Advertisement
ಕಡಲು ನೋಡಲು ಹೋದವಳ ನವಿರು ಭಾವಗಳು

ಕಡಲು ನೋಡಲು ಹೋದವಳ ನವಿರು ಭಾವಗಳು

ಮರುದಿನ ಬೆಳಗಾದರೂ ಆ ಚೀತ್ಕಾರ ನನ್ನ ಕಿವಿಯಲ್ಲಿ ಇನ್ನೂ‌ ಮೊರೆದಂತಾಗುತ್ತಿತ್ತು, ಜಿಎಸ್ಎಸ್ ಅವರ ಕಾಣದ ಕಡಲಿನಂತೆ. ಕಾಲು ಸಾವಕಾಶವಾಗಿ ಆ ರೂಮಿನತ್ತ ಚಲಿಸಿದವು. ಮೆಲ್ಲನೆ ಬಾಗಿಲು ಬಡಿದು ಒಳ ಸರಿದೆ. ಒಂದು ಬದಿಗೆ ಸರಿದು ಮಲಗಿದ್ದ ಅಜ್ಜಿ ಸದ್ದಿಗೆ ಬೆಚ್ಚಿ ಬಿದ್ದವರಂತೆ ತಿರುಗಲು ಪ್ರಯತ್ನಿಸಿದರು, ವಿಚಿತ್ರ ವಾಸನೆಗೆ ಹೊಟ್ಟೆ ತೊಳಸಿದಂತಾಯಿತು. ತುಂಬಾ ಕಷ್ಟದಿಂದ ವಾಂತಿಯಾಗದಂತೆ ತಡೆದುಕೊಂಡೆ. ಒಂದು ಅಪನಂಬಿಕೆಯ ಎಳೆಯನ್ನು ಮಾತಲ್ಲಿಟ್ಟುಕೊಂಡೇ ಅಜ್ಜಿ ಮೇಜಿನ‌ ಮೇಲಿದ್ದ ಮುಸಂಬಿ ಕಡೆ ಕೈ ತೋರಿಸಿ “ಅದರ ಸಿಪ್ಪೆ ಬಿಡಿಸಿ ಕೊಡುತ್ತೀಯಾ?” ಕೇಳಿದರು.
ಓದುವ ಸುಖ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ

ಇತ್ತೀಚೆಗೆ ಕೆಲ ವರುಷಗಳಿಂದ ಪತ್ರಿಕೆಗಳಲ್ಲಿ ಫಾತಿಮಾ ರಲಿಯಾ ಹೆಜಮಾಡಿಯವರ ಬರಹಗಳನ್ನು ಗಮನಿಸುತ್ತಾ ಇದ್ದೇನೆ. ಅವರ ಕಥೆ ಮತ್ತು ಕವಿತೆಗಳನ್ನು ಓದಿರುವೆನಾದರೂ ನನಗೆ ಇಷ್ಟವಾಗಿದ್ದು ಅವರ ಪ್ರಬಂಧಗಳು. ಹಾಗಂತ ಅವರ ಕತೆಗಳೂ ಕೂಡಾ ಬಹಳ ಇಷ್ಟವೇ. ಕವಿತೆ ಮಾತ್ರ ಕೆಲವೊಂದು ತಕ್ಕಮಟ್ಟಿಗೆ ಅರ್ಥವಾಗಿದೆ ಅನ್ನಿಸಿದರೂ ಉಳಿದವು ಅರ್ಥವಾಗಿಲ್ಲ. ಒಟ್ಟಾರೆ ನನಗೆ ಕವಿತೆಯೇ ಅರ್ಥವಾಗದ ಕಾರಣ ಇದನ್ನು ನನ್ನ ಮಿತಿಯೆಂದೇ ಹೇಳಬಹುದು.

ಮೊನ್ನೆ ಅವರ ಮೊದಲ ಲಲಿತ ಪ್ರಬಂಧಗಳ ಸಂಕಲನ ಹಾಗೂ ಪ್ರಥಮ ಕೃತಿಯಾದ ‘ಕಡಲು ನೋಡಲು ಹೋದವಳು’ ಓದುವ ಅವಕಾಶ ಸಿಕ್ಕಿತು. ಇವುಗಳಲ್ಲಿ ಕೆಲವನ್ನು ಈ ಮುಂಚೆಯೇ ಓದಿದ್ದೆನಾದರೂ ಪುಸ್ತಕ ರೂಪದಲ್ಲಿ ಇವುಗಳನ್ನು ಓದುವುದು ಹೊಸತಾದ ಅನುಭವ. ಇದು ಅವರ ಮೊದಲ ಕೃತಿ ಅಂತ ನಂಬಿಕೆ ಬಾರದಷ್ಟು ಚನ್ನಾಗಿ ಈ ಕೃತಿ ಮೂಡಿ ಬಂದಿದೆ. ಇಲ್ಲಿರುವ ಹದಿನೇಳೂ ಪ್ರಬಂಧಗಳು ಬಹಳ ಚನ್ನಾಗಿವೆ.

(ಗಿರಿಧರ್ ಗುಂಜಗೋಡು)

ವಿಶೇಷವಾಗಿ ಅವರ ಪ್ರಬಂಧಗಳ ಶೈಲಿ ಬಹಳ ಆಪ್ತವಾಗುವಂತಿದೆ. ಅತ್ತ ಹರಟೆಯೂ ಅಲ್ಲದ, ಇತ್ತ ಲಹರಿಯೂ ಅಲ್ಲದ, ಅಥವಾ ವೈಚಾರಿಕ ಲೇಖವೂ ಅಲ್ಲದ, ತಿಳಿಹಾಸ್ಯ, ಹದವಾದ ಭಾವನೆಗಳಿಂದ ಕೂಡಿದ ಅವರ ಬರಹಗಳನ್ನು ಓದುವುದು ಹಿತಕರ ಅನುಭವ. ಆದರೆ ಕೆಲವು ಬಹಳ ಕಾಡುವಂತಹ ಪ್ರಬಂಧಗಳೂ ಇವೆ.

ಈ ಹದಿನೇಳೂ ಬರಹಗಳು ಬಹಳ ವಿಭಿನ್ನವಾಗಿವೆ. ಎಲ್ಲೂ ಏಕತಾನತೆ ಕಾಡುವುದಿಲ್ಲ. ಎಲ್ಲವೂ ಎರಡು ಮೂರು ಪುಟಗಳ ಬರಹವಾಗಿರುವುದರಿಂದ ಸಂಜೆಯ ಕಾಫಿಯೊಟ್ಟಿಗೆ ಒಳ್ಳೆಯ ಜೊತೆಯಾಗುತ್ತದೆ. ಒಂದೇ ಗುಕ್ಕಿಗೆ ಓದುವುದಾದರೆ ಸುಮಾರು ಒಂದುವರೆ ಎರಡುಗಂಟೆ ಸಾಕು.

ಮೊದಲೇ ಚಿಕ್ಕ ಪ್ರಬಂಧಗಳು. ಅವುಗಳ ಕುರಿತು ಹೇಳಹೊರಟರೆ ಸ್ವಾರಸ್ಯವೇ ಹೋಗಿಬಿಡುತ್ತದೆ. ಅದಕ್ಕೇ ಒಂದನ್ನು ಇಲ್ಲಿ ಬರೆಯುತ್ತೇನೆ. ಉಳಿದ ಹದಿನಾರನ್ನು ನೀವೇ ಓದಿ. ನನಗಿಷ್ಟವಾದ ಒಂದು ಪ್ರಬಂಧ ಇಲ್ಲಿದೆ –

ಚಾಂದಜ್ಜಿಯ ಕೋರಿ ರೊಟ್ಟಿ ಮತ್ತು ಸಾವಿನ ಖಾಲಿತನ –

ಆಸ್ಪತ್ರೆಗಳು ಬದುಕು ಕಲಿಸುವ ಪಾಠಶಾಲೆಗಳು. ಕೇಳುವ ಹೃದಯವೊಂದಿದ್ದರೆ ಅಲ್ಲಿ ಕದಲುತ್ತಿರುವ ಪ್ರತಿ ಬಿಂಬಗಳಿಗೂ ಹೇಳಲು ಸಾವಿರದ ಕಥೆಗಳಿರುತ್ತವೆ. ಒಂದು ಸರಳರೇಖೆಯಲ್ಲಿ ಚಲಿಸುತ್ತಿರುವಂತೆ ಕಾಣುವ ಬದುಕಿನಲ್ಲಿ ಧುತ್ತನೆ ಒಂದು ತಿರುವು ಎದುರಾದರೆ ಅಥವಾ ದಾರಿ ಇದಕ್ಕಿದ್ದಂತೆ ಯಾವ ಸುಳಿವೂ ಇಲ್ಲದೆ ಮುಗಿದುಬಿಟ್ಟರೆ ಉಂಟಾಗುವ ಬಯಲೇ ಬದುಕು ಎನ್ನುವ ಖಾಲಿತನವನ್ನು ಆಸ್ಪತ್ರೆವಾಸ ಕ್ಷಣಕ್ಕೊಮ್ಮೆ ಮೆದುಳಲ್ಲಿ ಬಿತ್ತುತ್ತದೆ. ನನ್ನ ಬದುಕೂ ನಿಜದ ಅರ್ಥದಲ್ಲಿ ವಿಸ್ತಾರವಾದದ್ದು, ಬದುಕಿಗೊಂದು ಗಟ್ಟಿತನ ಲಭಿಸಿದ್ದು ಆಸ್ಪತ್ರೆಯ ಕಾರಿಡಾರಿನ ತಣ್ಣನೆಯ ಮೌನದಲ್ಲೇ.

ಅಮ್ಮನ ಕ್ಯಾನ್ಸರ್ ಆಪರೇಶನ್ ಮುಗಿದು ರೂಮಿಗೆ ಶಿಫ್ಟ್ ಆಗಿ ಇಪ್ಪತ್ತ ನಾಲ್ಕು ಗಂಟೆಗಳೂ ಕಳೆದಿರಲಿಲ್ಲ. ನಿಧಾನಕ್ಕೆ ಇಷ್ಟಿಷ್ಟಾಗಿಯೇ ಸುರಿಯುತ್ತಿದ್ದ ನಿಶಬ್ಧ ಆ ಇರುಳನ್ನು ಮತ್ತಷ್ಟು ನಿಗೂಢವಾಗಿಸಿತ್ತು. ವಿಲಕ್ಷಣ, ಅಸಹಜ ಮೌನವೊಂದು ಇಡೀ ಪ್ರದೇಶವನ್ನು ಆವರಿಸಿದಂತಿತ್ತು. ಈ ಮೌನ ಮುಗಿಯುವುದೇ ಇಲ್ಲವೇನೋ ಎಂದು ಯೋಚಿಸುತ್ತಿರುವಾಗ ಪಕ್ಕದ ರೂಮಿನ ಗೋಡೆ ಸೀಳಿದ ಚೀತ್ಕಾರವೊಂದು ಇಡೀ ಆಸ್ಪತ್ರೆಯ ಮೌನವನ್ನು ಪಟ್ಟನೆ ಒಡೆದು ಹಾಕಿತು. ನಿದ್ರೆ ಬಾರದೆ ಹೊರಳಾಡುತ್ತಿದ್ದ ನಾನು ಎದ್ದು ಕೂತೆ. ಅರೆ ಮಂಪರಿನಲ್ಲೋ ಅಥವಾ ಅರೆ ನಿದ್ರೆಯಲ್ಲೋ ಇದ್ದ ಅಮ್ಮ ಒಮ್ಮೆ ಕಣ್ಣು ತೆರೆದು ಮತ್ತೆ ಮುಚ್ಚಿದರು. ಆ ಕೋಣೆಯಲ್ಲಿನ ಆರ್ತನಾದ, ಬಿಕ್ಕಳಿಗೆ‌ ಕೇಳಲಾಗದೆ ರೂಮಿನ ಬಾಗಿಲೆಳೆದು ಅತ್ತ ಕಡೆ ಹೋದೆ. ಅಲ್ಲೊಬ್ಬರು ಅಜ್ಜಿ ನೋವಿನಿಂದ ಮುಲುಗುಡುತ್ತಿದ್ದರು, ಬಲಗಾಲನ್ನು‌ ಮಂಡಿಯವರೆಗೆ ಮತ್ತು ಎಡಗಾಲಿನ ಎರಡು ಬೆರಳುಗಳನ್ನು ಕತ್ತರಿಸಿ ಹಾಕಿದ್ದರು. ಈಗಷ್ಟೇ ಹಾಕಿದಂತಿದ್ದ ಹಸಿ ಬ್ಯಾಂಡೇಜ್ ಅಲ್ಲೆಲ್ಲಾ ಒಂದು ವಿಚಿತ್ರ ವಾಸನೆಯನ್ನು ಹಬ್ಬಿಸಿತ್ತು. ಇಡೀ ಕೋಣೆಯನ್ನು ಅವಲೋಕಿಸಿದೆ. ಆ ಅಜ್ಜಿಯ ಜೊತೆ ತನ್ನವರು ಅಂತ ಯಾರೂ ಇರಲಿಲ್ಲ. ದಾದಿಯೊಬ್ಬರು ಅವರ ತಲೆಯ ಪಕ್ಕ ನಿಂತು ಇಂಜೆಕ್ಷನ್ ರೆಡಿ ಮಾಡಿಕೊಳ್ಳುತ್ತಿದ್ದರು. ಅಜ್ಜಿಯ ಮುಖ ನೋಡಲು ಪ್ರಯತ್ನಿಸಿದೆ, ಆಗಲಿಲ್ಲ. ಕ್ಷಣ ಹೊತ್ತು ಕಾದ ದಾದಿ ಒಂದು ಬಗೆಯ ನಿರ್ಲಿಪ್ತತೆಯಿಂದ ಬಗ್ಗಿ ಅವರ ಸೊಂಟಕ್ಕೆ ಚುಚ್ಚು ಮದ್ದು ಚುಚ್ಚಿದರು. ನೀರವ ಮೌನವನ್ನು ಸೀಳಿದ ಅಜ್ಜಿಯ ಆಕ್ರಂದನಕ್ಕೆ ಇಡೀ ಆಸ್ಪತ್ರೆ ಮತ್ತು ಆ ಪರಿಸರ ಅದುರಿಬಿದ್ದಂತಾಯಿತು. ನಾನಲ್ಲಿ ನಿಲ್ಲಲಾಗದೆ ಕೋಣೆಗೆ ಹಿಂದಿರುಗಿದೆ.

ಆ ರಾತ್ರಿಯಿಡೀ ಜಾಗರಣೆ ನನಗೆ. ರೊಮ್ಯಾಂಟಿಕ್ ಅಲ್ಲದ ಬದುಕಿನ ಇನ್ನೊಂದು ಮಗ್ಗುಲನ್ನು ಪರಿಚಯಿಸಿದ್ದೇ ಕಣ್ಣೆವೆಗಳನ್ನು ಒಂದು ಕ್ಷಣಕ್ಕೂ ಮುಚ್ಚಲಾಗದ ರಾತ್ರಿಗಳು ಮತ್ತು ಅವೇಳೆಯ ಚೀತ್ಕಾರಗಳು. ಆಸ್ಪತ್ರೆಯ ಕಾರಿಡಾರು, ಕಿಟಕಿಗಳಿಗೆ ಇಳಿಬಿದ್ದ ಪರದೆಗಳು, ಜೇಡರ ಬಲೆಯಿಲ್ಲದ ಖಾಲಿ ಗೋಡೆಗಳು, ಎಲ್ಲಾ ಮುಗಿದು ಹೋಯಿತು ಅಂದುಕೊಳ್ಳುತ್ತಿರುವಾಗಲೇ ಇನ್ಯಾವುದೋ ಹೊಸತೊದು ಸಂಕೀರ್ಣತೆಯನ್ನು ಕಣ್ಣ ಮುಂದೆ ತಂದಿಟ್ಟು ಬದುಕೆಂದರೆ ಇಷ್ಟೇ ಅಲ್ಲ ಎಂದು ಕಿವಿ ಹಿಂಡಿ ಬುದ್ದಿ ಹೇಳುತ್ತಿದೆಯೇನೋ ಅನ್ನಿಸುತಿತ್ತು. ಎಷ್ಟು ಬದುಕುಗಳು ಅಲ್ಲಿ ಹೊಸದಾಗಿ ಆರಂಭಗೊಂಡಿರಬಹುದು? ಎಷ್ಟು ಬದುಕುಗಳು ಅನಿರೀಕ್ಷಿತ ಕಂಡಿರಬಹುದು? ಲೆಕ್ಕವಿಟ್ಟವರಾರು?

ಮರುದಿನ ಬೆಳಗಾದರೂ ಆ ಚೀತ್ಕಾರ ನನ್ನ ಕಿವಿಯಲ್ಲಿ ಇನ್ನೂ‌ ಮೊರೆದಂತಾಗುತ್ತಿತ್ತು, ಜಿಎಸ್ಎಸ್ ಅವರ ಕಾಣದ ಕಡಲಿನಂತೆ. ಕಾಲು ಸಾವಕಾಶವಾಗಿ ಆ ರೂಮಿನತ್ತ ಚಲಿಸಿದವು. ಮೆಲ್ಲನೆ ಬಾಗಿಲು ಬಡಿದು ಒಳ ಸರಿದೆ. ಒಂದು ಬದಿಗೆ ಸರಿದು ಮಲಗಿದ್ದ ಅಜ್ಜಿ ಸದ್ದಿಗೆ ಬೆಚ್ಚಿ ಬಿದ್ದವರಂತೆ ತಿರುಗಲು ಪ್ರಯತ್ನಿಸಿದರು, ವಿಚಿತ್ರ ವಾಸನೆಗೆ ಹೊಟ್ಟೆ ತೊಳಸಿದಂತಾಯಿತು. ತುಂಬಾ ಕಷ್ಟದಿಂದ ವಾಂತಿಯಾಗದಂತೆ ತಡೆದುಕೊಂಡೆ. ಒಂದು ಅಪನಂಬಿಕೆಯ ಎಳೆಯನ್ನು ಮಾತಲ್ಲಿಟ್ಟುಕೊಂಡೇ ಅಜ್ಜಿ ಮೇಜಿನ‌ ಮೇಲಿದ್ದ ಮುಸಂಬಿ ಕಡೆ ಕೈ ತೋರಿಸಿ “ಅದರ ಸಿಪ್ಪೆ ಬಿಡಿಸಿ ಕೊಡುತ್ತೀಯಾ?” ಕೇಳಿದರು. ನಾನು ಹೂಂಗುಟ್ಟಿ ಬಿಡಿಸಿ ಕೊಟ್ಟೆ. ಮಲಗಿದ್ದಲ್ಲಿಂದಲೇ ತಿಂದು ನನ್ನನ್ನು ರೂಮಿನಿಂದ ಹೊರಹೋಗುವಂತೆ ತಿಳಿಸಿದರು. ಆ ಕ್ಷಣಕ್ಕೆ ನನಗೆ ಎಂಥಾ ಕೃತಘ್ನರಪ್ಪ ಇವರು! ಅಂತ ಅನಿಸದೇ ಇರಲಿಲ್ಲ.

ಅದಾದ ಮೇಲೆ ಪ್ರತಿದಿನ ಬೆಳಗ್ಗೆ, ಸಂಜೆ ಅವರ ರೂಮಿಗೆ ಹೋಗಿ ಕೂರುತ್ತಿದ್ದೆ. ಮೊದ ಮೊದಲು ನನ್ನ ಕಂಡೊಡನೆ ಮುಖ ತಿರುಗಿಸುತ್ತಿದ್ದ, ಮಾತಾಡಲು ಒಲ್ಲೆ ಅನ್ನುತ್ತಿದ್ದ ಅಜ್ಜಿ ಆಮೇಲಾಮೇಲೆ ಮೆತ್ತಗಾದರು ಅಥವಾ ಅವರೊಳಗಿನ ಅಭದ್ರತೆಯಿಂದ ಕಳಚಿಕೊಂಡರು.

ಹದಿನಾರರ ನಾನು ಮತ್ತು ಎಂಭತ್ತರ ಆಸುಪಾಸಿನ ಅಜ್ಜಿ… ಚಂದ್ರಕಲಾ ಶೆಟ್ಟಿ ಎನ್ನುವ ಚಂದದ ಹೆಸರಿನ ಅವರು ನನಗೆ ಚಾಂದಜ್ಜಿ ಆಗಿ ಬಿಟ್ಟಿದ್ದರು. ಅವರು ಮಾತಾಡುತ್ತಿದ್ದರೆ ಎಳೆಗರುವಿನಂತೆ ನಾನು ಅವರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದೆ.

ನಮ್ಮ ಕರಾವಳಿಯ ಅಳಿಯ ಕಟ್ಟು ಸಂಪ್ರದಾಯದ ಮನೆಯಲ್ಲಿ ನಾಲ್ವರು ಅಣ್ಣಂದಿರ ತಂಗಿಯಾಗಿ ಜನಿಸಿದ್ದರು ಚಾಂದಜ್ಜಿ. ಹದಿನಾರಂಕದ ಆ ಮನೆಗೆ ಅವರೇ ಅನಭಿಷಕ್ತ ರಾಜಕುಮಾರಿ. ಆರೆಕರೆ ತೆಂಗಿನ ತೋಟ, ನೂರು ಮುಡಿ ಭತ್ತ ಬೆಳೆಯುತ್ತಿದ್ದ ಗದ್ದೆ ಇದ್ದ ಅಪ್ಪ ಇವರು ಹುಟ್ಟಿದ ನಂತರ ಮರದ ಮಿಲ್ಲನ್ನೂ ಪ್ರಾರಂಭಿಸಿ ಯಶಸ್ವಿಯಾಗಿದ್ದರು. ಹಾಗೆಂದೇ ಮನೆಯಲ್ಲಿ ಅವರಿಗೆ ವಿಶೇಷ ಪ್ರಾಶಸ್ತ್ಯವಿದ್ದುದು.

ಮಗಳು ಇನ್ಯಾರನ್ನೋ ಮದುವೆಯಾಗಿ ಆಸ್ತಿ ಕೈ ತಪ್ಪಿ ಹೋಗದಿರಲಿ ಎಂದು ಸ್ವಂತ ಸೋದರಳಿಯನಿಗೇ ಕೊಟ್ಟು ಹದಿನಾರು ವರ್ಷಕ್ಕೇ ಮಗಳ ಮದುವೆ ನೆರವೇರಿಸಿದ್ದರು. “ಇಪ್ಪತ್ತೊಂದು ದಿನಗಳ ಸಂಭ್ರಮದ‌ ನನ್ನ ಮದುವೆ ಊರ ಹಬ್ಬದಂತಾಗಿತ್ತು” ಎನ್ನುವಾಗ ಅವರ ಕಣ್ಣಲ್ಲಿ ಅಪ್ಪನ‌ ಬಗೆಗಿನ ಪ್ರೀತಿಯ, ಹೆಮ್ಮೆಯ ನೂರು ಅಗ್ಗಿಷ್ಟಿಕೆಯ ಬೆಳಕು‌ ಚಿಮ್ಮುತ್ತಿತ್ತು.

ಒಂದು ಸರಳರೇಖೆಯಲ್ಲಿ ಚಲಿಸುತ್ತಿರುವಂತೆ ಕಾಣುವ ಬದುಕಿನಲ್ಲಿ ಧುತ್ತನೆ ಒಂದು ತಿರುವು ಎದುರಾದರೆ ಅಥವಾ ದಾರಿ ಇದಕ್ಕಿದ್ದಂತೆ ಯಾವ ಸುಳಿವೂ ಇಲ್ಲದೆ ಮುಗಿದುಬಿಟ್ಟರೆ ಉಂಟಾಗುವ ಬಯಲೇ ಬದುಕು ಎನ್ನುವ ಖಾಲಿತನವನ್ನು ಆಸ್ಪತ್ರೆವಾಸ ಕ್ಷಣಕ್ಕೊಮ್ಮೆ ಮೆದುಳಲ್ಲಿ ಬಿತ್ತುತ್ತದೆ.

ಆದರೆ ಅಷ್ಟೂ ದಿನಗಳಲ್ಲಿ ಅವರ ಗಂಡನಾಗಲೀ, ಮಕ್ಕಳಾಗಲೀ ಅವರನ್ನು ಭೇಟಿಯಾಗಲು ಬಂದದ್ದಾಗಲೀ, ಪಕ್ಕ ಕೂತು ಸಮಾಧಾನದ ಮಾತನ್ನಾಗಲೀ ಆಡಿದ್ದನ್ನು ಒಮ್ಮೆಯೂ ನೋಡಿರಲಿಲ್ಲ. ಪ್ರತಿಬಾರಿ ಅವರ ಮಾತುಗಳಲ್ಲಿ, ಅನುಭವದ ನುಡಿಗಳಲ್ಲಿ ಮುಳುಗಿ ಹೋಗುವಾಗೆಲ್ಲಾ ‘ಗಂಡ ಮಕ್ಕಳೆಲ್ಲಿ’ ಎನ್ನುವ ನಾಲಗೆಯ ತುದಿಯವರೆಗೆ ಬಂದ ಮಾತನ್ನು ಮತ್ತೆ ಗಂಟಲೊಳಗೆ ತಳ್ಳಿ ಸುಮ್ಮನಾಗುತ್ತಿದ್ದೆ. ಯಾವುದೋ ಕಾಣದ ನೋವೊಂದು ಅವರ ಎದೆಯಲ್ಲಿ ಕೋಲಾಹಲ ಎಬ್ಬಿಸುತ್ತಿದ್ದಂತೆ, ಗಂಟಲೊಳಗೆ ಮುಳ್ಳೊಂದು ಸಿಕ್ಕಿಹಾಕಿಕೊಂಡಂತೆ ನನಗೆ ಅನ್ನಿಸುತ್ತಿತ್ತು.

ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಒಂದು ದಿನ ಅವರ ಪತಿ ಆಸ್ಪತ್ರೆಗೆ ಬಂದರು. ದಾದಿಯರೇ ಕರೆ ಮಾಡಿ ಅವರನ್ನು ಕರೆಸಿದ್ದರು ಎಂದು ಆಮೇಲೆ ನನಗೆ ತಿಳಿಯಿತು. ಕತ್ತರಿಸಿದ ಬಲಗಾಲಿಗೆ ಬದಲಿಯಾಗಿ ಕೃತಕ ಕಾಲನ್ನು ಜೋಡಿಸಲಾಗಿತ್ತು. ನಡೆಯಲು ಅಭ್ಯಾಸ ಮಾಡಿಸಲೆಂದು‌ ಗಂಡನನ್ನು ಬರಹೇಳಿದ್ದರು. ಆಜಾನುಬಾಹು ವ್ಯಕ್ತಿತ್ವದ ಅವರ ಮುಂದೆ ನನ್ನ ಚಾಂದಜ್ಜಿ ಪುಟ್ಟ ಗುಬ್ಬಿ ಮರಿಯಂತೆ ಕಾಣಿಸುತ್ತಿದ್ದರು.

ಹಾಸಿಗೆಯಿಂದ ಎಬ್ಬಿಸಿ ನಡೆಯಲು ಅನುಕೂಲವಾಗುವಂತೆ ವಾಕರ್ ಕೊಟ್ಟ ದಾದಿಯರು ಅವರನ್ನು ಗಂಡನ‌ ಕೈಗೊಪ್ಪಿಸಿ ನಡೆಸಲು ಹೇಳಿದರು. ಕುಂಟುತ್ತಾ ನಾಲ್ಕು ಹೆಜ್ಜೆ ನಡೆದ ಅಜ್ಜಿ ಇನ್ನು ಮುಂದೆ ಸಾಧ್ಯಾನೇ ಇಲ್ಲ ಎಂಬಂತೆ ಅಲ್ಲೇ ಇದ್ದ ಕಬ್ಬಿಣದ ಕುರ್ಚಿಯಲ್ಲಿ ಕೂತರು. ಅವರನ್ನು ಅನುನಯಿಸಿ, ರಮಿಸಿ ನಡೆಸುತ್ತಾರೆ ಅಂದುಕೊಂಡರೆ ಪತಿ ಬಲವಂತದಿಂದ ಎಬ್ಬಿಸಿ ಒಂದು ಮಾತೂ ಆಡದೆ ನಡೆಸತೊಡಗಿದರು. ಮತ್ತೆ ನಾಲ್ಕು ಹೆಜ್ಜೆ ಮುಂದೆ ಹೋದ ಅವರು ಸುಸ್ತಾಗಿ ಕುಸಿದರು. ಎಲ್ಲವನ್ನೂ ಓರೆ ಕಣ್ಣಲ್ಲಿ ನೋಡುತ್ತಿದ್ದ ನಾನು ಕಂಡೂ ಕಾಣದಂತೆ ಅಮ್ಮನ ರೂಮೊಳಗೆ ಹೋಗಿ ಕೂತಿದ್ದೆ.

ಇದಾಗಿ ಐದೇ ನಿಮಿಷದಲ್ಲಿ ಚೀತ್ಕಾರವೊಂದು ಕೇಳಿತ್ತು. ಓಡಿ ಹೋಗಿ ನೋಡಿದರೆ ಅಜ್ಜಿ ನೆಲದ ಮೇಲೆ ಬಿದ್ದಿದ್ದರು, ವಾಕರ್ ನಾಲ್ಕು‌ ಸುತ್ತು ಉರುಳಿದಂತೆ ಇನ್ನೆಲ್ಲೋ ಬಿದ್ದಿತ್ತು, ಸುತ್ತ ನಿಂತ ದಾದಿಯರು ಅವರ ಕೈ ಹಿಡಿದು ಎಬ್ಬಿಸಲು ಪ್ರಯತ್ನಿಸುತ್ತಿದ್ದರೆ ಅವರ ಗಂಡ ಎತ್ತಲೋ ನೋಡುತ್ತಾ ನಿಂತಿದ್ದರು.

ಅಲ್ಲಿ ನೆರೆದಿದ್ದ ಎಲ್ಲರ ಕಣ್ಣಲ್ಲೂ ಅವರ ಬಗ್ಗೆ ಒಂದು ಸ್ಪಷ್ಟ ತಿರಸ್ಕಾರವಿತ್ತು, ‘ಇವರೇನು ಮನುಷ್ಯರಾ’ ಎನ್ನುವ ಭಾವನೆಯಿತ್ತು. ಆದರೆ ಅಜ್ಜಿ‌ ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ಒಂದು ನಿರ್ಲಿಪ್ತತೆಯನ್ನು ಧರಿಸಿಕೊಂಡು ಕೂತಿದ್ದರು.

ಆ ಸಂಜೆ ನನ್ನನ್ನು ಅವರೇ ಕೋಣೆಗೆ ಕರೆಸಿಕೊಂಡಿದ್ದರು. ಐದೋ ಆರೋ ನಿಮಿಷಗಳ ಪುಟ್ಟ ಮೌನವನ್ನು ಛೇದಿಸಿ “ಇಷ್ಟೆಲ್ಲಾ ಆಸ್ತಿ-ಪಾಸ್ತಿ ಇರೋ ನೀವು ಆ ಮನುಷ್ಯನಿಗೇಕೆ ಹೆದರಬೇಕು?” ಎಂದು ಕೇಳಿದ್ದೆ. “ಹಾಗೆಲ್ಲಾ ಹೇಳಬಾರದು ಮಗೂ” ಎಂದು ಅವರ ಕೃಶ ಬೆರಳನ್ನು ನನ್ನ ತುಟಿಯ ಮೇಲಿಟ್ಟು ಸುಮ್ಮನಾಗಿ ತುಸು ಹೊತ್ತು ಕಳೆದು ಅವರೇ “ಇದೆಲ್ಲಾ ನಾನೇ ಮಾಡಿದ ಕರ್ಮ ಮಗಳೇ. ಸತ್ತ ನಂತರ ದೊಡ್ಡ ಹೊರೆಯಾಗಿ ಹೆಗಲ ಮೇಲೇರುವುದಕ್ಕಿಂತ ಬದುಕಿರುವಾಗಲೇ ತೀರಲಿ ಬಿಡು” ಎಂದಿದ್ದರು.

ಸೋದರತ್ತೆಯ ಮಗನನ್ನೇ ಮದುವೆಯಾಗಿದ್ದ ಅವರು ಒಮ್ಮೆಯೂ ಗಂಡನೆಂಬ ಮಮಕಾರದಿಂದಾಗಲೀ, ಗೌರವದಿಂದಾಗಲೀ ಅವರನ್ನೆಂದೂ ನೋಡಿದವರಲ್ಲ. ಬಡತನವೇ ಮೈವೆತ್ತಿದಂತಿದ್ದ ಅವರ ನಾದಿನಿಯರು ಹಸಿವು ಎಂದು ಬಂದಾಗಲೂ ಕೈ ಎತ್ತಿ ಒಂದು ಹೊತ್ತಿನ ಊಟ ಕೊಡಿಸಿದವರಲ್ಲ. ಅವರದೇ ಮಾತಿನಲ್ಲಿ ಹೇಳುವುದಾದರೆ ‘ದುಡ್ಡಿನ‌ ಮದ ಮತ್ತು ತನ್ನನ್ನು ಯಾರೂ ಪ್ರಶ್ನಿಸಲಾರರು ಎನ್ನುವ ಅಹಂಕಾರ’ ಅವರ ಕಣ್ಣು ಮುಚ್ಚಿಸಿತ್ತು. ತನಗೆ ಮಕ್ಕಳಾಗದು ಎಂದು ಗೊತ್ತಾದಾಗಾದರೂ ಠೇಂಕಾರ ಇಳಿದು ಮನುಷ್ಯರಾಗುತ್ತಾರೆ, ಕನಿಷ್ಠ ಪಕ್ಷ ಕೊನೆಗಾಲದಲ್ಲಿ ಆಸರೆಗಾಗುವ ನಿರೀಕ್ಷೆಯಿಂದಾದರೂ ಅವರು ಬದಲಾಗುತ್ತಾರೆ ಎಂದು ಬಯಸಿದ್ದರಂತೆ ಪತಿ. ಆದರೆ ಚಾಂದಜ್ಜಿ ಬದುಕಿನ ಯಾವ ಪಟ್ಟುಗಳಿಗೂ ಜಗ್ಗದೆ ಯಾವುದೋ ಜನ್ಮದ ಸೇಡಿನಂತೆ ಬದುಕಿದ್ದರು. ರಾಶಿ ರಾಶಿ ತೆಂಗಿನ‌ಕಾಯಿ ಹಾಳಾಗಿ ಹೋಗುತ್ತಿದ್ದರೂ ಪತಿ ಮತ್ತವರ ಕುಟುಂಬ ಬೇಡಿದರೂ ಒಂದೇ ಒಂದು ಕಾಯಿಯನ್ನು ಕೈ ಎತ್ತಿ ಕೊಟ್ಟವರಲ್ಲ.

“ಇದೆಲ್ಲಾ ನಾನೇ ಮಾಡಿದ ಕರ್ಮ, ಕೊನೆಗಾಲದಲ್ಲಿ ಅಚಾನಕ್ಕಾಗಿ ವಿಷ ಸರ್ಪದಂತೆ ಕಾಲಿಗೆ ಸುತ್ತಿಕೊಂಡಿದೆ. ಕತ್ತರಿಸಿ ತೆಗೆದ ಕಾಲಾಗಲೀ, ಬೆರಳಾಗಲೀ ನನ್ನ ನೋಯಿಸುತ್ತಿಲ್ಲ. ಆದರೆ ನನ್ನ ಭೂತಕಾಲ ಬೆನ್ನ ಮೇಲೆ ಕುಳಿತು ಮೂಳೆಯ ಸಾರವನ್ನೆಲ್ಲಾ ಹಿಂಡಿ ತೆಗೆಯುತ್ತಿರುವಂತೆ ಅನ್ನಿಸುತ್ತಿದೆ” ಎಂದು ಕಣ್ಣೀರಾದರು.

ಇಂಥದ್ದೊಂದು ಬದುಕಿನ, ಕಠೋರತೆಯ ಕಲ್ಪನೆಯೂ‌ ಇಲ್ಲದ ನಾನು ದಿಗ್ಭ್ರಾಂತಳಾಗಿದ್ದೆ. ಒಂದಿಡೀ ಬದುಕನ್ನು ವಿನಾಕರಣ ಅವುಡುಗಚ್ಚಿದಂತೆ, ಯಾವುದೋ ಹಠ ಸಾಧಿಸುವಂತೆ ಬದುಕಿದವರು ಆಸ್ಪತ್ರೆಯ ನೂರಾರು ಮಂದಿ‌ ಮಲಗಿ ಎದ್ದು ಹೋದ ನೀಲಿ ಬೆಡ್‌ಶೀಟ್‌ನ ಮೇಲೆ ಮುದುರಿಕೊಂಡಂತೆ ಮಲಗಿದ್ದರು. ಇನ್ನಷ್ಟೇ ಬದುಕು ನೋಡಬೇಕಿದ್ದ ನಾನು ಅದು ತಂದೊಡ್ಡುವ ಅಚ್ಚರಿಗೂ, ಕಾಠಿಣ್ಯತೆಗೂ ಸಂಬಂಧ ಹುಡುಕುತ್ತಾ ಕಳೆದು‌ ಹೋಗಿದ್ದೆ. ಒಬ್ಬ ಮನುಷ್ಯ ‘ಹೀಗೂ ಇರಲು ಸಾಧ್ಯವೇ?’ ಎಂಬುವುದಕ್ಕೆ ಉದಾಹರಣೆಯಂತಿದ್ದರು ಚಾಂದಜ್ಜಿ. ಇರುವ ಒಂದು ಕಾಲಿನ‌ ಮೂರು ಬೆರಳುಗಳ ಮೇಲೆ ಕುಳಿತ ನೊಣವನ್ನೂ‌ ಓಡಿಸಲಾಗದ ಅಸಹಾಯಕ ಚಾಂದಜ್ಜಿ ನನಗೆ ಬದುಕಿನ ಅಸಂಗತತೆಗೆ ಬೆಲೆ ತೆತ್ತ ಅಮಾಯಕರಂತೆ ಕಾಣುತ್ತಿದ್ದರು. ಆದರೆ ಅವರ ಒಣ ಅಹಂಕಾರದಿಂದಾಗಿ ಜೀವನ ನರಕ ಮಾಡಿಕೊಂಡ ಅವರ ಮನೆಯವರ ಇಷ್ಟೂ ವರ್ಷಗಳ ಬದುಕಿಗೆ ಕಂದಾಯ ಕಟ್ಟುವವರು ಯಾರು? ಅದೆಲ್ಲಾ ಮರೆತು ಈಗ ಅವರನ್ನು ಕ್ಷಮಿಸಿ ದೊಡ್ಡವರಾಗಬಹುದೆಲ್ಲಾ ಎಂದೆಲ್ಲಾ ಹೇಳುವುದು, ಯೋಚಿಸುವುದು ಸುಲಭ. ಆದರೆ ಕ್ಷಣ ಕ್ಷಣವೂ ಹಳೆಯ ಬದುಕು ಕಣ್ಣ ಮುಂದೆ ಬರುವಾಗ ಆ ಸಂಕಟವನ್ನು, ಕ್ರೋಧವನ್ನು ಮೀರಿ ಕ್ಷಮಿಸುವುದಾದರೂ ಹೇಗೆ? ಯೋಚಿಸಿದಂತೆಲ್ಲಾ ಅವರ ಅಂಗೈಯ ಮೇಲೆ ಇಟ್ಟ ನನ್ನ ಕೈ ಮತ್ತಷ್ಟು ಬಿಗಿಯಾಗುತ್ತಿತ್ತು, ಬೆವರುತ್ತಿತ್ತು.

ನನ್ನೊಳಗೆ ಹೊಯ್ದಾಡುತ್ತಿರುವ ಭಾವಗಳು ಅವರಿಗೆ ಗೊತ್ತಾಗದಿರಲಿ ಎಂದು ಮೆಲ್ಲ ಕೈ ಬಿಡಿಸಿದೆ. ಮತ್ತೆ ನನ್ನ ಕೈಯನ್ನು ಅಂಗೈಯೊಳಗೆ ತೆಗೆದುಕೊಂಡ ಅವರು “ಇವೆಲ್ಲಾ ಮುಗಿದು ಮನೆಗೆ ಮರಳಿದ ನಂತರ ನಾನೇ ನನ್ನ ಕೈಯಾರೆ ನಾಟಿ ಕೋಳಿ ಸಾರು, ಕೋರಿ ರೊಟ್ಟಿ ಮಾಡಿಕೊಡುತ್ತೇನೆ. ಉಂಡು ಎರಡು ದಿನ ನನ್ನ ಮನೆಯಲ್ಲಿ ಇದ್ದು ಹೋಗಬೇಕು. ನನ್ನ ದೊಡ್ಡ ತೋಟ, ಬಾವಿ ನಿನಗೆ ತೋರಿಸಲಿಕ್ಕಿದೆ. ಬರುತ್ತೀಯಲ್ಲವೇ?” ಕೇಳಿದರು. ನಾನು ಹೂಂಗುಟ್ಟಿದೆ. “ನೋಡು ಎಂಜಲು ಕೈಯಲ್ಲಿ ಕಾಗೆಯನ್ನೂ ಓಡಿಸದ ಈ ಚಂದ್ರಕಲಾ ನಿನ್ನನ್ನು ತಾನಾಗೇ ಮನೆಗೆ ಕರೆಯುತ್ತಿದ್ದಾಳೆ, ತಪ್ಪಿಸುವಂತಿಲ್ಲ” ಎಂದು ನೋವಿನ‌, ಶುಷ್ಕ ನಗೆ ನಕ್ಕರು. ನಾನು ಮತ್ತೆ ತಲೆಯಾಡಿಸಿದೆ.

ಆ ರಾತ್ರಿ ನನಗೆ ಮತ್ತೆ ಜಾಗರಣೆ. ಚಾಂದಜ್ಜಿ ಮತ್ತವರ ಬದುಕು ಪದೇ ಪದೇ ನನ್ನ ಕಣ್ಣ ಮುಂದೆ ಬಂದಂತಾಗುತ್ತಿತ್ತು. ಅಷ್ಟರಲ್ಲಾಗಲೇ ನಮ್ಮಿಬ್ಬರ ಮಧ್ಯೆ ಯಾವುದೋ ಒಂದು ಅನೂಹ್ಯ ಸಂಬಂಧ ಬೆಳೆದು ಬಿಟ್ಟಿತ್ತು. ಬದುಕಿರುವಷ್ಟೂ ಕಾಲ ಅವರೊಂದಿಗಿನ‌ ಈ ಬಂಧ ಉಳಿಸಿಕೊಳ್ಳಬೇಕು ಎಂದೆಲ್ಲಾ ಯೋಚಿಸುತ್ತಾ ಮಲಗಿದವಳಿಗೆ ನಿದ್ರೆ ಯಾವಾಗ ಹತ್ತಿತೋ ಗೊತ್ತಿಲ್ಲ. ಮರುದಿನ ಬೆಳಗ್ಗೆ ಎಚ್ಚರವಾಗುವಾಗ ಆಸ್ಪತ್ರೆಯ ಪೂರ್ತಿ ಸರಭರ ಸದ್ದು, ಅಜ್ಜಿಯ ಕೋಣೆಗೆ ಬೀಗ ಜಡಿಯಲಾಗಿತ್ತು. ನನ್ನ ಗಲಿಬಿಲಿ‌ ಅರ್ಥ ಮಾಡಿಕೊಂಡ ಅಮ್ಮ “ಅಜ್ಜಿ ನಿನ್ನೆ ರಾತ್ರಿಯೇ ತೀರಿಕೊಂಡು ಬಿಟ್ಟರು” ಎಂದರು.

ಹಿಂದಿನ ದಿನ ಸಂಜೆ ಹಲಾಲ್ ಹರಾಮ್‌ನ ಯಾವ ಗೊಡವೆಯೂ ಇಲ್ಲದೆ ನನ್ನಿಂದ ಭಾಷೆ ತೆಗೆದುಕೊಂಡ, ಅಷ್ಟುದ್ದದ ಬದುಕಿನ ಕಥೆ ಹೇಳಿದ್ದ ಅಜ್ಜಿ ಬೆಳಗ್ಗೆಯಾಗುವಷ್ಟರಲ್ಲಿ ತೀರಿಕೊಂಡಿದ್ದರು. ತನ್ನ ಸಾವಿನೊಂದಿಗೇ ಸಿಟ್ಟು, ಸೆಡವು ಮತ್ತು ನನ್ನೆದುರು ಪದೇ ಪದೇ ಪ್ರತ್ಯಕ್ಷಗೊಳ್ಳುತ್ತಿದ್ದ ಅವರ ಅಖಂಡ ಅಮಾಯಕತೆಯನ್ನೂ ಕೊಂಡೊಯ್ದಿದ್ದರು. ನಾನು ಹನಿಗಣ್ಣಾದೆ, ಅಂಗೈ ಮತ್ತೆ ಬೆವರಿತು. ಕಿಟಕಿಯ ಹೊರಗೆ ದಿಟ್ಟಿಸಿದೆ, ಹೊರಗಿನ ಖಾಲಿತನ ರಪ್ಪನೆ ಮುಖಕ್ಕೆ ರಾಚಿದಂತಾಯಿತು‌. ಕಿಟಕಿ ಬಾಗಿಲು ಮುಚ್ಚಿ ನನ್ನೊಳಗಿನ ಖಾಲಿತನವನ್ನು ಬರಿದುಗೊಳಿಸತೊಡಗಿದೆ.

About The Author

ಗಿರಿಧರ್ ಗುಂಜಗೋಡು

ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗುಂಜಗೋಡು. ಸದ್ಯ ಮೈಸೂರಿನಲ್ಲಿ ವಾಸ. ಓದು, ತಿರುಗಾಟ, ಚದುರಂಗ ಇತ್ಯಾದಿ ಇಷ್ಟದ ಆಸಕ್ತಿಗಳು. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ