ಶಿಕಾರಿಯಂತೇ ‘ಪುರುಷೋತ್ತಮ’ ಕೂಡಾ ಬಹುತೇಕ‌ ಮುಂಬೈಯಲ್ಲೇ ಸಾಗುವ ಕಾದಂಬರಿ.  ಕಥಾನಾಯಕ ಪುರುಷೋತ್ತಮ, ಆತನ ತಾಯಿ ಮತ್ತು ಬಳಗದ ನಡುವೆ ನಡೆಯುವ ಕಥಾನಕಗಳೇ ಈ ಕಾದಂಬರಿಯ ವಸ್ತು. ಜೊತೆಗೆ ಒಂದು ಮಹಾನಗರ ಮತ್ತೂ ದೊಡ್ಡದಾಗಿ ವಿಸ್ತರಣೆಯಾಗಬೇಕಾದರೆ ನಡೆಯುವ ತಲ್ಲಣಗಳು, ಹಣ ಅಧಿಕಾರದ ಮುಂದೆ ಮಾನವೀಯತೆ ಗೌಣವಾಗಿ ತನ್ನ ಸ್ವಾರ್ಥಕ್ಕಾಗಿ ಯಾವ ಕೆಲಸಕ್ಕೂ ಇಳಿಯಬಹುದಾದ ಮನುಜನ ಕ್ರೂರತನ, ತನ್ನ ಪ್ರೀತಿಯ ನೆಲವನ್ನು ಉಳಿಸಿಕೊಳ್ಳಲು ಎಲ್ಲಾ ಸ್ವಾರ್ಥಗಳ ಬಿಟ್ಟು ಮಾಡುವ ಹೋರಾಟ ಎಲ್ಲವೂ ಬಹಳ ಸುಂದರವಾಗಿ‌ ನಿರೂಪಿತಗೊಂಡಿದೆ
ಓದುವ ಸುಖ ಅಂಕಣದಲ್ಲಿ ಯಶವಂತ ಚಿತ್ತಾಲರ ಮೂರು ಕೃತಿಗಳ ಕುರಿತು ಬರೆದಿದ್ದಾರೆ ಗಿರಿಧರ್ ಗುಂಜಗೋಡು

ಶಿಕಾರಿ

ಆಂತರಿಕ ರಾಜಕೀಯ ಅನ್ನುವುದು ಯಾವ ಕ್ಷೇತ್ರಕ್ಕೂ ಹೊರತಲ್ಲ. ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ, ಹೊರಗಿನವರು ಎಷ್ಟೇ ಸದಭಿಪ್ರಾಯವನ್ನಿಟ್ಟುಕೊಂಡಿರಲಿ ರಾಜಕೀಯವೆನ್ನುವುದು ಇದ್ದೇ ಇರುತ್ತದೆ. ಪ್ರತಿಯೊಂದು ಕ್ಷೇತ್ರ ಅಥವಾ ಉದ್ಯಮಗಳ ರಾಜಕೀಯದ ಸ್ವರೂಪವೂ ಬೇರೆ ಬೇರೆ. ಹಾಗೆ ನಮ್ಮ ಕಾರ್ಪೋರೇಟ್ ರಾಜಕೀಯ ಕೂಡ. ನಾನು ಓದಿದ ಕಾದಂಬರಿಗಳಲ್ಲೇ ಕಾರ್ಪೋರೇಟ್ ರಾಜಕೀಯವನ್ನು ಅತ್ಯದ್ಭುತವಾಗಿ ಅನಾವರಣಗೊಳಿಸಿದ ಕಾದಂಬರಿಯೆಂದರೆ ಯಶವಂತ ಚಿತ್ತಾಲರ ಶಿಕಾರಿ. ಬರೀ ಕಾರ್ಪೋರೇಟ್ ರಾಜಕೀಯದ ಬಗ್ಗೆ ಮಾತನಾಡದೇ ಮನೋವೈಜ್ಞಾನಿಕ ವಿಷಯಗಳ ಬಗ್ಗೆಯೂ ಬೆಳಕನ್ನು ಚೆಲ್ಲುತ್ತದೆ. ಕನ್ನಡದಲ್ಲಿ ಈ ವಿಷಯದ ಮೇಲೆ ಬಂದಿರುವ ಇನ್ನೊಂದು ಸಶಕ್ತ ಕಾದಂಬರಿಯನ್ನು ನಾನು ಓದಿಲ್ಲ.

ಮೊದಲ ಬಾರಿ ಶಿಕಾರಿಯನ್ನು ಓದುವ ಅವಕಾಶ ಬಂದಿದ್ದಾಗ ಅದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದೆ. ಹೈಸ್ಕೂಲಿನ ರಜದಲ್ಲಿ ಅಜ್ಜನ ಮನೆಗೆ ಹೋದಾಗ ದೊಡ್ಡ ಅತ್ತಿಗೆ ಶಿಕಾರಿ ಕಾದಂಬರಿಯನ್ನು ಅವಳ ಕಾಲೇಜಿನ ವಾಚನಾಲಯದಿಂದ ಹಿಡಿದುಕೊಂಡು ಬಂದಿದ್ದಳು. ಭಾರಿ ಅದ್ಭುತ ಕಾದಂಬರಿ ಅಂತ ತೋರಿಸಿದಳು. ಅದರ ಮೊದಲ ಪುಟದಲ್ಲೇ ಪೆನ್ನಿನಲ್ಲಿ ‘ಈ ಪುಸ್ತಕ ಬರೆದವನು ಕಳ್ನನ್ಮಗ’ ಅಂತ ಬರೆದುಕೊಂಡಿತ್ತು. ಮತ್ತೊಂದು ಪುಟದಲ್ಲಿ ‘ಯಾವ ಬೋ*ಮಗ ಓದ್ತಾನೆ?’ ಅಂತ ಬರೆದುಕೊಂಡಿತ್ತು. ಅದಲ್ಲದೇ ಇನ್ನೂ ಹತ್ತಾರು ರಿವ್ಯೂಗಳನ್ನು ಯುವ ವಿಮರ್ಶಕರು ಬರೆದಿದ್ದರು. ಆ ವಿಮರ್ಶೆಗಳನ್ನೂ ಮತ್ತು ಇದರಲ್ಲಿ ಬರುವ ‘ಒಂದೂ ಮಗ’ ‘ಎರಡೂ ಮಗ’ ಇತ್ಯಾದಿ ಪೋಲಿ ಶಬ್ದಗಳನ್ನು ಮಾತ್ರ ನಾನು ಭಾವ ಸರಿಯಾಗಿ ಆನಂದಿಸಿದ್ದೆವು. ಇದಕ್ಕಾಗಿ ಅತ್ತಿಗೆಯ ಸಿಡಿಮಿಡಿ ಎದುರಿಸಬೇಕಾಗಿ ಬಂದಿತ್ತು.

ಅದಾದ ಮೇಲೆ ನಾನು ಶಿಕಾರಿ ಖರೀದಿಸಿದ್ದು ಕೆಲಸಕ್ಕೆ ಸೇರಿ ಐದಾರು ವರುಶಗಳ ನಂತರ. ಈ ಕಾರ್ಪೋರೇಟ್ ರಾಜಕೀಯ ಎಂದರೆ ಏನು ಎಂದು ಚೂರಾದರೂ ಗೊತ್ತಾಗತೊಡಗಿದಮೇಲೆ. ಅಂದು ನಾನು ಕಛೇರಿಯ ಕೆಲಸಕ್ಕೆ ಪುಣೆಗೆ ಹೊರಟಿದ್ದೆ. ಮೈಸೂರಿನಿಂದ ಬೆಂಗಳೂರಿಗೆ ಕ್ಯಾಬಿನಲ್ಲಿ ತಲುಪಿ, ಅಲ್ಲಿಂದ ವಿಮಾನದಲ್ಲಿ. ಬೆಂಗಳೂರಿನಿಂದ ಹೊರಟ ಜೆಟ್ ಏರ್ವೇಸಿನ ವಿಮಾನ ಮೇಲಕ್ಕೆ ನೆಗೆದ ಹತ್ತು ನಿಮಿಷಗಳ ನಂತರ ಶಿಕಾರಿಯ ಮೊದಲ ಪುಟ ತಿರುಗಿಸಿದೆ. ಸಮಯದ ಪರಿವೆಯೇ ಇಲ್ಲದಂತೆ ಶಿಕಾರಿ ಓದಿಸಿಕೊಂಡು ಹೋಯಿತು. ಮಧ್ಯೆ ತಿಂಡಿ ಬಂದಾಗಲೂ ತಿನ್ನುತ್ತಾ ಓದುತ್ತಿದ್ದೆ. ಪುಣೆಯ ಹಿಂಜವಡಿಯಲ್ಲಿರುವ ನನ್ನ ಸಂಸ್ಥೆಯ ಅಥಿತಿಗೃಹದ ಹತ್ತನೇ ಮಹಡಿಯಲ್ಲಿದ್ದ ನನ್ನ ಕೊಠಡಿ ತಲುಪಿದ ನಂತರ ಒಂದು ಕಪ್ ಕಾಫಿ ಮಾಡಿಕೊಂಡು ಕಿಟಕಿಯ ಎದುರು ಖುರ್ಚಿ ಎಳೆದುಕೊಂಡು ಪುನಃ ಓದತೊಡಗಿದೆ. ಅಂತೂ ಇಂತೂ ಕಾದಂಬರಿ ಮುಗಿದಾಗ ರಾತ್ರಿ ಊಟದ ಸಮಯವಾಗಿತ್ತು.

ಉತ್ತರ ಕನ್ನಡದ ಕರಾವಳಿಯ ಚಿಕ್ಕ ಊರಿನಿಂದ ಬಂದು ಮುಂಬೈಯಿಯ ರಾಸಾಯನಿಕ ಸಂಸ್ಥೆಯೊಂದರಲ್ಲಿ ಬಹುದೊಡ್ಡ ಹುದ್ದೆಗೇರಿದ್ದ ನಾಗಪ್ಪ ಈ ಕಾದಂಬರಿಯ ಮುಖ್ಯ ಪಾತ್ರಧಾರಿ. ಅವನ ವೃತ್ತಿ ಮತ್ತು ವಯಕ್ತಿಕ ಜೀವನದಲ್ಲಿ ಬರುವ ತಲ್ಲಣಗಳೇ ಈ ಕಾದಂಬರಿಯ ಜೀವಾಳ. 1970 ರ ದಶಕದ ಕೊನೆಯಲ್ಲಿ ಬಂದ ಈ ಕಾದಂಬರಿಯ ಅಕ್ಷರ ಅಕ್ಷರಗಳು ಇಂದಿಗೂ ಪ್ರಸ್ತುತ. ಚಿತ್ತಾಲರೇನಾದರೂ ಅಂದು ಇದನ್ನು ಇಂಗ್ಲಿಷಿನಲ್ಲಿ ಬರೆದಿದ್ದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡುತ್ತಿತ್ತೆಂದು ಧೈರ್ಯವಾಗಿ ಹೇಳಬಲ್ಲೆ. ಇಷ್ಟೇ ಹೇಳೋದು‌ ನಾನು ಈ ಕಾದಂಬರಿಯ ಕಥಾ ಪ್ರಪಂಚದ ಬಗ್ಗೆ. ಮತ್ತೊಂದು ಅಕ್ಷರ ಕೂಡಾ ನುಡಿಯೋಲ್ಲ.

ಇದನ್ನು ಓದಿದ ಹದಿನೈದು ಇಪ್ಪತ್ತು ದಿನಗಳ ನಂತರ ನಾನು ಮುಂಬೈಗೆ ಭೇಟಿಕೊಟ್ಟಿದ್ದೆ. ಒಮ್ಮೆ ದೊಡ್ಡ ನರಕದಂತೆಯೂ, ಇನ್ನೊಮ್ಮೆ ಧರೆಗಿಳಿದ ಸ್ವರ್ಗದಂತೆಯೂ, ಮತ್ತೊಮ್ಮೆ ಯಾವುದೋ ಅಪರಿಚಿತ ಲೋಕದಂತೆಯೂ ಕಾಣುವ ಈ ಮಾಯಾನಗರಿ ತನ್ನ ನಿವಾಸಿಗಳ ಪಾಲಿಗೆ ಮಾತ್ರ ಹೆತ್ತ ತಾಯಿಯಂತೇ. ಮುಂಬೈ ಯಾರನ್ನೂ ಉಪವಾಸ ಮಲಗಿಸೋಲ್ಲ ಇಲ್ಲಿ ಎಲ್ಲರಿಗೂ ನೆಲೆಯುಂಟು ಎಂದು ಬಹಳ ಪ್ರೀತಿಯಿಂದ ಹೇಳುತ್ತಾರೆ. ನನಗಂತೂ ಮೂರು ನಾಲ್ಕು ಬಾರಿ ಅಲ್ಲಿಗೆ ಭೇಟಿ ಕೊಟ್ಟಾಗಲೆಲ್ಲಾ ಮುಂಬೈಯ ಬೀದಿ ಬೀದಿಯಲ್ಲೂ ಕಾಯ್ಕಿಣಿಯವರ ಚಿತ್ತಾಲರ ಪಾತ್ರಗಳೇ ಕಾಣುತ್ತವೆ. ಅವರುಗಳ ಕಥೆಗಳು ಕಾದಂಬರಿಗಳೇ ಕಣ್ಮುಂದೆ ಬರುತ್ತವೆ. ಎಲ್ಲೋ ಕಳೆದು ಹೋಗುವಂತಹ ವಿಚಿತ್ರ ಮಂಕುತನವೊಂದು ಮನದೊಳಗೆ ಕವಿದಿರುತ್ತದೆ. ಈ ಅನುಭವಕ್ಕಾಗಿಯೇ ಮುಂಬೈಗೆ ಮುಂದಿನಬಾರಿ ಬರಬೇಕೆಂದು ಪ್ರತಿಸಾರಿ ಭೇಟಿಕೊಟ್ಟಾಗಲೂ ಅಂದುಕೊಳ್ತೇನೆ.

ಇದನ್ನು ಇಲ್ಲಿಗೇ ನಿಲ್ಲಿಸಿ ನಾನು ಓದಿದ ಚಿತ್ತಾಲರ ಇನ್ನೊಂದು ಕಾದಂಬರಿಯಾದ ‘ಪುರುಷೋತ್ತಮ’ ಕಡೆ ಮುನ್ನಡೆಯುತ್ತೇನೆ.

ಪುರುಷೋತ್ತಮ

ಯುಎಸ್ಸಿನಿಂದ ಭಾರತಕ್ಕೆ ವಾಪಾಸಾದ ನಂತರ ಒಂದು ತಿಂಗಳುಗಳ‌ ಕಾಲ ಚೆನ್ನೈಯಲ್ಲಿ ಸಂಸ್ಥೆಯ ಕಾರ್ಯ ನಿಮಿತ್ತ ಇರಬೇಕಾಗಿತ್ತು. ಕೈಯಲ್ಲಿ ಯಾವ ಪುಸ್ತಕಗಳೂ ಇರಲಿಲ್ಲ. ಹಗಲೆಲ್ಲಾ ಕೆಲಸದಲ್ಲಿ ಕಳೆದರೆ ಸಂಜೆಯ ನಂತರ ಹೊತ್ತು ಕಳೆಯಬೇಕಲ್ಲಾ. ನನ್ನ ಗೆಳೆಯನಾದ ಅವಿನಾಶನಲ್ಲಿ ‘ಯಾವುದಾದರೂ ಒಳ್ಳೆ ಪುಸ್ತಕಗಳ ಸಜೆಸ್ಟ್ ಮಾಡು ಮಾರಾಯಾ’ ಎಂದು ಕೇಳಿದಾಗ ಅವನು ಹೇಳಿದ ಒಂದು ಪುಸ್ತಕ ಚಿತ್ತಾಲರ ‘ಪುರುಷೋತ್ತಮ’.

ಶಿಕಾರಿ ಓದಿದ ಅನುಭವ ಆಗಿತ್ತು. ಮೊದಲ ಸ್ವಲ್ಪ ದಿನ ಕಛೇರಿಯ ಕೆಲಸಗಳಲ್ಲಿ ಸ್ವಲ್ಪ ಜಾಸ್ತಿಯೇ ತೊಡಗಿದ್ದ ಕಾರಣ ಈ ಪುಸ್ತಕವನ್ನು ಕೈಗೆತ್ತಿಕೊಳ್ಳುವ ರಿಸ್ಕ್ ತೆಗೆದುಕೊಳ್ಳಲಿಲ್ಲ. ಚಿತ್ತಾಲರ ಕೃತಿಗಳು ನೇರ ಚಿತ್ತಕ್ಕೇ ಕೈ ಹಾಕಿ ಮೆದುಳನ್ನು ಮಿಲ್ಕ್‌ಶೇಕ್ ಮಾಡುವುದರಿಂದ ಅದನ್ನು ಕೈಗೆತ್ತಿಕೊಂಡರೆ ಕೆಲಸ ಕೆಡುವುದರಲ್ಲಿ ಯಾವುದೇ ಸಂಶಯಗಳಿರಲಿಲ್ಲ. ಅದಕ್ಕಾಗಿಯೇ ಸ್ವಲ್ಪ ಆರಾಮಾದ ದಿನಗಳಿಗೆ ಕಾಯುತ್ತಿದ್ದೆ.

ಚಿತ್ತಾಲರೇನಾದರೂ ಅಂದು ಇದನ್ನು ಇಂಗ್ಲಿಷಿನಲ್ಲಿ ಬರೆದಿದ್ದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡುತ್ತಿತ್ತೆಂದು ಧೈರ್ಯವಾಗಿ ಹೇಳಬಲ್ಲೆ. ಇಷ್ಟೇ ಹೇಳೋದು‌ ನಾನು ಈ ಕಾದಂಬರಿಯ ಕಥಾ ಪ್ರಪಂಚದ ಬಗ್ಗೆ. ಮತ್ತೊಂದು ಅಕ್ಷರ ಕೂಡಾ ನುಡಿಯೋಲ್ಲ.

ಈ ಮಧ್ಯೆ ತಂಗಿಯ ಅಂದರೆ ಚಿಕ್ಕಪ್ಪನ ಮಗಳ ಮದುವೆಗೆ ಊರಿಗೆ ಹೋಗಬೇಕಾಗಿ ಬಂದಾಗ ಈ ಪುಸ್ತಕವನ್ನು ಕೈಗೆತ್ತಿಕೊಂಡಿದ್ದೆ. ಕಂಪನಿಯಿದ್ದುದು ಚೆನ್ನೈಯಿಂದ ೫೦-೬೦ ಕಿಲೋಮೀಟರ್ ದೂರದಲ್ಲಿ. ಅಲ್ಲಿಂದ ಲೋಕಲ್ ಗಾಡಿ ಹತ್ತಿ ಮುಖ್ಯ ರೈಲ್ವೇ ನಿಲ್ದಾಣದಲ್ಲಿ ಸುಂದರವಾದ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಿಟಕಿ ಪಕ್ಕ ಕಾಯ್ದಿರಿಸಿದ ನನ್ನ ಸೀಟಲ್ಲಿ ಕೂತು ಈ ಪುಸ್ತಕ ತೆರೆದೆ. ನಂಬಿಕೆ ಸುಳ್ಳಾಗಲೇ ಇಲ್ಲ.

ಶಿಕಾರಿಯಂತೇ ಇದು ಕೂಡಾ ಬಹುತೇಕ‌ ಮುಂಬೈಯಲ್ಲೇ ಸಾಗುವ ಕಾದಂಬರಿ. ಪುರುಷೋತ್ತಮ, ಆತನ ತಾಯಿ ಮತ್ತು ಮತ್ತು ಅವರ ಬಳಗದ ನಡುವೆ ನಡೆಯುವ ಕಥಾನಕಗಳೇ ಈ ಕಾದಂಬರಿಯ ಮೂಲ ವಸ್ತು. ಜೊತೆಗೆ ಒಂದು ಮಹಾನಗರ ಮತ್ತೋ ದೊಡ್ಡದಾಗಿ ವಿಸ್ತರಣೆಯಾಗಬೇಕಾದರೆ ನಡೆಯುವ ತಲ್ಲಣಗಳು, ಹಣ ಅಧಿಕಾರದ ಮುಂದೆ ಮಾನವೀಯತೆ ಗೌಣವಾಗಿ ತನ್ನ ಸ್ವಾರ್ಥಕ್ಕಾಗಿ ಯಾವ ಕೆಲಸಕ್ಕೂ ಇಳಿಯಬಹುದಾದ ಮನುಜನ ಕ್ರೂರತನ, ತನ್ನ ಪ್ರೀತಿಯ ನೆಲವನ್ನು ಉಳಿಸಿಕೊಳ್ಳಲು ಎಲ್ಲಾ ಸ್ವಾರ್ಥಗಳ ಬಿಟ್ಟು ಮಾಡುವ ಹೋರಾಟ ಎಲ್ಲವೂ ಬಹಳ ಸುಂದರವಾಗಿ‌ ನಿರೂಪಿತಗೊಂಡಿದೆ. ಕಾದಂಬರಿ ಓದಿ ಮುಗಿಸಿದ ಮೇಲೂ ಪುರುಷೋತ್ತಮ ನಿಮ್ಮನ್ನು ಮತ್ತೆ ಮತ್ತೆ ಕಾಡುತ್ತಾನೆ.

ಕಥೆಯಾದಳು ಹುಡುಗಿ

ಯಾಕೋ ಏನೋ ಚಿತ್ತಾಲರ ನನ್ನ ಓದು ಪ್ರಯಾಣದ ಜೊತೆಗೇ ಹಾಸುಹೊಕ್ಕಾಗಿದೆ. ಅವರ ಪ್ರಸಿದ್ಧ ಕಥೆ ‘ಅವರ ಕಥೆಯಾದಳು ಹುಡುಗಿ’ ಯನ್ನು ಓದಿದ್ದಲ್ಲ ‘ಕೇಳಿದ್ದು’ ಕೂಡಾ ಪ್ರಯಾಣ ಮಾಡುವಾಗಲೇ. ವಿದೇಶದಿಂದ ಬಂದ ಸ್ನೇಹಿತರಾದ ತಾಜ್ ಮತ್ತು ಆತ್ಮೀಯ ಗೆಳೆಯ ನಿರಂಜನನ್ನು ಭೇಟಿಯಾಗಲು ಶಿವಮೊಗ್ಗಕ್ಕೆ ಹೊರಟಿದ್ದೆ. ಕೆಎಸ್‌ಆರ್‌ಟಿಸಿಯ ಐರಾವತದಲ್ಲಿ ಕೂತು, ಕಿವಿಗೆ ಬಡ್ ತುರುಕಿಸಿ ಹಿಂದಿನ ದಿನವಷ್ಟೇ ‘ಕೇಳಿ ಕಥೆಯ’ ವೆಬ್‌ಸೈಟಿನಿಂದ ಡೌನ್‌ಲೋಡ್ ಮಾಡಿಕೊಂಡಿದ್ದ ಕಥೆಯಾದಳು ಹುಡುಗಿ ಆಡಿಯೋ ಪುಸ್ತಕ ಕೇಳತೊಡಗಿದ್ದೆ. ರಾಜ್ ಬಿ ಶೆಟ್ಟಿಯವರ ಧ್ವನಿಯಲ್ಲಿ ನಾನು ನೇರವಾಗಿ ಅದರ ಪಾತ್ರ ಪ್ರಪಂಚಕ್ಕೇ ಇಳಿದುಬಿಟ್ಟಿದ್ದೆ. ಚಿತ್ತಾಲರ ಕಥೆ, ರಾಜ್ ಬಿ ಶೆಟ್ಟಿ ಅವರ ಅದ್ಭುತವಾದ ಧ್ವನಿ ಜೊತೆಗೆ ಹದವಾದ ಹಿನ್ನೆಲೆ‌ ಸಂಗೀತ. ಕಥೆಯಾದಳು ಹುಡುಗಿಯನ್ನು ಕೇಳಿದ್ದು ನನಗದು ರಮ್ಯವಾದ ಅನುಭವವಂತೂ ಖಂಡಿತ ಅಲ್ಲ. ಕಾದ ಸೂಜಿಯನ್ನು ಬೆಣ್ಣೆಯೊಳಗೆ ನಿಧಾನಕ್ಕೆ ತೂರಿಸಿದರೆ ಹೇಗಾಗುವುದೋ ಹಾಗೇ ಮೆದುಳನ್ನೂ ಸೀಳಿದಂತಹ ವೇದನೆ. ಅದು ನೋವೋ? ಇಲ್ಲಾ ಕಥಾಪ್ರಪಂಚದ ಆಳಕ್ಕಿಳಿದಾಗ ಆಗುವ ಧ್ಯಾನಸ್ಥ ಮನಸ್ಥಿತಿಯೋ? ಇಲ್ಲ ಪದಗಳಲ್ಲಿ ಹೇಳಲಾಗದ ಅನುಭವವೋ ಗೊತ್ತಿಲ್ಲ.

ಇದರ ಒಂದೊಂದು ಅಕ್ಷರವನ್ನೂ ಸೋಸಿ ಸೋಸಿ ಜರಡಿ ಹಿಡಿದು ಚಿಕ್ಕ ಜೊಳ್ಳೂ ಸಿಗದಂತೆ ಬರೆದಂತಿದೆ. ಒಂದೇ ಒಂದು ಪದ ತೆಗೆದರೂ ಕಥೆಯೇ ಅಪೂರ್ಣವಾಗುತ್ತಿತ್ತೇನೋ. ಕಥೆಯ ಮುಖ್ಯಭಾಗ ಬರುವಾಗ ನಾನು ಅಕ್ಷರಶಃ ನಡುಗುತ್ತಿದ್ದೆ. ಆ ಕ್ಷಣ ಯಾರಾದರೂ ನನ್ನ ಮಾತನಾಡಿಸಲು ಪ್ರಯತ್ನಪಟ್ಟಿದ್ದರೆ ಖಂಡಿತ ಮಾತುಗಳು ಹೊರಡುತ್ತಿರಲಿಲ್ಲವೆಂದು ಅನ್ನಿಸುತ್ತದೆ. ಅಷ್ಟು ಆಳಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಆದರೆ ಕಥೆಯ ಕೊನೆಯು ಒಂದು ಚಂದದ ನಿರಾಳತೆಯನ್ನು ಕೊಡುತ್ತದೆ. ಆ ಕಥೆಯನ್ನು ಚಿತ್ತಾಲರಲ್ಲದೇ ಇನ್ಯಾರೂ ಬರೆಯಲು ಸಾಧ್ಯವಿಲ್ಲ ಮತ್ತು ಅದನ್ನು ಓದಲು ರಾಜ್ ಬಿ ಶೆಟ್ಟಿಯವರ ಬಿಟ್ಟು ಇನ್ಯಾರಿಗೂ ಓದಲು ಸಾಧ್ಯವಿಲ್ಲವೆನಿಸಿತ್ತು.

ನಾನು ಚಿತ್ತಾಲರ ಸಾಹಿತ್ಯ ಓದಿದ್ದು ಸೀಮಿತ. ಅಂದರೆ ಅವರ ಎರಡು ಕಾದಂಬರಿ ಮತ್ತೊಂದು ಕಥೆ. ಆದರೆ ಅವುಗಳ ಅನುಭವ ಮಾತ್ರ ವರ್ಣನಾತೀತ. ಯಾವಾಗ ಚಿತ್ತಾಲರು ಸೃಷ್ಟಿಸಿದ ಪಾತ್ರಗಳ ಬಗ್ಗೆ ಯೋಚನೆ ಬರುತ್ತದೆಯೋ ಆಗೆಲ್ಲಾ ಅವರೇ ಸೃಷ್ಟಿಸಿಕೊಟ್ಟ ಒಂದು ಬೇರೆಯದೇ ಪ್ರಪಂಚಕ್ಕೆ‌ ನನಗೆ ತಿಳಿಯದೇ ಹೋಗಿರುತ್ತೇನೆ.