ಚಾಮುಂಡಿ ನೆಲೆಸಿರುವ ಮೈಸೂರಿನಿಂದ ಚೆಲುವನಾರಾಯಣ ಪವಡಿಸಿರುವ ಮೇಲುಕೋಟೆಯ ನಡುವೆ ಪಾಂಡವಪುರ ಎಂಬ ಊರು ಬರುತ್ತದೆ. ದ್ವಾಪರ ಯುಗದ ಕೊನೆಯಲ್ಲಿ ಪಾಂಡವರು ವನವಾಸದಲ್ಲಿದ್ದಾಗ ಈ ಊರಿನ ಪಕ್ಕದಲ್ಲಿರುವ ಬೆಟ್ಟವನ್ನು ಕುಂತಿ ಬಹುವಾಗಿ ಇಷ್ಟ ಪಡುತ್ತಿಳು. ಆ ಕುಂತಿಬೆಟ್ಟ ಈಗಲೂ ಹಾಗೇ ಅಲ್ಲಿದೆ. ಕಲಿಯುಗದಲ್ಲಿ ಟೀಪೂ ಸುಲ್ತಾನನಿಗೆ ಸಹಾಯ ಮಾಡಲು ಬಂದ ಫ್ರೆಂಚ್ ಸೈನಿಕರು ಈ ಬೆಟ್ಟದ ಕಲ್ಲುಗಳಿಗೆ ಮರುಳಾಗಿ ಇಲ್ಲೇ ಬಿಡಾರ ಹೂಡಿ ಈ ಊರನ್ನು ಫ್ರೆಂಚ್ ರಾಕ್ಸ್ ಎಂದು ಕರೆದರು. ಈಗ ಅದು ಮತ್ತೆ ಪಾಂಡವಪುರವಾಗಿದೆ.
ಪಾಂಡವಪುರದಿಂದ ಮೇಲುಕೋಟೆಯ ದಾರಿಯಲ್ಲಿ ಮುಂದೆಹೋಗಿ ಎಡಕ್ಕೆ ತಿರುಗಿದರೆ ಲಕ್ಷ್ಮೀಸಾಗರ ಎಂಬ ಊರು ಬರುತ್ತದೆ. ಬಹಳ ಹಳೆಯ ಊರು. ಯಾವುದೋ ಅರಸನೊಬ್ಬನ ಕಿರುಕುಳದಿಂದಾಗಿ ತಮಿಳುದೇಶವನ್ನು ತ್ಯಜಿಸಬೇಕಾಗಿ ಬಂದ ರಾಮಾನುಜಾಚಾರ್ಯರು ಈ ಊರಿನಲ್ಲಿ ಬಹಳ ವರ್ಷಗಳಿದ್ದರು. ಸುಮಾರು ನೂರಾ ಇಪ್ಪತ್ತು ವರ್ಷ ಬದುಕಿದ್ದ ಇವರು ಈ ಊರಿನ ಶೂದ್ರರನ್ನೂ, ದಲಿತರನ್ನೂ ವೈಷ್ಣವರನ್ನಾಗಿ ಮಾಡಿ ವಾರದ ಕೆಲವು ದಿನಗಳಂದು ಅವರು ದೇವರ ದರ್ಶನ ಮಾಡಬಹುದು ಎಂಬ ಅನುಕೂಲವನ್ನೂ ಕಲ್ಪಿಸಿದ್ದರು. ರಾಮಾನುಜಾಚಾರ್ಯರಿಗೆ ಎಳೆಯ ವಯಸಿನಲ್ಲೇ ಮದುವೆಯಾಗಿತ್ತು. ಅವರು ಪಟ್ಟ ಕಷ್ಟಗಳನ್ನು ಅವರು ಹೋದೆಡೆಯಲ್ಲೆಲ್ಲಾ ಅವರ ಪತ್ನಿಯೂ ಅನುಭವಿಸಬೇಕಾಯ್ತು. ಈ ಕಷ್ಟಗಳ ಕುರಿತ ಒಂದು ಪ್ರಸಂಗವನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರರು ‘ಆಚಾರ್ಯರ ಪತ್ನಿ’ ಎಂಬ ತಮ್ಮ ಕತೆಯಲ್ಲಿ ಬರೆದಿದ್ದಾರೆ. ಕತೆ ಗೊತ್ತಾಗಬೇಕಾದರೆ ನೀವು ಅದನ್ನು ಓದಬಹುದು.
ಆ ಕತೆ ನಡೆದದ್ದು ಬಹುಶಃ ಇದೇ ಊರಿನಲ್ಲಿ. ಕಳೆದ ಸಲ ಹೋದಾಗ ಇಲ್ಲಿನ ಸೋಬಾನೆ ಹೇಳುವ ಹೆಂಗಸರಿಬ್ಬರು ‘ವರನಂದಿ’ ಎಂಬ ದೇವತೆಯ ಕಥೆ ಹೇಳಿದ್ದರು. ಈ ಕತೆ ಬಹುಶ: ಮೊಗಲರ ಕಾಲದ್ದು.ಮೊಗಲರ ಅರಸನೊಬ್ಬ ದಕ್ಷಿಣಕ್ಕೆ ದಾಳಿ ಇಟ್ಟವನು ಮೇಲುಕೋಟೆಗೂ ಲಗ್ಗೆ ಹಾಕಿದ್ದ. ಹಾಗೆ ಲಗ್ಗೆ ಹಾಕಿ ಹೋಗುವಾಗ ಅಲ್ಲಿದ್ದ ಚೆಲುವನಾರಾಯಣನ ಸಣ್ಣದೊಂದು ವಿಗ್ರಹಕ್ಕೆ ಮಾರುಹೋಗಿ ಅದನ್ನು ಎತ್ತಿಕೊಂಡು ದೆಹಲಿಗೆ ಹೋದ. ದೆಹಲಿಗೆ ಹೋದವನು ಅದನ್ನು ತನ್ನ ಪುಟ್ಟ ಮಗಳಿಗೆ ಆಡಲು ಬೊಂಬೆ ಎಂದು ಕೊಟ್ಟ. ಅವಳು ಅದರೊಡನೆ ಆಡುತ್ತ ಆಡುತ್ತ ಬೆಳೆದು ದೊಡ್ಡವಳೂ ಆದಳು.
ರಾಮಾನುಜಾಚಾರ್ಯರು ಹಿಮಾಲಯದ ಕಡೆ ಹೊರಟಿದ್ದವರು ಯಾವುದೋ ಕೆಲಸಕ್ಕೆ ದೆಹಲಿಗೆ ಹೋದರು. ದೆಹಲಿಗೆ ಹೋಗಿದ್ದವರು ಅರಸನ ಬಳಿ ಹೋಗಿ ‘ಮಾರಾಯಾ, ನೀನು ಎತ್ತಿಕೊಂಡು ಹೋಗಿರುವುದು ಬೊಂಬೆಯಲ್ಲ. ಅದು ನಮ್ಮ ಚೆಲುವನಾರಾಯಣ. ವಾಪಾಸು ಕೊಡು’ ಎಂದು ಅದನ್ನು ಎತ್ತಿಕೊಂಡು ಬಂದರು. ಹಾಗೆ ಬರುವಾಗ ಆ ರಾಜಕುಮಾರಿ ಬೊಂಬೆಯನ್ನು ಮಲಗಿಸಿ ಸ್ನಾನಕ್ಕೆ ಹೋಗಿದ್ದಳು. ಆಕೆ ಸ್ನಾನ ಮುಗಿಸಿ ವಾಪಾಸು ಬಂದಾಗ ಬೊಂಬೆ ಇಲ್ಲದೆ ಅಳುತ್ತಾ ಕೂತಳಂತೆ. ಯಾಕೆಂದರೆ ಅದು ಈಗ ಬೊಂಬೆಯಾಗಿರದೆ ಅವಳ ಜೀವವೇ ಆಗಿತ್ತು. ಆ ಜೀವವಿಲ್ಲದೆ ತಾನೂ ಬದುಕಲಾರೆ ಎಂದು ಆಕೆ ಅಳುತ್ತಾ ಮೇಲುಕೋಟೆಗೆ ಬಂದು ತಲುಪುವಾಗ ಅಲ್ಲಿ ಚೆಲುವನಾರಾಯಣನ ಪರಿಷೆ ನಡೆಯುತ್ತಿತ್ತು. ಪಲ್ಲಕ್ಕಿಯ ಮೇಲೆ ಮೆರವಣಿಗೆ ಹೋಗುತ್ತಿದ್ದ ಆತನ ಮುಂದೆ ನೆಲದಲ್ಲಿ ಮಲಗಿ ‘ದೊರೆಯೇ ನನ್ನನ್ನೂ ಸೇರಿಸಿಕೋ’ ಎಂದು ಆಕೆ ಮೊರೆಯಿಟ್ಟಳು. ಆದರೆ ಇದು ಚೆಲುವ ನಾರಾಯಣನ ನಿಜವಾದ ಮಡದಿಯರಿಗೆ ಒಂದಿಷ್ಟೂ ಇಷ್ಟವಾಗಲಿಲ್ಲವಂತೆ. ಅವರು ಆಕೆಯನ್ನು ಹತ್ತಿರ ಸೇರಿಸಿಕೊಳ್ಳಲೇ ಇಲ್ಲ. ಇದರಿಂದ ರೋಸಿ ಹೋದ ಆ ಮೊಗಲ್ ರಾಜಕುಮಾರಿ ಬೆಟ್ಟದ ಇನ್ನೊಂದು ಮಗ್ಗುಲಲ್ಲಿ ಚೆಲುವನಾರಾಯಣನ ಗೋಪುರ ಕಾಣುವಲ್ಲಿ ನೆಲೆಸಿ ಗೋಪುರವನ್ನೇ ನೋಡುತ್ತ ನೋಡುತ್ತ ಬಹಳ ಕಾಲದ ನಂತರ ಹಾಗೇ ಅನ್ನ ನೀರಿಲ್ಲದೆ ಅಸು ನೀಗಿದಳಂತೆ.
ಈ ಕಥೆಯನ್ನು ಹೇಳಿದ ಹೆಂಗಸರಿಬ್ಬರು ಇದು ನಿನ್ನೆಯೋ ಮೊನ್ನೆಯೋ ನಡೆದಿದೆ ಎಂಬಂತೆ ಕಣ್ಣೀರು ಒರೆಸಿಕೊಂಡಿದ್ದರು. ‘ಅಲ್ಲ ತಾಯೀ ಇದೇ ರೀತಿ ಯಾವುದೋ ಪರದೇಶದ ಪರಜಾತಿಯ ಹುಡುಗಿಯೊಬ್ಬಳು ನಿಮ್ಮ ಮಗನನ್ನೇ ಇಷ್ಟಪಟ್ಟು ಬಂದರೆ ನೀವು ಆಕೆಗಾಗಿ ಕಣ್ಣೀರು ಹಾಕುತ್ತೀರೋ ಇಲ್ಲಾ ದೊಣ್ಣೆ ಹಿಡಿದುಕೊಂಡು ಓಡಿಸುತ್ತೀರೋ? ಕಥೆ ಹೇಳಿ ಅಳೋದು ಸುಲಭ. ನಿಜವಾಗಿ ನಡೆದಾಗ ಅಳೋದು ಕಷ್ಟ’ ಅಂತ ಹೇಳಿದ್ದೆ. ಅದಕ್ಕೆ ಅವರು ‘ಅಯ್ಯೋ ಸ್ವಾಮೀ ನಂ ಮಗ್ನ ಹತ್ರ ಹೀಗೇ ಯಾರಾದ್ರೂ ಬಂದ್ರೆ ನಿಜವಾದ ಸೊಸೀನ ಓಡ್ಸಿ, ಓಡಿಬಂದೋಳ್ನೇ ಇಟ್ಕೋತೀವಿ. ಪಾಪ ಅವ್ಳಿಗೆ ಯಾರಿದಾರೆ. ಅಷ್ಟು ದೂರದಿಂದ ಎಲ್ಲಾ ಬಿಟ್ಟು ಓಡಿ ಬಂದಿದಾಳೆ. ವರನಂದಿ ಪರಜಾತಿಯವಳಾದರೇನು. ನಾವೂ ಮನೆಯೊಳಗಿಟ್ಟುಕೊಂಡು ಪೂಜೆ ಮಾಡಲ್ವಾ? ಈಗ್ಲೂ ನಾವು ಸೋಮವಾರ ಮನೆಯೊಳಗೆ ಒಗ್ಗರಣೆ ಹಾಕಲ್ಲಾ.ಯಾಕಂದ್ರೆ ವರನಂದಿಗೆ ಸಾಸಿವೆ ವಾಸನೆ ಆಗಾಕಿಲ್ಲ’ ಎಂದಿದ್ದರು.
ಇದಾಗಿ ಇನ್ನೊಮ್ಮೆ ನಿಕುಂಬಿಣಿ ಎಂಬ ಚಂದದ ರಕ್ಕಸಿಯೊಬ್ಬಳನ್ನು ಹುಡುಕಿಕೊಂಡು ಇಲ್ಲಿಗೆ ಹೋಗಿದ್ದೆ. ಈ ಲಕ್ಷ್ಮೀಸಾಗರದ ಮೇಲೆ ತೊಣ್ಣೂರು ಎಂಬ ಬಹಳ ದೊಡ್ಡ ಕೆರೆಯಿದೆ. ಈ ಕೆರೆಯ ದಂಡೆಯ ಮೇಲೆ ಉದ್ದಂಡೆ ರಾಕ್ಷಸಿ ಎಂಬ ರಕ್ಕಸಿಯೊಬ್ಬಳು ವಾಸಿಸುತ್ತಿದ್ದಳಂತೆ. ಆಕೆಯ ತಮ್ಮ ಬೊಮ್ಮ ರಾಕ್ಷಸ. ಇವರಿಬ್ಬರೂ ಸೇರಿ ಈ ಊರಿನ ಮನುಷ್ಯರನ್ನು ದಿನಾ ತಿಂದು ಮುಗಿಸುತ್ತಿದ್ದರಂತೆ. ದಿನಾ ಚಕ್ಕಡಿಯಲ್ಲಿ ಮನುಷ್ಯರನ್ನು ಮಲಗಿಸಿ ಇವರಿಬ್ಬರಿಗೆ ತಿನ್ನಲು ಕಳಿಸಬೇಕಿತ್ತಂತೆ. ಹಾಗೆ ಕಳಿಸಿದ ಮನುಷ್ಯರಲ್ಲಿ ತುಂಬ ಚಂದವಿದ್ದ ಹುಡುಗಿಯೊಬ್ಬಳನ್ನು ಉದ್ದಂಡೆ ರಾಕ್ಷಸಿ ತಿಂದು ಮುಗಿಸದೆ ಸಾಕಿ ಬೆಳಸಿ ಪುಂಡರೀಕಾಕ್ಷಿ ಎಂದು ಹೆಸರಿಟ್ಟಿದ್ದಳಂತೆ. ಆಕೆಯನ್ನು ತನ್ನ ತಮ್ಮ ಬೊಮ್ಮ ರಾಕ್ಷಸನಿಗೆ ಮದುವೆ ಮಾಡಿಸಬೇಕು ಎಂಬುದು ಅವಳ ಆಸೆಯಾಗಿತ್ತಂತೆ.
ಒಂದು ದಿನ ದಾರಾಪುರದ ವೀರಬಲ್ಲಾಳನ ಮಗ ಕರಿಭಂಟ ಆ ದಾರಿಯಲ್ಲಿ ಹೋಗುತ್ತಿದ್ದವನು ಪುಂಡರೀಕಾಕ್ಷಿಯನ್ನು ಕಂಡು ಮೋಹಗೊಂಡನಂತೆ. ಆಕೆಗೂ ರಾಕ್ಷಸರ ಸಹವಾಸ ಬೋರಾಗಿತ್ತಂತೆ. ಅವರಿಬ್ಬರೂ ಬೆಟ್ಟದ ಗುಹೆಯೊಂದರಲ್ಲಿ ಮುದ್ದು ಮಾಡುತ್ತಾ ಮಲಗಿದ್ದರಂತೆ. ಆಗ ಆ ದಾರಿಯಲ್ಲಿ ಮಗಳನ್ನು ಹುಡುಕಿಕೊಂಡು ಬಂದ ಉದ್ದಂಡೆ ರಕ್ಕಸಿಗೆ ಮನುಷ್ಯ ಗಂಡಸಿನ ವಾಸನೆ ಬಡಿದು ಆಕೆ ಆತನನ್ನು ಯೋಜನೆ ದೂರಗಳಷ್ಟು ಅಟ್ಟಾಡಿಸಿ ಹಿಡಿದು ಕೊಂದು ಕೊಯಿದು ಎಂಟು ಪಾಲು ಮಾಡಿ ಏಳೂರ ಜನರಿಗೆ ಹಂಚಿ ಒಂದು ಪಾಲನ್ನು ತಾನೇ ತಿಂದಳಂತೆ. ಆಗ ಪುಂಡರೀಕಾಕ್ಷಿ ಮೇಲುಕೋಟೆ ಬೆಟ್ಟದಲ್ಲಿದ್ದ ಚೆಲುವನಾರಾಯಣನ ಕೇಳಿಕೊಂಡಳಂತೆ. ಆಗ ಚೆಲುವರಾಯ ಏಳೂರವರನ್ನ ಕರೆಸಿ ಆ ಏಳು ಪಾಲುಗಳನ್ನೂ ಒಂದು ಮಾಡಿಸಿ ಕರಿಭಂಟನಿಗೆ ಜೀವಕೊಟ್ಟನಂತೆ. ಜೀವ ಬಂದ ಕರಿಭಂಟನಿಗೆ ಒಂದು ಕಾಲೇ ಇಲ್ಲವಂತೆ.ನೋಡಿದರೆ ಆ ಕಾಲಿದ್ದ ಪಾಲನ್ನು ಉದ್ದಂಡೆ ರಾಕ್ಷಸಿ ಆಗಲೇ ತಿಂದು ಹಾಕಿದ್ದಾಳಲ್ಲಾ! ಆಮೇಲೆ ಚೆಲುವರಾಯ ಉದ್ದಂಡೆಯನ್ನೂ ಹಿಡಿದು ಸಿಗಿದು ಆಕೆಯ ಹೊಟ್ಟೆಯಲ್ಲಿದ್ದ ಕಾಲನ್ನು ತೆಗೆದು ಜೋಡಿಸಿಕೊಟ್ಟು ಕರಿಭಂಟನಿಗೂ ಪುಂಡರೀಕಾಕ್ಷಿಗೂ ಮದುವೆ ಆಯಿತಂತೆ.
Actually ನಾನು ಹುಡುಕಿಕೊಂಡು ಹೋಗಿದ್ದು ಈ ಕೆರೆಯ ಮೇಲಿರುವ ಗುಹೆಯೊಂದರಲ್ಲಿರುವ ನಿಕುಂಬಿಣಿ ಎನ್ನುವ ಇನ್ನೊಬ್ಬಳು ರಕ್ಕಸಿಯನ್ನು. ಆಕೆ ತುಂಬ ಚಂದ ಇದ್ದಳು ಮತ್ತು ಆಕೆ ಈ ಉದ್ದಂಡೆ ರಕ್ಕಸಿಯ ಮನೆದೇವರಾಗಿದ್ದಳು ಎಂದು ಯಾರೋ ಹೇಳಿದ್ದರು. ಆಕೆ ಇದ್ದರೆ ಈಗಲೂ ನೋಡಲು ಆಸೆ ಆಗುವ ಹಾಗೆ ಇರುತ್ತಿದ್ದಳು ಎಂದು ಗೆಳೆಯರೊಬ್ಬರು ಆಕೆಯ ಚಂದವನ್ನು ವರ್ಣಿಸಿದ್ದರು. ನಿಜವಾಗಿಯೂ ಇದ್ದರೆ ನೋಡಿ ಮಾತಾಡಿಸಿಕೊಂಡು ಬರುವಾ ಎಂದು ಹೋಗಿದ್ದೆ. `ಆಕೆ ಈಗ ಇಲ್ಲ. ಆಕೆ ನಿಜವಾಗಿಯೂ ರಕ್ಕಸಿಯಲ್ಲ. ಆಕೆ ಶಕ್ತಿ ಸ್ವರೂಪಿಣಿ ಪಾರ್ವತಿ. ಸುಮ್ಮನೇ ತಲೆಯಿಲ್ಲದವರು ಆಕೆಯನ್ನು ರಕ್ಕಸಿ ರಕ್ಕಸಿ ಎಂದು ಕರೆಯುತ್ತಾರೆ. ಹಾಗೆಯೇ ಬರೆಯುತ್ತಾರೆ. ನೀವೂ ಹಾಗೆ ಬರೆಯಬೇಡಿ. ಪಾರ್ವತಿ ಅಂತಲೇ ಬರೆಯಿರಿ’ ಎಂದು ವಯಸ್ಸಾದ ಹಾಡುಗಾರರೊಬ್ಬರು ಈ ಕುರಿತ ಒಂದು ಹಾಡನ್ನೂ ಹಾಡಿ ನನ್ನನ್ನು ವಾಪಾಸು ಕಳಿಸಿದ್ದರು.
ವಾಪಾಸು ಬರುವಾಗ ಆ ಕೆರೆದಂಡೆಯಲ್ಲಿ ದೂರದ ಮೂರ್ನಾಲ್ಕು ಊರುಗಳವರು ತಮ್ಮ ತಮ್ಮ ಗ್ರಾಮಗಳ ದೇವ ದೇವತೆಯರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬಂದು ಆ ಕೆರೆಯ ನೀರಲ್ಲಿ ಮಕ್ಕಳನ್ನು ಉಜ್ಜಿಉಜ್ಜಿ ತೊಳೆಯುತ್ತಿದ್ದರು. ಲಿಂಗಾಯಿತರ ಕುಲದ ಈರಭದ್ರ ದೇವರು, ದಲಿತರ ಕುಲದ ಪಟ್ಲದಮ್ಮ ದೇವರು, ಈಡಿಗರ ಕುಲದ ಯಲ್ಲಮ್ಮ ದೇವರು ಎಲ್ಲರೂ ಸಾಲಾಗಿ ಕೆರೆಯ ಮೆಟ್ಟಿಲಿನ ಮೇಲೆ ಮಲಗಿಕೊಂಡು ತಮ್ಮ ಭಕ್ತ ಮನುಷ್ಯರ ಕೈಯಿಂದ ಮಜ್ಜನ ಮಾಡಿಸಿಕೊಳ್ಳುತ್ತಿದ್ದರು, ಹುಣಸೆಹುಳಿ, ಲಿಂಬೆಯ ರಸ, ಬೇವಿನ ಕಡ್ಡಿಗಳಿಂದ ತಿಕ್ಕಿಸಿಕೊಂಡು ಹೊಳೆಯುತ್ತಿರುವ ಪುರಾತನ ದೇವದೇವತೆಯರು. ಈ ಕೆರೆ ಈ ಸುತ್ತಲಿನ ಮಾತ್ರವಲ್ಲ ಗಾವುದ ಗಾವುದ ದೂರದ ದೇವಾನುದೇವತೆಗಳ ಪ್ರೀತಿಯ ತಾಣವಂತೆ. ನರಮನುಷ್ಯರೇನಾದರೂ ಸರಿಯಾಗಿ ಪೂಜಿಸದೆ ಅಸಡ್ಡೆ ಮಾಡಿದರೆ ಈ ಗ್ರಾಮದೇವತೆಗಳು ಸಿಟ್ಟಾಗಿ ಕೆರೆಯೊಳಕ್ಕೆ ಅಡಗಿ ಕೂರುವರಂತೆ. ಆಮೇಲೆ ಅವುಗಳನ್ನು ರಮಿಸಿ ಒಲಿಸಿ ವಾಪಾಸು ಊರೊಳಗೆ ಬರಮಾಡಿಕೊಳ್ಳಬೇಕಾದರೆ ಸುಸ್ತಾಗಿ ಬಿಡುತ್ತದಂತೆ. ಪಟ್ಲದಮ್ಮ ದೇವತೆಯನ್ನು ಬ್ರಷ್ಷಿನಿಂದ ತಿಕ್ಕಿ ತೊಳೆಯುತ್ತಿದ್ದ ದಲಿತರ ಹುಡುಗನೊಬ್ಬ ಹೇಳುತ್ತಿದ್ದ. ಕೆರೆ ದಂಡೆಯಲ್ಲಿ ಅವನನ್ನೆ ದೇವತೆಯಂತೆ ನೋಡುತ್ತ ಕುಳಿತಿದ್ದ ಹೆಂಗಸೊಬ್ಬಳು ಇದನ್ನು ಕೇಳಿ ನಗುತ್ತಿದ್ದಳು. ತೊಳೆಯಲು ನನಗೂ ಒಬ್ಬಳು ಚಂದದ ರಕ್ಕಸಿಯಾದರೂ ಇದ್ದಿದ್ದರೆ ಅಂದುಕೊಂಡು ಅಲ್ಲಿಂದ ಬಂದೆ.
(ಫೋಟೋಗಳೂ ಲೇಖಕರವು)
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.
‘ವರನಂದಿ’ ಎಂಬ ದೇವತೆಯ ಕಥೆ PURANNA KATHE TILISI ATAVA BOOK EDRE HELI