ಎಲ್ಲಿಯವಳೆಂದು ಕೇಳಿದರೆ “ನಾನು ಆಸ್ಟ್ರೇಲಿಯದ ಆಂಗ್ಲೋ-ಸಾಕ್ಸನ್ ಬಿಳಿ ಹುಡುಗಿ, ನ್ಯಾಚುರಲ್ ಬ್ಲಾಂಡ್” ಎಂದು ಕಪ್ಪು ಕೂದಲು ತೋರಿಸಿ ಜೋರಾಗಿ ನಗುತ್ತಾಳೆ. ಅವಳ ಉತ್ತರ ತಮಾಷೆಯೋ, ಕುಹಕವೋ ಅರ್ಥವಾಗದೆ ಕೇಳಿದವರು ಪೆಚ್ಚಾಗುವಂತಿರುತ್ತದೆ. ಜತೆಗೆ ಕಣ್ಣು ಬೇರೆ ಮಿಟುಕಿಸುತ್ತಾಳೆ. ನಿಮಗೆ ಪರಿಚಯವಾಗಿ ಒಂದೆರಡು ಸಲ ಮಾತಾಡಿದರೆ ತಾನು ಪರ್ಷಿಯನ್ ಎಂದು ಗುಟ್ಟು ಬಿಟ್ಟುಕೊಟ್ಟವಳಂತೆ ವಿಚಿತ್ರವಾಗಿ ದಿಟ್ಟಿಸುತ್ತಾಳೆ. “ಪರ್ಷಿಯ ಅಂದರೆಲ್ಲಿ?” ಅಂತ ಕೇಳಿದರೆ, “ಅಷ್ಟು ಗೊತ್ತಾಗಲಿಲ್ಲವೆ ಬೆಪ್ಪೆ?” ಎಂಬಂತಷ್ಟೇ ನೋಡಿದಾಗ ಕೇಳಿದವರು ಸುಮ್ಮನಾಗುತ್ತಾರೆ. ಏನಾದರೂ ಹೇಳಿ ಥಟ್ಟನೆ ಬಾಯಿಗೆ ಕೈಹಿಡಿದು ಜೋರಾಗಿ ನಗುವುದು ಅವಳ ಸಹಜ ವರ್ತನೆ. ಹಾಗೆಯೇ ಅವಳ ನಗುವಿನ ಕಾರಣ ತಿಳಿಯದೆ ಅವಳ ಮುಂದೆ ನಿಂತವರು ಕಣ್ಣುಬಿಡುವುದೂ ಅಷ್ಟೇ ಸಹಜ. ಅವರು ಕಣ್ಕಕಣ್ಣು ಬಿಟ್ಟಾಗ “ಹೋಗಲಿ ಬಿಡಿ, ನಾನು ಹೀಗೆ” ಎಂದು ಭುಜಕುಣಿಸಿ ಸಮಾಧಾನ ಮಾಡುವಂತೆ ನೋಡುತ್ತಾಳೆ. “ತಾನೇ ಹುಚ್ಚುಚ್ಚು, ನಿಮ್ಮದೇನೂ ತಪ್ಪಿಲ್ಲ” ಅವಳ ಕಣ್ಣಲ್ಲಿ ಯಾವಾಗಲೂ ಕಾಣುವ ಭಾವ ಅನ್ನುವಂತಿರುತ್ತದೆ.
ಎತ್ತರಕ್ಕೆ ಬೆಳ್ಳಗಿರುವ, ಎದೆ ನಿಮರಿಸಿ ನಡೆವ, ಚುರುಕು ಕಣ್ಣಿನ ಹುಡುಗಿ ಅವಳು. ಸೆಕ್ರೆಟರಿ ಕೆಲಸದಲ್ಲಿ ತುಂಬಾ ಸಮರ್ಥೆ. ತನ್ನ ಹುಚ್ಚಾಟಗಳ ನಡುವೆ ಕೆಲಸವೆಲ್ಲಾ ಹೇಗೆ ಮಾಡುತ್ತಾಳೋ ಅದೊಂದು ದೊಡ್ಡ ಸೋಜಿಗವೇ. ಕೆಲಸದ ಎಲ್ಲ ಮಂದಿಯ, ಎಲ್ಲ ಸಂಗತಿಯ, ಎಲ್ಲ ಆಗುಹೋಗಿನ ಬಗ್ಗೆ ಸರಕ್ಕನೆ ಹೇಳಬಲ್ಲಳು. ಯಾರಾದರೂ ಕೆಲಸಕ್ಕಾಗಿ ಬಂದರೆ, ಒಂದಕ್ಕೆ ನಾಕು ಮಾತಾಡಿ, ಅವರನ್ನು ನಗಿಸಿ, ಪೆಚ್ಚಾಗಿಸಿ ಕಡೆಗೆ ಕೆಲಸವೂ ಮಾಡಿಕೊಟ್ಟು ಕಳಿಸುತ್ತಾಳೆ. ಅಂತಹವಳು ಒಂದೆರಡು ವಾರದ ಧಿಡೀರ್ ರಜ ಹಾಕಿ ಹೋದಳೆಂದರೆ ಕೇಳಬೇಕೆ? ವಾಪಸು ಬಂದ ಮೇಲೆ ವಾರವಿಡೀ ಅವಳ ರಜದ ಬಗ್ಗೆ ಎಲ್ಲರಿಗೂ ಎಗ್ಗಿಲ್ಲದ ಹರಿಕಥಾಶ್ರವಣ.
ಯಾವುದೋ ಶ್ರೀಮಂತನೊಬ್ಬನನ್ನು ಬೆನ್ನತ್ತಿ ಅಮೇರಿಕಕ್ಕೆ ಹೋಗಿದ್ದಳಂತೆ (ಇಲ್ಲಿ ಯಾವುದೋ ಹಳೆಯ ಹಾಡು ಗುನುಗುತ್ತಾಳೆ). ಅವನು ಸಿಡ್ನಿಗೆ ಬಂದಿದ್ದಾಗ ಭೇಟಿಯಾಗಿದ್ದಂತೆ. ಕಾಮನ್ ಫ್ರೆಂಡಿನ ಮೂಲಕ ಅವನಿಗೆ ತುಂಬಾ ದುಡ್ಡಿರುವುದು ತಿಳಿದುಬಂತಂತೆ. ಮದುವೆಯಾಗಿರದ ಅವನೊಡನೆ ಇ-ಮೇಲ್ ಗೆಳೆತನ ಇಟ್ಟುಕೊಂಡಿದ್ದು – ಅವನಿಗೆ ತುಸು ಬಿಡುವಿದೆ ಎಂದೊಡನೆ ಏನಾದರೂ ಸಂಬಂಧ ಕುದುರುತ್ತದೋ ನೋಡೋಣ ಎಂದು ಹೋಗಿದ್ದಳು. ಬಂದವಳೇ ಅವನ ಸಿರಿವಂತಿಕೆಯನ್ನು ಕುಬೇರನನ್ನು ಬಣ್ಣಿಸುವಂತೆ ಬಣ್ಣಿಸಿದಳು. ದೊಡ್ಡ ಮನೆ, ಸ್ವಿಮ್ಮಿಂಗ್ ಪೂಲ್, ಎರಡು ತುಂಬಾ ದುಬಾರಿ ಕಾರು, ದೊಡ್ಡ ಕೆಲಸ ಎಲ್ಲಾ ಪಟ್ಟಿ ಮಾಡಿದಳು (ಇಲ್ಲಿ ಮತ್ತೊಂದು ಹಾಡಿನ ಗುನುಗು). ಅಷ್ಟೇ ಅಲ್ಲ ತುಂಬಾ ಒಳ್ಳೆಯವನಂತೆ. ತುಂಬಾ ಚೆನ್ನಾಗಿ ನೋಡಿಕೊಂಡನಂತೆ. ಆದರೆ ಹೋಗಿ ಇಳಿದ ಒಂದೆರಡು ದಿನ ಕಳೆದದ್ದೇ ಅವನ ಬಾಯ್ಫ್ರೆಂಡ್ ಬಂದಿಳಿದನಂತೆ. ಇವನು ಗೇ ಎಂದು ಗೊತ್ತಾಗಿದ್ದೇ ತಾನು ಕಟ್ಟಿಕೊಂಡಿದ್ದ ಡ್ರೀಮ್ಸ್ ಎಲ್ಲಾ ಶ್ಯಾಟರ್ ಆಗಿಹೋಯಿತು ಎಂದು ಬಿದ್ದು ಬಿದ್ದು ನಕ್ಕಳು (ಮತ್ತೊಂದು ಹಾಡು). ತನ್ನ ಪೆದ್ದು ಬುದ್ಧಿಗೆ ಅವನು ಗೇ ಆಗಿರಬಹುದೂಂತ ಹೊಳೆಯಲೇ ಇಲ್ಲ ಎಂದು ಹಣೆಹಣೆ ಚಚ್ಚಿಕೊಂಡಳು. ಏನಾದರೂ ಕೆಲಸಕ್ಕೆ ಬಂದವರು ಇವಳ ಕತೆ ಕೇಳಿ ನಕ್ಕು ಹೊರಟರೆ “ನಿಮಗೆಲ್ಲಿ ಅರ್ಥವಾಗಬೇಕು ನನ್ನ ದುಃಖ” ಎಂದು ಮತ್ತೂ ಜೋರಾಗಿ ಕೂಗಿ ನಗುತ್ತಾಳೆ. ಇವೆಲ್ಲಾ ಇವಳಿಗೆ ಒಂದು ಆಟವೇ ಎಂದು ಎಂತಹವರ ಮನಸ್ಸಲ್ಲೂ ಪ್ರಶ್ನೆ ಏಳದೇ ಇರದು.
ತನ್ನ ಗೆಳತಿ ಜತೆ ಕೂತು ಒಂದು ನಾಟಕ ಬರೆದಿದ್ದಾಳಂತೆ. ಅದರಲ್ಲಿ ತಾನೇ ನಟಿಸಬೇಕು ಅಂತ ಹಟವಂತೆ. ಗೆಳತಿಯೇ ನಿರ್ದೇಶಕಿ – ಆಗಲ್ಲ ಅಂದದ್ದೇ ಹಾಳಾಗಿ ಹೋಗಿ ಅಂತ ಬಂದುಬಿಟ್ಟಳಂತೆ. ತನ್ನ ಯಾವುದೋ ಬೇನೆಗೆ ಆಕ್ಯುಪಂಚರ್ ಮಾಡಿಸಿಕೊಳ್ಳುತ್ತಿದ್ದೇನೆ. ಅದೂ ಡೈರಕ್ಟಾಗಿ ಯಾವುದೋ ಚೈನೀಸ್ ಹೆಂಗಸಿನ ಬಳಿ ಎಂದು ಬೀಗುತ್ತಾಳೆ. “ಅದಕ್ಕೆಲ್ಲಾ ಯಾಕೆ ದುಡ್ಡು ದಂಡ ಮಾಡ್ತೀಯ” ಅಂದರೆ. “ಅದು ಪರ್ಸನರ್ಲ್” ಎಂದು ಗಂಭೀರವಾಗಿ ಎಚ್ಚರಿಸುತ್ತಾಳೆ. ಆದರೆ ತುಸು ಸಲುಗೆ ಬೆಳೆದ ಕೂಡಲೆ ತನ್ನ ತಂದೆ ಲೆಬನೀಸ್, ತಾಯಿ ಆಸ್ಟ್ರೇಲಿಯನ್-ಇರಾನಿಯನ್ನಿಗೆ ಹುಟ್ಟಿದಾಕೆ ಎಂದು ಪ್ರವರ ಬಿಚ್ಚಿ “ಈಗ ಹೇಳಿ!” ಎನ್ನುವಂತೆ ನೋಡುತ್ತಾಳೆ.
ಯಾವುದೋ ಹುಡುಗಿಯ ಮಧ್ಯಸ್ತಿಕೆಯಲ್ಲಿ ಬ್ರಿಸ್ಬನ್ನಿನಿಂದ ಬರುವ ಒಬ್ಬ ಚೆಂದದ ಹುಡುಗನನ್ನು ಎದುರು ನೋಡುತ್ತಿದ್ದಳಂತೆ. ಬರುವ ಮುನ್ನ ಇವಳಿಗೆ ಫೋನ್ ಮಾಡಿ ಪರಿಚಯ ಮಾಡಿಕೊಂಡನಂತೆ. ಇವಳು ಫೋನಿನಲ್ಲೇ ತಾನು ತುಂಬಾ busy ಎಂಬಂತೆ ನಟಿಸಿದಳಂತೆ. ಬೆಳಗ್ಗೆ ಬೇಗ ಬಂದು ಬಾಸಿನ ಇ-ಮೇಲ್ ಚೆಕ್ ಮಾಡಿ, ಮುಖ್ಯವಾದ್ದನ್ನು ಗುರುತು ಹಾಕಿಡಬೇಕು. ಕಿಚನ್ನಲ್ಲಿ ಹಾಲಿದೆಯ, ಕಾಪಿಯರಿನಲ್ಲಿ ಪೇಪರಿದೆಯ ಎಂದೆಲ್ಲಾ ಚೆಕ್ ಮಾಡಬೇಕು. ಸ್ಟೇಷನರಿ ಕಬರ್ಡ್ ಚೆಕ್ ಮಾಡಬೇಕು. ಹೀಗೆ ಪಟ್ಟಿ ಮಾಡಿದಳಂತೆ. ಅತ್ತಲಿದ್ದವನು ಇವಳ ಹತ್ತಾರು ನಿಮಷದ ಕಷ್ಟಕೋಟಲೆಯ ಪುರಾಣ ಕೇಳುತ್ತಾ ಸುಮ್ಮನಿದ್ದನಂತೆ. ಅವನು ಫುಲ್ ಇಂಪ್ರೆಸ್ ಆಗಿ ಮೂಕವಿಸ್ಮಿತನಾಗಿರಬೇಕು. ಆದರೆ ಅವನ ಮಾತೇ ಇಲ್ಲದ್ದು ಗಮನಕ್ಕೆ ಬಂದು “ನೀನು ಏನು ಮಾಡುತ್ತೀಯ? ಆರಾಮಾಗಿದ್ದೀಯಲ್ಲ? busy ಇಲ್ಲವ?” ಎಂದು ಕೇಳಿದಳಂತೆ. ಅವನು “ಹೌದು ನಾನೂ busy. ಈಗ ತಾನೆ ಆಪರೇಷನ್ ಮುಗಿಸಿ ಮನೆಗೆ ಬಂದೆ” ಅಂದನಂತೆ. ಡಾಕ್ಟರ, ನರ್ಸ ಎಂದು ಕೇಳಿದಕ್ಕೆ “ನಾನು ನ್ಯೂರೋ ಸರ್ಜನ್” ಅಂದನಂತೆ. ಅಷ್ಟು ಹೇಳಿ ತನ್ನ ನಟನೆಯ ಬಗ್ಗೆ ತಾನೇ ಬಿದ್ದು ಬಿದ್ದು ನಗುತ್ತಾಳೆ. ನಂತರ ಗಂಭೀರವಾಗಿ “ನ್ಯೂರೋ ಸರ್ಜನ್ಗೆ ತುಂಬಾ ಸಂಬಳ ಅಲ್ಲವ? ನಾನೂ ಮಾತಾಡುತ್ತಲೇ ಗೂಗಲ್ ಮಾಡಿದೆ. ನೂರೈವತ್ತು ಇನ್ನೂರು ಸಾವಿರ ಡಾಲರಿಗೆ ಮೋಸವಿಲ್ಲ. ಆದರೆ ಒಂದು ಅನುಮಾನ – ಅವನಿಗೆ ಯಾಕೆ ಗರ್ಲ್ ಫ್ರೆಂಡಿಲ್ಲ? ಏನೋ ಕೊರತೆ ಇರಬೇಕು. ಹುಷಾರಾಗಿರಬೇಕು!” ಎಂದು ಪಿಸುನುಡಿಯುತ್ತಾಳೆ.
ಅವಳ ಹುಡುಗಾಟ, ಎಚ್ಚರ, ಚುರುಕು, ತಮಾಷೆ ಎಲ್ಲದರ ನಡುವೆ ನಿಜವಾದ ಅವಳು ಬಚ್ಚಿಟ್ಟುಕೊಂಡಂತೆ ಅನಿಸುತ್ತದೆ. ಬೇಕಂತಲೇ ಕಣ್ಣಾಮುಚ್ಚೆ ಆಡುತ್ತಾಳೆ ಅನಿಸುತ್ತದೆ. ಯಾಕಿರಬಹುದೆಂದು ಹೇಳಲಾರೆ. ನನಗೂ ನಿಮ್ಮಷ್ಟೇ ಗೊತ್ತು.
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.