ನೆರಳಾಗಲಿ ಮುಡಿಯಾದರೊ
ಆ ಉಸಿರನ್ನಾದರೊ ತುಸು ಕಡ ಕೊಡುವೆಯಾ ಗೆಳೆಯ
ಆ ನಾದ ನಿನಾದದ ಹೆಜ್ಜೆಗಳನ್ನಾದರೊ ಸರಿಸು ಗೆಳೆಯ
ಆ ನಿನ್ನ ಡೋಲಿಯ ನೆರಳ ಹಿಡಿ ಬೆಳಕನ್ನಾದರೊ ಹಂಚು ಗೆಳೆಯ
ಸೆರಗಿನ ಹೂವುಗಳ ಕಂಬನಿಯನ್ನಾದರೊ ಸ್ಪರ್ಶಿಸು ಗೆಳೆಯ
ಸೋಗಿನ ಬೀದಿಗಾದರೊ ಹಗೆಗಳ ಬಗೆ ಧಗೆಯೊ
ಮುಳ್ಳಿಗೂ ಹಾದಿ ತೋರುವೆಯಾ ಗೆಳೆಯ
ಆತ್ಮದ ತೆನೆಯನ್ನಾದರೊ ದಾಟಿಸು ಗೆಳೆಯ
ಬೇರ ಕೊರಳನ್ನಾದರೊ ಕತ್ತರಿಸಿ ಬಿಡು ಗೆಳೆಯ
ಗೂಢ ನೆರಳ ಸೇತುವೆಯ ರವುದಿಯನ್ನಾದರೊ ತೂರಿ ಬಿಡು ಗೆಳೆಯ
ಅರಳುವ ಕಾಳನ್ನಾದರೊ
ಹಂಬಲಿಸೊ ಬಟ್ಟೆಯನ್ನಾದರೊ ಸಂತೈಸು ಗೆಳೆಯ
ಧರಿಸು ಕರಿಜಾಲಿಯ ತೊಗಲನ್ನಾದರೊ
ಲೋಕದಾಚೆ ಬಿಸಾಕು ಮುಷ್ಟಿ ಮನವನ್ನಾದರೊ ಗೆಳೆಯ
ಬಾರಿಹಣ್ಣ ನೆತ್ತರನ್ನಾದರೊ ಮಾತಾಡಿಸು ಗೆಳೆಯ
ಗೂಢ ಗಡ್ಡೆಗಳ ಆನೆ ಹೆಜ್ಜೆಗಳನ್ನಾದರೊ ಅರಿಯಬೇಕು ಗೆಳೆಯ
ಕಡು ಬೆಂಡಾಲಿಯಾದರೊ ನಕ್ಕು ನಲಿಯಲಿ ಗೆಳೆಯ
ತಾಕಿಹ ಉಸಿರಾದರೊ ಬೆಂದಿದೆಯೊ ಗೆಳೆಯ
ಕಡು ರೋಧನಕ್ಕೊ
ಆ ಹಾಸಿಗಲ್ಲಿಗಾದರೊ
ಈ ಮಣ್ಣಿಗಾದರೊ
ನೀನೇ ಗತಿ ಮತಿ ಗೆಳೆಯ
ಕಡು ಆತ್ಮಕ್ಕೊ,
ನೇತ್ರಕ್ಕೊ ,
ಮಣ್ಣೆರೆಚಿದೆಯಾ ಗೆಳೆಯ
ಧಿಕ್ಕರಿಸಿದ್ದೇನೆ ಗೆಳೆಯ
ಕಡು ಸಂತೆಯ ಜಾಡನ್ನೊ
ಮುಡಿಯಾದರೊ ನೆರಳಾಗಲಿ ಗೆಳೆಯ
ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೂಫಿ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು.
‘ಒಂಟಿ ಹೊಸ್ತಿಲು’, ‘ಅನಾಮಧೇಯ ಹೂ’, “ಹರವಿದಷ್ಟು ರೆಕ್ಕೆಗಳು” ಪ್ರಕಟಿತ ಕವನ ಸಂಕಲನಗಳು
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ