ತರಗತಿಯೊಳಗೆ
ಮಾತಿನ ಮಲ್ಲರೇ ….
ನಿಮ್ಮ ಭಾಷಣ
ಘೋಷಣೆಗಳ ಧ್ವನಿಯನ್ನು
ಇಲ್ಲಿ ಕೇಳಿಸದೆ
ಸ್ವಲ್ಪ ತಗ್ಗಿಸಿಬಿಡಿ
ನಾನಿಲ್ಲಿ
ಮಣ್ಣಿನ ಮುದ್ದೆಗೆ
ಜೀವ ತುಂಬಿ
ಈಗಷ್ಟೇ…ಕಿವಿ ಹಚ್ಚುತ್ತಿದ್ದೇನೆ.
ಜಾತಿವಾದಿಗಳೇ
ನಿಮ್ಮ ಬೊಗಸೆಯೊಳಗಿನ
ಬೀಜಗಳನ್ನೆಲ್ಲಾ
ಇಲ್ಲಿ ಬೀಳಿಸದೆ
ನಿಮ್ಮೊಳಗೇ..ಇರುವ
ಮುಳ್ಳಕಂಟಿಗೆ ಚುಚ್ಚಿಕೊಳ್ಳಿ
ನಾನಿಲ್ಲಿ
ನಾನಾ ಜಾತಿಯ ಸಸಿಗಳ
ಹೂದೋಟ ಮಾಡುತ್ತಿದ್ದೇನೆ.
ಯಜಮಾನಿಕೆ ಗತ್ತಿನವರೇ ;
ನಿಮ್ಮ ಜರಿಜರಿಯ
ಉಡುಗೆ ತೊಡುಗೆ
ಪೇಠ ಪೋಷಾಕುಗಳನ್ನೆಲ್ಲಾ
ಇಲ್ಲಿ ಕಾಣಿಸದೆ
ನಿಮ್ಮ ಪೀಠದಲ್ಲೇ ಇಟ್ಟು ಬಿಡಿ
ನಾನಿಲ್ಲಿ
ಮಗುವಿನ ಹರಿದ ಅಂಗಿಗೆ
ಗುಂಡಿ ಹೊಲಿಯುತ್ತಿದ್ದೇನೆ
ಬಣ್ಣ ಮಾರುವವರೇ..
ನಿಮ್ಮ ರಂಗು ರಂಗಿನ
ಶಾಲು ರುಮಾಲುಗಳನ್ನೆಲ್ಲಾ
ಇಲ್ಲಿ ಮಾರದೆ
ನಿಮ್ಮ ಸೊಂಟಕ್ಕೇ… ಸುತ್ತಿಕೊಳ್ಳಿ
ನಾನಿಲ್ಲಿ..
ಸಮವಸ್ತ್ರವನ್ನು ಹಂಚುತ್ತಿದ್ದೇನೆ.
ವಿಷಯ ವಿವೇಚಕರೇ..
ನೀವು ನೀವಾಗಿರದೆ
ಮಕ್ಕಳಾಗುವುದಾದರೆ ಮಾತ್ರ
ಇತ್ತ ಬನ್ನಿ
ನಾನು ನಾಳಿನ ಬೆಳಕಿಗಾಗಿ
ಹೊಸ ಕವಿತೆ ಬರೆಯುತ್ತಿದ್ದೇನೆ.
ಶೋಭಾ ಹಿರೇಕೈ ಕಂಡ್ರಾಜಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
“ಅವ್ವ ಮತ್ತು ಅಬ್ಬಲಿಗೆ” ಇವರ ಪ್ರಕಟಿತ ಕವನ ಸಂಕಲನ.
ಕಥೆ, ಲಲಿತ ಪ್ರಬಂಧ, ಬಿಡಿ ಲೇಖನಗಳ ಬರಹ ಇವರ ಹವ್ಯಾಸಗಳು
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಲೌಲಿ.
ವೆರಿ ನೈಸ್…