ಬಟ್ಟೆ ತೊಳೆಯಲು ಹೋಗಿದ್ದ ಉಮ್ಮ ಬಂದು ಹಿತ್ತಲಿಗೆ ತಲುಪಿದ್ದಳು. ಹೊರಳಾಡುತ್ತಿರುವ ಝುಮೈರ್‌ನನ್ನು ಸಮಾಧಾನ ಮಾಡುವ ಶತ ಪ್ರಯತ್ನ ಮಾಡ ತೊಡಗಿದಳು. ವಿಶಣ್ಣನಾಗಿ ಅಬ್ಬ ಮಗನ ರೋಧನೆಯನ್ನು ನೋಡುತ್ತಾ ಕುಳಿತಿದ್ದ. ಹೇಗೋ ಸಮಧಾನಿಸಿ ಮನೆಯೊಳಗೆ ಕರೆದುಕೊಂಡು ಹೋದಳು ಉಮ್ಮ. ಮಗ ಎಷ್ಟೇ ಸಮಾಧಾನ ಮಾಡಿದರೂ ಅವನ ದುಃಖ ಇಳಿಯುವುದಿಲ್ಲವೆಂದು ಉಮ್ಮನಿಗೆ ಖಾತ್ರಿಯಾಯಿತು. ರಾತ್ರಿ ಊಟ ಮಾಡದೆ ಮಲಗಿದ್ದ ಮಗನ ಬಳಿಗೆ ಬಂದವಳು “ಐವತ್ತು ರೂಪಾಯಿ ನಾನು ಕೊಡ್ತೇನೆ. ಉಳಿದ ಹಣ ಹೇಗಾದರೂ ಮಾಡಿ ಹೊಂದಿಸಬಹುದು” ಎಂದು ಮಲಗಿಸಿದಳು.
ಮುನವ್ವರ್ ಜೋಗಿಬೆಟ್ಟು ಬರೆದ ಕಥೆ “ಶಾಲಾ ಮಕ್ಕಳ ಪ್ರವಾಸಕ್ಕೆ ಜಯವಾಗಲಿ” ನಿಮ್ಮ ಓದಿಗೆ
“ಕರ್ನಾಟಕದ ನಾಡ ಹಬ್ಬ ಯಾವುದು?” ಸೂಜಿ ಬಿದ್ದರೂ ಸದ್ದು ಕೇಳಬಹುದಾಗಿದ್ದ ಆ ತರಗತಿಯಲ್ಲಿ ರೀಡಿಂಗ್ ಗ್ಲಾಸನ್ನು ಮೂಗಿನ ತುದಿಗೆ ಏರಿಸಿದ ಅರುಣ್ ಸರ್ ಕೇಳಿದ್ದ ಪ್ರಶ್ನೆಗೆ, ಎದುರು ಬೆಂಚಿನಲ್ಲಿ ಕುಳಿತಿದ್ದ ಚುರುಕು ಕಣ್ಣಿನ ಹುಡುಗ ಝುಮೈರ್ ತಕ್ಷಣ ಕೈ ಎತ್ತಿದ್ದ. ಅವರ ತರಗತಿಯಲ್ಲಿ ಉತ್ತರ ಗೊತ್ತಿದ್ದರೂ ತಕ್ಷಣ ಉತ್ತರ ಹೇಳುವ ಧೈರ್ಯ ಯಾವ ವಿದ್ಯಾರ್ಥಿಯೂ ಮಾಡುತ್ತಿರಲಿಲ್ಲ. ಅವರ ಉರಿ ಪೆಟ್ಟಿನ ರುಚಿಯೂ ಅಷ್ಟೊಂದು ತೀಕ್ಷ್ಣವಾಗಿರುತ್ತಿತ್ತು. ವರ್ಷಗಳ ಹಿಂದೊಮ್ಮೆ ಹಿರಿಯ ವಿದ್ಯಾರ್ಥಿಗಳ ತರಗತಿಯಲ್ಲೊಮ್ಮೆ ಹೀಗೆ ಕೇಳಿದ್ದ ಪ್ರಶ್ನೆಗೆ ಕೈ ಎತ್ತುವ ಮೊದಲೇ ವಿದ್ಯಾರ್ಥಿಯೊಬ್ಬ ಉತ್ತರಿಸಿದ್ದರಿಂದ “ನಿಂತ್ಕೊಳ್ಳೋ ಬೆಂಚಿ ಮೇಲೆ- ಇದೇನು ತರಗತೀನಾ ದೊಡ್ಡಿನಾ? ಶಿಸ್ತು ಅನ್ನುವುದು ಏನೂಂತ ಮೊದಲು ಕಲೀರಿ” ಅನ್ನುತ್ತಾ ಹಿಡಿಯ ಕಡೆ ಗಂಟಿದ್ದ ಮಾಂತ್ರಿಕ ದಂಡದಂತಹ ಗಿಡ್ಡದ ನಾಗರ ಬೆತ್ತದಲ್ಲಿ ಕುಂಡಿಯ ಮೇಲೆ ನಾಲ್ಕು ಬಾರಿಸಿದ್ದರಂತೆ. ಆ ಭಯವೆಲ್ಲಾ ಇಡೀ ಶಾಲೆಯ ಮಕ್ಕಳಿಗೆ ಹಬ್ಬಿ- ಅವರು ಹೇಳದೆಯೇ ಇಡೀ ಶಾಲೆಯೇ ಅವರ ತರಗತಿಯಲ್ಲಿ ಹೇಗೆ ವರ್ತಿಸಬೇಕೆಂದು ಕಲಿತುಕೊಂಡು ಬಿಟ್ಟಿತ್ತು. ಅದ್ಭುತವಾಗಿ ಪಾಠ ಹೇಳಿ ಕೊಡುತ್ತಿದ್ದ ಅರುಣ್ ಸರ್ ಶಿಸ್ತು ತಪ್ಪಿದರೆ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುತ್ತಿದ್ದರಿಂದ ಅವರ ಮೇಲೆ ಭಯ ಮಿಶ್ರಿತ ಗೌರವ ಬೆಳೆದು ಬಿಟ್ಟಿತ್ತು.
ಝುಮೈರ್ ಕೈ ಎತ್ತಿದ ಮೇಲೊಮ್ಮೆ ಹಿಂತಿರುಗಿ ನೋಡಿದ. ಇಡೀ ತರಗತಿಯೇ ನಿಶಬ್ದವಾಗಿ ತಲೆ ಕೆಳ ಹಾಕಿ ಕುಳಿತುಕೊಂಡಿತ್ತು. ಝುಮೈರ್ ಗೆ ‘ಯಾಕಾದರೂ ಕೈ ಎತ್ತಿದೆನೋ’ ಅನ್ನಿಸಿ ಬಿಟ್ಟಿತ್ತು.
ಇಡೀ ತರಗತಿಯನ್ನೊಮ್ಮೆ ಅವಲೋಕಿಸಿ ಅರುಣ್ ಸರ್ ನಿಟ್ಟುಸಿರೊಂದಿಟ್ಟರು. ನಿಶಬ್ದದಲ್ಲಿ ತೇಲಿದ ಆ ಸದ್ದು ಇಡೀ ತರಗತಿಯ ಸುತ್ತಲೂ ಪ್ರವಹಿಸಿತು.
“ಸ್ಟಾಂಡ್ ಅಪ್”
ಝುಮೈರ್ ಎದ್ದು ನಿಂತ.
“ಉತ್ತರವೇನು?”
ಅವನು ಭಯದಿಂದಲೇ ಹೆಡೆ ಬಿಚ್ಚಿದ ಸರ್ಪವನ್ನು ಭೀತಿಯಿಂದ ನೋಡುವಂತೆ ನಾಗರ ಬೆತ್ತವನ್ನು ನೋಡುತ್ತಾ, “ದ… ದದ ಸರಾ” ಎಂದು ಕ್ಷೀಣ ಧ್ವನಿಯಲ್ಲೇ ಉತ್ತರಿಸಿದ.
“ವೆರಿ ಗುಡ್” ಅರುಣ್ ಸರ್ ಗಂಭೀರ ಸ್ವರದಲ್ಲೇ ಶ್ಲಾಘಿಸಿದರು.
“ಸಿಟ್ ಡೌನ್… ವಿದ್ಯಾರ್ಥಿಗಳು ಅಂದ್ರೆ ಹಾಗಿರಬೇಕು. ಚುರುಕಾಗಿ ಉತ್ತರಿಸುವ ಧೈರ್ಯ ತೋರಬೇಕು” ಎಂದು ಝಮೈರ್‌ನನ್ನು ಅಭಿನಂದಿಸುವಾಗ ಇಡೀ ತರಗತಿ ಸಹ ವಿದ್ಯಾರ್ಥಿಯನ್ನು ಹೆಮ್ಮೆ- ಮತ್ಸರ – ಹೊಟ್ಟೆ ಕಿಚ್ಚಿನಿಂದ ನೋಡಿತು. ಝಮೈರ್ ಗೆದ್ದ ಮಂದಹಾಸ ಮುಖದಲ್ಲಿ ತಂದುಕೊಂಡು ತನ್ನ ಗುಂಗುರು ಕೂದಲನ್ನೊಮ್ಮೆ ಕೈಗಳಲ್ಲೇ ಬಾಚಿಕೊಂಡ.
ಉಸಿರೆತ್ತಿದರೆ ಹೆಸರು ಬರೆಯುತ್ತಿದ್ದ ಚಾಡಿ ಹುಡುಗಿ ಶ್ರುತಿಯ ಮುಖಕ್ಕೊಮ್ಮೆ ನೋಡಿ ಹುಬ್ಬು ಕುಣಿಸಿದ. ಆ ಹಾವ ಭಾವದಲ್ಲಿ “ನೀನು ಬರೀ ಮಾತನಾಡಿದವರ ಹೆಸರು ಬರೀತಾ ಇರು, ಉತ್ತರ ಹೇಳಲಿಕ್ಕೆ ಲಾಯಕ್ಕಿಲ್ಲ” ಎಂಬ ಅಸಡ್ಡೆ ಇತ್ತು. ಪ್ರತಿಯಾಗಿ ಅವಳೂ ಮುಖ ಸಿಂಡರಿಸಿ ಅರುಣ್ ಸರ್ ಮುಂದೆ ಕೇಳುವ ಪ್ರಶ್ನೆಗೆ ಉತ್ತರಿಸಿ ಸೇಡು ತೀರಿಸುವ ಅವಕಾಶಕ್ಕಾಗಿ ಕಾಯ ತೊಡಗಿದಳು.
“ಯಾರೆಲ್ಲಾ ಮೈಸೂರಿಗೆ ಹೋಗಿದ್ದೀರಿ”
ಯಾರೊಬ್ಬರೂ ಕೈ ಎತ್ತದ್ದು ನೋಡಿ ಅರುಣ್ ಸರ್ ಮತ್ತೆ ಪಾಠ ಮುಂದುವರಿಸಿದರು.
“ಹೋಗಬೇಕಾದದ್ದೆಂದರೆ ಮೈಸೂರಿಗೆ- ಅಲ್ಲಿನ ಪ್ರಾಣಿ ಸಂಗ್ರಹಾಲಯ- ಟಿಪ್ಪುವಿನ ಬೇಸಗೆ ಅರಮನೆ- ದಸರಾ ಮೈದಾನ- ಮೈಸೂರು ಅರಮನೆ- ಕೆ ಆರ್ ಎಸ್ ನ ವರ್ಣ ರಂಜಿತ ನೀರ ಚಿತ್ತಾರ” ಹೀಗೆ ಅಲ್ಲಿನ ಒಂದೊಂದು ರೂಪ ವಿಶೇಷತೆಗಳನ್ನು ಎತ್ತಿ ಹೇಳತೊಡಗಿದ್ದರು.
ಅವರ ಪಾಠಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯು ಶಕ್ತಿ ಇದ್ದಿರುವುದರಿಂದಲೇ ಇಡೀ ಮೈಸೂರು ಆ ಸಣ್ಣ ಮಕ್ಕಳ ಮನಸ್ಸಿನಲ್ಲಿ ಕುಣಿಯತೊಡಗಿತು.
“ನೋಡುವಾ- ಈ ಬಾರಿಯ ಶಾಲಾ ಪ್ರವಾಸಕ್ಕಾಗಿ ಮೈಸೂರಿಗೆ ಹೋಗೋಣ” ಎಂದಾಗ ಎಲ್ಲಾ ವಿದ್ಯಾರ್ಥಿಗಳೂ ಖುಷಿಯಿಂದ ಮುಖದ ಮೇಲೆ ಮಂದಹಾಸ ತಂದುಕೊಂಡು ಒಪ್ಪಿಗೆ ಸೂಚಿಸಿದ್ದರು.
ಅಷ್ಟರಲ್ಲಿ ಝಮೈರ್‌ನ ಮನಸ್ಸು ಮೈಸೂರಿಗೆ ಹೊರಟಾಗಿತ್ತು. ಕಿಟಕಿಯ ಹೊರಗಿರುವ ಅಕೇಶಿಯಾ ಗಿಡಗಳ ಮಧ್ಯೆ ನೋಡುತ್ತಿದ್ದವನಿಗೆ ದೂರದ ದಿಗಂತದಲ್ಲಿನ ಬೆಟ್ಟದ ಮೇಲಿನ ತಿರುವಿನ ವಿಹಂಗಮ ದಾರಿ ಬಹುಶಃ ಮೈಸೂರಿಗೆ ತೆರಳುವುದೆಂದು ಮನಸ್ಸಿನಲ್ಲಿ ಲೆಕ್ಕಾಚಾರ ಹಾಕಿ ಆ ದಾರಿಯಿಂದಾಗಿಯೇ ಹಾದು ಹೋಗುವ ಬ್ಯಾನರ್ ಹಾಕಿದ್ದ ಪ್ರವಾಸದ ಬಸ್ಸಿನ ಕಿಟಕಿ ಬದಿಯಲ್ಲಿ ಕುಳಿತು ಮರಗಳನ್ನು ಹಿಂದಿಕ್ಕಿ ಹೊರಡುವ ಕಲ್ಪನೆಯಲ್ಲಿಯೇ ಅವನು ಕಳೆದು ಹೋದ. ತಕ್ಷಣವೇ ಎದುರಿನಿಂದ ಅಚಾನಕ್ಕಾಗಿ ಬಂದ ಲಾರಿ ಇನ್ನೇನು ಡಿಕ್ಕಿ ಹೊಡೆಯಲಿದೆ ಅನ್ನುತ್ತಿರುವಂತೆ ಪವಾಡ ಸದೃಶವಾಗಿ ಡ್ರೈವರ್ ಸ್ಟೇರಿಂಗ್ ತಿರುಗಿಸುತ್ತಿರುವಂತೆ ಬಸ್ಸೊಮ್ಮೆ ಎತ್ತಿ ಎಲ್ಲರನ್ನೂ ಕುಳುಕಿದಂತಾಗುವ ಹೊತ್ತಿಗೆ ತಲೆಗೆ ಯಾರೋ ಮೊಟಕಿದಂತಾಯಿತು. ನೋಡಿದರೆ, ಅರುಣ್ ಸರ್ ‘ಏನಪ್ಪಾ ಈಗ್ಲೇ ಮೈಸೂರಿಗೆ ಹೋಗಿಬಿಟ್ಟಿಯಾ? ಹೇಗೆ’ ಎಂದು ಕೇಳುವಾಗಲೇ ಇಡೀ ತರಗತಿ ಗೊಳ್ಳೆಂದು ನಕ್ಕು ಬಿಟ್ಟಿತ್ತು. ಝಮೈರ್‌ಗೆ ಅವಮಾನವಾದಂತಾಗಿ ಅವನು ನಾಚಿಕೆಯಿಂದ ತಲೆ ತಗ್ಗಿಸಿದ. ಅಷ್ಟರಲ್ಲೇ, “ಸೈಲೆಂಟ್” ಎಂಬ ಘರ್ಜನೆಗೆ ಮತ್ತೆ ತರಗತಿ ಶಾಂತವಾಯಿತು. ಈ ಬಾರಿ ಶ್ರುತಿ ಝಮೈರ್‌ನನ್ನು ನೋಡಿ ಅಂತಹದ್ದೇ ಕುಹಕ ನಗು ನಕ್ಕು ಸೇಡು ತೀರಿಸಿಕೊಂಡಳು. ಈಗ ಝುಮೈರ್‌ಗೆ ಹಠ ಬಂತು, “ಈ ಬಾರಿ ಹೇಗಾದರೂ ಮಾಡಿ ಪ್ರವಾಸಕ್ಕೆ ಹೋಗಲೇಬೇಕು” ಎಂದು ತೀರ್ಮಾನಿಸಿದ.
ಕಳೆದೆರಡು ವರ್ಷದ ಪ್ರವಾಸಕ್ಕೆ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಹೋಗಿದ್ದರೂ ಝುಮೈರ್‌ನನ್ನು ಮಾತ್ರ ಮನೆಯವರು ಕಳುಹಿಸಿರಲಿಲ್ಲ. ಅರ್ಥಾತ್ ಅವರಲ್ಲಿ ಕಳುಹಿಸಿ ಕೊಡುವಷ್ಟು ಹಣವಿರಲಿಲ್ಲ.
“ಎಲ್ಲರೂ ಪ್ರವಾಸಕ್ಕೆ ಹೋಗ್ತಾರಮ್ಮಾ… ನಾನೂ ಹೋಗ್ಬೇಕುಮ್ಮಾ” ಎಂದು ಮನೆಯಲ್ಲಿ ಬಂದು ಮೊದಲ ಬಾರಿಗೆ ಕೇಳಿದಾಗ ಉಮ್ಮ, “ಬೀಡಿಯ ಮಜೂರಿಯೇ ಕಷ್ಟ ಮೋನೆ- ಅಬ್ಬನಿಗೂ ಸರಿಯಾದ ಕೆಲಸ ಇಲ್ಲ. ಹೋಗ್ಲಿಕ್ಕಾದರೂ ಹಣ ಬೇಕಲ್ಲ” ಎಂದಾಗ ಝುಮೈರ್‌ನಿಗೆ ಬೇಸರವಾದರೂ ಮರು ಮಾತನಾಡದೆ ತೆಪ್ಪಗಿದ್ದು ಬಿಟ್ಟಿದ್ದ.
“ಯಾರೆಲ್ಲಾ ಪ್ರವಾಸಕ್ಕೆ ಬರುತ್ತಿರಿ?” ಎಂದು ಕೇಳಿದ್ದಕ್ಕೆ ಎಲ್ಲರೂ ಕೈ ಎತ್ತಿದ್ದರೂ ಝುಮೈರ್ ಅನಾಥನಂತೆ ನೆಲ ನೋಡುತ್ತಾ ಬಿಕ್ಕಳಿಸಿದ್ದ. ಅಂದು ಮಕ್ಕಳೆಲ್ಲಾ ಸುಬ್ರಹ್ಮಣ್ಯಕ್ಕೆ ಹೊರಟು- ಶಿಶಿಲ- ಧರ್ಮಸ್ಥಳಕ್ಕೆ ಹೋಗಿದ್ದರು. ಝುಮೈರ್ ಆ ದಿನ ಶಾಲೆಗೆ ರಜಾವಿದ್ದದ್ದರಿಂದ ಬಾಗಿ ನಿಂತಿದ್ದ ಮನೆಯ ಹಿತ್ತಲಲ್ಲಿನ ಗೇರು ಮರಕ್ಕೆ ಹತ್ತಿ “ಶಾಲಾ ಮಕ್ಕಳ ಪ್ರವಾಸಕ್ಕೆ ಜಯವಾಗಲಿ” ಎಂದು ಜೋರಾಗಿ ಕೂಗುತ್ತಾ ತಂಗಿ ಶಾಹಿನಾಳನ್ನು ಒತ್ತಾಯದಿಂದ ಕರೆದು ಹತ್ತಿರ ಕೂರಿಸಿ ಅವಳಲ್ಲೂ ಘೋಷಣೆ ಹೇಳಿಸುತ್ತಿದ್ದ. “ಫ್ರೂ” ಎಂದು ಉಗುಳು ಗಾಳಿಯಲ್ಲಿ ಹರಡಿ ಸ್ಟೇರಿಂಗನ್ನು ಕೈಯಲ್ಲಿ ತಿರುಗಿಸುವಂತೆ ಸಂಜೆಯವರೆಗೂ ಸುಸ್ತಾಗುವಂತೆ ಆಡಿ ತಡವಾಗಿ ಸ್ನಾನ ಮಾಡಲು ಬಂದು ಉಮ್ಮನಲ್ಲಿ ಪೆಟ್ಟು ತಿಂದು- “ಅಲ್ಲ ಉಮ್ಮ – ನೀನು ನನ್ನ ಪ್ರವಾಸಕ್ಕೂ ಕಳುಹಿಸುವುದಿಲ್ಲ. ಪ್ರವಾಸದ ಆಟ ಆಡಲೂ ಬಿಡುವುದಿಲ್ಲ” ಎಂದು ಪ್ರಶ್ನಿಸಿ ಉಮ್ಮನ ಕಣ್ಣುಗಳನ್ನು ಸುಧೆಯಾಗಿಸುತ್ತಿದ್ದ. “ಇಲ್ಲ ಮೋನೆ, ಬರುವ ವರ್ಷ ಬೀಡಿಯ ಬೋನಸ್ ಬರ್ತದೆ, ಆಗ ನಾನು ಹಣ ತೆಗೆದಿಡುತ್ತೇನೆ” ಎಂದು ಭರವಸೆ ಕೊಟ್ಟು ಉಮ್ಮ ಹುಡುಗನನ್ನು ಹೇಗೋ ಸಾಗ ಹಾಕಿದ್ದಳು. ಮರುದಿನ ಪ್ರವಾಸ ಹೋದವರೆಲ್ಲಾ ಬಂದು ಝುಮೈರ್‌ನ ಮುಂದೆ ಬಡಾಯಿ ಕೊಚ್ಚಿಕೊಳ್ಳತೊಡಗಿದ್ದರು. ಅವನಿಗೆ ಆ ಬಗ್ಗೆ ಏನೂ ಹೇಳಲಾಗದೆ ಸುಮ್ಮನೆ ಅಸಹಾಯಕನಾಗಿ ಕೇಳಿಸಿಕೊಂಡಿದ್ದ. ಅದರ ಮುಂದಿನ ವರ್ಷವೂ ಮಂಗಳೂರಿನ ನವ ಬಂದರಿಗೆ ಪ್ರವಾಸ ಏರ್ಪಡಿಸಲಾಗಿತ್ತು. ಬೋನಸ್ ಬಂದ ಹಣದಲ್ಲಿ ಮಳೆಗಾಲದ ಮನೆಯ ಮಾಡು ಸರಿ ಮಾಡುವುದಕ್ಕೆ ಸರಿ ಹೋದದ್ದರಿಂದ ಉಳಿಕೆ ಉಳಿಯದೆ ಆ ವರ್ಷದ ಪ್ರವಾಸವೂ ನೆನೆಗುದಿಗೆ ಬಿತ್ತು.
ಅಷ್ಟರಲ್ಲೇ ಗಂಟೆ ಬಾರಿಸಿದ್ದರಿಂದ ಅರುಣ್ ಸರ್ ತರಗತಿ ಮುಗಿಸಿ ಹೊರಟು ನಿಂತರು. ಅವರು ಹೊರಟ ಬೆನ್ನಿಗೆ ಮಕ್ಕಳೆಲ್ಲಾ ತಡೆ ಹಿಡಿದ ಶ್ವಾಸವನ್ನು ಜೋರಾಗಿ ಬಿಟ್ಟು ತಕ್ಕ ಮಟ್ಟಿಗೆ ಗದ್ದಲ ಮಾಡುತ್ತಾ – ಪ್ರವಾಸದ ವಿಚಾರ ಮಾತನಾಡತೊಡಗಿದರು. ಒಂದಿಬ್ಬರು – “ಪ್ರವಾಸಕ್ಕೆ ಚೀಟಿ ಬರೆಯುವುದು ಬೇಡವೇ?” ಎಂದು ಕೇಳಿದರು.
“ಅದೇನು?” ಎಂದು ಪ್ರಶ್ನಿಸಿದ ಸಹಪಾಠಿಯೊಬ್ಬ ಅದೇ “‘ಚೀಟಿಯಲ್ಲಿ ಶಾಲೆಯ ಹೆಸರು ಬರೆದು ಜಯವಾಗಲಿ’ ಎಂದು ಬರೆಯುತ್ತೇವಲ್ಲ- ಅದೇ” ಎಂದು ಹೇಳಿದ. “ಓ ಅದಾ? ಅದು ಮಾಡಲೇ ಬೇಕಲ್ವಾ-” ಎಂದು ಮತ್ತೊಬ್ಬ ನೆನಪು ಮಾಡಿಕೊಂಡ. ಝುಮೈರ್‌ಗೆ ಅವರ ಮಾತುಕತೆಯಲ್ಲಿ ಕುತೂಹಲ ಹುಟ್ಟಿ ಅವರ ಗುಂಪಿಗೆ ಸೇರಿಕೊಂಡ. “ನೀನು ಎಂಥದಾ- ಪ್ರವಾಸಕ್ಕೆ ಬರುವವರು ಮಾತ್ರ ನಮ್ಮ ಜೊತೆ ಕೂಡಿದರಾಯಿತು” ಎಂದು ಸತೀಶ ದೂಡಿದ. “ನಾನು ಈ ಬಾರಿ ಬರುವುದಿಲ್ಲಾಂತ- ಯಾರಾ ನಿನ್ಗೆ ಹೇಳಿದ್ದು” ಎಂದು ಪ್ರತಿಯಾಗಿ ಝುಮೈರ್ ಕೊಸರಿಕೊಂಡ.
“ನಾನು ಅಪ್ಪನಿಗೆ ಹುಟ್ಡಿದ್ದೇ ಆಗಿದ್ರೆ- ನಿನ್ಗಿಂತ ಜಾಸ್ತಿ ನಾನೇ ಚೀಟಿ ಮಾಡ್ತೇನವಾ- ನೋಡು ಬೇಕಾದ್ರೆ” ಎಂದು ಇನ್ನೊಮ್ಮೆ ಪಂಥಾಹ್ವಾನ ಮಾಡಿದ. “ಹೋಗ- ಹೋಗ ಒಮ್ಮೆಯಾದ್ರೂ ಪ್ರವಾಸಕ್ಕೆ ಬಂದಿರ್ಬೇಕಲ್ಲಾ, ಹೋಗ್ಲಿ ಪ್ರವಾಸ ಏನೂಂಥ ನಿನ್ಗೆ ಗೊತ್ತಿರ್ಬೇಕಲ್ಲಾ?” ಎಂದು ಸತೀಶ ಪ್ರತಿಯಾಗಿ ಉತ್ತರಿಸಿದ್ದ. ಸಹಪಾಠಿಯ ಮೂದಲಿಕೆ ಈ ಬಾರಿ ಝುಮೈರ್‌ಗೆ ನಾಟಿತ್ತು. ಅವನು ಎದುರುತ್ತರ ಕೊಡಲೆನಿಸುವಾಗಲೇ ಟೀಚರ್ ತರಗತಿಗೆ ಬಂದಾಗಿತ್ತು.
ಆ ಸಂಜೆ ಮನೆಗೆ ಬಂದವನೇ ಬ್ಯಾಗ್ ಮೂಲೆಯಲ್ಲಿಟ್ಟು ಉಮ್ಮನಿಗಾಗಿ ಹುಡುಕಾಡಿದ. ಅವಳಿನ್ನೂ ಬಟ್ಟೆ ತೊಳೆಯಲೆಂದು ಕೆರೆಗೆ ಹೋದವಳು ತಿರುಗಿ ಬಂದಿರಲಿಲ್ಲ. ಝಮೈರ್ ಅವಳು ಬರುವರೆಗೂ ಕಾಯುತ್ತ ಕುಳಿತ. ಗಂಡ ಮಕ್ಕಳ ಬಟ್ಟೆ ತೊಳೆದು ಮುಗಿಸಿ ಬರುವ ಹೊತ್ತಿಗೆ ಹೊತ್ತು ಕಂತಿತ್ತು. ಹಾಗೆಲ್ಲಾ ತಡವಾಗಿ ಬಂದರೆ ಮಕ್ಕಳಿಬ್ಬರೂ ಕಾಯದೆ ಪಾತ್ರೆಯಲ್ಲಿಟ್ಟಿದ್ದ ಅನ್ನ ಹಾಕಿ ತಿನ್ನುತ್ತಿದ್ದರು. ಆ ದಿನದ ತೊಳೆದು ಮುಗಿಸಿದ ಬಟ್ಟೆಗಳನ್ನು ಹರವಿ ಅವಳು ಬರುವ ಹೊತ್ತಿಗೆ ಝುಮೈರ್ ಶಾಲಾ ಸಮವಸ್ತ್ರದಲ್ಲೇ ಅಲೋಚನಾ ಮಗ್ನನಾಗಿ ಕುಳಿತಿದ್ದ.
“ಮೋನು.. ಯಾಕೆ ಇನ್ನೂ ಊಟ ಮಾಡಿಲ್ಲ?”
ಎಂದು ಕೇಳಿದರೆ ಹುಡುಗ “ಉಮ್ಮಾ ನನಗೆ ನೀನೊಂದು ಮಾತು ಕೊಡಬೇಕು” ಎಂದು ಕೈ ಮುಂದು ಮಾಡಿದ. ” ಓಹೋ… ಏನಪ್ಪಾ ಅದು?” ಎಂದು ಉಮ್ಮ ಮುದ್ದಿನಿಂದ ಮರು ಪ್ರಶ್ನಿಸಲು “ಉಮ್ಮ… ಈ ಬಾರಿ ನಾನು ಪ್ರವಾಸಕ್ಕೆ ಹೋಗಲೇ ಬೇಕಮ್ಮಾ… ನನ್ನನ್ನು ನೀನು ಕಳುಹಿಸಿ ಕೊಡುತ್ತೀಯಾ…” ಎಂದು ಅವಳ ಕೈಯೆತ್ತಿ ಅವನ ಕೈ ಮೇಲೆ ಹಾಕಿ “ನೋಡು ಉಮ್ಮಾ.. ನೋಡು ಆಣೆ ಹಾಕಿದ್ದೀಯಾ… ಇನ್ನು ಮಾತು ತಪ್ಪಿದರೆ ಅಲ್ಲಾಹನು ಸುಮ್ಮನೆ ಬಿಡುವುದಿಲ್ಲ” ಎಂದು ಮುಗ್ಧವಾಗಿ ಹೇಳಿದ. ಅಷ್ಟರಲ್ಲಿ ಹೊರಗೆ ಕೆಮ್ಮುವ ಶಬ್ಧ ಕೇಳಿತು.
ಅದಾಗಲೇ “ಅಬ್ಬಾ” ಎಂದು ಕರೆದುಕೊಂಡು ಶಾಹಿನಾ ಹಿತ್ತಲಿಗೆ ಓಡಿದ್ದಳು. ” ಮೋನು… ಅಬ್ಬ ಬಂದ್ರು- ನೀನು ಊಟ ಮಾಡು. ನಾನು ಅಬ್ಬನಲ್ಲಿ ಹೇಗಾದ್ರೂ ಮಾಡಿ ಈ ಬಾರಿ ಪ್ರವಾಸಕ್ಕೆ ಕಳುಹಿಸುವ ವ್ಯವಸ್ಥೆ ಮಾಡುತ್ತೇನೆ” ಎಂದು ಉಮ್ಮ ಮಧ್ಯಾಹ್ನದ ಅನ್ನ ಹಾಕಿ ನೆಂಚಲು ಉಪ್ಪಿನ ಕಾಯಿ ಕೊಟ್ಟು ಎದುರು ಬಾಗಿಲಿನೆಡೆಗೆ ಹೊರಟಳು. ಸುಸ್ತಾಗಿ ಕೆಲಸ ಮುಗಿಸಿ ಬಂದಿದ್ದ ಗಂಡನ ಕೈಯಲ್ಲಿದ್ದ ದಿನಸಿ ಸಾಮಾಗ್ರಿಗಳ ಕಟ್ಟನ್ನು ಪಡಕೊಂಡು- ತಂಬಿಗೆ ತುಂಬಾ ಬಿಸಿ ನೀರು ತಂದು ಗಂಡನ ಬಳಿ ಇರಿಸಿದಳು. ಅವನು ಬೀಡಾ ಉಗಿದು ಬಾಯಿ ಮುಕ್ಕಳಿಸುವ ಹೊತ್ತಿಗೆ ಝುಮೈರ್ ಊಟ ಮುಗಿಸಿ ಮೊಗಸಾಲೆಗೆ ಬಂದಿದ್ದ. ಅವನಿಗೆ ಉಮ್ಮ ಅಬ್ಬನಲ್ಲಿ ವಿಷಯ ದಾಖಲಿಸುತ್ತಾಳೆಂಬ ಕುತೂಹಲ.
ಅವರು ಇತರ ವಿಷಯಗಳನ್ನು ಮಾತನಾಡುವ ಮಧ್ಯೆ ಝುಮೈರ್ ಮರೆಯಲ್ಲಿ ನಿಂತು ಉಮ್ಮನ ಕಣ್ಣುಗಳಲ್ಲಿ ದೀನವಾಗಿ ಪ್ರವಾಸದ ವಿಷಯ ದಾಖಲಿಸಲೇಬೇಕೆಂದು ವಕಾಲತ್ತಿಗೆ ಆಶಿಸಿದ. ಮಾತಿನ ಮಧ್ಯೆ ಅಬ್ಬನಲ್ಲಿ “ನಮ್ಮ ಮೋನು ಈ ಸಲ ಪ್ರವಾಸಕ್ಕೆ ಕಳುಹಿಸಬೇಕಲ್ವಾ?” ಎಂದು ಮಾತು ಹಾಕಿದಳು. ಈ ಬಾರಿ ಝಮೈರ್ ಬಹಳಷ್ಟು ಕಿವಿಯಗಲಿಸಿ ಅಬ್ಬನ ಅಭಿಪ್ರಾಯಕ್ಕಾಗಿ ಕಾದ. ಆದರೆ ಯಾವುದೇ ಗುಂಗಿನಲ್ಲಿದ್ದ ಅಬ್ಬ ಉತ್ತರಿಸಿದಿದ್ದುದಕ್ಕಾಗಿ ಅವನಿಗೆ ಬೇಸರ ಬಂತು. ಮತ್ತೊಮ್ಮೆ ಉಮ್ಮನಲ್ಲಿ ಕಣ್ಭಾಷೆಯಲ್ಲೇ ಇನ್ನೊಮ್ಮೆ ಕೇಳಬೇಕೆಂದು ವಿಜ್ಞಾಪಿಸಿದ. “ಅಲ್ಲ.. ನಾನು ಹೇಳಿದ್ದು ನಿಮಗೆ ಕೇಳಿಸಿಲ್ವಾ?…”
ಈ ಬಾರಿ ಅಬ್ಬ ಸಾರಣೆ ಮಾಡಿ ಸಪಾಟಾಗಿದ್ದ ತನ್ನ ಕೈಗಳನ್ನು ನೀವಿಕೊಳ್ಳುತ್ತಾ “ಹಾ.. ಎಲ್ಲಿಗಂತೆ ಪ್ರವಾಸ” ಎಂದು ಪ್ರಶ್ನಿಸಿದರು. ಈ ಬಾರಿ ಝುಮೈರ್ ಆಸೆಯಿಂದಲೇ ಮರೆಯನ್ನು ದಾಟಿ ಎದುರು ಬಂದು ನಿಂತು “ಮೈಸೂರು ಅರಮನೆ” ಎಂದ. “ಎಷ್ಟಾಗುತ್ತಂತೆ?” ಅಂದಿದ್ದಕ್ಕೆ ನಾಳೆ ಕೇಳಿ ಹೇಳುತ್ತೇನೆಂದು ಬಹು ಖುಷಿಯಿಂದಲೇ ಕೊನೆಗೂ ತನ್ನ ಆಸೆ ಈಡೇರುತ್ತದೆಂದು ಅಲ್ಲಿಂದ ಒಳ ಬಂದ. ಅಬ್ಬ ಉಮ್ಮ ಮತ್ತೆ ಮಾತಿನಲ್ಲಿ ಮಗ್ನರಾದರು. ಝುಮೈರ್ ಚೀಟಿ ಬರೆಯಲು ಕುಳಿತ. ಅವನ ಕೈಗಳು ‘ಶಾಲಾ ಮಕ್ಕಳ ಮೈಸೂರು ಪ್ರವಾಸಕ್ಕೆ ಜಯವಾಗಲಿ’ ಎಂದು ಯಾಂತ್ರಿಕವಾಗಿ ಬರೆಯತೊಡಗಿತು. ಅವನು ಮತ್ತೆ ಕಲ್ಪನಾ ಲೋಕದಲ್ಲಿ ತೇಲಾಡಲಾರಂಭಿಸಿದ.
ಎದುರಿನಿಂದ ಅಚಾನಕ್ಕಾಗಿ ಬಂದ ಲಾರಿ ಇನ್ನೇನು ಡಿಕ್ಕಿ ಹೊಡೆಯಲಿದೆ ಅನ್ನುತ್ತಿರುವಂತೆ ಪವಾಡ ಸದೃಶವಾಗಿ ಡ್ರೈವರ್ ಸ್ಟೇರಿಂಗ್ ತಿರುಗಿಸುತ್ತಿರುವಂತೆ ಬಸ್ಸೊಮ್ಮೆ ಎತ್ತಿ ಎಲ್ಲರನ್ನೂ ಕುಳುಕಿದಂತಾಗುವ ಹೊತ್ತಿಗೆ ತಲೆಗೆ ಯಾರೋ ಮೊಟಕಿದಂತಾಯಿತು. ನೋಡಿದರೆ, ಅರುಣ್ ಸರ್ ‘ಏನಪ್ಪಾ ಈಗ್ಲೇ ಮೈಸೂರಿಗೆ ಹೋಗಿಬಿಟ್ಟಿಯಾ? ಹೇಗೆ’ ಎಂದು ಕೇಳುವಾಗಲೇ ಇಡೀ ತರಗತಿ ಗೊಳ್ಳೆಂದು ನಕ್ಕು ಬಿಟ್ಟಿತ್ತು. ಝಮೈರ್‌ಗೆ ಅವಮಾನವಾದಂತಾಗಿ ಅವನು ನಾಚಿಕೆಯಿಂದ ತಲೆ ತಗ್ಗಿಸಿದ.
ಆ ದಿನ ರಾತ್ರಿ ಝುಮೈರ್‌ಗೆ ನಿದ್ರೆ ಬರಲಿಲ್ಲ. ಕಿಟಕಿಯ ಹೊರಗಿಣುಕಿದ. ಅವನಿಗೆ ಪೂರ್ಣ ಚಂದ್ರ ಕಿಲ ಕಿಲನೆ ನಗುತ್ತಿರುವಂತೆ ಭಾಸವಾಯಿತು. ಅಬ್ಬ ಉಮ್ಮನ ಮಾತುಗಳು ಕ್ಷೀಣವಾಗಿ ಕೇಳಿಸಿಕೊಳ್ಳುತ್ತಿತ್ತು. ಅವರು ತನ್ನ ಪ್ರವಾಸದ ವಿಚಾರವಾಗಿಯೇ ಮಾತನಾಡುತ್ತಿದ್ದಾರೆಂದು ಸುಳ್ಳು ಸುಳ್ಳಾಗಿ ನಂಬಿದ. ಸುತ್ತಲೂ ಆಕಾಶದಲ್ಲಿ ಒಣಗಲು ಹರಹಿದಂತೆ ನಕ್ಷತ್ರಗಳು ಹರಡಿದ್ದವು. ಬೆಳ್ಳಿ ಮೋಡಗಳು ತೇಲುತ್ತಾ ಸಾಗಲು ಅವು ಪ್ರವಾಸ ಹೊರಟಿದೆಯೆಂದನಿಸಿತವನಿಗೆ. ಸುಮ್ಮನೆ ಅವುಗಳ ಕಡೆಗೆ ಕೈ ಬೀಸಿದ. ತಾನೂ ಅದೇ ರೀತಿ ಪ್ರವಾಸ ಹೋಗಲಿಕ್ಕಿಯಿದೆಯೆಂದು ಹೇಳಿಕೊಂಡ. ಆ ರಾತ್ರಿ ತಡವಾಗಿ ನಿದ್ರೆ ಹತ್ತಿತ್ತು. ಕನಸಿನಲ್ಲಿ ಮೈಸೂರಿನ ಅರಮನೆಗೆ ಬಂದಿದ್ದ. ಸುಂದರವಾದ ಅರಮನೆ – ರಾಜ ಮಂತ್ರಿಗಳು- ಸೇನಾಧಿಪತಿಗಳು ಆಸೀನರಾಗಿದ್ದರು. ಆನೆಗಳು – ಕುದುರೆಗಳು – ಒಂಟೆಗಳು ಅಬ್ಬಾ ಎಷ್ಟೊಂದು ಸುಂದರ ಅರಮನೆ. ಸುಂದರ ಕಿರೀಟ ತೊಟ್ಟ ರಾಜ, ಸುರುಳಿ ಮೀಸೆ ತಿರುವುತ್ತಾ ಪ್ರೌಢ ಗಂಭೀರನಾಗಿ ಆಸನದಲ್ಲಿ ಆಸೀನನಾಗಿದ್ದ. ಅದೃಷ್ಟವೆಂಬಂತೆ ಮಹಾರಾಜ “ಝಮೈರ್ ” ಎಂದು ಕರೆದ. ತುಂಬಿದ ಸಭೆಯಲ್ಲಿ ಹುಡುಗ ರಾಜನ ಬಳಿಗೆ ನಡೆಯುತ್ತಿದ್ದಾನೆ. ಇನ್ನೇನು ಸ್ವಲ್ಪ ದೂರ, “ಮೋನು… ಮೋನು..ಎ ದ್ದೇಳುದಿಲ್ವಾ.. ಶಾಲೆಗೆ ಲೇಟಾಯ್ತು” ಎಂದು ಉಮ್ಮ ಎಚ್ಚರಿಸುವಾಗ ಬೆಳಕು ಹರಿದಿತ್ತು. ಝುಮೈರ್ ತಡ ಮಾಡದೆ ಲಗು ಬಗೆಯಿಂದ ಶಾಲೆಗೆ ಹೊರಟು ಬಂದ.
*****
ಅದೇ ದಿನ ಶಾಲೆಯಲ್ಲಿ ಪ್ರವಾಸಕ್ಕೆ ಹೋಗುವವರ ಸಂಖ್ಯೆ ಲೆಕ್ಕ ಹಾಕಲಾಗುತ್ತಿತ್ತು. ಎರಡನೇ ಅವಧಿ ಮುಗಿಯುವ ಹೊತ್ತಿಗೆ ಅರುಣ್ ಸರ್ ತರಗತಿಗೆ ಬಂದರು. ಯಾರೆಲ್ಲಾ ಪ್ರವಾಸಕ್ಕೆ ಬರುವವರಿದ್ದೀರಿ, ಎದ್ದು ನಿಲ್ಲಿ?” ಎಂದು ಕೇಳಿದರು. ಈ ಬಾರಿ ತರಗತಿಯ ಎಲ್ಲರೂ ಎದ್ದು ನಿಂತರು. ಝುಮೈರ್ ಕೂಡಾ ನಸು ನಗುತ್ತಲೇ ಎದ್ದು ನಿಲ್ಲುವಾಗ ಆಶ್ಚರ್ಯದಿಂದಲೇ ಸಹಪಾಠಿಯೊಬ್ಬ ಕೇಳಿದ “ನೀನು ಬರ್ತೀಯಾ ಮಾರಾಯ” ಎಂದು.
“ಮತ್ತೆ ಬರದೆ…” ಎಂದು ಅಂಗಿಯ ಕಾಲರ್ ಕುಲುಕುತ್ತಾ ಝುಮೈರ್ ಉತ್ತರಿಸಿದ್ದ.
“ಎಲ್ಲರೂ ಸೋಮವಾರದೊಳಗಾಗಿ ಮುನ್ನೂರು ರೂಪಾಯಿ ತರಬೇಕು. ಗುರುವಾರ ಇಲ್ಲಿಂದ ಮೈಸೂರು ಹೋಗಲಿದ್ದೇವೆ. ಬಸ್ಸು ಶಾಲೆಗೆ ಬರುತ್ತೆ. ಗುರುವಾರದಂದು ಎರಡು ದಿನಕ್ಕೆ ಬೇಕಾದ ಬಟ್ಟೆ, ಹೊದಿಕೆಗಳನ್ನು ತನ್ನಿ” ಎಂದು ಅರುಣ್ ಸರ್ ಹೇಳುತ್ತಿದ್ದಂತೆ, ಝುಮೈರ್‌ಗೆ ತನ್ನ ಹೊದಿಕೆಯ ಬಗ್ಗೆ ಚಿಂತೆ ಹೋಯಿತು. ತಂಗಿ ಮತ್ತು ನನಗೆ ಇರುವುದು ಒಂದೇ ಹೊದಿಕೆ. ಇರಲಿ ಅವಳು ಎರಡು ದಿನ ಅದಿಲ್ಲದೆ ಸಂಭಾಳಿಸಲಾರಳೇ?” ಎಂದು ಸಮಾಧಾನ ಮಾಡಿಕೊಂಡ.
ಆ ದಿನದಿಂದ ಮಕ್ಕಳಲ್ಲಿ ಚೀಟಿ ಬರೆಯುವ ಸ್ಪರ್ಧೆ ಏರ್ಪಟ್ಟಿತ್ತು. ಬಿಡುವು ಸಿಕ್ಕ ಕೂಡಲೇ ಖಾಲಿ ಹಾಳೆಯ ಮೇಲೆ ‘ನಮ್ಮ ಶಾಲಾ ಮಕ್ಕಳ ಮೈಸೂರು ಪ್ರವಾಸಕ್ಕೆ ಜಯವಾಗಲಿ’ ಎಂಬ ಚೀಟಿಯನ್ನು ಬರೆಯತೊಡಗಿದರು. ಝುಮೈರ್ ಒಂದೇ ದಿನದಲ್ಲಿ ಐವತ್ತು ಚೀಟಿ ಬರೆದ. ಅದನ್ನು ಪಂಥಹ್ವಾನ ಮಾಡಿದ ಸತೀಶನಿಗೂ ತಿಳಿದು ಇನ್ನೂ ಹೆಚ್ಚು ಬರೆಯಲು ಅವನು ಸುಲಭೋಪಾಯಗಳನ್ನು ಹುಡುಕತೊಡಗಿದ.
*****
ಆ ದಿನ ಮನೆಗೆ ಬಂದ ಝುಮೈರ್ ಕೆಲಸ ಮುಗಿಸಿ ಬರುವ ಅಬ್ಬನಿಗೆ ಕಾಯುತ್ತಾ ಕುಳಿತ. ಅವರು ಬಂದು ಸಾರಣೆಯ ಸಲಕರಣೆಗಳು ಮನೆಯ ಗೋಡೆಯ ಬದಿಗೆ ಆನಿಸಿ ಇಟ್ಟದ್ದೇ ತಡ, “ಅಬ್ಬ… ಪ್ರವಾಸಕ್ಕೆ ಸೋಮವಾರ ಮುನ್ನೂರು ರೂಪಾಯಿ ಕೊಡಬೇಕಂತೆ” ಎಂದು ಕೇಳಿಯೇ ಬಿಟ್ಟ.
ಯಾವುದೋ ಚಿಂತೆಯಲ್ಲಿದ್ದ ಅಬ್ಬ ಪ್ರತಿಕ್ರಿಯಿಸಿರಲಿಲ್ಲ. “ಅಬ್ಬಾ… ಮುನ್ನೂರು ರೂಪಾಯಿ ಸೋಮವಾರ ಕೊಡ ಬೇಕಂತೆ” ಎಂದು ಝುಮೈರ್ ಮತ್ತೆ ನೆನಪಿಸಿದ.
ಈ ಬಾರಿ “ಮುನ್ನೂರು ರೂಪಾಯಿಯಾ?? ಅಷ್ಟೊಂದು ಹಣ ಎಲ್ಲಪ್ಪಾ. ಮೋನು, ನೀನು ಈ ಬಾರಿ ಹೋಗುವುದು ಬೇಡ ಬರುವ ಬಾರಿ ಹೇಗಾದರೂ ಮಾಡಿ ಕಳುಹಿಸುತ್ತೇನೆ” ಎಂದು ಅಬ್ಬ ಸಮಾಧಾನ ಹೇಳಬೇಕಾದರೆ ಝುಮೈರ್‌ಗೆ ನಿಂತ ನೆಲವೇ ಕುಸಿದಂತಹ ಅನುಭವ. ಅವನ ಕನಸಿನ ಕೋಟೆ ನುಚ್ಚು ನೂರಾಗತೊಡಗಿತು. ದೊಪ್ಪೆಂದು ಕುಳಿತು ಒಂದೇ ಸಮನೆ ಅಳತೊಡಗಿದ.
“ಇಲ್ಲ… ನನಗೆ ಮೈಸೂರಿಗೆ ಹೋಗಲೇ ಬೇಕು” ಎಂದು ಜೋರಾಗಿ ರಚ್ಚೆ ಹಿಡಿದು ಅಳಲಾರಂಭಿಸಿದ.
ಅಷ್ಟರಲ್ಲೇ ಬಟ್ಟೆ ತೊಳೆಯಲು ಹೋಗಿದ್ದ ಉಮ್ಮ ಬಂದು ಹಿತ್ತಲಿಗೆ ತಲುಪಿದ್ದಳು. ಹೊರಳಾಡುತ್ತಿರುವ ಝುಮೈರ್‌ನನ್ನು ಸಮಾಧಾನ ಮಾಡುವ ಶತ ಪ್ರಯತ್ನ ಮಾಡ ತೊಡಗಿದಳು. ವಿಶಣ್ಣನಾಗಿ ಅಬ್ಬ ಮಗನ ರೋಧನೆಯನ್ನು ನೋಡುತ್ತಾ ಕುಳಿತಿದ್ದ. ಹೇಗೋ ಸಮಧಾನಿಸಿ ಮನೆಯೊಳಗೆ ಕರೆದುಕೊಂಡು ಹೋದಳು ಉಮ್ಮ. ಮಗ ಎಷ್ಟೇ ಸಮಾಧಾನ ಮಾಡಿದರೂ ಅವನ ದುಃಖ ಇಳಿಯುವುದಿಲ್ಲವೆಂದು ಉಮ್ಮನಿಗೆ ಖಾತ್ರಿಯಾಯಿತು. ರಾತ್ರಿ ಊಟ ಮಾಡದೆ ಮಲಗಿದ್ದ ಮಗನ ಬಳಿಗೆ ಬಂದವಳು “ಐವತ್ತು ರೂಪಾಯಿ ನಾನು ಕೊಡ್ತೇನೆ. ಉಳಿದ ಹಣ ಹೇಗಾದರೂ ಮಾಡಿ ಹೊಂದಿಸಬಹುದು” ಎಂದು ಆಸೆಯನ್ನು ಹುಟ್ಟಿಸಿ ಮಲಗಿಸಿದಳು. ಝುಮೈರ್‌ಗೆ ರಾತ್ರಿ ನಿದ್ದೆ ಬರಲಿಲ್ಲ. ಅವನು ಸುಮ್ಮನೆ ಹೊರಳಾಡುತ್ತಲೇ ಇದ್ದ. ಆ ದಿನದಂದಿನಿಂದ ಅವನು ಖಿನ್ನನಾಗಿ ಶಾಲೆಗೆ ಹೊರಟು ಹೋಗಿ ಬರುವುದನ್ನು ನೋಡಿದರೆ ಉಮ್ಮನ ಕರುಳು ಕಿತ್ತು ಬರುತ್ತಿತ್ತು.
*****
ಸೋಮವಾರ ಬಂತು. ಎಲ್ಲರೂ ಒಬ್ಬಬ್ಬರಾಗಿ ಅವರವರ ಹಣವನ್ನು ಅರುಣ್ ಸರ್ ಕೈಗೆ ನೀಡತೊಡಗಿದರು. ಅರುಣ್ ಸರ್ ಅವರ ಅಂದದ ಕೈ ಬರಹದಲ್ಲಿ ಹೆಸರಿನ ಮುಂದೆ ಮುನ್ನೂರು ರೂಪಾಯಿಯ ಗುರುತು ಹಾಕಿಕೊಳ್ಳತೊಡಗಿದರು. ಒಂದಿಬ್ಬರು ಹುಡುಗರು “ಸರ್ ಇವತ್ತು ಅಪ್ಪ ಇರಲಿಲ್ಲ. ನಾಳೆ ಹಣ ತರುತ್ತೇವೆಂದರು” ಝುಮೈರ್ ಅದೇ ಸುಳ್ಳನ್ನು ಹೇಳಿದ. ಮರುದಿನ ಅದರಲ್ಲೊಬ್ಬ ಹಣ ಪಾವತಿಸಿದ. ಝುಮೈರ್ ಬಿಟ್ಟರೆ ಇನ್ನೊಬ್ಬನದು ಮಾತ್ರ ಹಣ ಕೊಡಲು ಬಾಕಿಯುಳಿದಿತ್ತು. ಅದಾಗಲೇ ಸಾಕಷ್ಟು ಬಾರಿ “ಹಣ ಪಾವತಿಸಲು ಬಾಕಿಯಿರುವವರು ಹಣ ಪಾವತಿಸಿ” ಎಂಬ ಎಚ್ಚರಿಕೆಯೂ ಬಂದಿತ್ತು.
ಅಂದು ಬುಧವಾರ ಕೊನೆಯ ಸಹಪಾಠಿಯೂ ಹಣ ಪಾವತಿಸಿದ. ಅರುಣ್ ಸರ್ ತರಗತಿಗೆ ಬಂದರು. “ಹಣ ಪಾವತಿಸಲು ಯಾರು ಬಾಕಿಯುಳಿದ್ದೀರಿ?” ಎಂದು ಪ್ರಶ್ನಿಸಲು, ಬಾಡಿದ ಮುಖದಲ್ಲಿ ಝುಮೈರ್ ಒಬ್ಬನೇ ಎದ್ದು ನಿಂತ.
“ಸರ್… ನಾಳೆ ನಾನು ಬರಬೇಕಾದರೆ ಕೊಡುತ್ತೇನೆ” ಎಂದು ಹುಂಬ ಧೈರ್ಯದಲ್ಲೇ ಹೇಳಿದ. ಅವನಿಗಿನ್ನೂ ಉಮ್ಮನ ಮಾತಿನಲ್ಲಿ ಕೊನೆಯ ಆಶಾ ಭಾವನೆ ಉಳಿದಿತ್ತು. ಉಮ್ಮ ಮನ ಕರಗಿ ಏನಾದರೂ ಮಾಡಿಯಾರೆಂಬ ಭರವಸೆ.
ಆ ಸಂಜೆ ದುಗುಡದಿಂದಲೇ ಮನೆಗೆ ಬಂದ.
ರಾತ್ರಿಯೂಟ ಮಾಡಲಿಲ್ಲ. ಮತ್ತೆ ಚಂದ್ರನನ್ನು ನೋಡುತ್ತಾ ಕುಳಿತ. ಅಮಾವಾಸ್ಯೆ ನುಂಗಿ ಹಾಕಲು ಚಂದ್ರನದ್ದು ಇನ್ನೊಂದು ತುಂಡು. ನಕ್ಷತ್ರಗಳು ಅಷ್ಟೇನೋ ಪ್ರಕಾಶಮಾನವಾಗಿರಲಿಲ್ಲ.
ಉಮ್ಮ ಝುಮೈರ್ ಮಲಗುವ ಕೋಣೆಗೆ ಬಂದಳು “ಮೋನು… ತಗೋ ಇದರಲ್ಲಿ ನೂರು ರೂಪಾಯಿ ಇದೆ. ನಾಳೆ ಇಷ್ಟು ಹಣದಲ್ಲಿ ಕರೆದುಕೊಂಡು ಹೋಗುತ್ತೀರಾ- ಎಂದು ಕೇಳು” ಎಂದು ನೂರರ ನೆರಿ ಬಿದ್ದ ನೋಟೊಂದು ಕೈಗಿಟ್ಟಳು. ಬೀಡಿ ಸುರುಟಿದ ಬಿಸುಪು ಆ ನೋಟಿಗಿತ್ತು. ಝುಮೈರ್‌ನಿಗೆ ಕೋಲ್ಮಿಂಚೊಂದು ಹೊಳೆದಂತಾಯಿತು. ಆ ರಾತ್ರಿ ತನ್ನ ಎರಡು ಜೋಡಿ ಬಟ್ಟೆಗಳನ್ನು ಶಾಲಾ ಬ್ಯಾಗಿನೊಳಕ್ಕೆ ತುರುಕಿದ. ತಾನು ಕಷ್ಟಪಟ್ಟು ಬರೆದಿಟ್ಟ ಐನೂರು ಚೀಟಿಗಳನ್ನು ಭದ್ರವಾಗಿಟ್ಟ “ಉಮ್ಮಾ ನನ್ನನ್ನು ಬೇಗ ಎಬ್ಬಿಸಿ ಆಯ್ತಾ” ಎಂದು ಹೇಳಿ ಮಲಗಿದ. ಸುಮಾರು ಹೊತ್ತಿನ ನಂತರ ಅವನನ್ನು ನಿದ್ರೆ ಆವರಿಸಿತು.
ಕನಸಿನಲ್ಲಿ ಝುಮೈರ್ ಮೈಸೂರು ತಲುಪಿದ್ದ. ಟಿಪ್ಪುಸುಲ್ತಾನರ ಅರಮನೆ- ಪ್ರಾಣಿ ಸಂಗ್ರಹಾಲಯ- ಕರಡಿಯನ್ನು ನೋಡಿದರು. ಹುಲಿ ಗಂಭೀರವಾಗಿ ನಡೆಯುತ್ತಿತ್ತು. ಚಿರತೆ ಮರದ ಮೇಲೆ ಕುಳಿತು ವಿಶ್ರಾಂತಿ ಬಯಸುತ್ತಿತ್ತು. ಸಿಂಹದ ಬಲಿ ಹೋಗಬೇಕಿತ್ತು. ಇನ್ನೇನು ಸಿಂಹದ ಬೋನಿನ ಬಳಿ ವಿದ್ಯಾರ್ಥಿಗಳೆಲ್ಲರೂ ತಲುಪಿದ್ದರು. ಸಿಂಹ ವ್ಯಾಘ್ರಗೊಂಡು ಬೋನಿನಿಂದ ಹೊರಕ್ಕೆ ಹಾರಿತು. ತಕ್ಷಣ ಝುಮೈರ್ ಬೆವರಿ ಎಚ್ಚರಗೊಂಡ. ಸಣ್ಣಗೆ ಬೆಳಕು ಹರಿದಿತ್ತು.
ಗಡಿಯಾರ ನೋಡಬೇಕಾದರೆ ಗಂಟೆ ಏಳರ ಮೇಲೆ ಹತ್ತು ನಿಮಿಷ ಕಳೆದಿತ್ತು. ದಿಗಿಲುಗೊಂಡಂತೆ ಹೌಹಾರಿ ಬ್ಯಾಗ್ ಹಾಕಿ ಉಮ್ಮ ಕೊಟ್ಟ ನೂರರ ನೋಟು ಹಿಡಿದು ಝುಮೈರ್ “ಉಮ್ಮಾ ನಾನು ಹೋಗಿ ಬರುತ್ತೇನೆ- ಅಸ್ಸಲಾಂ ಅಲೈಕುಂ” ಎನ್ನುತ್ತಾ ಶಾಲೆಯ ದಾರಿಗೆ ಓಡತೊಡಗಿದ.
“ನೂರು ರುಪಾಯಿ ಅರುಣ್ ಸರ್‌ಗೆ ಕೊಡುವುದು, ಅವರಲ್ಲಿ ಈ ಹಣಕ್ಕೆ ಎಷ್ಟು ದೂರ ಕರೆದುಕೊಂಡು ಹೋಗುತ್ತೀರೆಂದು ಕೇಳುವುದು. ಅವರು ಒಪ್ಪಿದರೆ ಕರೆದುಕೊಂಡು ಹೋಗುವಷ್ಟು ದೂರ ಬಸ್ಸಿನಲ್ಲಿ ತೆರಳುವುದು. ಮುಂದೆ ಏನಾಗುತ್ತದೋ- ಗೊತ್ತಿಲ್ಲ” ಎಂದೆಲ್ಲಾ ಚಿಂತಿಸುತ್ತಾ ಏದುಸಿರು ಬಿಡುತ್ತಾ ಶಾಲೆಯ ದಾರಿಯ ತಿರುವಿನ ದಿಣ್ಣೆ ಏರಿದ. ಮಣ್ಣು ರಸ್ತೆಯ ಮೇಲೆ ವಾಹನವೊಂದರ ದಪ್ಪ ಚಕ್ರದ ಅಚ್ಚು ಮಣ್ಣಿನ ರಸ್ತೆಯ ಮೇಲೆ ಪಡಿಮೂಡಿತ್ತು. ಅದು ಪ್ರವಾಸದ ಬಸ್ಸು ಆಗದಿರಲೆಂದು ಮನಸ್ಸಿನಲ್ಲಿಯೇ ಪ್ರಾರ್ಥಿಸಿಕೊಂಡ. ಶಾಲೆಯ ಗೇಟು ಹತ್ತಿರವಾಗುತ್ತಿತ್ತು. ಇನ್ನೇನು ಸ್ವಲ್ಪ ದೂರ. ಅವನ ಎದೆ ಢವ ಢವ ಹೊಡೆದುಕೊಳ್ಳತೊಡಗಿತು. ಅವನು ಗೇಟಿನ ಬಳಿ ಓಡುತ್ತಲೇ ಬಂದ. ಗೇಟು ಮುಚ್ಚಿರುವಂತೆ ಕಂಡಿತು. ದೀರ್ಘ ಉಸಿರೊಂದನ್ನೆಳೆದುಕೊಂಡು ಅವನು ಕಣ್ಣು ಮುಚ್ಚಿದ. ಈಗ ಅವನು ಗೇಟಿನ ಮುಂಭಾಗದಲ್ಲಿ ನಿಂತಿದ್ದ. ಕಣ್ಣು ತೆರೆದವನು ಒಂದು ಕ್ಷಣ ಕಲ್ಲಾಗಿ ನಿಂತ. ಬಸ್ಸು ಅದಾಗಲೇ ಹೊರಟಾಗಿತ್ತು. ದೂರದ ತಿರುವಿನಲ್ಲಿ “ಶಾಲಾ ಮಕ್ಕಳ ಮೈಸೂರು ಪ್ರವಾಸಕ್ಕೆ ಜಯವಾಗಲಿ” ಎಂಬ ಉದ್ಘೋಷ ಝುಮೈರ್‌ನ ಕಿವಿಗೆ ಮಂದಮಂದವಾಗಿ ಅಪ್ಪಳಿಸುತ್ತಿತ್ತು.
ಊರು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು. . “ಮೊಗ್ಗು” ಇವರ ಪ್ರಕಟಿತ ಕವನ ಸಂಕಲನ. ಪರಿಸರ, ವಿಜ್ಞಾನ, ಪ್ರಾಣಿ ಪ್ರಪಂಚದ ಬಗ್ಗೆ ಕಾಳಜಿ ಮತ್ತು ಆಸಕ್ತಿ. ಬೆಂಗಳೂರಲ್ಲಿ ಉದ್ಯೋಗ. ಇತ್ತೀಚೆಗಷ್ಟೇ “ಇಶ್ಕಿನ ಒರತೆಗಳು” ಎಂಬ ಎರಡನೇ ಕವನಸಂಕಲನ ಲೋಕಾರ್ಪಣೆಗೊಂಡಿದೆ..
ಒಂದು ಉತ್ತಮ ಕಥೆ ಓದಿದ ಅನುಭವವಾಯಿತು. ಝುಮೈರ್‍ನಂತಹ ಮಕ್ಕಳು ಸಾವಿರಾರು ಸಂಖ್ಯೆಯಲ್ಲಿರುವರು. ಮಕ್ಕಳ ಸಣ್ಣ ಸಣ್ಣ ಆಸೆಗಳನ್ನು ಕೂಡ ಪೂರೈಸಲಾರದ ಅಸಾಹಾಯಕ ತಂದೆ-ತಾಯಿಗಳ ವೇದನೆ ವಿವರಿಸಲು ಸಾಧ್ಯವಿಲ್ಲ. ಭಾಷಾಶೈಲಿ ಕಥೆಯನ್ನು ನಿರಾಯಾಸವಾಗಿ ಓದಿಸಿಕೊಂಡು ಹೋಗುವಂತಿದೆ. ಮುನವ್ವರ್ ಜೋಗಿಬೆಟ್ಟು ಅವರಿಗೆ ಅಭಿನಂದನೆಗಳು.
-ರಾಜಕುಮಾರ ಕುಲಕರ್ಣಿ
ಅಬ್ಬ. ಓದಿ ಮುಗಿದ ಕೂಡಲೆ ಮನಸ್ಸು ಮುದುಡಿ ಹೋಯಿತು.
ಬಹುಶಃ ಅರುಣ್ ಮಾಸ್ಟರ್ ಅವನನ್ನು ನೂರೆ ರುಪಾಯಿನಲ್ಲೆ ಕರೆದುಕೊಂಡು ಹೋಗಬಹುದು ಅಂತ ನನಗೂ ಝಮೈರ್ ನ ಹಾಗೆ ಯೇ ಆಸೆ ಇತ್ತು. 🙁
ಆ ಪುಟ್ಟ ಮನಸ್ಸು ಎಷ್ಟು ನೊಂದಿತೋ!
ಧನ್ಯವಾದಗಳು
ತ್ಯಾಂಕ್ಯೂ ಸರ್