ಕೇವಲ ನಿರೂಪಕಿ ಆಗದೆ ಕತೆಗಳ ಒಳಗಿನಿಂದ ಬಂದು ಮಾತನಾಡುವ ಕತೆಗಾರ್ತಿಗೆ ಆ ಕಾರಣಕ್ಕೆ ಒಂದು ರೀತಿಯ ಸಹಜ ಯಜಮಾನಿಕೆ ಪ್ರಾಪ್ತವಾಗಿದೆ. ಭಾರತದ ಮಹಾವ್ಯಾಖ್ಯಾನಗಳನ್ನು ನೀಡಿದ ವಾಲ್ಮೀಕಿ ವ್ಯಾಸರು ಕತೆಯ ಒಳಗಿನವರು. ತಾವೂ ತಮ್ಮ ಕತೆಯಲ್ಲಿ ಪಾತ್ರಧಾರಿಗಳು ಅಥವಾ ತಮ್ಮಿಂದಲೇ ಕತೆಗಳನ್ನು ಆರಂಭಿಸಿದವರು. ಕತೆಗಾರಿಕೆಗೆ ಇದೊಂದು ಅತ್ಯುತ್ತಮ ಮಾದರಿ. ತಾನೇ ಊರಾಡಿ ಎತ್ತಿಕೊಂಡು ಬಂದ ಕತೆಗಳಂತಿರುವ ಸಮೂಹ ಪ್ರಜ್ಞೆ ಈ ಕತೆಗಳ ಸತ್ವ. ಕತೆಗಳು ಸಮೂಹದ ಸ್ವತ್ತು. ಸಮೂಹ ಕೊಡುತ್ತಿರುವ ಸಮಸ್ತ ಬೈಗುಳಗಳಾದಿಯಾಗಿ ಯಾವುದನ್ನೂ ಸೋಸದೆ ಇಡಿಯಾಗಿ ನಮಗೆ ತಲುಪಿಸಲಾಗಿದೆ.
ದಯಾ ಗಂಗನಘಟ್ಟ ಕಥಾ ಸಂಕಲನ “ಉಪ್ಪುಚ್ಚಿ ಮುಳ್ಳು”ಗೆ ನಟರಾಜ್ ಬೂದಾಳು ಬರೆದ ಮುನ್ನುಡಿ
ದಯಾಗಂಗನಘಟ್ಟ ನಮ್ಮ ಸೀಮೆಯ ಕತೆಗಾರ್ತಿ, ನಮ್ಮ ತಿಪಟೂರು ಸೀಮೆಗೆ ಒಂದು ವಿಶಿಷ್ಟವಾದ ಘಮಲಿದೆ. ಬೆಳಗಿನ ಒಂಭತ್ತು ಗಂಟೆ ಹೊತ್ತಿಗೇನಾದರೂ ಊರೊಳಗಾಸಿ ಬಂದರೆ ಕಾಯಿಹಾಲಿನಲ್ಲಿ ಬೇಯುತ್ತಿರುವ ಚಿತ್ರಾನ್ನದ ವಗ್ಗರಣೆಯ ವಾಸನೆ ಅಲ್ಲಿಯೇ ಜೋತುಗಂಡು ನಿಲ್ಲುವಂತೆ ಮಾಡುತ್ತೆ. ಇನ್ನು ಸಂಜಿಗೆ ದನ ಬರೋ ಹೊತ್ತಿನಲ್ಲಿ ಊರಾಚೆಗೇ ಬರುತ್ತಿರುವ ಸ್ವಲ್ಪ ಸೀದ ಮುದ್ದೆಯ ಘಮಲು ಹಿಂದಿನ ಜಲುಮಗಳ ನೆನಪೂ ಬರುವಂತೆ ಮಾಡುತ್ತೆ. ಇವೆಲ್ಲ ದಾಟಲಾಗದ, ಇಷ್ಟವಾಗುವ ತಡೆಗಳು. ಇನ್ನೂ ಕೆಲವು ವಿಶೇಷಗಳಿವೆ. ನಮ್ಮ ಸೀಮೆಯ ಹುಣ್ಣಿಮೆ ಅಮಾಸೆಗಳಂತೂ ತತ್ವಪದಗಳು ಮತ್ತು ಏಕತಾರಿಯ ಝೇಂಕಾರದಲ್ಲಿ ಓಲಾಡುತ್ತಿರುತ್ತವೆ. ಹುಣ್ಣಿಮೆಗೆ ನಾನೂ ನನ್ನ ಹೆಂಡತಿ ಜೇನುಕಲ್ಲು ಬೆಟ್ಟಕ್ಕೆ ತತ್ವ ಕೇಳಲು ಹೋದರೆ ಭಕ್ತಾದಿಗಳು ಅಲ್ಲೇ ಮಿದ್ದು ಕಟ್ಟಿಕೊಡುವ ಹಸಿ ತಂಬಿಟ್ಟಿಗೆ ಜೋತುಗಂಡು ಕೂತಿದ್ದು ತಿಂದೇ ಬರುತ್ತೇವೆ.
ಈ ಸಂಕಲನ ನಮ್ಮ ಸೀಮೆಯ ಸುಗ್ಗಿ ಕಣಕ್ಕೆ ಬಂದಂತೆನ್ನಿಸಿದೆ. ಹದಿನೈದು ಬರಹಗಳಿರುವ ಈ ಸಂಕಲನವನ್ನು ಓದಿದೇಟಿಗೆ ಕೆಲವು ವಿಶೇಷಗಳು ತಾವಾಗಿ ಎದುರಿಗೆ ಬಂದು ನಿಲ್ಲುವಷ್ಟು ಸಶಕ್ತವಾಗಿವೆ. ಮೊದಲನೆಯದಾಗಿ ಹೆಣ್ಣು ಓದಿನ ಅತ್ಯುತ್ತಮ ಮಾದರಿಯನ್ನು ಈ ಕೃತಿ ಮುಂದಿಟ್ಟಿದೆ. ಲೋಕವನ್ನು ಹೆಣ್ಣಿನ ಓದಿಗೆ ಒಳಪಡಿಸಿದರೆ ಅಗಾಧವಾದ ಬದಲಾವಣೆಗಳು ಉಂಟಾಗುತ್ತವೆ. ಅದು ಬರೀ ಕತೆಗಳಲ್ಲಿ ಅಲ್ಲ; ಬದುಕಿನ ತುಂಬ ತುಂಬಿಕೊಂಡಿರುವ ಪೊಳ್ಳು, ಸುಳ್ಳು ಸೋಗಲಾಡಿತನಗಳೆಲ್ಲವನ್ನು ತೂರಿ, ಕೇರಿ, ಕೊಚ್ಚಿ, ಯಗ್ಗಲಿಸಿ ಬದುಕಿಗೆ ಬೇಕಾದ್ದು ಇಷ್ಟೇ ತಗಾ ಎಂದು ಗಟ್ಟಿಕಾಳನ್ನು ಕೊಡುತ್ತಾರೆ. ಮೂರ್ನಾಲ್ಕು ಹೆಣ್ಣುಮಕ್ಕಳು ರಾಗಿ ಮಾಡುವಾಗ ಮೊರದಲ್ಲಿ ಕುಣಿದಾಡುವ ಕತೆ ಕವನಗಳ ಲೆಕ್ಕ ಹಿಡಿಯುವುದು ಸುಲಭದ ಸಂಗತಿಯಲ್ಲ! ನಾಡಿಗೇ ರಾಗಿ ಮಾಡುವುದನ್ನು ಹೇಳಿಕೊಟ್ಟು ಉಘೇ ಉಘೇ ಅನ್ನಿಸಿಕೊಂಡ ಮಾಗಡವ್ವ ನಮ್ಮ ಸೀಮೆಯವಳೇ!
ಉಪ್ಪಿನ ಮುಳ್ಳು ಕತೆಯನ್ನು ಮೊದಲು ಓದಿದೆ. ಆ ಇಸಪಾತಕ ಮುಳ್ಳಿನ ಕೈಲಿ ಅದೆಷ್ಟೋ ಸಲ ಚುಚ್ಚಿಸಿಕೊಂಡ ನೆನಪಿಗೆ. ಇದೀಗ ಅದೊಂದು ರೂಪಕದ ಮೆಳೆಯಾಗಿ ಕತೆಯನ್ನು ಆವರಿಸಿದೆ. ರಾಜಚಿಕ್ಕಪ್ಪನೆಂಬೋ ಅಪ್ಪಟ ಮನುಷ್ಯನನ್ನು ಬಾಳಗೊಡಿಸದ ಜಡ್ಡುಗಟ್ಟಿದ ಸಮೂಹದ ಕೇಡು ಅವನನ್ನು ಆಪೋಷನ ತೆಗೆದುಕೊಂಡ ಕತೆ. ನಮ್ಮ ಹಳ್ಳಿಗಳ ಕೇಡೇನು ಕಮ್ಮಿ ಇಲ್ಲ. ಊರಿಗೆ ಊರೇ ದುಷ್ಟ ಸಾಂಪ್ರದಾಯಿಕ ನಡೆಗಳ ಉಪ್ಪಿನಮುಳ್ಳಿನ ಬೇಲಿ ಹಾಕಿಕೊಂಡು ಅದರ ನಡುವೆ ಸಿಕ್ಕಾಕಿಕೊಂಡಿದೆ. ಮೆಳೆಯಲ್ಲಿ ಅಲ್ಲೊಂದು ಇಲ್ಲೊಂದು ಬಿಳಿಮುತ್ತಿನ ಹಣ್ಣುಗಳಂತೆ ಕೆಲವೇ ಕೆಲವು ಜೀವಗಳು ಮನುಷ್ಯತ್ವವನ್ನು ಮಿಡಿಯುತ್ತಿವೆ. ಮಾಮೇರಿ ಇಸದ ನಡುವೆ ಬಾಳುತ್ತಿರುವ ಅಂತಃಕರುಣಿ ಜೀವಗಳನ್ನು ಈ ಕತೆಗಳು ಎಳೆದೆಳೆದು ಮಾತನಾಡಿಸುತ್ತವೆ. ‘ಈ ಸಮಾಜ ತನಗಿಂತ ಭಿನ್ನವಾಗಿ ಬದುಕಿದ ಯಾರನ್ನೂ ಇದುವರೆಗೆ ಅಷ್ಟು ಸುಲಭವಾಗಿ ಒಪ್ಪಿಕೊಂಡ ಉದಾಹರಣೆಗಳಿಲ್ಲ. ಮೂಗಿಲ್ಲದ ಜನರ ನಡುವೆ ಮೂಗಿದ್ದವನ ಸಂಕಟದಂತೆ ಯಾರಿಗೆ ಹೇಳಬೇಕು?’ ಎಂದು ಓದುಗರನ್ನು ಜೊತೆಗೆ ಕೂರಿಸಿಕೊಂಡು ಕೇಳುತ್ತವೆ.
ಕೇವಲ ನಿರೂಪಕಿ ಆಗದೆ ಕತೆಗಳ ಒಳಗಿನಿಂದ ಬಂದು ಮಾತನಾಡುವ ಕತೆಗಾರ್ತಿಗೆ ಆ ಕಾರಣಕ್ಕೆ ಒಂದು ರೀತಿಯ ಸಹಜ ಯಜಮಾನಿಕೆ ಪ್ರಾಪ್ತವಾಗಿದೆ. ಭಾರತದ ಮಹಾವ್ಯಾಖ್ಯಾನಗಳನ್ನು ನೀಡಿದ ವಾಲ್ಮೀಕಿ ವ್ಯಾಸರು ಕತೆಯ ಒಳಗಿನವರು. ತಾವೂ ತಮ್ಮ ಕತೆಯಲ್ಲಿ ಪಾತ್ರಧಾರಿಗಳು ಅಥವಾ ತಮ್ಮಿಂದಲೇ ಕತೆಗಳನ್ನು ಆರಂಭಿಸಿದವರು. ಕತೆಗಾರಿಕೆಗೆ ಇದೊಂದು ಅತ್ಯುತ್ತಮ ಮಾದರಿ. ತಾನೇ ಊರಾಡಿ ಎತ್ತಿಕೊಂಡು ಬಂದ ಕತೆಗಳಂತಿರುವ ಸಮೂಹ ಪ್ರಜ್ಞೆ ಈ ಕತೆಗಳ ಸತ್ವ. ಕತೆಗಳು ಸಮೂಹದ ಸ್ವತ್ತು. ಸಮೂಹ ಕೊಡುತ್ತಿರುವ ಸಮಸ್ತ ಬೈಗುಳಗಳಾದಿಯಾಗಿ ಯಾವುದನ್ನೂ ಸೋಸದೆ ಇಡಿಯಾಗಿ ನಮಗೆ ತಲುಪಿಸಲಾಗಿದೆ. ನೀಡಿದ ಎಲ್ಲ ಹೆಣ್ಣುಮಕ್ಕಳೂ ತಪ್ಪದೇ ಜೋಳಿಗೆಗೆ ಹಾಕಿದ ನಮ್ಮ ಸೀಮೆಯ ಬೈಗುಳವೊಂದು ಗಂಡುಕುಲವನ್ನು ಒಂದೇ ಮಾತಿನಲ್ಲಿ ಹಿಡಿದಿಟ್ಟಿದೆ. ‘ಪಾಪ್ರು ನನ್ ಮಕ್ಕಳು’ ಎನ್ನುವ ಆ ಮಹಾವ್ಯಾಖ್ಯಾನ ಎಲ್ಲ ಕತೆಗಳನ್ನೂ ಆವರಿಸಿಕೊಂಡಿದೆ!
(ಕೃತಿ: ಉಪ್ಪುಚ್ಚಿ ಮುಳ್ಳು (ಕಥಾ ಸಂಕಲನ), ಲೇಖಕರು: ದಯಾ ಗಂಗನಘಟ್ಟ, ಪ್ರಕಾಶಕರು: ಹಾಡ್ಲಹಳ್ಳಿ ಪಬ್ಲಿಕೇಷನ್ಸ್, ಬೆಲೆ: 150/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ