ತಮ್ಮ ಮನಸ್ಸಿನಲ್ಲಿ ಇದ್ದುದನ್ನು ಮೊದಲು ಮುಕುಂದರಾವ್ ಹೆಂಡತಿ ಬಳಿ ಹೇಳಿದರು. ಆಗ ಶ್ರೀ ವೇದ “ಅಲ್ಲರೀ, ಆಟೋದವರಿಗೆ ಹೆಣ್ಣು ಕೊಡುವುದಂದರೆ ನೆಂಟರಿಷ್ಟರು ಆಡಿಕೊಳ್ಳುವುದಿಲ್ಲವೇ, ಸಾಮಾನ್ಯವಾಗಿ ಆಟೋ ಡ್ರೈವರ್‌ಗಳ ಬಗ್ಗೆ ಕೆಲವರಿಗೆ ಏನೋ ಒಂದು ರೀತಿಯ ತಾತ್ಸಾರ ಭಾವ ಇರುತ್ತಲ್ಲವೇ, ಅಲ್ಲದೆ ಶ್ರಾವಣಿಗೂ ತುಂಬಾ ವಯಸ್ಸು ಆಗಿ ಹೋಗಿಲ್ಲ, ಇನ್ನೂ ಸ್ವಲ್ಪ ಕಾಯೋಣ, ಬನಶಂಕರಿ ಹುಡುಗ ಇನ್ನೂ ಏನು ಫೈನಲ್ ಮಾಡಿಲ್ಲ ಅಲ್ಲವೇ? ಅದು ಆದರೂ ಆಗಬಹುದಲ್ಲವೇ” ಎಂದಳು. ಆಗ ಮುಕುಂದರಾವ್ ನಮ್ಮ ಮಗಳಿಗಲ್ಲದಿದ್ದರೂ ಬೇರೆ ಯಾರಾದರೂ ಗಂಡು ಹುಡುಕುವ ಸಂಬಂಧಿಗಳಿಗೆ ಸೂಚಿಸಬಹುದಲ್ಲ ಎಂದರು.
ವಸಂತಕುಮಾರ್ ಕಲ್ಯಾಣಿ ಬರೆದ ಕತೆ “ಸಮನ್ವಿತ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಮುಕುಂದರಾವ್ ತಮ್ಮ ಒಬ್ಬಳೇ ಮಗಳು ಶ್ರಾವಣಿ ಹಾಗೂ ಪತ್ನಿ ಶ್ರೀ ವೇದಾ ಜೊತೆ ಓಲಾ ಆಟೋದಲ್ಲಿ ಮನೆ ಕಡೆ ಹೊರಟಿದ್ದರು. ಇದು ಎಷ್ಟನೆಯದೋ! ಲೆಕ್ಕ ಇಟ್ಟಿರಲಿಲ್ಲ. ಆದರೂ ಸುಮಾರು ಹತ್ತಕ್ಕೂ ಹೆಚ್ಚು. ಆ ದಿನ ಬೆಳಗ್ಗೆ ತಿಂಡಿ ತಿಂದು ಹೊರಟವರು, ಹುಡುಗನ ಮನೆಯಲ್ಲಿ ಕಾಫಿ ಕುಡಿದು, ಉಭಯ ಕುಶಲೋಪರಿ ಮಾತಾಡಿ, ‘ನಾವು ತಿಳಿಸುತ್ತೇವೆ’ ಎಂಬ ಎಂದಿನ ಆಶ್ವಾಸನೆಯೊಂದಿಗೆ, ಬ್ರೋಕರ್ ಶ್ರೀಕಂಠಯ್ಯನವರಿಗೆ ನಮಸ್ಕರಿಸಿ ಹೊರಟಿದ್ದರು. ಹಾಗೆ ನೋಡಿದರೆ ಗಂಡುಗಳೇ ತಮ್ಮ ಪಟಾಲಮ್ಮಿನೊಂದಿಗೆ ಹೆಣ್ಣು ನೋಡಲು ಬರುವುದು ಸಹಜ. ಏಳೆಂಟು ಪರೀಕ್ಷೆಗಳು ಹಾಗೆಯೇ ನಡೆದಿದ್ದವು ಕೂಡಾ. ಉಪ್ಪಿಟ್ಟು ಕೇಸರಿಬಾತ್‌ನಿಂದ ಶುರುವಾದದ್ದು ಹೊರಗಿನ ಸಿಹಿ ಚೌ ಚೌ ಕಾಫೀಗೆ ಬಂದು ನಿಂತಿತ್ತು. ನೆಂಟರು ಇಷ್ಟರು ಹೇಳಿದ್ದು, ಅವರ ಜಾತಿಯ ಸಂಘದಲ್ಲಿ ನೋಂದಾಯಿಸಿ ಸಿಕ್ಕಿದ್ದು. ಬ್ರೋಕರ್ ಶ್ರೀಕಂಠಯ್ಯನವರ ಕಡೆಯದು ಎಲ್ಲ ಪ್ರಯತ್ನಗಳು ಯಾಕೋ ವಿಫಲವಾಗಿತ್ತು.
ಶ್ರಾವಣಿ ಬಿಕಾಂ ಮುಗಿಸಿ, ಅಪ್ಪ ಅಮ್ಮ “ಬೇಕಾದರೆ ಮುಂದೆ ಓದು, ಎಂಕಾಂ ಅಥವಾ ಇನ್ನೇನಾದರೂ” ಎಂದರೂ ಕೇಳದೆ ಕೆಲಸ ಹುಡುಕಿಕೊಂಡಿದ್ದಳು. ಖಾಸಗಿ ಕಂಪನಿಯಲ್ಲಿದ್ದ ಇನ್ನೇನು ನಿವೃತ್ತಿಗೆ ಹತ್ತಿರ ಬಂದಿದ್ದ ತಂದೆ, ಗೃಹಿಣಿ ತಾಯಿ, ಇರಲೊಂದು ಸ್ವಂತ ಸಣ್ಣ ಮನೆ. ಹಾಗಾಗಿ ಶ್ರಾವಣಿಯ ವಿವೇಕ ಅವಳಿಗೆ ಕೆಲಸ ಹುಡುಕಿಕೊಳ್ಳುವಂತೆ ಮಾಡಿತ್ತು. ಎರಡು ವರ್ಷಗಳಲ್ಲಿ ಬಡ್ತಿ ದೊರೆತು, ಸುಮಾರು ನಲವತ್ತು ಸಾವಿರ ಸಂಬಳಕ್ಕೆ ತಲುಪಿದ್ದಳು. ಮುಕುಂದರಾವ್ ತಂಗಿಯರ ಮದುವೆ ಮುಗಿಸಿ, ತಾವು ಮದುವೆಯಾಗುವಾಗ ಸಹಜವಾಗಿ ತಡವಾಗಿತ್ತು. ತಂದೆಯು ತೀರಿಕೊಂಡ ಮೇಲೆ ತಾಯಿ ಮಗ ಇಬ್ಬರೇ ಇದ್ದಾಗ, ತಾಯಿಯ ಒತ್ತಡ ಹೆಚ್ಚಾಗಿ ಸಂಬಂಧದಲ್ಲಿ ಮದುವೆಯಾಗಿದ್ದರು. ಮಗು ತಡವಾಗಿ ಆದಾಗ, ಅದು ಬೇಕಿದ್ದ ಹೆಣ್ಣೇ ಆದಾಗ, ಒಂದಕ್ಕೆ ಸಾಕು ಎಂದುಕೊಂಡರು ದಂಪತಿಗಳು. ಈ ನಡುವೆ ಅವರ ತಾಯಿಯೂ ಕಣ್ಮುಚ್ಚಿದ್ದರು.
ನೋಡಿದ ತಕ್ಷಣ ಒಪ್ಪಿಬಿಡುವಂತಹ ಬಣ್ಣವಾಗಲಿ, ರೂಪವಾಗಲಿ ಶ್ರಾವಣಿಯದಲ್ಲ. ಆದರೆ ಖಂಡಿತ ಕುರೂಪಿಯಲ್ಲ. ಕಪ್ಪೂ ಅಲ್ಲದ ಬಿಳುಪೂ ಅಲ್ಲದ ಬಣ್ಣ. ತಂದೆಯ ಬಳುವಳಿ ನೀಳ ಮೂಗು. ತಾಯಿಯಂತೆ ದೇಹ ಪ್ರಕೃತಿ. ಒಟ್ಟಿನಲ್ಲಿ ಒಂದು ಸಾಧಾರಣ ಎತ್ತರ, ಗಾತ್ರ, ಬಣ್ಣದ ರೂಪ. ಆದರೆ ನೀಳ ಮೂಗಿನಿಂದ ಮುಖ ಒಂದು ರೀತಿ ಲಕ್ಷಣವಾಗಿಯೇ ಇತ್ತು. ಆದರೂ ಏಕೋ ಯಾವ ಸಂಬಂಧವೂ ಕೂಡಿ ಬರದೆ, ಜಾತಕ ತೋರಿಸಿ ‘ಅಂಗಾರಕ ದೋಷವೇನು ಇಲ್ಲ, ಸಣ್ಣ ಪುಟ್ಟ ದೋಷಗಳಿವೆ, ಅದಕ್ಕೆ ಪರಿಹಾರ ಮಾಡಿಸಿದರೆ ಸಾಕು. ಬೇಕಾದರೆ ಒಂದು ಶಾಂತಿ ಹೋಮ ಮಾಡಿಸಿ’ ಎನಿಸಿಕೊಂಡು, ಹಾಗೆಯೇ ಮದುವೆ ಯೋಗವೂ, ಮಕ್ಕಳ ಭಾಗ್ಯವೂ, ಆರೋಗ್ಯ, ಆಯಸ್ಸು ಎಲ್ಲವೂ ತಕ್ಕಮಟ್ಟಿಗೆ ಚೆನ್ನಾಗಿಯೇ ಇದೆ’ ಎಂದಾಗ ಅಪ್ಪ ಅಮ್ಮನಿಗೆ ಒಂದು ಚೂರು ನೆಮ್ಮದಿ ಸಿಕ್ಕರೂ, ಯಾಕೋ ಗಂಡು ಯಾವುದೂ ಕೂಡಿ ಬರುತ್ತಿರಲಿಲ್ಲ. ಕೊನೆಗೆ ಶ್ರಾವಣಿ “ಮೊದಲು ಫೋಟೋ ನೋಡಿ, ಜಾತಕ ಓಕೆ ಆಗಿ, ಇಂತಹ ಎಲ್ಲ ಫಾರ್ಮಾಲಿಟಿಸ್ ಮುಗಿದ ನಂತರ, ಪರಸ್ಪರ ಭೇಟಿ ಮಾಡಿಸಿ” ಎಂದು ಅಪ್ಪ ಅಮ್ಮನಿಗೆ ತಾಕೀತು ಮಾಡಿದ್ದಳು.
ಹಾಗೆಯೇ ಹೋಮ ಮಾಡಿಸಿದ ನಂತರ ಸಿಕ್ಕ ಮೊದಲ ಸಂಬಂಧ ಇದಾಗಿತ್ತು. ಯಾಕೋ ಇದು ಸಹ ಆಗೇ ಬಿಡುತ್ತದೆ ಎನ್ನುವ ನಂಬಿಕೆ- ಹುಡುಗನ ಮನೆಯವರ ನಡವಳಿಕೆಯಿಂದ- ಬರಲಿಲ್ಲ. ಇನ್ನೂ ಸುಮಾರು ಅರ್ಧ ಗಂಟೆಯ ಪ್ರಯಾಣವಿತ್ತು. ಮುಕುಂದರಾವ್ ಹಾಗೆಯೇ ಯೋಚಿಸುತ್ತಾ ಡ್ರೈವರ್‌ನ ಸೀಟ್‌ನ ಹಿಂಬದಿ ಇದ್ದ ವಿವರ ಗಮನಿಸುತ್ತಿದ್ದರು. ಅದರಲ್ಲಿ ಡ್ರೈವರ್ ಹೆಸರು ಸರಿಯಾಗಿ ಕಾಣಿಸದೆ ಬಗ್ಗಿ ನೋಡಿದರು. ಸುನೀಲ ಎಂದಿತ್ತು. ಮುಕುಂದ ರಾವ್ ಅನ್ಯಮನಸ್ಕರಾಗಿ ಇದ್ದುದರಿಂದ ಅಲ್ಲಿಯವರೆಗೆ ಗಮನಿಸಿಯೇ ಇರಲಿಲ್ಲ. ಡ್ರೈವರ್ ಒರಗು ದಿಂಬಿನ ಹಿಂಭಾಗದಲ್ಲಿ, ಒಂದು ಫ್ರೇಮ್‌ನಲ್ಲಿ ಕೆಲವು ಕಾದಂಬರಿಗಳು, ಮ್ಯಾಗ್ಜಿನ್‌ಗಳು, ಒಂದು ಕನ್ನಡ ಒಂದು ಇಂಗ್ಲಿಷ್ ಪೇಪರ್ ಇತ್ತು. ಅದಾಗಲೇ ಶ್ರಾವಣಿಯ ಕೈಯಲ್ಲಿ ಒಂದು ವಾರ ಪತ್ರಿಕೆ ಇತ್ತು. ಇವರು ಗಮನಿಸಿರಲಿಲ್ಲ. ಸ್ವತಃ ಸಾಹಿತ್ಯ ಅಭಿಮಾನಿಯೂ ಆಗಿದ್ದವರಿಗೆ ತುಂಬಾ ಖುಷಿಯಾಯಿತು. ಆ ಬಗ್ಗೆಯೇ ಒಂದಷ್ಟು ಮಾತುಕತೆ ನಡೆದು, ಸುನೀಲನಿಗೆ ಓದುವ ಅಭ್ಯಾಸ ಮೊದಲಿನಿಂದಲೂ ಇದೆ ಎಂದೂ, ಅವನು ಸಹ ಸಣ್ಣಪುಟ್ಟ ಕವನಗಳನ್ನು ಬರೆದಿದ್ದು ಅದು ಸಹ ಕೆಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಅವನ ಪ್ರಕಾರ ಕೆಲವು ಪ್ರಯಾಣಿಕರು ಕನ್ನಡ ತಿಳಿಯದವರು ಕನ್ನಡ ವಾರಪತ್ರಿಕೆಗಳನ್ನು ತಿರುವಿ ಹಾಕಿ ನೋಡುವರೆಂದೂ, ಕೆಲವರು ರಾಯಚೂರು, ಬಿಜಾಪುರ, ದಕ್ಷಿಣ ಕನ್ನಡದವರು ಓದುವರೆಂದೂ, ಕೆಲವು ಬೆಂಗಳೂರಿನ ಕನ್ನಡಿಗರು ಇಂಗ್ಲಿಷ್ ಪೇಪರ್ ಕೈಗೆತ್ತಿಕೊಳ್ಳುವರೆಂದು ತಮಾಷೆಯಾಗಿ ಹೇಳಿದ.
ಸುಮ್ಮನೆ ತಮ್ಮ ಎಂದಿನ ಸ್ವಭಾವದಂತೆ ಮಾತಾಡಲು ಶುರು ಮಾಡಿದರು. “ಏನಪ್ಪಾ ಸುನೀಲ… ಆಟೋ ಸ್ವಂತಾನ ಬಾಡಿಗೆ ನಾ” ಎಂದು ಆರಂಭಿಸಿದವರು, ಆಟೋ ಸ್ವಂತ ಎಂದು ತಿಳಿದ ನಂತರ ಸಂಪಾದನೆ, ಮನೆಯ ಏರಿಯ, ತಂದೆ ತಾಯಿ ಹೀಗೆ ವಿಚಾರಿಸಿದಾಗ, ಅವನು ಎಲ್ಲದಕ್ಕೂ ತಾಳ್ಮೆಯಿಂದಲೇ ನಗುವಿನ ಎಳೆಯೊಂದಿಗೆ ಉತ್ತರಿಸುತ್ತಿದ್ದ. ಒಟ್ಟಿನಲ್ಲಿ ಮುಕುಂದರಾವ್ ಮತ್ತವರ ಕುಟುಂಬಕ್ಕೆ ತಿಳಿದದ್ದೇನೆಂದರೆ, ಸುನೀಲನಿಗೆ ತಂದೆ ತಾಯಿ ಇದ್ದಾರೆ. ಅಲ್ಲದೆ ತಂಗಿ ಒಬ್ಬಳ ಮದುವೆಯಾಗಿದೆ. ಇವನು ಬಿಕಾಂ ಮಾಡಿ, ಯಾಕೋ ಅವರಿವರ ಕೈ ಕೆಳಗೆ ಕೆಲಸ ಮಾಡಲು ಇಷ್ಟವಿಲ್ಲದೆ, ಆಟೋ ಓಡಿಸುತ್ತಿದ್ದಾನೆ. ಬೆಳಗ್ಗೆ ತಿಂಡಿ ರಾತ್ರಿ ಊಟ ಮನೆಯಲ್ಲಿ. ಮಧ್ಯಾಹ್ನ ಮಾತ್ರ ಹೊರಗೆ ತಿನ್ನುತ್ತಾನೆ. ಚಿಕ್ಕಬಾಣಾವರದ ಹತ್ತಿರ ಇವನೇ ಕಂತಿನಲ್ಲಿ ಕೊಂಡ ಸೈಟ್ ಇದೆ. ಹತ್ತು ಲಕ್ಷಕ್ಕೆ ಐದು ವರ್ಷದ ಹಿಂದೆ ಕೊಂಡದ್ದು ಈಗ ಮೂವತ್ತರ ಹತ್ತಿರ ಓಡುತ್ತಿದೆ. ಮೊದಲು ಮನೆ ಕಟ್ಟುವುದೋ ಅಥವಾ ಆಟೊ ಕೊಟ್ಟು ಕಾರ್ ಕೊಂಡು ಬಾಡಿಗೆ ಓಡಿಸುವುದೋ ನಿರ್ಧರಿಸಿಲ್ಲ. ಎರಡರಲ್ಲಿ ಒಂದಾದ ನಂತರವೇ ಮದುವೆ ಯೋಚನೆ. ಸದ್ಯ ಲೀಸ್ ಮನೆಯಲ್ಲಿ ವಾಸ. ತಾಯಿ ಗೃಹಿಣಿ. ತಂದೆ ಸಣ್ಣ ಅಂಗಡಿಯೊಂದು ನಡೆಸುತ್ತಾ ಚಟ್ನಿ ಪುಡಿ ಹಪ್ಪಳ ಮಾರುವ ಕಾಂಡಿಮೆಂಟ್ಸ್ ವ್ಯಾಪಾರ ಮಾಡುತ್ತಾರೆ. ಎಲ್ಲ ವಿಷಯ ಒಟ್ಟಿಗೆ ಒಮ್ಮೆಲೇ ಹೊರಬಂದುದಲ್ಲ, ಮುಕುಂದರಾಯರ ಒಂದೊಂದೇ ಪ್ರಶ್ನೆ, ಪೂರಕ ಪ್ರಶ್ನೆಗೆ ಉತ್ತರವಾಗಿ ಸಿಕ್ಕಿದ್ದು.
ಮನೆ ತಲುಪಲು ಇನ್ನೂ ಐದು ಆರು ನಿಮಿಷ ಇತ್ತು, ಆಗ ಸುನೀಲ ಇಲ್ಲೇ ಬಲಕ್ಕೆ ಕಾಣುವ ಕಾಲುದಾರಿಯಲ್ಲಿ ಹತ್ತು ನಿಮಿಷ ಹೋದರೆ ನಮ್ಮ ಮನೆ ಎಂದ. “ನಮ್ಮನೆಯಿಂದ ನಿಮ್ಮನೆಗೆ ಮೂರ್ನಾಲ್ಕು ಕಿಲೋ ಮೀಟರ್ ಅಷ್ಟೇ” ಎಂದ. ಮುಕುಂದರಾಯರಿಗೆ ಒಳಗೇನೋ ಚಡಪಡಿಕೆ. ಯಾವ ಜಾತಿ ಎಂದು ಹೇಗೆ ಕೇಳುವುದು? ಅದು ಈ ಕಾಲದಲ್ಲಿ! ಅದು ಸಂಭಾವಿತರ ಕೆಲಸವಲ್ಲ. ಕೊನೆಗೆ ಧೈರ್ಯಮಾಡಿ “ನೀವು ವೆಜ್ಜೋ ನಾನ್ ವೆಜ್ಜೋ ” ಎಂದರು. ಸುನೀಲನಿಗೆ ಏನೆನಿಸಿತೋ ಅವನೂ ಕೂಡ ಗುಟ್ಟು ಬಿಡದೆ “ಪ್ಯೂರ್ ವೆಜ್ ಸರ್” ಎಂದ. ನಿನ್ನ ನಂಬರ್ ಬರ್ಕೊಳ್ತೀನಪ್ಪಾ ಏನಾದರೂ ಎಮರ್ಜೆನ್ಸಿ ಇದ್ದರೆ, ಆಟೋ ಬೇಕಿದ್ದರೆ ಫೋನ್ ಮಾಡಬಹುದಲ್ವಾ” ಎಂದರು, ಇಳಿಯುವ ಮೊದಲು. “ಖಂಡಿತ ಸರ್, ಅದರಲ್ಲಿರುವ ನಂಬರ್ ಅಲ್ಲದೆ ಇನ್ನೂ ಒಂದಿದೆ ಬರ್ಕೊಳಿ” ಎಂದು ನಂಬರ್ ಹೇಳಿದ. ನೋಟ್ ಮಾಡಿಕೊಂಡರು ಮುಕುಂದರಾವ್. “ಬಾಪ್ಪ, ಕಾಫಿ ಕುಡಿದು ಹೋಗು” ಎಂದಾಗ, ಅವರ ಶ್ರೀಮತಿ ಕೂಡ ಧ್ವನಿಗೂಡಿಸಿದರು. ಆದರೆ ಸುನೀಲ “ಇಲ್ಲಮ್ಮ ಥ್ಯಾಂಕ್ಸ್, ನಾನು ಕಾಫಿ ಟೀ ಬಿಟ್ಟುಬಿಟ್ಟೆ, ಯಾಕಂದ್ರೆ ಈ ಲೈನ್‌ನಲ್ಲಿ ಆಗಾಗ ಕೊಡಿಸುವವರು ಇರುತ್ತಾರೆ, ನಾವು ಕೊಡಿಸ್ತಾ ಇರ್ತೀವಿ. ಜಾಸ್ತಿಯಾಗಿ ಗ್ಯಾಸ್ ಟ್ರಬಲ್ ಆಗುತ್ತೆ. ಅದಕ್ಕೆ ಪ್ರಾಬ್ಲಮ್ಮೇ ಬೇಡಾಂತ ಪೂರ್ತಿ ಬಿಟ್ಟುಬಿಟ್ಟೆ”ಎಂದ. “ಸರಿಯಪ್ಪ ಒಳ್ಳೆದಾಗಲಿ” ಎಂದರು ದಂಪತಿ.
ಹೀಗೆ ಒಂದು ವಾರ ಕಳೆಯಿತು. ನೋಡಿ ಬಂದಿದ್ದ ಹುಡುಗನ ಕಡೆಯಿಂದ ಯಾವುದೇ ವಿಷಯ ತಿಳಿಯಲಿಲ್ಲ. ಇವರು ಒಂದು ವಾರ ಕಳೆಯಲಿ ಎಂದೇ ಕಾದಿದ್ದರು. ಕೊನೆಗೆ ತಡೆಯದೆ ಶ್ರೀಕಂಠಯ್ಯನಿಗೆ ಫೋನ್ ಮಾಡಿದಾಗ ತಿಳಿದುಬಂದದ್ದು, ‘ಅವರು ಇನ್ನೂ ಒಂದು ಹುಡುಗಿ ನೋಡಿದ್ದಾರೆ, ಎರಡರಲ್ಲಿ ಒಂದು ಓ.ಕೆ. ಮಾಡುವ ಸಾಧ್ಯತೆ ಇದೆ ನೋಡೋಣ’ ಎಂದು. ಇನ್ನೂ ಎರಡು ದಿನ ಕಳೆಯಿತು. ಯಾಕೋ ಮುಕುಂದರಾಯರಿಗೆ ಸುನೀಲ್ ನೆನಪಾಯಿತು. ‘ಫೋನ್ ಮಾಡಲೇ’ ಎಂದುಕೊಂಡು, ‘ಬಿಜಿ ಇರ್ತಾನೆ ಬೇಡ’ ಎಂದು ಸುಮ್ಮನಾದರು. ಯಾಕೋ ಅವನು ಪ್ಯೂರ್ ವೆಜ್ ಅಂದಿದ್ದು, ನಗು ನಗುತ್ತಾ ಮಾತನಾಡುವ ಶೈಲಿ ಎಲ್ಲವೂ ನೆನಪಾಗಿ, ಮನೆಯಿಂದ ಹೊರಗೆ ಬಂದು ಫೋನ್ ಮಾಡಿ ಬಿಟ್ಟರು. ರಿಂಗ್ ಆಗಿ ಇನ್ನೇನು ಕಟ್ ಆಗಬೇಕು ಎನ್ನುವಾಗ, ಇವರು ಕಟ್ ಮಾಡಲೇ ಎಂದುಕೊಂಡ ಕ್ಷಣವೇ ಸುನಿಲ ಫೋನ್ ತೆಗೆದಿದ್ದ. ‘ ಹಲೋ’ ಎಂದಾಗ ಇವರು “ನಮಸ್ಕಾರ ಸುನಿಲ್, ನಾನು ಮುಕುಂದರಾವ್ ಎಂದರು. ಸುನಿಲ್ ಒಂದು ಕ್ಷಣ “ಯಾವ ಮುಕುಂದರಾವ್” ಎಂದ. “ನಾನಪ್ಪ, ಅದಿರಲಿ ಒಂದು ನಿಮಿಷ ಮಾತನಾಡಬಹುದಾ” ಎಂದರು. “ಮಾತಾಡಿ ಫ್ರೀ ಇದ್ದೀನಿ” ಅಂದಾಗ, ಇವರು “ನಾನಪ್ಪ, ಅದೇ ಹೋದ ವಾರ ಕಲ್ಸಂದ್ರ ಸಾಯಿ ಬಡಾವಣೆಗೆ ಡ್ರಾಪ್ ಮಾಡಿ ಹೋದರಲ್ಲ” ಎಂದರು. ಸುನೀಲ ನಗುತ್ತಾ “ನೆನಪಾಯಿತು. ಅದೇ ವೆಜ್ಜೋ ನಾನ್ ವೆಜ್ಜೋ ಅಂತ ಕೇಳಿದ್ದಿರಲ್ಲ…” ಎಂದಾಗ, ಮುಕುಂದ ರಾವ್ ಸಂಕೋಚದಿಂದ “ಹೌದಪ್ಪ” ಎಂದರು. ಹೀಗೆ ಅದು ಇದು ಮಾತಾಡಿ ಇಟ್ಟರು. ಈ ಬಾರಿಯೂ ಜಾತಿ ಕೇಳಬೇಕಿತ್ತೇನೋ ಎಂದುಕೊಂಡರೂ ಸಾಧ್ಯವಾಗಲಿಲ್ಲ. ನಂತರ ದಿನಕ್ಕೊಮ್ಮೆ, ಎರಡು ದಿನಕ್ಕೊಮ್ಮೆ ಇವರು ಫೋನ್ ಮಾಡುವುದು, ಅವನು ಫ್ರೀ ಇಲ್ಲದೆ ತೆಗೆಯದಿದ್ದರೆ ನಂತರ ಅವನೇ ಮಾಡುತ್ತಿದ್ದ. ಪರಸ್ಪರ ಮನೆಗೆ ಬರಲು ಆಹ್ವಾನಿಸಿದ್ದು ಆಯಿತು.
ತಮ್ಮ ಮನಸ್ಸಿನಲ್ಲಿ ಇದ್ದುದನ್ನು ಮೊದಲು ಮುಕುಂದರಾವ್ ಹೆಂಡತಿ ಬಳಿ ಹೇಳಿದರು. ಆಗ ಶ್ರೀ ವೇದ “ಅಲ್ಲರೀ, ಆಟೋದವರಿಗೆ ಹೆಣ್ಣು ಕೊಡುವುದಂದರೆ ನೆಂಟರಿಷ್ಟರು ಆಡಿಕೊಳ್ಳುವುದಿಲ್ಲವೇ, ಸಾಮಾನ್ಯವಾಗಿ ಆಟೋ ಡ್ರೈವರ್‌ಗಳ ಬಗ್ಗೆ ಕೆಲವರಿಗೆ ಏನೋ ಒಂದು ರೀತಿಯ ತಾತ್ಸಾರ ಭಾವ ಇರುತ್ತಲ್ಲವೇ, ಅಲ್ಲದೆ ಶ್ರಾವಣಿಗೂ ತುಂಬಾ ವಯಸ್ಸು ಆಗಿ ಹೋಗಿಲ್ಲ, ಇನ್ನೂ ಸ್ವಲ್ಪ ಕಾಯೋಣ, ಬನಶಂಕರಿ ಹುಡುಗ ಇನ್ನೂ ಏನು ಫೈನಲ್ ಮಾಡಿಲ್ಲ ಅಲ್ಲವೇ? ಅದು ಆದರೂ ಆಗಬಹುದಲ್ಲವೇ” ಎಂದಳು. ಆಗ ಮುಕುಂದರಾವ್ ನಮ್ಮ ಮಗಳಿಗಲ್ಲದಿದ್ದರೂ ಬೇರೆ ಯಾರಾದರೂ ಗಂಡು ಹುಡುಕುವ ಸಂಬಂಧಿಗಳಿಗೆ ಸೂಚಿಸಬಹುದಲ್ಲ ಎಂದರು. ಒಟ್ಟಿನಲ್ಲಿ ಆಗಾಗ ಸುನೀಲನ ವಿಷಯ ಪ್ರಸ್ತಾಪವಾಗುತ್ತಿತ್ತು.
ಒಮ್ಮೆ ಸಂಜೆ ವಾಕಿಂಗ್ ಹೊರಟಿದ್ದ ಮುಕುಂದರಾವ್ ತಮ್ಮ ನಿತ್ಯದ ಹಾದಿ ಬಿಟ್ಟು ಬೇರೆ ಹಾದಿಯಲ್ಲಿ ಸಾಗಿದ್ದಾಗ, ಆ ದಿನ ಸುನೀಲ ಹೇಳಿದ್ದ ಚೌಡೇಶ್ವರಿ ದೇವಾಲಯದ ಪಕ್ಕದ ಕಾಲುದಾರಿ ತಲುಪಿದ್ದರು. ಆ ತಿರುವಿನಲ್ಲಿ ನಿಂತು ಸುನೀಲನಿಗೆ ಫೋನ್ ಮಾಡಿಯೇ ಬಿಟ್ಟರು. ಸುನೀಲ ಮನೆಯಲ್ಲಿ ಇದ್ದ. “ನೀವು ಹಾಗೆ ಬರ್ತಾ ಇರಿ ನಾನು ಸಿಗುವೆ” ಎಂದವನು ಎರಡು ಮೂರು ನಿಮಿಷದಲ್ಲಿ ಬೈಕ್ನಲ್ಲಿ ಎದುರು ಸಿಕ್ಕಿದ. ಅವನೇ ಗುರುತಿಸಿ, ನಿಲ್ಲಿಸಿ ಹತ್ತಿಸಿಕೊಂಡು ಮನೆ ಕಡೆ ಹೋದ. ಎರಡು ಬೆಡ್ರೂಮ್‌ನ ಸುಸಜ್ಜಿತ ಮನೆ. ಎದುರೇ ಆಟೋ ನಿಂತಿತ್ತು. ಒಂದು ಚೂರು ಧೂಳು ಇಲ್ಲದೆ. ಬೈಕ್ ಕೂಡ ಹಾಗೆ ಸ್ವಚ್ಛ ಫಳಫಳ. ಮನೆಯೊಳಗೂ ಒಂದು ರೀತಿಯ ನೀಟ್ನೆಸ್ ಅನ್ನುತ್ತಾರಲ್ಲ ಅದು. ಬೆತ್ತದ ಸೋಫಾದಲ್ಲಿ ಇವರನ್ನು ಕುಳ್ಳಿರಿಸಿ ಸುನೀಲ ಅದು-ಇದು ಮಾತಾಡ್ತಾ ಇರುವಾಗಲೇ, ಅವನ ತಾಯಿ ಲಲಿತಮ್ಮ ಒಂದು ಸಣ್ಣ ತಟ್ಟೆಯಲ್ಲಿ ಎರಡು ಮಧ್ಯಮ ಗಾತ್ರದ ಕೋಡುಬಳೆ ದೊಡ್ಡ ಲೋಟದಲ್ಲಿ ನೀರು ತಂದಿಟ್ಟರು. ಸುನೀಲ ಹೊರಡುವಾಗಲೇ ತಾಯಿಗೆ ಇವರ ಬಗ್ಗೆ ಹೇಳಿ ಹೊರಟಿದ್ದ. ಮುಕುಂದರಾವ್ ಸಂಕೋಚದಿಂದ “ಇದೆಲ್ಲ ಏನು ಬೇಡ ಸ್ವಲ್ಪ ನೀರು ಸಾಕು” ಎಂದರು. ಆಗ ಲಲಿತಮ್ಮ “ಸಂಕೋಚ ಬೇಡ, ಯಾವತ್ತಾದ್ರೂ ನಿಮ್ಮನ್ನೆಲ್ಲ ನಮ್ಮ ಮನೆಗೆ ಕರೆದು ತರಲು ನಾನೇ ಹೇಳಿದ್ದೆ. ಮುಂದಿನ ಸಲ ಬರುವಾಗ ಎಲ್ಲರೂ ಬನ್ನಿ” ಎಂದರು ಹಾಗೆಯೇ” ಕೋಡುಬಳೆ ಹೊರಗಿನಿಂದ ತಂದಿದ್ದಲ್ಲ, ನಮ್ಮದು ಅದೇ ಕಾಯಕ. ಆದ್ದರಿಂದ ಮನೆಯಲ್ಲಿ ಯಾವಾಗಲೂ ಸ್ಟಾಕ್ ಇರುತ್ತೆ ತಗೊಳ್ಳಿ” ಎಂದರು. ಆಗ ಮುಕುಂದ ರಾವ್” ನಿಮ್ಮ ಮನೆಯವರು?” ಎಂದರು. ಅಷ್ಟರಲ್ಲಿ ಲಲಿತಮ್ಮ ಕಾಫಿ ತರಲು ಒಳಗೆ ಹೋಗಿದ್ದರು. ಸುನೀಲನೆ ಹೇಳಿದ ಅಪ್ಪ ಬರುವುದು ಸ್ವಲ್ಪ ತಡವೇ, ಮಧ್ಯಾಹ್ನ ಎರಡು ಗಂಟೆಗೆ ಬಂದು ಊಟ ಮುಗಿಸಿ ರೆಸ್ಟ್ ಮಾಡಿ, ಸುಮಾರು ನಾಲ್ಕಕ್ಕೆ ಹೊರಟು, ಅಂಗಡಿ ತೆಗೆದರೆ ರಾತ್ರಿ ಒಂಬತ್ತೂವರೆ ಹತ್ತರವರೆಗೂ ಅಂಗಡಿಯಲ್ಲಿ ಇರುತ್ತಾರೆ” ಎಂದ. ಅಷ್ಟರಲ್ಲಿ ಲಲಿತಮ್ಮ ಕಾಫಿ ತಂದರು. ಇವರಿನ್ನು ಒಂದೇ ಕೋಡುಬಳೆ ತಿಂದದ್ದು ನೋಡಿ ಯಾಕೆ ಇಷ್ಟವಾಗಲಿಲ್ಲವೆ ಎಂದಾಗ ಮುಕುಂದ ರಾವ್ “ಅಯ್ಯೋ ಹಾಗೇನಿಲ್ಲ ತುಂಬಾ ಚೆನ್ನಾಗಿದೆ” ಎಂದು ಇನ್ನೊಂದಕ್ಕೆ ಕೈ ಹಾಕಿ, ತಿನ್ನುತ್ತಾ, ಮಧ್ಯಮಧ್ಯ ಒಂದು ಗುಟುಕು ಕಾಫಿ ಹೀರಿದರು. ಅದು ಸಹ ಅವರಿಗೆ ಬೇಕಾದ ಹಾಗೇ ಹಬೆಯಾಡುವ ಸ್ಟ್ರಾಂಗ್ ಫಿಲ್ಟರ್ ಕಾಫಿ. ಯಾಕೋ ಮುಕುಂದರಾಯರಿಗೆ ತಾನು ಹೆಂಡತಿಗೆ ಹೇಳಿದ ಹಾಗೆ ಬೇರೆಯವರಿಗೆ ಬೇಡ ನಮಗೇ ಸಂಬಂಧಿಗಳಾಗಲಿ ಎನಿಸಿತು.
ಹೊರಡುವಾಗ ಲಲಿತಮ್ಮ ಕೋಡುಬಳೆ ಚಕ್ಕುಲಿಯ ಎರಡು ಪ್ಯಾಕೆಟ್‌ಗಳನ್ನು ಕೊಟ್ಟು “ನೀವು ಬಂದದ್ದು ಬಹಳ ಸಂತೋಷ. ಮುಂದಿನ ಸಲ ಬರುವಾಗ ಎಲ್ಲರೂ ಬನ್ನಿ” ಎನ್ನುತ್ತಾ ಸಂಭ್ರಮ ಪಟ್ಟರು. ಹಾಗೆಯೇ “ನೀವು ಬರುವ ಮುಂಚೆ ಸುನ್ನಿಗೆ ಫೋನ್ ಮಾಡಿದರೆ ಅವನೇ ಎಲ್ಲರನ್ನು ಕರೆತರುತ್ತಾನೆ, ಹೇಗೂ ನೀವು ಮೂವರೇ ಇರುವುದಂತೆ.” ಎಂದರು. “ನೀವೂ ನಿಮ್ಮ ಮನೆಯವರೂ ಬಿಡುವು ಮಾಡಿಕೊಂಡು ಮೂವರೂ ಬನ್ನಿ”. ಎನ್ನುತ್ತಾ ಹೊರಟರು ಮುಕುಂದರಾವ್. “ನಡೀರಿ ಅಂಕಲ್, ನಾನೇ ನಿಮ್ಮ ಮನೆ ಹತ್ತಿರ ಬಿಟ್ಟು, ಹಾಗೆ ಇನ್ನು ಸ್ವಲ್ಪ ಹೊತ್ತು ಆಟೋ ಓಡಿಸಿ ಬರ್ತೀನಿ” ಎಂದು ಹೊರಟ ಸುನ್ನಿ, ಅಮ್ಮನಿಗೆ “ಬರ್ತೀನಮ್ಮ..” ಎಂದು ಹೇಳಿ ಇವರನ್ನು ಕೂರಿಸಿಕೊಂಡು ಹೊರಟ. “ಮನೆಗೆ ಬಂದು ಹೋಗಪ್ಪ” ಎಂದರೂ ಕೇಳದೆ, ಮನೆ ಅಷ್ಟು ದೂರ ಇದ್ದಾಗಲೇ ನಿಲ್ಲಿಸಿ, ಬೈ ಹೇಳಿ ಹೊರಟಿದ್ದ.
ಮುಕುಂದ ರಾವ್ ಅನ್ಯಮನಸ್ಕರಾಗಿ ಇದ್ದುದರಿಂದ ಅಲ್ಲಿಯವರೆಗೆ ಗಮನಿಸಿಯೇ ಇರಲಿಲ್ಲ. ಡ್ರೈವರ್ ಒರಗು ದಿಂಬಿನ ಹಿಂಭಾಗದಲ್ಲಿ, ಒಂದು ಫ್ರೇಮ್‌ನಲ್ಲಿ ಕೆಲವು ಕಾದಂಬರಿಗಳು, ಮ್ಯಾಗ್ಜಿನ್‌ಗಳು, ಒಂದು ಕನ್ನಡ ಒಂದು ಇಂಗ್ಲಿಷ್ ಪೇಪರ್ ಇತ್ತು. ಅದಾಗಲೇ ಶ್ರಾವಣಿಯ ಕೈಯಲ್ಲಿ ಒಂದು ವಾರ ಪತ್ರಿಕೆ ಇತ್ತು. ಇವರು ಗಮನಿಸಿರಲಿಲ್ಲ. ಸ್ವತಃ ಸಾಹಿತ್ಯ ಅಭಿಮಾನಿಯೂ ಆಗಿದ್ದವರಿಗೆ ತುಂಬಾ ಖುಷಿಯಾಯಿತು.
ಮನೆಗೆ ಬಂದಾಗ ಶ್ರಾವಣಿ, ಶ್ರೀವೇದಾ ಕಾಯುತ್ತಿದ್ದರು ‘ಏನು ಈ ದಿನ ವಾಕಿಂಗ್ ಲೇಟ್ ಆಯ್ತಲ್ಲ…’ ಎನ್ನುವ ಭಾವನೆಯಲ್ಲಿ. ಕೈಯಲ್ಲಿದ್ದ ಕೊಡುಬಳೆ ಚಕ್ಕುಲಿ ಟೀಪಾಯ್ ಮೇಲಿಟ್ಟು, ಎರಡನೇ ನಂಬರಿಗೆ ಫ್ಯಾನ್ ತಿರುಗಿಸಿಕೊಂಡು ಕೂತು ದಣಿವಾರಿಸಿಕೊಂಡು- ಅದು ವಾಕಿಂಗ್ ನಿಂದ ಆದದ್ದಲ್ಲ ಖುಷಿ ಹೆಚ್ಚಾಗಿ ಆದದ್ದು- ವಿವರ ಹೇಳಿದರು ಮುಕುಂದರಾವ್. ಮನೆಯ ಅಚ್ಚು ಕಟ್ಟುತನದ ಬಗ್ಗೆ, ಮನೆ ಜನರ ಸಂಭಾವಿತತನದ ಬಗ್ಗೆ ತುಸು ಹೆಚ್ಚೇ ಹೇಳಿದರು. ಹಾಗೆಯೇ ಅವರಿಗೆ ಬರಲು ಹೇಳಿರುವುದಾಗಿಯೂ ತಿಳಿಸಿದರು. ಹೀಗೆಯೇ ಒಂದು ವಾರ ಕಳೆದಿತ್ತು. ಸುನೀಲನ ಫೋನ್ ಮುಕುಂದರಾಯರಿಗೆ, ತಾವು ಮೂವರು ಮನೆಗೆ ಬರುತ್ತಿರುವುದಾಗಿಯೂ ತಮ್ಮ ಅಭ್ಯಂತರವೇನು ಇಲ್ಲವಷ್ಟೇ ಎಂದು ಕೇಳಿದ. “ಅಯ್ಯೋ, ಮೂವರು ಮನೆಯಲ್ಲಿ ಇದ್ದೇವೆ… ಖಂಡಿತ ಬನ್ನಿ..” ಎಂದರು ಮುಕುಂದರಾವ್. ಹೆಂಡತಿಗೂ ಹೇಳಿ ಸಂಭ್ರಮಿಸಿದರು. “ಅಯ್ಯೋ, ನಾನೇನೂ ಸಿದ್ಧ ಮಾಡಿಟ್ಟುಕೊಂಡಿಲ್ಲವಲ್ಲ… ಏನು ಮಾಡಲಿ” ಎಂದು ಶ್ರೀವೇದಾ ಪೇಚಾಡುವಾಗ, ಶ್ರಾವಣಿಯೇ “ನೀನೇನು ಟೆನ್ಶನ್ ಮಾಡಿಕೊಳ್ಳಬೇಡ ಅಮ್ಮ, ಐದು ನಿಮಿಷ ಹೊರಗೆ ಹೋಗಿ ಬರ್ತೀನಿ… ನೀನು ಕಾಫಿ ಮಾಡು.. ಹಾಗೆಯೇ ಸ್ವಲ್ಪ ಹಾಲ್‌ನ ಕ್ಲೀನ್ ಮಾಡು ಸಾಕು..” ಎಂದು, ಭರ್ರನೆ ಸ್ಕೂಟಿಯಲ್ಲಿ ಹೊರಟು, ಹೇಳಿದ ಹಾಗೆ ಹತ್ತು ನಿಮಿಷದೊಳಗೆ ಶ್ರೀ ಗುರು ಬೇಕರಿಯಿಂದ ತುಪ್ಪದ ಮೈಸೂರುಪಾಕ್, ಖಾರ, ಹಾಗೆಯೇ ಮಲ್ಲಿಗೆ ಹೂವು, ಹಣ್ಣು, ಎಲ್ಲ ತಂದು ಜೋಡಿಸಿ ಇಟ್ಟುಕೊಂಡಳು. ಅವಳು ಬಂದ ಐದು ನಿಮಿಷಕ್ಕೆ ಸುನೀಲ ತಂದೆ ತಾಯಿಯ ಜೊತೆ ಆಟೋದಲ್ಲಿ ಆಗಮಿಸಿದ.
ಎಲ್ಲರನ್ನೂ ಸ್ವಾಗತಿಸಿ, ನಡುಮನೆಯಲ್ಲಿ ಕೂರಿಸಿ ಮಾತಾಡತೊಡಗಿದರು. ಮುಕುಂದರಾಯರು ಸುನೀಲನ ತಂದೆಯನ್ನು ನೋಡಿರಲಿಲ್ಲ. ಪರಸ್ಪರ ಪರಿಚಯದ ನಂತರ, ಲಲಿತಮ್ಮ ತಾವು ತಂದಿದ್ದ ಹೂವು ಹಣ್ಣು, ಹಾಗೆಯೇ ಮನೆಯಲ್ಲಿಯೇ ಮಾಡಿದ್ದ ಕೊಬ್ಬರಿ ಬರ್ಫಿ ಕೋಡುಬಳೆ, ಚಕ್ಕುಲಿ ಎಲ್ಲವನ್ನು ಒಂದು ತಟ್ಟೆಯಲ್ಲಿ ಜೋಡಿಸಿ ಶ್ರಾವಣಿ ಕೈಯಲ್ಲಿ ಕೊಟ್ಟು “ತುಂಬಾ ಲಕ್ಷಣವಾಗಿದ್ದೀಯಮ್ಮ” ಎಂದರು. ಸ್ವಲ್ಪ ಹೊತ್ತು ಅದೂ ಇದೂ ಮಾತಾಡಿದ ನಂತರ ಲಲಿತಮ್ಮನವರೇ “ನೀವೇನು ತಪ್ಪು ತಿಳಿದುಕೊಳ್ಳುವುದಿಲ್ಲವೆಂದರೆ ನಾನೊಂದು ಮಾತು ಕೇಳಲೇ” ಎಂದಾಗ ಶ್ರೀವೇದಾಳ ಹೃದಯ ‘ದಸಕ್’ ಎಂದರೂ, ಗಂಡನ ಮುಖ ನೋಡುತ್ತಾ “ಅಯ್ಯೋ, ಅದಕ್ಕೇನು ಕೇಳಿ ಪರವಾಗಿಲ್ಲಾ” ಎಂದರು. ಆಗ ಲಲಿತಮ್ಮ “ಮುಚ್ಚುಮರೆ ಏಕೆ, ನಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಬಿಡುತ್ತೇವೆ, ನಿಮ್ಮ ಮಗಳು ಶ್ರಾವಣಿ ನಮ್ಮ ಮನೆಗೆ ಸೊಸೆಯಾಗಿ ಬರಬಹುದಾ, ಇದರಲ್ಲಿ ಅವಸರವೇನು ಇಲ್ಲ; ಯೋಚಿಸಿ ನೋಡಿ” ಎಂದಾಗ ಒಂದೆರಡು ನಿಮಿಷ ಮೌನ ಆವರಿಸಿತು. ಮುಕುಂದರಾಯರು ಶ್ರೀ ವೇದಾಳನ್ನು ಒಳಕೋಣೆಗೆ ಕರೆದುಕೊಂಡು ಹೋಗುತ್ತಾ ‘ಒಂದು ನಿಮಿಷ ಬರ್ತೀವಿ’ ಎಂದು ಎರಡು ನಿಮಿಷದಲ್ಲಿ ಹೊರಗೆ ಬಂದರು. ಅಷ್ಟರಲ್ಲಿ ಶ್ರೀವಾಣಿ ಲಲಿತಮ್ಮನವರ ಪಕ್ಕ ಕುಳಿತು ಇಬ್ಬರೂ ಆರಾಮವಾಗಿ ಮಾತನಾಡುತ್ತಿದ್ದರು. ಮುಕುಂದರಾಯರೇ “ಹುಡುಗ – ಹುಡುಗಿಗೆ ಪರಸ್ಪರ ಒಪ್ಪಿಗೆ ಎಂದರೆ ನಮ್ಮದೇನು ಅಭ್ಯಂತರವಿಲ್ಲ” ಎಂದರು. ಆಗ ಲಲಿತಮ್ಮನವರೇ “ನಮ್ಮ ಹುಡುಗನಿಗೆ ನಿಮ್ಮ ಹುಡುಗಿ ಇಷ್ಟವಾಗಿರುವುದಕ್ಕೇ ನಾವಿಲ್ಲಿಗೆ ಬಂದಿರುವುದಲ್ಲವೇ” ಎಂದರು. ಶ್ರೀವೇದಾ “ನೀನೇನು ಹೇಳ್ತಿಯಮ್ಮ ಶ್ರಾವಣಿ” ಎಂದಾಗ ಶ್ರಾವಣಿ ನಕ್ಕು ತಲೆಯಾಡಿಸಿ, ಒಳಗೆ ಓಡಿ ಹೋದಳು.
ಈ ಭೇಟಿಯ ಹಿಂದಿನ ಮಾಸ್ಟರ್ ಮೈಂಡ್ ಶ್ರಾವಣಿ ಎಂದು ಕೆಲವರಿಗೆ ಸ್ವಲ್ಪ, ಕೆಲವರಿಗೆ ಪೂರ್ತಿ ಗೊತ್ತಿತ್ತು. ಅದು ಹೇಗಂದರೆ ಆಟೋದಲ್ಲಿ ಮೊದಲ ಸಲ ಬರುವಾಗಲೇ ಶ್ರಾವಣಿ ಸುನೀಲನ ಸದಭಿರುಚಿಯನ್ನು ಗಮನಿಸಿದ್ದಳು. ಅವನ ಮಾತಿನಲ್ಲಿ ಸ್ಪಷ್ಟತೆ ಇತ್ತು. ಆಟೋ ಚಾಲಕ ವೃತ್ತಿ ಕೀಳೆಂಬ ಭಾವನೆ ಇರಲಿಲ್ಲ. ಹಾಗಾಗಿ ಅಪ್ಪ ಸುನ್ನಿ ಜೊತೆ ಮಾತನಾಡುವುದು, ಅವನ ಬಗ್ಗೆ ಸಾಫ್ಟ್ ಕಾರ್ನರ್ ಇರುವುದು, ಆ ಬಗ್ಗೆ ಅಪ್ಪ-ಅಮ್ಮ ಪರಸ್ಪರ ಮಾತಾಡಿದ್ದು ತಿಳಿದಿತ್ತು. ಅವಳು ಆ ನಿಟ್ಟಿನಲ್ಲಿ ಯೋಚಿಸಿದಾಗ ‘ನೋಡೋಣ…’ ಎಂದು ಸುಮ್ಮನಾಗಿದ್ದಳು. ಒಮ್ಮೆ ಹತ್ತಿರದಲ್ಲಿ ತನ್ನ ಸ್ಕೂಟಿ ಸರ್ವಿಸ್‌ಗೆ ಬಿಟ್ಟು ಬರುವಾಗ ಆಟೋಗೆ ಕಾಯುತ್ತಿದ್ದಾಗ ಇಷ್ಟು ಹತ್ತಿರಕ್ಕೆ ಓಲಾ ಯಾಕೆ ಎಂದು, ಬರುತ್ತಿದ್ದ ಆಟೋಗೆ ಕೈ ತೋರಿಸುತ್ತಾ ನಿಂತಿದ್ದಾಗ, ಅದನ್ನು ಗಮನಿಸಿ ಅಲ್ಲಿಯೇ ಬರುತ್ತಿದ್ದ ಸುನ್ನಿ ಆಟೋ ನಿಲ್ಲಿಸಿ, “ಬನ್ನಿ ಮೇಡಂ ಅಂದ” ಶ್ರಾವಣಿ ಎಲ್ಲಿಗೆ ಎಂದು ಹೇಳುವ ಮೊದಲೇ ಸುನ್ನಿ “ನಿಮ್ಮ ಮನೆಗೆ ಆದರೆ ಗೊತ್ತು ಬಿಡಿ” ಎಂದ. ಆಟೋದಲ್ಲಿದ್ದ ಪೇಪರ್, ಪುಸ್ತಕಗಳನ್ನು ನೋಡುವಾಗಲೇ ಇದು ಅದೇ ಆಟೋ ಇರಬಹುದು ಎನಿಸಿತು.
ಹೀಗೆ.. ಭೇಟಿಯಾಗಿ, ಆತ್ಮೀಯರಾಗಿ, ಫೋನ್ ಮೂಲಕ ಮಾತಾಡುವ ಹಂತ ತಲುಪಿ, ವಿಚಾರ ವಿನಿಮಯ ಮಾಡುವಾಗ ಸಾಹಿತ್ಯದ ಬಗೆಗಿನ ತಮ್ಮಿಬ್ಬರ ಅಭಿರುಚಿ ಹೊರಬಿದ್ದು, ಪರಸ್ಪರ ಇನ್ನಷ್ಟು ಹತ್ತಿರವಾದರು. ಅದರಲ್ಲೂ ತಂದೆ ತಾಯಿ ಇಬ್ಬರೂ ಸಾಹಿತ್ಯದ ಒಲವುಳ್ಳವರಾಗಿದ್ದು, ಇಬ್ಬರ ಕುಟುಂಬದಲ್ಲೂ ಕೆಲವು ಸಾಹಿತಿ, ಲೇಖಕರು ಇದ್ದರು. ಅಲ್ಲದೆ ಶ್ರಾವಣಿ ತನ್ನ ಶಾಲೆ ಕಾಲೇಜಿನ ರಜೆಯ ಸಮಯದಲ್ಲಿ ಲೈಬ್ರರಿಗೆ ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದವಳು. ಸಾಮಾನ್ಯವಾಗಿ ಉಪನ್ಯಾಸಕರೆಂದರೆ, ಅದರಲ್ಲೂ ಭಾಷಾ ಉಪನ್ಯಾಸಕರೆಂದರೆ ಸಾಹಿತ್ಯದ ಬಗ್ಗೆ ಅಭಿರುಚಿಯುಳ್ಳವರು ಎಂಬ ಭಾವನೆಯಲ್ಲಿದ್ದ ಶ್ರಾವಣಿಗೆ, ಅವಳು ಡಿಗ್ರಿ ಮೊದಲ ವರ್ಷದಲ್ಲಿದ್ದಾಗ ಅವಳ ಕನ್ನಡ ಉಪನ್ಯಾಸಕಿಯ ಮದುವೆ ಗೊತ್ತಾಗಿ, ಕೆಲವು ಸಹಪಾಠಿಗಳ ಜೊತೆ ಇವಳು ಮದುವೆಗೆ ಹೋದಾಗ ಉಡುಗೊರೆ ಎಂದು ಭೈರಪ್ಪನವರ ಆತ್ಮಕಥೆ ‘ಭಿತ್ತಿ’ಯನ್ನು -ಅದು ಶ್ರಾವಣಿಗೆ ತುಸು ದುಬಾರಿ ಎನಿಸಿದ್ದರು- ನೀಡಿದ್ದಳು. ಪುನಃ ಕಾಲೇಜಿನಲ್ಲಿ ಭೇಟಿಯಾದಾಗ, ತನ್ನದು ಅಮೂಲ್ಯ ಉಡುಗೊರೆ ಎಂದು ಲೆಕ್ಚರರ್ ಹೊಗಳಬಹುದೆಂಬ ನಿರೀಕ್ಷೆಯಲ್ಲಿದ್ದ ಶ್ರಾವಣಿಗೆ ಅವರು ‘ಸುಮ್ಮನೆ ಅಷ್ಟೊಂದು ದುಬಾರಿ ಉಡುಗೊರೆ ಬೇಕಿರಲಿಲ್ಲವೆಂದು ತಾವು ತಮ್ಮ ಪಠ್ಯಗಳ ಹೊರತು ಹೆಚ್ಚಿನ ಸಾಹಿತ್ಯ ಓದುವುದಿಲ್ಲವೆಂಬ’ ಸತ್ಯ ಹೊರ ಗೆಡಹಿದಾಗ ಶ್ರಾವಣಿಗೆ ಭ್ರಮ ನಿರಸನವಾಗಿತ್ತು. ಆ ವಿಷಯ ತಂದೆಯ ಬಳಿ ಮಾತನಾಡಿದಾಗ ಅವರೆಂದಿದ್ದರು “ವೃತ್ತಿಗೂ, ಅಭಿರುಚಿಗೂ ಸಂಬಂಧವಿಲ್ಲ. ಅಲ್ಲದೆ ಈಗಿನ ಸಾಹಿತಿಗಳ ಬದುಕು ಬರಹ ತೀರಾ ವಿರುದ್ಧವಾಗಿರುತ್ತದೆ. ‘ಹೇಳುವುದು ಒಂದು ಮಾಡುವುದು ಒಂದು’ ಎಂದ ಹಾಗೆ” ಎಂದಿದ್ದರು. ಅನಂತರವೂ ತಾನು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ, ಸಾಹಿತ್ಯಾಭಿಮಾನಿಗಳ ಸಂಖ್ಯೆ ಇವಳ ಪರಿಚಿತ ವಲಯದಲ್ಲಿ ಬೆರಳೆಣಿಕೆಯಷ್ಟಿತ್ತು.
ಅದರಲ್ಲೂ ಇದ್ದವರು ಕೆಲವರು ಇಂಗ್ಲಿಷ್ ಸಾಹಿತ್ಯದ ಓದುಗರು, ಕೆಲವರು ತೋರಿಕೆ ಪ್ರತಿಷ್ಠೆಗಳಿಗಾಗಿ ಕೈಯಲ್ಲಿ ಹಿಡಿಯುವುದು… ಆ ಬಗ್ಗೆ ಮಾತಾಡುವುದು… ಮಾಡುತ್ತಿದ್ದರು. ಇದೆಲ್ಲವರ ನಡುವೆ ಸುನೀಲ್ ವಿಶೇಷವಾಗಿ ಕಂಡ. ಅದು ಇಬ್ಬರ ನಡುವಿನ ಸಾಹಿತ್ಯ ಸಂವಾದದ ನಡುವೆ ಇವಳಿಗೆ ತಿಳಿಯುತ್ತಾ ಹೋಯಿತು. ಸುನೀಲ ಸಮಕಾಲೀನ ಸಾಹಿತಿಗಳ ಬಗ್ಗೆ ಅಲ್ಲದೆ, ಒಮ್ಮೆ ದೇವರ ಅಸ್ತಿತ್ವದ ಕುರಿತು ಮಾತಾಡುವಾಗ ಮೂರ್ತಿರಾಯರ ‘ದೇವರು’ ಪುಸ್ತಕದ ಬಗ್ಗೆ… ಹಾಗೆಯೇ ಪೋಲಂಕಿ ರಾಮಮೂರ್ತಿಯವರ ‘ಸೀತಾಯಣ’ ‘ವಸುದೇವ ಭೂಪಾಲಂ’ರ ಒಂದು ಲೇಖನ ‘ದೇವರು ಸತ್ತ’ ಎಂದಿರುವುದನ್ನು ಹೇಳುವಾಗ, ಈ ಹೆಸರುಗಳನ್ನು ತಂದೆಯ ಮೂಲಕ ಕೇಳಿದ್ದ ಶ್ರಾವಣಿಗೆ ಅಚ್ಚರಿಯೂ ಆಗಿತ್ತು. ಹೀಗೆ ಎಲ್ಲಾ ತರಹದ ಪುಸ್ತಕಗಳನ್ನು ಓದಿ, ವಿಮರ್ಶಿಸಿ, ಸರಿ ತಪ್ಪು ನಿರ್ಧರಿಸಿ, ತನ್ನ ಅಭಿಪ್ರಾಯ ವ್ಯಕ್ತಪಡಿಸುವಷ್ಟು ವಿಚಾರವಾದಿಯಾಗಿದ್ದರೂ.. ನಾಸ್ತಿಕನಾಗಿರಲಿಲ್ಲ. ನಮ್ಮ ಇರುವಿಕೆಯನ್ನು ಮೀರಿದ ಒಂದು ಶಕ್ತಿ ಇದೆ. ಅದನ್ನು ನಾವು ನಮ ನಮಗೆ ತಿಳಿದ ಹಾಗೆ ವಿಶ್ಲೇಷಿಸುತ್ತೇವೆ ಎಂದಿದ್ದ. ಕಾರಂತರು, ಭೈರಪ್ಪ, ಚಿತ್ತಾಲರ ಪುಸ್ತಕಗಳಲ್ಲದೆ ಇತ್ತೀಚಿನ ವಸುಧೇಂದ್ರ, ಕರಣಂ ಪವನ ಪ್ರಸಾದ್… ಮುಂತಾದವರ ಸಾಹಿತ್ಯವನ್ನು ಓದುತ್ತಿದ್ದ. ತಮ್ಮ ದೃಷ್ಟಿಕೋನಗಳಲ್ಲಿ ಬಹಳಷ್ಟು ಸಾಮ್ಯತೆ ಇರುವುದು ತಿಳಿದು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು.
ಮದುವೆಯ ನಂತರದ ಬದುಕಿನ ಬಗ್ಗೆ ಮಾತನಾಡುತ್ತಾ ಸುನೀಲ್ ಈಗಿರುವ ಆಟೋವನ್ನು ಬೇರೆಯವರಿಗೆ ಬಾಡಿಗೆಗೆ ಓಡಿಸಲು ಕೊಟ್ಟು, ತಾನು ಒಂದು ಟ್ಯಾಕ್ಸಿ ಇಟ್ಟುಕೊಳ್ಳುವುದು ಒಳ್ಳೆಯದೆಂದು, ಹಾಗೆಯೆ ಇಬ್ಬರೂ ದುಡಿಯುವುದರಿಂದ ಇದಕ್ಕೆ ಹೂಡಿಕೆ ಮಾಡಲು ಹಣದ ಕೊರತೆಯಾಗಲಾರದೆಂದೂ, ಹಾಗೆಯೇ ಮದುವೆಯ ನಂತರವೂ ಶ್ರಾವಣಿ ತನ್ನ ತಂದೆ- ತಾಯಿಯ ಹೆಲ್ತ್ ಇನ್ಸೂರೆನ್ಸ್ ಹಣವನ್ನು ಕೊಡುವುದಾಗಿಯೂ ಅಲ್ಲದೆ ತನ್ನ ಸಂಬಳದಲ್ಲಿ ಕಾಲು ಭಾಗವನ್ನು ತಂದೆ ತಾಯಿಯ ಖರ್ಚೆಗೆ ಕೊಡುವುದಾಗಿಯೂ ಇಬ್ಬರೂ ಒಪ್ಪಂದಕ್ಕೆ ಬಂದರು.
ಮೊದಲು ಶ್ರಾವಣಿ ಹೆಚ್ಚು ಸಲುಗೆ ಇದ್ದ ಅಪ್ಪನ ಬಳಿ ಸೂಕ್ಷ್ಮವಾಗಿ ತಿಳಿಸಿ, ಅವರು ಅಷ್ಟೇ ಸೂಕ್ಷ್ಮವಾಗಿ ಹೆಂಡತಿಯ ಹತ್ತಿರ ಹೇಳಿದ್ದರು. ಸುನೀಲನ ಮನೆಯಲ್ಲಿ ಹೆಚ್ಚಿನ ನಿರ್ಧಾರ ಲಲಿತಮ್ಮನವರದೇ. ಅವರು ಗಂಡನಿಗೆ ಹೇಳಿದ್ದರು “ಸುಮ್ಮನೆ ಹೋಗಿ ಬರೋಣ… ಸಾಧ್ಯವಾದರೆ ಸಂಬಂಧ ಬೆಳೆಸೋಣ” ಎಂದು.
ಹೀಗೆ ಸೃಷ್ಟಿಯಾದ ಇಂದಿನ ಭೇಟಿಯ ಕಾರ್ಯಕ್ರಮದಲ್ಲಿ, ಆಟೋ ಡ್ರೈವರ್‌ಗೆ ಮಗಳನ್ನು ಕೊಡಲು ಹಿಂಜರಿದಿದ್ದ ಶ್ರೀವೇದ.. ‘ಇದು ಅಭಿರುಚಿಗಳು ಒಂದಾದ ಜೋಡಿಯೇ..? ಹಾಗಾದರೆ ಭಯವಿಲ್ಲ..” ಎಂಬ ನಿರಾಳ ಮನದಲ್ಲಿ ಮಗಳ ಕಡೆ ಪ್ರೀತಿಯಿಂದ ದೃಷ್ಟಿ ಹರಿಸಿದಾಗ, ಮಗಳ ನಗುವ ಕಣ್ಣುಗಳು ಸುನೀಲನ ಕಡೆ ನೆಟ್ಟಿದ್ದು ಕಂಡು ಒಂದು ತೃಪ್ತಿಯ ಮಂದಹಾಸ ಮೂಡಿತು.
ವಸಂತಕುಮಾರ್ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ‘ಬಾಲರಾಜನೂ ಕ್ರಿಕೆಟ್ಟಾಟವೂ’ ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. ‘ಕಾಂಚನ ಮಿಣಮಿಣ’ (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.
ಮದುವೆ ಎಂಬ ಅತ್ಯಂತ ಪವಿತ್ರ ಬಂಧನಕ್ಕೆ ಸೂಕ್ತ ಸಂಗಾತಿಯನ್ನು ಆರಿಸಿಕೊಳ್ಳುವಾಗ ಯಾವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಾಗಿರುತ್ತದೆಯೋ ಅದನ್ನು ಬಿಟ್ಟು ಬೇರೆಲ್ಲ ಕಡೆಗೆ ಗಮನ ಹರಿಸುತ್ತಿರುವ ಇಂದಿನ ಪಾಲಕರ ಮತ್ತು ಯುವಕ ಯುವತಿಯರ ಕಣ್ಣು ತೆರೆಸುವ ಕಥೆ. ಕಥೆಯ ಓದು ತುಂಬಾ ಸಂತಸ ಕೊಟ್ಟಿದೆ. ವಸಂತ್ ಕುಮಾರ್ ಕಲ್ಯಾಣಿ ಸರ್, ತಮಗೆ ಧನ್ಯವಾದಗಳು
ಧನ್ಯವಾದಗಳು ಬಹಳ ಸಂತೋಷವಾಯಿತು
Nice a simple pleasing story with a small climax at the end!
ಕಥೆ, ಕಥಾ ನಿರೂಪಣೆ ಬಹಳ ಚೆನ್ನಾಗಿದೆ. ಅಭಿನಂದನೆಗಳು…
ಧನ್ಯವಾದಗಳು ಸರ್
ಧನ್ಯವಾದಗಳು ತಮ್ಮ ಅಭಿಪ್ರಾಯಕ್ಕೆ