ಜಯಶ್ರೀ ಚಿತ್ರಮಂದಿರ ಚಾಮರಾಜಪೇಟೆ ಒಂದನೇ ರಸ್ತೆಯ ಕೊನೆಯಲ್ಲಿ ಇತ್ತು. ಅದು ಕಳ್ಳೇಕಾಯಿ ಟಾಕೀಸ್ ಎಂದೇ ಪ್ರಖ್ಯಾತವಾಗಿತ್ತು. ಸುಮಾರಾಗಿ ಹಳೆಯ ಚಿತ್ರಗಳೇ ಅಲ್ಲಿ ಪ್ರದರ್ಶನವಾಗುತ್ತಿತ್ತು. ಆ ಟಾಕೀಸ್‌ಗೆ ಬರುತ್ತಿದ್ದವರು ಬಹುತೇಕ ಕಾರ್ಮಿಕ ವರ್ಗದವರು. ದೂರದೂರದ ಪ್ರದೇಶದವರು. ಅವರು ಹಾಗೆ ಬರುವಾಗ ಟೈಮ್ ಪಾಸ್‌ಗಾಗಿ ಕಳ್ಳೇಕಾಯಿ ತಂದು ತಿನ್ನುತ್ತಿದ್ದರಂತೆ. ಒಂದೊಂದು ಪ್ರದರ್ಶನವಾದಾಗಲೂ ರಾಶಿ ರಾಶಿ ಸಿಪ್ಪೆ ಬಿದ್ದಿರುತ್ತಿತ್ತಂತೆ. ಹಾಗಾಗಿ ಆ ಟಾಕೀಸ್‌ಗೆ ಕಳ್ಳೇಕಾಯಿ ಟಾಕೀಸ್ ಎಂದು ಹೆಸರಾಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ

ಕಂಟ್ರಮೆನ್ಟ್ ಥಿಯೇಟರ್ ಬಗ್ಗೆ ಹೇಳಿದೆ. ಅಲ್ಲಿದ್ದ ಫುಲ್ ಇಂಗ್ಲಿಷ್ ವಾತಾವರಣದ ಬಗ್ಗೆಯೂ ಹೇಳಿದೆ. ಕನ್ನಡ ಅರಳಿಸಿದ ಜವರೆಗೌಡ ಬಂದರು. ಶ್ರೀ ಚಿಮೂ ನೆನಪು ಆಯಿತು. ನಾವುಗಳು ಆಗ ದೂರವನ್ನು ಹೇಗೆ ಅಳೆಯುತ್ತಿದ್ದೆವು ಎಂದು ಹೇಳಿದೆ. ಬೆಂಗಳೂರಿಗರಿಗೆ ದೂರದ ಕಾನ್ಸೆಪ್ಟ್ ಇನ್ನೂ ಜೀವಂತವಾಗಿದೆ… ನನ್ನ ನೆನಪಿನ one way ಶುರು ವಿವರ ಕೊಟ್ಟೆ. ಆ ಕಾಲದ ಕಂಟ್ರಮೇಂಟ್ ಇಂಗ್ಲಿಷ್ ಸಿನಿಮಾ ಥಿಯೇಟರ್ ಕತೆ ತುಂಬಾ ಇದೆ ಅಂತ ಅನಿಸುತ್ತೆ. ಅಲ್ಲಿ ನಡೆದ ಕೆಲವು ಫಿಲ್ಮ್ ಫೆಸ್ಟಿವಲ್‌ಗಳು ಇತ್ಯಾದಿಗಳು ನಮ್ಮ ಜೀವನದ ಒಂದು ಭಾಗ ಆಗಿದ್ದವು.

ಆಗ ಕಪ್ಪು ಹಸಿರು ಬಣ್ಣದ ಸೈಕಲ್ ಇದ್ದವು. ರ್ಯಾಲಿ ಆಗ ಹಸಿರು ಬಣ್ಣದ್ದು. ಅದರ ಅವಶೇಷ ಈಗ ನನ್ನ ಮನೆ ಗ್ಯಾರೇಜಿನಲ್ಲಿ ಅನಾಥವಾಗಿ ಬಿದ್ದಿದೆ. ಆಗಾಗ ನನ್ನನ್ನು ನೋಡಿ ನಿನ್ನನ್ನು ಎಷ್ಟು ವರ್ಷ ಹೊತ್ತು ತಿರುಗಿದೆ, ನಿನ್ನ ಹೆಂಡತಿ ಮಕ್ಕಳನ್ನು ಸಹ ತ್ರಿಬ್ಬಲ್ ರೈಡ್ ಹೊಡೆದು ಇದ್ದೀನಿ. ನನಗೆ ಈಗ ಈ ದುರ್ಗತಿ ತಂದು ಇಟ್ಟೆಯಾ ಅಂತ ಕೇಳುತ್ತಿದೆ ಅನಿಸಿಬಿಡುತ್ತದೆ. ಕೇಜಿಗೆ ನಾಲ್ಕು ರೂಪಾಯಿ ಲೆಕ್ಕದಲ್ಲಿ ಅದನ್ನ ಹಳೇ ಸಾಮಾನು ಕೊಂಡುಕೊಳ್ಳುವವನು ಕೇಳಿದ್ದ, ಹತ್ತು ವರ್ಷ ಹಿಂದೆ. ಸೆಂಟಿಮೆಂಟ್ಸು.. ಮಾರಲಿಲ್ಲ ಅವನಿಗೆ ಕೊಡಲಿಲ್ಲ. ಈಗ ಅದನ್ನು ನೋಡೋದು ಬಿಟ್ಟುಬಿಟ್ಟಿದ್ದೇನೆ…. ಅದೇ ರೀತಿ ಎಷ್ಟೋ ಆ ಕಾಲದ ಈಗ ಏನೂ ಉಪಯೋಗವಿಲ್ಲದ ವಸ್ತುಗಳು ಮನೇಲಿ ಇವೆ. ಅದರಲ್ಲಿ ಬಹು ಮುಖ್ಯವಾದದ್ದು ನಾನಂತೆ.. ಇದನ್ನು ಯಾರು ಹೇಳಿದರು ಅನ್ನೋದು ಬೇಡಿ. ಇದು ಪ್ರತಿಯೊಬ್ಬರ ಗುಟ್ಟು!

ಮುಂದೆ…

ನಗರ ಭಾಗದ ಥಿಯೇಟರ್‌ಗಳ ಬಗ್ಗೆ ಹೇಳಬೇಕು ಅಂದರೆ ನಮ್ಮ ಪೀಳಿಗೆಯ ಸುಮಾರು ಜನರಿಗೆ ಅದೊಂದು ಜೀವನದ ಅತ್ಯಂತ ಸುಂದರವಾದ ಭಾಗ ಮತ್ತು ಭಾಗ್ಯ ಎಂದೇ ಹೇಳಬೇಕು. ನನ್ನ ಸ್ನೇಹಿತರಿಗೂ ಸೇರಿದ ಹಾಗೆ ಸುಮಾರು ಥಿಯೇಟರ್‌ಗಳು ನಮ್ಮ ಜೀವನದ ಕೆಲವು ಘಟನೆಗಳಿಗೆ ನೇರವಾಗಿ ಕಾರಣೀಭೂತವಾಗಿವೆ. ಕೆಲವರಿಗೆ ಇದು ಪ್ರೇಮ ಹುಟ್ಟಿದ ಸ್ಥಳ, ಜೀವನದ ಸಂಗಾತಿಯನ್ನು ಬೆಸೆದ ಜಾಗ! ಈಗ ಅದರ ಬಗ್ಗೆ …… ಇನ್ನು ಸಿಟಿ ಕಡೆ ಬಂದರೆ ರಾಜಾಜಿನಗರ, ಮಲ್ಲೇಶ್ವರ, ಯಶವಂತಪುರ ಮೊದಲಾದ ನಗರದ ಮಧ್ಯಭಾಗದಿಂದ ದೂರ ಇದ್ದ ಪ್ರದೇಶಗಳ ಥಿಯೇಟರ್ ಬಿಡಿ, ಮೆಜೆಸ್ಟಿಕ್ ಪ್ರದೇಶದಲ್ಲೇ ಅದೆಷ್ಟೊಂದು ಥಿಯೇಟರ್ ಅಂತೀರಿ.

ಆನಂದರಾವ್ ಸರ್ಕಲ್ ಮೂಲಕ ಸುಬೇದಾರ್ ಛತ್ರದ ರಸ್ತೆಗೆ ಬನ್ನಿ. ಮೊದಲು ಮೂವಿಲ್ಯಾಂಡ್ (ಇದನ್ನ ಮೊದಲು ಶಿವಾನಂದ ಅಂತ ಕರಿತಿದ್ದರು. ಇದರಲ್ಲಿ ತೆಲುಗು ಸಿನಿಮಾ ಹೆಚ್ಚು). ಯಾವುದೇ ಹೊಸ ತೆಲುಗು ಸಿನಿಮಾ ಬಂದರೆ ಬೆಂಗಳೂರಿನ ತೆಲುಗರು ಇಲ್ಲಿ ನೆರೆಯುತ್ತಿದ್ದರು. ಹಾಗೇ ಮುಂದೆ ಬನ್ನಿ ಕಪಾಲಿ ಥಿಯೇಟರ್. ಇಲ್ಲಿ ಮೊದಲು ಸಿನೆಮಾ ಶುರು ಆದರೂ ನಂತರ ಕನ್ನಡಕ್ಕೆ ಆದ್ಯತೆ ಇತ್ತು. ಕಪಾಲಿ ಅಂದರೆ ಒಂದು ನೆನಪು ಕೊಚ್ಚಿಕೊಂಡು ಬರುತ್ತೆ. ಅದನ್ನು ಮೊದಲು ಹೇಳುತ್ತೇನೆ… ಆಂಟಿ ಹಿಂದಿ ಅಂದರೆ ಹಿಂದಿ ವಿರೋಧಿ ಸ್ಟ್ರೈಕ್ ನಡೆಯುತ್ತಿತ್ತು. ಅದೇ ಸಮಯದಲ್ಲಿ ಕೇಂದ್ರ ಮಂತ್ರಿ ಒಬ್ಬರು (ಮೊರಾರ್ಜಿ ದೇಸಾಯಿ ಇರಬೇಕು) ಕಪಾಲಿ ಥಿಯೇಟರ್ ಉದ್ಘಾಟನೆಗೆ ಬರುತ್ತಾರೆ ಅಂತ ಸುದ್ದಿ ಇತ್ತು. ಕಪಾಲಿ ಮುಂದೆ ಎದುರು ರಸ್ತೆಯಲ್ಲಿ ಕೆ ಎಸ್ ಗೌಡರ್ ಅವರ ಒಂದು ಅಂಗಡಿ. ಶೋ ಕೇಸ್‌ಗೆ ಒಂದು ಶಟರ್. ಶೋ ಕೇಸ್‌ನಿಂದಾ ಜನ ದೂರ ಇರಲಿ ಅಂತ ಒಂದು ನಾಲ್ಕಡಿ ಜಾಗ ಬಿಟ್ಟು ಯು ಆಕಾರದಲ್ಲಿ ಒಂದು ಪೈಪ್ ನಲ್ಲಿ ವೆಲ್ಡ್ ಮಾಡಿಸಿ ನೆಲಕ್ಕೆ ಹೂಣಿದ್ದರು. ಅವತ್ತು ಶಟರ್ ಮುಚ್ಚಿತ್ತು. ಘೋಷಣೆ ಕೂಗಿಕೊಂಡು ಹೋದೆವು. ಕೈಯಲ್ಲಿ ಕೆಲವರು ಬಾವುಟ ಹಿಡಿದಿದ್ದೆವು. ನಾನು ನನ್ನ ಗೆಳೆಯ ನಾಗರಾಜ ಪೈಪ್ ವೆಲ್ಡ್ ಮಾಡಿದ್ದ ಜಾಗದೊಳಗೆ ಅದು ಯಾಕೋ ಸೇರಿದೆವು. ಪೊಲೀಸು ಇದ್ದಕ್ಕಿದ್ದ ಹಾಗೆ ಲಾಠಿ ಬೀಸಲು ಶುರು ಮಾಡಿದರು. ನಮ್ಮ ಜತೆ ಇದ್ದ ನರಸಿಂಹಯ್ಯ (ನಾವು ಇವನನ್ನು ಪೊಲೀಸ್ ಎಂದೇ ಕೂಗುತ್ತಿದ್ದೆವು.) ಪೊಲೀಸರು ಲಾಠಿ ಬೀಸಿದಾಗ ಅದನ್ನು ಎರಡೂ ಕೈಯಲ್ಲಿ ಗಬಕ್ ಅಂತ ಹಿಡಿದು ಎಳೆದ. ಲಾಠಿ ತುದಿಯಲ್ಲಿ ಕಟ್ಟಿದ್ದ ಹುರಿ ಒಳಗೆ ಪೊಲೀಸಪ್ಪನ ಕೈಯೊಳಗೆ ಹಿಡಿತ ಬರಲು ತೂರಿಸಿಕೊಂಡಿದ್ದ. ಇವನು ಎಳೆದ ಜೋರಿಗೆ ಪೊಲೀಸ್‌ನ ಕೈಯ ಚರ್ಮ ಪೂರ್ತಿ ಸುಲಿಯಿತು, ರಕ್ತ ಉಕ್ಕಿ ಬರಲು ಆರಂಭ ಆಯಿತು. ನಮ್ಮ ಗಮನ ಅತ್ತ ಇದೆಯಾ, ನಮ್ಮ ಮೇಲೂ ಲಾಠಿ ಬೀಸಿದರು. ಲಾಠಿ ಏಟು ನಾಗರಾಜನಿಗೆ ಎಡ ತೋಳಿಗೆ ಬಲವಾಗಿ ಬಿತ್ತು. ಅದು ಹೇಗೋ ಅಲ್ಲಿಂದ ತಪ್ಪಿಸಿಕೊಂಡೆ. ವಾ. ನಾಗರಾಜನಿಗೆ ಮೂರು ಬಾಸುಂಡೆ, ಹದಿನೈದು ದಿವಸ ನೋವು ಅನುಭವಿಸಿದ. ಕೈ ಎತ್ತಿಕೊಂಡು ಓಡಾಡಿದ. ಮನೇಲಿ ಹೇಳೋ ಹಾಗಿಲ್ಲ, ಬೈತಾರೆ. ಇದನ್ನು ಅವನು ಐದು ವರ್ಷ ಹಿಂದೆ ನಿಧನ ಆಗೋದಕ್ಕೆ ಒಂದೆರೆಡು ತಿಂಗಳು ಮೊದಲು ಸಹಾ ನನ್ನ ಜತೆ ಹೇಳಿದ್ದ! ಕಪಾಲಿ ಜತೆ ಜತೆಗೆ ನೆನಪು ಆಗೋದು ಬೆಂಗಳೂರು ಬುಕ್ ಬ್ಯುರೋ ಎಂಬ ಪುಸ್ತಕದ ಅಂಗಡಿ. ಎಷ್ಟು ಸಾವಿರ ಗಂಟೆಗಳನ್ನು ಅಲ್ಲಿ ನಾನು ನನ್ನ ಗೆಳೆಯ ಶ್ರೀನಿವಾಸ ಮೂರ್ತಿ ಕಳೆದಿದ್ದೆವೋ.. ಅದೆಷ್ಟು ಪುಸ್ತಕ ಕೊಂಡಿದ್ದಿವೋ… ಅದು ಬಿದ್ದು ನೆಲಸಮ ಆದಾಗ ಅದರ ಅಡಿಯಲ್ಲಿ ನಾನೂ ಬಿದ್ದಿರಬಹುದು ಎಂದು ನನ್ನ ಗೆಳೆಯರು ಆತಂಕ ಪಟ್ಟಿದ್ದರಂತೆ..

ಮುಂದೆ ತ್ರಿವೇಣಿ, ಅದರ ಪಕ್ಕ ಅಪರ್ಣ ಥಿಯೇಟರ್. ಇಲ್ಲಿ ಕನ್ನಡ, ಹಿಂದಿ ಮತ್ತು ಅಪರೂಪಕ್ಕೆ ತೆಲುಗು ಸಿನೆಮಾಗಳು. ಇನ್ನೂ ಮುಂದೆ ಬಂದಿರಾ. ಅಲ್ಲೇ ಹಿಮಾಲಯ ಥಿಯೇಟರ್. ದಾರಾಸಿಂಗ್, ಹೆಲೆನ್ ನಟಿಸಿದ್ದ ಅಸಂಖ್ಯಾತ ಚಿತ್ರಗಳು ಇದರಲ್ಲಿ ಬರುತ್ತಿದ್ದವು. ಥಿಯೇಟರ್ ಮುಂದೆ ಸಂಪೂರ್ಣ ಪಾರದರ್ಶಕ ಗುಲಾಬಿ ಬಣ್ಣದ ಅರೆ ಬರೆ ಉಡುಗೆಯಲ್ಲಿ ಯೌವನ ತುಂಬಿ ತುಳುಕುತ್ತಿದ್ದ ಹೆಲೆನ್ ಚಿತ್ರ ಇದ್ದರೆ ಪ್ಯಾಂಟು ತೊಟ್ಟು ಕಟ್ಟು ಮಸ್ತಾದ ಬೆತ್ತಲೆ ಎದೆ, ಹೊಟ್ಟೆ ಬಿಟ್ಟುಕೊಂಡು ದಾರಾಸಿಂಗ್ ನಗುತ್ತಲೋ ಮೂತಿ ಸೊಟ್ಟ ಮಾಡಿಕೊಂಡೋ ಇರುತ್ತಿದ್ದ. ಈ ಪೋಸ್ಟರ್ ನೋಡಿಯೇ ಪಡ್ಡೆಗಳು ಸಿನಿಮಾ ನೋಡಲು ನುಗ್ಗೋರು. ಅದೇ ರಸ್ತೆ ಮುಂದಕ್ಕೆ ಹೋಗೋಣ. ಮತ್ತೆ ಯು ಟರ್ನ್ ಮಾಡಿದಾಗ ನಿಮಗೆ ಮತ್ತಷ್ಟು ಥಿಯೇಟರ್ ಸಿಗುತ್ತೆ. ಮುಂದೆ ಬಂದರೆ, ಎಡಗಡೆ ಕಾಮತ್ ಹೋಟೆಲ್ ಇತ್ತು, ಸಪ್ನಾ ಬುಕ್ ಅಂಗಡಿ ಅಲ್ಲೇ ಶುರು ಆಗಿದ್ದು. ಕೊಂಚ ಎಡಕ್ಕೆ ತಿರುಗಿದರೆ ತ್ರಿಭುವನ್ ಥಿಯೇಟರ್ ಸಿಕ್ತಾ, ಇದರಲ್ಲಿ ಹಿಂದಿ, ಕನ್ನಡ ಸಿನಿಮಾ. ಮತ್ತೆ ಕೆಂಪೇಗೌಡರ ರಸ್ತೆಗೆ ಬನ್ನಿ ಮುಂದೆ ಸರೀರಿ. ಮೂಲೆಯಲ್ಲಿ ಸಾಗರ್ ಚಿತ್ರಮಂದಿರ, ಅದು ಈಗ ಹೆಸರು ಬದಲಾಯಿಸಿಕೊಂಡಿದೆ. ಇಲ್ಲಿ ಸಿನಿಮಾ ಸಕ್ಸಸ್ ಆದರೆ ಇಡೀ ಕರ್ನಾಟಕದಲ್ಲಿ ಆ ಸಿನಿಮಾ ಚೆನ್ನಾಗಿ ಓಡುತ್ತೆ ಎನ್ನುವ ನಂಬಿಕೆ ಇತ್ತು. ಈಗ ಅದು ಭೂಮಿಕಾ. ಇಲ್ಲಿ ಮೊದಲು ಗುಬ್ಬಿ ವೀರಣ್ಣ ಅವರು ನಾಟಕ ಪ್ರದರ್ಶನ ಮಾಡುತ್ತಿದ್ದರು. ಮಾಲೀಕರು ಬದಲಾಗಿ ಇದು ಥಿಯೇಟರ್ ಆಯಿತು.

ಅದರ ನಂತರ ಸ್ಟೇಟ್ಸ್ ಥಿಯೇಟರ್. ಸ್ಟೇಟ್ಸ್ ನಲ್ಲಿ ತೆಲುಗು ಸಿನಿಮಾ ಇದ್ದಾಗ ನಮ್ಮ ಮಾಜಿ ರಾಷ್ಟ್ರಪತಿ ಗಿರಿ ಅವರು ಇಡೀ ಸಂಸಾರ ಸಮೇತ ಬಂದು ಚಿತ್ರ ನೋಡುತ್ತಿದ್ದರು. ಅದನ್ನು ನೋಡುವುದೇ ಒಂದು ಸೊಗಸು ಆಗ. ಮುಂದೆ ಬಂದು ರಸ್ತೆಯ ಈ ಪಕ್ಕ ಬಂದರೆ ಮೊದಲಿಗೆ ನಿಮಗೆ ಪ್ರಭಾತ್ ಥಿಯೇಟರ್, ಅದರ ಪಕ್ಕದ ರಸ್ತೆಯಲ್ಲಿ ಮೇನಕಾ ಥಿಯೇಟರ್. ಇದರ ಮೊದಲ ಹೆಸರು ಜೈಹಿಂದ್. ಮುಂದುವರೆದರೆ ಮೂಲೆಯಲ್ಲಿ ಕೆಂಪೇಗೌಡ ಚಿತ್ರಮಂದಿರ. ಇಲ್ಲಿ ಹಳೇ ಸಿನಿಮಾಗಳು. ಇದರ ಪಕ್ಕವೇ ವಿಷ್ಣು ಭವನ. ನಮ್ಮೂರಿಗೆ ಮೊದಲಬಾರಿಗೆ ಬ್ರೆಡ್ ಟೋಸ್ಟ್, ಬ್ರೆಡ್ ಜ್ಯಾಂ ಪರಿಚಯಿಸಿದ ಹೊಟೇಲು. ಎಡಕ್ಕೆ ತಿರುಗಿ ತಲೆ ಎತ್ತಿದರೆ ಅಭಿನಯ ಥಿಯೇಟರ್, ಇಲ್ಲಿ ಹಿಂದಿ ಹಾಗೂ ಕನ್ನಡ ಸಿನಿಮಾ. ಇದು ನಮ್ಮ ನಗರದ ಮೊದಲನೇ ಎಸ್ಕಲೇಟರ್ ಹೊಂದಿದ ಥಿಯೇಟರ್. ಇದರಲ್ಲಿ ಒಬ್ಬ ಹಿಂದೀಯವನ ಜತೆ ನಾನು ಕನ್ನಡದಲ್ಲಿ ಜಗಳ ಆಡಿ ಗೆದ್ದಿದ್ದೇ. ನನ್ನ ಸೀಟಿನಲ್ಲಿ ಕೂತು ಜಾಗ ಬಿಡೋಲ್ಲ ಅಂತ ಅವನ ಗೆಳೆಯರ ಜತೆ ಜಗಳ ತೆಗೆದ. ನಾನು ಲೋಕಲ್‌ನವನು ಅವನಿಗೆ ಸೋತರೆ ಹೇಗೆ? ಕೈಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿದೆವು. ನನ್ನ ಹೆಂಡತಿ ಬಿಡು ಹಾಳಾಗಲಿ ಬೇರೆ ಜಾಗದಲ್ಲಿ ಕೂತುಕೊಳ್ಳೋಣ ಅಂದರೂ ಬಿಡದೆ ಹೋರಾಟ ಮಾಡಿದ್ದೆ. ವಾಚ್ ಮನ್ ಬಂದು ಅವನನ್ನು ಎಬ್ಬಿಸಿ ಸೀಟು ಬಿಟ್ಟುಕೊಡಿಸಿದ. ಇದು ಯಾಕೆ ಇನ್ನೂ ನೆನಪಿನಲ್ಲಿದೆ ಅಂತ ತಿಳಿಯದು.

ಕೆಂಪೇಗೌಡ ರಸ್ತೆಯಲ್ಲಿ ಮುಂದೆ ಬನ್ನಿ ಕಲ್ಪನಾ ಥಿಯೇಟರ್, ಅದರ ತಮ್ಮ ಕೈಲಾಸ ಅಥವಾ ಸಪ್ನಾ ಅಲ್ಲೇ ಪಕ್ಕದಲ್ಲಿ. ಇವುಗಳಲ್ಲಿ ಹಿಂದಿ ಮುಖ್ಯ ಸಿನೆಮಾ. ಕೈಲಾಸ್ ನಗರದ ಮೊದಲನೇ ಮಿನಿ ಥಿಯೇಟರ್. ಮಿನಿ ಅಂದರೆ ಎಲ್ಲವೂ ಮಿನಿ ಮಿನಿ. tiket ಸಹ ಪುಟ್ಟದಾಗಿತ್ತು! ನರ್ತಕಿ ಸಿಕ್ತಾ, ಸಪ್ನಾ ಮಿನಿ ಬಂತಾ ಆಮೇಲೆ ಸಂತೋಷ.. ಕನ್ನಡ ಹಿಂದಿ ಸಿನಿಮಾಗಳು ಇಲ್ಲಿ. ಮುಂದಕ್ಕೆ ಬಂದರೆ ಅಲಂಕಾರ ಥಿಯೇಟರ್. ಅಲಂಕಾರ ಥಿಯೇಟರ್ ಹೋಗಿ ಅಲ್ಲಿ ಅಲಂಕಾರ ಪ್ಲಾಜಾ ಆದಾಗ ಇದು ಅಮಿತಾಬ್ ಬಚ್ಚನ್ ಕೊಂಡಿರೋದೂ ಅಂತ ಗಾಳಿ ಸುದ್ದಿ ಇತ್ತು. ಇಲ್ಲಿ ಅಪರೂಪಕ್ಕೆ ಕನ್ನಡ ಸಿನಿಮಾ ಇರುತ್ತಿತ್ತು. ಇದು ದಾಟಿ ಮುಂದೆ ಬಂದರೆ ಮೆಜೆಸ್ಟಿಕ್ ಥಿಯೇಟರ್. ಇಡೀ ಏರಿಯಾಗೆ ಹೆಸರು ಕೊಟ್ಟ ಥಿಯೇಟರ್. ಇಲ್ಲಿ ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ. ಅದೇ ರಸ್ತೆ ಎದುರು ಮೂಲೆಯಲ್ಲಿ ಗೀತಾ ಥಿಯೇಟರ್. ಗೀತಾ ಟಾಕೀಸ್‌ನ ಮುಂಚಿನ ಹೆಸರು ಸೆಲೆಕ್ಟ್ ಅಂತ.

ಇದರಲ್ಲಿ ಯಾವಾಗಲೂ ಎಂ ಜಿ ಆರ್ ನ ತಮಿಳು ಸಿನೆಮಾಗಳು, ಅದರಲ್ಲೂ ಹಳೇವು. ಇದರ ಹಿಂಭಾಗ ಸರ್ಪಭೂಷಣ ಶಿವಯೋಗಿಗಳ ಮಠ. ಶ್ರೀ ಹುಕ್ಕೇರಿ ಬಾಳಪ್ಪನವರು ಬೆಂಗಳೂರಿಗೆ ಬಂದರೆ ಇಲ್ಲೇ ವಾಸ್ತವ್ಯ. ಬಿಡುವಿದ್ದಾಗ ಸುತ್ತಲೂ ಜನರನ್ನು ಕೂಡಿಸಿಕೊಂಡು ಅಜ್ಜ ಹಾಡು ಹೇಳ್ತಾ ಇದ್ದರು. ಅಜ್ಜಾ ಈ ಹಾಡು ಹೇಳ್ರೀ, ಅಜ್ಜಾ ಆ ಹಾಡು ಹೇಳ್ರೀ ಅಂತ ಜನ ಕೇಳೋದು, ಅಜ್ಜ ಖುಷಿಯಿಂದ ಹಾಡೋರು. ಕೆಲವು ಸಲ ನಾನೂ ಕೂತು ಅಜ್ಜಾ ಸಂಜೆ ಬೆಳಕಿನಲಿ ಹೇಳ್ರೀ ಅಜ್ಜಾ, ಮಾನವನಾಗಿ ಹುಟ್ಟಿದ ಮೇಲೆ ಹೇಳ್ರೀ ಅಜ್ಜಾ.. ಅಂತ ಕೇಳಿ ಹಾಡಿನ ಸವಿ ಅನುಭವಿಸಿರೋ ಸರದಾರ! ಹಾಗೇ ಎಡಕ್ಕೆ ತಿರುಗಿ ಕೊಂಚ ಮುಂದೆ ಬಂದರೆ ಸಂಗಂ ಟಾಕೀಸು. ಜ್ಯುಯಲ್ ಥೀಫ್ ಮೊದಲನೇ ಸಿನಿಮಾ, ಆಗಲೇ ಆಂಟಿ ಹಿಂದಿ ಸ್ಟ್ರೈಕ್ ನಡೆದು ನಮಗೆಲ್ಲಾ ಬಾಸುಂಡೆ ಬರೋಹಾಗೆ ಬಾರಿಸಿದ್ದರು ಪೊಲೀಸಿನೋರು.. ಇದರ ಕತೆ ಏನು ಅಂದರೆ ಮೆರವಣಿಗೆ ಹೊರಡಿಸಿಕೊಂಡು ಉಪ್ಪಾರ ಪೇಟೆ ಪೊಲೀಸ್ ಸ್ಟೇಶನ್ ದಾಟಿ ಈ ರಸ್ತೆಗೆ ತಿರುಗಿದೇವು. ಮುಂದೆ ಹೋಗಲು ಬಿಟ್ಟರು. ಸಂಗಂ ಮುಂದೆ ಬಂದು ಮುಂಚೂಣಿ ಗುಂಪು ನಿಂತಿತು. ಹಿಂದೆ ಬರುತ್ತಿದ್ದವರು ಇವರ ಜತೆ ಸೇರಿದರಾ… ಪೊಲೀಸು ಎರಡೂ ಕಡೆಯಿಂದ ಬಾರಿಸಿ ಚಚ್ಚಿಬಿಟ್ಟರು. ಆಗ ಈಗಿನ ಬಸ್ ಸ್ಟ್ಯಾಂಡ್ ಇರಲಿಲ್ಲ. ಒಂದು ಹಳ್ಳದ ಜಾಗ ಮತ್ತು ಪೂರ್ತಿ ಮುಳ್ಳು ಬೇಲಿ ಅದಕ್ಕೆ. ಲಾಠಿ ಏಟು ತಪ್ಪಿಸಿಕೊಳ್ಳಲು ಸೈಕಲ್ ಅಲ್ಲೇ ಬಿಟ್ಟು ಓಡಿದೆವು. ನನ್ನ ಜತೆ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಓದುತ್ತಿದ್ದ ನನ್ನ ಹೈಸ್ಕೂಲ್ ಕ್ಲಾಸ್ ಮೇಟ್ ರಾಮರಾವ್ ಇದ್ದ. ಇಬ್ಬರೂ ಓಡಿದೆವು. ಪಾಪ ರಾಮರಾವ್ ಓಡಲು ಆಗದೇ ನಿಂತ. ಅರೆಸ್ಟ್ ಆದ. ಆಗ ಅನಂತ ಕೃಷ್ಣ ಅನ್ನೋರು ಕಾರ್ಪೊರೇಟರೋ ಮೆಯರೋ ಆಗಿದ್ದರು. ಅವರು ಎರಡು ದಿವಸದ ನಂತರ ಅರೆಸ್ಟ್ ಆಗಿದ್ದೋರನ್ನ ಬೇಲ್ ಮೇಲೆ ಬಿಡಿಸಿದರು.

ಪ್ರತಿದಿವಸ ನನ್ನ ಜತೆ ಹತ್ತು ಹದಿನೈದು ಗಂಟೆಗೂ ಮೀರಿ ಸಮಯ ಕಳಿತಾ ಇದ್ದವನು ರಾಮರಾವ್. ನಾನು ಬೇರೆಕಡೆ ಅಂದರೆ ವಿದ್ಯಾರಣ್ಯಪುರ ಸೇರಿದ ಮೇಲೂ, ಸೆಟಲ್ ಆದಮೇಲೆ ಸಹ ಭೇಟಿ ಆಗ್ತಾ ಇದ್ದ. ಹಲವು ಉದ್ದಿಮೆ ಹುಟ್ಟು ಹಾಕಿದ ಮತ್ತು ಅರ್ಧಕ್ಕೆ ಬಿಟ್ಟು ಹೊಸದಕ್ಕೆ ಹಾರುತ್ತಿದ್ದ. ಅಣಬೆ ಬೇಳೆಯೋದರಿಂದ ಹಿಡಿದು ಬಾವಿ ತೋಡುವವರೆಗೆ ಇವನ ಜ್ಞಾನ ಹಬ್ಬಿತ್ತು. ಹಿಂದಿ ವಿರೋಧಿ ಚಳವಳಿಯಲ್ಲಿ ಪೊಲೀಸರ ಕೈಲಿ ಸಿಕ್ಕಿ ಹಾಕಿಕೊಂಡು ತನ್ನ ವಿದ್ಯಾಭ್ಯಾಸ ಹಾಳು ಮಾಡಿಕೊಂಡ. ಬ್ರಹ್ಮಚಾರಿಯಾಗಿಯೆ ದಿನ ದೂಡಿದ ಇವನು ತುಂಬಾ ಬೇಗ ಐವತ್ತೈದನೇ ವಯಸ್ಸಿನಲ್ಲೇ ಕೊನೆ ಉಸಿರು ಎಳೆದ. ಇವನ ಕತೆ ಹೀಗಾದರೆ ನನ್ನ ಸೈಕಲ್ ಬಿಡಿಸಿಕೊಂಡು ಬಂದಿದ್ದು ಇನ್ನೊಂದು ರೋಚಕ ಕತೆ. ಮುಂದೆ ಅದನ್ನ ಹೇಳುತ್ತೇನೆ.

ಮೆಜೆಸ್ಟಿಕ್ ಹಾದು ಮುಂದೆ ಬಂದು ಚಿಕ್ಕಪೇಟೆ ಸರ್ಕಲ್ ಎಡಕ್ಕೆ ತಿರುಗಿ. ವಿಜಯಲಕ್ಷ್ಮಿ ಟಾಕೀಸು ಇಲ್ಲೇ. ನಮ್ಮ ಪೀಳಿಗೆಯವರು ಅತಿ ಹೆಚ್ಚು ಇಂಗ್ಲಿಷ್ ಚಿತ್ರಗಳನ್ನು ಅತಿ ಕಡಿಮೆ ದುಡ್ಡಿನಲ್ಲಿ ನೋಡಿದ್ದು ಇಲ್ಲೇ. ಒಳ್ಳೊಳ್ಳೆ ಇಂಗ್ಲಿಷ್ ಸಿನಿಮಾಗಳು ಕಂಟ್ರೋಮೆಂಟ್ ಶೋ ನಂತರ ಇಲ್ಲಿಗೆ ಬರ್ತಾ ಇದ್ದವು. ಅರ್ಧ, ಒಂದು ಕಿಮೀ ಫಾಸಲೆಯಲ್ಲಿ ಆರಕ್ಕೂ ಮೀರಿ ಕಾಲೇಜುಗಳು. ಸರ್ಕಾರಿ ಕಲೆ ಮತ್ತು ವಿಜ್ಞಾನ ಕಾಲೇಜು, ಸರ್ಕಾರಿ ಲಾ ಕಾಲೇಜು, ಸೆಂಟ್ರಲ್ ಕಾಲೇಜು, ಆರ್ ಸಿ ಕಾಲೇಜು, ಮಹಾರಾಣಿ ಕಾಲೇಜು, ಗೃಹ ವಿಜ್ಞಾನ ಕಾಲೇಜು, ಇಂಜಿನೀರಿಂಗ್ ಕಾಲೇಜು, ಡಿಪ್ಲೊಮೊ ಪಾಲಿಟೆಕ್ನಿಕ್ ಮೂರು… ಸಾಕಾ ಬೇಕಾ? ಈ ಥಿಯೇಟರ್‌ನಲ್ಲಿ ಸ್ಟೂಡೆಂಟ್ ಪಾಸ್ ಸೌಲಭ್ಯ ಇತ್ತು. ಸಿನಿಮಾ ನೋಡಲು ಪಾಸ್! ಈಗ ಇಂತಹ ಒಂದು ಸೌಲಭ್ಯ ನಮಗಿತ್ತು ಅಂದರೆ ನಮ್ಮ ಮೊಮ್ಮಕ್ಕಳು ಆಶ್ಚರ್ಯ ಪಡುವ ಸಂಗತಿ. ತಾತ ಸಖತ್ ಬುರುಡೆ ಬಿಡ್ತಾನೆ ಅಂತ ಹೇಳಿದರೂ ಆಶ್ಚರ್ಯ ಇಲ್ಲ. ಪಾಸ್ ಉಪಯೋಗಿಸಿ ಅಲ್ಲಿ ಬರುವ ಸಿನಿಮಾ ನೋಡುವುದು ಸುತ್ತ ಮುತ್ತಲಿನ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ಮಸ್ಟ್ ಅನ್ನಬಹುದು. ಮಾಮೂಲಿ ದರವೂ ಕಡಿಮೆ ಜತೆಗೆ ಪಾಸ್ ಮಾಡಿಸಿಕೊಂಡರೆ ಅರ್ಧ ದರಕ್ಕೆ ಸಿನಿಮಾ ನೋಡುವ ಅವಕಾಶ. ಬಹುಶಃ ಪ್ರಪಂಚದ ಬೇರಾವ ಊರಿನಲ್ಲೂ ಈ ಸೌಲಭ್ಯ ಇರಲಿಲ್ಲ ಆಗ ಮತ್ತು ಮುಂದೂ ಸಹ ಇರದು. ಈ ಸೌಲಭ್ಯ ಎಷ್ಟು ಉತ್ಕಟವಾಗಿ ಅನುಭವಿಸಿದೆವು ಅಂದರೆ ಯಾರಾದರೂ ಕ್ಲಾಸಿಗೆ ಚಕ್ಕರ್ ಅಂದರೆ ಆಂವಾ ಅಲ್ಲಿದ್ದಾನೆ ಅಂತ. ಕ್ಲಾಸಿಗೆ ಚಕ್ಕರ್ ಹಾಕಲು ಸಾವಿರಾರು ಅವಕಾಶ ಸಿಕ್ತಾ ಇತ್ತು. ಎಲ್ಲಾ ಥಿಯೇಟರ್‌ನಲ್ಲೂ ಮಾರ್ನಿಂಗ್ ಶೋಗಳು, ಇಳಿಸಿದ ಬೆಲೆಯಲ್ಲಿ. ಅದೂ ತುಂಬಾ ಒಳ್ಳೊಳ್ಳೆಯ ಸಿನಿಮಾಗಳು. ಈಗ ನೆನೆಸಿಕೊಂಡರೆ ಅಂದಿನ ಸಂತೋಷ ಮರುಕಳಿಸುವ ದಿನಗಳು. ಆಗ ನೋಡಿದ ಸಿನಿಮಾಗಳು ಈಗಲೂ ನೆನಪಿನಲ್ಲಿ ಉಳಿದುಕೊಂಡಿವೆ. ನಮ್ಮ ವಿದ್ಯಾಭ್ಯಾಸ ಮುಗಿದು ಎಷ್ಟೋ ವರ್ಷಗಳ ನಂತರ ತಪ್ಪಿಲ್ಲದೆ ಮೆಜೆಸ್ಟಿಕ್ ಏರಿಯಾದ ಥಿಯೇಟರ್ ಹೆಸರು ಹೇಳಿದರೆ ಕಾಫಿ ಬೆಟ್ಟಿಂಗ್ ಮಾಡ್ತಾ ಇದ್ದೆವು. ನನ್ನ ಕಾಲೇಜಿನ ಗೆಳೆಯರು ನನಗೆ ಸಾಥ್. ಬಹುಶಃ ನಾಗರಾಜನ (ಇವನು ಈಗಿಲ್ಲ) ಸಂಗಡ ಹೆಚ್ಚು ಸಿನಿಮಾ ನೋಡಿದ ನೆನಪು. ಅಂದ ಹಾಗೆ ಇಷ್ಟು ಸಿನೆಮಾ ಥಿಯೇಟರ್‌ಗಳು ಪ್ರಪಂಚದ ಯಾವ ಪ್ರದೇಶಗಳಲ್ಲಿಯು ಇಷ್ಟೇ ಜಾಗದಲ್ಲಿ ಇರಲಿಲ್ಲವಂತೆ!

ಇನ್ನು ರಾಜಾಜಿನಗರದ ನವರಂಗ್, ರಾಮಚಂದ್ರ ಪುರದ ಸುಜಾತಾ, ಮಾಗಡಿ ರಸ್ತೆಯ ಪ್ರಸನ್ನ, ವೀರೇಶ್, ಶಾಂತಲಾ…. ಒಂದೊಂದೂ ನೆನಸಲೆಬೇಕಾದ್ದು. ಯಶವಂತಪುರದ ಗೋಪಾಲ್, ಜಾಲಹಳ್ಳಿಯ hmt ಥಿಯೇಟರ್ bel ನ ಕಲಾಕ್ಷೇತ್ರದಲ್ಲಿ ಅಲ್ಲಿನ ನೌಕರರಿಗೆ ಸಿನಿಮಾ ಪ್ರದರ್ಶನ ಇರುತ್ತಿತ್ತು. ವರ್ಷಕ್ಕೊಮ್ಮೆ ಫಿಲ್ಮ್ ಫೆಸ್ಟಿವಲ್ ಸಹ ಆಗುತ್ತಿತ್ತು. ತುಂಬಾ ಒಳ್ಳೆಯ ಸಿನಿಮಾಗಳು ಬರುತ್ತಿತ್ತು. ವೆಟ್ಟೋರ ಡಿಸಿಕಾನ ಬೈಸಿಕಲ್ ಥೀವ್ಸ್ ಇಲ್ಲಿ ನಾನು ನೋಡಿದ್ದು, ಪಥೆರ್ ಪಾಂಚಾಲಿ ಸಹ ಇಲ್ಲೇ ನೋಡಿದ್ದು, ಅದಿನ್ನೂ ತಲೆಯಲ್ಲಿ ಕೂತಿದೆ. ಅಂದ ಹಾಗೆ ಫಿಲ್ಮ್ ಕ್ಲಬ್‌ಗಳ ಕಲ್ಪನೆ ತಂದು ಆರ್ಟ್ ಫಿಲ್ಮ್‌ಗಳು ಸಾಮಾನ್ಯರನ್ನು ತಲುಪುವಂತೆ ಮಾಡಿದ ಶ್ರೀ ನರಹರಿ ರಾವ್ bel ನವರು…. ಅಂದಿನ ನಾವು ಈ ಎಲ್ಲಾ ಟಾಕೀಸುಗಳಿಗೂ ಭೇಟಿ ನೀಡಿದವರು. ಅಂದ ಹಾಗೆ ನನ್ನ ಒಬ್ಬ ಗೆಳೆಯ ಇದ್ದ. ಬೆಂಗಳೂರಿನಲ್ಲಿ ಓದಲು ಹೈದರಾಬಾದಿನಿಂದ ಬಂದಿದ್ದ. ಲಾ ಓದುತ್ತಿದ್ದ. ಅಲ್ಲಿ ಆತನಿಗೆ ಬೆಳಿಗ್ಗೆ ಹತ್ತರವರೆಗೆ ಕ್ಲಾಸು. ನಂತರ ಅವನ ಸಮಯ ಪೂರ್ತಿ ಥಿಯೇಟರ್ ಒಳಗೆ. ಒಂದು ವರ್ಷದಲ್ಲಿ ೧೫೬೮ ಸಿನಿಮಾ ನೋಡಿದ ದಾಖಲೆ ನನ್ನದು ಎಂದು ಹೇಳುತ್ತಿದ್ದ. ನನ್ಮಗ ಬುರುಡೆ ಬಿಡ್ತಾ ಇದಾನೆ ಅನ್ನಿಸಿ ಹೇಗೆ ಅಂದೆ. ದಿವಸಕ್ಕೆ ನಾಲ್ಕು, ಕೆಲವು ಸಲ ಐದು ಆರು ಲೆಕ್ಕ ಹಾಕು ತಗೋ ಅಂತ ಡೈರಿ ಮುಂದಿಟ್ಟ. ತೆಲುಗು ತಮಿಳು ಸಿನಿಮಾಗಳು ಮೂರು ಗಂಟೆ ತೋರಿಸಿದರೆ ಇಂಗ್ಲಿಷ್ ಸಿನಿಮಾ ಒಂದೂವರೆ ಗಂಟೆ ಕಾಲ. ಕೆಲವು ಸಿನಿಮಾ ಆರೇಳು ಸಲ ನೋಡಿದ್ದ. ಅವನ ಡೈರಿ ಪರಿಶೀಲನೆ ನಂತರ ಅವನಿಗೆ ಸ್ಟ್ಯಾಂಡಿಂಗ್ ಸಲ್ಯೂಟ್ ಮಾಡಿದೆ. ಈ ತನಕ ಅವನ ರೆಕಾರ್ಡ್ ಯಾರೂ ಮುರಿದ ಹಾಗಿಲ್ಲ! ಚಲನಚಿತ್ರ ಬಿಡುಗಡೆ ದಿವಸ ನಕ್ಷತ್ರ ಮೆರವಣಿಗೆ ಮತ್ತು ಅದನ್ನು ಥಿಯೇಟರ್ ಮುಂದೆ ಇರಿಸುವ ನಾಯಕ ನಟನ ಕಟ್ ಔಟ್‌ಗೆ ನೇತು ಹಾಕುವ ಸಂಪ್ರದಾಯ ಎಪ್ಪತ್ತರ ದಶಕದ ಕೊಡುಗೆ. ಈಗ ಕಟ್ ಔಟ್‌ಗಳಿಗೆ ಹಾಲಿನ ಅಭಿಷೇಕ ಇದೆಯಂತೆ. ಮುಂದೆ ನಮ್ಮ ರಾಜಕಾರಣಿಯ ಪ್ರಭಾವದ ಪರಿಣಾಮ ಸೇಬಿನ ಹಾರ ಬರಬಹುದು, ಹಲಸಿನ ಹಾರ, ಬೆಳ್ಳುಳ್ಳಿ ಹಾರ, ಸಮೋಸ ಹಾರ, ಆಲೂಗೆಡ್ಡೆ (ಆಲೂಗೆಡ್ಡೆ ಇಂದ ಚಿನ್ನ ತಯಾರಾದಾಗ ಚಿನ್ನದ ಹಾರಗಳೇ ಬರಬಹುದು) ಹಾರ… ಇವು ಯಾವುದನ್ನೂ ತಳ್ಳಿಹಾಕುವ ಹಾಗಿಲ್ಲ. ನನಗೆ ಒಂದೇ ಆಸೆ ಅಂದರೆ ನಾವು ಬದುಕಿರುವಾಗಲೇ ಈ ವೈವಿಧ್ಯಮಯ ಹಾರಗಳು ಅದರಲ್ಲೂ ಹಲಸಿನ ಹಾರ ಚಾಲ್ತಿಯಾಗಲಿ ಎಂದು.

ಕಪಾಲಿ ಜತೆ ಜತೆಗೆ ನೆನಪು ಆಗೋದು ಬೆಂಗಳೂರು ಬುಕ್ ಬ್ಯುರೋ ಎಂಬ ಪುಸ್ತಕದ ಅಂಗಡಿ. ಎಷ್ಟು ಸಾವಿರ ಗಂಟೆಗಳನ್ನು ಅಲ್ಲಿ ನಾನು ನನ್ನ ಗೆಳೆಯ ಶ್ರೀನಿವಾಸ ಮೂರ್ತಿ ಕಳೆದಿದ್ದೆವೋ.. ಅದೆಷ್ಟು ಪುಸ್ತಕ ಕೊಂಡಿದ್ದಿವೋ… ಅದು ಬಿದ್ದು ನೆಲಸಮ ಆದಾಗ ಅದರ ಅಡಿಯಲ್ಲಿ ನಾನೂ ಬಿದ್ದಿರಬಹುದು ಎಂದು ನನ್ನ ಗೆಳೆಯರು ಆತಂಕ ಪಟ್ಟಿದ್ದರಂತೆ..

ಸಂಗಂ ಥಿಯೇಟರ್‌ನಿಂದಾ ಮುಂದೆ ಹೆಜ್ಜೆ ಇಟ್ಟರೆ ನಿಮಗೆ ನಟರಾಜ, ಅದರ ಎದುರು ಸೆಂಟ್ರಲ್. ಕೊಂಚ ಮುಂದಕ್ಕೆ ಬನ್ನಿ ಸಂಪಿಗೆ ಅದರ ಮಿನಿ. ಹಾಗೇ ಮುಂದೆ ಬಂದರೆ ಎಡಗಡೆ ಗೀತಾಂಜಲಿ. ಹಾಗೇ ಎಡಕ್ಕೆ ತಿರುಗಿ ಉದ್ದಕ್ಕೆ ಮೂಗಿನ ನೇರಕ್ಕೆ ಬಂದರೆ ನವರಂಗ್. ನವರಂಗ್‌ನಲ್ಲಿ ಗೆಳೆಯ ನಟರಾಜನ ಸಂಗಡ ಸುಮಾರು ಸಿನಿಮಾ ನೋಡಿದ್ದೆ. ಹಾಗೆ ನಮ್ಮ ಅಣ್ಣನ ಮಕ್ಕಳು ರವಿ ಶಶಿ ಸುಬ್ಬು ರಮಾ ರಘು ಮಧು ಸಂಗಡ ಸಹ ಕೆಲವು ಪಿಕ್ಚರ್ ನೋಡಿದ ನೆನಪು. ಬಲಕ್ಕೆ ತಿರುಗಿ ನೇರ ಹೋದರೆ ಗೋಪಾಲ್… ಗೋಪಾಲ್‌ನಲ್ಲೂ ಸುಮಾರು ಸಿನಿಮಾ ನೋಡಿದ್ದೇನೆ.

ಇನ್ನ ಕಂಟ್ರೋಮೆಂಟ್ ಸಿನೆಮಾ ಅಂದರೆ ಪರದೇಶಕ್ಕೆ ಹೋದಹಾಗೆ. ಅಲ್ಲಿ ಬೆಂಗಾಳಿ ಸಿನೆಮಾ ಇಂಗ್ಲಿಷ್ ಸಬ್ ಟೈಟಲ್ ಹಾಕಿ ಮಾರ್ನಿಂಗ್ ಶೋ ತೋರಿಸುತ್ತಿದ್ದರು. ಸತ್ಯಜಿತ್ ರೇ ಅವರ ಎಲ್ಲಾ ಸಿನಿಮಾಗಳನ್ನು ಹೀಗೆ ನೋಡಿದ್ದು. ಆಗಾಗ್ಗೆ ಫಿಲ್ಮ್ ಫೆಸ್ಟಿವಲ್ ಅಂತ ಮಾಡಿ ಹೊರದೇಶದ ಸೆನ್ಸಾರ್ ಆಗಿಲ್ಲದ ಚಿತ್ರಗಳು ಅಂತ ಪ್ರಚಾರ ಕೊಡೋರು. ಅದಕ್ಕೂ ನುಗ್ತಾ ಇದ್ದೆವು! ಆದರೆ ಎಲ್ಲವೂ ಇತಿಮಿತಿ ಚಿತ್ರಗಳು. ಉತ್ಸವದಲ್ಲಿ ಭಾರೀ ತಲೆನೋವು ಬರಿಸುವ ಆದರೆ ವಿಮರ್ಶಕರಿಂದ ಭಾರೀ ಪ್ರಶಂಸೆ ಗಳಿಸಿದ ಚಿತ್ರಗಳು ಇರುತ್ತಿತ್ತು. ಇವೆಲ್ಲ ಆಗಿನ ಪ್ಯಾರಲಲ್ ಸಿನಿಮಾಗಳು ಅಥವಾ ಪರ್ಯಾಯ/off beat ಸಿನಿಮಾಗಳು. off beat ಸಿನಿಮಾ ನೋಡುವವನು ಬುದ್ಧಿಜೀವಿ ಅಂತ ಅನ್ನಿಸಿಕೊಳ್ಳುತ್ತಿದ್ದ ಮತ್ತು ಅದನ್ನು ನೋಡಿಕೊಂಡು ಬಂದು ಅವುಗಳ ಬಗ್ಗೆ ಉದ್ದುದ್ದ ಬರೆಯುವ ಅನೇಕರು ಇದ್ದರು. ನಾವೂ ಸಹ ಬುದ್ಧಿಜೀವಿ ಆಗಲೇಬೇಕು ಅಂತ ಹಟ ತೊಟ್ಟವರು. ಪುಟ್ಟ ಬಲ್ಗಾನಿನ್ ಗಡ್ಡ ಇತ್ತು. ಹೆಗಲಿಗೆ ಒಂದು ಜೋಳಿಗೆ ಮಾದರಿ ಚೀಲ ಇರುತ್ತಿತ್ತು. ಈ off beat ಅವನ್ನ ನೋಡಿಕೊಂಡು ಬಂದು ಒಂದುವಾರ ಆದರೂ ತಲೆ ಬೇನೆ ಅನುಭವಿಸಿದ್ದು ಉಂಟು. ಅದಕ್ಕೆ ಕನ್ನಡದಲ್ಲಿ ಹೊಸ ಅಲೆ ಚಿತ್ರ ಅಂತ ಪತ್ರಿಕೆ ಅವರು ಹೆಸರು ಕೊಟ್ಟಿದ್ದರು. ಆಗ ಹಾಗೆ ನೋಡಿದ ಒಂದು ಸಿನಿಮಾ ಉಸ್ಕಿ ರೋಟಿ ಅನ್ನುವ ಹೆಸರಿನ ಹೊಸ ಅಲೆ ಸಿನಿಮಾ ಅಂತ ಈಗಲೂ ನನ್ನ ತಲೆಯಲ್ಲಿ ಕೂತಿದೆ! ಇನ್ನೊಂದು ಸಿನಿಮಾದ ಹೆಸರು ನೆನಪಿಲ್ಲ, ಹದಿನೈದು ಸ್ಟಿಲ್ ಫೋಟೋ ಇಟ್ಟುಕೊಂಡು ಸಿನಿಮಾ ತೆಗೆದಿದ್ದರು; ಬೆಂಗಾಲಿ ನಟ ಉತ್ಪಲ್ ದತ್ತನ ಸುಮಾರು ಸಿನಿಮಾ ಹೀಗೆ ನೋಡಿದ್ದು. ಒಂದು ಸೇಡಿನ ಸಿನಿಮಾ ಫ್ರೆಂಚ್ ಭಾಷೆಯ “ಝೀ” ಅನ್ನೋದು ನೋಡಿದ್ದು… ಅದು ಇನ್ನೂ ತಲೆಯಲ್ಲಿದೆ. ಸತ್ಯಜಿತ್ ರೇ ಅವರ ಸುಮಾರು ಸಿನೆಮಾ ಹೀಗೇ ನೋಡಿದ್ದು.

ಇನ್ನು ಮಿಕ್ಕ ಥಿಯೇಟರ್‌ಗಳು ಅಂದರೆ ಜಯಶ್ರೀ ಟಾಕೀಸ್. ಇದರ ಬಗ್ಗೆ ನನ್ನ ಮಿತ್ರ ಶ್ರೀ ಆನಂದ ರಾಮರಾವ್ ನೆನಪು… “ಈಗ ಮರೆಯಾಗಿರುವ ಮತ್ತೊಂದು ಚಿತ್ರಮಂದಿರವೆಂದರೆ ಜಯಶ್ರೀ. ಚಾಮರಾಜಪೇಟೆ ಒಂದನೇ ರಸ್ತೆಯ ಕೊನೆಯಲ್ಲಿ ಇತ್ತು. ಅದು ಕಳ್ಳೇಕಾಯಿ ಟಾಕೀಸ್ ಎಂದೇ ಪ್ರಖ್ಯಾತವಾಗಿತ್ತು. ಸುಮಾರಾಗಿ ಹಳೆಯ ಚಿತ್ರಗಳೇ ಅಲ್ಲಿ ಪ್ರದರ್ಶನವಾಗುತ್ತಿತ್ತು. ಆ ಟಾಕೀಸ್‌ಗೆ ಬರುತ್ತಿದ್ದವರು ಬಹುತೇಕ ಕಾರ್ಮಿಕ ವರ್ಗದವರು. ದೂರದೂರದ ಪ್ರದೇಶದವರು. ಅವರು ಹಾಗೆ ಬರುವಾಗ ಟೈಮ್ ಪಾಸ್‌ಗಾಗಿ ಕಳ್ಳೇಕಾಯಿ ತಂದು ತಿನ್ನುತ್ತಿದ್ದರಂತೆ. ಒಂದೊಂದು ಪ್ರದರ್ಶನವಾದಾಗಲೂ ರಾಶಿ ರಾಶಿ ಸಿಪ್ಪೆ ಬಿದ್ದಿರುತ್ತಿತ್ತಂತೆ. ಹಾಗಾಗಿ ಆ ಟಾಕೀಸ್‌ಗೆ ಕಳ್ಳೇಕಾಯಿ ಟಾಕೀಸ್ ಎಂದು ಹೆಸರಾಯಿತು. ಮೊದಲಿಗೆ ಅದು ಜಯ ಟಾಕೀಸ್ ಎಂದಾಗಿತ್ತು. ನಂತರ ಜಯಶ್ರೀ ಎಂದಾಗಿ ಈಗ ಅದೂ ಮಾಯವಾಗಿ ಒಂದು ಪಾರ್ಟಿ ಹಾಲ್ ಆಗಿದೆ. ಈಗ ಬಹುತೇಕ ಟಾಕೀಸ್‌ಗಳು ಮಾಯವಾಗಿ ಮಲ್ಟಿಪ್ಲೆಕ್ಸ್ ಗಳು ತಲೆ ಎತ್ತಿವೆ. ಏನಾದರೂ ಆ ಹಳೆಯ ಟಾಕೀಸ್‌ನೊಂದಿಗೆ ಇದ್ದ ಆತ್ಮೀಯ ಬಾಂಧವ್ಯ ಈಗ ಬರುವುದಿಲ್ಲ.

ಈ ಜಯಶ್ರೀ ಥಿಯೇಟರ್ ಬಗ್ಗೆ ನನ್ನ ಮತ್ತೊಬ್ಬ ಗೆಳೆಯ ಶ್ರೀ ಪಾಲಹಳ್ಳಿ ವಿಶ್ವನಾಥ್ ಈ ಟಿಪ್ಪಣಿ ಮಾಡಿದ್ದಾರೆ. ಆಗ ಸುಮಾರು ಎಲ್ಲಾ ಥಿಯೇಟರ್‌ಗಳಲ್ಲೂ ಕಡ್ಲೆಕಾಯಿ ಸಿಪ್ಪೆ ಬಿದ್ದಿರುತ್ತಿತ್ತು, ಇಲ್ಲಿ ಸ್ವಲ್ಪ ಹೆಚ್ಚು! ಕಡ್ಲೆಕಾಯಿ ಸಿಪ್ಪೆ ಅಂದರೆ ನನಗೆ ನೆನಪಾಗೋದು ಮತ್ತೊಂದು ಸಂಗತಿ… ಕಡ್ಲೆಕಾಯಿ, ಬೆಂ ಬ ನಿ ಈಗ ಇರುವ ಬೆಂಗಳೂರಿನ ಬಸ್ ಸ್ಟ್ಯಾಂಡ್ ಶುರುವಾದ ಹೊಸತರಲ್ಲಿ ಅಲ್ಲಿ ಕಡ್ಲೆಕಾಯಿ ಮಾರುವ ಸುಮಾರು ಜನ ಇದ್ದರು. ಒಂದು ಮಡಕೆಯಲ್ಲಿ ಕೆಂಡ ಇಟ್ಟು ಅದನ್ನು ಕಡ್ಲೆಕಾಯಿ ಮಂಕರಿ ಮೇಲೆ ಇರಿಸಿ ಗರ್ಮಾ ಗರಂ ಕಲ್ಲೇಕಾಯಿ ಎಂದು ಕೂಗಿ ಮಾರುತ್ತಿದ್ದರು. ಬಸ್ಸಿಗೆ ಕಾಯುವವರು, ಬಸ್ಸಿನಲ್ಲಿ ಕೂತಿರುವವರು.. ಹೀಗೆ ಎಲ್ಲರೂ ಕಡ್ಲೆಕಾಯಿ ಕೊಳ್ಳುತ್ತಿದ್ದರು. ಕಡ್ಲೆಕಾಯಿ ತಿಂದು ಸಿಪ್ಪೆ ರಾಶಿ ಹಾಕುತ್ತಿದ್ದರು. ರಾತ್ರಿ ಕೊನೆ ಬಸ್ಸಿನಲ್ಲಿ ಪ್ರಯಾಣಿಸುವ ಜಂಟಲ್ ಮೆನ್‌ಳಿಗೆ ಇದು ಒಂದು ದೊಡ್ಡ ಹಿಂಸೆ ಅನಿಸೋದೂ. ಪಕ್ಕದಲ್ಲಿ ಕೂತ, ನಿಂತ ಎಲ್ಲರ ಉಸಿರೂ ಕಡ್ಲೆ ಬೀಜದ ವಾಸನೆ ಗಬ್ಬೆಂದು ಹರಿಸುತ್ತಿತ್ತು. ಒಂದು ರೀತಿ ವಾಕರಿಕೆ ಇವರಿಗೆ. ಮೊದಮೊದಲು ನನಗೂ ಇದೇ ಅನುಭವ. ಅದಕ್ಕೆ ಒಂದು ಪರಿಹಾರ ಕಂಡು ಹಿಡಿದಿದ್ದೆ. ಬಸ್ಸು ಹತ್ತುವ ಮೊದಲು ನಾನೂ ಒಂದು ಅರ್ಧ ಸೇರಿನಷ್ಟು ಕಡ್ಲೆಕಾಯಿ ಕೊಂಡು ಸ್ವಲ್ಪ ತಿಂದು ಮಿಕ್ಕಿದ್ದು ಬಸ್ಸಿನಲ್ಲಿ ತಿನ್ನೋದು! ಆಗ ಪಾವು ಸೇರಿನ ಲೆಕ್ಕದಲ್ಲಿ ಕಡ್ಲೆ ಕಾಯಿ ಮಾರಾಟ.

ಕಡ್ಲೆಕಾಯಿ ಸಿಪ್ಪೆ ರಾಶಿರಾಶಿ ಬಿದ್ದರೆ ಬಸ್ಸು ಗುಡಿಸುವುದು ಒಂದು ಕೆಲಸ ಆದರೆ ನಿಲ್ದಾಣ ಗುಡಿಸುವುದು ಮತ್ತೊಂದು ದೊಡ್ಡ ಕೆಲಸ ಆಯಿತು ನಿಲ್ದಾಣ ಮೇಲುಸ್ತುವಾರಿ ಜನಕ್ಕೆ. ಅದಕ್ಕೆ ಒಂದು ಸುಲಭ ಉಪಾಯ ಹುಡುಕಿದರು. ಎರಡು ಪೊಲೀಸಪ್ಪರನ್ನು ನಿಲ್ಲಿಸಿ ಕಡ್ಲೆಕಾಯಿ ಮಾರಾಟ ನಿಲ್ಲಿಸಿದರು. ನಂತರ ಕೆಲವರು ಅಲ್ಲಿ ಹುರಿದ ಕಡಲೆ ಬೀಜವನ್ನು, ಕಾಂಗ್ರೆಸ್ ಕಡಲೆ ಇವು ತಂದು ಮಾರುತ್ತಿದ್ದರು. ಅದನ್ನೂ ಸಹ ನಿಲ್ಲಿಸಲಾಯಿತು. ಅಂಗಡಿಗಳು ಅಲ್ಲಿ ಶುರುವಾದ ನಂತರ ಬೇರೆ ಬೇರೆ ತಿನಿಸುಗಳು ಬಿಸ್ಕತ್ತು, ಚಿಪ್ಸ್, ಪಾಪ್ ಕಾರ್ನ್ ಮೊದಲಾದವು ಸೇರಿದವು. ಪರ್ಮನೆಂಟ್ ಆಗಿ ಕಡ್ಲೆಕಾಯಿ ಗಡಿಪಾರು ಆಯಿತು. ಒಂದು ನಮ್ಮ ದೇಸಿ ಪೌಷ್ಟಿಕ ಸಸ್ಯ ಆಹಾರ ಹೀಗೆ ತನ್ನ ಅವಸಾನ ಕಂಡುಕೊಂಡಿತು. ನಮ್ಮ ಸ್ನೇಹಿತೆ ಶ್ರೀಮತಿ ಸುಶೀಲಾ ಅವರು ಸಿಪ್ಪೆ ಬದಲು ಪ್ಲಾಸ್ಟಿಕ್ ಬಂದು ಅಮರಿಕೊಂಡವು ಅಂತ ಟಿಪ್ಪಣಿ ಸೇರಿಸಿದ್ದಾರೆ!

ಮಾರ್ಕೆಟ್ ಬಳಿ ನಿಮಗೆ ಅಪ್ಸರಾ, ಪಾರಾಮೌಂಟ್ ಚಿತ್ರಮಂದಿರ. ಪಾರಾಮೌಂಟ್ ವಿಶೇಷ ಅಂದರೆ ಇದು ಕಂಟ್ರಮೆಂಟ್‌ನ ಪ್ಲಾಜಾ ಥಿಯೇಟರ್ ಹೋಲಿಕೆ ಇತ್ತು. ಕನ್ನಡದ ಮೊದಲ ವಾಕ್‌ಚಿತ್ರ ಸತಿ ಸುಲೋಚನ ತೆರೆ ಕಂಡಿದ್ದು ಅಲ್ಲಿ. ಅಲ್ಲದೆ ನರಸಿಂಹ ರಾಜಾ ರಸ್ತೆಯಲ್ಲಿ ಸಿಟಿ ಟಾಕೀಸ್. ನಾಜ್ ಚಿತ್ರಮಂದಿರಗಳಿದ್ದವು. ನರಸಿಂಹರಾಜ ರಸ್ತೆ ಹಿಂಭಾಗದಲ್ಲಿ ಶಾರದಾ ಇತ್ತು. ಟೌನ್ ಹಾಲ್ ಎದುರು ಶಿವಾಜಿ ಇತ್ತು. ಮುಂದೆ ಕನ್ನಡ ಚಿತ್ರಗಳಿಗೆ ಮೀಸಲಾಗಿದ್ದ ಭಾರತ್ ಇತ್ತು‌ ಅಲ್ಲಿಂದ ಮುಂದೆ ಮಿನರ್ವ ಚಿತ್ರಮಂದಿರವಿತ್ತು. ಜಯನಗರದ ಶಾಂತಿ ನಂದಾ ಟಾಕೀಸ್‌ಗಳೂ ಇತ್ತು ಇವೆಲ್ಲವೂ ಈಗ ಕಣ್ಮರೆಯಾಗಿದೆ. ಮಿನರ್ವ ಸರ್ಕಲ್‌ನಲ್ಲಿ ಮಿನರ್ವ ಟಾಕೀಸು, ಭಾರತ ಟಾಕೀಸು ಇದ್ದವು. ಭಾರತ್ ಅಂತೂ ಬರೀ ಕನ್ನಡ ಚಿತ್ರಗಳಿಗೆ ಮಾತ್ರ ಮಿಸಲಿದ್ದ ಚಿತ್ರಮಂದಿರ. ಲಾಲ್ಬಾಗ್ ರಸ್ತೆಯಲ್ಲಿ ಊರ್ವಶಿ, ಸಿನಿಮಾ ಥಿಯೇಟರ್ ಅಂದರೆ ಅದು ಹದಿ ಹರೆಯದವರ ಹೃದಯದ ಹಾಡು ಬಿತ್ತರಗೊಳ್ಳುವ ಸಮಯ. ಸುಮಾರು ಯುವಕ ಯುವತಿಯರು ತಮ್ಮ ಪ್ರೀತಿ ಗಟ್ಟಿಗಳಿಸಿಕೊಂಡ ಜಾಗ ಇದು. ಇದರ ಬಗ್ಗೆ ಮತ್ತೆ ಯಾವಾಗಲಾದರೂ…

(ಮುಂದುವರೆಯುವುದು…)