ಪಜಲ್ ಪೀಸ್‌ಗಳನ್ನು ಕೆಳಕ್ಕಿರಿಸಿ ಕೀಲಿಕೈಗಳ ಗೊಂಚಲನ್ನು ಚರಂಡಿಗೆ ಎಸೆಯಲು ನಿರ್ಧರಿಸಿದ್ದನೇನೋ ಎನ್ನುವಷ್ಟೇ ವೇಗವಾಗಿ ಎಲಿವೇಟರ್‌ಗಳ ಕಡೆಗೆ ಓಡಿದ. ಹದಿಮೂರನೇ ಮಹಡಿಯಿಂದ ಗ್ರೌಂಡ್ ಫ್ಲೋರ್ ಲಾಬಿಗೆ ಬರುವಷ್ಟರಲ್ಲಿ ಕಚೇರಿಯಿಂದ ಹೊರನಡೆಯುವಾಗ ತನ್ನ ಹೆಸರು ನೆನಪಿಲ್ಲದ ಕಾವಲುಗಾರನಿಗೆ ಏನು ಹೇಳಬಹುದು, ಮನಸ್ಸನ್ನು ನೋಯಿಸದೆ ಪೊಲಿಟಿಕಲಿ ಕರೆಕ್ಟ್ ಆಗಿ ಹೇಗೆ ಮಾತನಾಡಬಹುದು ಎಂದೆಲ್ಲ ಯೋಚಿಸಿದ. ಆಕ್ಸೆಸ್ ಕಾರ್ಡ್ ಇಲ್ಲದೆಯೇ ಮತ್ತೆ ಕಚೇರಿಗೆ ಬರಲೇಬೇಕು. ಕಾವಲುಗಾರನ ಮುಂದೆ ಹಾದು ಹೋಗುತ್ತಿರುವಾಗಲೇ ಆತ ‘ಹ್ಯಾವ್ ಆ ಗುಡ್ ಡೇ ಸರ್’ ಎಂದು ಸುರೇಶನಿಗೆ ಹೇಳಿದ.
ಆಕರ್ಷ ಕಮಲ ಬರೆದ ಕತೆ “ಆಯತಾಕಾರದ ನೆರಳು” ನಿಮ್ಮ ಈ ಭಾನುವಾರದ ಓದಿಗೆ
ಸೋಮವಾರದ ಮಧ್ಯಾಹ್ನ: ಸುರೇಶ್ ಊಹೆಗೂ ನಿಲುಕದ್ದನ್ನೇನೋ ಮಾಡಿಬಿಟ್ಟಿದ್ದ. ಈ ಅನಿರೀಕ್ಷಿತ ಘಟನೆಯಿಂದಾಗಿಯೇ ಸುರೇಶ್ ಕಥಾನಾಯಕನಾಗಿ ಹೊರಹೊಮ್ಮುವುದಕ್ಕೆ ಸಾಧ್ಯವಾಯಿತು ಎಂದು ಲೇಖಕ ಹೇಳುತ್ತಾನೆ. ಈ ಪೀಳಿಗೆಗೆ ಸುರೇಶ್ ತೀರಾ ಪರಿಚಿತ ವ್ಯಕ್ತಿ, ಲೇಖಕ ಮಾತ್ರ ಅದೇಕೋ ಇವನನ್ನು ಅರ್ಥೈಸಿಕೊಳ್ಳುವ ಸಾಹಸವನ್ನು ಮಾಡುತ್ತ ಮಾಡುತ್ತಾ ದಣಿದು ಹೋಗಿದ್ದಾನೆ. ಅಷ್ಟೇನೂ ಕಷ್ಟಕರವಲ್ಲದ, ಒಳ್ಳೆಯ ಪಗಾರ ಸಿಗುವ `ಸಾಮಾಜಿಕ ಜಾಲತಾಣ ಸಲಹೆಗಾರ’ನಾಗಿ ಸುರೇಶ್ ಕೆಲಸ ಮಾಡುತ್ತಾನೆ. ಕೆಲಸವನ್ನು ಹುಡುಕಿಕೊಳ್ಳುವುದಕ್ಕಾಗಲಿ ಅಥವಾ ಉಳಿಸಿಕೊಳ್ಳುವುದಕ್ಕಾಗಲಿ ಎಂದೂ ಶ್ರಮಪಟ್ಟವನಲ್ಲ. ಇನ್ನವನ ಕಚೇರಿಯಲ್ಲಿರುವವರೆಲ್ಲ ಒಬ್ಬರನ್ನೊಬ್ಬರು ಹೇಗೋ ಸಹಿಸಿಕೊಂಡು, ಪರಸ್ಪರ ನೆರವಾಗುತ್ತ, ಸಭ್ಯ ವ್ಯಕ್ತಿತ್ವಗಳನ್ನು ಅನಾವರಣ ಮಾಡುತ್ತಲೇ ಬದುಕುತ್ತಿರುವುದರಿಂದ ಜೀವನದ ಅದ್ಭುತ, ಸ್ಮರಣೀಯ ಗಳಿಗೆ ಅನ್ನುವಂಥದ್ದೇನನ್ನೂ ಕಚೇರಿ ಅವನಿಗೆ ಕೊಟ್ಟಿಲ್ಲ. ಸುರೇಶನನ್ನು `ಆರ್ ಅಂಡ್ ಡಿ’ ಯಲ್ಲಿ ಕೆಲಸ ಮಾಡುತ್ತಿರುವ ದೀಪಕ್ (ಒಳ್ಳೆಯ ಕೆಲಸಗಾರ, ಎಲ್ಲರಂತೆ ಸಭ್ಯ ) ಎಂದುಕೊಳ್ಳುವುದಂತೂ ತೀರಾ ಸಹಜ. ಈ ನಮ್ಮ ಸುರೇಶ್ ಆಫೀಸಿನಲ್ಲಿ ಮತ್ತೊಬ್ಬ ಸುರೇಶನನ್ನು ಯಾವತ್ತೂ ಭೇಟಿಯಾಗಿದ್ದೇ ಇಲ್ಲ! ಸುರೇಶನ ಮ್ಯಾನೇಜರ್ ಗಳು ‘ನಿರ್ವಾಹಕರು’ ‘ಮೇಲಧಿಕಾರಿಗಳು’ ಎನ್ನುವುದಕ್ಕಿಂತಲೂ ಹೆಚ್ಚಾಗಿ ` ಫಸ್ಟ್ ನೇಮ್’ ನಿಂದಲೇ ಸಂಬೋಧಿಸಬೇಕೆಂದು ಒತ್ತಾಯ ಮಾಡುತ್ತಾರೆ. ವರ್ಷಕ್ಕೊಮ್ಮೆ `ಪರ್ಫಾರ್ಮೆನ್ಸ್ ಆಪ್ರೈಸಲ್’ನಲ್ಲಿ ತಕ್ಕ ಮಟ್ಟಿಗಿನ `ರೇಟಿಂಗ್ ಮತ್ತು ಹೈಕ್’ ಕೂಡ ನೀಡುತ್ತಾರೆ..
ಕಚೇರಿಯ ಕಟ್ಟಡದ ಮುಂಭಾಗದಲ್ಲಿ ರಸ್ತೆಯ ಮತ್ತೊಂದು ಬದಿಯಲ್ಲಿದ್ದ ಪೆಟ್ಟಿಗೆ ಅಂಗಡಿಯ ಮುಂದೆ, ಎಂದಿನಂತೆ ಸುರೇಶ್ ಆ ದಿನ ಸಿಗರೇಟ್ ಸೇದುತ್ತ ನಿಂತಿದ್ದ. ಕಚೇರಿಯವರೊಂದಿಗೆ ನೆಟ್ವರ್ಕಿಂಗ್‌ಎ ಸಹಾಯವಾಗಲಿ ಎಂದು ಶುರು ಮಾಡಿದ್ದ ಈ ಅಭ್ಯಾಸ ಅದು ಮುಗಿದಮೇಲೂ ಮುಂದುವರೆಯುತ್ತಿದೆ. ಸಾಮಾನ್ಯವಾಗಿ ಹನ್ನೆರಡು ಗಂಟೆಯ ಹೊತ್ತಿಗೆ, ಮನೆಯಿಂದ ಕಟ್ಟಿಕೊಂಡು ಬಂದಿದ್ದ ಊಟದ ಡಬ್ಬಿಯನ್ನು ತೆರೆದು ತನ್ನ ಡೆಸ್ಕಿನಲ್ಲೇ ಊಟ ಮಾಡಿ ಬಿಡುವುದು ರೂಢಿ. ಕಚೇರಿಯಲ್ಲಿ ನಿಗದಿಯಾಗಿದ್ದ ಅಫೀಷಿಯಲ್ ಲಂಚ್ ಬ್ರೇಕಿನಲ್ಲಿ ಸಿಗರೇಟು ಸೇದುತ್ತ ಕ್ರೈಂ ಪಾಡ್ ಕಾಸ್ಟ್ ಕೇಳುವುದು ಸುರೇಶನ ಅಭ್ಯಾಸ. ಆದರೆ ಇವತ್ತು ಒಂದು ಅಪರೂಪದ ದಿನವಾಗಿದ್ದರಿಂದಲೋ ಏನೋ, ಸುರೇಶ್ ಫೋನನ್ನು ತನ್ನ ಡೆಸ್ಕಿನ ಡ್ರಾಯರಿನಲ್ಲಿಯೇ ಮರೆತುಬಿಟ್ಟಿದ್ದ. ದಿನದ ಮೊದಲ ಸಿಗರೇಟ್ ಹೊತ್ತಿಸಿದ ನಂತರವೇ ಇದರ ಅರಿವಾಗಿದ್ದು. ಫೋನ್ ಇಲ್ಲದೆಯೇ ಒಂದು ಗಂಟೆ ಕಳೆಯಬೇಕೆಂದು, ಕ್ರೈಂ ಪಾಡ್ ಕಾಸ್ಟ್‌ನಲ್ಲಿ ಸಿಕ್ಕಬೇಕಿದ್ದ ಮೂಳೆಗಳನ್ನು ಮನೆಗೆ ಸೈಕಲ್ಲಿನಲ್ಲಿ ಮರಳಿ ಹೋಗುವಾಗಲೇ ಹುಡುಕಿಕೊಳ್ಳುವುದಾಗಿ ನಿರ್ಧರಿಸಿದ. ಆದ್ದರಿಂದಲೇ ಈ ಲಂಚ್ ಟೈಮ್ ಸುರೇಶನನ್ನು ಏಕಾಂತದ ಭಾವಗಳಿಗೆ ತಳ್ಳಿತ್ತು.
ಮೂರನೆಯ ಸಿಗರೆಟ್ ಹೊತ್ತಿಸಿದಾಗಷ್ಟೇ, ಎದುರು ಹಾದು ಹೋಗುತ್ತಿದ್ದ ಕಾರುಗಳ ಮೇಲಿದ್ದ ಸುರೇಶನ ನೋಟ, ಕಾಲಿಗೆ ಹಾಕಿದ ಬ್ರಾಂಡೆಡ್ ಸ್ನೀಕರ್ಸ್ ನಡುವೆ ಅಲ್ಲಲ್ಲೇ ಬಿದ್ದಿದ್ದ ಸಿಗರೇಟ್ ತುಂಡುಗಳಿಗೆ ವರ್ಗಾವಣೆಯಾದದ್ದು. ಈಗವನು ರಸ್ತೆ ಬದಿಯ ಚರಂಡಿಯ ಮೇಲೆ ನಿಂತಿದ್ದ. ಕಬ್ಬಿಣದ ಸಲಾಕೆಗಳ (ಸಲಾಕೆಗಳ ನಡುವೆ ಒಂದಿಂಚಿನಷ್ಟು ಅಂತರವಿರಬಹುದು) ಸಂದಿಗಳ ಆಳದಲ್ಲಿ ಶಾಂತ ನೀರಿನ ಮೇಲೆ ಹೊಳೆಯುತ್ತಿದ್ದ ಬೆಳಕಿನ ಆಯತಾಕಾರಗಳನ್ನು ನೋಡಿದನು. ಇನ್ನಷ್ಟು ದಿಟ್ಟಿಸಿ ನೋಡಿದಾಗ ಕಪ್ಪು ಚೆಂಡಿನಂತಿದ್ದ ತನ್ನ ತಲೆ ಕಾಣಿಸಿತು! ಸಿಗರೇಟ್ ಸೇದುತ್ತ, ಅದನ್ನೇ ದಿಟ್ಟಿಸುತ್ತ ಸುರೇಶ್ ತನ್ನ ಜೇಬಿಗೆ ಕೈ ಹಾಕಿ ನಿಧಾನವಾಗಿ ಕೀಲಿ ಕೈಗಳ ಗೊಂಚಲನ್ನು ಹೊರತೆಗೆದ. ಅದೆಷ್ಟು ಭಾರವಾಗಿತ್ತೆಂದರೆ ಕೆಲವೊಮ್ಮೆ ಕೂರುವಾಗ ಬಹಳ ಹಿಂಸೆಯಾಗುತ್ತಿತ್ತು. ಒಬ್ಬ ಸಂವೇದನಾಶೀಲ ಸಾಮಾಜಿಕ ಜಾಲತಾಣ ಸಲಹೆಗಾರನ ಬಳಿ ಇಷ್ಟು ಕೀಲಿಕೈಗಳು ಯಾಕಿದ್ದಿರಬಹುದೆಂಬ ಸಹಜ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಆದರೆ ಪ್ರತಿಯೊಂದು ಕೀಲಿಕೈಗೂ ತನ್ನದೇ ಆದ ಅಸ್ತಿತ್ವವಿತ್ತು. ಅಪಾರ್ಟ್ಮೆಂಟಿನ ಕೀಲಿಕೈ, ಸೈಕಲ್, ಜಿಮ್, ಮನೆಯಲ್ಲಿದ್ದ ಸೇಫ್, ಅಂಚೆ ಪೆಟ್ಟಿಗೆ, ಆಫೀಸ್ ಡೆಸ್ಕ್, ಪಾರ್ಕಿಂಗ್ ಲಾಟ್ ಹೀಗೆ ಕೆಲವನ್ನು ಹೆಸರಿಸಬಹುದಷ್ಟೆ. ಇನ್ನು ಅಪಾರ್ಟ್ಮೆಂಟಿಗೆ, ಕಚೇರಿಗೆ ಬೇಕಾದ ಆಕ್ಸೆಸ್ ಕಾರ್ಡ್‌ಗಳು. ಕೆಲವಂತೂ ವರುಷಗಳಿಂದಲೂ ಬಳಕೆಯಾಗದ ಕೀಲಿ ಕೈಗಳು ಮತ್ತು ಆಕ್ಸೆಸ್ ಕಾರ್ಡ್‌ಗಳು.
ಒಂದೊಂದೇ ಕೀಲಿ ಕೈಯನ್ನು ಬೆರಳಲ್ಲಿ ತಿರುಗಿಸುತ್ತ, ನೀರಿನಲ್ಲಿ ಅದರ ಪ್ರತಿಬಿಂಬವನ್ನು ನೋಡುತ್ತಾ ನಿಂತಿದ್ದ. ಮುಂದೆ ಕಥೆ ಪಡೆದ ತಿರುವನ್ನು ಲೇಖಕನಿಗೂ ವಿವರಿಸಲು ಸಾಧ್ಯವಿಲ್ಲ. ಸುರೇಶ್ ಕೀಲಿಕೈ ಗೊಂಚಲನ್ನು ಚರಂಡಿಯೊಳಗೆ ಬೀಳಿಸಿಕೊಂಡು ಬಿಟ್ಟನೋ ಅಥವಾ ತಾನಾಗಿಯೇ ಎಸೆದು ಬಿಟ್ಟನೋ ತಿಳಿಯದು. ಕಪ್ಪು ನೀರಿನ ಮೇಲೆ ಹೊಳೆಯುತ್ತಿದ್ದ ಆಯತಗಳನ್ನು ಹಿಂಸಾತ್ಮಕವಾಗಿ ಭೇದಿಸುತ್ತ ಆ ಗೊಂಚಲು ಮಾಯವಾಗಿತ್ತು. ವಿಚಿತ್ರ ಸಂಗತಿಯೆಂದರೆ ಘಟನೆ ಜರುಗಿದ ಮರುಕ್ಷಣವೇ ಕೀರಲು ದನಿಯಲ್ಲಿ ಕಿರುಚುತ್ತಾ, ಚರಂಡಿಯ ಮೇಲೆ ಮಂಡಿಯೂರಿ ಕುಳಿತು ಕಬ್ಬಿಣದ ಸಲಾಕೆಗಳ ಸಂದಿನಲ್ಲಿ ಕೈ ಹಾಕಿ ಹುಡುಕಲು ಸುರೇಶ್ ಯತ್ನಿಸಿದ್ದು. ಸುತ್ತುವರೆದ ಜನರನ್ನು ಅಥವಾ ದಾರಿಹೋಕರನ್ನು ಇಲ್ಲಿ ನಡೆದದ್ದೆಲ್ಲವೂ ಆಘಾತಗೊಳಿಸಿರಬೇಕು. ಮುಂದೇನು ಮಾಡಬೇಕೆಂದು ತೋಚದ ಸುರೇಶ್ ದಿಗ್ಭ್ರಮೆಗೊಂಡ ಸ್ಥಿತಿಯಲ್ಲಿ ಹಾಗೆಯೇ ಕುಳಿತುಬಿಟ್ಟ. ಅಚಾನಕ್ಕಾಗಿ ಬದುಕು ತಂದಿಟ್ಟ ಈ ತುರ್ತು ಪರಿಸ್ಥಿತಿಯನ್ನು ದಿಗಿಲಿನಿಂದ ನೋಡುತ್ತಾ, ತನ್ನ ಇಡೀ ಜೀವನದ ಕೊಂಡಿಯೇ ಚರಂಡಿಯೊಳಗಿನ ನೀರಲ್ಲಿ ಕೊಚ್ಚಿ ಹೋಗಿರಬಹುದೇ ಎಂದು ವ್ಯಥೆಪಟ್ಟ. ಪೊಲೀಸರಿಗೆ ತಿಳಿಸಿಯೇ ಬಿಡಬೇಕೆಂಬ ಯೋಚನೆ ಒಂದು ಕ್ಷಣ ಹಾದು ಹೋಯಿತಾದರೂ, ಪರಿಸ್ಥಿತಿಯ ಗಂಭೀರತೆ ಅವರಿಗೆ ಅರ್ಥವಾಗುವುದಿಲ್ಲವೆಂದು ಸುಮ್ಮನಾದ, ಇಷ್ಟೆಲ್ಲಾ ಯೋಚಿಸುತ್ತಿರುವಾಗಲೇ ಡ್ರಾಯರಿನಲ್ಲಿಟ್ಟಿದ್ದ ಫೋನ್ ಮತ್ತು ವಾಲೆಟ್ ನೆನಪಾಗಿ, `ಏನಾದರಾಗಲಿ ಮೊದಲು (ಆಗಾಗ್ಗೆ ಇದೇ ವಾಕ್ಯವನ್ನು ಜೋರಾಗಿ ತನಗೆ ತಾನೇ ಹೇಳಿಕೊಳ್ಳುವುದು ಅಭ್ಯಾಸ) ಕಚೇರಿಯಲ್ಲಿನ ನನ್ನ ಡೆಸ್ಕ್‌ಗೆ ಮರಳಬೇಕು’ ಎಂದುಕೊಂಡ. ಕೀಲಿ ಕೈಗಳ ಗೊಂಚಲಿನ ಜೊತೆಗೆ ಕಳೆದು ಹೋಗಿದ್ದ ಕಚೇರಿಯ ಆಕ್ಸೆಸ್ ಕಾರ್ಡ್ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಿರಲಿಲ್ಲ. ಈ ಕಚೇರಿಗೆ ಕೆಲಸಕ್ಕೆ ಸೇರಿದಾಗಿಂದಲೂ (ಬಹುಶಃ ಹತ್ತು ವರುಷಗಳು ಉರುಳಿರಬೇಕು) ಲಾಬಿಯ ಎಂಟ್ರೆನ್ಸಿನಲ್ಲಿ ಅದೇ ಕಾವಲುಗಾರನಿದ್ದಾನೆ. ಸುರೇಶನ ಪ್ರಕಾರ ಅವನು ತೀರಾ ಪರಿಚಿತ. ಇದಕ್ಕಿಂತ ಹೆಚ್ಚಾಗಿ ಸಿಗರೇಟ್ ಸೇದಲು ಹೊರನಡೆದಾಗೆಲ್ಲ ಕಾವಲುಗಾರ ತನ್ನನ್ನು ನೋಡಿಯೇ ಇರುತ್ತಾನೆ.
ರಸ್ತೆ ದಾಟಿ ಕಚೇರಿಯ ಲಾಬಿಯೊಳಗೆ ಹೊಕ್ಕು, ಕಾವಲುಗಾರನನ್ನೇ ನೋಡುತ್ತಾ ಒಮ್ಮೆ ನಕ್ಕು ತಲೆಯಾಡಿಸಿ ಕಣ್ಣನ್ನು ಅಗಲಿಸಿ ಆಕ್ಸೆಸ್ ಗೇಟಿನತ್ತ ನಡೆದ. ಕಾವಲುಗಾರನ ಪರಿಚಯವಿದ್ದ ಸಹೋದ್ಯೋಗಿಗಳು ಹೀಗೆ ಮಾಡುವುದನ್ನು ಸುರೇಶ್ ಗಮನಿಸಿದ್ದ. ಸುಮಾರು ಅರವತ್ತು ವರ್ಷದ, ಉರಿಮುಖದ, ಬೋಳು ತಲೆಯ ಕಾವಲುಗಾರ ನೀಲಿ ಅಂಗಿಯನ್ನು ಧರಿಸಿದ್ದ. ಅವನ ಉಸಿರಾಟ ಶಿಳ್ಳೆಯಂತೆ ಕೇಳಿಸುತ್ತಿತ್ತು. ಮೌನವನ್ನು ಕೂಡ ಅರ್ಥೈಸಿಕೊಳ್ಳುವ ವ್ಯಕ್ತಿ ಎಂದು ಸುರೇಶನಿಗೆ ಏಕೆ ಅನಿಸಿತೋ ತಿಳಿಯದು.
`ಹಲೋ, ಸರ್ ಕ್ಯಾನ್ ಐ ಹೆಲ್ಪ್ ಯು ವಿಥ್ ಸಂಥಿಂಗ್?’ ಎಂದು ಕಾವಲುಗಾರ ಕೇಳಿದ.
`ಏನಿಲ್ಲ ನಾನು ಕಚೇರಿಗೆ ವಾಪಸ್ಸಾಗುತ್ತಿದ್ದೇನೆ.’ ಸುರೇಶ್ ಉತ್ತರಿಸಿದ.
`ಓಹ್, ನೋ ಪ್ರಾಬ್ಲಮ್ ಸರ್. ಯು ನೀಡ್ ಎನ್ ಆಕ್ಸೆಸ್ ಕಾರ್ಡ್, ನಿಮಗೆ ಕೊಟ್ಟಿಲ್ವಾ ಸರ್’? ಎಂದ.
ಸುರೇಶನಿಗೆ ಅಚ್ಚರಿಯಾಯಿತು. ಆದರೆ ಓದುಗರಾದ ನಿಮಗನ್ನಿಸಿತೋ ಇಲ್ಲವೋ ತಿಳಿಯದು.
`ನಾನು.. ನಾನು.. ಇಲ್ಲಿ ಹತ್ತು ವರ್ಷದಿಂದ ಕೆಲಸ ಮಾಡ್ತಿದ್ದೀನಿ. 13 ನೇ ಫ್ಲೋರ್ ನಲ್ಲಿ . ಐ ಮೀನ್ ವಿ ಸೀ ಈಚ್ ಅದರ್ ಎವೆರಿಡೇ. ಈಗಷ್ಟೇ ಒಂದು ಹತ್ತು ನಿಮಿಷಗಳ ಮುಂಚೆ ನಿಮ್ಮ ಮುಂದೆಯೇ ಹೊರನಡೆದಿದ್ದೆ. ಯು ಡೋಂಟ್ ರಿಮೆಂಬರ್?’ ಎಂದ.
`ಸಾರಿ ಸರ್’ ಕಾವಲುಗಾರ ತನ್ನ ಬೋಳು ತಲೆಯ ಮೇಲಿದ್ದ ಬೆವರನ್ನು ಒರೆಸಿಕೊಳ್ಳುತ್ತ, ‘ದಿನ ತುಂಬಾ ಜನ ಬಂದು ಹೋಗ್ತಾರೆ. ಯಾರನ್ನಂತ ನೆನಪಿಟ್ಕೊಳ್ಳೋದು, ನೀವೇ ಹೇಳಿ ಸರ್’ ಎಂದ.
`ಬಟ್ ದಿನ ಒಬ್ಬರನೊಬ್ಬರು ನೋಡ್ತೀವಲ್ಲ. ಅದೇ ಮುಖ ತಾನೇ?’ ಎಂದರೂ ಸುರೇಶನಿಗೇಕೋ ಕಾವಲುಗಾರನ ಹೆಸರು ನೆನಪಾಗಲೇ ಇಲ್ಲ.
`ಸರ್, ನೀವು ಹೇಳಿದ್ದನ್ನೆಲ್ಲ ಖಂಡಿತ ನಂಬ್ತೀನಿ. ಬಿಡಿ ಸರ್ ಇಟ್ಸ್ ಓಕೆ. ನಿಮ್ಮದು ಯಾವ ಕಂಪನಿ, ಯಾವ ಫ್ಲೋರ್?’ ಕೇಳಿದ.
`ಸುರೇಶ, 13ನೆ ಮಹಡಿ, ಅಮೆರಿಡಾಯ್ಸ್ ಇನ್ಫೋ ಸೊಲ್ಯೂಷನ್ಸ್’
`ಓಕೆ ಸರ್, ಥ್ಯಾಂಕ್ ಯು. ಒಂದು ನಿಮಿಷ ತಾಳಿ’ ಎನ್ನುತ್ತಾ ಕಾವಲುಗಾರ ಡೆಸ್ಕ್ ಬಳಿ ಇದ್ದ ಫೋನ್ ಡಯಲ್ ಮಾಡಿದ. ರಹಸ್ಯ ಕಾರ್ಯಾಚರಣೆಯನ್ನು ಚರ್ಚಿಸುತ್ತಿರುವಂತೆ ಮೆಲುದನಿಯಲ್ಲಿ ಮಾತಾಡುತ್ತ ಆಗಾಗ್ಗೆ ಅನುಮಾನದಿಂದಲೇ ಸುರೇಶನನ್ನು ನೋಡುತ್ತಾ ಮಾತನ್ನು ಮುಂದುವರೆಸಿದ. ಎಷ್ಟು ಹೊತ್ತು ಮಾತನಾಡಿದನೋ ಗೊತ್ತಿಲ್ಲ, ಆದರೆ ಸುರೇಶನಿಗೆ ವರುಷವೇ ಉರುಳಿದಂತೆ ಭಾಸವಾಗಿತ್ತು. ಫೋನ್ ರಿಸೀವರನ್ನು ತನ್ನ ಭುಜದ ಮೇಲಿರಿಸಿ, ಹೋಗುವಂತೆ ಸೂಚಿಸಿ, ಮುಂದಿನ ಸಲ ಆಕ್ಸೆಸ್ ಕಾರ್ಡ್ ಮರೆಯದಂತೆ ಸಲಹೆ ನೀಡಿ ಮತ್ತೆ ಮೆಲುದನಿಯಲ್ಲಿ ಮಾತನಾಡಿ ಫೋನ್ ಕಟ್ ಮಾಡಿದ.
ಒಬ್ಬ ಸಂವೇದನಾಶೀಲ ಸಾಮಾಜಿಕ ಜಾಲತಾಣ ಸಲಹೆಗಾರನ ಬಳಿ ಇಷ್ಟು ಕೀಲಿಕೈಗಳು ಯಾಕಿದ್ದಿರಬಹುದೆಂಬ ಸಹಜ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಆದರೆ ಪ್ರತಿಯೊಂದು ಕೀಲಿಕೈಗೂ ತನ್ನದೇ ಆದ ಅಸ್ತಿತ್ವವಿತ್ತು. ಅಪಾರ್ಟ್ಮೆಂಟಿನ ಕೀಲಿಕೈ, ಸೈಕಲ್, ಜಿಮ್, ಮನೆಯಲ್ಲಿದ್ದ ಸೇಫ್, ಅಂಚೆ ಪೆಟ್ಟಿಗೆ, ಹೀಗೆ ಕೆಲವನ್ನು ಹೆಸರಿಸಬಹುದಷ್ಟೆ. ಇನ್ನು ಅಪಾರ್ಟ್ಮೆಂಟಿಗೆ, ಕಚೇರಿಗೆ ಬೇಕಾದ ಆಕ್ಸೆಸ್ ಕಾರ್ಡ್‌ಗಳು. ಕೆಲವಂತೂ ವರುಷಗಳಿಂದಲೂ ಬಳಕೆಯಾಗದ ಕೀಲಿ ಕೈಗಳು ಮತ್ತು ಆಕ್ಸೆಸ್ ಕಾರ್ಡ್‌ಗಳು.
ಕಚೇರಿಯನ್ನು ತಲುಪಿ, ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದ ಆತಂಕವನ್ನು ಅದುಮಿಟ್ಟುಕೊಂಡು, ಮುಂದೆ ಹಾದುಹೋಗುತ್ತಿದ್ದ ಸಹೋದ್ಯೋಗಿಗಳಿಗೆ ನಯವಾಗಿ ತಲೆಯಾಡಿಸುತ್ತಾ ಮೇಜಿನ ಬಳಿಗೆ ಬಂದವನೇ ಎರ್ಗೊನೊಮಿಕ್ ಚೇರಿನಲ್ಲಿ ಕುಸಿದ. ಎತ್ತರದ ಚಾವಣಿಗಳು, ಮೂಲೆಯಲ್ಲಿ ಅತ್ಯಾಧುನಿಕ ವಿಡಿಯೋ ಕಾನ್ಫರೆನ್ಸ್ ಕೋಣೆಗಳು. ಮುಕ್ತವಾದ ಚರ್ಚೆಗಳಿಗೆ ಅವಕಾಶ ಮಾಡಿಕೊಡುವ ಗೋಡೆಗಳಿಲ್ಲದ ವಿಶಾಲ ಜಾಗ. ಕಾರ್ಪೊರೇಟ್ ಪ್ರಧಾನ ಕಚೇರಿಯಾಗಿದ್ದರಿಂದಲೋ ಏನೋ ತರುಣ ಪೀಳಿಗೆಯ ಬೇಕು ಬೇಡಗಳನ್ನೇ ಕೇಂದ್ರವಾಗಿರಿಸಿಕೊಂಡು ಮಾಡಿದ್ದ ಅದ್ಭುತ ವಿನ್ಯಾಸ. ಒತ್ತಡ ಕಡಿಮೆ ಮಾಡಿಕೊಳ್ಳಲು ಪಜಲ್‌ಗಳು, ಬೋರ್ಡ್ ಗೇಮ್ಸ್ ಇದ್ದ ಡಿ ಸ್ಟ್ರೆಸ್ ಟೇಬಲ್. ಅದರ ಮುಂದೆಯೇ ಹಸಿರು ಬೀನ್ ಬ್ಯಾಗ್. ಮೇಲಿನ ಮಹಡಿಯಲ್ಲಿ ದೊಡ್ಡ ಟಿವಿ ಮತ್ತು ವಿಡಿಯೋ ಗೇಮ್ಸ್. ಮುಕ್ತವಾಗಿ ವಿಚಾರಗಳನ್ನು ಚರ್ಚಿಸುವುದಕ್ಕೆ ಸಕಾರಾತ್ಮಕ ವಾತಾವರಣವನ್ನು ಮೂಡಿಸುವುದಕ್ಕೆ ಕ್ಯೂಬಿಕಲ್‌ಗಳಿಲ್ಲದ, ಹೇಗೆ ಬೇಕೋ ಹಾಗೆ ಜೋಡಿಸಿಡಬಹುದಾದ ಮೇಜು ಮತ್ತು ಚೇರು. ಸುರೇಶ್ ತನ್ನ ಡ್ರಾಯರ್ ತೆರೆದು ನೋಡುವುದಕ್ಕೆ ಮುಂಚೆಯೇ ಅದು ಲಾಕ್ ಆಗಿತ್ತೆಂಬುದರ ಅರಿವು ಮೂಡಿತು. ಆತಂಕವು ಮೈಗೆಲ್ಲ ಹಬ್ಬಿ ಏದುಸಿರು ಬರಲು ಶುರುವಾಗಿತ್ತು.
`ಶಿಟ್, ಯೂ ಪೀಸ್ ಆಫ್ ಶಿಟ್’ ಎಂದು ಡ್ರಾಯರನ್ನು ಬೈದುಕೊಂಡು ಜೋರಾಗಿ ಉಸಿರು ಬಿಟ್ಟ. ಈ ಹಠಾತ್ ಕೋಪ ಸ್ವತಃ ಸುರೇಶನನ್ನೇ ಗಾಬರಿಗೊಳಿಸಿತ್ತು. ಇಷ್ಟು ಕಿರುಚಿಕೊಂಡ ಮೇಲೆ ಪಕ್ಕದಲ್ಲಿ ಇದ್ದ ಸಹೋದ್ಯೋಗಿಗೆ ಕೇಳಿಸಿರಲೇಬೇಕು. ಲೇಖಕನಿಗೆ ಈಕೆಯ ಹೆಸರು ನೆನಪಿಲ್ಲ, ಸದ್ಯಕ್ಕೆ ರಾಖಿ ಎಂದುಕೊಳ್ಳೋಣ. ಅಸಭ್ಯವಾಗಿ ವರ್ತಿಸಿದ ಎನ್ನುವಂತೆ ಅವನನ್ನು ಆಕೆ ದಿಟ್ಟಿಸಿ ನೋಡಿ, ಸ್ವಲ್ಪ ಹೊತ್ತಿನ ನಂತರ ತನ್ನ ಭಾರವಾದ ದೇಹವನ್ನು ಎರ್ಗೊನೊಮಿಕ್ ಕುರ್ಚಿಗೆ ಒರಗಿಸಿಕೊಂಡು, ಮತ್ತೆ ತನ್ನ ಕೀಬೋರ್ಡ್‌ನ ಮೇಲೆ ಬೆರಳಾಡಿಸುತ್ತ, ಮಾನಿಟರ್ ನೋಡಿಕೊಂಡು ಕೆಲಸ ಮುಂದುವರೆಸಿದಳು.
ಮುಂದಾಗುವ ಅನಾಹುತಗಳನ್ನು ಅದಕ್ಕೆ ಪರಿಹಾರಗಳನ್ನು ಯೋಚಿಸುತ್ತ ಸುರೇಶ್ ವಿಚಿತ್ರ ಮುಖಭಂಗಿಗಳನ್ನು ಮಾಡುತ್ತಾ ಕುಳಿತಿದ್ದ. `ಏನಾದರಾಗಲಿ ಮೊದಲು….’ ಎಂದು ಪಿಸುನುಡಿದ ಸುರೇಶ್ ನತ್ತ ನೋಡಿ ರಾಖಿ, ‘ಏನು ದೀಪಕ್ ಕೂಗಿದಿರಾ?’ ಎಂದು ಉದ್ಗರಿಸಿದಳು.
ಸುರೇಶ್ ಚೇರ್ ಮೇಲೆ ಹಾಕಿದ್ದ ತನ್ನ ಕೋಟ್ ಎತ್ತಿಕೊಂಡು `ಡಿ ಸ್ಟ್ರೆಸ್’ ಟೇಬಲ್ಲಿನ ಹತ್ತಿರ ಹಾಕಲಾಗಿದ್ದ ಗ್ರೀನ್ ಬೀನ್ ಬ್ಯಾಗಿನ ಮೇಲೆ ಒರಗಿಕೊಂಡು, ಎದುರಿಗಿದ್ದ `ಪಜಲ್’ ಜೋಡಿಸಲು ಶುರು ಮಾಡಿದ. ಪಜಲ್ ಯಾವುದೆಂಬುದರ ಬಗ್ಗೆ ಲೇಖಕ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ಸದ್ಯದ ಸ್ಥಿತಿಯಲ್ಲಿ ಅದು ತಿಳಿದುಕೊಳ್ಳಬೇಕಾದ ವಿಷಯವಲ್ಲವೇ ಅಲ್ಲ ಎಂಬುದನ್ನು ನೀವು ಕೂಡ ಒಪ್ಪುತ್ತೀರಿ. `ದೊಡ್ಡ ಸಮಸ್ಯೆಗಳನ್ನು ಪರಿಹರಿಸುವ ಮೊದಲು ಮುಂದಿರುವ ಸಣ್ಣ ಸಮಸ್ಯೆಗಳನ್ನು ಎದುರಿಸಬೇಕು’, `ಸಣ್ಣ ವಿಜಯಗಳ ಸಕಾರಾತ್ಮಕ ಶಕ್ತಿಯನ್ನು ಅಲ್ಲಗಳೆಯಬೇಡಿ’, `ಇಂಥದ್ದೊಂದು ವಿಚಾರ ವೈರಲ್ ಆಗಬೇಕು’ ಇತ್ಯಾದಿ ಆನ್ಲೈನ್ ಟಾಕ್‌ನಲ್ಲಿ ಮೋಟಿವಷನಲ್ ಸ್ಪೀಕರ್ ಹೇಳಿದ್ದ ಮಾತುಗಳನ್ನು ನೆನಪಿಸಿಕೊಂಡು ಎದುರಿಗಿದ್ದ ಪಜಲ್ ಪೀಸ್‌ಗಳನ್ನು ಸುರೇಶ್ ಜೋಡಿಸಲಾರಂಭಿಸಿದ. ಬಹುಶಃ ಯಾರೋ ಇದನ್ನು ಅರ್ಧ ಮುಗಿಸಿರಬೇಕು. ಮುಂದುವರಿಸಿದರೆ ಅದನ್ನು ಹಾಳು ಮಾಡಿದಂತಾಗುತ್ತದೆ ಎನ್ನಿಸಿ ಸುತ್ತಲೂ ಒಮ್ಮೆ ನೋಡಿ ಅಲ್ಲಿಗೆ ಅದನ್ನು ಬಿಟ್ಟುಬಿಟ್ಟ.
ನಿಮಗೂ ಗೊತ್ತಿರಲೇಬೇಕಾದ ವಿಷಯವೆಂದರೆ ಸುರೇಶ್ ತನ್ನ ಸುತ್ತ ಮುತ್ತಲಿನವರ ಭಾವನೆಗಳಿಗೆ ಅತ್ಯಂತ ಸಂವೇದನಾಶೀಲನಾಗಿದ್ದ ಮತ್ತು ಅವರ ನೋವುಗಳನ್ನು ಗುರುತಿಸುವ ವಿಶೇಷ ಸಾಮರ್ಥ್ಯವೇ ತನಗಿರುವ ದೊಡ್ಡ ಶಕ್ತಿಯೆಂದು ದೃಢವಾಗಿ ನಂಬಿದ್ದ. ತನ್ನ ಪರಿವಾರದವರ, ಗೆಳೆಯರ ಕಾಳಜಿ, ಸೂಕ್ಷ್ಮ ನಡವಳಿಕೆಗಳಿಂದ ತಾನಿದನ್ನು ಚಿಕ್ಕ ವಯಸ್ಸಿನಲ್ಲೇ ಸಿದ್ಧಿಸಿದ್ದೇನೆ ಎಂಬ ಭಾವನೆ ಅವನಿಗಿತ್ತು. ಇದರಿಂದಾಗಿ ಸುರೇಶ್ ಆನ್ ಲೈನ್ ಆಗಲಿ, ಆಫ್ ಲೈನ್ ಆಗಲಿ `ಟು ದಿ ಲಿಮಿಟ್’ ಸಂಬಂಧಗಳನ್ನು ನೇಯುತ್ತಾ ಎಲ್ಲರ ಕಣ್ಣಲ್ಲೂ ಒಳ್ಳೆಯವನಾಗಿಯೇ ಉಳಿದಿದ್ದ’
ಪಜಲ್ ಪೀಸ್‌ಗಳನ್ನು ಕೆಳಕ್ಕಿರಿಸಿ ಕೀಲಿಕೈಗಳ ಗೊಂಚಲನ್ನು ಚರಂಡಿಗೆ ಎಸೆಯಲು ನಿರ್ಧರಿಸಿದ್ದನೇನೋ ಎನ್ನುವಷ್ಟೇ ವೇಗವಾಗಿ ಎಲಿವೇಟರ್‌ಗಳ ಕಡೆಗೆ ಓಡಿದ. ಹದಿಮೂರನೇ ಮಹಡಿಯಿಂದ ಗ್ರೌಂಡ್ ಫ್ಲೋರ್ ಲಾಬಿಗೆ ಬರುವಷ್ಟರಲ್ಲಿ ಕಚೇರಿಯಿಂದ ಹೊರನಡೆಯುವಾಗ ತನ್ನ ಹೆಸರು ನೆನಪಿಲ್ಲದ ಕಾವಲುಗಾರನಿಗೆ ಏನು ಹೇಳಬಹುದು, ಮನಸ್ಸನ್ನು ನೋಯಿಸದೆ ಪೊಲಿಟಿಕಲಿ ಕರೆಕ್ಟ್ ಆಗಿ ಹೇಗೆ ಮಾತನಾಡಬಹುದು ಎಂದೆಲ್ಲ ಯೋಚಿಸಿದ. ಆಕ್ಸೆಸ್ ಕಾರ್ಡ್ ಇಲ್ಲದೆಯೇ ಮತ್ತೆ ಕಚೇರಿಗೆ ಬರಲೇಬೇಕು. ಕಾವಲುಗಾರನ ಮುಂದೆ ಹಾದು ಹೋಗುತ್ತಿರುವಾಗಲೇ ಆತ ‘ಹ್ಯಾವ್ ಆ ಗುಡ್ ಡೇ ಸರ್’ ಎಂದು ಸುರೇಶನಿಗೆ ಹೇಳಿದ.
ಏನು ಮಾತನಾಡದಿರುವುದೇ ಒಳ್ಳೆಯದು ಎಂಬ ನಿರ್ಧಾರಕ್ಕೆ ಬಂದು, ಅವಮಾನದಲ್ಲಿ ಕುಗ್ಗಿ ಹೋಗಿದ್ದ ಸುರೇಶ್ ತನ್ನ ನಡಿಗೆಯ ವೇಗವನ್ನು ಕಡಿಮೆ ಮಾಡಿಕೊಳ್ಳದೆ ಉಫ್ ಎನ್ನುತ್ತಾ ಹೊರನಡೆದ. ಲಾಬಿಯಿಂದ ಆಚೆ ಬರುತ್ತಲೇ ಸೈಕಲ್ ನಿಲ್ಲಿಸಿದ್ದ ಪಾರ್ಕಿಂಗ್ ಲಾಟ್ ಬಳಿ ತಲುಪಿದ. ಯಾವಾಗಲೂ ಇರುತ್ತಿದ್ದ ಜಾಗದಲ್ಲೇ ಇದ್ದ, ಬೀಗ ಹಾಕಿರುತ್ತಿದ್ದ, ಅದೇ ಕಂಬಕ್ಕೆ ದಿನವೂ ಅಂಟಿಕೊಂಡಿರುತ್ತಿದ್ದ ಸೈಕಲ್ ನೋಡಿ ಕೊಂಚ ನೆಮ್ಮದಿಯ ಭಾವ ಮೂಡಿತು. ಮಂಡಿಯೂರಿ ಕುಳಿತು ಬಹುಶಃ ಈ ಬೀಗವನ್ನಾದರೂ ಸಡಿಲವಾಗಿ ಹಾಕಿರಬಹುದೆಂಬ ಭರವಸೆಯಲ್ಲಿ ಒಂದೆರಡು ಸಲ ಜಗ್ಗಿ ನೋಡಿ, ಇಲ್ಲವೆಂದು ತಿಳಿದಾಗ ಲಾಕ್ ಹಾಕಿದ್ದ ಕಂಬದ ಕಡೆಗೆ ಗಮನ ಹರಿಸಿದ. ಅದೊಂದು ಸ್ವತಂತ್ರವಾಗಿ ನಿಂತಿರುವ ಸಾಮಾನ್ಯ ಲೋಹದ ಕಂಬ. ಬಹುಶಃ ಸರಾಸರಿ ಮನುಷ್ಯನ ಎತ್ತರಕ್ಕಿಂತ ಒಂದು ಅಡಿ ಅಥವಾ ಅದಕ್ಕಿಂತ ಒಂಚೂರು ಹೆಚ್ಚೇ ಇರಬಹುದು. ಇದು ಸುರೇಶನ ಸೈಕಲ್ ಅನ್ನು ಲಾಕ್ ಮಾಡುವುದಕ್ಕಾಗಿಯೇ ಮೀಸಲಾಗಿದೆಯೇನೋ ಅನ್ನಿಸುತ್ತಿತ್ತು. ಅದನ್ನು ಹೊರತು ಬೇರೆ ಯಾವ ಅಸ್ತಿತ್ವವು ಇದ್ದಿರಿಲಿಕ್ಕಿಲ್ಲ. ಒಂದು ಕ್ಷಣ ಯೋಚಿಸಿ, ಸಣ್ಣ ವಿಜಯಗಳ ಸಕಾರಾತ್ಮಕ ಶಕ್ತಿಯನ್ನು ನೆನಪಿಸಿಕೊಂಡು ಸೈಕಲ್ ಅನ್ನು ಕಂಬದ ಮೇಲಿನಿಂದ ಎತ್ತಿಡುವಂತೆ ನಿರ್ಧರಿಸಿ, ಸೈಕಲ್ಲಿನ ಫ್ರೇಮ್ ಅನ್ನು ದೃಢವಾಗಿ ಹಿಡಿದು, ಜೋರಾಗಿ ಉಸಿರೆಳೆದು, ತನ್ನೆಲ್ಲ ಬಲವನ್ನು ಹಾಕಿ ಮೇಲಕ್ಕೆ ಎತ್ತಲು ಪ್ರಯತ್ನಿಸಿದ. ಇನ್ನೇನು ಸಾಧಿಸಿಯೇ ಬಿಟ್ಟೆ ಎನ್ನುವಷ್ಟರಲ್ಲಿ ಇಡೀ ದೇಹವು ನಡುಗಿ, ಹಿಂದಕ್ಕೆ ಎಡವಿದ್ದರಿಂದ, ಸೈಕಲ್ ಕಂಬದ ಮೇಲಿಂದ ಜಾರಿಕೊಂಡು ಮುಂಚಿನ `ಲಾಕಡ್’ ಸ್ಥಿತಿಯಲ್ಲಿಯೇ ಬಂದು ನಿಂತಿತು. ಅಲ್ಲಿ ಯಾರಿರದಿದ್ದರೂ ಅವಮಾನವಾದಂತೆನಿಸಿ ಈ ಸಾಹಸವನ್ನು ಕೈ ಬಿಟ್ಟ.
ಮನೆಗೆ ಓಡಿಹೋಗುವ ಮೊದಲು ಕೀಲಿಕೈ ಗೊಂಚಲನ್ನು ಇನ್ನೊಮ್ಮೆ ನೋಡಲು ಚರಂಡಿಯ ಬಳಿ ನಡೆದ. ಮಂಡಿಯೂರಿ ಕುಳಿತು ಕಬ್ಬಿಣ ಸಲಾಕೆಗಳ ಸಂದಿಯಲ್ಲಿ ಬಗ್ಗಿ ನೋಡಿದಾಗ ನೀರಿನಾಳದಲ್ಲಿ ಅದು ಮತ್ತಷ್ಟು ಹೊಳೆಯುತ್ತಲೇ ಇತ್ತು. ನಿಶ್ಚಲವಾದ ನೀರಿನ ಬಿಳಿ ಬೆಳಕಿನ ಆಯತಗಳು ಕೀಲಿಕೈಗಳ ಆಕಾರದ ಸುತ್ತಲೂ ರೂಪುಗೊಂಡು ಬೆಂಡಾದಂತೆ, ಆಕಾರ ಕಳೆದುಕೊಂಡಂತೆ ಕಾಣುತ್ತಿದ್ದವು . ಮತ್ತೆ ಅದನ್ನು ಹೊರತೆಗೆಯಲು ಪ್ರಯತ್ನಿಸಿ ವಿಫಲಗೊಂಡ. ಸೈಕಲ್ ಸಾಹಸದ ನೋವನ್ನು ಮರೆಯುವುದಕ್ಕೇನೋ ಎಂಬಂತೆ ಕಬ್ಬಿಣದ ಸಲಾಕೆಗಳ ಸಿಮೆಂಟ್ ಬ್ಲಾಕನ್ನು ಜರುಗಿಸಲು ನೋಡಿದ. ಮತ್ತೊಮ್ಮೆ ವಿಡಿಯೋ ಕಾಲ್‌ನ ಮೋಟಿವೇಶನಲ್ ಸ್ಪೀಕರ್ ನೆನಪಾಗಿ, ತನ್ನೆಲ್ಲ ಶಕ್ತಿಯನ್ನು ವ್ಯಯಿಸಿ ಹಟದಿಂದ ಹಿಂದೆ ಬಾಗಿ ಸಿಮೆಂಟ್ ಬ್ಲಾಕನ್ನು ಎಳೆದ. ಮುಚ್ಚಳದ ಮೇಲಿದ್ದ ಬೆರಳುಗಳ ಹಿಡಿತ ಸಡಿಲಗೊಂಡು ಫುಟ್ಪಾತ್ ಮೇಲೆ ಬಿದ್ದು ಆಭಾಸವಾಗಿ ಯಾರೂ ನೋಡಿಲ್ಲವೆಂದು ದೃಢಪಡಿಸಿಕೊಳ್ಳುತ್ತ ಎದ್ದು ಮನೆಯತ್ತ ಓಡಿದ.
ಅಪಾರ್ಟ್ಮೆಂಟ್ ತಲುಪಿದ ಸುರೇಶ್ ಆಕ್ಸೆಸ್ ಕಾರ್ಡ್ ಇಲ್ಲದೆ ಒಳಗೆ ಹೇಗೆ ಹೋಗಬಹುದೆಂದು ಯೋಚಿಸುತ್ತಿರುವಾಗಲೇ ಸ್ವಿಗ್ಗಿ ಡೆಲಿವರಿಯವನನ್ನು ಬಜ್ ಮಾಡಿ ಗಾರ್ಡ್ ಒಳ ಹೋಗಲು ಅವಕಾಶ ಮಾಡಿಕೊಟ್ಟಿದ್ದ. ಸುರೇಶ್ ಅವನ ಹಿಂದೆಯೇ ಗೇಟಿನೊಳಕ್ಕೆ ನುಗ್ಗಿ, ತನ್ನ ಫ್ಲೋರ್‌ನಲ್ಲಿದ್ದ ಅಪಾರ್ಟ್ಮೆಂಟ್ ನಂಬರ್ 45ರ ಬಾಗಿಲ ಬಡಿದ. ಸ್ಪೇರ್ ಕೀ ಆ ಮನೆಯಲ್ಲಿದ್ದ ಮುದುಕಿಯ ಬಳಿ ಇತ್ತು. ಎಷ್ಟು ಹೊತ್ತಾದರೂ ಬಾಗಿಲು ತೆಗೆಯದೆ ಇದ್ದಾಗ ಸಿನೆಮಾಗಳಲ್ಲಿ ತೋರಿಸುವ ಹಾಗೆ ಅಪಾರ್ಟ್ಮೆಂಟ್ ಬಾಗಿಲನ್ನು ಮುರಿದು ಒಳ ನುಗ್ಗಬೇಕು ಎನ್ನಿಸಿತು. ಹಾಗೆ ಮಾಡಲು ಪ್ರಯತ್ನಿಸಿ ಪೆಟ್ಟು ಮಾಡಿಕೊಂಡಿದ್ದಾಯಿತು. ಉಳಿದಿದ್ದ ಇನ್ನೊಂದೇ ದಾರಿ ಎಂದರೆ ಫೈರ್ ಎಕ್ಸಿಟ್ ಮತ್ತು ಬಹುಶಃ ತೆರೆದಿಟ್ಟಿರಬಹುದಾದ ಅಪಾರ್ಟ್ ಮೆಂಟಿನ ಕೋಣೆಯ ಕಿಟಕಿ. ಕುಂಟಿಕೊಂಡು ಅದರತ್ತ ನಡೆದ.
ದಿನವೂ ನೋಡುತ್ತಿದ್ದ ಕಟ್ಟಡದ ಕೆಂಪು ಇಟ್ಟಿಗೆಯು ವಿಶೇಷವಾಗಿ ಕಂಡದ್ದು ಆಗಲೇ. ಹಿಂದೆಂದೂ ಈ ಕೆಂಪು ಬಗೆಹರಿಯದ ಸಮಸ್ಯೆಯಾಗಿ ಕಂಡಿರಲಿಲ್ಲ. ಗೋಡೆಗೆ ಅಂಟಿಕೊಂಡಿದ್ದ, ಎತ್ತರದಲ್ಲಿದ್ದ ಏಣಿಯನ್ನು ಕೆಳಗಿಳಿಸಲು ಏನು ಮಾಡಿದರೂ ಸಾಧ್ಯವಾಗಲಿಲ್ಲ. ಪಕ್ಕದ ಮನೆಯ ಕಿಟಕಿಯನ್ನು ಹತ್ತಿ ಅಲ್ಲಿಂದ ಫೈರ್ ಎಕ್ಸಿಟ್‌ನ ಮೂಲಕ ಹಾದು ನಾಲ್ಕನೆಯ ಮಹಡಿಯನ್ನು ತಲುಪಿದ. ಬೇರೆ ಮನೆಗಳ ಕಿಟಕಿಯಲ್ಲಿ ಇಣುಕಿ ತನ್ನ ಕಷ್ಟವನ್ನೆಲ್ಲ ಹೇಳಿಕೊಂಡುಬಿಡಬೇಕು ಎನಿಸಿದರೂ ಹೇಳಲಾಗಲಿಲ್ಲ. ಪ್ರತಿಯೊಂದರಲ್ಲೂ ಇಣುಕಿ ನೋಡುತ್ತಾ, ಅವರ ಅಪಾರ್ಟ್ಮೆಂಟನ್ನು ಮತ್ತು ಪೀಠೋಪಕರಣಗಳ ಗಾತ್ರವನ್ನು ತನ್ನ ಮನೆಯದಕ್ಕೆ ಹೋಲಿಸಿಕೊಂಡು, ಒಳಗಿರುವವರು ತನ್ನ ಸ್ಥಿತಿಯಲ್ಲಿದ್ದು, ತಾನು ಅಪಾರ್ಟ್ ಮೆಂಟ್ ಒಳಗಿದ್ದಿದ್ದರೆ ಹೇಗೆ ಎಂದು ಊಹಿಸಿಕೊಂಡು ಖುಷಿಪಟ್ಟ. ಓದುಗರಿಗೆ ಇವೆಲ್ಲ ಸಾಧ್ಯವೇ ಎನ್ನಿಸಿದರೂ ಕೊನೆಗೂ ತನ್ನ ಅಪಾರ್ಟ್ಮೆಂಟ್ ಇರುವ ಮಹಡಿಯನ್ನು ತಲುಪಿ, ಮುಚ್ಚಿದ್ದ ಕೋಣೆಯ ಕಿಟಕಿಯನ್ನು ಒಡೆಯಲು ಪ್ರಯತ್ನಿಸಿ ಅದೂ ಆಗದೆ ಕೆಳಗಿಳಿದ.
ಕಚೇರಿಯತ್ತ ಓಡಿ, ಮತ್ತೊಮ್ಮೆ ಮಂಡಿಯೂರಿ ಶಾಂತ ಕಪ್ಪು ನೀರಿನಲ್ಲಿ ಹುದುಗಿದ್ದ ಕೀಲಿಕೈ ಗೊಂಚಲ ಕಡೆ ನೋಡಿದ. ಅರೆ ಏನಿದು? ಕೀಲಿ ಕೈಗಳು ಇಲ್ಲವೇ ಇಲ್ಲ! ಕಬ್ಬಿಣದ ಸಲಾಕೆಗಳಿದ್ದ ಭಾರವಾದ ಸಿಮೆಂಟ್ ಬ್ಲಾಕನ್ನು ಬದಿಗೆ ಸರಿಸಿ ಯಾರೋ ಗೊಂಚಲನ್ನು ಹೊತ್ತೊಯ್ದಿದ್ದಾರೆ. ಇದು ಅಸಾಧ್ಯ! ಸಿಮೆಂಟಿನ ಬ್ಲಾಕ್ ಅನ್ನು ಮತ್ತೆ ಎತ್ತಲು ಹೋಗಿ ವಿಫಲಗೊಂಡು, ನಡುಗುವ ಕೈಗಳನ್ನು ನೆಲಕ್ಕೆ ಊರಿ ಫುಟ್ಪಾತ್ ಮೇಲೆ ಸುರೇಶ್ ಮೌನವಾಗಿ ಕುಳಿತುಬಿಟ್ಟ.
`ಏನಾದರೂ ಆಗಲಿ ಮೊದಲು… ‘ ಅನ್ನುತ್ತಲೇ ವಿಚಿತ್ರವಾದ ಆಲೋಚನೆಯೊಂದು ಹಾದು ಹೋಯಿತು. ಹೊತ್ತೊಯ್ದ ಅಪರಿಚಿತ ವ್ಯಕ್ತಿಯ ಬಳಿ ಸುರೇಶನ ಇಡೀ ಜೀವನದ ಕೀಲಿ ಕೈಯ್ಯಿತ್ತು: ಅಪಾರ್ಟ್ಮೆಂಟ್, ಅವನ ಸೈಕಲ್, ಸೇಫ್, ಆಫೀಸ್ ಡ್ರಾಯರ್, (ಅವನ ಫೋನ್ ಮತ್ತು ವ್ಯಾಲೆಟ್) ಜೊತೆಗೆ ಜಿಮ್ ಸದಸ್ಯತ್ವವೂ ಸಹ. ಈ ಅಪರಿಚಿತ ವ್ಯಕ್ತಿ ನಿಜಕ್ಕೂ ಈಗ ಸುರೇಶನೇ ಆಗಿಬಿಡಬಹುದು! ಈ ಆಲೋಚನೆಯು ಅಚಾನಕ್ಕಾಗಿ ಸರಿದು ಹೋಗಿ ಎಲ್ಲದರಲ್ಲೂ ವಿಫಲತೆಯನ್ನು ಅನುಭವಿಸುತ್ತಿದ್ದ ಸುರೇಶನ ಮುಖದ ಮೇಲೆ ಹಿಂದೆಂದೂ ಮೂಡದ, ಪ್ರಾಮಾಣಿಕವಾದ, ವಿಚಿತ್ರವಾದ ನಗುವೊಂದು ಮೂಡಿತ್ತು.
ಓದುಗರು ಇಲ್ಲಿಗೆ ನಿಲ್ಲಿಸಿ ಈ ವಿಚಿತ್ರ ಕಥೆಯನ್ನು ಲೇಖಕ ಯಾಕೆ ಓದುವಂತೆ ಮಾಡಿದ ಎಂಬುದನ್ನು ಯೋಚಿಸಬಹುದು. ಓದುಗರು ಎಲ್ಲ ಓದುಗರಂತೆಯೇ ಸ್ವಾರಸ್ಯವೇ ಇಲ್ಲದ, ಬದುಕಿನ ಜಂಜಾಟಗಳಲ್ಲಿ ಮುಳುಗಿಹೋಗಿದ್ದ ಅತ್ಯಂತ ಸಾಮಾನ್ಯ ವ್ಯಕ್ತಿಯೊಬ್ಬನ ಕಥೆಯಲ್ಲಿಯೂ ಒಂದು ನಿಗೂಢ ಅರ್ಥವನ್ನು ಹುಡುಕಲು ಪ್ರಯತ್ನಿಸಬಹುದು. ಆ ಕೀಲಿಕೈಗಳು ಏನನ್ನು ಸಂಕೇತಿಸುತ್ತವೆ ? ನಿಜಕ್ಕೂ ಅರ್ಥಮಾಡಿಕೊಳ್ಳಬೇಕಾಗಿರುವ ವಿಷಯವೆಂದರೆ ಕಚೇರಿಯಲ್ಲಿನ ಅಪೂರ್ಣವಾದ ಪಜಲ್ಲೋ ಅಥವಾ ಸುರೇಶನ ಕಾವಲುಗಾರನ ಭೇಟಿಯೋ? ಕಥೆ ಹೀಗೆ ಅಚಾನಕ್ಕಾಗಿ ಎಲ್ಲಿಯೋ ಕೊನೆಗೊಳ್ಳುವುದರ ಹಿಂದಿನ ಉದ್ದೇಶವೇನು? ತಮ್ಮ ಕೀಲಿಕೈಗಳನ್ನು ಇನ್ನೂ ಭದ್ರವಾಗಿ ಕಾಪಿಟ್ಟುಕೊಂಡಿರುವ ಬೇರೆ ಬೇರೆ ಊರುಗಳಲ್ಲಿರುವ ಸುರೇಶರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಲೇಖಕನ ಬಳಿ ಓದುಗರ ಈ ಯಾವ ಪ್ರಶ್ನೆಗಳಿಗೂ ಉತ್ತರವಿಲ್ಲ. ಕಥೆಯನ್ನು ಅಲ್ಲಿಗೇ ಮುಗಿಸಲು ಕಾರಣವಿಷ್ಟೇ, ಲೇಖಕನ ದಣಿವು. ಸುರೇಶ್ ಈಗ ಎಲ್ಲಿದ್ದಾನೆ ಎಂಬುದು ಓದುಗನಿಗೂ ಮತ್ತು ಲೇಖಕನಿಗೂ ನಿಗೂಢವಾಗೇ ಉಳಿದಿದ್ದರೂ, ದಣಿದಿದ್ದ ಸುರೇಶನ ಮುಖದಲ್ಲೇಕೆ ಅಂತಿಮವಾಗಿ ನಗುವಿತ್ತು. ಖುಷಿಯಿತ್ತು. ಆತಂಕ, ಚಿಂತೆಗಳ ನಡುವೆ ಖುಷಿಯೂ ಇತ್ತು ಯಾಕೆ? ನಾವು ಎಲ್ಲದರಲ್ಲೂ ಅರ್ಥ ಹುಡುಕುವುದನ್ನು, ಎಲ್ಲವನ್ನು ತಿಳಿಯಲೇಬೇಕೆಂಬ ಹಟವನ್ನು ಬಹುಶಃ ಮೊದಲು ಬಿಟ್ಟುಬಿಡಬೇಕು!!!
ಆಕರ್ಷ ರಮೇಶ್ ಕಮಲ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸದ್ಯಕ್ಕೆ ಉದ್ಯೋಗದ ನಿಮಿತ್ತ ಫ್ರಾನ್ಸ್ ನಲ್ಲಿ ನೆಲೆಸಿದ್ದಾರೆ. `ಗ್ರಾಫಿಟಿ ಹೂವು’ (ಕವನ ಸಂಕಲನ), ‘ಬರಿಯ ನೆನಪಲ್ಲ’, ‘ಪೆ ನೋ ಹೀಡ್ಸ್ ಟು ರಾಕೆಟ್ಸ್: ಪ್ಯಾಲೆಸ್ಟೈನ್ ಇನ್ ಪ್ರೆಸೆಂಟ್ ಟೆನ್ಸ್’ (ಅನುಭವ ಕಥನದ ಕನ್ನಡ ಅನುವಾದ) ಇವರ ಪ್ರಕಟಿತ ಕೃತಿಗಳು. ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಬರೆಯುತ್ತಾರೆ. ಕಿರುಚಿತ್ರ ನಿರ್ಮಾಣವೂ ಆಕರ್ಷರ ಆಸಕ್ತಿ ಹೊಂದಿರುವ ಇವರು `ಪ್ರೆಸೆಂಟ್ ಸರ್’ ಮತ್ತು `ಮರೀಚಿ’ ಎಂಬ ಎರಡು ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ. ಕಾಮಿಡಿ ಸ್ಕೆಚ್ ವಿಡಿಯೋಗಳ ನಿರ್ಮಾಣ ಮತ್ತು ನಟನೆಯಲ್ಲೂ ಕೂಡ ಆಸಕ್ತಿ ಹೊಂದಿದ್ದಾರೆ.