ಆಸ್ಟ್ರೇಲಿಯಾದ ಬ್ರಿಸ್ಬನ್‌ನ ಎರಿನ್ ಹ್ಯಾನ್ಸನ್ ಕಾವ್ಯ ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಆಯ್ದುಕೊಂಡವರು. ಇಂಟರ್ನೆಟ್ ಯುಗದ ಈ ಕಾಲದ ಸಮಕಾಲೀನ ಕವಯತ್ರಿಯಾದ ಇವರು, ಹನ್ನೊಂದನೇ ವಯಸ್ಸಿಗೆ ತಮ್ಮದೇಯಾದ ಬ್ಲಾಗ್ ಆರಂಭಿಸಿ ತನ್ನ ಕವಿತೆಗಳನ್ನ ಓದುಗರಿಗೆ ತಲುಪಿಸುವ ಒಂದೇ ಉದ್ದೇಶದಿಂದ ಅವರ ಪ್ರೀತಿಯ ಮಾರ್ಗವಾದ ಕಾವ್ಯದ ಹಾದಿ ಹಿಡಿದವರು. “What if I fall? Oh, my darling what if you fly” ಎನ್ನುವ ಕಸುವುಳ್ಳ ಸಾಲಿನೊಂದಿಗೆ ಪ್ರಪಂಚದಾದ್ಯಂತ ಒಂದು ಸಂಚಲನವನ್ನು ಸೃಷ್ಟಿಸಿದವರು. EH ಎನ್ನುವ ಕಾವ್ಯನಾಮದೊಂದಿಗೆ ಸರಳ ಶಬ್ದಗಳ, ಸುಂದರ ರೂಪಕಗಳ ಮೂಲಕ ತೀವ್ರವಾಗಿ ಕಾವ್ಯವನ್ನ ಧೇನಿಸಿ ಬರೆಯುವ ಎರಿನ್ ಈ ಕಾಲದ ಎಲ್ಲರ ಅಂತರಂಗದ ದುಗುಡಗಳಿಗೆ ಪದರೂಪ ನೀಡಿದವರು. ಆಧ್ಯಾತ್ಮ, ಸ್ವಾನುರಾಗ, ಪ್ರೇರಣೆ, ಇವರ ಕಾವ್ಯದ ಮೂಲ ಧಾತುಗಳು. ಪ್ರತಿ ಕವಿತೆಯು ಸ್ಫೂರ್ತಿದಾಯಕ. ಇಂತಹ ಕಾವ್ಯ ಓದುಗರಿಗೆ ಈ ಕಾಲದ ತುರ್ತು ಎಂದೇ ಎನಿಸದೆ ಇರದು. ನಿಮ್ಮ ಪ್ರೀತಿಯ ಓದಿಗೆ…
ಆಯ್ದುಕೋ ಕಾಡು
ಹೂವಿನ ಮೈಗಂಧದೊಳಗಿನ ಶಬ್ದಗಳನ್ನ
ಹಿಮದಂತೆ ಕರಗಿಸಿ ಬಿಡು
ನಾಲಿಗೆಯ ಮೇಲಿಟ್ಟು
ಬಚ್ಚಲ ಖೋಲಿಯ ಬಾಗಿಲಿನ ಮೇಲೋ
ಅಲ್ಲೇ ನೀ ಹೋಗುವಲ್ಲೆಲ್ಲಾ ಇರುವ ಮೂಲೆ ಅಂಗಡಿಗಳಲ್ಲೋ ಸಿಗಬಹುದು ನೋಡು
ಶ್!
ನಿಲ್ಲು ಅಂಗೈ ಮೇಲೆ ಕೂರುವವರೆಗೂ
ಗಪ್ ಚುಪ್ ಕಾದುಬಿಡು
ಪರಪಂಚವೆಲ್ಲಾ ಬೆನ್ನತ್ತಿ ಓಡಾಡು
ಕೈಗೆ ಹತ್ತುವವರೆಗೂ
ಯಾರಾದರೂ ದಾರಿಹೋಕರು
ಬೀಳಿಸಿಕೊಂಡು ಹೋಗಿರಬಹುದು ಪದಗುಚ್ಛಗಳನ್ನ
ಹಿಡಿ ಅವನ್ನ ಕೆಳಗೆ ಬಿದ್ದು ಮುಕ್ಕಾಗುವ ಮುನ್ನ
ಹುಡುಕು ಘರ್ಜಿಸುವ ಶಬ್ದಗಳನ್ನ
ಪಿಸುಗುಡುವ ಶಬ್ದಗಳನ್ನ
ಮುಗಿಲನ್ನೇ ಸೀಳುವ ಶಬ್ದಗಳನ್ನ
ಅಂತರಂಗದ ಜಗವನೂ
ಬಹಿರಂಗದ ಬ್ರಹ್ಮಾಂಡವನೂ
ತಟ್ಟಿ ಮಾತನಾಡಿಸುವ ಶಬ್ದಗಳನ್ನ
ಪುಟಗಳ ನಡುವಿಟ್ಟು ಅಮುಕಿ ಬಿಡು
ಇಲ್ಲವೇ ನೂಲು ಸುತ್ತಿಸಿ
ಮೌನದೊಂದಿಗೆ ಭೇಸಿ ನೇಯ್ದು ಬಿಡು
ಆಡಬೇಕಾದನ್ನೆಲ್ಲಾ ಸೇರಿಸಿ ಹೊಲಿದು ಬಿಡು
ಹೆಕ್ಕಿ ತಂದಿಟ್ಟುಕೊಂಡ ಪದಗಳನ್ನೆಲ್ಲಾ
ಸುತ್ತ ಹರವಿ ಸುರುವಿ ಬಿಡು
ನೀಟಾಗಿ ಜೋಡಿಸು
ಮತ್ತೆ ಹರಡು
ಮತ್ತೆ ಮತ್ತೆ ಹರಡು
ಜೋಡಿಸು
ನಿನ್ನೊಳಗೆಲ್ಲಾ
ಬರಿದು ಬರಿದು ಶಬ್ದಗಳೆಲ್ಲಾ
ಖಾಲಿ ಆದಾಗ
ಸಾವರಿಸಿಕೊಂಡು ಮತ್ತೆ
ಕೆಡಿಸುವ ಕಟ್ಟುವ ಆಟ ಮುಂದುವರಿಸು
*****
ನಿಮ್ಮನ್ನು ಹೆದರಿಸುವ
ಉದ್ದೇಶ ನನ್ನದಲ್ಲ ಆದರೆ
ನನ್ನೆಲುವಿನ ಹಂದರದೊಳಗೊಂದು
ಶೀತ ಶಿಶಿರನಿರುವನು
ಕೇಳುವುದು ನಿನಗೆ
ನೋಡು ಆ ಹಿಮಪ್ರವಾಹ ಘರ್ಜಿಸುವುದು
ಈ ಹೃದಯದಲ್ಲಿ
ಅಸರಂತ ಸುರಿವ ಹಿಮದಿಂದಾಗಿ
ಸಿಂಪಿಯೊಳಗೆ ಸೇರಿದ ಹುಳುವಾಗುವೆ
ಹಿಮಪಾತ ಸುರುವಾಗಲು ಹೆಚ್ಚು ಹೊತ್ತೇನು ಬೇಕಿಲ್ಲ
ತಪ್ಪು ತಿಳಿಯಬೇಡ
ಕೊನೆಯೇ ಇರದ ಈ ಧವಳದಲಿ ಸೊಗಸಿದೆ
ರೆಪ್ಪೆ ಭಾರವಾಗಿಸುವ
ಈ ನೀರ್ಗಲ್ಲು ಬೆಳಕನೆಲ್ಲಾ
ಪ್ರತಿಫಲಿಸುವ ಚಮತ್ಕಾರಕೆ ಅದೇನೋ ಮೋಡಿ
ಹೆಪ್ಪುಗಟ್ಟಿದ ಭಾವಗಳ ಮೇಲೆ ಜಾರಗುಂಡಿ ಆಡೋದು
ಪುಕ್ಕದಂತೆ ಹಗೂರ ಉದುರುವ ಹಿಮ
ಬಿಂದುಗಳ ನಾಲಿಗೆ ಚಾಚಿ ಹಿಡಿಯುವ ಮಜ
ಈ ಕಾಡಿನ ನೆಲಹಾಸೆಲ್ಲವೂ
ಜುಣುಗುಡುತಿರುವಾಗ ಸಿಳ್ಳೆ ಹೊಡೆದು
ಸೀಳಿ ಬರುವ ಸೀಳುಗಾಳಿ
ಕುತ್ತಿಗೆಗೆ ಸ್ಕಾರ್ಫು ಕಟ್ಟಿಕೊಂಡಿರುವಾಗ
ನನ್ನೆಲ್ಲ ಅಬ್ಬರಕ್ಕೆ, ಬಿರುಗಾಳಿಗೆ ನೀನು ತಲೆಕೆಡಿಸಿಕೊಳ್ಳದಿರು
ಸದಾ ಬೆಚ್ಚಗೆ ಹಚ್ಚಗೆ ಇಡುವ
ಒಂದು ಪುಟ್ಟ ಜ್ವಾಲೆಯಿದೆ ನನ್ನೊಳಗೆ
*****
ಉಪದ್ರವಗಳನ್ನೆಲ್ಲ
ಉಪ್ಪಿನ ಮೂಟೆ ಕಟ್ಟಿ
ಉರುಳಿಸು
ವಿಷಾದಗಳನ್ನ ಸುತ್ತಿ
ವಿದಾಯ ಹೇಳುವ ಸೂರ್ಯನ
ಕಡೆಯ ಬೆಳಕಿನ ಕೋಲಿಗೆ ಕಟ್ಟಿ ಬಿಡು
ಸರಿದು ಹೋಗಲು ಓಡುವ ಘಳಿಗೆಗೆ
ನಿನ್ನೆಲ್ಲ ಪಿಸುಮಾತು ಮೆಲ್ಲನುಸುರಿಬಿಡು
ಆದರೆ ನಿನ್ನ ನಂಬಿಕೆ
-ಗೆ ಮಾತ್ರ
ಬಿಗಿಯಾಗಿ ಜೋತು ಬೀಳು
ಕೊನೆಗೆ ಹೊಸತೇನೋ
ಸೃಜಿಸುವುದು
ಕ್ಷಮೆಗಾಗಿ
ನಿನ್ನನು ನೀನೇ
ಎಡೆಬಿಡದೆ ಅಂಗಲಾಚು
ಆಮೇಲೊಂದರೆಗಳಿಗೆ ವಿರಮಿಸು
ತೀರಿ ಹೋಗಲು ಸಜ್ಜಾದ ವಸಂತವನ್ನ
ಹಗೂರ
ನೆಲದ ಮೇಲೊರಗಿಸು
ಆಕಾಶಕ್ಕೆ ಕಣ್ಣೆಸೆದು ಕುಳಿತುಬಿಡು
ಈ ಇರುಳು
ಅರಳುವ ಹೊತ್ತಿಗೆ
ಇರುವುದೆಲ್ಲವೂ ಇಲ್ಲವಾಗುವಾಗ
ಹೊಸ ಚೈತ್ರ ಮತ್ತೆ ಮೈದುಂಬುವುದು
ಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ.
ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಇವರಿಗೆ ಓದು, ಬರಹ, ಕಾವ್ಯ ಅಚ್ಚುಮೆಚ್ಚು.
ಇವರ ಮೊದಲ ಪ್ರಕಟಿತ ಕವನ ಸಂಕಲನ “ಪೆಟ್ರಿಕೋರ್”(ಪ್ರಾರ್ಥನಾ ಕಾವ್ಯ ಪುರಸ್ಕಾರ ಸಂದಿದೆ).
ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ..
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Chaitra Shivayogimath done it again. Known for perfect translation of literary works, Chaitra’s translations never appear like translations. They look original with a desi touch. In the above 3 poems, Chaitra has stood to her reputation as a perfect translatior. Though all the three poems are excellent, I liked the last one as its theme is close to my heart. The beauty of Chaitra’s translations is that she coins the words to the perfection and that talent makes the translations look original. Congrats Chaitra.
Hi Chaitra … I enjoyed reading all the three poems of Erin Hanson and you have translated them well. I like the first poem the most, mainly because it is a ‘meta-poem’ and it is a sub-genre that is very close to my heart. Waiting to read more translations from you.
Regards,