ಚುಕ್ಕಿ
ಅಂಗಳದ ತುಂಬ ತುಂಬಿಟ್ಟ
ಚುಕ್ಕಿ

ಅರಿವೇ ಇಲ್ಲದೆ
ಕೈ ಓಡುತ್ತದೆ
ಮನಸ್ಸು ಎಣಿಸುತ್ತದೆ
ಬೆರಳುಗಳೆರಡು
ಸ್ಪರ್ಶಿಸುತ್ತ ಘರ್ಷಿಸುತ್ತ
ಸ್ಪರ್ಧಿಸುತ್ತವೆ
ಚಮತ್ಕಾರಿ ಕೆಲಸಕ್ಕೆ
ಚುಕ್ಕಿಗೆ ಚುಕ್ಕಿ ಸೇರಿ
ಗೆರೆಗಳು ಮೂಡಿದವು
ಬಳ್ಳಿ ಹೂ ಎಲೆ
ಚಿತ್ತಾರ ಕಲೆ
ಬೆರಳು ನೆಲಕ್ಕೆ
ಜೀವ
ತುಂಬುತ್ತ ಸಾಗಿದವು

ಹೆಜ್ಜೆ ಇಟ್ಟಂತೆಲ್ಲ
ದಾರಿ ಸ್ಪಷ್ಟವಾದಂತೆ
ಪ್ರತಿ ಚುಕ್ಕೆಯು
ತಾನು ಯಾವ ಹೂವಾಗಬೇಕೆಂದು
ಮೊದಲೇ ಅರಿತು
ಅರಳಿದಂತೆ

ಅಂಗಳ ಘಮಗುಡುತ್ತದೆ
ಗಂಧ ಹರಡುತ್ತದೆ
ಗಾಳಿ ನಗುತ್ತದೆ

ದೀಪಾ ಗೋನಾಳ ಪೋಸ್ಟ್‌ ಆಫೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ
ಓದು, ತಿರುಗಾಟ, ಇಷ್ಟ.
ಕವಿತೆ ಅಂದ್ರೆ ಹುಚ್ಚು, ಕತೆ ಅಂದ್ರೆ ಪ್ರಾಣ
“ತಂತಿ ತಂತಿಗೆ ತಾಗಿ” ಪ್ರಕಟಿತ ಕವನ ಸಂಕಲನ