲ್ಲವೂ ಒಳ್ಳೆಯದಕ್ಕೆ ಎಂದು ಭಾವಿಸು” ಎಂದು ಗೌತಮನು ಒತ್ತಾಯ ಮಾಡಿದನು. ಸಿದ್ಧಾರ್ಥನ ಮಾತಿಗೆ ಪ್ರತಿಕ್ರಿಯೆ ನೀಡಲಾರದೆ, ಗೋತಮಿ ಮತ್ತು ಶುದ್ಧೋಧನ ಇಬ್ಬರೂ ಮೌನಕ್ಕೆ ಶರಣಾದರು.
ನಂತರ ಸಿದ್ಧಾರ್ಥನು ತನ್ನ ಪತ್ನಿಯಾದ ಯಶೋಧರೆಯ ವಾಸಗೃಹದತ್ತ ತೆರಳಿದನು. ಆಕೆಯನ್ನು ನೋಡಿದ ನಂತರ, ಅವಳಿಗೆ ತಾನು ಏನನ್ನು ಹೇಳಬೇಕು ಮತ್ತು ಅದನ್ನು ಹೇಗೆ ವ್ಯಕ್ತಪಡಿಸಬೇಕೆಂದು ತಿಳಿಯದೆ, ಮೌನವಾಗಿ ನಿಂತನು. ಯಶೋಧರೆಯೇ ಆ ಮೌನವನ್ನು ಮುರಿದು “ಕಪಿಲವಸ್ತುವಿನ ಸಂಘದ ಸಭೆಯಲ್ಲಿ ನಡೆದ ಸಂಗತಿಯೆಲ್ಲ ನನಗೆ ಗೊತ್ತಾಗಿದೆ” ಎಂದು ನುಡಿದಳು.
“ಯಶೋಧರೆ! ಹಾಗಾದರೆ ಪರಿವ್ರಾಜಕನಾಗಬೇಕೆಂಬ ನನ್ನ ನಿರ್ಣಯದ ಬಗ್ಗೆ ನಿನ್ನ ಅಭಿಪ್ರಾಯವೇನು?” ಎಂದು ಸಿದ್ಧಾರ್ಥ ಕೇಳಿದನು. ತನ್ನ ಪತ್ನಿಯು ಈ ಸುದ್ದಿಯ ಆಘಾತದಿಂದ ಕುಸಿದು ಬೀಳಬಹುದು ಎಂದು ಅವನು ನಿರೀಕ್ಷಿಸಿದ್ದನು. ಆದರೆ ಅಂತಹುದೇನೂ ಸಂಭವಿಸಲಿಲ್ಲ. ತನ್ನೆಲ್ಲಾ ಭಾವನೆಗಳನ್ನು ನಿಯಂತ್ರಿಸಿಕೊಂಡ ಯಶೋಧರೆಯು ತನ್ನ ಪತಿಯನ್ನು ಉದ್ದೇಶಿಸಿ,
“ನಿಮ್ಮ ಸ್ಥಾನದಲ್ಲಿ ನಾನಿದ್ದರೂ ಇದನ್ನೇ ಮಾಡಬೇಕಿತ್ತು. ಇದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯವಿತ್ತು? ಕೋಲಿಯರ ಮೇಲಿನ ಯುದ್ಧದಲ್ಲಿ ಭಾಗವಹಿಸಲು ನಾನು ಒಪ್ಪುತ್ತಿರಲಿಲ್ಲ. ನಿಮ್ಮ ತೀರ್ಮಾನವು ಸರಿಯಾಗಿದೆ ಮತ್ತು ಇದಕ್ಕೆ ನನ್ನ ಸಂಪೂರ್ಣ ಸಮ್ಮತಿಯಿದೆ. ಜೊತೆಗೆ ಸಹಕಾರವೂ ಇದೆ. ನಾನೂ ನಿಮ್ಮೊಂದಿಗೆ ಪರಿವ್ರಾಜಕತ್ವವನ್ನು ಸ್ವೀಕರಿಸಬಹುದಿತ್ತು. ಆದರೆ, ರಾಹುಲನನ್ನು ನೋಡಿಕೊಳ್ಳಬೇಕಾಗಿರುವುದರಿಂದ ನಾನು ಹಾಗೆ ಮಾಡಲಾರೆ. ಪರಿಸ್ಥಿತಿ ಆ ಹಂತವನ್ನು ತಲುಪದಿರಲಿ ಎಂದು ನಾನು ಹಾರೈಸುತ್ತೇನೆ. ನಾವು ದಿಟ್ಟತನದಿಂದ ಮತ್ತು ಧೈರ್ಯವಾಗಿ ಅದನ್ನು ಎದುರಿಸೋಣ. ನೀವು ನಿಮ್ಮ ತಂದೆ, ತಾಯಿ ಮತ್ತು ಮಗುವಿನ ವಿಚಾರದಲ್ಲಿ ಆತಂಕ ಪಡಬೇಡಿ. ನನ್ನ ಕೊನೆಯ ಉಸಿರು ಇರುವವರೆಗೂ ಅವರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ. ನೀವು ನಿಮ್ಮ ಬಂಧುಬಾಂಧವರನ್ನೆಲ್ಲ ತ್ಯಜಿಸಿ ಪರಿವ್ರಾಜಕ ದೀಕ್ಷೆಯನ್ನು ಸ್ವೀಕರಿಸುತ್ತಿರು ವುದರಿಂದ, ನಿಮ್ಮ ಜೀವನದ ಹೊಸಪಥದ ಅನ್ವೇಷಣೆಯಲ್ಲಿ ಮನುಕುಲಕ್ಕೆ ಶ್ರೇಯಸ್ಸು ಸಿಗುವಂತಾಗಲಿ ಎಂದು ಆಶಿಸುತ್ತೇನೆ” ಎಂದಳು.
ಯಶೋಧರೆಯ ಮಾತುಗಳಿಂದ ಸಿದ್ಧಾರ್ಥ ಗೌತಮನು ತುಂಬಾ ಪ್ರಭಾವಿತ ನಾದನು. ಯಶೋಧರೆಯು ಎಂತಹ ಉದಾರಶೀಲಳು, ಶೌರ್ಯಸಂಪನ್ನಳು, ದೃಢ ಚಿತ್ತಳು ಎಂಬುದು ಸಿದ್ಧಾರ್ಥನಿಗೆ ಮನದಟ್ಟಾಯಿತು. ತಾನು ಎಂತಹ ಅದೃಷ್ಟಶಾಲಿ. ಆದರೆ, ವಿಧಿ ತಮ್ಮಿಬ್ಬರನ್ನೂ ಬೇರ್ಪಡಿಸುತ್ತಿದೆ ಎಂದುಕೊಂಡನು. ಅನಂತರ ರಾಹುಲನನ್ನು ಕರೆತರುವಂತೆ ಆಕೆಗೆ ತಿಳಿಸಿದನು. ಪಿತೃವಾತ್ಸಲ್ಯ ತುಂಬಿದ ನೋಟದಿಂದ ಮಗುವನ್ನು ಒಮ್ಮೆ ನೋಡಿ ಅಲ್ಲಿಂದ ನಿರ್ಗಮಿಸಿದನು.
(ಕೃತಿ: ಮಹಾಬಿಂದು (ಕಾದಂಬರಿ), ಲೇಖಕರು: ಪ್ರೊ.ಎಚ್.ಟಿ. ಪೋತೆ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 195/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ