ನಂದು ದಾದಾ ಅವಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚಿದರೆ ರಮೇಶಣ್ಣ ಅವಳಿಗೆ ಬಲೆಹಾಕಿ ಅವಳನ್ನು ದುರುಪಯೋಗಪಡಿಸಿ ಮನೆಯಿಂದ ಓಡಿಸಿಕೊಂಡುಹೋಗಿ ನಡುನೀರಿನಲ್ಲಿ ಕೈಬಿಟ್ಟು ಪರಾರಿಯಾಗುತ್ತಾನೆ. ನಂದಣ್ಣನ ಆದರ್ಶಗಳು ಈಕೆಯೊಳಗೆ ಪ್ರಭಾವವನ್ನು ಬೀರಿತ್ತು ಎನ್ನುವುದಕ್ಕೆ ಆಕೆ ತಾನು ವೇಶ್ಯೆಯಾಗಿ ಇರುವಾಗಲೂ ಸಂದರ್ಭ ಬಂದಾಗ ಸ್ವಾತಂತ್ರ್ಯ ಹೋರಾಟ, ಸಮಾಜ ಸೇವೆ, ದೀನದಲಿತರಿಗೆ ನೆರವು ಹೀಗೆ ಹಲವಾರು ಸಂಗತಿಗಳನ್ನು ಮಾಡುತ್ತಲೇ ಇರುತ್ತಾಳೆ. ಆದರೆ ಸ್ವಾತಂತ್ರ್ಯ ಹೊರಾಟಗಾರರಲ್ಲಿ ಎಲ್ಲವರೂ ನಂದಣ್ಣನಂತಹ ವ್ಯಕ್ತಿಗಳಲ್ಲ. ಹೆಚ್ಚಿನವರು ರಮೇಶನಂತಹ ಗೋಮುಖರೇ.
ಬಂಗಾಳಿಯ ಮಾನದಾ ದೇವಿ ಆತ್ಮಕಥನ “ವಿದ್ಯಾವಂತ ವೇಶ್ಯೆಯ ಆತ್ಮಕಥೆ”ಯನ್ನು ನಾಗ ಎಚ್ ಹುಬ್ಳಿ ಕನ್ನಡಕ್ಕೆ ತಂದಿದ್ದು ಈ ಕೃತಿಯ ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ
ವೇಶ್ಯೆಯ ಬದುಕಿನ ಪುಟಗಳನ್ನು ಹಸಿಹಸಿಯಾಗಿಯೇ ಬರೆದಿರುವ ಆತ್ಮಕಥೆಗಳು ಇಂದು ಭಾರತೀಯ ಭಾಷೆಗಳಲ್ಲಿ ಸಾಕಷ್ಟು ಲಭ್ಯವಿದೆ. ಮಲೆಯಾಳಿ ಲೇಖಕಿ ನಳಿನಿ ಜಮೀಲಾ ಮಲೆಯಾಳಿ ಭಾಷೆಯಲ್ಲಿ ಬರೆದಿರುವ ನಂತರ ಇಂಗ್ಲೀಷಿಗೆ ಭಾಷಾಂತರವಾಗಿರುವ Autobiography of a Sex Worker ಮತ್ತು Romantic Encounters of a Sex Worker ಸಾಹಿತ್ಯಿಕ ವಲಯದಲ್ಲಿ ಸಂಚಲವನ್ನು ಮೂಡಿಸಿದ ಕೃತಿಗಳು. ಜಮೀಲಾ ತನ್ನ ಅನುಭವಗಳನ್ನು ಹೇಳುವ ಹೊತ್ತಿನಲ್ಲಿ ಸಮಾಜದ ಗಣ್ಯವ್ಯಕ್ತಿಗಳೆನಿಸಿಕೊಂಡವರ ಮುಖವಾಡವನ್ನು ಬಯಲಾಗಿಸಿದ್ದಾರೆ. ಅಭಿದ್ ಸುರ್ತಿ ಅವರು ಗುಜರಾತಿ ಭಾಷೆಯಲ್ಲಿ ಬರೆದ A tale of an Indian sex worker ಕುಮುದಾ ಎನ್ನುವ ಪುಸ್ತಕದಲ್ಲಿ ಲೈಂಗಿಕ ಕಾರ್ಯಕರ್ತೆಯ ಬದುಕಿನ ಗಾಯಗಳು ಮನಸ್ಸನ್ನು ಚುಚ್ಚುತ್ತವೆ. ಪೇಶ್ವೆಗಳ ಕಾಲದಿಂದಲೂ ವೇಶ್ಯೆಯರಾಗಿದ್ದ ಅವಳ ಹಿಂದಿನ ತಲೆಮಾರು, ಮುಂಬೈ ಕಾಮಾಟಿಪುರದಲ್ಲಿ ಕೇವಲ ಎರಡು ರೂಪಾಯಿಗಳಿಗೆ ತನ್ನ ಮೈ ಮಾರಿಕೊಳ್ಳುವ ಸಂಗತಿಗಳು, ವಿಟರನ್ನು ಪ್ರಲೋಭನೆಗೊಳಿಸುವ ತಂತ್ರಗಳು ಇವುಗಳೆಲ್ಲವೂ ಓದುವಾಗ ಇಂಥ ಸಮಾಜವನ್ನು ನಾವು ಪ್ರತಿನಿಧಿಸುತ್ತಿದ್ದೇವಾ, ಈ ಕೆಂಪು ದೀಪದ ಲೋಕದಲ್ಲಿ ಎಷ್ಟು ಇಂತಹ ಕುಮುದಾ, ಜಮೀಲಾಗಳ ಧ್ವನಿ ಅಡಗಿಹೋಗಿದೆಯೇನೋ ಎನಿಸುತ್ತದೆ.
ಶಿವರಾಮ ಕಾರಂತರ “ಮೈಮನಗಳ ಸುಳಿಯಲ್ಲಿ” ದೇವದಾಸಿಯರ ಸಾಮಾಜಿಕ ಮನ್ನಣೆ ಮತ್ತು ಅವನತಿ ಎರಡನ್ನೂ ಹೇಳುವ ಕಾದಂಬರಿ. ಇಲ್ಲಿ ಬರುವ ಮಂಜುಳಾರಂತಹ ಅನೇಕ ದೇವದಾಸಿಗಳ ಬದುಕಿನಲ್ಲಿ ರಸಿಕರು ಬಂದು ಹೋದ ರೋಮಾಂಚಕಾರಿ ಕಥೆಗಳು ಕರಾವಳಿ ಭಾಗದಲ್ಲಿ ಹಳೆಯ ತಲೆಮಾರಿನವರ ಹತ್ತಿರ ಇಂದಿಗೂ ಕೇಳಬಹುದಾಗಿದೆ. ದೇವಸ್ಥಾನಗಳಲ್ಲಿ ಚಾಮರ ಸೇವೆ, ಮದುವೆ ಮನೆಯಲ್ಲಿ ನಿತ್ಯಸುಮಂಗಲಿಯರಿಂದ ಮಾಂಗಲ್ಯವನ್ನು ಪೋಣಿಸಿ ಮುತ್ತೈದೆತನ ಉಳಿಯಲಿ ಎಂದು ಹಾರೈಸುವ ರಿವಾಜುಗಳು ಈ ಭಾಗದಲಿ ಇತ್ತು. ಸಂಗೀತ ನೃತ್ಯಗಳಿಂದ ರಸಿಕರನ್ನು ಓಲೈಸುವ ವಾರಾಂಗನೆಯರನ್ನು ಇರಿಸಿಕೊಳ್ಳುವುದು ಒಂದು ಗೌರವಯುತ ವೃತ್ತಿಯಾಗಿತ್ತು. ಬ್ರಿಟಿಷರು ಬಂದಮೇಲೆ ಇವುಗಳೆಲ್ಲವೂ ಮೈಮಾರುವ ದಂಧೆಯಾಗಿ, ಪಿಂಪ್ಗಳ ಹಿಡಿತದಲ್ಲಿ ಸಿಕ್ಕು ದುರಂತಮಯ ಅಧ್ಯಾಯಕ್ಕೆ ನಾಂದಿಯಾಯಿತು ಎಂದು ಕಾರಂತರ ಕಾದಂಬರಿ ಓದಿದಾಗ ಅನಿಸುತ್ತದೆ.
ಈ ಎಲ್ಲ ಕೃತಿಗಳೂ 1970ರ ನಂತರ ಬಂದಿರುವಂತಹದ್ದು. ಆದರೆ ಒಂದು ವೇಶ್ಯೆ ತನ್ನ ಆತ್ಮಕತೆಯನ್ನು ಯಾವ ಅಶ್ಲೀಲದ ಸೋಂಕಿಲ್ಲದೇ, ಆದರೆ ಹೇಳುವ ಯಾವ ಅವಕಾಶವನ್ನು ಬಿಡದೇ ಹೇಳಿರುವ ಆತ್ಮಕಥೆ 1929ರಲ್ಲಿಯೇ ಬಂಗಾಳಿ ಭಾಷೆಯಲ್ಲಿ ಕುಮಾರಿ/ಶ್ರೀಮರಿ ಮಾನದಾ ದೇವಿ ಅವರು ಬರೆದ “ವಿದ್ಯಾವಂತ ವೇಶ್ಯೆಯ ಆತ್ಮಕಥೆ” (ಶಿಕ್ಷಿತಾ ಪತಿತಾರ್ ಆತ್ಮಚರಿತ) ಪ್ರಕಟವಾಗಿದೆ. ಮುದ್ರಿತವಾದ ಒಂದೇ ತಿಂಗಳಲ್ಲಿಯೇ ಇದರ ಹದಿನಾರು ಸಾವಿರ ಪ್ರತಿಗಳು ಖರ್ಚಾಗಿವೆ. ಭಾರತದ ಹಲವಾರು ಭಾಷೆಗಳಿಗೆ ಅನುವಾದಗೊಂಡಿರುವ ಈ ಕೃತಿಯನ್ನು ಇತ್ತೀಚೆಗೆ ‘ಛಂದ’ ಪ್ರಕಾಶನಕ್ಕಾಗಿ ಕನ್ನಡದ ಪ್ರಮುಖ ಅನುವಾದಕಾರ ಮತ್ತು ಸಾಹಿತಿ, ನಾಗ ಎಚ್ ಹುಬ್ಳಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರು ತಮ್ಮ ಮಾತುಗಳಲ್ಲಿ ಹೇಳಿಕೊಂಡಂತೆ ವೇಶ್ಯಾವೃತ್ತಿಯನ್ನು ವೈಭವೀಕರಿಸುವುದಕ್ಕಾಗಲೀ ಅಥವಾ ಅಶ್ಲೀಲ ಸಾಹಿತ್ಯದ ಮೂಲಕ ಓದುವಗರನ್ನು ಸೆಳೆಯುವುದಕ್ಕಾಗಲೀ ಈ ಕೃತಿಯನ್ನು ಅನುವಾದ ಮಾಡಿಲ್ಲ. ಮಾನದಾ ದೇವಿ ಸಹ ಬಂಗಾಳಿಯಲ್ಲಿ ಬರೆಯುವಾಗ ಅಂತಹ ಯಾವ ಸಂಗತಿಯನ್ನೂ ವೈಭವೀಕರಿಸಿಲ್ಲ. ಶ್ರೀಮಂತ ಮನೆತನದ ಓರ್ವಳೇ ಮಗಳು ಆಕೆ. ಕಲಕತ್ತಾದ ಪ್ರಸಿದ್ಧ ಬ್ರಾಹ್ಮಣ ವಂಶಸ್ಥಳು. ಅವಳನ್ನು ನೋಡಿಕೊಳ್ಳಲು ಆಳುಕಾಳಿಗೇನೂ ಕೊರತೆ ಇರಲಿಲ್ಲ. ಆದರೆ ಆಕೆಯ ತಾಯಿ ಅವಳ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡಾಗ ಕೆಲವು ವರ್ಷ ಅವಳ ತಂದೆ ಮಗಳ ಸಲುವಾಗಿ ಒಂಟಿಯಾಗಿ ಇದ್ದರೂ ಮರಣಿಸಿದ ತಾಯಿಯ ಸ್ಥಾನವನ್ನು ತುಂಬಲಿಲ್ಲ. ಬಾಹ್ಯ ಸೌಲಭ್ಯವನ್ನು ಕೊಟ್ಟರೆ ಮಗಳಿಗೆ ಸಾಕು ಎನ್ನುವ ರೀತಿಯಲ್ಲಿ ಅವಳನ್ನು ಬೆಳೆಸಿದರು.
ಮಾನದಾ ದೇವಿಯ ಮಾತುಗಳಲ್ಲಿ ಹೇಳುವುದಾದರೆ “ನಾನು ಓದುವ ಕೋಣೆ ಹಾಗೂ ಶಯನ ಗೃಹಗಳು ಅತ್ಯಂತ ಅಚ್ಚುಕಟ್ಟಾಗಿದ್ದವು. ನಾನು ಬಯಸಿದ ವಸ್ತುಗಳೆಲ್ಲವೂ ನನಗೆ ದೊರೆಯುತ್ತಿದ್ದವು. ಹಾಗಿದ್ದಾಗ್ಯೂ ನನ್ನ ಮನಸ್ಸಿಗೆ ಮಾತ್ರ ನೆಮ್ಮದಿ ಇರಲಿಲ್ಲ. ತಂದೆಯವರ ಅನಾದರ, ನಿರ್ಲಕ್ಷ್ಯ ಮನೋಭಾವ ನನ್ನನ್ನು ಸದಾ ಬೇಸರಕ್ಕೆ ದೂಡುತ್ತಿತ್ತು….” ಆಕೆಯ ಬದುಕಿನ ಹಳಿ ತಪ್ಪುವುದಕ್ಕೆ ಈ ಸಾಲುಗಳು ಮುಂದಿನ ಎಲ್ಲವನ್ನೂ ಹೇಳುತ್ತದೆ. ಈಕೆಗಿಂತ ಎರಡು ವರ್ಷ ಹಿರಿಯಳನ್ನು ತಂದೆ ಎರಡನೇ ಮದುವೆಯದಾಗ ಅದೇತಾನೆ ಮೊಗ್ಗು ಬಿರಿಯುತ್ತಿರುವ ಹರೆಯದ ಬಾಲೆಗೆ ಆದ Stepmom outsider syndrome ಸಮಸ್ಯೆಯನ್ನು ಅಲ್ಲಿ ಯಾರೂ ಅರ್ಥಮಾಡಿಕೊಳ್ಳಲಿಲ್ಲ. ಆಕೆಯನ್ನು ನೋಡಿಕೊಳ್ಳಲು ಬಂದ ಆಕೆಯ ತಂದೆಯ ಸಹೋದರಿ ಮಾನದಾಳ ತಂದೆ ತನ್ನ ಎರಡನೆ ಹೆಂಡತಿಯೊಂದಿಗೆ ಐದಾರು ತಿಂಗಳುಗಳ ಕಾಲ ವಿಹಾರಕ್ಕೆ ಹೋದಾಗ ವಾತ್ಸಲ್ಯದಿಂದಲೇ ನೋಡಿಕೊಂಡಿದ್ದಾಳೆ. ತನ್ನ ಓರಿಗೆಯ ಪ್ರಾಯದವಳೇ ತನ್ನ ಅಮ್ಮನಾಗುವುದನ್ನು ಹದಿಹರೆಯಕ್ಕೆ ಕಾಲಿಡುವ ಈಕೆಯ ಮನಸ್ಸು ಒಪ್ಪಿಲ್ಲ. ಯಾವಾಗ ತನ್ನ ತಾಯಿಯ ಫೋಟೋ ತಂದೆಯ ಮಲಗುವ ಕೋಣೆಯಿಂದ ಹೊರಗೆ ಬಂತೋ ಅಗಲೇ ಅವಳಲ್ಲಿ ತಾನು ಹೊರಗಿನವಳು ಎನ್ನುವ ಭಾವ ಮೂಡಿತೆನ್ನಬೇಕು. ಸ್ವಾತಂತ್ರ್ಯ ಹೊರಾಟದ ಸಭೆಯಲ್ಲಿ ಆತ್ಮ ಬಲಿದಾನದ ಹಾಡನ್ನು ತನ್ಮಯವಾಗಿ ಹಾಡುವ, ಬ್ರಹ್ಮ ಸಮಾಜದ ಸಭೆಗೆ ಆಗಾಗ ಹೋಗಿ ಅಲ್ಲಿನ ವಾತಾವರಣವನ್ನು ಗಮನಿಸುವ ಅವಳ ಬದುಕು ಹಾದಿತಪ್ಪುವಂತಾದುದರ ಕುರಿತು ಅವಳೇ ವಿವಿಧ ಭಾವನೆಯ ಹೊಯ್ಗಳಲ್ಲಿ ನಿಂತು ಹೇಳಿಕೊಳ್ಳುತ್ತಾ ಹೋಗುತ್ತಾಳೆ.
ಹಾಗಂತ ಈ ಕೃತಿ ಮಾನದಾ ದೇವಿಯ Confession ಆಗಲೀ ತಪ್ಪೊಪ್ಪಿಗೆಯಾಗಲೀ ಅಲ್ಲ. ತನ್ನ ವೃತ್ತಿಯ ಕುರಿತು ಅವಳು ಸದಾ ತನ್ನೊಳಗೆ ಮಂಥನವನ್ನು ನಡೆಸುತ್ತಾಳೆ. ಮಲ ತಾಯಿಯ ನೆರವಿಗೆ ಎಂದು ಬಂದ ಹರಿಮತಿ ಎನ್ನುವವಳ ನಿಷ್ಟುರವೂ ಅವಳಲ್ಲಿ ತನಗೆ ಯಾರಾದರೂ ಓರ್ವ ಆತ್ಮೀಯತೆಯನ್ನು ಹಂಚಿಕೊಳ್ಳುವ ಸಂಗಾತಿ ಬೇಕೆನಿಸಿರಬೇಕು. ವಾವೆಯಲ್ಲಿ ಅಣ್ಣನಾಗಬೇಕಾದ ನಂದ ಮತ್ತು ರಮೇಶಣ್ಣ ಅವಳ ಜೀವನದಲ್ಲಿ ಎರಡು ಆಕರ್ಷಣೆಯ ಕೇಂದ್ರವಾಗುತ್ತಾರೆ. ನಂದು ದಾದಾ ಅವಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚಿದರೆ ರಮೇಶಣ್ಣ ಅವಳಿಗೆ ಬಲೆಹಾಕಿ ಅವಳನ್ನು ದುರುಪಯೋಗಪಡಿಸಿ ಮನೆಯಿಂದ ಓಡಿಸಿಕೊಂಡುಹೋಗಿ ನಡುನೀರಿನಲ್ಲಿ ಕೈಬಿಟ್ಟು ಪರಾರಿಯಾಗುತ್ತಾನೆ. ನಂದಣ್ಣನ ಆದರ್ಶಗಳು ಈಕೆಯೊಳಗೆ ಪ್ರಭಾವವನ್ನು ಬೀರಿತ್ತು ಎನ್ನುವುದಕ್ಕೆ ಆಕೆ ತಾನು ವೇಶ್ಯೆಯಾಗಿ ಇರುವಾಗಲೂ ಸಂದರ್ಭ ಬಂದಾಗ ಸ್ವಾತಂತ್ರ್ಯ ಹೋರಾಟ, ಸಮಾಜ ಸೇವೆ, ದೀನದಲಿತರಿಗೆ ನೆರವು ಹೀಗೆ ಹಲವಾರು ಸಂಗತಿಗಳನ್ನು ಮಾಡುತ್ತಲೇ ಇರುತ್ತಾಳೆ. ಆದರೆ ಸ್ವಾತಂತ್ರ್ಯ ಹೊರಾಟಗಾರರಲ್ಲಿ ಎಲ್ಲವರೂ ನಂದಣ್ಣನಂತಹ ವ್ಯಕ್ತಿಗಳಲ್ಲ. ಹೆಚ್ಚಿನವರು ರಮೇಶನಂತಹ ಗೋಮುಖರೇ. ಅಂಥವರನ್ನು ದಾಳಗಳನ್ನಾಗಿ ಬಳಸಿಕೊಳ್ಳುವುದನ್ನು ನಿರ್ಭೀತಿಯಿಂದ ಹೇಳಿಕೊಳ್ಳುತ್ತಾಳೆ.
ಮಾನದಾ ದೇವಿ ಸಹ ಬಂಗಾಳಿಯಲ್ಲಿ ಬರೆಯುವಾಗ ಅಂತಹ ಯಾವ ಸಂಗತಿಯನ್ನೂ ವೈಭವೀಕರಿಸಿಲ್ಲ. ಶ್ರೀಮಂತ ಮನೆತನದ ಓರ್ವಳೇ ಮಗಳು ಆಕೆ. ಕಲಕತ್ತಾದ ಪ್ರಸಿದ್ಧ ಬ್ರಾಹ್ಮಣ ವಂಶಸ್ಥಳು. ಅವಳನ್ನು ನೋಡಿಕೊಳ್ಳಲು ಆಳುಕಾಳಿಗೇನೂ ಕೊರತೆ ಇರಲಿಲ್ಲ. ಆದರೆ ಆಕೆಯ ತಾಯಿ ಅವಳ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡಾಗ ಕೆಲವು ವರ್ಷ ಅವಳ ತಂದೆ ಮಗಳ ಸಲುವಾಗಿ ಒಂಟಿಯಾಗಿ ಇದ್ದರೂ ಮರಣಿಸಿದ ತಾಯಿಯ ಸ್ಥಾನವನ್ನು ತುಂಬಲಿಲ್ಲ
ಅವಳ ಜೀವನದಲ್ಲಿ ಬಂದು ಹಾದುಹೋದ ಸಮಾಜದ ಮಹನೀಯರೆನಿಸಿಕೊಂಡವರು, ಸಂನ್ಯಾಸಿಗಳು, ಬ್ಯಾರಿಸ್ಟರ್ ಮತ್ತು ವಕೀಲರು ಅವಳ ಪಿಂಪ್ಗಳಾಗಿ ಇವಳನ್ನು ಬಳಸಿ ತಾವೂ ಹಣಮಾಡಿಕೊಳ್ಳುವುದರಲ್ಲಿ ತೊಡಗುವುದು ಇವೆಲ್ಲವೂ ಮನಃಶಾಸ್ತ್ರೀಯ ದೃಷ್ಟಿಯಿಂದ ಅಧ್ಯಯನ ಮಾಡಬಹುದಾದ ಸಂಗತಿಗಳು. ವೇಶ್ಯೆಯೋರ್ವಳು ಬರೆದ ಆತ್ಮಕತೆಯ ಕುರಿತು “ತಾಯಿಯ ಸ್ತನದಿಂದ ಮಗುವು ಹಾಲನ್ನು ಕುಡಿಯಬಹುದು; ಆದರೆ ಜಿಗಣೆಯಂತಹ ಸ್ವಭಾವದ ಬೂಟಾಟಿಕೆಯ ಮನುಷ್ಯರು ಅದೇ ಸ್ತನದಿಂದ ರಕ್ತವನ್ನು ಹೊರತು ಪಡಿಸಿ ಬೇರೆ ಏನೆನ್ನನ್ನೂ ಹೊರತೆಗೆಯಲು ಸಾಧ್ಯವಿಲ್ಲ” ಎಂದು ಟೀಕಿಸಿದ ಪ್ರಭುಪಾದಾತುಲಕೃಷ್ಣ ಗೋಸ್ವಾಮಿಯವರಿಗೆ “ರುಚಿ ಎನ್ನುವುದು ತಿನ್ನುವವರ ನಾಲಿಗೆಯ ಸ್ವಾದಶಕ್ತಿಯನ್ನು ಅವಲಂಬಿಸಿರುತ್ತದೆ…” ಎಂದು ನೇರವಾಗಿ ಉತ್ತರಿಸಿದ್ದಾಳೆ. ಈ ಕೃತಿಯ ಮೂಲಕ ಸಮಾಜದ ಲಂಪಟರನ್ನೆಲ್ಲಾ ಬದಲಾಯಿಸಬಲ್ಲೆ ಎನ್ನುವ “ಹುಚ್ಚು ನಂಬಿಕೆ” ಆಕೆಗಿಲ್ಲ. “ಈರುಳ್ಳಿಯನ್ನು ತುಂಬಾ ವಾಸನೆ ಎನ್ನುವ ವ್ಯಕ್ತಿ ದನ-ಹಂದಿಮಾಂಸವನ್ನು ಸೇವಿಸುತ್ತಾರೆ. ಮೈಮೇಲೆ ಹಾಲು ಚೆಲ್ಲಿದರೆ ಅಸಹ್ಯ ಪಡುತ್ತಾರೆ” ಎನ್ನುವ ಅವಳ ಮಾತುಗಳು ಆಕೆಯ ಪ್ರಾಮಾಣಿಕತೆಯನ್ನು ವಿಷದೀಕರಿಸುತ್ತದೆ. ಸತ್ಯವು ಅನೇಕ ಸಂದರ್ಭಗಳಲ್ಲಿ ಅಪ್ರಿಯವೇ ಆಗಿರುತ್ತದೆ. ಇಂತಹ ಹಲವಾರು ಅಪ್ರಿಯ ಸತ್ಯವನ್ನು ಹೊರತರಲು ಅವಳು ಈ ಕೃತಿಯನ್ನು ರಚಿಸಿದ್ದಾಳೆ.
ಮಾನದಾ ದೇವಿ ತನ್ನ ಅಸ್ಮಿತೆಯಾದ ಸಾಹಿತ್ಯವನ್ನು ಪ್ರೀತಿಸುವುದನ್ನು ಮಾತ್ರ ಯಾವತ್ತೂ ಬಿಡುವುದಿಲ್ಲ. ತನ್ನ ವಿಟ ‘ಬ್ಯಾಂಕ್ ಬಾಬುವಿಗೆ’ ಹೇಳಿ ಪುಸ್ತಕಗಳನ್ನು ತರಿಸಿಕೊಳ್ಳುತ್ತಾಳೆ. ಬಂಗಾಳದಲ್ಲಿ ಸಾಹಿತ್ಯ ಕೃತಿಗಳು ವಿಜಂಭಿಸುತ್ತಿದ್ದ ಕಾಲ. ಬಂಕಿಮಚಂದ್ರ ಚಟರ್ಜಿಯವರ ಆನಂದ ಮಠ, ರವೀಂದ್ರನಾಥ ಟ್ಯಾಗೋರರ ಬರಹಗಳು, ಆರ್ಯ ಸಮಾಜ, ಬ್ರಹ್ಮ ಸಮಾಜ, ರಾಮಕೃಷ್ಣಾಶ್ರಮ ಇವುಗಳೆಲ್ಲ ಜನರಮೇಲೆ ಅಪಾರ ಪ್ರಭಾವವನ್ನು ಬೀರುತ್ತಿದ್ದವು. ಸಾಹಿತ್ಯದ ಹೊಸಾ ಅಲೆಯಲ್ಲಿ ವೇಶ್ಯೆಯರ ಬದುಕನ್ನು ತೆರೆದಿಡುವ ಕೃತಿಗಳನ್ನು ಬಂಕಿಮಚಂದ್ರ ಚಟ್ಟೋಪಧ್ಯಾಯರು ಮತ್ತು ಅವರ ಸಮಕಾಲೀನ ಸಾಹಿತಿಗಳು ಬರೆಯುತ್ತಿದ್ದರು. ಇದರೆಲ್ಲಲ್ಲಾ ವೇಶ್ಯಾವೃತ್ತಿಯಲ್ಲಿರುವ ಬಗ್ಗೆ ಓದುಗರಲ್ಲಿ ಅಸಹ್ಯಭಾವನೆಯನ್ನು ಮೂಡಿಸುತ್ತಿದ್ದವು. ಕೃಷ್ಣಕಾಂತರ ‘ಉಯಿಲ್’ ‘ಚಂದ್ರಶೇಖರ’ ಮುಂತಾದ ಕೃತಿಗಳು ಸಮಾಜ ವೇಶ್ಯಾವೃತ್ತಿಯನ್ನು ಪಿಡುಗಾಗಿ ನೋಡುವಂತೆ ಬಿಂಬಿಸುತಿದ್ದವು. ಅಮೃತಲಾಲ್ ಬಸ್ತರ್ ತಮ್ಮ ‘ತರುಣವಾಲ’ ನಾಟಕದಲ್ಲಿ ಕುಲೆಟೆಯರು ತಮ್ಮ ಸಮೀಪ ಬಂದರೆ ಅಸಹ್ಯ ಪಡುವಂತೆ ಪ್ರದರ್ಶಿಸುತ್ತಿದ್ದರು.
ರವೀಂದ್ರನಾಥ ಟ್ಯಾಗೋರ್ ಮಾತ್ರ ವೇಶ್ಯೆಯರ ಚಾರಿತ್ರ್ಯದ ಬಗ್ಗೆ ಹೊಸ ನೋಟಗಳನ್ನು ಬೀರಿದರು; ಆ ಮೂಲಕ ವೇಶ್ಯೆಯರಿಗೂ ಒಂದು ಬದುಕಿದೆ, ಅಂತರಂಗವಿದೆ, ಅವರೂ ಸಹ ನಮ್ಮ ನಿಮ್ಮಂತವರು ಎನ್ನುವುದನ್ನು ಬಿಂಬಿಸಿದರು. ಮಾನದಾ ದೇವಿ ಈ ಎಲ್ಲವನ್ನೂ ಓದಿ ಅರಗಿಸಿಕೊಂಡಳು. ಆ ಕಾಲದ ಪ್ರಸಿದ್ಧ ಸಾಹಿತಿಗಳಾದ ಶರತ್ ಚಟ್ಟೋಪಾಧ್ಯಾಯ, ನರೇಶ ಸೇನಗುಪ್ತ ಇವರೆಲ್ಲ ರವೀಂದ್ರನಾಥರ ಅಭಿಪ್ರಾಯವನ್ನು ಇನ್ನಷ್ಟು ವಿಸ್ತರಿಸಿ ಜನಸಾಮಾನ್ಯರಿಗೆ ವೇಶ್ಯೆಯರ ಕುರಿತು ಸಹಾನುಭೂತಿ ಮೂಡುವಂತೆ ಮಾಡಿದರು ಎನ್ನುತ್ತಾಳೆ. ಅವಳ ಓದಿನ ಈ ಹರಿವನ್ನು ಮತ್ತು ವಿಶ್ಲೇಷಣಾತ್ಮಕ ವಿಮರ್ಶೆಯನ್ನು ನೋಡಿದಾಗ ಈಕೆ ನಿಜವಾಗಿಯೂ ವಿದ್ಯಾವಂತ ವೇಶ್ಯೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ವೇಶ್ಯೆಯರ ಅನುಭವವನ್ನು ಬೇರೆಯಾರೋ ಬರೆದರೆ ಅದು ಲೈಂಗಿಕ ಕಾರ್ಯಕರ್ತೆಯರ ಮೇಲಿನ Sympathy ಅಥವಾ Empathy ಯಾಗುತ್ತದೆ. ಹೊರಗಿನಿಂದ ನೋಡುವುದಕ್ಕೂ, ಅದರಲ್ಲಿ ಸಕ್ರಿಯನಾದ ವ್ಯಕ್ತಿಯೇ ಅನುಭವವನ್ನು ತೋಡಿಕೊಳ್ಳುವುದಕ್ಕೂ ವ್ಯತ್ಯಾಸವಿದೆ.
ಎರಡು ವಿಭಿನ್ನ ಕೋನಗಳಿಂದ ಸಮಾಜದಲ್ಲಿ ವೇಶ್ಯೆಯರ ಕುರಿತು ಸಾಹಿತ್ಯ ಬಂದಾಗ ಓರ್ವ ವೇಶ್ಯೆಯಾಗಿ ತನ್ನ ಅನುಭವವನ್ನು ಹೇಳಿಕೊಳ್ಳಬೇಕು ಎನಿಸಿ ಈ ಕೃತಿಯನ್ನು ಬರೆದಿದ್ದಾಳೆ. ಆಕೆ ತನ್ನ ಆತ್ಮಕಥೆಯನ್ನು ಸತ್ಯದೊಂದಿಗಿನ ಮುಖಾಮುಖಿಯಾಗಿ ಅಭಿವ್ಯಕ್ತಿಸಿಲ್ಲ. ಅನುಭವವದೊಂದಿಗೆ ಸಾಗಿದ್ದಾಳೆ. ಗಿರಾಕಿಗಳನ್ನು ಶೋಷಿಸುವ ಹೊತ್ತಿನಲ್ಲಿ ತಾನು ಅವರ ಕುಟುಂಬಕ್ಕಾಗಲೀ, ಅವರ ಹೆಂಡತಿಗಾಗಲೀ ಮೋಸ ಮಾಡುತ್ತಿಲ್ಲ. ತನ್ನ ಹೆಂಡತಿಯನ್ನು ಯಾರು ಅತಿಯಾಗಿ ಪ್ರೀತಿಸುತ್ತಾರೋ ಅವರೇ ತನ್ನೊಂದಿಗೆ ಮಲಗಲು ಬರುತ್ತಿದ್ದರು ಎನ್ನುತ್ತಾಳೆ. ಸಮಾಜದಲ್ಲಿ ಗಣ್ಯವ್ಯಕ್ತಿಯಾಗಿ ಮುಖವಾಡ ಹಾಕಿಕೊಂಡು ಮಿಸ್ ಮುಖರ್ಜಿಯಾಗಿ ಬದುಕುತ್ತಿರುವುದನ್ನೂ ಮುಚ್ಚುಮರೆಯಿಲ್ಲದೇ ಹೇಳಿದ್ದಾಳೆ. ಇವಳ ಸ್ನೇಹಿತೆ ಕಾಳಿದಾಸಿ ಈ ವೃತ್ತಿಯಿಂದ ಸಿರಿವಂತಳಾದರೂ ಅವನ್ನೆಲ್ಲವನ್ನೂ ಕಳೆದುಕೊಳ್ಳಬೇಕಾಗಿರುವುದಕ್ಕೆ ಕಾರಣ ಅವಳು ವಿದ್ಯಾವಂತೆಯಾಗಿಲ್ಲದಿರುವುದು. ಮಾನದಾ ವಿದ್ಯಾವಂತಳಾದುದರಿಂದ ಹಾಗಾಗಿಲ್ಲ. ಗಳಿಸಿದ್ದನ್ನು ವೇಶ್ಯೆಯರ ಉದ್ಧಾರಕ್ಕಾಗಿ ಬಳಸಿಕೊಳ್ಳಬೇಕೆನ್ನುವ ಸಾಮಾಜಿಕ ಕಳಕಳಿ ಅವಳ ಈ ಆತ್ಮಕಥೆಯಲ್ಲಿದೆ. ಪೂರ್ವಾಗ್ರಹವಿಲ್ಲದೇ ತನ್ನ ಬದುಕಿನ ಬಟ್ಟೆಯನ್ನು ತಾನೇ ಅವಲೋಕನ ಮಾಡಿಕೊಂಡ ಹೆಣ್ಣೊಬ್ಬಳ ಆತ್ಮಕಥೆ ಇದು.
ನಾಗ. ಎಚ್. ಹುಬ್ಳಿಯವರು ಇಲ್ಲಿ ಭಾಷೆಯನ್ನು ದುಡಿಸಿಕೊಂಡಿರುವ ಕುರಿತು ಅಚ್ಚರಿಯೆನಿಸುತ್ತದೆ. ಇಲ್ಲಿನ ಬಂಗಾಳಿ ಭಾಷೆ 1930ರ ದಶಕದ್ದು. ಜಗತ್ತಿನ ಎಲ್ಲಾ ಭಾಷೆಗಳಲ್ಲಿಯೂ ಒಂದು ಶತಮಾನದ ನಂತರದ ಆಡುವ ಮತ್ತು ಓದುವ ಭಾಷೆಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ರಾಂಚಿ ಮತ್ತು ಬಂಗಾಲದ ಆದಿವಾಸಿಗಳೊಂದಿಗೆ ಸದಾ ಒಡನಾಡುವ ನಾಗ ಹುಬ್ಳಿ ಅವರ ಬಂಗಾಳಿ ಭಾಷಾ ಕೌಶಲ್ಯ ಇಲ್ಲಿ ಎದ್ದು ಕಾಣುತ್ತದೆ. ಜೊತೆಗೆ ಅನುವಾದದಲ್ಲಿ ಅವರು ಬಳಸಿರುವುದು ಮೂವತ್ತರ ದಶಕದ ಕನ್ನಡವನ್ನು. ಆ ಕಾಲದಲ್ಲಿ ಗಳಗನಾಥರು ಬಳಸುತ್ತಿದ್ದ ಕನ್ನಡಸ ಓಘ ಇಲ್ಲಿದೆ. ಹಾಗಾಗಿ ಇದು ಅನುವಾದ ಎನ್ನುವುದಕ್ಕಿಂತ ಕನ್ನಡದ ಸ್ವತಂತ್ರಕೃತಿಯಾಗಿ ರೂಪುಗೊಂಡಿದೆ. ಗಟ್ಟಿ ಅನುವಾದಕರಾದ ನಾಗ. ಎಚ್. ಹುಬ್ಳಿ ಅವರಿಗೆ ಮೆಚ್ಚುಗೆ ಕೊಡಲೇಬೇಕು. ಹೊಸ ಹೊಸ ಆಯಾಮದಲ್ಲಿ ಕೃತಿಗಳನ್ನು ಹೊರತರುತ್ತಿರುವ ವಸುಧೇಂದ್ರ ಅವರಿಗೂ ಛಂದದ ಪುಸ್ತಕಕಕ್ಕಾಗಿ ಅಭಿನಂದನೆಗಳು.
(ಕೃತಿ: ವಿದ್ಯಾವಂತ ವೇಶ್ಯೆಯ ಆತ್ಮಕಥೆ, ಬಂಗಾಳಿ ಮೂಲ: ಕುಮಾರಿ / ಶ್ರೀಮತಿ ಮಾನದಾ ದೇವಿ, ಬಂಗಾಳಿಯಿಂದ ಕನ್ನಡಕ್ಕೆ: ನಾಗ ಎಚ್ ಹುಬ್ಳಿ, ಪ್ರಕಾಶಕರು : ಛಂದ ಪುಸ್ತಕ, ಬೆಲೆ: ರೂ. 240/-)
ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.
ಬಂಗಾಳಿ ಮೂಲದ ವಿದ್ಯಾವಂತೆ ಬ್ರಾಹ್ಮಣ ವೇಶ್ಯೆಯ ಕುರಿತು ಬಹಳ ಉತ್ತಮ ವಾಗಿ ಶ್ರೀ ನಾರಾಯಣ ಯಾಜಿ ಯವರು ವಿಶ್ಲೇಷಣೆ ಮಾಡಿದ್ದಾರೆ.ಡಾ ಶಿವರಾಮ ಕಾರಂತರು ಹೇಳಿ ದಂತೆ 2-3ರೂಪಾಯಿಗೆ ಮೈ ಮಾರಿ ಕೊಳ್ಳುವ ಹೆಣ್ಣುಗಳಿಗೆ ಕಡಿಮೆ ಇಲ್ಲ. ವೇಶ್ಯೆ ಯಾಗಿದ್ದರೂ ಸಮಾಜ ಸೇವೆ ಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ವಿಶೇಷ. ಶ್ರೀ ಯಾಜಿ ಯವರ ಹಲವಾರು ಲೇಖನಗಳನ್ನು ಓದಿದ್ದೇನೆ. ಎ್ಲವೂ SUPER.
ಅಭಿನಂದನೆಗಳು ಮತ್ತು ಧನ್ಯವಾದಗಳು.
Thank you Sir.
ಧನ್ಯವಾದಗಳು ಸರ್.
ತಮ್ಮ ಪ್ರತಿಕ್ರಿಯೆ ಓದಿ ಖುಷಿಯಾಯ್ತು.