ಮನುಷ್ಯರು ಒಳ್ಳೆಯ ವಿಚಾರಗಳನ್ನೇ ಆಯ್ಕೆ ಮಾಡಿ ಅದೇ ದಾರಿಯಲ್ಲಿ ನಡೆಯಲು ಸಾಯುಜ್ಯ, ಮೋಕ್ಷ ಎಂಬ ಪರಿಕಲ್ಪನೆಗಳನ್ನು ಹಿರಿಯರು ಪ್ರತಿಪಾದಿಸಿದ್ದಾರೆ. ದೇವರು ಎಂಬ ಪರಿಕಲ್ಪನೆಯೂ ಇದೇ ಮಾದರಿಯದು ಎಂದೇ ಇಟ್ಟುಕೊಳ್ಳುವುದಾರೆ, ದೇವರನ್ನು ತಲುಪಲು ಎರಡು ದಾರಿಗಳನ್ನು ಆಯ್ಕೆ ಮಾಡಿಕೊಂಡಿರುವುದು ಪ್ರಧಾನವಾಗಿ ತೋರುತ್ತದೆ. ತಪಸ್ಸು, ಅಧ್ಯಯನ ಅನುಶಾಸನದಂತಹ ವಿಧಾನಗಳು ಒಂದು ದಾರಿ. ಹಾಡು, ನೃತ್ಯ, ಚಿತ್ರ ಮುಂತಾದ ಲಲಿತಕಲೆಗಳ ಮೂಲಕ ನಡೆಯುವ ದೇವರ ಆರಾಧನೆಯು ಇನ್ನೊಂದು. ಎರಡೂ ದಾರಿಯನ್ನು ಸದೃಢಗೊಳಿಸಲು ಆಧಾರವಾಗಿ ನಿಲ್ಲುವುದು ಭಾರತ ಕತೆ. ಅದು ಸರಳವಾದ ಓದಿಗೆ ದಕ್ಕುವುದು ವಚನ ಭಾರತ ವೆಂಬ ಕೃತಿಯಲ್ಲಿ.
‘ವಚನ ಭಾರತ’ ಪುಸ್ತಕದ ಓದಿನ ನೆನಪುಗಳನ್ನು ಉಲ್ಲೇಖಿಸಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

ನಮ್ಮ ಕಣ್ಣುಗಳು ನಾವು ನಿಂತ ಕೇಂದ್ರದಿಂದ ಸುಮಾರು 180 ಡಿಗ್ರಿಯವರೆಗಿನ ವಸ್ತುಗಳನ್ನು ಸಾಧಾರಣವಾಗಿ ಗ್ರಹಿಸಬಲ್ಲುದು. ಈ ಭೂಮಿಯ ಮೇಲೆ ಎಲ್ಲ ವಸ್ತುಗಳ ಗ್ರಹಿಕೆಯ ಕ್ರಮವೂ ಏಕ ಕಾಲಕ್ಕೆ ಒಂದು ಪಾರ್ಶ್ವದಿಂದ ಮಾತ್ರ ಸಾಧ್ಯವಾಗುತ್ತದೆ. ಸೂರ್ಯದೇವನೂ ಒಂದು ಹೊತ್ತಿಗೆ ಭೂಮಿಯ ಒಂದು ಭಾಗವನ್ನಷ್ಟೇ ಬೆಳಗಬಲ್ಲನು ಅಲ್ಲವೇ. ಒಂದು ನಿರ್ದಿಷ್ಟ ಬಿಂದುವಿನಲ್ಲಿ , ನಿರ್ದಿಷ್ಟ ಕಾಲದಲ್ಲಿ ನಮ್ಮ ತಿಳಿವಳಿಕೆ ಕೂಡ ಸೀಮಿತವಾಗಿಯೇ ಇರುತ್ತದೆ ಎನಿಸುತ್ತದೆ. ನಮ್ಮ ತಿಳಿವಿನ ಇನ್ನೊಂದು ಆಯಾಮವನ್ನು ಅರಿಯಬೇಕಾದರೆ ನಾವು ಇನ್ನೊಂದು ಕೇಂದ್ರದಲ್ಲಿ ನಿಂತು ನೋಡಬೇಕಾಗುತ್ತದೆ. ಆದರೆ ಈ ಜಗತ್ತು ಪ್ರತಿಕ್ಷಣವೂ ಚಲಿಸುತ್ತಲೇ ಇರುವುದರಿಂದ ಇನ್ನೊಂದು ಕೇಂದ್ರಕ್ಕೆ ಸಾಗುವ ವೇಳೆಗೆ ಹಿಂದಿನ ಗ್ರಹಿಕೆ ದಕ್ಕುವುದಿಲ್ಲ. ಹಾಗಾಗಿ ಯಾವತ್ತೇ ಆಗಲಿ, ನಮ್ಮ ಗ್ರಹಿಕೆ ಪರಿಪೂರ್ಣ ಎನ್ನುವುದು ಅಥವ ಸಮಗ್ರ ಗ್ರಹಿಕೆಯನ್ನು ಹೊಂದುವುದು ಕಷ್ಟವೇ. ಕಾಲ, ಗತಿಶೀಲತೆ ಮತ್ತು ಮನುಷ್ಯನ ಗ್ರಹಿಕೆಯ ಸೀಮಿತತೆಯ ಬಗ್ಗೆ ತತ್ವಜ್ಞಾನಿಗಳೂ ವಿಜ್ಞಾನಿಗಳೂ ಎಷ್ಟೆಲ್ಲ ಚರ್ಚೆಯನ್ನು ಮಾಡಿದ್ದಾರೆ !

ಹೀಗೆ ನನ್ನ ತಿಳಿವಿನ ಪರಿಧಿಯನ್ನು ವಿಸ್ತರಿಸಲು ಸದಾ ಆಕರದಂತೆ ಭಾಸವಾಗುವ ಪುಸ್ತಕ ‘ವಚನ ಭಾರತ’. ಅದಕ್ಕಾಗಿಯೇ ನನ್ನ ಮೆಚ್ಚಿನ ಪುಸ್ತಕಗಳ ಸಾಲಿನಲ್ಲಿ ಈ ಪುಸ್ತಕ ಮೊದಲನೆಯದಾಗಿ ನಿಲ್ಲುತ್ತದೆ. ಪ್ರತಿಬಾರಿ ಈ ಪುಸ್ತಕದ ಕೆಲವೇ ಪುಟಗಳನ್ನು ತಿರುವಿದಾಗಲೂ ನನಗೆ ಹೊಸದೊಂದು ನೋಟವನ್ನು ಕೊಡಬಲ್ಲ, ಅಥವಾ ನನ್ನ ಗ್ರಹಿಕೆಯ ಸೀಮಿತತೆಯನ್ನು ನೆನಪಿಸಿಕೊಡಬಲ್ಲ ಪುಸ್ತಕ ಇದು.

(ಎ. ಆರ್‌. ಕೃಷ್ಣಶಾಸ್ತ್ರಿ)

ಮಹಾಭಾರತದ ಕತೆಯನ್ನು ಹೇಳುವ ಈ ವಚನ ಭಾರತ ಬರೆದವರು ಎ. ಆರ್‌. ಕೃಷ್ಣಶಾಸ್ತ್ರಿ. ಮಹಾಭಾರತದ ಸುದೀರ್ಘ ಕತೆಯಲ್ಲಿ ಕೆಲವು ಕತೆಗಳನ್ನಾದರೂ ಸಾಮಾನ್ಯವಾಗಿ ಬಾಲ್ಯದಲ್ಲಿ ಎಲ್ಲರೂ ಕೇಳಿಯೇ ಇರುತ್ತಾರೆ. ಚಂದಮಾಮ ಪುಸ್ತಕಗಳಲ್ಲಿ, ಯಕ್ಷಗಾನ ಪ್ರಸಂಗಗಳಲ್ಲಿ, ನಾಟಕ ಅಥವಾ ಮತ್ಯಾವುದೋ ನೃತ್ಯ ಕಾರ್ಯಕ್ರಮಗಳಲ್ಲಿ ಭಾರತ ಕತೆಯ ತುಣುಕುಗಳು ಕಾಣಸಿಗುತ್ತವೆ. ಲಲಿತಕಲೆಗಳು ಭಾರತ ಕತೆಯ ಪುಟ್ಟ ಪುಟ್ಟ ವಿಚಾರಗಳನ್ನು ಸದಾ ಹೇಳುತ್ತಲೇ ಇರುತ್ತವೆ. ಹಾಗೆಯೇ ಬೆಳೆದ ನಾನು ಪ್ರೌಢಶಾಲೆಯಲ್ಲಿ ವಚನ ಭಾರತದ ತುಣುಕೊಂದನ್ನು ಪಾಠವನ್ನಾಗಿಯೂ ಓದಿದ್ದುಂಟು. ಪದವಿ ಗಳಿಕೆಗಾಗಿ ನಡೆಸುವ ಓದು ಮುಗಿದ ನಂತರವೇ ವಚನ ಭಾರತ ಎನ್ನುವ ಈ ಪುಸ್ತಕ ಕೈಗೆ ಸಿಕ್ಕಿತು. ಇಷ್ಟರಲ್ಲಿ ಎಸ್‌.ಎಲ್‌. ಭೈರಪ್ಪ ಅವರ ’ಪರ್ವ’ ಪುಸ್ತಕವನ್ನೂ, ಯುಗಾಂತ, ಮಹಾಕ್ಷತ್ರಿಯ, ಯಯಾತಿ ಮುಂತಾದ ಅನೇಕ ಪುಸ್ತಕಗಳನ್ನು ಓದಿ ಖುಷಿಪಟ್ಟಿದ್ದಾಗಿತ್ತು. ಎಲ್ಲ ಪುಸ್ತಕಗಳೂ ಮಹಾಭಾರತದ ಮೂಲ ಕಥೆಯಿಂದಲೇ ಪ್ರೇರಪಣೆ ಪಡೆದು ಅದರ ಪರವಾಗಿ, ವಿರುದ್ಧವಾಗಿ, ಅಥವಾ ವಿಕಾಸ ರೂಪದಲ್ಲಿ ಅರಳುತ್ತ ಸಾಗುತ್ತವೆಯಲ್ಲ. ಹಾಗಾಗಿ ಮೂಲ ಮಹಾಭಾರತ ಓದಬೇಕು ಎಂದು ಆಗೀಗ ಅನಿಸುತ್ತಿತ್ತು. ಆದರೆ ಸಂಸ್ಕೃತ ಮಹಾಭಾರತವನ್ನು ಓದುವುದು ಕಷ್ಟ. ಯಾರದೇ ನೆರವಿಲ್ಲದೇ ಹಳೆಗನ್ನಡದ ಕಾವ್ಯಗಳನ್ನು ಓದುವುದು ದೂರದ ಮಾತು. ಇನ್ನು ಕುಮಾರವ್ಯಾಸ ಬರೆದ ಕಾವ್ಯವನ್ನು ಒಂದಿಷ್ಟು ಓದುವುದು ಸಾಧ್ಯವಾದರೂ, ಸ್ವತಂತ್ರವಾಗಿ ಹೆಚ್ಚು ಅರಿಯುವ ಪ್ರಯತ್ನ ಮಾಡುವುದು ಕಷ್ಟ ಎಂಬ ಸ್ಥಿತಿಯಲ್ಲಿದ್ದ ನನಗೆ ವಚನ ಭಾರತ ಎಂಬ ಗದ್ಯ ಕೃತಿಯನ್ನು ನೋಡಿ ತುಂಬ ಖುಷಿಯಾಯಿತು.

ವಚನ ಭಾರತದ ಪೀಠಿಕೆಯ ಭಾಗವನ್ನೇ ಬಹು ನಿಧಾನವಾಗಿ ದೀರ್ಘಕಾಲ ಓದಬೇಕಾಗುತ್ತದೆ. ಈ ಮುನ್ನುಡಿಯೇ, ಯಾರಿಗೇ ಆದರೂ ಭಾರತೀಯ ದರ್ಶನ ವಿಚಾರದಲ್ಲಿ ಕುತೂಹಲ ಮೂಡಿಸುಂತೆ ಇದೆ. ಹೊಸ ಹೊಸ ಓದಿಗೆ ಪ್ರೇರೇಪಿಸುವ ರೀತಿಯಲ್ಲಿ ಇರುವ ಪೀಠಿಕೆಯು ಭಾರತ ಕತೆಯನ್ನು ಗ್ರಹಿಸಿಕೊಳ್ಳುವುದಕ್ಕೂ ಭಾರತೀಯ ಜ್ಞಾನ ಪರಂಪರೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೂ ಒಂದು ಚಂದದ ಕಿಟಕಿಯಂತೆ ಸುಂದರವಾಗಿ ಮೂಡಿಬಂದಿದೆ. ಮಹಾಭಾರತದ ಕಥೆಯ ಸಂಗ್ರಹಿತ ಭಾಗವನ್ನು ಗದ್ಯರೂಪದಲ್ಲಿ ಕೊಟ್ಟಿದ್ದಾಗಿ ಇಲ್ಲಿ ಲೇಖಕರೇ ಹೇಳುತ್ತಾರೆ.

*****

ಚಿಕ್ಕಂದಿನಲ್ಲಿ ಫ್ರೆಂಡ್ಸ್‌ ಎಲ್ಲ ಸೇರಿ ಒಂದು ಎಕ್ಸರ್‌ಸೈಜ್‌ ಮಾಡುತ್ತಿದ್ದೆವು. ವಿಜ್ಞಾನದ ಶಿಕ್ಷಕರೊಬ್ಬರು ಇದನ್ನು ಹೇಳಿಕೊಟ್ಟಿದ್ದರು. ಕುಳಿತಲ್ಲಿಯೇ ಕಣ್ಣುಮುಚ್ಚಿ ಸುತ್ತಲಿನ ಪರಿಸರವನ್ನು ಮನಸ್ಸಿಗೆ ತಂದುಕೊಳ್ಳಿ. ತುಸು ಹೊತ್ತಿನ ಬಳಿಕ ನಿಮ್ಮನ್ನೇ ಕೇಂದ್ರವಾಗಿರಿಸಿಕೊಂಡು ಊರನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿ. ಬಳಿಕ ಅದೇ ರೀತಿ ನಿಮ್ಮನ್ನೇ ಕೇಂದ್ರವಾಗಿಸಿಕೊಂಡು ಪರಿಧಿಯನ್ನು ವಿಸ್ತರಿಸುತ್ತಾ, ಜಗತ್ತನ್ನು ಗ್ರಹಿಸಬಹುದೇ? ಹೀಗೆಯೇ ದೇಶವನ್ನೋ, ಜಗತ್ತನ್ನೋ ಕಲ್ಪಿಸಿಕೊಂಡಾಗ ನಮ್ಮ ಅಸ್ತಿತ್ವ ಎಷ್ಟೊಂದು ಚಿಕ್ಕದಾಗಿಬಿಡುತ್ತದೆ. ಈ ಕಲ್ಪನೆಯ ಪರಿಧಿಯು ಈ ಭೂಮಿಯ ಅಂಚಿನವರೆಗೆ ವಿಸ್ತರಿಸಿದರೆ ನಾವೊಂದು ಬಿಂದುವೂ ಆಗಿರುವುದಿಲ್ಲ ಎಂದು ಮನಸ್ಸಿಗೆ ತೋರುತ್ತದೆ. ಅದೇ ರೀತಿ ಬ್ರಹ್ಮಾಂಡದ ಕಲ್ಪನೆ, ನಕ್ಷತ್ರ ಪುಂಜಗಳ ನಡುವೆ ನಮ್ಮ ಸೌರ ಮಂಡಲದ ಕಲ್ಪನೆ ಮಾಡಲು ಪ್ರಯತ್ನಿಸುವಷ್ಟರಲ್ಲಿ ‘ನಾನು’ ಎಂಬ ಅಸ್ತಿತ್ವ ವಾಸ್ತವವಾಗಿ ಎಷ್ಟು ಚಿಕ್ಕದು ಎನ್ನುವುದು ಗೊತ್ತಾಗುತ್ತದೆ. ಹೀಗೆ ಯೋಚಿಸಲು ಹೇಳಿಕೊಟ್ಟವರು ವಿಜ್ಞಾನದ ಮೇಷ್ಟರಾದರೂ, ನಿಜವಾಗಿಯೂ ಅವರು ತತ್ವಶಾಸ್ತ್ರವನ್ನೇ ತಿಳಿಸಿಕೊಟ್ಟಿದ್ದರು ಎನಿಸುತ್ತದೆಯೀಗ.

ಹೀಗೆ ಯೋಚಿಸಿದಾಗ, ಅನೇಕ ಭ್ರಮೆಗಳು ಕಳಚಿಕೊಂಡು, ನಮ್ಮ ಗ್ರಹಿಕೆಯ ಹಂದರವೇ ಕುಸಿದು ಬೀಳುತ್ತದೆ. ಪರಿಧಿಯನ್ನು ವಿಸ್ತರಿಸಲಾರದೇ ಇದ್ದಾಗ ನಮ್ಮ ಅಸ್ತಿತ್ವದ ಸೀಮಿತತೆ ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. ಈ ಉದಾಹರಣೆಯನ್ನೇ ಪುಸ್ತಕ ಲೋಕಕ್ಕೆ ಅನ್ವಯಿಸಬಹುದು. ಹಾಗಾಗಿ ಜಗತ್ತಿನ ಜ್ಞಾನಭಂಡಾರವು ಪುಸ್ತಕ ರೂಪದಲ್ಲಿ ನಮಗೆ ಸಿಗುತ್ತಿದೆ ಎನ್ನುವುದಕ್ಕೇ ನಾವು ಕೃತಜ್ಞರಾಗಿರಬೇಕು. ಅಷ್ಟಾದರೂ ಎಲ್ಲವನ್ನೂ ಓದುವಷ್ಟು ಕಾಲಾವಕಾಶವೂ, ಶಕ್ತಿಯೂ ನಮ್ಮಲ್ಲಿ ಇರುವುದಿಲ್ಲ.

ಮಹಾಭಾರತ ಕೃತಿಯೇ ಬಹುದೊಡ್ಡ ಗ್ರಂಥ. ಕೃತಿಯ ಪೀಠಿಕೆಯಲ್ಲಿ ಇರುವಂತೆ, ಹರಿವಂಶವೂ ಸೇರಿದರೆ ಅದು ಒಂದು ಲಕ್ಷ ಶ್ಲೋಕಗಳಿಗಿಂತ ಹೆಚ್ಚಾಗುತ್ತದೆ. ಇಷ್ಟು ದೊಡ್ಡ ಗಾತ್ರದ ಗ್ರಂಥ ವಿಶ್ವ ಸಾಹಿತ್ಯದಲ್ಲಿಯೇ ಮತ್ತೊಂದಿಲ್ಲ. ಭಾರತದಲ್ಲಿ ರಾಮಾಯಣ, ಮಹಾಭಾರತಕ್ಕೆ ಮಹತ್ವ ಇರುವಂತೆ ಗ್ರೀಕ್‌ನಲ್ಲಿ ಇಲಿಯಡ್‌ ಮತ್ತು ಒಡೆಸ್ಸಿ ಗ್ರಂಥಗಳಿಗೆ ಮಹತ್ವ ಇದೆ. ಆದರೆ ಅವೆರಡೂ ಗ್ರಂಥಗಳನ್ನು ಒಟ್ಟು ಕೂಡಿಸಿದರೂ ಅದು ಮಹಾಭಾರತದ ಎಂಟರಲ್ಲಿ ಒಂದು ಭಾಗ ಮಾತ್ರವಾಗುತ್ತದೆ.

ಮಹಾಭಾರತ ಕಥೆಯ ಕಾಲ ಯಾವುದು?, ಅದು ಇತಿಹಾಸವೇ, ನಾಗರಿಕತೆಯು ಬೆಳೆಯುತ್ತಿದ್ದಂತೆಯೇ ತಾನೂ ಬೆಳೆಯುತ್ತಾ ಬಂದ ಒಂದು ಸಂಸ್ಕೃತಿ ಕಥನವೇ ಎಂಬೆಲ್ಲ ಪ್ರಶ್ನೆಗಳನ್ನು ಮನಸ್ಸಿನಲ್ಲಿ ಹುಟ್ಟುಹಾಕುತ್ತಾ ಬಂದಿರುವ ಪುಸ್ತಕ ಇದು. ಈ ಪ್ರಶ್ನೆಗಳಿಗೆ ಸಾಧ್ಯವಾದಾಗಲೆಲ್ಲ ಉತ್ತರ ಕಂಡುಕೊಳ್ಳುವ ಕುತೂಹಲಕರ ದೃಷ್ಟಿಯೊಂದನ್ನು ಇದು ನನಗೆ ಒದಗಿಸಿಕೊಟ್ಟಿದೆ. ಈ ಕುತೂಹಲದ ಓದಿನಿಂದಾಗಿ ನನಗೆ ಇತರ ಓದು ಕೂಡ ಲಭ್ಯವಾಗಿದೆ.

ಇಂಗ್ಲಿಷ್‌ನಲ್ಲಿ ‘ಸ್ನೋಬಾಲ್‌’ ಎಂಬ ಪದವಿದೆಯಲ್ಲ. ಮಂಜಿನ ಪುಟ್ಟ ಉಂಡೆಯೊಂದು ತನಗೆ ತಾನೇ ಸುತ್ತಿಕೊಂಡು ಸುತ್ತಿಕೊಂಡು ದೊಡ್ಡದಾಗುವ ಮಾದರಿಯಲ್ಲಿಯೇ ಮಹಾಭಾರತದ ಕತೆಯು ಎಷ್ಟೊಂದು ಕತೆಗಳನ್ನು ಸುತ್ತಿಕೊಂಡು ಸುತ್ತಿಕೋಡು ದೊಡ್ಡದಾಗಿಬಿಟ್ಟಿದೆ! ಅವೆಲ್ಲವೂ ನಮ್ಮ ಬದುಕಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಇಣುಕುವ ಕತೆಗಳೇ ಆಗಿವೆ ಎನ್ನುವುದೇ ಅದರ ಸಮಕಾಲೀನ ಸಾಮರ್ಥ್ಯ. ಇತಿಹಾಸದ ಕತೆಗಳ ಛಾಯೆಯನ್ನು ಹೊತ್ತುಕೊಂಡವೂ ಹೌದು.

ಈ ಪುಸ್ತಕದ ಓದುವಿಕೆಯು ಕಾಲದ ಗ್ರಹಿಕೆಯ ವಿಸ್ಮಯವನ್ನೂ ಮೊಗೆದು ಕೊಟ್ಟಿದೆ. ವಚನಭಾರತದಲ್ಲಿ ಮಹಾಭಾರತದ ಕತೆ ಆರಂಭವಾಗುವುದೇ ಶಂತನು ಚಕ್ರವರ್ತಿಯಿಂದ. ಮೂಲ ಮಹಾಭಾರತದಲ್ಲಿ ಶಂತನುವಿನ ಹುಟ್ಟಿಗೆ ಮುಂಚೆ ಏನೆಲ್ಲ ನಡೆಯಿತು ಎಂಬ ಇನ್ನಷ್ಟು ದೀರ್ಘ ಕತೆಗಳಿವೆಯಂತೆ. ಎ. ಆರ್‌. ಕೃಷ್ಣ ಶಾಸ್ತ್ರಿಗಳು ಈ ಕತೆಯನ್ನು ಶಂತನು ಮತ್ತು ಗಂಗೆಯ ಭೇಟಿಯೊಂದಿಗೆ ಆರಂಭಿಸುತ್ತಾರೆ. ನನ್ನ ಓದು ಇಲ್ಲಿಂದ ಶುರುವಾದುದರಿಂದಲೋ ಏನೋ, ಒಬ್ಬ ಶಂತನುವಿನಿಂದ ಆರಂಭವಾದ ಈ ಕತೆಯು ಬ್ರಹ್ಮಾಂಡ ಬೃಹತ್ತಾಗಿ ಬೆಳೆದು, ಭಾರತ ಯುದ್ಧ ಮುಕ್ತಾಯವಾಗುವ ವೇಳೆಗೆ ಉತ್ತರೆಯ ಗರ್ಭದಲ್ಲಿ ಹುಟ್ಟುವ ಒಬ್ಬ ಮಗು ಪರೀಕ್ಷಿತ ಎಂಬ ಒಬ್ಬನೇ ವ್ಯಕ್ತಿಯಲ್ಲಿಗೆ ಬಂದು ನಿಲ್ಲುತ್ತದಲ್ಲ ಎಂದು ಹಲವು ಬಾರಿ ಅನಿಸಿದ್ದಿದೆ. ಕಾಲದ ಚಕ್ರವು ಒಂದು ಸುತ್ತು ತಿರುಗುತ್ತದೆ ಎನ್ನುವುದು ಇದೇ ಕಾರಣಕ್ಕೇನು? ಇಂತಹ ಹತ್ತಾರು ಪ್ರಶ್ನೆ, ವಿಸ್ಮಯ, ಅನಿಸಿಕೆಗಳ ಕಾರಣದಿಂದ ಇದೊಂದು ತತ್ವಶಾಸ್ತ್ರದ ವಿಶ್ಲೇಷಣೆಗೆ ಆಕರವಾಗಿ ಒದಗಬಲ್ಲ ಕೃತಿಯೂ ಹೌದು.

ಎಲ್ಲ ಪುಸ್ತಕಗಳೂ ಮಹಾಭಾರತದ ಮೂಲ ಕಥೆಯಿಂದಲೇ ಪ್ರೇರಪಣೆ ಪಡೆದು ಅದರ ಪರವಾಗಿ, ವಿರುದ್ಧವಾಗಿ, ಅಥವಾ ವಿಕಾಸ ರೂಪದಲ್ಲಿ ಅರಳುತ್ತ ಸಾಗುತ್ತವೆಯಲ್ಲ. ಹಾಗಾಗಿ ಮೂಲ ಮಹಾಭಾರತ ಓದಬೇಕು ಎಂದು ಆಗೀಗ ಅನಿಸುತ್ತಿತ್ತು. ಆದರೆ ಸಂಸ್ಕೃತ ಮಹಾಭಾರತವನ್ನು ಓದುವುದು ಕಷ್ಟ. ಯಾರದೇ ನೆರವಿಲ್ಲದೇ ಹಳೆಗನ್ನಡದ ಕಾವ್ಯಗಳನ್ನು ಓದುವುದು ದೂರದ ಮಾತು.

ಭಾರತ ಕೃತಿಕಾರ ವ್ಯಾಸ ಮಹರ್ಷಿ ಕಥೆಯೊಳಗೆ ಒಂದು ಪಾತ್ರವೂ ಹೌದು. ಸಣ್ಣಕತೆಯೊಂದನ್ನು ಬರೆಯಲು ಒದ್ದಾಡುವ ನನಗೆ ಇಡೀ ಕುರುವಂಶದ ಕತೆಯನ್ನು ಅಕ್ಷರಗಳಲ್ಲಿ ಸೆರೆ ಹಿಡಿದ ವ್ಯಾಸ ಮಹರ್ಷಿಯ ಬಗ್ಗೆ ಅಭಿಮಾನ ಮೂಡದೇ ಇದ್ದೀತೇ.. ಬದುಕಿನ ಏರಿಳಿತಗಳು, ಸೋಲು ಗೆಲುವುಗಳ ನಡುವೆ ಸಮಚಿತ್ತದಿಂದ ಸಾಗುವ ಸ್ರೋತವೊಂದರಂತೆ ವ್ಯಾಸ ಮಹರ್ಷಿಯ ಪಾತ್ರವು ಕಾಡುತ್ತದೆ. ಹಾಗೆಂದೇ ವ್ಯಾಸ ಮಹರ್ಷಿಯ ಜೀವನಚರಿತ್ರೆಯನ್ನು ಪ್ರತ್ಯೇಕವಾಗಿ ಹುಡುಕಿ ಓದಿದ್ದುಂಟು.

ಹೀಗೆಯೇ ವಚನಭಾರತದ ಓದುವಿಕೆಯಲ್ಲಿ ಹಲವಾರು ಉಪಕತೆಗಳು ಆಕರ್ಷಿಸುತ್ತವೆ. ನಳದಮಯಂತಿ , ನಹುಶ ಮಹಾರಾಜನ ಕತೆಗಳನ್ನೆಲ್ಲ ಮೊದಲೇ ನೃತ್ಯ, ನಾಟಕ, ಯಕ್ಷಗಾನಗಳಲ್ಲಿ ನೋಡಿದ್ದುಂಟು. ಆದರೆ ಈ ಪುಸ್ತಕದಲ್ಲಿ ಬರುವ ನಿರ್ಲಿಪ್ತ ಧೋರಣೆಯ ಪುಟ್ಟ ಪುಟ್ಟ ಕತೆಗಳಲ್ಲಿ ಆ ಪಾತ್ರಗಳನ್ನು ಓದಿ ‘ಅರೆ ಇಷ್ಟೆಯಾ ವಿಚಾರ’ ಎಂದು ಅನಿಸಿ ಬಿಡುತ್ತದೆ. ಮರುಕ್ಷಣಕ್ಕೇ ಭಾರತ ಕತೆಯಲ್ಲಿ ಬರುವ ಇಷ್ಟೇ ಪುಟ್ಟ ಪ್ರಕರಣಗಳು ಎಷ್ಟೊಂದು ಸುಂದರ ರಸಕಾವ್ಯವಾಗಿ ಬೆಳೆದಿವೆಯೆಲ್ಲಾ ಎಂದು ಖುಷಿ , ವಿಸ್ಮಯಗಳು ಮನದಲ್ಲಿ ಮೂಡುತ್ತವೆ.

ಇದೇ ಭಾರತ ಕತೆಯನ್ನು ಎಸ್‌.ಎಲ್‌. ಭೈರಪ್ಪ ಅವರು ‘ಪರ್ವ’ ಕಾದಂಬರಿಯನ್ನಾಗಿಸಿದ ಬಗೆ, ಇದೇ ಕತೆಯಲ್ಲಿ ಬರುವ ರಾಜರ ವಂಶ ‘ಕುರು’ವಿನ ಬಗ್ಗೆ ರಾಹುಲ ಸಾಂಕೃತ್ಯಾಯನರು ಬರೆದ ‘ಓಲ್ಗಾ ಗಂಗಾ’ ಕೃತಿಯಲ್ಲಿ ಮೂಡಿ ಬಂದ ವಿಚಾರಗಳು, ಅದೇ ಕೃತಿಯಲ್ಲಿ ಮಾದ್ರ ವಂಶ, ಗಾಂಧಾರ, ತಕ್ಷಶಿಲೆಗಳ ಕುರಿತೂ ಅವರು ಬರೆದ ವಿಚಾರಗಳೆಲ್ಲ ಇನ್ನಷ್ಟು ಓದಿನ ಲಹರಿಗೆ ಪುಷ್ಟಿ ನೀಡುತ್ತವೆ. ಉದ್ಯೋಗ ಪರ್ವದಲ್ಲಿ ದೇವೇಂದ್ರನಿಗೆ ನೆರವಾದ ನಹುಶನ ಕತೆಯೊಂದು ಹಾದು ಹೋಗುತ್ತದೆ. ಆದರೆ ಅದೇ ಕತೆಯು ದೇವುಡು ಅವರ ಕೈಯಲ್ಲಿ ‘ಮಹಾಕ್ಷತ್ರಿಯ’ ಎಂಬ ಕೃತಿಯಾಗಿ ಮತ್ತಷ್ಟು ತಾತ್ವಿಕ ಜಿಜ್ಞಾಸೆಗಳ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆ. ನಿಯತಿಯ ಆಜ್ಞೆಯನ್ನು ಮೀರಿ ಈ ಲೋಕದಲ್ಲಿ ಒಂದು ಕಣವೂ ಅಲ್ಲಾಡುವುದು ಸಾಧ್ಯವಿಲ್ಲ ಎಂಬ ವಿಷಯವನ್ನು ಪ್ರತಿಪಾದಿಸುತ್ತಾ ದೇವುಡು ಕತೆಯನ್ನು ಸುಂದರವಾಗಿ ಹೆಣೆದಿದ್ದಾರೆ.

ಇನ್ನೂ ಹೇಳಬೇಕೆಂದರೆ ಒಂದು ವಿಚಾರಕ್ಕೆ ಹತ್ತಾರು ಆಯಾಮಗಳಿರುತ್ತವೆ ಎಂದೂ, ನೋಡುವ ನೋಟದಲ್ಲೇ ಎಲ್ಲವೂ ಅಡಗಿರುತ್ತದೆ ಎಂದೂ ಈ ಕೃತಿಯು ಮತ್ತೆ ಮತ್ತೆ ವಿವರಿಸಿ ಹೇಳುವಂತಿದೆ.

ಸಾಂಖ್ಯ ಮತ್ತು ಯೋಗ ದರ್ಶನ ವಿಚಾರಗಳನ್ನು ಮಹಾಭಾರತದಲ್ಲಿ ಕಾಣಬಹುದು ಎಂಬುದನ್ನು ಶಾಸ್ತ್ರಿಗಳು ಉಲ್ಲೇಖಿಸುತ್ತಾರೆ. ಹಾಗಾಗಿಯೇ ಸ್ವಕರ್ಮ ಅಥವಾ ಕಾಯಕ ಮಾಡುವುದಕ್ಕಿಂತ ಮಿಗಿಲಾದ ದೇವರ ಪೂಜೆ ಮತ್ತೊಂದಿಲ್ಲ ಎನ್ನುವ ವಿಚಾರಗಳು ಹಾದು ಹೋಗುತ್ತವೆ. ಯಜ್ಞಕ್ಕೆ ಪ್ರಾಧಾನ್ಯ ನೀಡುವ ಅನೇಕ ಉದಾಹರಣೆಗಳು ಕಾಣುತ್ತವಾದರೂ ದ್ರವ್ಯಯಜ್ಞವನ್ನೇ ಆರಾಧಿಸದೇ, ತಪಸ್ಸು, ಯೋಗ, ಅಧ್ಯಯನ ಮತ್ತು ಜ್ಞಾನ ಯಜ್ಞಗಳ ಮಹತ್ವವನ್ನು ಎತ್ತಿಹಿಡಿಯುವ ಉದಾಹರಣೆಗಳು ಅಲ್ಲಲ್ಲಿ ಸಿಗುತ್ತವೆ. ಪ್ರಾಕ್ಟಿಕಲ್ ಬದುಕಿಗೆ ಇದಕ್ಕಿಂತ ದೊಡ್ಡ ಪುಷ್ಟಿ ಮತ್ತೇನು ಬೇಕು. ಇದೇ ತಳಹದಿಯಲ್ಲಿ ಧರ್ಮ, ನೀತಿಯ ಬೋಧನೆಯೇ ಇಡಿ ಕತೆಯ ಮುಖ್ಯ ಆಶಯವಾಗಿ ಕಾಣುವುದು.

ಮನುಷ್ಯನು ಕಾಯಕವನ್ನು ನಿರ್ವಹಿಸದೇ ಇರುವುದು ಸಾಧ್ಯವೇ ಇಲ್ಲ ಎನ್ನುವ ಬೋಧೆಯನ್ನು ಶ್ರೀಕೃಷ್ಣನು ಅರ್ಜುನನಿಗೆ ಹೇಳುವುದು ಕುತೂಹಲಕಾರಿಯಾಗಿದೆ. ಭೀಷ್ಮ ಪರ್ವದ ಆರಂಭದಲ್ಲಿ, ‘ತಾನು ಯುದ್ಧ ಮಾಡಲಾರೆ’ ಎಂದು ನಿರಾಕರಿಸುವ ಅರ್ಜುನನಿಗೆ ಗೀತೆಯನ್ನು ಬೋಧಿಸುವ ಶ್ರೀಕೃಷ್ಣನ ಮಾತುಗಳು ಇಲ್ಲಿ ಕೆಲವೇ ಪ್ಯಾರಾಗಳಲ್ಲಿ ಕಾಣಿಸುತ್ತದೆ. ಸರಳ ಓದಿಗೆ ದಕ್ಕುವ ಅಂಶವಿದು. ‘ಅಕರ್ಮಕ್ಕಿಂತ ಕರ್ಮ ದೊಡ್ಡದು. ಸುಮ್ಮನೇ ಕುಳಿತುಬಿಟ್ಟರೆ ಕೆಲಸ ಮಾಡದೇ ಇದ್ದ ಹಾಗಾಯಿತೇ ? ಯಾವನೂ ಒಂದು ಕ್ಷಣ ಕೂಡ ಕೆಲಸ ಮಾಡದೇ ಹಾಗೆಯೇ ಇರುವುದಕ್ಕಾಗುವುದಿಲ್ಲ. ಪ್ರಕೃತಿಯು ಕೆಲಸ ಮಾಡಿಸಿಯೇ ಮಾಡಿಸುತ್ತದೆ. ಎಂಥ ವಿದ್ವಾಂಸನೂ ಅದಕ್ಕೆ ಅಧೀನ. ಅದನ್ನು ತಡೆಯುವುದಕ್ಕಾಗುತ್ತದೆಯೇ? ನಾನು ಮಾಡುತ್ತೇನೆ ಎನ್ನುವುದು ಒಂದು ಬರಿಯ ಅಹಂಕಾರ..’

ಶ್ರೀಕೃಷ್ಣನನ್ನು ಪರಮಾತ್ಮನೆಂದು ಸ್ತುತಿಸುತ್ತ ಇಡಿಯ ಭಾರತ ಕತೆಯ ಕೇಂದ್ರ ಬಿಂದುವೇ ಶ್ರೀಕೃಷ್ಣನೆಂದು ಹಲವಾರು ವಿದ್ವಾಂಸರು ವಾದಿಸಿದ್ದಾರೆ. ಕತೆಯ ತಿರುವುಗಳಲ್ಲೆಲ್ಲ ಗೋಚರಿಸುವ ಶ್ರೀಕೃಷ್ಣನಂತೆಯೇ, ಬದುಕನ್ನು ಸಂಭಾಳಿಸುತ್ತ ಮುನ್ನೆಡೆಯುವ ಬಂಡಿಯೊಂದರ ಚಕ್ರಗಳಂತೆ ಗೋಚರಿಸುವವರು ಕುಂತಿ ಮತ್ತು ದ್ರೌಪದಿಯರು. ಈ ಎರಡೂ ಸ್ತ್ರೀ ಪಾತ್ರಗಳ ಬಗ್ಗೆ ಓದಿದಷ್ಟೂ ಕಡಿಮೆಯೇ. ಎರಡೂ ಪಾತ್ರಗಳ ಬಗ್ಗೆ ಎಷ್ಟೊಂದು ‌ಪ್ರಮಾಣದ ಸಾಹಿತ್ಯಗಳು ಸೃಷ್ಟಿಯಾಗಿವೆ ! ಯುಧಿಷ್ಟಿರನೂ, ಶ್ರೀಕೃಷ್ಣನೂ ಈ ಇಬ್ಬರೂ ಸ್ತ್ರೀಯರ ಬಗ್ಗೆ ಗೌರವದಿಂದ ನಡೆದುಕೊಳ್ಳುವ ಉಲ್ಲೇಖ ಕಾಣಸಿಗುತ್ತವೆ. ದ್ರೌಪದಿಯೂ ಘನತೆಯಿಂದ ನಡೆದುಕೊಳ್ಳುವ ಮಹಿಳೆಯಾಗಿ ಕಾಣಿಸುತ್ತಾಳೆ. ಇಡೀ ಕತೆಯ ಕೇಂದ್ರಬಿಂದುವಿನಂತೆ ಇರುವ ದ್ರೌಪದಿಯ ವಸ್ತ್ರಾಪರಹಣದ ಸಂದರ್ಭದಲ್ಲಿ ಶೋಕಿಸುತ್ತಿರುವ ದ್ರೌಪದಿಗೆ ದೃತರಾಷ್ಟ್ರ ವರವನ್ನು ಕೊಡುವ ಸಂದರ್ಭದಲ್ಲಿ ಅವಳು ಎರಡೇ ವರಗಳನ್ನು ಸ್ವೀಕರಿಸಿ, ಮೂರನೆಯ ವರವನ್ನು ನಿರಾಕರಿಸುತ್ತಾಳೆ. ‘ಅದು ಲೋಭವಾಗುತ್ತದೆ. ಲೋಭವು ಧರ್ಮವನ್ನು ನಾಶ ಮಾಡುತ್ತದೆ’ ಎಂದು ವಿನಯದಿಂದ ಆದರೆ ಆತ್ಮವಿಶ್ವಾಸದಿಂದ ಹೇಳುತ್ತಾಳೆ.

ಮನುಷ್ಯರು ಅಧ್ಯಾತ್ಮದತ್ತ ಹೆಜ್ಜೆ ಹಾಕಲು, ಅಥವಾ ಒಳ್ಳೆಯ ವಿಚಾರಗಳನ್ನೇ ಆಯ್ಕೆ ಮಾಡಿ ಅದೇ ದಾರಿಯಲ್ಲಿ ನಡೆಯಲು ಸಾಯುಜ್ಯ, ಮೋಕ್ಷ ಎಂಬ ಪರಿಕಲ್ಪನೆಗಳನ್ನು ಹಿರಿಯರು ಪ್ರತಿಪಾದಿಸಿದ್ದಾರೆ. ದೇವರು ಎಂಬ ಪರಿಕಲ್ಪನೆಯೂ ಇದೇ ಮಾದರಿಯದು ಎಂದೇ ಇಟ್ಟುಕೊಳ್ಳುವುದಾರೆ, ದೇವರನ್ನು ತಲುಪಲು ಎರಡು ದಾರಿಗಳನ್ನು ಆಯ್ಕೆ ಮಾಡಿಕೊಂಡಿರುವುದು ಪ್ರಧಾನವಾಗಿ ತೋರುತ್ತದೆ. ತಪಸ್ಸು, ಅಧ್ಯಯನ ಅನುಶಾಸನದಂತಹ ವಿಧಾನಗಳು ಒಂದು ದಾರಿ. ಹಾಡು, ನೃತ್ಯ, ಚಿತ್ರ ಮುಂತಾದ ಲಲಿತಕಲೆಗಳ ಮೂಲಕ ನಡೆಯುವ ದೇವರ ಆರಾಧನೆಯು ಇನ್ನೊಂದು ಮಾರ್ಗ. ಎರಡೂ ದಾರಿಯಲ್ಲಿ ಸಾಗುವವರ ಆಶಯಒಂದೇ- ಅದು ಒಳಿತಿನೆಡೆಗೆ, ಜ್ಞಾನದೆಡೆಗೆ ಅಥವಾ ‘ದೇವರ’ ಕಡೆಗೆ ಸಾಗುವುದು.

ವಚನಭಾರತ ಕತೆಯು ಮೊದಲನೆಯ ದಾರಿಯನ್ನು ಆಯ್ಕೆ ಮಾಡಿಕೊಂಡ ಅನೇಕ ವ್ಯಕ್ತಿಗಳ ಜೀವನ ಮಾರ್ಗವನ್ನು ವಿವರಿಸುತ್ತದೆ. ವಿದುರ, ಶ್ರೀಕೃಷ್ಣ, ಯುಧಿಷ್ಟಿರ, ವ್ಯಾಸ ಮುಂತಾಗಿ ಅನೇಕ ಆದರ್ಶಗಳನ್ನು ಈ ಕೃತಿಯು ಪ್ರತಿಪಾದಿಸುತ್ತದೆ. ಆ ಮೂಲಕ ಎರಡನೇ ದಾರಿಯಾದ ಕಲಾಪ್ರಕಾರಗಳ ವೈವಿಧ್ಯವನ್ನು ಹೆಚ್ಚಿಸಲು, ಅದನ್ನು ಶ್ರೀಮಂತಗೊಳಿಸಲು ಕಾರಣವಾಗಿವೆ. ನಮ್ಮ ದೇಶದ ಕಲಾಪ್ರಕಾರಗಳೆಲ್ಲವೂ ಒಂದಲ್ಲ ಒಂದು ಸಂದರ್ಭದಲ್ಲಿ ಮಹಾಭಾರತದ ಕತೆಗಳನ್ನು ವಿಶ್ಲೇಷಿಸುತ್ತ, ವಿಸ್ತರಿಸುತ್ತ ಅಥವಾ ವಿರೋಧಿಸುತ್ತ ಬೆಳೆಯುತ್ತ ಬಂದಿವೆ. ನೃತ್ಯ , ಸಂಗೀತ, ಶಿಲ್ಪ, ವಾಸ್ತು, ಚಿತ್ರ ಅಷ್ಟೇ ಏಕೆ, ಸಾಹಿತ್ಯ ಕ್ಷೇತ್ರದಲ್ಲಿಯೂ ಎಷ್ಟೋ ಸೃಜನಶೀಲತೆಗೆ ಪ್ರೇರಣೆಯಾಗಿದೆ.

ಕಲೆಗಳು ಎಲ್ಲ ಜನರನ್ನೂ ಸೆಳೆಯುವಂತಹ ಪ್ರಕಾರ. ಮಹಾಭಾರತ ಕತೆಯೊಂದು ಗೊತ್ತಿದ್ದರೆ, ಪ್ರಕಾರವೊಂದನ್ನು ಆಯ್ಕೆ ಮಾಡಿಕೊಂಡು ಎಷ್ಟೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.

ಅದೇನೇ ಇರಲಿ, ಪ್ರತಿನಿತ್ಯವೂ ಹೊಸದನ್ನೇ ಪ್ರತಿಪಾದಿಸುವ, ಆದರೆ ಅತ್ಯಂತ ಪುರಾತನವಾದ ವಿಚಾರಗಳನ್ನು ಹೇಳುವ ಈ ಕೃತಿಯು ಎಷ್ಟೋ ಆಧುನಿಕ ವಿಶ್ಲೇಷಣೆಗಾಗಿ ಇಂದಿಗೂ ಬಳಸಲ್ಪಡುತ್ತದೆ. ಆದ್ದರಿಂದಲೇ ಮೆಚ್ಚಿನ ಪುಸ್ತಕಗಳ ಸಾಲಿನಲ್ಲಿ ಅದು ನಿಲ್ಲುತ್ತದೆ.