ತೇಜಸ್ವಿ ಕಾಡುತ್ತಾರೆ!

ತೇಜಸ್ವಿ ನೆನಪಾಗುತ್ತಾರೆ;
ಹಚ್ಚನೆಯ ಹಸಿರೊಳಗೂ
ಬೆಚ್ಚನೆಯ ಕಾಡೊಳಗೂ
ಗಟ್ಟಿ ದನಿಯಾಗಿ!

ಅದೇಕೋ ಕುಬಿ ಇಯಾಲರು,
ಲೈನ್ ಮೆನ್ ದುರ್ಗಪ್ಪ
ಅಬಚೂರಿನ ಪೋಸ್ಟ್ ಆಫೀಸು
ಅಣ್ಣನ ನೆನಪು ಸದಾ ಕಾಡುತ್ತಿರುತ್ತದೆ!

ಮನೆಗೆ ಬಂದ ಹೊಸ ನಾಯಿಗೂ
‘ಕಿವಿ’ಯೆಂದೇ ಹೆಸರು!
ಮೂಡಿಗೆರೆಯ ಬೀದಿಯೊಕ್ಕರೆ
ಪೂರ್ಣಚಂದ್ರನದೇ ಉಸಿರು.
ಬೇಲಿಯ ಮೇಲಿನದು ಹೂವೇ ಇರಲಿ
ಹಾರುವ ಓತಿಯ ಕಲ್ಪನೆ ಅರಳುತ್ತದೆ!

ನನ್ನೊಳಗೆ ಅದೋ ಆ ನೈಲ್ ನದಿನಂತೆ,
ಬರಪೀಡಿತ ಈಜಿಪ್ಟ್, ಕರ್ವಾಲೋ
ಗೌರಿ ಆನೆ, ತಬರನ ಪಿಂಚಣಿ,
ರಕ್ಕಸ ಬಂಡೆ ಅಚ್ಚರಿಯೆಬ್ಬಿಸಿ
ವಿಚಾರಗಳು ಹರಿದಾಡುತ್ತವೆ!

ಅಚಾನಕ್ಕಾಗಿ ಎಲ್ಲೋ ಯಾವುದೋ
ಹೆಂಗಸಿನ ದನಿ ಗಟ್ಟಿಯಾದರೆ,
ಕಿರುಗೂರಿನ ಮಾರ್ದನಿ ಕೇಳುತ್ತದೆ!
ಬಿರಿಯಾನಿ ಅಂದರೆ ಕರಿಯಪ್ಪ ಎಲ್ಲೋ?
ಸುಮ್ಮನೆ ಪ್ರಶ್ನೆ ಮೂಡುತ್ತದೆ!

ತೇಜಸ್ವಿ ಸದಾ ಕಾಡುತ್ತಿರುತ್ತಾರೆ;
ಅದೇಷ್ಟೆಂದರೆ,
ರಂಗು ರಂಗಿನ ಸಾವಿರಾರು
ಚಿಟ್ಟೆಗಳ ನಡುವೆಯೂ
ಏರೋಪ್ಲೇನ್ ಚಿಟ್ಟೆಯೇ
ಮೋಹಕವೆನಿಸುವಷ್ಟು!