ಗೋವಿನ ಹಾಡು ಕೇಳದ ಕನ್ನಡದ ಕಿವಿಗಳು ವಿರಳ, ಆದರೆ ನಾವು ಕೇಳಿದ್ದು ಗೋವಿನ ಹಾಡಿನ ಆಯ್ದ ನುಡಿಗಳು. ಹಾಗಿದ್ದರೆ ಸಂಪೂರ್ಣ ಗೋವಿನ ಹಾಡು ಎಷ್ಟು ದೊಡ್ಡದಿರಬಹುದು? ನನಗೆ ಸಿಕ್ಕಿದ್ದು114 ನುಡಿಗಳು.
ನನ್ನ ಸ್ನೇಹಿತ ಸತೀಶ್ ಒಂದು ಪುಸ್ತಕ ಕಳಿಸಿ ಇದನ್ನ ಹಾಡಿಕೊಡ್ತೀಯ ಅಂತ ಕೇಳುವ ತನಕ ಗೋವಿನ ಹಾಡು ಇಷ್ಟು ವಿವರವಾಗಿರಬಹುದು ಎಂಬುದು ನನ್ನ ಊಹೆಗೂ ನಿಲುಕದ ಸಂಗತಿಯಾಗಿತ್ತು.
ರಾತ್ರಿ ಅಂಗಳದಲ್ಲಿ ಚಾಪೆ ಹಾಸಿಕೊಂಡು ನನ್ನನು ತಂಗಿಯನ್ನು ತನ್ನ ತೋಳ ದಿಂಬಿನ ಮೇಲೆ ಮಲಗಿಸಿಕೊಂಡು ಪಪ್ಪಾ ನಮಗೆ ಗೋವಿನ ಕಥೆಯನ್ನು ಹೇಳಿದ್ದು ಅದೆಷ್ಟು ಬಾರಿಯೋ! ಚಿಕ್ಕೆ ತಾರೆಗಳಿಂದ ತುಂಬಿದ್ದ ಆಕಾಶ ದಟ್ಟ ಅರಣ್ಯವಾಗಿ ಬಾನೇ ಬೆಳ್ಳಿತೆರೆಯಾಗಿ ಅಲ್ಲೇ ಎಲ್ಲ ಚಿತ್ತಾರಗಳು ಮೂಡಿದಂತೆ ಅನಿಸುತ್ತಿತ್ತು. ಪ್ರತಿಸಲ ಈ ಕಥೆ ಕೇಳುವಾಗ, ಕರುವನ್ನು ಬಿಟ್ಟು ಹೋಗುವ ಪುಣ್ಯಕೋಟಿಯನ್ನು ನೆನೆದು ಬಿಕ್ಕಿ ಅಳುವುದು, “ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು” ಎಂದು ಭಾವುಕರಾಗಿ ಪದೇ ಪದೇ ಹೇಳಿಕೊಳ್ಳುವ ಪರಿಪಾಠವೂ ಇತ್ತು. ಇದು ನನ್ನೊಬ್ಬಳ ಕಥೆಯಲ್ಲ ಕನ್ನಡದ ಪ್ರತಿ ಮಗುವೂ ಗೋವಿನ ಹಾಡಿನ ಗಂಧದಲ್ಲಿ ಮಿಂದೆದ್ದು ಬಂದಿದೆ.
ಅಂತಹ ಗೋವಿನ ಹಾಡಿನ 114 ನುಡಿಗಳನ್ನ ಸರಳವಾಗಿ ಹಾಡಿದ್ದೇನೆ, ಇದಕ್ಕೆ ಒಪ್ಪುವಂಥ ಹಿನ್ನೆಲೆ ಸಂಗೀತ ಅಳವಡಿಸಿ ಇದನ್ನು ಇನ್ನೂ ಚಂದ ಮಾಡಿದ್ದು ಪ್ರಣವ್ ಅಯ್ಯಂಗಾರ್ ಅವರು. ಸಂಕ್ರಾಂತಿಗೆ ಗೋವಿನ ಹಾಡನ್ನು ಕೇಳಬೇಕೆಂಬ ಒಂದು ಸುಂದರ ನಂಬಿಕೆ ಇದೆ. ಗೋವಿನ ಹಾಡನ್ನ ಕೇಳಲು ಯಾವ ದಿನ ಆದರೇನು? ನೀವೆಲ್ಲರೂ ಗೋವಿನ ಹಾಡನ್ನು ಕೇಳಿ ಖುಷಿ ಪಟ್ಟರೆ ಅದಕ್ಕಿಂತ ಖುಷಿ ಮತ್ತು ಸಾರ್ಥಕತೆ ಇನ್ನೇನಿದೆ?
ಅಮಿತಾ ರವಿಕಿರಣ್ ಮೂಲತಃ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನವರು. ಪ್ರಸ್ತುತ ಉತ್ತರ ಐರ್ಲೆಂಡ್‌ನ ರಾಜಧಾನಿ ಬೆಲ್ಫಾಸ್ಟ್‌ನಲ್ಲಿ ವಾಸಿಸುತ್ತಿದ್ದಾರೆ. ಗಾಯಕಿಯಾಗಿರುವ ಅಮಿತಾ ಅವರಿಗೆ ಜನಪದ, ಭಾವಗೀತೆ, ತತ್ವಪದಗಳನ್ನು ಹಾಡುವುದು ಖುಷಿ ಎನ್ನುತ್ತಾರೆ. ಫೋಟೋಗ್ರಫಿ, ಬರವಣಿಗೆ ಇವರ ಮೆಚ್ಚಿನ ಹವ್ಯಾಸಗಳು.