ಶನಿವಾರ ಭಾನುವಾರದಂದು ಹಸಿರು ಜೀರುಂಡೆಯನ್ನು ಒಂದು ಬೆಂಕಿಪೊಟ್ಟಣದಲ್ಲಿ ಇಟ್ಟುಕೊಂಡು ಅದಕ್ಕೆ ಚೆಂಡು ಹೂವಿನ ಎಲೆಗಳನ್ನು ತಿನ್ನಲು ಇಟ್ಟು ಆಗಾಗ್ಗೆ ಅದು ಎಷ್ಟು ತಿಂದಿತು ಎಂದು ನೋಡುತ್ತಿದ್ದೆ. ನಾನು ಅದನ್ನು ಸಾಕುತ್ತಿದ್ದೇನೆ. ಇಲ್ಲ ಅಂದ್ರೆ ಅದು ಬದುಕಲು ಕಷ್ಟ ಇತ್ತು ಎಂಬ ಭಾವದಿಂದ ಅದನ್ನು ಇಟ್ಟುಕೊಂಡಿದ್ದೆ. ಅಸಲಿಗೆ ಸ್ವತಂತ್ರವಾಗಿ ಅದನ್ನು ಬದುಕಲು ಬಿಟ್ಟಿದ್ರೆ ಇದಕ್ಕಿಂತಲೂ ಚೆನ್ನಾಗಿರ್ತಾಯಿತ್ತು ಎಂಬ ಕಲ್ಪನೆ ಆಗ ನನಗೆ ಇರಲಿಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಏಳನೆಯ ಕಂತು ನಿಮ್ಮ ಓದಿಗೆ
ಈಗೀಗ ಬಿಡಿ. ನೋಟ್ ಬುಕ್, ಪೆನ್ಸಿಲ್, ಕ್ರೇಯಾನ್ಸ್, ಸ್ಕೆಚ್ ಪೆನ್, ಎರೇಸರ್, ಮೆಂಡರ್, ಜಾಮಿಟ್ರಿ ಬಾಕ್ಸ್ ಈ ಪದಗಳನ್ನು ಮೂರು ವರ್ಷದ ಮಕ್ಕಳೂ ತಿಳಿದುಕೊಂಡಿರ್ತಾರೆ. ಪೋಷಕರು ಮೂರು ವರ್ಷಕ್ಕೇ ತಮ್ಮ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸುತ್ತಾರೆ. ಅವರನ್ನು ಕಾನ್ವೆಂಟ್, ಬೇಬಿಕೇರ್ ಸೆಂಟರ್ಗಳಿಗೆ ಸೇರಿಸಿರ್ತಾರೆ. ಕೆಲವರಿಗೆ ಅದು ಅನಿವಾರ್ಯ ಬಿಡಿ. ಆದರೆ ನಾನು ಇಲ್ಲಿ ಹೇಳೋಕೆ ಹೊರಟಿರೋದು ಹಿಂದೆ ಈ ರೀತಿಯಾದ ಸಮಸ್ಯೆಗಳು ನಮ್ಮ ಬಾಲ್ಯಕ್ಕೆ ಇರಲಿಲ್ಲ. ನೋಟ್ ಬುಕ್ಕು ಅಂತ ತೆಗೆದುಕೊಂಡಿದ್ದು ಮೂರನೇ ಕ್ಲಾಸಿಗೆ ಬಂದಾಗ! ಅದೂ ಮೂವತ್ತು ಪೇಜಿನ ಬುಕ್ಕು! ತುಂಬಾ ದೊಡ್ಡ ಬುಕ್ಕು ಅಂದ್ರೆ ನೂರು ಪೇಜಿನ ನೋಟ್ ಬುಕ್ಕು! ‘ವಿದ್ಯಾ ಲೇಖಕ್’ ನೋಟ್ ಬುಕ್ಕು, ನಟರಾಜ ಪೆನ್ಸಿಲ್, ರೆನಾಲ್ಡ್ಸ್ ಪೆನ್ನು ಆಗ ತುಂಬಾ ಬ್ರಾಂಡ್ ಆಗಿದ್ದವು. ಕಿಂಗ್ ಸೈಜ್ ಬುಕ್ಕುಗಳು ಇರಲಿಲ್ಲ. ಚಿಕ್ಕವು ಇದ್ದವು. ಒಂದು ಎರಡನೇ ತರಗತಿಯಲ್ಲಿದ್ದಾಗ ಸ್ಲೇಟಿನ ಮೇಲೆ ಪೇಣಿ, ಸೀಮೆಸುಣ್ಣ ಕೆಲವೊಮ್ಮೆ ಬಾಣಪ್ಪನ ಕಲ್ಲಿನಲ್ಲೂ ಬರೆದ ನಿದರ್ಶನ ಇದೆ. ಮೂರನೇ ಕ್ಲಾಸಿನಲ್ಲೂ ನನಗೆ ಮಗ್ಗಿ 20 ರ ವರೆಗೂ ಬರುತ್ತಿತ್ತಾದರೂ ದಶಕ ತೆಗೆದುಕೊಂಡು ಮಾಡುವ ಕೂಡುವ, ಕಳೆಯುವ ಲೆಕ್ಕಗಳು ಬರುತ್ತಿರಲಿಲ್ಲ. ಇದಕ್ಕಾಗಿ ನಾನು ಪರಮೇಶಿಯನ್ನು ಅವಲಂಬಿಸಿದ್ದೆ. ಅವನಿಗೆ ಎಲ್ಲರೂ ಪರ್ಮಿ ಅಂತಾ ಕರೆಯುತ್ತಿದ್ದೆವು. ಪರ್ಮಿ ನನಗೊಂತರ ‘ಗಣಿತದ ಹೆಲ್ಪ್ ಲೈನ್’ ಇದ್ದಂಗೆ ಇದ್ದ. ಅದರೆ ಅವನು ಹೇಳಿದಂತೆ ನಾನು ಕೇಳಬೇಕಾಗಿತ್ತು.
ಬೆಳಿಗ್ಗೆ ಶಾಲೆಗೆ ಹೋಗಬೇಕಾದ್ರೆ ಅವರ ಮನೆಗೆ ಹೋಗಿ ಅವನ ಜೊತೆ ಹೋಗಬೇಕಾಗಿತ್ತು. ಅವನು ಕರೆದಾಗಲೆಲ್ಲಾ ನಾನು ಹೋಗಬೇಕಾಗಿತ್ತು. ನನ್ನ ರೀತಿ ಲೆಕ್ಕಗಳು ಬರದ ಕೆಲವರಿಗೆ ಪರ್ಮಿ ಬಾಸ್ ಆಗಿಬಿಟ್ಟಿದ್ದ. ಅವನಿಗೆ ತಿನ್ನೋಕೆ ಏನಾದ್ರೂ ಕೊಡಬೇಕಾಗಿತ್ತು. ಬಾಸ್ ಹೇಳಿದಂತೆ ಕೆಲಸಗಾರರು ಕೇಳಿದ ಹಾಗೆ ಅವನು ಹೇಳಿದಂತೆ ನಾವು ಕೇಳಬೇಕಾಗಿತ್ತು. ಮ್ಯಾಥ್ಸ್ ಬಾರದ ನಾನು ಅನಿವಾರ್ಯವಾಗಿ ಇದಕ್ಕೆ ಒಗ್ಗಿಕೊಂಡುಬಿಟ್ಟಿದ್ದೆ. ಒಮ್ಮೆ ಪರ್ಮಿ ಮತ್ತು ಪ್ರದೀಪ ಇಬ್ಬರೂ ಬಿಳಿ ಹಾಳೆಯಲ್ಲಿ ಕೆಲವೊಂದು ನಂಬರ್ಗಳನ್ನು ಬರೆದು, ಆ ನಂಬರ್ಗಳಲ್ಲಿ ಕೆಲವೊಂದು ನಂಬರ್ಗೆ ಕಮ್ಮಿ ಬೆಲೆಯ ವಸ್ತುಗಳನ್ನು ಇಟ್ಟು ನಂಬರ್ ಬರೆದ ಚೀಟಿಗಳಿಗೆ ಲಾಟರಿ ಟಿಕೇಟ್ ಎಂದು ಹೆಸರಿಟ್ಟು ಒಂದು ಟಿಕೆಟ್ಟಿಗೆ 50 ಪೈಸೆ ಬೆಲೆ ಇಟ್ಟು ಮಾರತೊಡಗಿದರು. ಅವರ ಭಯಕ್ಕೆ ನಾನೂ ಅವರಿಂದ ಎರಡು ರೂಪಾಯಿಯ ಲಾಟರಿ ಟಿಕೇಟ್ ಕೊಂಡು ಏನೂ ವಸ್ತು ಸಿಗದೇ ಮಂಗ್ಯಾ ಆಗಿದ್ದೆ! ನಮ್ಮ ಕ್ಲಾಸಲ್ಲಿದ್ದ ಸತೀಶ ಮಾತ್ರ ಇವರ ಜೊತೆ ಇರದೇ ಪ್ರತ್ಯೇಕವಾಗಿ ಇರುತ್ತಿದ್ದ. ಅವನು ಲೆಕ್ಕ ಚೆನ್ನಾಗಿ ಮಾಡುತ್ತಿದ್ದ. ಅವನ ಜೊತೆ ಕುಳಿತುಕೊಂಡು ಅವನು ಬರೆದದ್ದನ್ನು ನೋಡಿ ದೇವೇಂದ್ರಪ್ಪ ಮೇಷ್ಟ್ರಿಗೆ ತೋರಿಸಿದ್ದೆ. ಎಲ್ಲಾ ಲೆಕ್ಕ ಸರಿ ಆದಾಗ ಪರ್ಮಿ ಹಾಗೂ ಪ್ರದೀಪ ಮೇಷ್ಟ್ರ ಹತ್ತಿರ ನಾನು ನೋಡಿಕೊಂಡು ಬರೆದಿದ್ದನ್ನು ಹೇಳಿ ಅವನಿಂದಲೂ ದೂರ ಕೂರಿಸಿ ನಾನು ಕೂಡುವ ಲೆಕ್ಕ ಕಲಿಯೋ ಅನಿವಾರ್ಯತೆ ಸೃಷ್ಟಿಸಿದರು. ಮನೇಲಿ ನಮ್ ಮಾಮನ ಹತ್ತಿರ ಹೇಳಿಸಿಕೊಂಡು ಒಮ್ಮೆ ಶನಿವಾರ ಆಂಜನೇಯನ ಗುಡಿಗೆ ಹೋಗಿ “ಹನುಮಪ್ಪ ಲೆಕ್ಕ ಬರುವಂತೆ ಮಾಡಪ್ಪ” ಎಂದು ಬೇಡಿಕೊಂಡು ಶಾಲೆಗೆ ಹೋಗಿ ಅಂದು ಮೇಷ್ಟ್ರು ಕೊಟ್ಟ ಲೆಕ್ಕಗಳನ್ನೆಲ್ಲಾ ಮಾಡಿ ಬೀಗಿದ್ದೆ.
ಶನಿವಾರ ಭಾನುವಾರದಂದು ಹಸಿರು ಜೀರುಂಡೆಯನ್ನು ಒಂದು ಬೆಂಕಿಪೊಟ್ಟಣದಲ್ಲಿ ಇಟ್ಟುಕೊಂಡು ಅದಕ್ಕೆ ಚೆಂಡು ಹೂವಿನ ಎಲೆಗಳನ್ನು ತಿನ್ನಲು ಇಟ್ಟು ಆಗಾಗ್ಗೆ ಅದು ಎಷ್ಟು ತಿಂದಿತು ಎಂದು ನೋಡುತ್ತಿದ್ದೆ. ನಾನು ಅದನ್ನು ಸಾಕುತ್ತಿದ್ದೇನೆ. ಇಲ್ಲ ಅಂದ್ರೆ ಅದು ಬದುಕಲು ಕಷ್ಟ ಇತ್ತು ಎಂಬ ಭಾವದಿಂದ ಅದನ್ನು ಇಟ್ಟುಕೊಂಡಿದ್ದೆ. ಅಸಲಿಗೆ ಸ್ವತಂತ್ರವಾಗಿ ಅದನ್ನು ಬದುಕಲು ಬಿಟ್ಟಿದ್ರೆ ಇದಕ್ಕಿಂತಲೂ ಚೆನ್ನಾಗಿರ್ತಾಯಿತ್ತು ಎಂಬ ಕಲ್ಪನೆ ಆಗ ನನಗೆ ಇರಲಿಲ್ಲ. ಇದೇ ರೀತಿ ಚಿಟ್ಟೆ ರೀತಿ ಹಾರುವ, ಹಿಂಭಾಗದಲ್ಲಿ ಉದ್ದನೆಯ ದೇಹದಾಕಾರ ಇರುವ ಕೀಟಗಳು ಆಗ ಬಹಳ ಇರುತ್ತಿದ್ದವು. ಅದನ್ನು ಹಿಡಿದು ಅದಕ್ಕೆ ದಾರ ಕಟ್ಟಿ ಅದನ್ನು ಹಾರಲು ಬಿಟ್ಟು ಆಗಲೂ ಖುಷಿಪಡುತ್ತಿದ್ದೆ. ಅದು ಗಿಡದಿಂದ ಗಿಡಕ್ಕೆ ಹಾರುತ್ತಿತ್ತಾದರೂ ದಾರಕ್ಕೆ ಕಟ್ಟಲ್ಪಟ್ಟಿದ್ದರಿಂದ ಅದು ನನ್ನಿಂದ ತಪ್ಪಿಸಿಕೊಂಡು ಹೋಗುವಂತಿರಲಿಲ್ಲ. ನಮಗೆ ಆಗ ಪುಸ್ತಕದಲ್ಲಿ ನವಿಲುಗರಿ ಇಟ್ಟುಕೊಳ್ಳುವ ರೂಢಿಯಿತ್ತು. ಪುಸ್ತಕವನ್ನು ಆಗಾಗ್ಗೆ ತೆಗೆದು ನವಿಲು ಗರಿ ಎರಡಾಗಿದ್ದಾವ ಎಂದು ನೋಡುತ್ತಿದ್ದೆವು. ಕಾರಣವಿಷ್ಟೇ ನಮ್ಮ ಸೀನಿಯರ್ಗಳು “ಪುಸ್ತಕದಲ್ಲಿ ನವಿಲುಗರಿ ಇಟ್ಟರೆ ಅದು ಮರಿ ಹಾಕುತ್ತದೆ” ಎಂದು ತಿಳಿಸಿದ್ದರು! ಇನ್ನೂ ಕೆಲವರು “ನವಿಲು ಗರಿ ಇಟ್ಟುಕೊಂಡರೆ ವಿದ್ಯೆ ಜಾಸ್ತಿ ಆಗುತ್ತೆ” ಎಂದು ಹೇಳಿದ್ದ ಮಾತು ನಂಬಿ ಎಲ್ಲಾ ಪುಸ್ತಕದಲ್ಲೂ ಅದನ್ನು ಇಟ್ಟುಕೊಂಡಿದ್ದೆ.
ನನ್ ಕ್ಲಾಸ್ ಮೇಟ್ ಸುನಿಲ್ನ ಮನೆಯಲ್ಲಿದ್ದ ಅವರ ಮನೆಯ ಕೆಲಸದಾಳು ಮುನಿಯ ಗಿಳಿ ಸಾಕಿದ್ದನ್ನು ಕೇಳಿದ್ದೆ. ಒಮ್ಮೆ ಅವರ ಮನೆಗೆ ಹೋಗಿ ಗಿಳಿಯನ್ನು ನೋಡಿದಾಗ ನನಗೂ ಗಿಳಿ ಸಾಕುವ ಆಸೆ ಹುಟ್ಟಿತ್ತು. ಅವನು ಅದಕ್ಕೆ ಮುತ್ತು ಕೊಡುವಂತೆ ಹೇಳಿದಾಗ ಆ ಗಿಳಿಯು ಅವನ ತುಟಿಗೆ ತನ್ನ ಕೆಂಪನೆಯ ಕೊಕ್ಕಿನಲ್ಲಿ ಕಚ್ಚುತ್ತಿದ್ದುದನ್ನು ನೋಡಿ ನನಗೂ ಗಿಳಿ ಸಾಕುವ ಆಸೆ ಹೆಚ್ಚಾಯ್ತು. ಮನೆಯಲ್ಲಿ ಒಪ್ಪಿಸಿ ಅವನಿಂದ ಗಿಳಿ ಮರಿಯನ್ನು ತಂದು ಅದನ್ನು ಒಂದು ಪಂಜರದಲ್ಲಿ ಇಟ್ಟು ಸಾಕತೊಡಗಿದೆ. ಇದಕ್ಕಾಗಿ ನಾನು ಸಂಜೆಯ ಸಮಯವನ್ನು ಮೀಸಲಾಗಿರಿಸಬೇಕಾಗಿತ್ತು. ಸಂಜೆ ಶಾಲೆಯಿಂದ ಬಂದ ಕೂಡಲೇ ‘ದ್ವಾರಹುಣಸೇಹಣ್ಣು’ ಎಂದು ಕರೆಯಲ್ಪಡುವ ಬಿಳಿ ಪಪ್ಪು, ಕರಿ ಬೀಜ, ಹಸಿರು ಸಿಪ್ಪೆ, ಹಣ್ಣಾದಾಗ ಕೆಂಪು ಸಿಪ್ಪೆಯಾಗುವ ಮರದಲ್ಲಿ ಬಿಡುವ ಹಣ್ಣನ್ನು ಕಿತ್ತುಕೊಂಡು ಬರುತ್ತಿದ್ದೆ. ಗಿಳಿಗೆ ಈ ಹಣ್ಣು ಎಂದರೆ ತುಂಬಾ ಇಷ್ಟ ಎಂದ ಭಾವಿಸಿದ್ದೆ. ಕಾರಣ ಈ ಮರದ ಮೇಲೆ ಅನೇಕ ಗಿಳಿಗಳು ಹಣ್ಣಿಗಾಗಿ ಇರುತ್ತಿದ್ದವು. ಈಗ ಈ ಮರಗಳೂ ತುಂಬಾ ಅಪರೂಪವಾಗಿರುವುದು ತುಂಬಾ ಬೇಸರದ ಸಂಗತಿ. ಈ ಹಣ್ಣನ್ನು ಕಿತ್ತು ತಂದು ಗಿಳಿಗೆ ಹಾಕಿ ಶಾಲೆಗೆ ಹೋದರೆ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಾಗ ಗಿಳಿಗೆ ಮತ್ತೊಷ್ಟು ಹಣ್ಣು ನೀರು ಇಟ್ಟು ಶಾಲೆಗೆ ಹೋದರೆ ಸಂಜೆ ಬಂದಾಗ ಪಂಜರವನ್ನು ಗಲೀಜು ಮಾಡಿಕೊಂಡಿರುತ್ತಿತ್ತು. ಅದನ್ನು ಸ್ವಚ್ಛಗೊಳಿಸಿ ಅದರ ಕೆಳಭಾಗದಲ್ಲಿ ಮತ್ತೆ ಬೇರೆ ಪೇಪರ್ ಹಾಕುತ್ತಿದ್ದೆ.
ಒಮ್ಮೆ ಪರ್ಮಿ ಮತ್ತು ಪ್ರದೀಪ ಇಬ್ಬರೂ ಬಿಳಿ ಹಾಳೆಯಲ್ಲಿ ಕೆಲವೊಂದು ನಂಬರ್ಗಳನ್ನು ಬರೆದು, ಆ ನಂಬರ್ಗಳಲ್ಲಿ ಕೆಲವೊಂದು ನಂಬರ್ಗೆ ಕಮ್ಮಿ ಬೆಲೆಯ ವಸ್ತುಗಳನ್ನು ಇಟ್ಟು ನಂಬರ್ ಬರೆದ ಚೀಟಿಗಳಿಗೆ ಲಾಟರಿ ಟಿಕೇಟ್ ಎಂದು ಹೆಸರಿಟ್ಟು ಒಂದು ಟಿಕೆಟ್ಟಿಗೆ 50 ಪೈಸೆ ಬೆಲೆ ಇಟ್ಟು ಮಾರತೊಡಗಿದರು. ಅವರ ಭಯಕ್ಕೆ ನಾನೂ ಅವರಿಂದ ಎರಡು ರೂಪಾಯಿಯ ಲಾಟರಿ ಟಿಕೇಟ್ ಕೊಂಡು ಏನೂ ವಸ್ತು ಸಿಗದೇ ಮಂಗ್ಯಾ ಆಗಿದ್ದೆ!
ಗಿಳಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತ ನನ್ನನ್ನು ನೋಡಿದ ತಕ್ಷಣ ಕೂಗುವುದನ್ನು ನೋಡಿ ಖುಷಿಯಾಗುತ್ತಿದ್ದೆ. ಆದರೆ ಬರುಬರುತ್ತಾ ಮರದ ಹಣ್ಣುಗಳು ಖಾಲಿಯಾಗುತ್ತಾ ಬಂದಾಗ ಗಿಳಿ ಸಾಕುವುದೇ ಕಷ್ಟವೆನಿಸತೊಡಗಿತು. ಆಗ ಅದಕ್ಕೆ ಮನೆಯಲ್ಲಿದ್ದ ಟೊಮ್ಯಾಟೋ ಹಣ್ಣನ್ನು ಇಟ್ಟಿದ್ದುಂಟು. ಅದೂ ಖಾಲಿಯಾದಾಗ ಹಾಲಿಗೆ ಸಕ್ಕರೆ ಹಾಕಿ ಚಮಚದಲ್ಲಿ ಹಾಕಿದ್ದುಂಟು. ಮನೆಯಲ್ಲಿ ನೆಂಟರು ಬಂದಾಗ ಅವರು ತರುತ್ತಿದ್ದ ಹಣ್ಣಲ್ಲಿ ನನ್ನ ಪಾಲಿನ ಹಣ್ಣನ್ನು ಗಿಳಿಗೆ ಹಾಕುತ್ತಿದ್ದೆ. ಗಿಳಿ ಶಬ್ದ ಮಾಡುತ್ತಾ ಮನೆ ತುಂಬಾ ಹಾರುತ್ತಿದ್ದುದು ನನಗೆ ತುಂಬಾ ಖುಷಿ ಕೊಡುತ್ತಿತ್ತು. ರೆಕ್ಕೆ ಪುಕ್ಕ ಬಲಿತು ದೊಡ್ಡದಾದ ಮೇಲೆ ಅದು ಹಾರಿ ಹೋದಾಗ ಮತ್ತೆ ಮರಳಿ ಬರುತ್ತೆಂದು ಕರೆದೆ. ಆದರೆ ಅದು ಬರಲೇ ಇಲ್ಲ! ಮತ್ತೊಂದು ಗಿಳಿ ತಂದು ಇದೇ ರೀತಿ ಸಾಕಿದೆ. ಆದರೆ ಅದರ ಕಥೆಯೂ ಇದೇ ಆದಾಗ ಗಿಳಿ ಸಾಕುವುದನ್ನು ಕೈಬಿಟ್ಟೆ. ಕೆಲವೊಂದು ದೇವರ ಪೋಟೋದಲ್ಲಿ ದೇವರ ಜೊತೆಯಲ್ಲಿ ಗಿಳಿ ಇರುವುದನ್ನು ನೋಡಿ, ಗಿಳಿಯನ್ನು ಪಂಜರದಲ್ಲಿ ಇಟ್ಟು ಸಾಕುವುದರಿಂದ ಆ ದೇವರ ಶಾಪಕ್ಕೆ ಗುರಿಯಾಗಬಹುದೇನೋ ಎಂದು ಮನದಲ್ಲೇ ಹೆದರಿ ಅಂದಿನಿಂದ ಗಿಳಿ ಸಾಕುವುದನ್ನು ನಿಲ್ಲಿಸಿಬಿಟ್ಟೆ.
ಶಾಲೆಯಲ್ಲಿ ಬುಡೆನ್ ಸಾಬ್ ಮೇಷ್ಟ್ರು ನಾವೇನಾದರೂ ತಪ್ಪು ಮಾಡಿದರೆ ಮೇಲೆ ನರಕದಲ್ಲಿ ಯಾವ ರೀತಿ ಶಿಕ್ಷೆ ಕೊಡುತ್ತಾರೆ ಎಂಬುದನ್ನು “ಮುಂದೆ ಸತ್ತಾಗ ಯಮ ನರಕದಲ್ಲಿ ದೊಡ್ಡ ದೊಡ್ಡ ಕೊಪ್ಪರಿಗೆಯ ತುಂಬಾ ಕೊತ ಕೊತ ಕುದಿಯೋ ಎಣ್ಣೆಯನ್ನು ಇಟ್ಟಿರುತ್ತಾನೆ. ಅದರಲ್ಲಿ ತಪ್ಪು ಮಾಡಿದವರನ್ನು ಹಾಕಿ ಕುದಿಸಿ, ಕುದ್ದು ಹೋದ ದೇಹವನ್ನು ಕಾಗೆಗಳಿಂದ ಕುಕ್ಕಿಸುತ್ತಾರೆ. ಕೆಲವರಿಗೆ ಛಡಿ ಏಟು ಕೊಡುತ್ತಾರೆ. ಕೆಲವರಿಗೆ ಗಾಯ ಮಾಡಿ ಅದರ ಮೇಲೆ ಕಾರದ ಪುಡಿ ಎರಚುತ್ತಾರೆ” ಎಂದು ಹೇಳಿದ್ದರು. ಅವರು ಹೀಗೆ ಹೇಳಿದ್ದರಿಂದ ನನಗೆ ತಪ್ಪು ಮಾಡಲು ಭಯ ಎನಿಸುತ್ತಿತ್ತು. ನಾವು ಸುಳ್ಳು ಹೇಳಿದಾಗ, ತಪ್ಪು ಮಾಡಿದಾಗ ನಮ್ಮ ಹೆಸರಿನ ಪುಸ್ತಕದಲ್ಲಿ ಮಾಡಿರುವ ತಪ್ಪು, ಸುಳ್ಳುಗಳ ಲೆಕ್ಕವನ್ನು ದೇವರು ಬರೆದಿಟ್ಟುಕೊಳ್ಳುತ್ತಾನೆ. ಒಮ್ಮೆ ಅವುಗಳ ಸಂಖ್ಯೆ ಹೆಚ್ಷಾದಾಗ ನಾವು ಸತ್ತು ಹೋಗುತ್ತೇವೆ ಎಂದೆಲ್ಲಾ ಹೇಳಿದ್ದರಿಂದ ನನಗೆ ಸುಳ್ಳು ಹೇಳಲು ಭಯ ಆಗುತ್ತಿತ್ತು.
ಹಿಂದಿನ ಪೌರಾಣಿಕ ಚಲನಚಿತ್ರಗಳನ್ನು ನೋಡುತ್ತಿದ್ದಾಗ ಇದೇ ರೀತಿಯ ದೃಶ್ಯಗಳನ್ನು ಅದರಲ್ಲೂ ತೋರಿಸುತ್ತಿದ್ದಾಗ ಇದನ್ನು ಕಂಡು ನಾ ಹೆದರಿದ್ದೆ. ಒಮ್ಮೆ ಸೂಳೆಕೆರೆ ಎಂಬ ಊರಿಗೆ ಹೋದಾಗ ಅಲ್ಲಿನ ದೇಗುಲವೊಂದರಲ್ಲಿ, ಒಬ್ಬಳು ಮತ್ತೊಬ್ಬನ ಕಾಲ ಬುಡದಲ್ಲಿ ಕುಳಿತು ಕಾಲ ಮೇಲೆ ಏನೋ ತೆಗೆಯುತ್ತಿದ್ದ ಮೂರ್ತಿಗಳನ್ನು ನೋಡಿ, ಇದೇನಿದು? ಎಂದು ನನ್ನ ಚಿಕ್ಕಮ್ಮನನ್ನು ಕೇಳಿದಾಗ ಅವರು “ಹಿರಿಯರಿಗೆ ಕಾಲಲ್ಲಿ ಒದ್ದಿದ್ದಕ್ಕೆ ಅವನ ಕಾಲಲ್ಲಿ ಹುಳ ಬಿದ್ದಿದ್ದಾವೆ. ಅವಳು ಅವನ್ನು ತೆಗೆಯುತ್ತಿದ್ದಾಳೆ” ಎಂದು ಹೇಳಿದ್ದರು. ಅವರು ಹೇಳಿದ ಮಾತು ನನ್ನ ಮನಸ್ಸಿಗೆ ಎಷ್ಟು ನಾಟಿತು ಎಂದರೆ ಇಂದಿಗೂ ಯಾರದ್ದಾದರೂ ಕಾಲನ್ನು ಮಿಸ್ ಆಗಿ ತುಳಿದಾಗ ಅವರಿಗೆ ಸಾರಿ ಕೇಳೋ ಜೊತೆಗೆ ಅವರನ್ನು ಮುಟ್ಟಿ ನಮಸ್ಕಾರ ಮಾಡುತ್ತೇನೆ. ಇವೆಲ್ಲಾ ನಿಜಾನೋ ಸುಳ್ಳೋ ಗೊತ್ತಿಲ್ಲ. ಆದರೆ ಹಿಂದಿನವರು ದೇವರ ಮೇಲಿನ ಭಕ್ತಿಯನ್ನು ಒಳ್ಳೇದನ್ನು ಬೆಳೆಸಲು ಬಳಸ್ತಾ ಇದ್ರು.
ನಮ್ಮ ಮನೆಯ ಹಿತ್ತಲಿನಲ್ಲಿ ಆಟವಾಡುವ ವೇಳೆಯಲ್ಲಿ ಇರುವೆಯ ಸಾಲನ್ನು ನೋಡಿ ತುಂಬಾ ಅಚ್ಚರಿಪಡುತ್ತಿದ್ದೆ. ನಾನು ಕೆಂಪು ಇರುವೆಗಿಂತ ಕಪ್ಪನೆಯ ಇರುವೆಗಳನ್ನು ಇಷ್ಟಪಡುತ್ತಿದ್ದೆ. “ಕೆಂಪು ಇರುವೆಗಳು ನಮ್ಮ ದೇಶದವಲ್ಲ, ಕಪ್ಪನೆಯ ಇರುವೆಗಳು ಮಾತ್ರ ನಮ್ಮ ದೇಶದವು” ಅಂತಾ ನನ್ನ ಸೀನಿಯರ್ ಒಬ್ಬನು ಹೇಳಿದ್ದ ಮಾತನ್ನು ನಂಬಿದ್ದೆ. ಇದಕ್ಕೆ ಪೂರಕವಾಗಿ ಒಮ್ಮೆ ನಾನು ಕೆಂಪು ಇರುವೆಯಿಂದ ಕಚ್ಚಿಸಿಕೊಂಡಿದ್ದರಿಂದ ನನಗೆ ಕೆಂಪು ಇರುವೆ ಕಂಡರೆ ಆಗ್ತಾನೆ ಇರಲಿಲ್ಲ! ಆದರೆ ಕರಿಯ ಇರುವೆಗಳಿಗೆ ನೊಣಗಳನ್ನು ಸಾಯಿಸಿ ಅವಕ್ಕೆ ಆಹಾರವಾಗಿ ಹಾಕ್ತಿದ್ದೆ. ಅವು ಕಷ್ಟಪಟ್ಟು ಎಳೆದುಕೊಂಡು ಹೋಗುವುದನ್ನು ನೋಡ್ತಾ ಕೂತಿರುತ್ತಿದ್ದೆ. ಪಾಠ ಮಾಡುವಾಗ ಮೇಷ್ಟ್ರು “ನೊಣಗಳು ಮುಟ್ಟಿದ ಆಹಾರ ತಿಂದ್ರೆ ರೋಗ ಬರುತ್ತೆ” ಎಂದು ಹೇಳುತ್ತಿದ್ದರಿಂದ ನೊಣ ಸಾಯಿಸುವಾಗ ನನಗೆ ಯಾವ ಪಾಪಪ್ರಜ್ಞೆ ಕಾಡ್ತಾ ಇರಲಿಲ್ಲ. ಇದರ ಜೊತೆಯಲ್ಲಿ ಸಣ್ಣ ಹಸುವಿನ ಕರು, ಎಮ್ಮೆ ಕರುವಿನ ಮೈ ಮೇಲೆ ಇದ್ದ ಚಿಕ್ಕ ಚಿಕ್ಕ ಹುಳಗಳನ್ನು ತೆಗೆಯುತ್ತಾ ಕೂತಿರುತ್ತಿದ್ದೆ. ಅವಕ್ಕೆ ಏನು ಖುಷಿಯಾಗ್ತಾ ಇತ್ತೋ ಏನೋ? ಅವು ಹಾಗೆ ತೆಗೆಯುತ್ತಿದ್ದಾಗ ಸುಮ್ಮನೆ ಮಲಗಿಕೊಂಡು ಇರುತ್ತಿದ್ದವು.
ಆಗ ನಮ್ಮಜ್ಜಿ ಮನೆಯಲ್ಲಿ ಆಕಳು, ಎಮ್ಮೆ, ಎತ್ತು ಸೇರಿದಂತೆ ಎಂಟರಿಂದ ಹತ್ತು ಜಾನುವಾರುಗಳಿದ್ದವು. ಮನೆಯ ಪ್ರವೇಶದಲ್ಲೇ ದನದ ಮನೆ ಇತ್ತು. ಸಂಜೆಯಾದಂತೆ ಸೊಳ್ಳೆಗಳು ಅವಕ್ಕೆ ಕಚ್ಚಬಾರದೆಂದು ಭತ್ತದ ಹುಲ್ಲಿಗೆ ಬೆಂಕಿ ಹಾಕಿ ಅದರ ಮಧ್ಯೆ ಹಸಿ ಹುಲ್ಲು ಹಾಕಿ ಹೊಗೆ ಮಾಡುತ್ತಿದ್ದೆ. ಆ ಹೊಗೆಯಿಂದಾಗಿ ಸೊಳ್ಳೆಗಳು ಮನೆಗೆ ಬರೋಲ್ಲ ಎಂದು ಹೀಗೆ ಮಾಡುತ್ತಿದ್ದೆವು. ಹಿಂದಿನವ್ರು ದನಗಳ ಬಗ್ಗೆ ಎಷ್ಟು ಪ್ರೀತಿ ಇಟ್ಕೊಂಡಿದ್ದರು ಎಂದರೆ ಅವಕ್ಕೂ ಸಹ ನಮ್ಮಂತೆ ಹೆಸರಿಟ್ಟು ಕರೆಯುತ್ತಿದ್ದರು. ಒಮ್ಮೆ ನಮ್ಮ ಮನೆಯ ಒಂದು ಆಕಳನ್ನು ಮಾರಿದಾಗ ನಮ್ಮಜ್ಜಿ ಅತ್ತಿದ್ದನ್ನು ಇಂದೂ ಸಹ ನೆನಪಿಸಿಕೊಳ್ಳುತ್ತೇನೆ. ಆದರೆ ಈಗ ಹಳ್ಳಿಯವ್ರೂ ಬದಲಾಗಿದ್ದಾರೆ. ಮೊದಲಿನಂತೆ ಜಾನುವಾರು ಸಾಕುವ ಕಡೆ ಹೆಚ್ಚು ಒಲವು ತೋರುತ್ತಿಲ್ಲ; ಹಾಲಿನ ಪ್ಯಾಕೇಟ್ಗಳು ಹಳ್ಳಿಗೂ ಲಗ್ಗೆ ಇಟ್ಟಿರುವುದನ್ನು ನೋಡಿದರೆ ತುಂಬಾ ಅಚ್ಚರಿಯೆಸುತ್ತದೆ. ಹಿಂದೆ ಸಿರಿವಂತಿಕೆಯನ್ನು ಮನೆಯಲ್ಲಿ ಕಟ್ಟಿದ ಜಾನುವಾರಗಳ ಮೇಲೆ ಅಳೆಯುತ್ತಾ ಇದ್ರಂತೆ. ಆದರೆ ಈಗ ಮನೆಯಲ್ಲಿರುವ ವಾಹನಗಳು, ಬಿಲ್ಡಿಂಗ್ ಮೇಲೆ ಅಳೆಯಲಾಗುತ್ತಿದೆ! ಕೊನೆಗೆ ‘ಪ್ರಗತಿ’ ಅಂತಾ ಇದನ್ನೇ ಕರೆಯೋದಾದ್ರೆ ಅದು ಬೇಕಿತ್ತ? ಎಂಬ ಪ್ರಶ್ನೆ ಸದಾ ಮನಸಲ್ಲಿ ಕಾಡ್ತಾ ಇರುತ್ತೆ.
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
ಲೇಖನ ಬಾಲ್ಯದ ದಿನಗಳನ್ನು ನೆನಪಿಸುವಂತಿದೆ ನಿಮ್ಮ ಬಾಲ್ಯದ ಗೆಳೆಯರಾದ ಪರ್ಮಿ ಸುನಿಲ್ ಸತೀಶ್ ಮೊದಲಾದ ನಿಮ್ಮ ಗೆಳೆಯರು ಈಗ ಏನು ಮಾಡುತ್ತಿದಾರೆ
ವಾಹ್ಎಂಥಾ ಅದ್ಭುತ ಲೇಖನ..ಪ್ರಾಯಶಃ ಎಲ್ಲರಿಗೂ ಈ ಅನುಭವ ಆಗಿರುತ್ತದೆ.. ಮತ್ತೊಮ್ಮೆ ನಮ್ಮ ಬಾಲ್ಯ ನೆನಪಿಸಿದ್ದಕ್ಕೆ ಥ್ಯಾಂಕ್ಸ್ ಗೌಡ್ರೆ..ಶುಭವಾಗಲಿ👍
ಬಾಲ್ಯದ ಘಟನೆಗಳನ್ನು ಮತ್ತೆ ನೆನಪು ಮಾಡಿದ ನಿಮ್ಮ ಪ್ರಯತ್ನ ಸೊಗಸಾಗಿ ಮೂಡಿ ಬಂದಿದೆ 💐🙏🏻👍 Tq friend
ಖಂಡಿತ ಈ ಎಲ್ಲಾ ವಿಷಯಗಳು ನಮ್ಮ ಜೀವನಕ್ಕೂ ಅನ್ವಯಿಸುತ್ತದೆ…. ಭಯ ನಮ್ಮನ್ನು ಕೆಟ್ಟ ಆಲೋಚನೆಗಳಿಂದ ಕಾಪಾಡುತ್ತಿತ್ತು…. ಇಂದಿಗೂ ಈ ವಿಷಯ ಪ್ರಸ್ತುತ… ಮತ್ತೊಂದು ಉತ್ತಮ ಬರಹಕ್ಕಾಗಿ ಧನ್ಯವಾದಗಳು
ನಿಮ್ಮ ಬರಹ ನಮ್ಮ ಬಾಲ್ಯದ ನೆನಪುಗಳನ್ನು ತರಿಸಿವೆ ನಿಮಗೆ ಧನ್ಯವಾದಗಳು ಸರ್