ವಿಮಾನಗಳ ಚರಿತ್ರೆಯನ್ನು ಬರೆದವರು ಬೇರೆಬೇರೆ ಕಾಲಘಟ್ಟದಿಂದ ಸ್ಥಳದಿಂದ ಘಟನೆಗಳಿಂದ ತಮ್ಮ ಅಧ್ಯಯನ, ಪುರಾವೆ ಹಾಗು ಅಂದಾಜುಗಳನ್ನು ವಿಶದೀಕರಿಸುವುದಿದೆ. ಆಕಾಶಕ್ಕೆ ನೆಗೆಯಬೇಕು ಎನ್ನುವ ಉತ್ಕಟ ಆಸೆ ಮನುಷ್ಯರಿಗೆ ಎಂದು ಬಂತೋ ಕರಾರುವಕ್ಕಾಗಿ ಹೇಳಿದವರಿಲ್ಲವಾದರೂ ಬಾನಿನಲ್ಲಿ ಸ್ವಚ್ಛಂದವಾಗಿ ಹಾರಿ ಇಳಿಯುವ ಹಕ್ಕಿಗಳನ್ನು ನೋಡಿ ನಮಗೂ ಹಾರುವ ಕನಸು ಹುಟ್ಟಿತು. ಮತ್ತೆ ಆ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿ ಸಾಗಿದವು ಎನ್ನುವ ಉಲ್ಲೇಖಗಳು ಓದಿನಲ್ಲಿ ಸಿಗುತ್ತವೆ.
ಯೋಗೀಂದ್ರ ಮರವಂತೆ ಬರೆದ ವಿಮಾನ ಲೋಕದ ಅಚ್ಚರಿ, ಅನುಭವಗಳ ಕುರಿತ ಹೊಸ ಕೃತಿ “ಏರೋ ಪುರಾಣ”ದ ಒಂದು ಬರಹ ನಿಮ್ಮ ಓದಿಗೆ

ಆಕಾಶದಲ್ಲಿ ಈಗಷ್ಟೇ ಹಾರುತ್ತಿರುವ ಹಕ್ಕಿಗಳನ್ನು ಕಂಡರೆ ಅದರ ಬಣ್ಣವೋ ವೇಗವೋ ಆಕಾರವೋ ಕೂಗೋ ಅಥವಾ ಅದರ ಬಾಯಲ್ಲಿ ಕಚ್ಚಿಗೊಂಡಿರುವ ಆಹಾರವೋ ಗಮನಕ್ಕೆ ಬರಬಹುದು. ಹಾಗಂತ ಹಕ್ಕಿ ಹೇಗೆ ಹಾರುತ್ತಿದೆ, ಬಾನಿನಲ್ಲಿ ಯಾಕೆ ತೇಲುತ್ತಿದೆ ಎನ್ನುವ ವಿಷಯಗಳು ಯಾವ ಹೊಸ ಕುತೂಹಲವನ್ನೂ ಹುಟ್ಟಿಸಲಿಕ್ಕಿಲ್ಲ. ಹಕ್ಕಿಗಳ ಹಾರಾಟ ಚೋದ್ಯ ಎನಿಸುವುದು ನಿಂತು ಹಲವು ವರುಷಗಳು ದಶಕಗಳು ಕಳೆದವು. ಯಾಕೆಂದರೆ ಈ ಕಾಲದಲ್ಲಿ ಹಾರುವ ಸಾಮರ್ಥ್ಯ ಇರುವುದು ಬರೇ ಹಕ್ಕಿಗಳಿಗೆ ಮಾತ್ರ ಅಲ್ಲ. ಈ ಹಾರಾಟ ಎನ್ನುವ ವಿಶಿಷ್ಟ ಮಾಯಾ ವಿದ್ಯೆಯನ್ನು ಇದೀಗ ನಾವೂ ಕರಗತ ಮಾಡಿಕೊಂಡಾಗಿದೆ. ನಾವೇ ನೇರವಾಗಿ ರೆಕ್ಕೆ ಮೂಡಿಸಿಕೊಂಡು ಹಾರುವುದು ಸಾಧ್ಯ ಇಲ್ಲವಾದರೂ ಹಾರುವಂತಹದ್ದನ್ನು ಸೃಷ್ಟಿಸಿ ಅದರಲ್ಲಿ ನಾವೂ ಕುಳಿತು ಒಂದು ಗಗನವಿಹಾರ ಮಾಡುವ ಸಿದ್ಧಿ ಹೊಂದಿದ್ದೇವೆ. ಒಂದಾನೊಂದು ಕಾಲಕ್ಕೆ ಹಕ್ಕಿಗಳ ಹಾರಾಟಕ್ಕೆ ಮಾತ್ರ ತಾಣವಾಗಿದ್ದ ಆಕಾಶದಲ್ಲಿ ಈಗ ಹುಳು ಮನುಜರೂ ಪಾಲುದಾರರಾಗಿದ್ದಾರೆ. ಬಾನಿನಲ್ಲಿ ಇರುವ ಹಕ್ಕಿಗಳು ಎಷ್ಟು ಎನ್ನುವ ಲೆಕ್ಕ ಕಲ್ಪನೆಗೆ ಮೀರಿದ್ದಾದರೂ ಹಕ್ಕಿಗಳ ತಲೆಯ ಮೇಲೆ ಹಾರುವ, ಅವುಗಳ ಆಸುಪಾಸಲ್ಲಿಯೇ ಹತ್ತುವ ಇಳಿಯುವ ವಿಮಾನಗಳ ಬಗೆಗೆ ಹಕ್ಕಿಗಳಿಗೂ ತಿಳಿದಿರಬಹುದು. ಹಕ್ಕಿಗಳ ಕಣ್ಣಿಗೆ ವಿಮಾನಗಳು ಹೇಗೆ ಏನು ಆಗಿ ಕಂಡರೂ ಈ ಕಾಲದಲ್ಲಿ ನಮ್ಮ ಮಟ್ಟಿಗೆ ಹಾರುವ ವಿಷಯ ವಿಚಾರ ಬಂದರೆ ಕಲ್ಪನೆಗೆ ಹಕ್ಕಿಗಳಷ್ಟೇ ಸುಲಭವಾಗಿ ಸಾಮಾನ್ಯವಾಗಿ ಒದಗುವವು ವಿಮಾನಗಳು ಕೂಡ.

ಈ ವಿಮಾನಗಳನ್ನು ಬರೇ ವಿಮಾನಗಳು ಎಂದು ಹೇಳುವವರು ಹಲವರಿರಬಹುದು. ವಿಮಾನಗಳ ಜೊತೆಗೆ ಆತ್ಮೀಯವಾದ ಒಡನಾಟ ಹೊಂದಿದ ಕಾರಣಕ್ಕೋ ಏನೋ, ಅವುಗಳನ್ನು ಬರೇ ಹಾರುವ ಪ್ರಯಾಣಿಸುವ ಇನ್ನೊಂದು ವಿಷಯವಾಗಿ ತಿಳಿಯುವುದು ನನಗೆ ಸಾಧ್ಯ ಇಲ್ಲ. ವಿಮಾನವೊಂದು ದೂರದ ಎತ್ತರದ ಆಕಾಶದಲ್ಲಿ ಸಾಗುವಾಗ ರೆಕ್ಕೆ ಪಟಪಟಗುಡಿಸಿದಂತೆ ಕಾಣುವುದು ಅಥವಾ ಪ್ರಯಾಣ ಮುಗಿಸಿ ನಿಲ್ದಾಣದಲ್ಲಿ ಇಳಿಯುವಾಗ ಅದರ ಬೆವರಿನ ಸುಗಂಧ ಮೂಗಿಗೆ ಬಡಿಯುವುದು ನಿಟ್ಟುಸಿರೂ ಕೇಳಿಸುವುದು ಈ ವಿಮಾನಗಳ ಜೊತೆ ಬೆಳೆದುಬಂದ ಸಖ್ಯದ ಫಲ ಇರಬಹುದು. ಏರೋಪ್ಲೇನ್ ಎನ್ನುವುದು ಏರುವ ಹಾರುವ ಇಳಿಯುವ ಯಂತ್ರ ಸಾಧನ ಹೌದಾದರೂ ಅದರ ಒಡನಾಟದಲ್ಲೇ ಇರುವವರಿಗೆ, ರೆಕ್ಕೆ ಮೈ ಬಾಲ ಕಣ್ಣು ಮೂಗು ಎಲುಬಿನ ಹಂದರ ನರಮಂಡಲ ಎದೆ ಬಡಿತ ಇವೆಲ್ಲವೂ ಇರುವ ಒಂದು ಜೀವಿಯಂತೆಯೂ ಕಾಣಿಸಬಹುದು. ವಿಮಾನ ತಯಾರಿಸುವ ಕಚೇರಿಯಲ್ಲಿ ಕೆಲಸ ಮಾಡುವವರ ಅಥವಾ ವಿಮಾನಗಳ ಜೊತೆಗೆ ಬೇರೆಬೇರೆ ಕಾರಣಗಳಿಗೆ ನಿಕಟ ಸಂಬಂಧ ಇರುವ ವೃತ್ತಿ ಪ್ರವೃತ್ತಿಯವರಿಗೆ ಹೀಗೆಲ್ಲ ಅನಿಸಿದರೆ ಆಶ್ಚರ್ಯ ಅಲ್ಲ. ಜೀವಸಂಕುಲದ ಅವಿಭಾಜ್ಯ ಪ್ರಭೇದ ಎನಿಸುವ ವಿಮಾನಗಳ ಸಹವಾಸದಲ್ಲಿ ಆಕಸ್ಮಿಕವಾಗಿ ಸಿಲುಕಿದವರಲ್ಲಿ ನಾನೂ ಒಬ್ಬ. ವಿಮಾನಗಳ ಜೊತೆಗಿನ ಈ ಆಪ್ತ ಒಡನಾಟ ಯೋಚಿಸಿ ಯೋಜಿಸಿ ತಿಳಿದು ಬಯಸಿ ದೊರಕಿದ್ದು ಅಲ್ಲ. ಮತ್ತೆ ಅಯಾಚಿತ ಆಯೋಜಿತವಾಗಿ ಆದ ಈ ಸಂಬಂಧದಿಂದಲೇ “ನಮಗೂ ವಿಮಾನಗಳಿಗೂ ಗಟ್ಟಿಯಾದ ಪ್ರೀತಿ ಬಾಂಧವ್ಯ ಹೊಂದಾಣಿಕೆ” ಅಂತ ನಾನು ಕೆಲಸ ಮಾಡುವ ವಿಮಾನ ಕಚೇರಿಯ ದೀರ್ಘಕಾಲೀನ ಆಂಗ್ಲ ಸಹೋದ್ಯೋಗಿಗಳು ನಕ್ಕು ನುಡಿಯುವುದಿದೆ. ಈ ವಿಮಾನಗಳಿಗೆ ನಮ್ಮ ಸಹವಾಸ ಬೇಕಿದ್ದರೂ ಬೇಡಿದ್ದರೂ ನಮಗಂತೂ ಅವು ಬೇಕು ಎಂದು ತಮಾಷೆ ಮಾಡುವುದಿದೆ. ಬಿಡಿ, ಆಂಗ್ಲರ ವ್ಯಂಗ್ಯ ತಮಾಷೆ ಕೊಂಕುಗಳಿಗೆ ವಿಮಾನಗಳಂತಹ ಹಾರುವ ತೇಲುವ ಯಂತ್ರಗಳೂ ಹೊರತಾಗಲಿಕ್ಕಿಲ್ಲ.

ಹಾರುವ ಯಂತ್ರಗಳ ಹಾರಾಟದ ಹಿಂದಿನ ಜಾಡು ಹಿಡಿದು ಹುಡುಕುತ್ತ ಹೊರಟರೆ ಈಗಿನ ಯಾವ ವಿಮಾನ ಕಚೇರಿ ಕಾರ್ಖಾನೆಗಳ ಉಗಮಕ್ಕಿಂತಲೂ ಬಹಳ ಹಿಂದಿನ ಪುರಾಣ ಇತಿಹಾಸ ಕತೆ ಊಹೆಗಳು ಎದುರು ಬರುತ್ತವೆ. ಹಾಗಾಗಿಯೇ ವಿಮಾನಗಳ ಚರಿತ್ರೆಯನ್ನು ಬರೆದವರು ಬೇರೆಬೇರೆ ಕಾಲಘಟ್ಟದಿಂದ ಸ್ಥಳದಿಂದ ಘಟನೆಗಳಿಂದ ತಮ್ಮ ಅಧ್ಯಯನ, ಪುರಾವೆ ಹಾಗು ಅಂದಾಜುಗಳನ್ನು ವಿಶದೀಕರಿಸುವುದಿದೆ. ಆಕಾಶಕ್ಕೆ ನೆಗೆಯಬೇಕು ಎನ್ನುವ ಉತ್ಕಟ ಆಸೆ ಮನುಷ್ಯರಿಗೆ ಎಂದು ಬಂತೋ ಕರಾರುವಕ್ಕಾಗಿ ಹೇಳಿದವರಿಲ್ಲವಾದರೂ ಬಾನಿನಲ್ಲಿ ಸ್ವಚ್ಛಂದವಾಗಿ ಹಾರಿ ಇಳಿಯುವ ಹಕ್ಕಿಗಳನ್ನು ನೋಡಿ ನಮಗೂ ಹಾರುವ ಕನಸು ಹುಟ್ಟಿತು. ಮತ್ತೆ ಆ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿ ಸಾಗಿದವು ಎನ್ನುವ ಉಲ್ಲೇಖಗಳು ಓದಿನಲ್ಲಿ ಸಿಗುತ್ತವೆ.

ಪ್ರಾಚೀನ ಪುರಾಣಗಳಲ್ಲಿ ಗ್ರೀಕ್ ದಂತಕಥೆಗಳಲ್ಲಿ ಮನುಷ್ಯರನ್ನು ಕೂರಿಸಿಕೊಂಡು ಹಾರುವ ಜೀವಿಯೊ ವಾಹನವೋ ಅಥವಾ ಅಂತಹ ಕಲ್ಪನೆಯೋ ಬಂದುಹೋಗುತ್ತವೆ. ಹೆಗಲಿಗೆ ರೆಕ್ಕೆ ಕಟ್ಟಿ ಹಾರುವ ವ್ಯಕ್ತಿ ಪಾತ್ರಗಳ ಕತೆಗಳೂ ಇವೆ. ಪುರಾಣ ಕತೆ ಇತಿಹಾಸಗಳಲ್ಲಿ ಮನುಷ್ಯರ ಹಾರುವಿಕೆಗೆ ಪ್ರಚೋದನೆ ಉತ್ತೇಜನ ನೀಡಿದ ಹಕ್ಕಿಗಳ ವಿಕಾಸವಾದದ ಮೂಲವನ್ನು ಪರಿಶೀಲಿಸುತ್ತಾ ಕಾಲದಲ್ಲಿ ಹಿಮ್ಮುಖವಾಗಿ ಬಹಳ ದೂರ ಸಾಗಿದರೆ ಹಾರುವ ಗುಣ ಸ್ವಭಾವ ಅವುಗಳಿಗಿರಲಿಲ್ಲ ಎಂದೂ ತಿಳಿಯುತ್ತದೆ. ಈಗ ಸಹಜ ಹಾರಾಟವನ್ನು ಸ್ವಭಾವವಾಗಿ ಹೊಂದಿದ ಕೀಟಗಳು, ಹಕ್ಕಿಗಳು, ಬಾವಲಿ ಎಲ್ಲವೂ ಬೇರೆಬೇರೆ ಜೀವಮೂಲದಿಂದ ವಿಕಸನಗೊಂಡು ಹಾರುವ ಗುಣವನ್ನು ಪಡೆದುಕೊಂಡಿರಬಹುದು ಎಂದೂ ವಾದಿಸುತ್ತಾರೆ.

ಹಲವು ಮಿಲಿಯನ್ ವರ್ಷಗಳ ಹಿಂದಿನ ಜುರಾಸಿಕ್ ಯುಗದಲ್ಲಿ ನಡೆದಾಡಿಕೊಂಡಿದ್ದ ಡೈನೋಸಾರ್ ಬಗೆಯ ಜೀವಿಗಳು, ಇನ್ಯಾವುದೋ ಜಾತಿಯ ಸರೀಸೃಪಗಳು ನೆಲದಲ್ಲಿ ತಮಗೆ ಆಹಾರ ಸಿಗದೆಯೋ ಅಥವಾ ಇನ್ಯಾವುದೋ ಜೀವಿಗೆ ತಾವೇ ಆಹಾರವಾಗುವುದನ್ನು ತಪ್ಪಿಸಿಕೊಳ್ಳಲೋ ನೆಗೆಯಲು ಆರಂಭಿಸಿ, ಮುಂದೆ ಕಾಲಾನುಕ್ರಮದಲ್ಲಿ ಅವುಗಳ ಮುಂಗಾಲುಗಳೇ ರೆಕ್ಕೆಗಳಾಗಿ ಬದಲಾಗಿ ಹಾರುವುದಕ್ಕೆ ಅಗತ್ಯವಾದ ದೇಹರಚನೆಯ ವಿಕಾಸ ಕಂಡವು ಎಂದು ಇಲ್ಲಿಯತನಕ ದೊರೆತ ಪಳೆಯುಳಿಕೆಗಳ ಆಧಾರದಲ್ಲಿ ಜೀವವಿಜ್ಞಾನಿಗಳು ಹೇಳುತ್ತಾರೆ. ವಿಕಾಸವಾದದ ಮೂಲ ಸಿದ್ಧಾಂತವಾಗಿರುವ ಉಳಿಯುವಿಕೆ, ಅಸ್ತಿತ್ವದಲ್ಲಿರುವಿಕೆಗಳೇ ಜೀವಿಗಳಿಗೆ ರೆಕ್ಕೆಗಳನ್ನೂ ನೀಡಿದವು ಎನ್ನುತ್ತಾರೆ.

ನೂರಿನ್ನೂರು ಮಿಲಿಯನ್ ವರ್ಷಗಳ ವಿಕಾಸದ ಕಥನಲ್ಲಿ ಹಾರುವ ಏರುವ ಹಕ್ಕಿಯಾಗಿ ನಮಗೆ ಕಾಣಿಸುತ್ತಿರುವ ಜೀವಿಗಳನ್ನು ನೋಡುತ್ತಾ ಕುತೂಹಲಿಗಳಾದ ಮನುಷ್ಯರು ಹಾರುವ ವಸ್ತು ಯಂತ್ರಗಳ ತಯಾರಿಯಲ್ಲಿ ತೊಡಗಿದ್ದು ಕಲಿಕೆ ಪ್ರಯೋಗ ನಿರ್ಮಾಣಗಳ ಸಾತತ್ಯದಲ್ಲಿ ಆ ಯಂತ್ರಗಳು ಈಗ ನಾವು ನೋಡುವ ಬಳಸುವ ವಿಮಾನಗಳಾಗಿ ಮಾರ್ಪಾಟು ಪಡೆದದ್ದು ವಿಮಾನಲೋಕದ ಗತ ಇತಿಹಾಸ. ಕಾಲದ ಅಳತೆಯಲ್ಲಿ, ಜನರನ್ನು ತುಂಬಿಕೊಂಡು ಹಾರಾಡುವ ವಿಮಾನಗಳು ಆಕಾಶವನ್ನು ಸೇರಿದ್ದು ತೀರಾ ಇತ್ತೀಚಿನ ಇಪ್ಪತ್ತನೆಯ ಶತಮಾನದಲ್ಲಿಯಾದರೂ, ಆಹಾರಕ್ಕಾಗಿಯೋ ಉಳಿವಿಗಾಗಿಯೋ ಅಲ್ಲದಿದ್ದರೂ ಮನುಷ್ಯರ ಹಾರುವ ಕನಸು ಕೊನೆಗೂ ಸಾಕಾರಗೊಂಡದ್ದೂ ಕೂಡ ಇನ್ನೊಂದು ಬಗೆಯ ವಿಕಾಸದ ಬೆಳವಣಿಗೆಯ ಕತೆಯೇ.

ಕಾಶಕ್ಕೆ ನೆಗೆಯಬೇಕು ಎನ್ನುವ ಉತ್ಕಟ ಆಸೆ ಮನುಷ್ಯರಿಗೆ ಎಂದು ಬಂತೋ ಕರಾರುವಕ್ಕಾಗಿ ಹೇಳಿದವರಿಲ್ಲವಾದರೂ ಬಾನಿನಲ್ಲಿ ಸ್ವಚ್ಛಂದವಾಗಿ ಹಾರಿ ಇಳಿಯುವ ಹಕ್ಕಿಗಳನ್ನು ನೋಡಿ ನಮಗೂ ಹಾರುವ ಕನಸು ಹುಟ್ಟಿತು. ಮತ್ತೆ ಆ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿ ಸಾಗಿದವು ಎನ್ನುವ ಉಲ್ಲೇಖಗಳು ಓದಿನಲ್ಲಿ ಸಿಗುತ್ತವೆ.

ವಿಮಾನಗಳನ್ನು ಆಕಾಶಕ್ಕೆ ಏರಿಸುವ ಹಾರಿಸುವ ಪ್ರಯತ್ನ ಆರಂಭ ಆಗುವ ಮುನ್ನ, ಹದಿನೆಂಟು ಹತ್ತೊಂಭತ್ತನೆಯ ಶತಮಾನಗಳಲ್ಲಿ ಬರ್ನೌಲಿಯ ಸಿದ್ಧಾಂತ, ನ್ಯೂಟನ್ನನ ನಿಯಮ, ಕ್ಲೇಯೇಯ ಸಂಶೋಧನೆಗಳು ಮತ್ತೆ ಇನ್ನೂ ಹಲವು ವಿಜ್ಞಾನಿಗಳ ಪ್ರಭಾವದಿಂದ ವಾಯುಬಲ ವಿಜ್ಞಾನ (Aerodynamics) ಎನ್ನುವ ಚಲನಶಾಸ್ತ್ರದ ಶಾಖೆ ಹುಟ್ಟಲು ಕಾರಣವಾಗಿದ್ದವು. ಗಾಳಿಗಿಂತ ಭಾರವಾದ ವಸ್ತುವೂ ಹೇಗೆ ಯಾಕೆ ಗಾಳಿಯಲ್ಲಿ ಹಾರಲು ಸಾಧ್ಯ ಎನ್ನುವುದನ್ನು ತಿಳಿಸಿದ್ದವು. ತೂಕ, ಮೇಲೆತ್ತುವಿಕೆ, ಎಳೆತ, ದೂಡುವಿಕೆಗಳ (weight, lift, drag, thrust) ನಡುವಿನ ಸಂಬಂಧಗಳನ್ನೂ ವಿವರಿಸಿದ್ದವು. ಆ ಕಾಲದಲ್ಲಿ ಮತ್ತು ಅಲ್ಲಿಯ ತನಕ ಹಲವು ವೈಜ್ಞಾನಿಕ ವಾದ ಸಿದ್ಧಾಂತಗಳು ಬೆಳೆದಿದ್ದರೂ ಅವುಗಳಲ್ಲಿ ಎಲ್ಲವೂ ಸರಿಯಾದ ಜ್ಞಾನವನ್ನು ನೀಡಿದವು ಎಂದು ಹೇಳಲು ಬರುವುದಿಲ್ಲ, ಕೆಲವು ತಪ್ಪು ಸೂತ್ರಗಳೂ ಸಿದ್ಧಾಂತಗಳಾಗಿ ಮಂಡಿಸಲ್ಪಟ್ಟಿದ್ದವು. ಅಂತಹ ಹಾರಾಟದ ಸಿದ್ಧಾಂತಗಳ ಪ್ರಮಾಣ ಪರೀಕ್ಷೆ ಪ್ರಯೋಗಗಳು ಯುರೋಪ್ ಹಾಗು ಅಮೆರಿಕಗಳಲ್ಲಿ ನಡೆದರೂ ಅವುಗಳಲ್ಲಿ ಮೊದಲ ಯಶಸ್ಸು ಅಮೆರಿಕದ ರೈಟ್ ಸಹೋದರರದು. ಯಂತ್ರಚಾಲಿತ ವಿಮಾನ, ಜೊತೆಗೆ ಮಾನವ ಪೈಲಟ್ ಅನ್ನೂ ಕೂಡಿಸಿಕೊಂಡು ಹನ್ನೆರಡು ಸೆಕೆಂಡ್‌ಗಳಲ್ಲಿ ನೂರಿಪ್ಪತ್ತು ಅಡಿಗಳ ದೂರದ ಹಾರಾಟ ನಡೆಸಿದ್ದು ವಿಮಾನ ಜಗತ್ತಿನ ಚಾರಿತ್ರಿಕ ಕ್ಷಣ ಎಂದು ೧೯೦೩ರಲ್ಲಿ ದಾಖಲಾಯಿತು. ರೈಟ್ ಸಹೋದರರ ವಿಮಾನ, ಆಕಾಶದ ಏಣಿಯನ್ನು ಹತ್ತಿ ಹಾರುವ ತುಸು ಮೊದಲು, ಸ್ವಲ್ಪ ಆಮೇಲೆ ಯುರೋಪಿನಲ್ಲಿ ಜಗತ್ತಿನ ಇತರ ಕೆಲ ಭಾಗಗಳಲ್ಲಿಯೂ ಅಂತಹದೇ ಪ್ರಯತ್ನಗಳು ನಡೆದಿದ್ದರೂ ಅಲ್ಲಿಯತನಕ ಲಭ್ಯ ಇದ್ದ ಹಾರುವಿಕೆಯ ಸಿದ್ಧಾಂತಗಳನ್ನು ಹೆಚ್ಚು ಅರ್ಥ ಮಾಡಿಕೊಂಡು ಕಟ್ಟಿದ ವಿಮಾನ ನಮೂನೆ ರೈಟ್ ಸಹೋದರರ ಹಾರಾಟದ ಯಶಸ್ಸಿಗೆ ಕಾರಣ ಎನ್ನಲಾಗುತ್ತದೆ. ಆಕಾಶದಲ್ಲಿ ಹಾರಬೇಕು ಎನ್ನುವ ಇಚ್ಛೆ ಮತ್ತೆ ಆ ಬಗೆಗಿನ ತೀವ್ರ ಪ್ರಯತ್ನಗಳ ಮಹತ್ವದ ಮೈಲಿಗಲ್ಲಿನಂತೆ ಆ ಘಟನೆ ಕಂಡರೂ ವಿಮಾನಲೋಕದ ಆಪ್ತವಾದ ಪರಿಚಯ ಮಾಡಿಕೊಳ್ಳಹೊರಟರೆ ಹಾರಾಟದ ಇತರ ಪ್ರಕಾರಗಳ ಪ್ರಯತ್ನ ಪ್ರಯಾಸಗಳ ಭೇಟಿ ಪರಿಚಯವೂ ಆಗುತ್ತದೆ.

ಯಾವುದೇ ಮಾದರಿಯ ವಿಮಾನ ಆಗಸವನ್ನು ಏರಿ ಹಾರುವುದಕ್ಕಿಂತ ಮೊದಲಿನ ಕೆಲವು ಸಾವಿರ ವರ್ಷಗಳಲ್ಲಿ ಮಾನವರು ನೇರವಾಗಿ ಹಾರಾಟದ ಭಾಗವಾಗಿರದೇ ಇದ್ದರೂ ಹಾರುವ ವಸ್ತುಗಳನ್ನು ವಿನ್ಯಾಸ ಮಾಡಿ ಹಾರಿಸಿದವರು, ನೆಲದಲ್ಲಿ ನಿಂತೇ ಕತ್ತು ಮೇಲೆ ಮಾಡಿ ಹಗ್ಗ ಜಗ್ಗಿ ಅವುಗಳ ಮೇಲೆ ಹತೋಟಿ ಇಟ್ಟವರು. ಮನುಷ್ಯರು ಹುಟ್ಟಿದ ಕಾಲದಿಂದಲೂ ಹಾರುತ್ತಲೇ ಇರುವ, ಹಾರಾಟದ ನಿತ್ಯ ಪಾಠಶಾಲೆ ಎನಿಸಿದ ಹಕ್ಕಿಗಳಿಗೂ ಮತ್ತೆ ಅಂತಹ ಗುರು ಕಲಿಕಾಸಂಸ್ಥೆಗಳ ವಿನಮ್ರ ವಿದ್ಯಾರ್ಥಿಗಳಾದ ವಿಮಾನಗಳಿಗೂ ನಡುವೆ ಕೊಂಡಿ ಕುಣಿಕೆಯಂತೆ ಮಾನವನಿರ್ಮಿತ ಗಾಳಿಪಟಗಳು ಮತ್ತೆ ಬಿಸಿಗಾಳಿಯ ಬಲೂನುಗಳು ಇದ್ದವು. ಹಕ್ಕಿಗಳಷ್ಟು ಸ್ವತಂತ್ರವಾಗಿ ಲೀಲಾಜಾಲವಾಗಿ ಹಾರಬಲ್ಲವು ಅಲ್ಲದ ಈ “ಪತಂಗ್”ಗಳು ಗಾಳಿಯಲ್ಲಿ ತೇಲುವ ಸಿದ್ಧಾಂತದ ನಿಟ್ಟಿನಲ್ಲಿಯೂ ಹಕ್ಕಿಗಳಿಗೂ ವಿಮಾನಗಳಿಗೂ ಹತ್ತಿದರವು. ಇನ್ನು ಬಿಸಿಗಾಳಿ ಬಲೂನುಗಳು ಗಾಳಿಪಟದಷ್ಟು ಪುರಾತನ ಅಲ್ಲದಿದ್ದರೂ ಕೆಲವು ಶತಮಾನಗಳ ಇತಿಹಾಸ ಇರುವವವು. ಗಾಳಿ ಬಿಸಿಯಾದ ಕಾರಣಕ್ಕೆ ಸುತ್ತಲಿನ ವಾತಾವರಣದ ಗಾಳಿಗಿಂತ ಹಗುರವಾಗಿ ಮೇಲೇರುವ ಸಿದ್ಧಾಂತವನ್ನು ಬಳಸಿ ಫ್ರಾನ್ಸಿನ ಸಹೋದರರಿಬ್ಬರು ೧೭೮೩ನೆಯ ಇಸವಿಯಲ್ಲಿ ದೊಡ್ಡ ಗಾತ್ರದ ಬಿಸಿಗಾಳಿ ಬಲೂನನ್ನು ಹಾರಿಸಿದ್ದೂ ವಿಮಾನ ಕಥನದ ಮೊದಮೊದಲ ಪುಟಗಳಲ್ಲಿ ದಾಖಲಾಗುವ ವಿಷಯವೇ. ಬಾನಾಡಿ ಹಕ್ಕಿಗಳನ್ನು ಗಾಳಿಪಟಗಳನ್ನು ಬಿಟ್ಟರೆ ಮಾನವ ನಿರ್ಮಿತ ವಸ್ತು ವಿಷಯವೊಂದು ನೆಲ ಬಿಟ್ಟು ಕೆಲವು ಘಳಿಗೆಗೆಗಳ ಮಟ್ಟಿಗೆ ತೇಲಿದ ಮೊದಲ ಚಾರಿತ್ರಿಕ ಉದಾಹರಣೆ ಕೂಡ ಹೌದದು. ಆ ಕಿರುಹಾರಾಟದ ಹಿಂದಿನ ಕಾರಣಕರ್ತರು ಮಾನವರೇ ಆದರೂ ಅಂದಿನ ಹಾರಾಟದಲ್ಲಿ ಯಾವ ಮನುಷ್ಯರೂ ಭಾಗಿಯಾಗಿರಲಿಲ್ಲ. ಅದು ಪ್ರಯೋಗಾತ್ಮಕ ಹಾರಾಟವಾಗಿದ್ದ ಕಾರಣ ಅಂದಿನ ಉಡ್ಡಯನದಲ್ಲಿ ಕುರಿ, ಬಾತುಕೋಳಿ ಹಾಗು ಕೋಳಿಗಳನ್ನು ಬಲೂನಿನಲ್ಲಿ ಹಾರಿಸಲಾಗಿತ್ತು. ಮತ್ತೆ ಆ ಎಲ್ಲ ಪ್ರಾಣಿಗಳೂ ಹಾರಾಟ ಮುಗಿಸಿ ಸುರಕ್ಷಿತವಾಗಿ ನೆಲವನ್ನು ತಲುಪಿದ್ದವು ಕೂಡ. ಆ ಘಟನೆ ನಡೆದ ಎರಡು ತಿಂಗಳುಗಳಲ್ಲಿ ಇಬ್ಬರು ವ್ಯಕ್ತಿಗಳನ್ನು ಹತ್ತಿಸಿಕೊಂಡ ಬಲೂನು ಇಪ್ಪತ್ತೈದು ನಿಮಿಷಗಳ ಸಣ್ಣ ತಿರುಗಾಟವನ್ನು ಪ್ಯಾರಿಸ್ ನಗರದ ಮೇಲೆ ಮಾಡಿತ್ತು. ಗಾಳಿ ಬಂದತ್ತ ಸಾಗುತ್ತಿದ್ದ ಈ ಬಲೂನುಗಳು ಮುಂದೆ ಪರಿಷ್ಕರಣೆಗೊಂಡು ಆಕಾಶದಲ್ಲಿ ಕಿರುವಿಹಾರದ ಹೊಸ ಪ್ರಕಾರವಾಗಿಯೇ ಬೆಳೆದವು. ಮತ್ತೆ ಗಾಳಿಪಟಗಳನ್ನು ಹಾರಿಸುವುದು ಸಾಮಾನ್ಯವಾದ ಸುಲಭವಾದ ದಿನಚರಿಯಾಗಿ ಜನಪ್ರಿಯ ಹವ್ಯಾಸವಾಗಿಯೂ ಉಳಿಯಿತು. ನಾನು ವಾಸಿಸುವ ಬ್ರಿಸ್ಟಲ್‌ನಲ್ಲಿ ಪ್ರತಿ ವರ್ಷವೂ ಅಂತಾರಾಷ್ಟ್ರೀಯ ಬಲೂನು ಉತ್ಸವ, ಗಾಳಿಪಟ ಹಬ್ಬ ನಡೆಯುತ್ತವೆ.

ಒಂದು ಕಾಲಕ್ಕೆ ಗಗನಗಾಮಿಯಾಗುವ ತೀವ್ರ ಆಸೆಯ ವಿವಿಧ ಪ್ರಯತ್ನಗಳ ಕವಲುಗಳಾಗಿ ಕಾಣುವ ಗಾಳಿಪಟಗಳು ಬಲೂನುಗಳು ಮತ್ತೆ ಅವುಗಳು ಪ್ರಭಾವಿಸಿದ ವಿಮಾನಗಳು ಈ ಕಾಲಕ್ಕೆ ತಂತ್ರಜ್ಞಾನಗಳ ಬೆಳವಣಿಗೆ ಸಂಶೋಧನೆಗಳ ಬಲದಲ್ಲಿ ಹಾರುವಿಕೆ ಹಾರಿಸುವಿಕೆಗಳ ಸ್ವತಂತ್ರ ಸ್ವಾವಲಂಬಿ ಶಾಖೆಗಳಾಗಿ ಬೆಳೆದಿವೆ; ಆಗಸದ ಬೇರೆ ಬೇರೆ ಎತ್ತರಗಳಲ್ಲಿ ಒಂದಕ್ಕೊಂದು ಅಡ್ಡಿಪಡಿಸದೇ ಹಾರಾಡಿಕೊಂಡು ಹಾಯಾಗಿವೆ. ಮತ್ತೆ ನೂರು ವರ್ಷಗಳ ಹಿಂದೆ, ಮೊದಮೊದಲಿಗೆ ಮಾನವ ರಹಿತವಾಗಿ ಆಮೇಲೆ ಒಬ್ಬರಿಬ್ಬರನ್ನು ಕೆಲವು ಕ್ಷಣಗಳ ಮಟ್ಟಿಗೆ ಕೂರಿಸಿಕೊಂಡು ಗಾಳಿಸವಾರಿ ಮಾಡಿಸಿದ ವಿಮಾನಗಳು, ಸಂಶೋಧನೆ ಕಲಿಕೆಗಳ ಬಲದಲ್ಲಿ ರೂಪಾಂತರಗೊಂಡು ಈ ಕಾಲದಲ್ಲಿ ಸಾಗಾಟದ ಪ್ರಮುಖ ಮಾಧ್ಯಮವಾಗಿಯೂ ದೈತ್ಯ ಉದ್ಯಮವಾಗಿಯೂ ಬೆಳೆದಿವೆ. ಹೊರಜಗತ್ತಿಗೆ ಕಾಣಿಸುವ ಸಾಗಾಟ ವ್ಯವಸ್ಥೆ, ಉದ್ಯೋಗ ಏರ್ಪಾಡು, ವ್ಯಾಪಾರ ವ್ಯವಹಾರ ಇತ್ಯಾದಿಗಳ ಹಿನ್ನೆಲೆಯಲ್ಲಿ ಇರುವ ಪ್ರತಿ ವಿಮಾನಕ್ಕೂ ಅದರದ್ದೇ ಆದ ಒಂದು ಬದುಕಿದೆ, ಜೀವನಚಕ್ರ ಇದೆ, ಹುಟ್ಟು ಸಾವೂ ಇವೆ. ಹಾಗಾಗಿಯೇ ವಿಮಾನಗಳಿಗೆ ಸಂಬಂಧಿಸಿದ ವಿಚಾರಗಳನ್ನು ಕುತೂಹಲಕಾರಿ ರೋಚಕ ಆಸಕ್ತಿದಾಯಕ ಎಂದು ತಿಳಿಯುವವರಿದ್ದಾರೆ. ಮತ್ತೆ ಕೆಲವರು ನಿಗೂಢ ಕಠಿಣ ಶುಷ್ಕ ಎಂದು ದೂರ ಇಟ್ಟವರೂ ಇದ್ದಾರೆ. ಇನ್ನೂ ಕೆಲವರು, ಅಷ್ಟು ಚಂದದ ಸ್ವಚ್ಛವಾದ ಬಾನಿನಲ್ಲಿ ಕಲುಷಿತ ಹೊಗೆ ತುಂಬಿಸುತ್ತಾ ಸಾಗುವ ಕೃತಕ ಬಾನಾಡಿಗಳು ಎಂದು ಜರೆಯುವುದೂ ಇದೆ. ಆಮೇಲೆ ಪರಿಸರಸ್ನೇಹಿ ಪರ್ಯಾಯ ಸಾಗಾಟಗಳನ್ನು ಬೆಂಬಲಿ ಪ್ರೋತ್ಸಾಹಿಸುವವರ ಪ್ರತಿಭಟನೆಯ ವಸ್ತುವಾಗುವುದೂ ಇದೆ.

ವಿಮಾನಗಳ ಅಸ್ತಿತ್ವವನ್ನು ಪಾತ್ರವನ್ನು ಬೇರೆಬೇರೆ ಆಯಾಮಗಳಿಂದ ನೋಡಿ ಪ್ರೀತಿ ಸ್ನೇಹ ದ್ವೇಷ ತಾತ್ಸಾರ ಅಸಡ್ಡೆಗಳನ್ನು ರೂಪಿಸಿಕೊಳ್ಳಬಹುದಾದರೂ ನಾವು ವಾಸಿಸುವ ಭೂಮಿಯ ಗಾತ್ರವನ್ನು ಸಣ್ಣದು ಮಾಡಿದ, ದೂರದ್ದನ್ನು ಹತ್ತಿರಕ್ಕೆ ತಂದ, ನಿಧಾನವಾದುದನ್ನು ವೇಗವಾಗಿಸಿದ ಅಪೂರ್ವ ಸಿದ್ಧಿ ಪ್ರಸಿದ್ಧಿ ವಿಮಾನಗಳಿಗೆ ಅವುಗಳ ಸಂತತಿಗೆ ಇದೆ. ಆಕಾಶಕ್ಕೆ ಹಲವು ದಿಕ್ಕುಗಳಿಂದ ಹಲವು ಬಗೆಯಲ್ಲಿ ಏಣಿ ಇಟ್ಟು ಏರುವ ಯತ್ನಗಳ ಫಲವಾಗಿ ಸಾಧ್ಯವಾದ ವಿಮಾನ ಹಾರಾಟ, ನೆಗೆತದ ಕಲ್ಪನೆ ವಾಸ್ತವವೂ ಆದ ದಿನದಿಂದ ಇಲ್ಲಿಯ ತನಕ ತೀವ್ರವಾದ ಬೆಳವಣಿಗೆಯನ್ನೂ ಬದಲಾವಣೆಗಳನ್ನೂ ಕಂಡಿದೆ; ಇನ್ನೂ ಕಾಣಲಿಕ್ಕಿದೆ.

(ಕೃತಿ: ಏರೋ ಪುರಾಣ (ವಿಮಾನಲೋಕದ ಅನುಭವ ಅಚ್ಚರಿ), ಲೇಖಕರು: ಯೋಗೀಂದ್ರ ಮರವಂತೆ, ಪ್ರಕಾಶಕರು: ಪ್ರಿಸನ್‌ ಬುಕ್ಸ್‌, ಬೆಲೆ: 195/-)