ಕಾಡಿನ ದಾರಿ
ಊರಿಗೆ ಬಂದಾಗಲೆಲ್ಲ
ದಿನಾ ಬೆಳಗ್ಗೆ ಎದ್ದು
ಈ ದಾರಿಯಲ್ಲಿ ನಡೆಯಲು ಮುಂದಾದರೆ..
ಮನಸು ಚಿಟ್ಟೆಯಂತೆ ಹಾರುತ್ತದೆ.
ನವಿಲುಗಳ ದಿಗಂತ ನಾದದೊಂದಿಗೆ
ಇತರ ಹಕ್ಕಿಗಳ ಗಳರವದ ಹಿಮ್ಮೇಳ
ಮುಂಜಾನೆಯ ಶುಭಕೋರುತ್ತವೆ.
ಕುರಿಗಳ ಹಿಂಡು
ಹಸುರು ನೆಲದಲ್ಲಿ ಬಿದ್ದ
ಹಿಮದ ರಾಶಿಯಂತೆ ಕಂಡರೆ;
ಬಾತುಕೋಳಿಗಳ ದಂಡು
ಒಕ್ಕೊರೊಲಿನಲಿ ಕೂಗುತ್ತ
ಗದ್ದೆ ಬಯಲಿನಲ್ಲಿ ಮೇಯುತ್ತಿರುತ್ತವೆ.
ಹಸುರುಟ್ಟ ಹೊಲಗಳು, ಕಮ್ಮನೆ ಮಣ್ಣು
ಮೆಲ್ಲನೆ ಹರಿಯುವ ನೀರು,
ತಣ್ಣನೆ ಗಾಳಿ, ದಟ್ಟ ಕಾಡು, ನಿಶ್ಶಬ್ದ, ನಿನಾದ.
ನಮ್ಮ ಗಮ್ಯ- ದೊಡ್ಡ ಕಾಲುವೆ.
ಅರ್ಧದಾರಿಯವರೆಗು ಎರಡೂ ಬದಿಯಲಿ
ಹೊಲಗದ್ದೆಗಳು, ಚಿಕ್ಕ ಕಾಲುವೆಗಳು;
ಇನ್ನರ್ಧ ದಾರಿಯಗುಂಟ ದಟ್ಟ ಕಾಡು,
ದೊಡ್ಡದೊಡ್ಡ ಮರಗಳು.
ಕಾಡಿನ ದೊಡ್ಡ ಮರವೊಂದರಲ್ಲಿ
ಅನೇಕ ಜೇನುಗೂಡುಗಳು ಕಣ್ತೆರೆದಿರುತ್ತವೆ.
ರಂಗುರಂಗಿನ ಹೂ-ಗಿಡಗಳು,
ಎಲೆಗಳ ಮೇಲೆ ಮೂಡಿದ ಇಬ್ಬನಿ ಮುತ್ತುಗಳು
ನಮ್ಮ ದಾರಿ ಕಾಯುತ್ತಿರುತ್ತವೆ.
ಇನ್ನು ದಾರಿಯುದ್ದಕ್ಕೂ
ನಮ್ಮನಮ್ಮೊಳಗೆ ನಡೆಯುವ ಅನೇಕ
ಮಾತು ಕತೆ, ವಾದ ವಿವಾದಗಳು
ಚಿಕ್ಕ ಹೈಕಳ ಮುದ್ದು ತರಲೆ, ಜಗಳಗಳು
ಮುಗಿಲಿಗೇರಿ ಮುಂಜಾನೆ ಸೂರ್ಯನ
ತಲೆಬಿಸಿಮಾಡಿದರೂ ಮಾಡೀತು.
ನಮ್ಮ ಜಾಡು ಸೋಕದ ಅನೇಕ ತಿರುವುಗಳು
ಇನ್ನೂ ಈ ದಾರಿಯಲ್ಲಿ ಉಳಿದಿವೆ
ಅವನ್ನು ನಾವು ಮುಂದಿನ ದಿನಗಳಿಗಾಗಿ ಉಳಿಸಿಕೊಂಡಿದ್ದೇವೆ-ಮತ್ತೆ ಮತ್ತೆ ಬೆರಗುಗೊಳ್ಳಲು!
ನಗುವಾಗಿ ಮಗುವಾಗಿ ನಲಿವಿನ ಅಲೆಯಲಿ ತೇಲಲು.
ದಾರಿ ಅದೇ ಆದರೂ
ಪ್ರತಿದಿನ ನಮಗೆ ಈ ನಡಿಗೆಯಲ್ಲಿ
ಹೊಸಹೊಸ ನೋಟಗಳು ಎದುರಾಗುತ್ತವೆ, ನಮಗಾಗಿ ಬೆಚ್ಚಗೆ ಅಡಗಿ ಕುಳಿತುರುತ್ತವೆ.
ಈ ದಾರಿ ನವನವೀನ, ನಿತ್ಯ ರೋಮಾಂಚನ!
ಇದು ಕಾಡಿನ ದಾರಿ, ಕಾಡುವ ದಾರಿ….
ಪುನೀತ್ ಕುಮಾರ್ ವಿ. ಬೆಂಗಳೂರಿನಲ್ಲಿ ವಾಸ.
ಸಾಹಿತ್ಯದ ಒಲವು, ಓದು ಇವರ ಹವ್ಯಾಸ.
ಇವರ ಕೆಲವು ಕವಿತೆಗಳು, ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ತುಂಬಾ ಅದ್ಭುತವಾಗಿದೆ, ಕಾಡಿನ ಸೌಂದರ್ಯವನ್ನು ತುಂಬಾ ಸೌಂದರ್ಯವಾಗಿ ವರ್ಣನೆ ಮಾಡಿದ್ದೀಯಾ. 👌
ತುಂಬ ಧನ್ಯವಾದ ಅಣ್ಣ. ಓದಿದ್ದಕ್ಕೆ
ಈ ಕವಿತೆ ನನ್ನ ಬಾಲ್ಯದ ಮತ್ತು ನನ್ನ ಹಳ್ಳಿಯನ್ನು ನೆನಪಿಸಿತು.
ತುಂಬಾ ಸೊಗಸಾಗಿಧೆ ಧನ್ಯವಾದಗಳು🙏
“ನಮ್ಮ ಜಾಡು ಸೋಕದ ಅನೇಕ ತಿರುವುಗಳು
ಇನ್ನೂ ಈ ದಾರಿಯಲ್ಲಿ ಉಳಿದಿವೆ
ಅವನ್ನು ನಾವು ಮುಂದಿನ ದಿನಗಳಿಗಾಗಿ ಉಳಿಸಿಕೊಂಡಿದ್ದೇವೆ-ಮತ್ತೆ ಮತ್ತೆ ಬೆರಗುಗೊಳ್ಳಲು!” ಈ ಸಾಲುಗಳು ತುಂಬಾ ವಿಭಿನ್ನ ಹಾಗೂ ವಿಶೇಷ ಅನಿಸಿದವು. ತಿರುವುಗಳನ್ನು ನಾವು ಇಟ್ಟುಕೊಳ್ಳುವುದಲ್ಲದೇ ಹೋದರೂ, ಅವು ನಮ್ಮ ಜೀವನಕ್ಕೆ ಸಂಬಂಧಿಸಿದವುಗಳಾಗಿರುವುದರಿಂದ ಹಾಗೂ ನಾವು ಅದರೊಂದಿಗೆ ಹೇಗೋ ಜೋಡಿಸಿಕೊಂಡಿರುವುದರಿಂದ ಇದೊಂದು ಅಭಿವ್ಯಕ್ತಿ ಒಂದು ಚೆಂದದ ಅಭಿವ್ಯಕ್ತಿಯೇ 🙂
ಇನ್ನಷ್ಟು ಬರೆಯಿರಿ, ಇನ್ನಷ್ಟು ಬರೆಸಿಕೊಳ್ಳಲಿ !
ಬಹಳ ಬಹಳ ಧನ್ಯವಾದ ಶ್ರೀಧರ್..
ನಿಮ್ಮ ಅನಿಸಿಕೆ ನನಗೆ ಅತ್ಯಂತ ಖುಷಿ ಕೊಟ್ಟಿತು.
ಖಂಡಿತ ಬರೆಯುತ್ತೇನೆ.
ಬಹಳ ಧನ್ಯವಾದ ಓದಿ ಹೇಳಿದ್ದಕ್ಕೆ.