ರೇಡಿಯೋವನ್ನು ಮುಟ್ಟಲೂ ಬಿಡದಿದ್ದ ಅಜ್ಜ ಸೈಕಲ್ಲನ್ನೂ ಸಹ ಮುಟ್ಟಲು ಬಿಡುತ್ತಿರಲಿಲ್ಲ. ಅವರಿಗೆ ಉಳಿತಾಯ ಸ್ವಭಾವ ತುಸು ಜಾಸ್ತೀನೇ ಇತ್ತು! ಹಲ್ಲುಜ್ಜೋಕೆ ಅಂತಾನೆ ತಂದಿದ್ದ ಒಂದು ಕೋಲ್ಗೇಟ್ ಹಲ್ಲುಪುಡಿಯ ಡಬ್ಬಿಯನ್ನು ನಮಗೆ ಸಿಗದಂತೆ ಮೇಲೆ ಇರಿಸಿದ್ದರು. ಹಲ್ಲುಜ್ಜೋಕೆ ಹೋಗುವಾಗ ಹಲ್ಲುಪುಡಿಯನ್ನು ಅವರೇ ಹಾಕುತ್ತಿದ್ದರು! ಆ ಡಬ್ಬಿಗೆ ಚಿಕ್ಕ ರಂಧ್ರ ಮಾಡಿ ಅದರ ಮೂಲಕ ಚೂರೇ ಚೂರು ಹಾಕುತ್ತಿದ್ದರು. ಕೇಳಿದರೆ ಜಪ್ಪಯ್ಯಾ ಅಂದರೂ ಎಕ್ಸ್ಟ್ರಾ ಹಾಕುತ್ತಿರಲಿಲ್ಲ. ಅದರಲ್ಲೇ ಬೆರಳುಗಳಿಂದಲೇ ಹಲ್ಲುಜ್ಜಬೇಕಾಗಿತ್ತು. ಒಂದೊಮ್ಮೆ ಇದು ಖಾಲಿಯಾದಾಗ ಮತ್ತೆ ಹೊಸದನ್ನು ತರೋವರೆಗೂ ಕಲ್ಲುಪ್ಪು, ಇದ್ದಿಲ ಪುಡಿಯೇ ಗತಿಯಾಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹತ್ತನೆಯ ಕಂತು ನಿಮ್ಮ ಓದಿಗೆ
ನಮ್ಮ ಮನೆಯಲ್ಲಿ ಕೆಲಸಕ್ಕಿದ್ದವರು ಕೆಲಸಕ್ಕೆ ಬಾರದೇ ಇದ್ದಾಗ ದನಗಳನ್ನ ಕಾಯೋಕೆ ನಮ್ಮ ಮಾಮ ಹೋಗ್ತಾ ಇದ್ರು. ನಾನೂ ಐದನೇ ತರಗತಿಗೆ ಬಂದಾಗ ಶನಿವಾರ, ಭಾನುವಾರ ಅಥವಾ ರಜಾ ದಿನ ಬಂತೆಂದ್ರೆ ಸಾಕು ಕೇರಿಯಲ್ಲಿದ್ದ ಇತರೆ ಹುಡುಗರ ಜೊತೆಗೆ ದನ ಕಾಯೋಕೆ ಹೋಗಬೇಕಾಗಿತ್ತು. ಆಗ ನಮ್ಮಜ್ಜನ ಮನೆಯಲ್ಲಿ ದನ ಕಾಯೋದರ ಜೊತೆಗೆ ಹೊಲದ ಕೆಲಸ ಮಾಡಲಿಕ್ಕಾಗಿ ‘ಸಿದ್ದಣ್ಣ’ ಎನ್ನುವವನಿದ್ದ. ಆಗ ಕೆಲ ಮನೆಗಳಲ್ಲಿ ಹೊಲ ಮನೆಯ ಕೆಲಸ ಮಾಡೋಕೆ ಅಂತಾ ವರ್ಷಕ್ಕೆ ಇಂತಿಷ್ಟು ಅಂತಾ ಹಣ ಕೊಟ್ಟು ಕೆಲಸದ ಆಳು ಅಂತಾ ಇಟ್ಕೊಳ್ತಾ ಇದ್ರು. ಅದೇ ರೀತಿ ಇದ್ದವನೇ ಸಿದ್ದಣ್ಣ. ಆದರೆ ಅವನನ್ನು ನಮ್ಮ ಮನೆಯವರೆಲ್ಲರೂ ಮನೆ ಮಗನ ತರಾ ನೋಡ್ಕೊಳ್ತಾ ಇದ್ರು. ಅವನೂ ಅಷ್ಟೇ. ತುಂಬಾ ನಿಯತ್ತಿನಿಂದ ದುಡೀತ ಇದ್ದ. ಬೆಳಗ್ಗೆ ಬಂದು ಸಗಣಿ ಹೊಡೆದು, ದನಗಳಿಗೆ ಹುಲ್ಲು ತಂದು ಹಾಕಿ ಬೆಳಿಗ್ಗೆಯೇ ಊಟ ತಿಂದು ದನ ಕಾಯೋಕೆ ಹೋದರೆ ಸಂಜೆ ಬರ್ತಾ ಇದ್ದ. ಸಂಜೆ ಬಂದು ಊಟ ಮಾಡಿ ಟೀ ಕುಡಿದು ಮತ್ತೆ ರಾತ್ರಿಯವರೆಗೂ ಮನೆಯಲ್ಲಿಯೇ ಇದ್ದು ಸಣ್ಣಪುಟ್ಟ ಕೆಲಸ ಮಾಡಿ ,ರಾತ್ರಿ ಊಟ ಮಾಡಿ ಮನೆಗೆ ಹೋಗ್ತಾ ಇದ್ದ.
ಇವನು ಅನಕ್ಷರಸ್ಥನಾಗಿದ್ದ. ಹಬ್ಬ ಬಂತೆಂದರೆ ಇವನಿಗೂ ಸಹ ಹೊಸ ಬಟ್ಟೆ ಕೊಡಿಸ್ತಾ ಇದ್ರು. ಇವನು ಮಿತ ಭಾಷಿ. ಶ್ರಮ ಜೀವಿ. ಇವನ ಮದುವೆ ಆಗೋವರೆಗೂ ನಮ್ಮ ಮನೆಯ ಕೆಲಸ ಮಾಡಿಕೊಂಡು ಇದ್ದ. ಆಮೇಲೆ ಅದ್ಯಾಕೋ ಬೇರೆಯವರ ಮನೆಗೆ ಕೆಲಸಕ್ಕೆ ಹೋದ. ನಾವು ದನ ಕಾಯೋಕೆ ಹೋದಾಗ ಸಂಜೆಯವರೆಗೂ ಭತ್ತ ಕೊಯ್ದ ಗದ್ದೆಗಳಲ್ಲಿ ದನಗಳನ್ನು ಮೇಯಿಸಿಕೊಂಡು ಸಂಜೆ ಕೆರೆಯಲ್ಲಿ ಅವನ್ನು ತೊಳೆದುಕೊಂಡು ಬಂದರೆ ಅಂದಿಗೆ ನಮ್ಮ ಕೆಲಸ ಮುಗೀತು.
ನಾನು ದನ ಕಾಯೋಕೆ ನಮ್ಮ ಸೀನಿಯರ್ ಮಂಜಣ್ಣ, ವಿಶ್ವಣ್ಣನ ಜೊತೆಗೆ ಹೋಗ್ತಿದ್ದೆ. ಇದಕ್ಕಾಗಿಯೇ ಒಂದು ಟೀಮ್ ಇತ್ತು. ಇವರು ಒಬ್ಬೊಬ್ಬರ ಮನೆಯಿಂದ ಒಂದೊಂದು ಅಡುಗೆ ಐಟಂ, ಅಡುಗೆ ಮಾಡೋಕೆ ಪರಿಕರಗಳನ್ನು ತಂದು, ದನ ಕಾಯೋಕೆ ಹೋದ ಹತ್ತಿರ ಮೂರು ಕಲ್ಲು ಹೂಡಿ ಅಡುಗೆ ಮಾಡ್ತಿದ್ರು. ಸಾಮಾನ್ಯವಾಗಿ ಆಗೆಲ್ಲ ಇವರು ಮಾಡುತ್ತಿದ್ದುದು ಉಪ್ಪಿಟ್ಟು ಮತ್ತು ಹುಣಸೇಹಣ್ಣಿನಿಂದ ಮಾಡುವ ಕುಟ್ಟುಂಡಿ. ಇವರು ಅಡುಗೆ ತಯಾರಿಸುವಾಗ ಇವರ ದನಗಳನ್ನು ನಾವು ಕಾಯಬೇಕಿತ್ತು. ಉಪ್ಪಿಟ್ಟನ್ನು ತಿಂದ ಮೇಲೆ ಭತ್ತ ಕೊಯ್ದು ರಾಶಿ ಮಾಡಲು ತೆಗೆದುಕೊಂಡು ಹೋಗುವಾಗ ಅಲ್ಲಲ್ಲಿ ಬಿದ್ದಿರುತ್ತಿದ್ದ ಭತ್ತದ ತೆನೆಯಿರುವ ಹುಲ್ಲನ್ನು ನಾವು ಆಯುತ್ತಿದ್ದೆವು. ತೆನೆಯಿರುವ ಇಂತಹ ಹುಲ್ಲನ್ನು ಬಡಿದು, ಭತ್ತವನ್ನು ಸಂಗ್ರಹಿಸಿ ತೆಗೆದುಕೊಂಡು ಹೋಗಿದ್ದ ಟವೆಲ್ಲಿನಲ್ಲಿ ಹಾಕಿಕೊಂಡು ಬಂದು ಸಂಜೆ ಅಂಗಡಿಗೆ ಹಾಕಿ ಹಣ ಪಡೆಯುತ್ತಿದ್ದೆವು. ಈ ಹಣವನ್ನು ನೋಟ್ ಬುಕ್ಕನ್ನೋ, ಪೆನ್ನನ್ನೋ ತೆಗೆದುಕೊಳ್ಳಲು ಬಳಸುತ್ತಿದ್ದೆವು. ಹಣ ಗಳಿಸಲು ಕಷ್ಟ ಪಡುತ್ತಿದ್ದರಿಂದ ನನಗೆ ಹಣದ ಮೌಲ್ಯ ಬಾಲ್ಯದಲ್ಲಿಯೇ ತಿಳಿಯಿತು.
ಆಗ ಜಾನುವಾರುಗಳು ಹಾಕುವ ಸಗಣಿಯನ್ನು ಕಣದಲ್ಲಿ ಹಾಕಿ ಅದಕ್ಕೆ ಭತ್ತದ ಹೊಟ್ಟನ್ನು ಸೇರಿಸಿ ನೆಲದ ಮೇಲೋ, ಪಾಳು ಗೋಡೆಯ ಮೇಲೋ ವೃತ್ತಾಕಾರವಾಗಿ ಬಡಿಯುತ್ತಿದ್ದರು. ಬಿಸಿಲಿಗೆ ಒಣಗಲು ಬಿಟ್ಟು ಅದನ್ನು ಬಳಸಲು ತೆಗೆಯುತ್ತಿದ್ದರು. ಇದೇ ಬೆರಣಿ. ದಾವಣಗೆರೆಯ ಕಡೆ ಇದಕ್ಕೆ ‘ಕುಳ್ಳು’ ಅಂತಾ ಕರೀತಾರೆ. ಇದನ್ನು ಒಲೆಗೆ ಇಂಧನವಾಗಿ ಬಳಸ್ತಾ ಇದ್ರು. ನಮ್ಮಜ್ಜಿ ಆಗ ರಸ್ತೇಲಿ ಯಾವುದೇ ದನ ಸಗಣಿ ಹಾಕಿದರೂ ಅದನ್ನು ಒಂದು ಬುಟ್ಟಿಯಲ್ಲಿ ಸಂಗ್ರಹ ಮಾಡೋದು. ನಾನೂ ಸಹ ಇದೇ ರೀತಿ ಮಾಡ್ತಿದ್ದೆ. ಎಷ್ಟೊಂದು ಚೆನ್ನಾಗಿ ಇದು ಉರಿಯೋದು ಅಂದ್ರೆ ಬಹುತೇಕರು ಇದನ್ನೇ ಬಳಸ್ತಾ ಇದ್ರು. ಸಗಣಿಯನ್ನು ಮನೆ ಮುಂದೆ ಬಳಿಯಲೂ ಬಳಸ್ತಾ ಇದ್ರು. ಕಣಗಳಲ್ಲೂ ತೆನೆಯಿರುವ ರಾಗಿ, ಭತ್ತದ ಹುಲ್ಲನ್ನು ತುಳಿಸಲು ಮಣ್ಣಿನ ಕಣವು ಧಾನ್ಯಗಳಿಗೆ ಸೇರದಿರಲೆಂದು ಸಗಣಿ ಸಾರಿಸುತ್ತಿದ್ದರು. ನಂತರವಷ್ಟೇ ಎತ್ತಿಗೆ ಕಟ್ಟಿರುವ ರೋಣಗಲ್ಲಿನಿಂದ ತುಳಿಸಿ ನಂತರ ತೂರುತ್ತಿದ್ದರು. ಆಗ ಗಾಳಿಯ ಬರುವಿಕೆಗೆ ಜನ ‘ಓಲಿಗ್ಯಾ’ ಅಂತಾ ಕೂಗುತ್ತಿದ್ದರು. ಆಗ ‘ಹಿಂಗ್ಯಾಕೆ ಕೂಗೋದು?’ ಅಂತಾ ಕೇಳ್ದಾಗ, ‘ಗಾಳಿ ಜೋರಾಗಿ ಬೀಸಲು’ ಎಂದು ಹೇಳುತ್ತಿದ್ದರು. ಈ ಪದಕ್ಕೂ ಗಾಳಿಗೂ ಏನು ಸಂಬಂಧ ಅಂತಾ ಗೊತ್ತಾಗಿರಲಿಲ್ಲ. ನಾನೂ ಇದರ ಬಗ್ಗೆ ಹೆಚ್ಚು ಪ್ರಶ್ನಿಸದೇ, ಅವರ ನಂಬಿಕೆಯಂತೆ ಇರಬಹುದು ಎಂದು ಅಂದುಕೊಂಡಿದ್ದೆ.
ಇವರು ಅಡುಗೆ ತಯಾರಿಸುವಾಗ ಇವರ ದನಗಳನ್ನು ನಾವು ಕಾಯಬೇಕಿತ್ತು. ಉಪ್ಪಿಟ್ಟನ್ನು ತಿಂದ ಮೇಲೆ ಭತ್ತ ಕೊಯ್ದು ರಾಶಿ ಮಾಡಲು ತೆಗೆದುಕೊಂಡು ಹೋಗುವಾಗ ಅಲ್ಲಲ್ಲಿ ಬಿದ್ದಿರುತ್ತಿದ್ದ ಭತ್ತದ ತೆನೆಯಿರುವ ಹುಲ್ಲನ್ನು ನಾವು ಆಯುತ್ತಿದ್ದೆವು. ತೆನೆಯಿರುವ ಇಂತಹ ಹುಲ್ಲನ್ನು ಬಡಿದು, ಭತ್ತವನ್ನು ಸಂಗ್ರಹಿಸಿ ತೆಗೆದುಕೊಂಡು ಹೋಗಿದ್ದ ಟವೆಲ್ಲಿನಲ್ಲಿ ಹಾಕಿಕೊಂಡು ಬಂದು ಸಂಜೆ ಅಂಗಡಿಗೆ ಹಾಕಿ ಹಣ ಪಡೆಯುತ್ತಿದ್ದೆವು.
ಇದೇ ವಯಸ್ಸಿನಲ್ಲಿ ನನಗೆ ಕ್ರಿಕೆಟ್ ಆಟದ ಬಗ್ಗೆ ಸ್ವಲ್ಪವೇ ತಿಳಿಯಿತು. ಆಗ ಊರ ಹೊರಗಿನ ಡಾಕ್ಟರ್ ಮನೆಯ ಹತ್ತಿರ ಬಹಳ ಹುಡುಗರು ಕ್ರಿಕೆಟ್ ಆಡಲು ಸೇರುತ್ತಿದ್ದರು. ನಾನೂ ಅವರ ಜೊತೆ ಸೇರಿ ‘ಪಿಚ್ ಕ್ಯಾಚ್’ ಆಟ ಆಡಲು ಸೇರುತ್ತಿದ್ದೆ. ಆಗ ನಾವು ತೆಂಗಿನ ಮಟ್ಟೆಯನ್ನೇ ಬ್ಯಾಟ್, ಅಲ್ಲಿ ಇಲ್ಲಿ ಬಿದ್ದ ಕೋಲುಗಳನ್ನೇ ವಿಕೆಟ್, ರಬ್ಬರ್ ಬಾಲನ್ನೇ ಬಾಲಾಗಿ ಬಳಸಿ ಆಡುತ್ತಿದ್ದೆವು. ಈ ರೀತಿ ಆಡುವಾಗ ಬಾಲ್ ಕೆಳಗೆ ಬಿದ್ದು ಒಂದು ಪಿಚ್ ಪುಟಿದಾಗ ಅದನ್ನು ಫೀಲ್ಡರ್ ಹಿಡಿದರೆ ಬ್ಯಾಟ್ಸ್ ಮ್ಯಾನ್ ಔಟ್ ಎಂದು ತೀರ್ಮಾನಿಸಲಾಗುತ್ತಿತ್ತು! ಒಂದೊಮ್ಮೆ ಬ್ಯಾಟ್ಸ್ ಮ್ಯಾನ್ ಕೈಯಿಂದ ಬ್ಯಾಟ್ ಜಾರಿ ಬಿದ್ದಾಗ ಅದನ್ನು ಫೀಲ್ಡರ್ ಮುಟ್ಟಿದರೂ ಔಟ್ ಎಂದು ಹೇಳಲಾಗುತ್ತಿತ್ತು!! ಹೀಗೆ ಆಡುತ್ತ ಆಡುತ್ತಾ ಕ್ರಿಕೆಟ್ ಹುಚ್ಚು ಎಷ್ಟರಮಟ್ಟಿಗೆ ಬೆಳೆಯಿತು ಎಂದರೆ ಪಕ್ಕದ ಹಳ್ಳೀಲಿ ಒಂದು ಸಣ್ಣ ಟೂರ್ನಮೆಂಟ್ ನಡೆದರೂ ಅಲ್ಲಿಗೆ ಮ್ಯಾಚ್ ನೋಡಲು ಹೋಗುತ್ತಿದ್ದೆನು. ಟಿವಿಯಲ್ಲಿ ಬರುವ ಕ್ರಿಕೆಟ್ಟನ್ನು ತಪ್ಪಿಸಿಕೊಳ್ಳದೇ ನೋಡುತ್ತಿದ್ದೆನು. ಅದರಲ್ಲೂ ತೆಂಡೂಲ್ಕರ್ ಬ್ಯಾಟಿಂಗ್ ಮಾಡಲು ಬಂದಾಗ ಮನಸ್ಸಲ್ಲೇ ದೇವರಿಗೆ “ಸಚಿನ್ ಶತಕ ಹೊಡೆಯೋ ಹಾಗೆ ಮಾಡಿದರೆ ಕಾಯಿ ಒಡೆಸುತ್ತೇನಪ್ಪಾ” ಎಂದು ಹರಕೆ ಮಾಡಿಕೊಳ್ಳುತ್ತಿದ್ದೆ. ಒಂದೊಮ್ಮೆ ಕರೆಂಟ್ ಹೋದರೆ ಶೆಲ್ ಇರೋ ರೇಡಿಯೋ ಇರುವವರ ಮನೆಗೆ ಹೋಗಿ ಅದರಲ್ಲಿ ಕಾಮೆಂಟರಿ ಕೇಳ್ತಾ ಇದ್ದೆ! ಅಷ್ಟಾಗಿ ಅರ್ಥವಾಗದಿದ್ದರೂ ಸ್ಕೋರ್ ಕೇಳ್ಕೊಂಡು ಖುಷಿಯಾಗುತ್ತಿದ್ದೆ.
ರೇಡಿಯೋ ಅಂದ ಕೂಡಲೇ ನಮ್ಮಜ್ಜನ ಮನೇಲಿ ಇದ್ದ ರೇಡಿಯೋ ನೆನಪಾಗುತ್ತೆ. ಫಿಲಿಪ್ಸ್ ಕಂಪೆನಿಯ ಅರ್ಧ ಮಾರುದ್ದದ ಹಳೇ ರೇಡಿಯೋ ಇತ್ತು. ಒಂದು ಅಡಿಯಷ್ಟು ದಪ್ಪವೂ ಇತ್ತು. ಅದನ್ನು ಒಂದು ಮರದ ಶೋಕೇಶ್ ರೀತಿಯ ಬಾಕ್ಸ್ನಲ್ಲಿ ಮೇಲೆ ಇಡಲಾಗಿತ್ತು. ಇದು ಕರೆಂಟ್ ಇದ್ದಾಗ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಅದನ್ನು ಮುಟ್ಟೋಕೂ ಅಜ್ಜನ ಅಪ್ಪಣೆ ಬೇಕಾಗಿತ್ತು. ಅಜ್ಜ ಇಲ್ಲದ ಸಮಯ ನೋಡಿ ರೇಡಿಯೋ ಹಾಕ್ಕೊಂಡು ಕೇಳ್ತಿದ್ದೆ. ಪ್ರತಿದಿನ ಬೆಳಗ್ಗೆ 6 ಕ್ಕೆ ಅಜ್ಜನೇ ರೇಡಿಯೋ ಹಾಕ್ತಿದ್ರು. ಅದರಲ್ಲಿ ಮೊದಲು ‘ವಂದೇ ಮಾತರಂ’ ನಂತರ “ಈಯಂ ಆಕಾಶವಾಣಿ ಸಂಪ್ರತಿ ವಾರ್ತಃ ಶ್ರೂಯಂತಂ ಪ್ರವಾಚಕಃ ಬಲದೇವಂ ಸಾಗರ” ಎಂದು ಶುರುವಾಗುವ ಸಂಸ್ಕೃತ ವಾರ್ತೆ ಬರುತ್ತಿತ್ತು. ಇದು ಏನೂ ಅರ್ಥವಾಗದಿದ್ದರೂ ಕೇಳಲು ಖುಷಿಯೆನಿಸುತ್ತಿತ್ತು. ನಂತರ ಜಾನಪದ ಗೀತೆಗಳು, ನಂತರ ಚಲನಚಿತ್ರ ಗೀತೆಗಳು ಬರುತ್ತಿದ್ದವು. ಇದರಲ್ಲಿ ಸಂಜೆ ಹೊತ್ತು ‘ಕೆಂಪಣ್ಣ ಕರಿಯಕ್ಕ’ ಎಂಬ ವ್ಯಕ್ತಿಗಳ ಹೆಸರಿನಿಂದ ಕರೆಯುವ ‘ಹರಟೆ ಕಾರ್ಯಕ್ರಮ’ ಬರುತ್ತಿತ್ತು. ಇದು ಕೇಳೋಕೆ ತುಂಬಾ ಚೆನ್ನಾಗಿರುತ್ತಿತ್ತು. ಭಾನುವಾರ ಮಧ್ಯಾಹ್ನ ಚಲನಚಿತ್ರಗಳು ಬರುತ್ತಿದ್ದವು. ಇದನ್ನು ತುಂಬಾ ಗಮನವಿಟ್ಟು ಕೇಳುತ್ತಿದ್ದೆ. ಟೇಪ್ ರೆಕಾರ್ಡರ್ಗಳು ಆ ಸಮಯದಲ್ಲಿ ಇದ್ದವಾದರೂ ನಮ್ಮ ಮನೆಯಲ್ಲಿ ಇರಲಿಲ್ಲ. ದೇವಸ್ಥಾನದಲ್ಲಿ ವೃತ್ತಾಕಾರದ ಕ್ಯಾಸೆಟ್ ಹಾಕುವಂತಹ ಟೇಪ್ ರೆಕಾರ್ಡರ್ ಮೈಕ್ ಸೆಟ್ ಇತ್ತು. ನನ್ನ ಸೀನಿಯರ್ ವೀರೆಂದ್ರಣ್ಣನ ಮನೆಯಲ್ಲಿ ಟೇಪ್ ರೆಕಾರ್ಡರ್ ಇತ್ತು. ಅದರಲ್ಲಿ ಹಾಡು ಕೇಳೋಕೆ ಅಂತಾನೆ ರಜಾ ದಿನಗಳಲ್ಲಿ ಅವರ ಮನೆಗೆ ಹೋಗ್ತಿದ್ದೆ.
ಕ್ರಿಕೆಟ್ ಬಗ್ಗೆ ಆಸಕ್ತಿ ಆಗ ಬಹುತೇಕ ಜನರಿಗಿತ್ತು. ಸಚಿನ್ ಔಟಾದರೆ ಸಾಕು ಭಾರತದ ಬ್ಯಾಟಿಂಗ್ ಕಥೆ ಮುಗೀತು ಎನ್ನುವಷ್ಟರ ಮಟ್ಟಿಗೆ ನಮ್ಮ ನಂಬಿಕೆಯಿತ್ತು. ಇದು ಹಲವಾರು ಬಾರಿ ನಿಜವೂ ಆಗಿತ್ತು. ಕ್ರಿಕೆಟ್ ಕಾಮೆಂಟರಿ ಕೇಳುತ್ತಾ ಕೈಯಲ್ಲಿ ಒಂದು ಶೆಲ್ಲಿನ ಚಿಕ್ಕ ರೇಡಿಯೋ ಹಿಡಿದುಕೊಂಡು ಕೂತಿರುತ್ತಿದ್ದ ದೇಗುಲದ ಅರ್ಚಕರೊಬ್ಬರು ಇಂದಿಗೂ ನೆನಪಿಗೆ ಬರ್ತಾರೆ. ಒಂದೊಮ್ಮೆ ಭಾರತ ಸೋತ ದಿನ ನಾನು ಆ ನೋವನ್ನು ಅರಗಿಸಿಕೊಳ್ಳಲಾಗದೇ ಒಬ್ಬನೇ ಕೂತು ಅತ್ತಿದ್ದಿದೆ. ನನಗೆ ಆಗ ವೆಸ್ಟ್ ಇಂಡೀಸ್ ಟೀಮ್ನಲ್ಲಿದ್ದ ಲಾರಾ, ಕರ್ಟ್ನಿ ವಾಲ್ಶ್, ಅರ್ಥರ್ ಟನ್, ಕಾರ್ಲ್ ಹೂಪರ್ ಮುಂತಾದವರನ್ನು ನೋಡಿ ಇವರಾದರೂ ನಮ್ಮ ಟೀಮಲ್ಲಿ ಇರಬಾರದಿತ್ತ ಎಂದು ಅಂದುಕೊಳ್ಳುತ್ತಿದ್ದೆ. ಆ ಕಾಲಕ್ಕೆ ವೆಸ್ಟ್ ಇಂಡೀಸ್ ತುಂಬಾ ಸ್ಟ್ರಾಂಗ್ ಟೀಮು. ಈ ವಿಷಯ ಇರಲಿ. ಇನ್ನು ನಮ್ಮಜ್ಜನ ವಿಷಯಕ್ಕೆ ಬರೋಣ.
ರೇಡಿಯೋವನ್ನು ಮುಟ್ಟಲೂ ಬಿಡದಿದ್ದ ಅಜ್ಜ ಸೈಕಲ್ಲನ್ನೂ ಸಹ ಮುಟ್ಟಲು ಬಿಡುತ್ತಿರಲಿಲ್ಲ. ಅವರಿಗೆ ಉಳಿತಾಯ ಸ್ವಭಾವ ತುಸು ಜಾಸ್ತೀನೇ ಇತ್ತು! ಹಲ್ಲುಜ್ಜೋಕೆ ಅಂತಾನೆ ತಂದಿದ್ದ ಒಂದು ಕೋಲ್ಗೇಟ್ ಹಲ್ಲುಪುಡಿಯ ಡಬ್ಬಿಯನ್ನು ನಮಗೆ ಸಿಗದಂತೆ ಮೇಲೆ ಇರಿಸಿದ್ದರು. ಹಲ್ಲುಜ್ಜೋಕೆ ಹೋಗುವಾಗ ಹಲ್ಲುಪುಡಿಯನ್ನು ಅವರೇ ಹಾಕುತ್ತಿದ್ದರು! ಆ ಡಬ್ಬಿಗೆ ಚಿಕ್ಕ ರಂಧ್ರ ಮಾಡಿ ಅದರ ಮೂಲಕ ಚೂರೇ ಚೂರು ಹಾಕುತ್ತಿದ್ದರು. ಕೇಳಿದರೆ ಜಪ್ಪಯ್ಯಾ ಅಂದರೂ ಎಕ್ಸ್ಟ್ರಾ ಹಾಕುತ್ತಿರಲಿಲ್ಲ. ಅದರಲ್ಲೇ ಬೆರಳುಗಳಿಂದಲೇ ಹಲ್ಲುಜ್ಜಬೇಕಾಗಿತ್ತು. ಒಂದೊಮ್ಮೆ ಇದು ಖಾಲಿಯಾದಾಗ ಮತ್ತೆ ಹೊಸದನ್ನು ತರೋವರೆಗೂ ಕಲ್ಲುಪ್ಪು, ಇದ್ದಿಲ ಪುಡಿಯೇ ಗತಿಯಾಗಿತ್ತು. ಕೆಲವರು ಬೇವಿನ ಕಡ್ಡಿಯಿಂದ ತಿಕ್ಕುತಿದ್ದುದನ್ನು ನೋಡಿ ನಾನು ಆ ರೀತಿ ಮಾಡಲು ಹೋಗಿ, ಬಾಯೆಲ್ಲ ಕಹಿಯಾಗಿ ಉಗಿದಿದ್ದಿದೆ.
ನಾನು ನನ್ನ ಗೆಳೆಯ ಸುನೀಲನ ಮನೆಗೆ ಹೋದಾಗ ಅವರ ಮನೆಯಲ್ಲೇ ಮೊದಲ ಬಾರಿಗೆ ಟೂಥ್ ಪೇಸ್ಟ್ ನೋಡಿದ್ದು. ಅದನ್ನು ನೋಡಿ ನನಗೆ ವಿಶೇಷವೆನಿಸಿತ್ತು. ಇದನ್ನು ತರಲು ಕೇಳಿದಾಗ ನಮ್ಮಜ್ಜ ಸುತಾರಾಂ ಅಂದರೂ ಒಪ್ಪಿರಲಿಲ್ಲ. ಮುಂದೆ ಟೂತ್ ಪೇಸ್ಟು ನಮ್ಮ ಮನೆಗೆ ಬಂತೂ ಅನ್ನಿ. ಆದರೆ ಮನೇಲಿ ಬಳಸುತ್ತಿದ್ದ ಲೈಫ್ ಬಾಯ್ ಸೋಪು ಮಾತ್ರ ಬದಲಾಗಲೇ ಇಲ್ಲ. ಕೆಂಪಗೆ ಚಿಕ್ಕ ಇಟ್ಟಿಗೆ ರೀತಿ ಇರುತ್ತಿದ್ದ ಸೋಪೇ ನಮ್ಮನೇಲಿ ಖಾಯಂ ಸ್ಥಾನ ವಹಿಸಿತ್ತು. ಯಾವಾಗಲಾದರೂ ನಮ್ಮ ದೊಡ್ಡಮ್ಮನ ಮನೆಗೆ ಹೋದಾಗ ಮಾತ್ರ ನಾನು ನೋಡಿದ್ದುದು ಅವರ ಮನೇಲಿರುತ್ತಿದ್ದ ಲಕ್ಸ್ ಸೋಪು!
ಈ ರೀತಿ ನಮ್ಮಜ್ಜ ಹಣದ ಬಗ್ಗೆ ಬಹಳ ಜಾಗ್ರತೆ ವಹಿಸುತ್ತಿದ್ದರು. ಆದರೆ ಮನೆಯಲ್ಲಿ ತಿನ್ನೋಕೆ ಏನೂ ಕಡಿಮೆ ಮಾಡ್ಕೊಳ್ತಾ ಇರ್ಲಿಲ್ಲ. ಆದರೆ ವಸ್ತುಗಳ ಬಗ್ಗೆ ಜಾಸ್ತಿನೇ ಕಾಳಜಿ ವಹಿಸುತ್ತಾ ಇದ್ದರು. ಸೈಕಲ್ಲನ್ನಂತೂ ಮುಟ್ಟೋಕೂ ಬಿಡ್ತಾ ಇರಲಿಲ್ಲ. ಕೀ ಕೊಡುವ ಗೋಡೆ ಗಡಿಯಾರಕ್ಕಂತೂ ಆಗಾಗ್ಗೆ ಕೀ ಕೊಡುತ್ತಾ ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದರು. ಈಗ ಕಾಲ ಬದಲಾಗಿದೆ. ರೇಡಿಯೋ ಇಡುತ್ತಿದ್ದ ಜಾಗವೀಗ ಖಾಲಿ ಖಾಲಿ, ರೇಡಿಯೋ, ಕೀಲಿ ಕೊಡುವ ಗಡಿಯಾರ, ಅಜ್ಜನ ಸೈಕಲ್ಲು ಇವ್ಯಾವುವೂ ಇಲ್ಲ. ಅಜ್ಜನೊಂದಿಗೆ ಅವೂ ಸಹ ಮರೆಯಾಗಿವೆ. ಭೌತಿಕವಾಗಿ ಇವು ಇಲ್ಲದಿರಬಹುದು. ಮನದಾಳದಲ್ಲಿ ಅಚ್ಚೊತ್ತಿರುವ ಆ ನೆನಪುಗಳನ್ನು ಮರೆಯಲಾಗುತ್ತಿಲ್ಲ. ಅಂದು ಬೈದುಕೊಂಡರೂ ಇಂದು ಅಜ್ಜನ ಸರಳ ಜೀವನದ ಪರಿಕಲ್ಪನೆ, ವಸ್ತು ಮೌಲ್ಯ, ಉಳಿತಾಯದ ಮೌಲ್ಯದ ಪಾಠಗಳು ನನ್ನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿವೆ. ಇಂದು ನನ್ನಜ್ಜ ಅಜ್ಜಿ ನೆನಪಿಗೆ ಬಂದರೆ ನನ್ನ ಕಣ್ಣುಗಳಲ್ಲಿ ನನಗರಿವಿಲ್ಲದೇ ನೀರು ಜಿನುಗುತ್ತದೆ. ಐ ಮಿಸ್ ದೆಮ್ ವೆರಿ ಮಚ್.
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.