ಜಗತ್ತಿನಲ್ಲಿ ಮನುಷ್ಯ ಬಂದಿರುವುದು, ಇರುವುದು, ಮಾಗಬೇಕಾದದ್ದು ಕೇವಲ ನಾಲ್ಕು ದಿನದ ಅತಿಥಿಯಾಗಿ ಮಾತ್ರ. ಸದಾ ಕಾಲದ ಜಹಗೀರ್‌ದಾರಿ ಅವನಿಗಿಲ್ಲ. ಇದು ಎಲ್ಲರಿಗೂ ಗೊತ್ತಾಗಲೆಂದೇ ಸಾವಿನ ಸಮಯದಲ್ಲಿ ಸೃಷ್ಟಿ ಒಂದು ಉಪಾಯ ಮಾಡಿದೆ. ಮನುಷ್ಯನಿಗೆ ಪ್ರಾಣ ಹೋಗಿದೆ ಎಂದು ಗೊತ್ತಾದ ಮೇಲೂ ಯಾರಿಗೂ ಗೊತ್ತಾಗದಂತೆ ಕೆಲಕಾಲ ಕ್ಷೀಣವಾಗಿ ಪ್ರಾಣ ಇರುತ್ತದೆ. ದೇಹದಲ್ಲಿ ಶಾಖ ಕೂಡ ಇರುತ್ತದೆ. ಆದರೆ ಈ ಮನುಷ್ಯ ಸತ್ತುಹೋಗಿದ್ದಾನೆಂದು ಭಾವಿಸಿ, ಮುಂದಿನ ಕ್ಷಣದಿಂದಲೇ ಬಂಧುಮಿತ್ರರೆಲ್ಲ ಆತನ ಬಗ್ಗೆ ಭೂತಕಾಲದ ಭಾಷೆಯಲ್ಲಿ ಮಾತನಾಡಲು ಶುರು ಮಾಡುತ್ತಾರೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಆರನೆಯ ಪ್ರಬಂಧ ನಿಮ್ಮ ಓದಿಗೆ

ನೋಡಿ ಇವರೆ, ಮಾನ್ಯರಾದ ಶ್ರೀ ……. ಇವರಿಗೆ ಎಷ್ಟು ವಯಸ್ಸಾಗಿದೆ. ನಮಗೆಲ್ಲಾ ಅವರು ಹಿರಿಯರು. ನಮ್ಮಲ್ಲೇ ತುಂಬಾ ಅನುಕೂಲಸ್ಥರು. ಎಷ್ಟೊಂದು ಪದವಿ ಪ್ರಶಸ್ತಿಗಳನ್ನು ಸಂಪಾದಿಸಿರುವರು. ಈ ವಯಸ್ಸಿನಲ್ಲಿ ಅವರು ಎಷ್ಟು ಪ್ರೀತಿಯಿಂದ ಔದಾರ್ಯದಿಂದ ಇರಬೇಕಾಗಿತ್ತು. ತಾಳ್ಮೆ ಸಮಾಧಾನಗಳ ಸಾಕಾರಮೂರ್ತಿಯಾಗಬೇಕಾಗಿತ್ತು. ಆದರೆ ನೋಡಿ, ಎಲ್ಲರ ಮೇಲೂ ರೇಗುತ್ತಾರೆ. ಸಣ್ಣಪುಟ್ಟ ವಿಷಯಕ್ಕೂ ಸೆಟೆದುಕೊಳ್ಳುತ್ತಾರೆ. ತಮ್ಮ ಮತ, ಅಭಿಪ್ರಾಯವನ್ನೇ ಎಲ್ಲರೂ ಒಪ್ಪಿಕೊಳ್ಳಬೇಕೆಂದು ಮುಷ್ಕರ ಹೂಡುತ್ತಾರೆ. ಮೊನ್ನೆ ಏನಾಗಿದೆ ಗೊತ್ತಾ? ಅವರ ಹೊಸ ಮೊಮ್ಮಗನ ಹುಟ್ಟು ಹಬ್ಬದ ಸಂದರ್ಭದಲ್ಲಿ ಒಂದು ಪ್ರಕಟಣೆ ಹೊರಡಿಸಿದರು. ಈಗಾಗಲೇ ಮಾಡಿರುವ willನ್ನು ತಿದ್ದುತೀನಿ. ಎಲ್ಲವನ್ನೂ ನನ್ನ ಹೆಸರಿಗೇ ಮತ್ತೆ ಮಾಡಿಕೊಳ್ಳುತ್ತೇನೆ.

ಚೆನ್ನಮ್ಮನ ಕೆರೆ ಹತ್ತಿರ ಬರ‍್ತಾ ಇದೆಯಲ್ಲ Presidency Estate ಅಲ್ಲಿ ಒಂದು ವಿಲ್ಲಾ ಕೊಂಡಿದ್ದಾರೆ. ಹೌದು ಅವರ ಗಣ್ಯ ವ್ಯಕ್ತಿತ್ವಕ್ಕೆ ಅನುಗುಣವಾದ ವಿಲ್ಲಾ ಅದು. ಆದರೆ ಅದನ್ನು ಅವರ ಹೆಸರಿಗೇ ಖಾತಾ ಮಾಡಿಸಿಕೊಂಡಿದ್ದಾರೆ. ಸಕಲರು ಬಿಡಿಸಿ ಹೇಳಿದರು. ನಿಮ್ಮ ಹೆಸರಿಗೆ ಯಾಕೆ ನೋಂದಣಿ ಮಾಡಿಸ್ತೀರಿ. ಮತ್ತೆ ಖಾತಾ ವರ್ಗಾವಣೆ ಅದೂ ಇದೂ ಅಂತ ರಾಮಾಯಣ, ಲಂಚ, ರುಶುವತ್ತು. ನಿಮಗೆ ಹಠ ಇದ್ದರೆ ನಿಮಗೆ ಬೇಕಾದ ಮಗನ-ಮಗಳ ಹೆಸರಿನಲ್ಲೇ ಜಂಟಿ ಖಾತಾ ಮಾಡಿಸಿ. ಮಾನ್ಯರು ಹಠ ಬಿಡಲಿಲ್ಲ. ತಮ್ಮ ಹೆಸರಿಗೆ ಕ್ರಯಪತ್ರ ಮಾಡಿಸಿಕೊಂಡು ಮಕ್ಕಳಿಗೆಲ್ಲ ಅದರ ಪ್ರತಿ ಕಳಿಸಿದರು.

ಇದಾದ ಮೇಲೆ ಈಗ ಎಲ್ಲರೂ ಬಾಯಿ ಬಿಡ್ತಾ ಇದಾರೆ. ಮಾನ್ಯರ ಈ ಪ್ರವೃತ್ತಿ ಈಗ ಇದ್ದಕ್ಕಿದ್ದಂತೆ ಪ್ರಕಟವಾಗುತ್ತಿಲ್ಲ. ಕೆಲವು ವರ್ಷಗಳಿಂದ ಅವರ ಒಡನಾಟ, ಮಾತುಕತೆ, ವರ್ತನೆಗಳನ್ನು ಗಮನಿಸಿದರೆ ಇದೆಲ್ಲವೂ ಸಹಜ ಅನಿಸುತ್ತದೆ.

ಹೆಂಡತಿ ರಂಗಮ್ಮ ಸಾಯುವಾಗ ಕೂಡ ಇನ್ನಿಲ್ಲದ ತೊಂದರೆ ಕೊಟ್ಟರಂತೆ. ಸಾಕು, ಇನ್ನು ಎಷ್ಟು ದಿನ ನರ್ಸಿಂಗ್‌ ಹೋಂ, ಚಿಕಿತ್ಸೆ, ಔಷಧಿ. ಸುಮ್ಮನೆ ಮನೆಗೆ ಬಂದು ಸಾಯಬಾರದೆ? ಡಾಕ್ಟರ್‌ಗಳಿಗೆ ಏಕೆ ಆದಾಯ ಹೆಚ್ಚಿಸಬೇಕು. ಮಕ್ಕಳು ಒಪ್ಪಲಿಲ್ಲ. ಇವರು ಇನ್ನೂ ಹಠ ಹಿಡಿದರು. ಹೆಂಡತಿ ಜೊತೆ ಮಾತನಾಡಿಸುವುದನ್ನೇ ನಿಲ್ಲಿಸಿಬಿಟ್ಟರು. ಮೊದಲನೆ ಮಗನ ವಿವಾಹ ವಿಚ್ಛೇದನವಾಯಿತು. ಸೊಸೆಯಾಗಿದ್ದ ಹುಡುಗಿಗೆ ಇನ್ನೊಂದು ಮದುವೆ ಗೊತ್ತಾಯಿತು. ಆ ಮದುವೆ ನಡೆಯದೆ ಇರಲಿ ಅಂತ ಆ ಹುಡುಗಿ ಬಗ್ಗೆ ಇನ್ನಿಲ್ಲದಂತೆ ಕೆಟ್ಟ ಪ್ರಚಾರ ಮಾಡಿದರು. ಹೆಂಡತಿ ಸಾಯುವ ಹಿಂದಿನ ದಿವಸ ನಡುರಾತ್ರಿಯ ತನಕ ಹೆಂಡತಿಯ ತಾಯಿ-ತಂದೆಯಿಂದ ೪೦-೪೫ ವರ್ಷಗಳ ಹಿಂದೆ ಆಗಿದ್ದ ಅವಮಾನ, ಬರಬೇಕಾಗಿದ್ದ ವರದಕ್ಷಿಣೆಯ ಬಾಬ್ತು ಇದೆಲ್ಲದರ ಬಗ್ಗೆ ಕ್ಯಾತೆ ತೆಗೆದರಂತೆ. ಮೊಮ್ಮಕ್ಕಳು Homework ಮಾಡುವುದರಲ್ಲಿ ಸಣ್ಣಪುಟ್ಟ ತಪ್ಪು ಮಾಡಿದರೂ ಬಾಸುಂಡೆ ಬರುವ ಹಾಗೆ ಹೊಡೆಯುತ್ತಾರಂತೆ. ಬ್ಯಾಂಕ್‌ಗೆ ಹೋದಾಗಲೂ ಸಿಬ್ಬಂದಿ ಜೊತೆ ಜಗಳ, ನಿಷ್ಠುರ.

ನನಗೆ ಇದೆಲ್ಲ ಯಾಕೋ ವಿಪರೀತ ಅನಿಸಿತು. ಮನೋನಂದನ ಪತ್ರಿಕೆಯ ಸಂಪಾದಕರಾದ ಶಿವಕುಮಾರರ ಹತ್ತಿರ ಹೋದೆ. ಗಹಗಹಿಸಿ ನಕ್ಕರು. ಅಲ್ಲ ಸ್ವಾಮಿ, ನೀವೇನು ಕಡಿಮೇನಾ ಅಂತ ನನ್ನನ್ನೇ ಕೇಳಿದರು. ಇಲ್ಲ ಸಾರ್‌, ನಾನು ಖಂಡಿತ ಹಾಗಲ್ಲ. ಇನ್ನೂ ಜೋರಾಗಿ ನಕ್ಕರು. ಅಷ್ಟು ಸುಲಭದ ಆಸಾಮಿಯಲ್ಲ ನೀವು. ಹೊಸದಾಗಿ ಎಷ್ಟು ಜನ ಗೆಳೆಯರನ್ನು ಮಾಡಿಕೊಂಡಿದ್ದೀರಾ? ಎಲ್ಲ ಹಳೆಯ ಗೆಳೆಯರೊಡನೆ ಸಂಪರ್ಕ ಉಳಿಸಿಕೊಂಡಿದ್ದೀರಾ? ಎಷ್ಟು ಜನ ಬಂಧು ಮಿತ್ರರು ನಿಮ್ಮ ಕನಸಿನಲ್ಲೇ ಆದರೂ, ಸತ್ತು ಹೋಗಿದ್ದಾರೆ? ನಿಮ್ಮನ್ನು ನೀವೇ ಕೇಳಿಕೊಳ್ಳಿ.

ಅಯ್ಯೋ ಸಂಪಾದಕರೆ, ಮನಸ್ಸಿನ ವೈದ್ಯರೇ, ಕನಸಿನ ಮಾತನ್ನೆಲ್ಲ ಇಲ್ಲಿ ಯಾಕೆ ತರುತ್ತಿದ್ದೀರಿ ಹೇಳಿ ಅಂದೆ.

ಅಲ್ಲಾರೀ ಮಾರಾಯರೆ, ಅಷ್ಟೊಂದು ಜನ ಇನ್ನೂ ಬದುಕಿರುವವರು ಕನಸಿನಲ್ಲೇ ಆದರೂ ಸತ್ತು ಹೋದರು. ಅಂದ್ರೂ ಇನ್ನೂ ನೀವು ಇಷ್ಟು ಆರಾಮವಾಗಿದ್ದೀರಲ್ಲ. ಬೇಜಾರು ಮಾಡಿಕೊಳ್ಳಬೇಡಿ. ಇದು ಎಲ್ಲ ಮನುಷ್ಯರಿಗೂ ಆಗುತ್ತೆ. ಆದರೆ ನಮ್ಮಲ್ಲೇ ಬದಲಾವಣೆ ಆಗ್ತಿರೋದು. ನಾವೇ ಕಠಿಣ ಆಗ್ತಿರೋದು. ಔದಾರ್ಯ ಕಳ್ಕೋತಾ ಇರೋದು. ನಮಗೆ ಗೊತ್ತಾಗೋಲ್ಲ ಅಷ್ಟೆ. ಈ ಸಂಗತಿಯನ್ನು ನಾನು ಪ್ರತಿದಿನ ಕೊನೆಪಕ್ಷ ಮೂರು ನಾಲ್ಕು ಇಳಿ ವಯಸ್ಸಿನ ಮನೋರೋಗಿಗಳಿಗೆ ವಿವರಿಸುತ್ತಲೇ ಇದ್ದೀನಿ. ಇದನ್ನೆಲ್ಲ ಸಾರಾಂಶ ಮಾಡಿ ಒಂದು ಲೇಖನ ಕೂಡ ಬರೆದು ಪ್ರಕಟಿಸಿದ್ದೀನಿ. ದಯವಿಟ್ಟು ಓದಿ. ನಿಧಾನವಾಗಿ ಓದಿ. ಗೆಳೆಯರಿಗೂ ಹಂಚಿ. ಕಿರಿಯರಿಗೂ ಕೊಡಿ. ನಿಮ್ಮೆಲ್ಲರ ಅಭಿಪ್ರಾಯವನ್ನು ಬಂದು ನನಗೆ ಹೇಳಿ. ಲೇಖನವನ್ನು ತಿದ್ದುತ್ತೇನೆ ಮತ್ತೆ ವಿಸ್ತರಿಸುತ್ತೇನೆ.

ಮನೋವೈದ್ಯರು, ಸಂಪಾದಕರು, ಹಿತೈಷಿಗಳೂ ಆದ ಶಿವಕುಮಾರರು ಕೊಟ್ಟ ಲೇಖನದ ಸಾರಾಂಶ ಹೀಗಿತ್ತು –

ಮನುಷ್ಯನಿಗಿರುವುದು ಸಾವಿನ ಭಯವಲ್ಲ. ಖಚಿತವಾದ ಸಂಗತಿಯ ಬಗ್ಗೆ ಯಾರಿಗೂ ಭಯವಿರುವುದಿಲ್ಲ. ಭಯವಿರುವುದು ತಾನು ಸತ್ತ ಮೇಲೂ ಈ ಪ್ರಪಂಚ ಮುಂದುವರಿಯುತ್ತೆ, ಜನ ಇನ್ನೂ ಸುಖವಾಗಿ, ಇನ್ನೂ ಹೆಚ್ಚಿನ ನೆಮ್ಮದಿಯಿಂದ ಇರ‍್ತಾರಲ್ಲ ಅನ್ನುವ ಭಯ, ಅಸೂಯೆ. ತಾನು ಸತ್ತ ಮೇಲೂ ಈ ಜಗತ್ತಿನ ನೆನಪಿನಲ್ಲಿ ಸದಾ ಇರಬೇಕೆನ್ನುವ ಆಸೆ. ಈ ಆಸೆ ಚಕ್ರವರ್ತಿಗಳಿಗೆ, ಕಲಾವಿದರಿಗೆ, ಸೇನಾಧಿಕಾರಿಗಳಿಗೆ, ಶ್ರೀಮಂತ ಉದ್ಯಮಿಗಳಿಗೆ ಮಾತ್ರ ಇರುತ್ತೆ ಅನ್ನುವ ಭಾವನೆ ತಪ್ಪು. ಇಂತಹ ಬಯಕೆ, ದುರಾಸೆ ನಮ್ಮೆಲರಲ್ಲೂ ಇದೆ ಎನ್ನುವುದೇ ಹೆಚ್ಚು ಸರಿಯಾದ ಮಾತು. ಸಾಯುವ ಸಮಯದಲ್ಲಿ ಕೆಲವರು ಇದ್ದಕ್ಕಿದ್ದಂತೆ ದಾನಶೀಲರಾಗಿ ಆಶ್ರಮಗಳಿಗೆ, ಮಠಮಾನ್ಯಗಳಿಗೆ ಆಸ್ತಿ ಬಿಡುವುದು, ದೇಣಿಗೆ ಕೊಡುವುದು, ಟ್ರಸ್ಟ್‌ ಸ್ಥಾಪಿಸುವುದು ಇದರಲ್ಲೆಲ್ಲ ಕಾಣುವುದು ಔದಾರ್ಯವಲ್ಲ, ಬದಲಾಗಿ ಶಾಶ್ವತವಾಗಿರುವ, ಚಿರಾಯುವಾಗಿರುವ ತೀವ್ರ ಹಂಬಲ. ಇದನ್ನು ತಿಳಿಯದೆ ನಾವು ಇದೆಲ್ಲ ಇಳಿ ವಯಸ್ಸಿನ ಔದಾರ್ಯ ಎಂದುಕೊಳ್ಳುತ್ತೇವೆ. ಹೀಗೆ ಈ ದುರಾಸೆ ಕೆಲವರಲ್ಲಿ ದಾನಧರ್ಮವಾಗಿ ಪ್ರಕಟವಾದರೆ, ಇನ್ನು ಕೆಲವರಲ್ಲಿ ಆಕ್ರಮಣಶೀಲ ವರ್ತನೆಯಾಗಿ ಪ್ರಕಟವಾಗುತ್ತದೆ. ವಯಸ್ಸಾದವರಿಗೆ ಜಗತ್ತಿನಲ್ಲಿರಲಿ, ಸಂಸಾರದಲ್ಲಿ, ಕೌಟುಂಬಿಕ ಜೀವನದಲ್ಲಿ ಸಕ್ರಿಯ ಪಾತ್ರವಿರುವುದಿಲ್ಲ. ಇದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ಆವಾಗ ಮನುಷ್ಯ ಇನ್ನೊಬ್ಬರ ಕಣ್ಣಿನಲ್ಲಿ ಮುಖ್ಯವಾಗಬೇಕಾದರೆ, ಸದಾ ಅವರನ್ನು ಕಾಡುತ್ತಿರಬೇಕಾದರೆ ಏನು ಮಾಡಬೇಕು? ಹಠ ಮಾಡಬೇಕು, ಹಿಂಸೆ ಮಾಡಬೇಕು, ಜಗಳ ಕಾಯಬೇಕು, ಎಲ್ಲ ಸಂಗತಿಗಳ ಬಗ್ಗೆ ಕಠಿಣ ನಿಲುವು ತಳೆದು ಇನ್ನೊಬ್ಬರ ಮೇಲೆ ಹೇರಬೇಕು. ಯಾರು ಇದನ್ನೆಲ್ಲ ಒಪ್ಪುತ್ತಾರೆ? ಉಳಿದವರು ಕೂಡ ಆಕ್ರಮಣಶೀಲರಾಗುತ್ತಾರೆ. ಪ್ರತಿಕ್ರಿಯೆಯಾಗಿ ನಮ್ಮ ಅಸ್ತಿತ್ವವನ್ನು ಗುರುತಿಸುತ್ತಾರೆ. ಬಲವಂತವಾಗಿ ನಮ್ಮನ್ನು ಒಪ್ಪಿಕೊಳ್ಳುತ್ತಾರೆ ಎಂದು ವಯಸ್ಸಾದವರಿಗೆ ತೃಪ್ತಿಯಾಗುತ್ತದೆ. ಗರ್ವಕ್ಕೆ, ಅಹಂಕಾರಕ್ಕೆ ಹೆಮ್ಮೆಯಾಗುತ್ತದೆ.

ನಾವು ಬದುಕಿದ್ದೇವೆ, ಉಸಿರಾಡುತ್ತಿದ್ದೇವೆ ಎಂಬ ಕಾರಣಕ್ಕೇ ಜಗತ್ತು ನಮಗೆ ಸೇರುವುದಿಲ್ಲ, ಸೇರಿರುವುದಿಲ್ಲ. ಜಗತ್ತಿನಲ್ಲಿ ಸೂರ್ಯೋದಯ, ಬೆಳಕು, ಗಾಳಿ, ಮುಸ್ಸಂಜೆ, ಸೂರ್ಯಾಸ್ತ, ಸೌಂದರ್ಯ ಎಲ್ಲವೂ ಯಾವಾಗಲೂ ಒಂದೇ ಪ್ರಮಾಣದಲ್ಲಿರುತ್ತದೆ. ಆದರೆ ಅದರಲ್ಲಿ ಬಹುಪಾಲು ಮಕ್ಕಳಿಗೆ, ತರುಣರಿಗೆ, ಸಮಾಜದಲ್ಲಿ, ವ್ಯವಹಾರದಲ್ಲಿ ಕ್ರಿಯಾಶೀಲರಾಗಿ ತೊಡಗಿರುವವರಿಗೆ ಮೀಸಲು. ಅದರಲ್ಲಿ ವಯಸ್ಸಾದವರ ಪಾಲು ಕಡಿಮೆ. ವಯಸ್ಸಾದವರು ಅದನ್ನೆಲ್ಲ ಬಯಸಲೂ ಹೋಗಬಾರದು (ಈ ಒಳನೋಟಕ್ಕೆ ಮಾಸ್ತಿಯವರಿಗೆ ಕೃತಜ್ಞತೆಗಳು – “ಸುಬ್ಬಣ್ಣ” ಕಾದಂಬರಿಯಲ್ಲಿ). ಗಾಳಿ, ಬೆಳಕು, ಬೆಳದಿಂಗಳು, ಸೂರ್ಯೋದಯ, ಇದೆಲ್ಲ ಹೊಸ ತಲೆಮಾರಿನವರಿಗೆ ಹೆಚ್ಚು ಹೆಚ್ಚು ಸಿಗಲೆಂದೇ ವಯಸ್ಸಾದವರನ್ನೆಲ್ಲ ಪ್ರಕೃತಿ ತನ್ನ ಮೂಲಗರ್ಭಕ್ಕೆ ಸಾವಿನ ಮೂಲಕ ಬೇಗ ಬೇಗೆ ಕರೆಸಿಕೊಳ್ಳುತ್ತಿರುತ್ತದೆ. ಹಾಗೆ ಕರೆಸಿಕೊಳ್ಳದೇ ಹೋದರೆ ಜಗತ್ತಿನಲ್ಲಿ ಸಮತೋಲನವಿರುವುದಿಲ್ಲ, ಸಾಮರಸ್ಯವಿರುವುದಿಲ್ಲ. ತಲೆಮಾರುಗಳ ಸಾಮರಸ್ಯದ ಮಾತಲ್ಲ ಇದು, ಬದಲಾಗಿ ಪ್ರಕೃತಿ ಕೂಡ ತನ್ನ ಚೈತನ್ಯವನ್ನು, ಪ್ರೀತಿಯನ್ನು ಸಮಾನವಾಗಿ ಎಲ್ಲರಿಗೂ ಪ್ರಯೋಜನವಾಗಲೆಂದು ಮತ್ತೆ ಮತ್ತೆ ಹಂಚಲು ಕಂಡುಕೊಂಡಿರುವ ಒಂದು ವಿಧಾನ. ನಮ್ಮೆಲ್ಲರ ತಂದೆ-ತಾಯಿಗಳು ಸಂತೋಷದಿಂದ, ಭರವಸೆಯಿಂದ ಸಾಯಲು ಒಪ್ಪುವುದಕ್ಕೆ ಇದೂ ಒಂದು ಕಾರಣ.

ಜಗತ್ತಿನಲ್ಲಿ ಮನುಷ್ಯ ಬಂದಿರುವುದು, ಇರುವುದು, ಮಾಗಬೇಕಾದದ್ದು ಕೇವಲ ನಾಲ್ಕು ದಿನದ ಅತಿಥಿಯಾಗಿ ಮಾತ್ರ. ಸದಾ ಕಾಲದ ಜಹಗೀರ್‌ದಾರಿ ಅವನಿಗಿಲ್ಲ. ಇದು ಎಲ್ಲರಿಗೂ ಗೊತ್ತಾಗಲೆಂದೇ ಸಾವಿನ ಸಮಯದಲ್ಲಿ ಸೃಷ್ಟಿ ಒಂದು ಉಪಾಯ ಮಾಡಿದೆ. ಮನುಷ್ಯನಿಗೆ ಪ್ರಾಣ ಹೋಗಿದೆ ಎಂದು ಗೊತ್ತಾದ ಮೇಲೂ ಯಾರಿಗೂ ಗೊತ್ತಾಗದಂತೆ ಕೆಲಕಾಲ ಕ್ಷೀಣವಾಗಿ ಪ್ರಾಣ ಇರುತ್ತದೆ. ದೇಹದಲ್ಲಿ ಶಾಖ ಕೂಡ ಇರುತ್ತದೆ. ಆದರೆ ಈ ಮನುಷ್ಯ ಸತ್ತುಹೋಗಿದ್ದಾನೆಂದು ಭಾವಿಸಿ, ಮುಂದಿನ ಕ್ಷಣದಿಂದಲೇ ಬಂಧುಮಿತ್ರರೆಲ್ಲ ಆತನ ಬಗ್ಗೆ ಭೂತಕಾಲದ ಭಾಷೆಯಲ್ಲಿ ಮಾತನಾಡಲು ಶುರು ಮಾಡುತ್ತಾರೆ. ಸತ್ತವನು ಈ ಜಗತ್ತಿಗೆ ತೀರಾ ಅನಿವಾರ್ಯವಲ್ಲವೆಂದು ನೆನಪಿಸುತ್ತಿರುತ್ತಾರೆ. ಇದನ್ನು ತಿಳಿದು, ಮನುಷ್ಯ ಇನ್ನೊಂದು ಸಲ ದೀರ್ಘವಾಗಿ ಪ್ರಾಣವಾಯುವನ್ನು ಹೊರಬಿಟ್ಟು ನಡೆಯುವನು. ಈ ಭುವಿಯ ಮೇಲೆ ಅವನ ಪಾತ್ರ ಎಂದೆಂದಿಗೂ ಕೊನೆಯದಾಗಿ ಮುಗಿಯುವುದು.

ಸಾಯುವ ಸಮಯದಲ್ಲಿ ಕೆಲವರು ಇದ್ದಕ್ಕಿದ್ದಂತೆ ದಾನಶೀಲರಾಗಿ ಆಶ್ರಮಗಳಿಗೆ, ಮಠಮಾನ್ಯಗಳಿಗೆ ಆಸ್ತಿ ಬಿಡುವುದು, ದೇಣಿಗೆ ಕೊಡುವುದು, ಟ್ರಸ್ಟ್‌ ಸ್ಥಾಪಿಸುವುದು ಇದರಲ್ಲೆಲ್ಲ ಕಾಣುವುದು ಔದಾರ್ಯವಲ್ಲ, ಬದಲಾಗಿ ಶಾಶ್ವತವಾಗಿರುವ, ಚಿರಾಯುವಾಗಿರುವ ತೀವ್ರ ಹಂಬಲ. ಇದನ್ನು ತಿಳಿಯದೆ ನಾವು ಇದೆಲ್ಲ ಇಳಿ ವಯಸ್ಸಿನ ಔದಾರ್ಯ ಎಂದುಕೊಳ್ಳುತ್ತೇವೆ. ಹೀಗೆ ಈ ದುರಾಸೆ ಕೆಲವರಲ್ಲಿ ದಾನಧರ್ಮವಾಗಿ ಪ್ರಕಟವಾದರೆ, ಇನ್ನು ಕೆಲವರಲ್ಲಿ ಆಕ್ರಮಣಶೀಲ ವರ್ತನೆಯಾಗಿ ಪ್ರಕಟವಾಗುತ್ತದೆ.

ಮುಖ್ಯ ನ್ಯಾಯಾಧೀಶರಾದ ಎ.ವಿ. ಸರ್ವೋತ್ತಮ ನಾಯಡುಗಳ ತನಿಖೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮಧ್ಯ ವಯಸ್ಸಿನಲ್ಲಿ ಪಾಪ, ಹೆಂಡತಿಯನ್ನು ಕಳೆದುಕೊಂಡರು. ಆದರೂ ಮಕ್ಕಳ ವಿದ್ಯಾಭ್ಯಾಸ, ಮದುವೆ, ಉದ್ಯೋಗವನ್ನೆಲ್ಲ ಸರಿಯಾಗಿ ಗಮನಿಸಿ ಕುಟುಂಬವನ್ನು ಕಟ್ಟಿದರು. ಭ್ರಷ್ಟರಲ್ಲ. ಅವರು ನೀಡುತ್ತಿದ್ದ ತೀರ್ಪುಗಳು ಸಮತೋಲನವಾಗಿದ್ದವು, ಪ್ರಗತಿಪರವಾಗಿದ್ದವು. ಇನ್ನೇನು ನಿವೃತ್ತರಾಗಬೇಕು ಅನ್ನುವಾಗ ಮನೆಗೆಲಸದವಳ ಜೊತೆ ಇದ್ದ ಆಪಾದನೆ ಬಂತು. ಇಲ್ಲ ಇಲ್ಲ ಎಂದು ಕೂಗಾಡಿದರು. ಹಾಗಲ್ಲ ತಂಬಾ ವರ್ಷಗಳಿಂದ ನನ್ನ ದೇಹಸಿರಿಯನ್ನು ಸೂರೆ ಹೊಡೆದಿದ್ದಾರೆ ಎಂದು ಕೆಲಸದವಳು ಹಠ ಹಿಡಿದಳು. ತನಿಖೆ ಶುರುವಾಯಿತು. ವೈದ್ಯ ಲೋಕದ ಪರವಾಗಿ ನಾನು ಮಂಡಳಿಯಲ್ಲಿದ್ದೆ. ಸರ್ವೋತ್ತಮರು ಖಾಸಗಿಯಾಗಿ ನನ್ನ ಹತ್ತಿರ ಆಪಾದನೆಯಲ್ಲಿ ನಿಜವಿದೆಯೆಂದು ಒಪ್ಪಿಕೊಂಡರು. ಮಂಡಳಿಯಲ್ಲಿ ಪ್ರತಿಭಟಿಸಿದರು. ಅದು ಮನುಷ್ಯ ಸಹಜ, ವಯೋ ಸಹಜ. ಆದರೆ ಮನೆಗೆಲಸದವಳಿಗೆ ಬುದ್ಧಿ ಕಲಿಸುತ್ತೇನೆ ಎಂದು ಅವಳ ಕೊಲೆ ಮಾಡಿಸಲು ಸುಪಾರಿ ಕೊಟ್ಟು, ಅದೂ ಕೂಡ ಬೆಳಕಿಗೆ ಬಂದು, ತನಿಖೆಯಾಗಿ ಜೈಲಿಗೆ ಸೇರಬೇಕಾಯಿತು. ಆಕೆಗೆ ನಾನು ಪಾಠ ಕಲಿಸಲೇಬೇಕು; ಇಲ್ಲದೇ ಹೋದರೆ ನಾನು ಕೂಡ ಹತ್ತರಲ್ಲಿ ಹನ್ನೊಂದನೆಯ ನ್ಯಾಯಾಧೀಶನಾಗಿಬಿಡುತ್ತೇನೆ. ಹೀಗೆಲ್ಲ ಮಾಡದೆ ಹೋದರೆ ಜನ ನನ್ನನ್ನು ನೆನಪಿನಲ್ಲಿ ತುಂಬಾ ದಿನ ಇಟ್ಟುಕೊಳ್ಳುವುದಿಲ್ಲ ಎಂದು ಹೇಳುತ್ತಲೇ ಇದ್ದರು.

ಗುತ್ತಿಗೆದಾರ ರಾಯಸಂ ಗಂಗಾರಾಮನ್‌ ಯಾರಿಗೆ ಗೊತ್ತಿಲ್ಲ. ನಾನು ನಾಲ್ಕು ದಶಕದಿಂದಲೂ ಅವರಿಗೆ ಖಾಸಗಿ ವೈದ್ಯ. ೭೪ನೇ ವಯಸ್ಸಿನಲ್ಲಿ ಮದುವೆ ಆಗುತ್ತೇನೆಂದು ಹಠ ಹಿಡಿದರು. ನಲವತ್ತು ನಾಲ್ಕು ವರ್ಷದ ಶಿವನಾಗಮ್ಮ ಅಧ್ಯಾಪಿಕೆ-ನಟಿಯನ್ನು ಮದುವೆ ಆಗೇಬಿಟ್ಟರು. ನಾನು ಬೇಡ ಬೇಡವೆಂದು ಹೇಳಿದೆ. ಇಲ್ಲ ಇಲ್ಲ ತೀರಿಹೋದ ನನ್ನ ಹೆಂಡತಿ ನನಗೆ ಸರಿಯಾಗಿ, ಬೇಕಾದಷ್ಟು ಲೈಂಗಿಕ ಸುಖ ಕೊಡಲಿಲ್ಲ. ಮುಟ್ಟು ನಿಲ್ಲುವ ಹತ್ತು ವರ್ಷ ಮುಂಚೆಯೇ ನನ್ನಿಂದ ಲೈಂಗಿಕವಾಗಿ ವಿಮುಖಳಾದಳು. ರಾತ್ರಿ ಹೊತ್ತು ಬಯಸಿದರೆ, ಹಾಸಿಗೆಯಿಂದ ಬೀದಿಗೆ ಓಡಿ ಹೋಗಿ ರಾಮಾಯಣ ಮಾಡುತ್ತಿದ್ದಳು. ಅಷ್ಟು ಹೊತ್ತಿಗೆ ಸಾಕಷ್ಟು ಮಕ್ಕಳಾಗಿದ್ದವು. ಆದರೆ ಮಕ್ಕಳೆಲ್ಲ ಅವಳ ಪರವಾಗಿದ್ದವು. ನಾನು ಇವರೆಲ್ಲರ ಮೇಲೆ ಸೇಡು ತೀರಿಸಿಕೊಳ್ಳಲೇಬೇಕು. ಈಗ ನನಗೆ ಮಕ್ಕಳಾಗುವ ಹಾಗೆ ಏನಾದರೂ ಮಾಡಿ ಎಂದರು. ಸಾಧ್ಯವಿಲ್ಲ ಎಂದರೂ ಹಠ ಹಿಡಿದು, ಕೊನೆಯ ಪಕ್ಷ Test tube babyಗಾದರೂ ವ್ಯವಸ್ಥೆ ಮಾಡಿ ಎಂದರು. ನನ್ನಿಂದ ಔಷಧಿ, ಚಿಕಿತ್ಸೆ ಬಯಸಿದರು. ನಾನು ಮತ್ತೆ ಇಲ್ಲವೆಂದಾಗ, ಬೇರೆ ವೈದ್ಯರನ್ನು ಹಿಡಿದುಕೊಂಡು ಶಿವನಾಗಮ್ಮನ ಮೇಲೆ ನಾನಾ ರೀತಿಯ ಲೈಂಗಿಕ ಪ್ರಯೋಗ ಪರೀಕ್ಷೆ ಸಾಹಸಗಳನ್ನು ಮಾಡಿದರು. ಮಕ್ಕಳಾಗಲಿಲ್ಲ. ಶಿವನಾಗಮ್ಮನಿಗೆ ಸಕಲ ಆಸ್ತಿಯೂ ಹೋಯಿತು. ಗಂಗಾರಾಮನ್‌ ಬಯಸಿದಂತೆ ಮಕ್ಕಳು ಮಾತ್ರವಲ್ಲ ಇಡೀ ನಗರ ಅವರನ್ನು ನೆನಪಿನಲ್ಲಿಟ್ಟುಕೊಂಡಿದೆ. ಯಾವಾಗಲೂ ಅವರ ಬಗ್ಗೆ ಮಾತನಾಡುತ್ತೆ.

ಇವರದೆಲ್ಲ ಅತಿರೇಕದ ಉದಾಹರಣೆಗಳು ನಿಜ. ಇದನ್ನೆಲ್ಲ ಹೇಳಿ ಭಯ ಪಡುಸ್ತಾ ಇದೀನಿ ಅಂತ ತಪ್ಪು ತಿಳಿಯಬಾರದು. ನಾನು ಕೊಟ್ಟ ಉದಾಹರಣೆಗಳೆಲ್ಲ ಶ್ರೀಮಂತರದ್ದು, ಅಧಿಕಾರಸ್ಥರದ್ದು, ರಾಜಯೋಗದ ದೆಸೆಯವರದ್ದು. ಅಂಥವರ ಉದಾಹರಣೆಗಳಲ್ಲಿ ಮಾತ್ರವಲ್ಲ, ಬದುಕಿನಲ್ಲೂ ಕೂಡ ಯಾವಾಗಲೂ ವಿಕಾರವಿರುತ್ತದೆ, ಅತಿಯಿರುತ್ತದೆ. ವಿಕ್ಷಿಪ್ತತೆಯಿರುತ್ತದೆ. ಸಾಮಾನ್ಯ ಜನರಲ್ಲಿ, ಪ್ರಬಂಧಕಾರನಲ್ಲಿ, ಪ್ರಬಂಧ ಓದಿ ಮೆಚ್ಚುವವರಲ್ಲೂ ಕೂಡ ಈ ಪ್ರವೃತ್ತಿ ಇದ್ದೇ ಇರುತ್ತದೆ. ನಮಗೆ ಅಧಿಕಾರಸ್ಥರಷ್ಟು, ಶ್ರೀಮಂತರಷ್ಟು ಅತಿಗೆ ಹೋಗುವ, ಕೆಟ್ಟವರಾಗುವ, ವಿಕೃತಿಗೊಳ್ಳುವ ಧೈರ್ಯ, ಸಂಪನ್ಮೂಲಗಳಿರುವುದಿಲ್ಲ. ಇದು ಅನಗತ್ಯ. ಒಳ್ಳೆಯತನವಾಗಿ, ಇನ್ನಿಲ್ಲದ ಪ್ರೀತಿಯಾಗಿ, ಕರುಣೆಯಾಗಿ ಪ್ರಕಟವಾಗಬಹುದು. ನಮ್ಮಿಂದ ಅನಗತ್ಯ ತ್ಯಾಗ, ಸೇವೆಗಳನ್ನು ಮಾಡಿಸಬಹುದು. ಅದೂ ಕೂಡ ಒಂದು ರೀತಿಯ ಕಾಠಿಣ್ಯವೇ! ಔದಾರ್ಯರಹಿತ ಸ್ಥಿತಿಯೇ! ಆ ಮೂಲಕ ನಾವೂ ಕೂಡ ಇನ್ನೊಬ್ಬರನ್ನು ಹಿಂಸಿಸಬಹುದು, ಶೋಷಿಸಬಹುದು, ನಾವು ತೀರಿಹೋದ ಮೇಲೂ ಅವರ ಮನಸ್ಸಿನ ಮೂಲೆಯಲ್ಲಿ ಇದ್ದು ಕಾಡುತ್ತಲೇ ಇರಬಹುದು.

ಇಳಿ ವಯಸ್ಸಿನವರ ಬಗ್ಗೆ ಮೃದುವಾಗಿರಬೇಕು, ಅವರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂಬುದೆಲ್ಲಾ ನಿಜಕ್ಕೂ ನಿಜ. ರೋಗರುಜಿನಗಳಿಂದ ಪೀಡಿತರಾಗಿರುವ ನಿಸ್ಸಹಾಯಕರ ಬಗ್ಗೆ ಈ ಮಾತು ಸರಿಯೇ ಸರಿ. ಆದರೆ ಇದೆಲ್ಲ ಇಳಿ ವಯಸ್ಸಿನವರ ಮನಸ್ಸಿನ ಕಾಠಿಣ್ಯವನ್ನು ಕಡಿಮೆ ಮಾಡಲ್ಲ, ಕಹಿಯಿಂದ ಅವರನ್ನು ದೂರ ಮಾಡುವುದಿಲ್ಲ. ನಾನು ಒಂದೆರಡು ವೃದ್ಧಾಶ್ರಮಗಳಿಗೆ ಆರೋಗ್ಯ ಸಲಹೆಗಾರನಾಗಿದ್ದೀನಿ. ಬಹುಪಾಲು ವೃದ್ಧರಿಗೆ ಮಕ್ಕಳ ಬಗ್ಗೆ, ಸಮಾಜದ ಬಗ್ಗೆ ಸಿಟ್ಟಿದೆ. ಎಲ್ಲರೂ ನಮ್ಮನ್ನು ಕೈ ಬಿಟ್ಟರು, ನಮಗೆ ಎಲ್ಲರೂ ಮೋಸ ಮಾಡಿ ಮೂಲೆಗೆ ತಳ್ಳಿದರು ಎಂಬ ಭಾವನೆ ಇದೆ. ಹಾಗೆಯೇ ಇಡೀ ಜೀವನವನ್ನು ಮತ್ತೊಮ್ಮೆ ಬಾಲ್ಯದಿಂದ ಸುಖವಾಗಿ ಅನುಭವಿಸಬೇಕೆಂಬ ದುರಾಸೆಯೂ ಇದೆ. ಇದೆಲ್ಲ ಯಾರೂ ಪರಿಹರಿಸಲಾಗದ, ಸಾವು ಕೂಡ ಉತ್ತರಿಸಲಾಗದ ಸಮಸ್ಯೆ.

ಹಾಗೆಂದು ನಾನು ಇದನ್ನೆಲ್ಲ ಬರೆದಿರುವುದು ಇಳಿ ವಯಸ್ಸಿನವರನ್ನು ವಿರೋಧಿಸಬೇಕೆಂದಲ್ಲ. ಅವರೆಲ್ಲರ ಬಗ್ಗೆ ವಸ್ತುನಿಷ್ಠವಾಗಿ ಯೋಚಿಸಿ ನಾವೂ ಕೂಡ ಅವರೆಲ್ಲರಂತೆಯೇ ಎಂದು ತಿಳಿದುಕೊಂಡು ನಮಗೇ ನಾವು ಮೋಸ ಮಾಡಿಕೊಳ್ಳಬಾರದೆಂದು. ಇಳಿ ವಯಸ್ಸಿನವರ ಕಾಠಿಣ್ಯ, ಔದಾರ್ಯರಹಿತ ಸ್ಥಿತಿಯಲ್ಲಿ ನಾವೆಲ್ಲ ತಪ್ಪು ತಿಳಿಯುವಂತೆ ಏನೂ ವಿಕ್ಷಿಪ್ತತೆ, ಅಸಹಜತೆ ಇಲ್ಲವೆಂದು ತಿಳಿಯಬೇಕೆಂದು.

*****

ಶಿವಕುಮಾರರ ಲೇಖನವನ್ನು ನಾನು ಮತ್ತೆ ಮತ್ತೆ ಓದಿ ಸುಮ್ಮನಾಗಿಬಿಟ್ಟೆ. ಏನು ಪ್ರತಿಕ್ರಿಯಿಸಬೇಕೆಂದು ಗೊತ್ತಾಗಲಿಲ್ಲ. ಆದರೆ ಅವರು ಪದೇ ಪದೇ ಫೋನ್‌ ಮಾಡಲು ಶುರು ಮಾಡಿದರು. ನೀವು ಈ ರೀತಿ ಮಾಡಬಾರದು. ಬನ್ನಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ, ನೀವು ಈಗಲೇ ಇಳಿವಯಸ್ಸಿನವರಿಗಿಂತಲೂ ಕಠಿಣವಾಗಿದ್ದೀರಿ, ಪ್ರೀತಿಸುವ ಶಕ್ತಿಯನ್ನು ಕಳೆದುಕೊಂಡಿದ್ದೀರಿ, ನಿಮ್ಮ ಗೆಳೆಯರ ವಲಯದಲ್ಲಿ ಚರ್ಚಿಸಿದ್ದೀರಾ? ಅವರೆಲ್ಲ ಏನು ಹೇಳಿದರು?

ಗೆಳೆಯರೊಡನೆ ಚರ್ಚಿಸಿದೆ. ವೈದ್ಯರು ಹೇಳಿರುವುದೆಲ್ಲ ಸರಿ. ಆದರೆ, ಇದೆಲ್ಲ ನಮಗೆಲ್ಲ ಗೊತ್ತಿರುವಂತದ್ದೇ. ನಮಗೆ ಗೊತ್ತಿದ್ದರೂ, ಗೊತ್ತಾದರೂ ನಾವು ಏನೂ ಮಾಡಲು ಅಸಹಾಯಕರಾಗಿದ್ದೇವೆ. ಒಂದು ಲೇಖನ ಓದಿ ನಮ್ಮ ಸ್ವಭಾವವನ್ನು ಬದಲಾಯಿಸಲು ಸಾಧ್ಯವಿಲ್ಲ.

ಮತ್ತೆ ಮತ್ತೆ ವೈದ್ಯರು ಫೋನ್‌ ಮಾಡುತ್ತಲೇ ಇದ್ದರು. ಮೊಬೈಲ್‌ ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ. ಮನೆ ಫೋನಿಗೇ ಕರೆ ಮಾಡಿ ನನ್ನನ್ನು ಹಿಡಿದರು. ನನ್ನ ಸ್ನೇಹಿತರ ಗೊಂದಲ, ಗಲಿಬಿಲಿಯನ್ನೆಲ್ಲ ತಿಳಿಸಿದೆ.

ನ್ಯಾಯಾಧೀಶರು, ಗುತ್ತಿಗೆದಾರರು ಇವರನ್ನೆಲ್ಲ ಉದಾಹರಣೆ ಕೊಟ್ಟದ್ದು, ನೀವೆಲ್ಲ ಹೀಗಾಗಬಾರದೆಂದು, ಹೀಗಾಗುವುದಿಲ್ಲವೆಂದು. ನೀವೆಲ್ಲ ಹೇಳುತ್ತಿರುವುದನ್ನು ನೋಡಿದರೆ, ನನ್ನ ವಿಚಾರ, ಬರವಣಿಗೆ ಎಲ್ಲ ವ್ಯತಿರಿಕ್ತ ಪರಿಣಾಮ ಬೀರಿದಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಫೋನ್‌ ಮಾತುಕತೆ ಮುಗಿದ ನಂತರ ನನಗೆ ನಿಧಾನವಾಗಿ ಗೊತ್ತಾಯಿತು. ಶಿವಕುಮಾರ್‌ ಧ್ವನಿ ತುಂಬಾ ಮೃದುವಾಗಿತ್ತು, ಸಣ್ಣದಾಗಿ ಅಳುತ್ತಿದ್ದರು.