ನಿನ್ನೆ ನಡು ಮಧ್ಯಾಹ್ನ ಇಂತಹದೇ ಹೊತ್ತು. ಮಳೆಗಾಲದ ಮೋಡಗಳನ್ನು ಚದುರಿಸಿ ಚಲ್ಲಾಪಿಲ್ಲಿ ಮಾಡಿದ್ದ ತುಂಟ ಸೂರ್ಯ ಬೇಕು ಬೇಕೆಂತಲೇ ಇನ್ನಷ್ಟು ವಯ್ಯಾರದಿಂದ ಹೊಳೆಯುತ್ತಿದ್ದ. ಕಡು ನೀಲಿ ಆಕಾಶದ ಪ್ರಖರತೆಗೆ ಬೆದರಿ ಹಿಮ್ಮೆಟ್ಟುವಂತೆ ಚಲಿಸುತ್ತಿದ್ದ ಕರಿಯ ಬಿಳಿಯ ಮಳೆಯ ಮೋಡಗಳು.ಮಿನುಗುತ್ತಿದ್ದ ಭೂಮಿ, ದೂರದಲ್ಲಿ ದೊಡ್ಡದೊಂದು ದೇವರಂತೆ ಲೋಕಕ್ಕೆಲ್ಲಾ ಅಭಯದಂತೆ ನಿಂತುಕೊಂಡಿದ್ದ ನನ್ನ ಪ್ರೀತಿಯ ಅದೇ ಪರ್ವತ! ಭೂಮಿಯ ಮೇಲೆ ಚಲಿಸುತ್ತಿದ್ದ ಮನುಷ್ಯರು, ಎದ್ದು ನಿಂತಿದ್ದ ಕಟ್ಟಡಗಳು, ಎಷ್ಟು ಬೆಳೆದು ಬದಲಾಗಿದ್ದರೂ ಕಂಡೊಡನೆ ಮತ್ತೆ ಅದೇ ವಾತ್ಸಲ್ಯ ಸೂಸುವ ಕಣ್ಣುಗಳು.
ಅಲ್ಲಿ ತೀರಿಹೋದ ಜೀವವೊಂದು ಅಂತ್ಯಸಂಸ್ಕಾರಕ್ಕಾಗಿ ಕೊನೆಯ ಸ್ನಾನ ಮಾಡಿಸಿಕೊಂಡು, ಸುತ್ತಿದ್ದ ಬಿಳಿ ಬಟ್ಟೆಯ ಮೇಲೆಲ್ಲ ಅತ್ತರು ಪೂಸಿಸಿಕೊಂಡು ಆ ಅಪೂರ್ವ ಹೊತ್ತಿಗೆ ಎಲ್ಲದಕ್ಕು ಸಾಕ್ಷಿಯಂತೆ, ಎಲ್ಲವನ್ನೂ ಒಂದೆಡೆಗೆ ಸೇರಿಸಿದ್ದಕ್ಕೆ ಕಾರಣೀಭೂತನಂತೆ ಒಳಗೊಳಗೆ ಖುಷಿ ಪಟ್ಟುಕೊಂಡವನಂತೆ ಉಸಿರಿಲ್ಲದೆ ಸುಮ್ಮನೆ ಮಲಗಿತ್ತು. ನಾನು ತಲುಪುವ ಹೊತ್ತಿಗೆ ಮುಖವನ್ನೂ ಹತ್ತಿಯಿಂದ ಮುಚ್ಚಿ ಬಿಳಿಬಟ್ಟೆಯಿಂದ ಸುತ್ತಿ ಎತ್ತಿಕೊಂಡು ಹೋಗಲು ತಯಾರಾಗಿದ್ದರು. ಆಯ್ತು ಇದೊಂದು ಸಲ ಕೊನೆಯ ಸಲ ಎಂಬಂತೆ ಮುಚ್ಚಿದ್ದ ಮುಖವನ್ನು ಸ್ವಲ್ಪ ತೋರಿಸಿದರು. ಯಾವತ್ತೂ ಇದ್ದ ಹಾಗಿನ ಅದೇ ಮುಖ.
ಹೌದು ನನ್ನದೇ ಎಲ್ಲಾ ತಪ್ಪು ಆದರೆ ಯಾವುದಕ್ಕೂ ನಾನು ಕಾರಣನಲ್ಲ ಎಂದು ಹೇಳುವಂತಿದ್ದ ಅದೇ ಅಮಾಯಕ ತುಂಟ ಮುಖ. ತುಟಿಗಳ ನಡುವೆ ವಿನಾಕಾರಣವೆಂಬಂತೆ ಕ್ಷೀಣವಾಗಿ ಹೊಳೆಯುತ್ತಿದ್ದ ಕಟ್ಟಿಸಿಕೊಂಡಿದ್ದ ಒಂದು ಬೆಳ್ಳಿಯ ಹಲ್ಲು. ಶೋಕತಪ್ತರ ನಡುವೆ ಕುಸಿಯುವಂತೆ ನಿಂತುಕೊಂಡಿದ್ದ ಮಡದಿ ಮತ್ತೆ ಕೊನೆಯ ಸಲ ನೋಡಲೆಂಬಂತೆ ಓಡಿಬಂದಾಗ ಆ ಮುಖವನ್ನು ಮತ್ತೆ ಮುಚ್ಚಲಾಯಿತು ಮತ್ತು ಪ್ರಾರ್ಥನಾ ಮಂದಿರದತ್ತ ಕೊನೆಯ ಪ್ರಾರ್ಥನೆಗಾಗಿ ಎತ್ತಿಕೊಂಡು ಹೋಗಲಾಯಿತು.
ನಾನು ಜೀವನದಲ್ಲಿ ಇದೇ ಮೊದಲ ಸಲ ಎಂಬಂತೆ ಆ ಪ್ರಾರ್ಥನಾ ಮಂದಿರದಲ್ಲಿ ಕೈಕಟ್ಟಿಕೊಂಡು ಪ್ರಾರ್ಥಿಸುತ್ತಿದ್ದೆ.ಸಣ್ಣದಿರುವಾಗ ಹೀಗೆಯೇ ಪ್ರಾರ್ಥನಾ ಮಂದಿರದಲ್ಲಿ ಕೈಕಟ್ಟಿಕೊಂಡು ನಿಂತುಕೊಂಡಾಗ ತಲೆಯೊಳಗೆ ಬಂದು ಸೇರುತ್ತಿದ್ದ ಕಥೆಗಳು, ಕವಿತೆಗಳು! ಭಕ್ತಿಯೂ ಇಲ್ಲದೆ ಭಯವೂ ಹುಟ್ಟದೆ ಅದರ ಬದಲು ನದಿಯಂತೆ ಎದೆಯಲ್ಲಿ ಹರಿದುಹೋಗುತ್ತಿದ್ದ ತುಂಟತುಂಟ ಆಲೋಚನೆಗಳು. ಆ ದೇವರು ಇರುವುದಾದರೆ, ಅವನಿಗೆ ಎಲ್ಲವ ಕರುಣಿಸುವ ಕಾರುಣ್ಯ ಇರುವುದಾದರೆ ನಡುಹೊತ್ತಿನ ತಂಗಾಳಿಯ ಸುಖದಂತಹ ಅವಳೊಬ್ಬಳ ಸಾಮೀಪ್ಯ ಸಿಗಲೆಂದು ಅಮಾಯಕನಾಗಿ ಪ್ರಾರ್ಥಿಸುತ್ತಿದ್ದ ಹುಚ್ಚುಹುಚ್ಚು ದಿನಗಳು. ಅದರಿಂದ ಹುಟ್ಟುತ್ತಿದ್ದ ಹುಚ್ಚುಹುಚ್ಚು ಆಲೋಚನೆಗಳು. ಪುಂಖಾನುಪುಂಖವಾಗಿ ಹುಟ್ಟುತ್ತಿದ್ದ ಕಥೆಗಳು ಕವಿತೆಗಳು. ಆದರೆ ದೇವರು ಇರುವುದು ಇಂತಹ ಹುಚ್ಚುಹುಚ್ಚು ಬೇಡಿಕೆಗಳಿಗಾಗಿ ಅಲ್ಲ ಎಂದು ಅರಿವಾಗಿ ಪ್ರಾರ್ಥಿಸುವುದನ್ನು ನಿಲ್ಲಿಸಿದ್ದೆ. ಅದರ ಬದಲು ಪ್ರಾರ್ಥಿಸುತ್ತಿದ್ದವನೊಬ್ಬನ ಮನಸ್ಸನ್ನು ಹೊಕ್ಕು ಅವನೇನು ಪ್ರಾರ್ಥಿಸುತ್ತಿರುವನು ಎಂದು ಅರಿಯಲು ನೋಡುತ್ತಿದ್ದೆ.
ಮಸೀದಿಗಳ ಅಗಾಧ ಏಕಾಂತದಂತಹ ಮೌನದ ಒಳಗೆ, ಗರ್ಭಗುಡಿಗಳ ಒಳಗೆ ಹೊಳೆಯುತ್ತ ನಿಂತಿರುವ ದೇವಾನುದೇವತೆಗಳ ಕಣ್ಣುಗಳಲ್ಲಿ. ಗಗನದ ಕಡೆ ತಲೆ ಎತ್ತಿಕೊಂಡು ನಿಂತಿರುವ ಇಗರ್ಜಿಗಳ ಬಲಿಪೀಠಗಳಲ್ಲಿ, ಕಾಡುಗಳ ಒಳಗಿನ ಭೂತಸ್ಥಾನಗಳಲ್ಲಿ, ರಾಕ್ಷಸನ ಹಾಗಿರುವ ಮರಗಳ ಅನೂಹ್ಯ ಪೊಟರೆಗಳಲ್ಲಿ ನೆಲೆಸಿರುವ ಮಾತೃದೇವತೆಗಳ ಸನ್ನಿಧಿಯಲ್ಲಿ ಎಲ್ಲ ಕಡೆಯೂ ಧೀನನಾಗಿ ಪ್ರಾರ್ಥಿಸುತ್ತಿರುವ ಬಹುತೇಕ ನರಮನುಷ್ಯರ ಬೇಡಿಕೆಗಳಲ್ಲಿ ನನಗೆ ಆಧ್ಯಾತ್ಮಗಳೇನೂ ಕಂಡು ಬರದೆ ಕಥೆಗಳಿಗೂ ಕಾದಂಬರಿಗಳಿಗೂ ವಸ್ತುವಾಗಬಲ್ಲ ಗಂಭೀರವೂ ರಸಭರಿತವೂ ಆದ ಕಥಾಪ್ರಸಂಗಗಳೇ ಕಾಣಿಸತೊಡಗಿ ಪ್ರಾರ್ಥಿಸದಿರುವುದು ಅಷ್ಟೇನೂ ಕೆಟ್ಟದೇನೂ ಅಲ್ಲ ಎಂದು ಸುಮ್ಮನೆ ಓಡಾಡುತ್ತಿದ್ದೆ.
ನಿನ್ನೆ ಮಳೆ ನಿಂತ ಮೇಲಿನ ನಡು ಹಗಲ ಆ ಹೊತ್ತಲ್ಲಿ ತೀರಿಹೋದ ಆ ದೇಹವನ್ನು ಬೆಳ್ಳನೆಯ ಬಟ್ಟೆಯಲ್ಲಿ ಸುತ್ತಿ, ಅತ್ತರು ಪೂಸಿ, ಹೆಗಲಲ್ಲಿ ಹೊತ್ತುಕೊಂಡು ನಿದಾನಕ್ಕೆ ನಡೆದು, ನೋವಾಗದಂತೆ ಮೆಲ್ಲಗೆ ಅದನ್ನು ಪ್ರಾರ್ಥನಾ ಮಂದಿರದ ನಿಶ್ಯಭ್ಧ ಮೌನದಲ್ಲಿ ಇರಿಸಿ ಅದರ ಇರವಿನ ಅರಿವಿನಲ್ಲಿ ಪ್ರಾರ್ಥಿಸುತ್ತಿರುವಾಗ ಏನೂ ಮರೆತೇ ಇಲ್ಲವೆಂಬಂತೆ ಕೈಕಾಲುಗಳು ಚಲಿಸುತ್ತಿದ್ದವು. ನಿನ್ನೆ ತಾನೇ ಇಲ್ಲಿ ಪ್ರಾರ್ಥಿಸಿ ಮುಗಿಸಿ ಎದ್ದು ಹೋಗಿರುವೆನೋ ಎಂಬಂತೆ ತುಟಿಯಿಂದ ಹೊರಡುತ್ತಿರುವ ಆರಾಧನೆಯ ವಾಕ್ಯಗಳು. ಎಲ್ಲ ಮೊದಲೇ ನಿರ್ದರಿಸಿರುವಂತೆ ಚಲಿಸುತ್ತಿರುವ ಆವಯವಗಳು. ತಲೆಯ ತುಂಬ ತುಂಬಿಕೊಂಡಿರುವ ಪಡೆದವನ ರೂಪವಿಲ್ಲದ ರೂಪ.
ನಾನೂ ಎಲ್ಲರೊಡನೆ ತೀರಿಹೋದವನನ್ನು ನರಕದ ಶಿಕ್ಷೆಯಿಂದ ಪಾರು ಮಾಡು ಪಡೆದವನೇ ಎಂದು ಕೇಳಿಕೊಳ್ಳುತ್ತಿದ್ದೆ. ಆಯ್ತು ಸರಿ ಸರಿ ಅನ್ನುವ ಹಾಗೆ ಪ್ರಾರ್ಥನಾ ಮಂದಿರದ ಗೋಪುರದ ಮೇಲಿಂದ ಹಾದು ಹೋಗುತ್ತಿರುವ ಮಳೆಯ ಮೋಡಗಳು. ಹೌದು ನನ್ನ ಹಾಗೆಯೇ ನರಕದ ಶಿಕ್ಷೆಯಿಂದ ಪಾರು ಮಾಡಲೇ ಬೇಕಾದ ಈ ಜೀವವೇ ಎಂದು ನಡು ನಡುವಲ್ಲಿ ಸೇರಿಸಿಕೊಳ್ಳುತ್ತಿದ್ದೆ. ಪಡೆದವನೇ ಈ ಭೂಮ್ಯಾಕಾಶ ಮತ್ತು ಅದರಲ್ಲಿ ಅಡಗಿರುವ ಎಲ್ಲ ಅಸ್ತಿತ್ವಗಳಿಗೂ ನೀನೇ ಪ್ರಕಾಶಕನಾಗಿರುವಿ. ನಿನ್ನ ಅಸ್ತಿತ್ವ ಸತ್ಯ, ನಿನ್ನ ವಾಗ್ದಾನ ಸತ್ಯ ಮತ್ತು ನಿನ್ನ ವಚನಗಳೆಲ್ಲವೂ ಸತ್ಯವಾಗಿರುತ್ತದೆ. ನನ್ನ ಮೊರೆಯನ್ನು ನಿನ್ನ ಮುಂದಿಟ್ಟಿರುವೆ. ನನ್ನ ಕಳೆದುಹೋದದ್ದೂ, ಬಹಿರಂಗಗೊಳ್ಳದ್ದೂ ಮತ್ತು ಬಾಹ್ಯವಾದದ್ದೂ ಆದ ಪಾಪಗಳ ಅರಿವಿರುವ ನೀನು ನರಕದ ಶಿಕ್ಷೆಯಿಂದ ಪಾರು ಮಾಡು ಪಡೆದವನೇ ಎಂದು ಜೀವವಿಲ್ಲದ ಆ ದೇಹವೂ ನನ್ನೊಡನೆ ಬೇಡಿಕೊಳ್ಳುತ್ತಿರುವಂತೆ ಮತ್ತೆ ತಲೆಯೊಳಗೆ ಕಥಾಪ್ರಸಂಗಗಳು ಓಡಾಡತೊಡಗಿ ಸಣ್ಣಗೆ ನಗುವೂ ಬೇಸರವೂ ಮೆಲ್ಲಗಿನ ಹೆದರಿಕೆಗಳೂ ತುಂಬಿಕೊಳ್ಳುತ್ತಿದ್ದವು.
ಒಬ್ಬ ಪ್ರೇಮಿಯಂತೆ, ಒಬ್ಬ ವಿರಹಿಯಂತೆ, ಒಬ್ಬ ಬಂಡಾಯಗಾರನಂತೆ, ಒಂದು ಕೆಟ್ಟ ಗಂಡಸಿನಂತೆ, ಕುಡುಕನಂತೆ, ಕಥೆಗಾರನಂತೆ, ಅಪರೂಪಕ್ಕೆ ವಾತ್ಸಲ್ಯಮಯಿ ನೆಂಟನಂತೆ ಬದುಕಿದ್ದ ಮನುಷ್ಯ ತನ್ನ ಇನ್ನೇನು ಒಂದು ವರ್ಷದಲ್ಲಿ ತನ್ನ ಕೊನೆಗಾಲ ಬಂದಿತು ಅನಿಸಿದಾಗ ಇದ್ದಕ್ಕಿದ್ದಂತೆ ಸರಿಯಾಗಿದ್ದರು. ಪ್ರಾರ್ಥನಾ ಮಂದಿರಕ್ಕೆ ತೆರಳಿ ಪ್ರಾರ್ಥಿಸಲು ತೊಡಗಿದ್ದರು. ಅದೆಲ್ಲಿ ಇತ್ತೋ ಮಿದುಳಲ್ಲಿ ಧಾರ್ಮಿಕವಾದ ಕಥಾಪ್ರಸಂಗಗಳು ಎದುರು ಬಂದವರಿಗೆ ಹೇಳಲು ತೊಡಗಿದ್ದರು. ಖಾಸಗಿ ಬಿಕ್ಕಟ್ಟುಗಳನ್ನು ಪರಿಹರಿಸುವಾಗ ಅನುಸರಿಸಬೇಕಾದ ಧಾರ್ಮಿಕ ಕಟ್ಟುಕಟ್ಟಲೆಗಳು, ಮರಣದ ಹೊತ್ತಲ್ಲಿ ಪಾಲಿಸಬೇಕಾದ ಅಂತ್ಯ ಸಂಸ್ಕಾರಗಳು ಎಲ್ಲವನ್ನು ಆ ಊರಿನ ಅರಿಯದವರಿಗೆ ಹೇಳಬಲ್ಲವರಾಗಿದ್ದರು. ಹಾಗಾಗಿ ಅದುವರೆಗೆ ಅವರನ್ನು ಧ್ವೇಷಿಸುತ್ತಿದ್ದವರೂ ಮರಣದ ಹೊತ್ತಲ್ಲಿ ಅವರ ಅಭಿಮಾನಿಗಳಾಗಿ ನರಕದ ಶಿಕ್ಷೆಯಿಂದ ಅವರನ್ನು ಪಾರುಮಾಡುವಂತೆ ಒಕ್ಕೊರಲಲ್ಲಿ ನಿಶ್ಯಬ್ಧವಾಗಿ ಆ ಪ್ರಾರ್ಥನಾ ಮಂದಿರದ ನೀರವತೆಯಲ್ಲಿ ಪ್ರಾರ್ಥಿಸುತ್ತಿದ್ದರು.
ಕೊನೆಯಲ್ಲಿ ಅವರ ಮರಣಿಸಿದ ದೇಹವನ್ನು ಆ ಊರಿನ ಅಡವಿಯೊಳಗಿನ ಖಬರಸ್ಥಾನದಲ್ಲಿ ಮಣ್ಣಿನೊಳಗಡೆ ಇಳಿಸಲಾಯಿತು. ಎಲ್ಲಿಂದಲೋ ಬಂದು ಹಾಡಲು ತೊಡಗಿದ ಪಂಚವರ್ಣದ ಗಿಳಿಗಳು, ಕಾಡು ಮೈನಾ ಹಕ್ಕಿಗಳು, ಜೀಕುವ ಜೀರುಂಡೆಗಳು ಮತ್ತು ಈ ನೆಲದ ನಿಜದ ವಾರಸುದಾರರು ನಾವೇ ಎಂಬಂತೆ ಹರಿದಾಡುತ್ತಿದ್ದ ಇರುವೆಗಳು. ಅದಾಗಲೇ ಮಣ್ಣಲ್ಲಿ ಮಣ್ಣಾಗಿ ಹೋದವರ ತಲೆಯ ದಿಕ್ಕಿಗೆ ನೆಟ್ಟಿದ್ದ ಗೋರಿಕಲ್ಲುಗಳ ಮೇಲೆ ಬಲೆ ಹರಡಿಕೊಂಡು ಉಲ್ಲಾಸದಲ್ಲಿ ಕಾಯುತ್ತಿದ್ದ ವಿವಿದ ಜಾತಿಗಳ ಜೇಡಗಳು. ಯಾವ ಚಕ್ರವರ್ತಿಗೂ, ಕವಿಗೂ ಸಿಗದಂತಹ ಅಂತಿಮ ವಿಶ್ರಮದ ಜಾಗ ಈ ನನ್ನ ಕಥಾನಾಯಕನ ಪಾಲಾಗಿತ್ತು. ನಾನು ಇದುವರೆಗೆ ಗಮನಿಸಿರದ ನುಣುಪು ಕೊಂಬೆಗಳ ನಸು ಹಸಿರು ಬಣ್ಣದ ಉದ್ದನೆಯ ಎಲೆಯಿರುವ ಆಕಾಶಕ್ಕೆ ತಲೆಯೆತ್ತಿ ನಿಂತಿರುವ ಸುಂದರಿಯ ಹಾಗಿರುವ ಮರ. ಅದರ ಕೆಳಗಿನ ತಣ್ಣನೆಯ ಮಣ್ಣಲ್ಲಿ ಇನ್ನು ಅಂತಿಮ ತೀರ್ಮಾನದವರೆಗೆ ಇರುವ ಅವಕಾಶ ಈ ನನ್ನ ಕಥಾ ನಾಯಕನಿಗೆ. ಪಡೆದವನ ಕರುಣೆಗಳ ಯೋಚಿಸುತ್ತಾ ಅಲ್ಲಿ ನಿಂತುಕೊಂಡಿದ್ದೆ
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.