ಚೀನಾದಲ್ಲಿ ಬಿಂಗ್ ಲಾಂಗ್ ಹುಡುಕುತ್ತಾ ಕ್ಷಿಯಾಂಗ್ಟನ್ ತಲುಪಿದ್ದೆ. ಆದರೆ ಅದು ಬಿಂಗ್‌ಲಾಂಗ್ ಮಾರಾಟದ ಪ್ರದೇಶ ಮಾತ್ರವಾಗಿತ್ತು. ಯಾರನ್ನು ಕೇಳಿದರೂ ‘ಅಡಿಕೆ ಬೆಳೆಯುವ ಪ್ರದೇಶ ಹೈನಾನ್; ಹೆಚ್ಚಿನ ಮಾಹಿತಿಗೆ ನೀವು ಅಲ್ಲಿಗೇ ಹೋಗಬೇಕು’ ಎನ್ನುತ್ತಿದ್ದರು. ಹಾಗಾಗಿ ಚೀನಾದಲ್ಲಿ ಅಡಿಕೆಯ ಮಾಹಿತಿ ಸಂಗ್ರಹದ ಸಾಹಸ ಅರ್ಧದಲ್ಲಿಯೇ ನಿಂತಿತ್ತು. ಪರಿಸ್ಥಿತಿ ಹೀಗಿದ್ದಾಗ ಅಚಾನಕ್ಕಾಗಿ ಸಿಕ್ಕ ಅವಕಾಶವನ್ನು ತಪ್ಪಿಸಿಕೊಳ್ಳುವುದಿದೆಯೇ?
ಬಾಲಚಂದ್ರ ಸಾಯಿಮನೆ ಬಿಂಗ್‌ಲಾಂಗ್ ಮತ್ತು ಲಂಬನಾಗ್’ ಕೃಷಿ ಪ್ರವಾಸ ಕಥನಗಳ ಪುಸ್ತಕದ ಒಂದು ಲೇಖನ ನಿಮ್ಮ ಓದಿಗೆ
ನಗರವನ್ನು ಬಿಟ್ಟು ಹಳ್ಳಿಗೆ ಮರಳಿ ಹೋಗಬಯಸುವವರಿಗೆ ಚೀನಾದಲ್ಲಿ ವಿಶೇಷ ಯೋಜನೆಗಳಿವೆ. ರಿಯಾಯತಿ ದರದಲ್ಲಿ ಸರಕಾರಿ ಜಮೀನು ಸಿಗುತ್ತದೆ. ಹೆಚ್ಚುವರಿ ಸವಲತ್ತು ಒದಗಿಸಲು ಅಧಿಕಾರಿಗಳು ತುದಿಗಾಲಲ್ಲಿ ನಿಂತಿರುತ್ತಾರೆ.
ಕಠ್ಮಾಂಡುವಿನಲ್ಲಿ ಸಹಪಾಠಿಗಳ ಜೊತೆಗಿದ್ದೆ. ಹರಟೆಯ ಮಧ್ಯೆ ಚೀನೀ ಹುಡುಗಿ ಹೆ ರಾನ್ ಗಾವೊ ಒಂದು ಸೂಚನೆ ಕೊಟ್ಟಳು:
“ನಾನು ಸದ್ಯದಲ್ಲಿ ಚೀನಾದ ಹೈನಾನ್ ದ್ವೀಪದಲ್ಲಿ ಒಂದು ಪ್ರಾಜೆಕ್ಟ್ ಪ್ರಾರಂಭಿಸುತ್ತಿದ್ದೇನೆ. ಯಾರಾದರೂ ಸಹಾಯ ಮಾಡೋದಿದ್ರೆ ಮಾಡಿ” ಅಂದಳು. ಹೈನಾನ್ ಅಂದಾಕ್ಷಣ ಮನದಲ್ಲಿ ಮಿಂಚು. ಚೀನಾದ ಆ ದ್ವೀಪಕ್ಕೆ ಹೋಗುವುದು ಎಷ್ಟೊಂದು ವರ್ಷಗಳ ಕನಸು!
ಇನ್ನಾರಾದಾರೂ ‘ಹೂಂ’ ಅನ್ನೋ ಮೊದಲು ಅವಕಾಶ ಗಟ್ಟಿ ಮಾಡಿಕೋ ಎಂದಿತು ಒಳಮನಸ್ಸು.
“ನಾನಿದ್ದೇನಲ್ಲಾ” ಎಂದುತ್ತರಿಸಿದೆ.
ಸೆಕೆಂಡುಗಳೊಳಗೆ ತನಗೊಬ್ಬ ಸಹಾಯಕ ಸಿಗುವುದು ಹೆ ರಾನ್ ಗೂ ಕಲ್ಪನೆ ಇರಲಿಲ್ಲ.
“ನಿಜವಾಗ್ಲೂ? ಎಷ್ಟು ದಿನ?”
“ಒಂದು ಇಪ್ಪತ್ತು ದಿವಸ!”
ಅಷ್ಟೇ ಮಾತನಾಡಿದ್ದು. ಟೀ ಮುಗಿಯುವದರೊಳಗೆ ಚೀನಾ ಪ್ರವಾಸದ ಟಿಕೆಟ್ ನನ್ನ ಮಿಂಚಂಚೆಗೆ ಬಂದಿತ್ತು. ಈ ಬಾರಿ ಅತ್ಯಾಶ್ಚರ್ಯ ಪಡುವ ಸರದಿ ನನ್ನದಾಗಿತ್ತು! ಹೆ ರಾನಳದು ಮಿಂಚಿನ ವೇಗ!
ಹೀಗೆ ಬದುಕಿನಲ್ಲೊಂದು ಮಹತ್ತಾದ ಅವಕಾಶದ ಬಾಗಿಲು ತೆರೆದದ್ದು ನಾವು ನೇಪಾಳದ ಕಠ್ಮಾಂಡುವಿನಲ್ಲಿದ್ದಾಗ. ಜರ್ಮನ್ ವಿಶ್ವವಿದ್ಯಾಲಯದ ಸಹಪಾಠಿಗಳೆಲ್ಲ ಅಲ್ಲಿ ಸೇರಿದ್ದೆವು. ಒಂದೆರಡಲ್ಲ, ಇಪ್ಪತ್ತೆರಡು ದೇಶದ ಸ್ನೇಹಿತರು ತುಂಬಾ ವರ್ಷದ ನಂತರ ಒಗ್ಗೂಡಿದರೆ ಹೇಗಿರುತ್ತದೆ ಗೊತ್ತಲ್ಲಾ? ಅದೇ ಹಳೇ ಸುದ್ದಿಗಳು, ಹಳೇ ಜೋಕುಗಳ ಮರುಮೆಲುಕು. ಮಾತಿನ ಮಧ್ಯೆ ಅದೇನೋ ಹೇಳ್ತಾರಲ್ಲಾ, ‘ಸುವರ್ಣಾವಕಾಶ ಬಿದ್ದು ಸಿಕ್ಕಿದ್ದು’ ಅಂತ, ಅದುವೇ ಘಟಿಸಿತ್ತು!
ಸುತ್ತ ಇದ್ದ ಸ್ನೇಹಿತರು ಇನ್ನೂ ‘ವಿದೇಶ ಪ್ರವಾಸ ಇಷ್ಟು ಬೇಗ ನಿರ್ಣಯ ಮಾಡೋಕಾಗತ್ತಾ’ ಅಂತ ಯೋಚಿಸ್ತಾ ಇದ್ರು. ‘ನನಗೆ ಒಂದು ಲಿಪ್ ಸ್ಟಿಕ್ ಖರೀದಿಸಲೂ ಇನ್ನೂ ಹೆಚ್ಚು ಸಮಯ ಬೇಕು’ ಅಂತ ಇನ್ನೊಬ್ಬಳು ಚೀನಾದ ಸ್ನೇಹಿತೆ ಹೈಯಾನ್ ಉದ್ಗರಿಸಿದಳು.
ಅಷ್ಟು ಬೇಗ ಚೀನಾ ಪ್ರವಾಸಕ್ಕೆ ನಿರ್ಣಯಿಸಲು ಕಾರಣ ಏನು ಗೊತ್ತೇ? ನನ್ನ ಹಿಂದಿನ ಚೀನಾ ಪ್ರವಾಸದಲ್ಲಿ ಹೈನಾನ್ ದ್ವೀಪ ನೋಡಲೇಬೇಕೆಂಬ ಕನಸು ಹುಟ್ಟಿತ್ತು. ಅದು ಹಾಗೆಯೇ ಮನದ ಮೂಲೆಯಲ್ಲಿ ಉಳಿದಿತ್ತು.
ಚೀನಾದಲ್ಲಿ ಬಿಂಗ್ ಲಾಂಗ್ ಹುಡುಕುತ್ತಾ ಕ್ಷಿಯಾಂಗ್ಟನ್ ತಲುಪಿದ್ದೆ. ಆದರೆ ಅದು ಬಿಂಗ್‌ಲಾಂಗ್ ಮಾರಾಟದ ಪ್ರದೇಶ ಮಾತ್ರವಾಗಿತ್ತು. ಯಾರನ್ನು ಕೇಳಿದರೂ ‘ಅಡಿಕೆ ಬೆಳೆಯುವ ಪ್ರದೇಶ ಹೈನಾನ್; ಹೆಚ್ಚಿನ ಮಾಹಿತಿಗೆ ನೀವು ಅಲ್ಲಿಗೇ ಹೋಗಬೇಕು’ ಎನ್ನುತ್ತಿದ್ದರು. ಹಾಗಾಗಿ ಚೀನಾದಲ್ಲಿ ಅಡಿಕೆಯ ಮಾಹಿತಿ ಸಂಗ್ರಹದ ಸಾಹಸ ಅರ್ಧದಲ್ಲಿಯೇ ನಿಂತಿತ್ತು. ಪರಿಸ್ಥಿತಿ ಹೀಗಿದ್ದಾಗ ಅಚಾನಕ್ಕಾಗಿ ಸಿಕ್ಕ ಅವಕಾಶವನ್ನು ತಪ್ಪಿಸಿಕೊಳ್ಳುವುದಿದೆಯೇ?
ನನ್ನ ಈ ಗೆಳತಿ, ಹೈನಾನ್ನಲ್ಲಿ ಎಲ್ಲಿಗೆ ಹೋಗುತ್ತಿದ್ದಾಳೆ, ನಾನು ಮಾಡಬೇಕಾದ ಕೆಲಸವೇನು ಇತ್ಯಾದಿ ವಿಚಾರಗಳನ್ನು ಏನೂ ಹೇಳಿರಲಿಲ್ಲ. ‘ಏನು ಕೆಲಸ?’ ಅಂತ ಸ್ವಲ್ಪ ಕೆದಕಿದ್ದೆ. ‘ಅಲ್ಲೊಬ್ಬ ಹೋಮ್ ರಿಟರ್ನ್ಡ್ ಇದ್ದಾನೆ. ಅವನಿಗೆ ಸಹಾಯ ಮಾಡಬೇಕು’ ಎಂದು ಅಷ್ಟೇ ಹೇಳಿದ್ದಳು. ‘ಹೋಮ್ ರಿಟರ್ನ್ಡ್’ ಅನ್ನೋ ಶಬ್ದ ನನಗಂತೂ ಹೊಸದು. ಅದೇ ಮೊದಲ ಸಲ ಕೇಳಿದ್ದೆ. ಹಾಗಂದರೇನು ಅಂತಲೂ ಗೊತ್ತಿರಲಿಲ್ಲ. ಬಹುಶಃ ಅದು ಒಂದು ಹುದ್ದೆ ಇರಬೇಕು ಅಂದುಕೊಂಡಿದ್ದೆ.
ವಾರದಲ್ಲಿ ವೀಸಾ ಸಿಕ್ಕಿತ್ತು .ಮತ್ತೊಂದು ತಿಂಗಳಿನಲ್ಲಿ ನಾನು ಚೀನಾದ ಹೈನಾನ್ ದ್ವೀಪದ ರಾಜಧಾನಿ ಹೈಕೋವುನಲ್ಲಿ ವಿಮಾನದಿಂದಿಳಿದಿದ್ದೆ.
ಸ್ವಾಗತಕ್ಕೆ ಹೇ ರಾನ್ ಬಂದಿದ್ದಳು. ಪಕ್ಕದಲ್ಲಿ ಇನ್ನೊಬ್ಬ ಯುವಕನೂ ಇದ್ದ.
“ಇವನ ಹೆಸರು ಹು ಶಿಜೆ. ಫನ್ ಕ್ಷಿಯಾಂಗ್, ಅಂದರೆ ಹೋಮ್ ರಿಟರ್ನ್ಡ್, ನಿನ್ನ ಹಾಗೆ” ಅಂತ ಸೇರಿಸಿದಳು.
ಮುಂದಿನ ಇಪ್ಪತ್ತು ದಿನ ನಾನು ಹೂ ಶಿಜೆಯ ಊರಿನಲ್ಲೇ ಇದ್ದೆ.
ಊರು ಬದಲಿಸಿದ ಹೂ ಶಿ ಜೆ
ಇಪ್ಪತ್ತು ವರ್ಷದ ಹಿಂದೆ ಒಂದು ದಿನ, ಇಡೀ ಊರು ಸಂಭ್ರಮದಿಂದ ಒಂದಾಗಿತ್ತು. ಅದೊಂದು ಬೀಳ್ಕೊಡುಗೆ ಸಮಾರಂಭ. ಊರಿನ ಎಲ್ಲ ಜನ ಸೇರಿ ಹಣ ಸಂಗ್ರಹಿಸಿ ಕೊಟ್ಟಿದ್ದರು.“ಅಂದು ಮದುವೆ ಸಂಭ್ರಮದ ಹಾಗೆ ಇತ್ತು”, ನೆನೆಯುತ್ತಾರೆ, ಊರಿನ ಹಿರಿಯ ಹೂ ಜೊ. ಆದರೆ ಬೀಳ್ಕೊಡುಗೆ ಮಾಡಿದ್ದು ಹುಡುಗಿಗೆ ಅಲ್ಲ, ಹುಡುಗನಿಗೆ.
ಆತ, ಹೂ ಶಿ ಜೆ, ಶಾಂಘೈ ಗೆ ಹೊರಟಿದ್ದ. ಕಂಪ್ಯೂಟರ್ ವಿಜ್ಞಾನದಲ್ಲಿ ಶಿಕ್ಷಣ ಪಡೆಯಲು ಮೊದಲ ಬಾರಿ ಊರಿನ ಯುವಕ ಹೊರಟು ನಿಂತಾಗ ಊರಿಗೆ ಊರೇ ಸಂಭ್ರಮಿಸಿತ್ತು.
ಚೀನಾ ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಶಿಕ್ಷಣ, ಪದವಿ ಪಡೆದ ನಂತರ ಆ ಯುವಕ ಶಾಂಘೈನಲ್ಲಿ ಉದ್ಯೋಗ ಗಳಿಸಿದ. ಆದರೆ, ಊರನ್ನ, ಊರ ಜನರನ್ನ ಮರೆಯಲಿಲ್ಲ. “ಆವತ್ತೇ ನಾನು ಮಾತು ಕೊಟ್ಟಿದ್ದೆ, ಊರು ಮರೆಯುವುದಿಲ್ಲ”, ಹೂ ಶಿಜೆ ನೆನಪಿಸಿಕೊಳ್ಳುತ್ತಾನೆ.
ಮರೆಯಲಿಲ್ಲ ಕೂಡ. 2003ರಲ್ಲಿ ಶಾಂಘೈ ನಲ್ಲಿ ಒಂದು ವಿದ್ಯಾರ್ಥಿ ಒಕ್ಕೂಟ ಮಾಡಿದರು. ‘ ಹಳ್ಳಿಗೆ ಹೋಗೋಣ ಬನ್ನಿ’ ಎಂದು. ಒಂದಷ್ಟು ಸಹಪಾಠಿಗಳೊಂದಿಗೆ ಪ್ರತಿ ವರ್ಷ ಊರಿಗೆ ಬಂದು, ಕೆಲಸ ಮಾಡಿ ಹೋಗುತ್ತಿದ್ದರು. ಕೆಲಸ ಅಂದರೆ ಊರಿನ ಬೀದಿ ಸ್ವಚ್ಛಗೊಳಿಸುವುದು, ವೃದ್ಧರಿಗೆ ಆರೋಗ್ಯ ಶಿಬಿರ, ಹೀಗೆ ಸಣ್ಣ ಪುಟ್ಟ ಕೆಲಸ ಎಂದು ನೆನಪಿಸಿಕೊಳ್ಳುತ್ತಾರೆ ಹೂ. ಮೊದಮೊದಲು, ಊರಿನಲ್ಲಿ ಎಲ್ಲರನ್ನೂ ಕರೆದು ಒಂದು ಕಾರ್ಯಕ್ರಮ ಮಾಡುವುದೇ ದೊಡ್ಡ ಕೆಲಸವಾಗಿತ್ತು. ಊರಿನ ಎಲ್ಲ ಕುಟುಂಬದ ಹೆಸರುಗಳೂ ಹೂ ಎಂದೇ, – ಶಿರಸಿಯ ಹೆಗಡೆ, ಭಟ್ಟರ ಹಾಗೆ. ಎಲ್ಲರನ್ನೂ ಎಲ್ಲ ಕಾಲಕ್ರಮದಲ್ಲಿ ಕೂಡಿಸಿ, ಊರಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವತ್ತ ಸ್ವಯಂಸೇವೆ ವಿಸ್ತರಿಸಿತು. ಸರಕಾರಿ ಅಧಿಕಾರಿಗಳನ್ನು ಭೇಟಿಮಾಡಿ ಹೊಸ ಯೋಜನೆಗಳನ್ನು ಮಂಜೂರಿ ಮಾಡಿಸಿ ಕೊಡಲು ಆರಂಭಿಸಿದರು. ನಗರದ ಒಂದಷ್ಟು ಹಾಡುಗಾರರು, ಸಿನಿಮಾದವರು ಮೊದಲಾದವರನ್ನು ಕರೆಸಿ ಕಾರ್ಯಕ್ರಮ ಮಾಡಲು ಆರಂಭವಾಯಿತು.ಇವೆಲ್ಲವುಗಳ ಮುಖ್ಯ ಉದ್ದೇಶ ಊರು ಬಿಟ್ಟು ನಗರ ಸೇರಿದ ಎಲ್ಲರನ್ನೂ ಒಂದೆಡೆ ಸೇರಿಸುವುದೇ ಆಗಿತ್ತು.
ಹೀಗೆ ಒಂದು ಕಡೆ ಊರನ್ನು ಸದೃಢಗೊಳಿಸುವ, ಹುಟ್ಟೂರಿನ ಅಭಿಮಾನ ಹೆಚ್ಚಿಸುವ ಏಕವ್ಯಕ್ತಿ ಯತ್ನ ಮುಂದುವರಿದಿತ್ತು. ಇನ್ನೊಂದೆಡೆ ಪ್ರತಿ ವರ್ಷ ಊರಿಗೆ ಬಂದಾಗ ಊರು ಮತ್ತಷ್ಟು ಖಾಲಿಯಾಗಿರುವುದು ಕಂಡುಬರುತ್ತಿತ್ತು. ಊರಿನ ಅರ್ಧದಷ್ಟು ಮನೆಗಳಲ್ಲಿ ಜನರೇ ಇರಲಿಲ್ಲ. ಮನೆಯ ಚಾವಣಿಗಳು ಕುಸಿದು ಬಿದ್ದು ನಿರಾಸೆಯ, ಅವನತಿಯ, ದುಃಖದ ಪ್ರತೀಕಗಳಾಗಿ ಉಳಿದಿದ್ದುವು.
ಹೂ ಶಿ ಜೆ 2007 ರಿಂದ 2015 ರವರೆಗೆ ಪ್ರತಿ ವರ್ಷ , ಸಮಯವಿದ್ದಾಗಲೆಲ್ಲಾ ಊರಿಗೆ ಸ್ನೇಹಿತರೊಂದಿಗೆ ಬಂದು ಕೆಲಸ ಮಾಡಿ ಹೋಗುತ್ತಿದ್ದರು. ಒಂದಷ್ಟು ದಿನ ಹಳ್ಳಿಯಲ್ಲಿದ್ದು, ಬೀದಿ ಸ್ವಚ್ಛಗೊಳಿಸುವುದು, ಹಳ್ಳಿಯ ಜನರ ಕೃಷಿ ಸಂಬಂಧಿ ಸಮಸ್ಯೆಗಳನ್ನು ಮನದಲ್ಲಿ ಹೊತ್ತುಕೊಂಡು ವಿಜ್ಞಾನಿಗಳನ್ನು ಸಂಪರ್ಕಿಸುವುದು. ಅಲ್ಲಿಂದ ಪರಿಹಾರೋಪಾಯ ತಿಳಿದು, ಆ ಬಗ್ಗೆ ವಿವರವಾದ ಮಾಹಿತಿ ಸಂಗ್ರಹಿಸಿ ಊರಿಗೆ ತರುವುದು. ಈ ರೀತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕೊಡಿಸುವುದು. ಎಲ್ಲವೂ ಊರಿಗೆ ಉಪಕಾರವಾಗುವ ಕೆಲಸಗಳೇ. ಆದರೆ, ಇವ್ಯಾವುವೂ ಹೆಚ್ಚು ದಿನ ಉಳಿಯುವ ಕೆಲಸವಾಗಿರಲಿಲ್ಲ.
ಈ ಮಧ್ಯೆ 2010ರಲ್ಲಿ ಹೈನಾನ್ ನ ವಿಶೇಷ ಯುವಕ ಪ್ರಶಸ್ತಿ, 2012ರಲ್ಲಿ ಚೀನಾದ ಬ್ರಿಲಿಯಂಟ್ ಸ್ವಯಂಸೇವಕ ಪ್ರಶಸ್ತಿ – ಇವರನ್ನು ಅರಸಿಕೊಂಡು ಬಂತು.
ಏನು ಅಂಗೀಕಾರ ಸಿಕ್ಕರೇನು, ಹೂ ಶಿ ಜೆಗೆ ನೆಮ್ಮದಿಯೇ ಮೂಡಲಿಲ್ಲ. ಪ್ರತಿ ಬಾರಿ ಬಂದಾಗಲೂ ಊರು ಮತ್ತಷ್ಟು ಖಾಲಿಯಾಗಿರುತ್ತಿತ್ತು. ಊರಿನ ಅರ್ಧ ಭಾಗದಷ್ಟು ಮನೆಗಳು ಖಾಲಿಯಾಗಿದ್ದವು. ‘ಇನ್ನು ತಡ ಮಾಡುವುದು ಸರಿಯಲ್ಲ‘ ಎಂದವರೇ, 2015ರಲ್ಲಿ, ತಾನು ಮದುವೆಯಾದ ವರ್ಷವೇ ಊರಿಗೆ ಮರಳಲು ನಿರ್ಧರಿಸಿದರು.
ಮರಳುವುದು ಸುಲಭದ ಕೆಲಸವಾಗಿರಲಿಲ್ಲ. ಆರ್ಥಿಕವಾಗಿಯೂ ಅದು ಎಷ್ಟು ದೊಡ್ಡ ರಿಸ್ಕ್ ಆಗಿತ್ತು ಗೊತ್ತೇ? ತಿಂಗಳಿಗೆ 12000 ಯುವಾನ್ (ಅಂದಾಜು ಒಂದು ಲಕ್ಷದ ಹತ್ತು ಸಾವಿರ ರೂಪಾಯಿ) ಆದಾಯಕ್ಕೆ ತಿಲಾಂಜಲಿ ಇತ್ತು ಊರಿಗೆ ಟಿಕೆಟ್ ತೆಗೆಯಬೇಕಿತ್ತು!
ಶಾಂಘೈನಿಂದ ಹೂ ಶಿ ಜೆ ಹೈನಾನ್ ದ್ವೀಪಕ್ಕೆ ಮರಳಿದರು. ಆದರೆ ಹೆಂಡತಿ ಒಪ್ಪಬೇಕಲ್ಲ! ಆಗಷ್ಟೇ ಮದುವೆ ಆಗಿದ್ದು ಬೇರೆ! ಆಕೆ ಹೈಕೋವು ನಗರದಲ್ಲಿ ಒಂದು ಉದ್ಯೋಗ ಆರಂಭಿಸಿದರು. “ನಾವು ಮೊದಲೇ ನಿರ್ಧರಿಸಿದ್ದೆವು.ಒಂದಾದರೂ ನಿರಂತರ ಆದಾಯದ ಉದ್ಯೋಗ ಇರಲಿ ಎಂದು. ಆ ಕಾರಣಕ್ಕೇ ನಾನು ಈ ಉದ್ಯೋಗ ಪ್ರಾರಂಭಿಸಿದ್ದು” ನೆನೆಯುತ್ತಾರೆ ಪತ್ನಿ ಯೂ ಲಿಂಗ್.
ಚೀನಾ ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಶಿಕ್ಷಣ, ಪದವಿ ಪಡೆದ ನಂತರ ಆ ಯುವಕ ಶಾಂಘೈನಲ್ಲಿ ಉದ್ಯೋಗ ಗಳಿಸಿದ. ಆದರೆ, ಊರನ್ನ, ಊರ ಜನರನ್ನ ಮರೆಯಲಿಲ್ಲ. “ಆವತ್ತೇ ನಾನು ಮಾತು ಕೊಟ್ಟಿದ್ದೆ, ಊರು ಮರೆಯುವುದಿಲ್ಲ”, ಹೂ ಶಿಜೆ ನೆನಪಿಸಿಕೊಳ್ಳುತ್ತಾನೆ.
ಸಮೀಪದ ಡಿಂಗಾನ್ ನಗರದಲ್ಲಿ ನೆಲೆಸಿ, ಅಲ್ಲಿಂದಲೇ ಊರು ಕಟ್ಟುವ ಕೆಲಸ ಪ್ರಾರಂಭಿಸಿದರು.
ಊರಿಗೆ ಬಂದಾಗ ಆದಾಯದ ಮೂಲ ಹುಡುಕಬೇಕಾಗಿತ್ತು. ಸರಕಾರದ ಸೌಲಭ್ಯಗಳೇನೋ ಇದ್ದವು. ಆದರೆ ಇವುಗಳನ್ನು ಪಡೆಯಲು ಒಂದಷ್ಟು ಅಡೆತಡೆಗಳೂ ಇದ್ದವು. ಆ ಭಾಗದಲ್ಲಿ ಒಬ್ಬರು ಪಾರ್ಟಿ ಲೀಡರ್ (ಇರೋದು ಕಮ್ಯುನಿಸ್ಟ್ ಪಾರ್ಟಿ ಮಾತ್ರ. ಅದೂ ಜನರಿಂದ ಆಯ್ಕೆ ಆದವರಲ್ಲ. ಸರಕಾರವೇ ಆಯ್ಕೆ ಮಾಡಿದ ಪ್ರತಿನಿಧಿ) ಇದ್ದರು. ಯಾವುದೇ ವಿಚಾರದಲ್ಲೂ ಅವರದೇ ಅಂತಿಮ ತೀರ್ಮಾನ.
ಪ್ರತಿ ಹಳ್ಳಿಯ ವಿಲೇಜ್ ಕಾರ್ಪೊರೇಶನ್ನೇ ಜಮೀನಿನ ಒಡೆಯ. ಮನೆಯ ಜಮೀನು ಮಾತ್ರ ಹಿರಿಯರಿಂದ ಮಕ್ಕಳಿಗೆ ವರ್ಗಾವಣೆ. ಕೃಷಿ ಜಮೀನನ್ನು ಸರಕಾರದಿಂದ ಲೀಸಿಗೆ ಪಡೆಯಬೇಕು.ಒಮ್ಮೆ ಪಡೆದ ಲೀಸ್ 80 ವರ್ಷದವರೆಗೂ ಬಳಸಬಹುದು.ಆದರೆ ಕೃಷಿ ಮಾಡದೇ ಇದ್ದರೆ ಸರಕಾರಕ್ಕೆ ಹಿಂದಿರುಗಿಸಬೇಕು. ಇವರ ತಂದೆಯವರ ಸ್ವಲ್ಪ ಜಮೀನಿನಲ್ಲಿ ಅಡಿಕೆ ಕೃಷಿ ಇತ್ತು. ಆದರೆ ಈತ ಎಂದೂ ಕೆಲಸ ಮಾಡಿ ಗೊತ್ತಿದ್ದವನಲ್ಲ. ನನ್ನನ್ನೂ ಸೇರಿ, ನಮ್ಮ ಬಹುಪಾಲು ಅಡಿಕೆ ಕೃಷಿಕರ ಮಕ್ಕಳ ಹಾಗೆ!
ತಿರುಗಿ ಊರಿಗೆ ಬಂದಾಗ ಏನು ಮಾಡಬೇಕೆಂಬ ಗೊಂದಲ ಹಾಗೇ ಇತ್ತು. ವಿಲೇಜ್ ಕಾರ್ಪೊರೇಶನ್ ಏನೋ ಒಂಬತ್ತು ಮೋವ್ (ಅಂದರೆ, ಒಂದೂವರೆ ಎಕ್ರೆ) ಜಮೀನನ್ನು ಉಚಿತವಾಗಿ ನೀಡಲು ತಯಾರಾಯಿತು. ಅಲ್ಲೇನು ಬೆಳೆಯ ಬೇಕು? ಅದನ್ನು ಹೇಗೆ ಉಪಯೋಗಿಸಬೇಕು ಎನ್ನುವುದರ ಬಗ್ಗೆ ಇನಿತೂ ಗೊತ್ತಿರಲಿಲ್ಲ. ‘ಕೃಷಿ ಮಾಡಿದರೆಏನೇನೂ ಲಾಭವಿಲ್ಲ’ ಎಂಬ ಬಿಟ್ಟಿ ಉಪದೇಶ ಕೊಡುವವರು ಸುತ್ತಲೂ ಇದ್ದರು ನಮ್ಮೂರಿನಂತೆ!
ಪಾರ್ಟಿ ಸೆಕ್ರೆಟರಿ ಹೇಳಿದರು: “ಹಳ್ಳಿಯ ಬಡತನ ಕಡಿಮೆ ಮಾಡಲು ಯಾವುದಾದರೂ ಬಿಸಿನೆಸ್ ಪ್ಲಾನ್ ಮಾಡಿ ಕೊಡು. ಸರಕಾರದಿಂದ ಹಣ ಕೊಡಿಸುತ್ತೇನೆ” ಎಂದು.
ಆಗ ಹೊಳೆದದ್ದೇ ನಗರದ ಜನತೆಗೆ ಕೃಷಿ ಅನುಭವ ನೀಡುವ ಕೇಂದ್ರ ಮಾಡುವ ಯೋಚನೆ. ಇದರ ಮೊದಲ ಹೆಜ್ಜೆಯಾಗಿ ‘ಸಿಟಾನ್ ನೇಚರ್ ಸ್ಕೂಲ್’ಎನ್ನುವ ಒಂದು ಸಂಸ್ಥೆಯನ್ನೂ ಹೂ ಶಿ ಜೆ ಹುಟ್ಟುಹಾಕಿದರು. ಸರಕಾರ, ಅದಕ್ಕೆ ಬೇಕಾದ ಜಮೀನನ್ನು ನೀಡಿತು. ಹಾಗೆ ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನೂ ಕಳುಹಿಸಿತು. ಊರಿನ ಹಿರಿಯರು, ಸಂಶೋಧನಾ ಕೇಂದ್ರದ ವಿಜ್ಞಾನಿಗಳು, ಕೃಷಿ ಅಧಿಕಾರಿಗಳು, ಪಾರ್ಟಿ ಸೆಕ್ರೆಟರಿ ಎಲ್ಲ ಸೇರಿ ಹಳ್ಳಿಗೆ ಹಣ ಹಿಂತಿರುಗಿ ಬರುವಂತಾಗಲು ಹಲವಾರು ಕಾರ್ಯಯೋಜನೆ ಸಿದ್ಧಪಡಿಸಿದರು. ಹಳ್ಳಿಯಲ್ಲಿದ್ದ ಎರಡು ಕೆರೆಗಳ ಪುನರುಜ್ಜೀವನವೇ ಇವರು ಮಾಡಿದ ಮೊಟ್ಟ ಮೊದಲ ಕೆಲಸ.
ಕಾಡಿನ ಮಧ್ಯೆ ಇದ್ದ ಜಮೀನಿಗೆ ಸರಕಾರವೇ ಸಿಮೆಂಟ್ ರಸ್ತೆ ನಿರ್ಮಿಸಿಕೊಟ್ಟಿತು. ಹೋಮ್ ರಿಟರ್ನ್ಡ್ ಆಗಿದ್ದರಿಂದ ಜಮೀನು ನಿಃಶುಲ್ಕವಾಗಿಯೇ ಸಿಕ್ಕಿತ್ತು. ಇನ್ನುಳಿದಂತೆ ಧನ ಸಹಾಯ ಮಾಡಲು ನಗರದ ಒಂದಷ್ಟು ಉದ್ಯಮಿಗಳೂ ಮುಂದೆ ಬಂದರು. ಈಗಾಗಲೇ ಹೂ ಶಿ ಜೆ ದ್ವೀಪದ ಉದ್ದಗಲದಲ್ಲೆಲ್ಲಾ ಪ್ರಸಿದ್ಧರು. ಅವರ ಮಾದರಿಯಿಂದ ಪ್ರಭಾವಿತರಾಗಿಯೇ ಹಲವಾರು ಯುವಜನರು ಹಳ್ಳಿಗೆ ಮರಳಿದ್ದಾರೆ. ಹೋಮ್ ರಿಟರ್ನ್ಡ್ ಗಳ ಸಂಘ ತಲೆ ಎತ್ತಿದೆ. ಪ್ರತಿ ತಿಂಗಳು ಅವರೆಲ್ಲ ಸೇರಿ ಆಗಿರುವ ಅಭಿವೃದ್ಧಿ, ಎದುರಾಗುತ್ತಿರುವ ಸಮಸ್ಯೆ ಇತ್ಯಾದಿಗಳ ಬಗ್ಗೆ ಚರ್ಚಿಸುತ್ತಾರೆ.
ಇಷ್ಟೆಲ್ಲ ತಿಳಿದ ನಂತರ, ಹೂ ಅವರ ತಂದೆ ಇದನ್ನು ಹೇಗೆ ಸ್ವೀಕರಿದ್ದಾರೆ ಎನ್ನುವುದನ್ನು ಅರಿತುಕೊಳ್ಳುವ ಕುತೂಹಲ ಮೂಡಿತು. ಅವರನ್ನೂ ಭೇಟಿಯಾದೆ.
“ಅವನು ಓದಿದ್ದಾನೆ. ತಿಳಿವಳಿಕೆ ಇದೆ, ಆದರೂ ಹೆದರಿಕೆ ಇತ್ತು. ಏನಾಗುತ್ತದೆಯೋ ಏನೋ ಎಂದು. ಮೊದಲು ಜನರಿಗೆ ಹಳ್ಳಿ ತೋರಿಸಿ ತಾನು ಬದುಕುತ್ತೇನೆ ಎಂದಾಗ ನನಗೆ ಭಯವಿತ್ತು.ಈಗ ಸ್ವಲ್ಪ ಧೈರ್ಯ ಬಂದಿದೆ. ನಗರದ ಜನ ಬಂದು ಹಳ್ಳಿಯನ್ನು ನೋಡಿ ಖುಷಿ ಪಟ್ಟು ಹೋಗುವಾಗ, ಹಳ್ಳಿಯ ಜನ ಇವನ ಬಗ್ಗೆ ಅಭಿಮಾನ ಪಡುವಾಗ ಹೆಮ್ಮೆಯೆನಿಸುತ್ತದೆ” ಎನ್ನುತ್ತಾರೆ ತಂದೆ.
ಹಳ್ಳಿಗೆ ಬಂದ ಹೂ ಶೂ ನನ್ನು ಹಲವರು ಪ್ರೋತ್ಸಾಹಿಸಿದ್ದಾರೆ. ಅದೇ ಊರಿನ ಉದ್ಯಮಿ ಜೋ ಶೂ ಅವರಿಗೆ ಹೈಕೋದಲ್ಲಿ ದೊಡ್ಡ ಉದ್ಯಮ ಇದೆ. ಊರಿಗಾಗಿ ಸಹಾಯ ಮಾಡಲು ಅವರೂ ಹೂನೊಡನೆ ಕೈ ಜೋಡಿಸಲು ಮುಂದೆ ಬಂದರು.
ಬಾತುಕೋಳಿ ಸಾಕಣೆ
ಹೂ ಶೂ ತಮ್ಮ ಅನುಭವನ್ನು ಹೇಳಿಕೊಳ್ಳುವುದು ಹೀಗೆ.“ಮೊದಲು ಹಣ ಇರಲಿಲ್ಲ. ಹಣ ಹುಡುಕಿ ಊರು ಬಿಟ್ಟು ಹೊರಟೆವು. ಹಣ ಮಾಡಿ ಹಿಂತಿರುಗಿ ಬಂದಾಗ ಊರಿಗೆ ಊರೇ ಖಾಲಿಯಾಗಿತ್ತು. ಖಾಲಿಯಾಗಿದ್ದು ಊರು ಮಾತ್ರ ಅಲ್ಲ. ಇಲ್ಲಿನ ಸಂಸ್ಕೃತಿ, ಸ್ಥಳೀಯ ಜ್ಞಾನ ಎಲ್ಲವೂ. ಈಗ ಆ ಅರಿವನ್ನು ಮೂಡಿಸುವುದು ಒಂದು ದೊಡ್ಡ ಚಾಲೆಂಜ್.”
ಹೂ ಶೂ ಮಾಡಿದ ಮೊದಲ ಕೆಲಸ ರಸ್ತೆ ಮಾಡಿದ್ದು. ತಮ್ಮ ಸ್ವಂತ ಖರ್ಚಿನಲ್ಲಿ ಊರಿನ ರಸ್ತೆ ಅಭಿವೃದ್ಧಿ ಪಡಿಸಿದರು. ನಂತರ ಸರಕಾರದ ಸಹಾಯವೂ ದೊರೆತಿತು. ಇಡೀ ಊರಿಗೆ ಈಗ ಸಿಮೆಂಟ್ ರಸ್ತೆ ನಿರ್ಮಾಣವಾಗಿದೆ.
ಊರಿನಲ್ಲೊಂದು ಅತಿಥಿಗೃಹ ಕಟ್ಟಿದ್ದಾರೆ. ಊರಿಗೆ ಯಾರೇ ಅತಿಥಿಗಳು ಬಂದರೂ ಅಲ್ಲಿ ಉಳಿದು ಹಳ್ಳಿಯ, ಮರೆತು ಹೋದ ಹಳ್ಳಿಯ ಬದುಕಿನ ನೆನಪು ಮಾಡಿಕೊಳ್ಳಬಹುದು. ಅಲ್ಲಿ ಇದ್ದಷ್ಟೂ ಕಾಲ ನಾನು ಉಳಕೊಂಡಿದ್ದು ಈ ‘ಹಳ್ಳಿ ಮರುದರ್ಶನ ಗೃಹ’ದಲ್ಲೇ!
ಊರಿನ ಅಭಿವೃದ್ಧಿಗೆ ಇನ್ನೂ ಒಂದಷ್ಟು ಯೋಜನೆಗಳಿವೆ ಎನ್ನುತ್ತಾರೆ ಹೂ.ಶು.“ಚೀನೀ ಕ್ಯಾಲಿಗ್ರಫಿ ತರಬೇತಿ ಸಂಸ್ಥೆ ಪ್ರಾರಂಭಿಸಬೇಕು. ಯುವ ಜನರು ಚೀನಾದ ಸಂಸ್ಕೃತಿ ಅರಿಯಬೇಕು. ಮರೆತು ಹೋಗುತ್ತಿರುವ, ಮರೆತು ಹೋದ ಸ್ಥಳೀಯ ಜ್ಞಾನದ ದಾಖಲಾತಿ ಮಾಡಬೇಕು.” ಹೀಗೆ ಉದ್ದ ಪಟ್ಟಿಯನ್ನೇ ಕೊಡುತ್ತಾರೆ.
ಇವರ ಯತ್ನ ಹುಮ್ಮಸ್ಸಿನಿಂದ ಊರಿನಲ್ಲಿ ಒಂದೊಂದೇ ಅಭಿವೃದ್ಧಿ ಕೆಲಸಗಳು ಪ್ರಾರಂಭವಾಗತೊಡಗಿತು. ಈ ಸುದ್ದಿ ಈ ಊರಿಂದ ಹೋದ ಯುವಕರ ಕಿವಿಗೂ ಬೀಳುತ್ತಲಿತ್ತು. ಮೆಲ್ಲಮೆಲ್ಲನೆ ಊರು ಬಿಟ್ಟು ಹೋದ ಹಲವಾರು ಕುಟುಂಬಗಳು ಒಂದೊಂದಾಗಿ ಹಿಂತಿರುಗತೊಡಗಿದುವು. ಕಳೆದ ಒಂದೇ ವರ್ಷದಲ್ಲಿ 30 ಕುಟುಂಬಗಳು ಊರಿಗೆ ಹಿಂತಿರುಗಿ ಬಂದಿವೆ ಎಂದರೆ ನಂಬುತ್ತೀರಾ?
ಹಣ್ಣು ಬೆಳೆಗಾರ ಆಲಿಯಾಂಗ್
ಒಂದು ದಿನ ಏನೋ ಕೆಲಸ ಮಾಡುತ್ತ ಕುಳಿತಿದ್ದೆ. ಒಬ್ಬ ಮಧ್ಯ ವಯಸ್ಕರು ಬಂದು ‘ಹಾಯ್‘ ಎಂದು ಪರಿಚಯ ಮಾಡಿಕೊಂಡರು. ಅವರು ಕಾಲು ಗಂಟೆ ಮಾತಾಡಿದ್ದರಲ್ಲಿ ನನಗೆ ಹೆಸರು ಆಲಿಯಾಂಗ್ ಅಂತ ಅಷ್ಟೇ ಅರ್ಥವಾಯಿತು. ಮುಂದಿನದೇನೂ ತಿಳಿಯಲಿಲ್ಲ. ಮುಖ ನೋಡುತ್ತ ನಿಂತೆ.
ಏನೋ ಹೊಳೆದವರಂತೆ ಅವರು ತನ್ನ ಕೈಯಲ್ಲಿದ್ದ ಮೊಬೈಲಿಲ್ಲಿ ‘ವೀ ಚಾಟ್’ ತೋರಿಸಿದರು. ಭಾಷೆ ಬರದಿದ್ದಾಗ ವೀ ಚಾಟ್ ಉಪಯೋಗಿಸಿ ಮಾತನಾಡುವುದನ್ನು ಆಗಲೇ ಕಲಿತಿದ್ದೆ. ವೀ ಚಾಟ್ ನಲ್ಲಿ ನಾವು ನಮ್ಮ ಭಾಷೆಯಲ್ಲಿ ಬರೆದರೂ ಅದನ್ನು ಅಲ್ಲೇ ಭಾಷಾಂತರಿಸಿ ತೋರಿಸಬಹುದು. ಅದನ್ನೇ ಉಪಯೋಗಿಸಿ ಮಾತನಾಡಲು ಪ್ರಾರಂಭಿಸಿದೆ.
ಆತ ನಾನಿದ್ದ ದಿಂಗಾನ್ ಪ್ರಾಂತದಿಂದ ದಕ್ಷಿಣಕ್ಕಿರುವ ವಾನಿಂಗ್ ಪ್ರಾಂತದವರು. ಹೈಕೋವು ನಗರದಲ್ಲಿ ಕೆಲ ಕಾಲ ಕಂಪನಿಯೊಂದರಲ್ಲಿ ಉದ್ಯೋಗ ಮಾಡಿದ್ದರು. ನಂತರ ಈಗ ಊರಿಗೆ ಹೊರಟು ನಿಂತವರು. ಊರಿನಲ್ಲಿ ಈಗ ‘ನೂರೊಂದು ಸಸ್ಯಗಳು‘ ಎನ್ನುವ ನರ್ಸರಿ ಮತ್ತು ಹಣ್ಣು ಸಂಸ್ಕರಣಾ ಕಂಪನಿ ಪ್ರಾರಂಭಿಸುತ್ತಿದ್ದಾರೆ.
ಇದರ ಜತೆಜತೆಗೆ ಚೀನಿ ಔಷಧಿ ಸಸ್ಯಗಳನ್ನು ಬೆಳೆಯುವುದು ಇವರ ಯೋಚನೆ. ಈಗಾಗಲೇ ಇವರ ಕುಟುಂಬದ 10 ಮೋವ್ ಜಮೀನು ಇವರ ಕೈ ವಶವಾಗಿದೆ. ಇದಲ್ಲದೆ ವಿಲೇಜ್ ಕಾರ್ಪೊರೇಶನಿನಿಂದ 200 ಮೋವ್ ಜಮೀನನ್ನೂ ಲೀಸಿನ ಮೇಲೆ ಪಡೆದಿದ್ದಾರೆ. ಅದೆಲ್ಲ ಪಾಳು ಬಿದ್ದ ಅಡಿಕೆ ತೋಟ. ಮಧ್ಯೆ ಹಣ್ಣಿನ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಪ್ರವಾಸಿಗಳಿಗೆ ತಂಗಲು ಅತಿಥಿಗೃಹ ಈಗಾಗಲೇ ತಯಾರಾಗಿದೆ. ಸರಕಾರ ಇಡೀ ತೊಟದ ಸುತ್ತ ಸಿಮೆಂಟ್ ರಸ್ತೆ ನಿರ್ಮಿಸಿಕೊಟ್ಟಿದೆ. ತೋಟದ ಮಧ್ಯೆ ನೀರು ಸಂಗ್ರಹಿಸಲು ಚೆಕ್ ಡ್ಯಾಮ್, ಕೆರೆಗಳ ಆಭಿವೃದ್ಧಿ ಎಲ್ಲವೂ ಸರಕಾರಿ ಹಣದಿಂದಲೇ ಆಗಿದೆ.
ಇನ್ನೊಬ್ಬ ಹೋಮ್ ರಿಟರ್ನ್ಡ್ ವಾಂಗ್. ಆತ ಆಯ್ದುಕೊಂಡಿದ್ದು ಜೇನು ಕೃಷಿ. ಕುಟುಂಬದ ಸಣ್ಣ ಅಡಿಕೆ ತೋಟದಲ್ಲೇ ಜೇನು ಕೃಷಿ ಆರಂಭಿಸಿದ್ದಾರೆ. ಜೇನಿನ ಸಂಸ್ಕರಣೆ ಮತ್ತು ಪ್ಯಾಕ್ ಮಾಡುವ ಕಂಪನಿ ತೆರೆದಿದ್ದಾರೆ. ಹೋಮ್ ರಿಟರ್ನ್ಡ್ ಯೋಜನೆಯಲ್ಲಿ ಸರಕಾರದಿಂದ ಸಹಾಯಧನವೂ ದೊರೆತಿದೆ. ಮಾರುಕಟ್ಟೆಗೆ ಕಷ್ಟವಿಲ್ಲ. ನಗರದ ವಸ್ತು ಪ್ರದರ್ಶನಗಳಲ್ಲಿ ಸರಕಾರವೇ ಉಚಿತವಾಗಿ ಸ್ಟಾಲ್ ಕೊಡುತ್ತದೆ. ಅಲ್ಲಿಂದಲೇ ಬೇಕಾದಷ್ಟು ಮಾರುಕಟ್ಟೆ ಕುದುರುತ್ತಿದೆ.
ಪರ್ಮಾ ಕಲ್ಚರ್ ಕೇಂದ್ರ
ಮೆಂಗ್ ದೂರದ ಗುವಾಂಗ್ ನಗರದಲ್ಲಿ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದವರು. 800 ಕ್ಕೂ ಹೆಚ್ಚು ಜನರಿದ್ದ ತನ್ನ ಊರು ಹಾಳುಬಿದ್ದುದನ್ನು ನೋಡಿ ಮರುಗಿದ ಮಹನೀಯ. ಊರಿಗೆ ಹಿಂತಿರುಗಲು ನಿರ್ಧರಿಸಿ ಈಗ ಮೂರು ವರ್ಷ ಕಳೆದಿದೆ. ಊರಿನ ಒಂದು ಸಾವಿರ ಮೋವ್ ಜಮೀನು ಪಾಳು ಬಿದ್ದಿತ್ತು. ಅಷ್ಟನ್ನೂ ಇವರೇ ಲೀಸಿಗೆ ಪಡೆದಿದ್ದಾರೆ. “ಹಿಂದೆ ಆಗಿದ್ದರೆ ಇಷ್ಟೊಂದು ಜಮೀನನ್ನು ಲೀಸಿಗೆ ಪಡೆಯಲು ಸಾಧ್ಯವೇ ಇರಲಿಲ್ಲ” ಎನ್ನುತ್ತಾರೆ. ‘ಈಗ ಪಾಳು ಬಿದ್ದಿದ್ದರಿಂದ ಬೇಕಾದಷ್ಟು ಜಮೀನನ್ನು ಸರಕಾರದಿಂದ ಪಡೆಯಬಹುದು.ʼ
ಪಾಳು ಬಿದ್ದ ಸಾವಿರ ಮೋವ್ ಜಾಗದಲ್ಲಿ ಸಂಪೂರ್ಣ ಹಾಳಾದ ಅನಾನಸ್ ತೋಟವಿದೆ. ಕಾಡು ಬೆಳೆದ ಪ್ರದೇಶವೂ ಅಡಿಕೆ ತೋಟವೂ ಇದೆ. ಅವೆಲ್ಲವನ್ನೂ ಮೆಂಗ್ ಈಗ ಪರ್ಮಾಕಲ್ಚ್ರ್ ತರಬೇತಿ ಸಂಸ್ಥೆಯನ್ನಾಗಿಸ ಹೊರಟಿದ್ದಾರೆ. “ಇಡೀ ತೋಟವನ್ನು ಪರ್ಮಾಕಲ್ಚರ್ ವಿಧಾನದಲ್ಲಿ ಅಭಿವೃದ್ಧಿಪಡಿಸಿ ಮಾದರಿ ತೋಟ ಮಾಡಬೇಕೆಂಬುದು ನನ್ನ ಕನಸು” ಎನ್ನುತ್ತಾರೆ. ಇವರ ಇಡೀ ತೋಟ ಸುತ್ತಾಡಲು ನಮಗೆ ಒಂದು ದಿನ ಪೂರ್ತಿ ಬೇಕಾಯಿತು.
ಸರಕಾರದ ಸಹಕಾರ
ಇಷ್ಟೆಲ್ಲ ಯುವಕರು ತಿರುಗಿ ಊರಿಗೆ ಬಂದು ಕೆಲಸ ಮಾಡಲು ಪ್ರಾರಂಭಿಸಿದ ಕಾರಣ ಅಲ್ಲಿನ ಸರಕಾರವೂ ಸ್ಪಂದಿಸಿದೆ. ಹೋಮ್ ರಿಟರ್ನ್ಸ್ ಗಳಿಗಾಗಿಯೇ ವಿಶೇಷ ಯೋಜನೆಯನ್ನು ರೂಪಿಸಿದೆ. ಅವರಿಗೆ ರಿಯಾಯತಿ ದರದಲ್ಲಿ ಸರಕಾರಿ ಜಮೀನು ಸಿಗುತ್ತದೆ. ಕೃಷಿ ಪೂರಕ, ಗ್ರಾಮೀಣ ಬಡತನ ನಿರ್ಮೂಲನೆಗೆ ಪೂರಕವಾದ ಉದ್ಯೋಗ ಮಾಡುವವರಿಗಾಗಿಯೇ ವಿಶೇಷ ಯೋಜನೆಗಳಿವೆ. ಸರಕಾರಿ ಅಧಿಕಾರಿಗಳು ಹಳ್ಳಿಗೆ ಬಂದು ಆಸಕ್ತ ಯುವಕರೊಂದಿಗೆ ಕುಳಿತು ಯೋಜನೆ ಸಿದ್ಧಪಡಿಸುತ್ತಾರೆ. ತೆರಿಗೆ ವಿನಾಯತಿ ಸಿಗುತ್ತದೆ.
ಸರಕಾರಿ ಯೋಜನೆಗಳಿಂದ ಧನಸಹಾಯ ಪಡೆಯಲು ‘ಹೋಮ್ ರಿಟರ್ನ್‘ ಟೈಟಲ್ ಸಹಾಯವಾಗುತ್ತದೆ ಎನ್ನುತ್ತಾರೆ ಈ ಮಂದಿ. ಆಲಿಯಾಂಗ್ ಇತ್ತೀಚೆಗೆ ಸರಕಾರದಿಂದ 1.5 ಮಿಲಿಯನ್ ಆರ್‌ಎಂಬಿ (ಸುಮಾರು ಒಂದೂವರೆ ಕೋಟಿ ರೂಪಾಯಿ) ಹಣ ಪಡೆದಿದ್ದಾರೆ. ತನ್ನ ತೋಟವನ್ನು ಒಂದು ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿಸಲು ಇದನ್ನು ಉಪಯೋಗಿಸುತ್ತಿದ್ದಾರೆ.
ಹಿಮ್ಮೊಗ ವಲಸೆ ಜಾಗತಿಕ
2019ನೇ ವರ್ಷ ನಾನು ಮೂರು ದೇಶಗಳಿಗೆ ಪ್ರವಾಸ ಹೋಗಿದ್ದೆ. ಜರ್ಮನಿ, ನೇಪಾಳ ಮತ್ತು ಚೀನಾ. ಈ ಮೂರೂ ವಿದೇಶ ಪ್ರವಾಸಗಳಲ್ಲಿ ಪ್ರಮುಖವಾಗಿ ಕಂಡದ್ದು ನಗರದಿಂದ ಗ್ರಾಮೀಣ ವಲಸೆ. 2019ರ ಫೆಬ್ರುವರಿಯಲ್ಲಿ ಉತ್ತರ ಜರ್ಮನಿಯ ರೂಗನ್ ದ್ವೀಪದಲ್ಲಿದ್ದೆ. ನನ್ನ ಅಧ್ಯಯನದ ಭಾಗವಾಗಿ ಒಂದಿಷ್ಟು ಹಳ್ಳಿಗಳಿಗೆ ಹೋಗಬೇಕಾಗಿತ್ತು. ಹಳ್ಳಿಗಳಿಗೆ ಹೋಗುವ ಅವಕಾಶವಿದ್ದುದರಿಂದಲೇ ಆ ಅಧ್ಯಯನ ಪ್ರವಾಸಕ್ಕೆ ಹೋಗಿದ್ದೆ ಎನ್ನಿ.
ನಾನು ಭೇಟಿಯಾದ ಮೊದಲ ಕುಟುಂಬದ ಗೃಹಿಣಿಯ ಇಂಗ್ಲಿಷ್ ಉಚ್ಚಾರ ಕೇಳಿದಾಗಲೇ ಅನ್ನಿಸಿತ್ತು. ಜರ್ಮನ್ ಭಾಷೆಯ ಉಚ್ಚಾರದ ಛಾಯೆಯೂ ಇರಲಿಲ್ಲ. ಮಲ್ಯಾಳಿಗಳನ್ನು ಇಂಗ್ಲೀಷ್ ಉಚ್ಚಾರದ ಧಾಟಿಯಲ್ಲೇ ಗುರುತಿಸುವ ಹಾಗೆ, ಜರ್ಮನ್ ಭಾಷಿಕರನ್ನೂ ಹಾಗೇ ಗುರುತಿಸಬಹುದು. ಆದರೆ ಈಕೆಯ ಭಾಷೆ ಅಮೇರಿಕನ್ ಇಂಗ್ಲೀಷಿನಂತಿತ್ತು. ನಂತರ ಗೊತ್ತಾಗಿದ್ದು ಆಕೆ, ಅಮೇರಿಕೆಯಲ್ಲಿ ಹಲವಾರು ವರ್ಷ ಕೆಲಸದಲ್ಲಿದ್ದು, ಈಗ ಜರ್ಮನಿಯ ಹಳ್ಳಿಗೆ ಬಂದು ನೆಲೆಸಿದ್ದು ಎಂದು. ಹಾಗೆ ಒಂದು ಮನೆಯಲ್ಲಿ ನಮ್ಮ ಪುಣೆ ಮೂಲದ ಮಹಿಳೆಯೂ ಸಿಕ್ಕಿದ್ದು ಆಶ್ಚರ್ಯವಾಗಿತ್ತು. ಆಕೆಯ ಪತಿ ಯಾವುದೋ ಕಂಪನಿಯಲ್ಲಿ ಹಲವಾರು ವರ್ಷ ಭಾರತದಲ್ಲಿ ಕೆಲಸ ಮಾಡಿದವ. ಈಗ ಜರ್ಮನಿಯ ಆ ಹಳ್ಳಿಯಲ್ಲಿ ಕೃಷಿಕ.
ಅಲ್ಲಿಯ ಹಳ್ಳಿಗಳಲ್ಲಿರುವ ನಾವು ಭೇಟಿಯಾದ ಹದಿನೈದು ಕುಟುಂಬಗಳೂ ನಗರದಿಂದ ಹಿಂತಿರುಗಿ ಬಂದವೇ. ಕೆಲವರು ನಾಲ್ಕು ದಶಕದ ಹಿಂದೆ ಬಂದವರಾದರೆ, ಮತ್ತೆ ಕೆಲವರು ಕೇವಲ ನಾಲ್ಕಾರು ವರ್ಷದ ಹಿಂದೆ ಬಂದವರು. ಅಲ್ಲಿ ಹಳ್ಳಿಯ ಬದುಕು ಎಂದರೆ ಅಜ್ಜ ನೆಟ್ಟ ಆಲದ ಮರವಲ್ಲ. ಅದು ಅವರ ಆಸಕ್ತಿಯ ಆಯ್ಕೆ.
ಉದ್ಯೋಗ ಕ್ರಾಂತಿಯ ಮೊದಲು ಜರ್ಮನಿಯ ಶೇ 80 ರಷ್ಟು ಗ್ರಾಮೀಣ ಪ್ರದೇಶದವರಾಗಿದ್ದರು ಎನ್ನುತ್ತಾರೆ, ಪ್ರೊಫೆಸರ್ ಕೊನ್ರಾಡ್ ಓಟ್. ಈಗ ಈ ಸಂಖ್ಯೆ ತೀರಾ ಕಡಿಮೆ.ಶೇ 10 ರ ಆಜು ಬಾಜು.
ನಮ್ಮೂರ ನಗರ ವಲಸೆ
ನಗರ ವಲಸೆ ಜಗತ್ತಿನೆಲ್ಲೆಡೆಯ ಸಮಸ್ಯೆ. ನನ್ನ ಜಿಲ್ಲೆ ಉತ್ತರ ಕನ್ನಡವೂ ಇದಕ್ಕೆ ಹೊರತಲ್ಲ. ಉತ್ತರ ಕನ್ನಡದ ಒಟ್ಟೂ ಜನಸಂಖ್ಯೆ 2001ರ ಜನಗಣತಿಯಿಂದ 2011 ಜನಗಣತಿಯ ಮಧ್ಯೆ ಹೆಚ್ಚಾಗಿದೆ. ಆದರೆ ಪ್ರತಿ ಗ್ರಾಮವಾರು ಜನಸಂಖ್ಯೆಯ ಅಧ್ಯಯನ ಮಾಡಿದರೆ ಬೇರೆಯದೇ ಚಿತ್ರ ಕಾಣುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಬಹುಪಾಲು ಹಳ್ಳಿಗಳಲ್ಲಿ ಜನಸಂಖ್ಯೆ ಕಡಿಮೆಯಾಗಿದೆ. ಸಿದ್ದಾಪುರ ತಾಲೂಕಿನ ಶೇ 65 ಪ್ರತಿಶತ ಗ್ರಾಮದಲ್ಲಿ ಜನಸಂಖ್ಯೆ ಕಡಿಮೆ. ಆದರೆ ಶಿರಸಿ, ಯಲ್ಲಾಪುರ, ಕಾರವಾರಗಳಲ್ಲೂ ಸಹ ಶೇ. ನಲವತ್ತಕ್ಕಿಂತ ಹೆಚ್ಚಿನ ಗ್ರಾಮಗಳಲ್ಲಿ ಜನಸಂಖ್ಯೆ ಕಡಿಮೆಯಾಗಿದೆ. ಎಷ್ಟು ಎಂದು ಬರೆಯಬಹುದೇ?
ಬಹುಪಾಲು ಮಲೆನಾಡಿನ ಹಳ್ಳಿಗಳ ಹಾಗೆ ನಮ್ಮ ಊರೂ ವೃದ್ಧಾಶ್ರಮವಾಗುತ್ತಿದೆ. ಊರಿನಲ್ಲಿ ಹದಿನಾರು ವರ್ಷಕ್ಕಿಂತ ದೊಡ್ಡವರು, ನಲವತ್ತು ವರ್ಷಕ್ಕಿಂತ ಸಣ್ಣವರು ಇಲ್ಲವೇ ಇಲ್ಲವಾಗಿ 800ಕ್ಕೂ ಹೆಚ್ಚು ಇದ್ದ ಜನಸಂಖ್ಯೆ 650ಕ್ಕೆ ಬಂದು ನಿಂತಿದೆ.
ಚೀನಾ ಸರಕಾರ ಹಳ್ಳಿಗಳತ್ತ ಪುನರ್ವಲಸೆ ಪ್ರೋತ್ಸಾಹಿಸಲು ವಿಶೇಷ ಯೋಜನೆ ಹಮ್ಮಿಕೊಂಡಿದೆ. ಹಳ್ಳಿಗಳಲ್ಲೇ ಉದ್ಯೋಗ ಸೃಷ್ಟಿಸುವ ಈ ಉದ್ದೇಶ ಫಲ ಕೊಡಲೂ ಆರಂಭಿಸಿದೆ. ನಮ್ಮಲ್ಲಿ ಆಡಳಿತದ ಮಂದಿ, ಸರಕಾರದ ಪ್ರತಿನಿಧಿಗಳು ಈ ಸಮಸ್ಯೆಯನ್ನು ವೇದಿಕೆಯಿಂದ ಪ್ರಸ್ತಾಪಿಸುವುದಕ್ಕಿಂತ ಒಂದಿಂಚೂ ಮುಂದೆ ಹೋಗಿಲ್ಲ. ಸಮಸ್ಯೆಯ ಆಳ ಅರ್ಥ ಮಾಡುವ ಪ್ರಯತ್ನವನ್ನೇ ಮಾಡಿಲ್ಲ. ನಗರ ವಲಸೆಯ ಮೂಲ ಕಾರಣವನ್ನು ಹಳ್ಳಿಗರು ಮಾತ್ರವಲ್ಲ ದೇಶದ ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಏಕೆಂದರೆ ಇದು ಹಳ್ಳಿ, ನಗರ ಎರಡನ್ನೂ ಸಮಾನವಾಗಿ ಬಾಧಿಸುತ್ತದೆ! ಚಿಕಿತ್ಸೆಯೂ ಮೂಲದಿಂದಲೇ ಶುರು ಆಗಬೇಕು. ಇಂತಹ ನಗರ ವಲಸೆಯನ್ನೇ ತಿರುಗಿಸಿ ಗ್ರಾಮೀಣ ವಲಸೆಯನ್ನಾಗಿಸಿ, ಅದರ ಮೂಲಕವೇ ಗ್ರಾಮದ, ದೇಶದ ಅಭಿವೃದ್ಧಿಯನ್ನು ಮಾಡಿದ್ದು ಚೀನಾದ ಸಾಧನೆ. ಚೀನಾದಿಂದ ನಾವು ಇದನ್ನು ಕಲಿಯಬೇಕಾಗಿದೆ.
(ಕೃತಿ: ‘ಬಿಂಗ್‌ಲಾಂಗ್ ಮತ್ತು ಲಂಬನಾಗ್’ (ಚೀನಾ-ಫಿಲಿಪೈನ್ಸ್ ದೇಶಗಳ ಅಡಿಕೆ-ಬಿದಿರು-ಬೆತ್ತ-ತೆಂಗು-ಭತ್ತದ ಕೃಷಿ ಪ್ರವಾಸ ಕಥನಗಳು), ಲೇಖಕರು: ಬಾಲಚಂದ್ರ ಸಾಯಿಮನೆ, ಪ್ರಕಾಶಕರು: ಭೂಮಿಬುಕ್ಸ್ (9449177628)
ಪುಟಗಳು 212, ಬೆಲೆ ರೂ. 200/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ