Advertisement
ಬಾಯಲ್ಲಿರುವ ಬಿಸಿ ತುಪ್ಪವೇ!: ಗುರುಪ್ರಸಾದ ಕುರ್ತಕೋಟಿ ಸರಣಿ

ಬಾಯಲ್ಲಿರುವ ಬಿಸಿ ತುಪ್ಪವೇ!: ಗುರುಪ್ರಸಾದ ಕುರ್ತಕೋಟಿ ಸರಣಿ

ಎಲ್ಲ ಅಡ್ಡಾಡಿ ಆದ ನಂತರ ಒಂದು ಕುರಿಯನ್ನು ಕರೆದು ತಂದು ಒಂದು ಕಟಕಟೆಯ ಮೇಲೆ ನಿಲ್ಲಿಸಿದಳು. ಕತ್ತಿ ತೊಗೊಂಡು ಕಡೆದೇ ಬಿಡುತ್ತಾಳೆಯೇ ಅಂತ ಭಯ ಆಯ್ತು. ಅವಳು ಅದನ್ನು ನಿಲ್ಲಿಸಿದ್ದು ಅವತ್ತು ಬಂದಿದ್ದ ಅತಿಥಿಗಳ ಅಮೃತ ಹಸ್ತಗಳಿಂದ ಅದರ ಹಾಲು ಹಿಂಡಿಸಲು ಅಂತ ತಿಳಿದು ತುಸು ಸಮಾಧಾನ ಆಯ್ತು. ಅದರ ಮುಂದೆ ಒಂದಿಷ್ಟು ಹುಲ್ಲು ತಿನ್ನಲು ಕೊಟ್ಟರು. ಅವತ್ತು ಆಗಮಿಸಿದ್ದ ಒಬ್ಬೊಬ್ಬರಿಗೆ ಕರೆದು ಕುರಿಯ ಹಾಲು ಹಿಂಡಿ ಅಂತ ಹೇಳಿದಳು. ಎಲ್ಲರೂ ತಮಗೆ ತಿಳಿದ ರೀತಿಯಲ್ಲಿ ಹಿಂಡಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದರೆ ಕುರಿ ಎಷ್ಟು ಒದ್ದಾಡುತ್ತಿತ್ತೋ ಅಂತ ಬೇಜಾರಾಯ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹನ್ನೊಂದನೆಯ ಬರಹ

ಒಮಾಹಕ್ಕೆ ಬಂದು ಅದಾಗಲೇ ಕೆಲವು ತಿಂಗಳುಗಳು ಕಳೆದಿದ್ದವು. Google ನಲ್ಲಿ ನೋಡಿದ್ದಾಗ ಅಲ್ಲಿನ ಕೆಲವು ಪ್ರಾಂತ್ಯಗಳಲ್ಲಿ ಕೃಷಿ ಮಾಡುತ್ತಾರೆ ಅಂತ ಮೊದಲೇ ತಿಳಿದಿತ್ತು. ಆದರೆ ಅಂತಹ ಯಾವುದೇ ಕೃಷಿಭೂಮಿಗೆ ಹೋಗಲು ಇನ್ನೂ ಸಾಧ್ಯವಾಗಿರಲಿಲ್ಲ. ಹಾಗೆ ಯಾರೋ ಒಬ್ಬರ ಬಳಿ ಪ್ರಸ್ತಾಪಿಸಿದಾಗ ಹತ್ತಿರದ ಒಂದು ಹಳ್ಳಿಯಲ್ಲಿ ಒಬ್ಬ ರೈತರು ಹಸುವಿನ ತಾಜಾ ಹಾಲನ್ನು (raw milk) ಮಾರುತ್ತಾರೆ ಅಂತ ತಿಳಿಯಿತು. ಹೆಚ್ಚಾಗಿ ಅಲ್ಲಿನ ಅಂಗಡಿಗಳಲ್ಲಿ, ಇಲ್ಲಿ ಪ್ಯಾಕೆಟ್‌ನಲ್ಲಿ ಸಿಗುವ ಹಾಗೆ ಹಾಲಿನ 5 ಲಿಟರಿನ ಕ್ಯಾನ್ ಸಿಗುತ್ತಿತ್ತು. ಆದರೆ ಅದು ಈಗಾಗಲೇ ಸಂಸ್ಕರಿಸಿರುವ ಹಾಲು. ಹೀಗಾಗಿ ಎಲ್ಲಾದರೂ ತಾಜಾ ಹಾಲು ಸಿಕ್ಕರೆ ಒಳ್ಳೆಯದಲ್ಲವೇ ಅಂತ ಯೋಚಿಸುತ್ತಿದ್ದಾಗ, ಹೀಗೊಂದು ಸುದ್ದಿ ಬಂದಿದ್ದು ನನಗೆ ಹಾಲು ಕುಡಿದಷ್ಟೇ ಸಂತಸ ನೀಡಿತು!

ಸರಿ ನಮ್ಮ ಟೊಯೊಟಾ ಕಾರ್‌ನಲ್ಲಿ ಹೊರಟೆ ಬಿಟ್ಟೆವು. ಗೂಗಲವ್ವ ಜೊತೆಗೆ ಇದ್ದುದರಿಂದ ನಮಗೆಂತಹ ಭಯ. ಅವಳು ಬಲ ಅಂದರೆ ಬಲಕ್ಕೆ, ಎಡ ಹೇಳಿದರೆ ಎಡಕ್ಕೆ.. ಇಲ್ಲವಾದರೆ ನೇರಕ್ಕೆ ಓಡಿಸಿಕೊಂಡು ಹೊರಟೆ. ಪಕ್ಕದಲ್ಲಿ ಹೆಂಡತಿ, ಹಿಂದೆ ಮಗಳು ಕೂತಿದ್ದರು. ಮಕ್ಕಳನ್ನು ಒಂದು ವಯಸ್ಸಿನವರೆಗೆ ಮುಂದುಗಡೆ ಕೂಡಿಸುವುದು ಅಲ್ಲಿ ನಿಷಿದ್ಧ. ಅಲ್ಲಿನ ಎಲ್ಲಾ ನಿಷೇಧಗಳನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುವ ನಮ್ಮ ಭಾರತೀಯರು ಇಲ್ಲಿ ಬಂದಾಗ ಮಾತ್ರ ಮಾತು ಕೇಳದ ಉಡಾಳ ಮಕ್ಕಳಂತೆ ವರ್ತಿಸುವುದು ಏಕೋ.. ನನಗಿನ್ನೂ ಅರ್ಥವಾಗದ ಸಂಗತಿ!

ಹಾಗೆ ಕೆಲವು ಮೈಲಿಗಳು ಹೋದ ಮೇಲೆ ಕಚ್ಚಾ ರಸ್ತೆ ಹತ್ತಿರ ಬಲಕ್ಕೆ ತಿರುಗು ಅಂತ ಗೂಗಲವ್ವ ಆದೇಶಿದಳು. ಅದೊಂತರಹ ನಿರ್ಜನ ಪ್ರದೇಶವಾಗಿತ್ತು. ನನಗೆ ಸೂಸನ್ ಹೇಳಿದ್ದು ನೆನಪಾಯ್ತು. ಅಪರಿಚಿತರು, ಅದೂ ಭಾರತೀಯರು ಅಂತ ಕಂಡು ನಮಗೆ ಗುಂಡು ಹೊಡೆದುಬಿಟ್ಟರೆ ಅಂತ ಭಯ ಆಯ್ತು. ಕಾರಿನಲ್ಲಿ ಇದ್ದಿದ್ದರಿಂದ ಗುಂಡು ಹೊಡೆದರು ಅಷ್ಟು ಸುಲಭದಲ್ಲಿ ತಾಗಲಾರದು ಎಂಬ ಏನೇನೋ ಯೋಚನೆಗಳು ಬಂದು, ಅಂತೂ ಗಟ್ಟಿ ಧೈರ್ಯ ಮಾಡಿ ಕಚ್ಚಾ ರಸ್ತೆಯಲ್ಲಿ ವೀರ ಯೋಧನಂತೆ ನುಗ್ಗಿದೆ. ಕೊನೆಗೆ ಅಂತೂ ನಿಮ್ಮ destination ಗೆ ತಲುಪಿದ್ದೀರಿ ಅಂತ ಗೂಗಲವ್ವ ಹೇಳಿದಾಗ ಒಂದು ದೊಡ್ಡ ಮರದ ಕೆಳಗೆ ನಿಂತಿದ್ದೆವು. ಅಲ್ಲಿ ಸುತ್ತಲೂ ನೋಡಿದಾಗ ನನಗೆ ಎಷ್ಟು ಖುಷಿಯಾಯ್ತು ಅಂದರೆ ಅದು ನಮ್ಮ ಭಾರತದ ಹಳ್ಳಿಯ ತರಹವೇ ಇತ್ತು. ಅಲ್ಲಿ ಇಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕೃಷಿ ಪರಿಕರಗಳು, ಅತ್ತಿತ್ತ ಚಟುವಟಿಕೆಯಿಂದ ಅಡ್ಡಾಡುತ್ತಿದ್ದ ಕೋಳಿಗಳು, ಬಾತುಕೋಳಿಗಳು, ದೊಡ್ಡ ಗಾತ್ರದ ಹಸುಗಳು, ಘೆಂಡಾ ಮೃಗದಷ್ಟೆ ದಷ್ಟಪುಷ್ಟ ಹಂದಿಗಳು, ಸುತ್ತಲೂ ಹೊಲಗಳಲ್ಲಿ ಹಸುರು ಬೆಳೆಗಳು, ಒಂದಿಷ್ಟು ಮರಗಳನ್ನು ನೋಡಿ, ಅಂತೂ ಒಳ್ಳೆಯ ಜಾಗಕ್ಕೆ ಬಂದೆವು ಅಂತ ಖುಷಿಯಾಯ್ತು.

ಅಲ್ಲಿದ್ದ ರೈತರನ್ನು ಮಾತಾಡಿಸಿದೆ. ಅವರು ಕೂಡ ನಮ್ಮ ಪ್ರಗತಿಪರ ರೈತರಂತೆಯೆ ಜೀನ್ಸ್ ಹಾಕಿದ್ದರು! ಅವರ ಮನೆಯ ಪಕ್ಕದಲ್ಲಿ ಹಾಲಿನ ದೊಡ್ಡ ಕೋಲ್ಡ್ ಸ್ಟೋರೇಜ್ ಇತ್ತು. ಅದರಲ್ಲಿ ಹಾಲನ್ನು ಸಂಗ್ರಹಿಸಿ ಇಟ್ಟು, ಸಂಸ್ಕರಿಸಿ ಕೂಡ ಮಾರುತ್ತಿದ್ದರು. ನಮಗೆ ಸಂಸ್ಕರಿಸದೆ ಇದ್ದ ಹಾಲು ಕೊಟ್ಟರು. ಅವರ ಹೊಲದಲ್ಲಿ ಕೂಡ ಅವರೊಟ್ಟಿಗೆ ಒಂದಿಷ್ಟು ಸುತ್ತಾಡಿದೆವು. ಅವರ ಬಳಿ 60 ಸಾವಿರ ಡಾಲರಿನ ದೊಡ್ಡ ವಾಹನ ಇತ್ತು. ಅದರಲ್ಲಿಯೇ ಇಡೀ ಹೊಲವನ್ನು ಅವರು ನಿರ್ವಹಣೆ ಮಾಡುವಷ್ಟು ಅದರಲ್ಲಿ ಅನುಕೂಲ ಇತ್ತು. ನೂರಾರು ಎಕರೆಗಳನ್ನು ಬರಿ ಕೆಲಸಗಾರರನ್ನು ನಂಬಿಕೊಂಡು ನಿರ್ವಹಿಸಲು ಆಗುತ್ತೆಯೆ? ಭಾರತದಲ್ಲಿಯೂ ಕೂಡ ಯಂತ್ರಗಳ ಬಳಕೆ ಜಾಸ್ತಿ ಆಗುತ್ತಿದೆ. ಆದರೂ ನಮ್ಮಲ್ಲಿ ಸಣ್ಣ ಹಿಡುವಳಿದಾರರು ಹೆಚ್ಚು ಸಂಖ್ಯೆಯಲ್ಲಿ ಇರುವದರಿಂದ ಅಷ್ಟು ದೊಡ್ಡ ದೊಡ್ಡ ಯಂತ್ರಗಳನ್ನು ಎಲ್ಲರೂ ಹೊಂದುವುದು ಅಸಾಧ್ಯ. ಆದರೂ ಬಾಡಿಗೆಗೆ ತೆಗೆದುಕೊಂಡು ಎಷ್ಟೋ ಕೃಷಿ ಕಾರ್ಯಗಳನ್ನು ನಮ್ಮ ರೈತರೂ ಕೂಡ ನಿರ್ವಹಿಸುತ್ತಾರೆ.

ಅಲ್ಲಿ ಒಂದಿಷ್ಟು ಸಮಯ ಕಳೆದು, ಮತ್ತದೇ ಕಚ್ಚಾ ರಸ್ತೆಯಲ್ಲಿ ವಾಪಾಸ್ಸು ಬಂದು highway ಗೆ ಕೂಡಿಕೊಂಡು ಮನೆ ತಲುಪಿದಾಗ ಸಂಜೆ ಆಗಿತ್ತು. ಆ ತಾಜಾ ಹಸುವಿನ ಹಾಲಿನಲ್ಲಿ ಮಾಡಿದ ಚಾ ಅದ್ಭುತವಾಗಿತ್ತು!

ಅಲ್ಲಿ ಸುತ್ತಲೂ ನೋಡಿದಾಗ ನನಗೆ ಎಷ್ಟು ಖುಷಿಯಾಯ್ತು ಅಂದರೆ ಅದು ನಮ್ಮ ಭಾರತದ ಹಳ್ಳಿಯ ತರಹವೇ ಇತ್ತು. ಅಲ್ಲಿ ಇಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕೃಷಿ ಪರಿಕರಗಳು, ಅತ್ತಿತ್ತ ಚಟುವಟಿಕೆಯಿಂದ ಅಡ್ಡಾಡುತ್ತಿದ್ದ ಕೋಳಿಗಳು, ಬಾತುಕೋಳಿಗಳು, ದೊಡ್ಡ ಗಾತ್ರದ ಹಸುಗಳು, ಘೆಂಡಾ ಮೃಗದಷ್ಟೆ ದಷ್ಟಪುಷ್ಟ ಹಂದಿಗಳು, ಸುತ್ತಲೂ ಹೊಲಗಳಲ್ಲಿ ಹಸುರು ಬೆಳೆಗಳು, ಒಂದಿಷ್ಟು ಮರಗಳನ್ನು ನೋಡಿ, ಅಂತೂ ಒಳ್ಳೆಯ ಜಾಗಕ್ಕೆ ಬಂದೆವು ಅಂತ ಖುಷಿಯಾಯ್ತು.

ನನಗೆ ಕೃಷಿಯ ಬಗ್ಗೆ ಒಲವು ಇದ್ದ ಕಾರಣ, ಇನ್ನೂ ಇಂತಹ ಹಲವು ತಾಣಗಳಿಗೆ ಭೇಟಿ ನೀಡಬೇಕು ಎಂಬ ಬಯಕೆ ಇದ್ದೆ ಇತ್ತು. ಅಂಥದ್ದರಲ್ಲಿ ನೆಬ್ರಾಸ್ಕಾದ ಪಕ್ಕದ ರಾಜ್ಯ ಐಯೊವಾದಲ್ಲಿ ಒಂದು ಕುರಿ ಸಾಕಾಣಿಕೆ ಕೇಂದ್ರಕ್ಕೆ ಪಿಕ್‌ನಿಕ್ ಹೋಗೋಣ ಅಂತ ಗೆಳೆಯನೊಬ್ಬ ಪ್ರಸ್ತಾಪಿಸಿದ. ನಾನೂ ಖುಷಿಯಿಂದಲೇ ಒಪ್ಪಿದೆ. ಅಮೆರಿಕೆಯಲ್ಲಿ ಕುರಿಯ ಹಾಲು ಕೂಡ ತುಂಬಾ ಕಡೆ ಸಿಗುತ್ತದೆ. ಅದು ತುಂಬಾ ಸುಲಭವಾಗಿ ಜೀರ್ಣ ಆಗುತ್ತದೆ ಎಂಬ ಕಾರಣದಿಂದ ಮಕ್ಕಳಿಗೆ ಅದನ್ನು ಕೊಡಬಹುದು ಅಂತ ತಿಳಿಯಿತು. ಗಾಂಧೀಜಿ ಅವರ ಭಕ್ತನಾದ ನನಗೆ (ಈ ‘ಭಕ್ತಿ’ಯ ಬಗ್ಗೆ ಇನ್ನೊಮ್ಮೆ ಬರೆದೇನು!) ಕುರಿಯ ಹಾಲಿನ ಬಗ್ಗೆ ಅವರು ಹೇಳಿದ್ದು ತಲೆಯಲ್ಲಿತ್ತಾದ್ದರಿಂದ ನನ್ನ ಮಗಳಿಗೆ ಕುಡಿಯಲು ಅದರ ಹಾಲನ್ನು ಆಗಾಗ ತರುತ್ತಿದ್ದೆವು. ಛೆ ಛೆ… ನಾನು ಕುಡಿಯುತ್ತಿರಲಿಲ್ಲ. ಉತ್ಕೃಷ್ಟ ಮಟ್ಟದ ಅಲ್ಕೋಹಾಲು ಸಿಗುವ ಅಮೇರಿಕೆಗೆ ಹೋಗಿ ಕುರಿಯ ಹಾಲು ಕುಡಿಯೋದೆ?! ನಾವು ತರುತ್ತಿದ್ದ ಕುರಿಯ ಹಾಲು ಈ ತರಹದ ಫಾರ್ಮ್‌ಗಳಿಂದ ಪ್ಯಾಕ್ ಆಗಿ ಬರುತ್ತಿತ್ತು. ಅಂತಹ ಒಂದು ಫಾರ್ಮ್‌ಗೆ ಹೋಗುತ್ತಿರುವ ವಿಚಾರ ಸಹಜವಾಗಿಯೇ ನನಗೆ ಖುಷಿ ಕೊಟ್ಟಿತ್ತು.

ಬೆಳಗಾಗುವುದೇ ಕಾಯುತ್ತಿದ್ದೆ. ಅಯೋವಾದ ಕುರಿ ಸಾಕಾಣಿಕಾ ಕೇಂದ್ರಕ್ಕೆ ಹೋಗುವದಕ್ಕೆ ಮಂಜು ಎಲ್ಲ ಸಿದ್ಧತೆ ಮಾಡಿಕೊಂಡಿದ್ದ. ಅಲ್ಲಿ ದೂರ ಪ್ರವಾಸ ಹೋಗಬೇಕೆಂದರೆ ನಮ್ಮದೇ ಕಾರ್ ಒಯ್ಯಬೇಕೆಂದಿಲ್ಲ. ಬಾಡಿಗೆಗೆ ತರ ತರಹದ ಕಾರುಗಳು, ವ್ಯಾನುಗಳು ಅಲ್ಲಿ ದೊರಕುತ್ತವೆ. ಎಷ್ಟು ಸೀಟಿನ ವಾಹನ ಬೇಕು ಅಂತ ನಿರ್ಧರಿಸಿ, ಗ್ಯಾಸ್ ಹಾಕಿಸಿಕೊಂಡು ಹೊರಟರೆ ಆಯ್ತು.

ನಾನು ಸಣ್ಣವನಿದ್ದಾಗ ನಮ್ಮೂರಲ್ಲಿ ಕುರಿಗಳು ಬಹಳ ಕಾಣುತ್ತಿದ್ದವು. ಈಗಲೂ ಕಾಣುತ್ತವೆ. ಆದರೆ ನಾನು ಮಾತಾಡುತ್ತಿರುವುದು ಕುರಿ ಎಂಬ ಪ್ರಾಣಿಗಳ ಬಗ್ಗೆ! ಅವುಗಳ ದಂಡು, ಬ್ಯಾ ಬ್ಯಾ ಅನ್ನುತ್ತ ಅವು ಒಂದನ್ನೊಂದು ಹಿಂಬಾಲಿಸುವ ಪರಿ, ಆ ದಂಡನ್ನು ಕಾಯುವುದೇ ನಮ್ಮ ಗುರುತರ ಜವಾಬ್ದಾರಿ ಎಂಬಂತೆ ಅವುಗಳ ರಕ್ಷಣೆಯ ಹೊಣೆ ಹೊತ್ತು ಅತ್ತಿತ್ತ ತಿರುಗಾಡುತ್ತ ಆಗಾಗ ಬೊಗಳುತ್ತ ಅಡ್ಡಾಡುವ ಒಂದೆರಡು ಬಾಲ ಕತ್ತರಿಕೊಂಡ ಚುರುಕು ನಾಯಿಗಳು, ಚಿತ್ರ ವಿಚಿತ್ರ ಧ್ವನಿ ಹೊರಡಿಸುತ್ತ, ಎಲ್ಲ ಕುರಿಗಳಿಗೂ ನಿರ್ದೇಶನ ನೀಡುತ್ತ ಸಾಗುವ ಕುರಿ ಕಾಯುವವರು… ಇವೆಲ್ಲ ನೆನಪಿನಾಳದಿಂದ ಹೊರಗೆ ಇಣುಕಲು ಶುರು ಮಾಡಿದ್ದವು. ನಾವಾಗಲೇ ನೆಬ್ರಾಸ್ಕಾ ಗಡಿಯನ್ನು ದಾಟಿ ಅಯೋವಾ ರಾಜ್ಯವನ್ನು ಹೊಕ್ಕಾಗಿತ್ತು. ಕುರಿ ಕೇಂದ್ರವನ್ನು ತಲುಪಿದೆವು. ನಿರೀಕ್ಷಿಸಿದಂತೆ ಅಲ್ಲೂ ಕುರಿಗಳಿದ್ದವು! ಅಲ್ಲಿನ ಕುರಿ ಕಾಯುವವರು ಕೂಡ ಜೀನ್ಸು ಹಾಕಿದ್ದರು, ಇಂಗ್ಲಿಷ್ ಮಾತಾಡುತ್ತಿದ್ದರು ಅನ್ನೋದು ಬಿಟ್ಟರೆ ಕುರಿಗಳಂತೂ ನಮ್ಮ ದೇಶದ ಕುರಿಗಳಂತೆಯೇ ಇದ್ದವು. ಸ್ವಲ್ಪ ಸ್ವಚ್ಛವಾಗಿ ಹಾಗೂ ಹೊಳಪಿನಿಂದ ಕೂಡಿದ್ದವು ಅಷ್ಟೇ.

ಅಲ್ಲೊಬ್ಬಳು ನಮ್ಮನ್ನೆಲ್ಲ ಸುತ್ತಾಡಿಸಿ ಕುರಿ ದೊಡ್ಡಿ, ಹಾಲು ಸಂಸ್ಕರಣಾ ಕೇಂದ್ರ, ಶೈತ್ಯೀಕರಣ ಘಟಕ ಎಲ್ಲ ತೋರಿಸಿ ವಿವರಿಸಿದಳು. ಕಾಲ ಕಾಲಕ್ಕೆ ಸರಕಾರಿ ಅಧಿಕಾರಿಗಳು ಬಂದು ನಾವು ಎಲ್ಲ ನಿಯಮಗಳನ್ನು ಪಾಲಿಸುತ್ತಿದ್ದೆವೆಯೇ ಅಂತ ಪರಿಶೀಲಿಸಿ ಹೋಗುತ್ತಾರೆ ಅಂತ ಹೇಳಿದಳು. ಅಲ್ಲಿ ತುಂಬಾ ವರ್ಷಗಳಿಂದ ವಾಸವಾಗಿದ್ದ ಇಬ್ಬೊಬ್ಬ ಭಾರತೀಯ ಮಹಾಶಯ ನನ್ನ ಕಡೆ ನೋಡಿ ಹೇಳಿದ ‘ನಿಮ್ಮ ಇಂಡಿಯಾ ತರ ಅಲ್ಲ, ಭಾರಿ ರೂಲ್ಸ್ ಫಾಲೋ ಮಾಡ್ತಾರ ಇಲ್ಲೆ!’ ಅಂತ ವಿದೇಶಿ ನಗೆ ನಕ್ಕ! ಅವನು ಅಮೇರಿಕಾದ ಕಟ್ಟಾ ಅಭಿಮಾನಿ. ನನಗೆ ಅವನ ಗಡ್ಡ ಅಲ್ಲಿದ್ದ ಹೋತಿನ ಗಡ್ಡದಂತೆಯೇ ಕಂಡಿದ್ದು ಕಾಕತಾಳೀಯ ಇರಬಹುದು!

ಎಲ್ಲ ಅಡ್ಡಾಡಿ ಆದ ನಂತರ ಒಂದು ಕುರಿಯನ್ನು ಕರೆದು ತಂದು ಒಂದು ಕಟಕಟೆಯ ಮೇಲೆ ನಿಲ್ಲಿಸಿದಳು. ಕತ್ತಿ ತೊಗೊಂಡು ಕಡೆದೇ ಬಿಡುತ್ತಾಳೆಯೇ ಅಂತ ಭಯ ಆಯ್ತು. ಅವಳು ಅದನ್ನು ನಿಲ್ಲಿಸಿದ್ದು ಅವತ್ತು ಬಂದಿದ್ದ ಅತಿಥಿಗಳ ಅಮೃತ ಹಸ್ತಗಳಿಂದ ಅದರ ಹಾಲು ಹಿಂಡಿಸಲು ಅಂತ ತಿಳಿದು ತುಸು ಸಮಾಧಾನ ಆಯ್ತು. ಅದರ ಮುಂದೆ ಒಂದಿಷ್ಟು ಹುಲ್ಲು ತಿನ್ನಲು ಕೊಟ್ಟರು. ಅವತ್ತು ಆಗಮಿಸಿದ್ದ ಒಬ್ಬೊಬ್ಬರಿಗೆ ಕರೆದು ಕುರಿಯ ಹಾಲು ಹಿಂಡಿ ಅಂತ ಹೇಳಿದಳು. ಎಲ್ಲರೂ ತಮಗೆ ತಿಳಿದ ರೀತಿಯಲ್ಲಿ ಹಿಂಡಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದರೆ ಕುರಿ ಎಷ್ಟು ಒದ್ದಾಡುತ್ತಿತ್ತೋ ಅಂತ ಬೇಜಾರಾಯ್ತು. ಮನುಷ್ಯ ಎಷ್ಟೊಂದು ಕ್ರೂರಿ. ಹೀಗೆ ದಿನವೂ ಹಿಂಸೆ ಕೊಡುವ ಬದಲು ಒಂದು ಸಲಕ್ಕೆ ಕೊಂದರೆ ಅದಕ್ಕೆ ಮುಕ್ತಿ ಆದರೂ ಸಿಕ್ಕೀತು. ಪಾಪ ಕುರಿ!

ಅಂತೂ ಇವೆಲ್ಲ ಸಂಭ್ರಮಗಳು (ನಮಗೆ!) ಮುಗಿದು ಅಲ್ಲಿಯೇ ಅವರಣದಲ್ಲಿದ್ದ ಅವರ ಅಂಗಡಿಗೆ ನಮ್ಮ ಸವಾರಿ ಹೋಯಿತು. ಅಲ್ಲಿ ಕುರಿಯ ಹಾಲಿನ ಉತ್ಪನ್ನಗಳು ಇದ್ದವು. ಅದರಲ್ಲಿ ಒಂದು ಉತ್ಪನ್ನ ಐಸ್ ಕ್ರೀಮ್. ನನಗೆ ಅದು ಸರ್ವಕಾಲಕ್ಕೂ ಇಷ್ಟ. ಹೀಗಾಗಿ ನಾನೂ ಒಂದು ದೊಡ್ಡ ಸ್ಕೂಪ್ ತೊಗೊಂಡೆ. ಇದು ಕುರಿಯ ಹಾಲಿನದು ಅನ್ನೋದು ಬಿಟ್ಟರೆ ಬೇರೆ ಏನೂ ವ್ಯತ್ಯಾಸ ಇರದು ಅಂತ ಭಾವಿಸಿ ಬಾಯಿಗಿಟ್ಟ ಕೂಡಲೇ ನನಗೆ ತುಂಬಾ ನಿರಾಸೆ ಆಯ್ತು. ಅದೊಂತರಹ ವಿಚಿತ್ರ ವಾಸನೆ. ನನಗೆ ಸಹಿಸಲಾಗದಷ್ಟು. ಕೆಟ್ಟದು ಅಂತಲ್ಲ ಆದರೆ ನನ್ನ ನಾಲಿಗೆಗೆ ಅದರ ರುಚಿ ರೂಡಿ ಇರಲಿಲ್ಲವಾದ್ದರಿಂದ ಹಾಗನ್ನಿಸಿರಬೇಕು. ಕಷ್ಟ ಪಟ್ಟು ತಿನ್ನುತ್ತಿದ್ದೆ. ಅಷ್ಟರಲ್ಲಿಯೇ ನಡೆದ ಒಂದು ಆಕಸ್ಮಿಕ ಘಟನೆ ನನಗೆ ತುಂಬಾ ಸಮಾಧಾನ ತಂದುಕೊಟ್ಟಿತ್ತು. ಅದೇನೋ ಆಗಿ ಜಾರಿ ನನ್ನ ಕೈಯಿಂದ ಕುರಿಯ ಹಾಲಿನ ಐಸ್ ಕ್ರೀಮ್ ಬಿದ್ದೆ ಹೋಯಿತು! ನನಗೋ ಸಿಕ್ಕಾಪಟ್ಟೆ ಆನಂದವಾಯಿತು. ಅದನ್ನು ತೋರಿಸಲು ಆಗುತ್ತೆಯೇ? ಅಯ್ಯೋ ನನ್ನ ಐಸ್ ಕ್ರೀಮ್ ಬಿತ್ತು ಅಂತ ಸ್ವಲ್ಪ ಎಕ್ಸ್ಟ್ರಾರ್ಡಿನರಿ ನಾಟಕ ಮಾಡಿದೆ. ಅದೊಂದು ದೊಡ್ಡ ತಪ್ಪಾಗಿತ್ತು! ಕೌಂಟರಲ್ಲಿ ಇದ್ದ ಮಹಿಳೆ ಎಷ್ಟು ಒಳ್ಳೆಯವಳಾಗಿದ್ದಳು ಎಂದರೆ, “No worries, you can have one more!” ಅಂತ ಮಿಲಿಯನ್ ಡಾಲರ್ ಸ್ಮೈಲ್ ಜೊತೆಗೆ ice cream ನ ಇನ್ನೊಂದು ದೊಡ್ಡ ಸ್ಕೂಪ್ ನನ್ನ ಕೈಗೆ ಕೊಟ್ಟೆ ಬಿಟ್ಟಳು! ಅಯ್ಯೋ ಕರ್ಮವೇ, ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷೀಲಿ ಎಂಬಂತಾಗಿತ್ತು ನನ್ನ ಸ್ಥಿತಿ! ಅಂತೂ ಇಂತೂ ಅದನ್ನು ಮತ್ತೆ ಬೀಳಿಸಲಾರದ ಹಾಗೆ ಜೋಪಾನವಾಗಿ ತಿಂದು ಮುಗಿಸಿದೆ. ಅದೂ ಬಿದ್ದು ಮತ್ತೊಂದು ಕೊಟ್ಟರೆ ಏನು ಗತಿ?! ಮರಳಿ ಮನೆಗೆ ಹೊರಟೆವು.

ಆ ಘಟನೆ ಅಲ್ಲಿನ ಆಗಿನ ನನ್ನ ಸ್ಥಿತಿಯನ್ನೇ ಹೋಲುತ್ತಿತ್ತು ಅಂತ ಈಗ ಅನಿಸುತ್ತದೆ. ನನಗೆ ಅಮೆರಿಕೆಯಲ್ಲಿ ಇರಲು ಇಷ್ಟ ಇರಲಿಲ್ಲ. ಆದರೂ ಇದ್ದೆ, ಇಷ್ಟವಿಲ್ಲದ ಐಸ್ ಕ್ರೀಮ್ ತಿಂದ ಹಾಗೆ. ಇನ್ನೊಂದೆರಡು ಸಲ ತಿಂದಿದ್ದರೆ ಅದೂ ರೂಡಿಯಾಗುತ್ತಿತ್ತು, ಹಾಗೆಯೇ ಇನ್ನೊಂದೆರಡು ವರ್ಷ ಇದ್ದಿದ್ದರೆ ಅಲ್ಲಿಯೇ ಇದ್ದುಬಿಡುತ್ತಿದ್ದೆವೇನೋ! ಆದರೆ ನನಗೆ ಹಾಗೆ ಆಗುವುದು ಇಷ್ಟ ಇರಲಿಲ್ಲ. ಹಾಗಂತ ನಾನು ಅಲ್ಲಿ ದುಃಖಿಯಾಗಿಯೂ ಇರಲಿಲ್ಲ. ಇದ್ದಷ್ಟು ದಿನಗಳು ಮಜವಾಗಿಯೇ ಕಳೆದೆವು. ಆದಷ್ಟು ಬೇಗನೆ ಅಲ್ಲಿಂದ ಕಾಲು ಕಿತ್ತಬೇಕು ಅನ್ನುವ ಯೋಚನೆ ಯಾವಾಗಲೂ ಇದ್ದೇ ಇರುತ್ತಿತ್ತು. ಅಲ್ಲಿನ ಕನ್ನಡಿಗರು ನಮಗೆ ಊರಿನ ಚಿಂತೆ ಅಷ್ಟೊಂದು ಕಾಡಲು ಬಿಡಲಿಲ್ಲ. ಅಷ್ಟೊಂದು ಒಳ್ಳೆಯ ಸಹೃದಯಿ ಅನಿವಾಸಿ ಕನ್ನಡಿಗರ ಬಳಗವದು…

(ಮುಂದುವರಿಯುವುದು..)
(ಹಿಂದಿನ ಕಂತು: ಮದ್ದು-ಗುಂಡುಗಳು ಮತ್ತು ಮಾಫಿಯಾ)

About The Author

ಗುರುಪ್ರಸಾದ್‌ ಕುರ್ತಕೋಟಿ

ಗುರುಪ್ರಸಾದ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿ ರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ), ಗ್ರಾಮ "ಡ್ರಾಮಾಯಣ" ಸೇರಿ ಇವರ ನಾಲ್ಕು ಕೃತಿಗಳು ಪ್ರಕಟಗೊಂಡಿವೆ.

2 Comments

  1. ಎಸ್ ಪಿ.ಗದಗ.

    ಕುರಿಯ ಹಾಲಿನ ನಿಮ್ಮ ಅನುಭವ ಓದಿ ಖುಷಿ ಆಯ್ತು.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ