ಮುವ್ವತ್ತರ ಸುಮಾರಿಗೆ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ. ಕಂಡಿದ್ದನ್ನೆಲ್ಲಾ ಕೊಳ್ಳುವ ಶಕ್ತಿ ನೀಡುವ ಖುಷಿ, ಸವಿಯಾದ ನೆನಪಿನ ಘಮ ಹೊತ್ತ ಅರಿವೆಗಳು ನೀಡುವ ಹಿತಾನುಭವಕ್ಕೆ ಸಾಟಿಯಾಗಬಲ್ಲದೆ? ಕೊಳ್ಳುತ್ತೇನೆಂಬುದು ನಮ್ಮ ಅಹಂಕಾರವನ್ನು ತಣಿಸಬಹುದು. ಆದರೆ ಅಕ್ಕರೆಯ ಸಕ್ಕರೆಯಾಗಬಹುದೆ? ಅರವತ್ತರ ಸುಮಾರಿಗೆ ಈ ಮಟ್ಟಗಿನ ಸರಳತೆ ರೂಢಿಸಿಕೊಳ್ಳೋಣ ಅನ್ನುವಂತಿಲ್ಲ. ಇದು ಖಂಡಿತ ವೈರಾಗ್ಯದ ದಾರಿಯಲ್ಲ. ವಿವೇಚನೆಯ ಹಾದಿ. ಹಾಗಾಗಿಯೇ ಸಣ್ಣ ಸಣ್ಣ ನಡೆಗಳು ದೊಡ್ಡ ಬದಲಾವಣೆಯನ್ನು ತರಬಲ್ಲದೆಂಬ ನಂಬುಗೆಯಿಂದ ನಮ್ಮ ಮನೆಮಟ್ಟಿಗೆ ಕೊಳ್ಳುಬಾಕತನಕ್ಕೆ ಕಡಿವಾಣ ಹಾಕಿದ್ದೇವೆ.
ಎಸ್ ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ
“ಕೆಲವು ಸಲ ಏನು ಮಾಡೋದು ಅಂತ ತೋಚುವುದೇ ಇಲ್ಲ. ಪುಸ್ತಕ, ಸಿನಿಮಾ, ಹರಟೆ, ಊರು ಸುತ್ತೋದು ಎಲ್ಲಾ ಬೋರ್ ಅನ್ನಿಸತ್ತೆ. ಮಲಗಿದರೆ ನಿದ್ರೆಯೂ ಬರದ, ರಾಶಿ ಬಿದ್ದಿರುವ ಕೆಲಸವೂ ಮಾಡಲಾಗದ, ಹಾಗೆಂದು ಸುಮ್ಮನಿರಲಾರದ ವಿಚಿತ್ರ ಚಡಪಡಿಕೆ. ಆಗ ಯಾವುದಾದರೂ ಶಾಪಿಂಗ್ ಸೈಟಲ್ಲಿ ಹುಡುಕಿ ಹುಡುಕಿ ಬಟ್ಟೆ, ಚಪ್ಪಲಿ, ಬ್ಯಾಗು, ಕಾಸ್ಮೆಟಿಕ್ಸ್ ಹೀಗೆ ಎಲ್ಲಾದನ್ನೂ ಕಾರ್ಟಿಗೆ ಹಾಕಿ ಇಡ್ತೀನಿ. ಆದರೆ ಯಾವುದನ್ನೂ ಆಗಲೇ ಕೊಳ್ಳುವ ನಿರ್ಧಾರ ಮಾಡಲ್ಲ. ಸ್ವಲ್ಪ ಹೊತ್ತಾದ ಮೇಲೆ ನಿರ್ಭಾವುಕವಾಗಿ ಇಡೀ ಕಾರ್ಟ್ ಡಿಲಿಟ್ ಮಾಡಿ ಸುಮ್ಮನಾಗ್ತೀನಿ. ಆ ಹೊತ್ತು ಕಳೆಯೋದು ಮುಖ್ಯ. ಏನಾದ್ರೂ ಮಾಮೂಲು ಅಂಗಡಿಗಳಿಗೆ ಹೋದರೆ ಸುಖಾಸುಮ್ಮನೆ ಎಲ್ಲವನ್ನೂ ಕೊಂಡು, ಆಮೇಲೆ ಅನಗತ್ಯ ವಸ್ತುಗಳ ಮೇಲೆ ಹಣ ಹಾಕಿದ ಪಾಪಪ್ರಜ್ಞೆ ಅನುಭವಿಸಬೇಕು.” ಅವಳು ಹೇಳುತ್ತಿದ್ದರೆ ನನ್ನ ತಲೆಯಲ್ಲೂ ‘ಅನಗತ್ಯ ಖರ್ಚು’ ಅಲೆಗಳನ್ನೆಬ್ಬಿಸಿತ್ತು.
ನಮ್ಮ ತಲೆಮಾರಿನ ಬಹುತೇಕರಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಸಿಗುತ್ತಿರುವ ಸಂಬಳ, ಸೌಲಭ್ಯಗಳೇ ಶತ್ರುವೆನ್ನಿಸಲು ಶುರುವಾಯಿತು. ಹುಟ್ಟುಹಬ್ಬ, ಯುಗಾದಿ, ದೀಪಾವಳಿ ಹೀಗೆ ವರ್ಷಕ್ಕೆ ಒಂದರೆಡು ಸಲ ಮಾತ್ರ ಹೊಸಬಟ್ಟೆ ಕಾಣುವ ದಿನಗಳಲ್ಲ ಇವು. ಹೊರಗೆ ಕಾಲಿಟ್ಟರೆ ಏನಾದರೂ ಕೊಳ್ಳದೆ ಮನೆಗೆ ಬರುವ ಸಾಧ್ಯತೆಯೇ ಇಲ್ಲವೆಂಬಂತೆ, ಸದಾ ಶಾಂಪಿಗನ್ನೇ ಉಸಿರಾಡುವ ಕಾಲ. ತಿನ್ನುವುದಾದರೂ ಅಷ್ಟೇ. ಅಂದುಕೊಂಡಿದ್ದನ್ನು ಆ ಕ್ಷಣ ಮನೆಬಾಗಿಲಿಗೇ ತರಿಸಿಕೊಳ್ಳುವ ಆತುರ. ಬರೆದಿದ್ದು, ಕಂಡಿದ್ದು, ಕೇಳಿದ್ದು ಎಲ್ಲವೂ ಅನುಭವವಾಗಿ ಮಾರ್ಪಡುವ ಮುಂಚೆಯೇ, ನಮಗೂ ಅರ್ಥಕ್ಕೆ ನಿಲುಕುವ ಮೊದಲೇ ಹೇಳಿ ಮುಗಿಸುವ ಧಾವಂತ. ಯಾವುದನ್ನೂ ಹೆಚ್ಚು ಕಾಲ ಹಿಡಿದಿಡಲಾಗದ, ಪ್ರೀತಿಸಲಾಗದ, ಜತನ ಮಾಡುವುದಕ್ಕೆ ಹೆದರುವ ಜನ.
“ಹೆಚ್ಚು ಬಟ್ಟೆ ಇದ್ದರೆ ದರಿದ್ರ ಅಮರಿಕೊಳ್ಳತ್ತೆ. ಇತಿಮಿತಿ ಇರಬೇಕು.” ಅಂತಿದ್ದ ಅಜ್ಜಿಯ ಸೀರೆ ಅಮ್ಮನಿಗೆ, ಅಮ್ಮನ ಸೀರೆ ನಮ್ಮ ಫ್ರಾಕು, ಚೂಡಿದಾರ್‌ಗಳಾಗಿ, ನಮಗೆ ಗಿಡ್ಡವಾಗಿದ್ದು ತಂಗಿಯರ ಪಾಲಾಗಿ ಅಂತೂ ಆರು ಗಜ ಸೀರೆಯೊಂದು ನಾನಾ ರೂಪಗಳಲ್ಲಿ ೩೦-೪೦ ವರ್ಷ ಪ್ರಸ್ತುತತೆಯನ್ನು ಉಳಿಸಿಕೊಳ್ಳುತ್ತಿತ್ತು. ಹೆಚ್ಚಲ್ಲ. ಈಗ ಹತ್ತು-ಹದಿನೈದು ವರ್ಷದ ಹಿಂದಿನವರೆಗೂ ಮನೆಯ ಹಿರಿಯರು ಅವರ ಸೀರೆ, ಪಂಚೆ, ಶಾಲು ಇಂತಹವನ್ನು ತಮ್ಮ ಮಕ್ಕಳು, ಮೊಮ್ಮಕ್ಕಳು, ಪ್ರೀತಿಪಾತ್ರರಿಗೆ ಕೊಡುವುದು ಸಹಜ ಸುಂದರ ಅಭಿವ್ಯಕ್ತಿಯಾಗಿತ್ತು. ಅವುಗಳ ಸ್ಪರ್ಶ, ಘಮ, ಲಕ್ಷಣದಲ್ಲಿ ಅವರೇ ಜೊತೆಗಿದ್ದಂತಹ ಅನುಭೂತಿ. ಮದುವೆಯ ಉಡುಗೊರೆಯೂ ಅಷ್ಟೇ. “ಈ ಪಂಚವಾಳ ನಮ್ಮ ಚಿಕ್ಕಮ್ಮ ಕೊಟ್ಟಿದ್ದು. ನೀರು ತುಂಬುವ ಕೊಳದಪ್ಪಲೆ ಸೋದರಮಾವ ಓದಿಸಿದ್ದು. ಚಪಾತಿ ಮಣೆ, ಲಟ್ಟಣಿಗೆ ಅತ್ತೆಯ ಉಡುಗೊರೆ. ಹಿಂಡಾಲಿಯಮ್ ಪಾತ್ರೆಗಳ ಸೆಟ್ ಕೊಟ್ಟಿದ್ದು ನಮ್ಮ ಚಿಕ್ಕಜ್ಜಿ.” ಅಮ್ಮನಿಗೆ ದಿನಂಪ್ರತಿ ಆಯಾ ವಸ್ತುಗಳೊಂದಿಗೆ ಅವರ ಜೊತೆಗಿನ ಒಡನಾಟ ನೆನಪಾಗುವುದು.
“ಮದುವೆಗೆ ಮುವತ್ತೈದು ಲಕ್ಷ ಖರ್ಚು ಮಾಡಿದರಂತೆ. ಹುಡುಗಿಗೆ ಅಡುಗೆಮನೆ ಸಾಮಾನು ಇಂತದ್ದು ಇಲ್ಲ ಅನ್ನುವ ಹಾಗಿಲ್ಲ. ಅಂಗಡಿ ಇಡಬಹುದು. ಅಷ್ಟು ಪಾತ್ರೆಗಳು ಇಟ್ಟಿದ್ರು ಬಿಡದಿ ಮನೆಯಲ್ಲಿ. ಮದುವೆ ಸೀರೆ ಮಾತ್ರ ಅಲ್ಲ. ಈ ವರ್ಷ ಎಲ್ಲಾ ಹಬ್ಬಕ್ಕೂ ಒಂದೊಂದು ರೇಷ್ಮೆ ಸೀರೆ ಕೊಡ್ತಾರಂತೆ. ರವಿಕೆ ಹೊಲಿಸೋಕೆ ಲಕ್ಷ ಕೊಟ್ಟಿದ್ದಾರೆ. ನಾಲ್ಕು ಸ್ವೀಟ್ ಮಾಡಿಸಿದ್ರು. ಬಂದವರಿಗೆಲ್ಲಾ ಸೀರೆ, ಶರ್ಟ್ ಪೀಸ್ ಕೊಟ್ಟಿದ್ದಾರೆ. ಇಷ್ಟಾಗಿ ಅವರೇನು ಕೋಟ್ಯಾಧಿಪತಿಗಳಲ್ಲ. ಒಬ್ಬಳೇ ಮಗಳ ಮದುವೆ ವೈಭವೋಪೇತವಾಗಿ ಮಾಡಬೇಕಂತ ಶಕ್ತಿ ಮೀರಿ ಇಟ್ಟು-ಕೊಟ್ಟು ಮಾಡಿದ್ದಾರೆ.” ಇದು ಈಗೀಗ ಪ್ರತಿ ಮದುವೆಮನೆಯಲ್ಲೂ ಕೇಳಿಬರುವ ಮಾತು. ಮದುವೆ, ಮುಂಜಿ, ಗೃಹಪ್ರವೇಶ, ಉದ್ಯಾಪನೆ ಏನೇ ಸಮಾರಂಭ ಮಾಡಿದರೂ ಎಲ್ಲರಿಗೂ ಸೀರೆಬಟ್ಟೆ ಕೊಡುವ ಹೊಸ ಪರಿಪಾಠ ರೂಢಿಗೆ ಬಂದಿದೆ. ಏನೂ ಕೊಳ್ಳದಿದ್ದರೂ ವರ್ಷಕ್ಕೆ ಎಂಟು ಹತ್ತು ಸೀರೆಗಳಿಗೆ ಮೋಸವಿಲ್ಲ. ಇದನ್ನೆಲ್ಲಾ ಉಡುವುದು ಯಾವಾಗ? ಅದು ಹರಿಯುವುದು ಯಾವಾಗ? ಅಮ್ಮನ ವಯಸ್ಸಿನ ಬಹುತೇಕರ ಪ್ರಶ್ನೆ ಇದು. ಕ್ಷಣದ ಮೋಹಕ್ಕೆ ವರ್ಷಪೂರ್ತಿ ಖರೀದಿಸುತ್ತಲೇ ಇರುವ ಕೊಳ್ಳುಬಾಕರು ನಾವು. ಈ ಭೂಮಿಯ ಮೇಲೆ ನಾವು ಸೃಷ್ಟಿಸಿ ಎಸೆಯುತ್ತಿರುವ ಕಸದ ರಾಶಿಯಲ್ಲಿ ಬಟ್ಟೆಗಳದ್ದೂ ಸಿಂಹಪಾಲಿದೆ.
ಮುವ್ವತ್ತರ ಸುಮಾರಿಗೆ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ. ಕಂಡಿದ್ದನ್ನೆಲ್ಲಾ ಕೊಳ್ಳುವ ಶಕ್ತಿ ನೀಡುವ ಖುಷಿ, ಸವಿಯಾದ ನೆನಪಿನ ಘಮ ಹೊತ್ತ ಅರಿವೆಗಳು ನೀಡುವ ಹಿತಾನುಭವಕ್ಕೆ ಸಾಟಿಯಾಗಬಲ್ಲದೆ? ಕೊಳ್ಳುತ್ತೇನೆಂಬುದು ನಮ್ಮ ಅಹಂಕಾರವನ್ನು ತಣಿಸಬಹುದು. ಆದರೆ ಅಕ್ಕರೆಯ ಸಕ್ಕರೆಯಾಗಬಹುದೆ? ಅರವತ್ತರ ಸುಮಾರಿಗೆ ಈ ಮಟ್ಟಗಿನ ಸರಳತೆ ರೂಢಿಸಿಕೊಳ್ಳೋಣ ಅನ್ನುವಂತಿಲ್ಲ. ಇದು ಖಂಡಿತ ವೈರಾಗ್ಯದ ದಾರಿಯಲ್ಲ. ವಿವೇಚನೆಯ ಹಾದಿ. ಹಾಗಾಗಿಯೇ ಸಣ್ಣ ಸಣ್ಣ ನಡೆಗಳು ದೊಡ್ಡ ಬದಲಾವಣೆಯನ್ನು ತರಬಲ್ಲದೆಂಬ ನಂಬುಗೆಯಿಂದ ನಮ್ಮ ಮನೆಮಟ್ಟಿಗೆ ಕೊಳ್ಳುಬಾಕತನಕ್ಕೆ ಕಡಿವಾಣ ಹಾಕಿದ್ದೇವೆ. ಇರುವುದನ್ನು ಜತನದಿಂದ ಕಾಪಾಡುವ, ಸಮರ್ಥವಾಗಿ ಬಳಸಿಕೊಳ್ಳುವ ಒಂದೊಂದೇ ಮಾರ್ಗಗಳನ್ನು ಹುಡುಕುತ್ತಿದ್ದೇವೆ. ಉಡುವುದರ ಹೊರತಾಗಿ ಮತ್ತಾವ ಕೆಲಸಕ್ಕೂ ಬಾರದ ನೈಲಾನ್, ಪಾಲಿಸ್ಟರ್, ಕ್ರೇಪ್‌ಗಳ ಬದಲಿಗೆ ಎಲ್ಲಾ ಕೆಲಸಗಳಿಗೂ ಆಗಿಬರುವ ಹತ್ತಿಬಟ್ಟೆಗಳ ಮೊರೆ ಹೋಗಿದ್ದು ಜೇಬಿಗೆ ಆ ಕ್ಷಣಕ್ಕೆ ಭಾರವಾದರೂ ಮೈಮನಸ್ಸುಗಳನ್ನು ಪ್ರಫುಲ್ಲಗೊಳಿಸಿದೆ. ರವಿಕೆ ಕಣ, ಸೀರೆಗಳು ರಜಾಯಿಯಾಗಿ ಮಾರ್ಪಾಡಾಗಿವೆ. ಅಕ್ಕತಂಗಿಯರ ಮಕ್ಕಳ ನಡುವೆ ಉಡುಗೆತೊಡುಗೆಗಳು ವಿಲೇವಾರಿಯಾಗುತ್ತಿವೆ. ಸಣ್ಣಪುಟ್ಟ ಅಗತ್ಯಗಳಿಗೆ ಕೊಳ್ಳುವುದನ್ನು ನಿಲ್ಲಿಸಿದ್ದೇವೆ. ವಸ್ತುವಿನ ಬೆಲೆಗಿಂತ ಅವುಗಳ ಜೊತೆಗಿನ ಭಾವನಾತ್ಮಕ ನಂಟನ್ನು ಗುರುತಿಸುವ, ಅದ್ಧೂರಿ ಆಚರಣೆಗಿಂತ ಸರಳ ಸಮಾರಂಭವನ್ನು ಪರಸ್ಪರ ಸಹಕಾರದೊಂದಿಗೆ ನಡೆಸುವ ಒಪ್ಪಂದಗಳಾಗಿವೆ.
ಎಲ್ಲದಕ್ಕೂ ಜನರನ್ನಿಟ್ಟು ಕಾಲುಚಾಚಿ ಕೂರದೆ, ಪ್ರತಿ ಕೆಲಸವನ್ನೂ ಹಂಚಿ ಜೊತೆಯಾಗಿ ನಿಭಾಯಿಸುವ ಸಂಭ್ರಮವನ್ನು ಅನುಭವಿಸುತ್ತಿದ್ದೇವೆ. ರೆಸಾರ್ಟ್‌ಗಳಿಗೆ ಹೋಗಿ ಸಮಯ ಕಳೆಯುವ ಬದಲು ಮನೆಗಳಲ್ಲೇ ಒಟ್ಟಾಗಿ ಸೇರಿ, ಹಳೆಯ ಆಟಗಳು, ಹಾಡು, ಕಥೆ, ಆಶುಕವಿತೆ, ನೃತ್ಯದಲ್ಲಿ ತಲ್ಲೀನರಾಗಿ ಮೈಮರೆತು ಸುಂದರ ನೆನಪುಗಳನ್ನು ಬುತ್ತಿಯಾಗಿಸಿದ್ದೇವೆ. ಇವು ಈಗಷ್ಟೇ ಬಿತ್ತಿದ ಗಟ್ಟಿಕಾಳುಗಳು. ಮುಂದೊಮ್ಮೆ ಉತ್ತಮ ಫಸಲು ನೀಡುವ ಭರವಸೆಯಿದೆ. ಈ ಬದುಕು ಸುಂದರವೆನಿಸಲು ಇಂತಹ ಪ್ರಯೋಗಗಳೇ ಸಾಕು.
ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.
ಮನಸ್ಸು ತುಂಬಿ ಬಂತು ಈ ಲೇಖನ ಓದಿ. ಎಷ್ಟು ಸತ್ಯ. ಎಲ್ಲರೂ ಎಲ್ಲದಕ್ಕೂ ಆಸೆ ಪಡಬಹುದಾದ, afford ಮಾಡಬಹುದಾದ ಕಾಲದಲ್ಲಿ ವಿವೇಕ ಕೈ ಕೊಡದ ಹಾಗೆ ನಡೆದುಕೊಳ್ಳುವುದೂ ಸವಾಲೇ ಸರಿ. With great power comes with great responsibilities ಅನ್ನೋ ಹಾಗೆ, ಕಂಡಿದ್ದು ಕೊಳ್ಳುವ ಸಾಮರ್ಥ್ಯ ಬರುತ್ತಿದ್ದಂತೆ, ಅಡ್ಡ ಪರಿಣಾಮಗಳನ್ನು ಅಂದಾಜಿಸಿ ಸ್ವಲ್ಪ ಕೈ ಬಿಗಿ ಮಾಡುವುದು ಆದ್ಯತೆ ಮೇರೆಗೆ ಪಾಲಿಸೋಣ. 😃
Chendada lekhana Nagashri