ಬೇಕುಬೇಕಾದ್ದನ್ನೆಲ್ಲಾ ಕೊಳ್ಳುವುದಕ್ಕಿಂತ, ಕೂಡಿಡುವುದಕ್ಕಿಂತ, ನಮ್ಮಲ್ಲಿರುವುದನ್ನು ಇತರರೊಂದಿಗೆ ಹಂಚಿಕೊಳ್ಳುವುದು; ಕೌಟುಂಬಿಕ ಜೀವನದ ಮಹತ್ವ, ಇತರರನ್ನು ಕ್ಷಮಿಸುವಂತೆಯೇ ನಮ್ಮನ್ನೇ ನಾವು ಕ್ಷಮಿಸಿಕೊಳ್ಳುವುದರ ಮಹತ್ವವನ್ನು ಮನಗಾಣಿಸಿದರು, ಗುರುಗಳು. ಸಮಾಜದಲ್ಲಿ ನಮ್ಮಲ್ಲಿರುವ ಭಿನ್ನತೆಗಳನ್ನು ಅನಗತ್ಯವಾಗಿ ಉತ್ಪ್ರೇಕ್ಷಿಸಿ ಶ್ರೀಮಂತ ಬಡವ ಸ್ತ್ರೀ ಪುರುಷ ಹಿಂದೂ ಕ್ರಿಶ್ಚಿಯನ್ ಮುಸ್ಲಿಂ ಬ್ರಾಹ್ಮಣ ದಲಿತ ಎಂದೆಲ್ಲಾ ಅಡ್ಡ ಗೋಡೆಗಳನ್ನು ಕಟ್ಟಿಕೊಳ್ಳುವುದಕ್ಕಿಂತ ಭಿನ್ನತೆ ಪ್ರಭೇದತೆಗಳು ಸಮಾಜದ ಲಕ್ಷಣ ಎಂದರಿತು ನಮ್ಮಲ್ಲಿರುವ ಸಾಮ್ಯತೆಗಳನ್ನು ಗುರುತಿಸುತ್ತಾ ಇಡೀ ಜಗತ್ತೇ ನಮ್ಮ ಕುಟುಂಬ ಎಂಬ ಪ್ರೀತಿ ಬೆಳೆಸಿಕೊಳ್ಳಬೇಕಾದ ಮಹತ್ವವನ್ನು ಮನಗಾಣಿಸುತ್ತಾರೆ.
ದೀಪ್ತಿ ಎಸ್. ರಾವ್ ಬರೆದ “ಸಾವಿನಂಚಿನ ಸಂವಾದ” ಕಾದಂಬರಿಯ ಕುರಿತು ಕೆ.ಆರ್.ಉಮಾದೇವಿ ಉರಾಳ ಬರಹ
ದೀಪ್ತಿ ಎಸ್. ರಾವ್ ಬರೆದ ನೀಳ್ಗತೆಯ ರೂಪದ 104 ಪುಟಗಳ ಜೈ ಭಾರತ್ ಪ್ರಕಾಶನದ ಕಾದಂಬರಿ, “ಸಾವಿನಂಚಿನ ಸಂವಾದ, ಸಾರ್ಥಕ ಬದುಕಿನ ಸೋಪಾನ” ಇತ್ತೀಚೆಗೆ ಪ್ರಕಟವಾಗಿದೆ. ದೀಪ್ತಿಯವರು ಸುರತ್ಕಲ್‌ನ ಎನ್.ಐ.ಟಿ.ಕೆ.ಯಲ್ಲಿ ಎಂಟೆಕ್ ಪದವಿ ಪಡೆದು ಅಮೆರಿಕಾದ ಸಿಯಾಟಲ್‌ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವವರು. ಮೈಸೂರಿನ ಜೆ.ಸಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವಾಗಲೇ ತಮ್ಮ ಇನ್ನೋರ್ವ ಇಂಜಿನಿಯರಿಂಗ್ ಓದುತ್ತಿರುವ ಸೋದರಿ ಸ್ವಾತಿಯವರೊಂದಿಗೆ ಸೇರಿ “ವಿಜ್ಞಾನ ವಿಸ್ಮಯ” ಎಂಬ ಪುಸ್ತಕ ಪ್ರಕಟಿಸಿದ್ದರು. ಈ ಸಚಿತ್ರ ಪುಸ್ತಕವು ವಿಜ್ಞಾನದ ಕೌತುಕಮಯ ವಿದ್ಯಮಾನಗಳ ಕುರಿತು ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಉಪಯುಕ್ತವಾಗುವಂತಹ, ಪುಸ್ತಕದ ಓದು ವೈಜ್ಞಾನಿಕ ಮನೋಭಾವ ಬೆಳೆಸುವಂತಹ ವೈಶಿಷ್ಟ್ಯತೆ ಹೊಂದಿದ್ದು, ಇದು ಮರುಮುದ್ರಣ ಭಾಗ್ಯ ಕಂಡಿದೆ. ಈಗ ದೀಪ್ತಿ ಸ್ವತಃ ಈ ಕಿರು ಕಾದಂಬರಿ ರಚಿಸಿದ್ದಾರೆ.
ಮಿಚ್ ಆಲ್ಬೋಬ್ ಬರೆದ “ಟ್ಯೂಸ್ಡೇಸ್ ವಿತ್ ಮೋರಿ” ಎಂಬ ಪುಸ್ತಕದ ಓದು ಲೇಖಕಿಯನ್ನು ಈ ಪುಸ್ತಕದ ರಚನೆಗೆ ಪ್ರೇರೇಪಿಸಿದೆ. ಹಾಗೆಂದು ಇದು ಅನುವಾದವಲ್ಲ. ಮೂಲ ಕೃತಿಯ ಸಂದೇಶವನ್ನು ಪ್ರಾದೇಶಿಕ ಸೊಗಡಿನೊಂದಿಗೆ ಕನ್ನಡದ ಪರಿಸರದಲ್ಲಿ ಅಭಿವ್ಯಕ್ತಿಸಿದ ಭಾವಾನುವಾದದ ಕೃತಿ ಇದು. ಆದರೆ ಲೇಖಕಿಯ ಭಾಷಾ ಪ್ರೌಢಿಮೆ, ಹಿಡಿತ, ಸುಲಲಿತ ಅಭಿವ್ಯಕ್ತಿ, ಮನೋಜ್ಞ ನಿರೂಪಣಾ ಶೈಲಿ ಓದುಗರಿಗೆ ಅನಾಯಾಸವಾದ ಓದನ್ನು ಒದಗಿಸುತ್ತದೆ. ಈಗಾಗಲೇ ಈ ಕೃತಿಯ ಭಾಗವೊಂದನ್ನು ಮಂಗಳೂರು ವಿಶ್ವ ವಿದ್ಯಾಲಯದ ಎರಡನೇ ಸೆಮಿಸ್ಟರ್ ಬಿ ಸಿ ಎ ತರಗತಿಯ ಕನ್ನಡ ಪಠ್ಯಕ್ಕೆ “ಗಣಕ ಮಂಗಳ-2” ಆಯ್ಕೆ ಮಾಡಿಕೊಂಡಿದೆ. ದೀಪ್ತಿಯವರು ತಮ್ಮ ಸುಶ್ರಾವ್ಯ ಕಂಠಸಿರಿಯಿಂದ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಹಲವು ಭಾವಗೀತೆಗಳನ್ನು ಹಾಡಿರುವವರು. ಅವರು ಗಾಯಕಿ ಮಾತ್ರವಲ್ಲದೆ ಪ್ರತಿಭಾವಂತ ಲೇಖಕಿಯೂ ಎಂಬುದನ್ನು ಈ ಕೃತಿ ಸ್ಪಷ್ಟಪಡಿಸಿದೆ.
ಕಾದಂಬರಿಯ ಕೇಂದ್ರಬಿಂದು ಶಿಷ್ಯವತ್ಸಲಿ ಪ್ರೊ.ರಾಮಕೃಷ್ಣ ಶಾಸ್ತ್ರಿ ವಿದ್ಯಾರ್ಥಿಗಳ ಕಣ್ಮಣಿ. ತರಗತಿ ಕೋಣೆಯಲ್ಲಿ ತಾವು ಬೋಧಿಸುವ ವಿಷಯಕ್ಕಿಂತ ಮಿಗಿಲಾಗಿ ವಿದ್ಯಾರ್ಥಿಗಳೊಂದಿಗೆ ಹೃದಯಸಂವಾದ ಮಾಡುತ್ತಾ ಜೀವನ ಪಾಠ ಕಲಿಸಬಲ್ಲಂತಹ ಗುರುಗಳವರು. ಯಕ್ಷಗಾನ ಕಲೆಯ ಮೋಹಿ. ಬದುಕಿನ ರಂಗಭೂಮಿಯಲ್ಲಿ ಸಕ್ರಿಯ ಪಾತ್ರಧಾರಿಗಳಾಗಿದ್ದ ಶಾಸ್ತ್ರಿಗಳು ತೀಕ್ಷ್ಣವಾದ ಎ ಎಲ್ ಎಸ್ (ಪಾರ್ಶ್ವ ಗಡಸುಗಟ್ಟುವಿಕೆ) ಕಾಯಿಲೆಗೆ ತುತ್ತಾಗುತ್ತಾರೆ. ಕಾಯಿಲೆ ಶಾಸ್ತ್ರಿಗಳನ್ನು ಸಾವಿನಂಚಿನ ಹೊಸಿಲ ಬಳಿ ತಂದು ನಿಲ್ಲಿಸಿತ್ತು. ಹೊಸಿಲು ದಾಟಿ ಸಾವಿನಾಚಿನ ಲೋಕ ಪ್ರವೇಶಿಸುವುದಷ್ಟೇ ಬಾಕಿ ಇತ್ತು. ತಮ್ಮ ಸುದಿನಗಳು ಮುಗಿದು ದುರ್ದಿನಗಳು ಪ್ರಾರಂಭವಾಗಿವೆ ಎಂಬ ಅರಿವಿನಲ್ಲೂ ಇದುವರೆಗೆ ತಾವು ಹಾದುಬಂದ ಹಾದಿಯ ಸಿಂಹಾವಲೋಕನವನ್ನು ಅತ್ಯಂತ ಸಕಾರಾತ್ಮಕ ದೃಷ್ಟಿಕೋನದಿಂದ ಮಾಡುತ್ತಾರೆ. ಸಾವು ಕೈಗೆಟುಕುವ ಅಂತರದಲ್ಲಿರುವಾಗಲೂ ಆತ್ಮವಿಶ್ವಾಸ ಕಳೆದುಕೊಳ್ಳದೆ, ಬದುಕಿನ ಸಾರ್ಥಕತೆಯ ಕುರಿತ ಚಿಂತನಾ ಲಹರಿಗಳನ್ನು ಉದ್ದೀಪಿಸಿಕೊಳ್ಳುತ್ತಾ ಅವನ್ನೆಲ್ಲ ತಮ್ಮ ಪರಮಪ್ರಿಯ ಶಿಷ್ಯೆ ಆರೋಹಿಗೆ ಅಭಿವ್ಯಕ್ತಿಸುತ್ತಾ ಅವಳಿಗೆ ಜೀವನ ಪಾಠ ಬೋಧಿಸುವ ಗುರುಗಳಾಗುತ್ತಾರೆ. ಆ ಮೂಲಕ ಓದುಗರಿಗೂ ಸಾವೆಂಬುದು ಸಾವಲ್ಲ, ಅದು ಜೀವನ ಸಾಫಲ್ಯದ ಸಾರ್ಥಕತೆಯ ಮಾನದಂಡ ಎಂಬುದನ್ನು ಮನಗಾಣಿಸುತ್ತಾರೆ.
ಶಾಸ್ತ್ರಿಗಳ ಮಾನಸ ಪುತ್ರಿ ಪ್ರಿಯ ಶಿಷ್ಯೆ ಪ್ರತಿಭಾವಂತೆ ಆರೋಹಿ ಜಗತ್ತಿನ ದೃಷ್ಟಿಯಲ್ಲಿ ತಾನೋರ್ವ ಸಾಧಕಿಯಾಗಬೇಕೆಂದು ಹೊರಟಿದ್ದವಳು. ಇದಕ್ಕಾಗಿ ಆಕೆ ತನ್ನ ಸಂಗೀತ ಪ್ರತಿಭೆಯನ್ನು ನೆಚ್ಚಿದಾಗ ಅವಳಿಗೆ ಹಲವು ವಿಧಗಳಲ್ಲಿ ಭ್ರಮನಿರಸನವಾಗುತ್ತದೆ. ಮುಂದೆ ‘ಕ್ಷಣಕ್ಷಣವೂ ತನಗೆ ಮಹತ್ವವಾದುದು’ ಎಂದು ಭಾವಿಸುತ್ತಾ ಸಮಯದ ಗಡುವಿರಿಸಿಕೊಂಡು ವೇಗವಾಗಿ ಕೆಲಸ ಮಾಡುವ ಧಾವಂತದ ಬದುಕಿನ ಬೆನ್ನು ಹತ್ತಿ ಎಣಿಸಲೂ ಸಮಯವಿಲ್ಲದಂತೆ ಹಣ ಗಳಿಸುತ್ತಾಳೆ. ಒಂದು ದಿನ ಟಿ.ವಿ.ಯ ಚಾನೆಲ್ ಬದಲಿಸುತ್ತಿರುವಾಗ ಅಚಾನಕವಾಗಿ ತನ್ನ ವಿದ್ಯಾರ್ಥಿ ಜೀವನದ ಮಹಾನ್ ಗುರು ಶಾಸ್ತ್ರಿಯವರ ಸಂದರ್ಶನ ನೋಡಿದ ಆರೋಹಿ ಮತ್ತೆ ತಡ ಮಾಡಲಿಲ್ಲ. ಇದುವರೆಗಿನ ತನ್ನ ಕೀರ್ತಿ ಹಣ ಪ್ರತಿಷ್ಠೆಯ ಬೆನ್ನು ಹತ್ತಿದ ಬದುಕಲ್ಲಿ ಗುರುವನ್ನು ಮರೆತುದಕ್ಕಾಗಿ ಪರಿತಪಿಸುತ್ತಾಳೆ. ತಕ್ಷಣವೇ ಅವರ ಭೇಟಿಗೆ ಧಾವಿಸುತ್ತಾಳೆ. ಮುಂದೆ ಗುರುಗಳಿಂದ ಜೀವನ ಪಾಠ ಕಲಿಯುವ ವಿನೀತ ಶಿಷ್ಯೆಯಾಗುತ್ತಾಳೆ. ಗುರುಗಳು ತಾವು ಸಾವು ಬದುಕಿನ ನಡುವೆ ಇರುವ ಸೇತುವೆಯಾಗಿರುವುದರಿಂದ ಬಂಧು ಮಿತ್ರರು ಶಿಷ್ಯರು ಪ್ರೀತಿಪಾತ್ರರಿಂದ ತಾನು ಆವೃತನಾಗಿ ಸಂತೋಷದಿಂದ ಕಾಲ ಕಳೆಯುತ್ತಿದ್ದೇನೆ ಎನ್ನುತ್ತಾರೆ. ಈ ಗುರು ಶಿಷ್ಯೆಯರ ಭೇಟಿ ಮುಂದೆ ಪ್ರತಿ ಬುಧವಾರವೂ ಏರ್ಪಡುತ್ತದೆ.
ಜನರಿಗೆ ಸ್ವಯಂ ಪ್ರೀತಿಯನ್ನು ಕಲಿಸದ, ಎಷ್ಟೋ ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವ ಹಲವಾರು ಆಚರಣೆ ನೀತಿ ನಿಯಮಗಳನ್ನು ಅವು ಇಂದಿನ ಕಾಲಕ್ಕೆ ಅನ್ವಯವಾಗದಲ್ಲಿ ಧೈರ್ಯವಾಗಿ ವಿರೋಧಿಸಬೇಕೆಂದೂ, ಹೊಸ ಆಚರಣೆಗಳನ್ನು ಸೃಷ್ಟಿಸಿ ಅವುಗಳ ಬಗ್ಗೆ ತಿಳಿ ಹೇಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕೆಂದೂ ಆಗಲೇ ಸಂತೋಷವನ್ನು ಪಡೆಯಲು ಸಾಧ್ಯವೆಂದೂ ತಿಳಿ ಹೇಳುತ್ತಾರೆ, ಗುರುಗಳು. ಮಾರಣಾಂತಿಕ ರೋಗದಿಂದಾಗಿ ಗಾಲಿ ಕುರ್ಚಿಗೆ, ಮನೆಯ ಚಿಕ್ಕ ಕೊಠಡಿಗೆ ಸೀಮಿತವಾದ ಬದುಕಿನಲ್ಲಿ ಸ್ವತಃ ತಾವೇ ಬಳಲುತ್ತಿರುವಾಗಲೂ ಜಗದಗಲದ ಜನರ ಕಷ್ಟಗಳಿಗೆ ಗುರುಗಳ ಹೃದಯ ಮೊದಲಿಗಿಂತ ಜಾಸ್ತಿ ಮಿಡಿಯುತ್ತಿರುವ ಸ್ಪಂದನ ಆರೋಹಿಯನ್ನು ವಿಸ್ಮಿತಗೊಳಿಸುತ್ತದೆ. ಜೀವನದ ಅತಿ ಮುಖ್ಯ ಸಂದೇಶ ಪ್ರೀತಿ, ಇದನ್ನು ಇತರರಿಗೆ ನೀಡುವುದನ್ನು ಕಲಿಯಬೇಕು, ನಮ್ಮಲ್ಲಿನ ಪ್ರೀತಿಯ ಸೆಲೆಯನ್ನು ಸಂಪೋಷಿಸಿ ಬೆಳೆಸಿಕೊಳ್ಳಬೇಕು, ಆಗ ಮಾತ್ರ ಅದು ನಮ್ಮಿಂದ ಇತರರೆಡೆಗೆ ಹರಿಯುತ್ತದೆ ಎಂಬುದನ್ನು ಶಿಷ್ಯೆಗೆ ಮನದಟ್ಟಾಗಿಸುತ್ತಾರೆ, ಶಾಸ್ತ್ರಿಗಳು.
ಬೇಕುಬೇಕಾದ್ದನ್ನೆಲ್ಲಾ ಕೊಳ್ಳುವುದಕ್ಕಿಂತ, ಕೂಡಿಡುವುದಕ್ಕಿಂತ, ನಮ್ಮಲ್ಲಿರುವುದನ್ನು ಇತರರೊಂದಿಗೆ ಹಂಚಿಕೊಳ್ಳುವುದು; ಕೌಟುಂಬಿಕ ಜೀವನದ ಮಹತ್ವ, ಇತರರನ್ನು ಕ್ಷಮಿಸುವಂತೆಯೇ ನಮ್ಮನ್ನೇ ನಾವು ಕ್ಷಮಿಸಿಕೊಳ್ಳುವುದರ ಮಹತ್ವವನ್ನು ಮನಗಾಣಿಸಿದರು, ಗುರುಗಳು. ಸಮಾಜದಲ್ಲಿ ನಮ್ಮಲ್ಲಿರುವ ಭಿನ್ನತೆಗಳನ್ನು ಅನಗತ್ಯವಾಗಿ ಉತ್ಪ್ರೇಕ್ಷಿಸಿ ಶ್ರೀಮಂತ ಬಡವ ಸ್ತ್ರೀ ಪುರುಷ ಹಿಂದೂ ಕ್ರಿಶ್ಚಿಯನ್ ಮುಸ್ಲಿಂ ಬ್ರಾಹ್ಮಣ ದಲಿತ ಎಂದೆಲ್ಲಾ ಅಡ್ಡ ಗೋಡೆಗಳನ್ನು ಕಟ್ಟಿಕೊಳ್ಳುವುದಕ್ಕಿಂತ ಭಿನ್ನತೆ ಪ್ರಭೇದತೆಗಳು ಸಮಾಜದ ಲಕ್ಷಣ ಎಂದರಿತು ನಮ್ಮಲ್ಲಿರುವ ಸಾಮ್ಯತೆಗಳನ್ನು ಗುರುತಿಸುತ್ತಾ ಇಡೀ ಜಗತ್ತೇ ನಮ್ಮ ಕುಟುಂಬ ಎಂಬ ಪ್ರೀತಿ ಬೆಳೆಸಿಕೊಳ್ಳಬೇಕಾದ ಮಹತ್ವವನ್ನು ಮನಗಾಣಿಸುತ್ತಾರೆ.
ಹೀಗೆ ಸಾವಿನಂಚಿನಲ್ಲಿ ಬದುಕಿನ ಕುರಿತ ಸಕಾರಾತ್ಮಕ ದೃಷ್ಟಿಕೋನದ ಜಿಜ್ಞಾಸೆ ಸಂವಾದ ಕಾದಂಬರಿಯಾದ್ಯಂತ ಹರವಿಕೊಂಡಿದೆ. ಬದುಕನ್ನು ಗಂಭೀರವಾಗಿ ಪರಿಗಣಿಸುವವರಿಗೆ ಈ ಕೃತಿಯ ತಾತ್ವಿಕ ಜಿಜ್ಞಾಸೆ ಮನಮುಟ್ಟುತ್ತದೆ. ಗುರುವಿನ ಪದತಲದಲ್ಲಿ ಕುಳಿತು ಜೀವನಪಾಠ ಕಲಿವ ಶಿಷ್ಯೆಯ ಚಿತ್ರಣವು ಬದುಕಿನಲ್ಲಿ ಅರಿವಿನ ಕಣ್ಣು ತೆರೆಯಿಸುವ ಗುರುವಿನ ಅಗತ್ಯವನ್ನು ಮನಗಾಣಿಸಿದೆ. ತನ್ನ ಶಿಷ್ಯೆಯು ತುಂಬಾ ಹೃದಯವಂತ ಆತ್ಮವುಳ್ಳವಳೆಂದು ಪರಿಗಣಿಸುವ ಗುರುವು ತನ್ನ ಕಾಲಾನಂತರ ತಾನು ಆಕೆಗೆ ಕಾಣಿಸಲಾರೆನಾದರೂ, ಆಕೆ ತನ್ನೊಂದಿಗೆ ಆಡುವ ಮಾತುಗಳನ್ನು ತಾನು ಕೇಳಿಸಿಕೊಳ್ಳುವೆನೆನ್ನುತ್ತಾ ಮರಣಾನಂತರವೂ ಶಿಷ್ಯೆಗೆ ಮಾರ್ಗದರ್ಶನ ನೀಡುವ ಆಶ್ವಾಸನೆ ನೀಡುತ್ತಾರೆ.
“ದ ಲಾಸ್ಟ್ ಲೆಕ್ಚರ್” ಎಂಬ ರ್ಯಾಂಡಿ ಪಾಶ್ ಕೃತಿಯಲ್ಲಿ (ಕನ್ನಡಾನುವಾದ-ಎಸ್.ಉಮೇಶ್) ಕ್ಯಾನ್ಸರಿಗೆ ಬಲಿಯಾದ ರ್ಯಾಂಡಿ ನಲ್ವತ್ತೇಳನೇ ವಯಸ್ಸಿಗೇ ಬದುಕಿಗೆ ವಿದಾಯ ಹೇಳಬೇಕಾದಾಗ ತನ್ನ ಪತ್ನಿಯಲ್ಲಿ ಬದುಕುವ ಛಲವನ್ನು ಧಾರೆಯೆರೆಯುತ್ತಾನೆ. ಈತ ಕೂಡ ತನ್ನ ನೋವು ನುಂಗಿ ನಗು ನಕ್ಕು ತನ್ನ ವಿದ್ಯಾರ್ಥಿಗಳಿಗೆ ನೆಚ್ಚಿನ ಗುರುವಾಗುತ್ತಾನೆ. ಅಪಾರ ಜನಪ್ರಿಯತೆ ಗಳಿಸಿದ್ದ ಈ ಕೃತಿ “ಸಾವಿನಂಚಿನ ಸಂವಾದ” ಓದಿದಾಗ ನೆನಪಾಗುತ್ತದೆ.
ಲೇಖಕಿ ದೀಪ್ತಿ ಮತ್ತು ಇನ್ನೀರ್ವರು ಅವರ ಹಿರಿಯ ಸೋದರಿಯರು ಮಂಗಳೂರಿನಲ್ಲೇ ಪಿಯುವರೆಗೆ ಓದಿದವರಾದರೂ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಪಡೆದರು. ಇವರ ಹಿರಿಯ ಸೋದರಿ ಯುಕೆಯಲ್ಲಿ ವೈದ್ಯರಾಗಿದ್ದಾರೆ. ಇವರಿಗೆಲ್ಲಾ ಮಾತೃಭಾಷಾ ಅಭಿವ್ಯಕ್ತಿ ಪುಸ್ತಕ ರಚನೆಯ ಪ್ರೌಢಿಮೆ ಒಲಿಯುವಷ್ಟು ಸುಲಲಿತವಾಗಿರುವುದಲ್ಲದೆ, ಅವರ ವಿಜ್ಞಾನದ ಓದಿನಲ್ಲೂ ಸಾಧನೆಯ ಫಲಿತಾಂಶವನ್ನೇ ಪಡೆದಿರುವವರು. ಇಂತಹ ಉದಾಹರಣೆಗಳನ್ನು ಆಂಗ್ಲ ಭಾಷಾ ಮಾಧ್ಯಮ ವ್ಯಾಮೋಹಿಗಳು ಗಮನಿಸಬೇಕಾದ ತೀವ್ರ ಅಗತ್ಯ ಇಂದಿನದು.
(ಕೃತಿ: ಸಾವಿನಂಚಿನ ಸಂವಾದ (ಕಾದಂಬರಿ), ಲೇಖಕರು: ದೀಪ್ತಿ ಎಸ್. ರಾವ್, ಪ್ರಕಾಶಕರು: ಜೈ ಭಾರತ್ ಪ್ರಕಾಶನ, ಪುಟಗಳು: 104)
ಉಮಾದೇವಿ ನಿವೃತ್ತ ಉಪನ್ಯಾಸಕಿ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. “ಮುಂಬೆಳಕಿನ ಮಿಂಚು”, “ಮಕ್ಕಳಿಗಿದು ಕಥಾ ಸಮಯ”, “ಮುಳ್ಳುಬೇಲಿಯ ಹೂಬಳ್ಳಿ”, ಬಾನಾಡಿ ಕಂಡ ಬೆಡಗು, “ಗ್ರಾಮ ಚರಿತ್ರ ಕೋಶ” ಇವರ ಪ್ರಕಟಿತ ಕೃತಿಗಳು.