ಮನೆಯಕಡೆಯಿಂದ ಜಾನಕಿ ನರಳುವ ಸಣ್ಣಸದ್ದು ಕೇಳತೊಡಗಿತು. ಜಾನಕಿಗೆ ಒಂಭತ್ತು ತಿಂಗಳುಗಳು ತುಂಬಿದ್ದರಿಂದ ಹೆರಿಗೆನೋವು ಶುರುವಾಗಿತ್ತು. ಶಿವಮ್ಮ ಸಾಕಷ್ಟು ಹೆರಿಗೆಗಳನ್ನು ಮಾಡಿಸಿದ್ದರಿಂದ, ಯಾರ ಸಹಾಯವೂ ಬಯಸದೆ, ಒಬ್ಬಂಟಿಯಾಗೇ ಹೆರಿಗೆಮಾಡಿಸುವ ಅನುಭವ ಪಡೆದಿದ್ದಳು. ಹೆರಿಗೆನೋವಿನ ನರಳುವಿಕೆಯ ಕೂಗು ಹೆಚ್ಚಾಗುತ್ತಿದ್ದಂತೆಯೇ, ಸಂಗಣ್ಣ ತಾನು ಇಳಿದು ಹೋಗಲೆ. ಬೇಡವೇ? ಎಂಬ ಯೋಚನೆಗೆಬಿದ್ದ. ಅದೇ ಸಮಯದಲ್ಲಿ ಹಟ್ಟಿಯ ಕಡೆಯಿಂದ ಹಸುಗಳು, ಮೇಕೆ, ಎಲ್ಲವೂ ಬೆದರಿದಂತೆ ಕಾಲುಗಳನ್ನು ಕುಟ್ಟಿ, ಹಗ್ಗವನ್ನು ಜಗ್ಗಾಡುವ ಶಬ್ಬವೂ ಬರತೊಡಗಿತು. ಆಗಲೇ ಕಾಡ ಅಂಚಿನಿಂದ ಒಂದು ಹೂಂಕಾರವೂ, ಗರ್ಜನೆಯೂ ಕೇಳಿಬಂತು. ಸಂಗಣ್ಣನ ಜಂಘಾಬಲವೇ ಉಡುಗಿಹೋಯಿತು.
ರವಿಶಂಕರ್ ಎಸ್‌.ಎಲ್.‌ ಬರೆದ ಈ ಭಾನುವಾರದ ಕಥೆ “ಹಬ್ಬ” ನಿಮ್ಮ ಓದಿಗೆ

“ಲೇ ಮಗೀ ಕಕ್ಕ ಮಾಡೈತಿ…ಬೇಗ ತೆಗೆಯೇ……” ಸಂಗಣ್ಣ ಒಂದೇ ಸಮನೆ ಅರಚುತ್ತಿದ್ದ. “ಬಂದೇ ಬಂದೇ… …” ಶಿವಮ್ಮ ಧಾವಿಸಿ ಬಂದಳು. “ನೀವು ಕೊಂಚ ಸಮಾಧಾನದಿಂದ ಇರಿ…” ಎಂದು ಸಂಗಣ್ಣನಿಗೆ ಹೇಳುತ್ತಿರುವಾಗಲೇ ಎಂಟು ತಿಂಗಳು ತುಂಬಿ ಒಂಭತ್ತಕ್ಕೆ ಕಾಲಿಟ್ಟಿದ್ದ ಗರ್ಭಣಿ ಮಗಳು ಜಾನಕಿಯೂ ಧಾವಿಸಿಬಂದಳು. “ನೀ ಹೋಗಮ್ಮ ನಾ ತೇಗೀತೀನಿ…” ಎಂದು ಅವಳನ್ನು ತಿರುಗಿ ಕಳುಹಿಸಿ, ಶಿವಮ್ಮ ಸೀರೆಯನ್ನು ಸೊಂಟಕ್ಕೆ ಸಿಕ್ಕಿಸಿ, ಮೂರುವರ್ಷದ ಮೊಮ್ಮಗಳು ಕನಕಳನ್ನು ಪಕ್ಕಕ್ಕೆ ಕರೆದುಕೊಂಡಳು.

ಸಂಗಣ್ಣನ ಈ ಧಾವಂತಕ್ಕೆ ಕಾರಣವೂ ಇದೆ. ಅವನು ಸಾಕಿದ್ದ ಮೇಕೆಯನ್ನು ಮನೆಯಲ್ಲೇ ಕಟ್ಟಿರುತ್ತಿದ್ದ. ಅದಕ್ಕೆ ಬೇಕಾದ ಸೊಪ್ಪು ಸೊದೆಯನ್ನೆಲ್ಲಾ ಒದಗಿಸುತ್ತಿದ್ದ. ಶಿವಮ್ಮನಿಗೂ ಪದೇ ಪದೇ ಹೇಳಿ ಸಾಕಾಗಿತ್ತು. ಮನೆಯಿಂದ ಹತ್ತು ಹೆಜ್ಜೆ ದೂರವಿದ್ದ ಹಟ್ಟಿಯಲ್ಲಿ ಅದನ್ನು ಕಟ್ಟಲು ತಾಕೀತುಮಾಡಿ ಸೋತಿದ್ದಳು. ಮೂರುವರುಷದ ಕನಕ ಮಾಡಿದ ಹೊಲಸನ್ನು ತುಳಿದು ಆ ಮೇಕೆ ಮಾಡಿದ ರಾಡಿಯನ್ನು ನೋಡಿ ಸಂಗಣ್ಣನಿಗೂ ಅದನ್ನು ಹೊರಗೆ ಕಟ್ಟಬಹುದೆನಿಸಿದರೂ ದಿನದೂಡತ್ತಲೇ ಇದ್ದ.

ಸಂಗಣ್ಣ ಆ ಮೇಕೆಯನ್ನು ಬರುವ ಉಗಾದಿಗೆ ಕಡಿದು ಒಳ್ಳೆ ಹಬ್ಬ ಮಾಡಬೇಕೆಂದು ತುಂಬಾ ದಿನದಿಂದ ಯೋಚಿಸಿದ್ದ. ಆ ಕಟ್ಟುಮಸ್ತಾದ ಮೇಕೆ ಬೇರೆಯವರ ಕಣ್ಣಿಗೆ ಬಿದ್ದು ಅವರೆಲ್ಲಿ ತಮಗೆ ಬೇಕೆಂದು ತಾಕೀತು ಮಾಡುವರೋ ಎಂಬ ಅಳುಕಿನಿಂದ ಅದನ್ನು ಹೊರಗೆಲ್ಲಿಯೂ ಮೇಯಗೊಡದೆ ಮನೆಯಲ್ಲೇ ಮೇವುಕೊಟ್ಟು ಕಟ್ಟಿರುತ್ತಿದ್ದ. ಎರಡುದಿನ ಕಳೆದರೆ ಹಬ್ಬ, ಜಾನಕಿಯ ಗಂಡನೂ ಹಬ್ಬಕ್ಕೆ ಬರುವ ಸೂಚನೆಯಿತ್ತು. ಹೋದಹಬ್ಬಕ್ಕೆ ಬಂದು ಜಾನಕಿಯನ್ನು ಬಸಿರು ಮಾಡಿದಮೇಲೆ ಅವನು ಬರುವ ಸುದ್ದಿ ಈಗಲೇ ಬಂದದ್ದು. ಹೆರಿಗೆಯದಿನ ಎದರುನೋಡುತ್ತಿದ್ದ ಜಾನಕಿಯೂ ಗಂಡಬರುವನೆಂದು ಕಾದಿದ್ದಳು. ಶಿವಮ್ಮಳಂತೂ ಪ್ರತಿಗಂಟೆಗೂ ಕಣ್ಮುಚ್ಚಿ ದೇವರನ್ನು ನೆನೆದು ಈ ಬಾರಿ ಗಂಡುಮಗುವಾಗಲಿ ಎಂದು ಪ್ರಾರ್ಥಿಸುತ್ತಿದ್ದಳು.

ಕನಕಳಿಗೆ ಮನೆಯಲ್ಲಿ ಕಟ್ಟಿದ್ದ ಮೇಕೆಯೇ ಗೆಳೆಯ. ಅವಳು ಅದರೊಂದಿಗೆ ತೊದಲು ಮಾತನಾಡುವಳು, ಅದರ ಹಗ್ಗ ಜಗ್ಗಾಡುವಳು, ಅದರೊಂದಿಗೇ ಊಟ, ಆಟ, ಮಾತು ಎಲ್ಲವೂ. ಮಗೂವೂ ಏನೋ ಆಡಿಕೊಂಡಿದೆ ಎಂದು ಎಲ್ಲರೂ ಅವರವರ ಕೆಲಸ ನೋಡಿಕೊಳ್ಳುತ್ತಿದ್ದರು. ಕನಕಳಿಗೆ ಮೇಕೆಯನ್ನು ಬಿಟ್ಟಿರಲಾಗದು. ನಿದ್ದೆ ಮಾಡುವಾಗಲೂ ಅದರೊಂದಿಗೇ ಮಲಗಬೇಕು. “ಮಗೀನ ನೋಡು, ಮೇಕೆಜೊತೆ ಎಂಗೆ ಆಡಕೊಂಡಿದೆ” ಎಂದು ಸಂಗಣ್ಣ ವಾದಿಸಿ ಮನೆಯ ಒಳಗಡೆ ಅದನ್ನು ಕಟ್ಟಿರುವುದಕ್ಕೆ ಸಮಜಾಯಿಷಿ ಹೇಳುತ್ತಿದ್ದ.

ಸಂಗಣ್ಣ ಆ ಮೇಕೆಯನ್ನು ಮನೆಯಲ್ಲೇ ಕಟ್ಟಲು ಇನ್ನೊಂದು ಕಾರಣ, ಕಾಡಿನ ಅಂಚಿನಲ್ಲಿದ್ದ ಅವನ ಒಂಟಿ ಮನೆಗೆ ಕಾಡುಪ್ರಾಣಿಗಳ ಹಾವಳಿ. ಕಾಡುಹಂದಿಯೋ, ಹೆಬ್ಬಾವೋ, ಮುಳ್ಳುಹಂದಿಯೋ, ಚಿರತೆಯೋ ಯಾವುದಾದರೂ ಆಗಬಹುದು. ಕೋಳಿ, ಕುರಿ, ಮೇಕೆ, ನಾಯಿ, ಹಸು ಆಗಾಗ್ಗೆ ಮಾಯವಾಗುತ್ತಿದ್ದ ಸುದ್ದಿಗಳು ಸುತ್ತಮುತ್ತಲ ಹಳ್ಳಿಗಳಿಂದ ಆಗಾಗ್ಗೆ ಬರುತಿದ್ದುದು ಸಾಮಾನ್ಯವಾಗಿತ್ತು. ಸಂಗಣ್ಣನ ಮನೆಯೂ ಕಾಡಂಚಿನ ಒಂಟಿಮನೆಯಾಗಿದ್ದರೂ, ಇವುಗಳಿಗ್ಯಾವುದಕ್ಕೂ ಹೆದರದೆ ಜೀವನ ನಡೆಸಿದ್ದ ಸಂಗಣ್ಣ.

ಸ್ನೇಹಿತ ರಾಮಯ್ಯ ತಂದ ಸುದ್ದಿ ಅವನನ್ನು ಚಿಂತೆಗೆ ನೂಕಿತು. ಈ ಬಾರಿ ಸಂತೆಗೆ ಹೋಗಲಾಗದ ಸಂಗಣ್ಣ, ಸ್ನೇಹಿತ ರಾಮಯ್ಯನಿಗೆ ತಂಬಾಕು ಎಲೆ ತಂದುಕೊಡಲು ಕೇಳಿದ್ದ. ರಾಮಯ್ಯ ತಂಬಾಕುಎಲೆಯನ್ನು ಸಂಗಣ್ಣನ ಕೈಯಲಿಟ್ಟು ಹೇಳಿದ, “ಒಂದು ಚಿರತೆಯ ಹಾವಳಿ ಜಾಸ್ತಿ ಆಗಿದೆ. ಎರಡುದಿನದ ಹಿಂದೆ ನಾಲ್ಕು ಮೈಲಿದೂರದ ಹಳ್ಳೀಲಿ ಒಂದು ದನಾನ ಹೊಡೆದಿದೆ. ಮುಂದಿನ ಜಾಗ ನಿನ್ನ ಜಾಗಾನೇ ಆಗಿರಬಹುದು, ಯಾತಕ್ಕೂ ಹುಷಾರಿರೋದು ಮುಖ್ಯ ನೋಡಪ್ಪ” ಎಂದಿದ್ದು ಸಂಗಣ್ಣನ ಕಿವಿಯಲ್ಲಿ ಗುಯ್ ಗುಡುತ್ತಿತ್ತು.

ರಾಮಯ್ಯ ಅತ್ತಕಡೆ ಹೋದಮೇಲೆ, ಶಿವಮ್ಮನನ್ನು ಕೂಗಿ ಸಂಗಣ್ಣ ಹೇಳಿದ “ಇವತ್ತು ರಾತ್ರಿ ನಾನು ಮರಸುಕೂಡಬೇಕು, ರಾಮಯ್ಯ ಹೇಳೋಹಾಗೆ ಚಿರತೆ ನಮ್ಮಕಡೇಗೇ ಬರಬಹುದೂ ಅಂತ ನನಗೂ ಅನಿಸಿದೆ. ಬೇಗ ನನಗೆ ಊಟಕೊಡು, ನಾನು ಕೋವಿ ಸಿದ್ಧಮಾಡಿಕೊಂಡು ಸೂರ್ಯ ಮುಳುಗೊವೇಳೆಗೆ ಮರಸುಕೂಡಬೇಕು”. ಶಿವಮ್ಮನಿಗೆ ಸಂಗಣ್ಣ ಮರಸುಕೂತು ತಮ್ಮ ದನಕರುಗಳನ್ನು ರಕ್ಷಿಸುವುದು ಸಾಮಾನ್ಯವೇ ಆಗಿತ್ತು. “ಆಗಲಿ” ಎಂದು ಅವಳು ಒಳನಡೆದಳು. ಸಂಗಣ್ಣನ ಮನೆ ಮಲೆನಾಡಿನ, ಕಾಡಿನ ಅಂಚಿನ ಒಂಟಿ ಮನೆಯಾದ್ದರಿಂದ ಸಹಜವಾಗಿಯೇ ಅವನು ಧೈರ್ಯ ಶಾಲಿಯಾಗಿದ್ದ. ಮಲೆನಾಡಿಗನಾಗಿದ್ದ ಸಂಗಣ್ಣನಿಗೆ, ಬೇಟೆ ಆಡುವ ಕುಶಲತೆ ಅನಿವಾರ್ಯವಾಗಿ ಬಂದಿತ್ತು. ತಮ್ಮ ದನಕರುಗಳನ್ನು ಸಂರಕ್ಷಿಸಲು, ಅಲ್ಲದೆ ಒಮ್ಮೊಮ್ಮೆ ಮಾಂಸ-ಚರ್ಮಗಳಿಗಾಗಿ ಬೇಟೆಯಾಡುವುದೂ ಸಹಜವಾಗಿತ್ತು.

ಮರಸುಕೂಡಲು ಸಂಗಣ್ಣ ಯಾವಾಗಲೂ ಮನೆಯಿಂದ ಸುಮಾರು ನಲವತ್ತು ಹೆಜ್ಜೆ ದೂರದ ಮಾವಿನಮರವನ್ನೇ ಆರಿಸಿಕೊಳ್ಳುತ್ತಿದ್ದ. ಅದರ ಮೇಲೆ ಒಂದು ವಿಶಾಲವಾದ ಅಟ್ಟಣಿಗೆಯ್ನೂ ನಿರ್ಮಿಸಿದ್ದ. ಅವನು ಕಟ್ಟಿದ್ದ ಅಟ್ಟಣಿಗೆಯ ಎತ್ತರದಿಂದ ಮನೆ-ಹಟ್ಟಿ ಚೆನ್ನಾಗಿ ಕೂತುನೋಡಲು ಸಮಂಜಸವಾಗಿತ್ತು. ಮರದ ಹಿಂದೆಯೇ ದೊಡ್ಡಹಳ್ಳವಿದ್ದು ಮುಳ್ಳಿನ ಪೊದರುಗಳಿಂದ ತುಂಬಿಹೋಗಿತ್ತು. ಹಾಗಾಗಿ, ಆ ಮಾವಿನಮರದ ಹಿಂದಿನಿಂದ ಕಾಡುಪ್ರಾಣಿಗಳು ಬರವ ಸಾಧ್ಯತೆ ಇರಲಿಲ್ಲ. ವಾಡಿಕೆಯಂತೆ, ಸಂಗಣ್ಣ ತಾನು ಮರಸುಕೂಡುವ ಮಾವಿನಮರದ ಬುಡಕ್ಕೆ ತರಗೆಲೆಗಳನ್ನು ಸೇರಿಸಿ, ಬೆಂಕಿಕೊಟ್ಟು, ದಟ್ಟವಾಗಿ ಹೊಗೆ ಏಳುವಂತೆ ಮಾಡಿದ. ತಾನು ಮರಸು ಕೂಡುವ ವೇಳೆಗೆ ಕೆಂಜಿರುವೆ, ಗೊದ್ದ, ಸೊಳ್ಳೆ ಇವುಗಳ ಉಪಟಳದಿಂದ ಪಾರಾಗಲು ಹೀಗೆ ಮಾಡುತ್ತಿದ್ದ.

ಮರಸುಕೂತು ಬೇಟೆಯಾಡುವುದೆಂದರೆ ಎತ್ತರದ ಮರವೊಂದರಮೇಲೆ ಅಟ್ಟಣಿಗೆಯನ್ನು ನಿರ್ಮಿಸಿ, ಸೂರ್ಯಾಸ್ತದ ವೇಳೆಗೆ ಕೋವಿ ಸಿದ್ಧಪಡಿಸಿಕೊಂಡು ಕೂತಿದ್ದೇ ಆದರೆ, ಮುಂದಿನ ಸೂರ್ಯೋದಯದವರೆಗೂ ಎಚ್ಚರಿಕೆಯಿಂದ ಮೈಯೆಲ್ಲ ಕಣ್ಣಾಗಿಸಿಕೊಂಡು ಬೇಟೆಯ ಪ್ರಾಣಿಗಾಗಿ ಕೂಡಬೇಕು. ಪ್ರಾಣಿಯನ್ನು ಕೊಲ್ಲಲಾಗದಿದ್ದರೂ ಕೋವಿಯ ಘೋರಶಬ್ದಕ್ಕೆ ಹೆದರಿ ಕಾಡುಪ್ರಾಣಿಗಳು ಮತ್ತೆ ಆ ಕಡೆಬರುತ್ತಿರಲಿಲ್ಲ. ಸಂಗಣ್ಣ ಈ ರೀತಿಯ ಬೇಟೆಯ ಪರಿಗಳನ್ನು ಆಗಾಗ್ಗೆ ಬರುತ್ತಿದ್ದ ಕೆಲವು ಫಿರಂಗಿಗಳಿಂದಲೂ, ಅವರೊಟ್ಟಿಗೆ ಬೇಟೆಗಳಿಗೆ ಹೋಗಿ ಒಳ್ಳೆಯ ಗುರಿಕಾರನೆನಿಸಿಕೊಂಡಿದ್ದ.

ಸೂರ್ಯಾಸ್ತ ಸನ್ನಿಹಿತವಾಗತೊಡಗಿತು. ಸಂಗಣ್ಣ ಬೇಗನೆ ಊಟಮುಗಿಸಿ ಕೋವಿ, ತೋಟಾಗಳ ಚೀಲ, ತಂಬಾಕು, ರುಮಾಲು, ಲಾಂದ್ರ ಹಾಗೂ ಕಂಬಳಿಗಳೊಡನೆ ಮರಸುಕೂಡಲು ಹೊರಟ. ಹೆಂಡತಿಗೆ ಸರಿಯಾಗಿ ಬಾಗಿಲನ್ನು ಹಾಕಿಕೊಳ್ಳುವಂತೆ ಹೇಳಿ ಮಾವಿನಮರದ ಕಡೆಗೆ ನಡೆದ.
ಮರಸುಕೂತಿದ್ದ ಸಂಗಣ್ಣನಿಗೆ ಹೊಟ್ಟೆ ತುಂಬಾ ಉಂಡಿದ್ದರಿಂದ ಜೋಂಪು ಆವರಿಸಿತು. ಹಕ್ಕಿಗಳ ಕೂಗು, ಜೀರುಂಡೆಗಳ ಝೇಂಕಾರಗಳಿಂದ ಆಗಾಗ್ಗೆ ಎಚ್ಚರವಾಗುತ್ತಿದ್ದರೂ, ತಂಪನೆ ಬೀಸುತ್ತಿದ್ದ ಗಾಳಿ, ಮರಸು ಕೂಡಲು ಮಾಡಿಕೊಂಡಿದ್ದ ಅಟ್ಟಣಿಗೆ ಕಾಲುಚಾಚುವಷ್ಟು ದೊಡ್ಡದಾದ ಕಾರಣ, ಕೋವಿಯನ್ನು ಸಿದ್ಧಪಡಿಸಿ, ಲಾಂದ್ರವನ್ನು ಆರಿಸಿ ಹಾಗೆಯೇ ನಿದ್ದೆಯಲ್ಲದ ನಿದ್ದೆಯ ಸ್ಥಿತಿಯಲ್ಲಿದ್ದ.


ಕನಕಳಿಗೆ ಮನೆಯಲ್ಲಿ ಕಟ್ಟಿದ್ದ ಮೇಕೆಯೇ ಗೆಳೆಯ. ಅವಳು ಅದರೊಂದಿಗೆ ತೊದಲು ಮಾತನಾಡುವಳು, ಅದರ ಹಗ್ಗ ಜಗ್ಗಾಡುವಳು, ಅದರೊಂದಿಗೇ ಊಟ, ಆಟ, ಮಾತು ಎಲ್ಲವೂ. ಮಗೂವೂ ಏನೋ ಆಡಿಕೊಂಡಿದೆ ಎಂದು ಎಲ್ಲರೂ ಅವರವರ ಕೆಲಸ ನೋಡಿಕೊಳ್ಳುತ್ತಿದ್ದರು. ಕನಕಳಿಗೆ ಮೇಕೆಯನ್ನು ಬಿಟ್ಟಿರಲಾಗದು. ನಿದ್ದೆ ಮಾಡುವಾಗಲೂ ಅದರೊಂದಿಗೇ ಮಲಗಬೇಕು.

ಸುಮಾರು ಹೊತ್ತು ಕಳೆಯಿತು, ಹಕ್ಕಿಗಳ ಕೂಗು, ಜೀರುಂಡೆಯ ಶಬ್ದಗಳೂ ಕಡಿಮೆಯಾಗಿತ್ತು. ದೂರದಲ್ಲಿ ಎಲ್ಲೋ ನಾಯಿಯೊಂದು ಒಂದೇಸಮನೆ ಬೊಗಳಿದ ಶಬ್ದ ಸಂಗಣ್ಣನನ್ನು ನಿದ್ದೆಯಿಂದ ಎಚ್ಚರಿಸಿತು. ನಕ್ಷತ್ರಗಳ ಬೆಳಕಿನಲ್ಲಿ ಸಂಗಣ್ಣನ ಕಣ್ಣಿಗೆ ಸ್ಪಷ್ಟ ಎನ್ನಲಾಗದಿದ್ದರೂ ತುಸು ಮಬ್ಬಮಬ್ಬಾಗಿ ಮನೆ, ಹಟ್ಟಿ, ಕಾಡು, ಕಾಲ್ದಾರಿಗಳು ಕಾಣುತ್ತಿದ್ದವು. ಎರಡು-ಮೂರು ತಾಸಿಗೂ ಹೆಚ್ಚುಕಾಲ ನಿದ್ರಿಸಿದ್ದ ಸಂಗಣ್ಣನಿಗೆ ಈಗ ನಿದ್ದೆ ದೂರವಾಗಿತ್ತು. ಕೋವಿಯನ್ನು ಸರಿಯಾಗಿಟ್ಟುಕೊಂಡು, ಕಂಬಳಿಹೊದ್ದು, ದೇಹವನ್ನು ಸರಿಮಾಡಿಕೊಂಡು ಕೂತ.

ಮನೆಯಕಡೆಯಿಂದ ಜಾನಕಿ ನರಳುವ ಸಣ್ಣಸದ್ದು ಕೇಳತೊಡಗಿತು. ಜಾನಕಿಗೆ ಒಂಭತ್ತು ತಿಂಗಳುಗಳು ತುಂಬಿದ್ದರಿಂದ ಹೆರಿಗೆನೋವು ಶುರುವಾಗಿತ್ತು. ಶಿವಮ್ಮ ಸಾಕಷ್ಟು ಹೆರಿಗೆಗಳನ್ನು ಮಾಡಿಸಿದ್ದರಿಂದ, ಯಾರ ಸಹಾಯವೂ ಬಯಸದೆ, ಒಬ್ಬಂಟಿಯಾಗೇ ಹೆರಿಗೆಮಾಡಿಸುವ ಅನುಭವ ಪಡೆದಿದ್ದಳು. ಹೆರಿಗೆನೋವಿನ ನರಳುವಿಕೆಯ ಕೂಗು ಹೆಚ್ಚಾಗುತ್ತಿದ್ದಂತೆಯೇ, ಸಂಗಣ್ಣ ತಾನು ಇಳಿದು ಹೋಗಲೆ. ಬೇಡವೇ? ಎಂಬ ಯೋಚನೆಗೆಬಿದ್ದ. ಅದೇ ಸಮಯದಲ್ಲಿ ಹಟ್ಟಿಯ ಕಡೆಯಿಂದ ಹಸುಗಳು, ಮೇಕೆ, ಎಲ್ಲವೂ ಬೆದರಿದಂತೆ ಕಾಲುಗಳನ್ನು ಕುಟ್ಟಿ, ಹಗ್ಗವನ್ನು ಜಗ್ಗಾಡುವ ಶಬ್ಬವೂ ಬರತೊಡಗಿತು. ಆಗಲೇ ಕಾಡ ಅಂಚಿನಿಂದ ಒಂದು ಹೂಂಕಾರವೂ, ಗರ್ಜನೆಯೂ ಕೇಳಿಬಂತು. ಸಂಗಣ್ಣನ ಜಂಘಾಬಲವೇ ಉಡುಗಿಹೋಯಿತು.

ಶಿವಮ್ಮನಮೇಲೆ ಭರವಸೆ ಇದ್ದುದರಿಂದ, ಮಗಳ ಹೆರಿಗೆಯಲ್ಲಿ ಅವಳಿಗೆ ತನ್ನ ಅವಶ್ಯಕತೆ ಇರಲಾರದೆಂದೆಣಿಸಿದ. ಇರಲಿ, ನೋಡೋಣವೆಂದು, ಕೋವಿಯನ್ನು ಗುರಿಯಾಗಿಸಿಕೊಂಡು ಕೂತ. ಹಟ್ಟಿಯಲ್ಲಿಂದ ಹಸುಗಳು ಮತ್ತು ಮೇಕೆಯ ಭಯಭರಿತ ಕೂಗೂ ಹೆಚ್ಚಾಯಿತು. ಕೆಲನಿಮಿಷಗಳ ನಂತರ ಹಟ್ಟಿಯ ಬಳಿಯಲ್ಲಿ ಯಾವುದೋ ಆಕೃತಿ ನಿಧಾನವಾಗಿ ಮುಂದುವರೆಯುವುದನ್ನು ಗಮನಿಸಿದ. ನಕ್ಷತ್ರಗಳ ಬೆಳಕಿನಲ್ಲಿ ಕರಿಛಾಯೆಯಷ್ಟೆ ಕಾಣುತ್ತಿದ್ದ ಆಕೃತಿಗೆ ಕೋವಿಯನ್ನು ಗುರಿಮಾಡಿ, ಉಸಿರು ಹಿಡಿದು, ಕುದುರೆಯನ್ನೆಳೆದ. ಕೋವಿಯಿಂದ ಹೊರಟ ಭಾರಿ ಶಬ್ದ, ಭೂಕಂಪನವೇ ಆಯಿತೇನೋ ಎಂಬ ಭಾಸವಾಯಿತು. ಹಟ್ಟಿಯ ಬಳಿಗೆ ತೆವಳುತ್ತಿದ್ದ ಆ ಆಕೃತಿ ಅಲ್ಲಿಂದ ಎದ್ದು ಕಾಡಿನಕಡೆಗೆ ಓಟಕಿತ್ತಿತು. ಸಂಗಣ್ಣ ಇನ್ನೊಂದು ಬಾರಿ ಕೋವಿಯಿಂದ ಅದು ಓಡಿಹೋದ ದಿಕ್ಕಿನಲ್ಲಿ ಹೊಡೆದ. ಆ ಪ್ರಾಣಿ ವಿಚಿತ್ರವಾಗಿ ಹೂಂಕರಿಸುತ್ತ, ಗರ್ಜಿಸುತ್ತ ಓಡಿಹೋಗಿತ್ತು. ಸಂಗಣ್ಣ ಸರಸರನೆ ಮರದಿಂದಿಳಿದು ಮನೆಯಕಡೆ ಓಡಿದ.

ಶಿವಮ್ಮ ಹೆರಿಗೆಗೆ ಬೇಕಾದ ತಯಾರಿ ನಡೆಸಿದ್ದಳು. ಅವಳ ಗಮನವೆಲ್ಲಾ ಜಾನಕಿಯ ಪ್ರಸವದ ಕಡೆಯೇ ಇದ್ದುದರಿಂದ, ಸಂಗಣ್ಣನ ಕೂಗಿಗೆ ಬಾಗಿಲು ತೆರೆದು, ಮಾತೊಂದೂ ಆಡದೆ ಜಾನಕಿಯಕಡೆಗೆ ಓಡಿದಳು. ಜಾನಕಿಯ ಹೆರಿಗೆನೋವು ಹೆಚ್ಚಾಗಿ, ಕೂಗಾಟಗಳೂ ಹೆಚ್ಚಾಗಿದ್ದುದು… ಇದ್ದಕಿಂತೆಯೆ ಕೂಗಾಟ ನಿಂತಿತು. ಜಾನಕಿಗೆ ಹೆರಿಗೆ ಸುಖವಾಗಿ ಆಗಿ ಗಂಡುಮಗುವಿಗೆ ಜನ್ಮಕೊಟ್ಟಿದ್ದಳು. ಜಾನಕಿಗೂ, ಶಿವಮ್ಮನಿಗೂ ಆದ ಸಂತೋಷ ಅಷ್ಟಿಷ್ಟಲ್ಲ. ಸಂಗಣ್ಣನೂ ಮಗುವನ್ನು ನೋಡಿ ತುಂಬಾ ಸಂತೋಷಪಟ್ಟ. ಈ ಸಂತೋಷದಲ್ಲಿ ಮರಸು ಕೂತಿದ್ದ, ಬೇಟೆ ಆಡಿದುದರ ನೆನಪು ಮರತೆಹೋಗಿತ್ತು ಅವನಿಗೆ. ಶಿವಮ್ಮನ ಆರೈಕೆ ಮುಂದುವರೆದಿತ್ತು… ಸುಸ್ತಾಗಿದ್ದ ಸಂಗಣ್ಣ ಮೊಮ್ಮಗಳು ಕನಕ ಪಕ್ಕ ಹೋಗಿ ಕಣ್ಣುಮುಚ್ಚಿ ಒರಗಿದ.

ಹಕ್ಕಿಗಳ ಕೂಗಿಗೆ ಸಂಗಣ್ಣನಿಗೆ ಎಚ್ಚರವಾಯಿತು. ಶಿವಮ್ಮ ಆಗಲೇ ಎದ್ದು ಮಗಳ ಆರೈಕೆ ಮುಂದುವರೆಸಿದ್ದಳು. ಕನಕ ಕೂಡ ಎದ್ದು, ಹೊಸದಾಗಿ ಹುಟ್ಟಿರುವ ಮಗುವನ್ನು ನಿಬ್ಬೆರಗಾಗಿ ನೋಡುತ್ತ, ಏನೇನೊ ತೊದಲು ಮಾತುಗಳಾಡುತ್ತಿದ್ದಳು. ಸಂಗಣ್ಣ ಜಾನಕಿಯಕಡೆ ನೋಡಿ ನಸುನಕ್ಕ. ಮಗುವಿಗೆ ಆಶೀರ್ವದಿಸಿದ. ಜಾನಕಿಯ ಕಣ್ಣಂಚಿನಲ್ಲಿಂದ ಕಣ್ಣೀರು ಕನ್ನೆಯಮೇಲೆ ಹರಿಯಿತು. ಹೆರಿಗೆಯ ಸಮಯದಲ್ಲಿ ಗಂಡ ಜೊತೆಯಲ್ಲಿ ಇರದಿದ್ದುದು ಅವಳಿಗೆ ನೋವಾಗಿತ್ತು.

ರಾತ್ರಿಯ ಘಟನೆಗಳನ್ನು ನೆನಪಿಸಿಕೊಂಡ ಸಂಗಣ್ಣ ಹಟ್ಟಿಯ ಕಡೆಗೆ ಧಾವಿಸಿದ. ಎಂದಿನಂತೆ ಹಸುಗಳು ಮತ್ತು ಮೇಕೆ ಶಿವಮ್ಮ ಕೊಟ್ಟ ಹುಲ್ಲುಮೇಯುತ್ತಿದ್ದವು. ಹಾಗೆಯೇ ಹಟ್ಟಿಯ ಹಿಂಬದಿಗೆ ಬಂದಾಗ ಅವನಿಗೆ ಅಚ್ಚರಿಕಾದಿತ್ತು. ಅಲ್ಲಿ ಯಾವುದೋ ಕಾಡುಪ್ರಾಣಿಯ ಸಾಕಷ್ಟು ರಕ್ತ ಸುರಿದಿತ್ತು. ತನ್ನ ಬೇಟೆಯ ಕೌಶಲಕ್ಕೆ ಒಳಗೇ ಹೆಮ್ಮೆಗೊಂಡ. ಆದರೆ ಕೋವಿಯಗುರಿ ಆ ಪ್ರಾಣಿಯನ್ನು ಕೊಂದಿದೆಯೇ ಅನುಮಾನಿಸಿದ.

ಕೂಡಲೇ ಮನೆಯಕಡೆನಡೆದು, ಶಿವಮ್ಮನಿಗೆ ನಡೆದುದೆಲ್ಲವನೂ ತಿಳಿಸಿದ. ತಾನು ಸ್ನಾನಮಾಡಿ, ತಿಂಡಿತಿಂದು, ಮತ್ತೆಕೋವಿಹಿಡಿದು ರಕ್ತದ ಜಾಡನ್ನು ಹಿಡಿದು ಕಾಡಕಡೆ ಹೋಗುವುದಾಗಿ ತಿಳಿಸಿದ. ಮರಸುಕೂಡಲು ತಾನು ತೆಗೆದುಕೊಂಡುಹೋಗಿದ್ದ ವಸ್ತುಗಳನ್ನು ಮರಳಿತರಲು ಮಾವಿನಮರದಕಡೆಗೆ ನಡೆದ. ಶಿವಮ್ಮ ಹಬ್ಬಕ್ಕಾಗಿ ಕೊಂಚ ಮಾವಿನ ಚಿಗರನ್ನೂ ಕಿತ್ತುತರಲು ನೆನಪಿಸಿದಳು.

ಸಂಗಣ್ಣ ತಿಂಡಿತಿಂದವನೇ, ಕೋವಿಹಿಡಿದು, ರಕ್ತದ ಜಾಡನ್ನು ಅರಸಿ ಹೊರಟ. ಕಾಡಿನ ಕಡೆ ಸಾಗಿದ್ದ ಜಾಡು ಕಾಡು ಹೊಕ್ಕಿದ ನಂತರ ರಕ್ತದಟ್ಟವಾಗಿತ್ತು. ಹಾಗಾಗಿ ಅದರ ಸಾವು ಸಮೀಪಿಸಿ ಆ ಪ್ರಾಣಿ ಹೆಚ್ಚುದೂರ ಹೋಗಿರಲಿಕ್ಕಿಲ್ಲ ಎಂದೆಣಿಸಿದ. ಸ್ವಲ್ಪದೂರದಲ್ಲಿಯೇ ಒಂದು ಮರದಮೇಲೆ ಹತ್ತಾರು ಕಾಗೆಗಳು ಕೂತು ಕೂಗುತ್ತಿದ್ದವು. ಸಂಗಣ್ಣನಿಗೆ, ಸತ್ತಿರಬಹುದಾದ ಆ ಪ್ರಾಣಿ ಇಲ್ಲಿಯೇ ಇದೆ ಎಂದು ಕಾಗೆಗಳು ಕೂಗಿಹೇಳಿದಂತಾಯಿತು. ಕೊರಕಲಿನಲ್ಲಿದ್ದ ಆ ಪ್ರಾಣಿಯನ್ನು ಸರಿಯಾಗಿ ನೋಡಲು, ಕೋವಿಯನ್ನು ಸಿದ್ಧಪಡಿಸಿಕೊಂಡು ನಿಧಾನವಾಗಿ, ಏಕಾಗ್ರತೆಯಿಂದ ಮುಂದೆಹೋಗಿ ನೋಡಲು, ದೊಡ್ಡ ಚಿರತೆಯೊಂದು ಪ್ರಾಣಕಳೆದು ಅಂಗಾತನವಾಗಿ ಬಿದ್ದಿದೆ. ಕೋವಿಯ ಗುಂಡುಗಳು ಅದರ ಎದೆ ಹಾಗೂ ಪಕ್ಕೆಯನ್ನು ಸೀಳಿದ್ದವು, ಹೆಪ್ಪುಗಟ್ಟಿದ್ದ ರಕ್ತದ ಮೇಲೆಯೇ ಹಸಿರಕ್ತ ಇನ್ನೂ ಜಿನುಗುತ್ತಿತ್ತು. ಸಂಗಣ್ಣನಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಬೇರೆ ಪ್ರಾಣಿಗಳಾವುದೂ ಸತ್ತ ಚಿರತೆಯನ್ನು ಮುಟ್ಟಬಾರದೆಂದು, ಬೇಗಬೇಗನೆ ಪಕ್ಕದಲ್ಲೇ ಬೆಳೆದಿದ್ದ ಮುಳ್ಳಿನ ಪೊದರುಗಳನ್ನು ಎಳೆದು ತಂದು ಸಂಪೂರ್ಣವಾಗಿ ಅದರ ದೇಹವನ್ನು ಮುಚ್ಚಿದ. ಬೇರೆಜನಗಳ ಸಹಾಯದಿಂದ ಸತ್ತಚಿರತೆಯನ್ನು ಆದಷ್ಟು ಬೇಗನೆ ಅಲ್ಲಿಂದ ಸಾಗಿಸೋಣವೆಂದು ಲಗುಬಗನೆ ಅಲ್ಲಿಂದ ಹೊರಟ.