ಪೀರ್ಯಾಗ ಮತ್ತ ಹುರುಪೆದ್ದು ಯೋಳ್ನೆ ಪತ್ರ ಬರದಾಕಿದ್ದ. ಮ್ಯಾಲ ಒಂದ್ಲೈನು ಸರ್ಕಾರಿ ಕೇಲ್ಸ ದೇವ್ರ ಕೇಲ್ಸ ಅಂತಾ ಬರ್ದು ಕೆಳ್ಗ ತಮ್ಮ ಕಂಪ್ನಿ ಮಂಚಪ್ಪ ಮತ್ತ ಸರ್ಕಾರಿ ಲಂಚಪ್ಪನ ಇತಿಹಾಸನ ಬರ್ದಿದ್ದ. ಜೊತಿಗಿ ಅದ್ಕ ಸಂಭಂದಪಟ್ಟಂಗ ಎಕ್ಸೇಲ್ ಸಿಟ್ ಅಟ್ಯಾಚ್ ಮಾಡಿದ್ದ. ನಿನ್ನೆ ಅದು ಕಮೀಷನರ್ರ ಕೈಗಿ ಸಿಕ್ಕು ಲಂಚ್ಮಂಚ್ಚಪ್ಪರ್ನ ಸಿಕ್ಕ ಸಿಕ್ಕಾಂಗ ಉಗದಿದ್ರನ್ನಾದು ಸಹ ಗೊಣೇಶ ತುಂಬು ಹೃದಯದಿಂದ್ಲೇ ವಿವರ್ಸಿ, ಕುಷಿ ಪಟ್ಟಿದ್ದ. ಅಂವ್ಗ ಲೆರ್ಟ ಬರಿತಾರಂತ ಗೊತ್ತು ಆದ್ರ ಇವ್ನ ಬರಿತಾನಂತ ಮಾತ್ರ ಗೊತ್ತಿರ್ಲಿಲ್ಲ. ಪೀರ್ಯಾನೂ ಹೇಳಿದ್ದಿಲ್ಲ.
ಶಿವಕುಮಾರ ಚನ್ನಪ್ಪನವರ ಬರೆದ ಕಥೆ “ಲಂಚಪ್ಗೀರಿ ಲಂಚ್ಮಂಚ್ಚಪ್ಪೋರ ಕತಿ..” ಈ ಭಾನುವಾರದ ಬಿಡುವಿನ ಓದಿಗೆ
ಲಂಚಪ್ಗೀರಿಯೊಳ್ಗ ಎಲ್ಡು ನಮೂನಿ ದೊಡ್ಡದೊಡ್ಡಾವು ಹುದ್ದೆ ಅದಾವು. ಒಂದ ಸರ್ಕಾರಿ ಆಫೀಸ್ನ್ಯಾಗ ಡಿ.ಡಿ. (ಡೆಪ್ಯೂಟಿ ಡೈರೆಕ್ಟರ್) ಹುದ್ದೆ, ಇನ್ನೋಂದು ಸರ್ಕಾರಿ ಪ್ರೋಗ್ರಾಮ್‌ನ ಟೆಂಡರ್ ತಗೊಂಡಿರೋ ಎನ್.ಜಿ.ಓ. ಕಂಪ್ನ್ಯಾಗಿನ ಸಿ.ಇ.ಓ. ಹುದ್ದೆ. ಈ ಎಲ್ಡೂ ಕಡಿ, ಎಲ್ಡು ಮಂದಿ ಲಂಚಪ್ಪ, ಮಂಚಪ್ಪ ಅಂತಿದ್ದಾರ. ಈ ಲಂಚ್ಮಂಚ್ಚಪ್ಪೋರು ಒಬ್ರನ್ನೋಬ್ರು ಯಾವಾಗ ನೋಡಿದ್ರು, ಅವ್ರ ನಡ್ವ ಸಲ್ಗಿ ಹೇಂಗ ಬೇಳಿತಂತ ಕೇಳಿದ್ರ, ಕಂಪ್ನೀ ಬಡಪಾಯಿ ಕ್ಲರ್ಕ್ ಪೀರ್ಯಾಗ ಮಾತ್ರ ತಿಳಿಲಾರದ್ದ ವಿಷ್ಯ. ನಾ ಹುಬ್ಳಿ ಹೊಂಡಾ ಕಂಪ್ನ್ಯಾಗ ಹತ್ಸಾವ್ರಕ್ಕ ದುಡಿಲಿಕ್ಕತ್ತವ್ನ ಇಂಟ್ರೂ ಮಾಡಿ ಇಪ್ಪಸಾವ್ರ ಸಂಬಳ ಪೀಕ್ಸ್ ಮಾಡ್ದಾಗಿಂದ ಹಿಡ್ಕಂಡು ಎಡ್ವರ್ಷ ಆತು, ಈಗ್ಲೂ ಅವ್ರಿಬ್ರ ದೊಸ್ತಿ ಹಸನಾಗೈತಿ ಅಂತಾನಂವ.
ಬೆಳಿಗ್ಗಿ ಆರು ಗಂಟಿ ಇರಬೇಕ ಹೊಂಟ ಬಸ್ಸು ತಿಸ್ಕು ಪುಸ್ಕು ಮಾಡಕತ್ತಿತ್ತು. ಯಾರ್ರೀ.. ಬರ್ರೀ.. ಲಂಚಪ್ಗೀರಿ ಲಂಚಪ್ಗೀರಿ, ಅನ್ಕೊತ ಬಸ್ನಾಗಿನ ಒಂದೊಂದ ಪಡದೆ ಎಳ್ಕೊತ ಹುಡ್ಗ ಬಂದಾಗ್ಲೇ ಪೀರ್ಯಾಗ ಎಚ್ಚರಾತು. ಗಳಿಗೊತ್ತು ಹಿಡಿತು ತಾ ಎಲ್ಲಿದನಿ ಅಂತಾ ತಿಳ್ಕಳಾಕ. ಕೆಳಗಿಳ್ದು ನೋಡಿದ್ರ ಬೆಳ್ಳಗಿದ್ದ ವಿ.ಆರ್.ಎಲ್. ಬಸ್ಸು ಕೆಂದಾಗಿ ಎದುಸ್ರೂ ಬಿಡಕತ್ತಿತ್ತು.
ಗೊರ್ಕಿ ನಿದ್ದಿ ಎಲ್ಡು ತಾಸು, ಬೆರ್ಕಿ ನಿದ್ದಿ ಎಂಟು ತಾಸಿಗ ಸಮ ಅನ್ನಂಗ, ಬೆಳಿಗ್ಗೆ ಆರಕ್ಕನ ಪಾಂಚಾಲಿ ಲಾಡ್ಜನಾಗ ರೂಂ ಹಾಕೊಂಡು, ಹತ್ತಕ್ಕ ಅಲಾರಾಂ ಕೀ ಕೊಟ್ಟು ಮಕ್ಕಂಡಿದ್ದ ಪೀರ್ಯಾಗಿವತ್ತ ಗೊರ್ಕಿ ನಿದ್ದಿನೂ ಇಲ್ಲ ಬೆರ್ಕಿ ನಿದ್ದಿನೂ ಇಲ್ಲ, ತನ್ನ ವಾರ್ಗಿ ಹುಡ್ಗುರು ಆಲ್ಮೋಸ್ಟ್ ಗೌರ್ನಮೆಂಟ್ ಅಪಾಂಟ್ ಆಗಿ ಸೆಟ್ಲ್ ಆಗ್ಯಾರ. ಸ್ವಲ್ಪ ಬ್ಯಾಕ್ ಸಪೋರ್ಟ್ ಇದ್ದಿದ್ರ ತನ್ನ ಬಾಳೆ ಹಿಂಗಾಕ್ಕಿದ್ದಿಲ್ಲ ಅಂತಾ ಅದೂ ಇದೂ ತಲಿಗಿ ತಗೋಂಡ ಟೇನ್ಸನ್‌ಗೆ ದೀಡು ವರ್ಷ ಆತು ಸರಿ ನಿದ್ದಿ ಹತ್ವಲ್ದು. ಸಣ್ಣಾವಿದ್ದಾಗ, ಇವ್ನ ಗೊರ್ಕಿ ಹೊಡ್ತ ಎಲ್ಡ ಮನಿಗಂಟ ಕೇಳಾದು, ಊರಾಗೇಲ್ಲಾ ಇವ್ನ ಗೊರ್ಕಿ ಪೀರ್ಯಾ ಅಂಬೋ ಅಡ್ಡೇಸ್ರಿಂದ ಕರಿತಾರ ಈಗ್ಲೂ. ಗಾದಿ ಮ್ಯಾಲ ಮುಕುಳಿ ಹಾಕಿ ಹೊಳ್ಳಾಡಿದ್ರು ನಿದ್ದಿ ಇವ್ನ ಹತ್ರ ಬರಾಂಗಿಲ್ಲ ಅಂತಿತ್ತು. ನಿನ್ನೇ ಪೀರ್ಯಾ ಹುಬ್ಳಿ ಕೋರ್ಟ ಸರ್ಕಲ್ನ್ಯಾಗ ಒಂದು ಗುಲಾಬಿ ಸಾಯಿಬಾಬಾಗ ಕೊಟ್ಟು, ದೀಡತಾಸ ಬಾಬಾರ್ನ ನೊಡ್ತಿದ್ದ. ಯಪ್ಪಾ ಈ ಸೂಳಿಮಕ್ಳಿಗಿ ಎನಾರ ಮಾಡಪ್ಪ ಅಂತಾ ಬೇಡಿಕೊಂಡಿದ್ದ.
ಪೀರ್ಯಾ ಮೂರು ತಿಂಗ್ಳಿಗೊಮ್ಮೆ ಲಂಚಪ್ನತ್ರ ಬರಾಕಬೇಕು. ತಾ ಕೇಲ್ಸ ಮಾಡೋ ಕಂಪ್ನೀಗಿ ಸರ್ಕಾರದೌರು ಅಂಪಾಂಟ್ ಮಾಡಿರೋ ಡಿ.ಡಿ. ಇವ್ನು. ಈತನ್ನತ್ರ ತನ್ನ ಸಾದಿಲ್ವಾರು ಲೆಕ್ಕದ ಬಿಲ್ಲು ಸೈನು ಹಾಕಿಸ್ಬೇಕ. ಲಂಚಪ್ಪ ಕೂರೋ ಸೌಧ ನಾಕಾರು ಅಂತಂಸ್ಥಿಂದು. ಅಂವ್ಗ ಎಲ್ಡ್ರ ಮನ್ಸು ಪಸಂದ್ ಬರ್ತದ. ಹಳ್ಯಾಗಿನ ಪಂಚಾತಿಂತ್ರ ಹಿಡ್ಕಂಡ, ದಿಲ್ಯಾಗಿನ ದೊಡ್ಡದೊಡ್ಡ ಆಫೀಸ್ತಂಕ. ಅಧಿಕಾರಕ್ಕ ಬಂದ್ರ ಸಾಕ ಲಂಚಪ್ಪ ಮೊದ್ಲ ತಲಿ ಹತ್ತತಾನ ಮುಂದ ಮಂಚಪ್ಪನ್ ಚಿಗ್ರು ಮೆಲ್ಲಗ ಸುರುವಾಕ್ಕತಿ. ಲಂಚಪ್ಪನ ಆಫೀಸ್ ಮುಂದಣ ತೋಟದಾಗ ಭೀಮರಾವ್ ಸಾಹೇಬ್ರು, ಬಟ್ಟ ಮಾಡಿ ತನ್ನ ಮುಂದ ಕುಂತ ಗಾಂಧೀ ಅಜ್ಜನ ಕಡಿ ತೋರಿಸ್ತಾರ. ಗಾಂಧಿ ಅಜ್ಜ ತಂದ ತಪ್ಪೈತ್ತನ್ನಾಂಗ ಚಂಡ ಬಗ್ಗಿಸ್ಯಾನ. ಜನ ಗಾಂಧೀ ತಾತನ್ನ ಮುಂದ ನಿಂತು, ಎಲ್ಡ ಬಟ್ಟ ತೋರ್ಸೀ ಸೇಲ್ಪಿ ಹಿಡ್ದು, ಹಿಗ್ಗತಾರ. ಗಾಂಧೀ ತಲಿಮ್ಯಾಲ ಪಾರಿವಾಳ ಹೇತ್ರೂ ಅದ್ನ ಒರಸವ್ರಿಲ್ಲ, ತೋಳಿಯವ್ರಿಲ್ಲ. ಇನ್ನೂ ಮಂಚಪ್ಪ ತಮ್ಮ ಕಂಪ್ನೀ ಬ್ರಾಂಚು ಲಂಚಪ್ಗೀರಿ ಊರ್ಗೇ ಹೆಡ್ಡು, ಹೆಡ್ಡಂದ್ರ ಕೇಳಬೇಕ, ಅಧಿಕಾರನ ಇವ್ನ ಕೈಯಾಗ. ಆದ್ರ, ಇಂವ ಯಾವ್ದಕ್ಕೂ ತಲಿ ಕೆಡಿಸ್ಕೋಳ್ದ, ಲಂಚಪ್ಪಗ ಸಪೋರ್ಟ್ ಮಾಡ್ತಾನ ಅನ್ನ ಹಾಕೋ ಕಂಪ್ನೀಮ್ಯಾಲ ಒಂದೀಟರ ಅಭಿಮಾನ ಇಲ್ಲಂವ್ಗ. ಐದ್ನೂರು ಮಂದಿ ಸ್ಟಾಪ್ಗೇ ಇವ್ನೇ ಬಾಸು, ಸರ್ಕಾರಿ ಕಾಲ್‌ಸೆಂಟರ್, ಕಾಲ್‌ಸೆಂಟರ್ ಅಂದ್ರ ಕೇಳಬೇಕಾ ಮಂಡಿಮ್ಯಾಲ, ತೊಡಿಕಾಣಂಗ ಬಟ್ಟಿ ಹಾಕೋಳೋ ಹುಡ್ಗ್ಯಾರು ಬರ್ತಿರ್ತಾರ. ಒಳ್ಳೆ ಸಂಬಳ, ಕಂಪ್ನಿ ಬಾಡ್ಗಿ ಕಟ್ಟ ಅಪಾಂರ್ಟ್‌ಮೆಂಟು ಇದ್ದಾಗ ಅವ್ನ ಆಸಿ ಬಿಡತೈತಾ..? ಅಲ್ದ ಆಫಿಸ್ನಾಗ ಹುಡ್ಗಿರಿಗೆ ಇವ್ನ ಕಂಡ್ರ ರೆಸ್ಪೆಕ್ಟ್ ಜಾಸ್ತಿ. ಇದ ಇವ್ನ ಪ್ಲಸ್‌ಪಾಯಿಂಟ್, ಹಂಗಾಗಿ ಹುಡ್ಗಿರ್ನ ದಿನಾ ಅವ್ನ ಅಂಪಾರ್ಟಮೆಂಟ್ನಾಗ ನೋಡಬಹುದು. ‘ಪೀರ್ಯಾ ನೋಡಪಾ ನೀ ಎನ್‍ಮಾಡ್ತಿ ಗೊತ್ತಿಲ್ನಂಗ, ತಿಂಗ್ಳಿಗಿ ಮೂರು ಲಕ್ಷ ಬೇಕ್ನಂಗ. ಲಂಚಪ್ಪರ್ಗ ಕೊಡಾಕ, ಲೆಕ್ಕಬುಕ್ಕ ನಿಂಬಿಟ್ಟದ್ದು ರೊಕ್ಕ ನನ್ನ ಅಕೌಂಟ್‌ಗೆ ಬರಬೇಕಂತಾನ. ಅತ್ಲಾಗ ಕಂಪ್ನೀ ಸಿ.ಎಪ್.ಓ, ಕಟುಕ್ರೂ ಹತಾರ ಹಿಡ್ದು, ದನಿಂದು ಚರ್ಮ ಸುಲ್ದಂಗ, ಸುಲಿತಾರ ರೊಕ್ಕಾನ ಈ ಸೂಳೇಮಕ್ಳು, ನಿಂತ್ರೂ, ಕುಂತ್ರೂ ದುಡ್ಡ ಕೇಳಿದ್ರ ಎಲ್ಲಿಂತ್ರನರೀ ತರಾದು. ನೌಕರಿ ಕಳಕನಾ ಆಟದು. ಎನ್ ನೋಟ ಪ್ರೀಂಟ್ ಮಾಡ್ತಾರೇನ ಕಂಪ್ನೇರು ಹಿಂಗೇಲ್ಲಾ ಮುಂದ ಛೋಲೋ ಎಲ್ಡ ಮಾತಾಡಿ, ಕವರ್ನ್ಯಾಗ ಗಾಂಧೀ ನೋಟ ಕೊಟ್ಟು ಉಗ್ದು ಉಪ್ಪಾಗಿದ್ರೂ ಇದೆಲ್ಲಾ ಮೈ ಹತ್ತಾಣಿಲಂತನ ಲಂಚಪ್ಪ. ಇಂತಿಪ್ಪ ಸಂದರ್ಭದೊಳ್ಗೂ ಪೀರ್ಯಾ ಹರ್ಯಾಸ್‌ಮೆಂಟ್ ತಡ್ಕಂಡು ಅಲ್ಲಿದ್ದುದ್ಕ ಕಾರ್ಣ ಇಲ್ಲಿ ಸಂಬ್ಳ, ಮಾರ್ಕೆಟ್ನಾಗ ಎಲ್ಲೂ ಸಿಗಂಗಿಲ್ಲಂತೇಳಿ.
ಪೀರ್ಯಾ ಧಾರವಾಡ ಮೂಲ್ದಾವ, ಇವ್ನಿಗ್ಯಾಕ ಲಂಚ್ಮಂಚ್ಚಪ್ಪೋರ ಮ್ಯಾಲೆ ಸಿಟ್ಟಂದ್ರ, ಹುಟ್ಟಿದಾಗಿಂದ್ದ ಹಸ್ವು ಕಾಡಿದಂಗ ಬ್ಯಾರೇನು ಕಾಡಿಲ್ಲಿವ್ಗ. ಹೇಳಕಳಾಕ ತನ್ನೋವ್ರಂತ, ತಂದಂತ ಎನಿಲ್ಲ. ನುಗ್ಗಿಕೇರ್ಯಾಗ ಹುಟ್ಟಿದ್ದು. ಆರು ವರ್ಷ ಆಗಣ ಅವ್ವಪ್ಪ ಕೆರಿ ಪಾಲಾದ್ರು, ಈಗಿದ್ದಿದ್ರ ಅವ್ರೇದಿಮಟ ಇರ್ತಿದ್ದ ಮಗ್ನ ಕಂಡು ಎಟು ಹರಷ ಬಿಡ್ತಿದ್ರೋ ಎನೋ,..? ಅವ್ನಕ್ಕ ಸೀತವ್ವನ್ನ, ಅವ್ವನ್ ತಮ್ಮ ಮಾಡ್ಕೊಂಡ. ಪೀರ್ಯಾ ನಾಕನೇ ಕ್ಲಾಸಿಂತ್ರಾನ ಕೂಲಿ ಮಾಡಕ ಶುರು ಮಾಡ್ದ. ತನ್ನ ಶಾಲಿ ಕಲತದ್ದೆಲ್ಲಾ ಅವ್ನ ದುಡ್ಕಂಡು, ಪೀರ್ಯಾ ಎಲ್ಡನೇ ಕ್ಲಾಸಿದ್ದಾಗ ವಲ್ಲಿ ಹುಟ್ಟಿದ್ದು. ಪೀರ್ಯಾ ಅಕ್ಕ, ಭಾವ ಮತ್ತ ಸೋಸಿ ವಲ್ಲಿನ ತನ್ನವ್ರಂತಂದು ತಿಳ್ದಿದ್ದ. ಶಾಲಿ ಕಲಿಯಾಕ ಒಂದಣಿ ಕೊಡ್ದಿದ್ರೂ ಭಾವ ಅಳಿಯನ್ನ ತಾನ ಓದ್ಸಕತ್ತೆನಂತ ತನ್ನೂರ ಗಾಂಪೂರಕ್ಕೇಲ್ಲಾ ಟಾಮ್ ಟಾಮ್ ಮಾಡಿದ್ದ. ಹಂಗೂ, ಹಿಂಗೂ ಮಾಡಿ ಪೀರ್ಯಾ ಬಿ.ಕಾಂ. ಮುಗ್ಸಿ, ಗಾಂಪುರ ಬಿಟ್ಟವ, ಜಾತ್ರಿ, ಜಪತ್ತ ಇದ್ರ ನಾಕದಿನ ಹೋಗಾದ ಬರಾದ ಮಾಡ್ತನ. ಕಂಪ್ನಿಂತ್ರ ಕಂಪ್ನಿಗಿ ಮುಸ್ಯಾನ ಗತಿ ಹಾರ್ಕೋತ ಇಲ್ಲಿಗಿ ಬಂದು ಮುಕ್ಳಿಊರಿ ಎಲ್ಡು ವರ್ಷಾದ್ವು.
ಅಕ್ತಮ್ಮರ್ಗಿಬ್ರಿಗೂ ಮನಸೈತಿ, ವಲ್ಲಿನ ಪೀರ್ಯಾ ಮಾಡ್ಕಳಕ, ಮೊದ್ಲೇಲ್ಲಾ ಗುಡ್ಲೋಳ್ಗ ಕುಂತ್ಗಂಡ ಭಾವ ವಾರಿಗಿ ಮಂದೀ ಇದ್ರ, ವಲ್ಲಿನ ಇವ್ನಗ ಕೊಡ್ತಿನಂತಿದ್ದ. ವಲ್ಲಿದೂ ವಯ್ಯಾರ ನೊಡ್ಬೇಕು ಆವಾಗ, ಎಲ್ಡು ವರ್ಷ ಆತು ಮೈನೆರ್ತು, ಮೈನೆರ್ತಾಗ ವಲ್ಲಿ ಪೀರ್ಯಾನ ನೋಡಿ ಒತ್ತಟ್ಟು ಕುಷಿಪಟ್ರ, ಒತ್ತಟ್ಟು ದುಃಖ ತಡಿಲಾರ್ದ ನೀರು ಜಿನಿಗಿದ್ವು. ಅಕ್ಕನ ಕಣ್ಣಾಗ, ಯಾಕಂದ್ರ ಗುಡ್ಲದಾಗ ವಯಸ್ಸಿಗೆ ಬಂದಾಕಿನ ಇಟ್ಕಂಡ ಹೆಂಗ ಬಾಳೆ ಮಾಡದಂತ, ಮತ್ತ ಮಳ್ಳತನಕ್ಕ ಬಿದ್ದ ಪೀರ್ಯಾ ನೌರ್ಕಿಮ್ಯಾಲ ಸಾಲಮಾಡಿ ಮತ್ತ ತನ್ನತ್ರ ಇದ್ದೋಟಾಕಿ ಹತ್ಲಕ್ಸದ್ದು ಮನಿ ಕಟ್ಸಿಕೊಟ್ಟಾನ. ಹತ್ತೊರ್ಷ ಇ.ಎಮ್.ಆಯ್. ತುಂಬಬೇಕ ಅದ್ಕ.
ರಾತ್ರಿ ಮಕ್ಕಂಡ್ರ ನಿದ್ದಿ ಹತ್ತದಷ್ಟ ಕನ್ಸವ ಪೀರ್ಯಾಗ. ನಾನು ನಾಕ ಮಂದಿ ಸರಿ ಬದಬ್ಕೇಕು, ನಾನ್ ಕಷ್ಟ ಪಟ್ಟಂಗ ಮುಂದ ನಮ್ ಪೀಳಿಗಿ ಕಷ್ಟ ಬೀಳಬಾರ್ದು, ಮದ್ವಾಗಿ, ಮಕ್ಳಾಗಿ, ಸಂಸಾರ ಕಟ್ಬೇಕು ಇಂತವೇ.. ಪೀರ್ಯಾನ ಅಪ್ಪವ್ವ, ಊರ ಪಂಚಾಯ್ತಿ ಕಾಮಣ್ಣನ ಒಂದ ಗ್ರಾಂಟ್ ಮನಿ ಹಾಕಾಕ ಐದತ್ತ ವರ್ಷ ಅಡ್ಡಾಡಿ, ಚಪ್ಲಿ ಸವಸಿದ್ರೂ, ರೊಕ್ಕತಾಂಬರಿ ಆಮ್ಯಾಲ ನೋಡಮು ಅಂದಿದ್ದೊಂದು ಚಿಂತಿನೂ ಸಾಯಕ ದಾರಿಯಾಗಿತಂತ ಗುಮಾನಿ ಕೇಳಿದಾಗಿಂತ್ರ ಅಂವ್ಗ ಲಂಚ ಅಂದ್ರನ ಮುಕುಳಿ ಉರಿತೈತಿ. ಅಂತದ್ರಾಗ ಲಂಚ್ಮಂಚ್ಚಪ್ಪೋರ್ನ ಕಂಡ್ರ ಊರಿಯಾಂಗಿಲ್ಲೇನು..?
ಗಾಂಧಿ ಅಜ್ಜ ತಂದ ತಪ್ಪೈತ್ತನ್ನಾಂಗ ಚಂಡ ಬಗ್ಗಿಸ್ಯಾನ. ಜನ ಗಾಂಧೀ ತಾತನ್ನ ಮುಂದ ನಿಂತು, ಎಲ್ಡ ಬಟ್ಟ ತೋರ್ಸೀ ಸೇಲ್ಪಿ ಹಿಡ್ದು, ಹಿಗ್ಗತಾರ. ಗಾಂಧೀ ತಲಿಮ್ಯಾಲ ಪಾರಿವಾಳ ಹೇತ್ರೂ ಅದ್ನ ಒರಸವ್ರಿಲ್ಲ, ತೋಳಿಯವ್ರಿಲ್ಲ. ಇನ್ನೂ ಮಂಚಪ್ಪ ತಮ್ಮ ಕಂಪ್ನೀ ಬ್ರಾಂಚು ಲಂಚಪ್ಗೀರಿ ಊರ್ಗೇ ಹೆಡ್ಡು, ಹೆಡ್ಡಂದ್ರ ಕೇಳಬೇಕ, ಅಧಿಕಾರನ ಇವ್ನ ಕೈಯಾಗ.
ಚಣೊತ್ತು ಮಕ್ಕಂಡ ಕಣ್ಣಿಗಿ ಕಣ್ಣ ಹತ್ತಿದ್ದ ನಿದ್ದಿ ಇನ್ನ ಹಳಾರಾಗಿದ್ದುಲ್ಲ, ಗಬ್ಬಕ್ಕನ ಎದ್ದು ಕೂರಂಗ ಹೊಡ್ಕಂತು ಫೋನು.
ಬಾಸ್ ಮಂಚಪ್ಪ, ವೆರ್ ಆರ್ ಯು, ಪೀರ್ಯಾಗ ಬಾಸ್ ಅಂದ್ರ ಸಾಕ ಮುಕ್ಳಾಗ ಹುಸ ಹೊಕ್ಕಾವು, ಸರ್ರ, ಬೆಳಿಗ್ಗೆ ಬಂದಾಡ್ರಿ ಇಲ್ಲೇ ಲಾಡ್ಜಿನಾಗದಂಡ್ರಿ, ಬರ್ತಾಂಡ್ರಿ ಅಂದ. ಆಯ್ ಆಮ್ ಇನ್ ಗೊವೆರ್ನಮೆಂಟ್ ಆಫೀಸ್ ಯು ಸುಡ್ ಬಿ ಹಿಯರ್ ಇನ್ ಟೆನ್ ಮಿನಿಟ್ಸ್ ಅಂತಂದು ಫೋನ್ ಕಟ್ಟಾತು.
ಟೈಂ ನೋಡ್ದ, ಹತ್ತಕ್ಕ ಸೆಟ್ ಮಾಡಿಟ್ಟಿದ್ದ ಅಲರಾಂ ಹತ್ತಕ್ಕ ಹೊಡ್ಕಂಡು ಹನ್ನೊಂದಕ್ಕ ಉಲ್ಡೋಗಿತ್ತು.
ದೀಡು ವರ್ಷದಿಂದ ಇದು ಯೊಳನೇ ಲೆರ್ಟು ಸರ್ಕಾರಿ ಆಫೀಸ್ನ ಕಮೀಷನ್ನರ್ರೀಗೆ ಬರಿಯಾಕತ್ತಿ. ಹಳೇ ಕಮೀಷನ್ನರ್ರು ಅದ್ನ ತಿರ್ಗಿ ಸಹ ನೋಡ್ಲಿಲ್ಲಂತ ಸುದ್ದಿ ಬರ್ತಿದ್ವು. ಆದ್ರೂ ಪೀರ್ಯಾ ಲೆಟರ್ ಹಾಕ್ತಾನ ಇದ್ದ. ಮೊನ್ನೇ ಸರ್ಕಾರಿ ಆಫೀಸ್ನಾಗ ಡಿ.ಡಿ. ಕೆಳ್ಗ ಕೇಲ್ಸ ಮಾಡೋ ಗೊಣೇಶ ಫೋನ್ಯಾಗ ತರಾವರಿ ಮಾತಾಡ್ಕೊಂತ ಈ ಬ್ಯಾರಿ ಬಂದಿರ ಕಮೀಷನರ್ರು ಸ್ಟ್ರೀಕ್ಟ್ ಅದಾರ ಗುರು ಅಂದಿದ್ಕೆ, ಪೀರ್ಯಾಗ ಮತ್ತ ಹುರುಪೆದ್ದು ಯೋಳ್ನೆ ಪತ್ರ ಬರದಾಕಿದ್ದ. ಮ್ಯಾಲ ಒಂದ್ಲೈನು ಸರ್ಕಾರಿ ಕೇಲ್ಸ ದೇವ್ರ ಕೇಲ್ಸ ಅಂತಾ ಬರ್ದು ಕೆಳ್ಗ ತಮ್ಮ ಕಂಪ್ನಿ ಮಂಚಪ್ಪ ಮತ್ತ ಸರ್ಕಾರಿ ಲಂಚಪ್ಪನ ಇತಿಹಾಸನ ಬರ್ದಿದ್ದ. ಜೊತಿಗಿ ಅದ್ಕ ಸಂಭಂದಪಟ್ಟಂಗ ಎಕ್ಸೇಲ್ ಸಿಟ್ ಅಟ್ಯಾಚ್ ಮಾಡಿದ್ದ. ನಿನ್ನೆ ಅದು ಕಮೀಷನರ್ರ ಕೈಗಿ ಸಿಕ್ಕು ಲಂಚ್ಮಂಚ್ಚಪ್ಪರ್ನ ಸಿಕ್ಕ ಸಿಕ್ಕಾಂಗ ಉಗದಿದ್ರನ್ನಾದು ಸಹ ಗೊಣೇಶ ತುಂಬು ಹೃದಯದಿಂದ್ಲೇ ವಿವರ್ಸಿ, ಕುಷಿ ಪಟ್ಟಿದ್ದ. ಅಂವ್ಗ ಲೆರ್ಟ ಬರಿತಾರಂತ ಗೊತ್ತು ಆದ್ರ ಇವ್ನ ಬರಿತಾನಂತ ಮಾತ್ರ ಗೊತ್ತಿರ್ಲಿಲ್ಲ. ಪೀರ್ಯಾನೂ ಹೇಳಿದ್ದಿಲ್ಲ. ಒಬ್ರತ್ರ ಇದ್ರ ಅದು ಗುಟ್ಟು, ಗುಟ್ಟು ರಟ್ಟಾದ್ರ ತನ್ನ ಗತಿಯೇನಕ್ಕತಂತ ಪೀರ್ಯಾಗ ಗೊತ್ತು. ನಿನ್ನೆ ಗೌರ್ನಮೆಂಟ್ ಆಫೀಸ್ನಾಗ ಲಂಚಪ್ಪ ಮಂಚಪ್ಪ ಮತ್ತ ಕಮೀಷನರ್ರ ನಡ್ವ ನಡ್ದಿದ್ದಿಷ್ಟು.
ಹೊಟ್ಟಿಗಿ ಎನ್ ತಿಂತಿರ್ರೀ ನೀವಿಬ್ರೂ, ಮಕ್ಳು ಮರಿ ಇಲ್ಲೇನ್ ನಿಮ್ಗ. ಪತ್ರ ಓದಿದ್ರ ಹೊಟ್ಟಿನ ರುಮ್ ಅಂತೈತಿ, ಹಂಗೈತಿ ಇದ್ರಾಗ ಬರ್ದಿರೋ ಸಾಲು, ಅದಕ್ಕ ಸಂಭಂದಪಟ್ಟಾಂಗ ಪ್ರೂಪ್ ಸೈತ ಹಚ್ಚಾರ, ನಂಗೊತ್ತಿಲ್ಲ. ನಾಳಿಒಳಗ ಲಂಚಪ್ಪ ನೀ ಇದ್ಕ ಉತ್ರ ಹೇಳಬೇಕ. ಇಲ್ಲಂದ್ರ ನಾ ಬಿಡಾವಲ್ಲ. ಮತ್ತ ಮಂಚಪ್ಪನ ಕಡಿ ತಿರ್ಗಿ ನಾಚಿಕಿ ಆಗಲ್ಲ ರೀ ನಿಮ್ಗ ಇಂತ ಹೇಸ್ಗಿ ಕೆಲ್ಸ ಮಾಡದ್ಕ, ನಿಮ್ಮ ಮಗ್ಳ ವಾರ್ಗಿ ಹುಡ್ಗಿರ ತಲಿ ಕೆಡಿಸಿ ಈ ಬದುಕು ಮಾಡ್ತಿರಲ್ಲ, ಸ್ವಲ್ಪರ ಮನುಷ್ಯತ್ವ ಐತೇನ್ರೀ, ನಾಳಿಮಟ ಟೈಮ್, ಒಪ್ಪಕೋಂಡ್ರ ಸರೀ ಇಲ್ಲಾಂದ್ರ ಬೂಟುಕಾಲೇಲಿ ಒದ್ದು ಬಾಯಿ ಬಿಡಿಸ್ಬೇಕಾಕತಿ, ಗೆಟ್ಲಾಸ್ಟ್ ಅಂದ್ರಂತ, ಅದೂ ತನ್ನ ಸ್ಪಾಫ್ ಮುಂದನ.
ಏಟು ಊಗುದ್ರೂ ಉಗ್ದಿಲ್ಲ ಅನ್ನಂಗ, ಮತ್ತ ಅಲ್ಲೇ ಎಲ್ರ ಇದ್ರಿಗೆ ಒಡಾಡ್ಕೋಂತ, ನಕ್ಕೊಂತ, ಕೆಲಕ್ಕೊಂತ ಇಬ್ರೂ ಅಡ್ಡಾಡ್ತಿದ್ರು, ಮನಸ್ನಾಗ ಕಮೀಷನರ್ರದ ಚಡ್ಡಿ ಹರಿಬೇಕನ್ನದು ಬೆಂಕಿ ಉರಿದಾಂಗ ಉರಿಯಾಕತ್ತಿತಂತ ಕಾಣತೈತಿ.
ಪೀರ್ಯಾ ನಾಸ್ಟಾ ಮುಗಿಸ್ಕೊಂಡು ಸರ್ಕಾರಿ ಆಫೀಸ್ಗೆ ಹತ್ರ ಆಗಾಣ, ಬೇಜಾರಾಯ್ತು, ಮತ್ತದ ಲಂಚಪ್ಪನ ಮಕಾನ ನೋಡ್ಬೇಕಲ್ಲಪ್ಪ..? ರೊಕ್ಕಕ್ಕ ಹುಟ್ಗಿಟ್ಯಾನೇನ, ಅಂವ ನೌಕರಿ ತಗಂಡಾನ-ತಗಂಡಾನ, ಇಲ್ಲಿ ತಂಕ ಲಂಚ ಇಲ್ದ ಒಂದಕ್ಷರ ಸಹ ಬರ್ದುಲ್ಲ. ಇವ್ನ ಕೈ ಕೆಳಗ ಕೆಲ್ಸ ಮಾಡೋ ಮಂದಿ ಗೌರ್ನಮೆಂಟ್ ಅಂಪಾಯಿಂಟ್‌ಮೆಂಟ್ ಇಲ್ಲ, ಎಲ್ಡ್ರೂ, ಕಾಂಟ್ರಾಕ್ಚುವಲ್ ಇದು ಇವ್ನ ಪ್ಲಸ್‌ಪಾಯಿಂಟ್, ಅವ್ರ ಕೈಲಿ ಪೈಲ್ ಪುಟ್‌ಪಪ್ ಮಾಡ್ಸಿ, ಲಂಚ ತಿನ್ನೋದು. ಇನ್ನೂ ವ್ಯವಸ್ಥೆಯೊಳ್ಗ ಲಂಚ್ಮಂಚ್ಚಪ್ಪೋರ ನಡ್ವ ಸಾಚಗಳಿದ್ದವ್ರ ಆಟ ನಡಿಯಂಗಿಲ್ಲ, ಇವ್ರಿಬ್ರ ಜೊತಿ ಸೇರಿ ಕರೇಪ್ಟ್ ಆದವ್ರೂ ಇದ್ದಾರ, ಎಮ್ಮಿ ಜೊತಿ ಆಡಿ ಆಕ್ಳ ಕೆಟ್ಟಾಂಗ.
ಪೀರ್ಯಾ ಸರ್ಕಾರಿ ಆಫೀಸ್ನ ಗೇಟ್‍ಹತ್ರ ಬರ್ತಿದ್ದಕ್ಕೂ, ಗೊಣೇಶ ಸಪ್ಪೆ ಮುಖ ಹಾಕ್ಕೋಂಡು ಆಫೀಸಿಂದ ಹೊರ ಬರಕ್ಕತ್ತಿದ್ದ. ಪೀರ್ಯಾಗ ಕುತೂಹಲ ಹೆಚ್ಚಾಗಿ, ಹಾಯ್ ಸಿಂಬೂಲ್ ಕೊಟ್ಟ. ಅಂವ ನೋಡಿ ಸುಮ್ನ ಇದ್ದ, ಅಂವ ಹತ್ರಾದಂತೆಲ್ಲಾ ಪೀರ್ಯಾಗ ಏನಾಗೈತಿ ಅನ್ನ ಕೂತೂಹಲ ಹೆಚ್ಚಾತು.
ಹಾಯ್ ಸರ್ರ, ಯಾಕ್ರೀ ಸಪ್ಪಗದಿರಲ್ಲ, ಪೀರ್ಯಾ ಕೇಳ್ದ.
ಈ ಸೂಳೆಮಕ್ಳು ನಿಮ್ಮ ಬಾಸ್, ನಂ ಬಾಸ್ ಸೇರ್ಕೋಂಡು ಯಾವ್ನೋ ಬರ್ದಿದ್ದ ಲೆರ್ಟು ನಾನ ಬರ್ದನಿ ಅಂತಾ ಹಿಗ್ಗಾ ಮುಗ್ಗಾ ಬೈದ್ರು ಗುರು, ದೊಡ್ಡವ್ರ ಸವಾಸ ನಮ್ಗ್ಯಾಕ ಬೇಕು ಅನ್ನ ಸಿಗೋ ಕೇಲ್ಸಕ್ಯಾರಾದ್ರು ಕಲ್ಲ ಹಾಕ್ಕೊತಾರೇನು, ನಮ್ನಿಮ್ಮೊಂತವ್ರು ಇಂತವ್ರ್ನ ಎದ್ರೂ ಹಾಕ್ಕೊಂಡ ಬದ್ಕಕಾದಿತೇನ, ಅಷ್ಟೂ ತಿಳಿಬಾರ್ದ ಸೂಳಿಮಕ್ಳಿಗೆ ಅಂದ, ಪೀರ್ಯಾಗ ಸಣ್ಣಗ ಅಂಜ್ಕಿ ಸುರುವಾತು. ಬಡ್ವ ನೀ ಮಡ್ಗಿದಂಗಿರು ಅಂತಾ ದೊಡ್ಡವ್ರು ಸುಮ್ನ ಹೇಳ್ಯಾರ…?
ಅಲ್ಲಾರೀ, ಅವ್ರಿಗ್ಯಾಕ್ರೀ ನಿಮ್ಮೇಲೆ ಡೌಟು ಬರ್ತೈತಿ, ಅಂತಾ ಕೊಶನ್ ಹಾಕ್ದ ಪೀರ್ಯಾ.
ನಿನ್ನೆ ನಿನ್ನಜೊತಿ ನಾ ಫೋನಿನ್ಯಾಗ ಮಾತಾಡಿದ್ದು ಇವ್ರಿಗೆ ಯಾರೋ ಹೇಳ್ಯಾರಪ್ಪ ಅದ್ಕ ಅಂದ. ಆಟೋತ್ತಿಗೆ ಅವ್ನಿಗೆ ಬುಲಾವು ಬಂದು, ಬಂದಿರು, ಅಂತಂದು ಆಫೀಸೊಳ್ಗ ಮರಿಯಾದ.
ಕಮೀಷನರ್ರು ಸಪ್ಪೆ ಮೊರೆ ಹಾಕ್ಕೊಂಡು, ಕಾರ ಹತ್ತಕ್ಕತ್ತಿದ್ರು, ಅವ್ರನ್ನ ಎತ್ತಂಗ್ಡಿ ಮಾಡ್ಸಿದ್ರಂತ ಲಂಚ್ಮಂಚ್ಚಪ್ಪ್ನೋರು, ಛೇ ಎಂತ ಆಫೀಸರ್ರು.. ಲೊಚ್‌ಗುಟ್ಟಿದ್ರು ಅಲ್ಲಿದ್ದವ್ರು, ಪೀರ್ಯಾಗ ಗೊಣೇಶಿದು ಕಾಲ್ ಬಂತು.
ಹಲೋ..
ರೀ ನಿವಂತಲ್ರೀ ಲೆಟರ್ ಬರ್ದವ್ರು, ಅವ್ರಿಗೆ ಗೊತ್ತಾಗೈತಿ. ನಿಂಮ್ಗೋತ್ತ ಲಂಚಪ್ಪರ ಮಾವ ಎಮ್.ಎಲ್.ಎ. ಅದಾನ, ಕಮೀಷನರ್‌ನ ಎತ್ತಿದ್ರೂ, ಇನ್ನ ನಿನ್ನ ಕತಿ ಎನು..? ಒಂದು ಕೆಲ್ಸ ಮಾಡು, ಈ ಕಡಿ ಬರೋಕೊಬ್ಗ್ಯಾಡ. ಬಂದ ಸಿಕ್ರ ಮುಗಿತ್ನೋಡು ಅಂದು ಫೋನಿಟ್ಟ.
ಪೀರ್ಯಾಗ ನಿಂತ ನೆಲ ಕುಸದಂಗಾತು, ಏನು ಕಾಣದ ಬ್ಲಾಂಕ್ ಆದ. ನೌಕ್ರಿ ಹೋದ್ರ, ಸಾಲ ಹೆಂಗ ಕಟ್ಟಾದು, ಭಾವ ನೌಕ್ರಿಲ್ದಿದ್ರ ವಲ್ಲಿ ಕೊಡಲ್ಲ, ವಲ್ಲಿ ಇಲ್ದ ಪೀರ್ಯಾ ಬದಕಾಕಕ್ಕತಿ..? ಎಲ್ಡು ಸೆಕೆಂಡ್ನಾಗ ತಲಿ ಗಿರ್ ಅನ್ನಂಗ ಚಿಂತಿ ಮತ್ತ ಅಂಜ್ಕಿ ಬಂತಂವ್ಗ. ತನ್ನ ಜೀವ್ನದ ಎದ್ರೂ ತನ್ನ ಮನಸಾಕ್ಷಿ ನಗಕತ್ತಿತ್ತು. ಮುಂದ ಹೋಗದೋ ಬ್ಯಾಡೋ ಅನ್ನೋ ದಿಗಿಲ್ಗೇ ಬಿದ್ದವನಾದ ಪೀರ್ಯಾ, ಗೇಟು ಮುಂದಿದ್ದ ಸರ್ಕಾರಿ ಕೇಲ್ಸ ದೇವ್ರ ಕೇಲ್ಸ ಅನ್ನೋ ಬೋರ್ಡ ಒದಾಕತ್ತ.
ಶಿವಕುಮಾರ ಚನ್ನಪ್ಪನವರ ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಹೀಲದಹಳ್ಳಿಯವರು.
‘ಒಂದು ಭ್ರೂಣದ ಕನಸು’ (ಕವಿತಾ ಸಂಕಲನ) ‘ಮುಖವಾಡದ ಮಾಫಿಯಾದಲ್ಲಿ’ (ಕಥಾ ಸಂಕಲನ) ಹಲವು ಪತ್ರಿಕೆಗಳಲ್ಲಿ ಇವರ ಕಥೆ, ಕವಿತೆಗಳು ಪ್ರಕಟವಾಗಿವೆ ಮತ್ತು ಇವರ ಕತೆಗಳಿಗೆ ಹಲವು ಬಹುಮಾನಗಳು ಸಂದಿವೆ
Supar