ಸಾವೇ ಹಾಗೆ ಅದು ಉಂಟು ಮಾಡು ಪರಿಣಾಮವೂ ತೀವ್ರತರವಾದದ್ದು. ಹತ್ತಿರದವರ ಸಾವು ನಮ್ಮ ಬದುಕನ್ನು ಪಲ್ಲಟಗೊಳಿಸುವ ರೀತಿ ಎಂಥವರನ್ನೇ ಆಗಲಿ ಮಾನಸಿಕವಾಗಿ ಕುಗ್ಗಿಸಿಬಿಡುತ್ತದೆ. ಅದು ಸಹಜವಾದ ಸಾವಾದರೆ ಅದನ್ನು ಸಹಜವಾಗಿಯೇ ಸ್ವೀಕರಿಸಲು ಪ್ರಯತ್ನಿಸಬಹುದು. ಆದರೆ ಅದು ಕೊಲೆಯೋ, ಆತ್ಮಹತ್ಯೆಯೋ ಆಗಿದ್ದರೆ, ನಿಜಕ್ಕೂ ಅದನ್ನು ಮನಸ್ಸು ಒಪ್ಪಲು, ನಂಬಲು ಸಿದ್ಧವಿರುವುದೇ ಇಲ್ಲ. ಕೆಲವೊಂದಿಷ್ಟು ಆತ್ಮಹತ್ಯೆಗಳಂತೂ ಯಾವ ಕಾಲಕ್ಕೂ ಒಂದು ನಿಗೂಢ, ಬಗೆ ಹರಿಯದ ಪ್ರಶ್ನೆಗಳಾಗಿಯೇ ಉಳಿದುಬಿಟ್ಟಿರುತ್ತವೆ.
ಅಕಾಲಿಕ ಸಮಯದಲ್ಲಿ ಸಾವಿನ ಬಾಗಿಲು ತಟ್ಟಿದ ಹಲವು ಲೇಖಕಿಯರ ಕುರಿತು ಆಶಾ ಜಗದೀಶ್‌ ಬರಹ ನಿಮ್ಮ ಓದಿಗೆ

‘ಯಾರಿಗೆ ಯಾರುಂಟು
ಎರವಿನ ಸಂಸಾರ
ನೀರ ಮೇಲಣ ಗುಳ್ಳೆ
ದಿಟವಲ್ಲ ಹರಿಯೇ’
-ಕನಕದಾಸರು

ಸಾವು ಅತ್ಯಂತ ನಿಗೂಢ. ಸಾವಿನ ನಂತರದ ಬದುಕನ್ನು ಕಂಡವರು ಯಾರು?! ಕಂಡಿದ್ದಾರೆ ಅಂತಲೇ ಇಟ್ಟುಕೊಳ್ಳೋಣ, ಆದರೆ ಕಂಡು ಮರಳಿ ಬಂದು ಹೇಳಿದವರಾರು!? ಸಾವು ಮತ್ತು ಬದುಕಿನ ನಡುವೆ ಯಾವ ಸೇತುವೆಯೂ ಇಲ್ಲ. ಮತ್ತೆ ಹುಟ್ಟಿದ ಯಾರೇ ಆಗಲಿ ಒಂದಲ್ಲ ಒಂದು ದಿನ ಸಾಯಲೇ ಬೇಕು. ತನ್ನ ಮಗುವಿನ ಸಾವನ್ನ ಅರಗಿಸಿಕೊಳ್ಳಲು ಸಾಧ್ಯವಾಗದ ಕಿಸಾಗೋತಮಿಗೆ ಬುದ್ಧ ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿ ಸಾವೆಂಬ ಸಾವಿನ ಅಂತಿಮ ಸತ್ಯವನ್ನು ಮನವರಿಕೆ ಮಾಡಿ ಕೊಟ್ಟದ್ದು ಮನೋಜ್ಞ. ಬರೀ ಮನುಷ್ಯ ಮಾತ್ರ ಅಲ್ಲ ಪ್ರಾಣಿಗಳೂ ಸಹ ತಮ್ಮ ಹತ್ತಿರದವರನ್ನು ಕಳೆದುಕೊಂಡಾಗ ನೋಯುತ್ತವೆ, ಪರಿತಪಿಸುತ್ತವೆ, ಅಳುತ್ತವೆ ಮತ್ತು ಆ ಸಾವನ್ನು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತವೆ.

ಒಮ್ಮೆ ನಮ್ಮ ಮನೆಯ ಬಳಿ ಕೋತಿಯೊಂದು ತನ್ನ ಪುಟ್ಟ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಓಡಾಡುತ್ತಿತ್ತು. ಯಾಕೆ ಹೀಗೆ ಎಂದು ಅನುಮಾನವಾಯಿತು. ಸಾಮಾನ್ಯವಾಗಿ ಕೋತಿಗಳು ತಮ್ಮ ಮರಿಗಳನ್ನು ಅವಚಿಕೊಂಡು ಓಡಾಡುತ್ತವೆ. ಅಂಥದ್ದರಲ್ಲಿ ಇದ್ಯಾಕೆ ಹೀಗೆ… ಎಂದು. ಹೊರ ಬಂದು ನೋಡಿದೆ. ಅದರ ಬಾಯಲ್ಲಿ ಕಚ್ಚಿಕೊಂಡಿದ್ದ ಮರಿಗೆ ಜೀವವಿರಲಿಲ್ಲ. ಇದನ್ನು ಕಂಡ ಕೆಲವರು ಆ ಮರಿಯನ್ನು ಅದರ ಬಾಯಿಂದ ಬಿಡಿಸಲು ಪ್ರಯತ್ನಿಸಿದರು. ಉಹ್ಞೂ ಅದು ಬಿಡಲೇ ಇಲ್ಲ. ಅಲ್ಲಿಂದ ಜಿಗಿದು ಮತ್ತೆಲ್ಲೋ ಹೊರಟೇ ಹೋಯಿತು. ಮರುದಿನ ಮತ್ತೆ ನಮ್ಮ ಮನೆಯ ಸುತ್ತ ಮುತ್ತ ಬಂತು. ಅದರ ಬಾಯಲ್ಲಿ ಅದರ ಸತ್ತ ಮರಿ ಈಗಲೂ ಇತ್ತು. ಅದರ ಕಣ್ಣಂಚು ಜಿನುಗುತ್ತಿತ್ತು. ಹೀಗೆ ನಾಲ್ಕೈದು ದಿನ ಕಳೆದರೂ ಅದು ಹಾಗೇ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡೇ ಓಡಾಡುತ್ತಿತ್ತು. ಆ ಮರಿಯಂತೂ ಒಣಗಿ ಎಲುಬಿನ ಹಂದರವಾಗಿತ್ತು. ಆದರೆ ಈ ತಾಯಿಗೆ ಅದಿನ್ನೆಂತಹ ಪ್ರೀತಿ, ಮಮತೆ, ವ್ಯಾಮೋಹವೋ… ತನ್ನ ಮಗುವನ್ನು ಕಳುಹಿಸಿಕೊಡಲು ಸುತರಾಂ ತಯಾರಿರಲಿಲ್ಲ. ಕೊನೆಗೂ ಅಕ್ಕ ಪಕ್ಕದವರು ಹೇಗೋ ಮಾಡಿ ಅದರಿಂದ ಅದರ ಮರಿಯನ್ನು ತಗೆದುಕೊಂಡು ಮಣ್ಣು ಮಾಡಿದ್ದರು. ಈ ಘಟನೆ ನನ್ನ ಮೇಲೆ ಬಹಳಾ ಪರಿಣಾಮ ಉಂಟು ಮಾಡಿತ್ತು. ನಾವು ನಮ್ಮ ಬಾಧವ್ಯಗಳ ಬಗ್ಗೆ ಅದೆಷ್ಟು ಕಾಳಜಿ ವಹಿಸ್ತೇವೆ. ಆದರೆ ಪ್ರಾಣಿಗಳ ಬಗ್ಗೆ ಅಷ್ಟೇ ಅಸಡ್ಡೆ ತೋರಿಸ್ತೇವೆ. ಹಾಗೆ ಮಾಡಬಾರದು, ಅವುಗಳ ಪ್ರೀತಿಗೂ ನಾವು ಬೇಲೆ ಕೊಡಬೇಕು ಅನಿಸಿತ್ತು.

ಸಾವೇ ಹಾಗೆ ಅದು ಉಂಟು ಮಾಡು ಪರಿಣಾಮವೂ ತೀವ್ರತರವಾದದ್ದು. ಹತ್ತಿರದವರ ಸಾವು ನಮ್ಮ ಬದುಕನ್ನು ಪಲ್ಲಟಗೊಳಿಸುವ ರೀತಿ ಎಂಥವರನ್ನೇ ಆಗಲಿ ಮಾನಸಿಕವಾಗಿ ಕುಗ್ಗಿಸಿಬಿಡುತ್ತದೆ. ಅದು ಸಹಜವಾದ ಸಾವಾದರೆ ಅದನ್ನು ಸಹಜವಾಗಿಯೇ ಸ್ವೀಕರಿಸಲು ಪ್ರಯತ್ನಿಸಬಹುದು. ಆದರೆ ಅದು ಕೊಲೆಯೋ, ಆತ್ಮಹತ್ಯೆಯೋ ಆಗಿದ್ದರೆ, ನಿಜಕ್ಕೂ ಅದನ್ನು ಮನಸ್ಸು ಒಪ್ಪಲು, ನಂಬಲು ಸಿದ್ಧವಿರುವುದೇ ಇಲ್ಲ. ಕೆಲವೊಂದಿಷ್ಟು ಆತ್ಮಹತ್ಯೆಗಳಂತೂ ಯಾವ ಕಾಲಕ್ಕೂ ಒಂದು ನಿಗೂಢ, ಬಗೆ ಹರಿಯದ ಪ್ರಶ್ನೆಗಳಾಗಿಯೇ ಉಳಿದುಬಿಟ್ಟಿರುತ್ತವೆ.

(ರಾಜಲಕ್ಷ್ಮಿ)

ಅಂತಹುದೇ ಒಂದು ಸಾವು ಕೇರಳದ ಪ್ರತಿಭಾವಂತ ಕತೆಗಾರ್ತಿಯಾಗಿದ್ದ ರಾಜಲಕ್ಷ್ಮಿಯವರದ್ದು. ಆ ಕಾಲಕ್ಕೆ ಓದಿ ಅಧ್ಯಾಪಿಕೆಯಾಗಿದ್ದ, ಇರುವಷ್ಟು ಕಾಲವೂ ದಿಟ್ಟವಾಗಿ ಬರೆಯುತ್ತಾ ಬದುಕಿದ ಹೆಣ್ಣುಮಗಳೊಬ್ಬಳು ಎಲ್ಲರ ನಂಬಿಕೆಯನ್ನೂ ಹುಸಿಗೊಳಿಸುವಂತೆ ಮರಣಿಸಿದ್ದು ಯಾರಿಗಾದರೂ ನಂಬಲಸಾಧ್ಯ. ರಾಜಲಕ್ಷ್ಮಿಯವರು “ಆತ್ಮಹತ್ಯೆ” ಎನ್ನುವ ಕತೆ ಬರೆದವರು, ಅದರೊಳಗೆ ಆತ್ಮಹತ್ಯೆ ಮಾಡಿಕೊಳ್ಳುವ ಕ್ರಿಯೆಯನ್ನು ವಿರೋಧಿಸಿದವರು, ಅದು ಹೇಗೆ, ತಾವೇ ಅದನ್ನು ತಮ್ಮ ಬದುಕಿಗೆ ಬರಮಾಡಿಕೊಂಡರು ಎಂಬುದೇ ಅರ್ಥವಾಗದ ನಿಗೂಢ. ಕೆಲವು ವಿಮರ್ಶಕರು ಅವರನ್ನು ಸ್ವಯಂ ಕೇಂದ್ರಿತ ವ್ಯಕ್ತಿ ಎಂದೆಲ್ಲಾ ಕರೆದಾಗಲೂ ಅವರದನ್ನು ತಲೆಗೆ ಹಾಕಿಕೊಂಡವರಲ್ಲ. ತಮ್ಮ ಸಂಬಂಧಿಕರು ತಮ್ಮನ್ನು ಅವರ ಕತೆಗಳಲ್ಲಿ ಚಿತ್ರಿಸಿ ಅವಮಾನಿಸಿದ್ದಾರೆ ಎಂದು ಆರೋಪ ಹೊರಿಸಿದಾಗಲೂ ಅವರು ಹೆದರಿದವರಲ್ಲ. ಆದರೆ ಕಾಲೇಜಿನಲ್ಲಿ ತಮ್ಮ ಮೇಲೆ ಬಂದ ಸಣ್ಣ ಆರೋಪವೊಂದನ್ನು ಬಹುವಾಗಿ ಹಚ್ಚಿಕೊಂಡ ಅವರು ಕೊನೆಗೆ ತುಳಿದದ್ದು ಸಾವಿನ ಹಾದಿ. 1956 ರಲ್ಲಿ ಬರೆದ “ಮಗಳ್” ಎಂಬ ನೀಳ್ಗತೆಯಿಂದ ಪ್ರಸಿದ್ಧವಾಗಿದ್ದ ರಾಜಲಕ್ಷ್ಮಿಯವರು, “ಆತ್ಮಹತ್ಯೆ”, “ಟೀಚರನ್ ಕನಸು” ಎಂಬೆಲ್ಲಾ ಸೂಕ್ಷ್ಮ ಸ್ತ್ರೀ ಸಂವೇದನೆಯುಳ್ಳ ಕತೆಗಳನ್ನೂ ಬರೆದವರು. ಅವರ ಮರಣದಿಂದಾಗಿ ಸಾಹಿತ್ಯಲೋಕ ಒಬ್ಬ ಸಶಕ್ತ, ಸ್ತ್ರೀಪರ ಲೇಖಕಿಯನ್ನು ಕಳೆದುಕೊಂಡಿತು.

(ವರ್ಜೀನಿಯಾ ವುಲ್ಫ್)

ಇದೇ ರೀತಿ ಅಕಾಲಿಕವಾಗಿ ಭೂಮಿಯನ್ನು ತೊರೆದು ನಕ್ಷತ್ರವಾದ ಮತ್ತೊಬ್ಬ ಲೇಖಕಿ ವರ್ಜೀನಿಯಾ ವುಲ್ಫ್. ಆಕೆ ಹುಟ್ಟಿದ್ದು 1882ರಲ್ಲಿ ಮತ್ತು ಮರಣ ಹೊಂದಿದ್ದು 1941ರಲ್ಲಿ. ಪ್ರಸಿದ್ಧ ಬರಹಗಾರ ಮತ್ತು ವಿಮರ್ಶಕ ಲೆಸ್ಲಿ ಸ್ಟೀಫನ್‌ರ ಮಗಳಾಗಿದ್ದ ವರ್ಜೀನಿಯಾ ಉಲ್ಫ್, ಬರಹಗಾರನೇ ಆಗಿದ್ದ ಲಿಯೋನಾರ್ಡ್ ಉಲ್ಫ್‌ನನ್ನು ಮದುವೆಯಾಗಿದ್ದಳು. ಆದರೆ ಬಹು ಸೂಕ್ಷ್ಮ ಮನಸ್ಥಿತಿಯವಳಾಗಿದ್ದ ವರ್ಜೀನಿಯಾ, ಎರಡನೆಯ ಮಹಾಯುದ್ಧದ ಕಾಲದಲ್ಲಿ ಆತಂಕದಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು. “ಮಿಸಸ್ ಡ್ಯಾಲೊವೆ” ಇವಳ ಮೊದಲ ಪ್ರಮುಖ ಕಾದಂಬರಿ. “ಟು ದಿ ಲೈಟ್ ಹೌಸ್” ಸಹ ಈಕೆಯ ಪ್ರಸಿದ್ಧ ಕೃತಿ. ಈ ಎರೆಡೂ ಕಾದಂಬರಿಗಳೂ ಸಹ ಒಂಟಿತನ ಮತ್ತು ಪ್ರೇಮವನ್ನು ಕೇಂದ್ರವಾಗಿಟ್ಟುಕೊಂಡು ಅವುಗಳನ್ನು ವಿಶ್ಲೇಷಿಸುತ್ತವೆ. ಭೌತಿಕವಾಗಿ ಒಬ್ಬಂಟಿಯಾಗಿ ಇರುವುದು ಬೇರೆ, ಜನರ ನಡುವೆಯೇ ಇದ್ದೂ ಮಾನಸಿಕವಾಗಿ ಒಂಟಿಯಾಗುವುದು ಬೇರೆ. ಇದು ಈ ಕಾಬರಿಗಳಲ್ಲಿ ವಿಸ್ತೃತಗೊಳ್ಳುತ್ತಾ ಹೋಗುತ್ತದೆ. ‘ಕಾದಂಬರಿಕಾರನು ಬದುಕಿಗೆ ತನ್ನ ಮನಸ್ಸನ್ನು ತೆರೆದುಕೊಳ್ಳಬೇಕು, ಆದರೆ ನಿರ್ಲಿಪ್ತನಾಗಿರಬೇಕು. ಬದುಕಿನ ಸಂಕೀರ್ಣತೆಯನ್ನು ಪುನರ್ ಸೃಷ್ಟಿ ಮಾಡಬೇಕು’ ಎಂದು ವರ್ಜೀನಿಯಾ ಉಲ್ಫ್ ಅಭಿಪ್ರಾಯಪಡುತ್ತಾಳೆ. ಸ್ತ್ರೀ ಬರಹಗಾರರ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ವರ್ಜೀನಿಯಾ ಅವರ ಸಮಸ್ಯೆಗಳ ಬಗ್ಗೆ ವಿಶೇಷ ಗಮನ ನೀಡಿದಳು. ಮಹಿಳೆಯರ ದುರ್ಬಲತೆ ಮತ್ತು ಅದನ್ನು ಅವರು ಮೀರಬೇಕಿರುವ ಅಗತ್ಯತೆಯ ಬಗ್ಗೆ ಸದಾ ಕಾಳಜಿಯಿಂದ ಬರೆದ, ಮಾತನಾಡಿದ ಆಕೆ, ತನ್ನ ದುರ್ಬಲ ಘಳಿಗೆಗೆ ಬಲಿಯಾದದ್ದು ಮಾತ್ರ ಸಂಕಟದ ಸಂಗತಿ.

ಸಾವು ಮತ್ತು ಬದುಕಿನ ನಡುವೆ ಯಾವ ಸೇತುವೆಯೂ ಇಲ್ಲ. ಮತ್ತೆ ಹುಟ್ಟಿದ ಯಾರೇ ಆಗಲಿ ಒಂದಲ್ಲ ಒಂದು ದಿನ ಸಾಯಲೇ ಬೇಕು. ತನ್ನ ಮಗುವಿನ ಸಾವನ್ನ ಅರಗಿಸಿಕೊಳ್ಳಲು ಸಾಧ್ಯವಾಗದ ಕಿಸಾಗೋತಮಿಗೆ ಬುದ್ಧ ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿ ಸಾವೆಂಬ ಸಾವಿನ ಅಂತಿಮ ಸತ್ಯವನ್ನು ಮನವರಿಕೆ ಮಾಡಿ ಕೊಟ್ಟದ್ದು ಮನೋಜ್ಞ. ಬರೀ ಮನುಷ್ಯ ಮಾತ್ರ ಅಲ್ಲ ಪ್ರಾಣಿಗಳೂ ಸಹ ತಮ್ಮ ಹತ್ತಿರದವರನ್ನು ಕಳೆದುಕೊಂಡಾಗ ನೋಯುತ್ತವೆ, ಪರಿತಪಿಸುತ್ತವೆ, ಅಳುತ್ತವೆ ಮತ್ತು ಆ ಸಾವನ್ನು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತವೆ.

ದೀರ್ಘಕಾಲದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವರ್ಜೀನಿಯಾ ಹಲವು ಬಾರಿ ಸಾವಿನ ಮನೆಯ ಬಾಗಿಲು ತಟ್ಟಿದವಳು. ಕೊನೆಯ ಬಾರಿ ತನ್ನ ಗುರಿ ತಲುಪಲೇ ಬೇಕು ಎನ್ನುವವಳಂತೆ, ತನ್ನ ಕೋಟಿನ ಜೇಬುಗಳ ತುಂಬ ಭಾರವಾದ ಕಲ್ಲುಗಳನ್ನು ತುಂಬಿಕೊಂಡು ಹರಿಯುವ ನದಿಗೆ ಹಾರಿದ್ದಳು ಎಂದರೆ ಅವಳನ್ನು ಉಳಿಸಿಕೊಳ್ಳಲಾಗದ ಬದುಕಿನ ಬಗ್ಗೆ ವಿಷಾದವೆನಿಸುತ್ತದೆ. ಅವಳ ಮನಸಿನ ನೋವನ್ನು ಉಪಶಮನಗೊಳಿಸುವ ಒಂದೇ ಒಂದು ಔಷಧಿಯೂ ಈ ಆಧುನಿಕ ಜಗತ್ತಿನ ಬಳಿ ಇರಲಿಲ್ಲವೆನ್ನುವುದು ನೋವಿನ ಸಂಗತಿ.

(ಸಿಲ್ವಿಯಾ ಪ್ಲಾತ್)

ಇದೇ ಹಾದಿಯಲ್ಲಿ ದುರಂತ ಅಂತ್ಯ ಕಂಡ ಮತ್ತೊಬ್ಬ ಕವಯತ್ರಿ ಸಿಲ್ವಿಯಾ ಪ್ಲಾತ್. ಸಿಲ್ವಿಯಾ ಪ್ಲಾತ್ ಮತ್ತು ಟೆಡ್ ಹ್ಯೂಸ್ ದಂಪತಿಗಳು. ಇಬ್ಬರೂ ಕವಿಗಳು. ಸಿಲ್ವಿಯಾ ಸಣ್ಣ ವಯಸ್ಸಿನಲ್ಲೇ ಮಾನಸಿಕ ರೋಗಕ್ಕೆ ಬಲಿಯಾದವಳು ಮತ್ತು ಬದುಕಿದಷ್ಟು ದಿನವೂ ಹಿಂಸೆಯನ್ನು ಅನುಭವಿಸಿದವಳು. ತನ್ನ ಮನಸ್ಥಿತಿಯ ಕಾರಣದಿಂದಾಗಿಯೇ 1963 ರಲ್ಲಿ ಆತ್ನಹತ್ಯೆಯನ್ನೂ ಮಾಡಿಕೊಂಡುಬಿಟ್ಟಳು. ಅವಳ ಬಹುತೇಕ ಕವನಗಳು ಅವಳ ಮರಣಾನಂತರ ಪ್ರಕಟವಾದವು. ತನ್ನ ಬದುಕಿನ ಕೊನೆಯ ದಿನಗಳಲ್ಲಿ ಬರೆದ “ಡ್ಯಾಡಿ”, “ಲೇಡಿ ಲ್ಯಾಜರ್ಸ್” ಮತ್ತಿತರ ಕವಿತೆಗಳಲ್ಲಿ ಸಾವಿನ ಹಂಬಲವಿದೆ. ಆದರೆ “ಕ್ರಾಸಿಂಗ್ ದಿ ವಾಟರ್”, “ಪಿಂಟರ್ ಟ್ವೀಸ್” ಮತ್ತು ಮುಂತಾದ ಸಂಗ್ರಹಗಳ ಕವನಗಳಲ್ಲಿ ಬದುಕನ್ನು ಇಂದ್ರಿಯಗಳ ಮೂಲಕ ಗ್ರಹಿಸಿ ಗಾಢವಾಗಿ ಅನುಭವಿಸಿದ ಚೇತನವಿದೆ, ಸಮತೋಲನವಿದೆ ಮತ್ತು ಸಂಯಮವಿದೆ ಎಂದು ಅಭಿಪ್ರಾಯಪಡುತ್ತಾರೆ ಎಲ್.ಎಸ್.ಎಸ್. ರವರು ತಮ್ಮ ಇಂಗ್ಲೀಶ್ ಸಾಹಿತ್ಯ ಚರಿತ್ರೆ ಪುಸ್ತಕದಲ್ಲಿ. ಸಿಲ್ವಿಯ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದವಳು, ತನ್ನ ಕಾಲೇಜು ದಿನಗಳಲ್ಲಿಯೇ ಮಾನಸಿಕ ಖಿನ್ನತೆಗೆ ಒಳಗಾಗಿ ತನ್ನ ತಾಯಿಯ ನಿದ್ರೆ ಮಾತ್ರೆಗಳನ್ನು ಸೇವಿಸಿ ಸಾಯಲು ಪ್ರಯತ್ನಿಸುತ್ತಾಳೆ. ಅದೃಷ್ಟವಶಾತ್ ಅಂದು ಅವಳು ಉಳಿದುಕೊಳ್ಳುತ್ತಾಳೆ. ನಂತರ ತನ್ನ ಕಾಯಿಲೆಯನ್ನು ಮೆಟ್ಟಿ ನಿಲ್ಲುತ್ತಾಳೆ. ಆಗಲೇ ಆಕೆಗೆ ಪರಿಚಯವಾದವನು ಟೆಡ್ ಹ್ಯೂಸ್. ತಮ್ಮ ಪ್ರೇಮನಿವೇದನೆ ಮಾಡಿಕೊಳ್ಳಲು ಅವರು ಆಯ್ದುಕೊಂಡ ಹಾದಿ ಕವಿತೆ. ಇಬ್ಬರೂ ಒಬ್ಬರಿಗೊಬ್ಬರು ತೀವ್ರ ಪ್ರೇಮ ಕವನಗಳನ್ನು ಬರೆದುಕೊಳ್ಳುತ್ತಾರೆ. ಅದು ಅವರ ಪ್ರೇಮಕ್ಕಷ್ಟೇ ಅಲ್ಲದೆ ಸಾಹಿತ್ಯಕ್ಕಾದ ಲಾಭವೂ ಹೌದು.

ನಂತರ ಇಬ್ಬರೂ ಮದುವೆಯಾಗುತ್ತಾರೆ. ಎರೆಡು ಮುದ್ದಾದ ಮಕ್ಕಳು ಮನೆ ಮತ್ತು ಮಡಿಲನ್ನು ತುಂಬುತ್ತವೆ. ಅಕ್ಷರಶಃ ಸ್ವರ್ಗಕ್ಕೆ ಕಿಚ್ಚು ಹಚ್ಚುವುದಷ್ಟೇ ಬಾಕಿ ಎನ್ನುವಷ್ಟು ಸುಂದರವಾದ ಸಾರವಾಗಿತ್ತು ಅದು. ಆದರೆ ವಿಧಿಗೆ ಅದು ಇಷ್ಟವಿರಲಿಲ್ಲ. ಸಿಲ್ವಿಯಾಳ ಕಾಯಿಲೆ ಮರುಕಳಿಸಿತು. ಆಕೆ ಮತ್ತೊಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿಬಿಟ್ಟಳು. ವಿಧಿ ಈ ಬಾರಿ ಯಾವ ಅವಕಾಶವನ್ನೂ ಕೊಡದೆ ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿಯೇಬಿಟ್ಟ. ಅವಳ ಸಾವಿನ ಅಪವಾದ ಟೆಡ್ ಹ್ಯೂಸನ ಮೇಲೆಯೂ ಬಂತು. ಹೆಂಡತಿಯನ್ನು ಅತೀವವಾಗಿ ಪ್ರೀತಿಸುತ್ತಿದ್ದ ಟೆಡ್ ಅಪವಾದಗಳಿಗೆ ಕಿವುಡಾದ. ಮುಂದೆ ಅವಳ ಕವಿತೆಗಳ ಪ್ರಕಾಶಕನಾದ. ಅವು ಮರಣೋತ್ತರ ಪುಲಿಟ್ಜರ್ ಪ್ರಶಸ್ತಿಯನ್ನೂ ಪಡೆದುಕೊಂಡವು. ಆದರೆ ಸಿಲ್ವಿಯಾ ಮಾತ್ರ ಸಣ್ಣ ನೋವಾಗಿ ಎಲ್ಲರ ಮನಸಲ್ಲಿ ಈಗಲೂ ಬದುಕಿದ್ದಾಳೆ.

(ಎಮಿಲಿ ಡಿಕಿನ್ಸನ್)

I heard a fly buzz- when I died
The stillness in the room
Was like the stillness in the air
Between the heavens of storm
-Emily Dickinson

ಹೀಗೆ ಗಾಢವಾಗಿ ಆವರಿಸಿಕೊಂಡ ಸಾವಿನ ಚಾದರದೊಳಗಿಂದ ಸಾವಿನ ವಾಸನೆ ಹೊತ್ತ ಕವಿತೆಗಳನ್ನು ಬರೆದವಳು ಎಮಿಲಿ ಡಿಕಿನ್ಸನ್. ಅವಳ Because I could not stop for death ಕವಿತೆಯೇ ಅದಕ್ಕೆ ಸಾಕ್ಷಿ. ತೀವ್ರ ಕಿಡ್ನಿ ಸಮಸ್ಯೆಗೆ ಒಳಗಾಗಿದ್ದ ಆಕೆ ಅದರೊಂದಿಗೆ ಸೆಣಸಿದಳಾದರೂ ಗೆದ್ದು ಬರುವುದು ಸಾಧ್ಯವಾಗದೆ ಸಾವಿನ ಮುಂದೆ ಸೋತು ಮಂಡಿಯೂರಿದಳು. ಆದರೂ ಅವಳ ಕವಿತೆಗಳು ಇಂದಿಗೂ ಸಾವಿನ ಮುಂದೆ ವಿಜಯ ಪತಾಕೆ ಹಾರಿಸುತ್ತಲೇ ಇವೆ. ಮತ್ತು ಹಾರಿಸುತ್ತಲೇ ಇರುತ್ತವೆ.

ಎಷ್ಟೇ ಆದರೂ ಅದು ಸಾವಿನ ಮಿತಿ. ಬದುಕಿನ ಸಾಧ್ಯತೆಯ ಮುಂದೆ ಅದೊಂದು ಸಣ್ಣ ಕಪ್ಪು ಚುಕ್ಕೆ ಮಾತ್ರ…