ತಮ್ಮ ಹೊಸ ಗಡಂಗನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಯಾದವ ಶೆಟ್ಟರ ಎರಡು ಪ್ರಯತ್ನಗಳು ಇತಿಹಾಸದಲ್ಲಿ ದಾಖಲಾಗತಕ್ಕವೇ ಆಗಿವೆ. ಅವುಗಳಲ್ಲಿ ಮೊದಲನೆಯದು, ಒಂದು ನಿಗದಿತ ದಿನ ತಮ್ಮ ಗಡಂಗಿಗೆ ಯಾರೇ ಬಂದರೂ ಶರಾಬು ಕುಡಿಯುವವರಿಗೆ ಅವರು ಕುಡಿಯುವಷ್ಟು ಶರಾಬನ್ನು ಉಚಿತವಾಗಿ ಕೊಡಲಾಗುವುದೆಂದು ಯಾದವ ಶೆಟ್ಟಿಯವರು ಘೋಷಿಸಿದ್ದು. ಅದೊಂದು ಸ್ಮರಣೀಯ ಮದ್ಯಪಾನೋತ್ಸವವಾಗಿತ್ತು. ಶರಾಬು ಸಮಾರಾಧನೆಯ ದಿನ ಬೆಳಗಿನಿಂದಲೇ ಶರಾಬು ಅಂಗಡಿಗೆ ನುಗ್ಗಲಾರಂಭಿಸಿದ ಊರಿನ ಶರಾಬು ಪ್ರಿಯರು ಬಹಳ ಬೇಗನೇ ‘ಟೈಟ್’ ಆದರು (ಮತ್ತೇರಿಸಿಕೊಂಡರು). ಆಮೇಲೆ ಪರಸ್ಪರ ಬೈದಾಡುತ್ತಾ, ದೂಡಿಕೊಳ್ಳುತ್ತಾ, ಬಡಿದಾಡುತ್ತಾ ಮನಸ್ಸಿನಲ್ಲಿದ್ದ ಕಲ್ಮಶಗಳನ್ನೆಲ್ಲ ಹೊರಗೆ ಹಾಕುತ್ತಾ ಮೆರೆದಾಡಿದರು.
ಬಿ. ಜನಾರ್ದನ ಭಟ್ ಹೊಸ ಕಾದಂಬರಿ “ಗಮ್ಯ”ದಿಂದ ಕೆಲವು ಪುಟಗಳು ನಿಮ್ಮ ಓದಿಗೆ

ಭಾಗ: ಒಂದು

ರಾಜೇಶ

ಎಂದಿನಿಂದಲೋ ಏನೋ ಒಳಗೊಂದು ಸಖಜೀವ
‘ಸಖಿ! ಬಾ~ರೆ ಬಾ!’ ಎಂದು ಕೂಗುತಿದೆ

ಅಚ್ಯುತಣ್ಣ ಕ್ಯಾಂಟೀನ್ ವಹಿಸಿಕೊಂಡ ಸರಿಸುಮಾರಿನಲ್ಲಿಯೇ ಕ್ಯಾಂಟೀನಿನ ಆಕರ್ಷಣೆಯೂ ಕಡಿಮೆಯಾಗಲಾರಂಭಿಸಿದ್ದು ಅವರ ದುರದೃಷ್ಟ. ಅದಕ್ಕೆ ಕಾರಣವಾದುದು ಎರಡು ಐತಿಹಾಸಿಕ ಘಟನೆಗಳ ಮೂಲಕ ಆ ಊರು ಪಡೆದುಕೊಂಡ ಹೊಸ ಆಯಾಮ.

ಅದು ಸಾವಿರದ ಒಂಬೈನೂರ ಎಪ್ಪತ್ತರ ದಶಕ. ಆಗ ಊರಿನ ಕಾರ್ಮಿಕರು, ರೈತರು ಮತ್ತು ಬಡಜನರೆಲ್ಲ ನಿಧಾನವಾಗಿ ಕ್ಯಾಂಟೀನಿನ ಆಕರ್ಷಣೆಯಿಂದ ತಪ್ಪಿಸಿಕೊಂಡು ಬೇರೊಂದು ಲೋಕಕ್ಕೆ ಪ್ರವೇಶಿಸುವ ಸನ್ನಿವೇಶವೊಂದು ಕಾರಂಗಳದಲ್ಲಿ ಉದ್ಭವಿಸಿತು. ಕ್ಯಾಂಟೀನಿನಲ್ಲಿ ವ್ಯಾಪಾರ ಕಡಿಮೆಯಾಗಿ ಅದರ ಆದಾಯ ಕುಟುಂಬಕ್ಕೆ ಸಾಲದಾಯಿತು.

ಕಾಲ ಬದಲಾಗುತ್ತಲೇ ಇರುತ್ತದೆ. ಬಹುಶಃ ಏಳುಬೀಳುಗಳು ಚಕ್ರಾಕಾರವಾಗಿ ಬರುತ್ತವೋ ಏನೋ ಎಂದು ರಾಜೇಶ ಆಮೇಲೆ ಯೋಚಿಸಿದ್ದಿದೆ. ಅವರ ಕ್ಯಾಂಟೀನ್ ಅಚ್ಯುತಣ್ಣನ ಕಾಲಾನಂತರ ಮತ್ತೊಮ್ಮೆ ವೈಭವವನ್ನು ಕಂಡಿತು. ರಾಜೇಶ ಇಪ್ಪತ್ತು ವರ್ಷಗಳ ಮೇಲೆ ಒಂದು ತುಳು ನಾಟಕದಲ್ಲಿ ಅಭಿನಯಿಸಲು ಕಾರಂಗಳಕ್ಕೆ ಹೋಗಿದ್ದ. ಅಲ್ಲಿ ಅವನ ಬಾಲ್ಯದ ಗೆಳೆಯರು ಅವರಾಗಿಯೇ ಬಂದು ಪರಿಚಯ ಮಾಡಿಕೊಂಡು ಅವನನ್ನು ಆಗಿನ ಕಾರಂಗಳವನ್ನು ತೋರಿಸಲು ಕರೆದುಕೊಂಡು ಹೋಗಿ ಊರೆಲ್ಲ ತಿರುಗಾಡಿಸಿ ಸಂಭ್ರಮಿಸಿದ್ದರು. ರಾಜೇಶನ ಕೋರಿಕೆಯ ಮೇರೆಗೆ ಅವರ ಕ್ಯಾಂಟೀನ್ ಇದ್ದ ಜಾಗದಲ್ಲಿ ಇದ್ದ ಅದೇ ಕ್ಯಾಂಟೀನ್ ಅಥವಾ ಅದೇ ಜಾಗದಲ್ಲಿದ್ದ ಬೇರೆಯೇ ಕ್ಯಾಂಟೀನಿಗೆ ಗೆಳೆಯರು ಹೋದರು. ಅದು ವಲಸೆ ಕಾರ್ಮಿಕರು, ರಿಕ್ಷಾ, ಟೆಂಪೋ ಡ್ರೈವರುಗಳ ಹಸಿವು ಬಾಯಾರಿಕೆಗಳನ್ನು ತಣಿಸುತ್ತಾ ಗಿಜಿ ಗಿಜಿ ಅನ್ನುತ್ತಿದ್ದುದನ್ನು ಕಂಡು ರಾಜೇಶ ಆಶ್ಚರ್ಯಪಟ್ಟದ್ದುಂಟು. ಅದನ್ನು ನೋಡಿ ‘ದೆಸೆ’ ಎನ್ನುವುದು ಮನುಷ್ಯರಿಗಿದ್ದಂತೆ ಅಂಗಡಿಗಳಿಗೂ ಇರುತ್ತದೆ, ವ್ಯವಹಾರಗಳಿಗೂ ಏಳು ಬೀಳುಗಳಿರುತ್ತವೆ ಎಂದು ಅವನು ಅರ್ಥ ಮಾಡಿಕೊಂಡ.

ರಾಜೇಶನ ಬಾಲ್ಯದಲ್ಲಿ, ಅಚ್ಯುತಣ್ಣನ ಕ್ಯಾಂಟೀನಿಗೆ ಹೊಡೆತ ಬಿದ್ದದ್ದು ಯಾದವಣ್ಣನ ಶರಾಬು ಅಂಗಡಿಯಿಂದ. ಅವರು ಶರಾಬನ್ನು ಜನಪ್ರಿಯಗೊಳಿಸಲು ಏರ್ಪಡಿಸಿದ ಎರಡು ದೊಡ್ಡ ಅಭಿಯಾನಗಳು ಊರಿನ ಜನರ ಮನಸ್ಥಿತಿಯನ್ನು ಮತ್ತು ಅಭಿರುಚಿಯನ್ನು ಬದಲಾಯಿಸಿಬಿಟ್ಟವು ಎಂದು ರಾಜೇಶ ತನ್ನ ಬಾಲ್ಯದ ಜೀವನವನ್ನು ವಿಶ್ಲೇಷಿಸುವಾಗ ಯೋಚಿಸಿದ್ದಾನೆ. ಅವನ ಅಪ್ಪ ಕೂಡ ಆ ದಿನಗಳಲ್ಲಿ, ‘ಯಾದವಣ್ಣನ ಗಡಂಗು ಬಂದು ಜನರಿಗೆ ಚಹಾ ಕುಡಿಯುವ ಆಸಕ್ತಿಯೇ ಹೊರಟುಹೋಯಿತು’ ಎಂದು ಹೇಳುತ್ತಿದ್ದುದು ಅವನಿಗೆ ನೆನಪಿದೆ. ಮೊದಲು ಹಳ್ಳಿಯ ಜನರು ಗದ್ದೆಗಳಲ್ಲಿ ದುಡಿದು ಸುಸ್ತಾಗಿ, ಸಮ್ಜೆಯ ಹೊತ್ತು ಪೇಟೆಗೆ ಬಂದು ಒಂದು ಪ್ಲೇಟು ಗೋಳಿಬಜೆ ಮತ್ತು ಒಂದು ಚಹಾ ಕುಡಿದು, ಊರಿನ ರೈತರ ಜತೆಗೆ ಹರಟೆ ಹೊಡೆದು, ಸುಖ ಕಷ್ಟ ಮಾತಾಡಿ, ಕತ್ತಲಾಗುತ್ತಿದ್ದಂತೆ ಮನೆಗೆ ಹಿಂದಿರುಗುತ್ತಿದ್ದರು. ಮನೆಗೆ ಹಿಂದಿರುಗುವಾಗ ಕೆಲವರು ಮಾತ್ರ ಗುಟ್ಟಿನಲ್ಲಿ ಸ್ವಲ್ಪ ಕಳ್ಳು ಅಥವಾ ಕಳ್ಳಭಟ್ಟಿ ಕಂಟ್ರಿ ಶರಾಬು ಸೇವಿಸುತ್ತಿದ್ದುದ್ದು ಉಂಟು ಎಂದು ರಾಜೇಶನ ಅಪ್ಪ ಹೇಳುತ್ತಿದ್ದರು.

ಆ ಸಂದರ್ಭದಲ್ಲಿ ಯಾದವ ಶೆಟ್ಟಿ ಎಂಬವರು ಊರಿನಲ್ಲಿ ಶರಾಬು ಅಂಗಡಿಯನ್ನು ತೆರೆಯಲು ಅನುಮತಿ ಪಡೆದುಕೊಂಡು ಬಂದರು. ಅವರಿಗೆ ಆಗಲೇ ಹಲವು ಊರುಗಳಲ್ಲಿ ಗುತ್ತಿಗೆ (ಒಂದು ಊರಿನಲ್ಲಿ ಶರಾಬು ಮಾರುವ ಕಾಂಟ್ರಾಕ್ಟ್) ಇತ್ತು. ಅವರು ಪೇಟೆಗೆ ಸಮೀಪವಾಗಿ ತೆರೆದ ಅಂಗಡಿಗೆ ‘ಶರಾಬು ಅಂಗಡಿ’ ಎಂಬ ನಾಮಫಲಕವೇ ಇತ್ತಾದರೂ ಹಾಗೆ ಕರೆಯುವವರು ಯಾರೂ ಇರಲಿಲ್ಲ. ಅದಕ್ಕಿಂತ ಬಹಳ ಹಿಂದೆಯೇ ಒಂದು ಕಳ್ಳಂಗಡಿಯೂ ಊರಿನಲ್ಲಿ ಪ್ರಾರಂಭವಾಗಿ ಪೇಟೆಯಿದ ಸ್ವಲ್ಪ ದೂರವೇ ಇತ್ತು. ಊರಿನ ಜನರು ‘ಗಡಂಗು’ ಮತ್ತು ‘ಗುತ್ತಿಗೆ’ ಎಂಬ ಎರಡೂ ಶಬ್ದಗಳನ್ನು ಒಂದಕ್ಕೊಂದು ಪರ್ಯಾಯವಾಗಿ ಬಳಸುತ್ತಿದ್ದರು. ಶರಾಬು ಕುಡಿಯಲು ಹೋಗುವವರು ತಮ್ಮ ಬಗ್ಗೆಯೇ ಹೇಳುವುದಿದ್ದರೆ, “ನಾನು ಗುತ್ತಿಗೆಗೆ ಹೋಗಿ ಬರುತ್ತೇನೆ” ಎನ್ನುತ್ತಿದ್ದರು! ಸ್ವಲ್ಪ ತಿರಸ್ಕಾರಪೂರ್ವಕವಾಗಿ ಹೇಳುವುದಿದ್ದರೆ, “ಅವನು ದಿನಾ ಗಡಂಗಿಗೆ ಹೋಗುತ್ತಾನೆ!” ಎಂದು ಹೇಳುತ್ತಿದ್ದರು. ಇದರ ಹಿಂದೆ ಇನ್ನೂ ಒಂದು ಸೂಕ್ಷ್ಮ ಇತ್ತು. ಕಳ್ಳಿನ ಅಂಗಡಿಗೆ ‘ಕಳ್ಳಿನ ಗುತ್ತಿಗೆ’ ಎಂದು ಹೇಳುವುದು (ತುಳುವಿನಲ್ಲಿ ‘ಕಲಿ’- ತ ಗುತ್ತಿಗೆ), ಶರಾಬು ಅಥವಾ ‘ಗಂಗಸರ’ದ ಕೇಂದ್ರವಾದರೆ ‘ಗಡಂಗು’ ಎನ್ನುವುದು ಎಂಬ ವ್ಯತ್ಯಾಸವನ್ನು ಕೆಲವರು ಅನುಸರಿಸುತ್ತಿದ್ದರು. ಕಳ್ಳು ಕುಡಿಯುವುದು ರೈತಾಪಿ ಜನರಲ್ಲಿ ಸಹಜವಾದ ಆಹಾರ ಪಾನೀಯದ ವ್ಯಾಪ್ತಿಯೊಳಗೆ ಬರುತ್ತಿತ್ತು. ಹೆಂಗಸರೂ ಕಳ್ಳು ಕುಡಿಯುವುದಿತ್ತು. ಕೆಲವು ಗಂಡಸರು ಬೆಳಿಗ್ಗೆ ಕಳ್ಳು ಇಳಿಸುವ ಮರಗಳ ಬಳಿಗೆ ಹೋಗುವಾಗ ಯಾವಾಗಾದರೊಮ್ಮೆ ಉದಾರವಾಗಿ ಮಕ್ಕಳನ್ನೋ, ಮೊಮ್ಮಕ್ಕಳನ್ನೋ ಕರೆದುಕೊಂಡು ಹೋಗಿ ಕುಡಿಸುತ್ತಿದ್ದದ್ದೂ ಉಂಟು. ಹೀಗಿರುವಾಗ, ತಾನು ಕಳ್ಳು ಕುಡಿಯಲು ಹೋಗುವುದು ಎನ್ನುವುದು ಸಹಜ ಸಂಗತಿಯಾಗಿ ಪರಿಗಣಿತವಾಗುತ್ತಿತ್ತು; ಶರಾಬು ಕುಡಿಯಲು ಎಂದು ಸತ್ಯ ಹೇಳಿದರೆ ಅದು ಕೆಲವರ ಹುಬ್ಬನ್ನು ಮೇಲೇರಿಸಬಹುದು ಎನ್ನುವ ಚಿಂತನೆ ಈ ಪದಗಳ ಬಳಕೆಯ ಹಿಂದೆ ಇತ್ತು. ಒಟ್ಟಿನಲ್ಲಿ, ನಿಜವಾದ ಅರ್ಥ ಹೇಗಿದ್ದರೂ ಹಳ್ಳಿಗರಿಗೆ ತಮ್ಮದೇ ಆದ ಅರ್ಥ!

ಅದುವರೆಗೆ ಊರಿನ ಹೆಚ್ಚಿನ ಜನರು ಈ ಬಗೆಯ ಸ್ಟ್ರಾಂಗ್ ಶರಾಬು ಸಿಗದೆ ಈಚಲು ಮರದ ಕಳ್ಳು ಕುಡಿದೇ ದಿನ ದೂಡುತ್ತಿದ್ದರು. ಅಲ್ಲಲ್ಲಿ ಕೆಲವರಿಗೆ ಕಳ್ಳಭಟ್ಟಿ ಸಾರಾಯಿ ‘ಗಂಗಸರ’ ಸಿಗುತ್ತಿತ್ತು. ಕೆಲವರು ಮಾತ್ರ ಗುಟ್ಟಿನಲ್ಲಿ ಕಳ್ಳಭಟ್ಟಿ ಸಾರಾಯಿಯನ್ನು ಮಾರುವ ತಾಣಗಳನ್ನು ಬಲ್ಲವರಾಗಿದ್ದರು. ಅದು ತೀರಾ ಪಬ್ಲಿಕ್ಕಾಗಿ ವಿಷಯ ಪೋಲೀಸರಿಗೆ ಮುಟ್ಟಿದರೆ ಸಾರಾಯಿ ತಯಾರಿಸುವವರನ್ನೂ, ಕುಡಿಯುವವರನ್ನೂ ಒಟ್ಟಿಗೆ ಹಿಡಿದುಕೊಂಡು ಹೋಗುತ್ತಿದ್ದರು! ಹಾಗಾಗಿ ಗುಟ್ಟಿನ ಗಿರಾಕಿಗಳು ಇಂತಹ ಮಾಹಿತಿಗಳನ್ನು ಸುಲಭವಾಗಿ ಇನ್ನೊಬ್ಬರಿಗೆ ಕೊಡುತ್ತಿರಲಿಲ್ಲ. ಗಂಗಸರ ಕುಡಿಯಲು ಸಿಗದ ಗಂಗಸರಪ್ರಿಯರಿಗೆ ಬದುಕಿನಲ್ಲಿ ಸ್ವಾರಸ್ಯವೇ ಹೊರಟುಹೋಗಿತ್ತು. ತಾವು ದುಡಿಯುವುದು ಯಾತಕ್ಕಾಗಿ ಎಂಬ ತಾತ್ವಿಕ ಜಿಜ್ಞಾಸೆಯೂ ಅಂತಹವರಲ್ಲಿ ಮೊಳಕೆಯೊಡೆಯತೊಡಗಿತ್ತು. ಅಂತಹ ಕಾಲದಲ್ಲಿ ಅಬಕಾರಿ ಇಲಾಖೆ ಕಾರಂಗಳದಲ್ಲಿಯೂ ಒಂದು ಅಧಿಕೃತ ಶರಾಬು ಅಂಗಡಿಯನ್ನು ತೆರೆಯಲು ಅನುಮತಿ ನೀಡಿತು. ಆಗ ಶರಾಬು ಮತ್ತು ಕಳ್ಳನ್ನು ಮಾರಾಟಮಾಡುವ ಗುತ್ತಿಗೆಗಳನ್ನು (ಕಾಂಟ್ರಾಕ್ಟ್) ಹರಾಜು (ಏಲಂ) ಹಾಕಲಾಗುತ್ತಿತ್ತು.

ಕಾರಂಗಳದಲ್ಲಿ ಶರಾಬು ಅಂಗಡಿ ಪ್ರಾರಂಭವಾಗಿ ಎಲ್ಲ ಹಳ್ಳಿಯ ಕೃಷಿಕರನ್ನೂ ಸಂಜೆಯ ಹೊತ್ತು ಪೇಟೆಗೆ ಸೆಳೆಯಲಾರಂಭಿಸಿತು. ಟೀ ಕುಡಿಯುವವರು ಕಡಿಮೆಯಾದರು. ಸಂಜೆ ಟೀ ಕುಡಿದರೆ ನಿದ್ರೆ ಬರುವುದಿಲ್ಲ, ಅದರ ಬದಲಿಗೆ ಸ್ವಲ್ಪ ಶರಾಬು ಕುಡಿದರೆ ದುಡಿದ ಮೈಕೈ ನೋವೆಲ್ಲ ಪರಿಹಾರವಾಗಿ ಒಳ್ಳೆಯ ನಿದ್ದೆ ಬರುತ್ತದೆ, ಮರುದಿನ ಕೆಲಸ ಮಾಡಲು ಉಲ್ಲಾಸ ಇರುತ್ತದೆ ಎಂದು ಜನರೆಲ್ಲ ಮಾತಾಡಿಕೊಳ್ಳುತ್ತಿದ್ದರು. ಹಾಗಾಗಿ ಗಡಂಗಿನ ಜನಪ್ರಿಯತೆ ಹೆಚ್ಚಾಗುತ್ತಾ ಹೋಯಿತು.

ಮೊದಲು ಕಾಫಿ ಟೀಗಳನ್ನು ಜನ ಕುಡಿಯುವಂತೆ ಮಾಡಲು ಬ್ರಿಟಿಷರು ಸಂತೆಗಳಲ್ಲಿ, ಜಾತ್ರೆಗಳಲ್ಲಿ ಅದರ ಪ್ರಾತ್ಯಕ್ಷಿಕೆ ಏರ್ಪಡಿಸಿ, ಪ್ರಚಾರ ಮಾಡಿಸುತ್ತಿದ್ದರು. ಈಗ ಅವುಗಳಿಂದ ಜನರನ್ನು ದೂರ ಮಾಡಿ ಶರಾಬಿನತ್ತ ಆಕರ್ಷಿಸುವ ಕೆಲಸವನ್ನು ಗಡಂಗುಗಳು ಮಾಡಿದವು.

ತಮ್ಮ ಹೊಸ ಗಡಂಗನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಯಾದವ ಶೆಟ್ಟರ ಎರಡು ಪ್ರಯತ್ನಗಳು ಇತಿಹಾಸದಲ್ಲಿ ದಾಖಲಾಗತಕ್ಕವೇ ಆಗಿವೆ. ಅವುಗಳಲ್ಲಿ ಮೊದಲನೆಯದು, ಒಂದು ನಿಗದಿತ ದಿನ ತಮ್ಮ ಗಡಂಗಿಗೆ ಯಾರೇ ಬಂದರೂ ಶರಾಬು ಕುಡಿಯುವವರಿಗೆ ಅವರು ಕುಡಿಯುವಷ್ಟು ಶರಾಬನ್ನು ಉಚಿತವಾಗಿ ಕೊಡಲಾಗುವುದೆಂದು ಯಾದವ ಶೆಟ್ಟಿಯವರು ಘೋಷಿಸಿದ್ದು. ಅದೊಂದು ಸ್ಮರಣೀಯ ಮದ್ಯಪಾನೋತ್ಸವವಾಗಿತ್ತು.

ಶರಾಬು ಸಮಾರಾಧನೆಯ ದಿನ ಬೆಳಗಿನಿಂದಲೇ ಶರಾಬು ಅಂಗಡಿಗೆ ನುಗ್ಗಲಾರಂಭಿಸಿದ ಊರಿನ ಶರಾಬು ಪ್ರಿಯರು ಬಹಳ ಬೇಗನೇ ‘ಟೈಟ್’ ಆದರು (ಮತ್ತೇರಿಸಿಕೊಂಡರು). ಆಮೇಲೆ ಪರಸ್ಪರ ಬೈದಾಡುತ್ತಾ, ದೂಡಿಕೊಳ್ಳುತ್ತಾ, ಬಡಿದಾಡುತ್ತಾ ಮನಸ್ಸಿನಲ್ಲಿದ್ದ ಕಲ್ಮಶಗಳನ್ನೆಲ್ಲ ಹೊರಗೆ ಹಾಕುತ್ತಾ ಮೆರೆದಾಡಿದರು. ಕೆಲವರು ಎದುರಾಳಿಗಳನ್ನು ಹುಡುಕುತ್ತಾ ಮದ್ದಾನೆಗಳಂತೆ ಕುಡುಕರ ತಲೆ ಕಂಡತ್ತ ಧಾವಿಸಿ ಅವರೊಡನೆ ಕಾಲುಕೆರೆದು ಜಗಳ ಪ್ರಾರಂಭಿಸುತ್ತಿದ್ದರು. ತುಂಬಾ ಹಾಸ್ಯಾಸ್ಪದ ಮತ್ತು ಕ್ಷುಲ್ಲಕ ಕಾರಣಗಳನ್ನು ಎತ್ತಿಕೊಂಡು ಕುಡುಕರು ವಾದಿಸತೊಡಗುತ್ತಿದ್ದರು. ಅವರಿಗೆ ಹೊಡೆದಾಡಲು ಯಾವುದಾದರೂ ಒಂದು ಪೀಠಿಕೆ ಬೇಕಾಗಿತ್ತು ಅನ್ನುವಂತೆ ಹೊಡೆದಾಡಿಕೊಂಡು ಸೋತು ನೆಲಕ್ಕೆ ಒರಗಿ ನೆಮ್ಮದಿಯಿಂದ ಬಿದ್ದುಕೊಳ್ಳುತ್ತಿದ್ದರು. ಬಹುಶಃ ಒಂದಿಬ್ಬರು ಹಾಗೆ ಮಾಡಿದ್ದನ್ನು ನೋಡಿದ ಇತರ ಮುಗ್ಧ ಹಳ್ಳಿಗರಿಗೆ ಕುಡಿದು ಮಜಾ ಮಾಡುವುದೆಂದರೆ ಇದೇ ಮಾದರಿ ಎಂದು ಅನಿಸಿರಬೇಕು.

ಸುಮಾರು ಹನ್ನೊಂದು ಹನ್ನೆರಡು ಗಂಟೆಯಿಂದ ಮರುದಿನ ಅಷ್ಟು ಹೊತ್ತಿನವರೆಗೆ ಕಾರಂಗಳದ ಇಡೀ ಪೇಟೆ ಒಂದು ಯುದ್ಧ ಮುಗಿದ ಮೇಲಿನ ಯುದ್ಧಭೂಮಿಯಂತೆ ಕಾಣಿಸುತ್ತಿತ್ತು. ಯಾಕೆಂದರೆ ಕುಡಿದು ಮತ್ತೇರಿಸಿಕೊಂಡು ಲೋಕದ ಪರಿವೆಯನ್ನು ಕಳೆದುಕೊಂಡವರು, ನಿದ್ರೆ ಹೋದವರು ಅಲ್ಲಲ್ಲಿ ಹೆಣಗಳಂತೆ ಬಿದ್ದುಕೊಂಡಿದ್ದರು. ಅಂತಹ ಹನ್ನೆರಡು ಜೀವಂತ ಹೆಣಗಳನ್ನು ರಾಜೇಶ ಮತ್ತು ಸಂಗಡಿಗರು ಕಾರಂಗಳ ಪೇಟೆಯಲ್ಲಿ ಆ ದಿನ ಲೆಕ್ಕ ಹಾಕಿದ್ದರು.

ರಾಜೇಶ ಮತ್ತು ಅವನ ಜತೆಗಾರರಾದ ಕೆಲವು ಹುಡುಗರು ಇಡೀ ಊರಿನಲ್ಲಿ ಅತ್ತಿತ್ತ ಓಡಾಡುತ್ತಾ ಕುಡುಕರ ವಿವಿಧ ಅವಸ್ಥೆಗಳನ್ನು ಕಂಡು ಸಾಕಷ್ಟು ಮಜಾ ಅನುಭವಿಸಿದ್ದರು. ಮಹಾಭಾರತ ಯುದ್ಧದಲ್ಲಿ ಧರೆಗುರುಳಿದ ಸೈನಿಕರಂತೆ ಹೆಜ್ಜೆ ಹೆಜ್ಜೆಗೆ ಬಿದ್ದಿರುವ ಕುಡುಕವೀರರು! ಕೆಲವು ಕಡೆ ಇನ್ನೂ ಹೊಡೆದಾಟ ಸಾಗುತ್ತಿತ್ತು. ಅವರು ಇನ್ನು ಉರುಳಬೇಕಷ್ಟೆ. ಇನ್ನು ಕೆಲವರು ಪೂರ್ವಭಾವೀ ಬೈದಾಟಕ್ಕೆ ತೊಡಗಿದ್ದರು. ಅವನ್ನೆಲ್ಲ ಕಂಡು ಹುಡುಗರ ಗುಂಪಿಗೆ ಆ ಇಡೀ ದಿನ ಹೊಟ್ಟೆ ತುಂಬ ನಗು.

ರಾಜೇಶನ ತಂಡ ಪೇಟೆ ಮತ್ತು ಅದರ ಹೊರ ವಲಯಗಳಲ್ಲಿ ಅಮಲು ಏರಿಸಿಕೊಂಡು ನೆಟ್ಟಗೆ ನಿಲ್ಲಲಾಗದೆ ಸ್ವಲ್ಪ ದೂರ ವಾಲುತ್ತಾ ಹೋಗಿ ಬಿದ್ದು, ಎದ್ದು, ಹೊರಳಾಡುತ್ತಿರುವ ಕುಡುಕ ಮಹಾತ್ಮರ ಬಳಿಗೆ ಹೋಗಿ, ಅವರು ಆಡುತ್ತಿದ್ದ ವ್ಯರ್ಥಾಲಾಪಗಳನ್ನು ಕೇಳಿಸಿಕೊಂಡು ಸಾಕಷ್ಟು ನಗಾಡಿದ್ದರು. ಆಗ ದಸರಾ ರಜೆಯಿದ್ದ ಕಾರಣ ಹುಡುಗರಿಗೂ ಬಿಡುವಿತ್ತು.

ಗುಟ್ಟಿನ ಗಿರಾಕಿಗಳು ಇಂತಹ ಮಾಹಿತಿಗಳನ್ನು ಸುಲಭವಾಗಿ ಇನ್ನೊಬ್ಬರಿಗೆ ಕೊಡುತ್ತಿರಲಿಲ್ಲ. ಗಂಗಸರ ಕುಡಿಯಲು ಸಿಗದ ಗಂಗಸರಪ್ರಿಯರಿಗೆ ಬದುಕಿನಲ್ಲಿ ಸ್ವಾರಸ್ಯವೇ ಹೊರಟುಹೋಗಿತ್ತು. ತಾವು ದುಡಿಯುವುದು ಯಾತಕ್ಕಾಗಿ ಎಂಬ ತಾತ್ವಿಕ ಜಿಜ್ಞಾಸೆಯೂ ಅಂತಹವರಲ್ಲಿ ಮೊಳಕೆಯೊಡೆಯತೊಡಗಿತ್ತು. ಅಂತಹ ಕಾಲದಲ್ಲಿ ಅಬಕಾರಿ ಇಲಾಖೆ ಕಾರಂಗಳದಲ್ಲಿಯೂ ಒಂದು ಅಧಿಕೃತ ಶರಾಬು ಅಂಗಡಿಯನ್ನು ತೆರೆಯಲು ಅನುಮತಿ ನೀಡಿತು.

ಗಡಂಗನ್ನು ಜನಪ್ರಿಯಗೊಳಿಸಲು ಯಾದವ ಶೆಟ್ಟಿಯವರು ಏರ್ಪಡಿಸಿದ ಇನ್ನೊಂದು ಕಾರ್ಯಕ್ರಮ ಒಂದು ‘ಅಹರ್ನಿಶಿ’ (‘day and night’) ಕೋಳಿ ಅಂಕ. ಈಗ ಅಹರ್ನಿಶಿ ಕ್ರಿಕೆಟ್ ಪಂದ್ಯಗಳು ಮೊದಲರ್ಧ ಹಗಲು ಹೊತ್ತು (ಸಾಯಂಕಾಲ) ಮತ್ತು ಇನ್ನರ್ಧ ರಾತ್ರಿ ಹೊತ್ತು ನಡೆಯುತ್ತವೆ. ಆದರೆ ಕ್ರಿಕೆಟಿಗಿಂತ ಬಹಳ ಮುಂಚೆ ಅಹರ್ನಿಶಿ ಕೋಳಿ ಅಂಕ ಕಾರಂಗಳದಲ್ಲಿ ನಡೆದಿತ್ತು. ದಕ್ಷಿಣ ಕನ್ನಡದಲ್ಲಿ ಇಡೀ ದಿನ ಆಡುವ ಕ್ರೀಡೆಗಳಾಗಲಿ, ಹಗಲು ಹೊತ್ತಿನ ಜಾತ್ರೆಗಳಾಗಲಿ ಜನರನ್ನು ಆಕರ್ಷಿಸುವುದಿಲ್ಲ. ರಾತ್ರಿ ನಡೆಯುವ ಜಾತ್ರೆ, ಯಕ್ಷಗಾನ, ಕೋಲಗಳೆಂದರೆ ಇಲ್ಲಿನವರಿಗೆ ಹೆಚ್ಚು ಇಷ್ಟ. ಹಾಗೆಯೇ ಎಪ್ಪತ್ತರ ದಶಕದಲ್ಲಿ ಶರಾಬು ಗುತ್ತಿಗೆದಾರರ ಮುತುವರ್ಜಿಯಿಂದಾಗಿ ರಾತ್ರಿಯ ಕೋಳಿ ಅಂಕಗಳು ಪ್ರಾರಂಭವಾದವು. ಮೊದಲು ಗ್ಯಾಸ್‍ಲೈಟ್‍ಗಳ ಬೆಳಕಿನಲ್ಲಿ ಮತ್ತು ನಂತರ ಟ್ಯೂಬ್ ಲೈಟಿನ ಬೆಳಕಿನಲ್ಲಿ ಕೋಳಿ ಅಂಕಗಳು ನಡೆಯತೊಡಗಿದವು.

ಇದನ್ನು ಪ್ರಾರಂಭಿಸಿದ ಯಾದವ ಶೆಟ್ಟಿಯವರು ತಾವು ಕಾರಂಗಳದಲ್ಲಿ ಏರ್ಪಡಿಸಿದ್ದ ಏರ್ಪಡಿಸಿದ್ದ ಅಹರ್ನಿಶಿ ಕೋಳಿ ಅಂಕದ ಸಂದರ್ಭದಲ್ಲಿ, ಯಕ್ಷಗಾನದ ರಂಗಸ್ಥಳಕ್ಕೆ ಬಳಸುವ ಬಣ್ಣಬಣ್ಣದ ಕಂಬ ಮತ್ತು ಮೇಲ್ಕಟ್ಟುಗಳನ್ನೇ ತರಿಸಿ ಕೋಳಿ ಅಂಕಕ್ಕೂ ರಂಗಸ್ಥಳವನ್ನು ಕಟ್ಟಿಸಿದ್ದರು. ಆ ಇತಿಹಾಸ ಪ್ರಸಿದ್ಧ ಕೋಳಿ ಅಂಕ ಅವರ ಗಡಂಗಿನ ಪಕ್ಕದ ಮೈದಾನದಲ್ಲಿ ನಡೆದಿತ್ತು. ಮೊದಲು ಅಲ್ಲಿ ಒಂದು ಪದವು ಅಥವಾ ಪ್ರಸ್ಥಭೂಮಿಯಂತಹ ಖಾಲಿ ಜಾಗವಿತ್ತ್ತು. ಯಾದವ ಶೆಟ್ಟರ ಕೂಲಿಯಾಳುಗಳು ಒಂದು ವಾರ ಕೆಲಸ ಮಾಡಿ ಅಲ್ಲಲ್ಲಿ ಇದ್ದ ಗಿಡಗಳನ್ನೂ ಪೊದರುಗಳನ್ನೂ ಕಡಿದು, ಕಿತ್ತು ಕ್ರಿಕೆಟ್ ಆಡಬಹುದಾದಷ್ಟು ದೊಡ್ಡ ಮೈದಾನವನ್ನೇ ನಿರ್ಮಿಸಿದ್ದರು. ಅದರ ನಟ್ಟ ನಡುವೆ ಈ ಕೋಳಿ ಅಂಕದ ರಂಗಸ್ಥಳವಿತ್ತು.

ಹೀಗೆ ಯಾದವ ಶೆಟ್ಟರು ಇತಿಹಾಸದಲ್ಲೇ ಮೊದಲ ಬಾರಿಗೆ ಕೋಳಿ ಅಂಕಕ್ಕೆ ರಂಗ ಪ್ರದರ್ಶನದ ಘನತೆಯನ್ನು ತಂದುಕೊಟ್ಟರು! ಅಂಕದಲ್ಲಿ ಹಲವು ವಿಭಾಗಗಳಿದ್ದವು. ಪ್ರತಿ ವಿಭಾಗದಲ್ಲಿ ಗೆದ್ದ ಕೋಳಿಗಳಿಗೆ ಬಂಗಾರದ ಮೆಡಲುಗಳ ಬಹುಮಾನವಿತ್ತು. ದೂರ ದೂರದ ಊರುಗಳಿಂದ ಸಾವಿರಗಟ್ಟಲೆ ಹಣವನ್ನು ಪಣವಾಗಿಟ್ಟು ಆಡುವ ಜುಗಾರಿಕೋರರು, ಶ್ರೀಮಂತರು ಆಗಮಿಸಿದ್ದರು. ಮಂಗಳೂರು ಸೀಮೆಯ ಮೂವರು ಶ್ರೀಮಂತರು ಕಾರಿನಲ್ಲಿ ಆಗಮಿಸಿದ್ದುದು ಊರಿನಲ್ಲಿ ವಿಶೇಷ ಸುದ್ದಿಯಾಗಿತ್ತು. ಆಗ ಕಾರಂಗಳದಲ್ಲಿ ಕಾರುಗಳು ನೋಡಲು ಸಿಗುವುದು ಅಪರೂಪವಾಗಿತ್ತು. ಕಾರಂಗಳ ಗುತ್ತಿನ ಮನೆಯವಲ್ಲಿ ಒಂದು ಅಂಬಾಸಡರ್ ಕಾರಿತ್ತು. ಅದನ್ನು ಕೂಡ ನಿರ್ವಹಣೆ ಮಾಡಲಾಗದೆ, ಅಗತ್ಯ ಇಲ್ಲ ಎಂದು ಮಾರಿಬಿಟ್ಟಿದ್ದರು. ಈಗ, ‘ಕೇವಲ ಒಂದು ಕೋಳಿ ಅಂಕಕ್ಕಾಗಿ ಕಾರಿನಲ್ಲಿ ಬಂದರಂತೆ!’ ಎನ್ನುವುದು ಊರಿನವರಿಗೆ ಆಶ್ಚರ್ಯ ಹುಟ್ಟಿಸಿದ ಸುದ್ದಿಯಾಗಿತ್ತು.

“ಕಾರಿನಲ್ಲಿ ಬಂದವರು ಸುಮಾರು ಹತ್ತು ಸಾವಿರದವರೆಗೂ ಕ್ಯಾಶ್ ಹಿಡಿದುಕೊಂಡು ಬರುತ್ತಾರಂತೆ. ಒಂದೇ ಕೋಳಿಗೆ ಒಂದು ಸಾವಿರ ಕಟ್ಟುವಷ್ಟು ಧೈರ್ಯದವರೂ ಅವರಲ್ಲಿ ಇದ್ದಾರಂತೆ! ಕೆಲವೊಮ್ಮೆ ಅಷ್ಟನ್ನೂ ಕಳೆದುಕೊಂಡು ಹೋಗುತ್ತಾರಂತೆ. ಅವರಿಗೆ ಅದೆಲ್ಲ ಲೆಕ್ಕಕ್ಕೆ ಇಲ್ಲವಂತೆ!”

ಜನ ಹೀಗೆ ಬೆರಗಾಗಿ ಕೋಳಿ ಅಂಕದ ಬಗ್ಗೆ ಮಾತಾಡುತ್ತಿದ್ದರು. ಅವರಿಗೆಲ್ಲ ಕೋಳಿ ಅಂಕದಲ್ಲಿ ಜೂಜು ಕಟ್ಟುತ್ತಾರೆ ಎಂಬ ಸುದ್ದಿ ಹೊಸದಲ್ಲವಾದರೂ, ಒಂದು ಸಾವಿರ ರೂಪಾಯಿ ಜೂಜನ್ನೂ ಕಟ್ಟಬಲ್ಲ ವ್ಯಕ್ತಿಗಳು ಕೋಳಿ ಅಂಕಕ್ಕೆ ಬಂದಿದ್ದಾರೆ ಎಂಬ ಸುದ್ದಿಯೇ ರೋಮಾಂಚನ ಹುಟ್ಟಿಸಿತ್ತು. ಆ ಮೂವರು ಕಾರಿನ ಶ್ರೀಮಂತರನ್ನು ಮತ್ತು ಅವರು ಜೂಜು ಕಟ್ಟುವುದನ್ನು ನೋಡಲೆಂದೇ ಹಲವರು ಕೋಳಿ ಅಂಕದ ಮೈದಾನಕ್ಕೆ ಬಂದಿದ್ದರು, ಆ ದಿನ.

ಈ ಕೋಳಿ ಅಂಕ ಮೂರು ದಿನ ಮೂರು ರಾತ್ರಿ ನಡೆಯಿತು. ಕೋಳಿ ಅಂಕದ ತಜ್ಞರು, ಕೋಳಿಗಳ ಒಡೆಯರು, ಕ್ರೀಡಾಸಕ್ತರು ಮತ್ತು ಊರು ಪರವೂರುಗಳ ಜೂಜುಕೋರರು ಎರಡು ಮೂರು ದಿನ ಕಾರಂಗಳದಲ್ಲೇ ಬೀಡು ಬಿಟ್ಟಿದ್ದರು. ಆ ಮೂರು ದಿನಗಳಲ್ಲಿ ಶರಾಬಿನ ಮಾರಾಟವೂ ಒಂದು ದಾಖಲೆಯಾಗಿತ್ತು. ಯಾದವ ಶೆಟ್ಟರ ಬೇರೆ ಗಡಂಗುಗಳ ಶರಾಬನ್ನೆಲ್ಲ ಕಾರಂಗಳಕ್ಕೆ ತಂದರೂ ಅದೂ ಮುಗಿದುಹೋಗಿ, ದೂರ ದೂರದ ಊರುಗಳಿಂದ, ಅವರ ಗೆಳೆಯರ ಸಂಗ್ರಹದಿಂದಲೂ ತರಿಸಬೇಕಾಯಿತು.

ಹಳ್ಳಿಯಾಗಿದ್ದ ಕಾರಂಗಳವು ಈ ಎರಡು ಘಟನೆಗಳ ನಂತರ ತನ್ನ ಚಹರೆಯನ್ನು ಬದಲಾಯಿಸಿಕೊಂಡು ಪೇಟೆ ಪಟ್ಟಣಗಳಿಗೆ ಹೊರಟಿದ್ದ ರಸ್ತೆಯ ಪಕ್ಕದಲ್ಲಿ ನೆಲೆಯಾಗಲು ಹಳ್ಳಿಯಿಂದ ಎದ್ದುಬಂದಂತೆ ಕಾಣತೊಡಗಿತು. ಹೊರಗಿನ ಲೋಕಕ್ಕೆ ಕಾರಂಗಳ ಎನ್ನುವ ಊರೊಂದು ಇದೆ ಎಂದು ತಿಳಿದುಹೋಯಿತು. ಅಲ್ಲಿಗೆ ಯಕ್ಷಗಾನ ಮೇಳಗಳೂ, ಸೈಕಲ್ ಸರ್ಕಸಿನವರೂ, ಡೊಂಬರಾಟದವರೂ ಬರತೊಡಗಿದರು. ಒಂದು ಸಲ ಒಂದು ಸಣ್ಣ ಸರ್ಕಸ್ ಕಂಪೆನಿಯೂ ಬಂದಿತ್ತು.

ಆಮೇಲೆ ಕಾರಂಗಳದಲ್ಲಿ ಒಂದು ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭವಾಯಿತು. ಅದರ ಆಚೆಗೆ ಇನ್ನೊಂದು ಗಾಡಿ ಕ್ಯಾಂಟೀನ್ ಪ್ರಾರಂಭವಾಯಿತು. ಹೀಗೆ ಅದು ಬದಲಾಗುತ್ತಾ ಹೋಗತೊಡಗಿತು.

ಇವುಗಳನ್ನೆಲ್ಲ ಬೆರಗಿನಿಂದ ಗಮನಿಸುತ್ತಿದ್ದ ರಾಜೇಶನಿಗೆ ಈ ಬದಲಾವಣೆ ತಮಗೆ ಕೆಟ್ಟದ್ದನ್ನು ತರುತ್ತದೆ ಎಂದು ಅನಿಸತೊಡಗಿತು. ಅದಕ್ಕೆ ಕಾರಣ ರಾತ್ರಿಯ ಊಟದ ಹೊತ್ತಿಗೆ ಅವನ ಅಪ್ಪ ಮತ್ತು ಅಮ್ಮನ ನಡುವೆ ನಡೆಯುತ್ತಿದ್ದ ಚಿಂತೆಯ, ಆತಂಕದ ಮಾತುಕತೆಗಳು. ಯಾಕೆಂದರೆ ಈ ಬದಲಾವಣೆಗಳಾಗುತ್ತಿದ್ದಂತೆ ಅವರ ಕುಟುಂಬಕ್ಕೆ ಆರ್ಥಿಕ ತಾಪತ್ರಯದ ದಿನಗಳು ಎದುರಾದವು. ಕ್ಯಾಂಟೀನಿನಲ್ಲಿ ಹಿಂದಿನಂತೆ ವ್ಯಾಪಾರ ಇರಲಿಲ್ಲ. ಮಾಡಿಟ್ಟ ತಿಂಡಿಗಳು ಉಳಿಯತೊಡಗಿದವು. ರಾತ್ರಿ ಹೊತ್ತು ಅಪ್ಪ ಮನೆಗೆ ಹೊತ್ತು ತರುತ್ತಿದ್ದ ಉಳಿದ ತಿಂಡಿಗಳನ್ನು ರಾಜೇಶ ಮೊದಮೊದಲು ಆಸೆಯಿಂದ ಗಬಗಬನೆ ತಿನ್ನುತ್ತಿದ್ದರೂ, ಅಪ್ಪ ಅಮ್ಮನ ಕಣ್ಣುಗಳಲ್ಲಿದ್ದ ಭವಿಷ್ಯದ ಚಿಂತೆಯ ಕರಿಛಾಯೆಯನ್ನು ಕಂಡಮೇಲೆ ತಿನ್ನುವ ಉತ್ಸಾಹ ಕಡಿಮೆಯಾಯಿತು. ಅಚ್ಯುತಣ್ಣನ ಕುಟುಂಬ ಕೆಲವೊಮ್ಮೆ ರಾತ್ರಿ ಅನ್ನ ಮಾಡದೆ ಉಳಿದ ತಿಂಡಿಗಳನ್ನೇ ತಿಂದದ್ದೂ ಇತ್ತು.

ಅಚ್ಯುತಣ್ಣ ಮತ್ತು ಕಾರ್ತಿಯಾನಮ್ಮನ ದುಡಿಮೆಗೆ ಸರಿಯಾಗಿ ಹಣ ಹುಟ್ಟುತ್ತಿರಲಿಲ್ಲ. ಶಶಿಕಲಳ ಮದುವೆಗಾಗಿ ಮಾಡಿದ ಸಾಲವೂ ತೀರಿರಲಿಲ್ಲ. ಹಾಗಾಗಿ ಬದುಕು ಸಾಗಿಸುವುದು ಸುಲಭವಾಗಿರಲಿಲ್ಲ. ಅದೃಷ್ಟ ಅಥವಾ ಕಣ್ಣಿಗೆ ಕಾಣದ ವಿಧಿ ಎನ್ನುವುದೊಂದು ವಿಚಿತ್ರ ಶಕ್ತಿ. ನಾವು ಒಂದೇ ಬಗೆಯ ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದರೂ, ಅದು ಒಮ್ಮೆ ಅನಿರೀಕ್ಷಿತವಾದ ಏಳಿಗೆಯನ್ನೂ, ಒಮ್ಮೆ ಅನಿರೀಕ್ಷಿತವಾದ ಇಳಿಗಾಲವನ್ನೂ ಪ್ರತಿಫಲವಾಗಿ ಕೊಡುವುದು. ಹೀಗೆ ಅಚ್ಯುತಣ್ಣನ ಸಂಸಾರದ ಬದುಕು ಕಷ್ಟದಲ್ಲಿ ಸಾಗುತ್ತಿರುವಾಗ ಮತ್ತೊಂದು ಅಪಘಾತ ಸಂಭವಿಸಿತು!

ಒಂದು ದಿನ ರಾತ್ರಿ ಅಚ್ಯುತಣ್ಣ ಕ್ಯಾಂಟೀನನ್ನು ಮುಚ್ಚಿ ಮನೆಗೆ ತಮ್ಮ ಸೈಕಲ್ ತುಳಿಯುತ್ತಾ ಬರುತ್ತಿದ್ದರು. ಯಾರೋ ಒಬ್ಬ ಸ್ಕೂಟರಿನವನು ಕತ್ತಲಲ್ಲಿ ಸರಿಯಾಗಿ ಕಾಣದೆ ಅಚ್ಯುತಣ್ಣನ ಸೈಕಲಿಗೆ ಡಿಕ್ಕಿ ಹೊಡೆದು ಅಚ್ಯುತಣ್ಣನನ್ನು ರಸ್ತೆ ಬೀಳಿಸಿ, ತಾನು ಸಿಕ್ಕಿಹಾಕಿಕೊಳ್ಳಬಾರದು ಎಂದು ಅಲ್ಲಿಂದ ಪರಾರಿಯಾದ. ಕತ್ತಲಿನಲ್ಲಿ ಅವನು ಯಾರು ಏನು ಎನ್ನುವುದು ಯಾರಿಗೂ ಗುರುತಾಗಲಿಲ್ಲ.

ಅಚ್ಯುತಣ್ಣ ರಸ್ತೆಯಲ್ಲಿ ಬಿದ್ದಿದ್ದುದನ್ನು ಕಂಡವರು ಅವರನ್ನು ಎತ್ತಲು ಬಂದರು. ಅವರ ತಲೆ ಡಾಮಾರು ರಸ್ತೆಗೆ ಬಡಿದು ಅಲ್ಲೊಂದು ಬಾವು ಕಾಣಿಸಿಕೊಂಡಿತ್ತು. ಕೈಕಾಲುಗಳಿಗೆ ತರಚಿದ ಗಾಯವಾಗಿ ರಕ್ತ ಬರುತ್ತಿತ್ತು. ಅಚ್ಯುತಣ್ಣ ಏನೇನೋ ಮಾತಾಡಿದರು. ಒಂದಕ್ಕೊಂದು ಸಂಬಂಧವಿಲ್ಲದ ಮಾತುಗಳು. ಅವುಗಳನ್ನು ಕೇಳಿದಾಗ ಅಲ್ಲಿದ್ದ ಕೆಲವರಿಗೆ ಅವರ ಮಿದುಳಿಗೆ ಹಾನಿಯಾಗಿರಬಹುದು ಎಂದು ಅರಿವಾಯಿತು. ಅವರನ್ನು ಪಟ್ಟಣದ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಒಂದು ವಾರ ಸಾವು ಬದುಕಿನ ಹೋರಾಟ ನಡೆಸಿದ ಅಚ್ಯುತಣ್ಣ ಕೊನೆಗೆ ಬದುಕಿನ ಹೋರಾಟ ಮುಗಿಸಿ ಅಸ್ತಂಗತರಾದರು.

ಆಗ ಕಾರ್ತಿಯಾನಮ್ಮನನ್ನೂ ರಾಜೇಶನನ್ನೂ ತನ್ನ ಜತೆಗೆ ತೋರಣಪದವಿಗೆ ಕರೆದುಕೊಂಡು ಬಂದು ಆಶ್ರಯ ನೀಡಿದವರು ಕಾರ್ತಿಯಾನಮ್ಮನ ತಮ್ಮ, ಅಂದರೆ ರಾಜೇಶನ ಸೋದರ ಮಾವ ಸುಧಾಕರ ವರ್ಕಾಡಿ.

ತೋರಣಪದವು ಕಾರಂಗಳದಿಂದ ಈಶಾನ್ಯಕ್ಕೆ ಇಪ್ಪತ್ತೈದು ಮೈಲು ದೂರದಲ್ಲಿದ್ದ, ಬಂಟವಾಳ ತಾಲೂಕಿನ ಒಂದು ಸುಂದರವಾದ ಊರು. ಅಲ್ಲಿಯೂ ಮುಖ್ಯ ರಸ್ತೆ ಮಂಗಳೂರಿನತ್ತ ಹೋಗುವುದೇ ಆಗಿದ್ದರೂ ಮಂಗಳೂರು ದೂರವಿದ್ದುದರಿಂದ ತೋರಣಪದವಿನಲ್ಲಿ ಬಹಳ ವೇಗವಾದ ಬದಲಾವಣೆಗಳು ಸಂಭವಿಸುತ್ತಲೇ ಇರಲಿಲ್ಲ! ಅದು ತುಂಬಾ ಶಾಂತಿಯಿಂದ ಬದುಕುತ್ತಿದ್ದ ಊರು. ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಎರಡು ಫರ್ಲಾಂಗುಗಳಷ್ಟು ಉದ್ದಕ್ಕೆ ಅಂಗಡಿ ಮುಂಗಟ್ಟುಗಳು, ಬಸ್ ಸ್ಟ್ಯಾಂಡು, ಹೈಸ್ಕೂಲು, ಅಂಚೆ ಕಚೇರಿ, ಇಗರ್ಜಿ, ಪಂಚಾಯತು ಮತ್ತಿತರ ಹಳ್ಳಿಯ ಕಚೇರಿಗಳು ಹೀಗೆ ಸಣ್ಣ ಪೇಟೆಯೊಂದನ್ನು ಹೊಂದಿದ್ದ ಊರು.

ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಏರುತಗ್ಗಾದ ಪ್ರಕೃತಿಯ ನಡುವೆ ಕೃಷಿಕರ ಬೈಲು, ಬಾಕಿಮಾರು ಮತ್ತು ಬೆಟ್ಟು ಗದ್ದೆಗಳು, ಅವರ ಮನೆಗಳು, ಕಾಲುದಾರಿಗಳು, ಕೆರೆ ಬಾವಿಗಳು ಇವೆ. ಈ ಪೇಟೆಯ ನಡುವಿನಿಂದ ದಕ್ಷಿಣಕ್ಕೆ ಊರಿನೊಳಗೆ ಹೊರಟು ಕಾಡು ಮೇಡು ಬೆಟ್ಟ ಗುಡ್ಡ ಬೈಲುಗಳನ್ನು ಹಾದು ಹೋಗುವ ಅಗಲ ಕಿರಿದಾದ ಡಾಮಾರು ರಸ್ತೆ ಇತಿಹಾಸ ಪ್ರಸಿದ್ಧವಾದ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಹೋಗುತ್ತದೆ. ದೇವಸ್ಥಾನ ಪೇಟೆಯಿಂದ ಎರಡೂವರೆ ಮೈಲು ದೂರದಲ್ಲಿದೆ. ಉತ್ತರ ದಿಕ್ಕಿನಲ್ಲಿ ಒಂದು ಮೈಲು ದೂರದಲ್ಲಿ ಕಳೆದ ಎರಡು ಮೂರು ದಶಕಗಳಲ್ಲಿ ಆದ ವಸತಿ ಕಾಲನಿಯ ವಿಸ್ತರಣೆಯಿತ್ತು.

ವಿಷ್ಣುಮೂರ್ತಿ ದೇವಸ್ಥಾನದ ಕಾರಣದಿಂದಾಗಿ ಈ ಊರು ಐತಿಹಾಸಿಕ ಹಿನ್ನೆಲೆ ಇರುವ ಊರು ಎಂದು ಕರೆಯಲ್ಪಟ್ಟಿದೆ. ದ್ವೈತ ಮತಾಚಾರ್ಯ ಮಧ್ವಾಚಾರ್ಯರು ಆ ಊರಿಗೆ ಬಂದಿದ್ದಾಗ ಈ ದೇವಸ್ಥಾನದಲ್ಲಿ ಪೂಜೆ ನಿಂತು ಹೋಗಿದ್ದುದನ್ನು ಕಂಡು ಪೂಜೆ ಮತ್ತೆ ಸಾಂಗವಾಗಿ ನಡೆಯುವಂತೆ ವ್ಯವಸ್ಥೆ ಮಾಡಿದ್ದರಂತೆ. ಅಭಿಷೇಕಕ್ಕೆಂದು ಅವರು ಕೊಟ್ಟಿದ್ದ ಸಣ್ಣ ವಿಗ್ರಹವು ಈಗಲೂ ಗರ್ಭಗುಡಿಯಲ್ಲಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಬೈಲುಗದ್ದೆಗಳ ನಡುವೆ ಇರುವ ಗೋಪಾಲಕೃಷ್ಣ ಮಠದಲ್ಲಿ ಅವರು ಒಮ್ಮೆ ಚಾತುರ್ಮಾಸ್ಯ ಕುಳಿತಿದ್ದರು. ಚಾತುರ್ಮಾಸ್ಯ ಅಂದರೆ ಮಳೆಗಾಲದಲ್ಲಿ ಒಂದು ಪ್ರಶಾಂತ ಸನ್ನಿಧಾನದಲ್ಲಿ ನಾಲ್ಕು ತಿಂಗಳುಗಳ ಕಾಲ ಜಪತಪಾದಿಗಳನ್ನು ಮಾಡುತ್ತ ಇರುವುದು.

ಊರಿನ ಇನ್ನೊಂದು ಐತಿಹ್ಯ ಬಂಗರಸರ ಕುರಿತಾಗಿ ಇದೆ. ಈ ಊರಿಗೆ ತೋರಣಪದವು ಎಂಬ ಹೆಸರು ಬರಲು ಕಾರಣ, ಬಂಗರಸರು ಪ್ರತಿವರ್ಷ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವಕ್ಕೆ ಬರುತ್ತಿದ್ದರಂತೆ; ಅವರನ್ನು ಈಗ ಪೇಟೆ ಇರುವ ಪದವು (ಪ್ರಸ್ಥಭೂಮಿ) ಸ್ಥಳದಲ್ಲಿ ತೋರಣ ಕಟ್ಟಿ, ಊರವರೆಲ್ಲ ಎದುರುಗೊಂಡು ಸ್ವಾಗತಿಸುತ್ತಿದ್ದರಂತೆ. ತೋರಣ ಪದವು ಎನ್ನುವ ಹೆಸರು ಬಂದದ್ದು ಅದರಿಂದಾಗಿ.

ತೋರಣಪದವಿನಲ್ಲಿ ಊರಿನ ಆದರ್ಶವಾದಿ ಮುಖಂಡರು ಸ್ವಾತಂತ್ರ್ಯಪೂರ್ವದಲ್ಲಿಯೇ ವಿದ್ಯಾವರ್ಧಕ ಸಂಘ ಎಂಬ ಒಂದು ಸಮಿತಿಯನ್ನು ರಚಿಸಿಕೊಂಡು ಸ್ಥಾಪಿಸಿದ್ದ ವಿದ್ಯಾವರ್ಧಕ ಹೈಸ್ಕೂಲು ಇತ್ತು, ವ್ಯವಸಾಯ ಸೇವಾ ಸಹಕಾರಿ ಸಂಘ ಇತ್ತು, ಆದರ್ಶ ಯುವಕ ಮಂಡಳಿ ಎನ್ನುವ ಸಂಘ ಇತ್ತು. ಒಟ್ಟಿನಲ್ಲಿ ತೋರಣಪದವು ಒಂದು ಆದರ್ಶ ಊರಾಗಿತ್ತು.

ರಾಜೇಶ ತೋರಣಪದವಿಗೆ ಬಂದಾಗ ಸುಧಾಕರ ವರ್ಕಾಡಿಯವರು ವಿದ್ಯಾವರ್ಧಕ ಹೈಸ್ಕೂಲಿನ ಪರಿಚಾರಕ (ಅಟೆಂಡರ್) ಆಗಿದ್ದರು ಮತ್ತು ತೋರಣಪದವಿನಲ್ಲಿ ಹೆಚ್ಚಾಗಿ ಮುಚ್ಚಿಯೇ ಇರುತ್ತಿದ್ದ ‘ವರ್ಕಾಡಿ ಇಲೆಕ್ಟ್ರಿಕಲ್ಸ್’ ಎಂಬ ಆರಡಿ ಅಗಲ ಎಂಟಡಿ ಉದ್ದದ ಅಂಗಡಿಯ ಮಾಲಕರಾಗಿದ್ದರು. ಮಲಯಾಳಿಗಳ ಹಾಗೆ ತೆಂಗಿನೆಣ್ಣೆ ಹಾಕಿ ಮಿರಿಮಿರಿ ಮಿಂಚುವ ದಟ್ಟ ಕಪ್ಪುಕೂದಲ ರಾಶಿಯನ್ನು ಹಿಂದಕ್ಕೆ ಬಾಚಿಕೊಂಡಿದ್ದ, ದಪ್ಪ ಮೀಸೆಯ, ಹೊಳಪುಗಣ್ಣಿನ ಸುಧಾಕರ ವರ್ಕಾಡಿಯವರು ಬೆಳಿಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಹೈಸ್ಕೂಲಿನಲ್ಲಿ ಜವಾನನ ಕೆಲಸ ಮಾಡುತ್ತಲೂ, ಬಿಡುವಿನ ಸಮಯದಲ್ಲಿ ಊರಿನವರ ಮನೆಯ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುತ್ತಲೂ, ಹಾಳಾದ ಪಂಪುಗಳನ್ನು ರಿಪೇರಿ ಮಾಡುತ್ತಲೂ ಇರುತ್ತಿದ್ದರು. ಅಪರೂಪಕ್ಕೊಮ್ಮೆ ಇಂತಹ ಯಾವ ಕೆಲಸಗಳೂ ಇಲ್ಲದೆ ಇದ್ದರೆ ಅಂಗಡಿ ತೆರೆದು ಅಲ್ಲಿದ್ದ ಮರದ ಕುರ್ಚಿಯಲ್ಲಿ ಕುಳಿತು ಬೀಡಿ ಸೇದಿಕೊಂಡು ಇರುತ್ತಿದ್ದರು.

ಈಗ ಸುಧಾಕರ ವರ್ಕಾಡಿಯವರ ‘ವರ್ಕಾಡಿ ಇಲೆಕ್ಟ್ರಿಕಲ್ಸ್’ ದೊಡ್ಡ ಕಾಂಪ್ಲೆಕ್ಸ್ ಒಂದರಲ್ಲಿ ಎರಡು ಅಂಗಡಿ ಕೋಣೆಗಳನ್ನು ಬಾಡಿಗೆಗೆ ಪಡೆದು ಕಾರ್ಯಾಚರಿಸುತ್ತಿದೆ. ಒಂದು ಕೋಣೆ ವ್ಯವಹಾರಕ್ಕೆ ತೆರೆದುಕೊಂಡಿದ್ದರೆ ಇನ್ನೊಂದು ಅವರ ಉಪಕರಣಗಳನ್ನು ಇಡಲು ಗೋಡೌನಿನಂತೆ ಬಳಕೆಯಾಗುತ್ತಿದೆ. ವರ್ಕಾಡಿಯವರ ಕೈಕೆಳಗೆ ಸುಮಾರು ಹತ್ತು ಮಂದಿ ಯುವಕರು ದುಡಿಯುತ್ತಾರೆ. ಜವಾಬ್ದಾರಿಯಿರುವ ಒಬ್ಬ ಯುವಕ ಮೇಸ್ತ್ರಿಯಂತೆ ಎಲ್ಲವನ್ನೂ ನಡೆಸಿಕೊಂಡು ಹೋಗುತ್ತಿದ್ದಾನೆ. ಅವರ ಬಳಿ ಒಂದು ಹಳೆಯ ಜೀಪು ಕೂಡ ಇದ್ದು, ಅದು ಹುಡುಗರಿಗೆ ಸಾಮಾನು ಸಾಗಿಸಲು ನೆರವಾಗುತ್ತದೆ. ಈಗ ಯಜಮಾನನಾದ ಸುಧಾಕರ ವರ್ಕಾಡಿಯವರು ಸ್ವತಃ ದುಡಿಯಬೇಕಾಗಿಲ್ಲ. ಅವರು ಅಂಗಡಿಗೆ ಬಂದು, ಪೇಪರ್ ಓದಿ, ಹುಡುಗರ ಬಳಿ ಆ ದಿನ ಎಲ್ಲೆಲ್ಲಿ ಕೆಲಸ ನಡೆಯುತ್ತಿದೆ ಎಂದು ಕೇಳಿ, ವಯರಿಂಗ್ ನಡೆಯುತ್ತಿದ್ದ ಸೈಟುಗಳಿಗೆಲ್ಲ ತಮ್ಮ ಹಳೆಯ ಬೈಕಿನಲ್ಲಿ ಹೋಗಿ ಬರುತ್ತಾರೆ. ಮಧ್ಯಾಹ್ನ ಮನೆಯಲ್ಲಿಯೇ ಉಂಡು, ಮಲಗಿ ಸಂಜೆ ನಾಲ್ಕು ಗಂಟೆಯ ನಂತರ ಮತ್ತೆ ಅಂಗಡಿಗೆ ಹೋಗಿ ರಾತ್ರಿಯವರೆಗೆ ಕುಳಿತಿದ್ದು ಬರುತ್ತಾರೆ.

ಆ ಕಾಲದಲ್ಲಿ ಆ ಸಣ್ಣ ಅಂಗಡಿ ಕೋಣೆಯನ್ನು ತಮ್ಮ ಗೋಡೌನ್ ಕಮ್ ಆಫೀಸ್ ಆಗಿ ಇಟ್ಟುಕೊಂಡು, ಸ್ವತಃ ಫೀಲ್ಡಿಗೆ ಹೋಗಿ ದುಡಿಯುತ್ತಿದ್ದ ವರ್ಕಾಡಿಯವರಿಗೆ ತೀರಾ ಅಗತ್ಯ ಬಿದ್ದಾಗ ನವೀನ ಎನ್ನುವವನು ಸಹಾಯಕನಾಗಿ ಹೋಗುತ್ತಿದ್ದ. ಆಗ ನವೀನನಿಗೆ ತಿಂಗಳ ಸಂಬಳ ಕೊಡುವಷ್ಟು ಕೆಲಸ ವರ್ಕಾಡಿಯವರಿಗೆ ಇರುತ್ತಿರಲಿಲ್ಲ. ನವೀನ ಸ್ವತಂತ್ರನಾಗಿಯೂ ಕರೆಂಟಿನ ಕೆಲಸ ಮಾಡುತ್ತಿದ್ದ. ಅದರಿಂದಲೇ ಜೀವನ ಸಾಗದೆ ಬೇರೆಯೂ ಏನೇನೋ ಕೆಲಸಗಳನ್ನು ಮಾಡಿಕೊಂಡಿರುತ್ತಿದ್ದ.


ಸುಧಾಕರ ವರ್ಕಾಡಿಯವರು ಮೊದಲು ಒಂದು ಬಾಡಿಗೆ ಕೋಣೆಯಲ್ಲಿಯೂ, ಮದುವೆಯಾದಮೇಲೆ ಒಂದು ಹಳೆಯ ಮನೆಯಲ್ಲಿಯೂ ವಾಸಕ್ಕೆ ಏರ್ಪಾಡು ಮಾಡಿಕೊಂಡಿದ್ದರು. ರಾಜೇಶ ಮತ್ತು ಕಾರ್ತಿಯಾನಮ್ಮನನ್ನು ಕರೆದುಕೊಂಡು ಬಂದ ಕಾಲಕ್ಕೆ ಅವರಿಗೆ ಐದು ಸೆಂಟ್ಸ್ ಕಾಲನಿಯಲ್ಲಿ ಕಟ್ಟಿದ್ದ ಸ್ವಂತ ಮನೆಯಿತ್ತು. ಮನೆಯಲ್ಲಿ ಹೆಂಡತಿ ವತ್ಸಲ ಮತ್ತು ಮಗಳು ಕಲ್ಯಾಣಿ ಇದ್ದರು. ಕಲ್ಯಾಣಿ ರಾಜೇಶನಿಗಿಂತ ಐದು ವರ್ಷ ಸಣ್ಣವಳು.

(ಕೃತಿ: ಗಮ್ಯ (ಕಾದಂಬರಿ), ಲೇಖಕರು: ಬಿ. ಜನಾರ್ದನ ಭಟ್‌, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 250/-)