ನನಗೆ ಮಾತ್ರ ತಿಳಿದಿದೆ
ಈ ರಾತ್ರಿ ಕಳೆಯುವುದಕ್ಕಾಗಿ
ಎಷ್ಟು ಯುಗಗಳು ಗತಿಸುತ್ತವೆಂದು
ನೀವು ಊಹಿಸಲಾರಿರಿ
ಇದೆಷ್ಟು ದುರ್ಗಮದ ದಾರಿ ಎಂದು..
ಹೀಗೆ
ಅವಳು ತೆರೆದಿಟ್ಟು ಹೋದ
ಈ ಕಿಟಕಿ
ಈಗಲೂ ಸಹ ಮುಚ್ಚಿಲ್ಲ
ಇದೇ ದಾರಿಯಿಂದಲೇ
ಕೆಂಡ ಬೀಳುತ್ತವೆ
ನನ್ನ ರಾತ್ರಿಗಳಿಗೆ..
ಸುಟ್ಟ ಕನಸುಗಳ
ಗುಡ್ಡೆ ಹಾಕಿದ್ದೇನೆ ಮೂಲೆಯಲ್ಲಿ
ಲೆಕ್ಕವಿಟ್ಟರೆ
ದಿಕ್ಕು ತಪ್ಪೀತು
ಬದುಕಿನ ಗಣಿತ
ನನಗೆಲ್ಲಿ ತಿಳಿಯುತ್ತದೆ ಹೇಳಿ..
ಫ್ಲೋರೊಸೆಂಟ್ ದೀಪದ
ಹೊಟ್ಟೆ ಉರಿಸುವಷ್ಟು
ನಿಚ್ಚಳ ರಾತ್ರಿಗಳು ನನ್ನವು
ಸಾಂಗತ್ಯಕ್ಕೆ
ಹಾಡುಗಳಿದ್ದವೆಂದು
ಬದುಕಿಕೊಂಡೆ..
ನನ್ನದೇ ರೂಮಿನ
ಯಾವುದೋ ಪುಸ್ತಕದಿಂದೆದ್ದು
ಬಂದ ಕವಿತೆಯೊಂದು
ಮಧ್ಯರಾತ್ರಿಯ ಹೊತ್ತಿಗೆ
ಚಯ್ ತಟ್ಟುತ್ತದೆ..
ಹಠಮಾರಿ ಮಗುವೊಂದು
ಮಡಿಲಲ್ಲಿ ಮುಳುಗಿ
ದುಃಖಿಸುವಂತೆ
ರಚ್ಚೆ ಹಿಡಿದು
ಅಳುತ್ತೇನೆ
ಅವಳಿರಬೇಕಿತ್ತಲ್ಲವ
ಎಂದು ಕೇಳುತ್ತೇನೆ..
ಕವಿತೆಗೆ
ನನ್ನನ್ನು ಸಂತೈಸುವ
ಎಲ್ಲ ಮಾರ್ಗಗಳೂ ಗೊತ್ತು
ಆದರೂ ಸುಮ್ಮನಿದ್ದುಬಿಡುತ್ತದೆ
ತಾಯಿಗೆ ತಿಳಿದಿದೆ
ಅತ್ತ ಮಗು
ನಿದ್ದೆ ಹೋಗುತ್ತದೆಂದು..
ಚೇತನ್ ನಾಗರಾಳ ಎನ್ನುವ ಕಾವ್ಯನಾಮದಲ್ಲಿ ಕವಿತೆಗಳು ಮತ್ತು ಗಜ಼ಲ್‌ಗಳನ್ನು ರಚಿಸುತ್ತಿರುವ ಚನ್ನಮಲ್ಲಪ್ಪ ನಾಗರಾಳ ಮೂಲತಃ ಬಾಗಲಕೋಟ ಜಿಲ್ಲೆಯ ಬೀಳಗಿಯವರು.
ಸದ್ಯ ಖಾಸಗಿ ಬ್ಯಾಂಕೊಂದರ ಉದ್ಯೋಗಿ
ಹೀಗೊಂದು ಯುದ್ಧ ಬುದ್ಧನೊಂದಿಗೆ (ಕವನ ಸಂಕಲನ) ಮತ್ತು ಖಾಲಿ ಕೋಣೆಯ ಹಾಡು (ಗಜಲ್ ಸಂಕಲನ) ಪ್ರಕಟಿತ ಕೃತಿಗಳು
ಮೂರನೇ ಕೃತಿ “ಉಸಿರು ಮಾರುವ ಹುಡುಗ” ಗಜಲ್ ಸಂಕಲನ ಸದ್ಯ ಅಚ್ಚಿನ ಮನೆಯಲ್ಲಿದೆ.
ಗೆಳೆಯರೊಟ್ಟಿಗೆ ಸೇರಿ ಕಾಚಕ್ಕಿ ಪ್ರಕಾಶನ ನಡೆಸುತ್ತಿದ್ದಾರೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಎಂಥಾ ಭಾವದಲ್ಲಿ ಮೂಡಿದ ಕವಿತೆ ಓದುತಿದ್ದರೆ ಓದುಗರನ್ನು ಹಾಗೆ ಸಾಹಿತ್ಯದ ಸಾಲುಗಳಲ್ಲಿ ನಿಲ್ಲುವಂತೆ ಮಾಡುತ್ತದೆ ಸಹೋದರ ತುಂಬಾ ಖುಷಿಯಾಯ್ತು ತಮ್ಮ ಸಾಹಿತ್ಯದ ಉನ್ನತ ಕೃಷಿಯನ್ನು ನೋಡಿ… ಧನ್ಯವಾದ
ಅಭಿನಂದನೆಗಳು ದೋಸ್ತ್ 💐💐