ಅನಿವಾರ್ಯತೆ ಸಂತೆ

ದಾರಿ ಯಾವಾಗಲೂ NH4 ಅಲ್ಲ
ಮೃದುತ್ವ, ನುಣುಪು, ಹೊಳಪು
ವಿಶಾಲವಾಗಿ ಚಾಚಿಕೊಂಡು
ಮಧ್ಯೆ ಚೆಂದನೆಯ ಹೂವುಗಳ ಸುರಿಮಳೆ,
ಆಚೆ ಈಚೆ ಮನಸೆಳೆಯುವ ಬೆಟ್ಟ ಗುಡ್ಡ
ಕ್ರಮಿಸಿದುದ್ದಕ್ಕೂ ಪ್ರಶಾಂತವಾದ ಪಯಣ ಸಿಕ್ಕು
ಮೇಲಿಂದ ಮೇಲೆ ಮೆಲುಕು ಹಾಕಲು

ಏನೋ ಕಾರಣಕ್ಕೆ ಮನೆಗೆ ಹೋಗುತ್ತಿರುವ ಡ್ರೈವರ್ಗೆ
ಪ್ರಯಾಣಿಕ ಕೊಡುವ ಕನಿಷ್ಠ ದುಡ್ಡು
ಸಹೋದ್ಯೋಗಿಯ ದೂರ ಪ್ರಯಾಣ
ದುರುಪಯೋಗ ಪಡಿಸಿಕೊಳ್ಳುವ ಮೇಲಾಧಿಕಾರಿ
ಸುಸ್ತಾದ ಜೀವ ಬಸ್ಸಿನಲ್ಲಿ ಸಿಕ್ಕ ಸೀಟ್
ಕುಳಿತಲ್ಲಿ ಉಪಯೋಗ ಪಡೆವ ಧೂರ್ತ
ಕತ್ತಲಾದದ್ದಕ್ಕೆ ಪಲ್ಯೆ, ಹಣ್ಣು ಸೋವಿಯಾಗಿ
ಕೊಡುವ ಬಡ ವ್ಯಾಪಾರಿ
ಜೀವವೇ ಮುಖ್ಯವೆಂಬ ಹೆಸರಲ್ಲಿ
ಆಸ್ಪತ್ರೆಗಳ ಸಂಭಾಳಿತನ
ತತಕ್ಷಣಕ್ಕೆ ಬೇಕಾದ ದೂರದ
ಪ್ರಯಾಣಕ್ಕೆ ಟಿಕೆಟ್‌ನ ಹೆಸರಲ್ಲಿ
ಬಸ್, ರೇಲ್ವೆ, ವಿಮಾನದ ಪ್ರಾಮಾಣಿಕತನ
ಅಚ್ಚರಿಯ ಹುಟ್ಟಿಸದೇ?

ಎತ್ತಿನ ದುಡಿತ ದುಡಿದವಗೆ
ಕೂಲಿ ಕೊಡದ ಗುತ್ತಿಗೆದಾರ
ಸಂಜೆವರೆಗೂ ಕಳೆ ಕಿತ್ತಾಗ
ಹಿಂಸಿಸಿ ಕೊಡುವ ಬೆವರಿನ ಹಣ
ಸಂಕಷ್ಟಕ್ಕೆ ಇರುವ
ಬಂಗಾರ ಕೊಳ್ಳುವಲ್ಲಿ
ಮಾರುವಲ್ಲಿಯ ಮೋಸ
ಸಮಾಜಕ್ಕೆ ಹೆದರಿ ಬೆದರಿ
ಅಯೋಗ್ಯ ಸಂಗಾತಿಯ ಸಾಂಗತ್ಯ
ಅನಿವಾರ್ಯತೆ ಅಲ್ಲದೆ ಮತ್ತೇನು?

ಬದುಕು ಅನಿವಾರ್ಯತೆಗಳ ಹುಚ್ಚು ಸಂತೆ
ಉಪಯೋಗ, ದುರ್ಬಳಕೆ ಹಲವರಿಂದ
ಸತ್ಯ ಗೊತ್ತಿದ್ದೂ ಮೂಕ
ಜಾಣ ಮೌನ, ನಿಲುಕದ ಪರಿಹಾರ

ವಿಜ್ಞಾನದ ಆಹಾರ ಸರಪಳಿಯಂತೆ
ಅನಿವಾರ್ಯತೆ ಸರಪಳಿ ಹೊಟ್ಟೆ
ತುಂಬಿಸುತ್ತದೆ ಹಲವರದು

ಅನ್ನದಿಂದ ಆಳುವವರವರೆಗೂ
ಬಹುತ್ವ ಇರದಲ್ಲಿ
ಇದ್ದುದರಲ್ಲೇ ಆಯ್ಕೆ
ಚದುರಂಗದ ಮಸ್ತ್ ಆಟ
ಅನಿವಾರ್ಯತೆ…..

ಇಂದ್ರಿಯಗಳ ಶಕ್ತಿಯಿಲ್ಲದೆಯೂ
ಅದು ಪ್ರಖರ ಮತ್ತು ಪ್ರಚಂಡ

(NH= National Highway)