ಹುಟ್ಟಿದ್ದು ಶಿವಮೊಗ್ಗದೊಳಗ. ಮುಂದೆ ಕಲತಿದ್ದು ಬೆಳದಿದ್ದು ಬಲತಿದ್ದು ಎಲ್ಲಾ ಹುಬ್ಬಳ್ಳಿ ಒಳಗ. ಒಂದ ಆರ ವರ್ಷದಿಂದ ತಿಳದಾಗೊಮ್ಮೆ, ಟೈಮ ಸಿಕ್ಕಾಗೊಮ್ಮೆ ಕನ್ನಡ ಹಾಸ್ಯ ಲೇಖನಗಳನ್ನ ಬರಿಲಿಕತ್ತೇನಿ. ಉತ್ತರ ಕರ್ನಾಟಕದ ಆಡು ಭಾಷೆಯೊಳಗ ಬರೇಯೊದು ನನ್ನ ಲೇಖನಗಳ ವಿಶೇಷತೆ.
ಬ್ರಾಹ್ಮಣರಾಗ ಕನ್ಯಾ ತೀರಿ ಹೋಗ್ಯಾವ ಅಂತ… ಭಾಗ ೨: ಪ್ರಶಾಂತ ಆಡೂರ್ ಅಂಕಣ
” ರ್ರಿ…ರ್ರಿ….ಏಳ್ರಿ…ಎಷ್ಟ ಒದರಬೇಕರಿ, ಹತ್ತಸಲಾ ಆತು ಎಬ್ಬಸಲಿಕತ್ತ, ರಾತ್ರಿ ಲೇಟಾಗಿ ಬರೋದು ಮುಂಜಾನೆ ಲಗೂನ ಏಳಂಗಿಲ್ಲಾ. ಅದರಾಗ ಸಂಡೆ ಇದ್ದರಂತು ಮುಗದ ಹೋತು” ಅಂತ ನನ್ನ ಹೆಂಡತಿ ಕಿವ್ಯಾಗ ಶಂಖಾ ಊದಿದ್ಲು. ನಾ ಗಾಬರಿ ಆಗಿ ಎದ್ದ ಕೂತೆ.
“ಏಳ್ರಿ, ಎದ್ದ ರೆಡಿ ಆಗರಿ, ಕೊಪ್ಪಳದಿಂದ ಬನುನ ಅಪ್ಪಾ ಬರೋರಿದ್ದಾರ, ಮರತ ಬಿಟ್ಟಿರೇನ ? ಅವರ ಜೊತಿ ಹೋಗಬೇಕಲಾ” ಅಂತ ನೆನಪ ಮಾಡಿದ್ಲು.
ಅಯ್ಯೋ ಖರೇನ ಮರತಬಿಟ್ಟಿದ್ದೆ.ಮೊನ್ನೆ ಅಚಾನಕ್ಕಾಗಿ ಕೊಪ್ಪಳ ಬೀಗರು (ಅವರ ಮನಿಗೇ ನಮ್ಮ ತಮ್ಮನ್ನ ಕೊಟ್ಟಿದ್ದು) ಫೊನ್ ಮಾಡಿದ್ರು.
“ಏನಿಲ್ಲಾ ನಮ್ಮ ಹುಡುಗರದು ಇಲ್ಲೇ ಹುಬ್ಬಳ್ಳ್ಯಾಗ ‘ಸುಯೋಗ ವಧು ವರರ ಕೇಂದ್ರ’ದಾಗ ಹೆಸರ ಹಚ್ಚಬೇಕು ಅದಕ್ಕ ನಿಮ್ಮನ್ನ ಕರಕೊಂಡ ಹೋದರಾತು ಅಂತ ಫೊನ್ ಮಾಡಿದ್ದೆ” ಅಂದಿದ್ದರು. ಅವರ ಮನ್ಯಾಗೂ ಮೂರ ವರಾ ಅವ, ಭಾಳ್ ಛಲೋ ಹುಡುಗರು, ಬೆಂಗಳೂರಾಗ ದೊಡ್ಡ ನೌಕರಿ ಮಾಡತಾರ, ಇವತ್ತಿಗೂ ಇಷ್ಟಕಲತರು ದಿವಾಸ ಸಂಧ್ಯಾವಂದನಿ ಮಾಡ್ತಾರ, ಅವ್ವಾ ಅಪ್ಪಾ ಹಾಕಿದ್ದ ಗೆರಿ ದಾಟಂಗಿಲ್ಲ, ಪಾಪಾ ಅಂಥಾ ಹುಡುಗರಿಗೂ ಕನ್ಯಾ ಸಿಗವಲ್ವಲ್ಲಾ ಅಂತ ಕೆಟ್ಟ ಅನಸ್ತು.
ಬೀಗರ ಬ್ಯಾರೇ, ಮನಿತನಕ ಬರೋರಿದ್ದಾರ ಇಲ್ಲಾ ಅನ್ನಲಿಕ್ಕೆ ಬರಂಗಿಲ್ಲಾ ಅದರಾಗ ಒಂದ ಸಲಾ ಆ’ಸುಯೊಗ’ದವರನ್ನು ನೋಡಿದಂಗ ಆತು ಅಂತ ಅವರ ಜೊತಿ ಹೋಗಲಿಕ್ಕೆ ‘ಹೂಂ’ ಅಂದಿದ್ದೆ. ಆವಾಗ ನನ್ನ ಹೆಂಡತಿ ” ಭಾಳ ಶಾಣ್ಯಾರ ಇದ್ದೀರಿ ತಗೊಳ್ರಿ… ‘ಊರ ಚಿಂತಿ ಮಾಡಿ ಮುಲ್ಲಾ ಸೊರಗಿದ್ದನಂತ’… ನಿಂಬದ ಒಂದ ಲಗ್ನಾ ಆಗೆದಿಲ್ಲೋ ಸಾಕ. ಅದ ರಗಡ ಆತು. ಇನ್ನ ಊರ ಮಂದಿಗೆಲ್ಲಾ ಕನ್ಯಾ ನೋಡಲಿಕ್ಕೆ ಹೋಗಬ್ಯಾಡರಿ” ಅಂತ ಬಯ್ದಿದ್ಲು.
‘ನಿಂಬದ ಒಂದ ಲಗ್ನಾ ಆಗೆದಿಲ್ಲೋ ಸಾಕ. ಅದ ರಗಡ ಆತು’ ಅಂತ ಅಂದದ್ದರ ಅರ್ಥ ನಾ ಅಕೀನ ಕೇಳಲಿಕ್ಕೆ ಹೋಗಲಿಲ್ಲ.ಮೊದಲ ಒಂದನೇ ಸಂಬಂಧಕ್ಕ ಇಲ್ಲೆ ಬ್ರಾಹ್ಮರಾಗ ಕನ್ಯಾ ಸಿಗವಲ್ವು ಇನ್ನ ನನಗ ಎರಡನೇ ಸಂಬಂಧಕ್ಕ ಯಾರ ಕನ್ಯಾ ಕೊಡ್ತಾರ ಅಂತ ಅಕಿ ಜೊತಿ ಜಗಾಳಡಲಿಕ್ಕೂ ಹೋಗಲಿಲ್ಲ.
‘ಲೇ ಹಂಗ ಅಂದರ ಹೆಂಗ, ನೀನೂ ಒಂದ ಗಂಡ ಹಡದಿ , ನಾಳೆ ಅವಂಗ ಎಲ್ಲಿಂದ ಕನ್ಯಾ ತರತಿ, ಸಮಾಜದಾಗ ನಾಲ್ಕ ಮಂದಿಗೆ ಹಚ್ಚಗೊ ಬೇಕ” ಅಂತ ನಾ ಅಂದಿದ್ದಕ್ಕ “ನೀವೂ ಒಂದ ಹೆಣ್ಣ ಹಡದಿರಲಾ, ಯಾರ ನನ್ನ ಮಗ್ಗ ಕನ್ಯಾ ಕೊಡ್ತಾರೋ ಅವರ ಮನಿಗೆ ನಿಮ್ಮ ಮಗಳನ ಕೊಡೊದು” ಅಂತ ಸದ್ದೇಕ್ ಇರೋ ಎರಡ ಮಕ್ಕಳನ್ನ ಹಿಸೆ ಮಾಡಿದ್ಲು.
ನಾ ಹಿಂಗ ಸ್ನಾನ ಮಾಡಿ ತಯಾರ ಆಗಲಿಕ್ಕ ಹತ್ತಿದ್ದೆ ಕೊಪ್ಪಳ ಬೀಗರು ಬಂದ ಬಿಟ್ಟರು. ಸರಿ ಇಬ್ಬರೂ ನಾಷ್ಟಾ ಮಾಡಿ ಹೊಂಟವಿ. ಮುಂದ ದಾರಿ ಒಳಗ ಮಾತಾಡ್ತ – ಮಾತಾಡ್ತ ನಮ್ಮ ಕೊಪ್ಪಳ ಬೀಗರು ಹೇಳಿದರು ” ಮೂರ ಹೆಣ್ಣ ಮದುವಿ ಮಾಡಿದಾಗೂ ಇಷ್ಟ ಕಷ್ಟ ಆಗಿರಲಿಲ್ಲ, ಆದರ ಈ ಗಂಡಸ ಮಕ್ಕಳಿಗೆ ಹೆಣ್ಣ ಹುಡಕೋದರಾಗ ನಾವ ಹಣ್ಣ ಆದಿವಿ” ಅಂತ ತಮ್ಮ ದು:ಖ ತೋಡ್ಕೊಂಡರು. ನಾ ಅಂದೆ ಧೈರ್ಯಾ ತೊಗೊಳ್ರಿ, ದೇವರ ದೊಡ್ಡಂವ ಇದ್ದಾನ ಅಂದೆ.
ವಿಠೋಭ ಗಲ್ಲಿ ಹಳೇ ವಿಠೋಭ ದೇವರ ಗುಡ್ಯಾಗ ಈ ಸುಯೋಗ ಕೇಂದ್ರ, ಎದರಿಗೆ ವಿಠೋಭಾ-ಋಕ್ಮಿಣಿ ಜೊಡಿಲೇ ನೊಂದಣಿ ಮಾಡ್ಕೊಳ್ಳಿಕ್ಕೆ ನಿಂತಿದ್ದರು. ಆ ವಿಠೋಭನ್ನ ನೋಡಿದ ಕೂಡಲೇನ ಅನಸ್ತು ‘ಅಲೆ..ಅಲೆ..ಎಲ್ಲಿ ಹೊಗ್ಯಾವ ಎಲ್ಲಾ ಬ್ರಹ್ಮಣರ ಕನ್ಯಾ’ ಅಂತ. ಹಿಂದ ದ್ವಾಪರ ಯುಗದಾಗ ಸಾವಿರಗಟ್ಟಲೇ ಕನ್ಯಾ ತಾ ಒಬ್ಬನ ಮಾಡ್ಕೊಂಡಾ, ಅದರ ಪರಿಣಾಮ ಇವತ್ತ ಕಲಿಯುಗದಾಗ ನಮಗ ಕನ್ಯಾ ಇಲ್ಲದಂಗ ಆಗೇದ ಅನಕೋಂಡೆ. ಇಲ್ಲೆ ನೋಡಿದ್ರ ಇವನ ಕನ್ಯಾ ಕಾಯಲಿಕ್ಕೆ ನಿಂತಾನ, ಇವನ ಕೈಯಾಗಿಂದ ಪಾರಾಗಿ ನಮಗ ಕನ್ಯಾ ಯಾವಾಗ ಬರಬೇಕು ಅನಸ್ತು. ಆದರೂ ದೇವರು ಹಂಗೆಲ್ಲಾ ಅನ್ಕೊಬಾರದು ಅಂತ ಕೈ ಮುಗದ ಬಲಗಾಲ ಒಳಗಿಟ್ಟ ಹೋದವಿ. ಒಂದ ಟೇಬಲ್ ಮ್ಯಾಲೆ ಕನ್ಯಾದ್ದ ಒಂದೆರಡ ಫೈಲು ಇನ್ನೋಂದ ಟೇಬಲ್ ಮ್ಯಾಲೆ ವರದ್ದ ಒಂದ ಹತ್ತ – ಹನ್ಯಾರಡ ಫೈಲು ಇಟ್ಟಿದ್ದರು. ಕನ್ಯಾದ ಫೈಲ್ ಮುಂದ ರೇಶನ್ ಅಂಗಡ್ಯಾಗ ಚಿಮಣೀ ಎಣ್ಣಿಗೇ ಪಾಳೇ ಹಚ್ಚಿದಂಗ ವರನ ಅವ್ವಾ-ಅಪ್ಪಾ ಸಾಲಾಗಿ ನಿಂತಿದ್ದರು. ವರನ ಫೈಲ್ ಮ್ಯಾಲೆ ಬರೇ ನೋಣಾನ ಮುಕರಿದ್ದವು. ಬಹುಶ: ಅವೂ ಗಂಡ ನೋಣಾನ ಇರಬಹುದು. ವರನ್ನೇಲ್ಲಾ ಅವರವರ ಡಿಗ್ರಿ ತಕ್ಕ ಫೈಲ್ ಮಾಡಿದ್ರು.’ವರಗಳು ಬಿ.ಇ.’ ಅನ್ನೋ ಫೈಲ್ ಮಾತ್ರ ಟೇಬಲ್ ಟೇಬಲ್ ತಿರಗಲಿಕ್ಕೆ ಹತ್ತಿತ್ತು. ಉಳಿದದ್ದ ವರಗಳ ಫೈಲ್ ಮ್ಯಾಲೆ ಧೂಳ ಮುಕರಿತ್ತು. ಅಷ್ಟರಾಗ ನನ್ನ ಕಣ್ಣ ಎದರಿಗೆ ಕಂಬದ ಮ್ಯಾಲೆ ಹಾಕಿದ್ದ ನೋಟಿಸ ಮ್ಯಾಲೆ ಹೋತ. ಅದರಾಗ ” ಎಸ್.ಎಸ್.ಎಲ್.ಸಿ, ಪಿ .ಯು.ಸಿ, ಬಿ.ಎ, ಬಿ.ಕಾಮ್,ಬಿ.ಎಸ್ಸಿ ಮತ್ತು ಡಿಪ್ಲೋಮಾ ಕಲಿತ ಮತ್ತು ಖಾಸಗಿ ನೌಕರಿ ಮಾಡುವ ವರಗಳ ನೋಂದಣಿ ಮಾಡಿಕೊಳ್ಳುವದಿಲ್ಲ, ಯಾಕಂದರೆ ಬ್ರಾಹ್ಮಣ ಸಮಜದಲ್ಲಿ ಕನ್ಯಾ ಸಂಖ್ಯೆ ಕಡಿಮೆ ಇವೆ. ಸಹಕರಿಸಿ” ಅಂತ ಬರೆದಿದ್ದರು. ಅದನ್ನ ನೋಡಿ ‘ಎನಪಾ ದೇವರ ಎನ ಬಂತಪಾ ಕಾಲ ಅನಕೊಂಡೆ.’ ಅಲ್ಲಾ, ‘ಬಿ.ಎ, ಬಿ.ಕಾಮ್,ಬಿ.ಎಸ್ಸಿ ಮಾಡಿದವರ ಎನ ಗಂಡಸರು ಅಲ್ಲೇನು? ಖಾಸಗಿ ನೌಕರಿ ಮಾಡೋವ ಎನ ಹೆಂಡತಿ ಚಾಕರಿ ಮಾಡಂಗಿಲ್ಲೇನ್’ ಅನಸ್ತು.
ಅಷ್ಟರಾಗ ನಮ್ಮ ನೊಂದಣಿ ಪಾಳಿ ಬಂತು.” ಒಂದ ವರಕ್ಕ ಎಷ್ಟರಿ ಅಂತ ಕೇಳಿದೆ”
“೨೦೦ ರೂಪಾಯಿ” ಅಂದರು.
“ನಮ್ಮವು ಮೂರ ವರಾ ಅವ, ನೋಡಿ ತೊಗೋಳ್ರಿ” ಅಂದೆ
“ಗಾಂಧಾರಿ ಬಂದರನು ಒಂದ ವರಕ್ಕ ಎರಡ ನೂರ” ಅಂದ್ರು. ಅದರ ಅರ್ಥ ನೂರ ಹಡದವರ ಮುಂದ ಮೂರ ಹಡದವರದು ಏನು ಅಂತ.
“ಆಷಾಢ ಮಾಸ ಅಲಾ, ಅದಕ್ಕ ಏನರ ಡಿಸ್ಕೌಂಟು ಅಂತ ಕೇಳಿದೆ, ಹಂಗ್ಯಾಕ ಸಿಟ್ಟಿಗೆ ಎಳ್ತಿರಿ” ಅಂದೆ
“ಅಂದರ ಪಕ್ಷ ಮಾಸ ದಾಗ ಪುಕಶೆಟ್ಟೆ ಹೆಸರ ಹಚ್ಚಕೋ ಬೇಕಾಗ್ತದ.”ಅಂದರು. ಇವರೂ ಹೆಣ್ಣಿನವರ ಪೈಕಿನ ಅಂತ ಅನಸ್ತು.
‘ಕನ್ಯಾಕ್ಕ ನೋಡಿ ತೊಗೋತೇವಿ. ವರಕ್ಕಲ್ಲಾ, ಕನ್ಯಾ ಇದ್ದರ ತೊಗಂಬರಿ’ ಅಂದರು. ಕನ್ಯಾ ನಮ್ಮ ಕಡೆ ಇದ್ದರ ಇಲ್ಲಿಗೆ ಯಾಕ ಬರತಿದ್ವಿ ಅಂತ ಸುಮ್ಮನ ನಮ್ಮ ಬೀಗರು ೬೦೦ ರೂಪಾಯಿ ತಗದ ಕೊಟ್ಟರು. ಈ ವರಾ-ಕನ್ಯಾದ ಅನುಪಾತನರ ತಿಳ್ಕೋಳೊಣಾ ಅಂತ
“ಅಲ್ಲಾ, ಅಜಮಾಸ ಒಂದ ವರಕ್ಕ ಎಷ್ಟ ಕನ್ಯಾ ಅವ” ಅಂದೆ. ಅವರು ಒಂದ ಸಲಾ ನನ್ನ ಮಾರಿ ನೋಡಿ
“ಆರ ವರಕ್ಕ ಒಂದ ಕನ್ಯಾನೂ ಹುಟ್ಟವಲ್ವು” ಅಂದರು. ಅರೇ! ಕರ್ಣನೂ ಪಾಂಡವರ ಕಡೇನ ಬಂದನಲಾ ಅನಸ್ತು.
“ಹಿಂಗಾದರ ಮುಂದ ಹೆಂಗರಿ” ಅಂದೆ. ಮತ್ತೋಮ್ಮೆ ನನ್ನ ಮಾರಿ ನೋಡಿದ್ರು.
“ನೀವು ಬರೇ ಹೆಣ್ಣ ಹಡೀರೀ, ಎಲ್ಲಾ ಸರಿ ಹೋಗ್ತದ” ಅಂತ ನಕ್ಕರು.
“ಅನ್ನಂಗ ನಿಮ್ಮ ಹುಡುಗರು ಏನ ಮಾಡತಾರ” ಅಂತ ಕೇಳಿದ್ರು. ನಮ್ಮ ಮಾವಾ ‘ಮೂರು ಮಂದಿ ಬೆಂಗಳೂರಾಗ ಸಾಫ್ಟವೇರ ಇಂಜಿನಿಯರ ಇದ್ದಾರಿ’ ಅಂದ್ರು. ನಮ್ಮ ಹಿಂದ ಪಾಳೆ ಹಚ್ಚಿದವರು ಯಾರೋ ಒಬ್ಬರು ‘ಲೋಚ್ಚ್’ ಅಂದರು. ನಾ ‘ಯಾಕ ಏನಾತರಿಪಾ’ ಅಂದೆ.
“ಅಲ್ರಿ ಒಂದ ಮನ್ಯಾಗ ಮೂರ್-ಮೂರ್ ವರಾ, ಅದು ಎಲ್ಲಾರೂ ಸಾಫ್ಟವೇರ ಇಂಜಿನಿಯರು. ಹಿಂಗಾದರ ಉಳದ ಗಂಡ ಹಡದವರು ಏನ ಮಾಡಬೇಕು,ಈಗ ನೋಡ್ರಿ ಮೂರ ಕನ್ಯಾ ನಿಮ್ಮ ಮನಿಗೇ ಹೋಗತಾವ” ಅಂತ ಮತ್ತೊಮ್ಮೆ ‘ಲೋಚ್ಚ್’ ಅಂದರು. ನನಗ ತಲಿ ಗಿರ್ರ್ ಅಂತು.
“ಯಾಕ ಆವಾಗ ಬರೇ ಗಂಡ ಹಡಿಬೇಕಾರ ತಿಳಿಲಿಲ್ಲ ಎನ, ೨೦-೨೫ ವರ್ಷದ ಹಿಂದ ನಿಮ್ಮಂತಾವರ ಮಾಡಿದ್ದ ತಪ್ಪ ಈಗ ನಾವ ಅನುಭವಿಸಲಿಕ್ಕೆ ಹತ್ತೇವಿ. ಸಮಾಜದಾಗ ಕನ್ಯಾ ಕಡಿಮಿ ಆಗಿದ್ದ ನೀವ ಕಡಿಮಿ ಹೆಣ್ಣ ಹಡದಿದ್ದಕ್ಕ. ಆವಾಗ ಹೆಣ್ಣ ಹಡ್ಯೊ ವಯಸ್ಸನಾಗ ಹುಡಗಾಟ ಮಾಡಿ ಬರೇ ಗಂಡ ಹಡದ್ರಿ, ಈಗ ಅದ ಹೆಣ್ಣ ಸಂಬಂಧ ಹೊಡದಾಡಲಿಕ್ಕೆ ಹತ್ತಿರಿ. ಮುಂದ ಹೆಂಗ ಅಂತ ಆವಾಗ ಎನರ ವಿಚಾರ ಮಾಡಿದ್ರೇನ್? ಆವಾಗ ಹಡಿಬೇಕಾರ ಎಲ್ಲಾರು ಒಂದ ಗಂಡು -ಒಂದ ಹೆಣ್ಣು ಹಡದಿದ್ದರ ಇವತ್ತ ಈ ಪ್ರಸಂಗ ಬರತಿತ್ತೇನ್?ಇನ್ನೊಂದ ಸ್ವಲ್ಪ ದಿವಸ ತಡಿರಿ, ನಿಮ್ಮ ಮಗಾ ಅವರ ಮಗನ ಜೊತಿ ಓಡಿ ಹೋಗ್ತಾನ, ಹೆಂಗಿದ್ದರು ಈಗ ಸಲಿಂಗ ಮದುವಿಗೆ ಸರ್ಕಾರನು ಸೈ ಅಂದದ.” ಅಂತ ಒಂದ ಉಸಿರನಾಗ ಭಾಷಣ ಮಾಡಿದೆ. ಯಾರು ಚಪ್ಪಾಳಿ ಹೊಡಿಲಿಲ್ಲಾ. ಎಲ್ಲಾರು ನನ್ನ ಮಾರಿನ ನೋಡ್ಕೊತ ನಿಂತರು.
ಸರಿ ಮೂರು ವರಾ ನೋಂದಣಿ ಮಾಡಿ ಕನ್ಯಾದ್ದ ಫೈಲ್ ನೋಡ್ಲಿಕ್ಕೆ ಕ್ಯೂ ದಾಗ ನಿಂತವಿ. ಹಂಗ ಮಾತಾಡ್ತಾ-ಮಾತಾಡ್ತಾ ಉಳದ ಗಂಡ ಹಡದ ಮಹಾನುಭಾವರ ದು:ಖ ಹಂಚಗೊಳ್ಳಿಕ್ಕೆ ಶುರು ಮಾಡಿದ್ವಿ. ಹೆಣ್ಣ ಹಡದವರು ಕನ್ಯಾದ ಜಾತಕ ಕೋಡೊಕ್ಕಿಂತ ಮುಂಚೆನ ಹೇಂಗ -ಹೇಂಗ ಕೇಳ್ತಾರ ಅನ್ನೋ ವಿಷಯ ಬಂತು. ಒಂದಿಷ್ಟು ಹೆಣ್ಣ ಹಡದವರ ನುಡಿ ಮುತ್ತುಗಳು ಹೊರಗ ಬಂದವು.
‘ ಈ ವರಕ್ಕ ಅವ್ವಾ-ಅಪ್ಪಾ ಇದ್ದಾರೇನು?’ ‘ಅವರದು ಭಾಳ ವಯಸ್ಸ ಆಗ್ಯಾವೇನು ? ಕೈ ಕಾಲ ಘಟ್ಟೆ ಅವನೋ ಇಲ್ಲೊ ಮತ್ತ’ಶುಗರು , ಬಿ.ಪಿ. ಎಲ್ಲಾ ಹೆಂಗದ?’
‘ ಈ ವರಕ್ಕ ಅಕ್ಕಾ- ತಂಗಿ ಎಷ್ಟಮಂದಿ?’ ‘ನಿಮ್ಮ ಅಳಿಯಂದರ ಏನ ಮಾಡ್ತಾರ್?”ಒಟ್ಟ ಎಷ್ಟ ಮಂದಿ ಮೊಮ್ಮಕ್ಕಳು ?’
‘ನಿಮ್ಮ ಮನ್ಯಾಗ ಮಡಿ-ಮೈಲಗಿ ಭಾಳ ಎನ ಮತ್ತ?’
‘ಲಗ್ನ ಆದ ಮ್ಯಾಲೆ ಅವ್ವಾ-ಅಪ್ಪನ ಜೊತಿನ ಇರೊರೋ? ಇಲ್ಲಾ ಬ್ಯಾರೆ ಮನಿ ಮಾಡೋರೊ?’
‘ಅಲ್ಲಾ, ನಿಮ್ಮ ಮನ್ಯಾಗ ಜೀನ್ಸ್,ಟಿ-ಶರ್ಟ್ ನಡಿತದ ಇಲ್ಲೋ?’
ಇನ್ನು ಹರಾ ಇಲ್ಲಾ ಶಿವಾ ಇಲ್ಲಾ ಈಗ ಇಷ್ಟ ಪ್ರಶ್ನೆ, ಇನ್ನ ಏನರ ಕನ್ಯಾ ಪಸಂದ ಬಂದರ ಎಷ್ಟ ಪ್ರಶ್ನೆ ಕೇಳಬಹುದು
ವಿಚಾರ ಮಾಡ್ರಿ. ಯಾ ಮಟ್ಟಕ್ಕ ಬಂದದ ಅಂದ್ರ, ಹೆಣ್ಣಿನವರು ‘ನಿಮ್ಮ ಮನ್ಯಾಗ ತಿಂಗಳಿಗೆ ಮೂರ ದಿವಸ ಕೂಡಸ್ತೇರೇನು?’ ಅಂತ ಸಹಿತ ಕೇಳ್ತಾರ.
ಅಂತು-ಇಂತು ನೊಂದಣಿ ಕಾರ್ಯಕ್ರಮ ಮುಗೆಸಿಕೊಂಡ ವಿಠೋಭಗ ಇನ್ನೊಮ್ಮೆ ಕೈ ಮುಗದ ‘ ನಾ ಮನಸ್ಸನಾಗ ಮಾತಾಡಿದ್ದನ್ನ ಮನಸಿಗೆ ಹಚ್ಚಗೊ ಬ್ಯಾಡಪಾ, ನಮ್ಮ ಹುಡುಗರಿಗೂ ಕನ್ಯಾ ಹುಡಕಿ ಕೊಡು’ ಅಂತ ಹೇಳಿ ಅಲ್ಲಿಂದ ಹೊಂಟವಿ. ಮಧ್ಯಾಹ್ನ ಊಟಾ ಮಾಡಿ ಕೊಪ್ಪಳ ಬೀಗರು ಬಸ್ ಹತ್ತಬೇಕಾರ ತಮ್ಮ ಮಕ್ಕಳ ಬಗ್ಗೆ ಭಾಳ ಆಶಾವಾದಿ ಯಾಗಿದ್ದರು. ಇವತ್ತಿಲ್ಲಾ ನಾಳೇ ಅವರ ಮಕ್ಕಳಿಗೆ ಕನ್ಯಾ ಸಿಕ್ಕ-ಸಿಗತದ ಅನ್ನೋ ವಿಶ್ವಾಸ ಅವರ ಮನಸ್ಸನಾಗ ಮೂಡಲಿಕತ್ತಿತ್ತು. ಯಾಕಂದರ ಅವರ ಮಕ್ಕಳು ಬಿ.ಇ. ಮಾಡಿ ಸಾಫ್ಟ ವೇರ್ ಕಂಪನ್ಯಾಗ ಕೆಲಸಾ ಮಾಡೋದು. ಇನ್ನ ಅವರಿಗೆ ಕನ್ಯಾ ಸಿಗಲಿಲ್ಲಾ ಅಂದರ ಹೆಂಗ.
ಈ ಸಾಫ್ಟವೇರ ವರಾ ಅಂದಾಗ ಇನ್ನೊಂದ ಪ್ರಸಂಗ ನೆನಪಾತು. ಸುಮಾರ ಎರಡ ವರ್ಷದ ಹಿಂದಿನ ಮಾತು. ನಮ್ಮ ಬೀದರ ಬಹಾದ್ದೂರ ದೇಸಾಯಿ ಹೆಂಡತಿ ವೀಣಾ ಒಂದ ದಿವಸ ಮಟ-ಮಟಾ ಮಧ್ಯಾಹ್ನದಾಗ ಫೊನ್ ಮಾಡಿ ‘ನಿಮ್ಮ ಕಡೆ ಯಾವರ ಕನ್ಯಾ ಇದ್ದರ ಲಗೂನ ಹೇಳಪಾ, ನಮ್ಮ ತಮ್ಮಾ ಈ ಸಲ ಕಾರ್ತಿಕ ಒಳಗ ೧೫ ದಿವಸ ರಜಾ ತೊಗಂಡ ಬರೋಂವ ಇದ್ದಾನ, ಅವಂದ ಲಗ್ನ ಮಾಡಿನ ಕಳಸ ಬೇಕು’ ಅಂದ್ಲು. ಅವರ ತಮ್ಮ ಲಂಡನ್ ಒಳಗ ಟಿ.ಸಿ.ಎಸ್ ನಾಗ ಕೆಲಸಾ ಮಾಡತಿದ್ದ. ನಾ ಅಂದೆ
‘ಮದ್ಲ ಇಲ್ಲೇ ಕನ್ಯಾನ ಇಲ್ಲಾ, ಅದರಾಗ ೧೫ ದಿವಸದಾಗ ಲಗ್ನ ಅಂತಿ, ಹೆಂಗ ಸಾಧ್ಯ’
” ಅದರಾಗ ಎನ್, ನಮ್ಮ ತಮ್ಮ ಸಾಫ್ಟವೇರ ಇಂಜಿನಿಯರ, ಕನ್ಯಾ ಸಿಕ್ಕ ಸಿಗತಾವ.ಆದರ ನಂಬದ ಒಂದ ಕಂಡಿಶನ್ ೧೫ ದಿವಸದಾಗ ಲಗ್ನ ಆಗಬೇಕು”.
‘ಅಲ್ಲವಾ, ೧೫ ದಿವಸದಾಗ ೩-೪ ಕನ್ಯಾ ನೋಡಿ, ಒಂದ ಫಿಕ್ಸ್ ಮಾಡ್ಕೊಂಡ,ನಿಶ್ಚಯ ಮಾಡಿ, ೨-೩ ಗಡಿಗನೀರ ( ಇಳೆ), ದೇವರ ಊಟಾ, ಸೋಡ ಮುಂಜವಿ ಆಮೇಲೆ ಲಗ್ನ, ಎಲ್ಲಾ ಹೆಂಗ ಸಾಧ್ಯವಾ ನಮ್ಮವ್ವಾ” ಅಂದೆ.
” ಯಾಕ ಆಗಂಗಿಲ್ಲಾ, ಎಲ್ಲಾ ಆಗತದ. ಎಲ್ಲಾ ಕಾರ್ಯಕ್ರಮ ಮನಿ ಪೂರ್ತೇಕ ಮಾಡೋದಪಾ ಮತ್ತ್’ಅಂದ್ಲು.
ನಾ ಅಂದೆ ‘ಸುಮ್ಮನ ಒಂದ ಕೆಲಸಾ ಮಾಡ, ನಿನ್ನ ಮಗಳನ್ನ ಕೊಟ್ಟ ಮದುವಿ ಮಾಡ ನಿನ್ನ ತಮ್ಮಗ .( ಅಕಿಗ ಒಂದ ೫ ವರ್ಷದ ಮಗಳ ಇದ್ದಾಳ) ಮದುವಿನೂ ಮನಿ ಒಳಗ – ಮನಿ ಪೂರ್ತೇಕ ಆಗತದ.’ಅಂದೆ
” ಏ ನೀ ಸುಮ್ಮನಿರ, ಏನರ ಹುಚ್ಚರಂಗ ಮಾತಾಡಬ್ಯಾಡ, ಸಿರಿಯಸ್ಸಾಗಿ ಒಂದಿಷ್ಟ ಕನ್ಯಾ ನೋಡ” ಅಂತ ಆರ್ಡರ ಮಾಡಿದ್ಲು.
ನಾ ಆತ ತಗೊವಾ ನೋಡ್ತೇನಿ ಅಂದೆ. ಹುಡಗನ ಹಿಸ್ಟರಿ ತೊಗೊಂಡೆ. ಕೊನೆಗೆ ಫೊನ್ ಇಡಬೇಕಾರ
” ಅಲ್ಲಾ, ನಿನ್ನ ತಮ್ಮಾ ಇನ್ನೋಂದ ವಾರ ಜಾಸ್ತಿ ರಜಾ ತಗೊಂಡರ ‘ಕುಬಸಾನು’ ಮುಗಿಸಿಕೊಂಡ ಹೋಗಬಹುದಿತ್ತು” ಅಂದೆ.
‘ಯಾರದು’ ಅಂದ್ಲು.
” ಅವನ ಹೆಂಡತಿದ, ಮತ್ತ್ಯಾರದು? ೧೫ ದಿವಸದಾಗ ಲಗ್ನಾನ ಮಾಡಲಿಕ್ಕೆ ಹೊಂಟಿರಿ. ಇನ್ನೊಂದ ವಾರದಾಗ ಕುಬಸಾನೂ ಮಾಡಿ ಕಳಸರಿ ಮತ್ತ. ಪಾಪಾ ಅವಂಗ ಮುಂದ ಕುಬಸಕ್ಕ ರಜಾ ಸಿಗಂಗಿಲ್ಲಾ” ಆಂದೆ. ಅಕಿಗೆ ಸಿಟ್ಟ ಬಂತ. ಬೈಕೋತ ಫೊನ್ ಇಟ್ಟಳು. ಆ ಹುಡುಗಂದ ಲಗ್ನ ಮೊನ್ನೆ ಒಂದ ಆರ ತಿಂಗಳ ಹಿಂದ ಆತು. ನನಗೇನ ಕರಿಲಿಲ್ಲ. ನಾನೂ ‘ಆಯೆರ’ ಉಳಿತ ಬಿಡ ಅಂತ ಸುಮ್ಮನಾದೆ. ಹಿಂಗೂ ಇರತಾವ ಸಾಫ್ಟವೇರ ವರಾ.
ಪಾಪಾ ‘ಬೇಡಿ-ಬಯಸಿ’ ಗಂಡ ಹಡದವರದು ಎಂಥಾ ಹಣೇಬರಹ ಬಂತಪಾ, ಅದರಾಗ ಬಿ.ಎ, ಬಿ.ಕಾಮ್,ಬಿ.ಎಸ್ಸಿ ಮಾಡಿ ಖಾಸಗಿ ನೌಕರಿ ಮಾಡೊ ಹುಡುಗರು ಎಲ್ಲೇ ಒಂದ ದಿವಸ ‘ಜೀವನದಲ್ಲಿ ಜಿಗೂಪ್ಸೆ’ ಹೊಂದತಾರೋ ಅಂತ ಅನಸಲಿಕತ್ತದ. ನಾ ಎಷ್ಟ ಪುಣ್ಯಾ ಮಾಡೇನಿ ‘ಬಿ.ಎಸ್ಸಿ ಮಾಡಿ ಖಾಸಗಿ ನೌಕರಿ ಮಾಡ್ಕೊಂಡೂ ಎರಡ ಮಕ್ಕಳನ್ನ’ಹಡೆಯುವ ಸೌಭಾಗ್ಯ ಸಿಕ್ಕತಲಾ ಅಂತ ಸಮಾಧಾನ ಪಟ್ಟೆ.
ಈ ವಿಷಯ ಸದ್ಯೇಕ ಇಲ್ಲಿಗೆ ಮುಗಸೋಣ , ಮತ್ತ ಪ್ರಸಂಗ ಬಂದಾಗ ತಗ್ಯೋಣ ಅಂತ. ನೀವ ಏನಂತಿರಿ ?