ಕೆಲವು ವರ್ಷಗಳ ಹಿಂದೆ ಭಾರತ ಪಾಕಿಸ್ತಾನ ಪಂದ್ಯವೆಂದರೆ ಥೇಟ್ ಯುದ್ಧದ ರೀತಿ ಇರುತ್ತಿತ್ತು. ಅಂದಿನ ಆಟಗಾರರು ಪಾಕಿಸ್ತಾನದ ವಿರುದ್ಧ ಆಡುವಾಗ ಆವೇಶಭರಿತರಾಗಿ ಎದುರಾಳಿಗಳನ್ನು ಹುರಿದು ಮುಕ್ಕುವ ರೀತಿ ಆಡುತ್ತಿದ್ದರು. ಆದರೆ ಈಗಿನ ಆಟಗಾರರು ಪಾಕಿಸ್ತಾನದ ವಿರುದ್ಧ ಆಡುತ್ತಿದ್ದೇವೆ ಎನ್ನುವ ಪರಿವೆಯೇ ಇಲ್ಲದೆ ನಗಾಡಿಕೊಂಡು ಚಡ್ಡಿದೋಸ್ತಿಗಳ ಜೊತೆ ಆಡುವಂತೆ ವರ್ತಿಸುತ್ತಾರೆ ಎಂದು ಗೆಳೆಯ ಹೇಳಿದ. ಇತ್ತೀಚಿನ ವರ್ಷಗಳಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳನ್ನು ಗಮನಿಸಿದಾಗ ಈ ಮಾತು ಸತ್ಯ ಎನಿಸಿತು. ಕೆಲವು ಮಾಧ್ಯಮಗಳಲ್ಲಿ ಬಿಂಬಿಸುವಂತೆ ಕ್ರೀಡೆಯನ್ನು ಯುದ್ಧವೆಂದು ನೋಡುವ ಬದಲು ದೇಶಗಳನ್ನು ಹಾಗೂ ಮನಸುಗಳನ್ನು ಬೆಸೆಯುವ ಸಾಧನದಂತೆ ನೋಡಿದರೆ ಎಷ್ಟು ಚೆಂದ ಅಲ್ಲವೇ?
ಕ್ರಿಕೆಟ್ ವಿಶ್ವಕಪ್ ಕುರಿತ ವೆಂಕಟೇಶ್ ಬಿ.ಎಂ. ಬರಹ ನಿಮ್ಮ ಓದಿಗೆ
ಇತ್ತೀಚಿಗೆ ಗೆಳೆಯನ ಜೊತೆ ಕ್ರಿಕೆಟ್ ಕುರಿತು ಚರ್ಚಿಸುತ್ತಿದ್ದೆ. ಹರಟೆಯ ನಡುವೆ ಗೆಳೆಯ ಹೇಳಿದ ಒಂದು ವಿಷಯ ನನ್ನ ಗಮನ ಸೆಳೆಯಿತು. ಕೆಲವು ವರ್ಷಗಳ ಹಿಂದೆ ಭಾರತ ಪಾಕಿಸ್ತಾನ ಪಂದ್ಯವೆಂದರೆ ಥೇಟ್ ಯುದ್ಧದ ರೀತಿ ಇರುತ್ತಿತ್ತು. ಅಂದಿನ ಆಟಗಾರರು ಪಾಕಿಸ್ತಾನದ ವಿರುದ್ಧ ಆಡುವಾಗ ಆವೇಶಭರಿತರಾಗಿ ಎದುರಾಳಿಗಳನ್ನು ಹುರಿದು ಮುಕ್ಕುವ ರೀತಿ ಆಡುತ್ತಿದ್ದರು. ಆದರೆ ಈಗಿನ ಆಟಗಾರರು ಪಾಕಿಸ್ತಾನದ ವಿರುದ್ಧ ಆಡುತ್ತಿದ್ದೇವೆ ಎನ್ನುವ ಪರಿವೆಯೇ ಇಲ್ಲದೆ ನಗಾಡಿಕೊಂಡು ಚಡ್ಡಿದೋಸ್ತಿಗಳ ಜೊತೆ ಆಡುವಂತೆ ವರ್ತಿಸುತ್ತಾರೆ ಎಂದು ಗೆಳೆಯ ಹೇಳಿದ. ಇತ್ತೀಚಿನ ವರ್ಷಗಳಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳನ್ನು ಗಮನಿಸಿದಾಗ ಈ ಮಾತು ಸತ್ಯ ಎನಿಸಿತು. ಕೆಲವು ಮಾಧ್ಯಮಗಳಲ್ಲಿ ಬಿಂಬಿಸುವಂತೆ ಕ್ರೀಡೆಯನ್ನು ಯುದ್ಧವೆಂದು ನೋಡುವ ಬದಲು ದೇಶಗಳನ್ನು ಹಾಗೂ ಮನಸುಗಳನ್ನು ಬೆಸೆಯುವ ಸಾಧನದಂತೆ ನೋಡಿದರೆ ಎಷ್ಟು ಚೆಂದ ಅಲ್ಲವೇ? ಏಕದಿನ ವಿಶ್ವಕಪ್ ಆರಂಭವಾಗಿದೆ. ಈ ಬಾರಿಯ ವಿಶ್ವಕಪ್ ನಡೆಯುತ್ತಿರುವುದು ಭಾರತದಲ್ಲಿ. ಕಳೆದ ಮೂರು ಬಾರಿ ಏಕದಿನ ವಿಶ್ವಕಪ್ ಗೆದ್ದಿರುವುದು ಟೂರ್ನಿಗೆ ಆತಿಥ್ಯ ವಹಿಸಿದ್ದ ದೇಶಗಳೇ. ಹೀಗಾಗಿ ಈ ಬಾರಿ ಭಾರತ ವಿಶ್ವಕಪ್ ಗೆಲ್ಲಬಹುದು ಎನ್ನುವ ಆಶಯ ಹಾಗೂ ಗೆಲ್ಲಲಿ ಎನ್ನುವ ಹಂಬಲ ಪ್ರತಿ ಭಾರತೀಯ ಕ್ರಿಕೆಟ್ ಪ್ರೇಮಿಯಲ್ಲಿಯೂ ಇದೆ.
ಇತ್ತೀಚಿನ ದಿನಗಳಲ್ಲಿ ಏಕದಿನ ಮಾದರಿಯ ಕ್ರಿಕೆಟ್ ಹೆಚ್ಚು ದಿನ ಉಳಿಯುವುದಿಲ್ಲ ಎನ್ನುವ ಮಾತು ಪದೇ ಪದೇ ಕೇಳಿಬರುತ್ತಿದೆ. ಈ ಮಾತನ್ನು ಕೆಲವು ಮಾಜಿ ಆಟಗಾರರೇ ಹೇಳುತ್ತಿದ್ದಾರೆ. ಪ್ರತಿ ವರ್ಷ ಎರಡು ತಿಂಗಳಿಗೂ ಹೆಚ್ಚು ಕಾಲ ನಡೆಯುವ ಐ.ಪಿ.ಎಲ್. ಅಬ್ಬರದ ನಡುವೆ ಏಕದಿನ ಮಾದರಿಯ ಕ್ರಿಕೆಟ್ ಮಹತ್ವ ಕಳೆದುಕೊಳ್ಳಬಹುದು ಎನ್ನುವ ಆತಂಕ ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿರುವುದು ಸುಳ್ಳಲ್ಲ. ಇಂತಹ ಸನ್ನಿವೇಶದಲ್ಲಿ ಭಾರತದಲ್ಲಿಯೇ ಏಕದಿನ ಮಾದರಿಯ ವಿಶ್ವಕಪ್ ನಡೆಯುತ್ತಿರುವುದು ಕುತೂಹಲ ಕೆರಳಿಸಿದೆ.
ತೊಂಬತ್ತರ ದಶಕದಲ್ಲಿ ಕ್ರಿಕೆಟ್ ನೋಡಲು ಆರಂಭಿಸಿದ ಕ್ರಿಕೆಟ್ ಪ್ರೇಮಿಗಳಿಗೆ ಏಕದಿನ ಮಾದರಿಯ ಮಹತ್ವ ಹಾಗೂ ಅದರ ರೋಚಕತೆಯ ಅರಿವಿರುತ್ತದೆ. ಟಿ.ಟ್ವೆಂಟಿ ಮಾದರಿಯ ಕ್ರಿಕೆಟ್ ಹಾಗೂ ಐ.ಪಿ.ಎಲ್. ಆರಂಭವಾದ ನಂತರ ಕ್ರಿಕೆಟ್ ನೋಡಲು ಆರಂಭಿಸಿದವರಿಗೆ ದಿನವಿಡೀ ನಡೆಯುವ ಏಕದಿನ ಪಂದ್ಯ ಬೇಸರ ಎನ್ನಿಸಬಹುದು. ಆದರೆ ಯಾವುದೇ ಒಂದು ತಂಡ ನೀರಸವಾಗಿ ಆಡಿದರೆ ಟಿ.ಟ್ವೆಂಟಿ ಮಾದರಿಯ ಪಂದ್ಯ ಕೂಡ ಬೇಸರ ಎನ್ನಿಸಬಹುದು ಎಂಬುದನ್ನು ಏಕದಿನ ಮಾದರಿಯನ್ನು ದೂಷಿಸುವವರು ಅರ್ಥಮಾಡಿಕೊಳ್ಳಬೇಕು. ಈ ಬಾರಿಯ ಏಕದಿನ ವಿಶ್ವಕಪ್ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ. ಭಾರತದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಅಶ್ವಿನ್ ಸೇರಿದಂತೆ ಹಲವು ದೇಶಗಳ ಹಿರಿಯ ಆಟಗಾರರಿಗೆ ಇದು ಬಹುತೇಕ ಕಡೆಯ ಏಕದಿನ ವಿಶ್ವಕಪ್. ಹೀಗಾಗಿ ಇವರಿಗೆ ಗೆಲುವಿನ ಬೀಳ್ಕೊಡುಗೆ ನೀಡಲು ಆಯಾ ತಂಡಗಳ ಆಟಗಾರರು ಕಾತರರಾಗಿರುತ್ತಾರೆ. ಜೊತೆಗೆ ತಮ್ಮ ನೆಚ್ಚಿನ ಆಟಗಾರರು ಕೊನೆಯ ವಿಶ್ವಕಪ್ ಗೆಲ್ಲಲಿ ಎನ್ನುವ ಅಭಿಮಾನಿಗಳ ಹಾರೈಕೆ ಈ ಬಾರಿ ತುಸು ಹೆಚ್ಚೇ ಇದೆ.
ಮೊದಲ ಎರಡು ಏಕದಿನ ವಿಶ್ವಕಪ್ ಗೆದ್ದು ಕ್ರಿಕೆಟ್ ಜಗತ್ತಿನ ದೊರೆಗಳು ಎನ್ನಿಸಿಕೊಂಡಿದ್ದ ವೆಸ್ಟ್ ಇಂಡೀಸ್ ತಂಡ ಈ ಬಾರಿ ವಿಶ್ವಕಪ್ ಆಡುವ ಆರ್ಹತೆ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಶ್ರೀಮಂತ ಕ್ರಿಕೆಟ್ ಪರಂಪರೆಯುಳ್ಳ ಹಾಗೂ ಹಲವು ಸ್ಮರಣೀಯ ಆಟಗಾರರನ್ನು ಕ್ರಿಕೆಟ್ ಜಗತ್ತಿಗೆ ನೀಡಿದ ತಂಡವೊಂದು ವಿಶ್ವಕಪ್ ಆಡುವ ಅರ್ಹತೆಯನ್ನೇ ಕಳೆದುಕೊಂಡಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶೆ ಉಂಟುಮಾಡಿದೆ. ಕಳೆದ ಹಲವು ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡ ಟಿ.ಟ್ವೆಂಟಿ ಮಾದರಿಯ ಲೀಗ್ ಕ್ರಿಕೆಟ್ ಮೇಲೆ ಅತಿಯಾದ ಗಮನ ಕೇಂದ್ರೀಕರಿಸಿ ಏಕದಿನ ಹಾಗೂ ಟೆಸ್ಟ್ ಮಾದರಿಗಳನ್ನು ನಿರ್ಲಕ್ಷಿಸಿರುವುದು ಸುಸ್ಪಷ್ಟವಾಗಿದೆ. ಇದರ ಪರಿಣಾಮವನ್ನು ವೆಸ್ಟ್ ಇಂಡೀಸ್ ತಂಡ ಅನುಭವಿಸಿದೆ.
ಅರ್ಹತಾ ಟೂರ್ನಿಯಲ್ಲಿ ಸೋಲನುಭವಿಸಿ ವಿಶ್ವಕಪ್ ಆಡುವ ಅರ್ಹತೆ ಕಳೆದುಕೊಂಡ ನಂತರ ವೆಸ್ಟ್ ಇಂಡೀಸ್ ತಂಡದ ಆಟಗಾರರು, ಕೋಚ್ ಹಾಗೂ ಅಭಿಮಾನಿಗಳು ಹಾಕಿದ ಕಣ್ಣೀರು ಆ ತಂಡದ ಅವನತಿಯನ್ನು ಸಾರಿತು. ಇನ್ನು ಮುಂದಾದರೂ ಕ್ರೀಡಾ ಚಟುವಟಿಕೆಯಲ್ಲಿ ರಾಜಕೀಯ ಬೆರೆಸುವುದು, ಭ್ರಷ್ಟಾಚಾರ, ಕ್ರಿಕೆಟ್ ಸಂಸ್ಥೆ ಹಾಗೂ ಆಟಗಾರರ ನಡುವಿನ ಸಂಘರ್ಷ ಮುಂತಾದ ಕೆಡುಕುಗಳನ್ನು ನಿವಾರಿಸಿ ಗತವೈಭವವನ್ನು ಮರಳಿ ಸಾಧಿಸಲು ವೆಸ್ಟ್ ಇಂಡೀಸ್ ತಂಡಕ್ಕೆ ಸಾಧ್ಯವಾಗುವುದೇ ಎಂಬುದನ್ನು ಕಾದು ನೋಡಬೇಕು.
ಒಂದು ಕಾಲದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಹಾಗೂ ಹೋರಾಟದ ಮನೋಭಾವಕ್ಕೆ ಹೆಸರುವಾಸಿಯಾಗಿದ್ದ ಜಿಂಬಾಬ್ವೆ ತಂಡ ಕೂಡ ಈ ಬಾರಿಯ ವಿಶ್ವಕಪ್ ಆಡುತ್ತಿಲ್ಲ. ದೇಶದಲ್ಲಿನ ರಾಜಕೀಯ ಅಸ್ಥಿರತೆ ಹಾಗೂ ಕ್ರಿಕೆಟ್ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪಗಳು ಜಿಂಬಾಬ್ವೆ ಕ್ರಿಕೆಟ್ಟನ್ನು ಹೇಳಹೆಸರಿಲ್ಲದಂತೆ ಮಾಡಿದೆ. ತೊಂಬತ್ತರ ದಶಕದಲ್ಲಿ ಹಾಗೂ ಈ ಸಹಸ್ರಮಾನದ ಆದಿಭಾಗದಲ್ಲಿ ಕ್ರಿಕೆಟ್ ನೋಡುತ್ತಿದ್ದವರಿಗೆ ಜಿಂಬಾಬ್ವೆ ತಂಡದ ಅಂದಿನ ಹೋರಾಟದ ಮನೋಭಾವ ಚೆನ್ನಾಗಿ ನೆನಪಿರುತ್ತದೆ. ಜೊತೆಗೆ ಆ ತಂಡದ ಇಂದಿನ ಗತಿ ವಿಷಾದವನ್ನೂ ಮೂಡಿಸುತ್ತದೆ.
ಕ್ರಿಕೆಟ್ ಜಗತ್ತಿನಲ್ಲಿ ಅಷ್ಟಾಗಿ ಸಾಧನೆ ಮಾಡಿಲ್ಲದ ನೆದರ್ಲೆಂಡ್ಸ್ ಹಾಗೂ ಅಫ್ಘಾನಿಸ್ತಾನ ತಂಡಗಳು ಈ ಬಾರಿಯ ವಿಶ್ವಕಪ್ ಆಡುತ್ತಿವೆ. ಇದು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ತುಸು ನೆಮ್ಮದಿಯ ಸಂಗತಿ. ಇಂತಹ ತಂಡಗಳು ಉತ್ತಮ ತಂಡಗಳ ಎದುರು ಆಡುವುದರಿಂದ ಅವರ ಆಟವೂ ಸುಧಾರಿಸುತ್ತದೆ. ಜೊತೆಗೆ ಹೆಚ್ಚು ತಂಡಗಳು ಸ್ಪರ್ಧಾತ್ಮಕ ರೀತಿಯಲ್ಲಿ ಆಡಿದರೆ ಆಟದ ಕುತೂಹಲವೂ ಹೆಚ್ಚಿ ಕ್ರಿಕೆಟ್ ಬೆಳವಣಿಗೆಗೂ ಸಹಕಾರಿಯಾಗುತ್ತದೆ.
ಈ ಬಾರಿಯ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿರುವುದರಿಂದ ಭಾರತ ಟ್ರೋಫಿ ಗೆಲ್ಲಬಹುದು ಎನ್ನುವ ನಿರೀಕ್ಷೆ ಬಲವಾಗಿದೆ. ಸ್ವದೇಶದ ಪಿಚ್ ಹಾಗೂ ಸ್ವದೇಶದಲ್ಲಿ ಆಡುವ ಅನುಕೂಲತೆ ಭಾರತಕ್ಕೆ ಸಹಕಾರಿ ಆಗುವುದರಲ್ಲಿ ಅನುಮಾನವಿಲ್ಲ. ಆದರೆ ಇದೊಂದೇ ಕಪ್ ಗೆಲ್ಲಲು ಸಾಕಾಗುವುದಿಲ್ಲ ಎನ್ನುವುದು ಸ್ಪಷ್ಟ. ಮುಂದಿನ ಒಂದೂವರೆ ತಿಂಗಳಲ್ಲಿ ಒತ್ತಡವನ್ನು ಮೆಟ್ಟಿ ನಿಂತು ಅತ್ಯುತ್ತಮ ಕ್ರಿಕೆಟ್ ಆಡುವ ತಂಡ ಕಪ್ ಗೆಲ್ಲುತ್ತದೆ.
ಈ ಬಾರಿಯ ಏಕದಿನ ವಿಶ್ವಕಪ್ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ. ಭಾರತದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಅಶ್ವಿನ್ ಸೇರಿದಂತೆ ಹಲವು ದೇಶಗಳ ಹಿರಿಯ ಆಟಗಾರರಿಗೆ ಇದು ಬಹುತೇಕ ಕಡೆಯ ಏಕದಿನ ವಿಶ್ವಕಪ್. ಹೀಗಾಗಿ ಇವರಿಗೆ ಗೆಲುವಿನ ಬೀಳ್ಕೊಡುಗೆ ನೀಡಲು ಆಯಾ ತಂಡಗಳ ಆಟಗಾರರು ಕಾತರರಾಗಿರುತ್ತಾರೆ. ಜೊತೆಗೆ ತಮ್ಮ ನೆಚ್ಚಿನ ಆಟಗಾರರು ಕೊನೆಯ ವಿಶ್ವಕಪ್ ಗೆಲ್ಲಲಿ ಎನ್ನುವ ಅಭಿಮಾನಿಗಳ ಹಾರೈಕೆ ಈ ಬಾರಿ ತುಸು ಹೆಚ್ಚೇ ಇದೆ.
ಅತಿ ಹೆಚ್ಚು ಬಾರಿ ಏಕದಿನ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ತಂಡ ಯಾವುದೇ ಪಿಚ್ ಹಾಗೂ ಸನ್ನಿವೇಶಗಳಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಏಷ್ಯಾದ ಕ್ರಿಕೆಟ್ ಶಕ್ತಿಗಳಾದ ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿವೆ. ಇನ್ನು ಕಳೆದ ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ನರಾದ ಇಂಗ್ಲೆಂಡ್ ತಂಡ ಬಲಿಷ್ಟವಾಗಿದೆ. ಪ್ರತಿ ವಿಶ್ವಕಪ್ ಟೂರ್ನಿಗಳಲ್ಲಿ ಸದಾ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುತ್ತಲೇ ಬಂದು ದುರದೃಷ್ಟಕರ ತಂಡಗಳು ಎನ್ನುವ ಹಣೆಪಟ್ಟಿಯನ್ನು ಹೊತ್ತಿಕೊಂಡಿರುವ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲ್ಯಾಂಡ್ ತಂಡಗಳು ಈ ಬಾರಿಯಾದರೂ ಟ್ರೋಫಿ ಗೆಲ್ಲುವ ಛಲ ಇಟ್ಟುಕೊಂಡೇ ಭಾರತಕ್ಕೆ ಬಂದಿಳಿದಿವೆ. ಮೊದಲೇ ಹೇಳಿದಂತೆ ನೆದರ್ಲೆಂಡ್ಸ್ ಹಾಗೂ ಅಫ್ಘಾನಿಸ್ತಾನ ತಂಡಗಳಿಗೆ ಅತ್ಯುತ್ತಮ ತಂಡಗಳ ಎದುರು ಸೆಣಸಿ ತಮ್ಮ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳಲು ಈ ವಿಶ್ವಕಪ್ ಉತ್ತಮ ಅವಕಾಶ. ಜೊತೆಗೆ ಬಲಾಢ್ಯ ತಂಡಗಳ ಎದುರು ಗೆದ್ದು ಅಚ್ಚರಿಯ ಫಲಿತಾಂಶ ನೀಡುವ ಛಲವೂ ಈ ತಂಡಗಳಿಗೆ ಇರುವುದು ನಿಜ. ಹಿಂದಿನ ವಿಶ್ವಕಪ್ಪುಗಳಲ್ಲಿ ದುರ್ಬಲ ಎನ್ನಿಸಿಕೊಂಡಿದ್ದ ತಂಡಗಳು ಬಲಾಢ್ಯ ತಂಡಗಳನ್ನು ಸೋಲಿಸಿ ಟೂರ್ನಿಯ ಗತಿಯನ್ನೇ ಬದಲಿಸಿದ ಉದಾಹರಣೆಗಳಿವೆ.
ವಿಶ್ವಕಪ್ ಆಡಲು ಭಾರತಕ್ಕೆ ಆಗಮಿಸಿದ ಪಾಕಿಸ್ತಾನದ ಆಟಗಾರರಿಗೆ ಇತ್ತೀಚಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ತಮಗೆ ದೊರೆತ ಆತಿಥ್ಯದ ಕುರಿತು ಪಾಕಿಸ್ತಾನದ ಕೆಲವು ಆಟಗಾರರು ಸಂತಸ ವ್ಯಕ್ತಪಡಿಸಿ ತಾವು ಪಾಕಿಸ್ತಾನದಲ್ಲಿಯೇ ಇದ್ದೇವೆ ಎನ್ನಿಸುತ್ತಿದೆ ಎಂದರು. ಸದಾ ಪರಸ್ಪರ ಅಪನಂಬಿಕೆ, ದ್ವೇಷ ಮುಂತಾದ ಕಹಿ ಭಾವನೆಗಳೇ ತುಂಬಿರುವ ಎರಡು ದೇಶಗಳು ಕ್ರೀಡೆಯ ಮೂಲಕ ಸ್ವಲ್ಪ ದಿನಗಳ ಮಟ್ಟಿಗಾದರೂ ಒಂದಾಗುವಂತಿದ್ದರೆ ಅದು ಸ್ವಾಗತಾರ್ಹವೇ ಅಲ್ಲವೇ? ಕ್ರೀಡೆಯನ್ನು ಯುದ್ಧದ ರೀತಿ ಕಂಡು ವಿಷಮಯ ವಾತಾವರಣವನ್ನು ನಿರ್ಮಿಸುವ ಬದಲು ಹೋರಾಟದ ಮನೋಭಾವದ ಜೊತೆಗೆ ಸೌಹಾರ್ದತೆಯ ಕ್ರೀಡಾ ಮನೋಭಾವ ಮೆರೆಯುವುದು ಕ್ರೀಡೆಗೆ ತೋರುವ ಗೌರವ.
ಸಾಮಾನ್ಯವಾಗಿ ಕ್ರಿಕೆಟ್ ನೋಡದವರೂ ಕೂಡ ವಿಶ್ವಕಪ್ ಪಂದ್ಯಗಳನ್ನು ನೋಡುತ್ತೇವೆ ಎಂದು ಹೇಳುವುದನ್ನು ಕೇಳಿಸಿಕೊಂಡಿದ್ದೇವೆ. ಅಷ್ಟರ ಮಟ್ಟಿಗೆ ವಿಶ್ವಕಪ್ ತನ್ನ ಮಹತ್ವ ಉಳಿಸಿಕೊಂಡಿದೆ. ಏಕದಿನ ವಿಶ್ವಕಪ್ ಇತಿಹಾಸವನ್ನು ಒಮ್ಮೆ ಕೆದಕಿದರೆ ಭಾರತಕ್ಕೆ ಸಿಹಿ ಹಾಗೂ ಕಹಿಗಳ ಪಾಲಿರುವುದು ಕಾಣುತ್ತದೆ. 1983ರ ಅಭೂತಪೂರ್ವ ಗೆಲುವಿನ ನಂತರ ಹಲವು ವಿಶ್ವಕಪ್ಪುಗಳಲ್ಲಿ ಭಾರತ ನಿರಾಶೆ ಅನುಭವಿಸಿತು. 2003ರ ಏಕದಿನ ವಿಶ್ವಕಪ್ ಫೈನಲ್ ತಕ್ಷಣ ನೆನಪಿಗೆ ಬರುತ್ತದೆ!
ಟೂರ್ನಿಯುದ್ದಕ್ಕೂ ಅದ್ಭುತವಾಗಿ ಆಡಿದ್ದ ಭಾರತವನ್ನು ಫೈನಲ್ಲಿನಲ್ಲಿ ರಿಕಿ ಪಾಂಟಿಂಗ್ ಇನ್ನಿಲ್ಲದಂತೆ ಕಾಡಿದರು. ಅಂದು ಅನುಭವಿಸಿದ್ದ ನಿರಾಶೆಯನ್ನು ಭಾರತದ ಕ್ರಿಕೆಟ್ ಪ್ರೇಮಿಗಳು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. 2007ರ ಏಕದಿನ ವಿಶ್ವಕಪ್ ಭಾರತಕ್ಕೆ ಒಂದು ದ್ನಃಸ್ವಪ್ನ. ಲೀಗ್ ಹಂತದಲ್ಲೇ ನಿರ್ಗಮಿಸಿ ಭಾರತ ಅಪಾರ ನಿರಾಸೆ ಅನುಭವಿಸಿತ್ತು. ನಂತರ ಎಲ್ಲಾ ನಿರಾಶೆಗಳನ್ನೂ ಮರೆಸುವಂತೆ 2011ರ ವಿಶ್ವಕಪ್ ಭಾರತಕ್ಕೆ ಸಿಹಿನೆನಪಿನ ರಾಶಿಯನ್ನೇ ತಂದುಕೊಟ್ಟಿತು. ಫೈನಲ್ ಗೆದ್ದ ಆ ದಿನ ಇಡೀ ದೇಶವೇ ಮೈಮರೆತು ಸಂಭ್ರಮಿಸಿತು. ನಂತರದ ಎರಡು ವಿಶ್ವಕಪ್ ಭಾರತದ ಪಾಲಿಗೆ ಅಷ್ಟೇನೂ ಸ್ಮರಣೀಯವಲ್ಲ.
ಅಪಾರ ನಿರೀಕ್ಷೆಗಳನ್ನು ಹೊತ್ತು ಈ ಬಾರಿ ಭಾರತ ಕಣಕ್ಕಿಳಿಯುತ್ತಿದೆ. ಕ್ರಿಕೆಟ್ ಪ್ರೇಮಿಯಾಗಿ ಹೇಳುವುದಾದರೆ ಇದೊಂದು ಸ್ಮರಣೀಯ ವಿಶ್ವಕಪ್ ಆಗಲಿ ಹಾಗೂ ಅತ್ಯುತ್ತಮವಾಗಿ ಕ್ರಿಕೆಟ್ ಆಡುವ ತಂಡ ಗೆಲ್ಲಲಿ ಎಂದೇ ಹೇಳಬೇಕಾಗುತ್ತದೆ. ಆದರೆ ಭಾರತ ಈ ಬಾರಿ ವಿಶ್ವಕಪ್ ಗೆದ್ದು ಹನ್ನೆರಡು ವರ್ಷಗಳ ಹಿಂದಿನ ಸಂಭ್ರಮ ಮರುಕಳಿಸಲಿ ಎನ್ನುವ ಆಸೆ ಇರುವುದಂತೂ ನಿಜ.
ವೆಂಕಟೇಶ ಬಿ.ಎಂ. ಸರ್ಕಾರಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಎರಡೂ ಸಾಹಿತ್ಯ ಪ್ರಕಾರಗಳಲ್ಲಿ ಆಸಕ್ತಿ ಹೊಂದಿರುವ ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ತುಂಬಾ ಚೆನ್ನಾಗಿ ಬರೆದಿದ್ದೀರಿ
ಸೌಹಾರ್ದತೆ ಮಹತ್ವ ತುಂಬಾ ಚೆನ್ನಾಗಿ ತಿಳಿಸಿದ್ದಿರಿ