ಈಗಿನಂತೆ ಆಗ ಮಕ್ಕಳಿಗೆ ನೋಟ್ ಬುಕ್ಕಿನ ರಾಶಿ ಇರುತ್ತಿರಲಿಲ್ಲ. ಆರು ಪುಸ್ತಕವಿದ್ದರೆ ಆರು ನೋಟ್ಸ್, ಒಂದು ಆಲ್ ರಫ್ ಅಷ್ಟೇ. ಸಮಾಜ ನೋಟ್ಸ್‌ನಲ್ಲಿ ಇರುವ ಪಾಠಕ್ಕನುಗುಣವಾಗಿ ಪೌರನೀತಿ, ಭೂಗೋಳ, ಇತಿಹಾಸ ಎಂದು ಭಾಗ ಮಾಡಿ ಬಳಸಿಕೊಳ್ಳುತ್ತಿದ್ದೆವು. ಆಗ ಫೇಮಸ್ ಆಗಿದ್ದ ರೇನಾಲ್ಡ್ಸ್ ಪೆನ್ನನ್ನು ಪರೀಕ್ಷೆ ಬರೆಯಲು ಮಾತ್ರ ತೆಗೆದುಕೊಳ್ಳುತ್ತಿದ್ದೆನು. ಒಂದೊಮ್ಮೆ ಅದರ ಇಂಕ್ ಮುಗಿದು ಹೋದರೆ ಅದರ ಕಡ್ಡಿಯನ್ನು ಎಸೆಯುತ್ತಿರಲಿಲ್ಲ. ಅದರ ಮೂತಿಯ ಮದ್ದು ತೆಗೆದು ಐವತ್ತು ಪೈಸೆಯ ಕಡ್ಡಿಗೆ ಹಾಕಿಕೊಳ್ಳುತ್ತಿದ್ದೆವು.
ಬಸವನಗೌಡ ಹೆಬ್ಬಳಗೆರೆ ಬರಹ ನಿಮ್ಮ ಓದಿಗೆ
ಯಾವುದನ್ನೂ ನಾವು ನೆಗ್ಲೆಕ್ಟ್ ಮಾಡಬಾರದು. ಕಷ್ಟ ಕಾಲದಲ್ಲಿ ಒಂದು ಹುಲ್ಲುಕಡ್ಡೀನೂ ನೆರವಿಗೆ ಬರುತ್ತೆ ಅಂತಾ ಓದಿದ್ದೆ. ಅದರಲ್ಲೂ ಹಣದ ವಿಷಯದಲ್ಲಿ ತುಂಬಾ ಎಚ್ಚರವಿರಬೇಕು. ಹನಿ ಹನಿಗೂಡಿದರೆ ಹಳ್ಳ, ತೆನೆ ತೆನೆಗೂಡಿದರೆ ಬಳ್ಳ ಎಂಬಂತೆ ಒಂದೊಂದು ರೂಪಾಯಿಯನ್ನು ಕೂಡಿಡಬೇಕು ಎಂದು ಹಲವರು ಹೇಳಿದ್ದನ್ನು ಕೇಳಿದ್ದೇನೆ. ಹಾಗಂತ ಈಗಿನವರಿಗೆ ಹೇಳಿ ನೋಡಿ. ದೊಡ್ಡ ಕೊರೆತದ ಗಿರಾಕಿ, ಮೆದುಳಿಗೇ ಕೈ ಹಾಕ್ತಾನೆ ಎಂದು ವ್ಯಂಗ್ಯ ಮಾಡುತ್ತಾರೆ. ಈಗೀಗ ಭಿಕ್ಷುಕರೂ ಸಹ ಚಿಲ್ಲರೆ ಕೊಟ್ಟರೆ ತೆಗೆದುಕೊಳ್ಳಲಾರದಂತಹ ಸೊಕ್ಕು ತೋರುವುದನ್ನು ನೋಡಿದ್ದೇನೆ.
ಹಿಂದೆ ನಾನು ಓದುವಾಗ ಐದು ಪೈಸೆ, ಹತ್ತು ಪೈಸೆ, ಇಪ್ಪತ್ತು ಪೈಸೆ, ನಾಲ್ಕಾಣೆ(ಇಪ್ಪತ್ತೈದು ಪೈಸೆ) ಎಂಟಾಣೆ(ಐವತ್ತು ಪೈಸೆ) ಒಂದು ರೂಪಾಯಿ ಇದ್ದವು. ಆಗ ಮನೆಗೆ ಬಂದ ನೆಂಟರು ಕೈಲಿ ಚಿಲ್ಲರೆ ಕೊಟ್ಟರೆ ಅದನ್ನು ಒಂದು ಡಬ್ಬಿಯಲ್ಲಿ ಹಾಗೇ ಉಳಿತಾಯ ಮಾಡಿಟ್ಟುಕೊಂಡು ವರ್ಷದ ಆರಂಭದಲ್ಲಿ ಅದನ್ನು ತೆರೆದು ಅದರಲ್ಲಿ ಸಂಗ್ರಹವಾದ ಹಣದಿಂದ ಸ್ಲೇಟು, ಪೆನ್ನು, ನೋಟ್ ಬುಕ್ ಸೆಕೆಂಡ್ ಹ್ಯಾಂಡ್ ಬುಕ್ ಕೊಳ್ಳುತ್ತಿದ್ದೆನು. ಈಗಿನಂತೆ ಸರ್ಕಾರಿ ಶಾಲೆಗಳಲ್ಲಿ ಆಗ ಉಚಿತ ಪಠ್ಯ ಪುಸ್ತಕ ಯೋಜನೆ ಇಲ್ಲದ್ದರಿಂದ ಬಹುತೇಕರು ಹೀಗೆಯೇ ಮಾಡುತ್ತಿದ್ದರು.
ಒಂದು ವರ್ಷ ಬಳಕೆ ಮಾಡಿದ ಪುಸ್ತಕವಾದರೆ ಅರ್ಧ ರೇಟು, ಎರಡು ವರ್ಷ ಬಳಕೆ ಮಾಡಿದ ಪುಸ್ತಕವಾದರೆ ಕಾಲು ರೇಟು ಕೊಟ್ಟು ಪಠ್ಯಪುಸ್ತಕ ಕೊಳ್ಳುತ್ತಿದ್ದೆನು. ನೋಟ್ ಬುಕ್ಕಿನಲ್ಲಿ ಒಂದು ಹಾಳೆಯನ್ನು ವ್ಯರ್ಥ ಮಾಡುತ್ತಿರಲಿಲ್ಲ. ಹಾಳೆಯ ಸೈಡು, ಮೇಲ್ಭಾಗ, ಕೆಳಭಾಗದಲ್ಲೂ ಜಾಗ ಬಿಡುತ್ತಿರಲಿಲ್ಲ. ಈಗಿನಂತೆ ಆಗ ಮಕ್ಕಳಿಗೆ ನೋಟ್ ಬುಕ್ಕಿನ ರಾಶಿ ಇರುತ್ತಿರಲಿಲ್ಲ. ಆರು ಪುಸ್ತಕವಿದ್ದರೆ ಆರು ನೋಟ್ಸ್, ಒಂದು ಆಲ್ ರಫ್ ಅಷ್ಟೇ. ಸಮಾಜ ನೋಟ್ಸ್‌ನಲ್ಲಿ ಇರುವ ಪಾಠಕ್ಕನುಗುಣವಾಗಿ ಪೌರನೀತಿ, ಭೂಗೋಳ, ಇತಿಹಾಸ ಎಂದು ಭಾಗ ಮಾಡಿ ಬಳಸಿಕೊಳ್ಳುತ್ತಿದ್ದೆವು. ಆಗ ಫೇಮಸ್ ಆಗಿದ್ದ ರೇನಾಲ್ಡ್ಸ್ ಪೆನ್ನನ್ನು ಪರೀಕ್ಷೆ ಬರೆಯಲು ಮಾತ್ರ ತೆಗೆದುಕೊಳ್ಳುತ್ತಿದ್ದೆನು. ಒಂದೊಮ್ಮೆ ಅದರ ಇಂಕ್ ಮುಗಿದು ಹೋದರೆ ಅದರ ಕಡ್ಡಿಯನ್ನು ಎಸೆಯುತ್ತಿರಲಿಲ್ಲ. ಅದರ ಮೂತಿಯ ಮದ್ದು ತೆಗೆದು ಐವತ್ತು ಪೈಸೆಯ ಕಡ್ಡಿಗೆ ಹಾಕಿಕೊಳ್ಳುತ್ತಿದ್ದೆವು. ವರ್ಷವಿಡೀ ಬಳಸಿ ಹಾಳೆಗಳು ಇನ್ನೂ ಉಳಿದರೆ ಆ ಎಲ್ಲಾ ಹಾಳೆಗಳನ್ನು ಕಿತ್ತುಕೊಂಡು ದಬ್ಬಳ ದಾರ ತೆಗೆದುಕೊಂಡು ನಾವೇ ಹೊಲಿದುಕೊಂಡು ಮಾರನೇ ವರ್ಷದ ಆಲ್ ರಫ್ ಮಾಡಿಸಿಕೊಳ್ಳುತ್ತಿದ್ದೆನು. ಖಾಲಿ ಕಡ್ಡಿಗಳನ್ನೂ ಎಸೆಯುತ್ತಿರಲಿಲ್ಲ. ಈರಭದ್ರಣ್ಣನ ಅಂಗಡೀಲಿ ಅಂತಹ ಹತ್ತು ಕಡ್ಡಿ ಕೊಟ್ಟರೆ ಒಂದು ಐವತ್ತು ಪೈಸೆಯ ತುಂಬಿದ ಕಡ್ಡಿ ಕೊಡುತ್ತಿದ್ದರು. ಈ ರೀತಿ ಪರಿಸರಕ್ಕೆ ಪೂರಕವಾಗಿ ನಮ್ಮ ನಡೆಯಿತ್ತು.
ವಿಷಯ ಎಲ್ಲೆಲ್ಲೋ ಹೋಯ್ತಲ್ಲ ಅಂತಾ ಅಂದ್ಕೋಬೇಡಿ. ಉಳಿಸಿದ ಒಂದು ರೂಪಾಯಿ ಗಳಿಸಿದ ನೂರು ರೂಪಾಯಿಗೆ ಸಮ ಎಂಬುದನ್ನು ಅಕ್ಷರಶಃ ಅಂದು ಪಾಲಿಸುತ್ತಿದ್ದೆನು. ಆದರೆ ಈಗ ಅಷ್ಟು ಕಟ್ಟುನಿಟ್ಟಾಗಿ ನಾನು ಹಣದ ಬಗ್ಗೆ ಪಾಲಿಸಲು ಆಗುತ್ತಿಲ್ಲ. ನನ್ನ ಮಕ್ಕಳೇ ಈಗ ಹಾಳೆ, ಪೆನ್ನು, ಪೆನ್ಸಿಲ್‌ಗಳನ್ನು ವ್ಯರ್ಥ ಮಾಡೋದು ನೋಡಿದ್ರೆ ಬೇಸರವಾಗುತ್ತೆ. ಕಾಲಾಯ ತಸ್ಮೈ ನಮಃ ಎಂಬಂತೆ ಎಲ್ಲಾ ಕಾಲದ ಮಹಿಮೆ; ಪೈಸೆಗಳೆಲ್ಲಾ ಮೂಲೆ ಸೇರಿವೆ. ಈಗೇನಿದ್ದರೂ ನೋಟಿನ ಯುಗ.
ಒಮ್ಮೆ ದಾವಣಗೆರೆಯಿಂದ ಚಿಕ್ಕಬಳ್ಳಾಪುರಕ್ಕೆ ನಾನು ಹೋಗಬೇಕಾಗಿತ್ತು. ಬಸ್ ಚಾರ್ಜ್ ಬೆಂಗಳೂರಿಗೆ ತಲುಪುವಷ್ಟು ಮಾತ್ರ ಇತ್ತು. ದಾವಣಗೆರೆಯಲ್ಲಿ ಹಣ ಬಿಡಿಸಿಕೊಂಡು ಹೋಗಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಎಟಿಎಂ ಸೆಂಟರ್‌ಗಳು ಇರುತ್ತವೆ. ಅಲ್ಲೇ ಬಿಡಿಸಿಕೊಂಡರಾಯ್ತು ಎಂಬ ಉದಾಸೀನತೆ ತೋರಿ ಬಸ್ಸನ್ನು ಹತ್ತಿದೆ. ಬೆಂಗಳೂರಿಗೆ ಬಂದು ಇಳಿದಾಗ ಬೆಳಗ್ಗೆ ಆರು ಮೂವತ್ತು. ಇಳಿದ ಕೂಡಲೇ ಎಟಿಎಂ ಸೆಂಟರ್ ನತ್ತ ಹಣ ಬಿಡಿಸಲು ಹೋದೆ. ಆದರೆ ಕಾರ್ಡ್ ಸರಿಯಿಲ್ಲ ಎಂದು ತೋರಿಸಿತು. ನಾನು ಬಹುಶಃ ಎಟಿಎಂ ಸರಿಯಿಲ್ಲ ಎಂದುಕೊಂಡು ಮೆಜೆಸ್ಟಿಕ್ಕಿನ ಸುತ್ತಲೂ ಇರುವ ಎಲ್ಲಾ ಎಟಿಎಂ ಕೇಂದ್ರಗಳಲ್ಲೂ ನೋಡಿದೆ. ಇದೇ ರೀತಿ ತೋರಿಸಿದಾಗ ನಾನು ಅಲ್ಲೇ ನಿಂತಿದ್ದ ಒಬ್ಬರ ಬಳಿ ವಿಚಾರಿಸಿದಾಗ ತಿಳಿದದ್ದು ಏನೆಂದರೆ ನನ್ನ ಎಟಿಎಂ ಕಾರ್ಡ್ ಹಿಂದಿನ ಸ್ಕ್ಯಾನರ್ ಹಾಳಾಗಿದೆ ಎಂದು. ಈಗ ಮನಸ್ಸಿಗೆ ಸ್ವಲ್ಪ ಬೇಸರವೆನಿಸಿದರೂ ಹೇಗಿದ್ದರೂ ನನ್ನ ಫ್ರೆಂಡ್ಸ್ ಇದಾರಲ್ಲ ಅವರ ಬಳಿ ಕೇಳಿ ಹಣ ಪಡೆದುಕೊಂಡರಾಯ್ತು ಎಂದು ಕೀಪ್ಯಾಡ್ ಮೊಬೈಲ್ ತೆಗೆದಾಗ ನಿಜವಾಗಲೂ ಬೆಚ್ಚಿ ಬೀಳುವ ಸರದಿ ಈಗ ನನ್ನದಾಗಿತ್ತು. ಏಕೆಂದರೆ ಮೊಬೈಲ್ ಫೋನು ಸ್ವಿಚ್ ಆಫ್ ಆಗಿತ್ತು. ಮೈಂಡ್ ಬ್ಲಾಕ್ ಆದಂಗೆ ಆಯ್ತು. ಅಯ್ಯೋ ದೇವರೆ, ಮುಂದೆ ಏನ್ಮಾಡಬೇಕು ಅಂತಾನೆ ತಿಳೀಲಿಲ್ಲ. ಮನಸ್ಸಲ್ಲಿ ಏನೇನೋ ವಿಚಾರಗಳು ಆಗ ಹಾದು ಹೋದವು. ಯಾರ ಬಳಿಯಾದ್ರೂ ಸಹಾಯ ಕೋರೋಣ ಅಂದ್ರೆ ಬೆಂಗಳೂರಂತಹ ಬೆಂಗಳೂರಲ್ಲಿ ನನ್ನ ಮಾತನ್ನ ನಂಬ್ತಾರ ಅಂತಾ ಅನುಮಾನ ಬಂತು. ತಕ್ಷಣಕ್ಕೆ ಏನು ಮಾಡಬೇಕು ಅಂತಾ ತಿಳಿಯದೆ ನನ್ನ ಬ್ಯಾಗನ್ನು ಸುರುವಿ ಎಲ್ಲಿಯಾದರೂ ಯಾವಾಗಲಾದ್ರೂ ಇಟ್ಟ ಹಣ ಸಿಗಬಹುದೇನೋ ಎಂದು ಆಸೆಗಣ್ಣಿನಿಂದ ಹುಡುಕಿದೆ. ಆದರೆ ಅಷ್ಟು ಹಣ ಸಿಗಲಿಲ್ಲ. ಆದರೆ ಅದೃಷ್ಟ ಎಂಬಂತೆ ಒಂದು ರೂಪಾಯಿ ಸಿಕ್ತು. ಮೊಬೈಲ್ ಬೇರೆ ಸ್ವಿಚ್ ಆಫ್ ಆಗಿದ್ರಿಂದ ಈ ಒಂದು ರೂಪಾಯಿ ಇಟ್ಕೊಂಡು ಏನು ಮಾಡಬೇಕು ಎಂದು ಯೋಚನೆ ಮಾಡತೊಡಗಿದೆ. ಮಹಾಭಾರತದ ಪ್ರಸಂಗವೊಂದರಲ್ಲಿ ಪಾಂಡವರು ವನವಾಸದಲ್ಲಿದ್ದಾಗ ಅವರ ಮನೆಗೆ ಋಷಿಮುನಿಗಳು ಊಟಕ್ಕೆ ಬರುತ್ತೇವೆಂದಾಗ ದ್ರೌಪದಿಯು ಕೃಷ್ಣನಿಗೆ ಮಡಕೆಯಲ್ಲಿ ಒಂದೇ ಒಂದು ಅಗುಳು ಅನ್ನ ಇರುವುದನ್ನು ತೋರಿಸಿ ದುಃಖ ವ್ಯಕ್ತಪಡಿಸಿದಾಗ ಕೃಷ್ಣ ಪರಮಾತ್ಮನು ಅದನ್ನು ತಿಂದು ಋಷಿಮುನಿಗಳ ಹೊಟ್ಟೆ ತುಂಬುವಂತೆ ಮಾಡಿದ ಕಥೆ ನೆನಪಿಗೆ ಬಂದು ಸಿಕ್ಕ ಈ ಒಂದು ರೂಪಾಯಿಯನ್ನು ಹೇಗೆ ಉಪಯೋಗ ಮಾಡ್ಕೋಬೇಕು ಅಂತಾ ಚಿಂತನೆ ಮಾಡ್ತಿದ್ದಾಗಲೇ ಹೊಳೆದದ್ದು ಈ ಐಡಿಯಾ.
ತಕ್ಷಣ ಮೆಜೆಸ್ಟಿಕ್ಕಿನ ಕಾಯಿನ್ ಬೂತ್ ಹತ್ರ ಹೋದೆ. ಆಗ ಅವು ಹೆಚ್ಚು ಬಳಕೆಯಲ್ಲಿದ್ದವು. ಯಾವಾಗ್ಲೋ ಬಾಯಿಪಾಠ ಆಗಿದ್ದ ಬೆಂಗಳೂರಲ್ಲಿದ್ದ ನಾಗರಾಜನ ಮೊಬೈಲ್ ನಂಬರನ್ನು ಡಯಲ್ ಮಾಡಿದೆ. ನನ್ನ ಅದೃಷ್ಟಕ್ಕೆ ರಿಂಗ್ ಆಗಿ ಅವನು ಕಾಲ್ ರಿಸೀವ್ ಮಾಡಿದ. ಅರವತ್ತು ಸೆಕೆಂಡ್ ಮಾತ್ರ ಮಾತಾಡೋಕೆ ಅವಕಾಶ ಇದ್ದ ಕಾರಣ ಕಾಲ್ ರಿಸೀವ್ ಆದ ಕೂಡಲೇ ತಕ್ಷಣ ನಾನೇ ಒಂದೇ ಉಸಿರಿನಲ್ಲಿ “ನಾನು ಮೆಜೆಸ್ಟಿಕ್ಕಿನ ಐದನೇ ಪ್ಲಾಟ್ ಫಾರಂನಲ್ಲಿ ಇದ್ದೇನೆ. ಬಸ್ ಚಾರ್ಜ್‌ಗೆ ಕಾಸಿಲ್ಲ. ಬಂದು ಕೊಟ್ಟು ಹೋಗು ಪ್ಲೀಸ್ ಅಂದೆ. ತಕ್ಷಣ ಅವನು ಓಕೆ ಅನ್ನುವಷ್ಟರಲ್ಲಿ ಕರೆ ಕಟ್ ಆಯ್ತು. ನಾನು ಅವನ ಬರುವಿಕೆಯ ನಿರೀಕ್ಷೆಯಲ್ಲಿ ಅಲ್ಲೇ ಕಾದು ಕುಳಿತೆ. ಅದಾದ ಒಂದರ್ಧ ಘಂಟೆಯೊಳಗೆ ನಾಗರಾಜ ಬಂದು ಹಣ ಕೊಟ್ಟ. ಚಿಕ್ಕಬಳ್ಳಾಪುರಕ್ಕೆ ಹೋಗಲು ನೂರು ರೂಪಾಯಿ ಮಾತ್ರ ಅವನಿಂದ ತೆಗೆದುಕೊಂಡು ನಾನು ನನ್ನ ಗಮ್ಯ ತಲುಪಿದೆ. ಇಂದಿಗೂ ಸಹ ಯಾವುದಾದರೂ ಊರಿಗೆ ಹೋಗಬೇಕಾದಾಗ ಹಣ ಇಟ್ಟುಕೊಂಡು ಹೋಗಬೇಕು ಎಂಬ ಪಾಠ ಕಲಿಸಿದ ಆ ಘಟನೆ ನೆನಪಾಗುತ್ತದೆ. ನಾಗರಾಜನ ಸಹಾಯ ಗುಣ ನೆನೆದು ಅವನ ಬಗ್ಗೆ ಗೌರವ ಇಮ್ಮಡಿಯಾಗುವಂತೆ ಮಾಡುತ್ತದೆ. ಕಷ್ಟ ಕಾಲದಲ್ಲಿ ಒಂದು ರೂಪಾಯಿಯೂ ಸಹಾಯಕ್ಕೆ ಬರಬಹುದು ಎಂಬ ಪಾಠ ಕಲಿತೆ.
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
Super sir…. Really ನಿಮ್ಮ ಬರವಣಿಗೆ ಎಲ್ಲೋ ನಮ್ಮ ಜೀವನಕ್ಕೆ relate ಆಗುತ್ತೆ… ಸರಳ ಪದಗಳ ಬಳಕೆ ನಮ್ಮ ಮಾತುಗಳೇ ಅನಿಸುತ್ತದೆ… A Big fan of your writings…
ಸರಳ ಭಾಷೆ ಸುಂದರ ಬಾಲ್ಯ ಕೊನೆಗೊಂದು ಹಿತನುಡಿ