ಕಾಣೆಯಾಗಿದ್ದ ಟಿಬೆಟನ್ ಕ್ಯಾಂಪಿನ ಮೂವರು ಹಸುಳೆಗಳು ಇದೇ ಬಿಡಾರದ ಬಾಗಿಲು ತಟ್ಟಿ ಆಹಾರ ಕೋರಿದ್ದರು. ಕುಡಿದು ಬಿದ್ದಿದ್ದ ಈ ಆಸಾಮಿ ಕಣ್ಣೇ ಬಿಟ್ಟಿರಲಿಲ್ಲ. ಆತ ಕಣ್ಣು ಬಿಟ್ಟಾಗ ಆತನ ಮಡದಿ ಅದಾಗಲೇ ಲಾಮಾ ಮಕ್ಕಳ ಬಟ್ಟೆ ಬದಲಾಯಿಸಿ, ಬಿಸಿ ನೀರಲ್ಲಿ ಸ್ನಾನ ಮಾಡಿಸಿ, ಹೊಟ್ಟೆಗೆ ತಿನ್ನಲು ಕೊಟ್ಟು, ಅವರ ಕಾಷಾಯ ವಸ್ತ್ರಗಳನ್ನು ಒಗೆದು ಬಿಸಿಲಿಗೆ ಒಣಗಲು ಹಾಕಿ, ಅವರಿಗೆ ಕಂಬಳಿ ಹೊದೆಸಿ ಬೆಚ್ಚಗೆ ಮಲಗಿಸಿ ಅವರನ್ನು ಕಾದು ಕುಳಿತಿದ್ದಳು. ಅವನು ಎಚ್ಚರಾಗಿ ನೋಡಿದರೆ ಕಂಬಳಿ ಒಳಗೆ ಲಾಮಾ ಮಕ್ಕಳು ನಿದ್ದೆ ಹೋಗಿದ್ದರು. ಅವನ ಬೆಳಗಿನ ಆಹಾರವನ್ನೂ ಅವರೇ ತಿಂದಿದ್ದರು.
ಅಬ್ದುಲ್ ರಶೀದ್ ಬರೆದ ಕಥೆ “ಅಂತಾರಾಷ್ಟ್ರೀಯ ಕುಂಬಳಕಾಯಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ನಮಸ್ಕಾರ. ನನ್ನ ಹೆಸರು ರಾಬಿನ್ ಡಿಸಿಲ್ವಾ.
ಆದರೆ ಈ ದರಿದ್ರ ಊರಿನ ಎಲ್ಲರೂ ನನ್ನನ್ನು ತಮ್ಮ ಮನೆಯ ಕಂತ್ರಿ ನಾಯಿಯನ್ನು ಕರೆಯುವ ಹಾಗೆ ರಾಬಿ ರಾಬಿ ಎಂದೇ ಕರೆಯುತ್ತಾರೆ.
ನನಗೆ ಈ ಹೆಸರು ಇಟ್ಟಿದ್ದಕ್ಕಾಗಿ ನಾನು ನನ್ನ ತಂದೆಯವರಾದ ಆಂಟನಿ ಡಿಸಿಲ್ವಾ ಅವರನ್ನು ಈವತ್ತಿಗೂ ದ್ವೇಷಿಸುತ್ತೇನೆ. ‘ಡಿಸಿಲ್ವಾ’ ಎಂಬುದು ನಮ್ಮ ಕುಟುಂಬದ ಹೆಸರು. ಈ ಹೆಸರಿನ ಮೂಲ ಪೋರ್ತುಗೀಸರದಂತೆ. ಈ ಪೋರ್ತುಗೀಸ್ ಮೂಲ ನಮ್ಮ ಕುಟುಂಬಕ್ಕೆ ಶನಿಯಂತೆ ಯಾಕೆ ವಕ್ಕರಿಸಿಕೊಂಡಿತೋ ನನಗೆ ಗೊತ್ತಿಲ್ಲ. ನನ್ನ ಅಜ್ಜ ಮೋಂತು ಡಿಸಿಲ್ವಾ ಅನ್ನುವವರು ಈ ಹಾಳು ಬಿದ್ದ ಊರಿನ ಹಳೆಯ ಇಗರ್ಜಿಯಲ್ಲಿ ಪಾದ್ರಿಗಳಿಗೆ ಅಡಿಗೆ ಮಾಡಿಡುವುದು, ಶಿಲುಬೆಯ ಕಮಾನಿನ ಕೆಳಗೆ ಕಟ್ಟಿರುವ ಗಂಟೆಯನ್ನು ಎಳೆಯುವುದು ಇತ್ಯಾದಿ ದೇವನಿಗೆ ಪ್ರಿಯವಾದ ಕೆಲಸಗಳನ್ನು ಮಾಡುತ್ತಿದ್ದವರು ಒಂದು ಸಲ ಮಧ್ಯಾಹ್ನದ ಗಂಟೆ ಬಾರಿಸುತ್ತಿರುವಾಗಲೇ ಎದೆ ನೋವು ಬಂದು ಸತ್ತೇ ಹೋದರು. ಅಂದಿನಿಂದ ನಾಸ್ತಿಕನಾದ ಅವರ ಮಗ ಅಂದರೆ ನನ್ನ ತೀರ್ಥರೂಪರಾದ ಆಂಟನಿ ಡಿಸಿಲ್ವಾ ಈ ಊರಿನ ಕೊನೆಯಲ್ಲಿ ರಾಜ್ಯ ಹೆದ್ದಾರಿಗೆ ತಾಗುವ ಹಾಗೆ ಒಂದು ಫೋಟೋ ಸ್ಟುಡಿಯೋ ಇಟ್ಟುಕೊಂಡು ನನ್ನನ್ನೂ ನನ್ನ ಮಾತೆಯವರಾದ ಉಣ್ಣಿಯಮ್ಮನನ್ನೂ ಸಾಕಿದ್ದರು. ಅವರಿಬ್ಬರೂ ತೀರಿಹೋದ ಆಸುಪಾಸಿನಲ್ಲೇ ರಾಜ್ಯ ಹೆದ್ದಾರಿಯೂ ವಿಸ್ತರಣೆಗೊಂಡು ಆ ಸ್ಟುಡಿಯೋವೂ ಹೆಚ್ಚುಕಡಿಮೆ ನಾಮಾವಶೇಷವಾಗಿ ಹೋಗಿ ಅದರ ಒಂದು ಮೂಲೆಯಲ್ಲಿ ಇದ್ದ ಡಾರ್ಕ್ ರೂಂ ಕೋಣೆ ಮಾತ್ರ ನನ್ನ ಪಾಲಿಗೆ ಬಂದಿತ್ತು. ಅದೇ ಈಗಿರುವ ‘ಸ್ಟುಡಿಯೋ ರಾಬಿನ್’. ಆದರೆ ಈ ಊರಿನ ಎಲ್ಲರೂ ಅದನ್ನು ಕರೆಯುವುದು ಪೋಲೀಸ್ ಸ್ಟುಡಿಯೋ ಎಂದು. ಅದಕ್ಕೆ ಒಂದು ಕಾರಣ ಈ ಸ್ಟುಡಿಯೋ ಈ ಊರಿನ ಪೋಲೀಸ್ ಠಾಣೆಗೆ ಹೋಗುವ ದಾರಿಯ ಬದಿಯಲ್ಲಿರುವುದು. ಇನ್ನೊಂದು ಕಾರಣ ಈ ಪೊಲೀಸ್ ಠಾಣೆಯ ನಾನಾ ಪ್ರಕರಣಗಳಿಗೆ ಬೇಕಾಗುವ ಛಾಯಾಚಿತ್ರಗಳನ್ನು ತೆಗೆಯುವ ಫೋಟೋಗ್ರಾಫರನು ನಾನೇ ಆಗಿರುವುದು.
ಪೇಟೆಯ ಉಳಿದ ಎಲ್ಲಾ ಫೋಟೋಗ್ರಾಫರುಗಳು ಮದುವೆ, ಭೂತ ಕೋಲ, ಸೀಮಂತಗಳಲ್ಲಿ ಬ್ಯುಸಿಯಾಗಿರುವುದರಿಂದ ಪೋಲೀಸರಿಗೆ ಬೇಕಾದಾಗಲೆಲ್ಲ ಸಿಗುವುದು ಏನೂ ಕೆಲಸವಿಲ್ಲದ ನಾನು. ನನಗೂ ಈ ಪೊಲೀಸ್ ಕೇಸುಗಳ ಫೋಟೋಗ್ರಾಫರಾಗುವುದು ಇಷ್ಟ. ಇದರ ಒಂದು ಪ್ರಯೋಜನ ಎಂದರೆ ವೈರಿಗಳಿಂದ ಸಿಗುವ ಪೊಲೀಸ್ ರಕ್ಷಣೆ. ನನ್ನ ಹಲವು ಪ್ರೇಮ ಪ್ರಕರಣಗಳಿಂದಾಗಿ ನನಗೆ ಈ ರಕ್ಷಣೆಯ ಅಗತ್ಯ ಇತ್ತು. ಮತ್ತೊಂದು ಪ್ರಯೋಜನ ಎಂದರೆ ನನಗೆ ಬೇಕಾದ ಹಾಗೆ ಫೋಟೋಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ. ಕೊಲೆಗಾರರ ಮುಖಗಳು, ಶ್ರೀಗಂಧಚೋರರ ಮುಖಗಳು, ನೇಣು ಹಾಕಿಕೊಂಡವರ ಅಸಹಾಯಕ ಮುಖಗಳು, ಸಣ್ಣಪುಟ್ಟ ಅಪರಾಧಿಗಳ ತುಂಟಮುಖಗಳು, ಫ್ರೇಮಿನಲ್ಲಿ ನೇತು ಹಾಕಿರುವ ಕಾಣೆಯಾದವರ ಫೋಟೋಗಳನ್ನು ತೆಗೆಯುವಾಗ ಕಾಣಿಸುತ್ತಿದ್ದ ಚಹರೆಗಳು! ಎಲ್ಲವನ್ನೂ ನನ್ನ ಖುಷಿಯ ಹಾಗೆ ತೆಗೆದು, ಬೇಕಿದ್ದುದನ್ನು ಮಾತ್ರ ಪೊಲೀಸ್ ಠಾಣೆಗೆ ಕೊಟ್ಟರೆ ಸಾಕಿತ್ತು. ಮದುವೆ, ಸೀಮಂತ, ಭೂತಕೋಲ, ಹುಟ್ಟುಹಬ್ಬಗಳಲ್ಲಾದರೆ ಎಲ್ಲವೂ ಚಂದ ಕಾಣಬೇಕು. ಯಾರ ಉಬ್ಬುಹಲ್ಲೂ, ವಾರೆಗಣ್ಣೂ, ದಪ್ಪ ಹೊಟ್ಟೆಯೂ ಎದ್ದು ಕಾಣಿಸದ ಹಾಗೆ ಸಿನೆಮಾದಲ್ಲಿರುವ ಹಾಗೆ ಬರಬೇಕು. ಹಾಗೆ ತೆಗೆಯಲು ಬಾರದ ನನ್ನನ್ನು ಯಾರು ಕರೆಯುತ್ತಾರೆ. ಹಾಗಾಗಿ ನನಗೆ ಪೊಲೀಸ್ ಫೋಟೋಗ್ರಾಫರನ ಕೆಲಸವೇ ಲಾಯಖ್ಖಾಗಿ ಕಾಣಿಸುತ್ತಿತ್ತು, ಜೊತೆಗೆ ಆಧಾರು ಕಾರ್ಡು, ರೇಷನ್ನು ಕಾರ್ಡು, ಪಿಂಚಣಿ ಇತ್ಯಾದಿಗಳಿಗೆ ಫೋಟೋ ತೆಗೆಯುವ ಕೆಲಸವೂ ಇರುತ್ತಿತ್ತು. ಇದರಲ್ಲೆಲ್ಲ ಆದಾಯ ಕಮ್ಮಿ ಆದರೆ ಅನುಭವ ಜಾಸ್ತಿ. ಒಮ್ಮೊಮ್ಮೆ ನಾನು ಈ ಠಾಣೆಯ ಏಎಸ್ಸೈ ಮಾಲಿಂಗ ಭಟ್ಟರಲ್ಲಿ ಫೋಟೋ ತೆಗೆಯಲು ಹೋದ ಮನೆಗಳ ಕಥೆಗಳನ್ನು ಸ್ವಾರಸ್ಯಕರವಾಗಿ ವಿವರಿಸುತ್ತಿದ್ದೆ. ಆಗ ಅವರೂ ತಲೆದೂಗುತ್ತಿದ್ದರು.
‘ನೀನೊಬ್ಬ ಕಥೆಗಾರನಾಗಬೇಕಿತ್ತು ಮಾರಾಯಾ. ಹೋಗಿ ಹೋಗಿ ಪರ್ಕಟೆ ಫೋಟೋಗ್ರಾಫರನಾಗಿ ಹುಟ್ಟಿದ್ದೀಯಲ್ಲ. ಎಂತ ನರಜನ್ಮ ನಿನ್ನದು’ ಎಂದು ಬೈಯುತ್ತಿದ್ದರು.
ಮಾಲಿಂಗ ಭಟ್ಟರು ಪೊಲೀಸ್ ಇಲಾಖೆಯಲ್ಲಿದ್ದರೂ ಹೃದಯಾಂತರಾಳದಿಂದ ಅವರೊಬ್ಬ ಕವಿ ಮತ್ತು ಯಕ್ಷಗಾನದ ಭಾಗವತರೂ ಆಗಿದ್ದರು. ಅವರಿಗೆ ಯಾವುದು ಅಪರಾಧ ಮತ್ತು ಯಾವುದು ಮನುಷ್ಯ ಹೃದಯದ ದೌರ್ಬಲ್ಯಗಳು ಎಂದು ವಿಂಗಡಿಸಲು ಆಗದಿದ್ದುದ್ದಕ್ಕೋ ಏನೋ, ಅವರ ಠಾಣಾ ಸರಹದ್ದಿನ ಹಲವು ಮೊಕದ್ದಮೆಗಳು ಫೈಸಲಾಗದೆ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ ಎರಡು ಮೂರು ದಶಕಗಳನ್ನು ದಪೇದಾರರಾಗಿಯೇ ಕಳೆದಿದ್ದರು. ಈಗ ಪಾಯಸದಲ್ಲಿ ಒಣದ್ರಾಕ್ಷಿಯ ಜೊತೆ ಗೋಡಂಬಿಯೂ ಸಿಕ್ಕಿದ ಹಾಗೆ ಮೇಲಿಂದ ಮೇಲೆ ಎರಡು ಪದೋನ್ನತಿಗಳು ಪ್ರಾಪ್ತ ಆಗುತ್ತಿರುವ ಹೊತ್ತಿಗೆ ಸರಿಯಾಗಿ ಇದೊಂದು ಟಿಬೆಟನ್ ಲಾಮಾ ಮಕ್ಕಳ ಕಣ್ಮರೆಯ ಪ್ರಕರಣ ಎರಡಕ್ಕೆ ಕೂತ ನಾಯಿಯ ತಲೆಯ ಮೇಲೆ ತೆಂಗಿನಕಾಯಿ ಬಿದ್ದ ಹಾಗೆ ಅವರ ಸುಪರ್ದಿಗೆ ಬಿದ್ದು ಅವರು ಕಕ್ಕಾವಿಕ್ಕಿಯಾಗಿದ್ದರು.
ಇವತ್ತು ಪ್ರಕರಣ ಆಗಿದ್ದು ಇಷ್ಟೇ.
ನಮ್ಮ ಊರಿನ ಪೊಲೀಸ್ ಠಾಣೆಯ ಸರಹದ್ದಿಗೆ ಬರುವ ಟಿಬೆಟನ್ ಕ್ಯಾಂಪಿನ ಮೂವರು ಹಸುಳೆ ಲಾಮಾಗಳು ಕಾಣೆಯಾಗಿದ್ದರು. ಆನೆಕಾಡಿನಲ್ಲಿ ಒಂದು ಇರುಳು ಕಳೆದು ಮಾರನೆಯ ಬೆಳಗೆ ಕಾಡಿನ ಅಂಚಿನಲ್ಲಿರುವ ಬಿಡಾರವೊಂದರ ಬಾಗಿಲು ತಟ್ಟಿ ಉಣ್ಣಲು ಆಹಾರ ಕೇಳಿದ್ದರು. ಅವರ ದೇಹದ ಎಲ್ಲೆಡೆಗಳಿಂದ ರಕ್ತ ಹೀರಿದ ಜಿಗಣೆಗಳು ನೆಗೆದು ನೆಲಕ್ಕೆ ಬೀಳುತ್ತಿದ್ದವು. ಕಾಡಿನಲ್ಲಿ ಕಳೆದ ಅವರ ಕಾಷಾಯ ವಸ್ತ್ರಗಳು ನುಗ್ಗುಮುಳ್ಳುಗಳಿಗೂ, ಇಬ್ಬನಿಯ ದಾಳಿಗೂ ಸಿಲುಕಿ ಒದ್ದೆ ಮುದ್ದೆಯಾಗಿತ್ತು. ಭಾಷೆಯೂ ಗೊತ್ತಿಲ್ಲದೆ ಆಹಾರ ಹೇಗೆ ಕೇಳುವುದೆಂದು ಗೊತ್ತಾಗದೆ ಅವರು ಹಸಿವಲ್ಲಿ ನೆಲದಲ್ಲಿ ಉರುಳಾಡಿ ಆಶ್ರಯ ಕೋರಿದ್ದರು.
ಆ ಬಿಡಾರದ ಒಡತಿ ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆ ಹೋಗುವವಳು. ಒಡೆಯ ಮಹಾ ಕುಡುಕ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವನ ಕುಡಿತ ತಾಳಲಾರದೆ ಅವನನ್ನು ಒದ್ದು ಹೊರ ಹಾಕಿದ್ದರು. ಅವನು ಅತ್ತ ಸಂಬಳವೂ ಇಲ್ಲದೆ, ಇತ್ತ ಪಿಂಚಣಿಯೂ ಇಲ್ಲದೆ ತನ್ನ ಪ್ರತಾಪವನ್ನೆಲ್ಲ ಹೆಂಡತಿಯ ಮೇಲೆ ತೋರಿಸುತ್ತಿದ್ದ. ಆತನ ಮೇಲೆ ಕೌಟುಂಬಿಕ ಹಿಂಸೆಯ ಒಂದು ಪ್ರಕರಣ, ಗಂಧ ಕಳ್ಳಸಾಗಾಣಿಕೆಯ ಮೇಲೆ ಒಂದು ಪ್ರಕರಣ, ಕಾಡು ಹಂದಿ ಹತ್ಯೆಯ ಮೇಲೆ ಒಂದು ಪ್ರಕರಣ ಇದೇ ಠಾಣೆಯಲ್ಲಿ ದಾಖಲಾಗಿತ್ತು. ಆ ಮೂರೂ ಕೇಸುಗಳಲ್ಲಿ ಅಪರಾಧಿಯ ಭಾವಚಿತ್ರ ತೆಗೆಯುವ ಕೆಲಸವನ್ನು ನಾನೇ ಮಾಡಿದ್ದೆ.
ಕಾಣೆಯಾಗಿದ್ದ ಟಿಬೆಟನ್ ಕ್ಯಾಂಪಿನ ಮೂವರು ಹಸುಳೆಗಳು ಇದೇ ಬಿಡಾರದ ಬಾಗಿಲು ತಟ್ಟಿ ಆಹಾರ ಕೋರಿದ್ದರು. ಕುಡಿದು ಬಿದ್ದಿದ್ದ ಈ ಆಸಾಮಿ ಕಣ್ಣೇ ಬಿಟ್ಟಿರಲಿಲ್ಲ. ಆತ ಕಣ್ಣು ಬಿಟ್ಟಾಗ ಆತನ ಮಡದಿ ಅದಾಗಲೇ ಲಾಮಾ ಮಕ್ಕಳ ಬಟ್ಟೆ ಬದಲಾಯಿಸಿ, ಬಿಸಿ ನೀರಲ್ಲಿ ಸ್ನಾನ ಮಾಡಿಸಿ, ಹೊಟ್ಟೆಗೆ ತಿನ್ನಲು ಕೊಟ್ಟು, ಅವರ ಕಾಷಾಯ ವಸ್ತ್ರಗಳನ್ನು ಒಗೆದು ಬಿಸಿಲಿಗೆ ಒಣಗಲು ಹಾಕಿ, ಅವರಿಗೆ ಕಂಬಳಿ ಹೊದೆಸಿ ಬೆಚ್ಚಗೆ ಮಲಗಿಸಿ ಅವರನ್ನು ಕಾದು ಕುಳಿತಿದ್ದಳು. ಅವನು ಎಚ್ಚರಾಗಿ ನೋಡಿದರೆ ಕಂಬಳಿ ಒಳಗೆ ಲಾಮಾ ಮಕ್ಕಳು ನಿದ್ದೆ ಹೋಗಿದ್ದರು. ಅವನ ಬೆಳಗಿನ ಆಹಾರವನ್ನೂ ಅವರೇ ತಿಂದಿದ್ದರು. ಅವನು ಆ ಸಿಟ್ಟಲ್ಲಿ ತನ್ನ ಮಡದಿಯ ಮೇಲೆ ಮತ್ತೆ ದೌರ್ಜನ್ಯ ಶುರುಮಾಡಿದ್ದ. ನಿದ್ದೆ ಮಾಡುತ್ತಿದ್ದ ಮಕ್ಕಳನ್ನು ಎತ್ತಿ ಹೊರಹಾಕಲು ನೋಡಿದ್ದ. ಆಗ ಅವಳು ಆತನನ್ನು ಮನೆಯಿಂದ ಹೊರದಬ್ಬಿದ್ದಳು. ಆತ ಚರಂಡಿಯೊಳಗೆ ಬಿದ್ದು, ಮೈತುಂಬ ಕೆಸರು ಮಾಡಿಕೊಂಡು ತನ್ನ ಹೆಂಡತಿಯ ಮೇಲೆಯೇ ದೌರ್ಜನ್ಯದ ಕೇಸು ಹಾಕಲು ಕೆಸರು ಸಮೇತ ಪೊಲೀಸ್ ಠಾಣೆಗೆ ಬಂದಿದ್ದ.
ಆತ ಪೊಲೀಸ್ ಠಾಣೆಗೆ ಬಂದಾಗ ಏಎಸ್ಸೈ ಮಾಲಿಂಗಭಟ್ಟರು ತಲೆಯೆಲ್ಲಾ ತಾಳಮದ್ದಲೆ ಮಾಡಿಕೊಂಡು ಕುಳಿತಿದ್ದರು. ಟಿಬೆಟನ್ ಕ್ಯಾಂಪಿನ ಲಾಮಾ ಮಕ್ಕಳು ಕಾಣೆಯಾಗಿರುವ ಪ್ರಕರಣ ರಾಜ್ಯ ಮಟ್ಟಕ್ಕೆ ಹೋಗಿ, ಇದೀಗ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟಕ್ಕೂ ಹೋಗುವ ಎಲ್ಲ ಲಕ್ಷಣಗಳು ಅವರಿಗೆ ಗೋಚರಿಸಿತ್ತು. ಅದಾಗಲೇ ಟಿಬೆಟನ್ ಕ್ಯಾಂಪಿನ ಮುಖ್ಯ ಗುರುಗಳು ಭಾರತ ಟಿಬೆಟ್ ಸ್ನೇಹ ಬಳಗದ ರೊಟೇರಿಯನ್ ಮುತ್ತಪ್ಪನವರ ಜೊತೆ ಆಗಮಿಸಿ, ಈ ಪ್ರಕರಣದ ಕುರಿತು ತಾವು ದೂರು ನೀಡುವುದಿಲ್ಲ. ದೂರು ನೀಡಿದರೆ ವಿಷಯ ಕೈಮೀರಿ ತೊಂದರೆಯಾಗುವುದು. ನಾವು ದೂರು ಕೊಡದಿದ್ದರೂ ಮಕ್ಕಳನ್ನು ಹುಡುಕಿಕೊಡಿ. ನಮಗೂ ಒಳ್ಳೆಯದು, ನಿಮಗೂ ಒಳ್ಳೆಯದು ಎಂದು ಅರ್ಧ ಕೋರಿಕೆಯ ರೀತಿಯಲ್ಲೂ ಅರ್ಧ ಬೆದರಿಕೆಯ ರೀತಿಯಲ್ಲೂ ಹೇಳಿ ಹೋಗಿದ್ದರು.
ಅವರು ಹೋದ ಮೇಲೆ ಅಲ್ಲೇ ಉಳಿದುಕೊಂಡ ಮುತ್ತಪ್ಪನವರು, ‘ಭಟ್ರೇ, ಇದು ದೊಡ್ಡ ಅಂತಾರಾಷ್ಟ್ರೀಯ ಕುಂಬಳಕಾಯಿ ಆಗಬಹುದು. ಏಕೆಂದರೆ ಆ ಮಕ್ಕಳು ಭೂತಾನದಿಂದ ಬಂದವರು. ಇಲ್ಲಿನವರು ಅಲ್ಲಿಗೆ ಹೋಗಿ ಮಕ್ಕಳನ್ನು ಲಾಮಾ ಮಾಡುವುದಾಗಿ ಮಾತುಕೊಟ್ಟು ತೊಟ್ಟಿಲಿನಲ್ಲಿರುವ ಮಕ್ಕಳನ್ನೂ ಎತ್ತಿಕೊಂಡು ಬಂದಿದ್ದಾರೆ. ಮಕ್ಕಳ ಕಳ್ಳಸಾಗಾಣಿಕೆ ಅಂತಲೂ ಆಗಬಹುದು. ನೀವು ಯಾಕೆ ಇದರ ಮೇಲೆ ಕ್ರಮ ತೆಗೆದುಕೊಳ್ಳಲಿಲ್ಲ ಅಂತ ನಿಮ್ಮ ಮೇಲೂ ಬರಬಹುದು. ನಾನು ನಿಮ್ಮ ಗೆಳೆಯ ನಿಜ. ಆದರೆ ಭಾರತ ಟಿಬೆಟ್ ಸ್ನೇಹ ಬಳಗದ ಅಧ್ಯಕ್ಷನೂ ಹೌದು. ಹಾಗಾಗಿ ನನ್ನ ತಕ್ಕಡಿ ಅವರ ಕಡೆಗೇ ಜಾಸ್ತಿ ತೂಗುತ್ತದೆ. ಯಾರಿಗೂ ಗೊತ್ತಾಗದೆ ಇದನ್ನು ಫೈಸಲು ಮಾಡಿ ಭಟ್ರೇ’ ಎಂದು ಹೇಳಿ ತಾವೂ ಹೊರಟು ಹೋಗಿದ್ದರು.
ಇದನ್ನು ಕೇಳಿ ಏಎಸ್ಸೈ ಮಾಲಿಂಗಭಟ್ಟರ ತಲೆ ಕೆಟ್ಟುಹೋಗಿತ್ತು. ರೊಟೇರಿಯನ್ ಮುತ್ತಪ್ಪನವರು ಅವರಿಗೆ ಬಹಳ ಹತ್ತಿರದವರು. ಅವರಿಗೂ ಸಾಹಿತ್ಯ ಮತ್ತು ಯಕ್ಷಗಾನ ಇಷ್ಟ. ಅವರ ಕಾಫಿ ತೋಟದ ಪಂಪಿನ ಕೆರೆಯ ಅತ್ತಿ ಮರದ ಅಡಿಯಲ್ಲಿ ಬೆಳದಿಂಗಳ ಇರುಳುಗಳಲ್ಲಿ ಅವರಿಬ್ಬರೂ ಒಂದಿಷ್ಟು ಏರಿಸಿಕೊಂಡು ಕಾವ್ಯ ಗಾನ ಗೋಷ್ಠಿ ನಡೆಸುವುದುಂಟು. ಆಗ ಅವರಿಬ್ಬರೂ ತಮ್ಮ ಕಷ್ಟ ಸುಖ ಮಾತನಾಡುವುದುಂಟು. ಇಬ್ಬರಿಗೂ ಹೆಂಡತಿಯರದೇ ಸಮಸ್ಯೆ. ಇಬ್ಬರ ಹೆಂಡತಿಯರಿಗೂ ಸಾಹಿತ್ಯ, ಸಂಗೀತ, ಶೃಂಗಾರ ಇತ್ಯಾದಿ ಕಲೆಗಳಲ್ಲಿ ಒಂದಿಷ್ಟೂ ಆಸಕ್ತಿ ಇಲ್ಲ ಎನ್ನುವುದು ಕೊರಗು. ಹಾಗೆ ಕೊರಗಾದಾಗಲೆಲ್ಲ ಮಾಲಿಂಗ ಭಟ್ಟರು ‘ಚಿಕ್ಕಪ್ರಾಯದ ಬಾಲ ಚದುರೇ’ ಎಂದು ಹಾಡುತ್ತಿದ್ದರು. ಹಾಗೆ ಹಾಡಿದಾಗಲೆಲ್ಲ ಅವರಿಬ್ಬರಿಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶಹನಾಜಳ ನೆನಪಾಗುತ್ತಿತ್ತು.
ಅವಳ ನಗು, ಅವಳು ನಡೆಯುವಾಗ ಅವಳ ಮೈಯಿಂದ ಹರಿದು ಬರುತ್ತಿದ್ದ ಅತ್ತರಿನ ಸ್ವರ್ಗ. ಅವಳು ಮೈಯ ತುಂಬಾ ಸೀರೆ ಹೊದ್ದುಕೊಂಡು ನಡೆಯುತ್ತಿದ್ದರೂ ಕಣ್ಣಿಗೆ ಹೊಡೆಯುವಂತೆ ಕೋರೈಸುತ್ತಿದ್ದ ಅವಳ ಮೈಯ್ಯ ಓರೆಕೋರೆಗಳು, ಅವಳ ಮೂಗುತಿಯ ಹೊಳಪಲ್ಲೇ ತೂರಿ ಬರುತ್ತಿದ್ದ ಕಾಮ ಕಸ್ತೂರಿಯ ಕಿರಣಗಳು. ಏಎಸ್ಸೈ ಮಾಲಿಂಗಭಟ್ಟರು ಅತ್ತಿಯ ಮರದಡಿಯಲ್ಲಿ ಕೂತಲ್ಲೇ ಒಂದಲ್ಲ ಹತ್ತಲ್ಲ ನೂರಾರು ಸಾಲುಗಳನ್ನು ಪೋಣಿಸಿ ಯಕ್ಷಗಾನದ ಚಂಪೂ ಶೈಲಿಯಲ್ಲಿ ಹಾಡಿ ಬಿಡುತ್ತಿದ್ದರು. ‘ಭಟ್ರೇ ನಮ್ಮ ಈ ನರಜನ್ಮ ವ್ಯರ್ಥ. ಬನ್ನಿ ಹೋಗುವಾ’ ಎಂದು ಮುತ್ತಪ್ಪನವರು ಅವರ ಕೈಹಿಡಿದು ಮೇಲೆತ್ತಿ ಅವರಿಬ್ಬರೂ ಬೆಳದಿಂಗಳಲ್ಲಿ ಕಳೆದುಹೋದ ಬಾಲಕರಂತೆ ಕಾಫಿ ತೋಟದ ಆ ಕಾಲುದಾರಿಯಲ್ಲಿ ನಡೆದುಹೋಗುತ್ತಿದ್ದರು.
ಶಹನಾಜ್ ಬೇಗಂ ಅವರ ಕಣ್ಣ ಮುಂದೆಯೇ ಬೆಳೆದ ಹುಡುಗಿ. ಪಟ್ಟಣದ ಪಾದರಕ್ಷೆ ಅಂಗಡಿಯ ಅಬೂಬಕ್ಕರ್ ಸಾಹೇಬರ ಮಗಳು. ಮಂಗಳೂರಿನಲ್ಲಿ ವಕೀಲಿಕೆ ಕಲಿತು, ಮಹಿಳೆಯರ ಹಕ್ಕು, ಮಕ್ಕಳ ಹಕ್ಕು ಎಂದು ಓಡಾಡಿಕೊಂಡಿದ್ದವಳು ರಾಜಕೀಯ ಸೇರಿಕೊಂಡಿದ್ದಳು. ಒಂದು ದಿನ ಇದ್ದಕ್ಕಿದ್ದಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷಳಾಗಿ ಅವಳ ನೇಮಕವಾಗಿತ್ತು. ಅಂದಿನಿಂದ ಎಲ್ಲರ ಎದುರು ಅವಳ ಕುರಿತು ಕನಸು ಕಾಣುವುದನ್ನು ಇವರಿಬ್ಬರು ನಿಲ್ಲಿಸಿದ್ದರು.
ಟಿಬೇಟು ಕ್ಯಾಂಪಿನ ಲಾಮಾ ಮಕ್ಕಳು ಕಾಣೆಯಾದಾಗ ಪೊಲೀಸ್ ಠಾಣೆಗೆ ಮೊದಲು ಬಂದವಳೇ ಶಹನಾಜ್. ಅಲ್ಲಿಯವರೆಗೆ ಏಎಸ್ಸೈ ಮಾಲಿಂಗಭಟ್ಟರಿಗೆ ವಿಷಯವೇ ಗೊತ್ತಿರಲಿಲ್ಲ. ಠಾಣೆಗೆ ಬಂದ ಶಹನಾಜ್ ಬೇಗಂ, ‘ನೀವು ಲಾಮಾ ಕ್ಯಾಂಪಿನ ಗುರುಗಳ ಮೇಲೆ ದೂರು ದಾಖಲಿಸಬೇಕಾಗುತ್ತದೆ. ಅಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಆಗಿದೆ. ಭೂತಾನದಿಂದ ಸಾಗಿಸಿ ತಂದ ಮಕ್ಕಳು ಅವು. ಇನ್ನೂ ತಾಯಿಯ ಹಾಲು ಬಿಡುವ ವಯಸ್ಸೂ ಆಗಿಲ್ಲ. ಸನ್ಯಾಸಿ ಮಾಡಲು ಹೊರಟಿದ್ದಾರೆ ಶನಿಗಳು. ಮಕ್ಕಳ ಹಕ್ಕುಗಳ ಕಾಯ್ದೆ, ಲೈಂಗಿಕ ದುರ್ಬಳಕೆ. ದೈಹಿಕ ಹಲ್ಲೆ ಎಲ್ಲ ಸೇರಿಸಿ ಒಂದು ದೊಡ್ಡ ಕೇಸು ಜಡಿದುಬಿಡಿ. ಸಾಯಲಿ ಸೈತಾನರು’ ಎಂದು ಕುರ್ಚಿ ಎಳೆದು ಪೇಪರು ಓದುತ್ತಾ ಕುಳಿತುಬಿಟ್ಟಿದ್ದಳು.
ಮಾಲಿಂಗಭಟ್ಟರಿಗೆ ಮೊದಲೇ ತಲೆಕೆಟ್ಟು ಹೋಗಿತ್ತು. ಟೊಪ್ಪಿಯನ್ನು ತೆಗೆದು ಮೇಜಿನ ಮೇಲಿಟ್ಟು ಅವಳಿಗೆ ಒಪ್ಪಿಸುವಂತೆ ತಲೆ ತಗ್ಗಿಸಿ ಕುಳಿತು ಬಿಟ್ಟಿದ್ದರು.
‘ನೀವು ಹೀಗೆ ಪೆಂಗನ ಹಾಗೆ ಕುಳಿತರೆ ಪ್ರಕರಣ ಜಿಲ್ಲಾ ಆಯೋಗದಿಂದ ರಾಜ್ಯ ಆಯೋಗಕ್ಕೆ, ಅಲ್ಲಿಂದ ರಾಷ್ಟ್ರಮಟ್ಟಕ್ಕೆ, ಅಲ್ಲಿಂದ ವಿಶ್ವಸಂಸ್ಥೆಗೂ ಹೋಗಬಹುದು. ನನಗೆ ಗೊತ್ತಿಲ್ಲ. ಆಮೇಲೆ ಹೇಳಿಲ್ಲ ಅಂತ ಹೇಳಬೇಡಿ’ ಶಹನಾಜ್ ಸೊಂಟ ತಿರುಗಿಸುತ್ತಾ ಕೈಯಲ್ಲಿದ್ದ ಪೇಪರು ಎತ್ತಿಕೊಂಡೇ ಹೊರಟು ಬಿಟ್ಟಿದ್ದಳು.
`ಇದೊಂದು ಅಂತಾರಾಷ್ಟ್ರೀಯ ಕುಂಬಳಕಾಯಿ ಯಾಕೋ ನನ್ನ ತಲೆಯ ಮೇಲೆಯೇ ಬೀಳುವ ಹಾಗಿದೆಯಲ್ಲಾ…’ ಮಾಲಿಂಗಭಟ್ಟರು ಗೊಣಗಿ ತಲೆ ಎತ್ತಿ ನೋಡಿದರೆ ಶಹನಾಜ್ ಕಣ್ಣಿಂದ ಮರೆಯಾಗಿದ್ದಳು.
ಅಷ್ಟರಲ್ಲಿ ಮೈಯೆಲ್ಲಾ ಕೆಸರು ಮೆತ್ತಿಕೊಂಡು ಮಾಜಿ ಸೈನಿಕ ಬಂದು ಬಿಟ್ಟಿದ್ದ. ಅವನ ಬಾಯಿಂದ ಕುಡಿದ ಹೆಂಡದ ವಾಸನೆ ಬರುತ್ತಿತ್ತು. ಚರಂಡಿಯ ಕೆಸರು ಒಣಗಿ ಅಂಗಿಯ ಮೇಲೆಲ್ಲಾ ನೇತಾಡುತ್ತಿತ್ತು.
‘ನನಗೆ ಕಂಪ್ಲೇಟು ಬರೆಯಲು ಪೇಪರು ಪೆನ್ನು ಬೇಕು. ನಾನು ಎಕ್ಸ್ ಆರ್ಮಿ. ನನ್ನ ಮೇಲೆ ಹೆಂಡತಿಯಿಂದ ಮಹಿಳಾ ದೌರ್ಜನ್ಯ ಆಗಿದೆ’ ಎಂದು ಅವನು ತರುಣ ದಪೇದಾರನನ್ನು ದಬಾಯಿಸುತ್ತಿದ್ದ.
ಮಾಲಿಂಗ ಭಟ್ಟರಿಗೆ ಅವನ ಕಂಪ್ಲೇಂಟಿನಲ್ಲಿದ್ದ ಪದ ಪ್ರಯೋಗದ ಬಗ್ಗೆ ಖುಷಿಯಾಗಿತ್ತು. ‘ಹೆಂಡತಿಯಿಂದ ಮಹಿಳಾ ದೌರ್ಜನ್ಯ!’.
‘ಹಡಬೆ. ಟಿಬೇಟ್ ಮಕ್ಕಳನ್ನು ಮನೆಯಲ್ಲಿ ಮಲಗಿಸಿಕೊಂಡು ನನ್ನನ್ನು ಒದ್ದು ಹೊರಗೆ ಹಾಕಿದ್ದಾಳೆ. ನನಗೆ ಇನ್ಸಲ್ಟ್ ಆಗಿದೆ.’ ಅವನು ಮತ್ತೆ ದಬಾಯಿಸುತ್ತಿದ್ದ.
ಏಎಸ್ಸೈ ಮಾಲಿಂಗಭಟ್ರು ಖುಶಿಯಲ್ಲಿ ಕ್ಯಾಂಟೀನಿಗೆ ಫೋನ್ ಮಾಡಿ ಇನ್ನೊಂದು ಹಾರ್ಲಿಕ್ಸು, ಬಿಸ್ಕೋಟು ರೋಟಿ, ಕ್ಷೀರ ತರಿಸಿ ಅವನ ಮುಂದಿಟ್ಟಿದ್ದರು.
ಅವನು ಹೇಳುತ್ತಾ ಹೋಗಿದ್ದ.
ಏಎಸ್ಸೈ ಮಾಲಿಂಗಭಟ್ರು ಫೋಟೋಗ್ರಾಫರನಾದ ನನಗೆ ಫೋನ್ ಮಾಡಿ ರೆಡಿಯಾಗಿ ಬರಲು ಹೇಳಿದ್ದರು.
ನಾನು ಹೋದಾಗ ಮಾಜಿ ಸೈನಿಕ ಠಾಣೆಯಲ್ಲಿ ಕಾಲಮೇಲೆ ಕಾಲು ಹಾಕಿಕೊಂಡು ಹಾರ್ಲಿಕ್ಸ್ ಕುಡಿಯುತ್ತಿದ್ದ. ಏಎಸ್ಸೈ ಸಾಹೇಬರ ಮುಖದಲ್ಲಿ ಮಂದಹಾಸ ಕಾಣಿಸುತ್ತಿತ್ತು. ಅವರು ರೊಟೇರಿಯನ್ ಮುತ್ತಣ್ಣನವರಿಗೆ ಫೋನ್ ಮಾಡಿ ವಿವರಿಸುತ್ತಿದ್ದದ್ದನ್ನು ಕೇಳಿಸಿಕೊಂಡು ನನಗೆ ಎಲ್ಲ ಅರ್ಥವಾಗಿತ್ತು. ಪೇಟೆಯಿಂದ ಬಾಡಿಗೆ ಜೀಪು ತರಿಸಿ ಅದರಲ್ಲಿ ಎಲ್ಲರೂ ಹೋಗುವುದಾಗಿ ಏರ್ಪಾಡು ಮಾಡುತ್ತಿದ್ದರು. ಫೋಟೋಗ್ರಾಫರನಾಗಿ ನಾನೂ ಹೋಗಬೇಕಿತ್ತು. ಹಲವು ಸೂಕ್ಷ್ಮಗಳಿಂದಾಗಿ ಪದೇ ಪದೇ ಅಮಾನತ್ತಿಗೆ ಒಳಗಾಗುತ್ತಿದ್ದ ಏಎಸ್ಸೈ ಸಾಹೇಬರು ಈಗ ಫೋಟೋದ ಜೊತೆಗೆ ವಿಡಿಯೋ ದಾಖಲೀಕರಣವನ್ನೂ ಮಾಡಿಸುತ್ತಿದ್ದರು.
‘ಸಾಹೇಬ್ರೇ ನೀವು ಜೀಪಿನಲ್ಲಿ ಹೋಗಿ. ನನಗೆ ಕಲ್ಲೂರು ಆದಿವಾಸಿಗಳ ಹಾಡಿಯಲ್ಲಿ ಪರಿಶಿಷ್ಟ ಪಂಗಡಗಳ ತೋಟಗಾರಿಕಾ ಯೋಜನೆಗೆ ಫೋಟೋ ತೆಗೆಯಲು ಉಂಟು ಅಲ್ಲಿಂದಲೇ ಬಂದು ಬಿಡುತ್ತೇನೆ’ ಎಂದು ಮಾಜಿ ಸೈನಿಕನ ಬಳಿಯಲ್ಲಿ ವಿಳಾಸ ಕೇಳಿಕೊಂಡು ನನ್ನ ಪುರಾತನ ಓಮ್ನಿ ವ್ಯಾನು ಹತ್ತಿದ್ದೆ. ಆದಿವಾಸಿ ಹಾಡಿಯ ಕೆಲಸ ಮುಗಿಸಿ, ಕಲ್ಲೂರು ಬೆಟ್ಟ ಇಳಿದು ಸ್ಥಳಕ್ಕೆ ತಲುಪಿದವನೇ ನನ್ನ ಮಾಮೂಲು ಫೋಟೋಗ್ರಾಫರನ ಶೈಲಿಯಲ್ಲಿ ಅವರೆಲ್ಲರನ್ನೂ ಒಂದು ಸುತ್ತು ಕೂಲಂಕಷವಾಗಿ ಪರಿಶೀಲಿಸಿದೆ. ಭಾರತ ಟಿಬೆಟ್ ಸ್ನೇಹ ಬಳಗದ ರೊಟೇರಿಯನ್ ಮುತ್ತಪ್ಪನವರು ಬಿಡಾರದ ಅಂಗಳದಲ್ಲಿ ಹಾಕಿದ್ದ ಮರದ ಕುರ್ಚಿಯಲ್ಲಿ ಕುಳಿತಿದ್ದರು. ಅದೇ ತರಹದ ಇನ್ನೊಂದು ಕುರ್ಚಿಯಲ್ಲಿ ಕುಳಿತಿದ್ದ ಏಎಸ್ಸೈ ಮಾಲಿಂಗಭಟ್ಟರು ಈ ಸಲ್ಲದ ಉಸಾಬರಿಯಲ್ಲಿ ತಮ್ಮನ್ನು ಸಿಲುಕಿಸಿರುವ ಟಿಬೇಟ್ ಕ್ಯಾಂಪಿನ ಹಸುಳೆ ಲಾಮಾಗಳನ್ನು ಒಂದು ಸಲ ತನಿಖಾ ದೃಷ್ಟಿಯಿಂದಲೂ ಇನ್ನೊಂದು ಸಲ ಸಹಜ ಮಮಕಾರದಿಂದಲೂ ನೋಡುತ್ತಿದ್ದರು. ಆ ಹಸುಳೆಗಳೊಡನೆ ಯಾವ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳುವುದು ಎಂದು ಗೊತ್ತಾಗದೆ ಕುಳಿತಿದ್ದ ಅವರು ತಡವಾಗಿ ತಲುಪಿದ ನನ್ನನ್ನು ಇನ್ನಷ್ಟು ಸಿಡಿಮಿಡಿಯಿಂದ ನೋಡಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆಯಾದ ಶಹನಾಜ್ ಬೇಗಂ ಬಿಡಾರದ ಎದುರಿನ ನೆಲ್ಲಿಕಾಯಿ ಮರದ ಕೆಳಗೆ ಹಿಂಡಿ ಹಿಪ್ಪೆಯಾಗಿ ಕುಳಿತಿದ್ದ ಆ ಟಿಬೆಟನ್ ಲಾಮಾ ಮಕ್ಕಳ ತಲೆ ಸವರುತ್ತಾ ಅವರನ್ನು ಹಿಂದಿಯಲ್ಲಿ ಮಾತನಾಡಿಸಲು ಹೆಣಗುತ್ತಿದ್ದಳು. ಅವರ ಎದುರಿನ ಉದ್ದದ ಮರದ ಬೆಂಚಿನಲ್ಲಿ ಶಿಸ್ತಿನಲ್ಲಿ ಸಾಲಾಗಿ ಕುಳಿತಿದ್ದ ಹಿರಿಯ ಟಿಬೆಟನ್ ಬಿಕ್ಕುಗಳು ನಡುನಡುವೆ ಆ ಕಂದಮ್ಮಗಳನ್ನು ತಮ್ಮ ಭಾಷೆಯಲ್ಲಿ ಗದರುತ್ತಾ, ಗದರಿದಾಗ ಅಳುತ್ತಿದ್ದ ಅವುಗಳನ್ನು ತಮ್ಮದೇ ಭಾಷೆಯಲ್ಲಿ ಸಂತೈಸುತ್ತಾ ಕುಂಡೆ ಸುಟ್ಟ ಬೆಕ್ಕುಗಳಂತೆ ಕುಳಿತಲ್ಲಿಂದ ಎದ್ದು ಶತಪಥ ತಿರುಗುತ್ತಿದ್ದರು.
ಒಂದು ಕಾಲದಲ್ಲಿ ಚೆನ್ನಾಗಿತ್ತು ಎಂದು ಹೇಳಬಹುದಾದ ಆದರೆ ಈಗ ಬಹುತೇಕ ಶಿಥಿಲವಾದ ಆ ಬಿಡಾರದ ಮೂಲೆ ಹಂಚುಗಳು ಅಲ್ಲಲ್ಲಿ ಬಿರುಕು ಬಿಟ್ಟಿದ್ದವು. ಬಾಗಿಲಿನ ಬದಿಯಿಂದ ಮಾಡಿಗೆ ಏರಿಸಿದ್ದ ಬೋಗನ್ ವಿಲ್ಲಾದ ಬಳ್ಳಿ ಬಿಡಾರವನ್ನೆಲ್ಲ ವಿಕಾರವಾಗಿ ಸುತ್ತಿಕೊಂಡು ಅಲ್ಲಲ್ಲಿ ಒಣಗಿಕೊಂಡು ಅಲ್ಲಲ್ಲಿ ಕಾಗದದ ಹೂವುಗಳನ್ನು ಬಿಟ್ಟುಕೊಂಡು ಆ ಬಿಡಾರಕ್ಕೆ ಒಂದು ರೀತಿಯ ಪ್ರೇತಕಳೆಯನ್ನು ತಂದುಕೊಟ್ಟಿತ್ತು. ಬಿಡಾರದ ಮುಂದಿನ ನೆಲ್ಲಿ ಮರದಿಂದ ಹಿಂದಿನ ಬೂರುಗದ ಮರಕ್ಕೆ ಎಳೆದುಕಟ್ಟಿದ್ದ ತಂತಿಯ ಮೇಲೆ ಟಿಬೆಟನ್ ಹಸುಳೆ ಲಾಮಾಗಳ ಕಾಷಾಯ ವಸ್ತ್ರಗಳು ಬಾವುಟಗಳಂತೆ ಹಾರಾಡುತ್ತಿದ್ದವು. ಆ ಲಾಮಾ ಮಕ್ಕಳು ಮನೆಯೊಡತಿ ಕೊಟ್ಟಿದ್ದ ಯಾವು ಯಾವುದೋ ಬಟ್ಟೆಯ ತುಂಡುಗಳನ್ನು ಹೇಗೆ ಹೇಗೋ ತಮ್ಮ ಪುಟಾಣಿ ಮೈಗಳ ಮೇಲೆ ಸುತ್ತಿಕೊಂಡು ನಿಸ್ತೇಜರಾಗಿ ಪಿಳಿಪಿಳಿ ಹಕ್ಕಿಗಳಂತೆ ಕುಳಿತಿದ್ದರು. ಒಬ್ಬ ಬಾಲಕನ ಮೂಗಿನ ಸಿಂಬಳ ಹಳದಿಯ ದಪ್ಪದಾರದಂತೆ ಕೆಳಕ್ಕೆ ಹರಿದು ಅವನ ಗಾಯಗೊಂಡ ತುಟಿಗಳನ್ನು ಚುಂಬಿಸಲು ಪ್ರಯತ್ನಿಸುತ್ತಿತ್ತು.
‘ಯೇ ಕೈಸಾ ಹುವಾ?’ ಶಹನಾಜ್ ಬೇಗಂ ತಮ್ಮ ಕರ್ಚೀಪಿನಿಂದ ಆ ಮಗುವಿನ ಮೂಗನ್ನು ಸೀಟಿ ತೆಗೆದು ಆತನ ಹರಿದ ತುಟಿಗಳ ಮೇಲೆ ಕೈಯಿಟ್ಟು ಕೇಳಿದಳು.
‘ನಹಿ ಮೇಡಂ. ಓ ಬೇಚಾರ್ ಹಿಂದಿ ನಹಿ ಸಮಜೇಗಾ. ಬುಟಿಯಾ ಮೇ ಪೂಚ್ ನಾ ಪಡೆಗಾ’ (ಮೇಡಂ, ಆ ಪಾಪದ್ದಕ್ಕೆ ಹಿಂದಿ ಬರುವುದಿಲ್ಲ. ಬುಟಿಯಾ ಭಾಷೆಯಲ್ಲಿ ಕೇಳಬೇಕಾಗುತ್ತದೆ) ಠೊಣಪ ಲಾಮಾ ತಾನೇ ಆ ಮಗುವಿನ ಕಿವಿಯ ಬಳಿ ಬಗ್ಗಿ ಏನೋ ಮಣಮಣ ಕೇಳಿದ.
ಮಗು ಏನೂ ಹೇಳದೆ ಬಾಯಿಯಲ್ಲಿ ಬೆರಳಿಟ್ಟು ಚೀಪುತ್ತಾ ಮುಖ ಸೊಟ್ಟ ಮಾಡಿಕೊಂಡಿತು.
‘ನಾನು ಹೇಳಿಲ್ಲವಾ ಈ ಮಗುವಿನ ದುರ್ಬಳಕೆ ಆಗಿದೆ’ ಶಹನಾಜ್ ಠೊಣಪ ಲಾಮಾನನ್ನು ದುರುಗುಟ್ಟಿ ನೋಡಿದರು.
‘ಇವರದೊಂದು ಫೋಟೋ ತೆಗೆದುಕೊಳ್ಳಿ ರಾಬಿ ಬಯ್ಯಾ’ಎಂದು ನನಗೆ ನಿರ್ದೇಶನ ನೀಡಿದಳು.
ತೆಗೆದುಕೊಂಡೆ.
ಕಣ್ಣ ಮುಂದೆಯೇ ಆಡುತ್ತಾ ಬೆಳೆದ ಅಬೂಬಕರ್ ಸಾಹೇಬರ ಮಗಳು. ಹಾಳಾದವಳು. ಈಗ ರಾಬಿ ಅಂತ ನಾಯನ್ನು ಕರೆಯುವ ಹಾಗೆ ಕರೆಯುತ್ತಿದ್ದಾಳೆ. ಜೊತೆಗೆ ಬಯ್ಯಾ ಬೇರೆ ಕೇಡು!
ನನಗೂ ವಯಸ್ಸಾಗುತ್ತಿದೆ. ಏನೂ ಮಾಡಲಾಗುವುದಿಲ್ಲ.. ಸುಮ್ಮನೆ ಕ್ಲಿಕ್ಕು ಮಾಡುತ್ತ ಹೋದೆ.
ಅವಳು ಮೈಯ ತುಂಬಾ ಸೀರೆ ಹೊದ್ದುಕೊಂಡು ನಡೆಯುತ್ತಿದ್ದರೂ ಕಣ್ಣಿಗೆ ಹೊಡೆಯುವಂತೆ ಕೋರೈಸುತ್ತಿದ್ದ ಅವಳ ಮೈಯ್ಯ ಓರೆಕೋರೆಗಳು, ಅವಳ ಮೂಗುತಿಯ ಹೊಳಪಲ್ಲೇ ತೂರಿ ಬರುತ್ತಿದ್ದ ಕಾಮ ಕಸ್ತೂರಿಯ ಕಿರಣಗಳು. ಏಎಸ್ಸೈ ಮಾಲಿಂಗಭಟ್ಟರು ಅತ್ತಿಯ ಮರದಡಿಯಲ್ಲಿ ಕೂತಲ್ಲೇ ಒಂದಲ್ಲ ಹತ್ತಲ್ಲ ನೂರಾರು ಸಾಲುಗಳನ್ನು ಪೋಣಿಸಿ ಯಕ್ಷಗಾನದ ಚಂಪೂ ಶೈಲಿಯಲ್ಲಿ ಹಾಡಿ ಬಿಡುತ್ತಿದ್ದರು.
ಶಹನಾಜ್ ತನಿಖೆ ಇನ್ನೂ ಚುರುಕುಗೊಳಿಸಿದ್ದಳು.
ಈ ಮಕ್ಕಳಿಗೆ ಎಷ್ಟು ವಯಸ್ಸು?
ಇವರು ಎಲ್ಲಿಯವರು?
ಇವರ ತಂದೆ ತಾಯಿ ಎಲ್ಲಿಯವರು?
ಇವರನ್ನು ಕ್ಯಾಂಪಿಗೆ ತಂದು ಎಷ್ಟು ವರ್ಷಗಳಾದವು?
ಇವರನ್ನು ಕರೆತರಲು ಇವುಗಳ ತಂದೆ ತಾಯಂದಿರ ಒಪ್ಪಿಗೆ ಇತ್ತೇ?
ರೊಟೇರಿಯನ್ ಮುತ್ತಪ್ಪನವರು ಲಾಮಾಗಳ ಬಳಿ ಈ ಪ್ರಶ್ನೆಗಳನ್ನು ತಿರುಗಿ ಕೇಳಿ ಉತ್ತರ ಪಡೆದುಕೊಂಡು ಆ ಉತ್ತರವನ್ನು ಶಹನಾಜಳಿಗೆ ರವಾನಿಸುತ್ತಿದ್ದರು.
ಶಹನಾಜ್ ಪುಟ್ಟ ಪುಸ್ತಕವೊಂದರಲ್ಲಿ ಬರೆದಿಟ್ಟುಕೊಳ್ಳುತ್ತಿದ್ದಳು.
‘ಮುತ್ತಪ್ಪನವರೇ ಇದು ಗಂಭೀರ ಪ್ರಕರಣ, ಈ ಮಕ್ಕಳನ್ನು ಭೂತಾನದಿಂದ ಕರೆತರಲಾಗಿದೆ, ಮಕ್ಕಳ ಅಂತಾರಾಷ್ಟ್ರೀಯ ಹಕ್ಕುಗಳ ಉಲ್ಲಂಘನೆಯಾಗಿದೆ, ಇದು ದೆಹಲಿಯ ಮಕ್ಕಳ ಹಕ್ಕುಗಳ ಆಯೋಗಕ್ಕೂ ಹೋಗಬೇಕಾಗಿದೆ, ರಾಜತಾಂತ್ರಿಕ ವಿಷಯಗಳೂ ಇದರಲ್ಲಿ ಅಡಗಿವೆ, ಇದರಲ್ಲಿ ಮಕ್ಕಳ ಮೇಲೆ ಲೈಂಗಿಕ ಶೋಷಣೆಯೂ ಅಡಗಿದೆ..’
ಶಹನಾಜ್ ಉದ್ವಿಗ್ನಳಾಗಿ ಸಿಡಿಯುತ್ತಿದ್ದಳು
‘ನೋಡಮ್ಮ ಇದರಲ್ಲಿ ಧರ್ಮ ಸೂಕ್ಷ್ಮಗಳೂ ಅಡಗಿದೆ, ನಮ್ಮಲ್ಲೂ ಬಾಲ ಸನ್ಯಾಸ ಇಲ್ಲವೇ, ಇದರಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಅಂತ ನೀನು ಬೊಂಬಡಾ ಹೊಡೆಯಬೇಡ, ಕಳೆದು ಹೋದ ಮಕ್ಕಳು ವಾಪಾಸು ಸಿಕ್ಕಿದರು ಅಷ್ಟೇ. ಕೇಸೂ ಇಲ್ಲ ಪ್ರಕರಣವೂ ಇಲ್ಲ, ಇದ್ದರೆ ನಾವೇ ನೋಡಿಕೊಳ್ಳುತ್ತೇವೆ.’
ಅವರಿಗೂ ಸಿಟ್ಟು ಬಂದಿತ್ತು. ತಮ್ಮ ಕಣ್ಣ ಮುಂದೆಯೇ ಬೆಳೆದ ಷೂ ಅಂಗಡಿಯವನ ಮಗಳು. ತಂದೆ ತಾಯಿಯ ಮಾತು ಕೇಳದೆ ವಕೀಲಿಕೆ ಕಲಿಯಲು ಹೋದಳು. ರಾಜಕೀಯಕ್ಕೂ ಇಳಿದಳು. ಈಗ ಇದನ್ನೊಂದು ಗಲಾಟೆ ಮಾಡಿಕೊಂಡು ಇನ್ನೂ ಎತ್ತರಕ್ಕೆ ಹೋಗುತ್ತಿದ್ದಾಳೆ.
ಬಹುಶಃ ಅವರ ಮನಸಲ್ಲಿದ್ದುದನ್ನು ಓದಿಕೊಂಡಂತೆ ನಾನು ವಿಡಿಯೋ ಮಾಡಿಕೊಳ್ಳುತ್ತಿದ್ದೆ.
‘ಏ ಪರ್ಕಟೆ ಇದನ್ನು ಯಾಕೆ ವಿಡಿಯೋ ಮಾಡುತ್ತೀಯಾ? ಇನ್ನು ನಿನ್ನ ಕೆಲಸ ಇಲ್ಲಿ ಬೇಕಾಗಿಲ್ಲ, ಜಾಗ ಖಾಲಿ ಮಾಡು’ ಏಎಸ್ಸೈ ಮಾಲಿಂಗ ಭಟ್ಟರು ನನ್ನ ಮೇಲೂ ಸಿಡಿಮಿಡಿಗೊಂಡರು.
‘ರಾಬಿ ಬಯ್ಯಾ ನೀವು ತೆಗೆಯಿರಿ. ಮಕ್ಕಳ ಕಲ್ಯಾಣ ಸಮಿತಿಯಿಂದ ನಾವು ಈ ಕೆಲಸಕ್ಕೆ ಪಾವತಿ ಮಾಡುತ್ತೇವೆ’ ಶಹನಾಜ್ ತಾನೂ ಧ್ವನಿ ಏರಿಸಿದಳು.
ಲಾಮಾ ಮಕ್ಕಳು ಎಲ್ಲವನ್ನೂ ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರು.
ಹಿರಿಯ ಲಾಮಾ ತಂತಿಯಲ್ಲಿ ನೇತಾಡುತ್ತಿದ್ದ ಮಕ್ಕಳ ಕಾಷಾಯ ವಸ್ತ್ರಗಳನ್ನು ಎತ್ತಿಕೊಂಡು ಮಕ್ಕಳಿಗೆ ಉಡಿಸಲು ನೋಡುತ್ತಿದ್ದ.
ಮಕ್ಕಳು ಒಲ್ಲೆ ಎಂದು ಅವರಿಂದ ತಪ್ಪಿಸಿಕೊಂಡು ಇನ್ನಷ್ಟು ಹಿಂದಕ್ಕೆ ಜರುಗುತ್ತಿದ್ದರು.
ಲಾಮಾ ಸಿಟ್ಟುಕೊಂಡು ಅವರಲ್ಲೊಬ್ಬರ ತಲೆಗೆ ಜೋರಾಗಿ ಮೊಟಕಿದ.
ಅವನು ಜೋರಾಗಿ ಬಾಯಿ ತೆರೆದು ಅಳಲು ಶುರುಮಾಡಿದ..
ಅದುವರೆಗೂ ಮನೆಯೊಳಗೆ ಮರೆಯಾಗಿದ್ದ ಮಾಜಿ ಸೈನಿಕ ಕೈಯಲ್ಲಿ ಒಂದು ಒಂಟಿ ನಳಿಕೆಯ ಬಂದೂಕು ಎತ್ತಿಕೊಂಡು ಬಂದ.
‘ಗಲಾಟೆ ನಿಲ್ಲಿಸದಿದ್ದರೆ ನಾನು ಗಾಳಿಯಲ್ಲಿ ಗುಂಡು ಹಾರಿಸಬೇಕಾಗುತ್ತದೆ’ ಎಂದವನು ಬಂದೂಕನ್ನು ಆಕಾಶದ ಕಡೆ ಎತ್ತಿ ಹಿಡಿದವನು ಆಯತಪ್ಪಿ ದೊಪ್ಪನೆ ನೆಲಕ್ಕೆ ಬಿದ್ದ.
ನಾನು ಅದನ್ನೂ ಚಿತ್ರೀಕರಿಸಿದೆ.
ಬಂದೂಕು ನೋಡಿದ ಲಾಮಾಗಳು ನೆಲದಲ್ಲಿ ಕವುಚಿ ಕೂತಿದ್ದರು.
ಅವರನ್ನು ಅನುಕರಿಸಿದ ಲಾಮಾ ಮಕ್ಕಳು ತಾವೂ ನೆಲದ ಮೇಲೆ ಕವುಚಿ ಮಲಗಿ ಕಣ್ಣು ಮುಚ್ಚಿಕೊಂಡರು.
ನೆಲಕ್ಕೆ ಬಿದ್ದಿದ್ದ ಮಾಜಿ ಸೈನಿಕ ಸಾವರಿಸಿ ಎದ್ದು ನಿಂತು ‘ಸ್ವಾಮಿ ತಪ್ಪಾಯಿತು ಇದು ನೀವೇ ಇಟ್ಟುಕೊಳ್ಳಿ’ ಎಂದು ಆ ಬಂದೂಕನ್ನು ಏಎಸ್ಸೈ ಸಾಹೇಬರ ಪದತಲದಲ್ಲಿಟ್ಟು ಹಲ್ಲು ಬಿಡುತ್ತಾ ನಿಂತುಕೊಂಡ.
‘ಸ್ವಾಮಿ ಬಂದೂಕದಲ್ಲಿ ಬುಲ್ಲೆಟ್ಟು ಇರಲಿಲ್ಲ. ಸುಮ್ಮನೆ ಹೆದರಿಸಲು ಎತ್ತಿಕೊಂಡೆ. ಇನ್ನು ಇದರ ಮೇಲೂ ಒಂದು ಕೇಸು ಜಡಿಯಬೇಡಿ’ ಎಂದು ಮತ್ತೆ ಹಲ್ಲು ಗಿಂಜಿದ.
‘ನಾಟಕದ ನಾಯಿ ನನ್ಮಗಂದು. ಇದಕ್ಕೇ ನಿನ್ನನ್ನು ಮಿಲಿಟರಿಯಿಂದ ಒದ್ದು ಹೊರಗೆ ಹಾಕಿದ್ದು. ಇಲ್ಲಿ ಬಂದು ಹೆಂಡತಿಯ ಮೇಲೆ ನಿನ್ನದು ವರ್ಲ್ಡ್ ವಾರು’ ಏಎಸ್ಸೈ ಸಾಹೇಬರು ಅವನ ಕಪಾಳಕ್ಕೆ ಬಾರಿಸಿದರು.
‘ತಪ್ಪಾಯಿತು ಸ್ವಾಮಿ’ ಅವನು ಹಳೇ ಖೈದಿಯಂತೆ ಅವರ ಮುಂದೆ ಕುಕ್ಕರಗಾಲಲ್ಲಿ ಕುಳಿತುಕೊಂಡ.
ಹಿರಿಯ ಲಾಮಾ ಮಕ್ಕಳಿಗೆ ನೆಲದಲ್ಲಿ ಬಿದ್ದಿದ್ದ ಗನ್ನು ತೋರಿಸಿ ಹೆದರಿಸಿ ಕಾಷಾಯ ವಸ್ತ್ರವನ್ನು ಧರಿಸುವಂತೆ ಪುಸಲಾಯಿಸುತ್ತಿದ್ದರು. ಮಕ್ಕಳು ಹೆದರಿಕೊಂಡು ಒಬ್ಬೊಬ್ಬರೇ ಕಾಷಾಯ ವಸ್ತ್ರ ಧರಿಸಿಕೊಳ್ಳಲು ಹೆಣಗುತ್ತಿದ್ದರು.
ಬಟ್ಟೆ ಬದಲಿಸಿಕೊಳ್ಳುತ್ತಿದ್ದ ಮಕ್ಕಳ ಮೈಯಲ್ಲಿ ಅಲ್ಲಲ್ಲಿ ಬಾಸುಂಡೆಗಳು, ಗೀರಿದ ಗಾಯದ ಗುರುತು.
‘ರಾಬಿ ಬಯ್ಯಾ, ಇವೆಲ್ಲಾ ಫೋಟೋ ತೆಗೆದುಕೊಳ್ಳಿ. ರಾಕ್ಷಸರು’ ಶಹನಾಜ್ ಮೈಯಲ್ಲಿ ದೆವ್ವ ಹೊಕ್ಕವಳಂತೆ ಚೀರುತ್ತಿದ್ದಳು. ನಾನು ಕ್ಲಿಕ್ ಮಾಡುತ್ತಿದ್ದೆ.
ಮಕ್ಕಳು ಕಾಷಾಯ ಧರಿಸಿಕೊಂಡು ಮತ್ತೆ ಪುಟ್ಟ ಪುಟ್ಟ ಬೌದ್ಧ ಬಿಕ್ಕುಗಳ ಹಾಗೆ ಕಾಣಿಸಿಕೊಳ್ಳುತ್ತಿದ್ದರು.
ಲಾಮಾಗಳು ಬಂದ ವಾಹನದಲ್ಲಿ ಅವರನ್ನು ಕೂರಿಸಿಕೊಂಡು ಆ ಮಧ್ಯಾಹ್ನದ ಬಿಸಿಲಲ್ಲಿ ಮಾಯವಾದರು.
ನಾನು ಸುಮ್ಮನೇ ನೋಡುತ್ತಿದ್ದೆ.
ಏಎಸ್ಸೈ ಸಾಹೇಬರೂ ಮಂಕಾಗಿದ್ದರು.
ರೊಟೇರಿಯನ್ ಸಾಹೇಬರೂ ಸುಮ್ಮನೆ ಕುಳಿತಿದ್ದರು.
ಮಾಜೀ ಸೈನಿಕನೂ ತನ್ನ ಕುಡುಕನ ಅವತಾರ ಮುಗಿಯಿತು ಎಂಬಂತೆ ಕುಳಿತಲ್ಲಿ ಕುಳಿತೇ ಇದ್ದ.
ಶಹನಾಜ್ ಚಡಪಡಿಸುತ್ತಿದ್ದಳು
ಸಣ್ಣಗೆ ಇನ್ನೇನು ಇರುಚಲು ಮಳೆ ಶುರುವಾಗಲಿದೆ ಎನ್ನುವ ಹಾಗೆ ಸಣ್ಣದೊಂದು ಕರಿಯ ಮೋಡ ಕಲ್ಲೂರು ಬೆಟ್ಟದ ಮೇಲಿಂದ ತೇಲಿಬಂದು ಉರಿಯುತ್ತಿರುವ ಸೂರ್ಯನನ್ನು ಮುಚ್ಚಲು ಹವಣಿಸುತ್ತಿತ್ತು. ಅದಕ್ಕೂ ಹಿಂದಿನ ಇನ್ನೊಂದು ಮೋಡದಿಂದ ಸಣ್ಣಗೆ ಹನಿಯುತ್ತಿರುವ ಮಳೆ.
ಬೆಟ್ಟದ ಮೇಲೆ ಕಾಮನಬಿಲ್ಲು ಕಮಾನು ಕಟ್ಟಲು ರೆಡಿಯಾಗುತ್ತಿತ್ತು.
ನಾನು ಆಕಾಶವನ್ನು ಕ್ಲಿಕ್ಕಿಸಲು ಕ್ಯಾಮರಾ ಎತ್ತಿಕೊಂಡೆ
ಇದ್ದಕ್ಕಿದ್ದಂತೆ ಅವಳು ಬಿಡಾರದ ಮೆಟ್ಟಿಲ ಕೆಳಗಿನ ದಾರಿಯಲ್ಲಿ ನಡೆದು ಬರುತ್ತಿರುವುದು ಕಾಣಿಸಿತು.
ಅವಳ ಒಂದು ಕೈಯಲ್ಲಿ ಹಣ್ಣುಗಳು ತುಂಬಿಕೊಂಡಿದ್ದ ಪ್ಲಾಸ್ಟಿಕ್ ಚೀಲ.
ಇನ್ನೊಂದು ಕೈಯಲ್ಲಿ ಅಕ್ಕಿ ತರಕಾರಿ ಬಿಸ್ಕತ್ತುಗಳಿದ್ದ ಅಂತಹದೇ ಚೀಲ.
ಬಂದವಳೇ ನೆರೆದಿದ್ದ ಎಲ್ಲರನ್ನೂ ನೋಡಿದಳು.
ಗಂಡನನ್ನೂ ನೋಡಿದಳು.
‘ಇವರೇ ನಮ್ಮ ಶ್ರೀಮತಿಯವರು’
ಮಾಜಿ ಸೈನಿಕ ಅಷ್ಟಗಲ ಬಾಯಿ ತೆರೆದುಕೊಂಡು ಅವಳತ್ತ ನೋಡಿ ನಕ್ಕ.
‘ಎಲ್ಲಿ ನನ್ನ ಮಕ್ಕಳು’ ಅವಳು ಸಣ್ಣಗಿನ ಧ್ವನಿಯಲ್ಲಿ ಕೇಳಿಕೊಂಡಳು.
ಅವಳ ಧ್ವನಿ ಅವಳಿಗೆ ಮಾತ್ರ ಕೇಳಿಸುವಷ್ಟು ಸಣ್ಣಗೆ ಇತ್ತು.
ಅವಳ ತುಟಿಗಳು ಒಣಗಿಕೊಂಡಿದ್ದವು.
‘ಎಲ್ಲಿ ನನ್ನ ಮಕ್ಕಳು’ ಅವಳು ಅಳತೊಡಗಿದಳು
‘ಅವರಿಗೆ ತಿನ್ನಲು ತರಲು ಪೇಟೆಗೆ ಹೋಗಿದ್ದೆ ಎಲ್ಲಿ ಅವರು’ ಅವಳು ರೋದಿಸತೊಡಗಿದಳು.
ಅವಳು ತುಂಬ ದಣಿದ ಹಾಗೆ ಕಾಣಿಸುತ್ತಿತ್ತು
‘ಅವರು ಬಂದ ದಾರಿಯಲ್ಲಿ ಹೋದರು. ನೀನೂ ಏನೂ ಕೇಳಲು ಹೋಗಬೇಡ. ದೊಡ್ಡ ಕೇಸ್ ಆಗುತ್ತದೆ. ಮಕ್ಕಳ ಕಿಡ್ನಾಪ್ ಕೇಸ್ ಸುಮ್ಮನಿರು’ ಮಾಜಿ ಸೈನಿಕ ಅವಳ ತೋಳು ಹಿಡಿದು ಒಳಕ್ಕೆ ಒಯ್ಯಲು ನೋಡಿದ.
‘ಇಲ್ಲ ನಾನು ಒಳಗೆ ಹೋಗುವುದಿಲ್ಲ. ಆ ಮಕ್ಕಳು ಮತ್ತೆ ಅಲ್ಲಿಗೆ ಹೋಗಬಾರದು. ಅಲ್ಲಿ ಹೋದರೆ ಅವರು ಮತ್ತೆ ಸತ್ತು ಹೋಗುತ್ತಾರೆ.’
ಅವಳು ಗಂಡನ ಕೈಯನ್ನು ಕಿತ್ತು ಬಿಸಾಕಿ ಕಲ್ಲಿನಂತೆ ಅಂಗಳದಲ್ಲಿ ನಿಂತಳು.
‘ಸಾಕು ನಿನ್ನದು, ಬಾ ಒಳಗೆ’ ಮಾಜಿ ಸೈನಿಕ ಮತ್ತೆ ಕ್ರೂರನಾಗುತ್ತಿದ್ದ.
‘ನಾ ಬರುವುದಿಲ್ಲ. ನೀನು ನಾಯಿ. ನಿನ್ನ ಜೊತೆ ನಾನು ಇರುವುದಿಲ್ಲ’ ಅವಳು ವಿಕಾರವಾಗಿ ಕಿರುಚಿದಳು.
ಅವಳು ಕಿರುಚಿದ್ದು ಆ ಗುಡುಗಿನ ಸದ್ದಿನಲ್ಲಿ ವಿಚಿತ್ರವಾಗಿ ಕೇಳಿಸಿತು.
‘ನಿನ್ನ ಜೊತೆ ನಾನು ಇರುವುದಿಲ್ಲ. ಎಲ್ಲರೂ ನೋಡಲಿ’ ಅವಳು ತನ್ನ ರವಿಕೆಯ ಗುಂಡಿ ಬಿಚ್ಚಿ ಬರಿ ಎದೆಯಲ್ಲಿ ನಿಂತುಕೊಂಡಳು.
ಅವಳ ಎದೆಯಲ್ಲೂ ಕೆಟ್ಟ ಗುರುತುಗಳು, ನೆತ್ತರು ಹೆಪ್ಪುಗಟ್ಟಿದ ಗೀರು ಗಾಯಗಳು, ಬೆನ್ನ ಮೇಲೂ ಬಾಸುಂಡೆಯ ಗುರುತುಗಳು.
‘ರಾಬಿ ಬಯ್ಯಾ ಈ ಫೋಟೋಗಳನ್ನೂ ತೆಗೆದುಕೊಳ್ಳಿ, ಈ ಗಂಡಸು ನಾಯಿಗೆ ಪಾಶಿ ಆಗಬೇಕು. ಅವನ ಫೋಟೋಗಳನ್ನೂ ತೆಗೆದುಕೊಳ್ಳಿ’ ಶಹನಾಜ್ ದೊಡ್ಡ ಸ್ವರದಲ್ಲಿ ಕೂಗಿಕೊಂಡಳು.
ಏಎಸ್ಸೈ ಸಾಹೇಬರು ಮುಖ ಆ ಕಡೆ ಮಾಡಿಕೊಂಡು ಕುಳಿತಿದ್ದರು.
ರೊಟೇರಿಯನ್ ಮುತ್ತಪ್ಪನವರು ಮೌನವಾಗಿ ತಲೆ ತಗ್ಗಿಸಿ ಕುಳಿತಿದ್ದರು.
ನಾನು ಫೋಟೋಗಳನ್ನು ತೆಗೆಯುತ್ತಾ ಹೋದೆ.
(ವಿಜಯವಾಣಿ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ)
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.
ಎಲ್ಲೆಲ್ಲೋ ಹರಿದಾಡಿ ಅನೂಹ್ಯವಾದ ತಿರುವುಗಳನ್ನು ಪಡೆದು ಮಾನವೀಯ ಕ್ರೌರ್ಯಗಳನ್ನು ಎತ್ತಿ ತೋರಿಸುತ್ತಿದೆಯೇನೋ ಎಂಬಂತೆ ಅನಿಸಿದರೂ ಅಂತರಾಳದಲ್ಲಿ ಮನುಷ್ಯತ್ವವನ್ನು ಬಿತ್ತಲು ಹಂಬಲಿಸುವ ಕಥೆ.ನವಿರಾಗಿ ಮೂಡಿ ಬಂದಿದೆ.
ಡಾ.ಕೆ.ಎಸ್. ಗಂಗಾಧರ
ಶಿವಮೊಗ್ಗ