ದಿನ ಕಳೆದಂತೆ, ಜಯಮ್ಮನಿಗೆ ಇಲಿಯದೇ ಕಂಪನಿ, ಸಾಂಗತ್ಯ. ಒಂದೆರಡು ದಿನ ಆದಮೇಲೆ, ಅದರ ನುಣುಪಾದ ಮೈಯನ್ನು ಸವರಲು ನೋಡಿದರು. ಕೊಸರಿಕೊಂಡಿತು. ಆದರೂ ಒಳಗಡೆ ಇಷ್ಟವಾಯಿತೆಂದು ಕಾಣುತ್ತದೆ, ಮತ್ತೆ ಮತ್ತೆ ಹತ್ತಿರ ಬರುತ್ತಿತ್ತು. ಒಂದೆರಡು ಸಲ ತೊಡೆ, ಮಂಡಿಯ ಹತ್ತಿರ ಬಂತು. ಮತ್ತೆ ಸವರಿದರು. ಈ ಸಲ ಇಷ್ಟವಾಯಿತೆಂದು ಕಾಣುತ್ತದೆ, ಪಿಳಿ ಪಿಳಿ ಕಣ್ಣು ಬಿಡುತ್ತಾ ಜಯಮ್ಮನ ಕಡೆ ನೋಡಿದ ಹಾಗಾಯಿತು. ಹಾಗೆ ನೋಡುತ್ತಿದ್ದಾಗ ಒಂದೆರಡು ಸಲ ಇಲಿಯ ದೃಷ್ಟಿಯೂ ಜಯಮ್ಮನ ದೃಷ್ಟಿಯೂ ಒಂದಾಗುತ್ತಿದ್ದವು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ನಾಲ್ಕನೆಯ ಬರಹ ನಿಮ್ಮ ಓದಿಗೆ
ಜನನಾಯಕಿ ಜಯಮ್ಮನವರನ್ನು ಅವರ ವಿರೋಧಿಗಳು ಒಂದಲ್ಲ ಒಂದು ಕೇಸು ಹಾಕಿ, ಒಂದರ ಮೇಲೆ ಇನ್ನೊಂದು ಕೇಸ್ ಹಾಕಿ, ಜೈಲಿಗೆ ಅಟ್ಟುವುದರಲ್ಲಿ ಯಶಸ್ವಿಯಾದರು. ಯಾವ ಕೇಸೂ ಕೊನೆಗೆ ನಿಲ್ಲುವುದಿಲ್ಲ. ಜಾಮೀನು ಕೂಡ ಒಂದಲ್ಲ ಒಂದು ಹಂತದಲ್ಲಿ ಸಿಕ್ಕೇ ಸಿಗುತ್ತದೆ ಎಂಬುದು ಕೂಡ ವಿರೋಧಿ ಪಾಳೆಯದವರಿಗೆ ಗೊತ್ತಿದ್ದರೂ, ಜಯಮ್ಮನವರಿಗೆ ಕೆಲವು ದಿನಗಳ ಮಟ್ಟಿಗಾದರೂ ಸರಿಯೇ ಜೈಲುವಾಸದ ರುಚಿಯನ್ನು ತೋರಿಸಲೇಬೇಕೆಂಬ ಛಲ ಕೂಡ ತೀವ್ರವಾಗಿತ್ತು. ಆಕೆಗೆ ನಾನಾ ರೀತಿಯ ರೋಗಗಳಿದ್ದದ್ದರಿಂದ, ದೇಹದ ತುಂಬಾ ರಕ್ತ-ಮಾಂಸದ ಬದಲು ಔಷಧಿ, ಪುಡಿ, ಮಾತ್ರೆಗಳೇ ತುಂಬಿದ್ದರಿಂದ, ಸಾರ್ವಜನಿಕರೆಲ್ಲ ಅನುಕಂಪ ವ್ಯಕ್ತಪಡಿಸಿದರೂ ಏನೂ ಮಾಡಲು ಸಾಧ್ಯವಾಗಲಿಲ್ಲ. ತೀರಾ ಆಕೆಯ ಅನುಯಾಯಿಗಳು, ಪಾರ್ಥಸಾರಥಿ, ಕಪಾಳೇಶ್ವರ, ಶ್ರೀನಂದಿ, ಬೃಹದೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಕೆಲವರು ಸಮುದ್ರ ತೀರದಲ್ಲಿ ಡೇರೆ ಹಾಕಿ ಉಪವಾಸ ಮಾಡಿದರು, ಅಹೋರಾತ್ರಿ ಭಜನೆ ಮಾಡಿದರು. ಇದೆಲ್ಲಕ್ಕೂ ವಿರೋಧಿ ಪಾಳೆಯದವರು ಕೊಟ್ಟ ಉತ್ತರವೆಂದರೆ, ಆಕೆ ಅಧಿಕಾರದಲ್ಲಿದ್ದಾಗ ನಾವು ಕೂಡ ತಂಬಾ ರೋಸಿಹೋಗಿದ್ದೆವು ಎಂದು.
ಜೈಲಿಗಟ್ಟುವುದು ಮಾತ್ರವಲ್ಲ, ಜೈಲಿನಲ್ಲಿ ಯಾವ ಕೋಣೆಯಲ್ಲಿರಬೇಕು ಎಂಬುದನ್ನು ಕೂಡ ಆಯ್ಕೆ ಮಾಡಿದರು. ಜಾರ್ಜ್ ಕೋಟೆಯ ಬೆಟ್ಟದ ಮೇಲೆ ತುತ್ತತುದಿಯಲ್ಲಿ ಒಂದು ಕಿರುಕೋಣೆಯಿತ್ತು. ಬ್ರಿಟಿಷರ ಕಾಲದಲ್ಲಿ ರಾಜದ್ರೋಹ ಮಾಡಿದವರನ್ನು ಈ ಕಿರುಕೋಣೆಯಲ್ಲಿ ಇಡುತ್ತಿದ್ದರು. ಕೋಣೆಗೆ ಕಿಟಕಿಗಳಿರಲಿಲ್ಲ. ಒಂದು ಕಿರು ಬಾಗಿಲು ಮಾತ್ರ ಇತ್ತು. ಅದೂ ಕೂಡ ತುಕ್ಕು ಹಿಡಿದ ಬಾಗಿಲು. ಒಳಗಡೆ ಒಂದು ಕಲ್ಲು ಬೆಂಚು ಕೂಡ ಇರಲಿಲ್ಲ. ಒಂದು ಈಚಲು ಚಾಪೆ, ಹತ್ತಿಯೆಲ್ಲ ಹೊರಬಂದಿರುವ ದಿಂಬು, ಸಿಲವಾರದ ಲೋಟ, ತಟ್ಟೆ. ಮಲಮೂತ್ರ ವಿಸರ್ಜನೆಗೆ ಕೂಡ ಜೈಲು ಸಿಬ್ಬಂದಿಯನ್ನು ಅವಲಂಬಿಸಬೇಕಾಗಿತ್ತು. ಅವರು ಮನಸ್ಸು ಬಂದಾಗ ಬಂದು ಬಾಗಿಲು ತೆಗೆದರೆ, ಬಾಗಿಲು ತೆಗೆದ ಮೇಲೆ, ಬಾಗಿಲು ತೆಗೆದ ಮೇಲೂ ಒಪ್ಪಿಕೊಂಡರೆ, ಆವಾಗ ಜಯಮ್ಮನವರಿಗೆ ಮೂರು ಅಂತಸ್ತಿಗಾಗುವಷ್ಟು ಕಡಿದಾದ ಮೆಟ್ಟಿಲುಗಳನ್ನು ಇಳಿಯವಷ್ಟು ಮನಸ್ಸಿದ್ದರೆ, ಪಾಯಿಖಾನೆ ಕೋಣೆ ಸಿಗುತ್ತಿತ್ತು. ಹೀಗಾಗಿ, ಜಯಮ್ಮ ಎರಡು ಮೂರು ದಿನಕ್ಕೊಂದು ಸಲ ಕೆಳಗಿಳಿದು ನೈಸರ್ಗಿಕ ಒತ್ತಡಗಳಿಗೆ ಸ್ಪಂದಿಸುತ್ತಿದ್ದರು.
ಊಟ, ತಿಂಡಿ, ನೀರು ಕೂಡ ಅಷ್ಟೇ! ಮನಸ್ಸಿಗೆ ಬಂದಾಗ ಒಂದಷ್ಟು ನೀಡುವರು. ಅದೂ ಕೂಡ ಬಾಗಿಲು ತೆರೆದು ನೀಡಬೇಕು. ಬಾಗಿಲು ತೆರೆದು, ಬಾಗಿಲ ಹತ್ತಿರ ತಟ್ಟೆ, ಬಟ್ಟಲು ಇಟ್ಟುಹೋಗಿಬಿಡುವರು. ಅನ್ನ, ಸಾಂಬಾರು, ಒಂದೆರಡು ತರಕಾರಿ ಹೋಳು.
ಅದನ್ನು, ಅಷ್ಟನ್ನು ಕೊಡಲು ಕೂಡ ವಿರೋಧಿಗಳಿಗೆ ಮನಸ್ಸಿರಲಿಲ್ಲ. ಆದರೂ ನ್ಯಾಯಾಲಯ ಜಯಮ್ಮನವರ ವಕೀಲರ ಕೋರಿಕೆಗೆ, ಅನಾರೋಗ್ಯದ ವಿವರಗಳಿಗೆ, ಸ್ಪಂದಿಸಿ, ಪರಿಸ್ಥಿತಿ ಬಿಗಡಾಯಿಸದಂತೆ ಊಟ, ತಿಂಡಿ ಸರಬರಾಯಿ ಮಾಡಬೇಕೆಂದು, ಆ ಬಗ್ಗೆ ಮೂರು ದಿನಕ್ಕೊಮ್ಮೆ ಜೈಲಧಿಕಾರಿ ಕೋರ್ಟಿಗೆ ಮುಚ್ಚಳಿಕೆ ನೀಡಬೇಕೆಂದು ಆದೇಶಿಸಿತ್ತು.
ಜಯಮ್ಮ ಊಟ-ತಿಂಡಿಯನ್ನು ಮೂಸಲು ಕೂಡ ಹೋಗುತ್ತಿರಲಿಲ್ಲ. ಆದರೆ ಸಾರ್ವಜನಿಕರಿಗೆ ಕೋರ್ಟ್, ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಯುತ್ತಿದ್ದ ವಿವರಗಳ ಪ್ರಕಾರ ಜಯಮ್ಮ ಊಟ ತಿಂಡಿ ಮಾಡಿಕೊಂಡು, ಭಗವದ್ಗೀತೆ ಓದಿಕೊಂಡು ಆರೋಗ್ಯವಾಗಿದ್ದರು.
ಇಂತಹ ಕಷ್ಟದ ದಿನಗಳಲ್ಲೂ ಜಯಮ್ಮನವರಿಗೆ ಸಂಗಾತಿಯಾಗಿ ಒದಗಿ ಬಂದದ್ದು, ಸುಮಾರು ಒಂದು ದಪ್ಪ ಇಲಿ. ಹೆಗ್ಗಣವೂ ಅಲ್ಲ, ಸುಂಡಿಲಿಯೂ ಅಲ್ಲ, ಆ ರೀತಿಯದು. ಎಲ್ಲಿಂದಲೋ ಬಂತು. ಏಕೆಂದರೆ ಈ ಮೊದಲು ಅದಕ್ಕೆ ಜಯಮ್ಮನವರ ಪರಿಚಯ ಇರಲಿಲ್ಲ. ಬಂದು ಕೋಣೆ ತುಂಬಾ ಹರಿದಾಡಿದಾಗ, ನೆಗೆದಾಡಿದಾಗ, ಜಯಮ್ಮ ಕೊಂಚ ಹೌಹಾರಿದ್ದು, ಅಸಹ್ಯಪಟ್ಟಿಕೊಂಡಿದ್ದು ನಿಜ. ಒಂದೆರಡು ಸಲ ಲೊಚಗುಟ್ಟಿದರು, ಬೆದರಿಸಿದರು. ಅದೇನೂ ಹೆದರಲಿಲ್ಲ. ಎಲ್ಲೂ ಹೋಗಲಿಲ್ಲ. ತನ್ನ ಪಾಡಿಗೆ ತಾನು ಓಡಾಡಿಕೊಂಡು ಕರಕರ ಶಬ್ದ ಮಾಡಿಕೊಂಡು ಸ್ವಮಗ್ನವಾಗಿತ್ತು. ಜಯಮ್ಮನೂ ಕೂಡ ಬಾಲ್ಯದಿಂದ ಸ್ವಮಗ್ನರೇ ತಾನೆ! ಒಂದೆರಡು ಸಲ ಇಲಿಯು ಜಯಮ್ಮನವರ ಊಟದ ತಟ್ಟೆ ಬಟ್ಟಲಿಗೆ ಬಾಯಿ ಹಾಕಿದ್ದು, ಮೂಸಿ ನೋಡಿದ್ದು ನಿಜ. ಅದೇನು ಅನ್ನಿಸಿತೋ, ಅಸಹ್ಯವಾಯಿತೋ ಮತ್ತೆ ತಟ್ಟೆ ಹತ್ತಿರ ಬರಲಿಲ್ಲ. ಜಯಮ್ಮನವರು ಇಲಿಯ ಬಗ್ಗೆ ಉದಾಸೀನರಾಗಿದ್ದುದು ನಿಜ. ಆದರೆ ಇಲಿಗೆ, ಸಮಯ ಸಂದರ್ಭ ಅರ್ಥವಾಯಿತೆಂದು ಕಾಣುತ್ತದೆ, ಅರ್ಥವಾದರೂ ತಾನೆ ಏನು ಮಾಡಬಲ್ಲದು. ಜಯಮ್ಮನಿಗೆ ಕಂಪನಿ ಕೊಡಲು, ಸಾಂತ್ವನ ಹೇಳಲು ಎನ್ನುವಂತೆ ಜಯಮ್ಮನ ಮುಂದೆ ಕೂರುವುದು. ಕಣ್ಣು ಪಿಳಿ ಪಿಳಿ ಬಿಡುವುದು. ಮೂತಿಯನ್ನು ಆ ಕಡೆ, ಈ ಕಡೆ ತಿರುಚುವುದು. ಒಂದೆರಡು ಸಲ ಊಟದ ತಟ್ಟೆ ಬಟ್ಟಲನ್ನು ಕೂಡ ಎಳೆದುಕೊಂಡು ಬಂದು ಆಕೆಯ ಮುಂದೆ ಇಟ್ಟಿತು. ಅದರ ಕಕ್ಕುಲಾತಿ, ಒತ್ತಾಸೆ ಕಂಡು ಜಯಮ್ಮನಿಗೆ ತಾನಿದ್ದ ಸ್ಥಿತಿಯಲ್ಲೇ ಮುಖದಲ್ಲಿ ಒಂದು ಒಣ ನಗೆಯ ಎಳೆ ಮೂಡಿತು.
ಬ್ರಿಟಿಷರ ಕಾಲದಲ್ಲಿ ರಾಜದ್ರೋಹ ಮಾಡಿದವರನ್ನು ಈ ಕಿರುಕೋಣೆಯಲ್ಲಿ ಇಡುತ್ತಿದ್ದರು. ಕೋಣೆಗೆ ಕಿಟಕಿಗಳಿರಲಿಲ್ಲ. ಒಂದು ಕಿರು ಬಾಗಿಲು ಮಾತ್ರ ಇತ್ತು. ಅದೂ ಕೂಡ ತುಕ್ಕು ಹಿಡಿದ ಬಾಗಿಲು. ಒಳಗಡೆ ಒಂದು ಕಲ್ಲು ಬೆಂಚು ಕೂಡ ಇರಲಿಲ್ಲ. ಒಂದು ಈಚಲು ಚಾಪೆ, ಹತ್ತಿಯೆಲ್ಲ ಹೊರಬಂದಿರುವ ದಿಂಬು, ಸಿಲವಾರದ ಲೋಟ, ತಟ್ಟೆ. ಮಲಮೂತ್ರ ವಿಸರ್ಜನೆಗೆ ಕೂಡ ಜೈಲು ಸಿಬ್ಬಂದಿಯನ್ನು ಅವಲಂಬಿಸಬೇಕಾಗಿತ್ತು.
ದಿನ ಕಳೆದಂತೆ, ಜಯಮ್ಮನಿಗೆ ಇಲಿಯದೇ ಕಂಪನಿ, ಸಾಂಗತ್ಯ. ಒಂದೆರಡು ದಿನ ಆದಮೇಲೆ, ಅದರ ನುಣುಪಾದ ಮೈಯನ್ನು ಸವರಲು ನೋಡಿದರು. ಕೊಸರಿಕೊಂಡಿತು. ಆದರೂ ಒಳಗಡೆ ಇಷ್ಟವಾಯಿತೆಂದು ಕಾಣುತ್ತದೆ, ಮತ್ತೆ ಮತ್ತೆ ಹತ್ತಿರ ಬರುತ್ತಿತ್ತು. ಒಂದೆರಡು ಸಲ ತೊಡೆ, ಮಂಡಿಯ ಹತ್ತಿರ ಬಂತು. ಮತ್ತೆ ಸವರಿದರು. ಈ ಸಲ ಇಷ್ಟವಾಯಿತೆಂದು ಕಾಣುತ್ತದೆ, ಪಿಳಿ ಪಿಳಿ ಕಣ್ಣು ಬಿಡುತ್ತಾ ಜಯಮ್ಮನ ಕಡೆ ನೋಡಿದ ಹಾಗಾಯಿತು. ಹಾಗೆ ನೋಡುತ್ತಿದ್ದಾಗ ಒಂದೆರಡು ಸಲ ಇಲಿಯ ದೃಷ್ಟಿಯೂ ಜಯಮ್ಮನ ದೃಷ್ಟಿಯೂ ಒಂದಾಗುತ್ತಿದ್ದವು. ಹಾಗೆ ದೃಷ್ಟಿ ಮಿಲನವಾದಾಗ ಜಯಮ್ಮನ ಕಣ್ಣಲ್ಲಿ ಒಂದು ಮಿಲಿಸೆಕೆಂಡು ಮಿಂಚು ಮೂಡುತ್ತಿತ್ತು ಎಂದು ಇಲಿಗಾಗಲೀ ಜಯಮ್ಮನಿಗಾಗಲೀ ಹೇಗೆ ಗೊತ್ತಾಗಬೇಕು?
ಜಯಮ್ಮನ ಮೇಲೆ ಹತ್ತಾರು ಕೇಸುಗಳನ್ನು ಹಾಕಲಾಗಿತ್ತು. ಹಾಕಬೇಕಾದ, ಹಾಕಬೇಕು ಅಂದುಕೊಂಡ ಇನ್ನೂ ಕೇಸುಗಳಿದ್ದವು. ಒಂದು ಕೇಸಿನಲ್ಲಿ ಈವತ್ತು ಜಾಮೀನು ಸಿಕ್ಕಿದರೆ, ತಕ್ಷಣವೇ ಇನ್ನೊಂದು ಕೇಸು ಜಡಿಯಲಾಗುತ್ತಿತ್ತು. ಹಾಗಾಗಿ, ಕೊನೆಗೂ ಆಕೆಗೆ ಜಾಮೀನು ಸಿಕ್ಕಿ, ಜೈಲಿನಿಂದ ಹೊರಗಡೆ ಬಂದಾಯಿತು ಎನ್ನುವ ಹೊತ್ತಿಗೆ, ಒಂದು ಎಂಟು-ಹತ್ತು ದಿನಗಳಾದರೂ ಆಯಿತು, ಜಾರ್ಜ್ ಕೋಟೆಯ ಬೆಟ್ಟದ ಸುರಂಗವಾಸ ಕೊನೆಗೂ ಮುಗಿಯಿತು. ಜಯಮ್ಮನ ಪಕ್ಷದ ಅಭಿಮಾನಿಗಳು ಕೋಟೆ, ಬೆಟ್ಟದ ಹತ್ತಿರ ತುಂಬಿಕೊಂಡು ವಿಪರೀತ ಗಡಿಬಿಡಿ, ಗಜಿಬಿಜಿ. ಅಲ್ಲೇ ಸಭೆ. ನಿಷ್ಠೆಯ ಪ್ರದರ್ಶನ, ಉರುಳು ಸೇವೆ. ಇಂತಹ ದಿನ ಇಂತಹ ಮುಹೂರ್ತದಲ್ಲೇ ಜೈಲಿನಿಂದ ಹೊರಬರಬೇಕೆಂದು ಜ್ಯೋತಿಷಿಗಳು ಹೇಳಿದ್ದರಿಂದ, ಆ ದಿನ, ಆ ಮುಹೂರ್ತಕ್ಕೆ ಮುಂಚೆ ಬರಲು ಒಲ್ಲೆನೆಂದರು ಜಯಮ್ಮನವರು.
ಇಲಿಗೆ ಮಾತನಾಡಲು ಬರದಿರಬಹುದು! ಮನುಷ್ಯರ ಭಾಷೆ, ವರ್ಣಮಾಲೆ ಗೊತ್ತಾಗದಿರಬಹುದು. ಆದರೆ, ಕರುಳಿನ ಭಾಷೆ, ಕಣ್ಣಿನ ಭಾಷೆ ಎಂಬುದು ಕೂಡ ಒಂದಿರುತ್ತದಲ್ಲ. ಜಯಮ್ಮನಿಗೂ ಇಲಿಯ ಬಳಕೆ ಹೆಚ್ಚಾಯಿತು. ಅದಕ್ಕೂ ಸಲಿಗೆ, ಧೈರ್ಯ ಬಂದು, ಜಯಮ್ಮನಿಗೆ ಕೊಟ್ಟಿದ್ದ ಈಚಲು ಚಾಪೆಯ ಅಂಚನ್ನು ಕಡಿಯುತ್ತಿತ್ತು, ಕರಕರ ಶಬ್ದ ಮಾಡುತ್ತಿತ್ತು. ಜಯಮ್ಮ ಕೂಡ ಒಂದೆರಡು ಸಲ ಲಹರಿ ಬಂದಾಗ, ಅದರ ಬಾಲವನ್ನು ಹಿಡಿಯಲು ನೋಡಿದರು, ಮೂತಿ ಹತ್ತಿರವಿದ್ದ ಕೂದಲ ಎಳೆಯನ್ನು ಹಿಡಿಯಲು ನೋಡಿದರು, ಹಿಡಿದೇಬಿಟ್ಟರು ಎನ್ನುವಾಗ ಇಲಿ ಹುಸಿಮುನಿಸಿನಿಂದ ಚೆಂಗನೆ ನೆಗೆದಂತೆ ಮಾಡಿ ಮತ್ತೆ ಒಂದೆರಡು ನಿಮಿಷದೊಳಗೆ ಅವರ ಮುಂದೇ ಕುಳಿತು, ಓಡಾಡಿ, ಅವರಿಂದ ಅಂಗಚೇಷ್ಟೆಯನ್ನು ಬಯಸುತ್ತಿತ್ತು. ಸುಮಾರು ಹದಿನೈದು ಇಪ್ಪತ್ತು ವರ್ಷಗಳಿಂದ ಜಯಮ್ಮನವರು ಯಾರನ್ನೂ ಮುಟ್ಟಿರಲಿಲ್ಲ. ಅವರನ್ನು ಕೂಡ ಯಾರೂ ಮುಟ್ಟಿರಲಿಲ್ಲ, ವೈದ್ಯರು ದಾದಿಯರು ಬಿಟ್ಟರೆ. ಮುಟ್ಟುವಷ್ಟು, ಮುಟ್ಟಿಸಿಕೊಳ್ಳುವಷ್ಟು ಯಾರೊಬ್ಬರೂ ಅವರ ಹತ್ತಿರ ಬಂದಿರಲಿಲ್ಲ, ಹತ್ತಿರ ಹೋಗಿರಲಿಲ್ಲ. ತೀರಾ ಸಮೀಪ ಬಂದಿದ್ದುದು, ಮುಟ್ಟಿದರೆ ಸಿಗುವಂತಿದ್ದುದು, ಮುಟ್ಟಬೇಕು ಅನಿಸಿದ್ದು ಈ ಇಲಿಯನ್ನು ಮಾತ್ರ.
ಜಯಮ್ಮನಿಗೆ ಗೊತ್ತಾಗದ ಹಾಗೆ, ಜೈಲು ಸಿಬ್ಬಂದಿಗಳಿಗೂ ಗೊತ್ತಾಗದ ಹಾಗೆ, ಇಲಿಯು ಜಯಮ್ಮನ ಜೊತೆಯೇ ಹೊರಟುಬಿಟ್ಟಿತು. ಪಕ್ಷದ ಕಾರ್ಯಕರ್ತರ, ಅಭಿಮಾನಿಗಳ ನೂಕುನುಗ್ಗಲು ಸಂಭ್ರಮದಲ್ಲಿ ಇಲಿಯನ್ನು ಯಾರು ಗಮನಿಸುತ್ತಾರೆ. ಜಯಮ್ಮನನ್ನು ಸರ್ವಾಲಂಕಾರ ಮಾಡಿದ ಟ್ರಾಕ್ಟರ್ ಮೇಲಿಟ್ಟ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮೆರವಣಿಗೆಯಲ್ಲಿ ಕರೆದೊಯ್ಯುವ ಉದ್ದೇಶವಿತ್ತಷ್ಟೆ! ಇಲಿ ಟ್ರಾಕ್ಟರ್ ಏರಿ, ಪಲ್ಲಕ್ಕಿಯ ಕೆಳಗೆ ಕುಳಿತುಕೊಂಡಿತು. ತೋಟದ ಬಂಗಲೆ ಸೇರಿದಾಗಲೂ ಯಾರಿಗೂ ಗೊತ್ತಾಗದ ಹಾಗೆ ಒಳಗೆ ಪ್ರವೇಶಿಸಿತು.
ಜಯಮ್ಮನ ಅಭಿಮಾನಿಗಳು ಆವತ್ತು ಬಂಗಲೆಯಲ್ಲಿ ವಿಶೇಷ ಹೋಮ, ಹವನ, ಪೂಜೆ ಏರ್ಪಡಿಸಿದ್ದರು. ಇದೆಲ್ಲದರ ಗಡಿಬಿಡಿ ಮುಗಿದು, ಜಯಮ್ಮ ಮಂಚದಲ್ಲಿ ಒರಗಿಕೊಂಡು, ತುಂಬಾ ಊದಿಕೊಂಡಿದ್ದ ಮಂಡಿಯನ್ನೆಲ್ಲ ಕರೂರಿನಿಂದ ಬಂದಿದ್ದ ಹರಳೆಣ್ಣೆಯನ್ನು ಕರಿಬೇವಿನ ಸೊಪ್ಪಿನ ಪುಡಿಯ ಜೊತೆ ಉಜ್ಜಿಕೊಂಡು ನೀವಿಸಿಕೊಳ್ಳುತ್ತಿದ್ದಾಗ ಇಲಿಯು ಎದುರಿಗೆ ಪ್ರತ್ಯಕ್ಷವಾಯಿತು. ಅದಕ್ಕೂ ಏನೋ ಸಂಭ್ರಮ, ಗಡಿಬಿಡಿ. ಅದು ಹರಿದಾಡುವ ಶೈಲಿಯೇ ಒಂದು ನೃತ್ಯದಂತೆ ಇತ್ತು. ಎಷ್ಟೋ ವರ್ಷಗಳ ನಂತರ ಜಯಮ್ಮ ಮನತುಂಬಿ, ಮುಖತುಂಬಾ ನಕ್ಕರು. ಇಲಿಯನ್ನು ಬಾ, ಬಾ, ಎಂದು ಕರೆದರು. ಬಾರದೆ, ತುಂಟಾಟ ಮಾಡಿದಾಗ, ಜಯಮ್ಮ ಮಂಡಿ, ಪಾದದ ನೋವನ್ನು ಮರೆತು, ಅದರ ಹಿಂದೆ ಓಡಾಡಿ, ಹಿಡಿದು ಮುದ್ದು ಮಾಡಲು ಹೋದಾಗ ಮತ್ತೆ ನುಣುಚಿಕೊಂಡಿತು.
ಮುಂದಿನದೆಲ್ಲ ಕೊಂಗ ಸೀಮೆಯಲ್ಲಿ ಎಲ್ಲರಿಗೂ ಗೊತ್ತಿರುವ ಕತೆಯೇ ಆದ್ದರಿಂದ, ಇಲ್ಲಿ ಕೂಡ ಒಂದೆರಡು ಸಾಲುಗಳಲ್ಲಿ ಮುಗಿಸಬಹುದು. ಇಲಿಯು ಜಯಮ್ಮನ ಬಂಗಲೆಯಲ್ಲೇ ವಾಸಮಾಡಲು ಪ್ರಾರಂಭಿಸಿತು. ಪಕ್ಷದ ಪದಾಧಿಕಾರಿಗಳ, ಸಚೇತಕರೆಲ್ಲರ ಪರಿಚಯವಾಯಿತು. ದಿನದುದ್ದಕ್ಕೂ ನಡೆಯುವ ಮೀಟಿಂಗುಗಳ ನಡುವೆ ಕೂಡ ಹೆದರಿಕೊಳ್ಳದೆ, ಸಂಕೋಚಪಟ್ಟುಕೊಳ್ಳದೆ, ಎಲ್ಲರ ಕಾಲಿಗೂ ತೊಡರಾಡುತ್ತಾ, ಆದರೆ ಯಾರನ್ನೂ ಕಚ್ಚದೆ ಹರಿದಾಡಿಕೊಂಡು, ನಲಿದಾಡಿಕೊಂಡಿತ್ತು.
ಕಾಲ ಕೂಡಿ ಬಂದಾಗ, ಜಯಮ್ಮ ಮತ್ತೆ ಮುಖ್ಯಮಂತ್ರಿಯಾದರು. ಕೋರ್ಟಿನಲ್ಲಿದ್ದ ಎಲ್ಲ ಕೇಸುಗಳು ಅವರ ಪರವಾಗಿಯೇ ತೀರ್ಮಾನವಾದವು. ಇಲಿಯು ಕೂಡ ನಾಯಕಿಯ ಜೊತೆ ಬಡ್ತಿ ಪಡೆದು, ಬುಲೆಟ್ ಪ್ರೂಫ್ ಕಾರಿನ ಸೀಟಿನ ಕೆಳಗಡೆ ಕೂತುಕೊಂಡು ಸಚಿವಾಲಯಕ್ಕೂ ಹೋಗುತ್ತಿತ್ತು. ಅಮ್ಮ ಕಡತ ವಿಲೇವಾರಿ ಮಾಡುತ್ತಿದ್ದರೆ, ಇಲಿಯು ಹರಿದಾಡುತ್ತಾ, ನೆಗೆದಾಡುತ್ತಾ, ಕಿಚ ಕಿಚ ಶಬ್ದ ಮಾಡುತ್ತಾ, ರಾಜಯೋಗವನ್ನು ಅನುಭವಿಸಲು ಪ್ರಾರಂಭಿಸಿತು.
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.
The detailed description is inimitable!
Thanks Madam.
Thank u so much.