ಹೊರಗಾಳಿಯ ತಾಜಾತನವನ್ನು, ಮಧ್ಯಾಹ್ನ ಮೂರುಗಂಟೆಯ ಬಿಸಿಲನ್ನು ಸೇವಿಸಿದೆ. ರೋಡು ದೊಡ್ಡ ಮಾಡಿದಾಗ ಕಡಿದ, ಈಗ ರೊಡಿನ ಸೈಡಲ್ಲಿ ಮಹಾ ಬಂಡೆಗಳ ತರ ಅಥವಾ ರಾಮಲಕ್ಷ್ಮಣರೋ, ಪಾಂಡವರೊ ಸಾಯಿಸಿ ಕೊಚ್ಚಿಹಾಕಿದ ಉಗ್ರ ರಾಕ್ಷಸ ಜನಾಂಗದ ಹೆಣಗಳ ಹಾಗೆ ಬಿದ್ದಿರೊ ಮೂರ್ನಾಲ್ಕು ಶತಮಾನಗಳಷ್ಟು ಪುರಾತನವಾಗಿರಬಹುದಾದ ಮರಗಳ ಬುಡಗಳು ಕಣ್ಣಿಗೆ ಬಿದ್ದವು. ಆ ತಾಜಾತನದ ಸಹಾಯದಿಂದಲೋ ಏನೋ ಇಲ್ಲಿಯತನಕ ಸಿಗದ ಪರಿಹಾರವು ಸಿಕ್ಕಿತು, ಅಥವಾ ಉತ್ಪತ್ತಿಯಾಯಿತು, ಆಥವಾ ನನ್ನ ಸುಪ್ತಪ್ರಜ್ಞಾ ಮನಸ್ಸು ಸಂಶ್ಲೇ಼ಷಣೆ ಮಾಡಿತು.
ಹಮೀರ್‌ ಮುಗಿಲು ಕೆ.ಎಲ್. ಬರೆದ ಈ ಭಾನುವಾರದ ಕಥೆ “ಹಿಂದಿನದು” ನಿಮ್ಮ ಓದಿಗೆ

ಮಾರುತಿಯವರ ಶೋರೂಮಿಗೆ ನಮ್ಮ ಹಳೆ ಎಯ್ಟ್ ಹಂಡ್ರೆಡನ್ನು ‘ಎಕ್ಸ್ಚೇಂಜ್‌ಗೆʼ ಕೊಟ್ಟು ತೆಗೆದುಕೊಂಡ ಹಡಗಿನಂತಹ ಎಕ್ಸಪ್ರೆಸೊವಿನ ಹಿಂದ್ಗಡೆ ಸೀಟಿನಲ್ಲಿ – ಜೀವನದ ಮೊದಲನೇ ಭಾರಿ ಅಪ್ಪಮ್ಮರ ಕಾಟವನ್ನು ಸೈಸಿಕೊಳ್ಳಲಾಗದೆ – ಸೀಟ್ ಬೆಲ್ಟ್ ಹಾಕಿಕೊಂಡು ತೊಳಸುವುದಕ್ಕೆ ಶುರುವಾಗುತ್ತಿದ್ದ ಮದುವೆಮನೆ ಊಟದಿಂದ ಸಸಲ್ಪ ಉಬ್ಬಿದ ಹೊಟ್ಟೆಯನ್ನು ಅಲಕ್ಷಿಸುತ್ತ ಫೋನಲ್ಲಿ ಮಿನಿಮಲಿಶ್ಯದ ಗೇಮ್‌ ಆಡುತ್ತಿದ್ದೆ. ಈಗಷ್ಟೆ ಸಂಬಂಧಿಕ ಅಣ್ಣ ಒಬ್ಬ ‘ಚನಾಗಿದ್ದುʼ ಎಂದ ಮಾತ್ರಕ್ಕೆ, ಟ್ರೇಲರ್‌ ನೋಡಿ, ಡೌನ್ಲೊಡ್ ಹಚ್ಚಿದ ಆನಿಮೆಯಿನ ಮೊದಲನೇ ಎಪಿಸೊಡ್‌ ಸಂಪೂರ್ಣ ಡೌನ್ಲೊಡ್‌ ಆಯಿತಾ ಎಂದು ಆಗೀಗ ಸ್ಕ್ರಿನ್‌ ಮೇಲೆ ಬೆರಳನ್ನ ಕಳಗೆ ಎಳೆದು ಚೆಕ್‌ ಮಾಡುತ್ತಿದ್ದೆ. ಕಾರ್ ಓಡಿಸುತ್ತಿರುವ ಅಪ್ಪ, ಪಕ್ಕದಲ್ಲಿ ಕೂತಿದ್ದ ಅಮ್ಮ ಏನೊ ಮಾತಾಡುತ್ತಿದ್ದರು.

“ಏ, ಫೋನಿಟ್ ಕೇಳ್ಸಕಳ ನೀ ಸಲ್ಪ” ಅಂತ ಅಪ್ಪ ನನ್ನ ಕರೆದಾಗ, ಹಟ ಮಾಡುವುದಕ್ಕೆ ತಯಾರಾಗುವುದನ್ನ ಅಪ್ಪನ ಮುಖಭಾವ ನೋಡಿ ಮರೆಯಬೇಕಾಯಿತು.

“ಎಂತಾತು?”

“ನಿನ್‌ ಹಳೆ ಕ್ಲಾಸ್‌ಮೇಟ್ಟಿದ್ನಲ, ಹೆಸ್ರೆಂತದ ಅವ್ನದು? ಮಂಜು? ಅವ್ನಪ್ಪ ನೇಣ್ಹಾಕಂಡ್ನಡ.”

ಗಾಭರಿಗೊಂಡು ಫೋನನ್ನು ಪಕ್ಕದ ಕಾಲಿ ಸೀಟಿಗೆ ನಿರ್ಲಕ್ಷದಿಂದ ಎಸೆದು, ಸೀಟ್ ಬೆಲ್ಟು ಬಿಡುವಷ್ಟು ಮುಂದೆ ದೇಹವನ್ನು ತಂದು, ಮೂಡಿದ ಅವಸರದಿಂದ ಹುಬ್ಬು ಜೋಡಿಸಿ “ಎಂತಕ್ಕೆ? ಎಂತಾತಡ?” ಎಂದು ಪ್ರಶ್ನಿಸಿದೆ. ಅಮ್ಮನೂ ಕೇಳಿದಳು.

ಅಪ್ಪಮ್ಮ ಕೊವಿಡ್ಡಿನ ಸಮಯದಲ್ಲಿ (ಕೊನೆಗೂ ಸಿಗದ) ಆನ್ಲೈನ್‌ ಕ್ಲಾಸು ಸಿಗುತ್ತದೆಯೆಂದು ನನ್ನನ್ನು ನಮ್ಮೂರಿನ ಸರಕಾರಿ ಕನ್ನಡ ಮಾಧ್ಯಮ ಶಾಲೆಯಿಂದ ಬಿಡಿಸಿ ಈಗ ಹೋಗುತ್ತಿರುವ ಇಂಗ್ಲೀಷ್‌ ಮೀಡಿಯಂ ಪ್ರೈವೆಟ್‌ ಸ್ಕೂಲಿಗೆ ಸೇರಿಸಿದಾಗ ಹಳೆ ಶಾಲೆಯಲ್ಲಿ ನಾನು ಬಿಟ್ಟುಬಂದ ಎಂಟು ಸಹಪಾಠಿಗಳಲ್ಲಿ ಮಂಜು ಒಬ್ಬ. ಅಷ್ಟೆಲ್ಲ ದೊಡ್ಡ ಫ್ರೆಂಡೇನಾಗಿರಲಿಲ್ಲದ ಹಾಗು ಅವನ ಮನೆ ನಮ್ಮ ಮನೆಯ ಸಮೀಪದಲ್ಲೇನೂ ಇರದ ಕಾರಣ ಆಕಸ್ಮಿಕವಾಗಿ ಮಾತ್ರ ಭೇಟಿ ಆಗುತ್ತಿದ್ದೆವು, ಒಟ್ಟಾರೆ ಹಳೆ ಶಾಲೆ ಬಿಟ್ಟಮೇಲಾದ ಒಂದುವರೆ ವರ್ಷದಲ್ಲಿ ಅವನು ಸಿಕ್ಕಿದ್ದು ಬರೀ ಐದಾರು ಸರಿ. ಈಗ ತಲೆಯಲ್ಲಿ ಅವನ ಹೆಸರೊಡನೆ ಬಂದ ಅತಿ ಸ್ಪಷ್ಟ ದೃಶ್ಯ ನಾವು ಕಾರಲ್ಲಿ ಹೋಗುತ್ತಿರುವಾಗ ರೋಡ್‌ ಸೈಡಲ್ಲಿ ಅಣ್ಣನ ಹಳೆ ಹರ್ಕಾಪರ್ಕಾ ಎಂಟ್ನೇಕ್ಲಾಸಲ್ಲಿ ಕೊಟ್ಟ (ಕೋವಿಡಿನಿಂದ ನಮಿಗೆ ಎಂಟ್ನೆಕ್ಲಾಸಲ್ಲಿ ಕೊಡದ) ಸೈಕಲ್ಲು ಹೊಡಿತಾ ಇರೋದು. ಅವನ ಮುಖವನ್ನು ನೆನಪಿಸಿಕೊಳ್ಳಲು ಬೇಕಾದ ಶ್ರಮವು ನನನ್ನು ಬೆರಗಾಗಿಸಿತು. ಅವನ ಅಪ್ಪನ ಮುಖ ನಿಧನಿಧಾನವಾಗಿ, ಸಿಗ್ನಲ್‌ ಸ್ಲೊ ಇದ್ದಾಗ ಲೋಡಾಗುತ್ತಿರುವ ಚಿತ್ರದ ಹಾಗೆ, ಹೆಚ್ಚು ಹೆಚ್ಚು ಸ್ಪಷ್ಟಗೊಳುತ್ತ ಕಣ್ಮುಂದೆ ಬಂದಿತು. ಅವನ ಮನೆಯಲ್ಲಿ ಸ್ವಂತ ಗದ್ದೆ ಸ್ವಲ್ಪ ಇದ್ದು, ಕಬ್ಬನ್ನ ಬೆಳಿಯುತ್ತಿದ್ದರು, ಸೀಸನ್‌ ಆದಾಗ ಮಂಜು ಕಬ್ಬು ಅಥವಾ ಸಸಲ್ಪ ಬೆಲ್ಲವನ್ನ ಬ್ಯಾಗಲ್ಲಿ ಅಡಗಿಸಿಟ್ಟು ಶಾಲೆಗೆ ತಗಬಂದು ಹಂಚುತ್ತಿದ್ದ. ಆದರೆ ಅವನಪ್ಪನ ಮೇನ್‌ ಆದಾಯ ಅಡಕೆ ವ್ಯಾಪಾರ, ಫಸಲುಗುತ್ಗೆ.

“ಸಾಲ. ಅಲ್‌ ಮದುವೆಲಿ ಸಮರ್ಥ ಹೇಳ್ತಿದ್ನಪ. ಅವ್ನಿಗೂ ದುಡ್ಕೊಡದಿತ್ತಡ. ವ್ಯಾಪಾರ ಚನಾಗ್ಹೊದ್ರನೂ, ಸರಿ ವ್ಯವಹಾರ ಮಾಡ್ದೆ ಇದ್ದಿದಕ್ಕೆ ನಷ್ಠ ಮಾಡ್ಕಂಡು ಸಾಲ ತಗಂಡ್ನಡ.”
“ಯಾವತ್ತು?”
“ಒಂದ್ವಾರಾತಡ.”

“ಅಯ್ಯ,” ಒಂದು ವಾರ. ನನ್ನ ಹಳೆ ಕ್ಲಾಸ್ಮೇಟಿನ ಅಪ್ಪ ಸತ್ತು ಒಂದು ವಾರ ಆದ್ರುನೂ ಈಗ ನನಿಗೆ ಸುದ್ದಿ ಮುಟ್ಟಿದ್ದು ನನ್ನಲ್ಲಿ ಸಂಕಟ ಹುಟ್ಟಿಸಿತು.
“ಅಡ್ಕೆ ವ್ಯಾಪಾರ ಮಾಡ್ತಿದ್ನಲ ಅವಲ್ದಾ?” ಅಮ್ಮ ಕೇಳಿದಳು. “ಅವ್ನ್ ಹೆಂಡ್ತಿ ಶಂಕ್ರುಬಟ್ರು ಮನೆಗೆ ಕೆಲ್ಸಕ್ ಬತ್ತಿದ್ಲಲ.”

“ಹಾ” ಎಂದು ನಾನು ಗಮನಕೊಡದೆ ಹೇಳಿದೆ.

“ಲಕ್ಷಗಟ್ಲೆ ಸಾಲಅಡ. ಇವ್ನಿದ್ನಲಾ ನಿನ್‌ ಸೋದ್ರುಮಾವನ್ಮೊಮ್ಮಗ” – ಅಮ್ಮನೆಡೆ ಕೈ ಆಡಿಸಿ – “ದೊಡ್ದೊಂದು ಹೊಸ ಮನೆ ಕಟ್ಟಿದ್ನಲ.”
“ಶ್ರೀಕಾಂತ?” ಅಮ್ಮ ಹೇಳಿದಳು.

“ಅಣ್ಬೆ ಮನೆ?” ಅಂತ ಕೇಳಿದೆ. ಅಮ್ಮನ ಗೊಂದಲ ಮುಖ ನೊಡಿ, “ಸಿಮೆಂಟಿನ್ದು, ಕಲ್ಲಿಂದು ಅಣ್ಬೆ ಅಡಿಗೆ ಯಾವ್ದೊ ಸಾದುನಾ ಯಾರ ಕುತಿದ್ದ ಸ್ಟಾಚು ಇದ್ದಲ, ಅದಾ?”

“ಅಣ್ಬೆ ಅಲ್ದ ಅದು, ಬೊದಿ ಮರದಡಿಗಡೆ ಬುದ್ಧ,” ಅಂತ ಅಮ್ಮ ನನ್ನ ಅಜ್ಞಾನವನ್ನು ಮುಚ್ಚಿಡುವ ರೀತಿಯಲ್ಲಿ ಬೈದಳು.
“ಅಣ್ಬೆ ತರ ಕಾಣ್ತಪ.”

“ಕಾಡ್‌ ಕಡ್ಸಿ, ಮೂರ್‌ ಪ್ಲೊರ್‌ ಮನೆ ಮಾಡಿ, ಬುದ್ಧನ್‌ ಮೂರ್ತಿನ ರಾಜಸ್ಥಾನ್ದಿಂದ್‌ ತಂದಿದ್‌ ಕಲ್ಲಿಂದ ಕಟ್ಟಿದ” ಅಂತ ಅಪ್ಪ ಕಿಡಿಕಿಯಿಂದ ಹೊರ ನೋಡುತ್ತಾ ಗೊಣಗುಟ್ಟಿದರು.

ಅದನ್ನು ಲಕ್ಷಿಸದೆ ಅಮ್ಮ, “ಅವನ್ಹತ್ರನೂ ಸಾಲ ತಗಂಡಿದ್ನಡಾ?” ಎಂದೆಂದಳು.

“ಹೂ. ಅವ್ನಹತ್ರನೇ ಹೆಚ್ಚಡ, ಸರಿ ಲೆಕ್ಕಚಾರಲ್ಲ ಗೊತ್ತಿಲೆ. ಪೋಲಿಸಲ್ಲ ಕಾವಲ್ಕಾಯ್ತಿದ್ವಡ. ಯಾರು ಅವ್ರ ಓಮಿನಿನಲ್ಲ ಎತಾಕಂಡ್ಹೊಗದಿಲ್ಲೆ ಅಂತ ನೊಡ್ಕಳಕ್ಕೆ. ಮೊನ್ನೆಯಲ್ಲ ಜನ ನುಗ್ತಿದ್ವಡ.”

“ಅಯಯ್ಯ” ಅಂತ ಅಮ್ಮ ಹೇಳಿದಳು. “ಮೂರ್‌ ಜನ ಮಕ್ಳಲ್ದಾ? ಇಬ್ರು ಹುಡುಗ್ರು, ಒಬ್ಳು ಹುಡ್ಗಿ? ಪಾಪ.”

“ಹಾ. ಮಂಜು ಮತ್ತೇ” – ಮಂಜುವಿನ ಅಣ್ಣ ಅಕ್ಕನ ಹೆಸರಿಗೆ ಎಷ್ಟೇ ಹುಡುಕಾಡಿದರು ಅವು ಗಂಟ್ಲಲೇ ಕೂತು ಬಾಯಿಗೆ ಬರಲೇಇಲ್ಲ. ಆಗ ಆದ ಕಹಿ ಸಂಕಟದ ಕಾರಣವನ್ನು ಪತ್ತೆಹಚ್ಚುವುದರಲ್ಲಿ ವಿಫಲನಾದೆ. ಅಪ್ಪನ ಫೊನು ನನ್ನ ಪಕ್ಕದ ಸೀಟಿನಲ್ಲಿ ಜನ್ಸಾಲೆಯವರು ಹಾಡನ್ನು ಹಾಡಲು ಶುರುಮಾಡಿತು.
“ಯಾರು?” ಅಂತ ಅಪ್ಪ ಎಡಗೈಯನ್ನ ಹಿಂದೆ ಚಾಚಿ ಕೇಳಿದರು.

“ಪ್ರಕಾಶ್‌ಮಾವ” ಅಂತ ಸ್ಕೀನ್‌ ನೊಡಿ ಹೇಳಿ ಫೊನ್‌ ಕೊಟ್ಟೆ. ಅಪ್ಪ ಫೋನೆತ್ತಿ, ಮಾತಾಡುವದಕ್ಕೆ ಶರುಮಾಡಿದರು. ಅಮ್ಮನು ಸುಮ್ಮನಾದಳು. ನನ್ನ ಕರುಳಲ್ಲಿ ಹೊಂಚು ಹಾಕುತ್ತಿದ್ದ ಗಾಭರಿ, ಸಂಕಟ, ಮತ್ಯಾವುದೊ ಹೆಸರುಸಿಗದ ಭಾವನೆಗಳ ಮಿಶ್ರಿತ ಹಾವು ಮಾತಿನ, ಗೇಮಿನ ವಿರಾಮದ ಅವಕಾಶ ಸಿಕ್ಕು ಬುಸ್ಸೆಂದು ಹಾರಿತು. ನಾನು ಹಿಂದೆ ಸೀಟಲ್ಲಿ ಓರಗಿ ಕುಳಿತಾಗ ಅಭ್ಯಾಸವಾಗದ ಸೀಟ್ ಬೆಲ್ಟು ಒಂದೆಡೆ ನನನ್ನು ಶಾಶ್ವತಗೊಳಿಸುವ ಹೊದಿಕೆಯಂತೆ, ಕವಚದಂತೆ ಇನ್ನೊಂದೆಡೆ ಆನೊಕಾಂಡದ ತರ ನನ್ನನ್ನು ಸುತ್ತಿ ಸತ್ತಿ ಉಸಿರು ಕಟ್ಟಿ ಮೂಳೆ ಮುರಿಯಲು ಇನ್ನೂ ಟೈಟಾಗಿ ಟೈಟಾಗಿ ಅಪ್ಪಿಕೊಂಡ, ನನ್ನ ಹೆಣದ ಮೇಲೆ ಹೊಟ್ಟೆತುಂಬಿಸಿಕೊಳ್ಳಲು ಬಂದ ಕರುಳ ಹಾವಿನ ಅವಳಿಯಂತೆ ಅನಿಸುತ್ತಿತ್ತು. ನಾನು ಸೀಟ್ ಬೆಲ್ಟನ್ನು ಬಟನ್‌ ಓತ್ತಿ ತೆಗೆದೆ.

“ಒಂದ್ವಾರಾತ ನಂಗ್‌ ಗೊತ್ತಾಗಕ್ಕೆ” ಅಂತ ನಾನು ಮೆಲ್ಲನೆ ಬೇರೆ ಯಾರಿಗೂ ಕೇಳದ ಹಾಗೆ ನನಗೇ ಹೇಳಿಕೊಂಡೆ. ಅರ್ಥಾಗದ ಭಾವನೆಗಳ ನಿರ್ಲಕ್ಷಿಸಲು, ಓಡಿಸಲು ನಾನು ಕಿಟಕಿಯಿಂದ ಹೊರ ನೋಡಿ, ಹಿಂದಿ ಧಾರವಾಹಿ ಮದುಮಗನ ಹಾಗೆ ಸರಳಿ ಲೈಟಿನ ತೋರಣದ ಹಿಂದಿನಿಂದ ಮೊನ್ನೆ ಬಾಗಲು ತೆಗೆದ ಬಾಟಾ ಚಪ್ಪಲಿ ಶೋರೂಮಿನ “ಬಾಟಾ” ಹೆಸರಿನ ಪಕ್ಕದಿಂದ ನೊಡುತ್ತಿದ ಕಾರ್ತಿಕ್‌ ಆರ್ಯನಿನೊಡನೆ ಕಣ್ಣು ಜೋಡಿಸಿದೆ. ಆ ನಿರ್ಜೀವ ಕಣ್ಣುಗಳ ಹಿಂದಿನಿಂದ ಯಾವುದೊ ಆತ್ಮವು ನನ್ನನ್ನೂ ನೋಡುತ್ತಿದೆಯೆಂದು ಭಾಸವಾಯಿತು. ನಮ್ಮ ಮಧ್ಯ ಯಾವುದೊ ಸೋದರತ್ವ ಇದೆಯೆಂಬ ಭಾವನೆ ಕಾಡಿತು. ಕಾರು ಚಲಿಸಿದಾಗ, ಫೋಟೊ ಮರೆಯಾದಾಗ, ಆ ತುಂಬು ಬಳಕೆಯ ಅಚಾನಕ್‌ ಆಗಮನ ನಿರ್ಗಮನ ನನ್ನಲ್ಲಿ ಉಕ್ಕುತ್ತಿದ್ದ ಭಾವನಾಬೆಂಕಿಗೆ ಸುರಿದ ತುಪ್ಪದಂತೆ ವರ್ತಿಸಿತು. ತಲೆ ತಿರುಗಿದಂತಾಯಿತು. ಕಾರು ನಾನು ಸಿಕ್ಕಾಕಿಕೊಂಡ ಕಾರ್ಗತ್ತಲಿನ ಗುಹೆಯಂತೆ ಅನಿಸಿತು. ಈಗ ಹೋಗುವ ಶಾಲೆಯ ಕೆಲ ಅಣ್ಣಂದಿರು ನನಗೆ ಅರ್ಧಂಬರ್ಧ ಅರ್ಥಾಗುವ ಕಾರಣಕ್ಕಾಗಿ ನೋಡಿ ನಗೆಯಾಡುವ ‘ಪಾವರ್‌ ಆಫ್‌ ಪ್ಯುರಿಟಿʼ ಆಭರಣ ಅಡ್ವರ್ಟೈಸ್ಮೆಂಟಿನ ಪೂಜ ಹೆಗಡೆಯ ಜೊತೆ ಕಣ್ಣು ಜೋಡಿಸುವ ಮೊದಲು ಕಣ್ಣು ಮುಚ್ಚಿ ತಲೆಯನ್ನು ಹಿಂದೆ ಒರಗಿಸಿದೆ.

ಅವನ ಅಪ್ಪನ ಮುಖ ನಿಧನಿಧಾನವಾಗಿ, ಸಿಗ್ನಲ್‌ ಸ್ಲೊ ಇದ್ದಾಗ ಲೋಡಾಗುತ್ತಿರುವ ಚಿತ್ರದ ಹಾಗೆ, ಹೆಚ್ಚು ಹೆಚ್ಚು ಸ್ಪಷ್ಟಗೊಳುತ್ತ ಕಣ್ಮುಂದೆ ಬಂದಿತು. ಅವನ ಮನೆಯಲ್ಲಿ ಸ್ವಂತ ಗದ್ದೆ ಸ್ವಲ್ಪ ಇದ್ದು, ಕಬ್ಬನ್ನ ಬೆಳಿಯುತ್ತಿದ್ದರು, ಸೀಸನ್‌ ಆದಾಗ ಮಂಜು ಕಬ್ಬು ಅಥವಾ ಸಸಲ್ಪ ಬೆಲ್ಲವನ್ನ ಬ್ಯಾಗಲ್ಲಿ ಅಡಗಿಸಿಟ್ಟು ಶಾಲೆಗೆ ತಗಬಂದು ಹಂಚುತ್ತಿದ್ದ. ಆದರೆ ಅವನಪ್ಪನ ಮೇನ್‌ ಆದಾಯ ಅಡಕೆ ವ್ಯಾಪಾರ, ಫಸಲುಗುತ್ಗೆ.

ತಲೆಯೊಳಗೆ ಆ ಆನಿಮೆಯಲ್ಲಿ ಏನೇನೆಲ್ಲ ಆಗಬಹುದೆಂದು ಯೋಚಿಸುವುದರಲ್ಲಿ ಮುಳುಗಲು ಯತ್ನಿಸಿದೆ, ವಿಫಲವಾಗಿ. ತಲೆಯೊಳಗೆ ಗಣಿತ ಲೆಕ್ಕಮಾಡಲು ಯತ್ನಿಸಿದೆ, ವಿಫಲವಾಗಿ. ಯಾಕೆ ಈ ಭಾವನೆ? ಈ ಆತಂಕ? ಎಂದು ಯೋಚಿಸತೊಡಗಿದೆ. ಕಣ್ಣೆದುರು ಬಂದಿದ್ದು ಹಳೆ ಶಾಲೆಯ ನೆನಪುಗಳು, ಮಧ್ಯರಾತ್ರಿಯಲ್ಲಿ ಬಿದ್ದು ಎಚ್ಚರವಾದಾಗ ಅರ್ಧ ಮರೆತ ಕನಸಿನ ದೃಶ್ಯಗಳಂತೆ. ನನ್ನ ಹಳೆ ಮೇಷ್ಟ್ರುಗಳು, ಸಹಪಾಠಿಗಳು. ನಲಿಕಲಿಯಲಿದ್ದಾಗ ತಪ್ಪಾಗಿ ಮೇಡಮ್ಮಿಗೆ ‘ಅಮ್ಮʼ ಅಂತ ಕರೆದಿದ್ದು. ನಾಲ್ಕನೇ ಕ್ಲಾಸಲ್ಲಿ ಟೂರ್‌ ಹೋಗಿ ಸಿಂಹ, ಹುಲಿ ನೋಡಿದ್ದು. ಐದನೇ ಕ್ಲಾಸಲ್ಲಿ ಮುರಾರ್ಜಿ, ನವೋದಯ ಪರೀಕ್ಷೆಗೆ ತಯಾರಾಗಿದ್ದು. ಆರೇಳರಲ್ಲಿ ಕ್ಲಸ್ಟರ್ ಮಟ್ಟದ ಸ್ಪೊರ್ಟ್ಸ್‌ನಲ್ಲಿ ಆಡಿದ ವಾಲಿಬಾಲು, ವಿಜ್ಞಾನದ ವಿಸ್ಮಯಕಾರಿ ಪ್ರಯೋಗಗಳು, ಹಾಗೂ ಈ ವರ್ಷ, ಈ ತರಗತಿ ಎಂದು ವಿಂಗಡಿಸಲಾಗದ, ಅನಂತವಾದ ಹಾಗು ನನಿಗೆ ಇಷ್ಟವಾಗದಷ್ಟು ಕಮ್ಮಿಯಿರುವ, ನೆನಪುಗಳು. ಈ ಎಲ್ಲ ಸಂಗತಿಗಳನ್ನು, ಸನ್ನಿವೇಶಗಳನ್ನು ಮರುನೆಪಿಸಿಕೊಳ್ಳಬೇಕೆನ್ನಿಸಿತು, ಎಂದಿಗೂ ನಾನು ಮರೆಯುವುದಿಲ್ಲ ಎಂದು ಗ್ಯಾರಂಟಿ ಮಾಡಲು ದಾಖಲಿಸಬೇಕೆನ್ನಿಸಿತು.

ನಿಜಹೇಳುವುದಾದರೆ ಮಂಜು ಅಷ್ಟೊಂದು ಸ್ನೇಹಿತನಾಗದಿರುವುದು ಕಳೆದ ವರ್ಷದಲ್ಲಿ ಸಂಪರ್ಕವಿಲ್ಲದಿರುವುದಕ್ಕೆ ಕಾರಣವಾಯಿತೆಂದು ಹೇಳಿದ್ದು ಸುಳ್ಳು; ಹಳೆ ಶಾಲೆಯ ಕ್ಲಾಸ್ಮೇಟುಗಳಲ್ಲಿ ಎಲ್ಲರೊಡನೆಯೂ ಸಂಪರ್ಕ ಕಳೆದುಕೊಂಡಿದ್ದೆ. ಶಾಲೆಯಲ್ಲಿ ಸಿಗದಿದ್ದರೂ ಫೋನಲ್ಲಿ ಮಾತಾಡಬಹುದು, ವಾಟ್ಸಾಪ್‌ ಮಾಡಬಹುದು, ಎಂದು ನನಗೇ ನಾನು ಸುಳ್ಳು ಹೇಳಿಕೊಂಡಿದ್ದೆ – ಅಲ್ಲ, ಸುಳ್ಳಲ್ಲ, ಆ ತರದ ಡಿಜಿಟಲ್‌ ಸ್ನೇಹಗಳನ್ನು ಇಟ್ಟುಕೊಂಡವರು ಎಷ್ಟೊ ಜನ ಗೊತ್ತು. ವ್ಯಕ್ತಪಡಿಸಲಿಕ್ಕೆ ಆಗದ ಕಾರಣಗಳಿಂದ ಅವರೊಡನೆ ಫೋನಲ್ಲೂ, ವಾಟ್ಸಾಪಲ್ಲೂ ಮಾತಾಡಲು ಸ್ನೇಹವನ್ನು ಉಳಿಸಲು ಆಗಲಿಲ್ಲ. “ಒಂದೇ ಊರ್ ಸಾರ್‌, ಆದಾಗೆಲ್ಲ ಬಂದ್ಹೊಗ್ತಿನಿ” ಅಂತ ಸುಳ್ಳಾದ ಮಾತುಗಳನ್ನು ನಿಜಮಾಡಿ ಈಗ ಆ ಶಾಲೆಗೆ ಭೇಟಿ ಕೊಟ್ಟರೆ ಎಂಟನೇ ಕ್ಲಾಸು ಅಲ್ಲೇ ಮುಗಿಸಿ ಹೋದ ನನ್ನ ಕ್ಲಾಸ್ಮೇಟುಗಳು ಯಾರೂ ಸಿಗುವುದಿಲ್ಲ. ನನ್ನ ಜೂನಿಯರ್ಸ್‌ ಇದ್ದರೂ ಅವರೊಡನೆ ಮಾತಾಡಿದರೆ ಅದು ಮೊದಲಿದ್ದ ಹಾಗೆ ಇರುವುದಿಲ್ಲ. ಹೊಸ ಕನ್ನಡ ಮೇಷ್ಟ್ರು ಬಂದಿದ್ದಾರಂತೆ. ಶಾಲೆ ಹಿಂದೆ ಇರುವ ಅಕೇಷಿಯಾಗಳಿಂದ ಆವಾರಣವಾದ ಮೈದಾನದ ಮಧ್ಯದಲ್ಲಿ ಬೋರ್ವೆಲ್‌ ತಗೆದಿದ್ದಾರಂತೆ. ಏನೇನೆಲ್ಲ ಆಗಿದೆಯಂತೆ.
ಈ ಭಾವನೆಗಳ ಬೇಧಿಯನ್ನು ಶುರುಮಾಡಿದ ಸಂಗತಿಯು ನೆನಪಾದಾಗ ಏಳು ವರ್ಷ ನನ್ನ ಜೊತೆ ಮೆರೆದಾಡಿದ ಕ್ಲಾಸ್ಮೇಟಿನ ತಂದೆ ಸತ್ತರೆಂಬುದು ನನ್ನಲ್ಲಿ ದುಃಖವನ್ನುಂಟುಮಾಡದೆ, ‘ಇದ್‌ ನಂಗ್‌ ಗೊತ್ತಾಗಕ್ಕೆ ಒಂದ್ವಾರ ಬೇಕಾತಲ, ಓ ನನ್ ಹಳೆ ಶಾಲೆ ಜೊತಿಗೆ ನಾ ಎಲ್ಲ ಸಂಪರ್ಕ ಕಳ್ಕಬುಟಿದಿʼ ಎಂಬುವುದರಿಂದ ತಲೆಬಿಸಿ, ಆತಂಕ ನನ್ನಲ್ಲಿ ಉತ್ಪತ್ತಿಯಾದವಲ್ಲಾ. ಅಸೈಯ. ಕೊಳಕೆನ್ನಿಸಿತು. “ತಲೆಸರಿದ್ದ ನಿಂದು?” ಎಂದು ನಾನು ನನ್ನನ್ನೇ ಕೇಳಿಕೊಂಡೆ.

“ಎಂತಾತ?” ಎಂದು ಅಮ್ಮ ಹಿಂದೆ ತಲೆತಿರುಗಿಸಿ ಕೇಳಿದಳು, ಮೆಲ್ಲನೆ ಅಪ್ಪನ ಫೋನ್ಕಾಲ್‌ ಡಿಸ್ಟರ್ಬ್‌ ಆಗದ ಹಾಗೆ.
“ಎಂತ್ತಿಲ್ಲೆ”, ಎಂದು ಸುಳ್ಳು ಹೇಳಿದೆ, “ಸಲ್ಪ ಹೊಟ್ಟೆ ತೊಳ್ಸತಿದ್ದು, ಕಿಟ್ಕೆ ತೆಗಿಲಕ್ಕಾ?”
“ದೂಳಾಕ್ತ, ಏಸಿ ಆನಿದ್ದು”.
“ಪ್ಲೀಸ್”‌

“ಆತು” ಅಮ್ಮ ಏಸಿ ಆಫ್‌ ಮಾಡಿದಳು. ನಾನು ಕಿಟಕಿಯನ್ನು ತೆಗೆದೆ; ಮುಂದ್ಗಡೆ ಸೀಟಿನ ಹಾಗೆ ಬಟನ್‌ ಒತ್ತಿ ಇಳಿಸೊ ಕಿಟಕಿ ಅಲ್ಲ, ಹಳೆ ಏಟ್‌ಹಂಡ್ರೆಡಲ್ಲಿ ಇದ್ದ ತಿರುಗಿಸಿ ತಿರುಗಿಸಿ ಇಳಿಸೊ ಕಿಟಕಿ.

ಹೊರಗಾಳಿಯ ತಾಜಾತನವನ್ನು, ಮಧ್ಯಾಹ್ನ ಮೂರುಗಂಟೆಯ ಬಿಸಿಲನ್ನು ಸೇವಿಸಿದೆ. ರೋಡು ದೊಡ್ಡ ಮಾಡಿದಾಗ ಕಡಿದ, ಈಗ ರೊಡಿನ ಸೈಡಲ್ಲಿ ಮಹಾ ಬಂಡೆಗಳ ತರ ಅಥವಾ ರಾಮಲಕ್ಷ್ಮಣರೋ, ಪಾಂಡವರೊ ಸಾಯಿಸಿ ಕೊಚ್ಚಿಹಾಕಿದ ಉಗ್ರ ರಾಕ್ಷಸ ಜನಾಂಗದ ಹೆಣಗಳ ಹಾಗೆ ಬಿದ್ದಿರೊ ಮೂರ್ನಾಲ್ಕು ಶತಮಾನಗಳಷ್ಟು ಪುರಾತನವಾಗಿರಬಹುದಾದ ಮರಗಳ ಬುಡಗಳು ಕಣ್ಣಿಗೆ ಬಿದ್ದವು.

ಆ ತಾಜಾತನದ ಸಹಾಯದಿಂದಲೋ ಏನೋ ಇಲ್ಲಿಯತನಕ ಸಿಗದ ಪರಿಹಾರವು ಸಿಕ್ಕಿತು, ಅಥವಾ ಉತ್ಪತ್ತಿಯಾಯಿತು, ಆಥವಾ ನನ್ನ ಸುಪ್ತಪ್ರಜ್ಞಾ ಮನಸ್ಸು ಸಂಶ್ಲೇ಼ಷಣೆ ಮಾಡಿತು. ಭಾವನಗಳೇಕೆ ಹೀಗೆ ಮೂಡಿದವೆಂದು ನನಗೆ ನಾನು ಕಥೆ ಹೇಳಿಕೊಂಡು, ನನ್ನನ್ನೇ ನಾನು ಸಮಾಧಾನ ಮಾಡಿದೆ.

ಹೀಗೆಂದು ನಿರೂಪಿಸಿದೆ “ನಿನಿಗೆ ಆ ರೀತಿ ಅನಿಸಿದ್ದಕ್ಕೆ ಕಾರಣ, ಬದಲಾವಣೆಯ ಹೆದರಿಕೆ. ನೀನು ಆ ಹಳೆಯ ಜಗತ್ತನ್ನು ಬಿಟ್ಟ ಮೇಲೆ ಅದು ಹಾಗೇ ಉಳಿದಿರುತ್ತದೆ ಎಂದು ನಂಬಿದ್ದೆ. ಆದರೆ ಅದೂ ಬೆಳೆದು, ಬದಲಾಗಿ ನೀನು ನಿನ್ನ ದಾರಿಯಲ್ಲಿ ಮುಂದೆ ಸಾಗುವಂತೆ ಅದು ಅದರ ದಾರಿಯಲ್ಲಿ ಮುಂದೆ ಸಾಗುತ್ತದೆ ಎಂಬುವುದನ್ನು ಉದ್ದೇಶಪೂರ್ವಕವಾಗಿ ಮರೆತೆ. ಈಗ ನೀನು ಸೃಷ್ಟಿಸಿದ ಭ್ರಮೆಯ ಭಂಗವಾಗುತ್ತಿದೆ, ಅದಕ್ಕೆ ಈ ಭಾವನೆ. ತಲೆಬಿಸಿಮಾಡ್ಕಳಡ, ಇಟ್ಸ ನಾಟ್‌ ಅ ಬಿಗ್‌ ಡೀಲ್‌, ದೊಡ್ವಿಷ್ಯ ಏನಲ್ಲ.ʼ

ಸತ್ಯವೊ ಇಲ್ಲವೋ ಎಂದು ಲೆಕ್ಕಿಸಲಿಲ್ಲ. ಈ ಪರಿಸ್ಥಿತಿಯಿಂದ ಹೊರದಾರಿಯಾದ ಆ ಮಾತನ್ನು ಮತ್ತೆ ಮತ್ತೆ ಬೇರೆ ಬೇರೆ ರೂಪಗಳಲ್ಲಿ ಹೇಳಿಕೊಂಡೆ, ಸಫಲವಾಗಿ. ಮಂಜುವಿನ ಅಪ್ಪನ ಆತ್ಮಹತ್ಯೆಯ ಬಗ್ಗೆ ಯೋಚಿಸಲು ಯತ್ನಿಸಿದೆ. ಏನಾದರು ಮಾಡಬೇಕು, ಮಂಜುವನ್ನು ಹೋಗಿ ಮಾತಾಡಿಸಬೇಕು ಎಂದು ಯೋಚಿಸಿದೆ. ಆಗ ಬದಲಾವಣೆಯ ಚಿಂತನೆ ಹೇಗೆ ಈ ಪ್ರಶ್ನೆಗಳ ಚಿಂತನೆಯನ್ನು ಓಡಿಸಿತೋ, ಈಗ ಆ ಆನಿಮೆಯಲ್ಲಿ ಆಗಬಹುದಾದ ನಾನಾ ಸಾಧ್ಯತೆಗಳು, ಮೊನ್ನೆಯಾದ ಗಣಿತ ಪಾಠ ನನ್ನ ಗಮನವನ್ನು ಸರಿದಿಟ್ಟುಕೊಂಡು ಈ ಪ್ರಶ್ನೆಗಳನ್ನು ನನ್ನ ತೆಲೆಯಿಂದ ಗಡಿಪಾರು ಮಾಡಿದವು.

ಮನೆ ಮುಟ್ಟಿದಾಗ, ‘ಭಾನ್ವಾರ. ಅವ್ನು ಮನೆಲಿರ್ತ. ಸಮಾಧಾನ ಮಾಡಕ್ಕೆ ಎಂತ್ಹೇಳಕಂತ ಗೊತಿಲ್ದಿದ್ರನೂ ಸುಮ್ನೆ ಹೋಗ್‌ ಮಾತಾಡ್ಸು. ಇನ್ನೂ ಮೂರ್ಗಂಟೆ ಟೈಮಿದ್ದುʼ ಅಂತ ಭೇಟಿ ಕೊಡುವುದಕ್ಕೆ ನಿರ್ಧರಿಸಿದೆ, ಆದರೆ ವರ್ಕ್‌-ಫ್ರಮ್-ಹೋಮ್‌ ಅಣ್ಣಂದಿರೆಲ್ಲ ಹಾಕಿಸಿಕೊಂಡಾಗ ನಾವೂ ಆನ್ಲೈನ್‌ ಕ್ಲಾಸಿಗೋಸ್ಕರ ಹಾಕಿಸಿದ ಬ್ರ್ಯಾಡ್ಬಾಂಡಿಗೆ ಕನೆಕ್ಟಾಗಿ ಅಪ್ಪನ ಫೋನು ಆ ತೊಂಬತ್ತು ಪರ್ಸೆಂಟಲ್ಲಿ ಕೂತಿದ್ದ ಅನಿಮೆಯಿ ಮೊದಲಷ್ಟು ಸಂಚಿಕೆಗಳನ್ನು ಡೌನ್ಲೊಡ್‌ ಮಾಡಿತು. “ಒಂದೆರ್ಡ ಎಪಿಸೊಡಲ್ದ, ನೋಡ್ಹೊಗ್ಲಕ್ಕಡ” ಎಂದು ಹೇಳಿಕೊಂಡೆ. ರಾತ್ರಿ ಊಟ ಮಿಸ್ಸಾಯಿತು, ಮಲಗುವುದು ಒಂದು ಗಂಟೆಯ ಮೇಲಾಯಿತು.