ಅಪರಂಜಿ…

ಮುಂಜಾವಿನಲಿಯೆದ್ದು ಮುಂಗುರುಳ ಸರಿಸುತಲಿ
ನನ್ನವಳು ನಗಲೆಂಥ ಸೊಗಸುಗಾತಿ,
ಕರಗಳೆರಡನು ಮುಗಿದು ದೇವಿಯರ ಬೇಡುವುದ
ಅವಳ ಬೆಡಗಿಗೆ ಸೋತು ಮರೆತೆ ಪೂರ್ತಿ…

ಕೆಂಡಸಂಪಿಗೆಯಂದದಲಿ ಅವಳ ನಾಸಿಕವು
ತೊಂಡೆಯ ಹಣ್ಣಂತೆಯಿರುವ ಅಧರ,
ಪೋಣಿಸಿಟ್ಟಂತಿರುವ ದಾಳಿಂಬೆ ಕಾಳುಗಳ
ದಂತ ಪಂಕ್ತಿಯ ಸಾಲು ಮಧುರ ಮಧುರ…

ಸೂಜಿಗಲ್ಲಂತೆ ಸೆಳೆಯುವ ಮೀನ ಕಣ್ಣುಗಳು
ಕಡೆದಿಟ್ಟ ಬೆಣ್ಣೆ ಲೇಪಿಸಿದ ಕದಪು,
ಕಮಲದ ಎಸಳಂತೆ ಕೋಮಲದ ಕರ್ಣಗಳು
ಮಾವನ ಹೆಣ್ಣಿವಳ ಗಲ್ಲ ನುಣುಪು…

ಪುಟ್ಟ ಕೆಂಪನೆ ಬಿಂದಿ ಹಣೆಯ ಸಿಂಗರಿಸಿರಲು
ಮೂಗಿನಲಿ ನತ್ತೊಂದು ಹೊಳೆಯುತಿಹುದು,
ಕಿವಿಗಳಲಿ ಮಿನುಗುತಿದೆ ಜೋಲಾಡುವ ಜುಮುಕಿ
ಕೊರಳಲ್ಲಿ ತಾಳಿ ಸರ ಬೆಳಗುತಿಹುದು…

ಕಡೆದಿಟ್ಟ ಶಿಲೆಯಂಥ ಇವಳ ಸಿಂಹದ ಕಟಿಯು
ಬಳುಕುತ್ತ ನಡೆದುಬರಲೆಷ್ಟು ಚೆಂದ,
ಉದ್ದ ಸೆರಗನು ಸೆಳೆದು ಹೊಟ್ಟೆಯಲಿ ಸಿಕ್ಕಿಸಲು
ಎಂತು ವರ್ಣಿಸಲಿ ನಾನದರ ಅಂದ…

ಲಜ್ಜೆಯಲಿ ಹೆಜ್ಜೆಯಿಡುವವಳ ಗೆಜ್ಜೆಯ ದನಿಗೆ
ಸೋತಿತೆನ್ನಯ ಹೃದಯ ಜೊತೆಗೆ ಮನವು,
ಕೈಬಳೆಯ ಸಪ್ಪಳವು ತಾಳಕ್ಕೆ ಸಹಕರಿಸೆ
ಮತ್ತಿನಲಿ ವಾಲುತಿದೆಯೆನ್ನ ತನುವು…

ನನ್ನೆದೆಯ ಗೂಡಿನಲಿ ಬಾಯ್ದೆರೆದ ಚಿಪ್ಪಿನೊಳ
ಬೆಳಗುತಿಹ ಅಪರೂಪ ಮುತ್ತು ನೀನು,
ಅಪರಂಜಿಯ ಗುಣದ ಅಪ್ಸರೆಯೆ ಬಾ ಸನಿಹ
ಮುತ್ತು ಮಳೆಯಭೀಷೇಕಗೈವೆ ನಾನು…

ಗುರುರಾಜ ಹೇರ್ಳೆ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದ ಸಮೀಪದ ಸಾಲಿಗ್ರಾಮದವರು.
ಕಳೆದ 10 ವರ್ಷಗಳಿದ ಗಲ್ಫ್ ನಾಡಿನಲ್ಲಿದ್ದು, ಪ್ರಸ್ತುತ ಬಹರೈನ್ ಎಂಬ ಪುಟ್ಟ ದ್ವೀಪ ರಾಷ್ಟ್ರದಲ್ಲಿ ಕೆಲಸದ ನಿಮಿತ್ತ ವಾಸವಾಗಿದ್ದಾರೆ.
ಹಾಡುವುದು ಮತ್ತು ಕವಿತೆ ಬರೆಯುವುದು ಇವರ ಹವ್ಯಾಸಗಳು.