ಚೈತ್ರಾರಂಭದ ಹಾಡು

ಬಾಲ್ಯವು ಕದ ತಟ್ಟುವಾಗ
ಚೈತ್ರವೂ ಕಾಲೂರಿ, ಮಾವು, ಬೇವು,
ಚಿಗುರಿ ನಳನಳಿಸಿ,
ಕೋಗಿಲೆಯ ಕುಹೂ ಕುಹೂ,
ಪುಸ್ತಕದೊಳಗಿನ,
ಹಸಿರೆಲೆ ಚಿಗುರೊಡೆದದ್ದು,
ನವಿಲುಗರಿ ಮರಿ ಹಾಕಿದ
ಕನಸು,

ಕಾಡು, ಮೇಡ ಅಲೆದು
ಬೆಟ್ಟ ಹತ್ತಿಳಿದು,
ಬೋಳುತಲೆಯ ಮಾಸ್ತರೆದುರು,
ಕಿಸಕ್ಕನೆ ನಕ್ಕು,
ದೊಂಬಿಯೆದ್ದು
ತರಲೆಗಳ, ಕಿರುನಗೆ, ಹುಸಿನಗೆ,
ಹಸಿನಗೆ, ಕಾಡಿಗೆ ಕಣ್ಣೋಟ,
ಮುಗ್ಧತೆಯ ಚೈತ್ರಾರಂಭದ ಹಾಡು,
ಹಚ್ಚಗೆ ಹಸಿರ ಹರಸಿ, ತಂಪನೀವ,
ಹೊಂಗೆಯೇ, ಕಣ್ಣ ತುಂಬಿತು
ಭಾವ, ಅನುಭಾವ, ಉಸಿರನೀವ,
ಬಾಲ್ಯದ ಝಲಕು,
ಮನತುಂಬುವ ನೆನಪುಗಳಷ್ಟೇ,
ಬಾಲ್ಯವೇ, ನೀನೇಕೆ ನಮ್ಮ
ತೊರೆದೆ? ಏಕೆ ತೊರೆದೆ?

ಈ ಜನ್ಮಕ್ಕದೇ ವಿದಾಯ,
ತಂಪಿನ ವಿದಾಯ,

ಸ್ನೇಹದ ಪ್ರಿಯಗಳಿಗೆ
ಮಲ್ಲಿಗೆಯ ಘಮಲಷ್ಟೇ,
ಕಾಗೆ ಎಂಜಲು ಮಾಡಿ ಕಚ್ಚಿದ ಹಣ್ಣು ಜಗಕೆ ಶಾಂತಿ ಮಂತ್ರ
‘ಸ್ನೇಹ’ ಪ್ರೀತಿಯ ನೆರಳಲ್ಲಿ
ದೇವಸ್ಥಾನ ಇಗರ್ಜಿಯ
ಘಂಟೆಗಳಿಗೆ ಒಂದೇ ಧ್ವನಿ,
ಅಲ್ಲಾಹೂವಿನ ಪ್ರಾರ್ಥನೆಯಲ್ಲೂ
ಧ್ವನಿಸಿದ ಓಂಕಾರ,
ಗಾಯಕ್ಕೆ ‘ಎಂಜಲೇ’ ಔಷಧಿ
ಬಾಲ್ಯವೇ ನೀನೇಕೆ ನಮ್ಮ ತೊರೆದೆ?
ಕಣ್ಣ ತುಂಬುವ ಮಿಂಚು,
ಶುದ್ಧ ಮನಸ್ಸಿನ ಹಣತೆ ಮತ್ತೆ
ಹಚ್ಚಬೇಕಿದೆ,

ರೇಖಾಗಣಿತ ಈಗಷ್ಟೆ
ಬದುಕಿನ ಪಾಠ
ಆರಂಭಿಸಿದೆ,
ಇತಿಹಾಸ ಗತ ಸೇರಿದೆ,
ವ್ಯಂಜನ, ಸ್ವರ, ವ್ಯಂಜನಗಳು
ಅರ್ಥೈಸಿಕೊಳ್ಳದೆ ಸೋತಿವೆ,

ಆದರೂ ನುಡಿಗಟ್ಟಿನೊಡನೆ
ಜಂಜಾಟ,
ಬೆನ್ನಿಗೆ ಬಿದ್ದ ಲಗೋರಿಯ
ಚೆಂಡು,
ಸರ ಸರನೇ ಪೇರಿಸಿದ್ದು
ಕಲ್ಲಿನ ಪಾಠ,

ಗಡಿಯಾರ ತುಂಬಾ
ಕರಾರುವಕ್ಕು
ನಡೆದೇ ತೀರುತ್ತದೆ,
ದೊಡ್ಡ ಮುಳ್ಳು, ಸಣ್ಣ ಮುಳ್ಳು,
ಯಾರು ಹೇಳಿಕೊಟ್ಟ ಪಾಠ?
ಈ, ಗಡಿಯಾರಕ್ಕೆ? ಹಿಂತಿರುಗಿ
ಬರಲಾರದಂತೆ,

ಹೊಂಗೆಯ ನೆರಳು
ಸುರುಗಿಯ ಘಮಲು
ಕಿರುಚಿ ಹಾಡುವ ಧ್ವನಿ,
ಸೊಟ್ಟಗೆ ಸೈಕಲ್ ಹೊಡೆದದ್ದು ನೆನಪು,
ಅಳುವುದಕ್ಕೂ
ನಗುವುದಕ್ಕೂ ಲೈಸನ್ಸು ಇಂದು
ಮರಳಿ ಬಾರದೇ ಬಾಲ್ಯ,
ಸರಿದ ಬಾಲ್ಯದ ನೆನಪಲ್ಲಿ
ಶುದ್ಧಳಾಗಬೇಕಿದೆ
ಮೈ ಮುರಿವ ಮೌನವ
ಸಾಂತ್ವನಿಸಬೇಕಿದೆ.

ಶಾಂತಾ ಜಯಾನಂದ್ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯವರು.
ಸಮಾಜಶಾಸ್ತ್ರ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ. ಎ ಪದವೀಧರರು. ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಎಂ. ಫಿಲ್ ಪದವಿ ಪೂರೈಸಿದ್ದಾರೆ.
ದೂರದರ್ಶನದ ಚಂದನವಾಹಿನಿಯಲ್ಲಿ ನಿರೂಪಕಿಯಾಗಿ ಹಾಗೂ ಡಾಕ್ಯುಮೆಂಟರಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಎಂ.ಎಸ್ ರಾಮಯ್ಯ ಕಾನೂನು ಮತ್ತು ಮ್ಯಾನೇಜ್ ಮೆಂಟ್ ಕಾಲೇಜು ಹಾಗೂ ಇಂಡಿಯನ್ ಅಕಾಡೆಮಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ