ಒಮಾಹಾದ ಭಾರತೀಯರ ವಿಶೇಷತೆ ಕೂಡ ಅದೇ ಆಗಿದೆ. ಅಲ್ಲಿ ಎಷ್ಟೋ ಸಮಾರಂಭಗಳನ್ನು ಒಟ್ಟಾಗಿ ಮಾಡುತ್ತಾರೆ. ಒಂದೊಂದು ಹಬ್ಬದಲ್ಲಿ ಒಬ್ಬ ಭಾಷಿಕರ ಸಂಘ ನಿರ್ವಹಣೆಯ ಜವಾಬ್ದಾರಿ ಹೊತ್ತಿರುತ್ತದೆ. ಶಿವರಾತ್ರಿ ಬಂತೆಂದರೆ ಅಲ್ಲಿನ ಪ್ರತಿಯೊಂದು ಕೆಲಸಗಳನ್ನು ಕನ್ನಡ ಸಂಘದವರು ನಿಭಾಯಿಸುತ್ತಾರೆ. ಅವತ್ತಿನ ದಿವಸ ಎಷ್ಟೋ ಸಾವಿರ ಭಾರತೀಯರಿಗೆ ಇಡ್ಲಿ ಚಟ್ನಿ, ಸಾಂಬಾರ್, ಬೂಂದಿ ಉಂಡೆ ಹಾಗೆ ತರತರಹದ ಅಡಿಗೆ ಮಾಡಿ ಬಡಿಸುವ ಜವಾಬ್ದಾರಿ ಕನ್ನಡಿಗರದು. ಅದೇ ರೀತಿ ಗಣೇಶ ಚತುರ್ಥಿ ಮರಾಠಿಗರ ಜವಾಬ್ದಾರಿ… ಹಬ್ಬಗಳನ್ನು ಒಟ್ಟಿಗೆ ಆಚರಣೆ ಮಾಡುತ್ತಾ ವೈವಿಧ್ಯತೆಯಲ್ಲಿ ಏಕತೆ ಪ್ರದರ್ಶಿಸುತ್ತಾರೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಒಂಭತ್ತನೆಯ ಬರಹ

ನನಗೆ ಯಾವಾಗಲೂ ಬೆಳಿಗ್ಗೆ ಬೇಗನೆ ಎಚ್ಚರ ಆಗುತ್ತೆ. ಅವತ್ತು ಕೂಡ ಆರು ಗಂಟೆಗೆಲ್ಲ ಎದ್ದು ಚಹಾದ ಕಪ್ಪು ಹಿಡಿದು ನಮ್ಮ ಫ್ಲ್ಯಾಟ್‌ನ ಬಾಲ್ಕನಿಯಲ್ಲಿ ನಿಂತಿದ್ದೆ. ಹಾಸಿನಿ ನೆನಪಾದರು. “ಗುರು, posh locality ಯಲ್ಲಿ ದೊಡ್ಡದೊಂದು ಮನೆ. ಮನೆಯ ಹತ್ತಿರದಲ್ಲೇ ಶಾಲೆ ಇದೆ. ನಿನ್ನ ಮಗಳಿಗೆ ತುಂಬಾ ಅನುಕೂಲ. ಇಲ್ಲಿನ ಎಷ್ಟೋ ಪಟ್ಟು ದೊಡ್ಡ ಸ್ಯಾಲರಿ. ಅರಾಮಾಗಿ ಇರಬಹುದು“ ಅಂತ ಹೇಳಿ ನನ್ನಲ್ಲಿ ಕೆಲವೇ ತಿಂಗಳಿನ ಹಿಂದೆ ವಿದೇಶದ ಗುಂಗು ಹಚ್ಚಿದ್ದರು. ಅವರು ಹೇಳಿದ್ದು ನಾನು ಫ್ರಾನ್ಸ್ ದೇಶಕ್ಕೆ ಹೋಗುವ ಕುರಿತು ಆಗಿತ್ತಾದರೂ, ಅವರ ಆ ಹೇಳಿಕೆಯಿಂದ ನಾನು ಕಂಡ ಕನಸು ಆಗ ಮುಗುಚಿ ಬಿದ್ದರೂ ಹೀಗೆ ಅಮೆರಿಕೆಗೆ ಬರುವಲ್ಲಿಗೆ ನನಸಾಗಿತ್ತು. ಅದಕ್ಕೇ ಯಾವಾಗಲೂ ಕನಸು ಕಾಣಬೇಕು. ಅದು ನನಸಾದಾಗ ಅದನ್ನು ಅನುಭವಿಸಲು ಬೆಳಿಗ್ಗೆ ಬೇಗ ಏಳಬೇಕು!

ಓಮಾಹಾದ ಆಕಾಶ ಅವತ್ತು ಶುಭ್ರವಾಗಿತ್ತು. ತಣ್ಣನೆಯ ಗಾಳಿ ಮುದ ನೀಡುತ್ತಿತ್ತಾದರೂ, ಚಳಿ ದಿನೇ ದಿನೇ ಸ್ವಲ್ಪ ಹೆಚ್ಚುತ್ತಾ ಮುಂದೆ ಬರಲಿರುವ ಕ್ರೂರ ಚಳಿಗಾಲದ ಮುನ್ಸೂಚನೆ ಕೊಡುತ್ತಿತ್ತು. ನಮ್ಮಲ್ಲಿನಂತೆ ಹೊರಗಡೆ ಅತ್ತಿತ್ತ ಅಡ್ಡಾಡುವ ಜನರು ಅಲ್ಲಿ ಅಪರೂಪ. ವಾಹನಗಳೇ ಆಗೊಂದು ಈಗೊಂದು ಎಂಬಂತೆ ಚಲಿಸುತ್ತಿದ್ದವು. ಎಲ್ಲೆಲ್ಲೂ ನೀರವತೆ! ಕೆಲವು ದಿನಗಳು ಅಂತಹ ಶಾಂತತೆ ಇಷ್ಟವಾಯಿತಾದರೂ ಆಮೇಲಾಮೇಲೆ ಶುದ್ಧ ನೀರಸ ಅನಿಸತೊಡಗಿತು. ಎಷ್ಟೋ ಜನರಿಗೆ ಅಂತಹ ಬದುಕು ಇಷ್ಟ. ನನಗೆ ಸದ್ದು ಮಾಡದೆ ಬದುಕುವುದು ಕಷ್ಟ!

ಎಲ್ಲವೂ ಇದ್ದರೂ ನನ್ನ ಮನಸ್ಸು ಇನ್ನೂ ಭಾರತದಲ್ಲೇ ಇತ್ತು. ಅದೇನೋ ಒಂದು ತರಹದ ವಿಷಾದ ಭಾವ. ಬಹುಶಃ ಅದಕ್ಕೆ ಇನ್ನೊಂದು ಕಾರಣ ನನ್ನ ಅಪ್ಪ! ನಾನು ಇಲ್ಲಿಗೆ ಬರುವಾಗ ಅವರನ್ನು ಭಾರತದಲ್ಲೇ ಬಿಟ್ಟು ಬಂದಿದ್ದೆ. ತಮ್ಮನ ಮನೆಯಲ್ಲಿ ಸುರಕ್ಷಿತವಾಗಿ, ಸೌಖ್ಯವಾಗಿ ಇದ್ದರಾದರೂ ಅವರನ್ನು ಬಿಟ್ಟು ನಾನು ಇಲ್ಲಿದ್ದೀನಲ್ಲ ಎಂಬ ತಪ್ಪಿತಸ್ಥ ಭಾವನೆ ಅಲ್ಲಿರುವವರೆಗೂ ಕಾಡುತ್ತಲೇ ಇತ್ತು. ಅದಕ್ಕೆ ಕಾರಣ ನಮ್ಮ ನಡುವೆ ಇದ್ದ ಬಾಂಧವ್ಯ. ಅಪ್ಪ ನಮ್ಮನ್ನು ಎಂದಿಗೂ ಕೂಡ ಅಪ್ಪನಂತೆ ಆಳಲಿಲ್ಲ. ಗೆಳೆಯನಂತೆಯೇ ನೋಡಿಕೊಂಡರು. ನನ್ನ ಅಮ್ಮ ದಿ. ಪರಿಮಳ ಕುರ್ತಕೋಟಿ (1980 ರ ಸಮಯದ ಪ್ರತಿಭಾವಂತ ಹಾಗೂ ಉದಯೋನ್ಮುಖ ಕಥೆಗಾರ್ತಿ ಆಗಿದ್ದರು) 49 ವಯಸ್ಸಿನಲ್ಲೇ ನಮ್ಮನ್ನು ಬಿಟ್ಟು ಹೋದಾಗ ನಾನು ಹಾಗೂ ತಮ್ಮನಿಗೆ ಅಪ್ಪನೇ ಅಮ್ಮನಾಗಿಬಿಟ್ಟ. ಇನ್ನೊಂದು ಮದುವೆ ಕೂಡ ಮಾಡಿಕೊಳ್ಳದೆ ನಮ್ಮನ್ನು ತುಂಬಾ ಪ್ರೀತಿಯಿಂದ ಸಲುಹಿದರು. ತಾನು ಕೆಲಸ ಮಾಡುತ್ತಾ, ಅಡಿಗೆ ಮಾಡಿ ಹಾಕಿ, ಹೇಗೋ ದೊಡ್ಡವರನ್ನಾಗಿ ಮಾಡಿ ನಮ್ಮಿಬ್ಬರಿಗೂ ಒಳ್ಳೆಯ ಶಿಕ್ಷಣ ಕೂಡ ಕೊಡಿಸಿದರು. ಅಷ್ಟು ಕಷ್ಟ ಪಟ್ಟ ಮೇಲೆ, ನನಗೆ ಒಳ್ಳೆಯ ಕೆಲಸ ಸಿಕ್ಕು ನಾವೆಲ್ಲ ಬೆಂಗಳೂರಿಗೆ ಬಂದು, ನನ್ನ ಮದುವೆ ಆದ ಮೇಲೆ ನಮ್ಮೆಲ್ಲರ ಜೀವನ ಸಂತೃಪ್ತವಾಗಿ ಒಂದು ಲಯದಲ್ಲಿ ಹೊರಟಿತ್ತು. ಮುಂದೆ ತಮ್ಮನ ಮದುವೆಯೂ ಆಯ್ತು. ಇಬ್ಬರೂ ಸೊಸೆಯಂದಿರು ಅಪ್ಪನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಹೆಚ್ಚಾಗಿ ನನ್ನ ಜೊತೆಗೆ ಇರುತ್ತಿದ್ದ ಅಪ್ಪನನ್ನು ಹೀಗೆ ಬಿಟ್ಟು ಬಂದೆನಲ್ಲ ಎಂಬ ಅಪರಾಧಿ ಭಾವನೆ ನನ್ನಲ್ಲಿ ಆಗಾಗ ಮೂಡುತ್ತಿತ್ತು. ಹಾಗಂತ ಅಮೆರಿಕೆಗೆ ಹೋಗಲ್ಲ ಅಂತ ಇಂತಹ ಅವಕಾಶವನ್ನು ಬಿಟ್ಟಿದ್ದರೂ ದಡ್ಡತನವೆ ಆಗುತ್ತಿತ್ತು. ಹಾಗೆ ಅನಿಸಿದಾಗೊಮ್ಮೆ ಹೇಗಿದ್ರೂ ಒಂದು ವರ್ಷ ಇದ್ದು ವಾಪಸ್ಸು ಹೋದರಾಯ್ತು ಅಂತ ಸಮಾಧಾನ ಮಾಡಿಕೊಳ್ಳುತ್ತಿದ್ದೆ.

ಅಪ್ಪನಿಗೆ ಕರೆ ಮಾಡಿ ಮಾತಾಡಿದೆ. ಅಲ್ಲಿರುವವರೆಗೆ ಪ್ರತಿ ದಿನವೂ ಅಪ್ಪನ ಜೊತೆಗೆ ಮಾತಾಡುತ್ತಿದ್ದೆ. ಅವನು ಹೆಚ್ಚೇನು ಮಾತಾಡದಿದ್ದರೂ, ಒಂದು ಸಮಾಧಾನ ಇಬ್ಬರಿಗೂ ಆಗುತ್ತಿತ್ತು. ಹೆಚ್ಚಾಗಿ ಸಂಜೆ ಅವನಿಗೆ ಕರೆ ಮಾಡುತ್ತಿದ್ದೆ. ಅದು ಎಷ್ಟು ರೂಢಿ ಆಗಿತ್ತು ಅಂದರೆ ನಾವೆಲ್ಲಾದರೂ ಹೊರಗಡೆ ಹೋಗಿ, ಬರುವುದು ಸ್ವಲ್ಪ ತಡವಾಗಿ ಅವನಿಗೆ ಫೋನ್ ಮಾಡುವ ಸಮಯ ತಪ್ಪಿದ ಕೂಡಲೇ ಅವನು ತುಂಬಾ ವ್ಯಾಕುಲತೆಗೆ ಒಳಗಾಗಿ ನನಗೆ ಅಲ್ಲಿಂದಲೇ international miss call ಕೊಡಲು ಶುರು ಮಾಡುತ್ತಿದ್ದ. ಹೀಗಾಗಿ ಆದಷ್ಟು ನಾನು ಅವನಿಗೆ ಕರೆ ಮಾಡುವುದನ್ನು ತಪ್ಪಿಸುತ್ತಲೇ ಇರಲಿಲ್ಲ.

ಆಶಾ ಮತ್ತು ಪರಿಧಿ ಹೊಸ ಸ್ಥಳ, ಮನೆ, ಹವಾಮಾನವನ್ನು ತುಂಬಾ ಇಷ್ಟಪಡಲು ತೊಡಗಿದ್ದರು. ಹೊಸ ವಾತಾವರಣಕ್ಕೆ ತಮ್ಮನ್ನು ತಾವು ಅಣಿಗೊಳಿಸುತ್ತಿದ್ದರು. ಪರಿಧಿಗೆ ಯುನಿಫಾರ್ಮ್ ಇಲ್ಲದ ಹೋಂ ವರ್ಕ್‌ನ ರಗಳೆ ಇಲ್ಲದ ಅಲ್ಲಿನ ಶಾಲೆ ತುಂಬಾ ಇಷ್ಟವಾಗಿತ್ತು. ಅಲ್ಲಿನ ಅಭ್ಯಾಸ ಕೂಡ ಅಷ್ಟೆಲ್ಲಾ ಕಠಿಣವಾಗಿ ಇರಲಿಲ್ಲ. ಮುಂದೆ ಪ್ರೌಢ ಶಿಕ್ಷಣ ಮಾತ್ರ ತುಂಬಾ ಕಷ್ಟಮಯ ಆಗಿರುತ್ತೆ ಅಂತ ಚಂದ್ರು ಹೇಳುತ್ತಿದ್ದ. ಅಷ್ಟರೊಳಗೆ ವಾಪಸ್ಸು ಹೋಗುತ್ತೇವಲ್ಲ ಅಂತ ನಾನು ಅಂದುಕೊಳ್ಳುತ್ತಿದ್ದೆ! ನನ್ನ home sickness ಹೊರತಾಗಿ ನಾನೂ ಕೂಡ ಅಲ್ಲಿಯ ಹಲವಾರು ವಿಷಯಗಳನ್ನು ಇಷ್ಟಪಡುತ್ತಿದ್ದೆ ಹಾಗೂ ಆನಂದಿಸುತ್ತಿದ್ದೆ. ಆ ಕ್ಷಣಕ್ಕೆ ನನಗೆ ಅಲ್ಲಿ ಇನ್ನೂ ಒಂದಿಷ್ಟು ಚಟುವಟಿಕೆಗಳು ಬೇಕಿದ್ದವು ಅಷ್ಟೇ. ಇನ್ನೊಂದಿಷ್ಟು ಹೊಸ ಸ್ನೇಹಿತರ ತುರ್ತು ಅವಶ್ಯಕತೆ ನನಗೆ ಕಂಡಿತು.

ಇಬ್ಬರೂ ಸೊಸೆಯಂದಿರು ಅಪ್ಪನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಹೆಚ್ಚಾಗಿ ನನ್ನ ಜೊತೆಗೆ ಇರುತ್ತಿದ್ದ ಅಪ್ಪನನ್ನು ಹೀಗೆ ಬಿಟ್ಟು ಬಂದೆನಲ್ಲ ಎಂಬ ಅಪರಾಧಿ ಭಾವನೆ ನನ್ನಲ್ಲಿ ಆಗಾಗ ಮೂಡುತ್ತಿತ್ತು. ಹಾಗಂತ ಅಮೆರಿಕೆಗೆ ಹೋಗಲ್ಲ ಅಂತ ಇಂತಹ ಅವಕಾಶವನ್ನು ಬಿಟ್ಟಿದ್ದರೂ ದಡ್ಡತನವೆ ಆಗುತ್ತಿತ್ತು. ಹಾಗೆ ಅನಿಸಿದಾಗೊಮ್ಮೆ ಹೇಗಿದ್ರೂ ಒಂದು ವರ್ಷ ಇದ್ದು ವಾಪಸ್ಸು ಹೋದರಾಯ್ತು ಅಂತ ಸಮಾಧಾನ ಮಾಡಿಕೊಳ್ಳುತ್ತಿದ್ದೆ.

ಸ್ನೇಹಿತರನ್ನು ಗಳಿಸುವುದು ನನಗೆ ನೀರು ಕುಡಿದಷ್ಟೇ ಸುಲಭ. ಈಗಾಗಲೇ ಅಲ್ಲಿ ಪರಿಚಯವಾಗಿದ್ದ ಸಮಾನ ಮನಸ್ಕ ಹಾಗೂ ಸಮಾನ ವಯಸ್ಕ ಚಂದ್ರು ಅಲ್ಲಿನ ಕೆಲವು ಕನ್ನಡಿಗರನ್ನು ಪರಿಚಯಿಸಿದ್ದ ಕೂಡ. ಅದೇ ಸಮಯದಲ್ಲಿ ಎಲ್ಲಾ ಭಾರತೀಯರು ಸೇರಿ ಮಾಡುವ ಒಂದು ಸಮಾರಂಭಕ್ಕೆ ಹೋಗುವ ಅವಕಾಶ ಕೂಡ ಸಿಕ್ಕಿತು. ಅದಕ್ಕೆ ರಿದಂಸ್ ಅಂತ ಹೆಸರು. ಹಾಲ್ ಕಿಕ್ಕಿರಿದು ತುಂಬಿತ್ತು. ಇಷ್ಟೆಲ್ಲಾ ಭಾರತೀಯರು ಇಲ್ಲಿದ್ದಾರೆಯೆ ಅಂತ ಆಶ್ಚರ್ಯದಿಂದ ಕೇಳಿದಾಗ ಅಲ್ಲೊಬ್ಬರು ಹೇಳಿದರು. ತುಂಬಾ ಹಿಂದೆ ಕೆಲವೇ ಕೆಲವರು ಇದ್ದರಂತೆ. ಆಗ ಅವರೆಲ್ಲ ಬೇರೆ ಬೇರೆ ಭಾಷೆ ಮಾತಾಡುವವರು ಇದ್ದರೂ ತುಂಬಾ ಅನ್ಯೋನ್ಯತೆಯಿಂದ ಇದ್ದರಂತೆ. ಹೆಚ್ಚು ಹೆಚ್ಚು ಭಾರತೀಯರು ಬರಲು ಶುರು ಆದ ಮೇಲೆ ಅಲ್ಲಿಯೂ ಗುಂಪುಗಳು ಶುರುವಾದವು. ಉತ್ತರ ಭಾರತ, ದಕ್ಷಿಣ ಭಾರತ. ಮುಂದೆ ತೆಲುಗು, ತಮಿಳು, ಹಿಂದಿ, ಕನ್ನಡ ಹೀಗೆ ಗುಂಪುಗಳು. ಹಾಗೆಯೇ ಮುಂದೆ ಹೋದರೆ ದಕ್ಷಿಣ ಕನ್ನಡ ಉತ್ತರ ಕನ್ನಡ! ನಾವು ಭಾರತೀಯರು ಎಷ್ಟೊಂದು ಭಾಗ ಆಗುತ್ತಾ, ಕುಗ್ಗುತ್ತಾ ಹೋಗುತ್ತೇವೆ! ಹೀಗೆಯೇ ತಾನೇ ಬ್ರಿಟಿಷರು ನಮ್ಮನ್ನು ಹಿಂದೊಮ್ಮೆ ಆಳಿದ್ದು. ಹೀಗೆಯೇ ಅಲ್ಲವೇ ಇಂದಿನ ರಾಜಕಾರಣಿಗಳು ನಮ್ಮನ್ನು ಒಡೆದು ಆಳುತ್ತಿರುವುದು! ಆದರೆ ಸಮಯ ಬಂದಾಗ, ತಮ್ಮನ್ನು ಒಡೆದು ಆಳುತ್ತಿರುವ ಅರಿವಾದಾಗ ಒಟ್ಟಾಗಿ ತಿರುಗಿ ಬೀಳುವುದು ಕೂಡ ಭಾರತೀಯರಿಗೆ ಗೊತ್ತು!

ಒಮಾಹಾದ ಭಾರತೀಯರ ವಿಶೇಷತೆ ಕೂಡ ಅದೇ ಆಗಿದೆ. ಅಲ್ಲಿ ಎಷ್ಟೋ ಸಮಾರಂಭಗಳನ್ನು ಒಟ್ಟಾಗಿ ಮಾಡುತ್ತಾರೆ. ಒಂದೊಂದು ಹಬ್ಬದಲ್ಲಿ ಒಬ್ಬ ಭಾಷಿಕರ ಸಂಘ ನಿರ್ವಹಣೆಯ ಜವಾಬ್ದಾರಿ ಹೊತ್ತಿರುತ್ತದೆ. ಶಿವರಾತ್ರಿ ಬಂತೆಂದರೆ ಅಲ್ಲಿನ ಪ್ರತಿಯೊಂದು ಕೆಲಸಗಳನ್ನು ಕನ್ನಡ ಸಂಘದವರು ನಿಭಾಯಿಸುತ್ತಾರೆ. ಅವತ್ತಿನ ದಿವಸ ಎಷ್ಟೋ ಸಾವಿರ ಭಾರತೀಯರಿಗೆ ಇಡ್ಲಿ ಚಟ್ನಿ, ಸಾಂಬಾರ್, ಬೂಂದಿ ಉಂಡೆ ಹಾಗೆ ತರತರಹದ ಅಡಿಗೆ ಮಾಡಿ ಬಡಿಸುವ ಜವಾಬ್ದಾರಿ ಕನ್ನಡಿಗರದು. ಅದೇ ರೀತಿ ಗಣೇಶ ಚತುರ್ಥಿ ಮರಾಠಿಗರ ಜವಾಬ್ದಾರಿ… ಹಬ್ಬಗಳನ್ನು ಒಟ್ಟಿಗೆ ಆಚರಣೆ ಮಾಡುತ್ತಾ ವೈವಿಧ್ಯತೆಯಲ್ಲಿ ಏಕತೆ ಪ್ರದರ್ಶಿಸುತ್ತಾರೆ. ನಾನು ಯಾವಾಗಲೂ ಹೇಳುತ್ತಿದ್ದೆ. ಭಾರತೀಯರು ಒಂದಾಗಿದ್ದಾರೆ ಅಂತ ನೋಡಬೇಕೆಂದರೆ ನಾವು ವಿದೇಶಕ್ಕೆ ಹೋಗಬೇಕು ಅಂತ. ಯಾವುದೇ ಭಾರತೀಯನಿಗೆ ಅಲ್ಲಿ ಏನಾದರೂ ಸಮಸ್ಯೆ ಆದರೆ ಅದನ್ನು ಪರಿಹರಿಸಲು ಕೂಡ ಒಂದು ವ್ಯವಸ್ಥೆಯನ್ನು ಅಲ್ಲಿನ ಭಾರತೀಯರ ಸಂಘ ಮಾಡಿಕೊಂಡಿದೆ. ಎಷ್ಟೋ ಯುವಕ ಯುವತಿಯರು ಅಲ್ಲಿನ ನೆಬ್ರಸ್ಕಾ ವಿಶ್ವವಿದ್ಯಾಲಯಕ್ಕೆ ಕಲಿಯಲು ಬರುತ್ತಾರೆ. ಅವರಿಗೆ ಯಾವುದೇ ರೀತಿಯ ಸಮಸ್ಯೆ ಬಂದರೂ ಅವರಿಗೆ ಒಂದು ಪರಿಹಾರ ಕೊಡುವ ವ್ಯವಸ್ಥೆ ಕೂಡ ಅಲ್ಲಿದೆ. ಅಲ್ಲಿನ ಸಮಾರಂಭದಲ್ಲಿ ಇನ್ನಷ್ಟು ಜನ ಪರಿಚಯವಾದರು.

ಹಾಗೆ ಪರಿಚಯವಾದ ಕೆಲವರನ್ನು ಒಬ್ಬೊಬ್ಬರಂತೆ ನಮ್ಮ ಮನೆಗೆ ಆಹ್ವಾನಿಸಲು ತೊಡಗಿದೆವು. ಆಶಾಳಿಗೆ ಅಡುಗೆ ಮಾಡಲು ಇಷ್ಟ. ನನಗೆ ಮಾತಾಡಲು ಹಾಗೂ ತಿನ್ನಲು ಇಷ್ಟ! ಹಾಗೆ ಮನೆಗೆ ಬಂದ ಅತಿಥಿಗಳು ಆಶಾಳ ಅಡುಗೆಯನ್ನು ತುಂಬಾ ಪ್ರಶಂಸಿಸುತ್ತಿದ್ದರು ಕೂಡ. ಹಾಗೆ ಅತಿಥಿಗಳು ಬಂದಾಗ ನನಗೂ ತರ ತರಹದ ಪಕ್ವಾನ್ನಗಳು ದೊರೆಯುತ್ತಿದ್ದವು. ಜೊತೆಗೊಬ್ಬ ಹೊಸ ಸ್ನೇಹಿತ ಕೂಡ ಸಿಗುತ್ತಿದ್ದರು! ಹಾಗೆ ಪರಿಚಯವಾದವರು ಮುಂದೆ ನಮ್ಮನ್ನೂ ಕೂಡ ತಮ್ಮ ಮನೆಗೆ ಊಟಕ್ಕೆ ಕರೆಯುತ್ತಿದ್ದರು. ಅಲ್ಲಿಯ ಭಾರತೀಯರನ್ನು ಹೆಚ್ಚು ಹೆಚ್ಚು ಅರಿಯಲು ತೊಡಗಿದೆ. ಅಲ್ಲಿ ನನಗೆ ಸಿಕ್ಕ ಹೆಚ್ಚು ಕನ್ನಡಿಗರು ಸುಮಾರು ವರ್ಷಗಳಿಂದ ಅಲ್ಲಿಯೇ ನೆಲೆಸಿದವರಾಗಿದ್ದರು. ಇನ್ನೂ ಕೆಲವರು ನನ್ನಂತೆಯೇ ಆಗ ತಾನೇ ಬಂದವರು ಇದ್ದರು. ಕೆಲವರು ಬಂದು ಹೋಗಿ ಮತ್ತೆ ಬಂದಿರುವ ಸಂಗತಿಯೂ ತಿಳಿಯಿತು. ಇವರೆಲ್ಲರನ್ನೂ ನೀವ್ಯಾಕೆ ಭಾರತಕ್ಕೆ ಮರಳಿ ಹೋಗಿಲ್ಲ ಎಂಬ ಒಂದು ಮೂರ್ಖ ಪ್ರಶ್ನೆಯನ್ನು ಕೇಳಿಯೆ ಕೇಳುತ್ತಿದ್ದೆ. ಅವರನ್ನು ಮುಜುಗರಗೊಳಿಸುವುದಕ್ಕೆ ಆ ಪ್ರಶ್ನೆಗಳನ್ನು ಕೇಳುತ್ತಿರಲಿಲ್ಲ. ಅದರ ಹಿಂದಿನ ಕಾರಣಗಳನ್ನು ತಿಳಿದುಕೊಂಡು, ಎಚ್ಚೆತ್ತು ನಾನು ಕೂಡ ಅವರಂತೆಯೇ ಅಲ್ಲಿ ಇದ್ದುಬಿಡಬಾರದು ಎಂಬುದು ನನ್ನ ಉದ್ದೇಶವಾಗಿತ್ತು. “ಇಲ್ಲಿಂದ ಒದ್ದು ಹೊರಗ ಹಾಕು ತನ ಯಾರೂ ಈ ದೇಶ ಬಿಟ್ಟು ಹೋಗೋದಿಲ್ಲ ನೋಡಲಾ” ಚಂದ್ರು ಹೇಳುತ್ತಿದ್ದ. ಒಟ್ಟಿನಲ್ಲಿ ನನಗೆ ಅಲ್ಲಿ ಇರುವಷ್ಟು ದಿವಸ ಖುಷಿ ಖುಷಿಯಾಗಿ ಇರಬೇಕಿತ್ತು.

ಹೀಗೆ ಅಲ್ಲೊಂದು ಸಮಾರಂಭದಲ್ಲಿ ಸಿಕ್ಕ ಇನ್ನೊಬ್ಬ ಆಪ್ತ ಮಿತ್ರನೇ ಗಜನಿ ಮಂಜು! ಅವನು ಕೋಲಾರದವನು ಅವನ ಹೆಂಡತಿ ಹುಬ್ಬಳ್ಳಿಯವಳು. ಅವನ ಮರೆವು ಅಗಾಧವಾಗಿ ಇತ್ತು ಎಂಬ ಕಾರಣಕ್ಕೆ ಅವನಿಗೆ ಗಜನಿ ಎಂಬ ಅಡ್ಡ ಹೆಸರನ್ನು ಮುಂದೊಮ್ಮೆ ನಾವೇ ಇಟ್ಟೆವು! ಬೆಳಿಗ್ಗೆ office ಗೆ ಹೋಗುವಾಗ ಏನೇನು ತೆಗೆದುಕೊಂಡು ಹೋಗಬೇಕು ಅಂತ ಮುಖ್ಯ ಬಾಗಿಲಿನ ಹಿಂದೆ ದೊಡ್ಡ ಅಕ್ಷರಗಳಲ್ಲಿ ಬರೆದು ಇಟ್ಟಿದ್ದ ಅವನು. ಆದರೆ ಆ ಚೀಟಿಯನ್ನು ಕೂಡ ನೋಡಲು ಮೆರೆಯುತ್ತಿದ್ದ ವಿಶೇಷ ಮರೆಯಪ್ಪ ಅವನು! ನಾನು ತುಂಬಾ ಹಿಂದೆ ಮರೆಗುಳಿಗೆ ಎಂಬ ಹಾಸ್ಯ ಲೇಖನವನ್ನು ಬರೆದಾಗ ಇಂಥದೇ ಒಬ್ಬ ವ್ಯಕ್ತಿಯ ಬಗ್ಗೆ ಬರೆದಿದ್ದೆ. ನಾನು ಸೃಷ್ಟಿಸಿದ ಪಾತ್ರವೇ ನನಗೆ ಅಲ್ಲಿ ಸಿಕ್ಕಿದ್ದು ನನ್ನ ಅದೃಷ್ಟ! ಅದೇ ಸಮಯದಲ್ಲಿ ಅವರ ತಾಯಿ ಕೂಡ ಅಲ್ಲಿಗೆ ಬಂದಿದ್ದರು. ಅವರಿಗೆ ನನ್ನನ್ನು ಆಶಾಳನ್ನು ಕಂಡರೆ ತುಂಬಾ ಅಕ್ಕರೆ. ನನಗಂತೂ ನೀನು ನನ್ನ ಮಗ ಅಂತಲೇ ಹೇಳುತ್ತಿದ್ದರು. ಮಂಜು ಕೂಡ ನನಗೆ ಅಣ್ಣ ಅಂತಲೇ ಕರೆಯುತ್ತಿದ್ದ. ಅವನ ಹೆಂಡತಿ ವಿಜಿ ಕೂಡ ನಮ್ಮನ್ನು ತುಂಬಾ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದಳು. ಇವರಿಂದಲೇ ಪರಿಚಯವಾದನು ಬೆಳಗಾವಿಯ ಅಭಿಷೇಕ ಅಲಿಯಾಸ್ ಅಭ್ಯಾ. ಮತ್ತೊಬ್ಬ ಬೆಂಗಳೂರಿನ ಮಂಜು. ಅವನಿಗೆ ಕೊಮಾ ಎಂಬ ಅಡ್ಡ ಹೆಸರು ಅಭ್ಯಾ ಇಟ್ಟಿದ್ದ. ಅವನು ತುಂಬಾ ತಮಾಷೆ ಮಾಡುವ ಸ್ವಭಾವದ ಹುಡುಗ. ಇಬ್ಬರು ಮಂಜು ಇದ್ದ ಕಾರಣ ಒಬ್ಬನಿಗೆ ಕೊಮಾ ಇನ್ನೊಬ್ಬಗೆ ಗಜನಿ ಅಂತ ಹೆಸರು ಇಟ್ಟಿದ್ದು ಅವರನ್ನು ಗುರುತಿಸಲು ಸುಲಭವಾಗಿತ್ತು. ಇವರೆಲ್ಲರೂ ನನಗಿಂತ ಏಳೆಂಟು ವರ್ಷ ಚಿಕ್ಕವರೆ ಆದರೂ ನಮ್ಮ ನಡುವೆ ಒಂದು ವಿಶಿಷ್ಟ ಅನ್ಯೋನ್ಯತೆ ಬಹು ಬೇಗನೆ ಬೆಳೆಯಿತು. ಅದರ ಜೊತೆಗೆ ನನ್ನ ಹೊಟ್ಟೆ ಕೂಡ ಬೆಳೆಯತೊಡಗಿದ್ದು ನನ್ನ ಗಮನಕ್ಕೆ ಬಂತು! ಅದಕ್ಕೆ ನಾನು ತಿನ್ನುವುದು ಜಾಸ್ತಿಯಾಗಿದ್ದು ಒಂದು ಕಾರಣವಾದರೆ ಅದಕ್ಕಿಂತ ಮಿಗಿಲಾದ ಇನ್ನೊಂದು ಕಾರಣ ಇತ್ತು!

(ಮುಂದುವರಿಯುವುದು..)

(ಹಿಂದಿನ ಕಂತು: ಕಾರೂ… ಕಾರ್‌ ಬಾರೂ..)