ಮರಿಯಾ ಎದುರಿಸಬೇಕಾಗಿರುವುದು ವರ್ತಮಾನದ ಸಂಗತಿಗಳಾದರೂ ಮಾನಸಿಕವಾಗಿ ಅವಳು ಬೇರೆಯೇ ಆಗಿರುತ್ತಾಳೆ. ಒರ್ಲಾಂಡೊ ಯಾವಾಗಲೂ ಸಮೀಪದಲ್ಲಿ ಇದ್ದಾನೆ ಎನ್ನುವ ಭಾವನೆ ಅವಳಿಗೆ. ಹೀಗಾಗಿ ಅವಳು ಕಾರಿನಲ್ಲಿ ಹೋಗುವಾಗ ಹಿಂಬದಿಯ ಸೀಟಿನಲ್ಲಿ ಅವನು ಕುಳಿತಿರುವಂತೆ ತೋರುವುದು, ಹಾಡುಗಳ ಮಧ್ಯೆ ಉಳಿದವರೆಲ್ಲ ಮಾಯವಾಗಿ ಅಷ್ಟು ದೂರದಿಂದ ತನ್ನೆಡೆಗೆ ಹಸನ್ಮುಖಿಯಾಗಿ ನಡೆದು ಬರುತ್ತಿರುವಂತೆ ಕಾಣುವುದು ಮತ್ತು ಎಲ್ಲರೂ ಮರೆಯಾಗಿ ಬೆಳ್ಳಿ ಪದರುಗಳ ರೆಕ್ಕೆಗಳು ಮೂಡಿ ಹಾರಾಡುತ್ತಿರುವ ಭಾವನೆಯಿಂದ ನರ್ತಿಸುವುದನ್ನು ಕಲ್ಪಿಸಿಕೊಳ್ಳುತ್ತಾಳೆ.
ಎ.ಎನ್. ಪ್ರಸನ್ನ ಬರೆಯುವ ಲೋಕ ಸಿನಿಮಾ ಟಾಕೀಸ್ ಸರಣಿಯಲ್ಲಿ ಚಿಲಿಯ ʻಎ ಫೆಂಟಾಸ್ಟಿಕ್ ವುಮನ್ʼ ಚಿತ್ರದ ವಿಶ್ಲೇಷಣೆ
ಅವಳು ಚಿಲಿಯ ಸ್ಯಾಂಟಿಯಾಗೊದಲ್ಲಿರುವ ರೆಸ್ಟೊರೆಂಟೊಂದರಲ್ಲಿ ಕೆಲಸ ಮಾಡುವ ಮಂಗಳಮುಖಿ ಮರಿಯಾ. ಅಲ್ಲಿ ಮಾಡುವ ಕೆಲಸವಲ್ಲದೆ ಬಿಡುವಿನ ಸಮಯದಲ್ಲಿ ಕ್ಲಬ್ ಒಂದರಲ್ಲಿ ಹಾಡುವ ಹವ್ಯಾಸ ಅವಳದು. ಅವಳ ಹಾಡಿನ ಮಾಧುರ್ಯಕ್ಕೆ ಮನಸೋತು ಅಥವಾ ಇತರ ಕಾರಣಗಳಿಂದ ಟೆಕ್ಸೈಲ್ ಕಂಪನಿ ಒಡೆಯನಾದ ಒರ್ಲಾಂಡೊ ಅವಳಲ್ಲಿ ಅನುರಕ್ತ. ಅವಳಿಗೂ ಅವನಿಗೂ ವಯಸ್ಸಿನಲ್ಲಿ ಅಗಾಧ ಅಂತರ. ಅವಳ ಅಪ್ಪ ಎನಿಸುವಷ್ಟು ಅವನು ಐವತ್ತೇಳು ವರ್ಷದವನಾಗಿದ್ದರೆ ಅವಳು ಇಪ್ಪತ್ತರ ಆಸುಪಾಸಿನ ಯುವತಿ.
ಅವಳು ನೆರಳು-ಬೆಳಕಿನ ವಿನ್ಯಾಸದ ಹಿನ್ನೆಲೆಯ ಕ್ಲಬ್‌ನಲ್ಲಿ ಹಾಡುವ ದೃಶ್ಯದಿಂದ ನಮಗೆ ಅವಳನ್ನು ಪರಿಚಯಿಸಲಾಗುತ್ತದೆ. ಕಾರಣ ಹಾಡಿನ ಮೊದಲ ಸಾಲು ಚಿತ್ರವನ್ನು ಹಲವು ವಿಧಗಳಲ್ಲಿ ಬಿಂಬಿಸುತ್ತದೆ. ಪದ್ಯದ ಮೊದಲನೆಯ ಸಾಲು: ನಿನ್ನ ಪ್ರೇಮ ನಿನ್ನೆಯ ವೃತ್ತಪತ್ರಿಕೆಯಂತೆ.. ಎಂದು ಗಂಡು-ಹೆಣ್ಣು ನಡುವಿನ ಪ್ರೇಮಕ್ಕೆ ಸಂಬಂಧಿಸಿ ಅವಳು ಹಾಡುವುದು ಶುರುವಾಗುತ್ತದೆ. ಇಡಿ ಚಿತ್ರ ಅದಕ್ಕೆ ಸಂಬಂಧಿಸಿದ್ದು ಎನ್ನುವುದನ್ನು ಚಿತ್ರ ಶುರುವಾದ ಕೆಲವೇ ನಿಮಿಷಗಳಲ್ಲಿ ನಮಗೆ ಮನದಟ್ಟು ಮಾಡುತ್ತದೆ. ಹಾಗೆಯೇ ಪ್ರೇಮಕ್ಕೆ ವೃತ್ತಪತ್ರಿಕೆಯ ರೂಪಕ ಕೊಟ್ಟಿರುವುದು ವಿಶೇಷವೇ. ಬಹಳ ಬೇಗ ಮಾಸುವುದರ ಜೊತೆಗೆ ಅದು ಬೇಗನೆ ಮಾಸಿ ಹೋಗದಂತೆ ಜತನವಾಗಿ ಕಾಪಾಡಿಕೊಳ್ಳುವ ಅಗತ್ಯವನ್ನೂ ಒತ್ತಿ ಹೇಳುತ್ತದೆ.
ಅವಳು ಹಾಡುವುದು ಮುಗಿದ ನಂತರ ಒರ್ಲಾಂಡೊ ಮತ್ತು ಅವಳು ನರ್ತಿಸುತ್ತಾರೆ. ಆ ದಿನ ಅವಳ ಹುಟ್ಟುಹಬ್ಬವಾದ ಪ್ರಯುಕ್ತ ಒಟ್ಟಾಗಿ ಕೆಲವು ಕ್ಷಣಗಳನ್ನು ಹರ್ಷದಿಂದ ಹೊಟೇಲಿನಲ್ಲಿ ಸಂಭ್ರಮಿಸಿ ಕಳೆಯುತ್ತಾರೆ. ಅನಂತರ ರೂಮು ಸೇರಿ ಪರಸ್ಪರ ಸಂಗದಲ್ಲಿ ಇದ್ದಾಗಲೇ ಅವನ ಆರೋಗ್ಯದಲ್ಲಿ ಏರುಪೇರಾಗುತ್ತದೆ. ದಿಢೀರನೆ ರಕ್ತನಾಳ ರೋಗಕ್ಕೆ ತುತ್ತಾಗುತ್ತಾನೆ. ಗಾಬರಿಗೊಂಡ ಅವಳು ಅವರಿವರನ್ನು ಕರೆಯುವ ಆತುರದಲ್ಲಿ ಇದ್ದಾಗಲೇ ಅವನು ರೂಮಿನಿಂದ ಹೊರಗೆ ಬಂದು ಮಾಳಿಗೆ ಮೆಟ್ಟಿಲುಗಳ ಮೇಲಿಂದ ಉರುಳಿ ಬಿಡುತ್ತಾನೆ. ಅನಂತರ ತೀವ್ರವಾಗಿ ಗಾಯಗೊಂಡು ಪ್ರಜ್ಞೆತಪ್ಪಿದ ಅವಸ್ಥೆಯಲ್ಲಿರುವ ಅವನನ್ನು ಅವಳು ಆಸ್ಪತ್ರೆಗೆ ಕರೆದೊಯ್ಯುತ್ತಾಳೆ. ಅಲ್ಲಿ ಅವನು ಸತ್ತಿರುವುದು ಅವಳಿಗೆ ತಿಳಿಯುತ್ತದೆ.
ಇಡೀ ಚಿತ್ರದಲ್ಲಿ ಮುಖ್ಯವಾದ ನಟನೆ ಜರಗುವುದು ಇದೊಂದೇ. 2017ರ ಸೆಬಸ್ಟಿಯನ್ ಲೀಲೊ ನಿರ್ದೇಶನದ ʻಎ ಫೆಂಟಾಸ್ಟಿಕ್ ವುಮನ್ʼ ಚಿತ್ರದ ಪ್ರಾರಂಭದ ಚಿತ್ರದ ಈ ಭಾಗ ಮುಗಿಯಲು ತಗಲುವ ಅವಧಿ ಕೇವಲ ಹನ್ನೆರಡು ನಿಮಿಷಗಳು. ಅತ್ಯಂತ ತ್ವರಿತ ಗತಿಯಲ್ಲಿ ತಿರುಗುವ ಈ ಘಟನೆಯ ವಿವರಗಳ ನಂತರ ಚಿತ್ರದ ಉಳಿದ ಭಾಗವೆಲ್ಲ ನಿಧಾನ ಗತಿಯಲ್ಲಿ ನಿರೂಪಿತವಾಗಿದೆ. ತೀರಿಕೊಂಡವನಿಗೆ ಭಾವನಾತ್ಮಕವಾಗಿ ಸಂಬಂಧಿಸಿದವರು ಮರಿಯಾಳೊಂದಿಗೆ ನಡೆದುಕೊಳ್ಳುವ ಬಗೆಯನ್ನು ಕಾಣುತ್ತೇವೆ. ಒಬ್ಬೊಬ್ಬರ ಆಲೋಚನೆ ಒಂದೊಂದು ದಿಕ್ಕು. ಎಲ್ಲರಿಗೂ ಅವಳನ್ನು ಹುರಿದು ಮುಕ್ಕಲು ಕಾತರ. ಈ ಪ್ರಕ್ರಿಯೆಯಲ್ಲಿ ಮರಿಯಾಳ ಒಳತೋಟಿ, ಒಂಟಿತನ, ತವಕ ತಲ್ಲಣಗಳಲ್ಲದೆ ಉಬ್ಬರದ ಭಾವತೀವ್ರತೆಯನ್ನು ಹಂತಹಂತವಾಗಿ, ವಿಸ್ತಾರವಾಗಿ ನಿರೂಪಿಸಲ್ಪಟ್ಟಿವೆ.
ಒರ್ಲಾಂಡೊನ ಸಾವಿನ ಪ್ರಕರಣ ಅವಳ ಬದುಕನ್ನು ಛಿದ್ರ ಮಾಡುತ್ತದೆ. ಅನಿರೀಕ್ಷಿತ ಆಘಾತಕ್ಕೆ ಒಳಗಾಗಿ ಅವಳ ಮನೋ ಲಹರಿ ಧೂಳೀಪಟವಾಗುತ್ತದೆ. ಒರ್ಲಾಂಡೊ ಜೊತೆ ಪರಸ್ಪರ ಒಲವಿನ ನೇಯ್ಗೆ ನೇಯ್ದು ತನ್ನದೇ ಪ್ರಪಂಚದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಮರಿಯಾಳ ಬದುಕು ದಿಢೀರನೆ ಕೇಳುವವರಿಲ್ಲದೆ ಅತಂತ್ರವಾಗುತ್ತದೆ. ಒರ್ಲಾಂಡೊ ಸಮಾಜದಲ್ಲಿ ತನ್ನದೇ ವ್ಯಕ್ತಿತ್ವವಿರುವ ವ್ಯಕ್ತಿ. ಜೊತೆ ಅವನ ಸಂಸಾರ ಹಾಗೂ ಹತ್ತಿರದವರ ವಿಸ್ತಾರವೂ ಸೇರಿ ಅವನ ಬಗ್ಗೆ ಕಾಳಜಿ ಇರುವವರು ಅನೇಕ. ಅದಕ್ಕೆ ತದ್ವಿರುದ್ಧವಾಗಿ ಮಂಗಳಮುಖಿಯಾದ ಮರಿಯಾಳದು ಅವಳದೇ ದ್ವೀಪದಲ್ಲಿ ವಾಸ. ತನ್ನವರಿಂದ ಸಮಾಜದಿಂದ ಪ್ರತ್ಯೇಕ. ಹೀಗಾಗಿಯೇ ಇಡಿ ಚಿತ್ರದಲ್ಲಿ ಅವಳ ಪಡಿಪಾಟಲನ್ನು ಕೇಳುವವರು, ಸಮಾಧಾನ ಹೇಳುವವರು, ಸಲಹೆ ಕೊಡುವವರು ಯಾರೂ ಇಲ್ಲದಿರುವುದು ಪ್ರಪಂಚದ ಮಂಗಳಮುಖಿಯರ ದಯನಿಯನ್ನು ಪ್ರತಿನಿಧಿಸುವ ಬಗೆಯಲ್ಲಿದೆ. ಅವಳ ಪರಿಸ್ಥಿತಿ ಮಾನವೀಯತೆ ಕುರಿತಂತೆ ಪ್ರಶ್ನೆಗಳನ್ನು ತೂರುತ್ತವೆ. ಯಾವ ಪರಿಗಣನೆಯೂ ದೊರಕದ, ಪ್ರಾಣಿಗಳಿಗೆ ಲಭಿಸುವಂಥದೂ ಲಭಿಸದ ಸ್ಥಿತಿಯಲ್ಲಿರುವ ಅಂಥ ಜೀವದ ಪರಿ ಹೇಗಿರಬಹುದು? ಈ ಎಲ್ಲ ಒತ್ತಡ ಅವಳ ಮನಸ್ಸಿನ ಪದರುಗಳು ಹಿಂಡಿ ಹಿಪ್ಪೆಯಾದರೂ ಅವು ಮಾತಿನ ರೂಪ ಪಡೆಯಲು ನಾಲಗೆ ತಳದಿಂದ ಮೇಲೇರುವುದೇ ಇಲ್ಲ. ಉಳಿದವರೆಲ್ಲರೆಲ್ಲರ ಆಲೋಚನೆ ಮತ್ತು ವರ್ತನೆಗಳನ್ನು ಎದುರಿಸುವುದು ಅವಳಿಗೆ ಆಯ್ಕೆ ಇರದ ಅನಿವಾರ್ಯ. ಇವೆಲ್ಲದರ ಪರಿಣಾಮವಾಗಿ ಸಾಮಾಜಿಕ ಹಾಗೂ ಆರ್ಥಿಕ ಮಟ್ಟಕ್ಕೆ ಸಂಬಂಧಿಸಿದಂತೆ ಒರ್ಲಾಂಡೋನಿಗಿಂತ ಬಹಳ ಕಡಿಮೆ ಇರುವುದು ಒಂದಾದರೆ ಇನ್ನೊಂದು ಅವನ ಬದುಕು ಮತು ಭಾವನಾತ್ಮಕ ವಿಷಯಕ್ಕೆ ಸಂಬಂಧಪಟ್ಟಿದ್ದು.
ಆ ದಿನ ಅವಳ ಹುಟ್ಟುಹಬ್ಬವಾದ ಪ್ರಯುಕ್ತ ಒಟ್ಟಾಗಿ ಕೆಲವು ಕ್ಷಣಗಳನ್ನು ಹರ್ಷದಿಂದ ಹೊಟೇಲಿನಲ್ಲಿ ಸಂಭ್ರಮಿಸಿ ಕಳೆಯುತ್ತಾರೆ. ಅನಂತರ ರೂಮು ಸೇರಿ ಪರಸ್ಪರ ಸಂಗದಲ್ಲಿ ಇದ್ದಾಗಲೇ ಅವನ ಆರೋಗ್ಯದಲ್ಲಿ ಏರುಪೇರಾಗುತ್ತದೆ. ದಿಢೀರನೆ ರಕ್ತನಾಳ ರೋಗಕ್ಕೆ ತುತ್ತಾಗುತ್ತಾನೆ. ಗಾಬರಿಗೊಂಡ ಅವಳು ಅವರಿವರನ್ನು ಕರೆಯುವ ಆತುರದಲ್ಲಿ ಇದ್ದಾಗಲೇ ಅವನು ರೂಮಿನಿಂದ ಹೊರಗೆ ಬಂದು ಮಾಳಿಗೆ ಮೆಟ್ಟಿಲುಗಳ ಮೇಲಿಂದ ಉರುಳಿ ಬಿಡುತ್ತಾನೆ.
ಇವೆರಡನ್ನು ಅವಲಂಬಿಸಿದಂತೆ ಮೊದಲನೆಯದು ಲೌಕಿಕ ವಿಷಯಗಳನ್ನು ಕುರಿತದ್ದಾದರೆ ಇನ್ನೊಂದು ಮಂಗಳಮುಖಿಯಾದ ಅವಳಿಗೆ ಸಾಮಾನ್ಯವಾದ ರೀತಿಯಲ್ಲಿಲ್ಲದ ಭಾವನಾತ್ಮಕ ಸ್ವರೂಪದ್ದು. ಚಿತ್ರದುದ್ದಕ್ಕೂ ಭಾವಸಾಂದ್ರತೆಯ ದೃಶ್ಯಗಳು ನಿರೂಪಿಸಲ್ಪಟ್ಟಿವೆ. ಅಂಥ ದೃಶ್ಯಗಳಲ್ಲಿನ ಹೆಚ್ಚಿನ ತೀವ್ರತಮ ಭಾವನೆಗಳ ಅಭಿವ್ಯಕ್ತಿಗೆ ಸಮೀಪ ಚಿತ್ರಿಕೆಗಳನ್ನು ಬಳಸಿದ್ದಾರೆ ನಿರ್ದೇಶಕರು. ಮರಿಯಾಳ ಮಾತಿರದ ಅಭಿವ್ಯಕ್ತಿ ಎಷ್ಟೇ ನಿಯಂತ್ರಿವಾದರೂ ಹಿನ್ನೆಲೆ ವಸ್ತು, ಪರಿಕರಗಳು, ದೃಶ್ಯ ವಿನ್ಯಾಸ ಮತ್ತು ಅಲ್ಪ ಮಟ್ಟಿನ ಚಲನೆ ಇವುಗಳು ಕೂಡಿ ಉದ್ದೇಶಿತ ಪರಿಣಾಮ ಉಂಟುಮಾಡುತ್ತವೆ.
ಒರ್ಲಾಂಡೊನ ಸಾವಿಗೆ ಮರಿಯಾ ಕಾರಣವಿರಬಹುದೇ ಎಂದು ಆಸ್ಪತ್ರೆಯ ಸಿಬ್ಬಂದಿ ಅನುಮಾನಿಸುತ್ತಾರೆ. ಕಾರಣ ಅವನು ಮಹಡಿಯಿಂದ ಬಿದ್ದದ್ದರಿಂದ ಉಂಟಾದ ಗಾಯದ ಗುರುತುಗಳು. ಉಳಿದಂತೆ ಅವರ ಸಂಬಂಧ ಕುರಿತ ಇತರ ವೈಯಕ್ತಿಕ ಸಂಗತಿಗಳೂ ಇದಕ್ಕೆ ಪೋಷಣೆ ಕೊಡುತ್ತವೆ. ಅವಳಿಗೂ ಒರ್ಲಾಂಡೋಗೂ ಸಂಬಂಧ ಯಾವ ಬಗೆಯದು ಎಂಬ ಪ್ರಶ್ನೆ. ಡಾಕ್ಟರು ಮತ್ತು ಒರ್ಲಾಂಡೊನ ಸೋದರ, ಮಾಜಿ ಹೆಂಡತಿ, ಅವನ ಮಗ ಮುಂತಾದವರು ಮತ್ತು ಸಾವನ್ನು ಕುರಿತು ತನಿಖೆಗೆ ಬಂದ ಡಿಟೆಕ್ಟಿವ್ ಇತ್ಯಾದಿ ಅವರೆಲ್ಲ ಪ್ರತ್ಯೇಕವಾಗಿ ಅವಳನ್ನು ವಿಚಿತ್ರವಾಗಿ ವಿಭಿನ್ನ ರೀತಿಯಲ್ಲಿ ಅಮಾನವೀಯ ದೃಷ್ಟಿಕೋನದಿಂದ ನೋಡುತ್ತಾರೆ. ಸಂದೇಹ ಪಡುತ್ತಾರೆ.
ಮರಿಯಾಳನ್ನು ವಿಚಾರಿಸಲು ಬಂದ ಪೋಲೀಸ್ ಅವಳ ಐಡಿ ಕೇಳುತ್ತಾನೆ. ಅದರ ಅಡಿಯಲ್ಲಿ ಇರುವ ಹೆಸರು ಸಮಸ್ಯೆ ಉಂಟುಮಾಡುತ್ತದೆ. ಅವಳು ಅದು ತನ್ನದು ಎಂದು ಮರಿಯಾ ಎಂದರೆ ಅವನು ನಂಬುವುದಿಲ್ಲ. ಹೀಗಾದ ಪಕ್ಷದಲ್ಲಿ ಮರಿಯಾಳ ಸಂಪೂರ್ಣ ಶಾರೀರಿಕ ತಪಾಸಣೆ ಆಗಬೇಕೆಂದು ಡಿಟೆಕ್ಟಿವ್ ಉದ್ದೇಶಿಸುತ್ತಾಳೆ. ಅದನ್ನು ನೆರವೇರಿಸಲು ಡಾಕ್ಟರೊಬ್ಬನ ನಿಯೋಜಿತನಾಗುತ್ತಾನೆ. ಇಂಥದನ್ನು ನಿರೀಕ್ಷಿಸಿರದ ಮರಿಯಾಳಿಗೆ ಪ್ರತಿಯೊಂದೂ ಅಚ್ಚರಿ ಮತ್ತು ಭಯ ಹುಟ್ಟಿಸುತ್ತದೆ. ಅದನ್ನು ಪ್ರಶ್ನಿಸುತ್ತಾಳೆ ಕೂಡ.
ಒಂದು ವೇಳೆ ತನ್ನ ಪರಿಪೂರ್ಣ ಶೋಧನೆಗೆ ಒಪ್ಪದಿದ್ದರೆ ಕೋರ್ಟಿಗೆ ಹೋಗಬೇಕಾಗುತ್ತದೆ ಎಂದು ಡಿಟೆಕ್ಟಿವ್ ಸವಾಲೆದಾಗ ಎದೆಗುಂದುವುದಿಲ್ಲ. ಹೆಚ್ಚಿನ ಉಸಾಬರಿ ಏಕೆ ಎಂದು ಮರಿಯಾ ಮಾತಿಲ್ಲದೇ ಒಪ್ಪುತ್ತಾಳೆ. ಆದರೂ ಸ್ವಭಾವಸಹಜವಾದ ಹಿಂಜರಿಕೆ. ಜೊತೆಗೆ ತನ್ನ ಒಪ್ಪಿಗೆಯಿಲ್ಲದೆ ಸಂಪೂರ್ಣ ಬೆತ್ತಲಾಗುವ ಶಿಕ್ಷೆ ಎನ್ನುವ ರೋಷ. ಅವಳ ಮನಸ್ಸಿನಲ್ಲಾಗುವ ಚಂಡೆಯ ಬಡಿತವನ್ನು ನಮ್ಮ ಊಹೆಗೆ ಬಿಟ್ಟು ಹಿನ್ನೆಲೆ ಸಂಗೀತ ಸಂಪೂರ್ಣ ಸೊನ್ನೆ. ಇದಕ್ಕೆ ಒಳಪಡುವುದು ಹೇಗೆ ಎಂಬ ಅವಳ ಪರಿಸ್ಥಿತಿಯನ್ನು ಹಲವು ಬಗೆಯಲ್ಲಿ ಕ್ಲೋಸ್ಅಪ್ ಚಿತ್ರಿಕೆಗಳಿಂದ ನಮಗೆ ಮನವರಿಕೆ ಮಾಡಿಕೊಡುತ್ತಾನೆ ನಿರ್ದೇಶಕ.
ಇದು ಅವಳ ಉರುಳುವ ಪ್ರಪಾತಕ್ಕೆ ಪ್ರಪಾತದ ಮೊದಲ ಹೆಜ್ಜೆಯಷ್ಟೆ. ಯಾವ ಬಗೆಯ ಮುಜುಗರವೂ ಇಲ್ಲದೆ ತನಗೊಂದು ಅಸ್ತಿತ್ವ ಇರುವುದನ್ನೇ ನಿರಾಕರಿಸಿ, ತನ್ನೆದುರು ನಿಂತ ಡಿಟೆಕ್ಟಿವ್ ಮತ್ತು ಡಾಕ್ಟರ್‌ರ ಅಪ್ಪಣೆಯಂತೆ ಅವಳು ಕಲ್ಲಿನಂತೆ ಮುಖಚಹರೆಯಿಂದ ಬಟ್ಟೆಗಳನ್ನು ಕಳಚುತ್ತಾಳೆ. ಕೈ, ಕಾಲು ಸೇರಿದ ಅವಳ ದೇಹದ ಭಾಗಗಳಲ್ಲದೆ ಅವರು ಮುಖ್ಯವಾಗಿ ಪರೀಕ್ಷಿಸಬೇಕೆಂದಿದ್ದ ಭಾಗವನ್ನು ಮುಖ್ಯವಾಗಿ ಪರೀಕ್ಷೆಗೆ ಒಳಪಡಿಸುತ್ತಾರೆ. ಅವಳು ತುತ್ತಾದ ಅತ್ಯಂತ ಹೀನ ಅವಸ್ಥೆಯನ್ನು ನಮಗೆ ಅರಿವು ಮಾಡಿಕೊಡಲು ನಮ್ಮ ಕಲ್ಪನೆಯ ಅಗತ್ಯವನ್ನು ನಿರ್ದೇಶಕ ಬಯಸುತ್ತಾನೆ. ಆದರೂ ಅವಳು ಅನಾಥ ಸ್ಥಿತಿಗೆ ಒಳಪಟ್ಟವಳಂತೆ ಕಾಣಿಸಲು ಇಷ್ಟ ಪಡದೆ ಕೇವಲ ನಿರ್ಭಾವ ಚಹರೆಯನ್ನು ಪ್ರಕಟಿಸುತ್ತಾಳೆ.
ತನ್ನ ಅಸ್ಮಿತೆಯನ್ನೇ ನಾಶಮಾಡಿದ ಪ್ರಕರಣದ ನಂತರ ಮರಿಯಾಳಿಗೆ ಅರ್ಧ ಶಕ್ತಿ ಉಡುಗಿ ಹೋದಂತಾಗುತ್ತದೆ. ಒರ್ಲಾಂಡೋನ ಮಾಜಿ ಹೆಂಡತಿ ಸೋನಿಯಾ ಮತ್ತು ಅವನ ಮಗ ಫ್ಲಾಟ್ ಪರೀಕ್ಷಿಸಲು ಬಂದು ಅವಳ ಜೊತೆ ಹೀನಾಯವಾಗಿ ನಡೆದುಕೊಳ್ಳುತ್ತಾರೆ. ಆದರೆ ಅವಳು ಪ್ರಚೋದಿಸುವ ಪ್ರತಿಕ್ರಿಯೆ ತೋರಿಸುವುದಿಲ್ಲ. ಯಾರು ಎಷ್ಟು ಬಗೆಯಲ್ಲಿ ತಿವಿಯಲು ನೋಡಿದರೂ ಅವಳಿಗೆ ತನ್ನ ಹಾಗೂ ಒರ್ಲಾಂಡೊ ಪ್ರೀತಿಯ ಸಂಬಂಧದ ಬಗ್ಗೆ ಸಂಪೂರ್ಣ ಭರವಸೆ ಹಾಗೂ ಧೈರ್ಯವನ್ನು ಉದ್ದೀಪಿಸಿ ಅವಳನ್ನು ಮುನ್ನಡೆಸುತ್ತದೆ. ಅವಳಿಗೆ ಪ್ರಸ್ತುತ ಸಂದರ್ಭದ ಅರಿವು ಸಂಪೂರ್ಣವಾಗಿ ಇರುತ್ತದೆ. ತಾನೊಬ್ಬಳು ಏಕಾಂಗಿ. ಅನೇಕ ಎದುರು ಶಕ್ತಿಗಳ ವಿರುದ್ಧ ಹೊರಡುತ್ತಿದ್ದೇನೆ ಎಂಬ ಭಾವ ಅದಮ್ಯವಾಗಿರುತ್ತದೆ. ಅದನ್ನು ರೂಪಕದ ಮೂಲಕ ನಿರ್ದೇಶಕರು ಪ್ರಸ್ತುತಪಡಿಸುತ್ತಾರೆ. ಅಬ್ಬರದ ಗಾಳಿ ಬೀಸುವಾಗ ಅದರೆದುರು ಮುನ್ನುಗ್ಗುವುದು ಕಷ್ಟವಾದರೂ ಸೋಲೊಪ್ಪಿಕೊಳ್ಳದೆ ಹೆಜ್ಜೆ ಇಡುವ ಚಿತ್ರಿಕೆಗಳಿಂದ ನಮಗೆ ತಿಳಿಯುತ್ತದೆ.
ಮರಿಯಾ ಎದುರಿಸಬೇಕಾಗಿರುವುದು ವರ್ತಮಾನದ ಸಂಗತಿಗಳಾದರೂ ಮಾನಸಿಕವಾಗಿ ಅವಳು ಬೇರೆಯೇ ಆಗಿರುತ್ತಾಳೆ. ಒರ್ಲಾಂಡೊ ಯಾವಾಗಲೂ ಸಮೀಪದಲ್ಲಿ ಇದ್ದಾನೆ ಎನ್ನುವ ಭಾವನೆ ಅವಳಿಗೆ. ಹೀಗಾಗಿ ಅವಳು ಕಾರಿನಲ್ಲಿ ಹೋಗುವಾಗ ಹಿಂಬದಿಯ ಸೀಟಿನಲ್ಲಿ ಅವನು ಕುಳಿತಿರುವಂತೆ ತೋರುವುದು, ಹಾಡುಗಳ ಮಧ್ಯೆ ಉಳಿದವರೆಲ್ಲ ಮಾಯವಾಗಿ ಅಷ್ಟು ದೂರದಿಂದ ತನ್ನೆಡೆಗೆ ಹಸನ್ಮುಖಿಯಾಗಿ ನಡೆದು ಬರುತ್ತಿರುವಂತೆ ಕಾಣುವುದು ಮತ್ತು ಎಲ್ಲರೂ ಮರೆಯಾಗಿ ಬೆಳ್ಳಿ ಪದರುಗಳ ರೆಕ್ಕೆಗಳು ಮೂಡಿ ಹಾರಾಡುತ್ತಿರುವ ಭಾವನೆಯಿಂದ ನರ್ತಿಸುವುದನ್ನು ಕಲ್ಪಿಸಿಕೊಳ್ಳುತ್ತಾಳೆ.
ಒರ್ಲಾಂಡೊನ ಮನೆಯವರು ಅವನ ಶರೀರಕ್ಕೆ ಸಂಬಂಧಿಸಿದ ಯಾವುದೇ ವಿಧ್ಯುಕ್ತ ಕ್ರಿಯೆಗೆ ಅವಳು ಹಾಜರಾಗುವುದನ್ನು ಸುತರಾಂ ಒಪ್ಪುವುದಿಲ್ಲ. ಅವಳೊಬ್ಬಳು ಪೀಡೆ ಇಲ್ಲಿಗೇಕೆ ಬಂದಳು ಎಂಬ ನಿಲುವು ಅವರದು. ಅವಳು ಸಂಪೂರ್ಣ ನಿರ್ಗತಿಗಳಂತೆ ಕಾಣುವುದನ್ನು ಖಾಲಿ ರಸ್ತೆಗಳಲ್ಲಿ ಒಂಟಿಯಾಗಿ ನಡೆಯುವ ಹಲವು ದೃಶ್ಯಗಳಲ್ಲಿ ಕಾಣುತ್ತೇವೆ. ಸ್ಯಾಂಟಿಯಾಗೋ ನಗರ ಮರಿಯಾಳ ದೃಷ್ಟಿಕೋನದಿಂದ ನಿರ್ಜನ. ಒರ್ಲಾಂಡೊನ ಚಿತಾಗಾರಕ್ಕೆ ಅವನೇ ಕರೆದುಕೊಂಡು ಹೋದಂತೆ ಭಾಸವಾಗಿ ಅವನನ್ನು ಹಿಂಬಾಲಿಸುತ್ತಾಳೆ. ಅನಿಸಿಕೆಯೊಂದು ನಿಜವಾಗಿ ಬಿಡುವಷ್ಟು ಪ್ರಬಲವಾಗುತ್ತದೆ. ತನ್ನ ಪ್ರೀತಿಯ ವ್ಯಕ್ತಿಯನ್ನು ಚಿತಾಗಾರದಲ್ಲಿ ತಳ್ಳಿ, ಅದನ್ನು ಸುಡುವ ಬೆಂಕಿಯಲೆಗಳನ್ನು ಕಾಣುವ ಪರಿಸ್ಥಿತಿ ತಲುಪುತ್ತಾಳೆ. ಯಾವುದೇ ಸಂದರ್ಭದಲ್ಲಿಯೂ ಯಾರೊಡನೆ ವ್ಯವಹರಿಸಬೇಕಾದರೆ ಅವಳ ಭಾವ ತೀವ್ರತೆಯನ್ನು ವಿವಿಧ ರೂಪಕಗಳ ಮುಖಾಂತರ ನಮಗೆ ದಕ್ಕುತ್ತದೆ.
ಉದಾಹರಣೆಗೆ ಒರ್ಲಾಂಡೋನ ಫ್ಲಾಟ್ ತಪಾಸಣೆಯ ಸಮಯದಲ್ಲಿ ಅವನ ಮಗ ಬಂದಾಗ ಅವಳ ಪರಿಸ್ಥಿತಿಯನ್ನು ಕಸದ ಬುಟ್ಟಿಯ ರೂಪದಲ್ಲಿರುವಂತೆ ನಿರ್ದೇಶಕ ನಿರೂಪಿಸುತ್ತಾನೆ. ಇದಲ್ಲದೆ ಅವಳು ಹತ್ತಿಪ್ಪತ್ತು ಮೆಟ್ಟಿಲುಗಳನ್ನು ಇಳಿಯುವುದು ಮತ್ತು ಹತ್ತುವುದು ಮುಂತಾದ ಕ್ರಿಯೆಗಳಲ್ಲಿ ತೊಡಗುವುದನ್ನು ಕಾಣುತ್ತೇವೆ. ಎಷ್ಟೆಲ್ಲ ಅಮಾನವೀಯತೆಗೆ ಒಳಗಾದರೂ ಛಲ ಬಿಡದ ಸ್ವಭಾವದಿಂದ ತನಗೊಂದು ಅಸ್ತಿತ್ವವಿದೆ ಎನ್ನುವುದನ್ನು ಕಾಪಾಡಿಕೊಂಡು ಸಮಸ್ಥಿತಿ ತಲುಪಲು ಶ್ರಮಿಸುತ್ತಾಳೆ. ಈ ಪ್ರಕ್ರಿಯೆಯಲ್ಲಿ ಸಂಪೂರ್ಣ ಸಫಲಳಾಗಿದ್ದಾಳೆ ಎನ್ನುವುದನ್ನು ಸೂಚಿಸುವಂತೆ ಮತ್ತೆ ಅವಳು ಪುನಃ ನೈಟ್ ಕ್ಲಬ್ ನಲ್ಲಿ ಹಾಡುವುದರ ಮೂಲಕ ನಿರ್ದೇಶಕ ಸೂಚಿಸುತ್ತಾನೆ.
ಅತ್ಯಂತ ಭಾವಪೂರ್ಣ ನಿಯಂತ್ರಣ ಅಭಿನಯವುಳ್ಳ ಈ ಚಿತ್ರಕ್ಕೆ ಅತ್ಯುತ್ತಮ ವಿದೇಶಿ ಆಸ್ಕರ್ ಪ್ರಶಸ್ತಿ ದೊರೆತಿರುವುದು ಅಚ್ಚರಿಯಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ನಿಜವಾದ ಮಂಗಳಮುಖಿ ದನಿಲ ವೇಗಳನ್ನೇ ಮರಿಯಾಳ ಪಾತ್ರಕ್ಕೆ ಆಯ್ಕೆಮಾಡಿಕೊಂಡಿರುವುದು ಚಿತ್ರದ ವಿಶೇಷ. ಜೊತೆಗೆ ನಿರ್ದೇಶಕರ ಅಪೇಕ್ಷೆಯನ್ನು ಪೂರೈಸಿರುವ ಆ ನಟಿಯೂ ಅಭಿನಯಿಸಿರುವುದಕ್ಕೆ ನಿರ್ದೇಶಕ ಸೆಬಸ್ತಿಯನ್ ಲೀಲೋರನ್ನು ಎಷ್ಟು ಪ್ರಶಂಸಿಸಿದರರೂ ಕಡಿಮೆಯೇ. ಚಿತ್ರದ ಪ್ರಮುಖ ಅಂಗವಾದ ಛಾಯಾಗ್ರಹಣ ಮತ್ತು ಸಂಕಲನ ವಲಯದವರ ಸಹಕಾರ ಇದಕ್ಕೆ ಪೂರಕವಾಗಿರುವುದನ್ನು ಹೆಸರಿಸದೆ ಇರುವುದು ಹೇಗೆ ಸಾಧ್ಯ?
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.