ಬೇಡಿಯವರ ಬೋಲಿಂಗ್ನಲ್ಲಿ ಬ್ಯಾಟ್ಸ್ಮನ್ರನ್ನು ಕಟ್ಟಿಹಾಕುವ ಸಾಮರ್ಥ್ಯವಿತ್ತು. ಬ್ಯಾಟ್ಸ್ಮನ್ನ ಹಿಂದೆ ಮುಂದೆ ಓಡಾಡುವ ಹಾಗೆ ಮಾಡಿ ಕೊನೆಗೆ ಅವನು ಬೋಲ್ಡ್ ಆಗುವ ಹಾಗೆ, ಅಥವ, ಎಲ್.ಬಿ. ಆಗುವ ಹಾಗೆ ಮಾಡುತ್ತಿದ್ದರು, ಅವರ ಬೋಲಿಂಗ್ ಅರ್ಥವಾಗದೆ ವಿಕೆಟ್ ಹತ್ತಿರ ಕ್ಯಾಚ್ ಕೊಟ್ಟು ಔಟಾದವರೇ ಜಾಸ್ತಿ. ಏಕನಾಥ್ ಸೋಲ್ಕರ್, ವೆಂಕಟರಾಘವನ್, ಅಜಿತ್ ವಾಡೇಕರ್ ಬ್ಯಾಟ್ ಹತ್ತಿರ ಸಿಲ್ಲಿ ಮಿಡಾನ್, ಗಲ್ಲಿ, ಸ್ಲಿಪ್ನಲ್ಲಿ ಕ್ಯಾಚ್ಗಳನ್ನು ಹಿಡಿದು ಬ್ಯಾಟ್ಸ್ಮನ್ಗಳನ್ನು ಔಟ್ ಮಾಡುತ್ತಿದ್ದರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಇತ್ತೀಚೆಗಷ್ಟೇ ನಿಧನ ಹೊಂದಿದ ಬಿಷನ್ ಸಿಂಘ್ ಬೇಡಿಯವರ ಕ್ರಿಕೆಟ್ ಜೀವನದ ಕುರಿತ ಬರಹ ನಿಮ್ಮ ಓದಿಗೆ
ಬಿಷನ್ ಸಿಂಘ್ ಬೇಡಿ, ಇ.ಎ.ಎಸ್. ಪ್ರಸನ್ನ, ಬಿ.ಎಸ್. ಚಂದ್ರಶೇಖರ್, ಮತ್ತು ಎಸ್. ವೆಂಕಟರಾಘವನ್ ಸೇರಿ ‘ಸ್ಪಿನ್ ಕ್ವರ್ಟೆಟ್’ ಎಂದು ಸುಮಾರು 25 ವರ್ಷಗಳ ಕಾಲ ಭಾರತದ ಬೋಲಿಂಗನ್ನು ತಮ್ಮದೇ ಆದ ಧಾಟಿಯಿಂದ ವಹಿಸಿಕೊಂಡಿತ್ತು. ಭಾರತದಲ್ಲಿ ಬಹಳ ವರ್ಷ ವೇಗದ ಬೋಲರ್ಗಳು ಇರಲಿಲ್ಲ. ಹೊಚ್ಚ ಹೊಸದಾದ ಬಾಲನ್ನು ಹುಲ್ಲಿನಲ್ಲಿ ಉಜ್ಜಿ ಅದರ ಹೊಳಪನ್ನು ತೆಗೆದು ನಾಯಕನಾದ ಮನ್ಸೂರ್ ಆಲಿಖಾನ್ ಪಟೌಡಿ, ಆ ಬಾಲನ್ನು ಪ್ರಸನ್ನ ಅಥವ ಚಂದ್ರಶೇಖರ್ ಅವರಿಗೆ ಬೋಲ್ ಮಾಡಲು ಕೊಟ್ಟಿರುವ ಅಚ್ಚರಿಯ ದೃಶ್ಯವನ್ನು ಅನೇಕರು ನೋಡಿದ್ದಾರೆ! ಕಪಿಲ್ ದೇವ್, ಜಾವಗಲ್ ಶ್ರೀನಾಥ್ ಮುಂತಾದ ವೇಗದ ಬೋಲರ್ಗಳು ಬರುವ ಮುಂಚೆ ಆಲ್-ರೌಂಡರ್ ಎನಿಸಿಕೊಂಡ ಕರ್ಸನ್ ಘಾವ್ರಿ, ಅಬಿದ್ ಆಲಿ ಕೊನೆಗೆ ಸುನಿಲ್ ಗವಾಸ್ಕರ್ ಕೂಡ ಒಮ್ಮೆ ಹೊಸ ಬಾಲನ್ನು ಹಿಡಿದು ಬೋಲಿಂಗ್ ಮಾಡಿದ್ದಾರೆ! ಮತ್ತೆ ಭಾರತಕ್ಕೆ ಆ ಸ್ಥಿತಿ ಬರದಿರಲಿ ಎಂದು ನಮ್ಮೆಲ್ಲರ ಪ್ರಾರ್ಥನೆ.
ಭಾರತದಲ್ಲಿ ಎಡಗೈ ಬೋಲರ್ ಆಗಿ ಹೆಸರುವಾಸಿಯಾದವರು ವಿನೂ ಮಂಕಡ್. ಅವರ ತರುವಾಯ ಬಂದ ಬಿಷನ್ ಸಿಂಘ್ ಬೇಡಿ ಎಡಗೈ ಬೋಲಿಂಗ್ನ ಸ್ಪಿನ್ನರ್ ಆಗಿ ಬಂದು ಸುಪ್ರಸಿದ್ಧ ಸ್ಪಿನ್ನರ್ ಆದರು.
67 ಟೆಸ್ಟ್ ಆಡಿದ ಬಿಷನ್ ಬೇಡಿ, 28.71 ಸರಾಸರಿಯಲ್ಲಿ 266 ವಿಕೆಟ್ಗಳನ್ನು ತೆಗೆದರು. ಕನಿಷ್ಟ 5 ವಿಕೆಟ್ ಅವರು 14 ಟೆಸ್ಟ್ನಲ್ಲಿ ಗಳಿಸಿದರು. ಒಮ್ಮೆ ಒಂದು ಟೆಸ್ಟ್ನಲ್ಲಿ 10 ವಿಕೆಟ್ಗಳಿಸಿದರು. ಅವರು ಈಡಿಐ 10 ಮ್ಯಾಚ್ಗಳನ್ನಾಡಿ 7 ವಿಕೆಟ್ ತೆಗೆದರು. ಟೆಸ್ಟ್ ಇನಿಂಗ್ಸ್ನಲ್ಲಿ ಅವರ ಅತ್ಯುತ್ತಮ ಬೋಲಿಂಗ್ 7/98 ಆಗಿತ್ತು.
ಮೊದಲ ದರ್ಜೆ, ಅಥವ ಫಸ್ಟ್ ಕ್ಲಾಸ್ ಮ್ಯಾಚ್ಗಳಲ್ಲಿ ಬೇಡಿ, 370 ಮ್ಯಾಚ್ಗಳನ್ನಾಡಿ 21.69 ಸರಾಸರಿಯಲ್ಲಿ 1560 ವಿಕೆಟ್ ತೆಗೆದರು! 106 ಮ್ಯಾಚ್ಗಳಲ್ಲಿ , ಕನಿಷ್ಟ 5 ವಿಕೆಟ್ಗಳನ್ನೂ, 20 ಬಾರಿ, 10 ವಿಕೆಟ್ಗಳನ್ನೂ ಪಡೆದಿದ್ದಾರೆ. ಅವರು ಒಂದು ಫಸ್ಟ್ ಕ್ಲಾಸ್ ಮ್ಯಾಚ್ನಲ್ಲಿ ಒಮ್ಮೆ 5ರನ್ ಮಾತ್ರ ಕೊಟ್ಟು 7 ವಿಕೆಟ್ ಪಡೆದರು! (7/5)
ಬ್ಯಾಟ್ಸ್ಮನ್ ಆಗಿ ಒಮ್ಮೆ ಟೆಸ್ಟ್ನಲ್ಲಿ 50 ರನ್ ಹೊಡೆದರು. ಅವರ ಇಂಗ್ಲೆಂಡಿನ ನಾರ್ಥ್ ಹ್ಯಾಂಪ್ಟನ್ಷೆರ್ನ ನಾಯಕನಾಗಿದ್ದರು. ಅಲ್ಲಿ ಅವರ ಬ್ಯಾಟಿಂಗ್ನಿಂದ ಒಮ್ಮೆ ಅವರ ಟೀಮನ್ನು ಗೆಲ್ಲಿಸಿದರು.
ಬೇಡಿಯವರ ಬೋಲಿಂಗ್ನಲ್ಲಿ ಬ್ಯಾಟ್ಸ್ಮನ್ರನ್ನು ಕಟ್ಟಿಹಾಕುವ ಸಾಮರ್ಥ್ಯವಿತ್ತು. ಬ್ಯಾಟ್ಸ್ಮನ್ನ ಹಿಂದೆ ಮುಂದೆ ಓಡಾಡುವ ಹಾಗೆ ಮಾಡಿ ಕೊನೆಗೆ ಅವನು ಬೋಲ್ಡ್ ಆಗುವ ಹಾಗೆ, ಅಥವ, ಎಲ್.ಬಿ. ಆಗುವ ಹಾಗೆ ಮಾಡುತ್ತಿದ್ದರು, ಅವರ ಬೋಲಿಂಗ್ ಅರ್ಥವಾಗದೆ ವಿಕೆಟ್ ಹತ್ತಿರ ಕ್ಯಾಚ್ ಕೊಟ್ಟು ಔಟಾದವರೇ ಜಾಸ್ತಿ. ಏಕನಾಥ್ ಸೋಲ್ಕರ್, ವೆಂಕಟರಾಘವನ್, ಅಜಿತ್ ವಾಡೇಕರ್ ಬ್ಯಾಟ್ ಹತ್ತಿರ ಸಿಲ್ಲಿ ಮಿಡಾನ್, ಗಲ್ಲಿ, ಸ್ಲಿಪ್ನಲ್ಲಿ ಕ್ಯಾಚ್ಗಳನ್ನು ಹಿಡಿದು ಬ್ಯಾಟ್ಸ್ಮನ್ಗಳನ್ನು ಔಟ್ ಮಾಡುತ್ತಿದ್ದರು. ಬೇಡಿ ಅವರಿಗೆ ಎಂಥಹ ಪಿಚ್ನಲ್ಲೂ ಬ್ಯಾಟ್ಸ್ಮನ್ನ ಔಟ್ ಮಾಡಲು ಅವರು ಯೋಚಿಸುತ್ತಿದ್ದರು. ಮಳೆ ಬಂದು ಪಿಚ್ನಲ್ಲಿ ಸ್ಪಿನ್ ಆಗುವ ಸಾಧ್ಯತೆ ಇದ್ದರಂತೂ ಬೇಡಿ ಬ್ಯಾಟ್ಸ್ಮನ್ರನ್ನು ಹಿಂದೆ, ಮುಂದೆ ಹೋಗಿಸಿ ನೃತ್ಯ ಮಾಡಿಸುತ್ತಿದ್ದರು! ಹತಾಷೆಯಾಗಿ ಔಟಾದವರೇ ಹೆಚ್ಚು.
ಬೇಡಿ ಯಾವ ಟೀಮ್ನ ಮೇಲೆ ಎಷ್ಟು ವಿಕೆಟ್ ಪಡೆದರು? ಇಲ್ಲಿದೆ ನೋಡಿ.
1969-70 ಭಾರತದ ಆಸ್ಟ್ರೇಲಿಯ ಮೇಲೆ : 20.57 ಸರಾಸರಿಯಲ್ಲಿ 21 ವಿಕೆಟ್.
1972-73 ಭಾರತದ ಇಂಗ್ಲೆಂಡ್ ಮೇಲೆ : 25.28 ಸರಾಸರಿಯಲ್ಲಿ 25 ವಿಕೆಟ್.
1975-76 ಭಾರತದ ವೆಸ್ಟ್ ಇಂಡೀಸ್ನಲ್ಲಿ : 25.33 ಸರಾಸರಯಲ್ಲಿ 18 ವಿಕೆಟ್.
1976-77 ಭಾರತದ ನ್ಯೂಜಿ಼ಲೆಂಡ್ ಮೇಲೆ : 13.18 ಸರಾಸರಿಯಲ್ಲಿ 22 ವಿಕೆಟ್
1976-77 ಭಾರತ ಇಂಗ್ಲೆಂಡ್ ಮೇಲೆ : 22.96 ಸರಾಸರಿಯಲ್ಲಿ 25 ವಿಕೆಟ್.
1977-78 ಭಾರತ ಆಸ್ಟ್ರೇಲಿಯಾದಲ್ಲಿ : 23.87 ಸರಾಸರಿಯಲ್ಲಿ 31 ವಿಕೆಟ್
ಮನ್ಸೂರ್ ಆಲಿ ಪಟೌಡಿ ನಂತರ ಬೇಡಿ 1976ರಲ್ಲಿ ಭಾರತದ ಟೀಮಿನ ನಾಯಕನಾದರು. ಅವರ ಮೊದಲ ಟೆಸ್ಟ್ನಲ್ಲೇ ಭಾರತ ವೆಸ್ಟ್ ಇಂಡೀಸ್ ಮೇಲೆ 406/4 ರನ್ ಹೊಡೆದು ವಿಜಯ ಪತಾಕೆಯನ್ನು ಹಾರಿಸಿತು. ಇದಾದ ಮೇಲೆ ನ್ಯೂಜಿಲೆಂಡ್ ಮೇಲೆ 2-0 ಅಂತರದಲ್ಲಿ ಭಾರತ ಗೆದ್ದಿತು. ಭಾರತ ಆಸ್ಟ್ರೇಲಿಯ, ಇಂಗ್ಲೆಂಡ್ ಮತ್ತು ಪಾಕಿಸ್ಥಾನದ ಮೇಲೆ ಸೋತಾಗ, ನಾಯಕನ ಪಟ್ಟ ಸುನಿಲ್ ಗವಾಸ್ಕರ್ ಅವರಿಗೆ ಹೋಯಿತು.
ಬೇಡಿಯವರ ಕ್ರಿಕೆಟ್ ಜೀವನದ ಉದ್ದಕ್ಕೂ ಒಂದಲ್ಲ ಒಂದು ಹಗರಣಕ್ಕೆ ಕಾರಣವಾಯಿತು. ಬೇಡಿ ಯಾವುದಕ್ಕೂ ತಯಾರಿದ್ದರು. ಅನ್ಯಾಯವಾದರೆ ಅದನ್ನು ಅಲ್ಲೇ ಹೇಳಿ ಅದನ್ನು ಸರಿ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದರು. ಒಮ್ಮೆ ಪಾಕಿಸ್ಥಾನದಲ್ಲಿ ಆಡುವಾಗ ಭಾರತ ಗೆಲ್ಲುವುದಕ್ಕೆ ಕೆಲವೇ ರನ್ಗಳಿದ್ದಾಗ ಒಂದೇ ಸಮ ಬೌನ್ಸರ್ ಹಾಕಿದರೂ ಅದರ ಖಂಡನೆ ಮಾಡದ ಪಾಕಿಸ್ಥಾನದ ಅಂಪೈರ್ಗಳನ್ನು ನೋಡಿ ಬೇಸತ್ತ ಬೇಡಿ, ಮ್ಯಾಚನ್ನು ಸೋತರೂ ಪರವಾಗಿಲ್ಲ, ಇದು ಅನ್ಯಾಯ ಎಂದು ಮ್ಯಾಚನ್ನು ಅಲ್ಲಿಗೇ ಮುಗಿಸಿದರು. ಇಂಗ್ಲೆಂಡಿನ ಜಾನ್ ಲಿವರ್ ವ್ಯಾಸಲೈನ್ ಹಾಕಿ ಬಾಲಿಗೆ ಉಜ್ಜಿ ಬೋಲ್ ಮಾಡಿ ಭಾರತದ ವಿಕೆಟ್ ಅಕ್ರಮದಿಂದ ಪಡೆದ ಎಂದು ಅವನ ಮೇಲೇ ದೂರಿತ್ತು. ಲಿವರ್ ಮುಂದೆ ಆಡಲಿಲ್ಲ. ಆಮೇಲೆ ಅದು ನಿರಾಧಾರವಾದದ್ದು ಎಂದು ಸಾಬೀತಾಗಿತ್ತು.
ದೆಹಲಿ ಕ್ರಿಕೆಟ್ಗೆ ಬಹಳ ಹತ್ತಿರವಾದ ಬೇಡಿ, ಅದರ ಸಂಸ್ಥೆಯನ್ನು ಸರಿಯಾಗಿ ನಡೆಸುತ್ತಿಲ್ಲ ಎಂದು ದಿವಂಗತ ಅರುಣ್ ಜೈಟ್ಲಿಯವರ ಜೊತೆ ಬಹಳ ಸರ್ತಿ ಗುದ್ದಾಟವಾಗಿತ್ತು. ಒಂದು ಮ್ಯಾಚ್ಗೆ ಮೊದಲು ಬೇಡಿ ದೇಹವನ್ನು ಕಠಿಣವಾಗಿ ಶ್ರಮಿಸುತ್ತಿದ್ದರು. ಹಾಗೇ ಮಿಕ್ಕವರೂ ಮಾಡಬೇಕೆಂದು ಕಡ್ಡಾಯವಾಗಿ ಹೇಳುತ್ತಿದ್ದರು. ಅವರೇ ಮಾಡಿ ತೋರಿಸುತ್ತಿದ್ದರು.
ಬಿಷನ್ ಸಿಂಘ್ ಬೇಡಿಯವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಇದು ಯಾವುದೂ ಫಲಿಸದೆ ಬೇಡಿ ಅಕ್ಟೋಬರ್ 23ರಲ್ಲಿ ಅವರ 77ನೇ ವರ್ಷದಲ್ಲಿ ದೆಹಲಿಯಲ್ಲಿ ಕಾಲವಾದರು.
ಬೇಡಿಯವರ ನಿಧನ ಭಾರತದ ‘ಸ್ಪಿನ್ ಕ್ವರ್ಟೆಟ್’ ನಲ್ಲಿ ಒಂದು ಚಕ್ರ ಬಿದ್ದುಹೋದ ಹಾಗಿಗೆ. ಅವರು ಮಿಕ್ಕ ಆಟಗಾರರ ಜೊತೆ ಬಹಳ ಸರಳವಾಗಿ ಮಿಕ್ಕವರ ಯಶಸ್ಸಿಗೆ ಬಹಳ ಸಂತೋಷ ವ್ಯಕ್ತಪಡಿಸುತ್ತಿದ್ದರು. ಅವರ ನಾಲ್ಕು ಸ್ಪಿನ್ನರ್ಗಳಲ್ಲಿ ಬಹಳ ಪೈಪೋಟಿ ಇದ್ದರೂ, ಅವರೆಲ್ಲರೂ ಒಂದು ಅವಿಭಕ್ತ ಕುಟುಂಬದ ತರಹ ಇದ್ದರು. ಅಂಥ ಟೀಮ್ ಮ್ಯಾನ್ ಸಿಕ್ಕುವುದು ಬಹಳ ಕಷ್ಟ.
ಬಿಷನ್ ಸಿಂಘ್ ಬೇಡಿಯವರ ಕೊಡುಗೆ ಭಾರತಕ್ಕೆ ಬಹಳ ಆಪಾರವಾದ ಕೊಡುಗೆ. ದೇಶಕ್ಕೇ ಎಲ್ಲವನ್ನೂ ಮೀಸಲಿಟ್ಟ ದಿಟ್ಟ ಕ್ರಿಕೆಟ್ ಆಟಗಾರ ಬೇಡಿಯವರಿಗೆ ಕ್ರಿಕೆಟಾಯ ನಮಃ ನಮ್ರತೆಯಿಂದ ತಲೆ ಬಾಗಿಸುತ್ತೇವೆ. ಅವರ ಆತ್ಮಕ್ಕೆ ಓಂ ಶಾಂತಿಯನ್ನು ಕೋರುತ್ತೇವೆ.
ಫಿಲಿಪ್ಸ್ ಕಂಪನಿಯಿಂದ ನಿವೃತ್ತರಾದ ನಂತರ ಮೈಸೂರಿನಲ್ಲಿ ನೆಲೆಸಿದ್ದಾರೆ. ಅವರು `ಶಂಕರ್ಸ್ ವೀಕ್ಲಿ’ಯಲ್ಲಿ ಹಾಸ್ಯ ಲೇಖನವನ್ನು ಬರೆಯುತ್ತಿದ್ದರು. ಈಗ ಅಪರಂಜಿ ಮಾಸಿಕ ಪತ್ರಿಕೆಗೆ ಹಾಸ್ಯ ಲೇಖನ ಬರೆಯುತ್ತಾರೆ. ಚುರುಮುರಿ, ಹಿಂದುಸ್ತಾನ್ ಟೈಮ್ಸ್, ಸಿಎನೆನ್ ಮತ್ತು ನ್ಯೂಸ್ ೧೮ ನಲ್ಲಿಯೂ ಅವರ ಲೇಖನಗಳು ಪ್ರಕಟವಾಗಿವೆ. ‘ಅಜ್ಜಿ ಮತ್ತು ಇತರ ಕತೆಗಳು’ ಅವರ ಪ್ರಕಟಿತ ಕೃತಿ.