ಬೆಳಗಿನ ಜಾವ ಕಣ್ಣುಬಿಟ್ಟಾಗ ಎಲ್ಲೆಲ್ಲೂ ಜಾತ್ರೆಯದೇ ಆದ ಒಂದು ಬೆಡಗಿನ ಸೊಬಗು. ತಣ್ಣನೆಯ ಗಾಳಿ-ಪಕ್ಷಿಗಳ ಕಲರವ. ಸೂರ್ಯೋದಯ. ದೇವಸ್ಥಾನದ ಆವರಣದಿಂದ ಕೇಳಿಬರುವ ಶರಣರ ವಚನಗಳ ಹಾಡುಗಳು. ಸುತ್ತೆಲ್ಲ ಹಸಿರು ಗಿಡಮರಗಳಿಂದ ತುಂಬಿದ ತಂಪಾದ ಸ್ಥಳದಲ್ಲಿ ಚೆನ್ನಬಸವಣ್ಣನ ದೇವಸ್ಥಾನ ದೂರ ದಿಂದಲೇ ಕಂಗೊಳಿಸುತ್ತದೆ. ಎತ್ತರದ ಗೋಪುರದಲ್ಲಿ ಶಿವಶರಣರ ಶಿಲ್ಪ ಕೃತಿಗಳು. ಅವರವರ ವೃತ್ತಿಗೆ ತಕ್ಕಂತೆ ಕೆತ್ತನೆಗಳಿವೆ. ೧೨ನೆಯ ಶತಮಾನದ ಶರಣರೆಲ್ಲ ಕಣ್ಣಿಗೆ ಕಟ್ಟುವಂತೆ ಕಾಣುತ್ತಾರೆ. ದೇವಸ್ಥಾನ ತಳಿರು ತೋರಣಗಳಿಂದ ಶೋಭಿತಗೊಂಡಿದೆ.
ಡಾ. ಲತಾ ಗುತ್ತಿ ಹೊಸ ಕಾದಂಬರಿ “ಚದುರಂಗ”ದ ಕೆಲವು ಪುಟಗಳು ನಿಮ್ಮ ಓದಿಗೆ

ನಸುಕಿನ ಸಮಯ ಬೇಗನೆ ಎದ್ದು ಹೊರಡುವುದೆಂದು ಹಿಂದಿನ ರಾತ್ರಿಯೇ ಮಾತಾಡಿಕೊಂಡಂತೆ ಗಂಡಸರು ಬೇಗನೆ ಎದ್ದು ಚಕ್ಕಡಿಯೊಳಗೆ ಸಾಮಾನುಗಳನ್ನು ಹಾಕುವ ವ್ಯವಸ್ಥೆ ಮಾಡುತ್ತಿದ್ದರೆ, ಬೆಳಗಿನ ಉಪಾಹಾರವೆಂದು ಮಧ್ಯಾಹ್ನದ ಊಟಕ್ಕೂ ಬೇಕೆಂದು ಜೋಳದ ರೊಟ್ಟಿ-ಕಾಳು ಪಲ್ಲೆಗಳು ಮಾಡಿ ಬುಟ್ಟಿ ತುಂಬಿ ಚಕ್ಕಡಿಯಲ್ಲಿಟ್ಟು ಹೆಂಗಸರು ಮಕ್ಕಳು ಹೊರಡಲನುವಾದರು.

ಸುತ್ತೆಲ್ಲ ದಟ್ಟ ಹಸಿರೋ ಹಸಿರು ಕಾಡು. ಬೆಳಗಿನ ಸೂರ್ಯಕಿರಣಗಳು ಕಾಡು ಹೊಕ್ಕಿವೆ. ಪಕ್ಷಿಗಳ ಕಲರವ ಮನಸ್ಸು ಮುದಗೊಳಿಸುತ್ತಿದೆ. ದಟ್ಟಣೆಯ ಬಿದಿರು ಮೆಳೆಗಳು. ತೇಗು, ಮತ್ತಿ, ಹೊನ್ನೆಗಿಡಗಳು ಒಂದಕ್ಕೊಂದು ಸ್ಪರ್ಧಿಸುವಂತೆ ಎತ್ತರೆತ್ತರವಾಗಿ ಬೆಳೆದು ನಿಂತಿವೆ.

ಚಕ್ಕಡಿಗಳು ಸಾಲಿನಲ್ಲಿ ಮುಂದೆ ಹೋಗುತ್ತಿವೆ. ಗೆಳೆಯರು ಕಾಡಿನ ಸೊಬಗು ನೋಡುತ್ತ ಶರಣರನ್ನು ನೆನಪಿಸಿಕೊಳ್ಳುತ್ತ ಚಕ್ಕಡಿಗಳ ಹಿಂದೆ ಹಿಂದೆ ಹೊರಟಿದ್ದಾರೆ.

೧೨ನೆಯ ಶತಮಾನದ ಶರಣರು ಅಡ್ಡಾಡಿದ ನೆಲ ಇದು. ಈಗಲೇ ಇಂಥಾ ದಟ್ಟಕಾಡು ಇರಬೇಕಾದರೆ ೮೦೦ ವರ್ಷಗಳ ಹಿಂದೆ ಶರಣರ ಕಾಲದಲ್ಲಿ ಇನ್ನೆಷ್ಟು ಕಾಡು ದಟ್ಟವಾಗಿತ್ತೋ ಏನೋ! ಊಹಿಸಿಕೊಳ್ಳುತ್ತಿದ್ದರು.

(ಡಾ. ಲತಾ ಗುತ್ತಿ)

ಶರಣರಿಗೆ ಸಾಮ್ರಾಜ್ಯ ಕಟ್ಟಬೇಕು. ಆಸ್ತಿಮಾಡಬೇಕು. ವಾರಸುದಾರರು ಬೇಕೆಂದು ಅವರಿಗೆ ಮಹಾಕನಸುಗಳೇನೂ ಇರಲಿಲ್ಲ. ಅವರಿಗೆ ಮನುಷ್ಯರು ಮನುಷ್ಯರಂತೆ ಹೊಂದಿಕೊಂಡು ಬಾಳುವ ಸಮಾನತೆ ನಿರೀಕ್ಷಿಸಿದ್ದರು. ಆದರೆ ಸಮಾಜದಲ್ಲಿ ಜಾತಿ-ಧರ್ಮದ ಬಗೆಗೆ ಅಜಗಜಾಂತರ ವ್ಯತ್ಯಾಸವಿತ್ತು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನವರಿಗೆ ಈ ನೀತಿ ನಿಯಮಗಳು ಬಹಳಷ್ಟು ನೋವನ್ನು ಕೊಟ್ಟವು. ತನ್ನ ಮಂತ್ರಿಪದವಿ ತ್ಯಜಿಸಿ ಹೊರಬಂದು ಎಲ್ಲ ವರ್ಗದವರೊಡನೆ ಸಾಮರಸ್ಯ ಕಟ್ಟಲು ಪ್ರಯತ್ನಿಸಿದರು.

ಕೆಳವರ್ಗದ ಸಮಗಾರ ಹರಳಯ್ಯನ ಮಗ ಶೀಲವಂತನಿಗೆ ಮೇಲ್ವರ್ಗದ ಮಧುವರಸನ ಮಗಳು ಲಾವಣ್ಯವತಿಯೊಂದಿಗೆ ಮದುವೆ ಮಾಡಿಸಿದರು. ಇದು ಅಂತರ್ಜಾತಿ ವಿವಾಹವೆಂದು ಮೇಲು-ಕೀಳೆಂಬ ಭಾವನೆ ಹೊತ್ತು ಜನರಲ್ಲಿ ಬೆಂಕಿ ಹೊತ್ತಿ ಉರಿಯತೊಡಗಿತು. ಕ್ರಾಂತಿ ತಾರಕಕ್ಕೇರಿ ಬಿಜ್ಜಳನ ಜನ ಹರಳಯ್ಯ ಮಧುವರಸರ ಕಾಲಿಗೆ ಹಗ್ಗಕಟ್ಟಿ ಆನೆಯ ಕಾಲಿಗೆ ಬಿಗಿದು ನಡುಬೀದಿಯಲ್ಲಿ ಎಳೆದೊಯ್ದುವಂತೆ ಮಾಡಿದರು. ಇದರಿಂದ ತೀವ್ರತರ ಹೊಡೆದಾಟಗಳಾಗಿ ಕ್ರಾಂತಿಯಾದಾಗ ಶರಣರು ಚದುರತೊಡಗಿದರು. ಕಲ್ಯಾಣದಿಂದ ಬಸವಣ್ಣನವರ ಒಂದು ಗುಂಪು ಕೂಡಲ ಸಂಗಮದ ಕಡೆಗೆ ಹೋಗುತ್ತಾರೆ. ಬಸವಣ್ಣನವರ ಅಳಿಯ ಚೆನ್ನಬಸವಣ್ಣ, ಅಕ್ಕ ನಾಗಮ್ಮ, ಮಡಿವಾಳ ಮಾಚಿದೇವ, ಗಂಗಾಂಬಿಕಾ ಮುಂತಾದ ಶರಣರು ಉಳುವಿಯ ಬೆಟ್ಟ ಗುಡ್ಡಗಳ ಪ್ರದೇಶದೊಳಗೆ ಹೊಕ್ಕು ಬಿಜ್ಜಳನ ಸೈನಿಕರಿಂದ ತಪ್ಪಿಸಿಕೊಳ್ಳುತ್ತಾರೆ. ಶರಣರು ರಚಿಸಿದ ವಚನಗಳ ಕಟ್ಟುಗಳನ್ನು ಕೆಲವರು ಕುದುರೆಗಳ ಮೇಲೆ ಕೆಲವರು ತಲೆಯ ಮೇಲೆ ಹೊತ್ತು ತಪ್ಪಿಸಿಕೊಳ್ಳುತ್ತಾ ಇಲ್ಲಿಗೆ ಬಂದಿದ್ದಾರೆ’ ಎಂದು ಚರ್ಚಿಸುತ್ತ ನಡೆಯುತ್ತಿದ್ದಾರೆ.

`ಶರಣರಿಗೆ ಮಕ್ಕಳು ಮರಿ ಇದ್ದರೋ ಇಲ್ಲವೋ!’

ಇದ್ದಿರಬೇಕು. ಬಸವಣ್ಣನವರಿಗೂ ಒಬ್ಬ ಮಗ ಇದ್ದಂತ. ಆದ್ರ ಏನೋ ರೋಗ ಬಂದು ೫-೬ನೆಯ ವಯಸ್ಸಿನಲ್ಲಿಯೇ ತೀರಿಕೊಂಡನಂತ.
`ವಾರಸುದಾರರಿಗೆ ಅವರ ಹತ್ರ ಇತ್ತಾದ್ರೂ ಏನು?’
`ಬಿಜ್ಜಳನ ಆಡಳಿತದಲ್ಲಿ ಬಸವಣ್ಣ ಮಂತ್ರಿಯಾಗಿದ್ದ ಅಂದ ಮೇಲೆ ಸ್ವಲ್ಪಾದರೂ ಆಸ್ತಿಪಾಸ್ತಿ ಇರಬೇಕಾಗಿತ್ತಲ್ಲ!.’

`ಅದ್ಯಾವುದನ್ನೂ ಅವರು ಮಾಡಲೇ ಇಲ್ಲ. ಬಸವಣ್ಣನಿಗೆ ಇನ್ನೂ ವಯಸ್ಸಿತ್ತು. ಹೆಂಡತಿಯರಾದ ಗಂಗಾಂಬಿಕೆ ನೀಲಾಂಬಿಕೆಯರಿಗೂ ಮಕ್ಕಳ ಆಸೆಯೂ ಇತ್ತು. ಆದ್ರೆ ಬಸವಣ್ಣ ಆಸ್ತಿ, ವಂಶೋದ್ಧಾರಕ ಅಂತ ತಲೆಕೆಡಿಸಿಕೊಳ್ಳದೇ ಸಮಾಜದಲ್ಲಿ ನಡೆಯುತ್ತಿದ್ದ ಮೇಲು-ಕೀಳು ಎನ್ನುವ ತಾರತಮ್ಯದ ಬಗ್ಗೆ ಅದನ್ನು ಹೇಗೆ ಬಗೆಹರಿಸಬೇಕೆನ್ನುವುದರ ಬಗೆಗೆ ಯೋಚಿಸುತ್ತಿದ್ರು. ಈಗ ನೊಡ್ರೆಪಾ ಇಂದಿರಾ ಸರಕಾರ ಅವರ ಸರ್ವಾಧಿಕಾರದ ಆಸೆ, ಪುತ್ರ ವ್ಯಾಮೋಹ, ಜನಸಾಮಾನ್ಯರನ್ನು ರಾಜಕೀಯ ಪಕ್ಷಪಂಗಡ, ಜಾತಿ ಎಂದು ಬಗ್ಗಬಡೆಯುವಿಕೆ, ಒಂದೇ ಎರಡೇ ಇವರವು. ಗುರುಪಾದ ವ್ಯಂಗ್ಯವಾಗಿ ಹೇಳುತ್ತ ನಕ್ಕ.

ಚಂದ್ರುವಿಗೆ ಯಾಕೋ ಎದೆಯಲ್ಲಿ ಕುಟುಕಿದಂತಾಯ್ತು. `ತನಗೆ ಮೂರು ಹೆಣ್ಣು ಮಕ್ಕಳಿದ್ದರೂ ವಂಶೋದ್ಧಾರಕ ಬೇಕೆಂದು ಆಸೆ ಮಾಡುತ್ತಿದ್ದೇವಲ್ಲ. ಛೇ! ಅಷ್ಟೇ ಅಲ್ಲ ಅದಕ್ಕಾಗಿ ಕುಟುಂಬ ಯೋಜನೆಗೆ ಊರೊಳಗೆ ಬಂದ ಡಾಕ್ಟರುಗಳಿಂದ ತಪ್ಪಿಸಿಕೊಂಡು ಈ ಗುಡ್ಡದಾಗ ತಲೆಮರೆಸಿಕೊಂಡು ಸುತ್ತಾಡುತ್ತಿದ್ದೇನಲ್ಲ.’ ಶರಣರು ಅಡ್ಡಾಡಿದಂಥ ಈ ನೆಲದಲ್ಲಿ ನಮ್ಮ ದುರಾಸೆಗಳ ಬಗೆಗೆ ನಾಚಿಕೆಯಾಗಬೇಕು ಎಂದುಕೊಳ್ಳುತ್ತ ಚಂದ್ರು ಮೌನವಾದ.

ಶರಣರು ಕೂಡಲ ಸಂಗಮ, ಉಳುವಿ ಕಡೆಗೆ ಹೋದರು ಅಂತಾದ್ರೆ ಅವರ ಮಕ್ಕಳು ಹಿರಿಯರು ಎಲ್ಲಿ ಹೋದರು?

ದೂರ ದೂರ ನಡೆದು ಹೋಗಲಾಗದವರು ಅಲ್ಲಲ್ಲೆ ಹಳ್ಳಿ-ಪಳ್ಳಿ ಸಂಬಂಧಿಕರ ಮನೆಗಳಲ್ಲಿಯೇ ಉಳಿದುಕೊಂಡರು. ಮಕ್ಕಳು ಶರಣರ ತತ್ವಗಳನ್ನು ಅನುಸರಿಸುತ್ತ ಅವರೂ ತಮ್ಮ ತಮ್ಮ ಕಾಯಕ ವೃತ್ತಿ ಮಾಡುತ್ತ ತಮ್ಮ ಹೆಂಡತಿ-ಮಕ್ಕಳೊಂದಿಗೆ ದೂರ ದೂರದವರೆಗೆ ಹೋಗಿ ಉಳಿದುಕೊಂಡರು. ವಿಜಾಪುರ, ಕಲಬುರ್ಗಿ ಬೀದರ ಬಳ್ಳಾರಿ ಕಡೆಗೆಲ್ಲ ಬಸವ ಅನುಯಾಯಿಗಳು ಸಾಕಷ್ಟು ಅದಾರು.

ಬಸವಣ್ಣನಿಗೆ ಬಿಜ್ಜಳನ ಸೈನಿಕರು ತೊಂದರೆ ಕೊಟ್ಟಾಗ ಶರಣರೊಂದಿಗೆ ಬಸವಣ್ಣ ಕೂಡಲಸಂಗಮದ ಕಡೆಗೆ ಹೊರಡಲನುವಾಗುತ್ತಾರೆ. ಹೋಗುವಾಗ ಗಂಗಾಂಬಿಕಾ ನೀಲಾಂಬಿಕೆಯರನ್ನು ಚೆನ್ನಬಸವಣ್ಣ ಮತ್ತು ಅಕ್ಕ ನಾಗಮ್ಮರೊಂದಿಗೆ ಬಿಟ್ಟು ಹೊರಡುತ್ತಾನೆ. ಇವರ ಜೊತೆ ಅನೇಕ ಶರಣರು ಇದೇ ಮಾರ್ಗದಲ್ಲಿ ಸಾಗುತ್ತ ಉಳುವಿ ತಲುಪಿದ್ದಾರೆ. ಈ ನಡುವೆ ಇವರು ಕಿತ್ತೂರಿನ ಮಲಪ್ರಭಾ ನದಿ ತಟದಲ್ಲಿ ಸ್ಪಲ್ಪ ಹೊತ್ತು ವಿಶ್ರಮಿಸಿಕೊಂಡು ಸಾಗುವಾಗ ನೀಲಾಂಬಿಕೆ ತೀರಿಕೊಂಡಿದ್ದಾಳೆ. ಅವಳ ಸಮಾಧಿ ನದಿಯ ದಡದಲ್ಲಿ ಈಗಲೂ ಕಾಣುತ್ತದೆ. ನೋಡುತ್ತೇವಲ್ಲ.’

`ಯಾರಿಗಾದರು ಶರಣರ ಹೆಸರುಗಳು ನೆನಪು ಅದಾವೇನು?’ ಒಬ್ಬರ ಮುಖ ಒಬ್ಬರು ನೋಡಿಕೊಳ್ಳತೊಡಗಿದರು.’

ಕಲ್ಲೇಶ ಕಾಕಾ ಇವರೊಂದಿಗೆ ಸ್ವಲ್ಪ ಹೊತ್ತು ಸೇರಿಕೊಂಡು ಮಾತುಗಳು ಕೇಳಿಸಿಕೊಳ್ಳುತ್ತ ನಡೆಯುತ್ತಿದ್ದವನು `ಗುರುಪಾದ ನನಗೊಂದೆರಡು ಹೆಸರು ನೆನಪಿಗೆ ಬಂದವು ನೋಡು, ಅವರು ಅಲ್ಲಮಪ್ರಭುದೇವರು, ಸಿದ್ಧರಾಮೇಶ್ವರರು, ಅಕ್ಕಮಹಾದೇವಿ ಹೌದಲ್ಲೋ’ ಎಂದ.

ಹೌದು ಮತ್ತ ಎಲ್ಲರೂ ಇನ್ನಷ್ಟು ಶರಣರ ಹೆಸರು ನೆನಪು ಮಾಡಿಕೊಳ್ರಿ. ಅವರು ದಿನನಿತ್ಯ ತಮ್ಮ ತಮ್ಮ ಕಾಯಕದ ಕೆಲಸದ ಮುಖಾಂತರ ಹೆಸರು ಪಡೆದವರು ಇದ್ರು.

`ಹಾಂ! ಹೌದಲ್ಲ!’

`ನಮ್ಮೂರಿನ ಮಠದ ಶಿವಮೂರ್ತಿ ಸ್ವಾಮಿಗಳು ಇದ್ರಲ್ಲ, ಅವರು ತಮ್ಮ ಪ್ರವಚನದೊಳಗ ಶರಣರ ಹೆಸರು ಅವರು ಮಾಡ್ತಿದ್ದ ಕೆಲಸಗಳನ್ನೆಲ್ಲಾ ಹೇಳ್ತಿದ್ದರಲ್ಲ. ನಾವು ಸಾಲಿಗೆ ಹೋಗುವಾಗ ಆವಾಗವಾಗ ಹೋಗಿ ಸ್ವಾಮಿಗೋಳ ಕಾಲಿಗೆ ಬಿದ್ದು ಒಂದಷ್ಟು ಹೊತ್ತು ಅಲ್ಲಿದ್ದು ಕೇಳಿಸಿಕೊಂಡು ರ‍್ತಿದ್ದೀವಲ್ಲ ಗುರುಪಾದ ನೆನಪೈತೇನು’ ಎಂದ ಚಂದ್ರು.

`ನೆನಪಿರದ ಏನು ಆದ್ರ ನಾನು ಅಲ್ಲಿ ಸಿಗೋ ಪ್ರಸಾದದ ಆಸೇಕ್ಕ ಬರ‍್ತಿದ್ದೆ ನೋಡು,’ ಆದ್ರೂ ಶರಣರ ಹೆಸರು ನೆನಪಿಸಿಕೊಳ್ಳೋಣ ಎಂದು ಗುರುಪಾದ ಹೇಳಿದ.

`ನಮ್ಮ ಅಪ್ಪ ಆಗಾಗ ಕೆಲವೊಂದು ವಚನಗಳನ್ನು ಹೇಳ್ತಿದ್ರು. ನಾನು ನೆನಪಿಸಿಕೊಳ್ತೇನು’ ಎಂದು ಅರವಿಂದನೂ ಹೇಳಿದಾಗ ಉಳಿದೆಲ್ಲ ಜಾತ್ರಾರ್ಥಿಗಳಿಗೂ ಒಂದು ತರಹದ ಖೋಖೋ ಆಟದ ಹಾಗಾಯ್ತು.

ಹಾದಿಗುಂಟ ಅವರವರ ಹೆಸರು ಅವರವರ ಕೆಲಸಗಳ ಬಗೆಗೆ ಚರ್ಚಿಸುತ್ತಾ ನಡೆದರು. ಮಡಿವಾಳ ಮಾಚಿದೇವ, ಡೋಹರ ಕಕ್ಕಯ್ಯ, ಆಯ್ದಕ್ಕಿ ಮಾರಯ್ಯ – ಲಕ್ಕಮ್ಮ ದಂಪತಿಗಳು, ಮಾದಾರ ಚೆನ್ನಯ್ಯ, ಗೋರಕ್ಷಕ ಸಿದ್ಧಸೋಮನಾಥ, ಗಾಣದ ಕಣ್ಣಪ್ಪ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ನಗೆಯ ಮಾರಿತಂದೆ, ಎಲೆಗಾರ ಭೀಮಣ್ಣ, ಕಿನ್ನರಿಬೊಮ್ಮಣ್ಣ, ಮೇದಾರಕೇತಯ್ಯ, ಕನ್ನಡಿ ಕಾಯಕದ ರೇವಮ್ಮ, ಕುರಿಗಾಲು ರಾಮಣ್ಣ, ಲದ್ದಿಯ ಸೋಮಯ್ಯ, ನುಲಿಯ ಚಂದಯ್ಯ, ಕುಂಬಾರ ಗುಂಡಯ್ಯ ಕೇತಲಾದೇವಿ, ಹಾಗೆಯೇ ಮುಕ್ತಾಯಕ್ಕ, ಕಾಳವ್ವೆ, ರೇಚವ್ವೆ-ಗುಡ್ಡವ್ವೆ. ಇವರೆಲ್ಲಾ ತಮ್ಮ ತಮ್ಮ ಕಾಯಕದಲ್ಲಿ ಅತೀ ನಿಷ್ಠಾವಂತರಾಗಿದ್ದರು. ಆಯ್ದಕ್ಕಿ ಮಾರಯ್ಯ ಲಕ್ಕಮ್ಮ ದಂಪತಿಗಳದ್ದೇ ಒಂದು ಉದಾಹರಣೆ ನೋಡ್ರಿ. ಚೀಲದಿಂದ ಬಿದ್ದ ಅಕ್ಕಿಗಳನ್ನು ಗೂಡಿಸಿಕೊಳ್ಳುತ್ತ ಆಯ್ದುಕೊಳ್ಳುತ್ತ ತಂದು ಅನ್ನ ಮಾಡಿಕೊಳ್ಳುತ್ತಿದ್ದರಂತ. ಅಂದಂದಿಗೆ ತಮಗೆಷ್ಟು ಬೇಕೋ ಅಷ್ಟ ಅಕ್ಕಿ ಇಟ್ಟುಕೊಂಡು ಉಳಿದದ್ದನ್ನು ಮತ್ತ ಗೋದಾಮಿಗೆ ಹೋಗಿ ಇಟ್ಟು ಬರುತ್ತಿದ್ದರಂತ. ನಾಳೆಗೆ ಇನ್ನೊಂದು ಮುಷ್ಠಿ ಅಕ್ಕಿ ಇಟ್ಟುಕೊಳ್ಳೋಣಂತ ಲಕ್ಕಮ್ಮ ಹೇಳಿದರೂ ಕೇಳದೇ ನಾಳೆಯದು ನಾಳೆಗೆ ತರೋಣ, ಸಂಗ್ರಹ ಬ್ಯಾಡಾ ಎಂದು ಮಾರಯ್ಯ ಹೇಳಿಬಿಡುತ್ತಿದ್ದನಂತ. ಶರಣೆ ಲಕ್ಕಮ್ಮ ಪತಿಗೆ ತಕ್ಕ ಸತಿಯಾಗಿ ಬಾಳಿದಳು. ಇಂತಹ ಮಹತ್ವದ ಕಾಯಕದ ಕೆಲಸ ಸ್ವಾರ್ಥವಿಲ್ಲದೆ ಮಾಡಿ ಶರಣರು ಇಂದು ನಮಗೆ ಮಾದರಿಯಾದ್ರು ನೋಡ್ರಿ.

ಆದರೆ ಇಂದಿನ ರಾಜಕೀಯದವರಿಗೆ, ಶ್ರೀಮಂತರಿಗೆ ಅರಮನೆಗಳಿದ್ದರೂ ಇನ್ನೂ ದಾಹ, ಸ್ವಾರ್ಥ ಹೇಳತೀರದಷ್ಟಾಗಿದೆಯಲ್ಲ. ಕೂಡಿಡುವುದು ಅಷ್ಟಽ ಅಲ್ಲ ದೇಶ ವಿದೇಶ ಗಳಲ್ಲಿ ಆಸ್ತಿ ಅಂತಸ್ತುಗಳಲ್ಲಿ, ಹೂಡಿಕೆಗಳಲ್ಲಿ ತೊಡಗಿರುವುದು ನೋಡಿದ್ರ ಇವರು ಯಾವ ರೀತಿಯ ಮಾದರಿಯನ್ನು ಮುಂದಿನ ಜನಾಂಗದವರಿಗೆ ಬಿಟ್ಟು ಹೋಗಬಹುದು? ಸಮಾಜದಲ್ಲಿ ಸಮಾನತೆ ಎನ್ನುವುದು ಹೇಗೆ ಬಂದೀತು?

ಹೀಗೆ ಗೆಳೆಯರು ಒಂದರಿಂದ ಮತ್ತೊಂದು ವಿಷಯಗಳತ್ತ ಗಂಭೀರವಾಗಿ ಚರ್ಚೆ ಮಾಡುತ್ತ ನಡದೇ ನಡೆಯುತ್ತಿದ್ದರು.

ಅದಕ್ಕ ಅಲ್ಲೇನು ಕಾರ್ಲ್ಮಾರ್ಕ್ಸ್, ಲೆನಿನ್ ಅಂತಹವರು ಕ್ರಾಂತಿ ಎದ್ದದ್ದು.

`ಇವರಕ್ಕಿಂತ ಮೊದಲಽ ಬಸವಣ್ಣನವರು ಅಂದಽ ಕ್ರಾಂತಿ ಮಾಡಿದ್ರು.’

`ಬುದ್ಧ-ಬಸವ-ಅಂಬೇಡ್ಕರ ಇವರದ್ದೆಲ್ಲಾ ಇದೇ ತತ್ವ. ಆದರಽ ಈವರೆಗೂ ಧಾರ್ಮಿಕ-ರಾಜಕೀಯ ಜನರಿಗೆ ಈ ತತ್ವ ಅರ್ಥಮಾಡಿಕೊಳ್ಳಲಿಕ್ಕೆ ಆಗವಲ್ಲದೊ ಏನೋ!’

`ಈ ಸರ್‌ಗಳದ್ದು-ವಕೀಲರದ್ದು ಏನೇನೋ ಚರ್ಚೆಗಳಿರ‍್ತಾವ ಎಂದುಕೊಳ್ಳುತ್ತ ಉಳಿದವರು ಇವರ ಬಗೆಗೆ ತಲೆಕೆಡಿಸಿಕೊಳ್ಳದೆ, ಏನಾದರೂ ಅಷ್ಟಷ್ಟು ಕೇಳಿ ಅವರಿಗೆ ಊಟ-ನೀರು-ಚೂಡಾ ಚುರುಮುರಿ ಕೊಡುತ್ತ ಸಾಗುತ್ತಿದ್ದರು. ಮೂರ್ನಾಲ್ಕು ದಿನಗಳು ದಟ್ಟ ಕಾಡಿನಲ್ಲಿ ನಡೆಯುತ್ತಿದ್ದರೂ ಯಾರೊಬ್ಬರಿಗೂ ದಣಿವು ಆಯಾಸ ಅನಿಸುತ್ತಲೇ ಇರಲಿಲ್ಲ. ಎತ್ತುಗಳೂ ಶಾಂತವಾಗಿ ಹೆಜ್ಜೆ ಹಾಕುತ್ತಿದ್ದವು. ಸಂಜೆ-ಕತ್ತಲು ಆವರಿಸಿಕೊಳ್ಳುತ್ತಿದ್ದಂತೆ ವನಸಿರಿಯ ಚೆಂದಗಾರಿಕೆ ಕತ್ತಲಲ್ಲಿ ಈಗ ಕರಗತೊಡಗಿದಂತೆ ಚಕ್ಕಡಿಗಳು ಉಳುವಿ ಕ್ಷೇತ್ರ ಪ್ರವೇಶಪಡೆದವು.

ಎಲ್ಲೆಲ್ಲೂ ಜಾತ್ರೆಯ ಗದ್ದಲವೋ ಗದ್ದಲ. ಜನರಲ್ಲಿ ಸಂಭ್ರಮದ ವಾತಾವರಣ. ಲೈಟುಗಳು ಝಗಝಗಿಸತೊಡಗಿದ್ದವು.

ಚಕ್ಕಡಿಗಳಿಗೆ ನಿಗದಿಪಡಿಸಿದ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಒಂದೇ ಸಮನೆ ನಡೆದು ನಡೆದು ಸುಸ್ತಾದ ಎತ್ತುಗಳ ಕೊರಳು ಹಗ್ಗವನ್ನು ಚಕ್ಕಡಿಗಳಿಂದ ಬಿಡಿಸಿದರು. ಮಹಿಳೆಯರು ಮಕ್ಕಳು ಗಂಡಸರು ಕಂಬಳಿ-ಜಮಖಾನೆಗಳನ್ನು ಹಾಸಿಕೊಳ್ಳುತ್ತ ಬಿಡಾರ ಹೂಡಿದರು. ಮತ್ತೊಂದೆಡೆ ಮಹಿಳೆಯರು ಅಡುಗೆಗೆಂದು ಕಲ್ಲುಹೊಂದಿಸಿ ಒಲೆ ಹೊತ್ತಿಸಿದರು. ನಾಳೆ ದೇವರ ನೈವೇದ್ಯಗೆ ಬೇಕಾದ ಅಡುಗೆ ಸಾಮಾನುಗಳನ್ನು ಹೊಂದಿಸಿಕೊಳ್ಳತೊಡಗಿದರು.

ಸ್ವಲ್ಪ ದೂರದಲ್ಲಿ ನಾಟಕದವರು ಕ್ಯಾಂಪ್ ಹಾಕಿದ್ದರು. ಲೌಡ್ ಸ್ಪೀಕರದಲ್ಲಿ `ಕಲ್ಯಾಣಕ್ರಾಂತಿ’ ನಾಟಕದ ಬಗ್ಗೆ ತಿಳಿಸಿಹೇಳುತ್ತ ಕರೆಯುತ್ತಿದ್ದರು. ಟೆಂಟ್ ಮೇಲೆ ಬಣ್ಣ ಬಣ್ಣದ ಲೈಟುಗಳು, ಕಲ್ಯಾಣ ಕ್ರಾಂತಿಕಾರರ ಚಿತ್ರಗಳಿರುವ ದೊಡ್ಡ ಬೋರ್ಡುಗಳು ಜಾತ್ರೆಗೆ ಬಂದವರನ್ನು ಸೆಳೆಯುತ್ತಿದ್ದವು.
ಚಂದ್ರು-ಅರವಿಂದ-ಗುರುಪಾದ ನಾಟಕ ನೋಡಲು ಆ ಕಡೆಗೆ ಹೆಜ್ಜೆ ಹಾಕಿದರು.

ನಾಟಕ ನೋಡಿ ಬಂದ ಗೆಳೆಯರದ್ದು ತಡರಾತ್ರಿಯವರೆಗೂ ಚರ್ಚೆ ಚರ್ಚೆ ಚರ್ಚೆ. ನಡು ನಡುವೆ ನಾಲವತ್ತೇಳರ ಸ್ವಾತಂತ್ರ್ಯ ಚಳುವಳಿ ಕ್ರಾಂತಿಕಾರರ ಹೋರಾಟದ ಚಿತ್ರಣಗಳು ನೆನಪಿಸಿಕೊಳ್ಳುತ್ತ ಇಂದಿನ ತುರ್ತು ಪರಿಸ್ಥಿತಿಯ ಕ್ರಾಂತಿಕಾರಿ ಜಯಪ್ರಕಾಶ್ ನಾರಾಯಣವರೆಗೂ ಚರ್ಚೆ ಚರ್ಚೆ.

ಸಮಾಜದಲ್ಲಿ ಜಾತಿ-ಧರ್ಮದ ಬಗೆಗೆ ಅಜಗಜಾಂತರ ವ್ಯತ್ಯಾಸವಿತ್ತು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನವರಿಗೆ ಈ ನೀತಿ ನಿಯಮಗಳು ಬಹಳಷ್ಟು ನೋವನ್ನು ಕೊಟ್ಟವು. ತನ್ನ ಮಂತ್ರಿಪದವಿ ತ್ಯಜಿಸಿ ಹೊರಬಂದು ಎಲ್ಲ ವರ್ಗದವರೊಡನೆ ಸಾಮರಸ್ಯ ಕಟ್ಟಲು ಪ್ರಯತ್ನಿಸಿದರು.

ಬೆಳಗಿನ ಜಾವ ಕಣ್ಣುಬಿಟ್ಟಾಗ ಎಲ್ಲೆಲ್ಲೂ ಜಾತ್ರೆಯದೇ ಆದ ಒಂದು ಬೆಡಗಿನ ಸೊಬಗು. ತಣ್ಣನೆಯ ಗಾಳಿ-ಪಕ್ಷಿಗಳ ಕಲರವ. ಸೂರ್ಯೋದಯ. ದೇವಸ್ಥಾನದ ಆವರಣದಿಂದ ಕೇಳಿಬರುವ ಶರಣರ ವಚನಗಳ ಹಾಡುಗಳು. ಸುತ್ತೆಲ್ಲ ಹಸಿರು ಗಿಡಮರಗಳಿಂದ ತುಂಬಿದ ತಂಪಾದ ಸ್ಥಳದಲ್ಲಿ ಚೆನ್ನಬಸವಣ್ಣನ ದೇವಸ್ಥಾನ ದೂರ ದಿಂದಲೇ ಕಂಗೊಳಿಸುತ್ತದೆ. ಎತ್ತರದ ಗೋಪುರದಲ್ಲಿ ಶಿವಶರಣರ ಶಿಲ್ಪ ಕೃತಿಗಳು. ಅವರವರ ವೃತ್ತಿಗೆ ತಕ್ಕಂತೆ ಕೆತ್ತನೆಗಳಿವೆ. ೧೨ನೆಯ ಶತಮಾನದ ಶರಣರೆಲ್ಲ ಕಣ್ಣಿಗೆ ಕಟ್ಟುವಂತೆ ಕಾಣುತ್ತಾರೆ. ದೇವಸ್ಥಾನ ತಳಿರು ತೋರಣಗಳಿಂದ ಶೋಭಿತಗೊಂಡಿದೆ.

ಭಕ್ತರು ನಸುಕಿನಲ್ಲಿ ಎದ್ದು ಶುಚಿಯಾಗಿ ಜಾತ್ರೆಯ ಸಡಗರದಲ್ಲಿ ತೊಡಗಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಜಾತ್ರೆ ಅಂದರೆ ಜಾತ್ರೆ. ಗ್ರಾಮೀಣ ಜನರಿಗೆ ಇದಕ್ಕಿಂತ ದೊಡ್ಡ ಸಂತೋಷ ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲ. ಜಾತ್ರೆಗೆ ಹೋಗುವದೆಂದು ಆರೆಂಟು ತಿಂಗಳಿನಿಂದ ತಯಾರಿಯಲ್ಲಿಯೇ ತೊಡಗಿಕೊಂಡಿರುತ್ತಾರೆ. ಇಂಥವರದ್ದೆಲ್ಲ ಮೊದಲಿನಿಂದಲೂ ತಯಾರಿಯಾಗಿದ್ದರೆ ಈ ಗೆಳೆಯರಲ್ಲಿ ತಕ್ಷಣದ ನಿರ್ಣಯವಾಗಿತ್ತು.

ಚಿಕ್ಕಂದಿನಿಂದಲೂ ಸೊಗಲ ಸೋಮೇಶ್ವರ ಜಾತ್ರೆ. ಎಲ್ಲಮ್ಮ ಗುಡ್ಡದ ಎಲ್ಲಮ್ಮನ ಜಾತ್ರೆ. ಉಳುವಿ ಚೆನ್ನಬಸವೇಶ್ವರ ಜಾತ್ರೆ ಎಂದು ಅದೆಷ್ಟೋ ಸಲ ಹೋಗಿ ಬಂದವರೇ ಈ ಮೂವರು. ಆದರೆ ಮ್ಯಾಟ್ರಿಕ್ ಆದ ತಕ್ಷಣ ಕಾಲೇಜು ಓದು ಎಂದು ಬೆಳಗಾವಿ ಪಟ್ಟಣ ಸೇರಿದ ಮೇಲೆ ಪ್ಯಾಂಟು-ಶರ್ಟು-ವಾಚು-ಬೂಟು ಕೈಯಲ್ಲಿ ಒಂದೆರಡೇ ಪುಸ್ತಕಗಳು ಎಂದು ಒಂದೊಂದೇ ಬದಲಾವಣೆ ಆಗ ತೊಡಗಿದ್ದವು. ತಮ್ಮ ಊರಿನ ಬಸವಣ್ಣನ ಜಾತ್ರೆಯೋ ಹೋಳಿ ಹುಣ್ಣಿಮೆಯೋ ಸೀಗಿ ಹುಣ್ಣಿಮೆಯೋ ಎಂದಾದಾಗೆಲ್ಲ ಗೆಳೆಯರೆಲ್ಲ ಗುಂಪು ಕಟ್ಟಿಕೊಂಡು ನಾಟಕ ಮಾಡುತ್ತಿದ್ದವರು ನೋಡುತ್ತಿದ್ದವರು ನಂತರ ಬೆಳಗಾವಿಯ ಕ್ಯಾಂಪಿನಲ್ಲಿ ಅಡ್ಡಾಡುವುದು, ಇಂಗ್ಲೀಷ್ ಸಿನಿಮಾ ನೋಡುವುದು ಮಾಡುತ್ತ ಕ್ರಮೇಣ ಗ್ರಾಮೀಣ ಬದುಕಿನಿಂದ ದೂರವಾಗ ತೊಡಗಿದ್ದರು.

ಈಗ ಈ ಜಾತ್ರೆಯ ಸಂದರ್ಭ. ಬಾಹ್ಯ ಜಗತ್ತಿನ ಪರಿವೆ ಇಲ್ಲದೆ ಎಷ್ಟೊಂದು ಸುಖಿಗಳಾಗಿದ್ದಾರಲ್ಲ ನಮ್ಮ ಜನ. ಭಾವನಾತ್ಮಕವಾಗಿ ದೇವರನ್ನು ನಂಬಿಕೊಂಡು ಸಂತೋಷಪಡುವ ಈ ಜನರೆಲ್ಲಿ. ಸ್ವಾರ್ಥ ರಾಜಕಾರಣಿಗಳು ಅಧಿಕಾರದಾಸೆಗೆ ಏನನ್ನೂ ಮಾಡಲು ಹಿಂಜರಿಯದ ಅವರೆಲ್ಲಿ. ಸ್ವತಂತ್ರ ಭಾರತಕ್ಕೆ ನಡುರಾತ್ರಿಯಲ್ಲಿ ಹೇರಿದ ಇಂದಿನ ತುರ್ತುಪರಿಸ್ಥಿತಿ ಒಂದರ್ಥದಲ್ಲಿ ಆಂತರಿಕ ಪಾರತಂತ್ರ್ಯವಲ್ಲದೆ ಮತ್ತಿನ್ನೇನು’ ಎನ್ನುತ್ತ ರಾಜಕೀಯ-ಸಾಮಾಜಿಕ-ವಿಷಯಗಳ ಬಗೆಗೆ ಈಗ ಮಾತನಾಡುವ ಪ್ರಬುದ್ಧತೆ ಹೊಂದಿದ ವ್ಯಕ್ತಿಗಳಾಗಿದ್ದಾರೆ.

ಎಲ್ಲೆಲ್ಲೂ ಜನದಟ್ಟಣೆ. ಭಕ್ತರ ಸಂಭ್ರಮ ಹೇಳತೀರದಷ್ಟು. ಹೂವಿನ ಅಲಂಕಾರ ದಿಂದ ತೇರು ಸಿದ್ಧತೆಗೊಂಡಿದೆ. ತೇರು ಎಳೆಯುವ ಬೀದಿಗೆ ಬೆಳಗಿನಿಂದಲೇ ಕಸ ಗುಡಿಸಿ ನೀರು ಹೊಡೆದು ರಂಗವಲ್ಲಿಯೂ ಹಾಕಿದ್ದಾರೆ. ತೇರಿನೊಳಗೆ ದೇವರ ಮೂರ್ತಿ ಸರ್ವಾಲಂಕೃತ ಭೂಷಿತವಾಗಿ ಕಂಗೊಳಿಸುತ್ತಿದೆ.

ಬಹಳ ವರ್ಷಗಳ ಮೇಲೆ ಬಂದಿದ್ದ ಚಂದ್ರು ಅರವಿಂದ ಗುರುಪಾದ ದೂರ ದಲ್ಲಿಯೇ ನಿಂತುಕೊಂಡು ಎಲ್ಲವನ್ನೂ ವೀಕ್ಷಿಸುತ್ತಿದ್ದಾರೆ. ದೇವರು ಇದ್ದಾನೋ ಇಲ್ಲೋ! ಇವರಲ್ಲಿ ವಿಶ್ಲೇಷಣೆ ನಡದೇ ಇದೆ. ನಂಬಿದವರ ಪಾಲಿಗೆ ಇದ್ದಾನೆ. ಇಲ್ಲೆಂದವರಿಗೆ ಇಲ್ಲ. ನಾವು ಇವೆರಡೂ ತಿಳಿದುಕೊಳ್ಳಲು ವಿಜ್ಞಾನಿಗಳೂ ಅಲ್ಲ ತತ್ವಜ್ಞಾನಿಗಳೂ ಅಲ್ಲ. ನಾವು ನಮ್ಮ ರಾಜಕೀಯ ಸ್ಥಿತಿ ನೋಡಿ ಹತಾಶರಾಗಿ ಬಂದವರಷ್ಟೇ, ದೇವರಿಗೆಂದೇ ಬಂದವರಲ್ಲ. ಎಲ್ಲವೂ ನಾವು ಅಂದಂತೆ ಸರಿಹೋಗಲೆಂದು ಬೇಡಿಕೊಳ್ಳಲು ಬಂದವರಲ್ಲ ಎಲ್ಲ ಸರಿಹೋದ ಮೇಲೆ ಹರಕೆ ತೀರಿಸುವೆವೆಂದು ಕೇಳಿಕೊಳ್ಳುವುದೂ ಇಲ್ಲ’ ಎಂದು ಚರ್ಚೆಗಳು ನಡೆದೇ ಇದ್ದವು.

ಸಂಪ್ರದಾಯದಂತೆ ದೇವಸ್ಥಾನದ ಆಡಳಿತ ಮಂಡಳಿಯವರು, ಗೌರವಾನ್ವಿತರು, ಉತ್ಸವಮೂರ್ತಿಗೆ ಪೂಜೆಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥಬೀದಿಯಿಂದ ಅಲಂಕರಿಸಿದ ರಥ ಗಂಟೆ-ಜಾಗಟೆಗಳೊಂದಿಗೆ, ದೇವರ ಉದ್ಘೋಷಗಳೊಂದಿಗೆ ಭಕ್ತರು ನಿಧಾನವಾಗಿ ರಥ ಎಳೆಯತೊಡಗಿದರು. ಜನರ ನೂಕು ನುಗ್ಗಲು ತುಂಬಿಕೊಳ್ಳ ತೊಡಗಿತು. ಭಕ್ತರು ಬೇಡಿಕೊಂಡಂತೆ ಅವರ ಇಷ್ಟಾರ್ಥಗಳು ಪೂರ್ಣಗೊಂಡಂತೆ ಸಂತೋಷದಿಂದ ಹೂವು ಹಣ್ಣು ತೂರುತ್ತ ರಥದೆಡೆಗೆ ಹಾರಿಸುತ್ತಿದ್ದರು. ತಮ್ಮ ತಮ್ಮ ಹೊಲಗಳಲ್ಲಿ ಬೆಳೆದ ದವಸ-ಧಾನ್ಯಗಳನ್ನು ಹಾರಿಸುತ್ತ ದೇವರಿಗೆ ಸಮರ್ಪಿಸುತ್ತಿದ್ದರು. ಧನ್ಯತಾಭಾವ ಹೊಂದಿ ಸಂತೋಷಿಸುತ್ತಿದ್ದರು.

ಇವರೂ ಇದನ್ನೆಲ್ಲಾ ನೋಡುತ್ತ ಅಂದಿನ ಶರಣರ ಅನುಭಾವಕ್ಕೂ, ಈಗಿನ ಭಕ್ತ ಸಮುದಾಯದ ಶರಣರಿಗೂ ಕೈಮುಗಿದರು. ರಥ ಮುಂದೆ ಮುಂದೆ ಹೊರಟಿತು.

`ಇಂದಿನ ಯಾವ ವ್ಯವಸ್ಥೆಯೂ ಇಲ್ಲದಿದ್ದಾಗ ಶರಣರು ಇಂತಹ ಕಾಡಿನಲ್ಲಿ ಅದ್ಹೇಗೆ ಬಂದು ಇಲ್ಲಿ ಉಳಿದುಕೊಂಡಿರಬೇಕು. ಕಾಡಿನಲ್ಲಿ ನಾವೂ ಸ್ವಲ್ಪ ಸುತ್ತಾಡಿಕೊಂಡು ಬರೋಣ’ ಎನ್ನುತ್ತ ಅಲ್ಲಿಂದ ಹೊರಟರು. ಗುರುಪಾದನಿಗೆ ಕಾಲುನೋವು ಮರತೇ ಹೋದಂತಾಗಿದೆ.

ಪಶ್ಚಿಮಘಟ್ಟದ ಸುಂದರವಾದ ಸ್ಥಳ ಇದು. ಸುತ್ತೆಲ್ಲ ದಟ್ಟ ಅರಣ್ಯ. ಪಕ್ಷಿ ಪ್ರಾಣಿಗಳ ಸಂಕುಲ. ಗುಹೆಗಳು ಎಲ್ಲೆಲ್ಲೂ ಕಾಣುತ್ತವೆ. ಪಂಚಲಿಂಗೇಶ್ವರ ಗುಹೆ, ಆಕಳ ಗವಿ, ಅಕ್ಕನಾಗಮ್ಮ ತಪಸ್ಸು ಮಾಡಿದ ಗುಹೆ, ರುದ್ರಾಕ್ಷಿ ಮಂಟಪ, ಬಸವಣ್ಣನವರ ದೇವಾಲಯ, ವೀರಭದ್ರ ದೇವಸ್ಥಾನ. ಹರಳಯ್ಯನವರ ಹೊಂಡ, ವಿಭೂತಿ ಕಣಜದ ಗುಹೆ, ಹೀಗೆ ಪ್ರಕೃತಿ ವಿಸ್ಮಯದ ಗುಹೆಗಳನ್ನು ಒಳಹೊಕ್ಕು ನೋಡುತ್ತ ತೇಗ, ಮತ್ತಿ ಗಿಡಗಳ ನೆರಳಿನಲ್ಲಿ ಸುತ್ತಾಡುತ್ತ ಬಾಹ್ಯಜಗತ್ತಿನ ಪ್ರಜ್ಞೆಯನ್ನೇ ಮರೆತು ನಿಸರ್ಗದಲ್ಲಿ ಮೈಮರೆತಿದ್ದರು. ಜಾತ್ರೆಯಿದೆಯೆಂದು ಜನ ಓಡಾಡುತ್ತಿದ್ದಾರೆ. ಇಲ್ಲದೆ ಹೋದರೆ ಇಲ್ಲಿ ಹಾದಿ ತಪ್ಪಿಸಿಕೊಂಡು ಬಿಡುತ್ತೇವೆಯೇನೋ, ಹೀಗೆ ಆಗಾಗ ಕಾಡಿನಲ್ಲಿ ಬಂದು ತಪ್ಪಿಸಿಕೊಂಡುಬಿಡುವುದು ಒಮ್ಮೊಮ್ಮೆ ಚೆಂದವೇನೋ! ಈ ಭಯ ಈ ಕುತೂಹಲ, ನಿಶ್ಶಬ್ದ ರಾತ್ರಿಯಾದರೆ ಹೆದರಿಕೆ, ಊಟ-ನೀರಿಲ್ಲ, ಪ್ರಾಣಿಗಳ ಕಿರಿಚಾಟ ಎಲ್ಲ ಹೇಗಿರಬಹುದಲ್ಲವೆ!

`ಸ್ಟಾರ್ ಹೋಟೆಲ್‌ಗಳಲ್ಲಿ ವಸತಿ ಮಾಡುವುದೇ ಒಂದು ಸಾಧನೆ ಎನ್ನುವಂತಹ ಅಧಿಕಾರ ದಾಹಿಗಳು ಇಂಥ ಕಡೆಗೆಲ್ಲ ಬಂದು ನೋಡಬೇಕು. ಶರಣರ ಪ್ರಸನ್ನತೆಯ ನೆಲದಲ್ಲಿ ಸುತ್ತಾಡಬೇಕು.’ ಎಂದುಕೊಳ್ಳುತ್ತ ಈ ಗೆಳೆಯರು ಸೂರ್ಯಾಸ್ತವಾಗುತ್ತಿದ್ದಂತೆ ಮರಳಿ ಜಾತ್ರೆಯ ಗುಂಪಿನಲ್ಲಿ ಸೇರಿಕೊಂಡರು.

ರಥ ಬೀದಿಗುಂಟ ಎರಡೂ ಕಡೆಗೂ ಜಾತ್ರೆ ಸಾಮಾನಿನ ಅಂಗಡಿಗಳು. ಚಿಕ್ಕ ಮಕ್ಕಳ ಪೀಪಿ ತುತ್ತೂರಿಯಿಂದ ಹಿಡಿದು ಮಹಿಳೆಯರ ಪಿನ್ನು ರಿಬ್ಬನ್ ಬಳೆವರೆಗೆ… ಬೆಂಡು ಬೆತ್ತಾಸದಿಂದ ಹಿಡಿದು ಊರಿಗೆ ಕೊಂಡೊಯ್ಯುವ ವಿಭೂತಿ-ರುದ್ರಾಕ್ಷಿ-ದೇವರ ಪಟಗಳವರೆಗೆ, ಹಾಗೆಯೇ ಅಡುಗೆಮನೆಯ ಕಡಗೋಲಿನಿಂದ ಹಿಡಿದು ದನಕರುಗಳ ಕೊರಳುಗಂಟೆ, ರೈತರ ಹೊಲದ ಸಾಮಾನುಗಳವರೆಗೆ ತುಂಬಿಕೊಂಡಿದ್ದವು. ದೊಡ್ಡವರು ಚಿಕ್ಕವರೆನ್ನದೆ ಬಣ್ಣ ಬಣ್ಣದ ನೀರಿನ ಭರ್ಪ ತಿನ್ನುವುದು. ಕರಿದ ಖಾರದಾನೆ ಚುರುಮುರಿ ಭಜಿ ತಿನ್ನುವುದು….

ಗರ್ದಿಗಮ್ಮತ್ತಿನ ಪೆಟ್ಟಿಗೆಯೊಳಗೆ ಬಾಂಬೆ ಬಜಾರ್, ದಿಲ್ಲಿ ಕುತುಬ್ ಮಿನಾರ್ ರಾಜಕಪೂರ್ ಚಿತ್ರಪಟಗಳು ನೊಡೋ ಹುಡುಗರ ಖುಷಿ.
ಮತ್ತೊಂದು ಕಡೆ ಭವಿಷ್ಯ ಹೇಳುವವ ಎರಡು ಗಿಳಿ ಪಂಜರದೊಳಗಿಟ್ಟುಕೊಂಡು ಮುಂದೆ ಇಸ್ಪಿಟ್‌ದಂತಹ ಕಾರ್ಡ್ಗಳನ್ನು ಇಟ್ಟುಕೊಂಡು ದೇವರ ಸಾನಿಧ್ಯದಲ್ಲಿಯೇ ಭವಿಷ್ಯ ಹೇಳುತ್ತಿದ್ದಾನೆ. ಮುಂದಿನ ವರ್ಷ ಮತ್ತೆ ಉಳಿವಿಗೆ ಬರ‍್ತೀರಿ. ನಿಮ್ಮ ಆಸೆ ಕೈಗೂಡತಾವ. ನಮ್ಮ ಗಿಣಿರಾಮ ನಿಮ್ಮನ್ನು ಕರಿತಿದ್ದಾನ ಬರ‍್ರಿಬರ‍್ರಿ ಎಂದು ಕೂಗುತ್ತಿದ್ದಾನೆ.

ಮೂರು ಹೆಣ್ಣುಮಕ್ಕಳ ತಂದೆ ಚಂದ್ರು ಆ ಕ್ಷಣ ಗಿಳಿಗಳನ್ನು ನೋಡುತ್ತಾನೆ. ಇವು ಏನು ಭವಿಷ್ಯ ಹೇಳಬಹುದು? ಕೇಳಲೇ ಎನ್ನುವ ಕುತೂಹಲ ಹುಟ್ಟುತ್ತದೆಯೇನೋ ನಿಜ. ಹೊಟ್ಟೆಪಾಡಿನ ಭವಿಷ್ಯಗಾರನ ಕಡೆಗೊಮ್ಮೆ ನೋಡಿ ಮುಂದೆ ನಡೆಯುತ್ತಾನೆ.

ಮಕ್ಕಳಿಗೆಂದು ಒಂದಿಷ್ಟು ಆಟಿಕೆಗಳು ಬೆಂಡು ಬೆತ್ತಾಸಕೊಂಡು ಕೈಚೀಲಿಗೆ ಹಾಕುತ್ತಿದ್ದಾನೆ.

ಗುರುಪಾದ ಇಂದು `ಶರಣೆ ಅಕ್ಕಮಹಾದೇವಿ’ ನಾಟಕ ನೋಡಲು ಹೋಗಿದ್ದಾನೆ. ಅರವಿಂದ ತನ್ನ ಹೆಂಡತಿಗೆ ಇಲ್ಲಿ ಏನು ಸಿಗಬಹುದೆಂದು ಹುಡುಕುತ್ತಾ ಸುತ್ತಾಡುತ್ತಿದ್ದಾನೋ ಏನೊ!

ಬಹಳ ಹೊತ್ತಿನ ನಂತರ ಅನ್ನದಾಸೋಹದ ಸಾಲಿನಲ್ಲಿ ಕುಳಿತು ಊಟಮಾಡಿ ಚಂದ್ರು ಚಕ್ಕಡಿಗಳು ಬೀಡು ಬಿಟ್ಟ ಸ್ಥಳಕ್ಕೆ ಬಂದು ತನ್ನದೊಂದು ಜಮಖಾನೆ ಹಾಸಿಕೊಂಡು ಉರುಳಿದ.

ಮೇಲೆ ಪೂರ್ಣಚಂದ್ರ-ಶುಭ್ರ ಬೆಳದಿಂಗಳು. ಯಾಕೋ ಚಂದ್ರುವಿಗೆ ನಿದ್ದೆಯಿಲ್ಲ.

ಭಕ್ತರು ತಮ್ಮ ತಮ್ಮ ಹರಕೆಗಳನ್ನು ತೀರಿಸಿಕೊಂಡು ನಿರುಮ್ಮಳವಾಗಿ ಹೋಗುತ್ತಿರುವವರನ್ನು ನೋಡಿದ್ದ. ಹೆಂಡತಿ ಶಕುಂತಲಾ ಕೂಡಾ ದೇವರಿಗೆ ಬೇಡಿಕೊಂಡು ಹರಕೆ ಹೊತ್ತುಕೊಂಡು ಬರಬೇಕಂತ ಹೇಳಿ ಕಳಿಸಿದ್ದಾಳೆ.

ಇವನಿಗೆ ಭಕ್ತಿ-ಭರವಸೆ ಹರಕೆಗಳೇನೂ ಇಲ್ಲ. ಅಪ್ಪ-ಹೆಂಡತಿಯ ಮನದಾಸೆಗೆ ಮನೆಗೊಬ್ಬ ವಾರಸುದಾರ ಬೇಕೆನ್ನುವ ಅನಿಸಿಕೆಯಷ್ಟೆ.
ಶಕು ನೆನಪಾಗುತ್ತಾಳೆ. ಮೂರು ಮುದ್ದಾದ ಹೆಣ್ಣುಮಕ್ಕಳೂ ಕಣ್ಮುಂದೆ ಬಂದವು. ನಿಜವಾಗಿಯೂ ಹೆಣ್ಣುಮಕ್ಕಳು ಜೀವದಾಯಿನಿಗಳು. ಗಂಡು ಮಕ್ಕಳು ಬೇಕೆನ್ನುವ ಜಿದ್ದು ಈ ಹೆಂಗಸರಿಗೇಕೆ? ಶಕುಂತಲಾ ಈಗ ತುಂಬು ಬಸುರಿ. ಅವಳಿಗೆ ಗಂಡುಮಗುವೊಂದು ಬೇಕು ಅಷ್ಟೆ. ಹಾಗಾದರೆ ಶಿಕ್ಷಕನಾಗಿ ಜನರಿಗೆ ಮಾರ್ಗದರ್ಶನ ಮಾಡಬೇಕಾದ ನಾನೂ ವಾರಸಾ ಬೇಕೆನ್ನುವ ಆಸೆಗೆ ಇಳಿದುಬಿಟ್ಟು ತಪ್ಪಿಸಿಕೊಂಡು ಇಲ್ಲಿ ಸುತ್ತಾಡುತ್ತಿದ್ದೇನೆಯೇ, ದೇಶದ ಜನ ಸಂಖ್ಯೆಯ ದೃಷ್ಟಿಯಿಂದಲೂ ನಾನು ಯೋಚಿಸಬೇಕು! ಒಂದರ ಹಿಂದೆ ಒಂದು ಯೋಚನೆಗಳೆಲ್ಲ ಬರತೊಡಗಿದವು. ಲಿಂಗಭೇದ ಮಾಡದೆ ಅಂದೇ ಬಸವಣ್ಣನವರು ಸಮಾನತೆಯ ಭಾವನೆಯನ್ನು ಬಿತ್ತಿ ಬೆಳೆಸಿದ್ದರು. ನಾವು ಈವರೆಗೂ ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲವೇನೋ! ಅಕ್ಕಮಹಾದೇವಿ ಹಾಗೂ ಅನೇಕ ಶರಣೆಯರು ಬಸವಮಾರ್ಗದರ್ಶನದಲ್ಲಿ ಸಮಾನವಾಗಿ ಬೆರೆಯುತ್ತ ಮುಕ್ತವಾಗಿ ಚರ್ಚಿಸುತ್ತ ಬಂದದ್ದು ಸಾಮಾನ್ಯವಾದುದಲ್ಲ. ಹಾಗಾದರೆ ನಾವೇಕೆ ಇನ್ನೂ ಮಾನಸಿಕವಾಗಿ ಹಿಂದುಳಿದಿದ್ದೇವೆ. ಯಾವ ವ್ಯಾಮೋಹಕ್ಕೆ ಒಳಪಟ್ಟಿದ್ದೇವೆ. ಈ ಶತಮಾನದಲ್ಲೂ ಅನೇಕ ಮಹಿಳೆಯರು ಗಂಡಸರನ್ನು ಹಿಂದಿಕ್ಕಿ ಮಾಡಿದ ಸಾಧನೆಗಳು ಸಾಕಷ್ಟು ಸಾಕಷ್ಟು. ಚಂದ್ರುವಿನ ಮನಸ್ಸು ತನ್ನ ಹೆಣ್ಣುಮಕ್ಕಳ ಬಗೆಗೆ ಮೃದುಭಾವನೆ ಬರತೊಡಗಿದಂತೆ ಮನಸ್ಸು ಏನೋ ಒಂದು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಚಡಪಡಿಸತೊಡಗಿತು.

ಅಂದು ಶರಣೆಯರ ನಿಷ್ಠಾವಂತ ಕಾಯಕ ಇಂದು ಮಹಿಳೆಯರ ಶ್ರಮ ಸಾಧನೆಯ ಕಾಯಕ ಎಲ್ಲವೂ ಒಂದೊಂದು ಅರ್ಥದಲ್ಲಿ ಶ್ರೇಷ್ಠ ಎಂದುಕೊಳ್ಳುತ್ತ ತಾನು ಶಕುಂತಲಾ ತೆಗೆದುಕೊಂಡಿರುವ ನಿರ್ಧಾರದ ಬಗೆಗೆ ಪಾಪಪ್ರಜ್ಞೆ ಕಾಡಲಾರಂಭಿಸಿತು.

ತಮಗೆ ಹುಟ್ಟುವ ನಾಲ್ಕನೆಯ ಮಗು ಏನಾದರಾಗಲಿ ಊರಿಗೆ ಮರಳಿದ ತಕ್ಷಣ ತಾನು ಆಪರೇಷನ್ ಮಾಡಿಸಿಕೊಂಡರಾಯ್ತೆಂದು ದೃಢ ನಿರ್ಧಾರ ತೆಗೆದುಕೊಂಡ.

ಮನಸ್ಸು ಹಗುರವಾದಂತೆನಿಸತೊಡಗಿತು. ಎದ್ದು ಕೂತ.

ಗೆಳೆಯರು ಸುತ್ತಾಡಿಕೊಂಡು ಬಂದರು.

ದಿಟ್ಟ ನಿರ್ಧಾರ ತೆಗೆದುಕೊಂಡು ಮನೆತೊರೆದು ಹೊರಬಂದ ಅಕ್ಕಮಹಾದೇವಿಯ ಬಗೆಗೆ, ಅನುಭವ ಮಂಟಪದಲ್ಲಿ ಅಲ್ಲಮಪ್ರಭುವಿನೊಂದಿಗೆ ಆದ ಅವಳ ಗಂಭೀರ ಚರ್ಚೆಯ ಬಗೆಗೆ ಗುರುಪಾದ ನಾಟಕನೋಡಿ ಬಂದು ಚರ್ಚೆಗಿಳಿದ.

ಜಾತ್ರೆಯಲ್ಲಿ ತಾನು ಕೊಂಡು ತಂದ ಶರಣರ ಚಿಕ್ಕ ಚಿಕ್ಕ ಶಿಲ್ಪ ಪ್ರತಿಮೆಗಳನ್ನು ಚೀಲದಿಂದ ತೆಗೆದು `ಇವು ಕುಸುಮಳಿಗೆ, ಶರಣರನ್ನು ಅವರ ಕಾಯಕವನ್ನು ಪರಿಚಯಿಸಲು ತಂದೆ’ ಎಂದು ತೋರಿಸಿದ ಅರವಿಂದ.

`ನೀನೇನು ತೆಗೆದುಕೊಂಡೆಯೋ ಗುರುಪಾದ ನಿನ್ನ ಊರಿನ ಮನೆಗೆ’ ಎಂದು ಗೆಳೆಯರು ಕೇಳಿದಾಗ…

`ಕಳೆದು ಹೋದ ನಮ್ಮಪ್ಪ ಜಾತ್ರೆಯಲ್ಲಿ ಎಲ್ಲಾದರೂ ಕಾಣಿಸುತ್ತಾನಾ ಎಂದು ಕಣ್ಣುಗಳು ಹುಡುಕಾಡುತ್ತಿದ್ದುವು. ಬೇರೆ ಏನು ಕೊಂಡುಕೊಳ್ಳಬೇಕೆಂದು ಅನಿಸಲೇ ಇಲ್ಲ ನೋಡ್ರೆಪ್ಪಾ’ ನನ್ನದೆಲ್ಲಾ ದುರಂತಬಾಲ್ಯವಾಗಿತ್ತು’ ಎನ್ನುತ್ತ ಉಸಿರೆಳೆದ.

ಆಕಾಶ ತುಂಬೆಲ್ಲ ಚಂದ್ರನ ಶುಭ್ರ ಬೆಳಕು. ಚಂದ್ರ ಮೇಲೆ ನಿಂತು ಇವರನ್ನೇ ಗಮನಿಸುತ್ತಿದ್ದಾನೇನೋ ಎನ್ನುವಂತೆ ಇವರಿಗೆ ಭಾಸ.

ಊರು ನೆನಪಾಯಿತು – ತಾವು ಪರಿಚಿತರಾದ ಸ್ನೇಹಿತರಾದ ಅನೇಕ ಸಂದರ್ಭಗಳು ಮೆಲುಕು ಹಾಕುತ್ತ ಜಮಖಾನೆ ಹಾಸುತ್ತ ಉರುಳಿಕೊಂಡರು.

(ಕೃತಿ: ಚದುರಂಗ (ಕಾದಂಬರಿ), ಲೇಖಕರು. ಡಾ. ಲತಾ ಗುತ್ತಿ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 495/-)