ಪಾತ್ರೆ ತೊಳೆದು ಮುಗಿಸಿದ ಅಮ್ಮ ಹಾಲಿಗೆ ಬಂದು ಮೊದಲು ನೆಲದ ಹಾಸನ್ನು ಬ್ರಶ್ನಿಂದ ತಿಕ್ಕಿ ಸ್ವಚ್ಛಗೊಳಿಸುತ್ತಿದ್ದರು. ನಂತರ ಇಡಿಯ ಮನೆಯನ್ನು ಗುಡಿಸಿ, ಒರೆಸುತ್ತಿದ್ದರು. ಆಗೆಲ್ಲ ಆ ಸುಂದರ ಹೆಂಗಸು ಸೋಫಾದ ಮೇಲೆ ಮಲಗಿ ಪುಸ್ತಕವನ್ನು ಓದುತ್ತಲೇ, ಏನಾದರೂ ದೂರುಗಳನ್ನು ದಾಖಲಿಸುತ್ತಿದ್ದಳು. ಟೇಬಲ್ ಮೇಲೆ ಕುಳಿತು ಇದನ್ನೆಲ್ಲ ನೋಡುತ್ತಿದ್ದ ಪುಟ್ಟ ಹುಡುಗಿಗೆ ಅರ್ಥವಾಗದ ವಿಷಯವೊಂದಿತ್ತು. ದೊಡ್ಡ ಹೊಟ್ಟೆಯನ್ನು ಹೊತ್ತ ಅಮ್ಮ ಇಷ್ಟೊಂದು ಕೆಲಸವನ್ನು ಕಷ್ಟಪಟ್ಟು ಮಾಡುತ್ತಿರುವಾಗ ಸುಂದರವಾದ ಆ ಹೆಂಗಸು ಸುಮ್ಮನೆ ಯಾಕೆ ಕುಳಿತಿರುತ್ತಾಳೆ ಎಂಬುದು!
ಇಟಲಿಯ ಸಾಹಿತಿ ಮತ್ತು ಪತ್ರಕರ್ತೆಯಾಗಿದ್ದ ಓರಿಯಾನ ಪಲಾಸಿಯವರ ‘ಎಂದಿಗೂ ಹುಟ್ಟದ ಮಗುವಿಗೆ ಪತ್ರ’ ಕಾದಂಬರಿಯನ್ನು ಸುಧಾ ಆಡುಕಳ ಕನ್ನಡಕ್ಕೆ ಅನುವಾದಿಸುತ್ತಿದ್ದು, ಅದರ ಭಾಗವೊಂದು ನಿಮ್ಮ ಓದಿಗೆ ಇಲ್ಲಿದೆ
‘ಎಂದಿಗೂ ಹುಟ್ಟದ ಮಗುವಿಗೆ ಪತ್ರ’ ಇದು ಇಟಲಿಯ ಸಾಹಿತಿ ಮತ್ತು ಪತ್ರಕರ್ತೆಯಾಗಿದ್ದ ಓರಿಯಾನ ಪಲಾಸಿ ಅವರು 1970ರ ದಶಕದಲ್ಲಿ ಬರೆದ ಕಾದಂಬರಿ. ಅಚಾನಕ್ಕಾಗಿ ತನ್ನೊಳಗೆ ಒಡಮೂಡುವ ಭ್ರೂಣವೊಂದಕ್ಕೆ ಇನ್ನೂ ಮದುವೆಯಾಗಿರದ ಒಂಟಿ ತಾಯಿಯೊಬ್ಬಳು ಬರೆಯುವ ಪತ್ರಗಳ ಗುಚ್ಛವಿದು. ಮಗುವನ್ನು ಭೂಮಿಗೆ ತರುವುದು ಕರ್ತವ್ಯ ಅಥವಾ ಹೊಣೆಗಾರಿಕೆಯಲ್ಲ, ಅದೊಂದು ಆಯ್ಕೆ ಎಂಬ ಖಚಿತ ಅಭಿಪ್ರಾಯ ಹೊಂದಿರುವ ತಾಯಿಯೊಬ್ಬಳು ಮಗುವು ಮುಂದೆ ಕಾಲಿರಿಸಬೇಕಾದ ಈ ಲೋಕದ ವಾಸ್ತವದ ಚಿತ್ರಣವನ್ನು ಮಗುವಿನ ಮುಂದಿಡುತ್ತಾ ಹೋಗುತ್ತಾಳೆ. ತಾಯ್ತನವನ್ನು ವೈಜ್ಞಾನಿಕ, ಧಾರ್ಮಿಕ, ಸಾಮಾಜಿಕ, ತಾತ್ವಿಕ ಮತ್ತು ರಾಜಕೀಯ ಹೀಗೆ ಎಲ್ಲ ನೆಲೆಯಲ್ಲಿ ಕಾದಂಬರಿ ಚರ್ಚಿಸುತ್ತದೆ. ಬಸುರಿತನದ ಪ್ರಾರಂಭಿಕ ಬಳಲಿಕೆಯಿಂದ ಆಸ್ಪತ್ರೆಯಲ್ಲಿ ಅಲ್ಲಾಡದೇ ಮಲಗಿರಬೇಕಾದ ಅನಿವಾರ್ಯ ಸಂದರ್ಭದಲ್ಲಿ ತನ್ನ ಮಗುವಿಗೆ ಅಮ್ಮ ಹೇಳುವ ಮೂರು ಕಿನ್ನರ ಕಥೆಗಳು ಇಲ್ಲಿವೆ.
ನಾನು ನಿನಗಾಗಿ ಮೂರು ಕಿನ್ನರ ಕತೆಗಳನ್ನು ಬರೆದಿರುವೆ. ಓಹ್! ಎದ್ದೇಳಲಾಗದ ನಾನು ಬರೆಯುವುದಾದರೂ ಹೇಗೆ? ಹಾಗಾಗಿ ಮನಸ್ಸಿನಲ್ಲಿಯೇ ಅವುಗಳನ್ನು ಹೆಣೆದಿರುವೆ. ಕತೆ ಕೇಳುವುದು ನಿನಗೆ ಇಷ್ಟವಲ್ಲವೆ? ಹೇಳುತ್ತೇನೆ ಕೇಳು. ಒಂದಾನೊಂದು ಕಾಲದಲ್ಲಿ ಪುಟ್ಟ ಹುಡುಗಿಯೊಬ್ಬಳಿದ್ದಳು. ಮನೆಯ ಹೂದೋಟದ ನಡುವೆ ಬೆಳೆದ ಮಂಗೋಲಿಯನ್ ಮರವೆಂದರೆ ಆಕೆಗೆ ಬಹಳ ಇಷ್ಟವಾಗಿತ್ತು. ಮನೆಯ ಮಾಳಿಗೆಯಲ್ಲಿ ನಿಂತು ಮಂಗೋಲಿಯನ್ ಮರವನ್ನು ನೋಡಲು ಅವಳು ಕಿಟಕಿಯಲ್ಲಿ ಇಣುಕುತ್ತಿದ್ದಳು. ಪುಟ್ಟ ಹುಡುಗಿಯಾದ್ದರಿಂದ ಕಿಟಕಿ ಅವಳಿಗೆ ಎಟುಕುತ್ತಿರಲಿಲ್ಲ, ಹಾಗಾಗಿ ಕುರ್ಚಿಯ ಮೇಲೇರಿ ಅವಳು ಕಿಟಕಿಯಲ್ಲಿ ಇಣುಕುತ್ತಿದ್ದಳು. ಇದನ್ನು ನೋಡಿದಾಗಲೆಲ್ಲ ಅವಳಮ್ಮ, “ಓ ದೇವ್ರೇ, ಇವಳು ಬೀಳುತ್ತಾಳೆ, ಒಂದಲ್ಲ ಒಂದು ದಿನ ಕಿಟಕಿಯಿಂದ ಕೆಳಗೆ ಬೀಳುತ್ತಾಳೆ.” ಎಂದು ಕಿರುಚುತ್ತಿದ್ದಳು. ಆ ಮಂಗೋಲಿಯಾ ಮರವಾದರೋ ಉದ್ದುದ್ದ ಟೊಂಗೆಗಳನ್ನು ಚಾಚಿಕೊಂಡು, ದೊಡ್ಡ ದೊಡ್ಡ ಎಲೆಗಳನ್ನು ಚಿಗುರಿಸಿಕೊಂಡು, ಬಿಡಿಸಿಟ್ಟ ಬಿಳಿಯ ಕರವಸ್ತ್ರದಂತಹ ಅಗಲವಾದ ಹೂವರಳಿಸಿಕೊಂಡು ನಿಂತಿರುತ್ತಿತ್ತು. ಹೂಗಳು ಬಹಳ ಎತ್ತರದಲ್ಲಿರುವುದರಿಂದ ಯಾರೊಬ್ಬರಿಗೂ ಅವುಗಳನ್ನು ಕೊಯ್ಯಲಾಗುತ್ತಿರಲಿಲ್ಲ. ಅಚ್ಚಬಿಳಿಯ ಹೂಗಳು ಹಳದಿಬಣ್ಣಕ್ಕೆ ತಿರುಗಿ ಹಳೆಯದಾದಾಗ ತಮ್ಮಷ್ಟಕ್ಕೆ ತೊಟ್ಟು ಕಳಚಿಕೊಂಡು ‘ಜಕ್…’ ಎಂಬ ಶಬ್ದದೊಂದಿಗೆ ನೆಲಕ್ಕೆ ಉರುಳುತ್ತಿದ್ದವು. ಯಾರಾದರೊಬ್ಬರು ಆ ಸುಂದರ ಹೂವುಗಳನ್ನು ಬಿಳಿಯಾಗಿರುವಾಗಲೇ ಕೊಯ್ಯಬೇಕೆಂದು ಹುಡುಗಿ ದಿನವೂ ಕನಸು ಕಾಣುತ್ತಿದ್ದಳು. ಹಾಗೆ ಕೊಯ್ಯುವವರಿಗಾಗಿ ಕಾಯುತ್ತ ದಿನವೂ ಕಿಟಕಿಯಲ್ಲಿ ಇಣುಕುತ್ತಿದ್ದಳು.
ಮಾಳಿಗೆಗೆ ಹೊಂದಿಕೊಂಡಂತೆ ಚಾಚಿಕೊಂಡಿರುವ ಟೆರೇಸಿನಲ್ಲಿ ಮನೆಯ ಬಟ್ಟೆಗಳನ್ನು ಒಣಹಾಕುತ್ತಿದ್ದರು. ಸುತ್ತಲೆಲ್ಲೂ ಯಾವ ಮನೆಗಳೂ ಇರಲಿಲ್ಲ. ಒಂದು ದಿನ ಹುಡುಗಿ ಇಣುಕಿ ನೋಡುತ್ತಿರುವಂತೆಯೇ ಟೆರೇಸಿನ ಮೇಲೆ ಹೆಂಗಸೊಬ್ಬಳು ಬಂದು ಮಂಗೋಲಿಯಾ ಮರವನ್ನೇ ದಿಟ್ಟಿಸತೊಡಗಿದಳು. ಇವಳು ಖಂಡಿತವಾಗಿಯೂ ತಾಜಾ ಹೂಗಳನ್ನು ಕೊಯ್ಯಬಹುದೆಂದು ಹುಡುಗಿ ಕಾಯತೊಡಗಿದಳು. ಅಷ್ಟರಲ್ಲಿ ಅಲ್ಲಿಗೆ ಇನ್ನೊಬ್ಬ ಗಂಡಸಿನ ಆಗಮನವಾಯಿತು. ಅವನು ಅವಳನ್ನು ತನ್ನ ತೋಳಿನಲ್ಲಿ ಬಳಸಿದ. ಅವಳೂ ಅವನನ್ನು ಬಿಗಿದಪ್ಪಿಕೊಂಡಳು. ನಂತರ ಇಬ್ಬರೂ ಅಲ್ಲೇ ಟೆರೇಸಿನ ಮೇಲೆ ಮಲಗಿ ತಬ್ಬಿಕೊಂಡು, ಒಬ್ಬರ ಮೇಲೊಬ್ಬರು ಉರುಳಾಡುತ್ತ ಏದುಸಿರು ಬಿಡತೊಡಗಿದರು. ಸ್ವಲ್ಪ ಹೊತ್ತಿನಲ್ಲಿ ಹಾಗೆಯೇ ನಿದ್ದೆಹೋದರು. ಹುಡುಗಿಗೆ ‘ಇವರೇಕೆ ಇಲ್ಲಿ ಬಂದು ಮಲಗಿದರು?’ ಎಂಬುದು ಅರ್ಥವಾಗಲಿಲ್ಲ. ಅದೇ ಹೊತ್ತಿನಲ್ಲಿ ಅಲ್ಲಿಗೆ ಇನ್ನೊಬ್ಬ ಗಂಡಸಿನ ಆಗಮನವಾಯಿತು. ಅವರಿಬ್ಬರನ್ನು ಆ ಸ್ಥಿತಿಯಲ್ಲಿ ನೋಡಿ ಅವನು ಅತೀವ ಕೋಪದಲ್ಲಿರುವಂತೆ ಕಾಣುತ್ತಿತ್ತು. ಇಬ್ಬರನ್ನು ಹಿಡಿದೆಳೆದೊಡನೇ ಮೊದಲು ಬಂದ ಗಂಡಸು ಟೆರೇಸಿನಿಂದ ಪಕ್ಕದ ಕಂಪೌಂಡ್ ಗೋಡೆಯ ಮೇಲೆ ಜಿಗಿದು ಮರೆಯಾದ. ಅವನು ಹೆಂಗಸನ್ನು ಹಿಡಿಯಲು ಅಟ್ಟಿಸಿಕೊಂಡು ಹೋದ. ಅವಳು ಒಣಹಾಕಿದ ಬಟ್ಟೆಗಳ ನಡುವೆಯೆಲ್ಲಾ ಓಡುತ್ತ ಅವನಿಂದ ತಪ್ಪಿಸಿಕೊಳ್ಳಲು ನೋಡತೊಡಗಿದಳು. ಕೋಪಗೊಂಡ ಅವನು ಕೈಗೆ ಸಿಕ್ಕಿದ ಅವಳನ್ನು ಲೀಲಾಜಾಲವಾಗಿ ಎತ್ತಿ ಟೆರೇಸಿನಿಂದ ಕೆಳಗೆ ಎಸೆದೇಬಿಟ್ಟ. ಅವಳು ಮಂಗೋಲಿಯಾದ ಟೊಂಗೆಯ ಮೇಲೆ ಬಿದ್ದಳು, ಅವಳ ಕೈಗೆ ಹೂವೊಂದು ಎಟುಕಿತು. ಅದನ್ನವಳು ‘ಜಕ್..’ ಎಂದು ಕಿತ್ತುಕೊಂಡು ಕೆಳಗೆ ಬೀಳತೊಡಗಿದಳು. ಅವಳು ಕೊನೆಗೂ ತಾಜಾ ಹೂವೊಂದನ್ನು ಕೊಯ್ದೇಬಿಟ್ಟಳೆಂದು ಹುಡುಗಿಗೆ ಬಹಳ ಖುಶಿಯಾಯಿತು. ಹುಡುಗಿ ಅಮ್ಮನಿಗೆ ಕೂಗಿ ಹೇಳಿದಳು, “ಅಮ್ಮಾ, ಅವಳು ಬಿಳಿಯ ಹೂಗಳನ್ನು ಕೊಯ್ದೇಬಿಟ್ಟಳು.” ಆದರೆ ಕೆಳಗೆ ಬಿದ್ದ ಹೆಂಗಸು ಎದ್ದುನಿಲ್ಲದೇ ನಿಶ್ಚಲಳಾಗಿದ್ದಳು. ಅಮ್ಮ ಅಂಗಳಕ್ಕೆ ಓಡೋಡಿ ಬಂದರು ಮತ್ತು ಹೆಂಗಸು ಸತ್ತಿರುವಳೆಂದು ಘೋಷಿಸಿದರು. ಈ ಘಟನೆಯಿಂದ ಪುಟ್ಟ ಹುಡುಗಿ ಒಂದು ಪಾಠವನ್ನು ಕಲಿತಳು. ಹೆಣ್ಣೊಬ್ಬಳು ತಾಜಾ ಹೂವನ್ನು ಕೊಯ್ಯಬೇಕೆಂದರೆ ಅವಳು ಸಾಯಬೇಕು.
ಆ ಹುಡುಗಿ ನಾನೇ ಅಗಿದ್ದೆ. ಬಲಶಾಲಿಗಳು, ಕ್ರೂರಿಗಳು ಮತ್ತು ಕಡಿಮೆ ಉದಾರತೆಯುಳ್ಳವರು ಮಾತ್ರವೇ ಗೆಲ್ಲುತ್ತಾರೆಂಬ ಪಾಠವನ್ನು ಈ ರೀತಿಯಿಂದ ಕಲಿಯುವ ಅವಕಾಶವನ್ನು ನಿನಗೆ ದೇವರು ಕರುಣಿಸದಿರಲೆಂದು ಪ್ರಾರ್ಥಿಸುವೆ. ವಾಸ್ತವಕ್ಕಾಗಿ ಮೊದಲ ಬೆಲೆ ತೆರಬೇಕಾದವಳು ಹೆಣ್ಣು ಎಂಬುದನ್ನು ನನ್ನಷ್ಟು ಬೇಗ ಅರಿಯುವ ಅವಕಾಶ ನಿನಗೆ ಬರದಿರಲಿ. ಹಾಗೆ ಬಯಸುವುದೂ ತಪ್ಪಾಗುತ್ತದೆ ಮಗೂ. ನೀನು ನಿನ್ನ ಬಾಲ್ಯದ ಮುಗ್ಧತನವನವನು ಬೇಗ ಕಳೆದುಕೊಳ್ಳದಿರಲಿ ಎಂದು ಆಶಿಸುತ್ತೇನೆ. ಆದರೆ ಅದೊಂದು ಭ್ರಮೆಯಷ್ಟೆ. ಈಗಿನಿಂದಲೇ ನೀನು ಬಲಶಾಲಿಯೂ, ಚತುರಮತಿಯೂ ಮತ್ತು ಸ್ವಯಂರಕ್ಷಣೆ ಮಾಡಿಕೊಳ್ಳುವ ಅರ್ಹತೆಯುಳ್ಳವನೂ ಆಗಬೇಕೆಂದರೆ ಎದುರಾಳಿಯನ್ನು ಟೆರೇಸಿನಿಂದ ಎಸೆಯುವಷ್ಟು ಪ್ರಬಲನಾಗಿರಬೇಕು. ಹೆಣ್ಣಾಗಿದ್ದರಂತೂ ಇದು ಕಡ್ಡಾಯ. ಇದೂ ಒಂದು ಕಾನೂನು ಎಂಬುದು ನೆನಪಿರಲಿ, ಬರೆದಿಟ್ಟಿದ್ದಲ್ಲ ಆದರೆ ಅನುಸರಿಸಬೇಕಾದದ್ದು. ನೀನಾಗಿರಲಿ, ನಾನಾಗಿರಲಿ, ನಮ್ಮ ನಮ್ಮ ರಕ್ಷಣೆಯನ್ನು ಇಲ್ಲಿ ನಾವೇ ಮಾಡಿಕೊಳ್ಳಬೇಕು ಎಂಬುದು ಈ ಕಾನೂನಿನ ವ್ಯಾಖ್ಯಾನವಾಗಿದೆ. ಇಲ್ಲಿ ಬದುಕಿರುವ ಪ್ರತಿಯೊಬ್ಬರೂ ಯಾರಾದರೊಬ್ಬರಿಗೆ ಏನಾದರೂ ಅಪಾಯವನ್ನು ಮಾಡಿಯೇ ಇರುತ್ತಾರೆ. ಹಾಗೆ ಮಾಡದವರು ಶರಣಾಗುತ್ತಾರೆ. ಸುಮ್ಮನೆ ಹೋರಾಡುವುದಕ್ಕಿಂತ ಶರಣಾಗುವುದು ಒಳ್ಳೆಯದು ಎಂದು ನಿನ್ನನ್ನು ನಂಬಿಸುವವರಿಗೇನು ಕಡಿಮೆಯಿಲ್ಲ. ಆದರೆ ನೀನವರ ಮಾತುಗಳಿಗೆ ಕಿವಿಗೊಡಬೇಡ, ಹೇಡಿಗಳು ಮಾತ್ರವೇ ಶರಣಾಗುತ್ತಾರೆ; ಹಾಗಾಗಿ ಅವರೆಲ್ಲರೂ ಒಳ್ಳೆಯವರು ಎನ್ನಲಾಗದು.
ಹೆಂಗಸರು ಗಂಡುಗಳಿಗಿಂತ ಒಳ್ಳೆಯವರು ಎಂದು ನಾನೆಂದೂ ಭಾವಿಸಿಲ್ಲ, ನಮ್ಮ ಒಳ್ಳೆಯತನವೇ ನಮಗೆ ಬದುಕುವ ಅರ್ಹತೆಯನ್ನು ಒದಗಿಸುತ್ತದೆ ಎಂದು ನಂಬಿರುವೆ. ವಾಸ್ತವವಾಗಿ ಇಲ್ಲಿ ಒಳ್ಳೆಯತನ ಅಥವಾ ಕೆಟ್ಟತನಗಳು ಲೆಕ್ಕಕ್ಕೇ ಬರುವುದಿಲ್ಲ. ಹಿಂಸೆಯೊಂದಿಗೆ ಥಳಕು ಹಾಕಿಕೊಂಡ ವ್ಯಕ್ತಿಯ ಬಲಶಾಲಿತನವಷ್ಟೇ ಗಣನೆಗೆ ಬರುತ್ತದೆ. ನಿಜವಾಗಿ ನೋಡಿದರೆ ಬದುಕು ಹಿಂಸೆಯೊಂದಿಗೇ ಬೆಸೆದುಕೊಂಡಿದೆ. ನೀನು ಚರ್ಮದ ಶೂ ಧರಿಸುತ್ತೀಯೆಂದರೆ ಅದಕ್ಕೆಂದು ಇನ್ಯಾರೋ ಒಂದು ಹಸುವನ್ನು ಕೊಂದು ಚರ್ಮ ಸುಲಿದಿರುತ್ತಾರೆ. ನಾವೆಲ್ಲಾ ಫರ್ ಕೋಟ್ ಧರಿಸಿ ಬೆಚ್ಚಗಿರಲು ಕಾರಣ ಅನೇಕ ಪ್ರಾಣಿಗಳ ಸಾವು. ನೀನು ಚಿಕನ್ ಲಿವರ್ ತಿನ್ನುವಿಯಾದರೆ ಇನ್ಯಾರೋ ಏನೂ ತಪ್ಪು ಮಾಡಿರದ ಕೋಳಿಯನ್ನು ಕತ್ತು ಮುರಿದು ಸಾಯಿಸಿರುತ್ತಾರೆ. ಅದೂ ತಪ್ಪು ಅನಿಸುತ್ತದೆ, ಕೋಳಿಯೂ ಕೊಳೆತ ಸಸ್ಯದ ಚೂರುಗಳನ್ನು ತಿಂದು ಬೆಳೆದ ಅನೇಕ ಸಣ್ಣ, ಸಣ್ಣ ಹುಳುಗಳನ್ನು ಕುಕ್ಕಿ, ಕುಕ್ಕಿ ತಿಂದಿರುತ್ತದೆ. ಹೀಗೆ ಒಬ್ಬರು ಬದುಕಲು ಇನ್ನೊಬ್ಬರನ್ನು ಸಾಯಿಸುವುದು ಅನಿವಾರ್ಯ ಇಲ್ಲಿ, ಮೀನಿನಿಂದ ಮನುಷ್ಯನವರೆಗೂ.… ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ನುಂಗುತ್ತವೆ, ಹಕ್ಕಿಗಳು ಕೀಟಗಳನ್ನು ಭಕ್ಷಿಸುತ್ತವೆ. ನನಗೆ ತಿಳಿದಮಟ್ಟಿಗೆ ಮರಗಳು ಮತ್ತು ಗಿಡಗಳು ಮಾತ್ರವೇ ಯಾರನ್ನೂ ಸಾಯಿಸಿ ಬದುಕುವುದಿಲ್ಲ. ಸೂರ್ಯ, ಭೂಮಿ, ನೀರು, ಗಾಳಿಯಿಂದಲೇ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ, ಅವುಗಳ ಲಭ್ಯತೆಯಿಲ್ಲದಾಗ ಸಾಯುತ್ತವೆ. ಯಾರನ್ನೂ ಕೊಲ್ಲದೇ ನಿನ್ನನ್ನು ನೀನೇ ಪೋಷಿಸಿಕೊಂಡು ಬೆಚ್ಚಗೆ ಬದುಕುತ್ತಿರುವ ನಿನಗೆ ಈ ಭಯಾನಕ ವಿಷಯವನ್ನೆಲ್ಲ ಹೇಳಲು ಇದು ಸಮಯವೆ?
ಇದೀಗ ನಿನಗೆ ಎರಡನೇಯ ಕತೆಯನ್ನು ಹೇಳುವ ಸಮಯ. ಪುಟ್ಟ ಹುಡುಗಿಯೊಬ್ಬಳಿಗೆ ಚಾಕಲೇಟ್ ಎಂದರೆ ಪಂಚಪ್ರಾಣವಾಗಿತ್ತು. ಅದಕ್ಕೆ ಸರಿಯಾಗಿ ಅವಳ ಅಪ್ಪ ಅವಳಿಗೆ ಪ್ರತಿದಿನವೂ ಬಗೆಬಗೆಯ ಚಾಕಲೇಟುಗಳನ್ನು ತಂದುಕೊಡುತ್ತಿದ್ದ. ಅವಳ ಮನೆಯ ವಿಶಾಲವಾದ ಕಿಟಕಿಯಲ್ಲಿ ಬೇಕಷ್ಟು ಬೆಳಕು ಮನೆಯೊಳಗೆ ಬರುತ್ತಿತ್ತು. ಇದ್ದಕ್ಕಿದ್ದಂತೆ ಒಂದು ದಿನ ಅವರು ಕಿಟಕಿಗಳೇ ಇಲ್ಲದ ಇಟ್ಟಿಗೆಯ ಗೂಡಿನಂತಹ ಮನೆಗೆ ಹೋಗಬೇಕಾಯಿತು. ಪುಟ್ಟ ಹುಡುಗಿಗೆ ಕತ್ತಲೆಯಲ್ಲಿ ತಡಕಾಡುವಂತಾಗುತ್ತಿತ್ತು. ಅವಳ ಅಮ್ಮ ಯಾವಾಗಲೂ ತನ್ನ ಉಬ್ಬಿದ ಹೊಟ್ಟೆಯನ್ನು ಸವರಿಕೊಳ್ಳುತ್ತಾ, “ನೀನು ಕೆಟ್ಟ ಸಮಯದಲ್ಲಿ ಇಲ್ಲಿಗೆ ಬಂದಿರುವೆ, ನೀನು ಬೇಕಿರಲಿಲ್ಲ ನನಗೆ.” ಎನ್ನುತ್ತಿದ್ದಳು. ತೀವ್ರ ಶ್ವಾಸಕೋಶದ ಸೋಂಕಿಗೆ ಒಳಗಾಗಿದ್ದ ಅವಳ ತಂದೆ ಇಡೀ ದಿನ ಹಾಸಿಗೆಯಲ್ಲಿ ಮಲಗಿ ಕೆಮ್ಮುತ್ತಿದ್ದರು. ಅವಳ ಅಮ್ಮ ಅನಿವಾರ್ಯವಾಗಿ ಹೊರಗೆ ಕೆಲಸ ಮಾಡಬೇಕಿತ್ತು. ಅವಳಿಗೆ ಚಾಕಲೇಟ್ ಬರುವುದು ಪೂರ್ತಿಯಾಗಿ ನಿಂತುಹೋಗಿತ್ತು. ಪ್ರತಿದಿನವೂ ಹೊರಗೆ ಕೆಲಸಕ್ಕೆ ಹೋಗುವಾಗ ಅವಳ ಅಮ್ಮ ಮಗಳನ್ನೂ ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದಳು. ಅನಾರೋಗ್ಯಪೀಡಿತನಾದ ತಂದೆಯೊಂದಿಗೆ ಇಡೀ ದಿನ ಎಳೆಯ ಹುಡುಗಿಯನ್ನು ಬಿಡಲು ಅವಳಿಗೆ ಮನಸ್ಸಿರಲಿಲ್ಲ. ಅವರು ಕೆಲಸ ಮಾಡುವ ಮನೆ ಬಹಳ ದೂರದಲ್ಲಿತ್ತು. ಅಮ್ಮ ಮಗಳ ಕೈಹಿಡಿದು ಅನೇಕ ಬೀದಿಗಳನ್ನು ದಾಟಿ ನದಿಯ ನಡುವೆ ಇರುವ ಶ್ರೀಮಂತ ಹೆಂಗಸೊಬ್ಬಳ ಮನೆಗೆ ಹೋಗುತ್ತಿದ್ದರು. ಮನೆಯ ಕರೆಗಂಟೆಯನ್ನು ಒತ್ತುವಾಗಲೇ, “ಆ ಮನೆಯ ಯಜಮಾನಿ ಖುಶಿಯಿಂದಿರಲಿ, ಖುಶಿಯಿಂದಿರಲಿ” ಎಂದು ಹಾರೈಸುತ್ತಿದ್ದಳು. ಆದರೆ ಅಮ್ಮನ ಹಾರೈಕೆ ಎಂದೂ ಫಲಿಸುತ್ತಿರಲಿಲ್ಲ. ಸದಾ ಅಸಹನೆಯಿಂದಲೇ ಅವಳು ಬಾಗಿಲು ತೆರೆಯುತ್ತಿದ್ದಳು. ಅವಳು ತನ್ನ ಬಟ್ಟೆಯನ್ನು ಆಗಾಗ ಬದಲಾಯಿಸುತ್ತಲೇ ಇರುತ್ತಿದ್ದಳು. ಅವಳ ಪ್ರತಿಯೊಂದು ಡ್ರೆಸ್ಸಿಗೂ ಮ್ಯಾಚಿಂಗ್ ಶೂಗಳಿದ್ದವು, ಜತೆಯಲ್ಲಿ ಹೊಂದಿಕೆಯಾಗುವ ಬ್ಯಾಗ್ ಕೂಡಾ ಇದ್ದವು. ಎಲ್ಲವೂ ಇದ್ದರೂ ಅವಳಿಗೆ ತನಗೆ ಬೇಕಾದಷ್ಟು ಹಣವಿಲ್ಲವೆಂಬ ಕೊರಗಿತ್ತು. ತಿಂಗಳೊಳಗೆ ಬರುವೆನೆಂದು ಹೋಗಿ ಇನ್ನೂ ಬಾರದಿರುವ ತನ್ನ ಹಳೆಯ ಕೆಲಸದಾಳಿನ ಬಗ್ಗೆ ತೀವ್ರ ಅಸಹನೆಯಿತ್ತು. ಅವಳು ಬರುವವರೆಗಷ್ಟೇ ಹುಡುಗಿಯ ಅಮ್ಮನಿಗೆ ಕೆಲಸ ನೀಡಿದ್ದಳು.
ಆ ಸುಂದರ ಹೆಂಗಸಿನ ಮನೆಯೊಳಗೆ ಪ್ರವೇಶಿಸುತ್ತಿರುವಂತೆಯೇ ಅಮ್ಮ ಹುಡುಗಿಯನ್ನು ಹಾಲ್ನಲ್ಲಿರುವ ಸ್ಟೂಲೊಂದರ ಮೇಲೆ ಕೂರಿಸಿ, ಪಾತ್ರೆ ತೊಳೆಯಲು ಅಡುಗೆ ಮನೆಗೆ ಹೋಗುತ್ತಿದ್ದರು. ಅಮ್ಮನ ಕೆಲಸ ಮುಗಿಯುವವರೆಗೂ ಅವಳು ಗೊಂಬೆಯಂತೆಯೇ ಅಲ್ಲಿ ಕುಳಿತಿರಬೇಕಿತ್ತು. ಪಾತ್ರೆ ತೊಳೆದು ಮುಗಿಸಿದ ಅಮ್ಮ ಹಾಲಿಗೆ ಬಂದು ಮೊದಲು ನೆಲದ ಹಾಸನ್ನು ಬ್ರಶ್ನಿಂದ ತಿಕ್ಕಿ ಸ್ವಚ್ಛಗೊಳಿಸುತ್ತಿದ್ದರು. ನಂತರ ಇಡಿಯ ಮನೆಯನ್ನು ಗುಡಿಸಿ, ಒರೆಸುತ್ತಿದ್ದರು. ಆಗೆಲ್ಲ ಆ ಸುಂದರ ಹೆಂಗಸು ಸೋಫಾದ ಮೇಲೆ ಮಲಗಿ ಪುಸ್ತಕವನ್ನು ಓದುತ್ತಲೇ, ಏನಾದರೂ ದೂರುಗಳನ್ನು ದಾಖಲಿಸುತ್ತಿದ್ದಳು. ಒಂದು ದಿನ ಅಮ್ಮನಿಗೆ ಅವಳು ಹೇಳುತ್ತಿದ್ದಳು, “ನೋಡು, ಅವನು ಇಷ್ಟೇ ಹಣವನ್ನು ಕಳಿಸುವುದು ಎನ್ನುತ್ತಿದ್ದಾನೆ. ಅಷ್ಟು ಹಣ ಎಲ್ಲಿಗೆ ಸಾಕು?” ಅಮ್ಮ ತಡೆಯದೇ ಹೇಳಿದರು, “ಅಷ್ಟು ಹಣದಲ್ಲಿ ನಾನು ರಾಜಕುಮಾರಿಯಂತೆ ಬದುಕುತ್ತಿದ್ದೆ.” ಅಮ್ಮನ ಮಾತು ಅವಳನ್ನು ಸಿಟ್ಟಿಗೆಬ್ಬಿಸಿತ್ತು. “ಆ ಹಣ ನನ್ನ ಟಾಕ್ಸಿಗೂ ಸಾಲದು” ಎಂದು ಸಿಡುಕಿದಳು. ಟೇಬಲ್ ಮೇಲೆ ಕುಳಿತು ಇದನ್ನೆಲ್ಲ ನೋಡುತ್ತಿದ್ದ ಪುಟ್ಟ ಹುಡುಗಿಗೆ ಅರ್ಥವಾಗದ ವಿಷಯವೊಂದಿತ್ತು. ದೊಡ್ಡ ಹೊಟ್ಟೆಯನ್ನು ಹೊತ್ತ ಅಮ್ಮ ಇಷ್ಟೊಂದು ಕೆಲಸವನ್ನು ಕಷ್ಟಪಟ್ಟು ಮಾಡುತ್ತಿರುವಾಗ ಸುಂದರವಾದ ಆ ಹೆಂಗಸು ಸುಮ್ಮನೆ ಯಾಕೆ ಕುಳಿತಿರುತ್ತಾಳೆ ಎಂಬುದು!
ಒಂದು ದಿನ ಹೀಗಾಯಿತು. ಅಮ್ಮ ಕಾರ್ಪೆಟ್ಟನ್ನು ಬ್ರಶ್ನಿಂದ ಸ್ವಚ್ಛಗೊಳಿಸುತ್ತಿದ್ದಳು. ಅದರ ಧೂಳಿನಿಂದಾಗಿ ಹುಡುಗಿ ಕೆಮ್ಮತೊಡಗಿದ್ದಳು. ಅಷ್ಟರಲ್ಲಿ ಸುಂದರವಾದ ಹೆಂಗಸು ಕಪಾಟಿನಿಂದ ಚಾಕಲೇಟ್ ತುಂಬಿದ ಡಬ್ಬವೊಂದನ್ನು ಹೊರತೆಗೆದಳು. ಅದರಲ್ಲಿ ಆ ಹುಡುಗಿ ಇದುವರೆಗೂ ನೋಡಿರದಿದ್ದಷ್ಟು ದೊಡ್ಡ ದೊಡ್ಡ ಚಾಕಲೇಟುಗಳು ತುಂಬಿದ್ದವು. ಅವುಗಳನ್ನು ನೋಡಿದ್ದೇ ಹುಡುಗಿಯ ಬಾಯಲ್ಲಿ ನೀರೂರಿ, ಧೂಳಿನಿಂದ ಕಟ್ಟಿಕೊಂಡಿದ್ದ ಗಂಟಲು ಸರಿಯಾಗಿಹೋಗಿತ್ತು. ಅವಳ ಬಾಯಿಂದ ಜೊಲ್ಲು ಇನ್ನೇನು ಸೋರುವುದೆನ್ನುವಾಗ ಅಮ್ಮ ಅವಳನ್ನೇ ದಿಟ್ಟಿಸುತ್ತ ಚಾಕಲೇಟನ್ನು ಕೇಳದಿರುವಂತೆ ಸಂಜ್ಞೆ ಮಾಡಿದಳು. ಹುಡುಗಿ ಸುಮ್ಮನೆ ಮಾಳಿಗೆಯ ಮೆಟ್ಟಿಲುಗಳನ್ನು ನೋಡತೊಡಗಿದಳು. ಸುಂದರವಾದ ಮಹಿಳೆ ಚಾಕಲೇಟ್ ಡಬ್ಬವನ್ನು ಹಿಡಿದು ಮಾಳಿಗೆಯ ಮೇಲಿರುವ ಟೆರೇಸಿನ ಕಡೆಗೆ ಹೋದಳು. ಮಾಳಿಗೆಯ ಮೇಲೆ ಅವಳ ಸುಂದರವಾದ ಇಬ್ಬರು ಮಕ್ಕಳು ಇರುವರೆಂಬ ವಿಷಯ ಹುಡುಗಿಗೆ ತಿಳಿದಿತ್ತು. ಅವಳೂ ಒಂದೆರಡು ಸಲ ಅವರನ್ನು ನೋಡಿದ್ದಳು. ಟೆರೇಸಿನ ತುಂಬೆಲ್ಲಾ ಪಾರಿವಾಳಗಳು ಕುಳಿತಿರುತ್ತಿದ್ದವು. ಆ ಹೆಂಗಸು ಪಾರಿವಾಳಗಳಿಗೆ ಚಾಕಲೇಟುಗಳನ್ನು ಎಸೆಯುವ ಶಬ್ದ ಹುಡುಗಿಯ ಕಿವಿಗೆ ಬೀಳುತ್ತಿತ್ತು. ಸುಮಾರು ಹೊತ್ತಿನ ನಂತರ ಅವಳು ಮಾಳಿಗೆಯಿಂದ ಕೆಳಗಿಳಿದು ಬಂದಳು. ಅವಳ ಚಾಕಲೇಟ್ ಡಬ್ಬದಲ್ಲಿ ಇನ್ನೂ ಒಂದು ಚಾಕಲೇಟ್ ಉಳಿದಿತ್ತು. ಸೋಫಾದಲ್ಲಿ ಕುಳಿತು ಕೈಗಳನ್ನು ಚಾಚಿ ನೆಟಿಗೆ ಮುರಿದ ಅವಳು ನಿಧಾನವಾಗಿ ಚಾಕಲೇಟನ್ನು ತೆಗೆದು, ಸುಲಿದು ತನ್ನ ಬಾಯೊಳಗಿಟ್ಟುಕೊಂಡಳು.
ಅವಳು ಕೊನೆಗೂ ತಾಜಾ ಹೂವೊಂದನ್ನು ಕೊಯ್ದೇಬಿಟ್ಟಳೆಂದು ಹುಡುಗಿಗೆ ಬಹಳ ಖುಶಿಯಾಯಿತು. ಹುಡುಗಿ ಅಮ್ಮನಿಗೆ ಕೂಗಿ ಹೇಳಿದಳು, “ಅಮ್ಮಾ, ಅವಳು ಬಿಳಿಯ ಹೂಗಳನ್ನು ಕೊಯ್ದೇಬಿಟ್ಟಳು.” ಆದರೆ ಕೆಳಗೆ ಬಿದ್ದ ಹೆಂಗಸು ಎದ್ದುನಿಲ್ಲದೇ ನಿಶ್ಚಲಳಾಗಿದ್ದಳು. ಅಮ್ಮ ಅಂಗಳಕ್ಕೆ ಓಡೋಡಿ ಬಂದರು ಮತ್ತು ಹೆಂಗಸು ಸತ್ತಿರುವಳೆಂದು ಘೋಷಿಸಿದರು.
ಅಲ್ಲಿಂದ ಮುಂದೆ ನನಗೆ ಚಾಕಲೇಟುಗಳನ್ನು ತಿನ್ನಲಾಗಲಿಲ್ಲ. ಎಷ್ಟೋ ಸಲ ತಿನ್ನಬೇಕೆಂದು ಬಾಯಿಯ ಹತ್ತಿರ ತಂದವಳು ಅದನ್ನು ಎಸೆದಿದ್ದೇನೆ. ಆದರೆ ಮಗೂ, ನಿನಗೆ ಬೇಕಾದಷ್ಟು ಚಾಕಲೇಟುಗಳನ್ನು ನಾನು ತಂದುಕೊಡಬಲ್ಲೆ. ಚಾಕಲೇಟುಗಳ ರಾಶಿಯಿಂದ ನಿನ್ನನ್ನು ಮುಳುಗಿಸಬೇಕೆನಿಸುತ್ತದೆ. ಹಾಗಾದರೂ ನನ್ನ ಅವಮಾನಗಳಿಗೆ ಉಪಶಮನ ಸಿಗಬಹುದೇನೊ? ನಿನಗೀಗ ಹಿಂಸೆ ಮತ್ತು ಅನ್ಯಾಯಗಳ ಬಗ್ಗೆ ಅರ್ಥವಾಗಿದೆಯೆಂದುಕೊಳ್ಳುವೆ. ಕೋಳಿಯನ್ನು ಕೊಂದು ತಿನ್ನುವುದು, ದನವನ್ನು ಸುಲಿದು ಚಪ್ಪಲಿಯಾಗಿಸುವುದು, ಹೆಣ್ಣೊಬ್ಬಳನ್ನು ಹಿಂಸಿಸಿ ಸಾಯಿಸುವುದು ಮಾತ್ರವೇ ಅನ್ಯಾಯವಲ್ಲ, ಉಳ್ಳವರು ಮತ್ತು ಇಲ್ಲದಿರುವವರು ಎಂಬ ಬೇಧವೂ ಅನ್ಯಾಯವೆ. ಗರ್ಭಿಣಿ ಹೆಣ್ಣೊಬ್ಬಳು ಇನ್ನೊಬ್ಬರ ಮನೆಯ ಕಾರ್ಪೆಟ್ ಬ್ರಶ್ ಮಾಡುವಾಗ ಅನ್ಯಾಯವು ವಿಷದಂತೆ ಬಾಯೊಳಗೆ ಉಳಿದುಹೋಗುತ್ತದೆ. ಇದನ್ನು ಬದಲಾಯಿಸುವುದು ಅಷ್ಟೇನೂ ಸುಲಭವಲ್ಲ. ಪ್ರಯತ್ನದಿಂದ ಇಂದು ಕಾರ್ಪೆಟ್ ಸ್ವಚ್ಛಗೊಳಿಸುವವಳನ್ನು ಸೋಫಾದ ಮೇಲೆ ಕುಳಿತುಕೊಳ್ಳುವಂತೆ ಮಾಡಬಹುದು, ಆದರೆ ಅದರಿಂದ ಅಷ್ಟೇನೂ ಪ್ರಯೋಜನವಿಲ್ಲ. ಯಾಕೆಂದರೆ ಆಗ ಇನ್ನೊಬ್ಬ ಗರ್ಭಿಣಿ ಹೆಂಗಸು ಇವಳ ಮನೆಯಲ್ಲಿ ಕಾರ್ಪೆಟ್ ಸ್ವಚ್ಛಗೊಳಿಸುತ್ತಿರುತ್ತಾಳೆ. ಚಾಕಲೇಟಿಗಾಗಿ ಹಂಬಲಿಸುವ ಹುಡುಗಿ ಸದಾ ಹಾಗೆಯೇ ಇರುತ್ತಾಳೆ.
ಮನಸ್ಸನ್ನು ಬದಲಾಯಿಸಿ, ಸಮಾನತೆಯ ಭಾವವನ್ನು ಹುಟ್ಟುಹಾಕುವ ಯಾವ ಐಡಿಯಾಲಜಿಯೂ ಇಲ್ಲ. ಹಾಗೇನಾದರೂ ಇದೆಯೆಂದು ಯಾರಾದರೂ ಹೇಳಿದರೆ ಅದು ಸುಳ್ಳು ಎಂದು ತಿಳಿದುಕೊ. ಹಾಗೆ ಹೇಳುವವರಿಗೆ ಸವಾಲು ಹಾಕು, ಇಲ್ಲಿ ಉಳ್ಳವರ ಊಟ-ಬಡವರ ಊಟ, ಉಳ್ಳವರ ಮನೆ-ಬಡವರ ಮನೆ, ಉಳ್ಳವರ ಕಾಲ-ಬಡವರ ಕಾಲ ಎಂಬುದು ಇಲ್ಲದಿರುವ ಜಾಗವನ್ನು ತೋರಿಸು ಎಂದು. ಹಾಗೆ ನೋಡಿದರೆ ಚಳಿಗಾಲವು ಶ್ರೀಮಂತರ ಕಾಲ. ಬೆಚ್ಚನೆಯ ಕೋಟನ್ನು ಧರಿಸಿ ಅವರು ಮುಂಜಿನಿಂದ ಆವೃತವಾದ ಬೆಳ್ಳನೆಯ ಶಿಖರಗಳನ್ನು ಆಹ್ಲಾದಿಸಬಲ್ಲರು, ಮಂಜಿನ ಆಟಗಳನ್ನು ಆಡಬಲ್ಲರು, ಬೆಂಕಿಯಿಂದ ಮನೆಯನ್ನು ಬೆಚ್ಚಗಿಟ್ಟುಕೊಳ್ಳಬಲ್ಲರು. ಆದರೆ ಬೆಚ್ಚಗಿರಲು ಬೇಕಾದಷ್ಟು ಬಟ್ಟೆಯಿರದ ಬಡವರಿಗೆ ಚಳಿಗಾಲ ಒಂದು ಶಾಪ. ಆದ್ದರಿಂದ ಮಗು, ಸಮಾನತೆಯೆಂಬುದು ಈಗ ನೀನಿರುವ ಜಾಗದಲ್ಲಿ ಮಾತ್ರವೇ ಇದೆ. ಗರ್ಭದಲ್ಲಿ ಮಾತ್ರವೇ ನಾವೆಲ್ಲರೂ ಸಮಾನರು. ಯಾರ ಸೇವೆಯನ್ನೂ ಮಾಡದೇ ಏಕಾಂಗಿಯಾಗಿ ವಾಸಿಸುತ್ತಿರುವ ನಿನಗೆ ಸಮಾನತೆಯ ಬಗ್ಗೆ ಹೇಳಲು ಇದು ಸಕಾಲವೆ?
ಈಗ ಮೂರನೇ ಕಥೆಯನ್ನು ಹೇಳುವ ಸಮಯ. ಇದೊಂದು ಕಿನ್ನರಕತೆ ಹೌದೋ ಅಲ್ಲವೋ ಎನ್ನುವ ಬಗ್ಗೆ ನನಗೆ ಸಂಶಯವಿದೆ. ಆದರೂ ನಾನು ಇದನ್ನು ನಿನಗೆ ಹೇಳದಿರಲಾರೆ. ಬಹಳ ಹಿಂದೆ ನಾಳೆಗಳನ್ನು ನಂಬುವ ಹುಡುಗಿಯೊಬ್ಬಳಿದ್ದಳು. ಅವಳ ಸುತ್ತಲಿರುವವರೆಲ್ಲರೂ ನಾಳೆಗಳ ಬಗ್ಗೆ ಬಹಳ ಭರವಸೆಯಿಂದ ಮಾತನಾಡುತ್ತಿದ್ದರು, ಹಾಗಾಗಿ ಅವಳೂ ಸಹ ನಾಳೆಗಳು ಇಂದಿಗಿಂತ ಉತ್ತಮವಾಗಿರುತ್ತವೆ ಎಂದು ನಂಬಿದ್ದಳು. ಮುಖ್ಯವಾಗಿ ಪ್ರಾರ್ಥನಾ ಮಂದಿರಗಳಲ್ಲಿ ಮತ್ತು ಶಾಲೆಗಳಲ್ಲಿ ಈ ಬಗ್ಗೆ ಅನೇಕ ವಿಷಯಗಳನ್ನು ಹೇಳುತ್ತಿದ್ದರು. ಅವಳು ಪ್ರಾರ್ಥಿಸಲು ಹೋದಾಗಲೆಲ್ಲ ಅಲ್ಲಿಯ ಪಾದ್ರಿ ಹೇಳುತ್ತಿದ್ದರು, “ಇಲ್ಲಿ ನೀವು ಉತ್ತಮವಾದುದನ್ನು ಮಾಡಿದರೆ ಪರಲೋಕದಲ್ಲಿ ನಿಮಗೆ ಒಳ್ಳೆಯ ನಾಳೆಗಳು ಸಿಗುತ್ತವೆ. ದೇವಾತ್ಮನು ನಿಮಗೆ ಸಕಲ ಸುಖಭೋಗಗಳಿಂದ ತುಂಬಿರುವ ಸ್ವರ್ಗವನ್ನು ದಯಪಾಲಿಸುತ್ತಾನೆ.” ಈ ಲೋಕದ ಕಷ್ಟಗಳನ್ನು ಪರಿಹರಿಸದೇ ಅಲ್ಲೆಲ್ಲೋ ಸತ್ತ ನಂತರ ಸಿಗುವ ಸ್ವರ್ಗದ ಬಗ್ಗೆ ಅವಳು ಬಹಳ ಬೇಗ ನಂಬಿಕೆಯನ್ನು ಕಳಕೊಂಡಳು. ಶಾಲೆಗಳಲ್ಲಿ ಮಾನವನ ಇತಿಹಾಸವನ್ನು ಪಾಠ ಮಾಡುತ್ತಾ ಶಿಕ್ಷಕರು ಹೇಳುತ್ತಿದ್ದರು, “ಪ್ರಾಚೀನ ಕಾಲದ ಮಾನವನಿಗೆ ಮನೆಯೇ ಇರಲಿಲ್ಲ. ಅವನು ಗುಹೆಗಳಲ್ಲಿ ವಾಸಿಸುತ್ತಾ ಅತಿಕಷ್ಟದ ದಿನಗಳನ್ನು ಕಳೆದಿದ್ದಾನೆ. ಮುಂದೆ ಮನುಷ್ಯರು ಮನೆಯನ್ನು ಕಟ್ಟುವುದನ್ನು ಕಲಿತರು. ಇದೀಗ ತಮ್ಮ ಮನೆಗಳನ್ನು ಬೆಚ್ಚಗಿಡುವ ಹೀಟರ್ಗಳನ್ನು ಅಳವಡಿಸಿಕೊಳ್ಳುವ ಮೂಲಕ ಮನುಷ್ಯ ಚಳಿಯಿಂದ ತನ್ನನ್ನು ಪಾರುಮಾಡಿಕೊಂಡಿದ್ದಾನೆ.” ಅದೇ ಚಳಿಗಾಲದಲ್ಲಿ ಅವಳ ಪಾದ ಮತ್ತು ಬೆರಳುಗಳು ಶೀತದ ಹೊಡೆತದಿಂದ ಗಾಯಗೊಂಡು ರಕ್ತ ಸೋರುವಂತಾದಾಗ ಅವಳು ಶಾಲೆಯ ಪಾಠಗಳ ಬಗ್ಗೆಯೂ ಭರವಸೆಯನ್ನು ಕಳಕೊಂಡಳು.
ಮನುಷ್ಯ ಗುಹೆಯಿಂದ ಬೆಚ್ಚಗಿನ ಮನೆಗೆ ಬಂದಿರುವುದು ಒಳ್ಳೆಯದೇ ಆದರೂ ಎಲ್ಲರಿಗೂ ಆ ಭಾಗ್ಯ ಇರಲಾರದು ಎಂಬುದು ಅವಳನ್ನು ನಿರಾಸೆಗೆ ದೂಡಿತ್ತು. ಆದರೆ ಇಪ್ಪತ್ತು ವರ್ಷಗಳಿಂದ ಅವರೆಲ್ಲರನ್ನು ಇನ್ನಿಲ್ಲದಂತೆ ಕಾಡುತ್ತಿದ್ದ ಕಪ್ಪು ದಿರಿಸಿನ ಉಗ್ರರ ವಿರುದ್ಧ ಹೋರಾಡುತ್ತಿದ್ದ ಅವಳ ತಂದೆ ಹೇಳುತ್ತಿದ್ದ ಮಾತುಗಳನ್ನು ಅವಳು ಅಕ್ಷರಶಃ ನಂಬಿದ್ದಳು. ‘ನಾಳೆಗಳು ನಮ್ಮವು, ನಾಳೆಗಳು ಮಾನವೀಯವಾಗಿರುತ್ತವೆ’ ಎಂದು ಅವಳ ತಂದೆ ಪದೇ ಪದೇ ಹೇಳುತ್ತಿದ್ದರು. ಕಪ್ಪು ಬಣ್ಣದ ದಿರಿಸಿನ ಉಗ್ರರು ಅವರನ್ನು ಹಿಂಸಿಸಿದಷ್ಟೂ ಅವರ ಹೇಳಿಕೆ ಇನ್ನಷ್ಟು ನಿಚ್ಛಳವಾಗಿರುತ್ತಿತ್ತು. ಮಿತ್ರಪಡೆಗಳು ಇವರನ್ನು ಒಂದಲ್ಲ ಒಂದು ದಿನ ಸದೆಬಡಿಯುತ್ತವೆ, ಆಗ ನಮಗೂ ಉತ್ತಮ ನಾಳೆಗಳು ಬರುತ್ತವೆ ಎಂದು ತಂದೆ ಹೇಳಿದ ಮರುದಿನವೇ ಮನೆಯೆದುರು ಬಾಂಬ್ಗಳ ಸುರಿಮಳೆಯಾಯಿತು. ಅನೇಕ ಅಮಾಯಕರು ಅಸುನೀಗಿದರು. ಹುಡುಗಿಯ ಭರವಸೆಯ ಬೇರುಗಳು ಸಡಿಲಗೊಳ್ಳತೊಡಗಿದವು. ತಂದೆಯ ಪ್ರಕಾರ ಬದಲಾವಣೆಯಾಗುವಾಗ ತುಸು ಅನಾಹುತಗಳು ಅನಿವಾರ್ಯವಾದ್ದರಿಂದ ಇವೆಲ್ಲವನ್ನೂ ಅವರು ಚಂದದ ನಾಳೆಗಳಿಗಾಗಿ ಸಹಿಸಲೇಬೇಕಿತ್ತು. ಅದಕ್ಕೆ ಪುರಾವೆಯೆಂಬಂತೆ ಅವರು ಮಾರನೆಯ ದಿನ ಬಾಂಬ್ ಹಾಕಿರುವ ಇಬ್ಬರು ಸ್ನೇಹಿತರನ್ನು ಮನೆಗೆ ಕರೆತಂದರು. ಉಗ್ರರ ದೃಷ್ಟಿಯಲ್ಲಿ ಅವರು ಅಪರಾಧಿಗಳಾದ್ದರಿಂದ ಅವರ ಕಣ್ಣು ತಪ್ಪಿಸಿ ಎಲ್ಲಿಯಾದರೂ ಬಚ್ಚಿಟ್ಟುಕೊಳ್ಳಬೇಕಿತ್ತು. ಇವರ ಮನೆಯಲ್ಲಿ ಅವರಿಬ್ಬರನ್ನೂ ಎರಡು ದಿನಗಳ ಕಾಲ ಬಚ್ಚಿಡಲಾಗಿತ್ತು. ಕೆಲವೇ ದಿನಗಳಲ್ಲಿ ಈ ವಿಷಯ ಬಹಿರಂಗಗೊಂಡ ಹುಡುಗಿಯ ತಂದೆ ಜೈಲು ಸೇರಬೇಕಾಯಿತು. ಉಗ್ರರು ಅವರನ್ನು ಇನ್ನಿಲ್ಲದಂತೆ ಹಿಂಸಿಸಿದರು. ತಂದೆಯನ್ನು ನೋಡಲು ಹೋದ ಹುಡುಗಿಗೆ ಅವರ ಪರಿಚಯವೇ ಸಿಕ್ಕಲಿಲ್ಲ. ಅಷ್ಟಾಗಿಯೂ ಅವರು ಕಣ್ಣುಗಳಲ್ಲಿ ಭರವಸೆ ತುಂಬಿಕೊಂಡು ಹೇಳಿದ್ದರು, ‘ನಾಳೆಗಳು ನಮ್ಮವು ಮಗಳೇ.’
ಅಂತೂ ಅವರು ಹೇಳಿದ ನಾಳೆಗಳು ಬರುವ ಮುನ್ಸೂಚನೆ ಸಿಕ್ಕಿತು. ಬ್ರಿಟಿಷ್ ಸೈನಿಕರು ಈಗ ಜರ್ಮನಿಯವರನ್ನೂ ಸೇರಿಸಿಕೊಂಡು ಕಪ್ಪು ದಿರಿಸಿನವರ ವಿರುದ್ಧ ಧಾಳಿ ಮಾಡಿದರು. ಒಂದು ಬೆಳಗು ಇದ್ದಕ್ಕಿದ್ದಂತೆ ವಿಜಯ ಪತಾಕೆಗಳು ಹಾರತೊಡಗಿದವು. ದೇವಕನ್ನಿಕೆಯರಂತೆ ಸಿಂಗರಿಸಿಕೊಂಡ ಹುಡುಗಿಯರು ವಿಜಯದ ಸಂಭ್ರಮವನ್ನು ಹೆಚ್ಚಿಸಿದರು. ಜನರು ತಮ್ಮ ಕಷ್ಟಗಳೆಲ್ಲ ಮುಗಿಯಿತು ಎಂಬಂತೆ ಮುದಗೊಂಡರು. ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಸಂಭ್ರಮದಿಂದ ಓಡಾಡುತ್ತಿದ್ದ ಹುಡುಗಿಯ ತಂದೆಗೆ ಸೇನಾಧಿಕಾರಿಯಿಂದ ಬುಲಾವ್ ಬಂತು. ಇಪ್ಪತ್ತು ವರ್ಷಗಳಿಂದ ಹೋರಾಡುತ್ತಿದ್ದ ಅವರನ್ನು ಸನ್ಮಾನಕ್ಕಾಗಿ ಕರೆದಿರಬಹುದೆಂದು ಮನೆಯವರೆಲ್ಲರೂ ಭಾವಿಸಿದ್ದರು. ಮಗಳು ಕೂಡ ಈ ಸಂತೋಷವನ್ನು ಕಣ್ತುಂಬಿಕೊಳ್ಳಲು ಅವರೊಡನೆ ನಡೆದಳು. ಆದರೆ ಅಲ್ಲಿ ಹೋಗಿ ನೋಡುವಾಗ ಪರಿಸ್ಥಿತಿ ಪೂರ್ತಿ ಬೇರೆಯೇ ಆಗಿತ್ತು. ಹುಡುಗಿಯ ತಂದೆಯ ತೀರ ಆತ್ಮೀಯರೊಬ್ಬರನ್ನು ಅಪರಾಧಿಯೆಂದು ಬೋರಲಾಗಿ ನೆಲದ ಮೇಲೆ ಮಲಗಿಸಿದ್ದರು. ಅವನ ಬೆನ್ನ ಮೇಲೆ ಬೂಟುಗಾಲನ್ನಿಟ್ಟ ಯೋಧನೊಬ್ಬ ತನ್ನ ಬಂದೂಕನ್ನು ಅವರ ತಲೆಗೆ ಗುರಿಯಾಗಿಟ್ಟು ನಿಂತಿದ್ದ. ಆ ಯುವಕ ಮಲಗಿದ್ದಲ್ಲಿಂದಲೇ ತಲೆಯೆತ್ತಿ ಇವರನ್ನು ನೋಡಿ ಅಸಹಾಯಕನಾಗಿ, “ಮಾಮಾ, ಮಾಮಾ” ಎಂದು ಕೂಗುತ್ತಿದ್ದ. ಹುಡುಗಿಯ ತಂದೆ ಸೇನಾಧಿಕಾರಿಯಲ್ಲಿ ಈ ತರುಣ ಎಸಗಿರುವ ಅಪರಾಧವೇನೆಂದು ಕೇಳಿದರು. ಅವನು ತನ್ನ ಹಸಿವೆಯನ್ನು ನೀಗಿಸುವ ಸಲುವಾಗಿ ಸೈನ್ಯದ ಉಗ್ರಾಣದಿಂದ ಒಂದಿಷ್ಟು ಪಡಿತರವನ್ನು ಕದ್ದಿದ್ದ. ಅದನ್ನು ಕೇಳಿದ ತಂದೆ ನಗುತ್ತಾ, “ಅದಕ್ಕಾಗಿ ಅವನನ್ನು ಹಿಂಸಿಸಿ ಏನು ಪ್ರಯೋಜನ? ಹಸಿವು ಎಥವರನ್ನೂ ಕಳ್ಳರನ್ನಾಗಿಸುತ್ತದೆ. ಹಸಿವೆಯನ್ನು ಇಲ್ಲವಾಗಿಸುವ ಕಡೆಗೆ ನೀವು ಗಮನ ನೀಡಬೇಕಾಗಿದೆ.” ಎಂದರು. ತಂದೆಯ ಮಾತಿನಿಂದ ಸೇನಾಧಿಕಾರಿಯ ಸಿಟ್ಟು ನೆತ್ತಿಗೇರಿತ್ತು. ಇಡಿಯ ವಾರಕ್ಕಾಗುವಷ್ಟು ಪಡಿತರವನ್ನು ಕದ್ದ ಯುವಕನಿಗೆ ಬದುಕುವ ಅರ್ಹತೆಯಿಲ್ಲ ಎಂದು ಘೋಷಿಸಿಬಿಟ್ಟ. ಮುಂದಿನ ಅಪಾಯವನ್ನು ಮನಗಂಡ ತಂದೆ ಯುವಕ ಕದ್ದ ಪಡಿತರವನ್ನು ತಾನು ಭರಿಸುವುದಾಗಿಯೂ, ಅವನನ್ನು ಬಿಡುವಂತೆಯೂ ಮನವಿ ಮಾಡಿಕೊಂಡರು. ಆದರೆ ಸೇನಾಧಿಕಾರಿಯು ಈಗ ಮತ್ತೊಂದು ಆಪಾದನೆಯನ್ನು ಅವನ ಮೇಲೆ ಹೊರೆಸಿದರು. ಪಡಿತರವನ್ನು ಕಳುವು ಮಾಡುವ ಭರಾಟೆಯಲ್ಲಿ ಅವನು ಸೈನಿಕರ ರಜೆ ಅರ್ಜಿಗಳನ್ನು ಹರಿದುಹಾಕಿದ್ದಾನೆ ಎಂದು ಆರೋಪಿಸಿದರು. ಆ ತರುಣ ಮಾತ್ರ ದಯನೀಯವಾಗಿ, “ಮಾಮಾ, ಮಾಮಾ” ಎಂದು ಕೂಗುತ್ತಲೇ ಇದ್ದ. ಶ್ವೇತಕನ್ನಿಕೆಯರು ಸುತ್ತಲೂ ನಿಂತು ಬಿಡುಗಡೆಯ ಹಾಡುಗಳನ್ನು ಹಾಡುತ್ತಿದ್ದರು. ಕೊನೆಗೂ ತಂದೆ ಮತ್ತು ಮಗಳು ಏನೂ ಉಪಾಯಗಾಣದೇ ಅಲ್ಲಿಂದ ಹೊರಬಂದರು. ಕೆಲವೇ ನಿಮಿಷದಲ್ಲಿ ಗುಂಡೊಂದು ಹಾರಿದ ಸದ್ದು ಕೇಳಿತು!
ಅಷ್ಟಾಗಿಯೂ ತಂದೆಯ ನಾಳೆಯ ಭರವಸೆಗಳು ಮಂಕಾಗಿರಲಿಲ್ಲ. ಸಧ್ಯದಲ್ಲಿಯೇ ಆಗಮಿಸಲಿರುವ ಅಮೇರಿಕಾದ ಮಿತ್ರರು ಎಲ್ಲವನ್ನೂ ಮಾನವೀಯಗೊಳಿಸಲಿದ್ದಾರೆ ಎಂದು ಹೇಳುತ್ತಲೇ ಇದ್ದರು. ಅವರೂ ಬಂದರು. ಹೆಣ್ಣುಗಳ ಮೇಲಿನ ಅತ್ಯಾಚಾರ, ಬಡವರ ಮೇಲಿನ ಕ್ರೌರ್ಯ, ಮಕ್ಕಳ ಮೇಲಿನ ಹಿಂಸೆ ಇದ್ಯಾವುದೂ ಕಡಿಮೆಯಾಗಲೇ ಇಲ್ಲ. ಅನೇಕ ಮಹಿಳೆಯರು ಅವರನ್ನು ತಣಿಸಲು ವೇಶ್ಯಾವಾಟಿಕೆಯನ್ನೇ ಕಸುಬಾಗಿಸಿಕೊಂಡರು. ಇನ್ನುಳಿದವರು ಸೈನಿಕರ ಬಟ್ಟೆಯನ್ನು ತೊಳೆಯುವ ಕೆಲಸವನ್ನು ಮಾಡತೊಡಗಿದರು. ನಾಲ್ಕು ಜತೆ ಸಾಕ್ಸ್ಗಳನ್ನು ತೊಳೆದರೆ ಒಂದು ಬ್ರೆಡ್ ಪ್ಯಾಕೆಟ್ ಸಿಗುತ್ತಿತ್ತು. ಒಂದು ಜೊತೆ ಯುನಿಫಾರಂಗೆ ಒಂದು ಕ್ಯಾನ್ ಪೋರ್ಕ್ ಮತ್ತು ಬೀನ್ಸ್ ಸಿಗುತ್ತಿತ್ತು. ಸೈನಿಕರ ಒಳಬಟ್ಟೆಗಳನ್ನು ತೊಳೆದರೆ ಮಾಂಸ ಮತ್ತು ಜ್ಯಾಮ್ ಬಾಟಲಿಗಳನ್ನು ಪಡೆಯಬಹುದಿತ್ತು. ಇಡಿಯ ಊರಿನಲ್ಲಿ ಎಲ್ಲಿ ನೋಡಿದರಲ್ಲಿ ಸೈನಿಕರ ಬಟ್ಟೆಗಳೇ ತೂಗಾಡುತ್ತಿದ್ದವು. ಹುಡುಗಿಯ ತಂದೆ ಮಾತ್ರ ಅಂಥ ಕೆಲಸಗಳನ್ನು ತಮ್ಮ ಮನೆಯ ಹೆಂಗಸರು ಮಾಡುವುದು ಬೇಡವೆಂದು ತಾಕೀತು ಮಾಡಿದ್ದರು. ತಾವು ಪಡೆದ ಸ್ವಾತಂತ್ರ್ಯ ಘನತೆಯ ಬದುಕನ್ನು ನೀಡಬೇಕೆಂಬುದು ಅವರ ಆಸೆಯಾಗಿತ್ತು. ಅದಕ್ಕಾಗಿ ಅವರು ತಮ್ಮ ಮನೆಯಲ್ಲಿಯೇ ಅಮೇರಿಕಾದ ಮಿತ್ರರಿಗಾಗಿ ಔತಣಕೂಟವೊಂದನ್ನು ಏರ್ಪಡಿಸಿದರು. ದಾಸ್ಯ ಎಷ್ಟು ಕೆಟ್ಟದ್ದು ಎಂಬುದರ ಕುರಿತು ಭಾಷಣವನ್ನೂ ಮಾಡಿದರು. ಕಾರ್ಯಕ್ರಮದಲ್ಲಿ ತನ್ನ ಚಿನ್ನದ ವಾಚನ್ನು ಅವರಿಗೆ ಉಡುಗೊರೆಯಾಗಿಯೂ ನೀಡಿದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಅಮೇರಿಕನ್ ಸ್ನೇಹಿತರು ಅವರ ಮನೆಗೆ ನಾಳೆಯಿಂದ ಬಟ್ಟೆ ಒಗೆಯುವ ಅವಕಾಶವನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು! ಹುಡುಗಿಯ ಕೊನೆಯ ಭರವಸೆಯು ಸತ್ತುಹೋಗಿತ್ತು. ಅವಳು ತನ್ನ ತಂದೆಗೆ ತಿಳಿಯದಂತೆ ಸೈನಿಕರ ಒಗೆಯುವ ಬಟ್ಟೆಯನ್ನು ತರಿಸಿಕೊಂಡಳು. ಅವಳ ಮನೆಗೆ ಬಂದ ಎರಡು ಚೀಲಗಳಲ್ಲಿ ಒಂದರಲ್ಲಿ ಮಾಂಸ, ಬೀನ್ಸ್ ಮತ್ತು ಬ್ರೆಡ್ಗಳ ಪೊಟ್ಟಣವಿತ್ತು. ಇನ್ನೊಂದರಲ್ಲಿ ಕೊಳೆಯಾಗಿರುವ ಸೈನಿಕರ ಒಳ ಉಡುಪುಗಳಿದ್ದವು. ಹುಡುಗಿ ಮತ್ತು ಅವಳ ತಾಯಿ ಕೊಳೆಬಟ್ಟೆಗಳನ್ನು ನೀರಿನಲ್ಲಿ ನೆನಸಿಟ್ಟು ಜೋರಾಗಿ ಬಡಿದು ತೊಳೆಯತೊಡಗಿದರು.
ಅಂದಿನಿಂದ ನಾನು ಒಳ್ಳೆಯ ನಾಳೆಗಳು ಎಂಬ ಬಗ್ಗೆ ಭರವಸೆಯನ್ನು ಕಳೆದುಕೊಂಡೆ. ‘ಒಳ್ಳೆಯ ನಾಳೆಗಳನ್ನು ತರುವವರು ಸ್ನೇಹಿತರು’ ಎಂದು ತಂದೆ ಹೇಳುತ್ತಿದ್ದುದರಿಂದ ಆ ಪದವೂ ಅರ್ಥವನ್ನು ಕಳೆದುಕೊಂಡಿತು. ಮಗೂ, ನಾಳೆಗಳ ಭರವಸೆಯೇ ಇಲ್ಲಿ ಸಾವಿರಾರು ವರ್ಷಗಳಿಂದ ಮಕ್ಕಳ ಹುಟ್ಟಿಗೆ ಕಾರಣವಾಗಿದೆ. ನಮ್ಮ ಕಾಲಕ್ಕಿಂತ ಮಕ್ಕಳ ಕಾಲವು ಮಾನವೀಯವಾಗಿರುತ್ತದೆ ಎಂಬ ಭರವಸೆಯನ್ನು ಅಥವಾ ಹಾರೈಕೆಯನ್ನು ಪ್ರತಿಯೊಬ್ಬ ತಂದೆ-ತಾಯಂದಿರೂ ಹೊಂದಿರುತ್ತಾರೆ. ಆದರೆ ಬೆಚ್ಚಗಿನ ಮನೆ ದಕ್ಕಿದ ಮಾತ್ರಕ್ಕೆ ಜೀವನ ಉತ್ತಮವಾಗಿದೆ ಎನ್ನಲಾಗುವುದಿಲ್ಲ. ಎಲ್ಲ ಸೌಕರ್ಯಗಳಿರುವ ಮನೆಗಳೂ ಅನೇಕರಿಗೆ ಇಲ್ಲಿ ಸೆರೆಮನೆಗಳೇ ಆಗಿರುತ್ತವೆ. ಬೇರೆಯವರಿಗೆ ತಲೆಬಾಗದ ಘನತೆಯ ಬದುಕು ಮಾತ್ರವೇ ನಮ್ಮ ನಾಳೆಗಳ ಕನಸು. ನಿನ್ನ ನಾಳೆಯಲ್ಲಿ ಇವೆಲ್ಲವೂ ಆಗಿಬಿಡುತ್ತವೆ ಎನ್ನುತ್ತೀಯಾ? ನನಗಂತೂ ಭರವಸೆಯಿಲ್ಲ.
ನಿನ್ನನ್ನು ಬೆದರಿಸುವ ಸಲುವಾಗಿ ಅಥವಾ ನಿರಾಸೆಗೊಳಿಸುವ ಸಲುವಾಗಿ ನಾನು ಇವೆಲ್ಲವನ್ನೂ ನಿನಗೆ ಹೇಳುತ್ತಿಲ್ಲ. ಇಷ್ಟೆಲ್ಲದರ ನಡುವೆ ನಾನು ಭೂಮಿಗೆ ಬರಬೇಕೆ? ಎಂದು ನೀನೇನಾದರೂ ಕೇಳಿದರೆ ನನ್ನ ಉತ್ತರ ಹೌದು ಎಂಬುದೇ ಆಗಿರುತ್ತದೆ. ಏನೂ ಆಗದೇ ಖಾಲಿಯಲ್ಲಿರುವುದಕ್ಕಿಂತ, ಅದೆಷ್ಟೇ ತೀವ್ರವಾಗಿದ್ದರೂ ಸರಿಯೆ, ನೋವನುಭವಿಸುವುದು ಲೇಸು. ಹೆಚ್ಚೇನು? ಸಾವು ಕೂಡ ಖಾಲಿತನಕ್ಕಿಂತ ಒಳ್ಳೆಯದೆ. ಯಾಕೆ ಗೊತ್ತಾ? ಸಾವಿದೆ ಎಂದರೆ ಅಲ್ಲಿ ಹುಟ್ಟು ಸಂಭವಿಸಿದೆ ಎಂದು ಅರ್ಥ. ಹಾಗೆಂದು ನೀನು ಬರುವ ಈ ಜಗತ್ತು ಅಷ್ಟು ಚಂದವಿದೆ, ಇಷ್ಟು ಚಂದವಿದೆ ಎಂದೆಲ್ಲಾ ಹುಸಿ ಭ್ರಮೆಗಳನ್ನು ನಿನ್ನೊಳಗೆ ಹುಟ್ಟುಹಾಕಲಾರೆ. ವಾಸ್ತವವಾಗಿ ಅದು ನಾನು ಹೇಳಿರುವುದಕ್ಕಿಂತಲೂ ಕ್ರೂರವಾಗಿದೆ. ಮಂಗೋಲಿಯಾ ಹೂವಿಗೆ ಕೈಚಾಚುವ ಹುಚ್ಚುತನ ನಿನ್ನಲ್ಲಿದ್ದರೆ, ಬೇರೆಯವರಿಗೆ ನಿನಗಿಷ್ಟವಾದ ಚಾಕಲೇಟ್ಗಳನ್ನು ಎಸೆಯುವುದನ್ನು ನೀನು ಸಹಿಸಬಲ್ಲೆಯಾದರೆ, ಹಸಿವೆಗಾಗಿ ತಿಂಡಿ ಕದ್ದ ತಪ್ಪಿಗೆ ಗುಂಡಿಗೆ ತಲೆಕೊಡುವ ಧೈರ್ಯ ನಿನ್ನಲ್ಲಿದ್ದರೆ ಖಂಡಿತವಾಗಿಯೂ ನೀನು ಇಲ್ಲಿಗೆ ಬರಬಹುದು. ಯಾವುದಕ್ಕೂ ಗುಂಡಿಗೆಯನ್ನು ಗಟ್ಟಿಯಾಗಿಟ್ಟುಕೋ.
ಅನುವಾದ: ಸುಧಾ ಆಡುಕಳ
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಪುಟ್ಟ ಹುಡುಗಿಗೆ ಅರ್ಥವಾಗದ ವಿಷಯವೊಂದಿತ್ತು. ದೊಡ್ಡ ಹೊಟ್ಟೆಯನ್ನು ಹೊತ್ತ ಅಮ್ಮ ಇಷ್ಟೊಂದು ಕೆಲಸವನ್ನು ಕಷ್ಟಪಟ್ಟು ಮಾಡುತ್ತಿರುವಾಗ ಸುಂದರವಾದ ಆ ಹೆಂಗಸು ಸುಮ್ಮನೆ ಯಾಕೆ ಕುಳಿತಿರುತ್ತಾಳೆ ಎಂಬುದು!
ಅವಳ ಚಾಕಲೇಟ್ ಡಬ್ಬದಲ್ಲಿ ಇನ್ನೂ ಒಂದು ಚಾಕಲೇಟ್ ಉಳಿದಿತ್ತು. ಸೋಫಾದಲ್ಲಿ ಕುಳಿತು ಕೈಗಳನ್ನು ಚಾಚಿ ನೆಟಿಗೆ ಮುರಿದ ಅವಳು ನಿಧಾನವಾಗಿ ಚಾಕಲೇಟನ್ನು ತೆಗೆದು, ಸುಲಿದು ತನ್ನ ಬಾಯೊಳಗಿಟ್ಟುಕೊಂಡಳು.
ಧನ್ಯವಾದಗಳು ಶಮಾ