ಸಿಡಿಲು ಬಾರಿಸಲಿ ಬಿಡು..
ನಿನ್ನ ದಿನಗಳಿಗೆ ಸಿಡಿಲು ಬಾರಿಸಿರಬಹುದು
ಗಂಟಲೊಳಗೆ ತುಂಡು ಮೋಡ
ಸಿಕ್ಕಿ ಹಾಕಿಕೊಂಡಿರಬಹುದು
ಉಸಿರೇ ಬಿರುಗಾಳಿಯಾಗಿ ಕಾಡುತ್ತಿರಬಹುದು..
ಸಮಾಧಾನಿಸು, ಮಳೆ ದೂರವಿಲ್ಲ
ನಜ್ಜುಗೊಜ್ಜಾದ ಎದೆಯೊಳಗೆ ಹರಿಯಬಹುದು
ಕಾಲುವೆ ತೊರೆ ಹಳ್ಳಗಳೂ..
ನೆಲ ಹದವಾಗಬಹುದು
ಕಾದು ಕಾದು ಸವೆದು ಹೋದ ಮೂಳೆಗಳ
ಹೂಡು
ಉಳು
ಬಚ್ಚಿಟ್ಟ ಕನಸುಗಳು ಮೇಲೇಳಬಹುದು..
ಕಳೆಗಿಡಗಳು ಇಂತಹ ಮಳೆಗಾಗಿ
ಕಾಯುತ್ತವೆ
ನೀನೆ ಹುಡುಕು ಮತ್ತು
ಬಾಗಿ ಬೇರು ಸಮೇತ ಕಿತ್ತು ಬಿಡು..
ಕಾಲುವೆಯಲ್ಲಿ ಬಿದ್ದ ಚಂದ್ರ ಚೂರು ಚೂರಾಗಿ
ಒಡೆದು ಹೋಗಿರಬಹುದು
ಕತ್ತೆತ್ತಿ ನೋಡು ಅಸಲಿ ಚಂದಿರನನು
ಧಾವಂತಕ್ಕೆ ಬೀಳಬೇಡ
ಇಲ್ಲಿ ಬಿಂಬಕೂ ಬದುಕಿಗೂ ವ್ಯತ್ಯಾಸವಿದೆ..
ಸುರಿದ ಹನಿಗೆ ದಾರಿಗಳು ಅಳಿಸಿಹೋಗಿರಬಹುದು
ಹೊಸ ಹೆಜ್ಜೆಗಳನು
ಕಿತ್ತಿಡು
ಹೊಸ ದಾರಿಯಲಿ ಹೊಸದೆ ಇರುತ್ತದೆ
ಮಳೆಗೆ ನಿನ್ನದೊಂದು ಧನ್ಯವಾದ ಹೇಳು..
ಸತತ ಗಾಳಿಗೆ ಬಾಗದ ಬಳ್ಳಿಯೊಂದು
ನಿನ್ನೊಳಗೆ ಇನ್ನೂ ತೊನೆಯುತಿದೆ
ಎದೆಯಿಂದ ಚಾಚಿ ಗಂಟಲಲ್ಲಿ ನುಸುಳಿ
ಮುಖದಲ್ಲಿ ಹೂ ಅರಳಿಸಬಹುದು
ನೀನು ಕಾಯಬೇಕಷ್ಟೆ
ಬೇರುಗಳೊಂದಿಗಿನ ಚೆಲ್ಲಾಟ ನಿಲ್ಲಿಸು..
ಯಾರದೊ ಎದೆಯಿಂದ ತಪ್ಪಿಸಿಕೊಂಡ
ಹಕ್ಕಿಯೊಂದು
ತೊಪ್ಪೆಯಾಗಿ ನಡುಗುತ್ತಾ
ನಿನ್ನ ಸೇರಬಹುದು
ಹಿಡಿ ಪ್ರೀತಿ ಕೊಡು ತಿಂದು ಗರಿ ಅಗಲಿಸಿ
ಕೂರಬಹುದು..
ಹೌದು ಇಷ್ಟೆ..
ನಿನ್ನ ದಿನಗಳಿಗೆ ಸಿಡಿಲು ಬಾರಿಸಿರಬಹುದು
ಮತ್ತು
ನೀನು ಬಾರಿಸಲಿ ಬಿಡು ಎಂದೆನ್ನಬಹುದು..!
ಸದಾಶಿವ ಸೊರಟೂರು ಅವರು ಹುಟ್ಟಿದ್ದು ಬೆಳೆದಿದ್ದು ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಇವರ ಹಲವಾರು ಲೇಖನಗಳು, ಕತೆ, ಕವನ, ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಹೆಸರಿಲ್ಲದ ಬಯಲು’ ಮತ್ತು ‘ ತೂತು ಬಿದ್ದ ಚಂದಿರ’ (ಕವನ ಸಂಕಲನ) ಹಾಗೂ ಕನಸುಗಳಿವೆ ಕೊಳ್ಳುವವರಿಲ್ಲ ಭಾಗ ೧ ಮತ್ತು ಭಾಗ ೨. ಹೊಸ್ತಿಲಾಚೆ ಬೆತ್ತಲೆ (ಪ್ರಕಟಿತ ಲೇಖನಗಳ ಕೃತಿಗಳು) ಇವರ ಪ್ರಕಟಿತ ಕೃತಿಗಳು.